ಅಧ್ಯಯನ ಲೇಖನ 20
ನಾವು ಮಾಡೋ ಪ್ರಾರ್ಥನೆ ಹೇಗಿರಬೇಕು?
“ಆತನ ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ.”—ಕೀರ್ತ. 62:8.
ಗೀತೆ 57 ನನ್ನ ಹೃದಯದ ಧ್ಯಾನ
ಈ ಲೇಖನದಲ್ಲಿ ಏನಿದೆ? a
1. ಯೆಹೋವ ದೇವರ ಆಸೆ ಏನು? (ಚಿತ್ರನೂ ನೋಡಿ.)
ನಮಗೆ ಮನಸ್ಸನ್ನ ಹಗುರ ಮಾಡ್ಕೊಬೇಕು ಅಂತ ಅನಿಸಿದಾಗ ಯಾರ ಹತ್ರ ಹೇಳ್ಕೊಳ್ತೀವಿ? ಏನು ಮಾಡಬೇಕು ಅಂತ ಗೊತ್ತಾಗದೇ ಇದ್ದಾಗ ಯಾರ ಸಹಾಯ ಕೇಳ್ತೀವಿ? ಯೆಹೋವ ದೇವರ ಹತ್ರ ಅಲ್ವಾ? ನಾವು ಆತನಿಗೆ ಪ್ರಾರ್ಥನೆ ಮಾಡಬೇಕು ಅಂತ ಆತನೇ ಆಸೆಪಡ್ತಾನೆ. ಅದಕ್ಕೆ “ಯಾವಾಗ್ಲೂ ಪ್ರಾರ್ಥನೆ ಮಾಡಿ” ಅಂತ ನಮಗೆ ಹೇಳಿದ್ದಾನೆ. (1 ಥೆಸ. 5:17) ಯೆಹೋವ ಧಾರಾಳ ಮನಸ್ಸಿನ ದೇವರು. ಹಾಗಾಗಿ ನಾವು ಯಾವಾಗ ಬೇಕಾದ್ರೂ ಆತನ ಹತ್ರ ಮಾತಾಡಬಹುದು. ಎಷ್ಟು ಸಲ ಬೇಕಾದ್ರೂ ಪ್ರಾರ್ಥನೆ ಮಾಡಬಹುದು. ಯಾವುದ್ರ ಬಗ್ಗೆ ಬೇಕಾದ್ರೂ ಸಲಹೆ ಕೇಳಬಹುದು.—ಜ್ಞಾನೋ. 3:5, 6.
2. ಈ ಲೇಖನದಲ್ಲಿ ನಾವೇನು ಕಲಿತೀವಿ?
2 ಪ್ರಾರ್ಥನೆ ಒಂದು ದೊಡ್ಡ ಗಿಫ್ಟ್. ಅದಕ್ಕೆ ಯೆಹೋವನಿಗೆ ಥ್ಯಾಂಕ್ಸ್ ಹೇಳಬೇಕು. ಆದ್ರೆ ನಮಗೆ ಕೆಲವೊಮ್ಮೆ ಎಷ್ಟು ಕೆಲಸ ಇರುತ್ತೆ ಅಂದ್ರೆ ಪ್ರಾರ್ಥನೆ ಮಾಡೋಕೆ ಸಮಯನೇ ಸಿಗ್ತಿಲ್ಲ ಅಂತ ಅನಿಸಬಹುದು. ಇನ್ನು ಕೆಲವೊಮ್ಮೆ ‘ನಾನು ಇನ್ನೂ ಚೆನ್ನಾಗಿ ಪ್ರಾರ್ಥನೆ ಮಾಡೋಕೆ ಕಲಿಬೇಕು’ ಅಂತ ಅನಿಸಬಹುದು. ಅದಕ್ಕೆ ಬೈಬಲ್ ನಮಗೆ ಸಹಾಯ ಮಾಡುತ್ತೆ. ಪ್ರಾರ್ಥನೆ ಮಾಡೋಕೆ ಯೇಸು ಹೇಗೆ ಸಮಯ ಮಾಡ್ಕೊಂಡನು? ನಾವು ಹೇಗೆ ಸಮಯ ಮಾಡ್ಕೊಬಹುದು? ನಮ್ಮ ಪ್ರಾರ್ಥನೆ ಚೆನ್ನಾಗಿರಬೇಕು ಅಂದ್ರೆ ಯಾವ 5 ವಿಷ್ಯಗಳನ್ನ ಸೇರಿಸ್ಕೊಬೇಕು? ಅದನ್ನ ಈ ಲೇಖನದಲ್ಲಿ ನೋಡೋಣ.
ಪ್ರಾರ್ಥನೆ ಮಾಡೋಕೆ ಯೇಸು ಸಮಯ ಮಾಡ್ಕೊಂಡನು
3. ಯೇಸುಗೆ ಏನು ಚೆನ್ನಾಗಿ ಗೊತ್ತಿತ್ತು?
3 ನಮ್ಮ ಪ್ರಾರ್ಥನೆಗಳನ್ನ ಯೆಹೋವ ಆಸೆಯಿಂದ ಕೇಳಿಸ್ಕೊಳ್ತಾನೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ನಂಬಿಗಸ್ತ ಜನ್ರು ಪ್ರಾರ್ಥನೆ ಮಾಡಿದಾಗ ಯೆಹೋವ ಹೇಗೆ ಉತ್ರ ಕೊಟ್ಟನು ಅನ್ನೋದನ್ನ ಯೇಸು ಸ್ವರ್ಗದಲ್ಲಿ ಇದ್ದಾಗ ನೋಡಿದ್ದನು. ಉದಾಹರಣೆಗೆ ಹನ್ನ, ದಾವೀದ, ಎಲೀಯ, ಇನ್ನೂ ತುಂಬ ಜನ್ರು ಮಾಡಿದ ಪ್ರಾರ್ಥನೆಗೆ ದೇವರು ಉತ್ರ ಕೊಟ್ಟಿದ್ದನ್ನ ಯೇಸು ಕಣ್ಣಾರೆ ನೋಡಿದ್ದನು. (1 ಸಮು. 1:10, 11, 20; 1 ಅರ. 19:4-6; ಕೀರ್ತ. 32:5) ಅದಕ್ಕೆ ಆತನು ತನ್ನ ಶಿಷ್ಯರಿಗೆ ಯಾವಾಗ್ಲೂ ಪ್ರಾರ್ಥನೆ ಮಾಡೋಕೆ ಮತ್ತು ದೇವರು ಖಂಡಿತ ಉತ್ರ ಕೊಡ್ತಾನೆ ಅಂತ ನಂಬಿಕೆ ಇಡೋಕೆ ಕಲಿಸಿದನು.—ಮತ್ತಾ. 7:7-11.
4. ಪ್ರಾರ್ಥನೆ ಮಾಡೋ ವಿಷ್ಯದಲ್ಲಿ ನಾವು ಯೇಸುವಿಂದ ಏನು ಕಲಿಬಹುದು?
4 ಯೇಸು ಭೂಮಿಯಲ್ಲಿ ಸೇವೆ ಮಾಡ್ತಿದ್ದಾಗ ಯೆಹೋವನಿಗೆ ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ದನು. ಆತನು ಎಷ್ಟೇ ಬಿಜಿ಼ ಆಗಿದ್ರೂ, ಆತನ ಜೊತೆ ತುಂಬ ಜನ್ರು ಇದ್ರೂ ಪ್ರಾರ್ಥನೆ ಮಾಡೋಕೆ ಸಮಯ ಮಾಡ್ಕೊಳ್ತಿದ್ದನು. (ಮಾರ್ಕ 6:31, 45, 46) ಆತನು ಯಾರೂ ಇಲ್ಲದಿದ್ದ ಜಾಗಕ್ಕೆ ಹೋಗಿ ಪ್ರಾರ್ಥನೆ ಮಾಡ್ತಿದ್ದನು. ಅದಕ್ಕಾಗಿ ಬೆಳಿಗ್ಗೆ ಬೇಗ ಏಳ್ತಿದ್ದನು. (ಮಾರ್ಕ 1:35) ಒಮ್ಮೆ ಆತನು ಒಂದು ದೊಡ್ಡ ತೀರ್ಮಾನ ಮಾಡೋ ಮುಂಚೆ ಇಡೀ ರಾತ್ರಿ ಪ್ರಾರ್ಥನೆ ಮಾಡಿದ್ದನು. (ಲೂಕ 6:12, 13) ಆತನು ಸಾಯೋ ಹಿಂದಿನ ರಾತ್ರಿ ಕೂಡ ಪದೇ ಪದೇ ಪ್ರಾರ್ಥನೆ ಮಾಡಿದ್ದನು. ತನಗೆ ಕೊಟ್ಟ ಕೆಲಸನ ಮಾಡಿ ಮುಗಿಸೋಕೆ ಶಕ್ತಿ ಕೊಡಪ್ಪಾ ಅಂತ ಬೇಡ್ಕೊಂಡನು. (ಮತ್ತಾ. 26:39, 42, 44) ಹೀಗೆ ಆತನು ತನ್ನ ಶಿಷ್ಯರಿಗೆ ಯಾವಾಗ, ಹೇಗೆ ಪ್ರಾರ್ಥನೆ ಮಾಡಬೇಕು ಅಂತ ತೋರಿಸ್ಕೊಟ್ಟನು.
5. ಯೇಸು ತರ ನಾವು ಏನು ಮಾಡಬೇಕು?
5 ನಮಗೆ ತುಂಬ ಕೆಲಸಗಳು ಇರುತ್ತೆ. ನಾವು ಬಿಜಿ಼ಯಾಗಿ ಇರ್ತೀವಿ. ಆದ್ರೂ ನಾವು ಪ್ರಾರ್ಥನೆ ಮಾಡೋಕೆ ಯೇಸು ತರ ಸಮಯ ಮಾಡ್ಕೊಬೇಕು. ನಾವು ಬೆಳಿಗ್ಗೆ ಬೇಗ ಎದ್ದು ಪ್ರಾರ್ಥನೆ ಮಾಡಬಹುದು ಅಥವಾ ರಾತ್ರಿ ಮಲಗೋ ಮುಂಚೆ ಪ್ರಾರ್ಥನೆ ಮಾಡಬಹುದು. ಹೀಗೆ ಮಾಡಿದಾಗ ನಾವು ಯೆಹೋವನ ಹತ್ರ ಮಾತಾಡೋಕೆ ತುಂಬ ಇಷ್ಟಪಡ್ತೀವಿ ಅಂತ ತೋರಿಸ್ಕೊಡ್ತೀವಿ. ಯೆಹೋವ ದೇವರ ಜೊತೆ ಮನಸ್ಸುಬಿಚ್ಚಿ ಮಾತಾಡಬಹುದು ಅಂತ ಗೊತ್ತಾದಾಗ ಸಹೋದರಿ ಲಿನ್‌ಗೆ ತುಂಬ ಖುಷಿ ಆಯ್ತು. ಅವರು ಹೀಗೆ ಹೇಳ್ತಾರೆ: “ಯಾವಾಗ ಬೇಕಾದ್ರೂ ಯೆಹೋವನ ಹತ್ರ ಮಾತಾಡಬಹುದು ಅಂತ ಗೊತ್ತಾದಾಗ ಆತನು ನನ್ನ ಫ್ರೆಂಡ್ ಅಂತ ಅನಿಸ್ತು. ಅಷ್ಟೇ ಅಲ್ಲ, ನಾನು ಇನ್ನೂ ಚೆನ್ನಾಗಿ ಪ್ರಾರ್ಥನೆ ಮಾಡೋಕೆ ಕಲಿಬೇಕು ಅಂತ ಅನಿಸ್ತು.” ಇದೇ ತರ ತುಂಬ ಜನ್ರಿಗೆ ಅನಿಸಿದೆ. ನಾವೀಗ ನಮ್ಮ ಪ್ರಾರ್ಥನೆ ಚೆನ್ನಾಗಿರಬೇಕು ಅಂದ್ರೆ ಯಾವ 5 ವಿಷ್ಯಗಳನ್ನ ಸೇರಿಸ್ಕೊಬೇಕು ಅಂತ ನೋಡೋಣ.
ಪ್ರಾರ್ಥಿಸುವಾಗ 5 ವಿಷ್ಯಗಳನ್ನ ಸೇರಿಸ್ಕೊಳ್ಳಿ
6. ಪ್ರಕಟನೆ 4:10, 11ರಲ್ಲಿ ಇರೋ ತರ ಯೆಹೋವ ಏನನ್ನ ಪಡ್ಕೊಳ್ಳೋಕೆ ಯೋಗ್ಯನಾಗಿದ್ದಾನೆ?
6 ಯೆಹೋವನನ್ನ ಹಾಡಿ ಹೊಗಳಿ. ಅಪೊಸ್ತಲ ಯೋಹಾನ ಒಂದು ಅದ್ಭುತ ದರ್ಶನ ನೋಡಿದ. ಅದ್ರಲ್ಲಿ 24 ಹಿರಿಯರು ಯೆಹೋವನನ್ನ ಆರಾಧನೆ ಮಾಡ್ತಿದ್ರು. ಅವರು ಆತನಿಗೆ “ಗೌರವ, ಘನತೆ, ಶಕ್ತಿಯನ್ನ ಪಡ್ಕೊಳ್ಳೋಕೆ ನೀನೇ ಯೋಗ್ಯ” ಅಂತ ಹಾಡಿ ಹೊಗಳ್ತಾ ಇದ್ರು. (ಪ್ರಕಟನೆ 4:10, 11 ಓದಿ.) ದೇವದೂತರಿಗೂ ಯೆಹೋವನನ್ನ ಹಾಡಿ ಹೊಗಳೋಕೆ ದಿನಾಲೂ ಎಷ್ಟೋ ಕಾರಣಗಳು ಸಿಗುತ್ತೆ. ಯಾಕಂದ್ರೆ ಅವರೂ ಆತನ ಜೊತೆ ಸ್ವರ್ಗದಲ್ಲಿ ಇದ್ದಾರೆ. ಆತನನ್ನ ಚೆನ್ನಾಗಿ ತಿಳ್ಕೊಂಡಿದ್ದಾರೆ. ಆತನು ಮಾಡೋ ಕೆಲಸಗಳನ್ನ ಕಣ್ಣಾರೆ ನೋಡ್ತಿದ್ದಾರೆ. ಹೀಗೆ ಆತನ ಒಳ್ಳೊಳ್ಳೆ ಗುಣಗಳನ್ನ ನೋಡಿದಾಗ ಆತನನ್ನ ಹಾಡಿ ಹೊಗಳಬೇಕು ಅಂತ ಅವ್ರಿಗೆ ಮನಸ್ಸಾಗುತ್ತೆ.—ಯೋಬ 38:4-7.
7. ನಾವು ಯೆಹೋವನನ್ನ ಯಾಕೆ ಹಾಡಿ ಹೊಗಳಬೇಕು?
7 ನಾವು ಪ್ರಾರ್ಥನೆ ಮಾಡುವಾಗ ಯೆಹೋವನನ್ನ ಮನಸ್ಸಾರೆ ಹಾಡಿ ಹೊಗಳಬೇಕು. ಬೈಬಲ್ ಓದುವಾಗ ನಿಮಗೆ ಆತನಲ್ಲಿರೋ ಯಾವ ಗುಣ ಇಷ್ಟ ಆಯ್ತು, ಯಾಕೆ ಇಷ್ಟ ಆಯ್ತು ಅಂತ ಯೋಚಿಸಿ. (ಯೋಬ 37:23; ರೋಮ. 11:33) ಅದನ್ನ ಆತನಿಗೆ ಹೇಳಿ. ಯೆಹೋವ ನಮ್ಮನ್ನ, ನಮ್ಮ ಸಹೋದರ ಸಹೋದರಿಯರನ್ನ ಎಷ್ಟು ಚೆನ್ನಾಗಿ ನೋಡ್ಕೊಳ್ತಾ ಇದ್ದಾನೆ ಅಲ್ವಾ? ಆತನು ನಮ್ಮನ್ನ ಕಾಪಾಡ್ತಿದ್ದಾನೆ, ಸಹಾಯ ಮಾಡ್ತಿದ್ದಾನೆ. ಇದಕ್ಕೆಲ್ಲ ಆತನನ್ನ ಹಾಡಿ ಹೊಗಳಬೇಕು ಅಂತ ನಮಗೆ ಅನಿಸುತ್ತೆ ಅಲ್ವಾ?—1 ಸಮು. 1:27; 2:1, 2.
8. ನಾವು ಯಾಕೆ ಯೆಹೋವನಿಗೆ ಥ್ಯಾಂಕ್ಸ್ ಹೇಳಬೇಕು? (1 ಥೆಸಲೊನೀಕ 5:18)
8 ಯೆಹೋವನಿಗೆ ಥ್ಯಾಂಕ್ಸ್ ಹೇಳಿ. ಯೆಹೋವನಿಗೆ ಥ್ಯಾಂಕ್ಸ್ ಹೇಳೋಕೆ ಒಂದಲ್ಲ, ಎರಡಲ್ಲ ಸಾವಿರಾರು ಕಾರಣಗಳಿವೆ. (1 ಥೆಸಲೊನೀಕ 5:18 ಓದಿ.) ನಮ್ಮ ಹತ್ರ ಇರೋ ಒಳ್ಳೇದನ್ನೆಲ್ಲಾ ಯೆಹೋವನೇ ಕೊಟ್ಟಿರೋದು. ಆ ಗಿಫ್ಟ್‌ಗಳನ್ನ ಕೊಟ್ಟಿರೋದಕ್ಕೆ ನಾವು ಥ್ಯಾಂಕ್ಸ್ ಹೇಳಬೇಕು. (ಯಾಕೋ. 1:17) ಆತನು ನಮಗೆ ಏನೆಲ್ಲ ಕೊಟ್ಟಿದ್ದಾನೆ ಅಂತ ಸ್ವಲ್ಪ ಯೋಚ್ನೆ ಮಾಡಿ. ಸುಂದರವಾದ ಭೂಮಿ ಕೊಟ್ಟಿದ್ದಾನೆ. ಅದ್ರಲ್ಲಿ ನಮಗೆ ಬೇಕಾಗಿರೋದನ್ನೆಲ್ಲ ಸೃಷ್ಟಿ ಮಾಡಿದ್ದಾನೆ. ನಮಗೆ ಜೀವ ಕೊಟ್ಟಿದ್ದಾನೆ, ಒಳ್ಳೇ ಕುಟುಂಬ ಕೊಟ್ಟಿದ್ದಾನೆ, ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರನ್ನ ಕೊಟ್ಟಿದ್ದಾನೆ. ಮುಂದೆ ಹೊಸ ಲೋಕ ತರ್ತೀನಿ ಅಂತಾನೂ ಹೇಳಿದ್ದಾನೆ. ಆತನ ಜೊತೆ ಫ್ರೆಂಡ್ ಆಗೋ ಅವಕಾಶನೂ ಕೊಟ್ಟಿದ್ದಾನೆ. ಇದಕ್ಕೆಲ್ಲ ನಾವು ಆತನಿಗೆ ಥ್ಯಾಂಕ್ಸ್ ಹೇಳಲೇಬೇಕಲ್ವಾ?
9. ನಾವು ಯೆಹೋವನಿಗೆ ಥ್ಯಾಂಕ್ಸ್ ಹೇಳೋ ಮನಸ್ಸನ್ನ ಯಾಕೆ ಬೆಳೆಸ್ಕೊಬೇಕು?
9 ಸ್ವಲ್ಪ ಸಮಯ ಮಾಡ್ಕೊಂಡು ನಮಗೋಸ್ಕರ ಯೆಹೋವ ಏನೆಲ್ಲಾ ಮಾಡಿದ್ದಾನೆ ಅಂತ ಆಗಾಗ ಯೋಚ್ನೆ ಮಾಡಬೇಕು. ಅದು ತುಂಬ ಮುಖ್ಯ. ಯಾಕಂದ್ರೆ ನಮ್ಮ ಸುತ್ತಮುತ್ತ ಇರೋ ಜನ್ರು ತಮ್ಮ ಹತ್ರ ಏನಿದ್ಯೋ ಅದ್ರಲ್ಲಿ ಸಂತೋಷ ಪಡಲ್ಲ. ಅದು ಬೇಕು ಇದು ಬೇಕು ಅಂತಾನೇ ಯೋಚ್ನೆ ಮಾಡ್ತಾ ಇರ್ತಾರೆ. ನಾವು ಹುಷಾರಾಗಿ ಇಲ್ಲಾಂದ್ರೆ ನಾವೂ ಅವ್ರ ತರ ಆಗಿಬಿಡ್ತೀವಿ. ಆಮೇಲೆ ಯೆಹೋವನ ಹತ್ರ ‘ನನಗೆ ಅದು ಕೊಡು, ಇದು ಕೊಡು’ ಅಂತ ಬರೀ ಕೇಳ್ತಾನೇ ಇರ್ತೀವಿ. ಹಾಗಾಗಿ ಯೆಹೋವ ನಮಗಾಗಿ ಏನೆಲ್ಲ ಮಾಡಿದ್ದಾನೋ ಅದಕ್ಕೆ ಯಾವಾಗ್ಲೂ ಥ್ಯಾಂಕ್ಸ್ ಹೇಳೋ ಮನಸ್ಸನ್ನ ಬೆಳೆಸ್ಕೊಬೇಕು.—ಲೂಕ 6:45.
10. ಯೆಹೋವನಿಗೆ ಥ್ಯಾಂಕ್ಸ್ ಹೇಳೋ ಮನಸ್ಸನ್ನ ಬೆಳೆಸ್ಕೊಂಡಿದ್ರಿಂದ ಒಬ್ಬ ಸಹೋದರಿಗೆ ಏನು ಪ್ರಯೋಜನ ಆಯ್ತು? (ಚಿತ್ರನೂ ನೋಡಿ.)
10 ಯೆಹೋವನಿಗೆ ಥ್ಯಾಂಕ್ಸ್ ಹೇಳೋ ಮನಸ್ಸು ನಮಗಿದ್ರೆ ಏನೇ ಕಷ್ಟ ಬಂದ್ರೂ ಸಹಿಸ್ಕೊಳ್ಳೋಕೆ ಆಗುತ್ತೆ. ಇದು ನಮಗೆ ಸಹೋದರಿ ಕ್ಯುಂಗ್-ಸೂಕ್ ಅವ್ರ ಅನುಭವದಿಂದ ಗೊತ್ತಾಗುತ್ತೆ. ಅವ್ರ ಅನುಭವ ಜನವರಿ 15, 2015ರ ಕಾವಲಿನಬುರುಜುವಿನಲ್ಲಿ ಬಂದಿತ್ತು. ಅವ್ರಿಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಅಂತ ತುಂಬ ಲೇಟಾಗಿ ಗೊತ್ತಾಯ್ತು. “ಈ ಆರೋಗ್ಯದ ಸಮಸ್ಯೆ ನನ್ನನ್ನು ಪೂರ್ತಿ ಅಲುಗಾಡಿಸಿಬಿಟ್ಟಿತು. ಎಲ್ಲ ಕಳಕೊಂಡುಬಿಟ್ಟೆ ಅಂತ ನನಗನಿಸಿತು. ತುಂಬ ಹೆದರಿಹೋದೆ” ಅಂತ ಅವರು ಹೇಳಿದ್ರು. ಈ ಕಷ್ಟಗಳನ್ನೆಲ್ಲಾ ಅವರು ಹೇಗೆ ಸಹಿಸ್ಕೊಂಡ್ರು? ಅವರು ದಿನಾ ಮಲಗೋ ಮುಂಚೆ ಟೆರೆಸ್‌ಗೆ ಹೋಗಿ ಯೆಹೋವನಿಗೆ ಜೋರಾಗಿ ಪ್ರಾರ್ಥನೆ ಮಾಡ್ತಿದ್ರು. ಆಗ ಆ ದಿನ ಅವರು ಸಂತೋಷವಾಗಿ ಇರೋಕೆ ಯೆಹೋವ ಮಾಡಿದ ವಿಷ್ಯಗಳ ಬಗ್ಗೆ ಹೇಳಿ ಆತನಿಗೆ ಥ್ಯಾಂಕ್ಸ್ ಹೇಳ್ತಿದ್ರು. ಇದ್ರಿಂದ ಅವ್ರ ಮನಸ್ಸಿಗೆ ನೆಮ್ಮದಿ ಸಿಗ್ತಿತ್ತು. ಯೆಹೋವನ ಮೇಲೆ ಪ್ರೀತಿನೂ ಜಾಸ್ತಿ ಆಗ್ತಿತ್ತು. ಕಷ್ಟದಲ್ಲಿ ಇರುವಾಗ ಯೆಹೋವ ತನ್ನವರಿಗೆ ಹೇಗೆಲ್ಲ ಸಹಾಯ ಮಾಡ್ತಾನೆ ಅಂತ ಅವರು ಅರ್ಥ ಮಾಡ್ಕೊಂಡ್ರು. ಕಷ್ಟಗಳಿಗಿಂತ ಯೆಹೋವ ಕೊಡೋ ಆಶೀರ್ವಾದಗಳೇ ಜಾಸ್ತಿ ಇರುತ್ತೆ ಅಂತ ಅವರು ತಿಳ್ಕೊಂಡ್ರು. ಆ ಸಹೋದರಿ ತರ ನಾವು ಕೂಡ ಯೆಹೋವನಿಗೆ ಯಾವಾಗ್ಲೂ ಥ್ಯಾಂಕ್ಸ್ ಹೇಳ್ತಾ ಇದ್ರೆ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗುತ್ತೆ. ಚಿಂತೆ ಅನ್ನೋ ಕಡಲಲ್ಲಿ ಮುಳುಗಿ ಹೋಗಲ್ಲ.
11. ಯೇಸು ಸ್ವರ್ಗಕ್ಕೆ ಹೋದ್ಮೇಲೆ ಶಿಷ್ಯರಿಗೆ ಯಾಕೆ ಧೈರ್ಯ ಬೇಕಾಗಿತ್ತು?
11 ಸಿಹಿಸುದ್ದಿ ಸಾರೋಕೆ ಧೈರ್ಯ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಳ್ಳಿ. ಯೇಸುವಿನ ಶಿಷ್ಯರ ಉದಾಹರಣೆ ನೋಡಿ. ತನ್ನ ಬಗ್ಗೆ ಸಾಕ್ಷಿ ಕೊಡಬೇಕು ಅಂತ ಯೇಸು ಅವ್ರಿಗೆ ಹೇಳಿದ್ದನು. ಆತನು ಸ್ವರ್ಗಕ್ಕೆ ಹೋಗೋ ಮುಂಚೆ “ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂದನು. (ಅ. ಕಾ. 1:8; ಲೂಕ 24:46-48) ಶಿಷ್ಯರು ಸಾರೋಕೆ ಶುರುಮಾಡಿದ ಸ್ವಲ್ಪ ದಿನದಲ್ಲೇ ಅಪೊಸ್ತಲ ಪೇತ್ರ ಮತ್ತು ಯೋಹಾನನನ್ನ ಯೆಹೂದಿ ಧರ್ಮಗುರುಗಳು ಬಂಧಿಸಿದ್ರು. ಹಿರೀಸಭೆ ಮುಂದೆ ತಂದು ವಿಚಾರಣೆ ಮಾಡಿದ್ರು. ಇನ್ಮೇಲೆ ಯೇಸು ಬಗ್ಗೆ ಮಾತಾಡಲೇಬಾರದು ಅಂತ ಹೇಳಿ ಬೆದರಿಕೆ ಹಾಕಿದ್ರು. (ಅ. ಕಾ. 4:18, 21) ಆಗ ಪೇತ್ರ ಮತ್ತು ಯೋಹಾನ ಏನು ಮಾಡಿದ್ರು?
12. ಅಪೊಸ್ತಲರ ಕಾರ್ಯ 4:29, 31 ಹೇಳೋ ತರ ಶಿಷ್ಯರು ಏನು ಮಾಡಿದ್ರು?
12 ಪೇತ್ರ ಮತ್ತು ಯೋಹಾನ ಯೆಹೂದಿ ಧರ್ಮಗುರುಗಳಿಗೆ “ದೇವರ ಮಾತನ್ನ ಬಿಟ್ಟು ನಿಮ್ಮ ಮಾತು ಕೇಳೋದು ದೇವರ ದೃಷ್ಟಿಯಲ್ಲಿ ಸರಿನಾ? ನೀವೇ ಯೋಚನೆ ಮಾಡಿ. ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ” ಅಂದ್ರು. (ಅ. ಕಾ. 4:19, 20) ಪೇತ್ರ, ಯೋಹಾನ ಬಿಡುಗಡೆ ಆದ್ಮೇಲೆ ಶಿಷ್ಯರು ಯೆಹೋವನಿಗೆ ಪ್ರಾರ್ಥನೆ ಮಾಡಿದ್ರು. “ನಿನ್ನ ಸೇವಕರು ನಿನ್ನ ಮಾತನ್ನ ಧೈರ್ಯವಾಗಿ ಹೇಳ್ತಾ ಇರೋಕೆ ಸಹಾಯ ಮಾಡು” ಅಂತ ಬೇಡ್ಕೊಂಡ್ರು. ಯೆಹೋವ ಅವ್ರಿಗೆ ಧೈರ್ಯ ಕೊಟ್ಟನು.—ಅಪೊಸ್ತಲರ ಕಾರ್ಯ 4:29, 31 ಓದಿ.
13. ಸಹೋದರ ಜಿನ್-ಹ್ಯೂಕ್ ಅವ್ರಿಂದ ನಾವೇನು ಕಲಿಬಹುದು?
13 ಸಿಹಿಸುದ್ದಿ ಸಾರಬಾರದು ಅಂತ ಸರ್ಕಾರ ಹೇಳಿದ್ರೂ ನಾವು ಯೇಸುವಿನ ಶಿಷ್ಯರ ತರ ಸಾರುತ್ತಾ ಇರ್ತೀವಿ. ಸಹೋದರ ಜಿನ್-ಹ್ಯೂಕ್ ಕೂಡ ಇದನ್ನೇ ಮಾಡಿದ್ರು. ಅವರು ಮಿಲಿಟರಿಗೆ ಸೇರದೇ ಇದ್ದಿದ್ದಕ್ಕೆ ಅವ್ರನ್ನ ಜೈಲಿಗೆ ಹಾಕಿದ್ರು. ಅಲ್ಲಿ ಅವ್ರಿಗೆ ಏಕಾಂತ ಬಂಧನದಲ್ಲಿದ್ದ ಕೈದಿಗಳನ್ನ ನೋಡ್ಕೊಳ್ಳೋ ಕೆಲಸ ಕೊಟ್ರು. ‘ಅವ್ರ ಹತ್ರ ಕೆಲಸದ ವಿಷ್ಯ ಬಿಟ್ಟು ಬೇರೆ ಯಾವ ವಿಷ್ಯನೂ ಮಾತಾಡಬಾರದು. ಬೈಬಲ್ ಬಗ್ಗೆ, ದೇವರ ಬಗ್ಗೆ ಮಾತೇ ಎತ್ತಬಾರದು’ ಅಂತ ಜೈಲಿನ ಅಧಿಕಾರಿಗಳು ಆ ಸಹೋದರನಿಗೆ ಹೇಳಿದ್ರು. ಆದ್ರೆ ಆ ಸಹೋದರ ಯೆಹೋವನ ಹತ್ರ ‘ನನಗೆ ಅವಕಾಶ ಸಿಕ್ಕಿದಾಗೆಲ್ಲ ನಿನ್ನ ಬಗ್ಗೆ ಮಾತಾಡೋಕೆ ಧೈರ್ಯ ಕೊಡು. ಹುಷಾರಾಗಿ ಹೇಗೆ ಮಾತಾಡಬೇಕು ತೋರಿಸ್ಕೊಡು’ ಅಂತ ಬೇಡ್ಕೊಂಡ್ರು. (ಅ. ಕಾ. 5:29) “ಆಗ ಯೆಹೋವ ನನಗೆ ಧೈರ್ಯ ಮತ್ತು ವಿವೇಕ ಕೊಟ್ರು. ಇದ್ರಿಂದ ನಾನು ಬರೀ ಐದೇ ನಿಮಿಷದಲ್ಲಿ ಬೈಬಲ್ ಸ್ಟಡಿಗಳನ್ನ ಮಾಡೋ ಉಪಾಯ ತಿಳ್ಕೊಂಡೆ. ಜೈಲ್ ಕಂಬಿ ಹತ್ರಾನೇ ನಿತ್ಕೊಂಡು ತುಂಬ ಜನ್ರಿಗೆ ಈ ತರ ಬೈಬಲ್ ಸ್ಟಡಿಗಳನ್ನ ಶುರುಮಾಡಿದೆ. ರಾತ್ರಿ ಪತ್ರ ಬರೆದು ಮಾರನೇ ದಿನ ಕೈದಿಗಳಿಗೆ ಕೊಡ್ತಾ ಇದ್ದೆ” ಅಂತ ಆ ಸಹೋದರ ಹೇಳ್ತಾರೆ. ಸಹೋದರ ಜಿನ್-ಹ್ಯೂಕ್ ತರ ನಾವು ಕೂಡ ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ನಂಬಬೇಕು. ಸಿಹಿಸುದ್ದಿ ಸಾರೋಕೆ ಧೈರ್ಯ, ವಿವೇಕ ಕೊಡಪ್ಪಾ ಅಂತ ಬೇಡ್ಕೊಬೇಕು.
14. ಕಷ್ಟಗಳನ್ನ ನಿಭಾಯಿಸೋಕೆ ನಾವೇನು ಮಾಡಬೇಕು? (ಕೀರ್ತನೆ 37:3, 5)
14 ಕಷ್ಟಗಳನ್ನ ನಿಭಾಯಿಸೋಕೆ ಯೆಹೋವನ ಹತ್ರ ಸಹಾಯ ಕೇಳಿ. ನಮಗೆ ಯಾವೆಲ್ಲ ಕಷ್ಟಗಳು ಬರಬಹುದು? ನಮ್ಮ ಆರೋಗ್ಯ ಹಾಳಾಗಬಹುದು, ಬೇಜಾರಲ್ಲಿ ಮುಳುಗಿ ಹೋಗಬಹುದು, ನಮ್ಮವರು ಯಾರಾದ್ರೂ ತೀರಿಹೋಗಬಹುದು, ಕುಟುಂಬದಲ್ಲಿ ಏನಾದ್ರೂ ಸಮಸ್ಯೆ ಬರಬಹುದು ಅಥವಾ ಹಿಂಸೆ ಬರಬಹುದು. ಈ ತರ ಸಮಸ್ಯೆಗಳು ಬಂದಾಗ ಜೀವನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಇದ್ರ ಜೊತೆಗೆ ನಾವಿರೋ ಜಾಗದಲ್ಲಿ ಅಂಟುರೋಗ ಇದ್ರೆ ಅಥವಾ ಯುದ್ಧ ನಡೀತಾ ಇದ್ರೆ ಜೀವನ ಮಾಡೋಕೆ ಇನ್ನೂ ಕಷ್ಟ ಆಗುತ್ತೆ. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಯೆಹೋವನ ಹತ್ರ ಎಲ್ಲಾ ಹೇಳ್ಕೊಬೇಕು. ಒಬ್ಬ ಸ್ನೇಹಿತನ ಹತ್ರ ಮನಸ್ಸುಬಿಚ್ಚಿ ಮಾತಾಡೋ ತರ ಮಾತಾಡಬೇಕು. ಆಗ ಯೆಹೋವನೇ ನಮ್ಮ “ಪರವಾಗಿ ಹೆಜ್ಜೆ ತಗೊತಾನೆ.”—ಕೀರ್ತನೆ 37:3, 5 ಓದಿ.
15. ‘ಕಷ್ಟಗಳನ್ನ ಸಹಿಸ್ಕೊಳ್ಳೋಕೆ’ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ? ಒಂದು ಉದಾಹರಣೆ ಕೊಡಿ.
15 ನಾವು ಪಟ್ಟುಬಿಡದೆ ಪ್ರಾರ್ಥನೆ ಮಾಡಿದ್ರೆ ‘ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗುತ್ತೆ.’ (ರೋಮ. 12:12) ನಾವು ಯಾವ ಕಷ್ಟದಲ್ಲಿ ಇದ್ದೀವಿ ಅಂತ ಯೆಹೋವನಿಗೆ ಗೊತ್ತು. ‘ಸಹಾಯಕ್ಕಾಗಿ ನಾವಿಡೋ ಮೊರೆಯನ್ನ ಆತನು ಕೇಳಿಸ್ಕೊಳ್ತಾನೆ.’ (ಕೀರ್ತ. 145:18, 19) 29 ವರ್ಷದ ಪಯನೀಯರ್ ಸಹೋದರಿ ಕ್ರಿಸ್ಟಿ ಅವ್ರ ಜೀವನದಲ್ಲಿ ಇದು ನಿಜ ಆಯ್ತು. ದಿಢೀರಂತ ಅವ್ರಿಗೆ ಹುಷಾರಿಲ್ಲದೆ ಆಯ್ತು. ಇದ್ರಿಂದ ಅವ್ರಿಗೆ ಖಿನ್ನತೆ ಕಾಯಿಲೆನೂ ಬಂತು. ಸ್ವಲ್ಪ ದಿನ ಆದ್ಮೇಲೆ ಅವ್ರ ತಾಯಿಗೂ ಒಂದು ದೊಡ್ಡ ಕಾಯಿಲೆ ಬಂತು. ಆಗ ಸಹೋದರಿ ಕ್ರಿಸ್ಟಿ ಏನು ಮಾಡಿದ್ರು? “ನನಗೆ ಇದನ್ನೆಲ್ಲ ಸಹಿಸ್ಕೊಳ್ಳೋಕೆ ಶಕ್ತಿ ಕೊಡಪ್ಪಾ ಅಂತ ಯೆಹೋವನ ಹತ್ರ ಒಂದೊಂದು ದಿನನೂ ಅಂಗಲಾಚಿ ಬೇಡ್ಕೊಳ್ತಾ ಇದ್ದೆ. ಕೂಟಗಳಿಗೆ ತಪ್ಪದೆ ಹೋಗ್ತಿದ್ದೆ, ಬೈಬಲ್ ಓದಿ ಜಾಸ್ತಿ ಸಂಶೋಧನೆ ಮಾಡ್ತಿದ್ದೆ. ಇದನ್ನೆಲ್ಲ ಮಾಡಿದಾಗ ನನ್ನ ಕಾಯಿಲೆ ತಕ್ಷಣ ಮಾಯ ಆಗಲಿಲ್ಲ, ನಿಜ. ಆದ್ರೆ ನಾನು ಪ್ರಾರ್ಥನೆ ಮಾಡಿದಾಗೆಲ್ಲ ಯೆಹೋವ ನನ್ನ ಜೊತೆನೇ ಇದ್ದಾನೆ ಅಂತ ಅನಿಸ್ತಿತ್ತು. ನನ್ನ ಮನಸ್ಸಿಗೆ ಸಮಾಧಾನ, ನೆಮ್ಮದಿ ಸಿಗ್ತಿತ್ತು. ನನ್ನ ಕಷ್ಟಗಳನ್ನೆಲ್ಲ ಸಹಿಸ್ಕೊಳ್ಳೋಕೆ ಆಯ್ತು” ಅಂತ ಅವರು ಹೇಳಿದ್ರು. ಹಾಗಾಗಿ “ದೇವಭಕ್ತಿ ಇರೋ ಜನ್ರನ್ನ ಕಷ್ಟದಿಂದ ಹೇಗೆ ಕಾಪಾಡಬೇಕು ಅಂತ ಯೆಹೋವನಿಗೆ ಗೊತ್ತು” ಅನ್ನೋದನ್ನ ನಾವು ಯಾವಾಗ್ಲೂ ನೆನಪಲ್ಲಿಡಬೇಕು.—2 ಪೇತ್ರ 2:9.
16. ಕೆಟ್ಟ ಆಸೆಗಳನ್ನ ತಡಿಯೋಕೆ ನಮಗೆ ಯೆಹೋವನ ಸಹಾಯ ಯಾಕೆ ಬೇಕು?
16 ಕೆಟ್ಟ ಆಸೆಗಳನ್ನ ತಡಿಯೋಕೆ ಯೆಹೋವನ ಹತ್ರ ಸಹಾಯ ಕೇಳಿ. ನಾವು ಅಪರಿಪೂರ್ಣರಾಗಿ ಇರೋದ್ರಿಂದ ಕೆಟ್ಟ ಆಸೆಗಳು ನಮಗೆ ಬರೋದು ಸಹಜ. ಅಷ್ಟೇ ಅಲ್ಲ, ನಮ್ಮಲ್ಲಿ ಆ ಕೆಟ್ಟ ಆಸೆಗಳು ಇನ್ನೂ ಜಾಸ್ತಿ ಬರೋ ತರ ಸೈತಾನ ಮಾಡ್ತಾನೆ. ಅದಕ್ಕೆ ಅವನು ಇವತ್ತಿರೋ ಮನರಂಜನೆಯಲ್ಲಿ ಅನೈತಿಕ ವಿಷ್ಯಗಳನ್ನ ತುಂಬಿಸಿಟ್ಟಿದ್ದಾನೆ. ಇಂಥ ಮನರಂಜನೆಯಿಂದ ನಮ್ಮ ಮನಸ್ಸು ಹಾಳಾಗುತ್ತೆ. ಆಮೇಲೆ ನಾವು ಯೆಹೋವನಿಗೆ ಇಷ್ಟ ಇಲ್ಲದಿರೋ ದೊಡ್ಡ ದೊಡ್ಡ ತಪ್ಪುಗಳನ್ನ ಮಾಡಿಬಿಡ್ತೀವಿ.—ಮಾರ್ಕ 7:21-23; ಯಾಕೋ. 1:14, 15.
17. ಕೆಟ್ಟದನ್ನ ಮಾಡದೇ ಇರೋಕೆ ಸಹಾಯ ಮಾಡು ಅಂತ ಬೇಡ್ಕೊಂಡ ಮೇಲೆ ನಾವು ಇನ್ನೂ ಏನು ಮಾಡಬೇಕು? (ಚಿತ್ರನೂ ನೋಡಿ.)
17 ಕೆಟ್ಟದ್ದನ್ನ ಮಾಡದೇ ಇರೋಕೆ ನಮಗೆ ಯೆಹೋವನ ಸಹಾಯ ಬೇಕೇ ಬೇಕು. ಅದಕ್ಕೇ ಯೇಸು “ಕಷ್ಟ ಬಂದಾಗ ಸೋತು ಹೋಗದ ಹಾಗೆ ಕಾಪಾಡು. ಸೈತಾನನಿಂದ ನಮ್ಮನ್ನ ರಕ್ಷಿಸು” ಅಂತ ಪ್ರಾರ್ಥನೆ ಮಾಡೋಕೆ ಹೇಳ್ಕೊಟ್ಟನು. (ಮತ್ತಾ. 6:13) ಯೆಹೋವ ನಮಗೆ ಸಹಾಯ ಮಾಡಬೇಕಂದ್ರೆ ನಾವು ಏನೇನು ಮಾಡಬೇಕು? ಮೊದಲು, ಆತನ ಹತ್ರ ಸಹಾಯ ಕೇಳಬೇಕು. ಆಮೇಲೆ ಆ ಕೆಟ್ಟ ಆಸೆಗಳು ಬರೋ ತರ ಮಾಡೋ ವಿಷ್ಯಗಳಿಂದ ನಾವು ದೂರ ಇರಬೇಕು. ಇಂಥ ಕೆಟ್ಟ ಆಸೆಗಳನ್ನ ಜಾಸ್ತಿ ಮಾಡೋ ವಿಷ್ಯಗಳೇ ಈ ಲೋಕದಲ್ಲಿ ತುಂಬ್ಕೊಂಡಿದೆ. ಜನ್ರಿಗೂ ಅಂಥ ಮನರಂಜನೆನೇ ಇಷ್ಟ. ಆದ್ರೆ ನಾವು ಅಂಥ ವಿಷ್ಯಗಳನ್ನ ಓದಬಾರದು, ನೋಡಬಾರದು, ಕೇಳಿಸ್ಕೊಬಾರದು. (ಕೀರ್ತ. 97:10) ಬದಲಿಗೆ ಒಳ್ಳೇ ವಿಷ್ಯಗಳನ್ನ ಮನಸ್ಸಲ್ಲಿ ತುಂಬಿಸ್ಕೊಬೇಕು. ಅದಕ್ಕೆ ಬೈಬಲ್ ಓದಬೇಕು, ಸಂಶೋಧನೆ ಮಾಡಬೇಕು, ಕೂಟಗಳಿಗೆ ಹೋಗಬೇಕು, ಸಿಹಿಸುದ್ದಿ ಸಾರಬೇಕು. ಯೆಹೋವ ದೇವರು ಕೂಡ ನಮಗೆ ಸಹಿಸ್ಕೊಳ್ಳೋಕೆ ಆಗದೆ ಇರೋಷ್ಟರ ಮಟ್ಟಿಗೆ ಕೆಟ್ಟ ಆಸೆಗಳು ಬರೋಕೆ ಬಿಡಲ್ಲ ಅಂತ ಮಾತು ಕೊಟ್ಟಿದ್ದಾನೆ.—1 ಕೊರಿಂ. 10:12, 13.
18. ಈ ಲೇಖನದಲ್ಲಿ ಏನೆಲ್ಲಾ ಕಲಿತ್ವಿ?
18 ನಾವು ಯೆಹೋವನಿಗೆ ನಿಯತ್ತಾಗಿ ಇರೋಕೆ ಪ್ರಾರ್ಥನೆ ಮಾಡ್ತಾ ಇರಬೇಕು. ಯಾಕಂದ್ರೆ ನಾವು ಜೀವಿಸ್ತಾ ಇರೋದು ಕೊನೇ ದಿನಗಳಲ್ಲಿ. ಹಾಗಾಗಿ ದಿನಾ ಪ್ರಾರ್ಥನೆ ಮಾಡೋಕೆ ಸಮಯ ಮಾಡ್ಕೊಳ್ಳಿ. ಯೆಹೋವನ ಹತ್ರ “ಮನಸ್ಸನ್ನ ತೋಡ್ಕೊಳ್ಳಿ.” (ಕೀರ್ತ. 62:8) ಆತನನ್ನ ಹಾಡಿ ಹೊಗಳಿ. ಆತನು ನಿಮಗೋಸ್ಕರ ಏನೆಲ್ಲ ಮಾಡಿದ್ದಾನೋ ಅದಕ್ಕೆಲ್ಲ ಥ್ಯಾಂಕ್ಸ್ ಹೇಳಿ. ಸಿಹಿಸುದ್ದಿ ಸಾರೋಕೆ ಧೈರ್ಯ ಕೊಡಪ್ಪಾ ಅಂತ ಬೇಡ್ಕೊಳ್ಳಿ. ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಸಹಾಯ ಮಾಡು ಅಂತ ಕೇಳಿ. ಕೆಟ್ಟ ಆಸೆಗಳಿಂದ ನಮ್ಮನ್ನ ಕಾಪಾಡಪ್ಪಾ ಅಂತ ಪ್ರಾರ್ಥನೆ ಮಾಡಿ. ಯೆಹೋವನ ಹತ್ರ ಮಾತಾಡೋಕೆ ಕೊಡೋ ಸಮಯವನ್ನ ಬೇರೆ ಯಾವುದಕ್ಕೂ ಯಾರಿಗೂ ಕೊಡಬೇಡಿ. ಇದನ್ನೆಲ್ಲ ಮಾಡಿದ್ರೆ ಯೆಹೋವ ನಮ್ಮ ಪ್ರಾರ್ಥನೆ ಕೇಳಿ ಉತ್ರ ಕೊಡ್ತಾನೆ. ಆದ್ರೆ ಹೇಗೆ ಅನ್ನೋದನ್ನ ಮುಂದಿನ ಲೇಖನದಲ್ಲಿ ನೋಡೋಣ.
ಗೀತೆ 6 ದೇವರ ಸೇವಕನ ಪ್ರಾರ್ಥನೆ
a ನಾವು ಯೆಹೋವನಿಗೆ ಮಾಡೋ ಪ್ರಾರ್ಥನೆ ನಮ್ಮ ಪ್ರಾಣ ಸ್ನೇಹಿತನಿಗೆ ಬರೆಯೋ ಪತ್ರದ ತರ ಇರಬೇಕು. ಆದ್ರೆ ಕೆಲವೊಮ್ಮೆ ಪ್ರಾರ್ಥನೆ ಮಾಡೋಕೆ ನಮಗೆ ಸಮಯ ಸಿಗಲ್ಲ. ಇನ್ನು ಕೆಲವೊಮ್ಮೆ ಏನು ಹೇಳಬೇಕು ಅಂತಾನೇ ಗೊತ್ತಾಗಲ್ಲ. ಆಗೆಲ್ಲ ನಾವೇನು ಮಾಡಬೇಕು?