ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 22

ಯೆಹೋವನ ಮಾತು ಕೇಳಿ ವಿವೇಕಿಗಳಾಗಿ

ಯೆಹೋವನ ಮಾತು ಕೇಳಿ ವಿವೇಕಿಗಳಾಗಿ

“ಯಾಕಂದ್ರೆ ಯೆಹೋವನೇ ವಿವೇಕ ಕೊಡ್ತಾನೆ.”—ಜ್ಞಾನೋ. 2:6.

ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ

ಕಿರುನೋಟ *

1. ಯೆಹೋವ ಕೊಡೋ ವಿವೇಕ ನಮಗೆ ಯಾಕೆ ಬೇಕು? (ಜ್ಞಾನೋಕ್ತಿ 4:7)

 ಯಾವುದಾದರೂ ಮುಖ್ಯವಾದ ನಿರ್ಧಾರ ಮಾಡೋ ಮುಂಚೆ ನೀವು ವಿವೇಕಕ್ಕಾಗಿ ಖಂಡಿತ ಪ್ರಾರ್ಥನೆ ಮಾಡಿರುತ್ತೀರ. (ಯಾಕೋ. 1:5) “ವಿವೇಕ ತುಂಬಾ ಮುಖ್ಯ” ಅಂತ ರಾಜ ಸೊಲೊಮೋನ ಬರೆದ. (ಜ್ಞಾನೋಕ್ತಿ 4:7 ಓದಿ.) ಇಲ್ಲಿ ಸೊಲೊಮೋನ ಜನರಿಂದ ಸಿಗೋ ವಿವೇಕದ ಬಗ್ಗೆ ಹೇಳ್ತಿಲ್ಲ. ಬದಲಿಗೆ ಯೆಹೋವನಿಂದ ಸಿಗೋ ವಿವೇಕದ ಬಗ್ಗೆ ಹೇಳ್ತಿದ್ದಾನೆ. (ಜ್ಞಾನೋ. 2:6) ನಮಗೆ ಬರೋ ಎಲ್ಲಾ ಸಮಸ್ಯೆಗಳಿಗೆ ದೇವರು ಕೊಡೋ ವಿವೇಕದಿಂದ ಪರಿಹಾರ ಸಿಗುತ್ತಾ? ಖಂಡಿತ ಸಿಗುತ್ತೆ. ಅದನ್ನೇ ಈ ಲೇಖನದಲ್ಲಿ ನಾವು ನೋಡ್ತೀವಿ.

2. ನಾವು ಹೇಗೆ ವಿವೇಕಿಗಳಾಗಬಹುದು?

2 ವಿವೇಕ ಪಡೆದುಕೊಳ್ಳೋಕೆ ಇರೋ ಒಂದು ದಾರಿ ಏನಂದ್ರೆ, ವಿವೇಕಕ್ಕೆ ಹೆಸರುವಾಸಿಯಾಗಿರೋ ಇಬ್ಬರು ವ್ಯಕ್ತಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಅವರು ಕಲಿಸಿದ ವಿಷಯಗಳನ್ನ ಜೀವನದಲ್ಲಿ ಪಾಲಿಸೋದು. ಅವರಲ್ಲಿ ಒಬ್ಬ ಸೊಲೊಮೋನ. “ದೇವರು ಸೊಲೊಮೋನನಿಗೆ ತುಂಬ ವಿವೇಕ ಮತ್ತು ತಿಳುವಳಿಕೆ ಕೊಟ್ಟನು” ಅಂತ ಬೈಬಲ್‌ ಹೇಳುತ್ತೆ. (1 ಅರ. 4:29) ಇನ್ನೊಬ್ಬ ಯೇಸು. ಅವನಷ್ಟು ವಿವೇಕಿ ಈ ಲೋಕದಲ್ಲಿ ಬೇರೆ ಯಾರೂ ಇಲ್ಲ. (ಮತ್ತಾ. 12:42) “ಆತನ ಮೇಲೆ ಯೆಹೋವನ ಪವಿತ್ರಶಕ್ತಿ ನೆಲೆಸುತ್ತೆ, ಹಾಗಾಗಿ ಆತನು ವಿವೇಕಿ ಆಗಿರ್ತಾನೆ ಮತ್ತು ಆತನಿಗೆ ಅಪಾರ ತಿಳುವಳಿಕೆ ಇರುತ್ತೆ” ಅಂತ ಆತನ ಬಗ್ಗೆ ಭವಿಷ್ಯವಾಣಿ ಹೇಳಿತ್ತು.—ಯೆಶಾ. 11:2.

3. ಈ ಲೇಖನದಲ್ಲಿ ಯಾವುದರ ಬಗ್ಗೆ ಚರ್ಚೆ ಮಾಡುತ್ತೀವಿ?

3 ದೇವರು ಕೊಟ್ಟ ವಿವೇಕದಿಂದ ಸೊಲೊಮೋನ ಮತ್ತು ಯೇಸು ನಮ್ಮ ಜೀವನಕ್ಕೆ ಬೇಕಾದ ಒಳ್ಳೇ ಸಲಹೆಗಳನ್ನ ಮತ್ತು ಬುದ್ಧಿ ಮಾತುಗಳನ್ನ ಹೇಳಿದ್ದಾರೆ. ಉದಾಹರಣೆಗೆ, ಹಣದ ಬಗ್ಗೆ, ಉದ್ಯೋಗದ ಬಗ್ಗೆ ಮತ್ತು ನಮ್ಮ ಬಗ್ಗೆ ಹೇಗೆ ಸರಿಯಾಗಿ ಯೋಚಿಸಬೇಕು ಅಂತ ಹೇಳಿಕೊಟ್ಟಿದ್ದಾರೆ. ಅದನ್ನ ಈ ಲೇಖನದಲ್ಲಿ ಚರ್ಚಿಸೋಣ.

ಹಣನೇ ಸರ್ವಸ್ವನಾ?

4. ಸೊಲೊಮೋನ ಮತ್ತು ಯೇಸುವಿನ ಜೀವನ ಹೇಗಿತ್ತು?

4 ಸೊಲೊಮೋನ ಆಗರ್ಭ ಶ್ರೀಮಂತನಾಗಿದ್ದ. ಅವನು ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸಿದ. (1 ಅರ. 10:7, 14, 15) ಆದ್ರೆ ಯೇಸು ಬಡವನಾಗಿದ್ದ, ಅವನಿಗೆ ಸ್ವಂತ ಮನೆನೂ ಇರಲಿಲ್ಲ. (ಮತ್ತಾ. 8:20) ಆದ್ರೆ ಹಣದ ವಿಷಯದಲ್ಲಿ ಅವರಿಬ್ಬರೂ ಒಂದೇ ತರ ಯೋಚಿಸುತ್ತಿದ್ದರು ಮತ್ತು ಸರಿಯಾಗೇ ಯೋಚಿಸುತ್ತಿದ್ದರು. ಯಾಕಂದ್ರೆ, ಅವರಿಗೆ ಆ ವಿವೇಕ ಸಿಕ್ಕಿದ್ದು ಯೆಹೋವನಿಂದ.

5. ಸೊಲೊಮೋನ ಹಣದ ಬಗ್ಗೆ ಹೇಗೆ ಯೋಚಿಸುತ್ತಿದ್ದ?

5 ಹಣ “ಸಂರಕ್ಷಣೆ” ಕೊಡುತ್ತೆ ಅಂತ ಸೊಲೊಮೋನ ಹೇಳಿದ. (ಪ್ರಸಂ. 7:12) ದುಡ್ಡಿಂದ ಜೀವನ ನಡೆಸೋಕೆ ಬೇಕಾಗಿರೋ ವಸ್ತುಗಳನ್ನ ಅಥವಾ ನಮಗೆ ಇಷ್ಟವಾದ ವಸ್ತುಗಳನ್ನ ಕೊಂಡುಕೊಳ್ಳಬಹುದು. ಆದ್ರೆ ಶ್ರೀಮಂತನಾಗಿದ್ದ ಸೊಲೊಮೋನನೇ, ಹಣ ಸರ್ವಸ್ವ ಅಲ್ಲ ಅದಕ್ಕಿಂತ ಮುಖ್ಯವಾಗಿರೋ ಬೇರೆ ವಿಷಯಗಳೂ ಇವೆ ಅಂತ ಹೇಳಿದ. ಉದಾಹರಣೆಗೆ, “ಹೆಚ್ಚು ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಸಂಪಾದಿಸೋದು ಒಳ್ಳೇದು” ಅಂತ ಹೇಳಿದ. (ಜ್ಞಾನೋ. 22:1) ಅಷ್ಟೇ ಅಲ್ಲ, ಹಣದ ವ್ಯಾಮೋಹ ಇರೋರು ಯಾವಾಗಲೂ ಖುಷಿಯಾಗಿ ಇರಲ್ಲ. ಅವರ ಖುಷಿ ನೀರಿನ ಮೇಲಿರೋ ಗುಳ್ಳೆ ತರ ಇರುತ್ತೆ ಅಂತನೂ ಅವನಿಗೆ ಗೊತ್ತಿತ್ತು. (ಪ್ರಸಂ. 5:10, 12) ಹಣನ ನಂಬಿಕೊಂಡು ಅದ್ರ ಹಿಂದೆನೇ ಓಡಬಾರದು. ಯಾಕಂದ್ರೆ ಅದು ಇವತ್ತು ಇದ್ದು ನಾಳೆ ಕಣ್ಮರೆಯಾಗುತ್ತೆ ಅಂತನೂ ಎಚ್ಚರಿಕೆ ಕೊಟ್ಟ.—ಜ್ಞಾನೋ. 23:4, 5.

ಹಣ ಮತ್ತು ವಸ್ತುಗಳ ಮೇಲೆ ನಮಗಿರೋ ಆಸೆ ಯೆಹೋವನ ಸೇವೆ ಮಾಡೋ ಅವಕಾಶಗಳನ್ನ ಕಳೆದುಕೊಳ್ಳೋ ತರ ಮಾಡುತ್ತಿದೆಯಾ? (ಪ್ಯಾರ 6-7 ನೋಡಿ) *

6. ಹಣ ಮತ್ತು ವಸ್ತುಗಳ ಬಗ್ಗೆ ಯೇಸು ಯಾವ ತರ ಯೋಚಿಸುತ್ತಿದ್ದನು? (ಮತ್ತಾಯ 6:31-33)

6 ಹಣ ಮತ್ತು ವಸ್ತುಗಳ ಬಗ್ಗೆ ಯೇಸು ಸರಿಯಾಗೇ ಯೋಚಿಸುತ್ತಿದ್ದನು. ಕೆಲವೊಮ್ಮೆ ಶಿಷ್ಯರ ಜೊತೆ ಊಟ ಮಾಡುತ್ತಾ, ಕುಡಿಯುತ್ತಾ ಸಂತೋಷದ ಕ್ಷಣಗಳನ್ನ ಕಳೆದನು. (ಲೂಕ 19:2, 6, 7) ಆತನು ಮಾಡಿದ ಮೊದಲನೇ ಅದ್ಭುತ ಏನು ಗೊತ್ತಾ? ಒಮ್ಮೆ ಆತನು ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಚೆನ್ನಾಗಿರೋ ದ್ರಾಕ್ಷಾಮದ್ಯವನ್ನ ಅದ್ಭುತವಾಗಿ ಕೊಟ್ಟನು. (ಯೋಹಾ. 2:10, 11) ಅವನು ಸಾಯುವ ದಿನ ಒಳ್ಳೇ ಗುಣಮಟ್ಟದ ದುಬಾರಿ ಬಟ್ಟೆ ಹಾಕಿಕೊಂಡಿದ್ದನು. (ಯೋಹಾ. 19:23, 24) ಆದ್ರೆ ಆತನ ಜೀವನದಲ್ಲಿ ಹಣ, ವಸ್ತುಗಳೇ ಆತನಿಗೆ ಮುಖ್ಯವಾಗಿರಲಿಲ್ಲ. “ಯಾವ ಮನುಷ್ಯನಿಗೂ ಇಬ್ಬರು ಯಜಮಾನರಿಗೆ ಸೇವೆಮಾಡೋಕಾಗಲ್ಲ . . . ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ” ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 6:24) ನಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಟ್ಟರೆ, ಯೆಹೋವ ನಮಗೆ ಬೇಕಾಗಿರುವ ವಿಷಯಗಳನ್ನ ನೋಡಿಕೊಳ್ಳುತ್ತಾನೆ ಅಂತ ಯೇಸು ಕಲಿಸಿದನು.—ಮತ್ತಾಯ 6:31-33 ಓದಿ.

7. ಹಣದ ಬಗ್ಗೆ ಸರಿಯಾಗಿ ಯೋಚಿಸಿದ್ರಿಂದ ಒಬ್ಬ ಸಹೋದರನಿಗೆ ಹೇಗೆ ಪ್ರಯೋಜನ ಆಯ್ತು?

7 ಹಣದ ಬಗ್ಗೆ ಬೈಬಲ್‌ನಲ್ಲಿರೋ ಸಲಹೆಗಳನ್ನ ಪಾಲಿಸಿದ್ರಿಂದ ಎಷ್ಟೋ ಸಹೋದರ ಸಹೋದರಿಯರಿಗೆ ತುಂಬಾ ಒಳ್ಳೇದಾಗಿದೆ. ಮದುವೆಯಾಗಿಲ್ಲದ ಸಹೋದರ ಡ್ಯಾನಿಯೇಲ್‌ ಅವರ ಉದಾಹರಣೆ ನೋಡಿ. ಅವರು ಹೇಳೋದು, “ನಾನು ದೇವರ ಸೇವೆನ ಜಾಸ್ತಿ ಮಾಡಬೇಕು, ಅದೇ ನನ್ನ ಜೀವನದಲ್ಲಿ ಮುಖ್ಯ ಅಂತ ಹದಿವಯಸ್ಸಿನಲ್ಲೇ ನಿರ್ಧಾರ ಮಾಡಿದ್ದೆ.” ಈ ಸಹೋದರ ತಮ್ಮ ಜೀವನದಲ್ಲಿ ಹಣ-ಆಸ್ತಿ ಮಾಡಬೇಕಂತ ಅದರ ಹಿಂದೆ ಹೋಗಲಿಲ್ಲ. ಇದರಿಂದ ಅವರು ಬೆತೆಲಿನಲ್ಲಿ ಮತ್ತು ವಿಪತ್ತು ಪರಿಹಾರ ಕೆಲಸಗಳಲ್ಲಿ ಕೈ ಜೋಡಿಸೋಕೆ ಆಯ್ತು. “‘ಛೇ! ನಾನು ಈ ನಿರ್ಧಾರ ಮಾಡಬಾರದಿತ್ತು’ ಅಂತ ನನಗೆ ಯಾವತ್ತೂ ಅನಿಸಿಲ್ಲ. ಒಂದುವೇಳೆ ಹಣ ಆಸ್ತಿನೇ ಮುಖ್ಯ ಅಂದುಕೊಂಡು ನಾನು ಅದರ ಹಿಂದೆ ಹೋಗಿಬಿಟ್ಟಿದ್ರೆ ನನ್ನ ಕೈತುಂಬ ದುಡ್ಡಿರುತ್ತಿತ್ತು ನಿಜ, ಆದ್ರೆ ಈಗ ಇರೋ ಸ್ನೇಹಿತರು ನನಗೆ ಸಿಗುತ್ತಿರಲಿಲ್ಲ. ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಟ್ಟಾಗ ಸಿಗೋ ಸಂತೋಷನ ಯಾವುದಕ್ಕೂ ಹೋಲಿಸೋಕಾಗಲ್ಲ. ಅದರಿಂದ ಸಿಗೋ ಆಶೀರ್ವಾದಗಳನ್ನ ಎಷ್ಟು ಕೋಟಿ ಕೊಟ್ಟರೂ ಕೊಂಡುಕೊಳ್ಳೋಕೆ ಆಗಲ್ಲ” ಅಂತ ಅವರು ಹೇಳ್ತಾರೆ. ನಮಗೆ ನಿಜವಾದ ಸಂತೋಷ ಸಿಗೋದು ಹಣ ಸಂಪಾದನೆ ಮಾಡೋದರಿಂದ ಅಲ್ಲ, ದೇವರ ಸೇವೆಯನ್ನ ಮಾಡೋದರಿಂದ ಅಂತ ಇವರ ಅನುಭವದಿಂದ ಗೊತ್ತಾಗುತ್ತೆ.

ಕೆಲಸನೇ ಮುಖ್ಯನಾ?

8. ಸೊಲೊಮೋನ ಕೆಲಸದ ಬಗ್ಗೆ ಸರಿಯಾಗೇ ಯೋಚಿಸಿದ ಅಂತ ಹೇಗೆ ಹೇಳಬಹುದು? (ಪ್ರಸಂಗಿ 5:18, 19)

8 ಕಷ್ಟಪಟ್ಟು ದುಡಿದಾಗ ನಮಗೆ ಸಿಗೋ ಸಂತೋಷವನ್ನ “ದೇವರ ಉಡುಗೊರೆ” ಅಂತ ಸೊಲೊಮೋನ ಕರೆದ. (ಪ್ರಸಂಗಿ 5:18, 19 ಓದಿ.) “ಕಷ್ಟಪಟ್ಟು ಮಾಡೋ ಪ್ರತಿಯೊಂದು ಕೆಲಸದಲ್ಲಿ ಪ್ರಯೋಜನ ಇರುತ್ತೆ” ಅಂತ ಅವನು ಹೇಳಿದ. (ಜ್ಞಾನೋ. 14:23) ಇದನ್ನ ಅವನು ಬರಿ ಬಾಯಿಮಾತಿನಿಂದ ಹೇಳಲಿಲ್ಲ, ಅನುಭವದಿಂದ ಹೇಳಿದ್ದಾನೆ. ಯಾಕಂದ್ರೆ ಅವನು ಮನೆಗಳನ್ನ ಕಟ್ಟಿಸಿದ, ದ್ರಾಕ್ಷಿ ತೋಟಗಳನ್ನ, ಹೂವಿನ ತೋಟಗಳನ್ನ ಮತ್ತು ನೀರಿನ ಕೊಳಗಳನ್ನ ಮಾಡಿದ ಮತ್ತು ಪಟ್ಟಣಗಳನ್ನೂ ಕಟ್ಟಿಸಿದ. (1 ಅರ. 9:19; ಪ್ರಸಂ. 2:4-6) ಇದನ್ನೆಲ್ಲಾ ಮಾಡೋಕೆ ಅವನಿಗೆ ಕಷ್ಟ ಆಗಿರಬೇಕು. ಆದ್ರೂ ಇದರಿಂದ ಅವನಿಗೆ ಸಂತೋಷ ಸಂತೃಪ್ತಿ ಸಿಕ್ಕಿರುತ್ತೆ. ಕೆಲಸ ಮಾಡಿದರೆ ಸಂತೋಷ ಸಿಗುತ್ತೆ ನಿಜ, ಆದರೆ ಯೆಹೋವನಿಗೋಸ್ಕರ ಕೆಲಸ ಮಾಡಿದರೆ ನಿಜವಾದ ಸಂತೋಷ ಸಿಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನು ಯೆಹೋವನಿಗೋಸ್ಕರ ಭವ್ಯವಾದ ಆಲಯ ಕಟ್ಟಿಸೋಕೆ 7 ವರ್ಷ ಹಿಡಿತು. (1 ಅರ. 6:38; 9:1) ಸೊಲೊಮೋನ, ಎಲ್ಲಾ ತರದ ಕೆಲಸಗಳನ್ನ ಮಾಡಿದ ಮೇಲೆ, ಯೆಹೋವನ ಕೆಲಸ ಮಾಡೋದೇ ಬೇರೆ ಎಲ್ಲಕ್ಕಿಂತ ತುಂಬ ಮುಖ್ಯ ಅಂತ ಅರ್ಥ ಮಾಡಿಕೊಂಡ. ಅದಕ್ಕೆ “ಇಲ್ಲಿ ತನಕ ಕೇಳಿಸ್ಕೊಂಡ ಎಲ್ಲ ವಿಷ್ಯಗಳ ಸಾರಾಂಶ ಏನಂದ್ರೆ, ಸತ್ಯ ದೇವರಿಗೆ ಭಯಪಡು ಮತ್ತು ಆತನ ಆಜ್ಞೆಗಳನ್ನ ಪಾಲಿಸು” ಅಂತ ಅವನು ಬರೆದ.—ಪ್ರಸಂ. 12:13.

9. ಯೇಸು ಯಾವಾಗಲೂ ಕೆಲಸ ಮಾಡಿಕೊಂಡೇ ಇರುತ್ತಿರಲಿಲ್ಲ ಅಂತ ಹೇಗೆ ಹೇಳ ಬಹುದು?

9 ಯೇಸು ಬೆವರು ಸುರಿಸಿ ದುಡಿಯುತ್ತಿದ್ದನು. ಆತನು ಬಡಗಿಯಾಗಿದ್ದನು. (ಮಾರ್ಕ 6:3) ದೊಡ್ಡ ಕುಟುಂಬನ ನೋಡಿಕೊಳ್ಳೋಕೆ ತನ್ನ ಅಪ್ಪ ಯೋಸೇಫನಿಗೆ ಆತನು ಸಹಾಯ ಮಾಡಿರಬೇಕು. ಇದ್ರಿಂದ ಆತನ ಅಪ್ಪಅಮ್ಮನಿಗೆ ಖಂಡಿತ ಇವನ ಬಗ್ಗೆ ಹೆಮ್ಮೆ ಅನಿಸಿರಬೇಕು. ಯೇಸು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿದ್ರಿಂದ ಬಡಗಿ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದನು. ಜನ ಅವನನ್ನ ಹುಡುಕಿಕೊಂಡು ಬರುತ್ತಿದ್ದರು ಅನ್ನೋದರಲ್ಲಿ ಸಂಶಯನೇ ಇಲ್ಲ. ಯೇಸು ಖುಷಿಖುಷಿಯಾಗಿ ಕೆಲಸ ಮಾಡುತ್ತಿದ್ದನು. ಹಾಗಂತ ಆತನು ಅದರಲ್ಲೇ ಮುಳುಗಿರುತ್ತಿರಲಿಲ್ಲ. ಯೆಹೋವನ ಆರಾಧನೆಗಾಗಿ ಸಮಯ ಮಾಡಿಕೊಳ್ಳುತ್ತಿದ್ದನು. (ಯೋಹಾ. 7:15) ಆಮೇಲೆ ಆತನು ಪೂರ್ಣ ಸಮಯದ ಸೇವೆ ಶುರು ಮಾಡಿದನು. ಆಗ ಅವನು ಜನರಿಗೆ, “ಹಾಳಾಗಿ ಹೋಗೋ ಆಹಾರಕ್ಕಾಗಿ ದುಡಿಬೇಡಿ, ಶಾಶ್ವತ ಜೀವ ಕೊಡೋ ಹಾಳಾಗದ ಆಹಾರಕ್ಕಾಗಿ ದುಡಿರಿ” ಅಂತ ಸಲಹೆ ಕೊಟ್ಟನು. (ಯೋಹಾ. 6:27) ಅಷ್ಟೇ ಅಲ್ಲ, ಬೆಟ್ಟದ ಭಾಷಣ ಕೊಡುತ್ತಿರುವಾಗ “ಸ್ವರ್ಗದಲ್ಲಿ ಆಸ್ತಿ ಕೂಡಿಸಿಡಿ” ಅಂತ ಹೇಳಿದನು.—ಮತ್ತಾ. 6:20.

ಕೆಲಸವನ್ನ ಅದರ ಜಾಗದಲ್ಲಿಟ್ಟು ದೇವರ ಸೇವೆ ಮಾಡೋಕೆ ಏನು ಮಾಡಬೇಕು? (ಪ್ಯಾರ 10-11 ನೋಡಿ) *

10. ಕೆಲಸದ ಬಗ್ಗೆ ನಾವು ಕೆಲವೊಮ್ಮೆ ಹೇಗೆ ಯೋಚಿಸಿಬಿಡ್ತೀವಿ?

10 ಕೆಲಸವನ್ನ ಇರಬೇಕಾದ ಜಾಗದಲ್ಲಿ ಇಡೋಕೆ ಯೆಹೋವ ಕೊಡೋ ವಿವೇಕ ನಮಗೆ ಸಹಾಯ ಮಾಡುತ್ತೆ. ‘ಕೈಯಾರೆ ಕಷ್ಟಪಟ್ಟು ನಿಯತ್ತಿಂದ ದುಡೀರಿ’ ಅಂತ ಬೈಬಲ್‌ ಹೇಳುತ್ತೆ. (ಎಫೆ. 4:28) ನಾವು ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡೋದನ್ನ ನೋಡಿ ನಮ್ಮ ಧಣಿಗಳು ನಮ್ಮನ್ನ ಮೆಚ್ಚಿಕೊಳ್ತಾರೆ. ನಮ್ಮ ಕೆಲಸವನ್ನ ಚೆನ್ನಾಗಿ, ಅಚ್ಚುಕಟ್ಟಾಗಿ ಮಾಡಬೇಕು ಅಂತ ನಾವು ಜಾಸ್ತಿ ಕೆಲಸ ಮಾಡೋಕೆ ನಮ್ಮ ಸಮಯವನ್ನ ಕೊಡುತ್ತಿರಬಹುದು. ಇದ್ರಿಂದ ಯೆಹೋವನ ಸಾಕ್ಷಿಗಳು ಎಷ್ಟು ಒಳ್ಳೆಯವರು ಅಂತ ಅವರಿಗೆ ಗೊತ್ತಾಗುತ್ತೆ ಅಂತನೂ ನಾವು ಅಂದುಕೊಳ್ಳಬಹುದು. ಚಿನ್ನದ ಸೂಜಿ ಅಂತ ಕಣ್ಣಿಗೆ ಚುಚ್ಚಿಕೊಳ್ಳೋಕೆ ಆಗಲ್ಲ. ಹಾಗೇ ಧಣಿಯನ್ನ ಮೆಚ್ಚಿಸೋಕೆ ಹೋಗಿ ನಮ್ಮ ಕುಟುಂಬಕ್ಕೆ ಮತ್ತು ಯೆಹೋವನಿಗೆ ಕೊಡಬೇಕಾದ ಸಮಯವನ್ನ ಕೆಲಸದಲ್ಲಿ ಸುರಿಯೋಕೆ ಆಗಲ್ಲ. ಹಾಗಾಗಿ ನಾವು ಮುಖ್ಯವಾದ ವಿಷಯಗಳಿಗೆ ಗಮನ ಕೊಡುತ್ತಿಲ್ಲಾ ಅಂದ್ರೆ ಅದನ್ನ ಸರಿ ಮಾಡಿಕೊಳ್ಳಬೇಕು.

11. ಒಬ್ಬ ಸಹೋದರ ಕೆಲಸದ ಬಗ್ಗೆ ಏನು ಕಲಿತರು?

11 ಸಹೋದರ ವಿಲ್ಯಮ್‌, ಒಬ್ಬ ಹಿರಿಯನ ಹತ್ರ ಕೆಲಸ ಮಾಡ್ತಿದ್ರು. ಕೆಲಸವನ್ನ ಯಾವ ಜಾಗದಲ್ಲಿ ಇಡಬೇಕು ಅಂತ ಅವರನ್ನ ನೋಡಿ ವಿಲ್ಯಮ್‌ ಕಲಿತರು. ಅವರ ಬಗ್ಗೆ ವಿಲ್ಯಮ್‌ ಹೀಗೆ ಹೇಳ್ತಾರೆ: “ನನ್ನ ಹಿಂದಿನ ಧಣಿಗಳಲ್ಲಿ ಒಬ್ಬರು ಸಮತೂಕದ ಕೆಲಸದ ರೂಢಿಗಳ ವಿಷಯದಲ್ಲಿ ಒಳ್ಳೇ ಮಾದರಿ. ಅವರು ತುಂಬ ಶ್ರಮಪಟ್ಟು ಕೆಲಸಮಾಡುತ್ತಾರೆ. ಅವರ ಕೆಲಸದ ಗುಣಮಟ್ಟ ತುಂಬ ಚೆನ್ನಾಗಿರುವುದರಿಂದ ಅವರ ಗಿರಾಕಿಗಳೂ ಅವರನ್ನು ಇಷ್ಟಪಡುತ್ತಾರೆ. ಆದರೆ ದಿನದ ಅಂತ್ಯದಲ್ಲಿ ಕೆಲಸ ಮುಗಿದಾಗ, ಕೆಲಸದ ವಿಷಯವನ್ನು ಮನಸ್ಸಿನಿಂದ ಹೊರಗಿಟ್ಟು, ತಮ್ಮ ಕುಟುಂಬ ಹಾಗೂ ಆರಾಧನೆಗೆ ಪೂರ್ಣ ಗಮನಕೊಡುತ್ತಾರೆ. ಇನ್ನೊಂದು ವಿಷಯ ಏನ್‌ ಗೊತ್ತಾ? ನನಗೆ ಗೊತ್ತಿರುವವರಲ್ಲಿ ತುಂಬ ಸಂತೋಷವಾಗಿರುವ ವ್ಯಕ್ತಿ ಅಂದರೆ ಅವರೇ!” *

ನಾವು ನಮ್ಮ ಬಗ್ಗೆ ಸರಿಯಾಗಿ ಯೋಚಿಸ್ತಿದ್ದೀವಾ?

12. (ಎ) ಸೊಲೊಮೋನ ತನ್ನ ಬಗ್ಗೆ ಮೊದಲು ಹೇಗೆ ಯೋಚಿಸ್ತಿದ್ದ? (ಬಿ) ಆಮೇಲೆ ಅವನು ಹೇಗೆ ಬದಲಾದ?

12 ಯೆಹೋವನನ್ನು ನಂಬಿಗಸ್ತಿಕೆಯಿಂದ ಆರಾಧನೆ ಮಾಡ್ತಿದ್ದಾಗ ಸೊಲೊಮೋನ ತನ್ನ ಬಗ್ಗೆ ಸರಿಯಾಗಿ ಯೋಚಿಸ್ತಿದ್ದ. ಅವನು ಯುವಕನಾಗಿದ್ದಾಗ ತನಗೆ ಇತಿಮಿತಿಗಳು ಇದ್ದಿದ್ರಿಂದ ಯಾವಾಗಲೂ ಯೆಹೋವನ ಸಹಾಯ ಕೇಳುತ್ತಿದ್ದ. (1 ಅರ. 3:7-9) ಅಹಂಕಾರದಿಂದ ನಡೆದುಕೊಂಡ್ರೆ ಏನೆಲ್ಲಾ ಅಪಾಯಗಳಾಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅವನು “ಸೊಕ್ಕಿಂದ ಸರ್ವನಾಶ, ದರ್ಪದಿಂದ ದುರ್ಗತಿ” ಅಂತ ಬರೆದ. (ಜ್ಞಾನೋ. 16:18) ಆದ್ರೆ ಆಮೇಲೆ ಅವನು ಹೇಳಿದ್ದನ್ನ ಅವನೇ ಪಾಲಿಸಲಿಲ್ಲ. ಅವನು ರಾಜನಾಗಿ ಕೆಲವು ವರ್ಷಗಳಾದ ಮೇಲೆ ಯೆಹೋವನ ಮಾತನ್ನ ಕೇಳದೆ ಅಹಂಕಾರಿಯಾಗಿ ನಡೆದುಕೊಂಡ. ಉದಾಹರಣೆಗೆ, ಇಸ್ರಾಯೇಲಿನ ರಾಜರು “ತುಂಬ ಸ್ತ್ರೀಯರನ್ನ ಮದುವೆ ಮಾಡ್ಕೊಬಾರದು. ಮಾಡ್ಕೊಂಡ್ರೆ ಅವನ ಹೃದಯ ಅವನನ್ನ ತಪ್ಪು ದಾರಿಗೆ ನಡಿಸುತ್ತೆ” ಅಂತ ಯೆಹೋವ ಕೊಟ್ಟಿದ್ದ ಆಜ್ಞೆಯನ್ನ ಗಾಳಿಗೆ ತೂರಿಬಿಟ್ಟ. (ಧರ್ಮೋ. 17:17) ಅವನು 700 ಹೆಂಡತಿಯರನ್ನ 300 ಉಪಪತ್ನಿಯರನ್ನ ಮಾಡಿಕೊಂಡ. ಅವರಲ್ಲಿ ತುಂಬ ಜನ ಯೆಹೋವನನ್ನು ಆರಾಧಿಸುತ್ತಿರಲಿಲ್ಲ. (1 ಅರ. 11:1-3) ಇದ್ರಿಂದ ಅಷ್ಟೇನು ತೊಂದರೆಯಾಗಲ್ಲ ಅಂತ ಸೊಲೊಮೋನನಿಗೆ ಅನಿಸಿರಬೇಕು. ಆದ್ರೆ ಕೊನೆಗೆ ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಅವನು ಯೆಹೋವ ದೇವರಿಂದ ದೂರ ಆಗಿಬಿಟ್ಟ.—1 ಅರ. 11:9-13.

13. ಯೇಸು ತೋರಿಸಿದ ದೀನತೆಯಿಂದ ನಾವೇನು ಕಲಿತೀವಿ?

13 ಯೇಸು ತನ್ನ ಬಗ್ಗೆ ಯಾವಾಗಲೂ ಸರಿಯಾಗೇ ಯೋಚಿಸುತ್ತಿದ್ದನು. ಅದಕ್ಕೆ ಆತನು ದೀನನಾಗಿ ನಡೆದುಕೊಂಡನು. ಯೇಸು ಭೂಮಿಗೆ ಬರೋಕೆ ಮುಂಚೆ ಯೆಹೋವನ ಜೊತೆ ತುಂಬ ಅದ್ಭುತವಾದ ಕೆಲಸಗಳನ್ನ ಮಾಡಿದ್ದಾನೆ. ಆತನಿಂದಾನೇ “ಸ್ವರ್ಗ, ಭೂಮಿಯಲ್ಲಿರೋ ಎಲ್ಲ ವಿಷ್ಯಗಳು . . . ಸೃಷ್ಟಿ ಆಯ್ತು.” (ಕೊಲೊ. 1:16) ಆತನಿಗೆ ದೀಕ್ಷಾಸ್ನಾನ ಆದಮೇಲೆ, ತನ್ನ ಅಪ್ಪನ ಜೊತೆ ಏನೆಲ್ಲಾ ಮಾಡಿದ್ದನೋ ಅದೆಲ್ಲಾ ಆತನ ನೆನಪಿಗೆ ಬಂತು. (ಮತ್ತಾ. 3:16; ಯೋಹಾ. 17:5) ಹಾಗಂತ ಆತನು ಅಹಂಕಾರಿ ಆಗಿಬಿಡಲಿಲ್ಲ, ಬೇರೆಯವರಿಗಿಂತ ನಾನೇ ಮೇಲು ಅಂತ ಯಾವತ್ತೂ ಅಂದುಕೊಳ್ಳಲಿಲ್ಲ. ಬದಲಿಗೆ, “ಮನುಷ್ಯಕುಮಾರ ಸಹ ಸೇವೆ ಮಾಡಿಸ್ಕೊಳ್ಳೋಕೆ ಬರಲಿಲ್ಲ. ಸೇವೆ ಮಾಡೋಕೆ ಬಂದ. ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ” ಅಂತ ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 20:28) ಅಷ್ಟೇ ಅಲ್ಲ, ಆತನು ಯಾವತ್ತೂ ತನಗೆ ಇಷ್ಟ ಬಂದಿದ್ದನ್ನ ಮಾಡೋಕೆ ಹೋಗ್ತಿರಲಿಲ್ಲ, ಯಾವಾಗಲೂ ಯೆಹೋವನ ಹತ್ರ ಒಂದು ಮಾತು ಕೇಳುತ್ತಿದ್ದನು. (ಯೋಹಾ. 5:19) ಇದರಿಂದ ಯೇಸುಗೆ ಎಷ್ಟು ದೀನತೆ ಇತ್ತು ಅಂತ ನಮಗೆ ಗೊತ್ತಾಗುತ್ತೆ. ನಾವೆಲ್ಲರೂ ಯೇಸು ತರನೇ ಇರಬೇಕು.

14. ನಮ್ಮ ಬಗ್ಗೆ ಹೇಗೆ ಯೋಚನೆ ಮಾಡಬೇಕು ಅಂತ ಯೇಸುವಿನಿಂದ ಕಲಿತೀವಿ?

14 ಶಿಷ್ಯರು ತಮ್ಮ ಬಗ್ಗೆ ಸರಿಯಾಗಿ ಯೋಚಿಸಬೇಕು ಅಂತ ಯೇಸು ಹೇಳಿಕೊಟ್ಟನು. ಒಮ್ಮೆ ಆತನು ತನ್ನ ಶಿಷ್ಯರಿಗೆ “ನಿಮ್ಮ ತಲೆಯಲ್ಲಿ ಎಷ್ಟು ಕೂದಲಿದೆ ಅಂತಾನೂ ದೇವರಿಗೆ ಗೊತ್ತು” ಅಂತ ಹೇಳಿದನು. (ಮತ್ತಾ. 10:30) ನಾವು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸಿದಾಗ ಯೇಸು ಹೇಳಿದ ಈ ಮಾತು ನಮಗೆ ಎಷ್ಟು ಧೈರ್ಯ ಕೊಡುತ್ತೆ ಅಲ್ವಾ! ಯೆಹೋವನಿಗೆ ನಾವಂದ್ರೆ ತುಂಬ ಇಷ್ಟ, ಆತನಿಗೆ ನಾವು ತುಂಬ ಅಮೂಲ್ಯ ಅಂತ ಇದರಿಂದ ಗೊತ್ತಾಗುತ್ತೆ. ಯೆಹೋವ ದೇವರೇ ತನ್ನನ್ನ ಆರಾಧಿಸೋಕೆ ನಮ್ಮನ್ನ ಆರಿಸಿಕೊಂಡಿದ್ದಾನೆ ಮತ್ತೆ ಹೊಸಲೋಕದಲ್ಲಿ ಜೀವ ಕೊಡ್ತೀನಿ ಅಂತ ಹೇಳಿದ್ದಾನೆ. ಅಂದ್ಮೇಲೆ ನಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ನಾವು ಅಂದುಕೊಂಡ್ರೆ, ಯೆಹೋವನನ್ನೇ ತಪ್ಪು ಅಂತ ಹೇಳಿದ ಹಾಗಿರುತ್ತೆ.

ನಾವು ನಮ್ಮ ಬಗ್ಗೆ ಸರಿಯಾಗಿ ಯೋಚಿಸಲಿಲ್ಲ ಅಂದ್ರೆ ಏನಾಗುತ್ತೆ? (ಪ್ಯಾರ 15 ನೋಡಿ) *

15. (ಎ) ನಾವು ನಮ್ಮ ಬಗ್ಗೆ ಯಾವ ರೀತಿ ಯೋಚನೆ ಮಾಡಬೇಕು ಅಂತ ಕಾವಲಿನಬುರುಜು ಹೇಳಿತ್ತು? (ಬಿ) ನಮ್ಮ ಬಗ್ಗೆನೇ ಜಾಸ್ತಿ ಯೋಚನೆ ಮಾಡಿದ್ರೆ ನಾವು ಯಾವ ಆಶೀರ್ವಾದಗಳನ್ನ ಕಳೆದುಕೊಳ್ತೀವಿ ಅಂತ ಪುಟ 24ರಲ್ಲಿರೋ ಚಿತ್ರದಿಂದ ನಮಗೆ ಗೊತ್ತಾಗುತ್ತೆ?

15 ಸುಮಾರು 15 ವರ್ಷದ ಹಿಂದೆ ಬಂದ ಕಾವಲಿನಬುರುಜುವಿನಲ್ಲಿ ನಮ್ಮ ಬಗ್ಗೆ ನಾವು ಹೇಗೆ ಯೋಚನೆ ಮಾಡಬೇಕು ಅಂತ ಹೇಳಿತ್ತು. “ನಾವು ಅಹಂಕಾರಿಗಳಾಗುವಷ್ಟರ ಮಟ್ಟಿಗೆ ನಮ್ಮ ಬಗ್ಗೆ ಸದಭಿಪ್ರಾಯವನ್ನು ಇಟ್ಟುಕೊಳ್ಳಲು ಬಯಸದಿರುವೆವು ಎಂಬುದು ನಿಶ್ಚಯ, ಆದರೆ ಅದೇ ಸಮಯದಲ್ಲಿ ನಾವೇನೂ ಪ್ರಯೋಜನವಿಲ್ಲದವರು ಎಂಬ ಇನ್ನೊಂದು ವಿಪರೀತಕ್ಕೂ ಹೋಗದಿರುವೆವು. ಅದಕ್ಕೆ ಬದಲು, ನಮ್ಮ ಬಗ್ಗೆ ನ್ಯಾಯಸಮ್ಮತವಾದ ನೋಟವನ್ನು ಬೆಳೆಸಿಕೊಳ್ಳುವುದು ನಮ್ಮ ಗುರಿಯಾಗಿರಬೇಕು. ಇದು, ನಮ್ಮ ಸಾಮರ್ಥ್ಯಗಳು ಮತ್ತು ಇತಿಮಿತಿಗಳೆರಡನ್ನೂ ಗಣನೆಗೆ ತೆಗೆದುಕೊಳ್ಳುವಂಥ ರೀತಿಯ ನೋಟವಾಗಿರಬೇಕು. ಒಬ್ಬ ಕ್ರೈಸ್ತ ಮಹಿಳೆಯು ಇದನ್ನು ಹೀಗೆ ವ್ಯಕ್ತಪಡಿಸಿದಳು: ‘ನಾನು ಕೆಟ್ಟವಳೂ ಅಲ್ಲ, ಅತೀ ವಿಶೇಷ ವ್ಯಕ್ತಿಯೂ ಅಲ್ಲ. ಬೇರೆಲ್ಲರಂತೆಯೇ ನನ್ನಲ್ಲಿಯೂ ಒಳ್ಳೇ ಗುಣಗಳೂ ಕೆಟ್ಟ ಗುಣಗಳೂ ಇವೆ.’” * ನಮ್ಮ ಬಗ್ಗೆ ಸರಿಯಾಗಿ ಯೋಚನೆ ಮಾಡೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಅಂತ ಇದರಿಂದ ಗೊತ್ತಾಗುತ್ತೆ ಅಲ್ವಾ?

16. ಯೆಹೋವ ನಮಗೆ ಯಾಕೆ ಬುದ್ಧಿವಾದಗಳನ್ನ ಕೊಡ್ತಾನೆ?

16 ಯೆಹೋವ ತುಂಬ ವಿವೇಕಿ. ನಮ್ಮನ್ನ ತುಂಬ ಪ್ರೀತಿಸುತ್ತಾನೆ, ನಾವು ಖುಷಿಖುಷಿಯಾಗಿ ಇರಬೇಕು ಅಂತ ಆಸೆಪಡ್ತಾನೆ. ಅದಕ್ಕೆ ನಮಗೆ ಒಳ್ಳೇ ಸಲಹೆಗಳನ್ನ ಬೈಬಲಿನಲ್ಲಿ ಕೊಟ್ಟಿದ್ದಾನೆ. (ಯೆಶಾ. 48:17, 18) ಇವತ್ತು ಲೋಕದಲ್ಲಿ ಜನರು ಹಣ, ಕೆಲಸ ಮತ್ತು ತಮ್ಮ ಬಗ್ಗೆನೇ ಯಾವಾಗಲೂ ಯೋಚನೆ ಮಾಡುತ್ತಿರುತ್ತಾರೆ. ಇದ್ರಿಂದ ಅವರು ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದ್ರೆ ನಾವು ಯೆಹೋವನ ಮಾತು ಕೇಳಿದ್ರೆ, ನಮ್ಮ ಜೀವನದಲ್ಲಿ ಆತನ ಸೇವೆನೇ ಮುಖ್ಯ ಆಗಿದ್ರೆ ಹಣ, ಕೆಲಸ ಮತ್ತು ನಮ್ಮ ಬಗ್ಗೆ ಸರಿಯಾಗಿ ಯೋಚಿಸೋಕೆ ಕಲಿತೀವಿ ಮತ್ತು ಜೀವನದಲ್ಲಿ ಖುಷಿಖುಷಿಯಾಗಿ ಇರುತ್ತೀವಿ. ಹಾಗಾಗಿ ನಾವು ವಿವೇಕಿಗಳಾಗಿ ಯೆಹೋವನ ಮನಸ್ಸನ್ನ ಖುಷಿಪಡಿಸೋಣ!—ಜ್ಞಾನೋ. 23:15.

ಗೀತೆ 113 ದೇವರ ವಾಕ್ಯಕ್ಕಾಗಿ ಕೃತಜ್ಞರು

^ ಪ್ಯಾರ. 5 ಸೊಲೊಮೋನ ಮತ್ತು ಯೇಸು ತುಂಬ ವಿವೇಕಿಗಳಾಗಿದ್ದರು. ಈ ವಿವೇಕವನ್ನ ಯೆಹೋವನಿಂದ ಪಡೆದುಕೊಂಡರು. ಇವರು ಯೆಹೋವ ಕೊಟ್ಟ ವಿವೇಕದಿಂದ ದುಡ್ಡಿನ ವಿಷಯದಲ್ಲಿ, ಕೆಲಸದ ವಿಷಯದಲ್ಲಿ ಮತ್ತು ತಮ್ಮ ಬಗ್ಗೆ ಯಾವಾಗಲೂ ಸರಿಯಾಗಿ ಯೋಚಿಸುತ್ತಿದ್ದರು. ಹಾಗಾಗಿ ಇವರ ಬಗ್ಗೆ ಮತ್ತು ಇವರ ತರಾನೇ ಬೈಬಲ್‌ ಸಲಹೆಗಳನ್ನ ಪಾಲಿಸಿ ಜೀವನದಲ್ಲಿ ಪ್ರಯೋಜನ ಪಡೆದುಕೊಂಡ ಸಹೋದರ ಸಹೋದರಿಯರ ಬಗ್ಗೆ ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 11 ನವೆಂಬರ್‌ 2016ರ ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು, ಪುಟ 4ರಲ್ಲಿರೋ “ಕಷ್ಟದ ಕೆಲಸದಿಂದ ಆನಂದ ಪಡೆಯುವುದು ಹೇಗೆ?” ಅನ್ನೋ ಲೇಖನ ನೋಡಿ.

^ ಪ್ಯಾರ. 15 ಆಗಸ್ಟ್‌ 1, 2005ರ ಕಾವಲಿನಬುರುಜುವಿನಲ್ಲಿರೋ “ಆನಂದವನ್ನು ಪಡೆಯುವಂತೆ ಬೈಬಲ್‌ ನಿಮಗೆ ಸಹಾಯಮಾಡಬಲ್ಲದು” ಅನ್ನೋ ಲೇಖನ ನೋಡಿ.

^ ಪ್ಯಾರ. 52 ಚಿತ್ರ ವಿವರಣೆ: ಜಾನ್‌ ಮತ್ತು ಟಾಮ್‌ ಅನ್ನೋ ಇಬ್ಬರು ಯುವ ಸಹೋದರರು ಒಂದೇ ಸಭೆಯವರಾಗಿದ್ದಾರೆ. ಸಹೋದರ ಜಾನ್‌ ಅವರ ಕಾರನ್ನ ಚೆನ್ನಾಗಿ ಇಟ್ಟುಕೊಳ್ಳೋದ್ರಲ್ಲೇ ಸಮಯವನ್ನೆಲ್ಲ ಕಳೆಯುತ್ತಿದ್ದಾರೆ. ಆದ್ರೆ ಸಹೋದರ ಟಾಮ್‌ ಬೇರೆಯವರನ್ನ ಸೇವೆಗೆ ಮತ್ತು ಕೂಟಗಳಿಗೆ ಕರೆದುಕೊಂಡು ಹೋಗೋಕೆ ತಮ್ಮ ಕಾರನ್ನ ಉಪಯೋಗಿಸ್ತಿದ್ದಾರೆ.

^ ಪ್ಯಾರ. 54 ಚಿತ್ರ ವಿವರಣೆ: ಸಹೋದರ ಜಾನ್‌ ಅವರ ಧಣಿ ಓವರ್‌ಟೈಮ್‌ ಕೆಲಸ ಮಾಡೋಕೆ ಹೇಳಿದಾಗ ಅವರಿಗೆ ಬೇಜಾರಾಗಬಾರದು ಅಂತ ಅದಕ್ಕೆ ಒಪ್ಪಿಕೊಳ್ತಿದ್ದಾರೆ. ಸಹಾಯಕ ಸೇವಕನಾಗಿರೋ ಸಹೋದರ ಟಾಮ್‌ ಅದೇ ಸಾಯಂಕಾಲ ಒಬ್ಬ ಹಿರಿಯನ ಜೊತೆ ಪರಿಪಾಲನಾ ಭೇಟಿ ಮಾಡ್ತಿದ್ದಾರೆ. ದೇವರ ಸೇವೆ ಮಾಡೋದ್ರಿಂದ ಓವರ್‌ಟೈಮ್‌ ಮಾಡೋಕೆ ಆಗಲ್ಲ ಅಂತ ತಮ್ಮ ಧಣಿಗೆ ಮುಂಚೆನೇ ಹೇಳಿದ್ದಾರೆ.

^ ಪ್ಯಾರ. 56 ಚಿತ್ರ ವಿವರಣೆ: ಜಾನ್‌ ಯಾವಾಗಲೂ ತಮ್ಮ ಬಗ್ಗೆನೇ ಯೋಚನೆ ಮಾಡ್ತಿದ್ದಾರೆ. ಆದ್ರೆ ಟಾಮ್‌ ದೇವರ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಸಮ್ಮೇಳನ ಹಾಲ್‌ ಕಟ್ಟೋ ಕೆಲಸದಲ್ಲಿ ಕೈಜೋಡಿಸುತ್ತಾ ಹೊಸ ಫ್ರೆಂಡ್ಸ್‌ನ ಮಾಡಿಕೊಳ್ತಿದ್ದಾರೆ. ಹೀಗೆ ತಮ್ಮ ಜೀವನದಲ್ಲಿ ಯೆಹೋವನ ಸೇವೆನೇ ಮುಖ್ಯ ಅಂತ ತೋರಿಸ್ತಿದ್ದಾರೆ.