ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 20

ದೇವರ ವೈರಿಗಳಿಗೆ ಏನಾಗುತ್ತೆ ಅಂತ ಪ್ರಕಟನೆಯಲ್ಲಿ ಹೇಳುತ್ತೆ?

ದೇವರ ವೈರಿಗಳಿಗೆ ಏನಾಗುತ್ತೆ ಅಂತ ಪ್ರಕಟನೆಯಲ್ಲಿ ಹೇಳುತ್ತೆ?

“ಆ ಕೆಟ್ಟ ದೇವದೂತರು ರಾಜರನ್ನ ಒಂದು ಜಾಗದಲ್ಲಿ ಒಟ್ಟು ಸೇರಿಸಿದ್ರು. ಹೀಬ್ರು ಭಾಷೆಯಲ್ಲಿ ಆ ಜಾಗದ ಹೆಸ್ರು ಹರ್ಮಗೆದೋನ್‌.”​—ಪ್ರಕ. 16:16.

ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು

ಕಿರುನೋಟ *

1. ದೇವಜನರಿಗೆ ಏನಾಗುತ್ತೆ ಅಂತ ಪ್ರಕಟನೆ ಪುಸ್ತಕ ಹೇಳಿತ್ತು?

 ಸ್ವರ್ಗದಲ್ಲಿ ದೇವರ ಆಳ್ವಿಕೆ ಆರಂಭ ಆಯ್ತು. ಅದಾದ ಮೇಲೆ ಸೈತಾನನನ್ನು ಭೂಮಿಗೆ ತಳ್ಳಲಾಯ್ತು ಅಂತ ಪ್ರಕಟನೆ ಪುಸ್ತಕ ಹೇಳುತ್ತೆ. (ಪ್ರಕ. 12:1-9) ಇದ್ರಿಂದ ಸ್ವರ್ಗದಲ್ಲಿ ಇರೋ ಎಲ್ರಿಗೂ ಖುಷಿಯಾಯ್ತು, ಆದ್ರೆ ನಮಗೆ ತುಂಬ ಕಷ್ಟಗಳು ಬಂತು. ಯಾಕಂದ್ರೆ ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡುವವರ ಮೇಲೆ ಸೈತಾನ ತನ್ನ ಕೋಪ ತೋರಿಸ್ತಿದ್ದಾನೆ.—ಪ್ರಕ. 12:12, 15, 17.

2. ನಾವು ದೇವರಿಗೆ ನಂಬಿಗಸ್ತರಾಗಿರೋಕೆ ಯಾವುದು ಸಹಾಯ ಮಾಡುತ್ತೆ?

2 ಸೈತಾನ ನಮ್ಮ ಮೇಲೆ ಆಕ್ರಮಣ ಮಾಡಿದ್ರೂ ನಾವು ಯೆಹೋವನಿಗೆ ನಂಬಿಗಸ್ತರಾಗಿರೋಕೆ ಏನು ಮಾಡಬೇಕು? (ಪ್ರಕ. 13:10) ಮುಂದೆ ಏನಾಗುತ್ತೆ ಅಂತ ಮೊದಲು ತಿಳಿದುಕೊಳ್ಳಬೇಕು. ಉದಾಹರಣೆಗೆ, ದೇವಜನರು ಆದಷ್ಟು ಬೇಗ ಯಾವೆಲ್ಲ ಆಶೀರ್ವಾದಗಳನ್ನ ಪಡೆದುಕೊಳ್ಳುತ್ತಾರೆ ಅನ್ನೋದರ ಬಗ್ಗೆ ಅಪೊಸ್ತಲ ಯೋಹಾನ ಪ್ರಕಟನೆ ಪುಸ್ತಕದಲ್ಲಿ ಬರೆದಿದ್ದಾನೆ. ಅದ್ರಲ್ಲಿ ಒಂದು ಏನಂದ್ರೆ, ನಮಗೆ ತೊಂದರೆ ಕೊಡ್ತಿರೋ ದೇವರ ವೈರಿಗಳು ನಾಶ ಆಗ್ತಾರೆ. ಆ ವೈರಿಗಳು ಯಾರು ಮತ್ತು ಅವರು ಹೇಗೆ ನಾಶ ಆಗ್ತಾರೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ ಅನ್ನೋದನ್ನ ಈಗ ನೊಡೋಣ.

ದೇವರ ವೈರಿಗಳನ್ನ ಪತ್ತೆಹಚ್ಚೋಕೆ ಸೂಚನೆಗಳು

3. ಪ್ರಕಟನೆ ಪುಸ್ತಕದಲ್ಲಿ ದೇವರ ವೈರಿಗಳನ್ನ ಯಾವುದಕ್ಕೆ ಸೂಚಿಸಲಾಗಿದೆ?

3 ಪ್ರಕಟನೆ ಪುಸ್ತಕದ ಮೊದಲನೇ ಅಧ್ಯಾಯದ ಆರಂಭದ ವಚನದಲ್ಲೇ, ಅದರಲ್ಲಿ ತಿಳಿಸಿರೋ ವಿಷಯಗಳು ‘ಕನಸಿನ ರೂಪದಲ್ಲಿದೆ [ಸೂಚನೆ]’ ಅಂದ್ರೆ ಸಾಂಕೇತಿಕ ರೂಪದಲ್ಲಿದೆ. (ಪ್ರಕ. 1:1) ಹಾಗಾಗಿ ಪ್ರಕಟನೆ ಪುಸ್ತಕದಲ್ಲಿ ದೇವರ ವೈರಿಗಳನ್ನ ಸಾಂಕೇತಿಕ ರೂಪದಲ್ಲಿ ಕಾಡುಪ್ರಾಣಿಗಳಿಗೆ ಹೋಲಿಸಲಾಗಿದೆ. ಉದಾಹರಣೆಗೆ, ‘ಒಂದು ಕಾಡುಪ್ರಾಣಿ ಸಮುದ್ರದಿಂದ ಮೇಲೆ ಬಂತು.’ “ಅದಕ್ಕೆ ಹತ್ತು ಕೊಂಬು, ಏಳು ತಲೆ” ಇತ್ತು. (ಪ್ರಕ. 13:1) ಆಮೇಲೆ ‘ಇನ್ನೊಂದು ಕಾಡುಪ್ರಾಣಿ ಭೂಮಿಯಿಂದ ಮೇಲೆ ಬಂತು.’ ಅದು ಘಟಸರ್ಪದ ತರ ಮಾತಾಡುತ್ತೆ ಮತ್ತು “ಆಕಾಶದಿಂದ ಬೆಂಕಿ ಭೂಮಿಗೆ ಬೀಳೋ ತರ ಮಾಡುತ್ತೆ.” (ಪ್ರಕ. 13:11-13) ನಂತರ “ಕೆಂಪು ಕಾಡುಪ್ರಾಣಿ” ಕಾಣಿಸಿಕೊಳ್ಳುತ್ತೆ. ಅದರ ಮೇಲೆ ಒಬ್ಬ ವೇಶ್ಯೆ ಕೂತಿದ್ದಳು. ಮುಂಚಿನಿಂದಲೂ ಯೆಹೋವ ದೇವರನ್ನ ಮತ್ತು ಆತನ ಆಳ್ವಿಕೆಯನ್ನ ವಿರೋಧಿಸುತ್ತಿರುವ ಆತನ ವೈರಿಗಳನ್ನ ಈ ಮೂರು ಕಾಡುಪ್ರಾಣಿಗಳು ಸೂಚಿಸುತ್ತೆ. ಹಾಗಾಗಿ ಅವರು ಯಾರು ಅಂತ ಪತ್ತೆಹಚ್ಚೋದು ತುಂಬ ಮುಖ್ಯ.—ಪ್ರಕ. 17:1, 3.

ನಾಲ್ಕು ದೊಡ್ಡ ಪ್ರಾಣಿಗಳು

ಅವು “ಸಮುದ್ರದಿಂದ ಹೊರಗೆ” ಬಂದವು. (ದಾನಿ. 7:1-8, 15-17) ದಾನಿಯೇಲನ ಸಮಯದಿಂದ ಹಿಡಿದು ಇಲ್ಲಿ ತನಕ ದೇವಜನರ ಮೇಲೆ ಅಧಿಕಾರ ಚಲಾಯಿಸಿದ ಮತ್ತು ಅವರನ್ನ ಹಿಂಸಿಸಿದ ಲೋಕಶಕ್ತಿಗಳನ್ನು ಅವು ಸೂಚಿಸುತ್ತೆ (ಪ್ಯಾರ 4, 7 ನೋಡಿ)

4-5. ಪ್ರಕಟನೆಯಲ್ಲಿ ಹೇಳಿರೋ ಕಾಡುಪ್ರಾಣಿಗಳು ಯಾರು ಅಂತ ಅರ್ಥಮಾಡಿಕೊಳ್ಳೋಕೆ ದಾನಿಯೇಲ 7:15-17ರಲ್ಲಿರೋ ವಿಷಯಗಳು ಹೇಗೆ ಸಹಾಯ ಮಾಡುತ್ತೆ?

4 ದೇವರ ವೈರಿಗಳು ಯಾರು ಅಂತ ತಿಳಿದುಕೊಳ್ಳುವುದಕ್ಕೂ ಮುಂಚೆ ಆ ಕಾಡುಪ್ರಾಣಿಗಳು ಯಾರನ್ನ ಸೂಚಿಸುತ್ತವೆ ಅಂತ ತಿಳಿದುಕೊಳ್ಳಬೇಕು. ಅದಕ್ಕೆ ಬೈಬಲಲ್ಲಿ ಇರೋ ಬೇರೆ ಪುಸ್ತಕಗಳು ಸಹಾಯ ಮಾಡುತ್ತೆ. ಅದ್ರಲ್ಲಿ ಒಂದು ದಾನಿಯೇಲ ಪುಸ್ತಕ. ಪ್ರವಾದಿ ದಾನಿಯೇಲ ತನ್ನ ಕನಸಲ್ಲಿ ‘ನಾಲ್ಕು ದೊಡ್ಡ ಪ್ರಾಣಿಗಳು ಸಮುದ್ರದಿಂದ ಹೊರಗೆ ಬರೋದನ್ನ’ ನೋಡಿದ. (ದಾನಿ. 7:1-3) ಅವು ನಾಲ್ಕು ‘ರಾಜರನ್ನ’ ಅಥವಾ ಸರ್ಕಾರಗಳನ್ನ ಸೂಚಿಸುತ್ತೆ ಅಂತ ಹೇಳಿದ. (ದಾನಿಯೇಲ 7:15-17 ಓದಿ.) ಹಾಗಾಗಿ ಪ್ರಕಟನೆ ಪುಸ್ತಕದಲ್ಲಿ ತಿಳಿಸಿರೋ ಈ ಪ್ರಾಣಿಗಳು ಕೂಡ ಸರ್ಕಾರಗಳನ್ನ ಸೂಚಿಸುತ್ತೆ ಅಂತ ನಮಗೆ ಗೊತ್ತಾಗುತ್ತೆ.

5 ಪ್ರಕಟನೆ ಪುಸ್ತಕದಲ್ಲಿ ಹೇಳಿರೋ ಕೆಲವು ಸೂಚನೆಗಳ ಬಗ್ಗೆ ನಾವು ಈಗ ಕಲಿಯೋಣ ಮತ್ತು ಈ ಸೂಚನೆಗಳ ನಿಜವಾದ ಅರ್ಥ ತಿಳಿದುಕೊಳ್ಳೋಕೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ ಅಂತ ನೊಡೋಣ. ಈ ಕಾಡುಪ್ರಾಣಿಗಳು ಯಾರನ್ನ ಸೂಚಿಸುತ್ತೆ? ಅವುಗಳಿಗೆ ಏನಾಗುತ್ತೆ? ಕೊನೇದಾಗಿ, ಈ ಘಟನೆಗಳಿಂದ ನಾವೇನು ಕಲಿತೀವಿ? ಅಂತ ಈಗ ತಿಳಿದುಕೊಳ್ಳೋಣ.

ದೇವರ ವೈರಿಗಳನ್ನ ಪತ್ತೆಹಚ್ಚೋಣ

ಏಳು-ತಲೆಯ ಕಾಡುಪ್ರಾಣಿ

ಇದು “ಸಮುದ್ರದಿಂದ ಮೇಲೆ” ಬಂತು. ಇದಕ್ಕೆ ಏಳು ತಲೆ, ಹತ್ತು ಕೊಂಬು ಮತ್ತು ಹತ್ತು ಕಿರೀಟ ಇತ್ತು. (ಪ್ರಕ. 13:1-4) ಇಲ್ಲಿ ತನಕ ಮನುಷ್ಯರ ಮೇಲೆ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳನ್ನ ಇದು ಸೂಚಿಸುತ್ತೆ. ಈ ಏಳು ತಲೆಗಳು ದೇವಜನರ ಮೇಲೆ ಅಧಿಕಾರ ಚಲಾಯಿಸಿದ ಮತ್ತು ಅವರನ್ನ ಹಿಂಸಿಸಿದ ಏಳು ಲೋಕಶಕ್ತಿಗಳನ್ನು ಸೂಚಿಸುತ್ತೆ (ಪ್ಯಾರ 6-8 ನೋಡಿ)

6. ಪ್ರಕಟನೆ 13:1-4ರಲ್ಲಿರೋ ಏಳು ತಲೆಗಳಿರೋ ಕಾಡುಪ್ರಾಣಿ ಯಾವುದನ್ನ ಸೂಚಿಸುತ್ತೆ?

6 ಏಳು ತಲೆಗಳಿರೋ ಕಾಡುಪ್ರಾಣಿ ಯಾವುದನ್ನ ಸೂಚಿಸುತ್ತೆ? ದಾನಿಯೇಲ 7ನೇ ಅಧ್ಯಾಯದಲ್ಲಿ 4 ಬೇರೆಬೇರೆ ಪ್ರಾಣಿಗಳ ಬಗ್ಗೆ ಹೇಳುತ್ತೆ. ಆ 4 ಪ್ರಾಣಿಗಳು ಒಂದೊಂದು ಸರ್ಕಾರವನ್ನ ಸೂಚಿಸುತ್ತೆ. ಆ ಪ್ರಾಣಿಗಳಲ್ಲಿ ಒಂದು ಚಿರತೆ ತರ ಇತ್ತು, ಇನ್ನೊಂದು ಕರಡಿ ತರ ಇತ್ತು, ಮೂರನೇದು ಸಿಂಹದ ತರ ಇತ್ತು, ನಾಲ್ಕನೇ ಪ್ರಾಣಿಯ ತಲೆ ಮೇಲೆ ಹತ್ತು ಕೊಂಬುಗಳಿತ್ತು. ಆದರೆ ಪ್ರಕಟನೆಯಲ್ಲಿ ಹೇಳಿರೋ ಏಳು ತಲೆಗಳಿರೋ ಕಾಡುಪ್ರಾಣಿ, ಇವೆಲ್ಲದರ ತರನೂ ಇತ್ತು. (ಪ್ರಕಟನೆ 13:1-4 ಓದಿ.) ಅದರ ಮೈ ಚಿರತೆ ತರ ಇತ್ತು, ಕಾಲು ಕರಡಿ ತರ ಇತ್ತು, ಬಾಯಿ ಸಿಂಹದ ತರ ಇತ್ತು ಮತ್ತು ಅದಕ್ಕೆ ಹತ್ತು ಕೊಂಬುಗಳಿತ್ತು. ಇದ್ರಿಂದ ಆ ಏಳು ತಲೆಗಳಿರೋ ಕಾಡುಪ್ರಾಣಿ ಯಾವುದೋ ಒಂದು ಸರ್ಕಾರವನ್ನ ಅಥವಾ ಒಂದು ಲೋಕಶಕ್ತಿಯನ್ನ ಸೂಚಿಸ್ತಿಲ್ಲ ಅಂತ ನಮಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಆ ಪ್ರಾಣಿಗೆ “ಎಲ್ಲ ಕುಲ, ಜಾತಿ, ಭಾಷೆ, ದೇಶಗಳ ಮೇಲೆ” ಅಧಿಕಾರ ಸಿಕ್ತು ಅಂತ ಪ್ರಕಟನೆ ಪುಸ್ತಕ ಹೇಳುತ್ತೆ. (ಪ್ರಕ. 13:7) ಅಂದಮೇಲೆ ಏಳು ತಲೆಗಳಿರೋ ಈ ಕಾಡುಪ್ರಾಣಿ ಇಲ್ಲಿ ತನಕ ಮಾನವರ ಮೇಲೆ ಆಳ್ವಿಕೆ ನಡೆಸಿರೋ ಎಲ್ಲ ಸರ್ಕಾರಗಳನ್ನ ಸೂಚಿಸುತ್ತೆ. *ಪ್ರಸಂ. 8:9.

7. ಕಾಡುಪ್ರಾಣಿಯ ಏಳು ತಲೆಗಳು ಏನನ್ನ ಸೂಚಿಸುತ್ತೆ?

7 ಕಾಡುಪ್ರಾಣಿಯ ಏಳು ತಲೆಗಳು ಯಾವುದನ್ನ ಸೂಚಿಸುತ್ತೆ? ಪ್ರಕಟನೆ 13ನೇ ಅಧ್ಯಾಯದಲ್ಲಿ ಕಾಡುಪ್ರಾಣಿಯ ಮೂರ್ತಿ ಬಗ್ಗೆ ಮಾತಾಡುತ್ತೆ. ಅದರ ವಿವರಣೆಯನ್ನ ಪ್ರಕಟನೆ 17ನೇ ಅಧ್ಯಾಯದಲ್ಲಿ ಕೊಡಲಾಗಿದೆ. ಆ ಅಧ್ಯಾಯದಲ್ಲಿ ಈ ತಲೆಗಳು ಯಾರು ಅನ್ನೋಕೆ ಉತ್ತರ ಸಿಗುತ್ತೆ. ಪ್ರಕಟನೆ 17:10 ಹೀಗೆ ಹೇಳುತ್ತೆ: “ಏಳು ರಾಜರು ಇದ್ದಾರೆ. ಅವ್ರಲ್ಲಿ ಐದು ರಾಜರು ಬಿದ್ದುಹೋಗಿದ್ದಾರೆ, ಒಬ್ಬ ರಾಜ ಈಗ ಇದ್ದಾನೆ, ಮತ್ತೊಬ್ಬ ರಾಜ ಇನ್ನೂ ಬಂದಿಲ್ಲ, ಆದ್ರೆ ಅವನು ಬಂದಾಗ ಅವನು ಸ್ವಲ್ಪ ಸಮಯ ಮಾತ್ರ ಇರ್ತಾನೆ.” ಸೈತಾನ ಬಳಸಿರೋ ಎಲ್ಲ ಸರ್ಕಾರಗಳಲ್ಲಿ ಏಳು ಸರ್ಕಾರಗಳು ತುಂಬ ಪ್ರಾಮುಖ್ಯವಾಗಿತ್ತು. ಅದಕ್ಕೆ ಅವುಗಳನ್ನ ಕಾಡುಪ್ರಾಣಿಯ ‘ತಲೆಗಳಿಗೆ’ ಹೋಲಿಸಲಾಗಿದೆ. ಯಾಕಂದ್ರೆ ಈ ಲೋಕಶಕ್ತಿಗಳು ದೇವಜನರ ಮೇಲೆ ಅಧಿಕಾರ ಚಲಾಯಿಸಿದ್ರು ಅಥವಾ ಅವರನ್ನ ಹಿಂಸಿಸಿದ್ರು. ಅಪೊಸ್ತಲ ಯೋಹಾನನ ಕಾಲದಷ್ಟಕ್ಕೆ ಈಗಾಗಲೇ 5 ಲೋಕಶಕ್ತಿಗಳು ಬಂದು ಹೋಗಿದ್ದವು. ಅವು ಈಜಿಪ್ಟ್‌, ಅಶ್ಶೂರ, ಬಾಬೆಲ್‌, ಮೇದ್ಯ-ಪಾರಸೀಯ ಮತ್ತು ಗ್ರೀಸ್‌. ಯೋಹಾನನಿಗೆ ಈ ಪ್ರಕಟನೆ ಸಿಕ್ಕಿದಾಗ 6ನೇ ಲೋಕಶಕ್ತಿ ಆಳ್ವಿಕೆ ಮಾಡುತ್ತಿತ್ತು. ಅದು ರೋಮ್‌. ಅದಾದ ಮೇಲೆ 7ನೇ ಲೋಕಶಕ್ತಿ ಬರಲಿಕ್ಕಿತ್ತು. ಆ ಕೊನೇ ಲೋಕಶಕ್ತಿ ಅಥವಾ ಏಳನೇ ತಲೆ ಯಾವುದು?

8. ಕಾಡುಪ್ರಾಣಿಯ ಏಳನೇ ತಲೆ ಯಾವುದನ್ನ ಸೂಚಿಸುತ್ತೆ?

8 ದಾನಿಯೇಲ ಪುಸ್ತಕದಲ್ಲಿ ಹೇಳಿರೋ ಭವಿಷ್ಯವಾಣಿಗಳು ಕಾಡುಪ್ರಾಣಿಯ ಏಳನೇ ತಲೆಯನ್ನ ಅಂದ್ರೆ ಕೊನೇ ತಲೆಯನ್ನ ಪತ್ತೆಹಚ್ಚೋಕೆ ಸಹಾಯ ಮಾಡುತ್ತೆ. ಈ ಅಂತ್ಯ ಕಾಲದಲ್ಲಿ ಅಂದ್ರೆ ‘ಒಡೆಯನ ದಿನದಲ್ಲಿ’ ಯಾವ ಲೋಕಶಕ್ತಿ ಆಳ್ವಿಕೆ ಮಾಡ್ತಿದೆ? (ಪ್ರಕ. 1:10) ಆ್ಯಂಗ್ಲೋ-ಅಮೆರಿಕ ಆಳ್ವಿಕೆ ಮಾಡ್ತಿದೆ. ಇದು ಬ್ರಿಟನ್‌ ಮತ್ತು ಅಮೆರಿಕ ಎರಡು ಸರ್ಕಾರಗಳು ಸೇರಿರೋ ಲೋಕಶಕ್ತಿಯಾಗಿದೆ. ಹಾಗಾಗಿ ಪ್ರಕಟನೆ 13:1-4ರಲ್ಲಿ ಹೇಳಿರೋ ಕಾಡುಪ್ರಾಣಿಯ ಏಳನೇ ತಲೆ ಆ್ಯಂಗ್ಲೋ-ಅಮೆರಿಕ ಅಂತ ಹೇಳಬಹುದು.

ಕುರಿಮರಿಗೆ ಇರೋ ತರ ಎರಡು ಕೊಂಬಿರೋ ಕಾಡುಪ್ರಾಣಿ

ಇದು “ಭೂಮಿಯಿಂದ ಮೇಲೆ” ಬರುತ್ತೆ. “ಘಟಸರ್ಪದ ತರ” ಮಾತಾಡುತ್ತೆ. “ಆಕಾಶದಿಂದ ಬೆಂಕಿ ಭೂಮಿಗೆ ಬೀಳೋ” ತರ ಮಾಡುತ್ತೆ ಮತ್ತು “ಸುಳ್ಳು ಪ್ರವಾದಿಯ” ತರ ದೊಡ್ಡದೊಡ್ಡ ಅದ್ಭುತಗಳನ್ನು ಮಾಡುತ್ತೆ. (ಪ್ರಕ. 13:11-15; 16:13; 19:20) ಎರಡು ಕೊಂಬಿರೋ ಕಾಡುಪ್ರಾಣಿಯನ್ನ ಸುಳ್ಳು ಪ್ರವಾದಿ ಅಂತನೂ ಕರೆಯಲಾಗಿದೆ. ಇದು ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯನ್ನು ಸೂಚಿಸುತ್ತೆ. ಇದು ಭೂಮಿಯ ಜನರನ್ನ ಮರುಳುಗೊಳಿಸಿ ಏಳು ತಲೆ ಮತ್ತು ಹತ್ತು ಕೊಂಬಿರೋ “ಕಾಡುಪ್ರಾಣಿಯ” “ಮೂರ್ತಿಯನ್ನ” ಮಾಡೋಕೆ ಅವರಿಗೆ ಹೇಳುತ್ತೆ (ಪ್ಯಾರ 9 ನೋಡಿ)

9. ‘ಕುರಿಮರಿಗೆ ಇರೋ ತರ ಎರಡು ಕೊಂಬಿದ್ದ’ ಕಾಡುಪ್ರಾಣಿ ಯಾವುದನ್ನ ಸೂಚಿಸುತ್ತೆ?

9 ಏಳನೇ ತಲೆಯಾಗಿರೋ ಈ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿನ ಪ್ರಕಟನೆ 13ನೇ ಅಧ್ಯಾಯದಲ್ಲಿ ಇನ್ನೊಂದು ಕಾಡುಪ್ರಾಣಿಗೆ ಹೋಲಿಸಲಾಗಿದೆ. ಆ ಕಾಡುಪ್ರಾಣಿಗೆ “ಕುರಿಮರಿಗೆ ಇರೋ ತರ ಎರಡು ಕೊಂಬಿತ್ತು, ಆದ್ರೆ ಅದು ಒಂದು ಘಟಸರ್ಪದ ತರ ಮಾತಾಡೋಕೆ ಶುರುಮಾಡ್ತು” ಮತ್ತು “ಅದು ದೊಡ್ಡದೊಡ್ಡ ಅದ್ಭುತಗಳನ್ನ ಮಾಡುತ್ತೆ. ಮನುಷ್ಯರು ನೋಡ್ತಾ ಇರುವಾಗಲೇ ಆಕಾಶದಿಂದ ಬೆಂಕಿ ಭೂಮಿಗೆ ಬೀಳೋ ತರ ಮಾಡುತ್ತೆ” (ಪ್ರಕ. 13:11-15.) ಪ್ರಕಟನೆ 16 ಮತ್ತು 19ನೇ ಅಧ್ಯಾಯದಲ್ಲಿ ಈ ಕಾಡುಪ್ರಾಣಿಯನ್ನ “ಸುಳ್ಳು ಪ್ರವಾದಿ” ಅಂತನೂ ಹೇಳಲಾಗಿದೆ. (ಪ್ರಕ. 16:13; 19:20) ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ‘ಅದ್ಭುತ ರೀತಿಯಲ್ಲಿ ನಾಶ ತರುತ್ತೆ’ ಅಂತ ದಾನಿಯೇಲನೂ ಹೇಳಿದ್ದ. (ದಾನಿ. 8:19, 23, 24, ಪಾದಟಿಪ್ಪಣಿ) ಎರಡನೇ ಮಹಾಯುದ್ಧದಲ್ಲಿ ಅವನು ಹೇಳಿದ ಹಾಗೇ ಆಯ್ತು. ಬ್ರಿಟನ್‌ ಮತ್ತು ಅಮೆರಿಕದ ವಿಜ್ಞಾನಿಗಳು ಸೇರಿಕೊಂಡು ಅಣುಬಾಂಬ್‌ಗಳನ್ನ ತಯಾರಿಸಿದ್ರು ಮತ್ತು ಶತ್ರುಪಡೆಯ ಮೇಲೆ ಈ ಬಾಂಬ್‌ಗಳನ್ನ ಹಾಕಿ ಅವರನ್ನ ಸೋಲಿಸಿದ್ರು. ಹೀಗೆ ಎರಡನೇ ಮಹಾಯುದ್ಧಕ್ಕೆ ಅಂತ್ಯ ಹಾಡಿದ್ರು. ಇದು ಒಂದರ್ಥದಲ್ಲಿ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ, “ಆಕಾಶದಿಂದ ಬೆಂಕಿ ಭೂಮಿಗೆ ಬೀಳೋ ತರ” ಮಾಡಿದ ಹಾಗಿತ್ತು.

ಕೆಂಪು ಕಾಡುಪ್ರಾಣಿ

ಮಹಾ ಬಾಬೆಲ್‌ ಅನ್ನೋ ವೇಶ್ಯೆ ಅದರ ಮೇಲೆ ಕೂತಿದ್ದಾಳೆ. ಈ ಕಾಡುಪ್ರಾಣಿಯನ್ನ ಎಂಟನೇ ರಾಜ ಅಂತ ಕರೆಯಲಾಗಿದೆ. (ಪ್ರಕ. 17:3-6, 8, 11) ಮೊದಮೊದಲು ವೇಶ್ಯೆ ಆ ಕಾಡುಪ್ರಾಣಿಯ ಮೇಲೆ ಅಧಿಕಾರ ಚಲಾಯಿಸ್ತಾಳೆ. ಆದ್ರೆ ಆಮೇಲೆ ಅದು ಅವಳನ್ನ ನಾಶ ಮಾಡಿಬಿಡುತ್ತೆ. ಆ ವೇಶ್ಯೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು ಸೂಚಿಸುತ್ತಾಳೆ ಮತ್ತು ಕಾಡುಪ್ರಾಣಿ, ಭೂಮಿಯಲ್ಲಿರೋ ಎಲ್ಲಾ ಸರ್ಕಾರಗಳ ಪರವಾಗಿ ಕೆಲಸ ಮಾಡೋ ವಿಶ್ವಸಂಸ್ಥೆಯನ್ನು ಸೂಚಿಸುತ್ತೆ (ಪ್ಯಾರ 10, 14-17 ನೋಡಿ)

10. “ಕಾಡುಪ್ರಾಣಿಯ ಮೂರ್ತಿ” ಯಾವುದನ್ನ ಸೂಚಿಸುತ್ತೆ? (ಪ್ರಕಟನೆ 13:14, 15; 17:3, 8, 11)

10 ನಾವೀಗ ಇನ್ನೊಂದು ಕಾಡುಪ್ರಾಣಿಯ ಬಗ್ಗೆ ನೊಡೋಣ. ಇದನ್ನ “ಕಾಡುಪ್ರಾಣಿಯ ಮೂರ್ತಿ” ಅಂತ ಕರೆಯಲಾಗಿದೆ. ಇದು ನೋಡೋಕೆ ಏಳು ತಲೆಯಿರೋ ಕಾಡುಪ್ರಾಣಿಯ ತರಾನೇ ಇದೆ. ಆದ್ರೆ ಕೆಂಪು ಬಣ್ಣದಲ್ಲಿದೆ. ಇದನ್ನ “ಎಂಟನೇ ರಾಜ” * ಅಂತ ವರ್ಣಿಸಲಾಗಿದೆ. (ಪ್ರಕಟನೆ 13:14, 15; 17:3, 8, 11 ಓದಿ.) ಈ “ರಾಜ” ಬರ್ತಾನೆ ಆಮೇಲೆ ಇಲ್ಲದೆ ಹೋಗ್ತಾನೆ ನಂತರ ಮತ್ತೆ ಬರ್ತಾನೆ ಅಂತ ಹೇಳಲಾಗಿದೆ. ಇದು ಭೂಮಿಯಲ್ಲಿರೋ ಎಲ್ಲಾ ರಾಜಕೀಯ ಶಕ್ತಿಗಳು ಸೇರಿ ಆಗಿರೋ ವಿಶ್ವಸಂಸ್ಥೆ ಬಗ್ಗೆನೇ ಹೇಳಿದ ತರ ಇದೆ. ಯಾಕಂದ್ರೆ ಇದು ರಾಷ್ಟ್ರಸಂಘವಾಗಿ ಹುಟ್ಟಿಕೊಳ್ತು ಆಮೇಲೆ ಎರಡನೇ ಮಹಾಯುದ್ಧದ ಸಮಯದಲ್ಲಿ ಇಲ್ಲದೆ ಹೋಯ್ತು. ಆಮೇಲೆ ಮತ್ತೆ ವಿಶ್ವಸಂಸ್ಥೆಯಾಗಿ ಬಂತು.

11. ಕಾಡುಪ್ರಾಣಿಗಳು ಅಂದ್ರೆ ಸರ್ಕಾರಗಳು ಏನು ಮಾಡುತ್ತವೆ? ಮತ್ತು ನಾವು ಯಾಕೆ ಭಯಪಡಬಾರದು?

11 ಈ ಕಾಡುಪ್ರಾಣಿಗಳು ಅಥವಾ ಸರ್ಕಾರಗಳು ಯೆಹೋವ ಮತ್ತು ಆತನ ಆರಾಧಕರ ಮೇಲೆ ಸುಳ್ಳಾರೋಪ ಹಾಕಿ ಜನರನ್ನ ಅವರ ವಿರುದ್ಧ ಎತ್ತಿಕಟ್ತಾರೆ. ಇವರು ಒಂದರ್ಥದಲ್ಲಿ ಯೋಹಾನ ಹೇಳಿದ ಹಾಗೆ “ಭೂಮೀಲಿರೋ ಎಲ್ಲ ರಾಜರನ್ನ” “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ” ಹರ್ಮಗೆದೋನ್‌ ಯುದ್ಧಕ್ಕಾಗಿ ಒಟ್ಟು ಸೇರಿಸ್ತಾರೆ. (ಪ್ರಕ. 16:13, 14, 16) ಆದ್ರೆ ನಾವು ಭಯಪಡೋ ಅವಶ್ಯಕತೆಯಿಲ್ಲ. ಯಾಕಂದ್ರೆ ನಮ್ಮ ದೇವರಾದ ಯೆಹೋವನು, ತನ್ನ ಅಧಿಕಾರಕ್ಕೆ ಬೆಂಬಲ ಕೊಡುವವರನ್ನ ಕಾಪಾಡೋಕೆ ತಕ್ಷಣ ಬರ್ತಾನೆ.—ಯೆಹೆ. 38:21-23.

12. ಎಲ್ಲಾ ಕಾಡುಪ್ರಾಣಿಗಳಿಗೆ ಏನಾಗುತ್ತೆ?

12 ಎಲ್ಲಾ ಕಾಡುಪ್ರಾಣಿಗಳಿಗೆ ಏನಾಗುತ್ತೆ? ಪ್ರಕಟನೆ 19:20 ಹೇಳುತ್ತೆ: “ಕುದುರೆ ಮೇಲೆ ಕೂತಿರುವವನು ಕಾಡುಪ್ರಾಣಿಯನ್ನ, ಸುಳ್ಳು ಪ್ರವಾದಿಯನ್ನ ಹಿಡಿದು ಉರಿಯೋ ಬೆಂಕಿಯ ಕೆರೆಗೆ ಜೀವಂತವಾಗಿ ಹಾಕಿದ. ಈ ಸುಳ್ಳು ಪ್ರವಾದಿ ಕಾಡುಪ್ರಾಣಿ ಮುಂದೆ ಅದ್ಭುತಗಳನ್ನ ಮಾಡಿದ. ಹೀಗೆ ಮಾಡಿ ಕಾಡುಪ್ರಾಣಿಯ ಗುರುತು ಇದ್ದವ್ರನ್ನ, ಕಾಡುಪ್ರಾಣಿಯ ಮೂರ್ತಿಯನ್ನ ಆರಾಧಿಸ್ತಿದ್ದ ಜನ್ರನ್ನ ಮರಳು ಮಾಡಿದ.” ಹಾಗಾಗಿ ಈ ಸರ್ಕಾರಗಳು ಆಳುತ್ತಿರುವಾಗಲೇ ದೇವರು ಅವರನ್ನ ಸಂಪೂರ್ಣವಾಗಿ ನಾಶ ಮಾಡ್ತಾನೆ.

13. ಲೋಕದ ಸರ್ಕಾರಗಳು ಕ್ರೈಸ್ತರಿಗೆ ಏನು ಮಾಡೋಕೆ ಒತ್ತಾಯ ಮಾಡುತ್ತೆ?

13 ನಾವೇನು ಮಾಡಬೇಕು? ಕ್ರೈಸ್ತರಾಗಿ ನಾವು ದೇವರಿಗೆ ಮತ್ತು ಆತನ ಸರ್ಕಾರಕ್ಕೆ ನಿಷ್ಠೆ ತೋರಿಸಬೇಕು. (ಯೋಹಾನ 18:36) ಅದಕ್ಕೆ ನಾವು ಈ ಲೋಕದ ಯಾವ ರಾಜಕೀಯ ವಿಷಯಗಳಲ್ಲೂ ತಲೆಹಾಕಬಾರದು ಮತ್ತು ಅದಕ್ಕೆ ಬೆಂಬಲವನ್ನೂ ಕೊಡಬಾರದು. ಆದ್ರೆ ಇದನ್ನ ಮಾಡೋಕೆ ನಮಗೆ ತುಂಬ ಕಷ್ಟ ಆಗಬಹುದು. ಯಾಕಂದ್ರೆ ಸರ್ಕಾರಗಳು ನಮ್ಮ ಮಾತು ಮತ್ತು ನಡತೆಯಲ್ಲಿ ಅವರಿಗೆ ಪೂರ್ತಿಯಾಗಿ ಬೆಂಬಲ ಕೊಡಬೇಕು ಅಂತ ಒತ್ತಾಯ ಮಾಡ್ತಾರೆ. ಅದ್ರಲ್ಲಿ ಯೆಹೋವನಿಗೆ ಇಷ್ಟ ಇಲ್ಲದಿರೋ ಕೆಲವು ವಿಷಯಗಳನ್ನೂ ಮಾಡೋಕೆ ಹೇಳ್ತಾರೆ. ಯಾರು ಅದಕ್ಕೆ ಮಣಿದು, ರಾಜಿಮಾಡಿಕೊಂಡು ಅವರ ಪಕ್ಷವಹಿಸುತ್ತಾರೋ ಅವರು ಕಾಡುಪ್ರಾಣಿಯ ಗುರುತನ್ನ ಹಾಕಿಕೊಳ್ತಾರೆ. (ಪ್ರಕ. 13:16, 17) ಅಂಥವರನ್ನ ಯೆಹೋವ ದೇವರು ಮೆಚ್ಚಲ್ಲ ಮತ್ತು ಅವ್ರಿಗೆ ಶಾಶ್ವತ ಜೀವನೂ ಸಿಗಲ್ಲ. (ಪ್ರಕ. 14:9, 10; 20:4) ಹಾಗಾಗಿ ಸರ್ಕಾರಗಳು ನಮಗೆ ಎಷ್ಟೇ ಒತ್ತಾಯ ಮಾಡಿದ್ರೂ ನಾವು ಯಾವ ರಾಜಕೀಯ ಪಕ್ಷವನ್ನೂ ವಹಿಸಬಾರದು!

ಪ್ರಸಿದ್ಧ ವೇಶ್ಯೆಗೆ ಹೀನಾಯ ಸಾವು

14. ಅಪೊಸ್ತಲ ಯೋಹಾನನಿಗೆ ಏನನ್ನ ನೋಡಿ ಆಶ್ಚರ್ಯ ಆಯ್ತು? (ಪ್ರಕಟನೆ 17:3-5)

14 ಅಪೊಸ್ತಲ ಯೋಹಾನ ಇನ್ನೊಂದು ವಿಷಯ ನೋಡಿದ. ಅದನ್ನ ನೋಡಿ ಅವನಿಗೆ “ತುಂಬ ಆಶ್ಚರ್ಯ ಆಯ್ತು.” ಅದೇನಂದ್ರೆ, ಒಬ್ಬ ಸ್ತ್ರೀ ಕ್ರೂರವಾದ ಕಾಡುಪ್ರಾಣಿ ಮೇಲೆ ಕೂತಿದ್ದಳು. (ಪ್ರಕ. 17:1, 2, 6) ಅವಳು ‘ಪ್ರಸಿದ್ಧ ವೇಶ್ಯೆ’ ತರ ಕಾಣಿಸುತ್ತಿದ್ದಳು. ಅವಳನ್ನ “ಮಹಾ ಬಾಬೆಲ್‌” ಅಂತ ಕರೆಯಲಾಗಿದೆ. ಅವಳು ‘ಭೂಮಿಯ ರಾಜರ’ ಜೊತೆ “ಲೈಂಗಿಕ ಅನೈತಿಕತೆ” ಮಾಡುತ್ತಿದ್ದಳು.ಪ್ರಕಟನೆ 17:3-5 ಓದಿ.

15-16. “ಮಹಾ ಬಾಬೆಲ್‌” ಅಂದ್ರೆ ಯಾರು? ಮತ್ತು ಇದು ನಮಗೆ ಹೇಗೆ ಗೊತ್ತು?

15 “ಮಹಾ ಬಾಬೆಲ್‌” ಅಂದ್ರೆ ಯಾರು? ಈ ಸ್ತ್ರೀ ಯಾವ ಸರ್ಕಾರವನ್ನೂ ಸೂಚಿಸಲ್ಲ. ಯಾಕಂದ್ರೆ ಇವಳು ಭೂಮಿಯ ರಾಜಕೀಯ ಅಧಿಕಾರಿಗಳ ಜೊತೆನೇ ಲೈಂಗಿಕ ಅನೈತಿಕತೆ ನಡೆಸ್ತಿದ್ದಾಳೆ. (ಪ್ರಕ. 18:9) ಅಷ್ಟೇ ಅಲ್ಲ, ಅವಳು ಕೆಂಪು ಕಾಡುಪ್ರಾಣಿಯ ಮೇಲೆ ಕೂತಿದ್ದಾಳೆ. ಅಂದ್ರೆ ರಾಜಕೀಯ ನಾಯಕರ ಮೇಲೆ ಅಧಿಕಾರ ಚಲಾಯಿಸ್ತಿದ್ದಾಳೆ. ಅವಳು ಸೈತಾನನ ಲೋಕದಲ್ಲಿ ದುರಾಸೆ ತುಂಬಿರೋ ವಾಣಿಜ್ಯ ವ್ಯವಸ್ಥೆಯನ್ನ ಸೂಚಿಸಲ್ಲ. ಯಾಕಂದ್ರೆ ಪ್ರಕಟನೆ ಪುಸ್ತಕದಲ್ಲಿ ಈ ವಾಣಿಜ್ಯ ವ್ಯವಸ್ಥೆಯನ್ನ ‘ಭೂಮಿಯ ಮೇಲಿರೋ ವ್ಯಾಪಾರಿಗಳಿಗೆ’ ಹೋಲಿಸಲಾಗಿದೆ.—ಪ್ರಕ. 18:11, 15, 16.

16 ಯಾರು ಯೆಹೋವನನ್ನು ಆರಾಧಿಸ್ತೀನಿ ಅಂತ ಹೇಳಿಕೊಂಡು ಸುಳ್ಳು ದೇವರುಗಳನ್ನ ಆರಾಧಿಸ್ತಾರೋ ಅಥವಾ ಲೋಕದ ಸ್ನೇಹ ಮಾಡ್ತಾರೋ ಅಂಥವರನ್ನೂ ಕೆಲವೊಮ್ಮೆ ಬೈಬಲ್‌ನಲ್ಲಿ “ವೇಶ್ಯೆಗೆ” ಹೋಲಿಸಲಾಗಿದೆ. (1 ಪೂರ್ವ. 5:25; ಯಾಕೋ. 4:4) ಆದ್ರೆ ಯಾರು ಯೆಹೋವನ ಮೇಲೆ ನಂಬಿಕೆಯಿಟ್ಟು ಆತನನ್ನ ಮಾತ್ರ ಆರಾಧಿಸ್ತಾರೋ ಅಂಥವರನ್ನ ‘ಪವಿತ್ರರು’ ‘ಕನ್ಯೆಯರು’ ಅಂತ ಕರೆಯಲಾಗಿದೆ. (2 ಕೊರಿಂ. 11:2; ಪ್ರಕ. 14:4) ಹಿಂದಿನ ಕಾಲದಲ್ಲಿ ಸುಳ್ಳಾರಾಧನೆ ಶುರುವಾಗಿದ್ದು ಬಾಬೆಲ್‌ನಲ್ಲೇ. ಹಾಗಾಗಿ ಮಹಾ ಬಾಬೆಲ್‌ ಭೂಮಿಯಲ್ಲಿರೋ ಎಲ್ಲಾ ತರದ ಸುಳ್ಳಾರಾಧನೆಯನ್ನ ಸೂಚಿಸುತ್ತಾಳೆ ಅಂತ ನಮಗೆ ಗೊತ್ತಾಗುತ್ತೆ. ಅವಳು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿದ್ದಾಳೆ.—ಪ್ರಕ. 17:5, 18; jw.orgನಲ್ಲಿ “ಮಹಾ ಬಾಬೆಲ್‌ ಯಾವುದನ್ನ ಸೂಚಿಸುತ್ತೆ?” ಅನ್ನೋ ಲೇಖನ ನೋಡಿ.

17. ಮಹಾ ಬಾಬೆಲ್‌ಗೆ ಏನಾಗುತ್ತೆ?

17 ಮಹಾ ಬಾಬೆಲ್‌ಗೆ ಏನಾಗುತ್ತೆ? ಪ್ರಕಟನೆ 17:16, 17ರಲ್ಲಿ ಅದಕ್ಕೆ ಉತ್ತರ ಇದೆ. ಅದು ಹೀಗೆ ಹೇಳುತ್ತೆ: “ಆ ಹತ್ತು ಕೊಂಬುಗಳು ಮತ್ತು ಆ ಕಾಡುಪ್ರಾಣಿ ಆ ವೇಶ್ಯೆಯನ್ನ ದ್ವೇಷಿಸಿ ಅವಳ ಹತ್ರ ಇರೋದನ್ನೆಲ್ಲ ಕಿತ್ಕೊಂಡು ಬಟ್ಟೆ ತೆಗೆದುಹಾಕಿ ಅವಳ ಮಾಂಸವನ್ನ ತಿಂದು ಬೆಂಕಿಯಿಂದ ಅವಳನ್ನ ಪೂರ್ತಿಯಾಗಿ ಸುಟ್ಟು ಹಾಕುತ್ತೆ. ಯಾಕಂದ್ರೆ ದೇವರು ತನ್ನ ಯೋಚ್ನೆಯನ್ನ ಅವ್ರ ತಲೆಗೆ ಹಾಕ್ತಾನೆ.” ಇಲ್ಲಿ ಹೇಳೋ ಹಾಗೆ ಯೆಹೋವ ದೇವರು ಸರ್ಕಾರಗಳ ಮನಸ್ಸಿಗೆ ತನ್ನ ಯೋಚನೆಯನ್ನ ತುಂಬಿಸ್ತಾನೆ. ಅವು ಕೆಂಪು ಕಾಡುಪ್ರಾಣಿಗೆ ಅಂದ್ರೆ ವಿಶ್ವಸಂಸ್ಥೆಗೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನ ಸಂಪೂರ್ಣವಾಗಿ ನಾಶ ಮಾಡೋಕೆ ಹೇಳುತ್ತವೆ.—ಪ್ರಕ. 18:21-24.

18. ಮಹಾ ಬಾಬೆಲನ್ನ ಪೂರ್ತಿಯಾಗಿ ಬಿಟ್ಟು ಬರೋಕೆ ನಾವೇನು ಮಾಡಬೇಕು?

18 ನಾವೇನು ಮಾಡಬೇಕು? ನಾವು ಮಾಡೋ ಆರಾಧನೆ, ‘ನಮ್ಮ ತಂದೆ ಆಗಿರೋ ದೇವರ ದೃಷ್ಟಿಯಲ್ಲಿ ಶುದ್ಧವಾಗಿರೋ ಕಳಂಕ ಇಲ್ಲದ ಆರಾಧನೆಯಾಗಿರಬೇಕು.’ (ಯಾಕೋ. 1:27) ಮಹಾ ಬಾಬೆಲ್‌ಗೆ ಸಂಬಂಧಪಟ್ಟ ಯಾವ ಕೆಲಸನೂ ನಾವು ಮಾಡಬಾರದು. ಅಂದ್ರೆ ಸುಳ್ಳು ಬೋಧನೆಗಳನ್ನ ಕೇಳಿಸಿಕೊಳ್ಳಬಾರದು, ಸುಳ್ಳುಧರ್ಮಗಳಿಗೆ ಸಂಬಂಧಪಟ್ಟ ಹಬ್ಬಗಳನ್ನ ಆಚರಿಸಬಾರದು, ನಮ್ಮ ನೈತಿಕತೆ ನೆಲಕಚ್ಚಬಾರದು ಮತ್ತು ಮಂತ್ರ ತಂತ್ರಗಳನ್ನ ಮಾಡಬಾರದು. ಅಷ್ಟೇ ಅಲ್ಲ, ಜನರು ಅವಳ ಪಾಪಗಳಲ್ಲಿ ಪಾಲು ತೆಗೆದುಕೊಳ್ಳದೆ ಇರೋಕೆ “ಅವಳಿಂದ ಹೊರಗೆ ಬನ್ನಿ” ಅಂತ ನಾವು ಅವರಿಗೆ ಎಚ್ಚರಿಸಬೇಕು.—ಪ್ರಕ. 18:4.

ದೇವರ ದೊಡ್ಡ ವೈರಿಯ ನಾಶ

ಬೆಂಕಿ ಬಣ್ಣದ ಘಟಸರ್ಪ

ಸೈತಾನ ಕಾಡುಪ್ರಾಣಿಗೆ ಅಧಿಕಾರ ಕೊಡ್ತಾನೆ. (ಪ್ರಕ. 12:3, 9, 13; 13:4; 20:2, 10) ಯೆಹೋವನ ದೊಡ್ಡ ವೈರಿಯಾಗಿರೋ ಸೈತಾನನನ್ನು 1,000 ವರ್ಷಗಳು ಅಗಾಧ ಸ್ಥಳಕ್ಕೆ ತಳ್ಳಲಾಗುತ್ತೆ. ಆಮೇಲೆ ಸೈತಾನನನ್ನು “ಬೆಂಕಿ ಮತ್ತು ಗಂಧಕದ ಕೆರೆಗೆ” ತಳ್ಳಲಾಗುತ್ತೆ (ಪ್ಯಾರ 19-20 ನೋಡಿ)

19. “ಬೆಂಕಿ ಬಣ್ಣದ ಒಂದು ದೊಡ್ಡ ಘಟಸರ್ಪ” ಯಾರು?

19 ಪ್ರಕಟನೆ ಪುಸ್ತಕದಲ್ಲಿ ‘ಬೆಂಕಿ ಬಣ್ಣದ ದೊಡ್ಡ ಘಟಸರ್ಪದ’ ಬಗ್ಗೆನೂ ಹೇಳಲಾಗಿದೆ. (ಪ್ರಕ. 12:3) ಈ ಘಟಸರ್ಪ ಯೇಸು ಮತ್ತು ಆತನ ದೂತರ ವಿರುದ್ಧ ಯುದ್ಧ ಮಾಡುತ್ತೆ. (ಪ್ರಕ. 12:7-9) ಇದು ದೇವಜನರ ಮೇಲೆ ಆಕ್ರಮಣ ಮಾಡುತ್ತೆ ಮತ್ತು ಕಾಡುಪ್ರಾಣಿಗಳಿಗೆ ಅಥವಾ ಸರ್ಕಾರಗಳಿಗೆ ಅಧಿಕಾರ ಕೊಡುತ್ತೆ. (ಪ್ರಕ. 12:17; 13:4) ಈ ಘಟಸರ್ಪ ಯಾರು? ‘ಹಳೇ ಹಾವಾಗಿರೋ ಪಿಶಾಚ ಅಥವಾ ಸೈತಾನ.’ (ಪ್ರಕ. 12:9; 20:2) ತೆರೆಮರೆಯಲ್ಲಿ ಯೆಹೋವನ ಎಲ್ಲಾ ವೈರಿಗಳನ್ನ ಆಡಿಸ್ತಾ ಇರುವವನು ಇವನೇ.

20. ಘಟಸರ್ಪಕ್ಕೆ ಏನಾಗುತ್ತೆ?

20 ಘಟಸರ್ಪಕ್ಕೆ ಏನಾಗುತ್ತೆ? ಪ್ರಕಟನೆ 20:1-3ರಲ್ಲಿ ಹೇಳಿರೋ ತರ ಒಬ್ಬ ದೇವದೂತ ಸೈತಾನನನ್ನು ಅಗಾಧ ಸ್ಥಳಕ್ಕೆ ತಳ್ತಾನೆ ಮತ್ತು ಅವನನ್ನು ‘1,000 ವರ್ಷ ಬಂಧನದಲ್ಲಿ ಇಡ್ತಾನೆ. ಆ ಸಮಯದಲ್ಲಿ ಸೈತಾನನಿಗೆ ದೇಶಗಳ ಜನ್ರನ್ನ ಮೋಸಮಾಡೋಕೆ ಆಗಲ್ಲ.’ ಕೊನೆಗೆ ಸೈತಾನ ಮತ್ತು ಅವನ ದೂತರನ್ನ “ಬೆಂಕಿ ಮತ್ತು ಗಂಧಕದ ಕೆರೆಗೆ” ಹಾಕಿ ಸಂಪೂರ್ಣವಾಗಿ ನಾಶ ಮಾಡಲಾಗುತ್ತೆ. (ಪ್ರಕ. 20:10) ಸೈತಾನ ಮತ್ತು ಅವನ ದೂತರು ಇಲ್ಲದಿರೋ ಜಗತ್ತನ್ನ ಸ್ವಲ್ಪ ಕಲ್ಪಿಸಿಕೊಳ್ಳಿ. ಆಗ ಯಾರಿಗೂ ತೊಂದರೆ ಇರಲ್ಲ, ಎಲ್ಲೆಲ್ಲೂ ಶಾಂತಿ ಮತ್ತು ನೆಮ್ಮದಿ ತುಂಬಿರುತ್ತೆ!

21. ಪ್ರಕಟನೆ ಪುಸ್ತಕದಲ್ಲಿರೋ ಭವಿಷ್ಯವಾಣಿನ ಓದಿದ್ರೆ ನಮಗೆ ಯಾಕೆ ಖುಷಿಯಾಗುತ್ತೆ?

21 ಪ್ರಕಟನೆ ಪುಸ್ತಕದಲ್ಲಿರೋ ಸೂಚನೆಗಳ ಅರ್ಥವನ್ನ ತಿಳಿದುಕೊಂಡಾಗ ನಮಗೆ ಎಷ್ಟು ಖುಷಿ ಆಯ್ತಲ್ವಾ! ದೇವರ ವೈರಿಗಳು ಯಾರು ಅಂತ ಪತ್ತೆಹಚ್ಚಿದ್ದಷ್ಟೇ ಅಲ್ಲ ಅವರಿಗೆ ಮುಂದೆ ಏನಾಗುತ್ತೆ ಅಂತನೂ ತಿಳಿದುಕೊಂಡ್ವಿ. “ಈ ಭವಿಷ್ಯವಾಣಿಯಲ್ಲಿ ಇರೋ ಮಾತುಗಳನ್ನ ಜೋರಾಗಿ ಓದುವವರು, ಅದನ್ನ ಕೇಳಿಸ್ಕೊಳ್ಳುವವರು, ಖುಷಿಯಾಗಿ ಇರ್ತಾರೆ” ಅನ್ನೋದ್ರಲ್ಲಿ ಸಂಶಯನೇ ಇಲ್ಲ. (ಪ್ರಕ. 1:3) ಆದ್ರೆ ದೇವರ ವೈರಿಗಳೆಲ್ಲ ನಾಶ ಆದಮೇಲೆ ದೇವಜನರಿಗೆ ಯಾವ ಆಶೀರ್ವಾದಗಳು ಸಿಗುತ್ತೆ? ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 30 ಯೆಹೋವನು ತನ್ನ ಆಳ್ವಿಕೆಯನ್ನು ಆರಂಭಿಸುತ್ತಾನೆ

^ ಪ್ಯಾರ. 5 ಪ್ರಕಟನೆ ಪುಸ್ತಕದಲ್ಲಿ ದೇವರ ವೈರಿಗಳು ಯಾರು ಅಂತ ಕಂಡುಹಿಡಿಯೋಕೆ ಕೆಲವು ಸೂಚನೆಗಳನ್ನ ಕೊಡಲಾಗಿದೆ. ಆ ಸೂಚನೆಗಳ ಅರ್ಥ ಏನು ಅಂತ ತಿಳುಕೊಳ್ಳೋಕೆ ದಾನಿಯೇಲ ಪುಸ್ತಕ ನಮಗೆ ಸಹಾಯ ಮಾಡುತ್ತೆ. ಯಾಕಂದ್ರೆ ದಾನಿಯೇಲ ಪುಸ್ತಕದಲ್ಲಿರೋ ಕೆಲವು ಭವಿಷ್ಯವಾಣಿಗಳಿಗೂ ಮತ್ತು ಪ್ರಕಟನೆ ಪುಸ್ತಕದಲ್ಲಿರೋ ಕೆಲವು ಭವಿಷ್ಯವಾ ಣಿಗಳಿಗೂ ಹೋಲಿಕೆಯಿದೆ. ಈ ಎರಡೂ ಪುಸ್ತಕದಲ್ಲಿರೋ ಭವಿಷ್ಯವಾಣಿಗಳನ್ನ ಹೋಲಿಸಿ ದೇವರ ವೈರಿಗಳು ಯಾರು ಅಂತ ಈ ಲೇಖನದಲ್ಲಿ ಕಂಡುಹಿಡಿಯೋಣ ಮತ್ತು ಮುಂದೆ ಅವರಿಗೆ ಏನಾಗುತ್ತೆ ಅಂತನೂ ತಿಳಿದುಕೊಳ್ಳೋಣ.

^ ಪ್ಯಾರ. 6 ಏಳು ತಲೆಗಳಿರೋ ಕಾಡುಪ್ರಾಣಿ ಎಲ್ಲಾ ಮಾನವ ಸರ್ಕಾರಗಳನ್ನ ಸೂಚಿಸುತ್ತೆ ಅಂತ ಹೇಳೋಕೆ ಇನ್ನೊಂದು ಕಾರಣ ಏನಂದ್ರೆ, ಅದಕ್ಕಿರೋ “ಹತ್ತು ಕೊಂಬು.” ಕೆಲವೊಮ್ಮೆ ಬೈಬಲಲ್ಲಿ ಹತ್ತು ಅನ್ನೋ ಸಂಖ್ಯೆಯನ್ನ ಸಂಪೂರ್ಣತೆಯನ್ನು ಸೂಚಿಸೋಕೆ ಬಳಸಲಾಗಿದೆ.

^ ಪ್ಯಾರ. 10 ಮೊದಲನೇ ಕಾಡುಪ್ರಾಣಿಗೂ ಈ ಮೂರ್ತಿಗೂ ಇನ್ನೊಂದು ವ್ಯತ್ಯಾಸ ಇದೆ. ಅದೇನಂದ್ರೆ ಆ ಮೂರ್ತಿಯ ಕೊಂಬುಗಳ ಮೇಲೆ ‘ಕಿರೀಟಗಳಿರಲಿಲ್ಲ.’ (ಪ್ರಕ. 13:1) ಯಾಕಂದ್ರೆ ಇದು ಬೇರೆ “ಏಳು ರಾಜರ ಒಳಗಿಂದ ಹುಟ್ಟುತ್ತೆ” ಮತ್ತು ಇದಕ್ಕೆ ಸ್ವಂತ ಅಧಿಕಾರ ಇಲ್ಲ. ಆ ರಾಜರೇ ಈ ಮೂರ್ತಿಗೆ ಅಧಿಕಾರ ಕೊಡ್ತಾರೆ.—jw.orgನಲ್ಲಿ “ಪ್ರಕಟನೆ 17ನೇ ಅಧ್ಯಾಯದಲ್ಲಿರೋ ಕೆಂಪು ಕಾಡುಪ್ರಾಣಿ ಯಾವುದನ್ನ ಸೂಚಿಸುತ್ತೆ?” ಅನ್ನೋ ಲೇಖನ ನೋಡಿ.