ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 23

ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ

ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ

“ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.”—ಮತ್ತಾ. 22:37.

ಗೀತೆ 88 ಮಕ್ಕಳು—ದೇವರು ಕೊಡುವ ಹೊಣೆಗಾರಿಕೆ

ಕಿರುನೋಟ *

1-2. ನಮ್ಮ ಜೀವನದಲ್ಲಿ ಪರಿಸ್ಥಿತಿ ಬದಲಾಗುತ್ತಿದ್ದ ಹಾಗೆ ಅದಕ್ಕೆ ಸಂಬಂಧಪಟ್ಟ ಬೈಬಲ್‌ ತತ್ವಗಳು ನಮಗೆ ಯಾಕೆ ಮುಖ್ಯ ಅನಿಸುತ್ತೆ? ವಿವರಿಸಿ.

 ಒಂದು ಗಂಡು-ಹೆಣ್ಣು ಮದುವೆ ಆಗ್ತಿದ್ದಾರೆ ಅಂತ ನೆನಸಿ. ಅಲ್ಲಿ ಅವರಿಗೋಸ್ಕರ ಕೊಡೋ ಭಾಷಣವನ್ನ ಅವರು ಕೇಳಿಸಿಕೊಳ್ತಿದ್ದಾರೆ. ಈ ತರದ ಭಾಷಣವನ್ನ ಇದಕ್ಕಿಂತ ಮುಂಚೆ ಅವರು ಎಷ್ಟೋ ಸಲ ಕೇಳಿಸಿಕೊಂಡಿರಬಹುದು. ಆದ್ರೆ ಈಗ ಅವರು ಆ ಭಾಷಣಕ್ಕೆ ಜಾಸ್ತಿ ಗಮನ ಕೊಡ್ತಾರೆ. ಯಾಕಂದ್ರೆ ಆ ಭಾಷಣದಲ್ಲಿ ಹೇಳೋ ವಿಷಯಗಳನ್ನ ಅವರು ತಮ್ಮ ಜೀವನದಲ್ಲಿ ಇನ್ಮುಂದೆ ಪಾಲಿಸಬೇಕಾಗುತ್ತೆ.

2 ಅದೇ ತರ ಗಂಡ-ಹೆಂಡತಿ, ಮಕ್ಕಳನ್ನ ಹೇಗೆ ಬೆಳೆಸಬೇಕು ಅನ್ನೋದರ ಬಗ್ಗೆ ತುಂಬ ಸಲ ಭಾಷಣಗಳನ್ನ ಕೇಳಿಸಿಕೊಂಡಿರಬಹುದು. ಆದ್ರೆ ಅವರಿಗೇ ಒಂದು ಮಗು ಆದಾಗ ಆ ಬೈಬಲ್‌ ತತ್ವಗಳು ಎಷ್ಟು ಮುಖ್ಯ ಅನ್ನೋದು ಅವರಿಗೆ ಅರ್ಥ ಆಗುತ್ತೆ. ಅವರ ಹೆಗಲ ಮೇಲೆ ಮಕ್ಕಳನ್ನ ಬೆಳೆಸೋ ದೊಡ್ಡ ಜವಾಬ್ದಾರಿ ಇರೋದ್ರಿಂದ ಅವರು ಭಾಷಣದಲ್ಲಿ ಕೇಳಿಸಿಕೊಂಡ ತತ್ವಗಳನ್ನ ಈಗ ಪಾಲಿಸಬೇಕಾಗುತ್ತೆ. ನಮ್ಮ ಜೀವನದಲ್ಲಿ ಸನ್ನಿವೇಶಗಳು ಬದಲಾದಾಗ ಕೆಲವು ಬೈಬಲ್‌ ತತ್ವಗಳಿಗೆ ನಾವು ಇನ್ನೂ ಜಾಸ್ತಿ ಗಮನ ಕೊಡ್ತೀವಿ ಅಂತ ಇದ್ರಿಂದ ಗೊತ್ತಾಗುತ್ತೆ. ಅದಕ್ಕೆ ನಾವು ಬೈಬಲನ್ನ ಇಸ್ರಾಯೇಲ್ಯರ ರಾಜರ ತರನೇ “ಜೀವನ ಪೂರ್ತಿ ದಿನಾಲೂ” ಓದಿ, ಧ್ಯಾನಿಸಬೇಕು.—ಧರ್ಮೋ. 17:19.

3. ನಾವೀಗ ಏನನ್ನ ಚರ್ಚಿಸ್ತೀವಿ?

3 ಹೆತ್ತವರು ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಬೇಕು. ಇದು ಒಂದು ದೊಡ್ಡ ಸುಯೋಗ ಅಂತ ಹೇಳಬಹುದು. ಈ ರೀತಿ ಕಲಿಸುವಾಗ ಮಕ್ಕಳಿಗೆ ಯೆಹೋವನ ಬಗ್ಗೆ ತಿಳಿಸುವುದಷ್ಟೇ ಅಲ್ಲ, ಆತನನ್ನ ಪ್ರೀತಿಸೋಕೆ ಸಹಾಯ ಮಾಡಬೇಕು. ಆದ್ರೆ ಅದನ್ನ ಹೇಗೆ ಮಾಡೋದು? ಅದಕ್ಕೆ ಈಗ ನಾವು ಬೈಬಲಿನಲ್ಲಿರೋ 4 ತತ್ವಗಳನ್ನ ನೋಡೋಣ. (2 ತಿಮೊ. 3:16) ಈ ತತ್ವಗಳನ್ನ ಪಾಲಿಸಿ ಪ್ರಯೋಜನ ಪಡೆದುಕೊಂಡಿರೋ ಹೆತ್ತವರ ಉದಾಹರಣೆಗಳನ್ನ ಕೂಡ ನೊಡೋಣ.

ನಾಲ್ಕು ತತ್ವ ಅವುಗಳ ಮಹತ್ವ

ನೀವು ಒಳ್ಳೇ ಮಾದರಿಯಾಗಿದ್ರೆ ಮತ್ತು ಯಾವಾಗಲೂ ಯೆಹೋವನ ಮಾರ್ಗದರ್ಶನ ಕೇಳ್ತಾ ಇದ್ರೆ, ನಿಮ್ಮನ್ನ ನೋಡಿ ಮಕ್ಕಳು ಏನು ಕಲಿತಾರೆ? (ಪ್ಯಾರ 4, 8 ನೋಡಿ)

4. ಹೆತ್ತವರಿಗೆ ಸಹಾಯ ಮಾಡೋ ಒಂದನೇ ತತ್ವ ಯಾವುದು? (ಯಾಕೋಬ 1:5)

4 ಒಂದನೇ ತತ್ವ: ಯೆಹೋವನ ಸಹಾಯ ಕೇಳಿ. ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಹೆತ್ತವರು ಸಹಾಯ ಮಾಡಬೇಕು. ಅದಕ್ಕೆ ಬೇಕಾಗಿರೋ ವಿವೇಕಕ್ಕಾಗಿ ಆತನ ಹತ್ರ ಬೇಡಿಕೊಳ್ಳಬೇಕು. (ಯಾಕೋಬ 1:5 ಓದಿ.) ಈ ವಿಷಯದಲ್ಲಿ ಯೆಹೋವನನ್ನು ಬಿಟ್ರೆ ಬೇರೆ ಯಾರಿಗೂ ಅಷ್ಟು ಚೆನ್ನಾಗಿ ಸಹಾಯ ಮಾಡೋಕೆ ಆಗಲ್ಲ. ಈ ರೀತಿ ಹೇಳೋಕೆ ನಮಗೆ ತುಂಬಾ ಕಾರಣಗಳಿವೆ. ಅದರಲ್ಲಿ ಒಂದೇನಂದ್ರೆ, ಅಪ್ಪನಾಗಿ ಯೆಹೋವನಿಗೆ ತುಂಬಾ ಅನುಭವ ಇದೆ. (ಕೀರ್ತ. 36:9) ಎರಡನೇದಾಗಿ, ಆತನ ಬುದ್ಧಿವಾದ ಕೇಳಿದವರಿಗೆಲ್ಲ ಇಲ್ಲಿ ತನಕ ಒಳ್ಳೇದೇ ಆಗಿದೆ.—ಯೆಶಾ. 48:17.

5. (ಎ) ಅಪ್ಪ ಅಮ್ಮಂದಿರಿಗೆ ಯೆಹೋವನ ಸಂಘಟನೆಯಿಂದ ಹೇಗೆಲ್ಲಾ ಸಹಾಯ ಸಿಗ್ತಾ ಇದೆ? (ಬಿ) ವಿಡಿಯೋದಲ್ಲಿ ನೋಡಿದ ಹಾಗೆ ಮಕ್ಕಳನ್ನ ಬೆಳೆಸುವುದರ ಬಗ್ಗೆ ಸಹೋದರ ಮತ್ತು ಸಹೋದರಿ ಆ್ಯಮೊರಿಮ್‌ರಿಂದ ನೀವೇನು ಕಲಿತ್ರಿ?

5 ಯೆಹೋವ ದೇವರು ತನ್ನ ವಾಕ್ಯ ಮತ್ತು ತನ್ನ ಸಂಘಟನೆಯಿಂದ ತುಂಬ ವಿಷಯಗಳನ್ನ ಹೆತ್ತವರಿಗೆ ಕೊಟ್ಟಿದ್ದಾನೆ. ಇದ್ರಿಂದ ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಮಕ್ಕಳಿಗೆ ಹೆತ್ತವರು ಸಹಾಯ ಮಾಡಬಹುದು. (ಮತ್ತಾ. 24:45) ಉದಾಹರಣೆಗೆ, ಈ ಮುಂಚೆ ಎಚ್ಚರ! ಪತ್ರಿಕೆಯಲ್ಲಿ “ಸುಖೀ ಸಂಸಾರಕ್ಕೆ ಸಲಹೆಗಳು” ಅನ್ನೋ ಲೇಖನ ಸರಣಿ ಬರುತ್ತಿತ್ತು. ಅದು ಈಗಲೂ ನಮ್ಮ ವೆಬ್‌ಸೈಟ್‌ನಲ್ಲಿ ಸಿಗುತ್ತೆ. ಅದ್ರಿಂದಾನೂ ಹೆತ್ತವರಿಗೆ ಸಹಾಯ ಆಗುತ್ತೆ. ಅಷ್ಟೇ ಅಲ್ಲ, jw.orgನಲ್ಲಿರೋ ಎಷ್ಟೋ ಸಂದರ್ಶನಗಳು ಮತ್ತು ವಿಡಿಯೋಗಳು ಮಕ್ಕಳನ್ನ ಯೆಹೋವನಿಗೆ ಇಷ್ಟ ಆಗೋ ತರ ಬೆಳೆಸೋಕೆ ಹೆತ್ತವರಿಗೆ ಸಹಾಯ ಮಾಡುತ್ತೆ. *ಜ್ಞಾನೋ. 2:4-6.

6. ಸಂಘಟನೆಯಿಂದ ಸಿಗ್ತಿರೋ ಸಹಾಯದ ಬಗ್ಗೆ ಒಬ್ಬ ತಂದೆ ಏನಂದ್ರು?

6 ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಯೆಹೋವ ದೇವರು ತನ್ನ ಸಂಘಟನೆ ಮೂಲಕ ಮಾಡಿರೋ ಸಹಾಯಕ್ಕೆ ಎಷ್ಟೋ ಅಪ್ಪ-ಅಮ್ಮಂದಿರು ಋಣಿಗಳಾಗಿದ್ದಾರೆ. ಇದರ ಬಗ್ಗೆ ಜೋ ಅನ್ನೋ ಸಹೋದರ ಹೀಗೆ ಹೇಳ್ತಾರೆ: “ಮೂರು ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಿ, ಆತನಿಗೆ ಇಷ್ಟ ಆಗೋ ತರ ಬೆಳೆಸೋದು ಅಷ್ಟು ಸುಲಭ ಅಲ್ಲ. ಅದಕ್ಕೇ ನಾನು, ನನ್ನ ಹೆಂಡತಿ ಯಾವಾಗಲೂ ಆತನ ಹತ್ರ ಸಹಾಯ ಕೇಳುತ್ತಾ ಇರುತ್ತೀವಿ. ಕೆಲವೊಮ್ಮೆ ನಮಗೆ ಏನು ಮಾಡಬೇಕು ಅಂತ ಗೊತ್ತಾಗದೆ ಇದ್ದಾಗ ಆತನು ನಮಗೆ ಸಹಾಯ ಮಾಡಿದ್ದಾನೆ. ಸಂಘಟನೆಯಿಂದ ಯಾವುದಾದರೂ ಲೇಖನ ಅಥವಾ ವಿಡಿಯೋ ಕೊಟ್ಟು ನಮ್ಮ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದಾನೆ. ಯೆಹೋವ ಯಾವಾಗಲೂ ನಮ್ಮ ದಾರಿ ದೀಪ ಆಗಿರುತ್ತಿದ್ದನು. ಆತನು ನಮಗೆ ಸಹಾಯ ಮಾಡದೆ ಇದ್ದಿದ್ರೆ ಅಪ್ಪ ಅಮ್ಮ ಆಗಿ ನಮ್ಮ ಜವಾಬ್ದಾರಿಯನ್ನ ಸರಿಯಾಗಿ ಮಾಡೋಕೆ ಆಗ್ತಿರಲಿಲ್ಲ.”

7. ಅಪ್ಪ ಅಮ್ಮಂದಿರು ಮಕ್ಕಳಿಗೆ ಏನು ಕಲಿಸ್ತಾರೋ ಅದೇ ತರ ಯಾಕೆ ನಡಕೊಳ್ಳಬೇಕು? (ರೋಮನ್ನರಿಗೆ 2:21)

7 ಎರಡನೇ ತತ್ವ: ನೀವು ಕಲಿಸೋ ತರಾನೇ ನಡೆದುಕೊಳ್ಳಿ. ಮಕ್ಕಳು ಅಪ್ಪಅಮ್ಮನ ನೋಡಿ ಕಲಿತಾರೆ. ನಾವ್ಯಾರೂ ಪರಿಪೂರ್ಣರಲ್ಲ. (ರೋಮ. 3:23) ಆದ್ರೆ ವಿವೇಕ ಇರೋ ಹೆತ್ತವರು, ತಾವು ಕಲಿಸೋ ತರಾನೇ ನಡೆದುಕೊಳ್ಳೋಕೆ ತಮ್ಮಿಂದಾದಷ್ಟು ಪ್ರಯತ್ನ ಮಾಡ್ತಾರೆ. (ರೋಮನ್ನರಿಗೆ 2:21 ಓದಿ.) “ಮಕ್ಕಳು ಸ್ಪಂಜುಗಳ ಹಾಗೆ ಎಲ್ಲವನ್ನೂ ಹೀರಿಕೊಳ್ತಾರೆ. ನಾವು ಹೇಳೋದು ಒಂದು, ಮಾಡೋದು ಒಂದು ಅನ್ನೋ ತರ ನಡೆದುಕೊಂಡರೆ ಅದು ಅವರಿಗೆ ಗೊತ್ತಾಗಿಬಿಡುತ್ತೆ” ಅಂತ ಒಬ್ಬ ಅಪ್ಪ ಹೇಳ್ತಾರೆ. ಹಾಗಾಗಿ ನಮ್ಮ ಮಕ್ಕಳು ಯೆಹೋವನನ್ನು ಪ್ರೀತಿಸಬೇಕಂದ್ರೆ ಮೊದಲು ನಾವು ಆತನ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಅದು ಮಕ್ಕಳಿಗೆ ಕಾಣಿಸಬೇಕು.

8-9. ಆ್ಯಂಡ್ರೂ ಮತ್ತು ಎಮ್ಮಾ ಹೇಳಿರೋ ಮಾತಿಂದ ನೀವೇನು ಕಲಿತ್ರಿ?

8 ನಿಮ್ಮ ಮಕ್ಕಳು ಯೆಹೋವನ ಫ್ರೆಂಡ್‌ ಆಗೋಕೆ ಹೆತ್ತವರಾದ ನೀವು ಬೇರೆಬೇರೆ ವಿಧಗಳಲ್ಲಿ ಸಹಾಯ ಮಾಡಬಹುದು. “ನಾನು ಪ್ರತಿದಿನ ಮಲಗೋಕೂ ಮುಂಚೆ ಪ್ರಾರ್ಥನೆ ಮಾಡ್ತಿದ್ದೆ. ಆದ್ರೂ ನಮ್ಮಪ್ಪ ಇನ್ನೊಂದು ಸಲ ನನ್ನ ಜೊತೆ ಬಂದು ಪ್ರಾರ್ಥನೆ ಮಾಡುತ್ತಿದ್ರು. ‘ನೀನು ಯೆಹೋವನಿಗೆ ಎಷ್ಟು ಸಲ ಬೇಕಾದ್ರೂ ಪ್ರಾರ್ಥನೆ ಮಾಡಬಹುದು’ ಅಂತ ಹೇಳಿಕೊಡ್ತಿದ್ರು. ಹಾಗಾಗಿ ಪ್ರಾರ್ಥನೆ ಮಾಡೋದು ಎಷ್ಟು ಮುಖ್ಯ ಅಂತ ನನಗೆ ಗೊತ್ತಾಯ್ತು. ಅವರು ಹೀಗೆ ಹೇಳಿಕೊಟ್ಟಿದ್ರಿಂದ ನಾನು ಯೆಹೋವನನ್ನು ಒಬ್ಬ ಅಪ್ಪನ ತರ ನೋಡ್ತೀನಿ ಮತ್ತು ಆತನಿಗೆ ಯಾವಾಗಲೂ ಪ್ರಾರ್ಥನೆ ಮಾಡ್ತೀನಿ” ಅಂತ 17 ವರ್ಷದ ಆ್ಯಂಡ್ರೂ ಹೇಳ್ತಾರೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಅಂತ ಹೇಳೋ ಹಾಗೆ ನೀವು ಯೆಹೋವನನ್ನು ಪ್ರೀತಿಸಿದ್ರೆ ನಿಮ್ಮ ಮಕ್ಕಳು ಅದನ್ನ ನೋಡಿ ಅವರೂ ಯೆಹೋವನನ್ನು ಪ್ರೀತಿಸ್ತಾರೆ.

9 ಎಮ್ಮಾ ಅವರ ಉದಾಹರಣೆ ನೋಡಿ. ಅವರ ಅಪ್ಪ, ಕುಟುಂಬವನ್ನ ಬಿಟ್ಟು ಹೋದಾಗ, ಇರೋ ಬರೋ ಸಾಲವನ್ನೆಲ್ಲ ಅವರ ಅಮ್ಮನ ತಲೆ ಮೇಲೆ ಎಳೆದುಬಿಟ್ಟು ಹೋಗಿಬಿಟ್ರು. “ನಾವು ಎಷ್ಟೋ ಸಲ ಒಂದೊಂದು ಕಾಸಿಗೂ ಪರದಾಡಿದ್ದಿದೆ. ಅವಾಗೆಲ್ಲಾ ನಮ್ಮ ಅಮ್ಮ ‘ಯೆಹೋವ ನಮ್ಮನ್ನ ನೋಡಿಕೊಳ್ತಾನೆ, ನಮಗೆ ಬೇಕಾಗಿರೋದನ್ನ ಅವನು ಕೊಡ್ತಾನೆ’ ಅಂತಿದ್ರು. ಅವರು ಇದನ್ನ ಬರೀ ಹೇಳುತ್ತಿರಲಿಲ್ಲ, ಅವರಿಗೆ ನಿಜವಾಗಲೂ ಆ ನಂಬಿಕೆ ಇತ್ತು. ಇದನ್ನ ನಾನು ಕಣ್ಣಾರೆ ನೋಡಿದ್ದೀನಿ” ಅಂತ ಎಮ್ಮಾ ಹೇಳ್ತಾರೆ. ಅಪ್ಪ ಅಮ್ಮಂದಿರು ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲಿದ್ರೂ ಮಕ್ಕಳಿಗೆ ಒಳ್ಳೇ ಮಾದರಿಯಾಗಿರೋಕೆ ಆಗುತ್ತೆ ಅಂತ ಇದ್ರಿಂದ ಕಲಿತೀವಿ.—ಗಲಾ. 6:9.

10. ಇಸ್ರಾಯೇಲ್ಯರು ತಮ್ಮ ಮಕ್ಕಳ ಹತ್ರ ಯಾವಾಗೆಲ್ಲಾ ಮಾತಾಡ್ತಿದ್ರು? (ಧರ್ಮೋಪದೇಶಕಾಂಡ 6:6, 7)

10 ಮೂರನೇ ತತ್ವ: ಮಕ್ಕಳ ಹತ್ರ ಯಾವಾಗಲೂ ಮಾತಾಡಿ. ಇಸ್ರಾಯೇಲ್ಯರು ಮಕ್ಕಳ ಹತ್ರ ತನ್ನ ಬಗ್ಗೆ ಯಾವಾಗಲೂ ಮಾತಾಡಬೇಕಂತ ಯೆಹೋವ ಹೇಳಿದ್ದನು. (ಧರ್ಮೋಪದೇಶಕಾಂಡ 6:6, 7 ಓದಿ.) ಅವರಿಗೆ ಮಕ್ಕಳ ಜೊತೆ ಮಾತಾಡೋಕೆ ತುಂಬಾ ಅವಕಾಶಗಳು ಸಿಕ್ತಿತ್ತು. ಉದಾಹರಣೆಗೆ, ಹುಡುಗರು ಹೊಲದಲ್ಲಿ ನಾಟಿ ಮಾಡ್ತಾ, ಕಟಾವು ಮಾಡ್ತಾ ಇಡೀ ದಿನ ಅಪ್ಪನ ಜೊತೆ ಇರ್ತಿದ್ರು. ಹೆಣ್ಣು ಮಕ್ಕಳು ತಾಯಿ ಜೊತೆ ಹೊಲಿಯುತ್ತಾ, ನೇಯುತ್ತಾ ಮತ್ತು ಮನೆ ಕೆಲಸ ಮಾಡ್ತಾ ತುಂಬಾ ಸಮಯ ಕಳೀತಿದ್ರು. ಹೆತ್ತವರು ಮತ್ತು ಮಕ್ಕಳು ಈ ರೀತಿ ಒಟ್ಟಿಗೆ ಕೆಲಸ ಮಾಡ್ತಿದ್ರಿಂದ ಅವರಿಗೆ ಯೆಹೋವ ದೇವರ ಗುಣಗಳ ಬಗ್ಗೆ, ಯೆಹೋವ ದೇವರು ಅವರ ಕುಟುಂಬಕ್ಕೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅನ್ನೋದ್ರ ಬಗ್ಗೆ ಮಾತಾಡ್ತಿದ್ರು.

11. ಅಪ್ಪ ಅಮ್ಮಂದಿರು ಮಕ್ಕಳ ಜೊತೆ ಯಾವಾಗ ಮಾತಾಡಬಹುದು?

11 ಆದ್ರೆ ಈಗ ಕಾಲ ಬದಲಾಗಿದೆ. ಮುಂಚಿನ ತರ ಅಪ್ಪ ಅಮ್ಮಂದಿರು ಮಕ್ಕಳ ಜೊತೆ ಇಡೀ ದಿನ ಒಟ್ಟಿಗೆ ಇರಲ್ಲ. ಯಾಕಂದ್ರೆ ಅಪ್ಪ ಅಮ್ಮಂದಿರು ಕೆಲಸಕ್ಕೆ ಹೋಗ್ತಾರೆ. ಮಕ್ಕಳು ಸ್ಕೂಲಿಗೆ ಹೋಗ್ತಾರೆ. ಹಾಗಾಗಿ ಮಕ್ಕಳ ಜೊತೆ ಮಾತಾಡೋಕೆ ಅಪ್ಪ ಅಮ್ಮಂದಿರು ಸಮಯ ಮಾಡಿಕೊಳ್ಳಬೇಕು. (ಎಫೆ. 5:15, 16; ಫಿಲಿ. 1:10) ಇದಕ್ಕೆ ಕುಟುಂಬ ಆರಾಧನೆ ಸಹಾಯ ಮಾಡುತ್ತೆ. “ನಮ್ಮ ಅಪ್ಪ, ಕುಟುಂಬ ಆರಾಧನೆಯನ್ನ ತಪ್ಪದೇ ಪ್ರತಿವಾರ ಮಾಡ್ತಾರೆ. ಯಾವ ಕೆಲಸ ಬಂದ್ರೂ ಅದನ್ನ ಮಾತ್ರ ತಪ್ಪಿಸಲ್ಲ. ಕುಟುಂಬ ಆರಾಧನೆ ಆದಮೇಲೆ ನಾವೆಲ್ಲರೂ ತುಂಬ ಹೊತ್ತು ಮಾತಾಡುತ್ತಾ ಇರುತ್ತೀವಿ” ಅಂತ 15 ವರ್ಷದ ಅಲೆಕ್ಸಾಂಡರ್‌ ಹೇಳ್ತಾನೆ.

12. ಕುಟುಂಬ ಆರಾಧನೆ ಮಾಡುವಾಗ ಏನನ್ನ ಮನಸ್ಸಲ್ಲಿ ಇಡಬೇಕು?

12 ಕುಟುಂಬ ಆರಾಧನೆಯಲ್ಲಿ ಮಕ್ಕಳು ಖುಷಿಖುಷಿಯಾಗಿ ಇರೋಕೆ ನೀವು ಏನು ಮಾಡಬೇಕು? ಕುಟುಂಬ ಆರಾಧನೆ ಮಾಡುವಾಗ ನೀವು ಮಕ್ಕಳ ಜೊತೆ ಮಾತಾಡಬೇಕು. ಈ ತರ ಮಾತುಕತೆ ನಡೆಸೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಸಹಾಯ ಮಾಡುತ್ತೆ. ನಿಮ್ಮ ಮಕ್ಕಳು ಯಾವುದನ್ನೂ ಮುಚ್ಚಿಡದೆ ಎಲ್ಲವನ್ನೂ ನಿಮ್ಮ ಹತ್ರ ಹೇಳಿಕೊಳ್ಳಬೇಕು ಅಂತ ನೀವು ಆಸೆಪಡ್ತೀರ. ಹಾಗಾಗಿ ಕುಟುಂಬ ಆರಾಧನೆ ಮಾಡುವಾಗ ಅವರಿಗೆ ಭಾಷಣ ಬಿಗಿಬೇಡಿ ಅಥವಾ ಅವರ ತಪ್ಪನ್ನ ಎತ್ತಿ ಆಡಬೇಡಿ. ಒಂದುವೇಳೆ, ಬೈಬಲ್‌ ಯಾವುದನ್ನ ತಪ್ಪು ಅನ್ನುತ್ತೋ ಅದು ತಮಗೆ ತಪ್ಪು ಅನಿಸ್ತಿಲ್ಲ ಅಂತ ಮಕ್ಕಳು ಹೇಳಿದ್ರೆ ತಟ್ಟಂತ ಅವರ ಮೇಲೆ ಕೋಪ ಮಾಡಿಕೊಳ್ಳಬೇಡಿ. ಅದರ ಬದಲು ಅವರ ಮನಸ್ಸಲ್ಲಿ ಇದ್ದಿದ್ದನ್ನ ಹೇಳಿದ್ದಕ್ಕೆ ಖುಷಿಪಡಿ. ಅವರು ಇದೇ ತರ ಏನನ್ನೂ ಮುಚ್ಚಿಡದೆ ಹೇಳೋಕೆ ಪ್ರೋತ್ಸಾಹ ಕೊಡಿ. ನಿಮ್ಮ ಮಕ್ಕಳ ಮನಸ್ಸಲ್ಲಿ ಏನಿದೆ ಅಂತ ತಿಳಿದುಕೊಂಡಾಗ ಮಾತ್ರ ನೀವು ಅವರಿಗೆ ಸಹಾಯ ಮಾಡೋಕೆ ಆಗುತ್ತೆ.

ಹೆತ್ತವರು ಮಕ್ಕಳಿಗೆ ಸೃಷ್ಟಿನ ತೋರಿಸಿ ಯೆಹೋವನ ಗುಣಗಳ ಬಗ್ಗೆ ಹೇಗೆ ಕಲಿಸಬಹುದು? (ಪ್ಯಾರ 13 ನೋಡಿ)

13. ಅಪ್ಪ ಅಮ್ಮಂದಿರು ಮಕ್ಕಳಿಗೆ ಇನ್ನೂ ಯಾವಾಗೆಲ್ಲಾ ಯೆಹೋವನ ಬಗ್ಗೆ ಕಲಿಸಬಹುದು?

13 ಅಪ್ಪ ಅಮ್ಮಂದಿರು ಮಕ್ಕಳಿಗೆ ಬೈಬಲ್‌ ಸ್ಟಡಿ ಮಾಡುವಾಗ ಮಾತ್ರ ಯೆಹೋವನ ಬಗ್ಗೆ ಕಲಿಸಬೇಕು ಅಂತೇನಿಲ್ಲ. ಅವರು ಯಾವಾಗ ಬೇಕಾದ್ರೂ ಯೆಹೋವನ ಬಗ್ಗೆ ಕಲಿಸಬಹುದು. ಸಹೋದರಿ ಲೀಸಾ ಹೀಗೆ ಹೇಳ್ತಾರೆ: “ನಮ್ಮ ಮಕ್ಕಳಿಗೆ ಸೃಷ್ಟಿಯನ್ನ ತೋರಿಸಿ ಯೆಹೋವ ದೇವರ ಬಗ್ಗೆ ಕಲಿಸ್ತಾ ಇದ್ವಿ. ಉದಾಹರಣೆಗೆ, ನಮ್ಮ ನಾಯಿ ಮರಿಗಳ ತುಂಟಾಟ ನೋಡಿ ಮಕ್ಕಳು ನಗುತ್ತಿದ್ರು. ಆಗ ನಾವು ಅವರಿಗೆ, ಯೆಹೋವ ದೇವರು ಯಾವಾಗಲೂ ಖುಷಿ ಖುಷಿಯಾಗಿ ಇರುತ್ತಾರೆ. ನಾವೂ ಖುಷಿಖುಷಿಯಾಗಿ ಇರಬೇಕು ಅನ್ನೋದೇ ಆತನ ಆಸೆ ಅಂತ ಕಲಿಸ್ತಿದ್ವಿ.”

ಹೆತ್ತವರೇ ನಿಮ್ಮ ಮಕ್ಕಳ ಫ್ರೆಂಡ್ಸ್‌ ಎಂಥವರು ಅಂತ ನಿಮಗೆ ಗೊತ್ತಾ? (ಪ್ಯಾರ 14 ನೋಡಿ) *

14. ಮಕ್ಕಳು ಒಳ್ಳೇ ಫ್ರೆಂಡ್ಸ್‌ನ ಮಾಡಿಕೊಳ್ಳೋಕೆ ಅಪ್ಪ ಅಮ್ಮಂದಿರು ಯಾಕೆ ಸಹಾಯ ಮಾಡಬೇಕು? (ಜ್ಞಾನೋಕ್ತಿ 13:20)

14 ನಾಲ್ಕನೇ ತತ್ವ: ಒಳ್ಳೆಯವರನ್ನ ಫ್ರೆಂಡ್ಸ್‌ ಮಾಡಿಕೊಳ್ಳೋಕೆ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ. ಸ್ನೇಹಿತರಿಂದ ನಿಮ್ಮ ಮಕ್ಕಳು ಒಳ್ಳೆಯವರೂ ಆಗಬಹುದು ಕೆಟ್ಟವರೂ ಆಗಬಹುದು ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 13:20 ಓದಿ.) ನಿಮ್ಮ ಮಕ್ಕಳ ಫ್ರೆಂಡ್ಸ್‌ ಎಂಥವರು ಅಂತ ನಿಮಗೆ ಗೊತ್ತಿದ್ಯಾ? ಅವರ ಜೊತೆ ಯಾವಾಗಲಾದರೂ ಮಾತಾಡಿದ್ದೀರಾ? ಅಥವಾ ಸಮಯ ಕಳೆದಿದ್ದೀರಾ? ಯೆಹೋವನನ್ನು ಪ್ರೀತಿಸುವವರ ಜೊತೆ ನಿಮ್ಮ ಮಕ್ಕಳು ಫ್ರೆಂಡ್ಸ್‌ ಆಗೋಕೆ ನೀವೇನು ಮಾಡಬಹುದು? (1 ಕೊರಿಂ. 15:33) ನೀವು ಅಂಥ ಸಹೋದರ ಸಹೋದರಿಯರನ್ನ ಆಗಾಗ ನಿಮ್ಮ ಮನೆಗೆ ಕರಿತಾ ಇರಿ. ಆಗ ನಿಮ್ಮ ಮಕ್ಕಳು ಅವರ ಜೊತೆ ಸಹವಾಸ ಮಾಡೋಕೆ ನೀವು ಅವಕಾಶ ಮಾಡಿಕೊಟ್ಟ ಹಾಗಾಗುತ್ತೆ.—ಕೀರ್ತ. 119:63.

15. ಒಳ್ಳೇ ಫ್ರೆಂಡ್ಸ್‌ನ ಮಾಡಿಕೊಳ್ಳೋಕೆ ಮಕ್ಕಳಿಗೆ ಅಪ್ಪ ಅಮ್ಮಂದಿರು ಹೇಗೆ ಸಹಾಯ ಮಾಡಬಹುದು?

15 ತಮ್ಮ ಮಕ್ಕಳು ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳೋಕೆ ಸಹೋದರ ಟೋನಿ ಮತ್ತು ಅವರ ಹೆಂಡ್ತಿ ತುಂಬ ಸಹಾಯ ಮಾಡಿದ್ರು. ಅದರ ಬಗ್ಗೆ ಸಹೋದರ ಟೋನಿ ಏನು ಹೇಳ್ತಾರೆ ಅಂದ್ರೆ “ನಾನು ನನ್ನ ಹೆಂಡ್ತಿ ಯಾವಾಗಲೂ ಎಲ್ಲಾ ವಯಸ್ಸಿನ ಮತ್ತು ಬೇರೆಬೇರೆ ಹಿನ್ನೆಲೆಯಿಂದ ಬಂದ ಸಹೋದರ ಸಹೋದರಿಯರನ್ನ ನಮ್ಮ ಮನೆಗೆ ಕುಟುಂಬ ಆರಾಧನೆಗೆ ಕರೀತಿದ್ವಿ. ಆಮೇಲೆ ನಾವೆಲ್ಲರೂ ಒಟ್ಟಿಗೆ ಊಟನೂ ಮಾಡ್ತಿದ್ವಿ. ಇದ್ರಿಂದ ಅವರಿಗೆ ಯೆಹೋವನ ಮೇಲೆ ಎಷ್ಟು ಪ್ರೀತಿಯಿದೆ ಮತ್ತು ಯೆಹೋವ ದೇವರ ಸೇವೆ ಮಾಡ್ತಾ ಎಷ್ಟು ಖುಷಿಯಾಗಿದ್ದಾರೆ ಅಂತ ನಮ್ಮ ಮಕ್ಕಳಿಗೆ ಗೊತ್ತಾಗುತ್ತಿತ್ತು. ಅಷ್ಟೇ ಅಲ್ಲ, ಮಿಷನರಿಗಳನ್ನ, ಸಂಚರಣಾ ಮೇಲ್ವಿಚಾರಕರನ್ನ ಮತ್ತು ಇನ್ನೂ ಬೇರೆ ಸಹೋದರ ಸಹೋದರಿಯರನ್ನೂ ನಾವು ನಮ್ಮ ಮನೆಯಲ್ಲಿ ಉಳಿಸ್ಕೊಂಡಿದ್ದೀವಿ. ಆ ಸಹೋದರ ಸಹೋದರಿಯರಿಗಿರೋ ಅನುಭವ, ಅವರು ಮಾಡ್ತಿರೋ ತ್ಯಾಗ ಮತ್ತು ಅವರ ಹುರುಪನ್ನ ನೋಡಿ ನಮ್ಮ ಮಕ್ಕಳು ಯೆಹೋವ ದೇವರಿಗೆ ಇನ್ನೂ ಹತ್ರ ಆಗಿದ್ದಾರೆ.” ಹಾಗಾಗಿ ಹೆತ್ತವರೇ, ಒಳ್ಳೇ ಫ್ರೆಂಡ್ಸ್‌ನ ಮಾಡಿಕೊಳ್ಳೋಕೆ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ.

ನಿರೀಕ್ಷೆ ಕಳೆದುಕೊಳ್ಳಬೇಡಿ!

16. ನಿಮ್ಮ ಮಕ್ಕಳು ಯೆಹೋವನನ್ನು ಬಿಟ್ಟು ಹೋದ್ರೆ ನೀವೇನು ಅಂದುಕೊಳ್ಳಬಾರದು?

16 ಇಷ್ಟೆಲ್ಲಾ ಪ್ರಯತ್ನ ಮಾಡಿದ್ರೂ ನಿಮ್ಮ ಮಕ್ಕಳು ಯೆಹೋವ ದೇವರನ್ನ ಬಿಟ್ಟು ಹೋಗಿಬಿಟ್ರೆ ದಯವಿಟ್ಟು ಬೇಜಾರು ಮಾಡ್ಕೊಬೇಡಿ. ನಾನು ನನ್ನ ಮಕ್ಕಳನ್ನ ಸರಿಯಾಗಿ ಬೆಳೆಸಲಿಲ್ಲ ಅಂತ ಅಂದುಕೊಳ್ಳಬೇಡಿ. ನಮ್ಮೆಲ್ಲರಿಗೂ ಅಂದ್ರೆ ನಿಮ್ಮ ಮಕ್ಕಳಿಗೂ ಯೆಹೋವ ದೇವರು ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ. ಆತನನ್ನ ಆರಾಧನೆ ಮಾಡಬೇಕಾ ಬೇಡ್ವಾ ಅಂತ ಪ್ರತಿಯೊಬ್ಬರೂ ಅವರವರೇ ನಿರ್ಧಾರ ಮಾಡಬೇಕು. ಒಂದುವೇಳೆ ನಿಮ್ಮ ಮಕ್ಕಳು ಯೆಹೋವ ದೇವರನ್ನ ಬಿಟ್ಟುಹೋಗಿದ್ರೆ ಅವರು ಇನ್ಯಾವತ್ತೂ ವಾಪಸ್‌ ಬರೋದೇ ಇಲ್ಲ ಅಂತ ಅಂದುಕೊಳ್ಳಬೇಡಿ. ಒಂದಲ್ಲಾ ಒಂದು ದಿನ ಖಂಡಿತ ಬಂದೇ ಬರ್ತಾರೆ. ಯೇಸು ಹೇಳಿದ ಮನೆಬಿಟ್ಟು ಹೋದ ಮಗನ ಉದಾಹರಣೆ ನಿಮಗೆ ನೆನಪಿದ್ಯಾ? (ಲೂಕ 15:11-19, 22-24) ಆ ಮಗ ಎಷ್ಟೋ ಕೆಟ್ಟ ಕೆಲಸಗಳನ್ನ ಮಾಡಿದ. ಆದ್ರೆ ಕೊನೆಗೆ ಒಂದು ದಿನ ವಾಪಸ್‌ ಬಂದ. “ಇದು ಬರೀ ಕಥೆ ಅಷ್ಟೇ, ಇದೆಲ್ಲಾ ನಿಜ ಜೀವನದಲ್ಲಿ ನಡಿಯಲ್ಲ” ಅಂತ ಕೆಲವರು ಹೇಳಬಹುದು. ಆದ್ರೆ ತುಂಬ ಜನರ ಜೀವನದಲ್ಲಿ ಇದು ನಡೆದಿದೆ. ಅದರಲ್ಲಿ ಒಬ್ಬರು ಈಲೀ. ಅವರ ಅನುಭವನ ಈಗ ನೋಡೋಣ ಬನ್ನಿ.

17. ಈಲೀಯವರ ಉದಾಹರಣೆಯಿಂದ ನಿಮಗೆ ಯಾವ ಪ್ರೋತ್ಸಾಹ ಸಿಕ್ತು?

17 ಈಲೀ, ತನ್ನ ಅಪ್ಪ ಅಮ್ಮನ ಬಗ್ಗೆ ಹೀಗೆ ಹೇಳ್ತಾನೆ: “ನನ್ನಲ್ಲಿ ಯೆಹೋವ ದೇವರ ಮೇಲೆ ಪ್ರೀತಿ ಬೆಳೆಸಲಿಕ್ಕೆ, ಬೈಬಲ್‌ ಬಗ್ಗೆ ಗೌರವ ಮೂಡಿಸಲಿಕ್ಕೆ ಅವರು ತಮ್ಮಿಂದಾದೆಲ್ಲ ಪ್ರಯತ್ನ ಮಾಡಿದರು. ಆದರೆ ನಾನು ಹರೆಯಕ್ಕೆ ಬಂದಾಗ ಅವರಿಗೇ ತಿರುಗಿಬಿದ್ದೆ.” ಯೆಹೋವನ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಅಪ್ಪ ಅಮ್ಮ ಸಹಾಯ ಮಾಡಿದ್ರೂ ಅವನು ಮನೇಲಿ ಒಂಥರ ಹೊರಗಡೆ ಒಂಥರ ಜೀವನ ಮಾಡ್ತಿದ್ದ. ಅಪ್ಪ ಅಮ್ಮನ ಮಾತು ಕೇಳದೆ ಮನೆ ಬಿಟ್ಟು ಹೋದ ಮತ್ತು ಕೆಟ್ಟಕೆಟ್ಟ ಕೆಲಸಗಳನ್ನ ಮಾಡುತ್ತಿದ್ದ. ಇಷ್ಟೆಲ್ಲಾ ಆದ್ರೂ ಈಲೀ ಅವನ ಫ್ರೆಂಡ್‌ ಜೊತೆ ಕೆಲವೊಮ್ಮೆ ಬೈಬಲಲ್ಲಿರೋ ವಿಷಯಗಳ ಬಗ್ಗೆ ಮಾತಾಡುತ್ತಿದ್ದ. “ಯೆಹೋವನ ಬಗ್ಗೆ ಎಷ್ಟು ಹೆಚ್ಚು ಮಾತಾಡುತ್ತಿದ್ದೆನೋ ಅಷ್ಟೇ ಹೆಚ್ಚು ಆತನನ್ನು ನೆನಸಲಾರಂಭಿಸಿದೆ. ಹೆತ್ತವರು ಶ್ರಮಪಟ್ಟು ನನ್ನ ಹೃದಯದಲ್ಲಿ ಬಿತ್ತಿದ್ದ ಬೈಬಲ್‌ ಸತ್ಯದ ಬೀಜಗಳು ಈಗ ನಿಧಾನವಾಗಿ ಮೊಳಕೆಯೊಡೆಯಲು ಶುರುವಾದವು” ಅಂತ ಈಲೀ ಹೇಳ್ತಾನೆ. ಕೆಲವು ವರ್ಷಗಳಾದ ಮೇಲೆ ಅವನು ಮತ್ತೆ ಯೆಹೋವನ ಹತ್ರ ವಾಪಸ್‌ ಬಂದ. * ಚಿಕ್ಕ ವಯಸ್ಸಿಂದ ಯೆಹೋವನ ಬಗ್ಗೆ ಕಲಿಸಿಕೊಟ್ಟ ಅವನ ಅಪ್ಪ ಅಮ್ಮಗೆ ಎಷ್ಟು ಸಂತೋಷ ಆಗಿರಬೇಕು ಅಲ್ವಾ!—2 ತಿಮೊ. 3:14, 15.

18. ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಕಲಿಸ್ತಿರೋ ಹೆತ್ತವರ ಬಗ್ಗೆ ನಿಮಗೆ ಹೇಗನಿಸುತ್ತೆ?

18 ಹೆತ್ತವರೇ, ಮುಂದೆ ಬರೋ ಪೀಳಿಗೆಯನ್ನ ಯೆಹೋವನ ಆರಾಧಕರಾಗಿ ಮಾಡೋ ದೊಡ್ಡ ಜವಾಬ್ದಾರಿ ನಿಮಗಿದೆ. ಆ ಸುಯೋಗವನ್ನ ಆತನು ನಿಮಗೆ ಕೊಟ್ಟಿದ್ದಾನೆ. (ಕೀರ್ತ. 78:4-6) ಅದು ಅಷ್ಟು ಸುಲಭವಾದ ಕೆಲಸ ಅಲ್ಲ. ಹಾಗಾಗಿ ನೀವು ಮಾಡ್ತಿರೋ ಪ್ರಯತ್ನಗಳನ್ನ ನಾವು ತುಂಬ ಮೆಚ್ಚಿಕೊಳ್ತೀವಿ. ನಿಮ್ಮ ಮಕ್ಕಳು ಯೆಹೋವನನ್ನು ಪ್ರೀತಿಸೋ ತರ ಮತ್ತು ಆತನ ಮಾತನ್ನ ಕೇಳೋ ತರ ಅವರನ್ನ ಬೆಳೆಸುತ್ತಾ ಇರಿ. ಆಗ ನೀವು ಮಾಡೋ ಪ್ರಯತ್ನವನ್ನ ನೋಡಿ ಯೆಹೋವ ತುಂಬ ಖುಷಿಪಡ್ತಾನೆ.—ಎಫೆ. 6:4.

ಗೀತೆ 89 ಯೆಹೋವನ ಸೌಹಾರ್ದಯುತ ಮನವಿ: “ನನ್ನ ಮಗನೇ, ವಿವೇಕಿಯಾಗಿರು”

^ ಪ್ಯಾರ. 5 ಅಪ್ಪ ಅಮ್ಮಂದಿರಿಗೆ ತಮ್ಮ ಮಕ್ಕಳಂದ್ರೆ ಪಂಚಪ್ರಾಣ. ತಮ್ಮ ಮಕ್ಕಳು ಚೆನ್ನಾಗಿರಬೇಕು, ಖುಷಿ ಖುಷಿಯಾಗಿ ಇರಬೇಕು ಅಂತ ಅವರು ಕಷ್ಟಪಟ್ಟು ದುಡಿತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಹೆತ್ತವರು ತಮ್ಮಿಂದ ಆಗೋದನ್ನೆಲ್ಲ ಮಾಡ್ತಾರೆ. ಇದನ್ನ ಮಾಡೋಕೆ ಅವರಿಗೆ ಬೈಬಲಲ್ಲಿರೋ 4 ತತ್ವಗಳು ಸಹಾಯ ಮಾಡುತ್ತೆ. ಅದನ್ನ ಈ ಲೇಖನದಲ್ಲಿ ನೊಡೋಣ.

^ ಪ್ಯಾರ. 17 ಜುಲೈ 1, 2012ರ ಕಾವಲಿನಬುರುಜುವಿನಲ್ಲಿರೋ “ಬದುಕನ್ನೇ ಬದಲಾಯಿಸಿತು ಬೈಬಲ್‌” ಅನ್ನೋ ಲೇಖನ ನೋಡಿ.

^ ಪ್ಯಾರ. 57 ಚಿತ್ರ ವಿವರಣೆ: ಒಬ್ಬ ತಂದೆ ತನ್ನ ಮಗನ ಫ್ರೆಂಡ್ಸ್‌ ಬಗ್ಗೆ ತಿಳಿದುಕೊಳ್ಳೋಕೆ ಅವನ ಮತ್ತು ಅವನ ಫ್ರೆಂಡ್ಸ್‌ ಜೊತೆ ಬಾಸ್ಕೆಟ್‌ ಬಾಲ್‌ ಆಡ್ತಿದ್ದಾನೆ.