ಅಧ್ಯಯನ ಲೇಖನ 21
ನಮ್ಮ ಪ್ರಾರ್ಥನೆಗಳಿಗೆ ಯೆಹೋವ ಹೇಗೆ ಉತ್ರ ಕೊಡ್ತಾನೆ?
“ನಾವು ಏನೇ ಬೇಡ್ಕೊಂಡ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ಇರೋದ್ರಿಂದ ನಾವು ಈಗಾಗ್ಲೇ ಬೇಡಿರೋದು ಸಿಕ್ಕೇ ಸಿಗುತ್ತೆ ಅಂತ ನಮಗೆ ಗೊತ್ತು.”—1 ಯೋಹಾ. 5:15.
ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
ಈ ಲೇಖನದಲ್ಲಿ ಏನಿದೆ? a
1-2. ಕೆಲವೊಮ್ಮೆ ನಮಗೆ ಏನನಿಸುತ್ತೆ?
ನೀವು ಮಾಡಿದ ಪ್ರಾರ್ಥನೆಗೆ ಯೆಹೋವ ಉತ್ರ ಕೊಟ್ಟಿಲ್ಲ ಅಂತ ಯಾವತ್ತಾದ್ರೂ ಅನಿಸಿದ್ಯಾ? ಕಷ್ಟದಲ್ಲಿದ್ದಾಗ ಎಷ್ಟೋ ನಮ್ಮ ಸಹೋದರ ಸಹೋದರಿಯರಿಗೆ ಹೀಗೇ ಅನಿಸಿದೆ. ನಮಗೂ ಕಷ್ಟ ಬಂದಾಗ ನಾವು ಮಾಡಿದ ಪ್ರಾರ್ಥನೆಗೆ ದೇವರು ಉತ್ರ ಕೊಟ್ಟಿದ್ದಾನಾ ಇಲ್ವಾ ಅಂತ ಗೊತ್ತಾಗಲ್ಲ.
2 ಆದ್ರೆ ನಾವು ಮಾಡೋ ಒಂದೊಂದು ಪ್ರಾರ್ಥನೆಗೂ ಯೆಹೋವ ಉತ್ರ ಕೊಟ್ಟೇ ಕೊಡ್ತಾನೆ. ಅದನ್ನ ಹೇಗೆ ಗ್ಯಾರಂಟಿಯಾಗಿ ಹೇಳಬಹುದು? (1 ಯೋಹಾ. 5:15) ಕೆಲವೊಮ್ಮೆ ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಟ್ಟಿಲ್ಲ ಅಂತ ಯಾಕೆ ಅನಿಸುತ್ತೆ? ಆತನು ನಮ್ಮ ಪ್ರಾರ್ಥನೆಗಳಿಗೆ ಹೇಗೆಲ್ಲ ಉತ್ರ ಕೊಡ್ತಾನೆ? ಇದಕ್ಕೆಲ್ಲ ಈ ಲೇಖನದಲ್ಲಿ ಉತ್ರ ನೋಡೋಣ.
ನಾವು ಅಂದ್ಕೊಂಡ ಹಾಗೆ ಯೆಹೋವ ಉತ್ರ ಕೊಡದೆ ಇರಬಹುದು
3. ನಾವು ಪ್ರಾರ್ಥನೆ ಮಾಡಬೇಕು ಅಂತ ಯೆಹೋವ ಯಾಕೆ ಇಷ್ಟಪಡ್ತಾನೆ?
3 ನಾವಂದ್ರೆ ಯೆಹೋವನಿಗೆ ತುಂಬ ಇಷ್ಟ. ಆತನು ನಮ್ಮನ್ನ ತುಂಬ ಪ್ರೀತಿಸ್ತಾನೆ. (ಹಗ್ಗಾ. 2:7; 1 ಯೋಹಾ. 4:10) ನಾವು ಆತನಿಗೆ ಹತ್ರ ಆಗಬೇಕು ಅಂತಾನೂ ಆಸೆಪಡ್ತಾನೆ. ಕಷ್ಟದಲ್ಲಿರುವಾಗ ನಮಗೆ ಸಹಾಯ ಮಾಡೋಕೆ ಆತನಿಗೆ ಮನಸ್ಸೂ ಇದೆ. ಅದಕ್ಕೇ ಆತನು ಪ್ರಾರ್ಥನೆ ಮಾಡಿ ಅಂತ ಹೇಳಿದ್ದಾನೆ.—1 ಪೇತ್ರ 5:6, 7.
4. ಯೆಹೋವ ತನ್ನ ಸೇವಕರ ಪ್ರಾರ್ಥನೆಗಳನ್ನ ಕೇಳ್ತಾನೆ ಅಂತ ಯಾಕೆ ಗ್ಯಾರಂಟಿಯಾಗಿ ಹೇಳಬಹುದು? (ಚಿತ್ರನೂ ನೋಡಿ.)
4 ತನ್ನ ಸೇವಕರು ಪ್ರಾರ್ಥನೆ ಮಾಡಿದಾಗ ಯೆಹೋವ ಉತ್ರ ಕೊಟ್ಟಿದ್ದಾನೆ. ಅಂಥ ಎಷ್ಟೋ ಉದಾಹರಣೆಗಳು ಬೈಬಲಲ್ಲಿ ಇದೆ. ನಿಮಗೆ ಯಾವುದಾದ್ರೂ ನೆನಪಿದ್ಯಾ? ರಾಜ ದಾವೀದನ ಬಗ್ಗೆ ನೋಡಿ. ಅವನಿಗೆ ತುಂಬ ಶತ್ರುಗಳಿದ್ರು. ಅವನ ಪ್ರಾಣ ತೆಗೀಬೇಕು ಅಂತ ಕಾಯ್ತಾ ಇದ್ರು. ಆಗೆಲ್ಲ ದಾವೀದ ಪ್ರಾರ್ಥನೆ ಮಾಡ್ತಿದ್ದ. ಅವನು ಒಂದುಸಲ, “ಯೆಹೋವ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ, ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು. ನೀನು ನಂಬಿಗಸ್ತ, ನೀತಿವಂತ. ಹಾಗಾಗಿ ನನಗೆ ಉತ್ರ ಕೊಡು” ಅಂತ ಬೇಡ್ಕೊಂಡ. (ಕೀರ್ತ. 143:1) ಹೀಗೆ ಪ್ರಾರ್ಥನೆ ಮಾಡಿದಾಗೆಲ್ಲ ಯೆಹೋವ ದೇವರು ಅವನನ್ನ ಕಾಪಾಡಿದ್ದಾನೆ. (1 ಸಮು. 19:10, 18-20; 2 ಸಮು. 5:17-25) ಅದಕ್ಕೆ ದಾವೀದ “ಯಾರೆಲ್ಲ . . . ಪ್ರಾರ್ಥನೆ ಮಾಡ್ತಾರೋ, ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ” ಅಂತ ಹೇಳಿದ್ದಾನೆ. ನಾವೂ ಅದೇ ಗ್ಯಾರಂಟಿಯಿಂದ ಇರಬಹುದು.—ಕೀರ್ತ. 145:18.
5. ಯೆಹೋವ ತನ್ನ ಸೇವಕರು ಅಂದ್ಕೊಂಡ ತರಾನೇ ಉತ್ರ ಕೊಟ್ಟಿದ್ದಾನಾ? ಒಂದು ಉದಾಹರಣೆ ಕೊಡಿ. (ಚಿತ್ರನೂ ನೋಡಿ.)
5 ಕೆಲವೊಮ್ಮೆ ದೇವರು ನಾವು ಅಂದ್ಕೊಂಡ ಹಾಗೆ ಉತ್ರ ಕೊಡದೆ ಇರಬಹುದು. ಅಪೊಸ್ತಲ ಪೌಲನಿಗೂ ಹೀಗೇ ಆಯ್ತು. ಅವನು ‘ನನ್ನ ದೇಹದಲ್ಲಿ ಒಂದು ಮುಳ್ಳು ಚುಚ್ತಾ ಇದೆ, ಅದನ್ನ ತೆಗೆದುಹಾಕು’ ಅಂತ ಬೇಡ್ಕೊಂಡ. ಇದ್ರ ಬಗ್ಗೆ ಅವನು ಒಂದು ಸಲ ಅಲ್ಲ, ಎರಡು ಸಲ ಅಲ್ಲ, ಮೂರು ಸಲ ಬೇಡ್ಕೊಂಡ. ಯೆಹೋವ ದೇವರು ಅವನ ಪ್ರಾರ್ಥನೆಗಳಿಗೆ ಉತ್ರ ಕೊಟ್ನಾ? ಹಾ, ಹೌದು. ಆದ್ರೆ ಪೌಲ ಅಂದ್ಕೊಂಡ ಹಾಗೆ ಉತ್ರ ಸಿಗಲಿಲ್ಲ. ಅಂದ್ರೆ ಅವನ ಸಮಸ್ಯೆಯನ್ನ ದೇವರು ಸರಿಮಾಡಲಿಲ್ಲ. ಆದ್ರೆ ನೋವನ್ನ ಸಹಿಸ್ಕೊಳ್ಳೋಕೆ ಶಕ್ತಿ ಕೊಟ್ಟನು. ಆತನ ಸೇವೆಯನ್ನ ಮಾಡ್ತಾ ಇರೋಕೆ ಸಹಾಯನೂ ಮಾಡಿದನು.—2 ಕೊರಿಂ. 12:7-10.
6. ಯೆಹೋವ ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಿಲ್ಲ ಅಂತ ನಮಗೆ ಕೆಲವೊಮ್ಮೆ ಯಾಕೆ ಅನಿಸುತ್ತೆ?
6 ನಮಗೂ ಪೌಲನ ತರ ಆಗಬಹುದು. ‘ನಾವು ಕೇಳಿದ್ದೇ ಒಂದು, ಯೆಹೋವ ಕೊಟ್ಟಿದ್ದೇ ಒಂದು’ ಅಂತ ನಮಗೆ ಅನಿಸಬಹುದು. ಆದ್ರೆ ನಮಗೆ ಏನು ಕೊಟ್ರೆ ಒಳ್ಳೇದು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ, “ನಾವು ಕೇಳೋದಕ್ಕಿಂತ, ಯೋಚ್ನೆ ಮಾಡಿದ್ದಕ್ಕಿಂತ ಎಷ್ಟೋ ಹೆಚ್ಚಾಗಿ ಮಾಡೋ ಶಕ್ತಿ ದೇವರಿಗಿದೆ.” (ಎಫೆ. 3:20) ಹಾಗಾಗಿ ನಾವು ಅಂದ್ಕೊಂಡ ಸಮಯದಲ್ಲಿ, ನಾವು ಅಂದ್ಕೊಂಡ ರೀತಿಯಲ್ಲಿ ನಮಗೆ ಕೆಲವೊಮ್ಮೆ ಉತ್ರ ಸಿಗದೇ ಇರಬಹುದು.
7. ನಾವು ಪ್ರಾರ್ಥನೆಯಲ್ಲಿ ಕೇಳೋ ವಿಷ್ಯಗಳನ್ನ ಯಾಕೆ ಬದಲಾಯಿಸ್ಕೊಬೇಕಾಗಿ ಬರಬಹುದು? ಉದಾಹರಣೆ ಕೊಡಿ.
7 ನಾವು ಯೆಹೋವನ ಉದ್ದೇಶ ಏನು ಅಂತ ಚೆನ್ನಾಗಿ ಅರ್ಥ ಮಾಡ್ಕೊಬೇಕು. ಆಗ ನಾವು ಪ್ರಾರ್ಥನೆಯಲ್ಲಿ ಕೇಳೋ ವಿಷ್ಯನ ಬದಲಾಯಿಸ್ಕೊಬೇಕು ಅಂತ ಗೊತ್ತಾಗುತ್ತೆ. ಸಹೋದರ ಮಾರ್ಟಿನ್ ಪೊಯೆಟ್‌ಸಿಂಗರ್ ಕೂಡ ಇದನ್ನೇ ಮಾಡಿದ್ರು. ಅವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ಪೊಲೀಸರು ಅವ್ರನ್ನ ಅರೆಸ್ಟ್ ಮಾಡಿದ್ರು. ಅವ್ರನ್ನ ನಾಜಿ಼ ಸೆರೆಶಿಬಿರದಲ್ಲಿ ಹಾಕಿಬಿಟ್ರು. ಆಗ ಅವರು ಯೆಹೋವನ ಹತ್ರ “ನನ್ನನ್ನ ಬಿಡುಗಡೆ ಮಾಡು. ನಾನು ನನ್ನ ಹೆಂಡತಿ ಜೊತೆ ನಿನ್ನ ಸೇವೆ ಮಾಡಬೇಕು” ಅಂತ ಬೇಡ್ಕೊಂಡ್ರು. ಎರಡು ವಾರ ಆದ್ರೂ ಏನೂ ಆಗಲಿಲ್ಲ. ಆಗ ಆ ಸಹೋದರ “ನಾನಿಲ್ಲಿ ಏನು ಮಾಡಬೇಕು ಅಂತ ನೀನು ಆಸೆ ಪಡ್ತಿಯೋ ಅದನ್ನ ನಂಗೆ ತೋರಿಸ್ಕೊಡಪ್ಪಾ ಯೆಹೋವಾ” ಅಂತ ಬೇಡ್ಕೊಂಡ್ರು. ಆಮೇಲೆ ಅಲ್ಲಿದ್ದ ಸಹೋದರರ ಬಗ್ಗೆ ಯೋಚ್ನೆ ಮಾಡೋಕೆ ಶುರುಮಾಡಿದ್ರು. ಆ ಸಹೋದರರು ಕೂಡ ಅವರವರ ಹೆಂಡತಿ-ಮಕ್ಕಳ ಬಗ್ಗೆ ಚಿಂತೆ ಮಾಡ್ತಿದ್ರು. ಇದನ್ನ ನೋಡಿದಾಗ ಸಹೋದರ ಪೊಯೆಟ್‌ಸಿಂಗರ್ “ಸೆರೆಶಿಬಿರದಲ್ಲಿ ಇರೋ ಸಹೋದರರನ್ನ ಬಲಪಡಿಸೋಕೆ ನಂಗೆ ಸಹಾಯ ಮಾಡಪ್ಪಾ. ಈ ಹೊಸ ನೇಮಕನ ಕೊಟ್ಟಿದ್ದಕ್ಕೆ ನಿಂಗೆ ತುಂಬ ಥ್ಯಾಂಕ್ಸ್” ಅಂತ ಪ್ರಾರ್ಥನೆ ಮಾಡಿದ್ರು. ಹೀಗೆ 9 ವರ್ಷ ಅವರು ಅಲ್ಲಿದ್ದು ಸಹೋದರರನ್ನ ಬಲಪಡಿಸಿದ್ರು.
8. ನಾವು ಪ್ರಾರ್ಥನೆ ಮಾಡುವಾಗ ಯಾವ ವಿಷ್ಯನ ಮನಸ್ಸಲ್ಲಿ ಇಡಬೇಕು?
8 ಯೆಹೋವ ದೇವರ ಮನಸ್ಸಲ್ಲಿ ಒಂದು ಉದ್ದೇಶ ಇದೆ. ನಾವೀಗ ಅನುಭವಿಸ್ತಾ ಇರೋ ಕಷ್ಟಗಳನ್ನ ಅಂದ್ರೆ ನೈಸರ್ಗಿಕ ವಿಪತ್ತು, ಕಾಯಿಲೆ, ಸಾವು ಇನ್ನೂ ಬೇರೆ ಕಷ್ಟಗಳನ್ನ ತನ್ನ ಸರ್ಕಾರದಲ್ಲಿ ಪೂರ್ತಿಯಾಗಿ ಸರಿಮಾಡಬೇಕು ಅಂದ್ಕೊಂಡಿದ್ದಾನೆ. ಅದನ್ನ ಯಾವಾಗ ಮಾಡಬೇಕು ಅಂತ ಈಗಾಗ್ಲೇ ನಿರ್ಧಾರ ಮಾಡಿದ್ದಾನೆ. (ದಾನಿ. 2:44; ಪ್ರಕ. 21:3, 4) ಅಲ್ಲಿ ತನಕ ಸೈತಾನನಿಗೆ ಈ ಲೋಕನ ಆಳೋಕೆ ಬಿಟ್ಟಿದ್ದಾನೆ. b (ಯೋಹಾ. 12:31; ಪ್ರಕ. 12:9) ಒಂದುವೇಳೆ ಯೆಹೋವ ಈಗಿರೋ ಸಮಸ್ಯೆಗಳನ್ನ ಸರಿಮಾಡಿದ್ರೆ ಸೈತಾನ ಚೆನ್ನಾಗಿ ಆಳ್ವಿಕೆ ಮಾಡ್ತಿದ್ದಾನೆ ಅಂತ ಆಗಿಬಿಡುತ್ತೆ. ಅದಕ್ಕೆ ಈ ಸಮಸ್ಯೆಗಳನ್ನೆಲ್ಲ ದೇವರು ಪರಿಹಾರ ಮಾಡ್ತಿಲ್ಲ. ನಮ್ಮ ಪ್ರಾರ್ಥನೆಗಳಿಗೆ ನಾವು ಅಂದ್ಕೊಂಡ ರೀತಿಯಲ್ಲಿ ಉತ್ರ ಕೊಡ್ತಿಲ್ಲ. ಇದರರ್ಥ ನಾವು ಸಹಾಯ ಬೇಕು ಅಂತ ಬೇಡ್ಕೊಂಡಾಗಲೂ ದೇವರು ಏನೂ ಮಾಡದೆ ಸುಮ್ನೆ ಕೈಕಟ್ಕೊಂಡು ಕೂತಿರ್ತಾನಾ? ಇಲ್ಲ, ಸಹಾಯ ಮಾಡೇ ಮಾಡ್ತಾನೆ! ಹೇಗೆಲ್ಲ ಮಾಡ್ತಾನೆ ಅಂತ ಮುಂದೆ ನೋಡೋಣ.
ಯೆಹೋವ ನಮ್ಮ ಪ್ರಾರ್ಥನೆಗಳಿಗೆ ಹೇಗೆಲ್ಲ ಉತ್ರ ಕೊಡ್ತಾನೆ
9. ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? ಉದಾಹರಣೆ ಕೊಡಿ.
9 ಯೆಹೋವ ನಮಗೆ ವಿವೇಕ ಕೊಡ್ತಾನೆ. ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಬೇಕಾದ ವಿವೇಕ ಕೊಟ್ಟು ಸಹಾಯ ಮಾಡ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ. ಯಾಕಂದ್ರೆ ಕೆಲವೊಂದು ತೀರ್ಮಾನಗಳು ನಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತೆ. ಅದ್ರಲ್ಲಿ ಒಂದು, ನಾವು ಮದುವೆ ಮಾಡ್ಕೊಬೇಕಾ ಬೇಡ್ವಾ ಅನ್ನೋ ತೀರ್ಮಾನ. (ಯಾಕೋ. 1:5) ಮರಿಯ ಅನ್ನೋ ಅವಿವಾಹಿತ ಸಹೋದರಿಯ ಉದಾಹರಣೆ ನೋಡಿ. c ಅವರು ತುಂಬ ವರ್ಷಗಳಿಂದ ಪಯನೀಯರ್ ಸೇವೆಯನ್ನ ಸಂತೋಷವಾಗಿ ಮಾಡ್ತಾ ಇದ್ರು. ಒಮ್ಮೆ ಅವರು ಒಬ್ಬ ಸಹೋದರನನ್ನ ಭೇಟಿ ಆದ್ರು. ಮರಿಯ ಏನು ಹೇಳ್ತಾರೆ ಅಂದ್ರೆ “ನಮ್ಮ ಪರಿಚಯ ಆದ್ಮೇಲೆ ನಾವಿಬ್ರು ಒಳ್ಳೇ ಫ್ರೆಂಡ್ಸ್ ಆದ್ವಿ. ಆಮೇಲೆ ನಾವಿಬ್ರು ಒಬ್ರನ್ನೊಬ್ರು ತುಂಬ ಇಷ್ಟಪಟ್ವಿ. ಈಗ ನಾನು ಒಂದು ನಿರ್ಧಾರ ಮಾಡಬೇಕಿತ್ತು. ಅದಕ್ಕೆ ಯೆಹೋವನ ಸಹಾಯ ಬೇಕಿತ್ತು. ಹಾಗಾಗಿ ನಾನು ಆತನ ಹತ್ರ ತುಂಬ ಸಲ ಬೇಡ್ಕೊಂಡೆ. ನಾನು ಏನ್ ಮಾಡಬೇಕು ಅನ್ನೋದನ್ನ ಯೆಹೋವ ನೇರವಾಗಿ ಹೇಳಲ್ಲ, ನಿಜ. ಆದ್ರೆ ಒಳ್ಳೇ ತೀರ್ಮಾನ ತಗೊಳ್ಳೋಕೆ ವಿವೇಕ ಕೊಡ್ತಾನೆ ಅಂತ ನಂಗೆ ಗೊತ್ತಿತ್ತು.” ಆ ಸಹೋದರಿಗೆ ದೇವರು ನಿಜವಾಗ್ಲೂ ವಿವೇಕ ಕೊಟ್ಟನು. ಹೇಗೆ? ಅವರು ತೀರ್ಮಾನ ಮಾಡೋ ಮುಂಚೆ ನಮ್ಮ ಸಂಘಟನೆಯ ಪುಸ್ತಕ-ಪತ್ರಿಕೆಗಳಲ್ಲಿ ಸಂಶೋಧನೆ ಮಾಡಿದ್ರು. ಅವ್ರಿಗೆ ಒಳ್ಳೊಳ್ಳೆ ಸಲಹೆಗಳು ಸಿಕ್ತು. ಅವ್ರ ಮನಸ್ಸಲ್ಲಿದ್ದ ಪ್ರಶ್ನೆಗಳಿಗೆ ಉತ್ರನೂ ಸಿಕ್ತು. ಅಷ್ಟೇ ಅಲ್ಲ, ಯೆಹೋವನ ಸಾಕ್ಷಿ ಆಗಿರೋ ಅವ್ರ ಅಮ್ಮ ಕೂಡ ಒಳ್ಳೇ ಸಲಹೆ ಕೊಟ್ರು. ಇದ್ರಿಂದ ಆ ಸಹೋದರಿ ಭಾವನೆಗಳನ್ನ ಬದಿಗಿಟ್ಟು ಚೆನ್ನಾಗಿ ಯೋಚ್ನೆ ಮಾಡಿದ್ರು. ಕೊನೆಗೆ ಒಳ್ಳೇ ತೀರ್ಮಾನ ತಗೊಂಡ್ರು.
10. ಫಿಲಿಪ್ಪಿ 4:13 ಹೇಳೋ ತರ ಯೆಹೋವ ತನ್ನ ಸೇವಕರಿಗೆ ಹೇಗೆ ಸಹಾಯ ಮಾಡ್ತಾನೆ? ಒಂದು ಉದಾಹರಣೆ ಕೊಡಿ. (ಚಿತ್ರನೂ ನೋಡಿ.)
10 ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಯೆಹೋವ ಶಕ್ತಿ ಕೊಡ್ತಾನೆ. ಅಪೊಸ್ತಲ ಪೌಲನ ತರಾನೇ ನಮಗೂ ಕಷ್ಟಗಳನ್ನ ತಾಳ್ಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ. (ಫಿಲಿಪ್ಪಿ 4:13 ಓದಿ.) ಬೆಂಜಮೀನ್ ಅನ್ನೋ ಸಹೋದರನಿಗೆ ಯೆಹೋವ ಹೇಗೆ ಸಹಾಯ ಮಾಡಿದನು ಅಂತ ನೋಡಿ. ಅವರೂ ಮತ್ತು ಅವ್ರ ಕುಟುಂಬದವರು ಆಫ್ರಿಕಾದ ನಿರಾಶ್ರಿತರ ಶಿಬಿರದಲ್ಲಿದ್ರು. ಸಹೋದರ ಬೆಂಜಮೀನ್ ತಮ್ಮ ಯೌವನವನ್ನ ಅಲ್ಲೇ ಕಳಿಬೇಕಾಗಿ ಬಂತು. ಅವರು ಏನು ಹೇಳ್ತಾರಂದ್ರೆ, “ನಾನು ಯೆಹೋವನ ಹತ್ರ ‘ನಿಂಗಿಷ್ಟ ಆಗೋ ತರಾನೇ ನಾನು ಯಾವಾಗ್ಲೂ ನಡ್ಕೊಬೇಕಪ್ಪಾ. ಅದಕ್ಕೆ ನಂಗೆ ಸಹಾಯ ಮಾಡು’ ಅಂತ ಬೇಡ್ಕೊಳ್ತಾ ಇದ್ದೆ. ಯೆಹೋವ ನನ್ನ ಪ್ರಾರ್ಥನೆಗೆ ಹೇಗೆ ಉತ್ರ ಕೊಟ್ಟನು ಗೊತ್ತಾ? ಆತನು ನಂಗೆ ನೆಮ್ಮದಿ ಕೊಟ್ಟನು, ಸಾರೋಕೆ ಧೈರ್ಯ ಕೊಟ್ಟನು. ಅಷ್ಟೇ ಅಲ್ಲ, ನಮ್ಮ ಸಂಘಟನೆಯ ಪುಸ್ತಕ-ಪತ್ರಿಕೆಗಳು ಸಿಗೋ ತರಾನೂ ಮಾಡಿದನು. ಇದ್ರಿಂದ ನಾನು ಆತನಿಗೆ ತುಂಬ ಹತ್ರ ಆದೆ. ಆ ಪತ್ರಿಕೆಗಳಲ್ಲಿ ಬರ್ತಿದ್ದ ಅನುಭವಗಳನ್ನ ಓದ್ತಿದ್ದೆ. ಸಹೋದರ ಸಹೋದರಿಯರಿಗೆ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಹೇಗೆಲ್ಲಾ ಸಹಾಯ ಮಾಡಿದನು ಅಂತ ಅರ್ಥ ಮಾಡ್ಕೊಂಡೆ. ಏನೇ ಆದ್ರೂ ಯೆಹೋವನಿಗೆ ನಿಯತ್ತಾಗಿ ಇರಬೇಕು ಅಂತ ತೀರ್ಮಾನ ಮಾಡಿದೆ.”
11-12. ಸಹೋದರ ಸಹೋದರಿಯರಿಂದ ಯೆಹೋವ ಹೇಗೆ ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನೆ? (ಚಿತ್ರನೂ ನೋಡಿ.)
11 ಯೆಹೋವ ಸಹೋದರ ಸಹೋದರಿಯರ ಮೂಲಕ ಸಹಾಯ ಮಾಡ್ತಾನೆ. ಯೇಸುಗೂ ಇದೇ ತರ ಸಹಾಯ ಮಾಡಿದನು. ಜನ್ರು ಯೇಸು ಮೇಲೆ ದೇವರ ವಿರುದ್ಧ ಮಾತಾಡಿದ್ದಾನೆ ಅನ್ನೋ ಆರೋಪ ಹಾಕಿದ್ರು. ಆ ಆರೋಪ ತೆಗೆದುಹಾಕು ಅಂತ ಯೇಸು ಯೆಹೋವನ ಹತ್ರ ಬೇಡ್ಕೊಂಡನು. ತಾನು ಸಾಯೋ ಹಿಂದಿನ ರಾತ್ರಿ ಇದ್ರ ಬಗ್ಗೆ ಯೆಹೋವನಿಗೆ ತುಂಬ ಸಲ ಪ್ರಾರ್ಥನೆ ಮಾಡಿದನು. ಆದ್ರೆ ದೇವರು ಅದನ್ನ ಮಾಡಲಿಲ್ಲ. ಬದಲಿಗೆ ಆತನಿಗೆ ಸ್ನೇಹಿತನ ತರ ಇದ್ದ ಒಬ್ಬ ದೇವದೂತನನ್ನ ಕಳಿಸಿ ಧೈರ್ಯ ತುಂಬಿದನು. (ಲೂಕ 22:42, 43) ಇದೇ ತರ ಯೆಹೋವ ನಮಗೂ ಸಹಾಯ ಮಾಡ್ತಾನೆ. ನಾವು ಕಷ್ಟದಲ್ಲಿದ್ದಾಗ ನಮಗೆ ಸಹಾಯ ಮಾಡೋಕೆ ಸಹೋದರ ಸಹೋದರಿಯರಿಗೆ ಮನಸ್ಸು ಕೊಡ್ತಾನೆ. ಅವರು ನಮ್ಮ ಮನೆಗೆ ಬಂದು ಅಥವಾ ಫೋನ್ ಮಾಡಿ ಪ್ರೋತ್ಸಾಹ ಕೊಡಬಹುದು. ಇದನ್ನೇ ನಾವೂ ಬೇರೆಯವ್ರಿಗೆ ಮಾಡಬೇಕು. ನಮ್ಮ ‘ಒಳ್ಳೇ ಮಾತಿಂದ’ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸಬೇಕು.—ಜ್ಞಾನೋ. 12:25.
12 ಮಿರಿಯಾಮ್ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವರ ಗಂಡ ತೀರಿಹೋಗಿ ಕೆಲವು ವಾರ ಆಗಿತ್ತು. ಅವ್ರಿಗೆ ತುಂಬ ಒಂಟಿತನ ಕಾಡ್ತಿತ್ತು. ಅವ್ರಿಗೆ ದುಃಖನ ತಡ್ಕೊಳ್ಳೋಕೇ ಆಗ್ತಾ ಇರಲಿಲ್ಲ. ಅವರು ಬಿಕ್ಕಿಬಿಕ್ಕಿ ಅಳ್ತಾ ಇದ್ರು. ಯಾರ ಹತ್ರ ಆದ್ರೂ ಮಾತಾಡಬೇಕು ಅಂತ ಅವ್ರಿಗೆ ಅನಿಸ್ತಾ ಇತ್ತು. “ಬೇರೆಯವ್ರಿಗೆ ಫೋನ್ ಮಾಡೋಷ್ಟು ಶಕ್ತಿನೂ ನನಗೆ ಇರಲಿಲ್ಲ. ಅದಕ್ಕೆ ನಾನು ಯೆಹೋವನಿಗೆ ಪ್ರಾರ್ಥನೆ ಮಾಡಿದೆ. ನಾನಿನ್ನೂ ಅಳ್ತಾ ಪ್ರಾರ್ಥನೆ ಮಾಡ್ತಾ ಇರುವಾಗ್ಲೇ ಫೋನ್ ರಿಂಗ್ ಆಯ್ತು. ಒಬ್ಬ ಹಿರಿಯ ಫೋನ್ ಮಾಡಿದ್ರು. ಅವರು ನಮಗೆ ಒಳ್ಳೇ ಸ್ನೇಹಿತ ಆಗಿದ್ರು” ಅಂತ ಸಹೋದರಿ ಹೇಳ್ತಾರೆ. ಆ ಹಿರಿಯ ಮತ್ತು ಅವ್ರ ಹೆಂಡತಿ ಸಹೋದರಿ ಮಿರಿಯಾಮ್‌ಗೆ ಸಮಾಧಾನ ಹೇಳಿದ್ರು, ಧೈರ್ಯ ತುಂಬಿದ್ರು. ಅವರು ಫೋನ್ ಮಾಡೋ ಹಾಗೆ ಮಾಡಿದ್ದು ಯೆಹೋವ ದೇವರೇ ಅಂತ ಆ ಸಹೋದರಿ ಹೇಳ್ತಾರೆ.
13. ಇನ್ಯಾವ ರೀತಿಯಲ್ಲೂ ಯೆಹೋವ ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡಬಹುದು? ಒಂದು ಉದಾಹರಣೆ ಕೊಡಿ.
13 ಬೇರೆಯವ್ರಿಂದ ಸಹಾಯ ಸಿಗೋ ತರನೂ ಯೆಹೋವ ಮಾಡಬಹುದು. (ಜ್ಞಾನೋ. 21:1) ನೆಹೆಮೀಯನ ಉದಾಹರಣೆ ನೋಡಿ. ಅವನು ಯೆರೂಸಲೇಮಿನ ಗೋಡೆಗಳನ್ನ ಕಟ್ಟಬೇಕು ಅಂತ ಯೋಚ್ನೆ ಮಾಡ್ತಿದ್ದ. ಅದಕ್ಕೆ ರಾಜ ಅರ್ತಶಸ್ತನ ಹತ್ರ ಹೋಗಿ ಮಾತಾಡಿದ. ರಾಜ ಒಪ್ಕೊಂಡ, ನೆಹೆಮೀಯನನ್ನ ಯೆರೂಸಲೇಮಿಗೆ ಕಳಿಸ್ಕೊಟ್ಟ. ರಾಜನಿಗೆ ಆ ಒಳ್ಳೇ ಮನಸ್ಸು ಕೊಟ್ಟಿದ್ದು ಯೆಹೋವನೇ. (ನೆಹೆ. 2:3-6) ಈಗ್ಲೂ ಕೂಡ ತನ್ನನ್ನ ಆರಾಧನೆ ಮಾಡದಿರೋ ಜನ್ರಿಂದ ನಮಗೆ ಸಹಾಯ ಸಿಗೋ ಹಾಗೆ ಯೆಹೋವ ಮಾಡ್ತಾನೆ. ಈ ರೀತಿಯಲ್ಲೂ ಆತನು ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನೆ.
14. ಸಹೋದರಿ ಸೂ ಹಿಂಗ್ ಅವ್ರ ಅನುಭವದಿಂದ ನೀವೇನು ಕಲಿತ್ರಿ? (ಚಿತ್ರನೂ ನೋಡಿ.)
14 ಸೂ ಹಿಂಗ್ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವ್ರ ಮಗನಿಗೆ ಚಿಕ್ಕ ವಯಸ್ಸಿಂದಾನೇ ಕೆಲವು ಮಾನಸಿಕ ಕಾಯಿಲೆಗಳಿತ್ತು. ಸ್ವಲ್ಪ ವರ್ಷಗಳಾದ ಮೇಲೆ ಅವನು ಒಂದು ದೊಡ್ಡ ಬಿಲ್ಡಿಂಗ್ ಮೇಲಿಂದ ಬಿದ್ದುಬಿಟ್ಟ. ಇದ್ರಿಂದ ಅವನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಳ್ಳೋ ಪರಿಸ್ಥಿತಿ ಬಂತು. ಆಗ ಅವರು ಮತ್ತು ಅವ್ರ ಗಂಡ ಕೆಲಸ ಬಿಡಬೇಕಾಗಿ ಬಂತು. ಇದ್ರಿಂದ ಅವರು ಹಣಕ್ಕೋಸ್ಕರ ತುಂಬ ಪರದಾಡಬೇಕಾಯ್ತು. ಆಗ ಸಹೋದರಿಗೆ ‘ಇನ್ನು ನನ್ನ ಕೈಯಿಂದ ಆಗಲ್ಲ, ಸಾಕಾಯ್ತು’ ಅಂತ ಅನಿಸ್ತು. ಇದನ್ನೆಲ್ಲ ಯೆಹೋವನ ಹತ್ರ ಹೇಳ್ಕೊಂಡು ಸಹಾಯ ಕೊಡಪ್ಪಾ ಅಂತ ಬೇಡ್ಕೊಂಡ್ರು. ಆಗ ಅವ್ರ ಮಗನಿಗೆ ಚಿಕಿತ್ಸೆ ಕೊಡ್ತಿದ್ದ ಡಾಕ್ಟರ್ ಸಹಾಯ ಮಾಡಿದ್ರು. ಸರ್ಕಾರದಿಂದ ಸಿಗೋ ಸಹಾಯನ ಪಡ್ಕೊಳ್ಳೋಕೆ ಅವರು ಸಹಾಯ ಮಾಡಿದ್ರು. ಕಡಿಮೆ ಬೆಲೆಗೆ ಬಾಡಿಗೆ ಮನೆಯನ್ನ ಹುಡುಕಿಕೊಟ್ರು. “ಈ ಸಹಾಯ ಸಿಗೋಕೆ ಯೆಹೋವನೇ ಕಾರಣ. ಆತನು ನಿಜವಾಗ್ಲೂ ‘ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನೆ’” ಅಂತ ಸೂ ಹಿಂಗ್ ಹೇಳ್ತಾರೆ.—ಕೀರ್ತ. 65:2.
ಯೆಹೋವ ಕೊಡೋ ಉತ್ರನಾ ನಂಬಿಕೆಯ ಕಣ್ಣುಗಳಿಂದ ನೋಡಿ
15. ಒಬ್ಬ ಸಹೋದರಿ ತನ್ನ ಪ್ರಾರ್ಥನೆಗಳಿಗೆ ಯೆಹೋವ ಉತ್ರ ಕೊಡ್ತಿದ್ದಾನೆ ಅಂತ ಹೇಗೆ ತಿಳ್ಕೊಂಡ್ರು?
15 ಯೆಹೋವ ದೇವರು ನಾವು ಬೇಡ್ಕೊಂಡಿದ್ದನ್ನ ನಮ್ಮ ಕಣ್ಮುಂದೆನೇ ನಡೆಯೋ ತರ ಮಾಡಿ ನಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನೆ ಅಂತ ಹೇಳಕ್ಕಾಗಲ್ಲ. ಆದ್ರೆ ನಾವು ಆತನಿಗೆ ನಿಯತ್ತಾಗಿ ಇರೋಕೆ ಏನು ಸಹಾಯ ಬೇಕೋ ಅದನ್ನ ಮಾಡೇ ಮಾಡ್ತಾನೆ. ಹಾಗಾಗಿ ಆತನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ರ ಕೊಡ್ತಾನೆ ಅಂತ ತಿಳ್ಕೊಳ್ಳೋಕೆ ಪ್ರಯತ್ನ ಮಾಡಬೇಕು. ಸಹೋದರಿ ಯೋಕೋ ಇದನ್ನೇ ಮಾಡಿದ್ರು. ಅವ್ರ ಪ್ರಾರ್ಥನೆಗಳಿಗೆ ಯೆಹೋವ ಉತ್ರ ಕೊಡ್ತಿಲ್ಲ ಅಂತ ಅನಿಸ್ತಿತ್ತು. ಹಾಗಾಗಿ ಅವರು ಯೆಹೋವನ ಹತ್ರ ಪ್ರಾರ್ಥನೆಯಲ್ಲಿ ಏನೆಲ್ಲ ಕೇಳ್ತಿದ್ರೋ ಅದನ್ನ ಒಂದು ಪುಸ್ತಕದಲ್ಲಿ ಬರೆದಿಡೋಕೆ ಶುರು ಮಾಡಿದ್ರು. ಸ್ವಲ್ಪ ದಿನ ಆದ್ಮೇಲೆ ಆ ಪುಸ್ತಕವನ್ನ ತೆರೆದು ನೋಡಿದ್ರು. ಆಗ ಅವ್ರಿಗೆ ಅವರು ಮಾಡಿದ ಎಲ್ಲಾ ಪ್ರಾರ್ಥನೆಗೆ ಉತ್ರ ಸಿಕ್ಕಿದೆ ಅಂತ ಗೊತ್ತಾಯ್ತು. ಅಷ್ಟೇ ಅಲ್ಲ, ಪುಸ್ತಕದಲ್ಲಿ ಬರೆಯೋಕೆ ಮರೆತುಹೋದ ವಿಷ್ಯಗಳಿಗೂ ಯೆಹೋವ ಉತ್ರ ಕೊಟ್ಟಿದ್ದಾನೆ ಅಂತ ಗೊತ್ತಾಯ್ತು. ನಾವು ಕೂಡ ಈ ಸಹೋದರಿ ತರಾನೇ ನಮ್ಮ ಪ್ರಾರ್ಥನೆಗಳಿಗೆ ಯೆಹೋವ ಹೇಗೆಲ್ಲ ಉತ್ರ ಕೊಟ್ಟಿದ್ದಾನೆ ಅಂತ ಆಗಾಗ ಯೋಚ್ನೆ ಮಾಡೋದು ಒಳ್ಳೇದು.—ಕೀರ್ತ. 66:19, 20.
16. ನಾವು ಪ್ರಾರ್ಥನೆ ಮಾಡಿದ ಮೇಲೂ ನಂಬಿಕೆ ಇದೆ ಅಂತ ಹೇಗೆ ತೋರಿಸ್ಕೊಡ್ತೀವಿ? (ಇಬ್ರಿಯ 11:6)
16 ನಾವು ಪ್ರಾರ್ಥನೆ ಮಾಡಿದಾಗ ಮಾತ್ರ ಅಲ್ಲ, ಮಾಡಿದ ಮೇಲೂ ಯೆಹೋವನ ಮೇಲೆ ನಂಬಿಕೆ ಇದೆ ತೋರಿಸ್ಕೊಡಬೇಕು. ಹೇಗೆ? ಯೆಹೋವ ಹೇಗೇ ಉತ್ರ ಕೊಟ್ರೂ ಅದನ್ನ ಒಪ್ಕೊಬೇಕು. (ಇಬ್ರಿಯ 11:6 ಓದಿ.) ಸಹೋದರ ಮೈಕ್ ಮತ್ತು ಅವ್ರ ಹೆಂಡತಿ ಕ್ರಿಸ್ಸಿ ಅವ್ರ ಅನುಭವ ನೋಡಿ. ಬೆತೆಲ್‌ಗೆ ಹೋಗಿ ಸೇವೆ ಮಾಡಬೇಕು ಅಂತ ಅವರು ತುಂಬ ಆಸೆ ಇಟ್ಕೊಂಡಿದ್ರು. “ನಾವು ತುಂಬ ಸಲ ಅರ್ಜಿ ಹಾಕಿದ್ವಿ. ಯೆಹೋವ ಹತ್ರ ತುಂಬ ಸಲ ಪ್ರಾರ್ಥನೆನೂ ಮಾಡಿದ್ವಿ. ಆದ್ರೆ ನಮಗೆ ಬೆತೆಲ್‌ಗೆ ಹೋಗೋ ಅವಕಾಶನೇ ಸಿಗಲಿಲ್ಲ” ಅಂತ ಸಹೋದರ ಮೈಕ್ ಹೇಳ್ತಾರೆ. ಯೆಹೋವ ದೇವರು ಪ್ರಾರ್ಥನೆಗಳಿಗೆ ಉತ್ರ ಕೊಟ್ಟೇ ಕೊಡ್ತಾನೆ. ಆದ್ರೆ ಹೇಗೆ ಉತ್ರ ಕೊಡಬೇಕು ಅನ್ನೋದು ನಮಗಿಂತ ಆತನಿಗೆ ಚೆನ್ನಾಗಿ ಗೊತ್ತಿದೆ ಅಂತ ಅವರು ಅರ್ಥ ಮಾಡ್ಕೊಂಡ್ರು. ಅದಕ್ಕೆ ಅವರು ಅಗತ್ಯ ಇರೋ ಕಡೆ ಹೋಗಿ ಪಯನೀಯರ್ ಸೇವೆ ಮಾಡಿದ್ರು, ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗಳಿಗೆ ಸಹಾಯ ಮಾಡಿದ್ರು. ಈಗ ಅವರು ಸರ್ಕಿಟ್ ಮೇಲ್ವಿಚಾರಕರಾಗಿ ಸೇವೆ ಮಾಡ್ತಿದ್ದಾರೆ. “ಕೆಲವೊಮ್ಮೆ ನಾವು ಅಂದ್ಕೊಂಡ ರೀತಿಯಲ್ಲಿ ಯೆಹೋವ ಉತ್ರ ಕೊಟ್ಟಿಲ್ಲದೇ ಇರಬಹುದು, ಆದ್ರೆ ಬೇರೆ ರೀತಿಯಲ್ಲಿ ಉತ್ರ ಕೊಟ್ಟಿದ್ದಾರೆ. ನಾವು ಅಂದ್ಕೊಂಡ ರೀತಿಗಿಂತ ಒಳ್ಳೇ ಉತ್ರಗಳನ್ನೇ ಕೊಟ್ಟಿದ್ದಾರೆ” ಅಂತ ಸಹೋದರ ಮೈಕ್ ಹೇಳ್ತಾರೆ.
17-18. ಕೀರ್ತನೆ 86:6, 7 ಹೇಳೋ ತರ ನಾವು ಏನನ್ನ ನಂಬಬೇಕು?
17 ಕೀರ್ತನೆ 86:6, 7 ಓದಿ. ಯೆಹೋವ ನಮ್ಮ ಪ್ರಾರ್ಥನೆಗಳನ್ನ ಕೇಳಿ ಉತ್ರ ಕೊಡ್ತಾನೆ. ಕೀರ್ತನೆಗಾರನಾದ ದಾವೀದನಿಗೆ ಆ ನಂಬಿಕೆ ಇತ್ತು. ನಾವೂ ಅದನ್ನೇ ಗ್ಯಾರಂಟಿಯಾಗಿ ನಂಬಬಹುದು. ಯಾಕಂದ್ರೆ ಈ ಲೇಖನದಲ್ಲಿ ನೋಡಿದ ಹಾಗೆ ಯೆಹೋವ ದೇವರು ನಮಗೆ ವಿವೇಕ ಕೊಡ್ತಾನೆ, ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಶಕ್ತಿ ಕೊಡ್ತಾನೆ. ಅಷ್ಟೇ ಅಲ್ಲ, ಸಹೋದರ ಸಹೋದರಿಯರಿಂದ ಮತ್ತು ಬೇರೆಯವರಿಂದ ಸಹಾಯ ಸಿಗೋ ತರ ಮಾಡ್ತಾನೆ.
18 ನಾವು ಪ್ರಾರ್ಥನೆ ಮಾಡಿದಾಗೆಲ್ಲ ನಾವು ಅಂದ್ಕೊಂಡ ರೀತಿಯಲ್ಲಿ ಯೆಹೋವ ಉತ್ರ ಕೊಡದೇ ಇರಬಹುದು. ಆದ್ರೆ ಉತ್ರ ಕೊಟ್ಟೇ ಕೊಡ್ತಾನೆ. ನಮಗೆ ಏನು ಬೇಕು, ಯಾವಾಗ ಬೇಕು ಅಂತ ಆತನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ಸಹಾಯ ಮಾಡೇ ಮಾಡ್ತಾನೆ. ಯೆಹೋವ ಈಗ್ಲೂ ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಿದ್ದಾನೆ. ಮುಂದೆ ಹೊಸ ಲೋಕದಲ್ಲೂ ಚೆನ್ನಾಗಿ ನೋಡ್ಕೊಳ್ತಾನೆ. ಯಾಕಂದ್ರೆ ಆಗ ‘ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸ್ತೀನಿ’ ಅಂತ ಆತನು ಮಾತು ಕೊಟ್ಟಿದ್ದಾನೆ. ಆ ನಂಬಿಕೆ ಇಟ್ಕೊಂಡು ಯಾವಾಗ್ಲೂ ಪ್ರಾರ್ಥನೆ ಮಾಡೋಣ.—ಕೀರ್ತ. 145:16.
ಗೀತೆ 2 ಯೆಹೋವನೇ, ನಿನಗೆ ಕೃತಜ್ಞರು
a ಯೆಹೋವನ ಉದ್ದೇಶನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕ ಹಾಗೆ ನಾವು ಪ್ರಾರ್ಥನೆ ಮಾಡಿದ್ರೆ ಆತನು ನಮಗೆ ಉತ್ರ ಕೊಟ್ಟೇ ಕೊಡ್ತಾನೆ. ನಾವು ಕಷ್ಟಗಳನ್ನ ಅನುಭವಿಸ್ತಾ ಇರುವಾಗ ಆತನಿಗೆ ನಿಯತ್ತಾಗಿ ಇರೋಕೆ ಬೇಕಾದ ಸಹಾಯ ಮಾಡೇ ಮಾಡ್ತಾನೆ. ಹಾಗಾದ್ರೆ ದೇವರು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ರ ಕೊಡ್ತಾನೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.
b ಸೈತಾನ ಈ ಲೋಕನ ಆಳೋಕೆ ಯೆಹೋವ ಯಾಕೆ ಬಿಟ್ಟಿದ್ದಾನೆ ಅನ್ನೋದ್ರ ಬಗ್ಗೆ ಇನ್ನೂ ತಿಳ್ಕೊಳ್ಳೋಕೆ ಜೂನ್ 2017ರ ಕಾವಲಿನಬುರುಜುವಿನಲ್ಲಿ ಇರೋ “ಮುಖ್ಯ ವಿವಾದಾಂಶದ ಮೇಲೆ ಗಮನವಿಡಿ” ಅನ್ನೋ ಲೇಖನ ನೋಡಿ.
c ಕೆಲವರ ಹೆಸರು ಬದಲಾಗಿದೆ.
d ಚಿತ್ರ ವಿವರಣೆ: ನಿರಾಶ್ರಿತರಾಗಿ ಬೇರೆ ದೇಶಕ್ಕೆ ಹೋಗಿರೋ ತಾಯಿ-ಮಗಳಿಗೆ ಅಲ್ಲಿರೋ ಸಹೋದರ ಸಹೋದರಿಯರು ಸಹಾಯ ಮಾಡ್ತಿದ್ದಾರೆ.