ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 23

“ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರಲಿ

“ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರಲಿ

“ಪ್ರೇಮಾಗ್ನಿಯು ಧಗಧಗಿಸೋ ಜ್ವಾಲೆ, ಅದು ಯಾಹುವಿನ ಜ್ವಾಲೆ.”—ಪರಮ. 8:6.

ಗೀತೆ 36 “ದೇವರು ಒಟ್ಟುಗೂಡಿಸಿದ್ದನ್ನು”

ಈ ಲೇಖನದಲ್ಲಿ ಏನಿದೆ? a

1. ನಿಜವಾದ ಪ್ರೀತಿ ಹೇಗಿರುತ್ತೆ ಅಂತ ಬೈಬಲ್‌ ಹೇಳುತ್ತೆ?

 ಗಂಡ-ಹೆಂಡತಿ ತಮ್ಮ ಮಧ್ಯ ಇರೋ ಪ್ರೀತಿಯನ್ನ ಬಾಡಿಹೋಗದೆ ಇರೋ ತರ ನೋಡ್ಕೊಳ್ಳೋಕೆ ಆಗುತ್ತಾ? ಆಗುತ್ತೆ. “[ನಿಜವಾದ ಪ್ರೀತಿ] ಧಗಧಗಿಸೋ ಜ್ವಾಲೆ, ಅದು ಯಾಹುವಿನ ಜ್ವಾಲೆ. ಮುನ್ನುಗ್ಗಿ ಬರೋ ಪ್ರವಾಹ ಕೂಡ ಪ್ರೀತಿಯನ್ನ ನಂದಿಸಲಾರದು, ಹರಿದು ಬರೋ ನದಿಗಳು ಕೂಡ ಅದನ್ನ ಕೊಚ್ಚಿಕೊಂಡು ಹೋಗಲಾರವು” ಅಂತ ಬೈಬಲ್‌ ಹೇಳುತ್ತೆ. bಪರಮ. 8:6, 7.

2. ತಮ್ಮ ಮಧ್ಯ ಇರೋ ಪ್ರೀತಿ ಆರಿಹೋಗದೆ ಇರೋಕೆ ಗಂಡ-ಹೆಂಡತಿ ಏನು ಮಾಡಬೇಕು?

2 ಗಂಡ-ಹೆಂಡತಿ ತಮ್ಮ ಉಸಿರು ಇರೋ ತನಕ ಒಬ್ರನ್ನೊಬ್ರು ಪ್ರೀತಿಸೋದು ಅವ್ರ ಕೈಯಲ್ಲೇ ಇದೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಬೆಂಕಿ ಯಾವಾಗ್ಲೂ ಉರೀತಾ ಇರಬೇಕಂದ್ರೆ ಅದಕ್ಕೆ ಕಟ್ಟಿಗೆ ಬೇಕು. ಇಲ್ಲಾಂದ್ರೆ ಬೆಂಕಿ ಆರಿಹೋಗಿಬಿಡುತ್ತೆ. ಅದೇ ತರ ಗಂಡ-ಹೆಂಡತಿ ಮಧ್ಯ ಇರೋ ಪ್ರೀತಿ ಶಾಶ್ವತವಾಗಿ ಇರಬೇಕಂದ್ರೆ ತಮ್ಮ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ಇಬ್ರೂ ಪ್ರಯತ್ನ ಹಾಕ್ತಾ ಇರಬೇಕು. ಇಲ್ಲಾಂದ್ರೆ ಸಮಯ ಹೋಗ್ತಾ ಹೋಗ್ತಾ ಆ ಪ್ರೀತಿ ಕಮ್ಮಿ ಆಗಿಬಿಡಬಹುದು. ಅದ್ರಲ್ಲೂ ಹಣಕಾಸಿನ ತೊಂದ್ರೆ ಬಂದಾಗ, ಹುಷಾರಿಲ್ಲದೆ ಆದಾಗ ಅಥವಾ ಮಕ್ಕಳನ್ನ ಬೆಳೆಸೋಕೆ ಕಷ್ಟ ಆದಾಗ ಆ ಪ್ರೀತಿ ಆರಿಹೋಗಿಬಿಡಬಹುದು. ಆದ್ರೆ “ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರೋಕೆ ನಾವು ಮಾಡಬೇಕಾದ 3 ವಿಷ್ಯಗಳನ್ನ ಈಗ ನೋಡೋಣ. c

ಯೆಹೋವನ ಜೊತೆ ನಿಮಗಿರೋ ಸ್ನೇಹನ ಜಾಸ್ತಿ ಮಾಡ್ಕೊಳ್ತಾ ಇರಿ

ಯೋಸೇಫ ಮತ್ತು ಮರಿಯ ತರ ಯೆಹೋವನ ಜೊತೆ ಇರೋ ನಿಮ್ಮ ಸ್ನೇಹನ ಜಾಸ್ತಿ ಮಾಡ್ಕೊಳ್ಳಿ (ಪ್ಯಾರ 3 ನೋಡಿ)

3. ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಂಡಾಗ ಗಂಡ-ಹೆಂಡತಿ ಮಧ್ಯ ಇರೋ ಪ್ರೀತಿ ಹೇಗೆ ಜಾಸ್ತಿ ಆಗುತ್ತೆ? (ಪ್ರಸಂಗಿ 4:12) (ಚಿತ್ರನೂ ನೋಡಿ.)

3 ಗಂಡ-ಹೆಂಡತಿ ಇಬ್ರೂ ಯೆಹೋವನ ಮೇಲೆ ಜಾಸ್ತಿ ಪ್ರೀತಿ ಬೆಳೆಸ್ಕೊಂಡ್ರೆ ಅವ್ರಿಬ್ರ ಮಧ್ಯ ಇರೋ ಪ್ರೀತಿ ಹೇಗೆ ಜಾಸ್ತಿ ಆಗುತ್ತೆ? ಅವ್ರಿಗೆ ಯೆಹೋವನ ಮೇಲೆ ಪ್ರೀತಿ, ಗೌರವ ಇದ್ರೆ ಆತನ ಮಾತನ್ನ ಕೇಳ್ತಾರೆ. ಇದ್ರಿಂದ ಅವ್ರ ಜೀವನದಲ್ಲಿ ಸಮಸ್ಯೆ ಬಂದ್ರೂ ಅದನ್ನ ಪರಿಹಾರ ಮಾಡ್ಕೊಳ್ಳೋಕೆ ಆಗುತ್ತೆ. ಕೆಲವೊಮ್ಮೆ ಸಮಸ್ಯೆಗಳೇ ಬರದಿರೋ ತರ ನೋಡ್ಕೊಳ್ಳೋಕೂ ಆಗುತ್ತೆ. ಆಗ ಅವ್ರ ಮಧ್ಯ ಇರೋ ಪ್ರೀತಿ ಆರಿಹೋಗಲ್ಲ. (ಪ್ರಸಂಗಿ 4:12 ಓದಿ.) ಅಷ್ಟೇ ಅಲ್ಲ ಅವ್ರಿಬ್ರಿಗೆ ಯೆಹೋವನ ಮೇಲೆ ಪ್ರೀತಿ ಇದ್ರೆ ಆತನಲ್ಲಿರೋ ಗುಣಗಳನ್ನ ಬೆಳೆಸ್ಕೊಳ್ತಾರೆ. ಆಗ ಒಬ್ರನ್ನೊಬ್ರು ಅರ್ಥ ಮಾಡ್ಕೊಳ್ತಾರೆ, ತಾಳ್ಮೆ ತೋರಿಸ್ತಾರೆ, ಕ್ಷಮಿಸ್ತಾರೆ. (ಎಫೆ. 4:32–5:1) ಇಂಥ ಗುಣಗಳನ್ನ ಬೆಳೆಸ್ಕೊಂಡ್ರೆ ಪ್ರೀತಿ ತೋರಿಸೋಕೆ ಸುಲಭ ಆಗುತ್ತೆ. ಇದನ್ನೇ ಸಹೋದರಿ ಲೀನಾ ಹೇಳ್ತಾರೆ. ಅವ್ರಿಗೆ ಮದುವೆ ಆಗಿ 25 ವರ್ಷ ದಾಟಿದೆ. ಅವರು ಹೇಳೋದು: “ಯೆಹೋವನ ತರ ನಡ್ಕೊಳ್ಳೋ ವ್ಯಕ್ತಿನ ಪ್ರೀತಿಸೋಕೆ, ಗೌರವಿಸೋಕೆ ಒಂಚೂರೂ ಕಷ್ಟ ಆಗಲ್ಲ.”

4. ಯೇಸುವಿನ ಅಪ್ಪಅಮ್ಮ ಆಗಿರೋಕೆ ಯೋಸೇಫ ಮತ್ತು ಮರಿಯಳನ್ನೇ ಯೆಹೋವ ಯಾಕೆ ಆರಿಸ್ಕೊಂಡನು?

4 ಯೋಸೇಫ ಮತ್ತು ಮರಿಯ ಅವ್ರ ಉದಾಹರಣೆ ನೋಡಿ. ಅವ್ರನ್ನ ಯೇಸುವಿನ ಅಪ್ಪಅಮ್ಮ ಆಗಿರೋಕೆ ಯೆಹೋವ ಆರಿಸ್ಕೊಂಡನು. ದಾವೀದನ ವಂಶದವರು ಇನ್ನೂ ತುಂಬ ಜನ ಅಲ್ಲಿ ಇದ್ರು. ಆದ್ರೂ ಯಾಕೆ ಯೆಹೋವ ಅವ್ರನ್ನೇ ಆರಿಸ್ಕೊಂಡನು? ಯಾಕಂದ್ರೆ ಅವ್ರಿಬ್ರಿಗೂ ಯೆಹೋವನ ಜೊತೆ ಒಳ್ಳೇ ಸ್ನೇಹ ಇತ್ತು. ಅವ್ರ ಮದುವೆ ಆದ್ಮೇಲೂ ಆ ಸ್ನೇಹ ಕಡಿಮೆ ಆಗಲ್ಲ ಅಂತ ಆತನಿಗೆ ಗೊತ್ತಿತ್ತು. ಮರಿಯ ಮತ್ತು ಯೋಸೇಫನಿಂದ ನಾವೇನು ಕಲಿಬಹುದು ಅಂತ ಈಗ ನೋಡೋಣ.

5. ಯೋಸೇಫನ ತರ ಗಂಡಂದಿರು ಏನು ಮಾಡಬೇಕು?

5 ಯೋಸೇಫ ಒಬ್ಬ ಒಳ್ಳೇ ಗಂಡನಾಗಿರೋಕೆ ಕಾರಣ ಏನು ಗೊತ್ತಾ? ಅವನು ಎಲ್ಲಾನೂ ಯೆಹೋವ ಹೇಳಿದ ತರಾನೇ ಮಾಡ್ತಾ ಇದ್ದ. ಮೂರು ಸಂದರ್ಭಗಳಲ್ಲಿ ಯೆಹೋವ ಅವನಿಗೆ ತನ್ನ ಕುಟುಂಬನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ಹೇಳಿದನು. ಅದನ್ನ ಪಾಲಿಸೋದು ಅಷ್ಟು ಸುಲಭ ಆಗಿರಲಿಲ್ಲ. ಆದ್ರೂ ಯೋಸೇಫ ಯೆಹೋವ ಹೇಳಿದ ತರಾನೇ ತಕ್ಷಣ ಮಾಡಿದ. (ಮತ್ತಾ. 1:20, 24; 2:13-15, 19-21) ಇದ್ರಿಂದ ಅವನು ಮರಿಯನ ಕಾಪಾಡೋಕೆ ಆಯ್ತು. ಅವಳನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಆಯ್ತು. ಇದನ್ನೆಲ್ಲ ನೋಡಿದಾಗ ಮರಿಯಗೆ ಯೋಸೇಫನ ಮೇಲೆ ಪ್ರೀತಿ ಗೌರವ ಜಾಸ್ತಿ ಆಗಿರಬೇಕಲ್ವಾ? ಗಂಡಂದಿರಿಗೆ ಯೋಸೇಫ ಒಳ್ಳೇ ಮಾದರಿ ಆಗಿದ್ದಾನೆ. ಕುಟುಂಬನ ಹೇಗೆ ನೋಡ್ಕೊಂಡ್ರೆ ಯೆಹೋವನಿಗೆ ಇಷ್ಟ ಆಗುತ್ತೆ ಅನ್ನೋದನ್ನ ಕುಟುಂಬದ ಯಜಮಾನ್ರು ತಿಳ್ಕೊಬೇಕು. d ಅದನ್ನ ಪಾಲಿಸೋಕೆ ಕಷ್ಟ ಆದ್ರೂ ಅದನ್ನ ಮಾಡಬೇಕು. ಹೀಗೆ ಮಾಡಿದಾಗ ನಿಮ್ಮ ಹೆಂಡತಿಯನ್ನ ನೀವೆಷ್ಟು ಪ್ರೀತಿಸ್ತೀರಿ ಅಂತ ತೋರಿಸ್ತೀರ. ನಿಮ್ಮ ಮಧ್ಯ ಇರೋ ಪ್ರೀತಿನೂ ಜಾಸ್ತಿ ಆಗುತ್ತೆ. ವನವಾಟುನಲ್ಲಿರೋ ಒಬ್ಬ ಸಹೋದರಿ ಮದುವೆ ಆಗಿ 20 ವರ್ಷ ದಾಟಿದೆ. ಅವರು ಏನು ಹೇಳ್ತಾರೆ ಅಂದ್ರೆ “ನನ್ನ ಗಂಡ ಯೆಹೋವನಿಗೆ ಏನಿಷ್ಟ ಅನ್ನೋದನ್ನ ಮೊದ್ಲು ತಿಳ್ಕೊಂಡು ಅದನ್ನೇ ಮಾಡ್ತಾರೆ. ಇದ್ರಿಂದ ನನಗೆ ಅವ್ರ ಮೇಲಿರೋ ಗೌರವ ಜಾಸ್ತಿ ಆಗಿದೆ. ಅವರು ಮಾಡೋ ನಿರ್ಧಾರಗಳೆಲ್ಲ ಸರಿಯಾಗೇ ಇರುತ್ತೆ ಅನ್ನೋ ನಂಬಿಕೆ ಬಂದಿದೆ.”

6. ಮರಿಯ ತರಾನೇ ಹೆಂಡತಿಯರು ಏನು ಮಾಡಬೇಕು?

6 ‘ನನ್ನ ಗಂಡನಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇದ್ಯಲ್ಲಾ, ಅಷ್ಟು ಸಾಕು’ ಅಂತ ಮರಿಯ ಅಂದ್ಕೊಳ್ಳಲಿಲ್ಲ. ಅವಳು ಕೂಡ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಂಡಳು. ಅವಳಿಗೆ ಪವಿತ್ರ ಗ್ರಂಥದಲ್ಲಿರೋ ಎಷ್ಟೋ ವಿಷ್ಯಗಳು ಚೆನ್ನಾಗಿ ಗೊತ್ತಿತ್ತು. e ಅದ್ರ ಬಗ್ಗೆ ಅವಳು ಯಾವಾಗ್ಲೂ ಯೋಚ್ನೆ ಮಾಡ್ತಿದ್ದಳು. (ಲೂಕ 2:19, 51) ಅದಕ್ಕೆ ಅವಳು ಒಬ್ಬ ಒಳ್ಳೇ ಹೆಂಡತಿ ಆಗಿದ್ದಳು. ಇವತ್ತು ಎಷ್ಟೋ ಸಹೋದರಿಯರು ಮರಿಯ ತರಾನೇ ಮಾಡ್ತಿದ್ದಾರೆ. ನಾವೀಗ ಎಮಿಕೊ ಅನ್ನೋ ಸಹೋದರಿಯ ಉದಾಹರಣೆ ನೋಡೋಣ. “ನಾನು ಮದುವೆಗೆ ಮುಂಚೆ ಪ್ರಾರ್ಥನೆ ಮಾಡೋಕೆ, ಬೈಬಲ್‌ ಓದೋಕೆ ಸಮಯ ಮಾಡ್ಕೊಳ್ತಾ ಇದ್ದೆ. ಆದ್ರೆ ಮದುವೆ ಆದ್ಮೇಲೆ ನನ್ನ ಗಂಡನೇ ಕುಟುಂಬ ಆರಾಧನೆ ಮಾಡ್ತಿದ್ರು, ಪ್ರಾರ್ಥನೆ ಮಾಡ್ತಿದ್ರು. ‘ಎಲ್ಲಾನೂ ನನ್ನ ಗಂಡ ಮಾಡ್ತಿದ್ದಾರಲ್ಲಾ, ಅಷ್ಟೇ ಸಾಕು’ ಅಂತ ಅಂದ್ಕೊಳ್ತಿದ್ದೆ. ಆದ್ರೆ ನಾನು ಅಂದ್ಕೊಂಡಿದ್ದು ತಪ್ಪು ಅಂತ ಆಮೇಲೆ ಗೊತ್ತಾಯ್ತು. ಯೆಹೋವನ ಜೊತೆ ನನಗಿರೋ ಸ್ನೇಹನ ನಾನೇ ಗಟ್ಟಿ ಮಾಡ್ಕೊಬೇಕು ಅಂತ ಅರ್ಥ ಮಾಡ್ಕೊಂಡೆ. ಅದಕ್ಕೆ ಈಗ ಪ್ರಾರ್ಥನೆ ಮಾಡೋಕೆ, ಓದಿದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡೋಕೆ ಸಮಯ ಮಾಡ್ಕೊಳ್ತೀನಿ” ಅಂತ ಅವರು ಹೇಳ್ತಾರೆ. (ಗಲಾ. 6:5) ಹೆಂಡತಿಯರೇ, ಯೆಹೋವನ ಜೊತೆ ಜಾಸ್ತಿ ಸ್ನೇಹ ಬೆಳೆಸ್ಕೊಳ್ಳಿ. ಆಗ ನಿಮ್ಮ ಗಂಡ ನಿಮ್ಮನ್ನ ತುಂಬ ಮೆಚ್ಕೊಳ್ತಾರೆ. ನಿಮ್ಮ ಮೇಲಿರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ.—ಜ್ಞಾನೋ. 31:30.

7. ಯೋಸೇಫ ಮತ್ತು ಮರಿಯ ಅವ್ರಿಂದ ಗಂಡ-ಹೆಂಡತಿ ಏನು ಕಲಿಬಹುದು?

7 ಯೋಸೇಫ ಮತ್ತು ಮರಿಯ ಯೆಹೋವನ ಜೊತೆ ಇದ್ದ ಸ್ನೇಹನ ಜಾಸ್ತಿ ಮಾಡ್ಕೊಳ್ಳೋಕೆ ಇಬ್ರೂ ಸೇರಿ ಪ್ರಯತ್ನ ಹಾಕಿದ್ರು. ಯಾಕಂದ್ರೆ ಅವರು ಜೊತೆಯಾಗಿ ಯೆಹೋವನ ಸೇವೆ ಮಾಡೋದು ತುಂಬ ಮುಖ್ಯ ಅಂತ ಅವ್ರಿಗೆ ಗೊತ್ತಿತ್ತು. (ಲೂಕ 2:22-24, 41; 4:16) ಇದನ್ನ ಮಾಡೋಕೆ ಅವ್ರಿಗೆ ಮಕ್ಕಳಾದ ಮೇಲೆ ಸ್ವಲ್ಪ ಕಷ್ಟ ಆಗಿರಬಹುದು. ಆದ್ರೂ ತಪ್ಪದೆ ಯೆಹೋವನ ಆರಾಧನೆ ಮಾಡ್ತಿದ್ರು. ಇವತ್ತು ಗಂಡ-ಹೆಂಡತಿಯರು ಯೋಸೇಫ ಮರಿಯ ತರಾನೇ ಇರಬೇಕು. ಮಕ್ಕಳಿದ್ರೆ ಅವ್ರನ್ನ ಕೂಟಗಳಿಗೆ ಕರ್ಕೊಂಡು ಹೋಗೋಕೆ, ಕುಟುಂಬ ಆರಾಧನೆ ಮಾಡೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ. ಈ ತರ ಜವಾಬ್ದಾರಿಗಳು ಇದ್ದಾಗ ಗಂಡ-ಹೆಂಡತಿಗೆ ಜೊತೆಯಾಗಿ ಬೈಬಲ್‌ ಓದೋಕೆ, ಪ್ರಾರ್ಥನೆ ಮಾಡೋಕೆ ಕೆಲವೊಮ್ಮೆ ಸಮಯ ಸಿಗಲ್ಲ. ಆದ್ರೂ ಅವರು ತಪ್ಪದೆ ಯೆಹೋವನ ಆರಾಧನೆಯನ್ನ ಮಾಡಬೇಕು. ಹೀಗೆ ಮಾಡಿದ್ರೆ ಅವ್ರಿಬ್ರು ಯೆಹೋವನಿಗೆ ಹತ್ರ ಆಗ್ತಾರೆ. ಅಷ್ಟೇ ಅಲ್ಲ, ಅವರೂ ಒಬ್ರಿಗೊಬ್ರು ಹತ್ರ ಆಗ್ತಾರೆ.

8. ಗಂಡ-ಹೆಂಡತಿ ಒಟ್ಟಿಗೆ ಸೇರಿ ಯೆಹೋವನನ್ನ ಆರಾಧಿಸೋಕೆ ಕಷ್ಟ ಆಗ್ತಿದ್ರೆ ಏನು ಮಾಡಬೇಕು?

8 ಕೆಲವು ಕಡೆ ಗಂಡ-ಹೆಂಡತಿ ಸಂಬಂಧ ಎಣ್ಣೆ ಸೀಗೆಕಾಯಿ ತರ ಆಗಿಬಿಟ್ಟಿರುತ್ತೆ. ಅವ್ರಿಗೆ ಕುಟುಂಬ ಆರಾಧನೆ ಮಾಡೋಕೆ ಮನಸ್ಸೇ ಆಗಲ್ಲ. ಆಗ ಗಂಡ-ಹೆಂಡತಿ ಏನು ಮಾಡಬಹುದು? ಇಬ್ರಿಗೂ ಇಷ್ಟ ಆಗೋ ಒಂದು ವಿಷ್ಯವನ್ನ ಆರಿಸ್ಕೊಂಡು ಚುಟುಕಾಗಿ ಚರ್ಚೆ ಮಾಡೋಕೆ ಶುರುಮಾಡಬಹುದು. ಇದನ್ನ ಮಾಡ್ತಾ ಇದ್ರೆ ಅವ್ರ ನಡುವೆ ಇರೋ ಬಿರುಕು ಕಮ್ಮಿ ಆಗುತ್ತೆ. ಇಬ್ರು ಒಟ್ಟಿಗೆ ಸೇರಿ ಯೆಹೋವನನ್ನ ಆರಾಧನೆ ಮಾಡಬೇಕು ಅನ್ನೋ ಆಸೆ ಜಾಸ್ತಿ ಆಗುತ್ತೆ.

ಒಟ್ಟಿಗೆ ಸಮಯ ಕಳೀರಿ

9. ಗಂಡ-ಹೆಂಡತಿ ಯಾಕೆ ಒಟ್ಟಿಗೆ ಸಮಯ ಕಳೀಬೇಕು?

9 ಗಂಡ-ಹೆಂಡತಿ ಮಧ್ಯ ಇರೋ ಪ್ರೀತಿಯ ಜ್ವಾಲೆ ಯಾವಾಗ್ಲೂ ಉರೀತಾ ಇರಬೇಕಂದ್ರೆ ಅವ್ರಿಬ್ರು ಒಟ್ಟಿಗೆ ಸಮಯ ಕಳೀಬೇಕು. ಆಗ ಒಬ್ರಿಗೊಬ್ರು ಹತ್ರ ಆಗ್ತಾರೆ. ತನ್ನ ಸಂಗಾತಿ ಮನಸ್ಸಲ್ಲಿ ಏನಿದೆ ಅಂತ ಚೆನ್ನಾಗಿ ಗೊತ್ತಾಗುತ್ತೆ. (ಆದಿ. 2:24) ಲಿಲಿಯ ಮತ್ತು ರುಸ್ಲಾನ್‌ ಅವ್ರ ಅನುಭವ ನೋಡಿ. ಅವ್ರಿಗೆ ಮದುವೆ ಆಗಿ 15 ವರ್ಷದ ಮೇಲೆ ಆಗಿದೆ. ಸಹೋದರಿ ಹೇಳೋದು: “ಮದುವೆ ಆದ್ಮೇಲೆ ನಾವಿಬ್ರು ಯಾವಾಗ್ಲೂ ಜೊತೆಜೊತೆಯಾಗಿ ಇರ್ತೀವಿ ಅಂತ ಅಂದ್ಕೊಂಡ್ವಿ. ಆದ್ರೆ ಹೊರಗಿನ ಕೆಲಸ, ಮನೆ ಕೆಲಸ, ಮಕ್ಕಳನ್ನ ಬೆಳೆಸೋದ್ರಲ್ಲೇ ಸಮಯ ಎಲ್ಲಾ ಹೋಗಿಬಿಡ್ತಿತ್ತು. ನಮ್ಮಿಬ್ರಿಗೆ ಅಂತ ಸಮಯನೇ ಇರ್ತಾ ಇರಲಿಲ್ಲ. ಆದ್ರೆ ನಾವು ಇದನ್ನ ಹೀಗೆ ಬಿಟ್ಟುಬಿಟ್ರೆ ನಮ್ಮ ಮನಸ್ಸು ದೂರ ಆಗಿಬಿಡುತ್ತೆ ಅಂತ ಆಮೇಲೆ ಅರ್ಥ ಮಾಡ್ಕೊಂಡ್ವಿ.”

10. ಗಂಡ-ಹೆಂಡತಿ ಎಫೆಸ 5:15, 16ರಲ್ಲಿರೋ ಬುದ್ಧಿವಾದನ ಪಾಲಿಸೋಕೆ ಏನು ಮಾಡಬೇಕು?

10 ಗಂಡ-ಹೆಂಡತಿ ಒಬ್ರಿಗೊಬ್ರು ಸಮಯ ಮಾಡ್ಕೊಳ್ಳೋದು ಹೇಗೆ? ಹೆಂಡತಿ ಗಂಡನಿಗೋಸ್ಕರ, ಗಂಡ ಹೆಂಡತಿಗೋಸ್ಕರ ಬಿಡುವು ಮಾಡ್ಕೊಬೇಕು. (ಎಫೆಸ 5:15, 16 ಓದಿ.) ನೈಜೀರಿಯದಲ್ಲಿರೋ ಸಹೋದರ ಉಜೂಂಡು ಹೀಗೆ ಹೇಳ್ತಾರೆ: “ನಾನು ಯಾವಾಗ ಏನು ಕೆಲಸ ಮಾಡಬೇಕು ಅನ್ನೋದನ್ನ ಶೆಡ್ಯೂಲ್‌ ಮಾಡುವಾಗ ನನ್ನ ಹೆಂಡತಿಗೆ ಕೊಡೋ ಟೈಮನ್ನೂ ಬರೆದು ಇಡ್ತೀನಿ. ಏನೇ ಆದ್ರೂ ಟೈಮ್‌ ಕೊಡೋದನ್ನ ತಪ್ಪಿಸಲ್ಲ.” (ಫಿಲಿ. 1:10) ಮಾಲ್ಡೋವದಲ್ಲಿರೋ ಅನಸ್ತಾಸಿಯಾ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಒಬ್ಬ ಸರ್ಕಿಟ್‌ ಮೇಲ್ವಿಚಾರಕನ ಹೆಂಡತಿಯಾಗಿರೋ ಅವರು ತಮ್ಮ ಗಂಡನಿಗೋಸ್ಕರ ಹೇಗೆ ಸಮಯ ಮಾಡ್ಕೊಳ್ತಾರೆ ಅಂತ ನೋಡಿ. “ನನ್ನ ಗಂಡ ಸಭೆಯ ಕೆಲಸದಲ್ಲಿ ಬಿಜಿ಼ಯಾಗಿ ಇರುವಾಗ ನಾನು ನನ್ನ ಕೆಲಸಗಳನ್ನೆಲ್ಲ ಮಾಡ್ಕೊಳ್ತೀನಿ. ಆಮೇಲೆ ಇಬ್ರೂ ಜೊತೆಯಾಗಿ ಸಮಯ ಕಳಿಯೋಕೆ ಆಗುತ್ತೆ” ಅಂತ ಸಹೋದರಿ ಹೇಳ್ತಾರೆ. ಆದ್ರೆ ಒಂದುವೇಳೆ ಗಂಡ-ಹೆಂಡತಿ ಒಬ್ರಿಗೊಬ್ರು ಸಮಯ ಮಾಡ್ಕೊಳ್ಳೋಕೆ ಆಗ್ತಾನೇ ಇಲ್ಲಾಂದ್ರೆ ಏನು ಮಾಡೋದು?

ಗಂಡ-ಹೆಂಡತಿಯಾಗಿ ನೀವಿಬ್ರು ಒಟ್ಟಿಗೆ ಏನೆಲ್ಲ ಮಾಡಬಹುದು? (ಪ್ಯಾರ 11-12 ನೋಡಿ)

11. ಅಕ್ವಿಲ ಮತ್ತು ಪ್ರಿಸ್ಕಿಲ್ಲ ಜೊತೆಜೊತೆಯಾಗಿ ಏನೆಲ್ಲ ಮಾಡ್ತಿದ್ರು?

11 ಅಕ್ವಿಲ ಮತ್ತು ಪ್ರಿಸ್ಕಿಲ್ಲ ಅವ್ರ ಉದಾಹರಣೆ ನೋಡಿ. ಆಗಿದ್ದ ಕ್ರೈಸ್ತರಿಗೆ ಅವರಂದ್ರೆ ತುಂಬ ಇಷ್ಟ. (ರೋಮ. 16:3, 4) ಅವ್ರ ಮದುವೆ ಜೀವನದ ಬಗ್ಗೆ ಬೈಬಲಲ್ಲಿ ಅಷ್ಟೇನೂ ಮಾಹಿತಿ ಕೊಟ್ಟಿಲ್ಲ. ಆದ್ರೆ ಅವರು ಕೆಲಸ ಮಾಡುವಾಗ, ಸಿಹಿಸುದ್ದಿ ಸಾರುವಾಗ, ಬೇರೆಯವ್ರಿಗೆ ಸಹಾಯ ಮಾಡುವಾಗ ಅವರು ಜೊತೆಯಾಗಿ ಇರ್ತಿದ್ರು ಅಂತ ಗೊತ್ತಾಗುತ್ತೆ. (ಅ. ಕಾ. 18:2, 3, 24-26) ಅದಷ್ಟೇ ಅಲ್ಲ, ಬೈಬಲಲ್ಲೂ ಅವ್ರ ಹೆಸ್ರು ಯಾವಾಗ್ಲೂ ಜೊತೆಯಾಗೇ ಇರುತ್ತೆ.

12. ಗಂಡ-ಹೆಂಡತಿ ಆದಷ್ಟು ಜೊತೆಯಾಗಿ ಸಮಯ ಕಳಿಯೋಕೆ ಏನು ಮಾಡಬಹುದು? (ಚಿತ್ರನೂ ನೋಡಿ.)

12 ಅಕ್ವಿಲ ಮತ್ತು ಪ್ರಿಸ್ಕಿಲ್ಲಯಿಂದ ಏನು ಕಲಿಬಹುದು? ಅವರು ತುಂಬ ಕೆಲಸಗಳನ್ನ ಜೊತೆಜೊತೆಯಾಗಿ ಮಾಡ್ತಿದ್ರು. ಅದೇ ತರ ನೀವು ಜೊತೆಯಾಗಿ ಏನೆಲ್ಲ ಮಾಡಬಹುದು ಅಂತ ಯೋಚ್ನೆ ಮಾಡಿ. ಅವ್ರಿಬ್ರು ಜೊತೆಯಾಗಿ ಸಿಹಿಸುದ್ದಿ ಸಾರ್ತಾ ಇದ್ರು. ನೀವು ಕೂಡ ಆಗಾಗ ಅವ್ರ ತರಾನೇ ಸಿಹಿಸುದ್ದಿ ಸಾರಬಹುದಲ್ವಾ? ಅಷ್ಟೇ ಅಲ್ಲ, ಅವ್ರಿಬ್ರು ಕೆಲಸನೂ ಒಟ್ಟಿಗೆ ಮಾಡ್ತಿದ್ರು. ಅದರರ್ಥ ನೀವು ಕೂಡ ಒಂದೇ ಕಡೆ ಕೆಲಸಕ್ಕೆ ಹೋಗಬೇಕಂತಲ್ಲ. ಆದ್ರೆ ಮನೆಕೆಲಸನ ಇಬ್ರೂ ಸೇರಿ ಮಾಡಬಹುದಲ್ವಾ? (ಪ್ರಸಂ. 4:9) ಈ ರೀತಿ ಜೊತೆಯಾಗಿ ಕೆಲಸ ಮಾಡಿದಾಗ ಮಾತಾಡೋಕೆ ನಿಮಗೆ ತುಂಬ ಟೈಮ್‌ ಸಿಗುತ್ತೆ. ನೀವಿಬ್ರು ಫ್ರೆಂಡ್ಸ್‌ ತರ ಆಗ್ತಿರ. ರಾಬರ್ಟ್‌ ಮತ್ತು ಲಿಂಡ ಮದುವೆಯಾಗಿ 50 ವರ್ಷ ಆಗಿದೆ. ಅವ್ರಿಬ್ರು ಜೊತೆಯಾಗಿ ಏನೇನು ಮಾಡ್ತಾರೆ ಅನ್ನೋದ್ರ ಬಗ್ಗೆ ಸಹೋದರ ಹೀಗೆ ಹೇಳ್ತಾರೆ: “ನಿಜ ಹೇಳಬೇಕಂದ್ರೆ, ಜೊತೆಯಾಗಿ ಇರೋಕೆ ನಮ್ಮಿಬ್ರಿಗೆ ಸಮಯನೇ ಸಿಗಲ್ಲ. ಅದಕ್ಕೆ ನಾವು ಮನೆಕೆಲಸನ ಒಟ್ಟಿಗೆ ಮಾಡ್ತೀವಿ. ಮನೇಲಿ ಪಾತ್ರೆ ಏನಾದ್ರೂ ತೊಳಿಯೋಕೆ ಇದ್ರೆ ನಾನು ಅದನ್ನ ತೊಳಿತೀನಿ. ಅವಳು ಅದನ್ನೆಲ್ಲ ಒರೆಸಿಡ್ತಾಳೆ. ನಾನು ತೋಟದಲ್ಲಿ ಕಳೆ ಕೀಳುವಾಗ ನನ್ನ ಜೊತೆ ಕೈ ಜೋಡಿಸ್ತಾಳೆ. ಆಗ ನನಗೆ ತುಂಬ ಖುಷಿ ಆಗುತ್ತೆ. ನಾವಿಬ್ರು ಹೀಗೆ ಒಟ್ಟಿಗೆ ಕೆಲಸ ಮಾಡೋದ್ರಿಂದ ಒಬ್ರಿಗೊಬ್ರು ತುಂಬ ಹತ್ರ ಆಗಿದ್ದೀವಿ. ಇದ್ರಿಂದ ನಮ್ಮ ಪ್ರೀತಿ ಇಲ್ಲಿ ತನಕ ಬಾಡಿಹೋಗಿಲ್ಲ, ಬೆಳಿತಾನೇ ಇದೆ.”

13. ಗಂಡ-ಹೆಂಡತಿ ಜೊತೆಯಾಗಿ ಸಮಯ ಕಳಿಯೋದು ಅಂದ್ರೆ ಏನು?

13 ಜೊತೆಯಾಗಿ ಸಮಯ ಕಳಿಯೋದು ಅಂದ್ರೆ ಸುಮ್ನೆ ಒಟ್ಟಿಗೆ ಇರೋದಲ್ಲ. ಬ್ರಸಿಲ್‌ನಲ್ಲಿರೋ ಸಹೋದರಿ ಏನು ಹೇಳ್ತಾರೆ ನೋಡಿ: “ನಾವು ತುಂಬ ಬಿಜಿ಼ಯಾಗಿ ಇರೋದ್ರಿಂದ ‘ನಾವು ಒಂದೇ ಮನೆಯಲ್ಲಿ ಇದ್ದೀವಲ್ಲಾ, ಒಟ್ಟಿಗೆ ಇದ್ದೀವಲ್ಲಾ, ಇನ್ನೇನು ಬೇಕು’ ಅಂತ ಯೋಚ್ನೆ ಮಾಡಿಬಿಡ್ತೀವಿ. ಆದ್ರೆ ನಾನು ನನ್ನ ಗಂಡನ ಜೊತೆ ಇದ್ರೆ ಸಾಕಾಗಲ್ಲ. ಅವ್ರಿಗೆ ಗಮನ ಕೊಡಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡೆ.” ಬ್ರೂನೋ ಮತ್ತು ಅವ್ರ ಹೆಂಡತಿ ಟೇಸ್‌ ಏನು ಮಾಡ್ತಾರೆ ಅಂತ ನೋಡಿ. ಆ ಸಹೋದರ ಹೇಳೋದು: “ನಾವಿಬ್ರು ಒಟ್ಟಿಗೆ ಇರುವಾಗ ನಮ್ಮ ಫೋನ್‌ಗಳನ್ನ ದೂರ ಇಟ್ಟುಬಿಡ್ತೀವಿ. ಇದ್ರಿಂದ ಒಬ್ರಿಗೊಬ್ರು ಗಮನ ಕೊಡಕ್ಕಾಗುತ್ತೆ.”

14. ಗಂಡ-ಹೆಂಡತಿಗೆ ಒಟ್ಟಿಗೆ ಸಮಯ ಕಳಿಯೋಕೆ ಇಷ್ಟ ಆಗದೇ ಇದ್ದಾಗ ಏನು ಮಾಡೋದು?

14 ಕೆಲವೊಮ್ಮೆ ಗಂಡ-ಹೆಂಡತಿಗೆ ಒಟ್ಟಿಗೆ ಸಮಯ ಕಳಿಯೋಕೆ ಇಷ್ಟಾನೇ ಆಗಲ್ಲ. ಯಾಕಂದ್ರೆ ಗಂಡನಿಗೆ ಇಷ್ಟ ಆಗಿದ್ದು ಹೆಂಡತಿಗೆ ಇಷ್ಟ ಆಗಲ್ಲ. ಅಥವಾ ಹೆಂಡತಿ ಮಾಡಿದ್ದು ಗಂಡನಿಗೆ ಕಿರಿಕಿರಿ ಅನಿಸಿಬಿಡಬಹುದು. ಆಗೇನು ಮಾಡೋದು? ಕಟ್ಟಿಗೆಗೆ ಬೆಂಕಿ ಹಚ್ಚಿದ ತಕ್ಷಣ ಅದು ಜೋರಾಗಿ ಉರಿದು ಬಿಡುತ್ತಾ? ಇಲ್ಲ, ಮೊದ್ಲು ಚಿಕ್ಕಚಿಕ್ಕ ಕಟ್ಟಿಗೆಗಳನ್ನ ಹಾಕಬೇಕು. ಆಮೇಲೆ ದೊಡ್ಡ ದೊಡ್ಡ ಕಟ್ಟಿಗೆಗಳನ್ನ ಸೇರಿಸಿದಾಗ ಆ ಬೆಂಕಿ ಜಾಸ್ತಿ ಉರಿಯುತ್ತೆ. ಅದೇ ತರ ನೀವು ಮೊದ್ಲು ಸ್ವಲ್ಪ ಸಮಯ ಜೊತೆಯಾಗಿ ಇರೋಕೆ ಶುರುಮಾಡಿ. (ಯಾಕೋ. 3:18) ನಿಮ್ಮಿಬ್ರಿಗೂ ಇಷ್ಟ ಆಗೋ ವಿಷ್ಯಗಳನ್ನ ಮಾಡಿ. ಹೀಗೆ ಮಾಡ್ತಾ ಮಾಡ್ತಾ ನಿಮ್ಮ ಪ್ರೀತಿಯ ಜ್ವಾಲೆನೂ ಜೋರಾಗಿ ಉರಿಯುತ್ತೆ.

ಗೌರವದಿಂದ ನಡ್ಕೊಳ್ಳಿ

15. ಗಂಡ-ಹೆಂಡತಿ ಇಬ್ರೂ ಯಾಕೆ ಗೌರವದಿಂದ ನಡ್ಕೊಬೇಕು?

15 ಗೌರವ ಅನ್ನೋದು ಆಕ್ಸಿಜನ್‌ ಇದ್ದ ಹಾಗೆ. ಆಕ್ಸಿಜನ್‌ ಇದ್ರೆನೇ ಬೆಂಕಿ ಉರಿತಾ ಇರುತ್ತೆ. ಅದೇ ತರ ಗಂಡ-ಹೆಂಡತಿ ಮಧ್ಯ ಗೌರವ ಇದ್ರೆನೇ ಪ್ರೀತಿ ಜಾಸ್ತಿ ಆಗುತ್ತೆ. ಆದ್ರೆ ಒಂದು ವಿಷ್ಯ ನೆನಪಿಡಿ. ನೀವು ನಿಮ್ಮ ಸಂಗಾತಿಯನ್ನ ಗೌರವಿಸ್ತಾ ಇದ್ದೀರ ಅಂತ ನಿಮಗೆ ಅನಿಸಿದ್ರೆ ಸಾಲದು. ಅವ್ರ ಮೇಲೆ ನಿಮಗೆ ಗೌರವ ಇದೆ ಅಂತ ಅವ್ರಿಗೆ ಅನಿಸಬೇಕು. ಪೆನೀ ಮತ್ತು ಅರೆಟ್‌ ಮದುವೆ ಆಗಿ 25 ವರ್ಷ ದಾಟಿದೆ. ಆ ಸಹೋದರಿ ಹೀಗೆ ಹೇಳ್ತಾರೆ: “ನನಗೆ ನನ್ನ ಗಂಡನ ಮೇಲೆ ತುಂಬ ಗೌರವ ಇದೆ ಅಂತ ನಂಗೊತ್ತು. ಅದೇ ತರ ಅವ್ರಿಗೂ ನನ್ನ ಮೇಲೆ ತುಂಬ ಗೌರವ ಇದೆ. ಹಾಗಾಗಿ ನಾವು ಏನೇ ಇದ್ರೂ ಹೇಳ್ಕೊಳ್ತೀವಿ.” ಹಾಗಾದ್ರೆ ನಿಮ್ಮ ಸಂಗಾತಿಗೆ ನಿಮ್ಮಿಂದ ಗೌರವ ಸಿಗ್ತಿದೆ ಅಂತ ಗೊತ್ತಾಗೋಕೆ ನೀವೇನು ಮಾಡಬಹುದು? ಬನ್ನಿ, ಅಬ್ರಹಾಮ ಮತ್ತು ಸಾರ ಅವ್ರಿಂದ ಏನು ಕಲಿಬಹುದು ಅಂತ ನೋಡೋಣ.

ಹೆಂಡತಿ ಮಾತಾಡುವಾಗ ತಾಳ್ಮೆಯಿಂದ ಕೇಳಿ ಅವಳನ್ನ ಗೌರವಿಸ್ತೀರ ಅಂತ ತೋರಿಸಿ (ಪ್ಯಾರ 16 ನೋಡಿ)

16. ಅಬ್ರಹಾಮನ ತರ ಗಂಡಂದಿರು ಏನು ಮಾಡಬೇಕು? (1 ಪೇತ್ರ 3:7) (ಚಿತ್ರನೂ ನೋಡಿ.)

16 ಅಬ್ರಹಾಮ ಸಾರಗೆ ತುಂಬ ಗೌರವ ಕೊಡ್ತಿದ್ದ. ಅವಳ ಅಭಿಪ್ರಾಯಗಳಿಗೆ ಭಾವನೆಗಳಿಗೆ ತುಂಬ ಬೆಲೆ ಕೊಡ್ತಿದ್ದ. ಒಂದು ಸಲ ಸಾರ ತುಂಬ ದುಃಖದಲ್ಲಿ ಇದ್ದಳು. ಮನಸ್ಸಲ್ಲಿದ್ದ ಕೋಪನ್ನೆಲ್ಲ ಅಬ್ರಹಾಮನ ಮೇಲೆ ತೋರಿಸಿಬಿಟ್ಟಳು. ಆಗ್ತಿರೋ ಅನ್ಯಾಯಕ್ಕೆ ಅವನೇ ಕಾರಣ ಅಂತ ದೂರಿಬಿಟ್ಟಳು. ಆಗ ಅಬ್ರಹಾಮ ಕೋಪ ಮಾಡ್ಕೊಂಡು ಸಾರನ ಚೆನ್ನಾಗಿ ಬೈದುಬಿಟ್ನಾ? ಇಲ್ಲ, ಸಾರ ಹೇಳೋದನ್ನ ಅಬ್ರಹಾಮ ಚೆನ್ನಾಗಿ ಕೇಳಿಸ್ಕೊಂಡ. ಸಮಸ್ಯೆಯನ್ನ ಸರಿಮಾಡೋಕೆ ಪ್ರಯತ್ನ ಮಾಡಿದ. (ಆದಿ. 16:5, 6) ಯಾಕಂದ್ರೆ ಈ ಮುಂಚೆ ತಾನು ಮಾಡಿದ್ದ ಎಷ್ಟೋ ನಿರ್ಧಾರಗಳಿಗೆ ಸಾರ ಸಹಕಾರ ಕೊಟ್ಟಿದ್ದನ್ನ ನೆನಸ್ಕೊಂಡ. ಅವಳು ತನ್ನನ್ನ ಗೌರವಿಸ್ತಾಳೆ ಅಂತ ಅವನಿಗೆ ಗೊತ್ತಿತ್ತು. ಅಬ್ರಹಾಮನಿಂದ ಗಂಡಂದಿರು ಏನು ಕಲಿಬಹುದು? ಗಂಡಂದಿರೇ, ಕುಟುಂಬದಲ್ಲಿ ನಿರ್ಧಾರಗಳನ್ನ ಮಾಡೋ ಅಧಿಕಾರ ನಿಮಗಿದೆ. (1 ಕೊರಿಂ. 11:3) ಆದ್ರೆ ಆ ನಿರ್ಧಾರಗಳನ್ನ ತಗೊಳ್ಳೋ ಮುಂಚೆ ನಿಮ್ಮ ಹೆಂಡತಿ ಹತ್ರ ಒಂದು ಮಾತು ಕೇಳಿ. ಅದ್ರಲ್ಲೂ ಕುಟುಂಬದ ಪರವಾಗಿ ನಿರ್ಧಾರಗಳನ್ನ ಮಾಡುವಾಗ ನೀವಿದನ್ನ ಮಾಡಿ. (1 ಕೊರಿಂ. 13:4, 5) ಕೆಲವೊಮ್ಮೆ ನಿಮ್ಮ ಹೆಂಡತಿಗೇನೋ ತುಂಬ ಬೇಜಾರ್‌ ಆಗಿರುತ್ತೆ. ಅದನ್ನೆಲ್ಲ ನಿಮ್ಮ ಹತ್ರ ಹೇಳ್ಕೊಬೇಕು ಅಂತ ಅವ್ರಿಗೆ ಅನಿಸ್ತಾ ಇರುತ್ತೆ. ಆಗ ಅದನ್ನ ತಾಳ್ಮೆಯಿಂದ ಕೇಳಿಸ್ಕೊಳ್ಳಿ. (1 ಪೇತ್ರ 3:7 ಓದಿ.) ಆ್ಯಂಜೆಲಾ ಮತ್ತು ಡಿಮಿಟ್ರಿ ಮದುವೆ ಆಗಿ ಹತ್ತತ್ರ 30 ವರ್ಷ ಆಗಿದೆ. ಆ್ಯಂಜೆಲಾ ಮೇಲೆ ತನಗೆ ತುಂಬ ಗೌರವ ಇದೆ ಅಂತ ಡಿಮಿಟ್ರಿ ತೋರಿಸ್ಕೊಡ್ತಾರೆ. ಅದ್ರ ಬಗ್ಗೆ ಆ್ಯಂಜೆಲಾ ಹೇಳಿದ್ದು: “ನಾನು ಖುಷಿಯಾಗಿ ಇದ್ದಾಗ್ಲೂ ಬೇಜಾರಲ್ಲಿ ಇದ್ದಾಗ್ಲೂ ನನ್ನ ಮಾತನ್ನ ಕೇಳಿಸ್ಕೊಳ್ಳೋಕೆ ಡಿಮಿಟ್ರಿ ಯಾವಾಗ್ಲೂ ರೆಡಿ ಇರ್ತಾರೆ. ನಾನು ಕೋಪದಿಂದ ಏನಾದ್ರೂ ಹೇಳುವಾಗ್ಲೂ ತಾಳ್ಮೆಯಿಂದ ಕೇಳಿಸ್ಕೊಳ್ತಾರೆ.”

17. ಸಾರ ತರ ಹೆಂಡತಿಯರು ಏನು ಮಾಡಬೇಕು? (1 ಪೇತ್ರ 3:5, 6)

17 ಸಾರ ಹೇಗೆ ಅಬ್ರಹಾಮನನ್ನ ಗೌರವಿಸ್ತೀನಿ ಅಂತ ತೋರಿಸ್ಕೊಟ್ಟಳು? ಅವಳು ಅವನು ಮಾಡಿದ ನಿರ್ಧಾರಗಳಿಗೆ ಸಹಕಾರ ಕೊಟ್ಟಳು. (ಆದಿ. 12:5) ಒಂದು ಸಲ ಅಬ್ರಹಾಮ ಇದ್ದಕ್ಕಿದ್ದ ಹಾಗೆ ಅತಿಥಿಗಳನ್ನ ತನ್ನ ಮನೆಗೆ ಕರೆದ. ಸಾರ ಹತ್ರ ಹೋಗಿ, ಅವಳು ಮಾಡ್ತಿರೋ ಕೆಲಸನ ಅಲ್ಲೇ ಬಿಟ್ಟು ಎಲ್ರಿಗೂ ಅಡಿಗೆ ಮಾಡೋಕೆ ಹೇಳಿದ. ಎಲ್ರಿಗೂ ಸೇರಿಸಿ ಅವಳು ತುಂಬ ರೊಟ್ಟಿಗಳನ್ನ ಮಾಡಬೇಕಿತ್ತು. (ಆದಿ. 18:6) ಆದ್ರೂ ಅವಳು ತಾನು ಮಾಡ್ತಿದ್ದ ಕೆಲಸನ ಅಲ್ಲೇ ಬಿಟ್ಟು ಅಬ್ರಹಾಮ ಹೇಳಿದ ಹಾಗೆ ಮಾಡಿದಳು. ಹೆಂಡತಿಯರೇ, ನೀವು ಕೂಡ ಗಂಡಂದಿರು ಮಾಡೋ ನಿರ್ಧಾರಗಳಿಗೆ ಸಹಕಾರ ಕೊಡಿ. ಆಗ ನಿಮ್ಮಿಬ್ರ ಮಧ್ಯ ಇರೋ ಪ್ರೀತಿ ಸ್ನೇಹ ಜಾಸ್ತಿ ಆಗುತ್ತೆ. (1 ಪೇತ್ರ 3:5, 6 ಓದಿ.) ಹಿಂದಿನ ಪ್ಯಾರದಲ್ಲಿ ಹೇಳಿರೋ ಆ್ಯಂಜೆಲಾ ತನ್ನ ಗಂಡನ ಮೇಲೆ ಗೌರವ ಇದೆ ಅಂತ ತೋರಿಸ್ಕೊಟ್ರು. ಅದ್ರ ಬಗ್ಗೆ ಡಿಮಿಟ್ರಿ ಹೀಗೆ ಹೇಳ್ತಾರೆ: “ನಾನು ಮಾಡೋ ನಿರ್ಧಾರಗಳು ಆ್ಯಂಜೆಲಾಗೆ ಇಷ್ಟ ಇಲ್ಲಾಂದ್ರೂ ಅವಳು ಅದಕ್ಕೆ ಒಪ್ಕೊಳ್ತಾಳೆ. ಕೆಲವೊಮ್ಮೆ ನಾನು ಮಾಡೋ ನಿರ್ಧಾರಗಳಿಂದ ಏನಾದ್ರೂ ತಪ್ಪಾದ್ರೆ ನಿನ್ನಿಂದನೇ ಹೀಗಾಯ್ತು ಅಂತ ನನ್ನನ್ನ ದೂರಲ್ಲ. ಹೀಗೆ ನಾನು ಮಾಡೋ ನಿರ್ಧಾರಗಳಿಗೆ ಅವಳು ಸಹಕಾರ ಕೊಡ್ತಾಳೆ.” ಗಂಡ-ಹೆಂಡತಿ ಹೀಗೆ ಗೌರವದಿಂದ ನಡ್ಕೊಂಡಾಗ ಒಬ್ರಿಗೊಬ್ರು ಪ್ರೀತಿ ತೋರಿಸೋಕೆ ಕಷ್ಟ ಆಗಲ್ಲ!

18. ಪ್ರೀತಿಯ ಜ್ವಾಲೆ ಉರೀತಾ ಇರೋಕೆ ಗಂಡ-ಹೆಂಡತಿ ಇಬ್ರೂ ಸೇರಿ ಪ್ರಯತ್ನ ಹಾಕಿದಾಗ ಏನಾಗುತ್ತೆ?

18 ಗಂಡ-ಹೆಂಡತಿ ಮಧ್ಯ ಇರೋ ಪ್ರೀತಿಯ ಜ್ವಾಲೆಯನ್ನ ಆರಿಸೋಕೆ ಸೈತಾನ ಕಾಯ್ತಾ ಇದ್ದಾನೆ. ಯಾಕಂದ್ರೆ ಗಂಡ-ಹೆಂಡತಿ ಮಧ್ಯ ಪ್ರೀತಿ ಕಮ್ಮಿ ಆದ್ರೆ ಅವ್ರಿಗೆ ಯೆಹೋವನ ಮೇಲಿರೋ ಪ್ರೀತಿ ಕಮ್ಮಿ ಆಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತು. ಆದ್ರೆ ನಿಮ್ಮ ಮಧ್ಯ ನಿಜವಾದ ಪ್ರೀತಿ ಇದ್ರೆ ಅದನ್ನ ಆರಿಸೋಕೆ ಯಾರಿಂದಾನೂ ಆಗಲ್ಲ. ಅದಕ್ಕೇ ಯೆಹೋವನ ಜೊತೆ ಇರೋ ಸ್ನೇಹನ ಇನ್ನೂ ಜಾಸ್ತಿ ಮಾಡ್ಕೊಳ್ಳಿ. ಆದಷ್ಟು ಜೊತೆಯಾಗಿ ಇರಿ. ನಿಮ್ಮ ಸಂಗಾತಿಯ ಅಭಿಪ್ರಾಯಗಳಿಗೆ, ಅವ್ರ ಇಷ್ಟ-ಕಷ್ಟಗಳಿಗೆ ಬೆಲೆ ಕೊಡಿ. ಅವ್ರ ಮೇಲೆ ಗೌರವ ಇದೆ ಅಂತ ತೋರಿಸಿ. ಹೀಗೆ ಮಾಡಿದಾಗ ನಿಜವಾದ ಪ್ರೀತಿಯನ್ನ ನಮ್ಮಲ್ಲಿ ಇಟ್ಟಿರೋ ಯೆಹೋವನ ಹೆಸ್ರಿಗೆ ಗೌರವ ತಂದ ಹಾಗೆ ಇರುತ್ತೆ. ಅಷ್ಟೇ ಅಲ್ಲ, ಪರಮ ಗೀತ ಪುಸ್ತಕದಲ್ಲಿ ಇರೋ ತರ ನಿಮ್ಮ ಮಧ್ಯ ಇರೋ ಪ್ರೀತಿಯ ಜ್ವಾಲೆ ಯಾವಾಗ್ಲೂ ಜೋರಾಗಿ ಉರೀತಾ ಇರುತ್ತೆ!

ಗೀತೆ 87 ನಾವೀಗ ಒಂದು

a ಮದುವೆ ಅನ್ನೋದು ಯೆಹೋವ ದೇವರು ಕೊಟ್ಟಿರೋ ಗಿಫ್ಟ್‌. ಗಂಡ-ಹೆಂಡತಿ ಮಧ್ಯ ಇರೋ ಆ ಪ್ರೀತಿಯ ಬಂಧ ತುಂಬ ಗಟ್ಟಿಯಾಗಿ ಇರುತ್ತೆ. ಆದ್ರೆ ಸಮಯ ಹೋಗ್ತಾ ಹೋಗ್ತಾ ಆ ಪ್ರೀತಿ ಕಮ್ಮಿ ಆಗಿಬಿಡಬಹುದು. ಹಾಗೆ ಆಗದೇ ಇರೋಕೆ ಗಂಡ ಹೆಂಡತಿ ಏನು ಮಾಡಬೇಕು?

b ನಿಜವಾದ ಪ್ರೀತಿ ಯಾವತ್ತೂ ಕಮ್ಮಿ ಆಗಲ್ಲ, ಶಾಶ್ವತವಾಗಿ ಇರುತ್ತೆ. ಅದನ್ನ ಬೈಬಲ್‌ “ಯಾಹುವಿನ ಜ್ವಾಲೆ” ಅಂತ ಕರಿಯುತ್ತೆ. ಯಾಕಂದ್ರೆ ಆ ಪ್ರೀತಿನ ನಮ್ಮಲ್ಲಿ ಇಟ್ಟಿರೋದು ಯೆಹೋವನೇ.

c ನಿಮ್ಮ ಸಂಗಾತಿ ಯೆಹೋವನನ್ನ ಆರಾಧಿಸದೇ ಇದ್ರೂ ಈ ಲೇಖನದಲ್ಲಿ ಇರೋ ಸಲಹೆಗಳನ್ನ ಪಾಲಿಸಿ. ಇವು ನಿಮ್ಮ ಮದುವೆ ಜೀವನ ಚೆನ್ನಾಗಿರೋಕೆ ಸಹಾಯ ಮಾಡುತ್ತೆ.—1 ಕೊರಿಂ. 7:12-14; 1 ಪೇತ್ರ 3:1, 2.

d ಉದಾಹರಣೆಗೆ, jw.org ಮತ್ತು JW ಲೈಬ್ರರಿಯಲ್ಲಿ “ಸುಖೀ ಸಂಸಾರಕ್ಕೆ ಸಲಹೆಗಳು” ಅನ್ನೋ ಲೇಖನ ಸರಣಿ ನೋಡಿ. ಅದ್ರಲ್ಲಿ ಯೆಹೋವ ಕೊಡೋ ಕೆಲವು ಬುದ್ಧಿಮಾತುಗಳು ಇವೆ.