ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 22

‘ಪವಿತ್ರ ದಾರಿಯಲ್ಲಿ’ ನಡೀತಾ ಇರೋಣ

‘ಪವಿತ್ರ ದಾರಿಯಲ್ಲಿ’ ನಡೀತಾ ಇರೋಣ

“ಒಂದು ಹೆದ್ದಾರಿ ಇರುತ್ತೆ, . . . ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ.”—ಯೆಶಾ. 35:8.

ಗೀತೆ 26 ಓ ದೇವರೊಂದಿಗೆ ನಡೆ!

ಈ ಲೇಖನದಲ್ಲಿ ಏನಿದೆ? a

1-2. ಬಾಬೆಲಲ್ಲಿದ್ದ ಯೆಹೂದ್ಯರು ಯಾವ ಮುಖ್ಯ ನಿರ್ಧಾರ ಮಾಡಬೇಕಿತ್ತು? (ಎಜ್ರ 1:2-4)

 ಬಾಬೆಲಲ್ಲಿ ಯೆಹೂದ್ಯರು 70 ವರ್ಷ ಕೈದಿಗಳಾಗಿ ಇದ್ರು. ಆಮೇಲೆ ಅದರ ರಾಜ, ಯೆಹೂದ್ಯರು ತಮ್ಮ ತಾಯ್ನಾಡಿಗೆ ಅಂದ್ರೆ ಇಸ್ರಾಯೇಲ್‌ಗೆ ವಾಪಸ್‌ ಹೋಗಬಹುದು ಅಂತ ಪ್ರಕಟಣೆ ಮಾಡಿದ. (ಎಜ್ರ 1:2-4 ಓದಿ.) ಸಾಮಾನ್ಯವಾಗಿ ಬಾಬೆಲಿನವರು ಕೈದಿಗಳನ್ನ ವಾಪಸ್‌ ಕಳಿಸ್ತಾ ಇರಲಿಲ್ಲ. (ಯೆಶಾ. 14:4, 17) ಆದ್ರೆ ಬಾಬೆಲ್‌ ಈಗ ಬೇರೆಯವ್ರ ಕೈವಶ ಆಗಿದೆ. ಅದ್ರ ಹೊಸ ರಾಜ ಈ ಪ್ರಕಟಣೆ ಮಾಡಿದ. ಇದೆಲ್ಲ ಆಗೋ ತರ ಮಾಡಿದ್ದು ಯೆಹೋವ ದೇವರೇ. ಅಲ್ಲಿದ್ದ ಯೆಹೂದ್ಯರು ಮುಖ್ಯವಾಗಿ ಕುಟುಂಬದ ಯಜಮಾನರು ಒಂದು ಮುಖ್ಯವಾದ ನಿರ್ಧಾರ ಮಾಡಬೇಕಿತ್ತು. ಅವರು ತಾಯ್ನಾಡಿಗೆ ಹೋಗಬೇಕಾ ಅಥವಾ ಅಲ್ಲೇ ಇರಬೇಕಾ ಅನ್ನೋ ನಿರ್ಧಾರನ ಮಾಡಬೇಕಿತ್ತು. ಇದನ್ನ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕೆ?

2 ಯಾಕಂದ್ರೆ ಕೆಲವ್ರಿಗೆ ತುಂಬ ವಯಸ್ಸಾಗಿತ್ತು. ಅಷ್ಟು ದೂರ ಪ್ರಯಾಣ ಮಾಡೋದು ಅವ್ರಿಗೆ ಸುಲಭ ಆಗಿರಲಿಲ್ಲ. ಇನ್ನು ಕೆಲವರು ಹುಟ್ಟಿ ಬೆಳೆದಿದ್ದು ಬಾಬೆಲಲ್ಲೇ. ಇಸ್ರಾಯೇಲ್‌ ಅವ್ರ ತಾತ-ಮುತ್ತಾತರ ಊರಾಗಿತ್ತು. ಹಾಗಾಗಿ ಹೊಸ ಜಾಗಕ್ಕೆ ಹೋಗಿ ಜೀವನ ಮಾಡೋದು ಅವ್ರಿಗೆ ಕಷ್ಟ ಅನಿಸಿರುತ್ತೆ. ಅಷ್ಟೇ ಅಲ್ಲ, ಇನ್ನು ಕೆಲವರು ಬಾಬೆಲಲ್ಲೇ ಆಸ್ತಿ ಪಾಸ್ತಿ ಮಾಡ್ಕೊಂಡಿದ್ರು. ಅಲ್ಲಿ ಅವ್ರಿಗೆ ಒಳ್ಳೇ ವ್ಯಾಪಾರನೂ ಆಗ್ತಿತ್ತು. ಇದನ್ನೆಲ್ಲ ಬಿಟ್ಟುಹೋಗೋಕೆ ಅವ್ರಿಗೆ ಇಷ್ಟ ಆಗದೇ ಇದ್ದಿರಬಹುದು.

3. ಇಸ್ರಾಯೇಲ್‌ಗೆ ವಾಪಸ್‌ ಹೋಗೋಕೆ ಕಾಯ್ತಾ ಇದ್ದ ಯೆಹೂದ್ಯರಿಗೆ ಯಾವ ಆಶೀರ್ವಾದ ಸಿಗ್ತಿತ್ತು?

3 ಬಾಬೆಲಲ್ಲಿದ್ದ ಯೆಹೂದ್ಯರು ಇಸ್ರಾಯೇಲ್‌ಗೆ ಹೋಗೋಕೆ ಕೆಲವು ತ್ಯಾಗಗಳನ್ನ ಮಾಡಬೇಕಿತ್ತು. ಆದ್ರೆ ಯೆಹೋವ ಕೊಡೋ ಆಶೀರ್ವಾದಗಳ ಮುಂದೆ ಆ ತ್ಯಾಗಗಳು ಏನೇನೂ ಅಲ್ಲ ಅಂತ ಅವ್ರಿಗೆ ಗೊತ್ತಿತ್ತು. ಅದ್ರಲ್ಲಿ ಒಂದು ಆಶೀರ್ವಾದ ಏನಂದ್ರೆ, ಅವರು ಅಲ್ಲಿ ಹೋಗಿ ಯೆಹೋವನನ್ನ ಸಂತೋಷವಾಗಿ ಆರಾಧನೆ ಮಾಡಬಹುದಿತ್ತು. ಆದ್ರೆ ಬಾಬೆಲಲ್ಲಿ ಯೆಹೋವ ದೇವರ ಆರಾಧನೆ ಮಾಡೋಕೆ ಆಲಯನೇ ಇರಲಿಲ್ಲ. ಮೋಶೆಯ ನಿಯಮ ಪುಸ್ತಕದಲ್ಲಿ ಹೇಳಿರೋ ತರ ಬಲಿಗಳನ್ನ ಕೊಡೋಕೆ ಯಜ್ಞವೇದಿ ಇರಲಿಲ್ಲ, ಪುರೋಹಿತರು ಇರಲಿಲ್ಲ. ಅವ್ರ ಸುತ್ತಮುತ್ತ ಬರೀ ಸುಳ್ಳು ದೇವರುಗಳ ದೇವಸ್ಥಾನಗಳೇ ಇತ್ತು. 50ಕ್ಕಿಂತ ಜಾಸ್ತಿ ದೇವಸ್ಥಾನ ಇತ್ತು. ಬಾಬೆಲಲ್ಲಿ ಸುಳ್ಳು ದೇವರುಗಳನ್ನ ಆರಾಧನೆ ಮಾಡ್ತಿದ್ದ ಜನ್ರೇ ತುಂಬ್ಕೊಂಡಿದ್ರು. ಆದ್ರೆ ಯೆಹೂದ್ಯರು ಇಸ್ರಾಯೇಲ್‌ಗೆ ಹೋದ್ರೆ ಶುದ್ಧಾರಾಧನೆಯನ್ನ ಮತ್ತೆ ಶುರು ಮಾಡಬಹುದಿತ್ತು. ಇದಕ್ಕೋಸ್ಕರ ಸಾವಿರಾರು ಯೆಹೂದ್ಯರು ಕಾಯ್ತಾ ಇದ್ರು.

4. ಇಸ್ರಾಯೇಲ್‌ಗೆ ವಾಪಸ್‌ ಹೋಗೋ ಯೆಹೂದ್ಯರಿಗೆ ಯೆಹೋವ ಏನಂತ ಮಾತುಕೊಟ್ಟನು?

4 ಬಾಬೆಲಿಂದ ಇಸ್ರಾಯೇಲಿಗೆ ಹೋಗೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಅಲ್ಲಿಗೆ ಹೋಗೋಕೆ ಒಂದೆರಡು ದಿನ ಅಲ್ಲ, ನಾಲ್ಕು ತಿಂಗಳು ಪ್ರಯಾಣ ಮಾಡಬೇಕಿತ್ತು. ಅದ್ರ ಬಗ್ಗೆ ಯೆಶಾಯ “ಯೆಹೋವನ ಮಾರ್ಗ ಸಿದ್ಧಮಾಡಿ! ಬಯಲು ಪ್ರದೇಶದ ಮೂಲಕ ಹಾದುಹೋಗೋ ಒಂದು ನೇರವಾದ ಹೆದ್ದಾರಿಯನ್ನ ನಮ್ಮ ದೇವರಿಗಾಗಿ ತಯಾರಿ ಮಾಡಿ. . . . ಒರಟಾದ ನೆಲ ಸಮತಟ್ಟಾಗಲಿ, ಏರುಪೇರಾದ ನೆಲ ಕಣಿವೆಯ ಬಯಲಾಗಲಿ” ಅಂತ ಹೇಳಿದನು. ಅಂದ್ರೆ ವಾಪಸ್‌ ಹೋಗೋಕೆ ನಾನು ಸಹಾಯ ಮಾಡ್ತೀನಿ, ಏನೇ ಅಡೆತಡೆಗಳು ಬಂದ್ರೂ ಅದನ್ನ ತೆಗೆದು ಹಾಕ್ತೀನಿ ಅಂತ ಯೆಹೋವ ಮಾತುಕೊಟ್ಟನು. (ಯೆಶಾ. 40:3, 4) ಸ್ವಲ್ಪ ಯೋಚ್ನೆ ಮಾಡಿ ನೋಡಿ. ನೀವು ಮರುಭೂಮಿಯ ಮಧ್ಯದಲ್ಲಿರೋ ಒಂದು ದೊಡ್ಡ ಹೆದ್ದಾರಿಯಲ್ಲಿ ಪ್ರಯಾಣ ಮಾಡ್ತಾ ಇದ್ದೀರ. ಆ ದಾರಿ ನೇರವಾಗಿದೆ. ಸುತ್ತಾಕಿಕೊಂಡು ಹೋಗಬೇಕಾಗಿಲ್ಲ. ಬೆಟ್ಟಗುಡ್ಡ ಹತ್ತಿ ಇಳಿಬೇಕಾಗಿಲ್ಲ. ಹೀಗಿದ್ರೆ ನೀವು ತಲುಪಬೇಕಾದ ಜಾಗಕ್ಕೆ ಬೇಗ ಹೋಗ್ತೀರ. ದಾರಿ ಈ ತರ ಇದ್ರೆ ಪ್ರಯಾಣ ಮಾಡೋಕೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ!

5. ಬಾಬೆಲಿಂದ ಇಸ್ರಾಯೇಲ್‌ಗೆ ಹೋಗ್ತಿದ್ದ ಸಾಂಕೇತಿಕ ಹೆದ್ದಾರಿಯ ಹೆಸ್ರು ಏನು?

5 ಸಾಮಾನ್ಯವಾಗಿ ಹೆದ್ದಾರಿಗೆ ಒಂದು ಹೆಸ್ರು ಅಥವಾ ನಂಬರ್‌ ಇರುತ್ತೆ. ಯೆಹೋವ ಹೇಳಿದ ಸಾಂಕೇತಿಕ ಹೆದ್ದಾರಿಗೂ ಒಂದು ಹೆಸ್ರಿತ್ತು. ಅದ್ರ ಬಗ್ಗೆ ಯೆಶಾಯ ಹೀಗೆ ಹೇಳ್ತಾನೆ: “ಒಂದು ಹೆದ್ದಾರಿ ಇರುತ್ತೆ, ಹೌದು, ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ. ಯಾವ ಅಶುದ್ಧನೂ ಅದ್ರಲ್ಲಿ ಪ್ರಯಾಣ ಮಾಡಲ್ಲ.” (ಯೆಶಾ. 35:8) ಯೆಹೋವ ಇಸ್ರಾಯೇಲ್ಯರಿಗೆ ಕೊಟ್ಟ ಈ ಮಾತಿನ ಅರ್ಥ ಏನು? ನಮ್ಮ ಕಾಲದಲ್ಲಿ ಈ ಮಾತು ಹೇಗೆ ನೆರವೇರುತ್ತಾ ಇದೆ?

ಆಗ ಇದ್ದ ಮತ್ತು ಈಗ ಇರೋ “ಪವಿತ್ರ ದಾರಿ”

6. ಆ ಹೆದ್ದಾರಿಗೆ “ಪವಿತ್ರ ದಾರಿ” ಅನ್ನೋ ಹೆಸ್ರು ಯಾಕೆ ಸೂಕ್ತವಾಗಿದೆ?

6 “ಪವಿತ್ರ ದಾರಿ!” ಆ ಹೆದ್ದಾರಿಗೆ ಈ ಹೆಸ್ರು ಯಾಕೆ ಸೂಕ್ತವಾಗಿದೆ? ಯಾಕಂದ್ರೆ ಆಗ ಇಸ್ರಾಯೇಲ್‌ ದೇಶಕ್ಕೆ ಹೋದವ್ರಲ್ಲಿ ಯಾವ ಅಶುದ್ಧನೂ ಇರಬಾರದಿತ್ತು. ಅಂದ್ರೆ ಅವ್ರಲ್ಲಿ ಯಾರೂ ಅನೈತಿಕತೆ, ಮೂರ್ತಿಪೂಜೆ ಅಥವಾ ಬೇರೆ ಯಾವ ದೊಡ್ಡ ತಪ್ಪುಗಳನ್ನೂ ಮಾಡೋ ಹಾಗಿರಲಿಲ್ಲ. ಅವರು ದೇವರ ‘ಪವಿತ್ರ ಜನ್ರಾಗಿರಬೇಕಿತ್ತು.’ (ಧರ್ಮೋ. 7:6) ಇದರರ್ಥ ಅವರು ಇಸ್ರಾಯೇಲ್‌ ದೇಶಕ್ಕೆ ಹೋದ್ಮೇಲೆ ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಮತ್ತೆ ಶುರು ಮಾಡಬೇಕಿತ್ತು.

7. ಬಾಬೆಲಲ್ಲಿ ಹುಟ್ಟಿಬೆಳೆದಿದ್ದ ಯೆಹೂದ್ಯರು ಯಾವ ಬದಲಾವಣೆ ಮಾಡ್ಕೊಬೇಕಿತ್ತು? ಒಂದು ಉದಾಹರಣೆ ಕೊಡಿ.

7 ಬಾಬೆಲಿನಲ್ಲಿ ಹುಟ್ಟಿಬೆಳೆದಿದ್ದ ಯೆಹೂದ್ಯರು ಅಲ್ಲಿದ್ದ ಜನ್ರ ತರಾನೇ ಯೋಚ್ನೆ ಮಾಡ್ತಾ ಇದ್ರು. ಅಷ್ಟೇ ಅಲ್ಲ, ಅವ್ರ ತರಾನೇ ನಡ್ಕೊಳ್ತಾ ಇದ್ರು. ಉದಾಹರಣೆಗೆ, ಯೆಹೂದ್ಯರು ಇಸ್ರಾಯೇಲ್‌ಗೆ ಬಂದು 69 ವರ್ಷ ಆದ್ಮೇಲೆ ಎಜ್ರ ಒಂದು ವಿಷ್ಯವನ್ನ ಗಮನಿಸಿದ. ಅದೇನಂದ್ರೆ ಕೆಲವು ಯೆಹೂದ್ಯರು ಯೆಹೋವ ದೇವರನ್ನ ಆರಾಧನೆ ಮಾಡದಿರೋ ಹೆಂಗಸರನ್ನ ಮದುವೆ ಆಗಿದ್ರು. (ವಿಮೋ. 34:15, 16; ಎಜ್ರ 9:1, 2) ಅವ್ರಿಗೆ ಹುಟ್ಟಿದ ಮಕ್ಕಳಿಗೆ ಯೆಹೂದ್ಯರ ಭಾಷೆನೂ ಬರ್ತಾ ಇರಲಿಲ್ಲ. ಇದನ್ನ ರಾಜ್ಯಪಾಲನಾದ ನೆಹೆಮೀಯ ನೋಡಿದಾಗ ಅವನಿಗೆ ತುಂಬ ನೋವಾಯ್ತು. ಯಾಕಂದ್ರೆ ಪವಿತ್ರ ಗ್ರಂಥದ ಹೆಚ್ಚಿನ ಭಾಗ ಹೀಬ್ರು ಭಾಷೆಯಲ್ಲಿತ್ತು. (ಧರ್ಮೋ. 6:6, 7; ನೆಹೆ. 13:23, 24) ಆ ಮಕ್ಕಳಿಗೆ ಹೀಬ್ರು ಭಾಷೆನೇ ಗೊತ್ತಿಲ್ಲಾಂದ್ರೆ ಯೆಹೋವನನ್ನ ಪ್ರೀತಿಸೋಕೆ, ಆರಾಧನೆ ಮಾಡೋಕೆ ಹೇಗೆ ಆಗುತ್ತೆ ಹೇಳಿ? (ಎಜ್ರ 10:3, 44) ಹಾಗಾಗಿ ಯೆಹೂದ್ಯರು ತುಂಬ ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಅವರು ಇಸ್ರಾಯೇಲ್‌ನಲ್ಲೇ ಇದ್ದಿದ್ರಿಂದ ಈ ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಸುಲಭ ಆಗಿತ್ತು. ಯಾಕಂದ್ರೆ ಈಗಾಗ್ಲೇ ಅಲ್ಲಿ ಜನ್ರು ಯೆಹೋವ ದೇವರ ಆರಾಧನೆಯನ್ನ ಮತ್ತೆ ಶುರು ಮಾಡಿದ್ರು.—ನೆಹೆ. 8:8, 9.

1919ರಿಂದ ಗಂಡಸರು, ಹೆಂಗಸರು, ಮಕ್ಕಳು ಹೀಗೆ ತುಂಬ ಜನ ಮಹಾ ಬಾಬೆಲನ್ನ ಬಿಟ್ಟು ಬಂದು ‘ಪವಿತ್ರ ದಾರಿಯಲ್ಲಿ’ ನಡಿಯೋಕೆ ಶುರು ಮಾಡಿದ್ದಾರೆ (ಪ್ಯಾರ 8 ನೋಡಿ)

8. ತುಂಬ ವರ್ಷಗಳ ಹಿಂದೆ ನಡಿದಿರೋ ಘಟನೆಗಳ ಬಗ್ಗೆ ಈಗ ತಿಳ್ಕೊಳ್ಳೋದ್ರಿಂದ ನಮಗೆ ಏನು ಪ್ರಯೋಜನ ಇದೆ? (ಮುಖಪುಟ ಚಿತ್ರ ನೋಡಿ.)

8 ‘ಇದೆಲ್ಲ ನಡೆದಿದ್ದು ನೂರಾರು ವರ್ಷಗಳ ಹಿಂದೆ. ಇದನ್ನೆಲ್ಲ ತಿಳ್ಕೊಳ್ಳೋದ್ರಿಂದ ಈಗ ನಮಗೇನಾದ್ರೂ ಪ್ರಯೋಜನ ಇದ್ಯಾ?’ ಅಂತ ಕೆಲವರು ಯೋಚಿಸಬಹುದು. ನಾವು ಅಭಿಷಿಕ್ತರಾಗಿರಲಿ, ಬೇರೆ ಕುರಿಗಳಾಗಿರಲಿ ಇದ್ರಿಂದ ಎಲ್ರಿಗೂ ಪ್ರಯೋಜನ ಇದೆ. ಯಾಕಂದ್ರೆ ನಾವೆಲ್ರೂ ‘ಪವಿತ್ರ ದಾರಿಯಲ್ಲಿ’ ನಡೀತಾ ಇದ್ದೀವಿ. ಆ ದಾರಿಯಲ್ಲೇ ನಡೀತಾ ಇದ್ರೆ ಈಗ ನಾವು ಯೆಹೋವನನ್ನ ಚೆನ್ನಾಗಿ ಆರಾಧನೆ ಮಾಡಕ್ಕಾಗುತ್ತೆ. ಮುಂದೆ ಹೊಸ ಲೋಕದಲ್ಲೂ ನಮಗೆ ತುಂಬಾ ಆಶೀರ್ವಾದಗಳು ಸಿಗುತ್ತೆ. b (ಯೋಹಾ. 10:16) ಕ್ರಿಸ್ತ ಶಕ 1919ರಿಂದ ಲಕ್ಷಗಟ್ಟಲೆ ಜನ್ರು ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲನ್ನ ಬಿಟ್ಟುಬಂದಿದ್ದಾರೆ. ಅವರು ಈ ‘ಪವಿತ್ರ ದಾರಿಯಲ್ಲಿ’ ನಡೀತಾ ಇದ್ದಾರೆ. ಅದ್ರಲ್ಲಿ ತುಂಬ ಜನ ಹೆಂಗಸರು, ಗಂಡಸರು, ಮಕ್ಕಳು ಇದ್ದಾರೆ. ನೀವೂ ಇದ್ದೀರ. ದೇವ ಜನ್ರು ಈ ದಾರಿಯಲ್ಲಿ ನಡಿಯೋಕೆ ಶುರುಮಾಡಿ 100 ವರ್ಷ ದಾಟಿದೆ. ಆದ್ರೆ 1919ಕ್ಕೂ ನೂರಾರು ವರ್ಷ ಮುಂಚೆನೇ ಆ ದಾರಿಯನ್ನ ಕೆಲವರು ಸಿದ್ಧ ಮಾಡಿದ್ರು.

ದಾರಿ ಸಿದ್ಧ ಮಾಡೋ ಕೆಲಸ

9. ‘ಪವಿತ್ರ ದಾರಿಯಲ್ಲಿದ್ದ’ ಅಡೆತಡೆಗಳನ್ನ ಯೆಹೋವ ಹೇಗೆ ತೆಗೆದು ಹಾಕಿದನು? (ಯೆಶಾಯ 57:14)

9 ಯೆಹೂದ್ಯರು ಬಾಬೆಲಿಂದ ಇಸ್ರಾಯೇಲಿಗೆ ಬರೋ ದಾರಿಯಲ್ಲಿದ್ದ ಅಡೆತಡೆಗಳನ್ನ ಯೆಹೋವ ತೆಗೆದು ಹಾಕಿದನು. (ಯೆಶಾಯ 57:14 ಓದಿ.) ನಮ್ಮ ಕಾಲದಲ್ಲಿ ದಾರಿಯಲ್ಲಿದ್ದ ಅಡೆತಡೆಗಳನ್ನ ಯೆಹೋವ ಹೇಗೆ ತೆಗೆದು ಹಾಕಿದನು? ಇದಕ್ಕೆ ಆತನು ದೇವರ ಮೇಲೆ ಭಯಭಕ್ತಿ ಇದ್ದ ಕೆಲವ್ರನ್ನ ಉಪಯೋಗಿಸಿದನು. ಅವರು 1919ಕ್ಕೂ ನೂರಾರು ವರ್ಷ ಮುಂಚೆನೇ ‘ಪವಿತ್ರ ದಾರಿಯನ್ನ’ ಸಿದ್ಧ ಮಾಡೋಕೆ ಶುರುಮಾಡಿದ್ರು. ಇದ್ರಿಂದ ತುಂಬ ಜನ್ರು ಮುಂದೆ ಸುಳ್ಳು ಧರ್ಮನ ಬಿಟ್ಟುಬರೋಕೆ ಆಯ್ತು. (ಯೆಶಾಯ 40:3 ಹೋಲಿಸಿ.) ಅವರು ಕೂಡ ಶುದ್ಧಾರಾಧನೆ ಮಾಡ್ತಿದ್ದ ಜನ್ರ ಜೊತೆ ಸೇರಿ ಯೆಹೋವ ದೇವರನ್ನ ಆರಾಧಿಸೋಕೆ ಆಯ್ತು. ಹಾಗಾದ್ರೆ ‘ಪವಿತ್ರ ದಾರಿಯನ್ನ’ ಸಿದ್ಧ ಮಾಡಿದವರು ಏನೆಲ್ಲ ಮಾಡಿದ್ರು? ಅದ್ರಲ್ಲಿ ಕೆಲವನ್ನ ಮುಂದೆ ನೋಡೋಣ.

ದೇವರ ಮೇಲೆ ಭಕ್ತಿ ಇದ್ದ ಕೆಲವರು ನೂರಾರು ವರ್ಷ ಶ್ರಮಪಟ್ಟಿದ್ರಿಂದ ತುಂಬ ಜನ್ರಿಗೆ ಮಹಾ ಬಾಬೆಲನ್ನ ಬಿಟ್ಟು ಬರೋಕೆ ಆಯ್ತು (ಪ್ಯಾರ 10-11 ನೋಡಿ)

10-11. ಬೈಬಲ್‌ ಸತ್ಯನ ತುಂಬ ಜನ್ರು ತಿಳ್ಕೊಳ್ಳೋಕೆ ಪ್ರಿಂಟಿಂಗ್‌ ಮತ್ತು ಭಾಷಾಂತರದಿಂದ ಹೇಗೆ ಸಹಾಯ ಆಯ್ತು? (ಚಿತ್ರನೂ ನೋಡಿ.)

10 ಪ್ರಿಂಟಿಂಗ್‌. ಇಸವಿ 1450ರ ತನಕ ಬೈಬಲನ್ನ ಕೈಯಿಂದ ಬರೆದು ನಕಲು ಮಾಡ್ತಿದ್ರು. ಇದಕ್ಕೆ ತುಂಬ ಸಮಯ ಹಿಡಿತಿತ್ತು. ಅಷ್ಟೇ ಅಲ್ಲ, ಈ ನಕಲು ಪ್ರತಿಗಳು ಸ್ವಲ್ಪಾನೇ ಇದ್ದಿದ್ದು. ಅದನ್ನ ತುಂಬ ದುಡ್ಡು ಕೊಟ್ಟು ತಗೊಬೇಕಾಗಿತ್ತು. ಆದ್ರೆ ಪ್ರಿಂಟಿಂಗ್‌ ಮಷಿನ್‌ ಬಂದಮೇಲೆ ಸುಲಭವಾಗಿ ಬೈಬಲನ್ನ ಪ್ರಿಂಟ್‌ ಮಾಡೋಕೆ ಆಯ್ತು. ಆಗ ತುಂಬ ಜನ್ರಿಗೆ ಬೈಬಲ್‌ ಸಿಕ್ತು.

11 ಭಾಷಾಂತರ. ಆ ಕಾಲದಲ್ಲಿ ಪುಸ್ತಕಗಳನ್ನ ಕೈಯಿಂದ ಬರೆಯದೆ, ಪ್ರಿಂಟ್‌ ಮಾಡೋಕೆ ಶುರು ಮಾಡಿದ್ರಿಂದ ದೇವರ ಮೇಲೆ ಭಕ್ತಿ ಇದ್ದ ಜನ್ರು ಬೈಬಲನ್ನ ಭಾಷಾಂತರ ಮಾಡೋಕೆ ಶುರು ಮಾಡಿದ್ರು. ಸುಮಾರು ಶತಮಾನಗಳ ತನಕ ಬೈಬಲ್‌ ಲ್ಯಾಟಿನ್‌ ಭಾಷೆಯಲ್ಲಿತ್ತು. ತುಂಬ ಓದಿರೋರು ಮಾತ್ರ ಅದನ್ನ ಅರ್ಥ ಮಾಡ್ಕೊಳ್ತಿದ್ರು. ಹಾಗಾಗಿ ದೇವರ ಮೇಲೆ ಭಯಭಕ್ತಿ ಇದ್ದ ಕೆಲವರು ಸಾಮಾನ್ಯ ಜನ್ರು ಮಾತಾಡೋ ಭಾಷೆಗೆ ಬೈಬಲನ್ನ ಭಾಷಾಂತರ ಮಾಡೋಕೆ ಶುರು ಮಾಡಿದ್ರು. ಅದಕ್ಕೆ ಅವರು ತುಂಬ ಶ್ರಮಪಟ್ರು. ಆಗ ಜನ್ರಿಗೆ ತಮಗೆ ಅರ್ಥ ಆಗೋ ಭಾಷೆಯಲ್ಲಿ ಬೈಬಲನ್ನ ಓದೋಕೆ ಆಯ್ತು. ಇದ್ರಿಂದ ಚರ್ಚಲ್ಲಿ ಕಲಿಸ್ತಿದ್ದ ವಿಷ್ಯಗಳು ಸರಿನಾ ತಪ್ಪಾ ಅಂತ ತಿಳ್ಕೊಳ್ಳೋಕೆ ಆಯ್ತು.

ದೇವರ ಮೇಲೆ ಭಕ್ತಿ ಇದ್ದ ಕೆಲವರು ತುಂಬ ಜನ್ರಿಗೆ ಮಹಾ ಬಾಬೆಲನ್ನ ಬಿಟ್ಟು ಬರೋಕೆ ಸಹಾಯ ಮಾಡಿದ್ರು (ಪ್ಯಾರ 12-14 ನೋಡಿ) c

12-13. ಕೆಲವರು 19ನೇ ಶತಮಾನದಲ್ಲಿ ಹೇಗೆ ಚರ್ಚಿನ ಬಣ್ಣ ಬಯಲು ಮಾಡಿದ್ರು? ಒಂದು ಉದಾಹರಣೆ ಕೊಡಿ.

12 ಬೈಬಲ್‌ ಕಲಿಯೋಕೆ ಬೇರೆ ಪ್ರಕಾಶನಗಳು. ಬೈಬಲ್‌ ವಿದ್ಯಾರ್ಥಿಗಳು ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿ ತುಂಬ ವಿಷ್ಯಗಳನ್ನ ತಿಳ್ಕೊಂಡ್ರು. ಅದನ್ನ ಬೇರೆಯವ್ರಿಗೆ ತಿಳಿಸೋಕೆ ಪುಸ್ತಕ-ಪತ್ರಿಕೆಗಳನ್ನ ಪ್ರಿಂಟ್‌ ಮಾಡಿದ್ರು. ಉದಾಹರಣೆಗೆ ಸುಮಾರು 1835ರಲ್ಲಿ ಕೆಲವರು ಕರಪತ್ರಗಳನ್ನ ಪ್ರಿಂಟ್‌ ಮಾಡಿದ್ರು. ಇದ್ರಿಂದ ಚರ್ಚಲ್ಲಿ ಕಲಿಸ್ತಿದ್ದ ಕೆಲವು ವಿಷ್ಯಗಳು ತಪ್ಪು ಅಂತ ಬಯಲಾಯ್ತು. ಆಗ ಪಾದ್ರಿಗಳಿಗೆ ತುಂಬ ಕೋಪ ಬಂತು.

13 1835ರಲ್ಲಿ ದೇವರ ಮೇಲೆ ಭಯಭಕ್ತಿ ಇದ್ದ ಹೆನ್ರಿ ಗ್ರೂ ಅನ್ನೋ ವ್ಯಕ್ತಿ ಒಂದು ಕರಪತ್ರ ಪ್ರಿಂಟ್‌ ಮಾಡಿದ್ರು. ಅದ್ರಲ್ಲಿ ಅವರು ಸತ್ತವರ ನಿಜವಾದ ಸ್ಥಿತಿ ಏನು ಅಂತ ವಿವರಿಸಿದ್ರು. ಅಷ್ಟೇ ಅಲ್ಲ, ಅಮರತ್ವವನ್ನ ದೇವರು ಯಾರಿಗೆ ಕೊಡ್ತಾನೋ ಅವ್ರಿಗೆ ಮಾತ್ರ ಸಿಗುತ್ತೆ ಅಂತಾನೂ ಹೇಳಿದ್ರು. ಆದ್ರೆ ಚರ್ಚಲ್ಲಿ ಇದ್ರ ಬಗ್ಗೆ ಉಲ್ಟಾ ಕಲಿಸ್ತಿದ್ರು. ಪ್ರತಿಯೊಬ್ರಿಗೂ ಹುಟ್ಟಿನಿಂದಲೇ ಅಮರತ್ವ ಸಿಗುತ್ತೆ ಅಂತಿದ್ರು. ಈ ಕರಪತ್ರವನ್ನ 1837ರಲ್ಲಿ ಜಾರ್ಜ್‌ ಸ್ಟೊರ್ಸ್‌ ಅನ್ನೋ ಪಾದ್ರಿ ಟ್ರೇನ್‌ನಲ್ಲಿ ಹೋಗ್ತಿದ್ದಾಗ ಓದಿದ್ರು. ಅದ್ರಲ್ಲಿ ಇರೋದು ಸತ್ಯ ಅಂತ ಅರ್ಥ ಮಾಡ್ಕೊಂಡ್ರು. ಅದನ್ನ ಬೇರೆಯವ್ರಿಗೂ ಹೇಳಬೇಕು ಅಂತ ಅವರು ಅಂದ್ಕೊಂಡ್ರು. ಅದಕ್ಕೆ ಅವರು 1842ರಲ್ಲಿ ತುಂಬ ಭಾಷಣಗಳನ್ನ ಕೊಟ್ರು. ಅದ್ರ ವಿಷ್ಯ “ಒಂದು ವಿಚಾರಣೆ—ದುಷ್ಟರು ಅಮರರೊ?” ಅಂತ ಇತ್ತು. ಅಷ್ಟೇ ಅಲ್ಲ, ಅವರು ಪುಸ್ತಕಗಳನ್ನೂ ಬರೆದ್ರು. ಆ ಪುಸ್ತಕಗಳು ಚಾರ್ಲ್ಸ್‌ ಟೇಸ್‌ ರಸಲ್‌ ಅನ್ನೋ ಯುವಕನಿಗೆ ತುಂಬ ಇಷ್ಟ ಆಯ್ತು.

14. ‘ಪವಿತ್ರ ದಾರಿಯನ್ನ’ ಸಿದ್ಧ ಮಾಡೋ ಕೆಲಸ ಈಗಾಗ್ಲೇ ಶುರು ಆಗಿದ್ರಿಂದ ಸಹೋದರ ರಸಲ್‌ ಮತ್ತು ಅವ್ರ ಜೊತೆ ಇದ್ದವರು ಹೇಗೆ ಪ್ರಯೋಜನ ಪಡ್ಕೊಂಡ್ರು? (ಚಿತ್ರನೂ ನೋಡಿ.)

14 ‘ಪವಿತ್ರ ದಾರಿಯನ್ನ’ ಸಿದ್ಧ ಮಾಡೋ ಕೆಲಸ ಈಗಾಗ್ಲೇ ಶುರು ಆಗಿದ್ರಿಂದ ಸಹೋದರ ರಸಲ್‌ ಮತ್ತು ಅವ್ರ ಜೊತೆ ಇದ್ದವರು ಹೇಗೆ ಪ್ರಯೋಜನ ಪಡ್ಕೊಂಡ್ರು? ಅವ್ರಿಗೆ ಬೈಬಲ್‌ ಅಧ್ಯಯನ ಮಾಡೋಕೆ ಈಗಾಗ್ಲೇ ಪದಕೋಶಗಳು ಮತ್ತು ಬೈಬಲ್‌ ಭಾಷಾಂತರಗಳು ಇತ್ತು. ಅಷ್ಟೇ ಅಲ್ಲ, ಹೆನ್ರಿ ಗ್ರೂ, ಜಾರ್ಜ್‌ ಸ್ಟೊರ್ಸ್‌ ಇನ್ನೂ ಬೇರೆಯವರು ಅಧ್ಯಯನ ಮಾಡಿ ಹುಡುಕಿದ ಸತ್ಯಗಳಿಂದಾನೂ ಅವ್ರಿಗೆ ಪ್ರಯೋಜನ ಆಯ್ತು. ಇವನ್ನ ಬಳಸ್ಕೊಂಡು ಸಹೋದರ ರಸಲ್‌ ಮತ್ತು ಅವ್ರ ಜೊತೆ ಇದ್ದವರು ಈ ದಾರಿ ಸಿದ್ಧ ಮಾಡೋದನ್ನ ಮುಂದುವರೆಸಿದ್ರು. ಅವರು ಬೈಬಲ್‌ ಸತ್ಯಗಳ ಬಗ್ಗೆ ಪುಸ್ತಕಗಳನ್ನ, ಕರಪತ್ರಗಳನ್ನ ಪ್ರಿಂಟ್‌ ಮಾಡಿದ್ರು.

15. ಇಸವಿ 1919ರಿಂದ ಇನ್ನೂ ಏನೆಲ್ಲ ನಡೀತು?

15 ಈ ರೀತಿ ದಾರಿ ಸಿದ್ಧ ಮಾಡಿದ್ರಿಂದ ತುಂಬ ಒಳ್ಳೇದಾಯ್ತು. ‘ಪವಿತ್ರ ದಾರಿಯಲ್ಲಿ’ ನಡಿಯೋರು ಯೆಹೋವನ ಬಗ್ಗೆ, ಆತನ ಉದ್ದೇಶಗಳ ಬಗ್ಗೆ ತಿಳ್ಕೊಂಡ್ರು. (ಜ್ಞಾನೋ. 4:18) 1919ರ ನಂತ್ರ ಕೂಡ ಆ ದಾರಿ ಸಿದ್ಧ ಮಾಡೋ ಕೆಲಸ ಮುಂದುವರೀತು. ಆ ವರ್ಷದಲ್ಲೇ “ಪವಿತ್ರ ದಾರಿ” ತೆರೀತು. ಆಗ ಮಹಾ ಬಾಬೆಲನ್ನ ದೇವಜನ್ರು ಬಿಟ್ಟುಬಂದ್ರು. ಅದೇ ವರ್ಷದಲ್ಲಿ ‘ನಂಬಿಗಸ್ತ, ವಿವೇಕಿ ಆದ ಆಳು’ ಕೆಲಸ ಶುರು ಮಾಡ್ತು. ‘ಪವಿತ್ರ ದಾರಿಯಲ್ಲಿ’ ಹೊಸದಾಗಿ ನಡಿಯೋಕೆ ಶುರು ಮಾಡಿದ್ದವ್ರಿಗೆ ಅವ್ರಿಂದ ಸಹಾಯ ಸಿಕ್ತು. (ಮತ್ತಾ. 24:45-47) ಆದ್ರೆ ಈ ‘ಪವಿತ್ರ ದಾರಿಯಲ್ಲಿ’ ನಡಿಯೋರು ಯೆಹೋವನಿಗೆ ಇಷ್ಟ ಆಗೋ ತರ ತಮ್ಮ ಜೀವನದಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಅದನ್ನೆಲ್ಲ ಒಂದೇ ಸಲ ಮಾಡ್ಕೊಬೇಕು ಅಂತ ಯೆಹೋವ ಹೇಳಲಿಲ್ಲ. ನಿಧಾನವಾಗಿ ಒಂದೊಂದೇ ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಯೆಹೋವನೇ ಅವ್ರಿಗೆ ಸಹಾಯ ಮಾಡಿದನು. (“ ಯೆಹೋವ ತನ್ನ ಜನ್ರನ್ನ ನಿಧಾನವಾಗಿ ತಿದ್ದಿದನು” ಅನ್ನೋ ಚೌಕ ನೋಡಿ.) ಇನ್ನು ಸ್ವಲ್ಪ ಸಮಯದಲ್ಲೇ ದೇವರ ಸರ್ಕಾರದಲ್ಲಿ ನಾವೆಲ್ರೂ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಾ ಇರ್ತೀವಿ. ಅದೆಷ್ಟು ಚೆನ್ನಾಗಿರುತ್ತೆ ಅಲ್ವಾ!—ಕೊಲೊ. 1:10.

“ಪವಿತ್ರ ದಾರಿ” ಇನ್ನೂ ತೆರೆದಿದೆ

16. ‘ಪವಿತ್ರ ದಾರಿಯನ್ನ’ ದುರಸ್ತಿ ಮಾಡೋಕೆ 1919ರಿಂದ ಏನೆಲ್ಲ ಮಾಡಿದ್ದಾರೆ? (ಯೆಶಾಯ 48:17; 60:17)

16 ಒಂದು ರೋಡ್‌ ಚೆನ್ನಾಗಿ ಇರಬೇಕಂದ್ರೆ ಅದನ್ನ ಆಗಾಗ ರಿಪೇರಿ ಮಾಡ್ತಾ ಇರಬೇಕು. ಅದೇ ತರ 1919ರಿಂದ ‘ಪವಿತ್ರ ದಾರಿಯ’ ದುರಸ್ತಿ ಕೆಲಸ ನಡೀತಾ ಇದೆ. ಇದ್ರಿಂದ ಇನ್ನೂ ತುಂಬ ಜನ್ರಿಗೆ ಮಹಾ ಬಾಬೆಲನ್ನ ಬಿಟ್ಟು ಈ ದಾರಿಯಲ್ಲಿ ನಡಿಯೋಕೆ ಸಹಾಯ ಆಗಿದೆ. ಆಗಷ್ಟೇ ನೇಮಕ ಪಡ್ಕೊಂಡ ನಂಬಿಗಸ್ತ ವಿವೇಕಿ ಆದ ಆಳು ತುಂಬ ಕೆಲಸ ಮಾಡ್ತು. ಹೊಸಬರು ದೇವರ ಬಗ್ಗೆ ಕಲಿಯೋಕೆ 1921ರಲ್ಲಿ ಒಂದು ಪುಸ್ತಕವನ್ನ ಬಿಡುಗಡೆ ಮಾಡ್ತು. ಅದ್ರ ಹೆಸರು ದ ಹಾರ್ಪ್‌ ಆಫ್‌ ಗಾಡ್‌. ಆ ಪುಸ್ತಕನ 36 ಭಾಷೆಗಳಲ್ಲಿ ಹತ್ತತ್ರ 60 ಲಕ್ಷ ಕಾಪಿಗಳನ್ನ ಪ್ರಿಂಟ್‌ ಮಾಡಲಾಯ್ತು. ಇದ್ರಿಂದ ತುಂಬ ಜನ ಸತ್ಯ ಕಲಿತ್ರು. ಹೀಗೆ ಬೇರೆಬೇರೆ ಪುಸ್ತಕಗಳು ಬಿಡುಗಡೆ ಆಯ್ತು. ಅದ್ರಲ್ಲೂ ಇತ್ತೀಚೆಗೆ ಬಿಡುಗಡೆ ಆಗಿರೋ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಅಂತೂ ಇನ್ನೂ ತುಂಬ ಚೆನ್ನಾಗಿದೆ. ಹೀಗೆ ಕೊನೇ ದಿನಗಳಲ್ಲಿ ನಾವು ‘ಪವಿತ್ರ ದಾರಿಯಲ್ಲಿ’ ನಡೀತಾ ಮುಂದೆ ಸಾಗೋಕೆ ಬೇಕಾದ ಸಹಾಯವನ್ನ ದೇವರು ತನ್ನ ಸಂಘಟನೆಯಿಂದ ಕೊಡ್ತಾ ಇದ್ದಾನೆ.ಯೆಶಾಯ 48:17; 60:17 ಓದಿ.

17-18. “ಪವಿತ್ರ ದಾರಿ” ಎಲ್ಲಿಗೆ ಕರ್ಕೊಂಡು ಹೋಗುತ್ತೆ?

17 ಒಬ್ಬ ವ್ಯಕ್ತಿ ಬೈಬಲನ್ನ ಕಲಿಯೋಕೆ ಶುರು ಮಾಡಿದಾಗ ‘ಪವಿತ್ರ ದಾರಿಯಲ್ಲಿ’ ಕಾಲಿಟ್ಟ ಹಾಗೆ ಇರುತ್ತೆ. ಕೆಲವರು ಆ ದಾರಿಯಲ್ಲಿ ಸ್ವಲ್ಪ ದೂರ ಹೋಗಿ ಬಿಟ್ಟುಬಿಟ್ಟಿದ್ದಾರೆ. ಇನ್ನು ಕೆಲವರು ಏನೇ ಆದ್ರೂ ಆ ದಾರಿಯಲ್ಲೇ ನಡೀತಾ ಇದ್ದಾರೆ. ಆ ದಾರಿ ಅವ್ರನ್ನ ಎಲ್ಲಿಗೆ ಕರ್ಕೊಂಡು ಹೋಗುತ್ತೆ?

18 “ಪವಿತ್ರ ದಾರಿ” ಕೆಲವ್ರನ್ನ ‘ಸ್ವರ್ಗದಲ್ಲಿರೋ ದೇವರ ಪರದೈಸಿಗೆ’ ಕರ್ಕೊಂಡು ಹೋಗುತ್ತೆ. (ಪ್ರಕ. 2:7) ಇನ್ನು ಕೆಲವ್ರನ್ನ 1,000 ವರ್ಷದ ಆಳ್ವಿಕೆ ಕೊನೇ ತನಕ ಕರ್ಕೊಂಡು ಹೋಗುತ್ತೆ. ಅಲ್ಲಿ ಅವರು ಪರಿಪೂರ್ಣರಾಗ್ತಾರೆ. ಹಾಗಾಗಿ ನಾವು ಆ ‘ಪವಿತ್ರ ದಾರಿಯಲ್ಲೇ’ ನಡೀತಾ ಇರೋಣ. ಹಿಂದೆ ಬಿಟ್ಟುಬಂದಿರೋ ವಿಷ್ಯಗಳ ಬಗ್ಗೆ ಯೋಚ್ನೆ ಮಾಡದೆ ಮುಂದೆ ಸಾಗುತ್ತಾ ಇರೋಣ. ಹೊಸ ಲೋಕಕ್ಕೆ ಹೋಗಿ ತಲಪೋಣ. ನಿಮ್ಮೆಲ್ರಿಗೂ ಸೇಫ್‌ ಜರ್ನಿ!

ಗೀತೆ 107 ಬನ್ನಿ ಯೆಹೋವನ ಪರ್ವತಕ್ಕೆ

a ಬಾಬೆಲಿಂದ ಇಸ್ರಾಯೇಲ್‌ ತನಕ ಒಂದು ಸಾಂಕೇತಿಕ ಹೆದ್ದಾರಿ ಇತ್ತು. ಯೆಹೋವ ಅದನ್ನ “ಪವಿತ್ರ ದಾರಿ” ಅಂತ ಕರೆದನು. ಯೆಹೋವ ನಮ್ಮ ಕಾಲದಲ್ಲೂ ಇದೇ ತರದ ಒಂದು ದಾರಿಯನ್ನ ರೆಡಿ ಮಾಡಿದ್ದಾನೆ. ಕ್ರಿಸ್ತ ಶಕ 1919ರಿಂದ ಲಕ್ಷಗಟ್ಟಲೆ ಜನ್ರು ಮಹಾ ಬಾಬೆಲನ್ನ ಬಿಟ್ಟು ಈ ‘ಪವಿತ್ರ ದಾರಿಯಲ್ಲಿ’ ನಡಿಯೋಕೆ ಶುರು ಮಾಡಿದ್ದಾರೆ. ನಾವು ಕೂಡ ತಲುಪಬೇಕಾದ ಜಾಗಕ್ಕೆ ಹೋಗೋ ತನಕ ಈ ದಾರಿಯಲ್ಲೇ ನಡೀತಾ ಇರಬೇಕು.

c ಚಿತ್ರ ವಿವರಣೆ: ಸಹೋದರ ರಸಲ್‌ ಮತ್ತು ಅವ್ರ ಜೊತೆ ಇದ್ದವರು ಬೈಬಲ್‌ ಅಧ್ಯಯನ ಮಾಡ್ತಿದ್ದಾರೆ. ಅವ್ರಿಗಿಂತ ಮುಂಚೆ ಇದ್ದ ಕೆಲವರು ತಯಾರಿಸಿದ್ದ ಪುಸ್ತಕಗಳನ್ನ ಅವರು ಬಳಸ್ಕೊಳ್ತಾ ಇದ್ದಾರೆ.