ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 21

ಯೆಹೋವ ನಿಮಗೆ ಬಲ ಕೊಡ್ತಾನೆ

ಯೆಹೋವ ನಿಮಗೆ ಬಲ ಕೊಡ್ತಾನೆ

“ನಾನು ಬಲಹೀನನಾಗಿ ಇರುವಾಗ್ಲೇ ಬಲಶಾಲಿ ಆಗ್ತೀನಿ.”—2 ಕೊರಿಂ. 12:10.

ಗೀತೆ 137 ಕೊಡು ನಮಗೆ ಧೈರ್ಯ

ಕಿರುನೋಟ *

1-2. ಸಹೋದರ ಸಹೋದರಿಯರಿಗೆ ಯಾವ್ಯಾವ ಕಷ್ಟಗಳು ಬರುತ್ತೆ?

ಪೌಲನು ತಿಮೊತಿಗೆ ಸೇವೆಯನ್ನ ಪೂರ್ತಿಯಾಗಿ ಮಾಡು ಅಂತ ಪ್ರೋತ್ಸಾಹಿಸಿದ. (2 ತಿಮೊ. 4:5) ಪೌಲ ಕೊಟ್ಟ ಈ ಸಲಹೆಯನ್ನ ಇವತ್ತು ನಾವೂ ಪಾಲಿಸ್ತೀವಿ ಮತ್ತು ಯೆಹೋವನ ಸೇವೆಯನ್ನ ಪೂರ್ತಿಯಾಗಿ ಮಾಡ್ತೀವಿ. ಆದ್ರೂ ಕೆಲವೊಮ್ಮೆ ಇದನ್ನ ಪಾಲಿಸೋಕೆ ಕಷ್ಟ ಆಗುತ್ತೆ. ಯಾಕಂದ್ರೆ, ಕೆಲವು ದೇಶಗಳಲ್ಲಿ ನಮ್ಮ ಸಾರುವ ಕೆಲಸಕ್ಕೆ ನಿರ್ಬಂಧ ಅಥವಾ ನಿಷೇಧ ಇದೆ. ಅಂಥ ದೇಶಗಳಲ್ಲಿರೋ ಸಹೋದರ ಸಹೋದರಿಯರು ಸಾರಿದರೆ ಅವರು ಜೈಲಿಗೆ ಹೋಗಬೇಕಾಗುತ್ತೆ. ಇಂಥ ಅಪಾಯ ಇದ್ದರೂ ಅವರೆಲ್ಲರೂ ಧೈರ್ಯ ತಗೊಂಡು ಸಿಹಿಸುದ್ದಿ ಸಾರುತ್ತಾರೆ.—2 ತಿಮೊ. 4:2.

2 ಇವತ್ತು ಯೆಹೋವನ ಜನರು ಇನ್ನೂ ಬೇರೆಬೇರೆ ಕಷ್ಟಗಳಿಂದ ಕುಗ್ಗಿಹೋಗಿದ್ದಾರೆ. ಉದಾಹರಣೆಗೆ, ಕೆಲವರು ತಮ್ಮ ಕುಟುಂಬಕ್ಕೋಸ್ಕರ ತುಂಬ ಹೊತ್ತು ಕಷ್ಟಪಟ್ಟು ದುಡಿಬೇಕಾಗಿದೆ. ಅವರಿಗೆ ಹೆಚ್ಚು ಸೇವೆ ಮಾಡಬೇಕು ಅನ್ನೋ ಆಸೆ ಇದ್ರೂ ವಾರಪೂರ್ತಿ ದುಡಿಯೋದ್ರಿಂದ ವಾರದ ಕೊನೆಯಲ್ಲಿ ಏನು ಮಾಡೋಕೂ ಅವರಿಗೆ ಶಕ್ತಿ ಇರಲ್ಲ. ಇನ್ನು ಕೆಲವರಿಗೆ ತುಂಬ ಹುಷಾರಿರಲ್ಲ ಅಥವಾ ವಯಸ್ಸಾಗಿರುತ್ತೆ. ಮನೆಯಿಂದ ಹೊರಗೆ ಹೋಗೋಕೆ ಆಗದೇ ಇರಬಹುದು. ಅದಕ್ಕೆ ಅವರಿಗೆ ಹೆಚ್ಚು ಸೇವೆ ಮಾಡಕ್ಕಾಗಲ್ಲ. ಇನ್ನು ಕೆಲವರಿಗೆ ತಾವು ಯೆಹೋವನ ದೃಷ್ಟಿಯಲ್ಲಿ ಲೆಕ್ಕಕ್ಕೇ ಇಲ್ಲ ಅಂತ ಯಾವಾಗಲೂ ಅನಿಸುತ್ತಿರುತ್ತೆ. ಸಹೋದರಿ ಮೇರಿ * ಹೀಗೆ ಹೇಳ್ತಾರೆ: “ಕೆಲವೊಮ್ಮೆ ನಾನು ಮಾನಸಿಕವಾಗಿ ತುಂಬ ಕುಗ್ಗಿಹೋಗಿಬಿಡ್ತೀನಿ. ಅದ್ರಿಂದ ಸುಧಾರಿಸಿಕೊಳ್ಳುವಷ್ಟರಲ್ಲಿ ನನ್ನ ಶಕ್ತಿನೆಲ್ಲಾ ಕಳಕೊಂಡು ಬಿಟ್ಟಿರುತ್ತೀನಿ. ಆಗ ನನಗೆ ತುಂಬ ಬೇಜಾರಾಗುತ್ತೆ. ‘ಸೇವೆಗೆ ಕೊಡಬೇಕಾಗಿದ್ದ ಸಮಯ, ಶಕ್ತಿಯೆಲ್ಲಾ ಸುಮ್ಮನೆ ವೇಸ್ಟ್‌ ಆಯ್ತಲ್ಲಾ’ ಅಂತ ಮನಸ್ಸು ಚುಚ್ಚುತ್ತೆ.”

3. ಈ ಲೇಖನದಲ್ಲಿ ನಾವೇನನ್ನು ನೋಡ್ತೀವಿ?

3 ಪೌಲ ಮತ್ತು ತಿಮೊತಿಗೆ ಕಷ್ಟಗಳಿದ್ದರೂ ಸೇವೆ ಮಾಡ್ತಾ ಇರೋಕೆ ಯೆಹೋವ ಅವರಿಗೆ ಹೇಗೆ ಬಲಕೊಟ್ಟನು ಅಂತ ನಾವೀಗ ನೋಡೋಣ. ನಮಗೆ ಏನೇ ಕಷ್ಟ ಇದ್ದರೂ ಅದನ್ನೆಲ್ಲಾ ಸಹಿಸಿಕೊಂಡು ಹೋಗೋಕೆ ಮತ್ತು ನಮ್ಮ ಕೈಲಾದಷ್ಟು ಸೇವೆ ಮಾಡ್ತಾ ಇರೋಕೆ ಯೆಹೋವ ನಮಗೂ ಬಲ ಕೊಟ್ಟೇ ಕೊಡ್ತಾನೆ. ಅದನ್ನ ಹೇಗೆ ಕೊಡ್ತಾನೆ ಅಂತನೂ ನೋಡೋಣ.

ಸೇವೆ ಮಾಡ್ತಾ ಇರೋಕೆ ಯೆಹೋವ ಬಲ ಕೊಡ್ತಾನೆ

4. ಪೌಲನಿಗೆ ಯಾವ ಸಮಸ್ಯೆಗಳಿದ್ದವು?

4 ಪೌಲನಿಗೆ ತುಂಬ ಸಮಸ್ಯೆಗಳಿದ್ದವು. ಅವನನ್ನು ಶತ್ರುಗಳು ಹೊಡೆದ್ರು, ಕಲ್ಲೆಸೆದು ಕೊಲ್ಲೋಕೆ ಪ್ರಯತ್ನಿಸಿದ್ರು ಮತ್ತು ಜೈಲಿಗೆ ಹಾಕಿದ್ರು. ಆಗೆಲ್ಲಾ ಪೌಲನಿಗೆ ಯೆಹೋವನ ಸಹಾಯ ತುಂಬನೇ ಬೇಕಿತ್ತು. (2 ಕೊರಿಂ. 11:23-25) ತನ್ನ ಸ್ವಂತ ಬಲಹೀನತೆಯಿಂದ ಅವನು ಆಗಾಗ ಕುಗ್ಗಿಹೋಗ್ತಿದ್ದ. ಅದ್ರ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದಾನೆ. (ರೋಮ. 7:18, 19, 24) ಅಷ್ಟೇ ಅಲ್ಲ, ಅವನಿಗೊಂದು ಆರೋಗ್ಯ ಸಮಸ್ಯೆ ಇತ್ತು. ಅದು ‘ಒಂದು ಮುಳ್ಳು ತರ ದೇಹದಲ್ಲಿ ಚುಚ್ತಾ ಇತ್ತು.’ ಅದನ್ನು ದೇವರು ಯಾವಾಗ ತೆಗೆದುಹಾಕ್ತಾನೆ ಅಂತ ಕಾಯ್ತಾ ಇದ್ದ.—2 ಕೊರಿಂ. 12:7, 8.

ಸೇವೆ ಮಾಡ್ತಾ ಇರೋಕೆ ಪೌಲಗೆ ಯಾವುದು ಸಹಾಯ ಮಾಡ್ತು? (ಪ್ಯಾರ 5-6 ನೋಡಿ) *

5. ತುಂಬ ಸಮಸ್ಯೆಗಳಿದ್ದರೂ ಪೌಲ ಏನೆಲ್ಲಾ ಸಾಧಿಸಿದ?

5 ಪೌಲನಿಗೆ ಇಷ್ಟು ಕಷ್ಟಗಳಿದ್ದರೂ ಅವನು ಸೇವೆ ಮಾಡ್ತಾ ಇರೋಕೆ ಯೆಹೋವ ಬಲ ಕೊಟ್ಟನು. ಈ ಬಲದಿಂದ ಪೌಲ ಏನೆಲ್ಲಾ ಸಾಧಿಸಿದ? ಅವನು ರೋಮ್‌ನ ಒಂದು ಮನೆಯಲ್ಲಿ ಬಂಧನದಲ್ಲಿದ್ದಾಗ ಯೆಹೂದಿ ಮುಖ್ಯಸ್ಥರಿಗೆ, ಸರಕಾರಿ ಅಧಿಕಾರಿಗಳಿಗೆ ಮತ್ತು ಇನ್ನೂ ತುಂಬ ಜನರಿಗೆ ಹುರುಪಿಂದ ಸಿಹಿಸುದ್ದಿ ಸಾರಿದ. (ಅ. ಕಾ. 28:17; ಫಿಲಿ. 4:21, 22) ಅಷ್ಟೇ ಅಲ್ಲ, ಅರಮನೆ ಕಾವಲುಗಾರರಿಗೆ, ಅವನನ್ನು ನೋಡೋಕೆ ಬಂದ ಎಲ್ಲರಿಗೂ ಸಾರಿದ. (ಅ. ಕಾ. 28:30, 31; ಫಿಲಿ. 1:13) ಆ ಸಮಯದಲ್ಲೇ ಪೌಲ ದೇವರ ಸಹಾಯದಿಂದ ಪತ್ರಗಳನ್ನ ಬರೆದ. ಅದ್ರಿಂದ ಆಗಿನ ಕ್ರೈಸ್ತರಿಗೆ ಮಾತ್ರ ಅಲ್ಲ ಇವತ್ತು ನಮಗೂ ಪ್ರಯೋಜನ ಆಗ್ತಿದೆ. ಅಷ್ಟೇ ಅಲ್ಲ, ಪೌಲನ ಮಾದರಿ ನೋಡಿ ರೋಮ್‌ ಸಭೆಯಲ್ಲಿದ್ದ ಸಹೋದರರು ‘ಭಯಪಡದೆ ದೇವರ ಸಂದೇಶವನ್ನ ಇನ್ನೂ ಧೈರ್ಯವಾಗಿ ಸಾರೋಕೆ’ ಅವರಿಗೆ ಬಲ ಸಿಕ್ತು. (ಫಿಲಿ. 1:14) ಪೌಲನಿಗೆ ಹೆಚ್ಚು ಸೇವೆ ಮಾಡೋಕೆ ಮನಸ್ಸಿದ್ದರೂ ಕೆಲವೊಮ್ಮೆ ಮಾಡೋಕೆ ಆಗಲಿಲ್ಲ. ಆದ್ರೂ ತನ್ನ ಕೈಯಲ್ಲಿ ಆಗುವಂಥದ್ದನ್ನ ಚೆನ್ನಾಗಿ ಮಾಡಿದ. ಅವನು ‘ಆ ಪರಿಸ್ಥಿತಿಯಲ್ಲಿ ಇರೋದು ಸಿಹಿಸುದ್ದಿ ಇನ್ನೂ ಹರಡೋಕೆ ಸಹಾಯ ಆಯ್ತು.’—ಫಿಲಿ. 1:12.

6. ಎರಡನೇ ಕೊರಿಂಥ 12:9, 10ರ ಪ್ರಕಾರ ಪೌಲ ಚೆನ್ನಾಗಿ ಸೇವೆ ಮಾಡೋಕೆ ಯಾವುದು ಸಹಾಯ ಮಾಡ್ತು?

6 ಯೆಹೋವನ ಸೇವೆಯಲ್ಲಿ ಪೌಲ ಏನೆಲ್ಲಾ ಮಾಡಿದನೋ ಅದು ತನ್ನ ಸ್ವಂತ ಶಕ್ತಿಯಿಂದಲ್ಲ ದೇವರು ಕೊಟ್ಟ ಬಲದಿಂದ ಮಾಡೋಕೆ ಆಯ್ತು ಅಂತ ಅವನು ಅರ್ಥ ಮಾಡಿಕೊಂಡಿದ್ದ. ‘ತನಗೆ ಬಲ ಕಮ್ಮಿ ಆದಾಗ ದೇವರೇ ಪೂರ್ತಿ ಬಲ ಕೊಟ್ಟಿದ್ದು’ ಅಂತ ಅವನು ಒಪ್ಪಿಕೊಂಡ. (2 ಕೊರಿಂಥ 12:9, 10 ಓದಿ.) ಯೆಹೋವ ಪೌಲನಿಗೆ ತನ್ನ ಪವಿತ್ರ ಶಕ್ತಿಯ ಸಹಾಯ ಕೊಟ್ಟಿದ್ದರಿಂದಲೇ ಹಿಂಸೆ ಬಂದ್ರೂ, ಜೈಲಿಗೆ ಹಾಕಿದ್ರೂ, ಬೇರೆ ಸಮಸ್ಯೆ ಬಂದ್ರೂ ಅವನು ಸೇವೆಯನ್ನು ಪೂರ್ತಿಯಾಗಿ ಮಾಡೋಕೆ ಆಯ್ತು.

ಸೇವೆ ಮಾಡ್ತಾ ಇರೋಕೆ ತಿಮೊತಿಗೆ ಯಾವುದು ಸಹಾಯ ಮಾಡ್ತು? (ಪ್ಯಾರ 7 ನೋಡಿ) *

7. ಸೇವೆಯನ್ನ ಪೂರ್ತಿಯಾಗಿ ಮಾಡೋಕೆ ತಿಮೊತಿಗೆ ಯಾವ ವಿಷಯಗಳು ಅಡ್ಡಿಪಡಿಸಿರಬೇಕು?

7 ತಿಮೊತಿ ಪೌಲನಿಗಿಂತ ವಯಸ್ಸಲ್ಲಿ ಚಿಕ್ಕವನಾಗಿದ್ದರೂ ಸೇವೆ ಮಾಡೋಕೆ ಅವನಿಗೂ ದೇವರ ಬಲ ಬೇಕಿತ್ತು. ಅವನು ಪೌಲನ ಜೊತೆ ಸೇವೆ ಮಾಡ್ತಾ ಇದ್ದ. ಇಬ್ಬರೂ ಮಿಷನರಿ ಆಗಿದ್ದರಿಂದ ತುಂಬ ದೂರದೂರ ಪ್ರಯಾಣ ಮಾಡಬೇಕಿತ್ತು. ಅದ್ರ ಜೊತೆಗೆ, ಸಭೆಗಳಿಗೆ ಭೇಟಿ ಮಾಡಿ ಅಲ್ಲಿದ್ದವರನ್ನು ಪ್ರೋತ್ಸಾಹಿಸೋಕೆ ಪೌಲ ತಿಮೊತಿಯನ್ನು ಕಳಿಸ್ತಿದ್ದ. (1 ಕೊರಿಂ. 4:17) ಆದ್ರೆ ತಿಮೊತಿಗೆ ತಾನು ಇದಕ್ಕೆ ಅರ್ಹನಲ್ಲ ಅಂತ ಅನಿಸಿದ್ದಿರಬೇಕು. ಅದಕ್ಕೇ ಪೌಲ ಅವನಿಗೆ “ನೀನು ಇನ್ನೂ ಚಿಕ್ಕವನು ಅಂತ ಯಾರೂ ನಿನ್ನನ್ನ ಕೀಳಾಗಿ ಕಾಣದೇ ಇರೋ ಹಾಗೆ ನೋಡ್ಕೊ” ಅಂತ ಹೇಳಿರಬೇಕು. (1 ತಿಮೊ. 4:12) ಅದೇ ಸಮಯದಲ್ಲಿ ತಿಮೊತಿಗೆ ‘ಆಗಾಗ ಹುಷಾರು ಇರುತ್ತಿರಲಿಲ್ಲ.’ (1 ತಿಮೊ. 5:23) ಹಾಗಿದ್ದರೂ ಸಿಹಿಸುದ್ದಿ ಸಾರೋಕೆ, ತನ್ನ ಸಹೋದರರ ಸೇವೆ ಮಾಡೋಕೆ ಯೆಹೋವ ದೇವರ ಪವಿತ್ರ ಶಕ್ತಿಯ ಸಹಾಯದಿಂದ ತನಗೆ ಬಲ ಸಿಗುತ್ತೆ ಅಂತ ತಿಮೊತಿಗೆ ಗೊತ್ತಿತ್ತು.—2 ತಿಮೊ. 1:7.

ಕಷ್ಟಗಳಿದ್ದರೂ ನಂಬಿಕೆ ಕಳಕೊಳ್ಳದಿರೋಕೆ ಯೆಹೋವ ಬಲ ಕೊಡ್ತಾನೆ

8. ಇವತ್ತು ನಮ್ಮನ್ನ ಬಲಪಡಿಸೋಕೆ ಯೆಹೋವ ಯಾವ ರೀತಿಯಲ್ಲಿ ಸಹಾಯ ಮಾಡ್ತಾನೆ?

8 ಇವತ್ತು ಯೆಹೋವ ನಮಗೆ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿ” ಕೊಡ್ತಾನೆ. ಇದ್ರಿಂದ ನಾವು ಆತನಿಗೆ ನಂಬಿಗಸ್ತರಾಗಿದ್ದು ಸೇವೆ ಮಾಡ್ಕೊಂಡು ಹೋಗ್ತಾ ಇರೋಕೆ ಆಗುತ್ತೆ. (2 ಕೊರಿಂ. 4:7) ನಮ್ಮನ್ನ ಬಲಪಡಿಸೋಕೆ ಮತ್ತು ಆತನಿಗೆ ನಂಬಿಗಸ್ತರಾಗಿ ಇರೋಕೆ ಯೆಹೋವ ನಮಗೆ ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡ್ತಾನೆ? ನಾಲ್ಕು ರೀತಿಯಲ್ಲಿ ಸಹಾಯ ಮಾಡ್ತಾನೆ. ಅದು ಪ್ರಾರ್ಥನೆ, ಬೈಬಲ್‌, ಸಹೋದರ ಸಹೋದರಿಯರು ಮತ್ತು ಸೇವೆ.

ಯೆಹೋವ ನಮ್ಮನ್ನ ಹೇಗೆ ಬಲಪಡಿಸ್ತಾನೆ? ಪ್ರಾರ್ಥನೆ (ಪ್ಯಾರ 9 ನೋಡಿ)

9. ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?

9 ಪ್ರಾರ್ಥನೆಯಿಂದ ಬಲ ಸಿಗುತ್ತೆ. ನಾವು “ಪ್ರತಿ ಸಂದರ್ಭದಲ್ಲೂ” ದೇವರಿಗೆ ಪ್ರಾರ್ಥನೆ ಮಾಡಬೇಕು ಅಂತ ಪೌಲ ಎಫೆಸ 6:18ರಲ್ಲಿ ಹೇಳಿದ್ದಾನೆ. ಹಾಗೆ ಮಾಡಿದರೆ ದೇವರು ನಮಗೆ ಬಲ ಕೊಡ್ತಾನೆ. ಬೊಲಿವಿಯದಲ್ಲಿರೋ ಸಹೋದರ ಜಾನಿಗೆ ಒಂದಾದ ಮೇಲೊಂದು ಕಷ್ಟ ಬಂತು. ಅವರ ಪತ್ನಿಗೆ ಮತ್ತು ಅಪ್ಪಅಮ್ಮನಿಗೆ ತುಂಬ ಹುಷಾರಿಲ್ಲದಂತೆ ಆಯ್ತು. ಆ ಮೂವರನ್ನೂ ಜಾನಿ ನೋಡಿಕೊಳ್ಳಬೇಕಾಗಿ ಬಂತು. ಅಮ್ಮ ತೀರಿಹೋದ್ರು ಮತ್ತು ಅವರ ಪತ್ನಿಗೆ, ಅಪ್ಪನಿಗೆ ಸುಧಾರಿಸಿಕೊಳ್ಳೋಕೆ ತುಂಬ ಸಮಯ ಹಿಡಿತು. ಆ ದಿನಗಳನ್ನ ನೆನಪಿಸಿಕೊಳ್ತಾ ಜಾನಿ ಹೀಗೆ ಹೇಳ್ತಾರೆ: “ನನಗೆ ತುಂಬ ಒತ್ತಡ ಇದ್ದಾಗ ಪ್ರಾರ್ಥನೆಯಲ್ಲಿ ಯಾವ ಸಹಾಯ ಬೇಕು ಅಂತ ನಿರ್ದಿಷ್ಟವಾಗಿ ಕೇಳ್ತಿದ್ದೆ. ಇದ್ರಿಂದ ತುಂಬ ಸಹಾಯ ಆಯ್ತು.” ಜಾನಿಗೆ ಕಷ್ಟ ಸಹಿಸಿಕೊಳ್ಳೋಕೆ ಯೆಹೋವನಿಂದ ಬಲ ಸಿಕ್ತು. ಬೊಲಿವಿಯದಲ್ಲಿರೋ ರೊನಾಲ್ಡ್‌ ಅನ್ನೋ ಹಿರಿಯನ ಅನುಭವ ನೋಡಿ. ಅವರ ತಾಯಿಗೆ ಕ್ಯಾನ್ಸರ್‌ ಇದೆ ಅಂತ ರೊನಾಲ್ಡ್‌ಗೆ ಗೊತ್ತಾಯ್ತು. ಅದಾಗಿ ಒಂದು ತಿಂಗಳಿಗೆ ಆಕೆ ತೀರಿಹೋಗಿಬಿಟ್ಟರು. ಈ ಕಷ್ಟ ತಾಳಿಕೊಳ್ಳೋಕೆ ರೊನಾಲ್ಡ್‌ಗೆ ಪ್ರಾರ್ಥನೆ ಸಹಾಯ ಮಾಡ್ತು. ಅವರು ಹೀಗೆ ಹೇಳ್ತಾರೆ: “ನನ್ನ ಮನಸ್ಸಲ್ಲಿ ಇರೋದನ್ನೆಲ್ಲಾ ಯೆಹೋವನಿಗೆ ಹೇಳಿದೆ. ನನ್ನನ್ನು ಯೆಹೋವ ಅರ್ಥ ಮಾಡಿಕೊಂಡಷ್ಟು ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ಲ. ಅಷ್ಟೇ ಯಾಕೆ ನಾನೇ ನನ್ನನ್ನ ಅರ್ಥ ಮಾಡಿಕೊಂಡಿಲ್ಲ.” ಕೆಲವೊಮ್ಮೆ ನಮಗೆ ಕಷ್ಟಗಳನ್ನ ತಾಳಿಕೊಳ್ಳೋಕೆ ಆಗಲ್ಲ, ಪ್ರಾರ್ಥನೆಯಲ್ಲಿ ಏನು ಹೇಳಿಕೊಳ್ಳಬೇಕು ಅಂತ ಗೊತ್ತಾಗಲ್ಲ. ಆದ್ರೂ ಪ್ರಾರ್ಥನೆ ಮಾಡ್ತಾ ಇರಿ ಅಂತ ಯೆಹೋವ ನಮ್ಮನ್ನು ಉತ್ತೇಜಿಸ್ತಾನೆ.—ರೋಮ. 8:26, 27.

ಯೆಹೋವ ನಮ್ಮನ್ನ ಹೇಗೆ ಬಲಪಡಿಸ್ತಾನೆ? ಬೈಬಲ್‌ (ಪ್ಯಾರ 10 ನೋಡಿ)

10. ಬೈಬಲ್‌ ಓದಿ ಅದನ್ನ ಧ್ಯಾನಿಸೋದು ಮುಖ್ಯ ಅಂತ ಇಬ್ರಿಯ 4:12ರಿಂದ ಹೇಗೆ ಗೊತ್ತಾಗುತ್ತೆ?

10 ಬೈಬಲಿಂದ ಬಲ ಸಿಗುತ್ತೆ. ಪೌಲ ಪವಿತ್ರ ಗ್ರಂಥ ಓದಿ ತನಗೆ ಬೇಕಾದ ಬಲ, ಸಾಂತ್ವನ ಪಡಕೊಂಡ. ನಾವೂ ಹಾಗೇ ಮಾಡಬೇಕು. (ರೋಮ. 15:4) ನಾವು ಬೈಬಲನ್ನ ಓದಿ ಧ್ಯಾನಿಸಬೇಕು. ಆಗ ಓದಿದ್ದನ್ನು ನಮ್ಮ ಪರಿಸ್ಥಿತಿಗೆ ಹೇಗೆ ಅನ್ವಯಿಸಿಕೊಳ್ಳಬಹುದು ಅಂತ ಯೆಹೋವ ತನ್ನ ಪವಿತ್ರ ಶಕ್ತಿಯ ಮೂಲಕ ತೋರಿಸಿಕೊಡ್ತಾನೆ. (ಇಬ್ರಿಯ 4:12 ಓದಿ.) ಸಹೋದರ ರೊನಾಲ್ಡ್‌ ಹೀಗೆ ಹೇಳ್ತಾರೆ: “ಪ್ರತಿ ರಾತ್ರಿ ನಾನು ಬೈಬಲಿಂದ ಕೆಲವು ವಚನಗಳನ್ನ ಓದೋ ರೂಢಿ ಮಾಡಿಕೊಂಡಿದ್ದೀನಿ. ಇದ್ರಿಂದ ನನಗೆ ತುಂಬ ಒಳ್ಳೇದಾಗಿದೆ. ನಾನು ಯೆಹೋವನ ಗುಣಗಳನ್ನ ಮತ್ತು ಆತ ತನ್ನ ಸೇವೆ ಮಾಡೋರ ಜೊತೆ ಹೇಗೆ ಪ್ರೀತಿಯಿಂದ ನಡಕೊಳ್ತಾನೆ ಅನ್ನೋದನ್ನ ತುಂಬನೇ ಧ್ಯಾನಿಸ್ತೀನಿ. ಇದ್ರಿಂದ ನನಗೆ ತುಂಬ ಬಲ ಸಿಕ್ಕಿದೆ.”

11. ದುಃಖದಲ್ಲಿದ್ದ ಒಬ್ಬ ಸಹೋದರಿಗೆ ಬೈಬಲಿಂದ ಹೇಗೆ ಬಲ ಸಿಕ್ತು?

11 ನಾವು ಬೈಬಲಿಂದ ಓದಿದ್ದನ್ನು ಧ್ಯಾನಿಸಿದರೆ ಮೂರು ಹೊತ್ತು ನಮ್ಮ ಸಮಸ್ಯೆಗಳ ಬಗ್ಗೆನೇ ಯೋಚಿಸ್ತಾ ಕೊರಗದೆ ಇರೋಕೆ ಸಹಾಯ ಮಾಡುತ್ತೆ. ಒಬ್ಬ ಸಹೋದರಿಗೆ ಬೈಬಲ್‌ ಹೇಗೆ ಸಹಾಯ ಮಾಡ್ತು ನೋಡಿ. ಆಕೆಯ ಗಂಡ ತೀರಿಹೋದಾಗ ಆಕೆ ತುಂಬ ದುಃಖದಲ್ಲಿದ್ದರು. ಆಗ ಒಬ್ಬ ಹಿರಿಯ ಯೋಬ ಪುಸ್ತಕ ಓದೋಕೆ ಸಹೋದರಿಗೆ ಹೇಳಿದ್ರು. ಆ ಪುಸ್ತಕದಲ್ಲಿ ಆಕೆಗೆ ತುಂಬ ಪ್ರಯೋಜನ ಆಗುವಂಥ ಪಾಠಗಳಿವೆ ಅಂತ ತಿಳಿಸಿದ್ರು. ಆಕೆ ಯೋಬ ಪುಸ್ತಕ ಓದೋಕೆ ಶುರು ಮಾಡಿದಾಗ ಯೋಬ ಯೋಚಿಸ್ತಾ ಇರೋದು ತಪ್ಪು ಅಂತ ಆಕೆಗೆ ಅನಿಸ್ತು. ತನ್ನ ಮನಸ್ಸಲ್ಲೇ ಆಕೆ “ಏ, ಯೋಬ! ಬರೀ ನಿನ್ನ ಸಮಸ್ಯೆಗಳ ಬಗ್ಗೆ ಯೋಚನೆ ಮಾಡ್ತಿದ್ದೀಯ. ಹಾಗ್‌ ಮಾಡಬೇಡ” ಅಂತ ಹೇಳಿಕೊಂಡರು. ಆದ್ರೆ ಆಮೇಲೆ ತಾನೂ ಯೋಬನ ತರನೇ ಯೋಚನೆ ಮಾಡುತ್ತಿದ್ದೀನಿ ಅಂತ ಅರ್ಥ ಆಯ್ತು. ಬರೀ ತನ್ನ ಸಮಸ್ಯೆಗಳ ಬಗ್ಗೆ ಮಾತ್ರ ಯೋಚನೆ ಮಾಡದೆ ಯೆಹೋವ ಮತ್ತು ಆತ ಕೊಟ್ಟಿರೋ ನಿರೀಕ್ಷೆ ಬಗ್ಗೆ ಯೋಚನೆ ಮಾಡಬೇಕು ಅಂತ ಅರ್ಥ ಮಾಡಿಕೊಂಡಳು. ಇದ್ರಿಂದ ಅವಳಿಗೆ ತನ್ನ ಗಂಡನನ್ನು ಕಳಕೊಂಡಿರೋ ದುಃಖನ ತಾಳಿಕೊಳ್ಳೋಕೆ ಬಲ ಸಿಕ್ತು.

ಯೆಹೋವ ನಮ್ಮನ್ನ ಹೇಗೆ ಬಲಪಡಿಸ್ತಾನೆ? ಸಹೋದರ ಸಹೋದರಿಯರು (ಪ್ಯಾರ 12 ನೋಡಿ)

12. ನಮ್ಮನ್ನು ಬಲಪಡಿಸೋಕೆ ಯೆಹೋವ ತನ್ನ ಆರಾಧಕರನ್ನ ಹೇಗೆ ಉಪಯೋಗಿಸ್ತಾನೆ?

12 ಸಹೋದರ ಸಹೋದರಿಯರಿಂದ ಬಲ ಸಿಗುತ್ತೆ. ಯೆಹೋವ ನಮ್ಮನ್ನು ಬಲಪಡಿಸೋಕೆ ತನ್ನ ಆರಾಧಕರನ್ನ ಸಹ ಉಪಯೋಗಿಸ್ತಾನೆ. ಪೌಲ ‘ತನ್ನ ನಂಬಿಕೆಯಿಂದ ಸಹೋದರ ಸಹೋದರಿಯರು ಮತ್ತು ಅವರ ನಂಬಿಕೆಯಿಂದ ತಾನೂ ಪ್ರೋತ್ಸಾಹ ಪಡೆಯೋಕೆ’ ಕಾಯ್ತಿದ್ದೀನಿ ಅಂತ ಪತ್ರದಲ್ಲಿ ಬರೆದ. (ರೋಮ. 1:11, 12) ಸಹೋದರಿ ಮೇರಿಗೆ ಸಭೆಯವರ ಜೊತೆ ಇರೋದಂದ್ರೆ ತುಂಬ ಇಷ್ಟ. ಅವರು ಹೀಗೆ ಹೇಳ್ತಾರೆ: “ಯೆಹೋವ ದೇವರು ನನಗೆ ಸಹೋದರ ಸಹೋದರಿಯರ ಮೂಲಕ ತುಂಬ ಸಹಾಯ ಮಾಡಿದ್ದಾನೆ. ಇಷ್ಟಕ್ಕೂ ಆ ಸಹೋದರ ಸಹೋದರಿಯರಿಗೆ ನನ್ನ ಕಷ್ಟ ಏನು ಅಂತನೇ ಗೊತ್ತಿರಲ್ಲ. ಆದ್ರೆ ಅವರು ಹೇಳಿದ ಮಾತುಗಳು, ಕೊಟ್ಟ ಕಾರ್ಡ್‌ಗಳು ಕಷ್ಟನ ಸಹಿಸಿಕೊಳ್ಳೋಕೆ ನನಗೆ ಸಹಾಯ ಮಾಡಿದವು. ಅಷ್ಟೇ ಅಲ್ಲ, ನನ್ನ ತರ ಸಮಸ್ಯೆಗಳನ್ನ ಎದುರಿಸ್ತಿದ್ದ ಸಹೋದರಿಯರ ಹತ್ರ ಮುಕ್ತವಾಗಿ ಮಾತಾಡೋಕೆ ಆಯ್ತು, ಅವ್ರ ಅನುಭವದಿಂದ ಕಲಿಯೋಕೂ ಆಯ್ತು. ಸಭೆಯವರೆಲ್ಲಾ ನನ್ನನ್ನು ತುಂಬ ಪ್ರೀತಿಸ್ತಾರೆ ಅನ್ನೋ ಭರವಸೆಯನ್ನು ಹಿರಿಯರು ನನ್ನಲ್ಲಿ ಯಾವಾಗಲೂ ತುಂಬಿಸ್ತಾರೆ.”

13. ಕೂಟಗಳಲ್ಲಿ ನಾವು ಹೇಗೆ ಒಬ್ಬರನ್ನೊಬ್ಬರು ಬಲಪಡಿಸಬಹುದು?

13 ನಾವು ಮೀಟಿಂಗಿಗೆ ಹೋದಾಗ ಒಬ್ಬರನ್ನೊಬ್ಬರು ಬಲಪಡಿಸೋಕೆ, ಪ್ರೋತ್ಸಾಹಿಸೋಕೆ ತುಂಬ ಅವಕಾಶಗಳು ಸಿಗುತ್ತೆ. ಆಗ ನಮ್ಮ ಸಹೋದರ ಸಹೋದರಿಯರಿಗೆ ನೀವು ಅವರನ್ನ ಎಷ್ಟು ಪ್ರೀತಿಸ್ತೀರ, ಗೌರವಿಸ್ತೀರ, ಕಾಳಜಿ ತೋರಿಸ್ತೀರ ಅಂತ ಒಂದು ಸಲ ಹೇಳಿನೋಡಿ. ಅವರಿಗೆ ಎಷ್ಟು ಖುಷಿಯಾಗುತ್ತಲ್ವಾ? ಒಬ್ಬ ಸಹೋದರಿಯ ಗಂಡ ಸತ್ಯದಲ್ಲಿಲ್ಲ. ಆ ಸಹೋದರಿಗೆ ಪೀಟರ್‌ ಅನ್ನೋ ಹಿರಿಯ ಹೀಗೆ ಹೇಳಿದ್ರು: “ನೀವು ನಿಮ್ಮ ಆರು ಮಕ್ಕಳನ್ನ ರೆಡಿ ಮಾಡ್ಕೊಂಡು ಪ್ರತಿವಾರ ಮೀಟಿಂಗ್‌ಗೆ ಬರ್ತಿದ್ದೀರ. ಅವರಿಂದ ಉತ್ತರಗಳನ್ನೂ ಹೇಳಿಸ್ತಿದ್ದೀರ. ಇದನ್ನೆಲ್ಲಾ ನೋಡುವಾಗ ನಮಗೆ ತುಂಬ ಖುಷಿ ಆಗುತ್ತೆ. ನಮಗೆ ಪ್ರೋತ್ಸಾಹನೂ ಸಿಗ್ತಾ ಇದೆ.” ಇದನ್ನ ಕೇಳಿದ ಆ ಸಹೋದರಿ ಸಂತೋಷದಿಂದ ಅತ್ತೇ ಬಿಟ್ಟರು. “ಬ್ರದರ್‌ ನೀವು ಇವತ್ತು ನನ್ನನ್ನು ಎಷ್ಟು ಬಲಪಡಿಸಿದ್ರಿ ಅಂದ್ರೆ ಅದನ್ನ ಮಾತಲ್ಲಿ ಹೇಳೋಕೆ ಆಗ್ತಿಲ್ಲ” ಅಂದ್ರು.

ಯೆಹೋವ ನಮ್ಮನ್ನ ಹೇಗೆ ಬಲಪಡಿಸ್ತಾನೆ? ಸೇವೆ (ಪ್ಯಾರ 14 ನೋಡಿ)

14. ಸಾರೋ ಕೆಲಸ ನಮಗೆ ಹೇಗೆ ಬಲ ಕೊಡುತ್ತೆ?

14 ಸೇವೆ ಮಾಡೋದರಿಂದ ಬಲ ಸಿಗುತ್ತೆ. ನಾವು ಬೈಬಲಲ್ಲಿರೋ ಸತ್ಯನ ಬೇರೆಯವರಿಗೆ ಹಂಚಿದಾಗ ಅವರದನ್ನ ಕೇಳಲಿ ಬಿಡಲಿ ನಮಗೆ ತುಂಬ ಬಲ ಸಿಗುತ್ತೆ. (ಜ್ಞಾನೋ. 11:25) ಸ್ಟೇಸಿ ಅನ್ನೋ ಸಹೋದರಿಗೂ ಹೀಗೇ ಆಯ್ತು. ಅವರ ಮನೆಯವರಲ್ಲಿ ಒಬ್ಬರಿಗೆ ಬಹಿಷ್ಕಾರ ಆದಾಗ ಅವರಿಗೆ ತುಂಬ ಬೇಜಾರಾಯ್ತು. ‘ನಾನು ಅವರನ್ನ ಸರಿದಾರಿಗೆ ತರೋಕೆ ಮುಂಚೆನೇ ಇನ್ನೂ ಸ್ವಲ್ಪ ಪ್ರಯತ್ನ ಹಾಕಿದ್ದರೆ ಅವರಿಗೆ ಬಹಿಷ್ಕಾರ ಆಗ್ತಿರಲಿಲ್ಲವೇನೋ’ ಅನ್ನೋ ಯೋಚನೆ ಅವರ ಮನಸ್ಸಲ್ಲಿ ಕಾಡ್ತಿತ್ತು. ಅವರು ಇದನ್ನೇ ಯೋಚಿಸ್ತಾ ಯಾವಾಗಲೂ ಕೊರಗ್ತಾ ಇದ್ರು. ಇದ್ರಿಂದ ಹೊರಗೆ ಬರೋಕೆ ಅವರಿಗೆ ಯಾವುದು ಸಹಾಯ ಮಾಡ್ತು? ಸಾರೋ ಕೆಲಸ ಅವರಿಗೆ ಸಹಾಯ ಮಾಡ್ತು. ಟೆರಿಟೊರಿಯಲ್ಲಿ ಜನ್ರಿಗೆ ಸಹಾಯ ಮಾಡೋದ್ರ ಮೇಲೆ ಸಹೋದರಿ ಗಮನ ಇಟ್ರು. ಅವರು ಹೇಳಿದ್ದು: “ಆಗ ಯೆಹೋವ ದೇವರು ನನಗೆ ಒಂದು ಒಳ್ಳೇ ಸ್ಟಡಿ ಕೊಟ್ರು. ಅವರು ತುಂಬ ಬೇಗ ಪ್ರಗತಿ ಮಾಡಿದ್ರು. ಇದ್ರಿಂದ ನನಗೆ ತುಂಬ ಬಲ ಸಿಕ್ತು. ನಮ್ಮ ಜೀವನದಲ್ಲಿ ಏನೇ ಆಗಲಿ ಅದನ್ನ ಸರಿದೂಗಿಸಿಕೊಂಡು ಹೋಗೋಕೆ ಸಾರೋ ಕೆಲಸ ಇಷ್ಟು ಸಹಾಯ ಮಾಡುತ್ತೆ ಅಂತ ನನಗೆ ಇದ್ರಿಂದ ಗೊತ್ತಾಯ್ತು.”

15. ಸಹೋದರಿ ಮೇರಿಯವರ ಮಾತಿಂದ ನಾವೇನು ಕಲಿಬಹುದು?

15 ಕೆಲವರು ‘ನಮ್ಮಿಂದ ಅಷ್ಟು ಸೇವೆ ಮಾಡೋಕೆ ಆಗ್ತಿಲ್ವಲ್ಲಾ’ ಅಂತ ಕೊರಗುತ್ತಾ ಇರ್ತಾರೆ. ನೀವೂ ಈ ತರ ಕೊರಗುತ್ತೀರಾ? ಯೋಚನೆ ಮಾಡಬೇಡಿ. ನಿಮ್ಮಿಂದಾದಷ್ಟು ಸೇವೆ ಮಾಡುವಾಗ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ. ಸಹೋದರಿ ಮೇರಿಯವರ ಉದಾಹರಣೆಯನ್ನ ಪುನಃ ನೋಡೋಣ. ಅವರು ಹೊಸ ಭಾಷೆಯಲ್ಲಿ ಸೇವೆ ಮಾಡೋಕೆ ಶುರುಮಾಡಿದಾಗ ಅವರಿಗೆ ತುಂಬ ಕಷ್ಟ ಆಗ್ತಿತ್ತು. ಅವರು ಹೀಗೆ ಹೇಳ್ತಾರೆ: “ಮೊದಮೊದಲು ನಾನು ಚಿಕ್ಕಚಿಕ್ಕ ಕಮೆಂಟ್ಸ್‌ ಕೊಡ್ತಿದ್ದೆ. ಯಾವುದಾದ್ರೂ ಒಂದು ಬೈಬಲ್‌ ವಚನ ಓದಿ ಸುಮ್ಮನಾಗ್ತಿದ್ದೆ. ಸೇವೆಯಲ್ಲಿ ಬರೀ ಒಂದು ಟ್ರ್ಯಾಕ್ಟ್‌ ಕೊಟ್ಟು ಬರುತ್ತಿದ್ದೆ.” ‘ಬೇರೆಯವರಷ್ಟು ಚೆನ್ನಾಗಿ ಮಾತಾಡೋಕೆ ಬರಲ್ವಲ್ಲಾ’ ಅಂತ ಅವರು ಯೋಚಿಸ್ತಿದ್ರು. ಆದ್ರೆ ಆಮೇಲೆ ಅವರ ಯೋಚನೆಯನ್ನ ಬದಲಾಯಿಸಿಕೊಂಡ್ರು. ಭಾಷೆ ಬರದೇ ಇದ್ರೂ ಅದರಲ್ಲಿ ಸಾರೋಕೆ ಯೆಹೋವ ಅವರನ್ನು ಆರಿಸಿಕೊಂಡಿರೋದೇ ಒಂದು ದೊಡ್ಡ ವಿಷಯ ಅನ್ನೋದನ್ನ ನೆನಸಿ ಅವರಿಗೆ ಖುಷಿ ಆಯ್ತು. “ಬೈಬಲಲ್ಲಿರೋ ಸಂದೇಶ ತುಂಬ ಸರಳವಾಗಿದ್ರೂ ಜನರ ಜೀವನವನ್ನ ಅದು ಬದಲಾಯಿಸುತ್ತೆ” ಅಂತ ಮೇರಿ ಹೇಳ್ತಾರೆ.

16. ಮನೆಯಿಂದ ಹೊರಗೆ ಹೋಗಿ ಸಾರೋಕೆ ಆಗದಿರುವವರು ಬಲ ಪಡಕೊಳ್ಳೋಕೆ ಏನು ಮಾಡಬೇಕು?

16 ನಮ್ಮಲ್ಲಿ ಕೆಲವರಿಗೆ ಆರೋಗ್ಯ ಸಮಸ್ಯೆ ಇರೋದರಿಂದ ಅಥವಾ ವಯಸ್ಸಾಗಿರೋದರಿಂದ ಮನೆಯಿಂದ ಹೊರಗೆ ಹೋಗಿ ಸಾರೋಕೆ ಆಗದೇ ಇರಬಹುದು. ಆದ್ರೂ ನಮಗೆ ತುಂಬ ಸೇವೆ ಮಾಡಬೇಕು ಅನ್ನೋ ಆಸೆ ಇರುತ್ತೆ. ಇದು ಯೆಹೋವನಿಗೆ ಚೆನ್ನಾಗಿ ಗೊತ್ತು. ಡಾಕ್ಟರ್‌ಗಳಿಗೆ, ನರ್ಸ್‌ಗಳಿಗೆ ಅಥವಾ ನಮ್ಮನ್ನ ನೋಡಿಕೊಳ್ಳೋಕೆ ಬರುವವರಿಗೆ ಸಾರೋಕೆ ಯೆಹೋವ ಸಹಾಯ ಮಾಡ್ತಾನೆ. ಹಿಂದೆ ಮಾಡಿದ ಸೇವೆಯನ್ನ ನೆನಸಿಕೊಂಡು ‘ಈಗ ಅಷ್ಟು ಮಾಡೋಕೆ ಆಗ್ತಿಲ್ವಲ್ಲಾ’ ಅಂತ ಕೊರಗುತ್ತಿದ್ರೆ ಕುಗ್ಗಿಹೋಗಿಬಿಡ್ತೀವಿ. ಅದರ ಬದಲಿಗೆ ಯೆಹೋವ ಈಗ ಹೇಗೆ ಸಹಾಯ ಮಾಡ್ತಿದ್ದಾನೆ ಅನ್ನೋದನ್ನ ಗುರುತಿಸಿದ್ರೆ ಏನೇ ಕಷ್ಟ ಬಂದ್ರೂ ಸಂತೋಷದಿಂದ ಇರೋಕೆ ಬಲ ಸಿಗುತ್ತೆ.

17. ಪ್ರಸಂಗಿ 11:6ರ ಪ್ರಕಾರ ನಾವ್ಯಾಕೆ ಸಾರುತ್ತಾ ಇರಬೇಕು?

17 ನಾವು ಸತ್ಯದ ಬೀಜವನ್ನ ಬಿತ್ತುವಾಗ ಯಾವ ಬೀಜ ಎಲ್ಲಿ ಮೊಳಕೆ ಹೊಡೆಯುತ್ತೆ, ಹೇಗೆ ಬೆಳೆಯುತ್ತೆ ಅಂತ ನಮಗೆ ಗೊತ್ತಾಗಲ್ಲ. (ಪ್ರಸಂಗಿ 11:6 ಓದಿ.) 80 ವರ್ಷದ ಬಾರ್ಬರಾ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವರು ಟೆಲಿಫೋನ್‌ ಮತ್ತು ಪತ್ರಗಳ ಮೂಲಕ ಸಿಹಿಸುದ್ದಿ ಸಾರುತ್ತಿದ್ರು. ಒಮ್ಮೆ ಅವರು ಮಾರ್ಚ್‌ 1, 2014ರ ಕಾವಲಿನಬುರುಜು ಪತ್ರಿಕೆಯನ್ನ ಪತ್ರದಲ್ಲಿಟ್ಟು ಒಂದು ದಂಪತಿಗೆ ಕಳಿಸಿದ್ರು. ಅದರಲ್ಲಿ “ದೇವರು ನಿಮಗೋಸ್ಕರ ಏನೆಲ್ಲಾ ಮಾಡಿದ್ದಾನೆ?” ಅನ್ನೋ ಲೇಖನ ಇತ್ತು. ಆದರೆ ಆ ದಂಪತಿಗೆ ಬಹಿಷ್ಕಾರ ಆಗಿದೆ ಅಂತ ಸಹೋದರಿಗೆ ಗೊತ್ತಿರಲಿಲ್ಲ. ಆ ದಂಪತಿಗೆ ಎಷ್ಟು ಇಷ್ಟ ಆಯ್ತು ಅಂದ್ರೆ ಆ ಪತ್ರಿಕೆಯನ್ನ ಪುನಃಪುನಃ ಓದಿದರು. ಆ ವ್ಯಕ್ತಿಗಂತೂ ಯೆಹೋವ ದೇವರೇ ಅವರ ಹತ್ರ ನೇರವಾಗಿ ಮಾತಾಡ್ತಿದ್ದಾನೇನೋ ಅಂತ ಅನಿಸ್ತು. ಆ ದಂಪತಿ ನಿಧಾನವಾಗಿ ಕೂಟಗಳಿಗೆ ಬರೋಕೆ ಶುರುಮಾಡಿದ್ರು, ಮತ್ತೆ ಯೆಹೋವನ ಸಾಕ್ಷಿ ಆದ್ರು. ಅದು 27 ವರ್ಷಗಳಾದ ಮೇಲೆ! ಆ ಒಂದು ಪತ್ರದಿಂದ ಅವರ ಜೀವನನೇ ಬದಲಾಗಿದ್ದನ್ನು ನೋಡಿ ಸಹೋದರಿ ಬಾರ್ಬರಾಗೆ ಎಷ್ಟು ಸಂತೋಷ ಆಗಿರುತ್ತೆ, ಎಷ್ಟು ಬಲ ಸಿಕ್ಕಿರುತ್ತೆ ಅಲ್ವಾ?

ಯೆಹೋವ ನಮ್ಮನ್ನ ಹೇಗೆ ಬಲಪಡಿಸ್ತಾನೆ? (1) ಪ್ರಾರ್ಥನೆ, (2) ಬೈಬಲ್‌, (3) ಸಹೋದರ ಸಹೋದರಿಯರು ಮತ್ತು (4) ಸೇವೆ (ಪ್ಯಾರ 9-10, 12, 14 ನೋಡಿ)

18. ಯೆಹೋವ ಕೊಡೋ ಬಲ ಪಡಕೊಳ್ಳೋಕೆ ನಾವೇನು ಮಾಡಬೇಕು?

18 ಯೆಹೋವ ನಮಗೆ ಹೇಗೆಲ್ಲಾ ಬಲ ಕೊಡ್ತಾನೆ ಅಂತ ಈ ಲೇಖನದಲ್ಲಿ ಕಲಿತ್ವಿ. ಪ್ರಾರ್ಥನೆ, ಬೈಬಲ್‌, ಸಹೋದರ ಸಹೋದರಿಯರು ಮತ್ತು ಸೇವೆ ಮೂಲಕ ಬಲ ಕೊಡ್ತಿದ್ದಾನೆ. ಈ ಬಲವನ್ನ ನಾವು ಪಡ್ಕೊಬೇಕು. ಆಗಲೇ ಯೆಹೋವನಿಗೆ ಶಕ್ತಿಯಿದೆ ಮತ್ತು ಸಹಾಯ ಮಾಡೋ ಮನಸ್ಸಿದೆ ಅನ್ನೋದನ್ನ ನಾವು ನಂಬ್ತೀವಿ ಅಂತ ತೋರಿಸಿಕೊಡ್ತೀವಿ. “ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ” ಸಂತೋಷವಾಗಿ ಸಹಾಯ ಮಾಡೋ ಯೆಹೋವ ಅಪ್ಪ ಮೇಲೆ ನಮಗೆ ನಂಬಿಕೆ ಇದೆ ಅಂತ ಯಾವಾಗಲೂ ತೋರಿಸೋಣ.—2 ಪೂರ್ವ. 16:9.

ಗೀತೆ 17 ಸಾಕ್ಷಿಗಳೇ, ಮುನ್ನಡೆಯಿರಿ!

^ ಪ್ಯಾರ. 5 ನಾವು ಕಷ್ಟಗಳಿರೋ ಸಮಯದಲ್ಲಿ ಜೀವಿಸ್ತಿದ್ದೀವಿ. ಇದನ್ನೆಲ್ಲಾ ತಾಳಿಕೊಳ್ಳೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಪೌಲ ಮತ್ತು ತಿಮೊತಿಗೆ ಸಮಸ್ಯೆಗಳಿದ್ದರೂ ಸೇವೆ ಮಾಡಿಕೊಂಡು ಹೋಗೋಕೆ ಯೆಹೋವ ಅವರಿಬ್ಬರಿಗೂ ಹೇಗೆ ಸಹಾಯ ಮಾಡಿದನು ಅಂತ ಈ ಲೇಖನದಲ್ಲಿ ನೋಡ್ತೀವಿ. ಜೊತೆಗೆ, ನಮಗೆ ಇವತ್ತು ಕಷ್ಟಗಳಿದ್ದರೂ ಸೇವೆ ಮಾಡಿಕೊಂಡು ಹೋಗೋಕೆ ಯೆಹೋವ ಸಹಾಯ ಮಾಡೋ ನಾಲ್ಕು ರೀತಿಗಳನ್ನು ಚರ್ಚಿಸ್ತೀವಿ.

^ ಪ್ಯಾರ. 2 ಹೆಸರು ಬದಲಾಯಿಸಲಾಗಿದೆ.

^ ಪ್ಯಾರ. 53 ಚಿತ್ರ ವಿವರಣೆ: ಪೌಲ ರೋಮ್‌ನ ಒಂದು ಮನೆಯಲ್ಲಿ ಬಂಧನದಲ್ಲಿದ್ದಾಗ ಅನೇಕ ಸಭೆಗಳಿಗೆ ಪತ್ರಗಳನ್ನ ಬರೆದ ಮತ್ತು ಅವನನ್ನ ನೋಡೋಕೆ ಬರುತ್ತಿದ್ದವರಿಗೆಲ್ಲಾ ಸಿಹಿಸುದ್ದಿ ಸಾರಿದ.

^ ಪ್ಯಾರ. 55 ಚಿತ್ರ ವಿವರಣೆ: ತಿಮೊತಿ ಸಭೆಗಳಿಗೆ ಭೇಟಿ ನೀಡ್ತಾ ಸಹೋದರರನ್ನ ಪ್ರೋತ್ಸಾಹಿಸಿದ.