ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 18

ಗೀತೆ 1 ಯೆಹೋವನ ಗುಣಲಕ್ಷಣಗಳು

ಇಡೀ ಭೂಮಿಯ ಕರುಣಾಮಯಿ ನ್ಯಾಯಾಧೀಶನ ಮೇಲೆ ನಂಬಿಕೆ ಇಡಿ!

ಇಡೀ ಭೂಮಿಯ ಕರುಣಾಮಯಿ ನ್ಯಾಯಾಧೀಶನ ಮೇಲೆ ನಂಬಿಕೆ ಇಡಿ!

“ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?”ಆದಿ. 18:25.

ಈ ಲೇಖನದಲ್ಲಿ ಏನಿದೆ?

ಅನೀತಿವಂತರನ್ನ ಮತ್ತೆ ಬದುಕಿಸೋ ವಿಷ್ಯದಲ್ಲಿ ಯೆಹೋವ ಹೇಗೆ ಕರುಣೆ ತೋರಿಸ್ತಾನೆ ಮತ್ತು ನ್ಯಾಯ ತೀರಿಸ್ತಾನೆ ಅಂತ ಕಲಿಯೋಣ.

1. ನೆಮ್ಮದಿ ಸಿಗೋ ಯಾವ ವಿಷ್ಯವನ್ನ ಯೆಹೋವ ಅಬ್ರಹಾಮನಿಗೆ ಕಲಿಸಿದನು?

 ಯಾವತ್ತೂ ಮರೆಯೋಕೆ ಆಗದಿರೋ ಒಂದು ಘಟನೆ ಅಬ್ರಹಾಮನ ಜೀವನದಲ್ಲಿ ನಡೀತು. ಯೆಹೋವ ದೇವರು ಒಬ್ಬ ದೇವದೂತನ ಮೂಲಕ ಅಬ್ರಹಾಮನ ಹತ್ರ ಮಾತಾಡಿದನು. ಆತನು ಸೊದೋಮ್‌ ಮತ್ತು ಗೊಮೋರ ಪಟ್ಟಣ ನಾಶ ಮಾಡೋದ್ರ ಬಗ್ಗೆ ಹೇಳಿದನು. ಅಬ್ರಹಾಮನಿಗೆ ದೇವರ ಮೇಲೆ ನಂಬಿಕೆ ಇದ್ರೂ ಇದನ್ನ ಅರ್ಥಮಾಡ್ಕೊಳ್ಳೋಕೆ ಕಷ್ಟ ಆಯ್ತು. ಅದಕ್ಕೆ ಅವನು “ನೀನು ಕೆಟ್ಟವರ ಜೊತೆ ನೀತಿವಂತರನ್ನೂ ನಾಶಮಾಡ್ತೀಯಾ? . . . ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?” ಅಂತ ಕೇಳಿದ. ಆದ್ರೆ ಯೆಹೋವ ತನ್ನ ಸ್ನೇಹಿತನಾದ ಅಬ್ರಹಾಮನಿಗೆ ಒಂದು ವಿಷ್ಯ ಕಲಿಸ್ತಾನೆ. ಅದೇನಂದ್ರೆ ಆತನು ಯಾವತ್ತೂ ನೀತಿವಂತರನ್ನ ನಾಶ ಮಾಡಲ್ಲ. ಈ ವಿಷ್ಯ ತಿಳ್ಕೊಳ್ಳೋದ್ರಿಂದ ಇವತ್ತು ನಮಗೂ ನೆಮ್ಮದಿ ಸಿಗುತ್ತೆ.—ಆದಿ. 18:23, 33.

2. ಯೆಹೋವ ತೀರ್ಪು ಮಾಡುವಾಗ ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತಾನೆ ಮತ್ತು ಕರುಣೆ ತೋರಿಸ್ತಾನೆ ಅಂತ ನಾವ್ಯಾಕೆ ನಂಬಬಹುದು?

2 ಯೆಹೋವ ತೀರ್ಪು ಮಾಡುವಾಗ ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತಾನೆ ಮತ್ತು ಕರುಣೆ ತೋರಿಸ್ತಾನೆ ಅಂತ ನಾವ್ಯಾಕೆ ನಂಬಬಹುದು? ಯಾಕಂದ್ರೆ ಆತನು “ಹೃದಯದಲ್ಲಿ ಇರೋದನ್ನ ನೋಡ್ತಾನೆ.” (1 ಸಮು. 16:7) ‘ಮನುಷ್ಯರೆಲ್ಲರ ಹೃದಯದಲ್ಲಿ’ ಏನಿದೆ ಅಂತ ಆತನಿಗೆ ಚೆನ್ನಾಗಿ ಗೊತ್ತು. (1 ಅರ. 8:39; 1 ಪೂರ್ವ. 28:9) ಇದನ್ನ ಕೇಳಿಸ್ಕೊಂಡಾಗ ನಮ್ಮ ಮೈ ಜುಂ ಅನಿಸುತ್ತೆ ಅಲ್ವಾ! ಯೆಹೋವ ನಮ್ಮೆಲ್ರಿಗಿಂತ ತುಂಬ ವಿವೇಕಿ. ಹಾಗಾಗಿ ಆತನು ಮಾಡೋ ತೀರ್ಪುಗಳು ಕೆಲವೊಮ್ಮೆ ನಮಗೆ ಅರ್ಥ ಆಗಲ್ಲ. ಅದಕ್ಕೇ ಅಪೊಸ್ತಲ ಪೌಲ “ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ!” ಅಂತ ಹೇಳಿದ.—ರೋಮ. 11:33.

3-4. (ಎ) ಕೆಲವೊಮ್ಮೆ ನಮಗೆ ಯಾವ ಪ್ರಶ್ನೆ ಬರುತ್ತೆ? (ಬಿ) ಈ ಲೇಖನದಲ್ಲಿ ನಾವು ಏನು ಕಲಿತೀವಿ? (ಯೋಹಾನ 5:28, 29)

3 ಯೆಹೋವ ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತಾನೆ ಅಂತ ಗೊತ್ತಿದ್ರೂ ಕೆಲವೊಮ್ಮೆ ನಮಗೂ ಅಬ್ರಹಾಮನ ತರನೇ ಅನಿಸಬಹುದು. ಉದಾಹರಣೆಗೆ, ‘“ಅನೀತಿವಂತರು ಮತ್ತೆ ಬದುಕೋ ತರ” ಯೆಹೋವ ಮಾಡುವಾಗ ಸೊದೋಮ್‌ ಗೊಮೋರದಲ್ಲಿ ತೀರಿಹೋದ ಜನ್ರಲ್ಲಿ ಯಾರಾದ್ರೂ ಮತ್ತೆ ಬದುಕಿ ಬರ್ತಾರಾ?’ ಅನ್ನೋ ಪ್ರಶ್ನೆ ನಮಗೆ ಬರಬಹುದು.—ಅ. ಕಾ. 24:15.

4 ‘ಜೀವ ಪಡ್ಕೊಳ್ಳೋಕೆ ಎದ್ದು ಬರುವವ್ರ’ ಬಗ್ಗೆ ಮತ್ತು ‘ನ್ಯಾಯತೀರ್ಪಿಗಾಗಿ ಎದ್ದು ಬರುವವ್ರ’ a ಬಗ್ಗೆ ಇತ್ತೀಚಿಗೆ ಹೊಸ ತಿಳುವಳಿಕೆ ಬಂದಿತ್ತು. (ಯೋಹಾನ 5:28, 29 ಓದಿ.) ಈ ಹೊಸ ತಿಳುವಳಿಕೆ ಬಂದಿದ್ರಿಂದ ಇನ್ನೂ ಕೆಲವು ವಿಷ್ಯಗಳಲ್ಲಿ ಬದಲಾವಣೆಗಳನ್ನ ಮಾಡಬೇಕಾಯ್ತು. ಇದ್ರ ಬಗ್ಗೆ ತಿಳ್ಕೊಳ್ಳೋಕೆ ಈ ಲೇಖನ ಮತ್ತು ಮುಂದಿನ ಲೇಖನ ಸಹಾಯ ಮಾಡುತ್ತೆ. ಮೊದ್ಲು ನಾವು ಯೆಹೋವನ ನ್ಯಾಯ ತೀರ್ಪಿನ ಬಗ್ಗೆ ನಮಗೆ ಏನು ಗೊತ್ತಿಲ್ಲ ಅಂತ ತಿಳ್ಕೊಳ್ಳೋಣ. ಆಮೇಲೆ ನಮಗೆ ಏನು ಗೊತ್ತು ಅಂತ ತಿಳ್ಕೊಳ್ಳೋಣ.

ನಮಗೆ ಏನು ಗೊತ್ತಿಲ್ಲ?

5. ಸೊದೋಮ್‌ ಮತ್ತು ಗೊಮೋರದಲ್ಲಿ ನಾಶ ಆದ ಜನ್ರ ಬಗ್ಗೆ ಹಿಂದೆ ನಮ್ಮ ಪ್ರಕಾಶನಗಳಲ್ಲಿ ಏನು ಹೇಳಿತ್ತು?

5 ಹಿಂದೆ ನಮ್ಮ ಪ್ರಕಾಶನಗಳಲ್ಲಿ ಯೆಹೋವ ದೇವರು ಅನೀತಿವಂತರಿಗೆ ನ್ಯಾಯ ತೀರಿಸುವಾಗ ಏನಾಗುತ್ತೆ ಅಂತ ತಿಳಿಸಿತ್ತು. ಉದಾಹರಣೆಗೆ, ಸೊದೋಮ್‌ ಮತ್ತು ಗೊಮೋರದಲ್ಲಿರೋ ಜನ್ರನ್ನ ಯೆಹೋವನೇ ನಾಶ ಮಾಡಿರೋದ್ರಿಂದ ಅವರು ಮತ್ತೆ ಜೀವಂತವಾಗಿ ಎದ್ದು ಬರಲ್ಲ ಅಂತ ನಾವು ಮುಂಚೆ ಹೇಳಿದ್ವಿ. ಆದ್ರೆ ಈ ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಿ ಇನ್ನೂ ಜಾಸ್ತಿ ತಿಳ್ಕೊಂಡ ಮೇಲೆ ಅವ್ರಿಗೆ ಮತ್ತೆ ಜೀವ ಸಿಗಲ್ಲ ಅಂತ ಗ್ಯಾರಂಟಿಯಾಗಿ ಹೇಳೋಕೆ ಆಗಲ್ಲ ಅನ್ನೋದು ನಮಗೆ ಗೊತ್ತಾಯ್ತು. ಯಾಕೆ ಹಾಗೆ ಹೇಳಬಹುದು?

6. (ಎ) ಅನೀತಿವಂತರಿಗೆ ಯೆಹೋವ ನ್ಯಾಯ ತೀರಿಸಿದ್ರ ಬಗ್ಗೆ ಕೆಲವು ಉದಾಹರಣೆ ಕೊಡಿ. (ಬಿ) ನಮಗೆ ಏನು ಗೊತ್ತಿಲ್ಲ?

6 ಅನೀತಿವಂತ ಜನ್ರಿಗೆ ನ್ಯಾಯ ತೀರಿಸಿದ್ರ ಬಗ್ಗೆ ಬೈಬಲಲ್ಲಿ ಇದೆ. ಆ ಘಟನೆಗಳ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ, ನೋಹನ ಸಮಯದಲ್ಲಿ ಜಲಪ್ರಳಯ ಬಂದಾಗ ಅವನ ಕುಟುಂಬದವರು ಬಿಟ್ಟು ಬೇರೆ ಎಲ್ರೂ ನಾಶ ಆದ್ರು. ದೇವರು ಮಾತುಕೊಟ್ಟ ದೇಶ ಆಗಿರೋ ಕಾನಾನಿಗೆ ಇಸ್ರಾಯೇಲ್ಯರು ಹೋದಾಗ ಅಲ್ಲಿದ್ದ ಏಳು ಜನಾಂಗಗಳನ್ನ ನಾಶ ಮಾಡೋಕೆ ಯೆಹೋವ ಅವ್ರಿಗೆ ಹೇಳಿದನು. ಅಶ್ಶೂರ್ಯರ 1,85,000 ಸೈನಿಕರನ್ನ ಒಬ್ಬ ದೇವದೂತ ಒಂದೇ ರಾತ್ರಿಯಲ್ಲಿ ಕೊಂದು ಹಾಕಿದ. (ಆದಿ. 7:23; ಧರ್ಮೋ. 7:1-3; ಯೆಶಾ. 37:36, 37) ಈ ಘಟನೆಗಳಲ್ಲಿ ತಿಳಿಸಿರೋ ಜನ್ರಿಗೆ ಮತ್ತೆ ಜೀವಿಸೋ ಅವಕಾಶ ಸಿಗದೇ ಇರೋ ತರ ಯೆಹೋವ ಅವ್ರನ್ನ ಶಾಶ್ವತಕ್ಕೂ ನಾಶ ಮಾಡಿದನು ಅಂತ ಬೈಬಲ್‌ ಹೇಳುತ್ತಾ? ಇಲ್ಲ. ಯಾಕೆ ಹಾಗೆ ಹೇಳಬಹುದು?

7. ಜಲಪ್ರಳಯದಲ್ಲಿ ಮತ್ತು ಕಾನಾನ್‌ ದೇಶದಲ್ಲಿ ನಾಶ ಆದ ಜನ್ರ ಬಗ್ಗೆ ನಮಗೆ ಏನು ಗೊತ್ತಿಲ್ಲ? ( ಚಿತ್ರ ನೋಡಿ.)

7 ಆ ಜನ್ರಿಗೆ ದೇವರು ಹೇಗೆ ತೀರ್ಪು ಮಾಡಿದನು ಅಂತ ನಮಗೆ ಗೊತ್ತಿಲ್ಲ. ಅಷ್ಟೇ ಅಲ್ಲ ಅವರೆಲ್ರಿಗೂ ಯೆಹೋವನ ಬಗ್ಗೆ ಕಲಿತು ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗ್ತಾ ಅಂತಾನೂ ಗೊತ್ತಿಲ್ಲ. ಜಲಪ್ರಳಯ ಬರೋ ಮುಂಚೆ ನೋಹ “ನೀತಿಯ ಬಗ್ಗೆ ಸಾರಿದ” ಅಂತ ಬೈಬಲ್‌ ಹೇಳುತ್ತೆ. (2 ಪೇತ್ರ 2:5) ಆದ್ರೆ ನೋಹ ಆ ದೊಡ್ಡ ಹಡಗನ್ನ ಕಟ್ತಾ ಇದ್ದಾಗ ಇಡೀ ಭೂಮಿಯಲ್ಲಿರೋ ಪ್ರತಿಯೊಬ್ರಿಗೂ ಸಾರಿದನು ಅಂತ ಬೈಬಲ್‌ ಹೇಳ್ತಿಲ್ಲ. ಅದೇ ತರ ಕಾನಾನ್‌ ದೇಶದಲ್ಲಿದ್ದ ಪ್ರತಿಯೊಬ್ರಿಗೂ ಯೆಹೋವ ದೇವರ ಬಗ್ಗೆ ಕಲಿತು ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗ್ತಾ ಅಂತಾನೂ ನಮಗೆ ಗೊತ್ತಿಲ್ಲ.

ನೋಹ ಮತ್ತು ಅವನ ಕುಟುಂಬದವರು ದೊಡ್ಡ ಹಡಗನ್ನ ಕಟ್ತಾ ಇದ್ದಾರೆ. ಈ ಹಡಗನ್ನ ಕಟ್ತಾ ಇದ್ದಿದ್ರಿಂದ ಪ್ರಳಯ ಬರೋಕೆ ಮುಂಚೆ ಇಡೀ ಭೂಮಿಯಲ್ಲಿರೋ ಎಲ್ರಿಗೂ ನೋಹ ಸಾರಿದನಾ ಅಂತ ನಮಗೆ ಗೊತ್ತಿಲ್ಲ. (ಪ್ಯಾರ 7 ನೋಡಿ)


8. ಸೊದೋಮ್‌ ಮತ್ತು ಗೊಮೋರದಲ್ಲಿ ನಾಶ ಆದ ಜನ್ರ ಬಗ್ಗೆ ನಮಗೆ ಏನು ಗೊತ್ತಿಲ್ಲ?

8 ಸೊದೋಮ್‌ ಮತ್ತು ಗೊಮೋರದಲ್ಲಿರೋ ತುಂಬ ಜನ ನಾಶ ಆದ್ರು. ಅವ್ರ ಮಧ್ಯದಲ್ಲೇ ನೀತಿವಂತನಾದ ಲೋಟ ಜೀವಿಸ್ತಿದ್ದ. ಆದ್ರೆ ಅವನು ಅಲ್ಲಿರೋ ಜನ್ರಿಗೆಲ್ಲ ಸಾರಿದನಾ? ಅದು ನಮಗೆ ಗೊತ್ತಿಲ್ಲ. ಅಲ್ಲಿದ್ದ ಜನ್ರು ಕೆಟ್ಟವರೇ ಆಗಿದ್ರು ನಿಜ, ಆದ್ರೆ ಅವ್ರಿಗೆ ಸರಿ ಯಾವುದು, ತಪ್ಪು ಯಾವುದು ಅಂತ ನಿಜವಾಗ್ಲೂ ಗೊತ್ತಿತ್ತಾ? ಒಂದು ಸಲ ಲೋಟನ ಮನೆಗೆ ಅತಿಥಿಗಳು ಬಂದಾಗ ಏನಾಯ್ತು ಅಂತ ನೆನಪು ಮಾಡ್ಕೊಳ್ಳಿ. ಅವ್ರನ್ನ ಅತ್ಯಾಚಾರ ಮಾಡೋಕೆ “ಹುಡುಗರಿಂದ ಮುದುಕರ ತನಕ” ಎಲ್ರೂ ಗುಂಪು ಕಟ್ಕೊಂಡು ಲೋಟನ ಮನೆಗೆ ಬಂದ್ರು. (ಆದಿ. 19:4; 2 ಪೇತ್ರ 2:7) ಹಾಗಂತ ಕರುಣೆ ಇರೋ ಯೆಹೋವ ದೇವರು ಇವ್ರಿಗೆಲ್ಲ ಮತ್ತೆ ಜೀವ ಪಡ್ಕೊಳ್ಳೋ ಯೋಗ್ಯತೆನೇ ಇಲ್ಲ ಅಂತ ತೀರ್ಮಾನ ಮಾಡಿದನಾ? ನಮಗೆ ಅದು ಗೊತ್ತಿಲ್ಲ. ಒಂದು ಸಲ ಯೆಹೋವ ಅಬ್ರಹಾಮನ ಹತ್ರ ಮಾತಾಡುವಾಗ ಆ ಪಟ್ಟಣದಲ್ಲಿ ಹತ್ತು ನೀತಿವಂತರೂ ಇಲ್ಲ ಅಂತ ಹೇಳಿದನು. (ಆದಿ. 18:32) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಅಲ್ಲಿದ್ದವ್ರೆಲ್ಲ ಅನೀತಿವಂತರಾಗಿದ್ರು ಮತ್ತು ಅವರು ಮಾಡಿದ ತಪ್ಪಿಗೆ ಯೆಹೋವ ದೇವರು ಅವ್ರಿಗೆ ಶಿಕ್ಷೆ ಕೊಟ್ಟನು. ಹಾಗಂತ “ಅನೀತಿವಂತರು ಮತ್ತೆ ಬದುಕೋ ತರ” ದೇವರು ಮಾಡುವಾಗ ಇವ್ರಲ್ಲಿ ಯಾರೂ ಜೀವಂತವಾಗಿ ಬರಲ್ಲ ಅಂತ ಹೇಳೋಕೆ ಆಗುತ್ತಾ? ಇಲ್ಲ.

9. ಸೊಲೊಮೋನನ ಬಗ್ಗೆ ನಮಗೆ ಏನು ಗೊತ್ತಿಲ್ಲ?

9 ನೀತಿವಂತರಾಗಿದ್ದವರು ಆಮೇಲೆ ಅನೀತಿವಂತರಾಗಿದ್ರ ಬಗ್ಗೆ ಬೈಬಲ್‌ ಹೇಳುತ್ತೆ. ಉದಾಹರಣೆಗೆ ರಾಜ ಸೊಲೊಮೋನ. ಅವನಿಗೆ ಯೆಹೋವ ದೇವರು ಯಾರು, ಆತನನ್ನ ಹೇಗೆ ಆರಾಧಿಸಬೇಕು ಅಂತ ಗೊತ್ತಿತ್ತು. ಅಷ್ಟೇ ಅಲ್ಲ ಅವನು ಯೆಹೋವನಿಂದ ತುಂಬ ಆಶೀರ್ವಾದಗಳನ್ನೂ ಪಡ್ಕೊಂಡಿದ್ದ. ಆದ್ರೆ ಹೋಗ್ತಾಹೋಗ್ತಾ ಸುಳ್ಳು ದೇವರುಗಳನ್ನ ಆರಾಧಿಸಿದ. ಅವನು ಹೀಗೆ ಮಾಡಿದ್ರಿಂದ ಯೆಹೋವನಿಗೆ ತುಂಬ ಕೋಪ ಬಂತು. ಅವನು ಮಾಡಿದ ಪಾಪದಿಂದ ಇಡೀ ಇಸ್ರಾಯೇಲ್‌ ಜನಾಂಗನೇ ತುಂಬ ವರ್ಷಗಳ ತನಕ ಕಷ್ಟ ಅನುಭವಿಸಬೇಕಾಯ್ತು. ಸೊಲೊಮೋನ ತೀರಿಹೋದಾಗ ಅವನನ್ನ ಪೂರ್ವಜರ ಜೊತೆ ಸಮಾಧಿ ಮಾಡಿದ್ರು ಅಂತ ಬೈಬಲಿನ ಮೂಲ ಪ್ರತಿಗಳಲ್ಲಿ ತಿಳಿಸುತ್ತೆ. ದಾವೀದನನ್ನೂ ಮತ್ತು ಬೇರೆಯವ್ರನ್ನೂ ಹೀಗೆ ಸಮಾಧಿ ಮಾಡಿದ್ರ ಬಗ್ಗೆ ಬೈಬಲ್‌ ಹೇಳುತ್ತೆ. (1 ಅರ. 11:5-9, 43; 2 ಅರ. 23:13) ಈ ತರ ಸೊಲೊಮೋನನನ್ನ ಸಮಾಧಿ ಮಾಡಿದ್ರಿಂದ ಅವನು ಮತ್ತೆ ಜೀವಂತವಾಗಿ ಬರ್ತಾನೆ ಅಂತ ಹೇಳೋಕೆ ಆಗುತ್ತಾ? ಅದ್ರ ಬಗ್ಗೆ ಬೈಬಲ್‌ ಏನೂ ಹೇಳಲ್ಲ. “ಸತ್ತವನಿಗೆ ಅವನ ಪಾಪಗಳಿಂದ ಬಿಡುಗಡೆ ಆಗಿದೆ” ಅಂತ ಬೈಬಲ್‌ ಹೇಳೋದ್ರಿಂದ ಸೊಲೊಮೋನ ಮತ್ತೆ ಜೀವಂತವಾಗಿ ಬರ್ತಾನೆ ಅಂತ ಕೆಲವರು ಹೇಳಬಹುದು. (ರೋಮ. 6:7) ಈ ವಚನದಲ್ಲಿ ಇರೋದು ನಿಜ. ಆದ್ರೆ ಒಬ್ಬ ವ್ಯಕ್ತಿ ತೀರಿಹೋಗಿದ್ದಾನೆ ಅಂದ ಮಾತ್ರಕ್ಕೆ ಅವನಿಗೆ ಮತ್ತೆ ಜೀವ ಪಡೆಯೋ ಹಕ್ಕಿದೆ ಅಂತಾಗ್ಲಿ, ತೀರಿಹೋದವರೆಲ್ಲ ಮತ್ತೆ ಜೀವಂತವಾಗಿ ಬರ್ತಾರೆ ಅಂತಾಗ್ಲಿ ಹೇಳೋಕಾಗಲ್ಲ. ಯಾಕಂದ್ರೆ ಮತ್ತೆ ಜೀವಂತವಾಗಿ ಬರೋದು ಯೆಹೋವ ದೇವರು ನಮಗೆ ಕೊಡೋ ಒಂದು ಪ್ರೀತಿಯ ಗಿಫ್ಟಾಗಿದೆ. ಯಾರು ಶಾಶ್ವತವಾಗಿ ಜೀವಿಸಬೇಕು ಅಂತ ಯೆಹೋವ ಬಯಸ್ತಾನೋ ಅವ್ರಿಗೆ ಆತನು ಈ ಗಿಫ್ಟನ್ನ ಕೊಡ್ತಾನೆ. (ಯೋಬ 14:13, 14; ಯೋಹಾ. 6:44) ಹಾಗಾದ್ರೆ ಈ ಗಿಫ್ಟ್‌ ಸೊಲೊಮೋನನಿಗೂ ಸಿಗುತ್ತಾ? ಅದು ಯೆಹೋವನಿಗೆ ಮಾತ್ರ ಗೊತ್ತು. ನಮಗೆ ಗೊತ್ತಿಲ್ಲ. ಆದ್ರೆ ಯೆಹೋವ ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತಾನೆ ಅಂತ ನಮಗೆ ಗೊತ್ತಿದೆ.

ನಮಗೆ ಏನು ಗೊತ್ತಿದೆ?

10. ಮನುಷ್ಯರಿಗೆ ತೀರ್ಪು ಮಾಡುವಾಗ ಯೆಹೋವ ದೇವರಿಗೆ ಹೇಗನಿಸುತ್ತೆ? (ಯೆಹೆಜ್ಕೇಲ 33:11) (ಚಿತ್ರ ನೋಡಿ.)

10 ಯೆಹೆಜ್ಕೇಲ 33:11 ಓದಿ. ಜನ್ರಿಗೆ ತೀರ್ಪು ಮಾಡುವಾಗ ಯೆಹೋವನಿಗೆ ಹೇಗನಿಸುತ್ತೆ ಅಂತ ಆತನು ನಮಗೆ ತಿಳಿಸಿದ್ದಾನೆ. ಪ್ರವಾದಿ ಯೆಹೆಜ್ಕೇಲನ ತರನೇ ಅಪೊಸ್ತಲ ಪೇತ್ರನೂ ಪವಿತ್ರಶಕ್ತಿಯ ಸಹಾಯದಿಂದ “ಯಾರೂ ನಾಶ ಆಗಬಾರದು . . . ಅನ್ನೋದೇ [ಯೆಹೋವನ] ಆಸೆ” ಅಂತ ಬರೆದ. (2 ಪೇತ್ರ 3:9) ಹಾಗಾಗಿ ಯೆಹೋವ ಕಾರಣ ಇಲ್ಲದೇ ಯಾರನ್ನೂ ಶಾಶ್ವತಕ್ಕೂ ನಾಶ ಮಾಡಲ್ಲ ಅಂತ ನಮಗೆ ಗೊತ್ತು. ಅಷ್ಟೇ ಅಲ್ಲ, ಕರುಣಾಮಯಿ ಆಗಿರೋ ಯೆಹೋವ ಕರುಣೆ ತೋರಿಸಬೇಕಾದಾಗೆಲ್ಲ ತೋರಿಸೇ ತೋರಿಸ್ತಾನೆ. ಇದನ್ನ ಕೇಳಿಸ್ಕೊಂಡಾಗ ನಮಗೆ ಎಷ್ಟು ಸಮಾಧಾನ ಆಗುತ್ತಲ್ವಾ?

ಅನೀತಿವಂತರು ಮತ್ತೆ ಜೀವ ಪಡ್ಕೊಂಡು ಬರ್ತಾರೆ. ಅವ್ರಲ್ಲಿ ಬೇರೆಬೇರೆ ರೀತಿಯ ಜನ್ರು ಇರ್ತಾರೆ ಮತ್ತು ಅವ್ರಿಗೆಲ್ಲ ಯೆಹೋವ ದೇವರ ಬಗ್ಗೆ ಕಲಿಯೋ ಅವಕಾಶ ಸಿಗುತ್ತೆ (ಪ್ಯಾರ 10 ನೋಡಿ)


11. (ಎ) ಯಾರಿಗೆಲ್ಲ ಮತ್ತೆ ಜೀವಿಸೋ ನಿರೀಕ್ಷೆ ಸಿಗಲ್ಲ? (ಬಿ) ಅದು ನಮಗೆ ಹೇಗೆ ಗೊತ್ತು?

11 ಮತ್ತೆ ಜೀವಿಸೋ ನಿರೀಕ್ಷೆ ಸಿಗದೇ ಇರೋರ ಬಗ್ಗೆ ನಮಗೆ ಏನು ಗೊತ್ತು? ಅವ್ರಲ್ಲಿ ಕೆಲವ್ರ ಬಗ್ಗೆ ಬೈಬಲಲ್ಲಿ ತಿಳಿಸಿದೆ. b ಇಸ್ಕರಿಯೂತ ಯೂದನಿಗೆ ಮತ್ತೆ ಜೀವ ಸಿಗಲ್ಲ ಅಂತ ಯೇಸುವಿನ ಮಾತಿಂದ ನಮಗೆ ಗೊತ್ತಾಗುತ್ತೆ. (ಮಾರ್ಕ 14:21; ಯೋಹಾ. 17:12) c ಯಾಕಂದ್ರೆ ಅವನು ಯೆಹೋವನ ಮತ್ತು ಯೇಸುವಿನ ವಿರುದ್ಧ ತಪ್ಪು ಮಾಡ್ತಿದ್ದಾನೆ ಅಂತ ಗೊತ್ತಿದ್ರೂ ಅವನು ಅದನ್ನ ಬೇಕುಬೇಕಂತನೇ ಮಾಡಿದ. (ಮಾರ್ಕ 3:29) d ಯೇಸು, ತನ್ನನ್ನ ವಿರೋಧಿಸಿದ ಕೆಲವು ಧಾರ್ಮಿಕ ನಾಯಕರಿಗೂ ಮತ್ತೆ ಜೀವ ಸಿಗಲ್ಲ ಅಂತ ಹೇಳಿದನು. (ಮತ್ತಾ. 23:33) ಅಷ್ಟೇ ಅಲ್ಲ ಧರ್ಮಭ್ರಷ್ಟರು ಪಶ್ಚಾತ್ತಾಪ ಪಡದೇ ಇದ್ರೆ ಮತ್ತೆ ಜೀವಿಸೋ ಅವಕಾಶ ಅವ್ರಿಗೆ ಸಿಗಲ್ಲ ಅಂತ ಪೌಲ ಎಚ್ಚರಿಸಿದ.—ಇಬ್ರಿ. 6:4-8; 10:29.

12. ಯೆಹೋವ ದೇವರ ಕರುಣೆ ಬಗ್ಗೆ ನಮಗೆ ಏನು ಗೊತ್ತು? ಉದಾಹರಣೆ ಕೊಡಿ.

12 ಯೆಹೋವ ಕರುಣಾಮಯಿ ದೇವರು, “ಯಾರೂ ನಾಶ ಆಗಬಾರದು” ಅನ್ನೋದು ಆತನ ಇಷ್ಟ ಅಂತ ನಾವು ಕಲಿತ್ವಿ. ಆದ್ರೆ ದೊಡ್ಡದೊಡ್ಡ ತಪ್ಪು ಮಾಡುವವ್ರಿಗೆ ಆತನು ಹೇಗೆ ಕರುಣೆ ತೋರಿಸ್ತಾನೆ? ಉದಾಹರಣೆಗೆ, ರಾಜ ದಾವೀದ ವ್ಯಭಿಚಾರ ಮಾಡಿದ, ಕೊಲೆ ಮಾಡಿದ. ಇಷ್ಟೆಲ್ಲಾ ತಪ್ಪು ಮಾಡಿದ್ರೂ ಅವನು ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನನ್ನ ಕ್ಷಮಿಸಿದನು. (2 ಸಮು. 12:1-13) ರಾಜ ಮನಸ್ಸೆ ಬಗ್ಗೆ ನೋಡಿ. ಅವನು ತನ್ನ ಜೀವನದುದ್ದಕ್ಕೂ ಬರೀ ಕೆಟ್ಟ ಕೆಲಸಗಳನ್ನೇ ಮಾಡಿದ. ಇಷ್ಟೆಲ್ಲಾ ತಪ್ಪುಗಳನ್ನ ಮಾಡಿದ್ರೂ ಕೊನೆಗೆ ಅವನು ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನ ಕೈಬಿಟ್ಟನಾ? ಇಲ್ಲ. ಆಗ್ಲೂ ಯೆಹೋವ ಅವನಿಗೆ ಕರುಣೆ ತೋರಿಸಿದನು ಮತ್ತು ಕ್ಷಮಿಸಿದನು. (2 ಪೂರ್ವ. 33:9-16) ಈ ಉದಾಹರಣೆಗಳಿಂದ ನಮಗೆ ಏನು ಗೊತ್ತಾಗುತ್ತೆ? ಕಾರಣ ಇದ್ರೆ ಯೆಹೋವ ಖಂಡಿತ ಕರುಣೆ ತೋರಿಸೇ ತೋರಿಸ್ತಾನೆ. ಇವ್ರ ತರ ಒಬ್ಬ ವ್ಯಕ್ತಿ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ್ರೂ ತಿದ್ಕೊಂಡು ಬದಲಾದ್ರೆ ಅವನು ತೀರಿಹೋದ್ರೂ ಯೆಹೋವ ಅವನಿಗೆ ಮತ್ತೆ ಜೀವ ಕೊಡ್ತಾನೆ.

13. (ಎ) ಯೆಹೋವ ದೇವರು ನಿನೆವೆ ಜನ್ರಿಗೆ ಯಾಕೆ ಕರುಣೆ ತೋರಿಸಿದನು? (ಬಿ) ಯೇಸು ನಿನೆವೆ ಜನ್ರ ಬಗ್ಗೆ ಏನು ಹೇಳಿದನು?

13 ಯೆಹೋವ ದೇವರು ನಿನೆವೆ ಜನ್ರಿಗೆ ಯಾಕೆ ಕರುಣೆ ತೋರಿಸಿದನು ಅಂತ ನಮಗೆ ಗೊತ್ತಿದೆ. ಯೆಹೋವ ಯೋನನ ಹತ್ರ “ಅಲ್ಲಿನ ಜನ ಎಷ್ಟು ಕೆಟ್ಟ ಕೆಲಸ ಮಾಡ್ತಿದ್ದಾರಂತ ನಾನು ನೋಡಿದ್ದೀನಿ” ಅಂತ ಹೇಳಿದನು. ಆದ್ರೆ ನಿನೆವೆ ಜನ್ರು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವ್ರಿಗೆ ಕರುಣೆ ತೋರಿಸಿದನು, ಅವ್ರನ್ನ ಮನಸ್ಸಾರೆ ಕ್ಷಮಿಸಿದನು. ಆದ್ರೆ ಯೋನ ಹಾಗೆ ಇರ್ಲಿಲ್ಲ. ಅವನಿಗೆ ಅದನ್ನ ನೋಡಿದಾಗ ತುಂಬ ಕೋಪ ಬಂತು. ಅದಕ್ಕೇ ಯೆಹೋವ, ಆ ಜನ್ರಿಗೆ “ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ಗೊತ್ತಿಲ್ಲ” ಅಂತ ಯೋನನಿಗೆ ಅರ್ಥಮಾಡಿಸಿದನು. (ಯೋನ 1:1, 2; 3:10; 4:9-11) ಅಷ್ಟೇ ಅಲ್ಲ ಯೇಸು, ಯೆಹೋವ ದೇವರು ಎಷ್ಟು ನ್ಯಾಯವಂತ ಮತ್ತು ಕರುಣಾಮಯಿ ಅಂತ ತಿಳಿಸೋಕೆ ನಿನೆವೆ ಜನ್ರ ಉದಾಹರಣೆಯನ್ನ ಹೇಳಿದನು. ಅವರು “ತೀರ್ಪು ಕೊಡೋ ದಿನದಲ್ಲಿ . . . ಜೀವಂತವಾಗಿ ಎದ್ದು ಬರ್ತಾರೆ” ಅಂತಾನೂ ಹೇಳಿದನು.—ಮತ್ತಾ. 12:41.

14. ನಿನೆವೆ ಜನ್ರು “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ” ಅನ್ನೋದ್ರ ಅರ್ಥ ಏನು?

14 ನಿನೆವೆ ಜನ್ರು ದೇವರು “ತೀರ್ಪು ಕೊಡೋ ದಿನದಲ್ಲಿ . . . ಜೀವಂತವಾಗಿ ಎದ್ದು ಬರ್ತಾರೆ” ಅಂದ್ರೆ ಅರ್ಥ ಏನು? (ಯೋಹಾ. 5:29) ಯೇಸು ಭವಿಷ್ಯದಲ್ಲಿ ನ್ಯಾಯತೀರ್ಪಿಗಾಗಿ ಎದ್ದು ಬರುವವ್ರ ಬಗ್ಗೆ ಹೇಳಿದನು. ಯೇಸು ಇಲ್ಲಿ ತನ್ನ ಸಾವಿರ ವರ್ಷದ ಆಳ್ವಿಕೆಯ ಬಗ್ಗೆ ಮಾತಾಡ್ತಿದ್ದನು. ಆ ಸಮಯದಲ್ಲಿ “ನೀತಿವಂತರು ಮತ್ತು ಅನೀತಿವಂತರು” ಮತ್ತೆ ಜೀವಂತವಾಗಿ ಎದ್ದು ಬರ್ತಾರೆ. (ಅ. ಕಾ. 24:15) ಹಾಗಾದ್ರೆ ಅನೀತಿವಂತರು ಯಾಕೆ ಮತ್ತೆ ಎದ್ದು ಬರ್ತಾರೆ? ಅವರು “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ.” ಅವರು ಜೀವ ಪಡ್ಕೊಂಡು ಬಂದ್ಮೇಲೆ ಯೆಹೋವ ದೇವರ ಬಗ್ಗೆ ಕಲಿತಾರೆ. ಆಗ ಅವರು ಆತನ ಮಾತು ಕೇಳ್ತಾರಾ, ಕಲಿತಿದ್ದನ್ನ ಜೀವನದಲ್ಲಿ ಪಾಲಿಸ್ತಾರಾ ಅಂತ ಯೆಹೋವ ಮತ್ತು ಯೇಸು ಇಬ್ರೂ ಗಮನಿಸ್ತಾ ಇರ್ತಾರೆ. ಒಂದುವೇಳೆ ನಿನೆವೆ ಜನ್ರಿಗೆ ಮತ್ತೆ ಜೀವಿಸೋ ಅವಕಾಶ ಸಿಕ್ಕಿದ್ರೆ ಅವರು ಯೆಹೋವ ದೇವರನ್ನ ಆರಾಧಿಸಬೇಕು. ಅವರು ಅದಕ್ಕೆ ಒಪ್ಪಿಲ್ಲಾ ಅಂದ್ರೆ ಶಾಶ್ವತವಾಗಿ ಜೀವಿಸೋ ಅವಕಾಶ ಕಳ್ಕೊಂಡು ಬಿಡ್ತಾರೆ. (ಯೆಶಾ. 65:20) ಆದ್ರೆ ಯಾರೆಲ್ಲ ಯೆಹೋವ ದೇವರ ಮೇಲೆ ನಂಬಿಕೆ ಇಟ್ಟು ಆತನನ್ನ ಆರಾಧಿಸ್ತಾರೋ ಅವರು ಶಾಶ್ವತವಾಗಿ ಜೀವಿಸ್ತಾರೆ.—ದಾನಿ. 12:2.

15. (ಎ) ಸೊದೋಮ್‌ ಮತ್ತು ಗೊಮೋರದಲ್ಲಿ ನಾಶ ಆದ ಜನ್ರಿಗೆ ಮತ್ತೆ ಜೀವ ಸಿಗೋದೇ ಇಲ್ಲ ಅಂತ ನಾವ್ಯಾಕೆ ಹೇಳಬಾರದು? (ಬಿ) ಯೂದ 7ರಲ್ಲಿ ಹೇಳಿರೋ ಮಾತುಗಳನ್ನ ನಾವು ಹೇಗೆ ಅರ್ಥಮಾಡ್ಕೊಬಹುದು? (“ ಯೂದ ಹೇಳಿದ್ರ ಅರ್ಥ ಏನು?” ಅನ್ನೋ ಚೌಕ ನೋಡಿ.)

15 ಸೊದೋಮ್‌ ಮತ್ತು ಗೊಮೋರದ ಜನ್ರ ಬಗ್ಗೆ ಯೇಸು ಏನು ಹೇಳಿದನು ಅಂತ ನೋಡಿ. “ತೀರ್ಪಿನ ದಿನದಲ್ಲಿ” ತನ್ನನ್ನ ತಿರಸ್ಕರಿಸಿದ ಜನ್ರ ಸ್ಥಿತಿಗಿಂತ ಸೊದೋಮ್‌, ಗೊಮೋರದವ್ರ ಸ್ಥಿತಿ ಸ್ವಲ್ಪ ಚೆನ್ನಾಗಿರುತ್ತೆ ಅಂತ ಹೇಳಿದನು. (ಮತ್ತಾ. 10:14, 15; 11:23, 24; ಲೂಕ 10:12) ಯೇಸು ಹೇಳಿದ ಮಾತಿನ ಅರ್ಥ ಏನು? ಆ ಜನ್ರು ಸೊದೋಮ್‌ ಗೊಮೋರದವ್ರಿಗಿಂತ ಕೆಟ್ಟವರಾಗಿದ್ದಾರೆ ಅಂತ ತಿಳಿಸೋಕೆ ಹಾಗೆ ಹೇಳಿದನು ಅಂತ ನಮಗೆ ಅನಿಸಬಹುದು. ಆದ್ರೆ ಆ ತರ ಇರೋಕೆ ಸಾಧ್ಯ ಇಲ್ಲ. ಯಾಕಂದ್ರೆ ಯೇಸು ನಿನೆವೆ ಜನ್ರ ಬಗ್ಗೆ ಏನು ಹೇಳಿದನು ಅಂತ ನೆನಪು ಮಾಡ್ಕೊಳ್ಳಿ. “ತೀರ್ಪಿನ ದಿನದಲ್ಲಿ” ಅವರು ಮತ್ತೆ ಜೀವಂತವಾಗಿ ಬರ್ತಾರೆ ಅಂತ ಆತನು ಹೇಳಿದನು. ಆತನು ನಿಜವಾಗ್ಲೂ ನಡೆಯೋದ್ರ ಬಗ್ಗೆನೇ ಹೇಳಿದನು. ಯೇಸು ನಿನೆವೆ ಬಗ್ಗೆ ಮತ್ತು ಸೊದೋಮ್‌ ಗೊಮೋರದ ಬಗ್ಗೆ ಹೇಳಿದ “ತೀರ್ಪಿನ ದಿನ” ಒಂದೇ ಆಗಿತ್ತು. ಹಾಗಾಗಿ ಸೊದೋಮ್‌ ಮತ್ತು ಗೊಮೋರದ ಜನ್ರ ಬಗ್ಗೆ ಯೇಸು ಹೇಳಿದ ಮಾತೂ ನಿಜ ಆಗುತ್ತೆ ಅಂತ ಹೇಳಬಹುದು. ಇವರೂ ನಿನೆವೆ ಜನ್ರ ತರನೇ ಕೆಟ್ಟ ಕೆಲಸಗಳನ್ನ ಮಾಡ್ತಿದ್ರು. ಆದ್ರೆ ನಿನೆವೆ ಜನ್ರಿಗೆ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಒಂದು ಅವಕಾಶ ಸಿಕ್ತು. ಅಷ್ಟೇ ಅಲ್ಲ ಯೇಸು ತೀರ್ಪಿನ ದಿನದ ಬಗ್ಗೆ ಮಾತಾಡ್ತಾ “ಕೆಟ್ಟ ಕೆಲಸ ಮಾಡ್ತಾ ಇದ್ದವರು” ಸಹ “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ” ಅಂತ ಹೇಳಿದನು. (ಯೋಹಾ. 5:29) ಇದ್ರಿಂದ ಏನು ಗೊತ್ತಾಗುತ್ತೆ? ಸೊದೋಮ್‌, ಗೊಮೋರದ ಜನ್ರಿಗೆ ಮತ್ತೆ ಜೀವಿಸೋ ಅವಕಾಶ ಸಿಗಬಹುದು. ಅವ್ರಲ್ಲಿ ಕೆಲವರಿಗಾದ್ರೂ ಮತ್ತೆ ಜೀವ ಸಿಗೋ ಸಾಧ್ಯತೆ ಇದೆ. ಅಂಥವ್ರಿಗೆ ಯೆಹೋವ ದೇವರ ಬಗ್ಗೆ ಮತ್ತು ಯೇಸು ಬಗ್ಗೆ ಕಲಿಸೋ ಅವಕಾಶ ನಮಗೆ ಸಿಗಬಹುದು!

16. ಯೆಹೋವ ಯಾರಿಗೆ ಜೀವ ಕೊಡಬೇಕು, ಕೊಡಬಾರದು ಅಂತ ಹೇಗೆ ನಿರ್ಣಯ ಮಾಡ್ತಾನೆ? (ಯೆರೆಮೀಯ 17:10)

16 ಯೆರೆಮೀಯ 17:10 ಓದಿ. ಈ ವಚನದಲ್ಲಿ ನಮಗೆ ಗೊತ್ತಿರೋ ಒಂದು ವಿಷ್ಯದ ಬಗ್ಗೆ ಹೇಳುತ್ತೆ. ದೇವರು ಹೇಗೆ ನ್ಯಾಯ ತೀರಿಸ್ತಾನೆ ಅಂತ ಅಲ್ಲಿ ಹೇಳ್ತಾ ಇದೆ. ಯೆಹೋವ ಯಾವಾಗ್ಲೂ ಮನುಷ್ಯರ ‘ಹೃದಯವನ್ನ ಪರೀಕ್ಷಿಸ್ತಾನೆ, ಅಂತರಾಳದ ಯೋಚನೆಗಳನ್ನ ಪರಿಶೀಲಿಸ್ತಾನೆ.’ ಹಾಗಾಗಿ ಆತನು ಭವಿಷ್ಯದಲ್ಲಿ ಜನ್ರಿಗೆ ಮತ್ತೆ ಜೀವ ಕೊಡುವಾಗ ಒಂದು ವಿಷ್ಯ ಮನಸ್ಸಲ್ಲಿ ಇಡ್ತಾನೆ. ಅದೇನಂದ್ರೆ “ಪ್ರತಿಯೊಬ್ಬನ ನಡತೆಗೆ ಕೆಲಸಕ್ಕೆ ತಕ್ಕ ಪ್ರತಿಫಲ” ಕೊಟ್ಟೇ ಕೊಡ್ತಾನೆ. ಯೆಹೋವ ತಪ್ಪು ಮಾಡಿದವ್ರನ್ನ ಸುಮ್ಮನೆ ಬಿಡಲ್ಲ. ಆದ್ರೆ ಕರುಣೆ ತೋರಿಸೋಕೆ ಕಾರಣ ಇದ್ರೆ ಖಂಡಿತ ತೋರಿಸ್ತಾನೆ. ಹಾಗಾಗಿ ಯಾವುದಾದ್ರೂ ಒಬ್ಬ ವ್ಯಕ್ತಿಗೆ ಮತ್ತೆ ಜೀವ ಸಿಗಲ್ಲ ಅಂತ ಬೈಬಲಲ್ಲಿ ಹೇಳಿದ್ರಷ್ಟೇ ಅವನು ಮತ್ತೆ ಜೀವಂತವಾಗಿ ಬರಲ್ಲ ಅಂತ ಹೇಳಬಹುದು. ಇಲ್ಲಾಂದ್ರೆ ನಮಗೆ ಹೇಳೋಕೆ ಆಗಲ್ಲ.

‘ಇಡೀ ಭೂಮಿಯ ನ್ಯಾಯಾಧೀಶ ಸರಿಯಾಗಿರೋದನ್ನೇ ಮಾಡ್ತಾನೆ’

17. ತೀರಿಹೋಗಿರೋ ಜನ್ರಿಗೆ ಯಾವ ನಿರೀಕ್ಷೆ ಇದೆ?

17 ಆದಾಮ ಹವ್ವ ಸೈತಾನನ ಜೊತೆ ಸೇರಿ ಯೆಹೋವನ ವಿರುದ್ಧ ದಂಗೆ ಎದ್ದಾಗಿಂದ ಇಲ್ಲಿ ತನಕ ಕೋಟಿಗಟ್ಟಲೆ ಜನ್ರು ತೀರಿಹೋಗಿದ್ದಾರೆ. ಹೀಗೆ ‘ಕೊನೇ ಶತ್ರು ಆಗಿರೋ ಸಾವು’ ಎಲ್ರ ಮೇಲೆ ಜಯ ಸಾಧಿಸಿದೆ. (1 ಕೊರಿಂ. 15:26) ಆದ್ರೆ ತೀರಿ ಹೋಗಿರುವವ್ರಿಗೆ ನಿರೀಕ್ಷೆ ಇದೆ. ಏನದು? ಯೇಸುವನ್ನ ನಂಬಿಕೆಯಿಂದ ಹಿಂಬಾಲಿಸೋ 1,44,000 ಜನ್ರಿರೋ ಒಂದು ಚಿಕ್ಕ ಗುಂಪಿಗೆ ಸ್ವರ್ಗದಲ್ಲಿ ಅಮರ ಜೀವನ ಸಿಗುತ್ತೆ. (ಪ್ರಕ. 14:1) ಅಷ್ಟೇ ಅಲ್ಲ, ಯೆಹೋವನಿಗೆ ನಂಬಿಕೆಯಿಂದ ಸೇವೆ ಮಾಡಿದ ತುಂಬ ಜನ್ರು ಈ ಭೂಮಿ ಮೇಲೆ ಮತ್ತೆ ಜೀವಿಸ್ತಾರೆ. “ನೀತಿವಂತರು ಮತ್ತೆ ಬದುಕೋ ತರ” ದೇವರು ಮಾಡುವಾಗ ಅವ್ರ ಜೊತೆ ಇವರೂ ಇರ್ತಾರೆ. ಇವರು ಯೇಸುವಿನ ಸಾವಿರ ವರ್ಷದ ಆಳ್ವಿಕೆಯಲ್ಲಿ ಮತ್ತು ಕೊನೇ ಪರೀಕ್ಷೆಯಲ್ಲಿ ನೀತಿವಂತರಾಗಿದ್ರೆ ಮಾತ್ರ ಶಾಶ್ವತವಾಗಿ ಜೀವಿಸ್ತಾರೆ. (ದಾನಿ. 12:13; ಇಬ್ರಿ. 12:1) ಅಷ್ಟೇ ಅಲ್ಲ “ಅನೀತಿವಂತರು” ಅಂದ್ರೆ ಯೆಹೋವನನ್ನ ಯಾವತ್ತೂ ಆರಾಧಿಸದೇ ಇದ್ದ ಮತ್ತು “ಕೆಟ್ಟ ಕೆಲಸ ಮಾಡ್ತಾ ಇದ್ದ” ಜನ್ರು ಸಾವಿರ ವರ್ಷದ ಆಳ್ವಿಕೆಯಲ್ಲಿ ಮತ್ತೆ ಜೀವ ಪಡ್ಕೊಳ್ತಾರೆ. (ಲೂಕ 23:42, 43) ಇವ್ರಿಗೆ ಯೆಹೋವನ ಮೇಲೆ ನಂಬಿಕೆ ಇದೆ ಅಂತ ತೋರಿಸೋಕೆ ಮತ್ತು ತಮ್ಮ ಜೀವನವನ್ನ ಬದಲಾಯಿಸ್ಕೊಳ್ಳೋಕೆ ಒಂದು ಅವಕಾಶ ಸಿಗುತ್ತೆ. ಆದ್ರೆ ಇನ್ನು ಕೆಲವು ಜನ್ರು ತುಂಬ ಕೆಟ್ಟ ಕೆಲಸಗಳನ್ನ ಮಾಡಿದ್ದಾರೆ. ಅವರು ಯೆಹೋವ ದೇವರ ವಿರುದ್ಧ ಮತ್ತು ಆತನ ಉದ್ದೇಶದ ವಿರುದ್ಧ ಬೇಕುಬೇಕಂತಾನೇ ದಂಗೆ ಎದ್ದಿದ್ದಾರೆ. ಅಂಥವ್ರಿಗೆ ಮತ್ತೆ ಜೀವ ಕೊಡೋದು ಬೇಡ ಅಂತ ಯೆಹೋವ ತೀರ್ಮಾನ ಮಾಡಿದ್ದಾನೆ.—ಲೂಕ 12:4, 5.

18-19. (ಎ) ತೀರಿಹೋಗಿರುವವ್ರಿಗೆ ಯೆಹೋವ ಸರಿಯಾಗಿ ನ್ಯಾಯ ತೀರಿಸ್ತಾನೆ ಅಂತ ನಾವ್ಯಾಕೆ ನಂಬಬಹುದು? (ಯೆಶಾಯ 55:8, 9) (ಬಿ) ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

18 ಯೆಹೋವ ದೇವರು ಮಾಡೋ ಎಲ್ಲಾ ತೀರ್ಪು ಸರಿಯಾಗೇ ಇರುತ್ತೆ ಅಂತ ನಾವು ನಂಬಬಹುದಾ? ಖಂಡಿತ. ಅಬ್ರಹಾಮನಿಗೆ ಆ ನಂಬಿಕೆ ಇತ್ತು. ಅದಕ್ಕೇ ಅವನು ಯೆಹೋವ ಪರಿಪೂರ್ಣನಾಗಿದ್ದಾನೆ, ಆತನಿಗೆ ತುಂಬ ವಿವೇಕ ಇದೆ, ಆತನು ಕರುಣಾಮಯಿ ಮತ್ತು “ಇಡೀ ಭೂಮಿಯ ನ್ಯಾಯಾಧೀಶ” ಅಂತ ಹೇಳಿದ. ಯೆಹೋವ ತನ್ನ ಮಗನಾದ ಯೇಸುಗೂ ಒಳ್ಳೇ ತರಬೇತಿ ಕೊಟ್ಟಿದ್ದಾನೆ ಮತ್ತು ನ್ಯಾಯ ತೀರಿಸೋ ಕೆಲಸನೂ ಅವನಿಗೆ ವಹಿಸ್ಕೊಟ್ಟಿದ್ದಾನೆ. (ಯೋಹಾ. 5:22) ಯೆಹೋವ ಮತ್ತು ಯೇಸುಗೆ ಮಾತ್ರ ಪ್ರತಿಯೊಬ್ರ ಮನಸ್ಸಲ್ಲಿ, ಹೃದಯದಲ್ಲಿ ಏನಿದೆ ಅಂತ ಗೊತ್ತಿರೋದು. (ಮತ್ತಾ. 9:4) ಹಾಗಾಗಿ ಅವರು ಯಾವುದೇ ತೀರ್ಪು ಕೊಟ್ರು ಅದು ‘ಸರಿಯಾಗೇ ಇರುತ್ತೆ!’

19 ಅದಕ್ಕೇ ಯೆಹೋವನಿಗೆ ಎಲ್ಲಾ ಚೆನ್ನಾಗಿ ಗೊತ್ತು ಅಂತ ನಾವು ಕಣ್ಮುಚ್ಚಿ ನಂಬಬಹುದು. ಅಷ್ಟೇ ಅಲ್ಲ ಬೇರೆಯವ್ರಿಗೆ ತೀರ್ಪುಮಾಡೋ ಯೋಗ್ಯತೆ ನಮಗಿಲ್ಲ, ಯೆಹೋವನಿಗೆ ಮಾತ್ರ ಇರೋದು ಅನ್ನೋದನ್ನ ನೆನಪಲ್ಲಿ ಇಡಬೇಕು. (ಯೆಶಾಯ 55:8, 9 ಓದಿ.) ಹಾಗಾಗಿ ನಾವು ಎಲ್ಲಾ ವಿಷ್ಯದಲ್ಲೂ ಯೆಹೋವನಿಗೆ ಮತ್ತು ಯೇಸುಗೆ ತೀರ್ಪುಮಾಡೋಕೆ ಬಿಟ್ಟುಬಿಡೋಣ. ನಮ್ಮ ರಾಜನಾಗಿರೋ ಯೇಸು ತನ್ನ ಅಪ್ಪನ ತರನೇ ನ್ಯಾಯ ತೀರಿಸ್ತಾನೆ ಮತ್ತು ಕರುಣೆ ತೋರಿಸ್ತಾನೆ. (ಯೆಶಾ. 11:3, 4) ಹಾಗಾದ್ರೆ ಮಹಾ ಸಂಕಟದ ಸಮಯದಲ್ಲಿ ಯೆಹೋವ ಮತ್ತು ಯೇಸು ಹೇಗೆ ನ್ಯಾಯ ತೀರಿಸ್ತಾರೆ? ಅದ್ರ ಬಗ್ಗೆ ನಮಗೆ ಏನು ಗೊತ್ತಿಲ್ಲ ಮತ್ತು ಏನು ಗೊತ್ತಿದೆ? ಇದನ್ನ ಮುಂದಿನ ಲೇಖನದಲ್ಲಿ ಚರ್ಚಿಸೋಣ.

ಗೀತೆ 142 ಎಲ್ಲ ರೀತಿಯ ಜನರಿಗೆ ಸಾರಿ

b ಆದಾಮ, ಹವ್ವ ಮತ್ತು ಕಾಯಿನನ ಬಗ್ಗೆ ಜನವರಿ 1, 2013ರ ಕಾವಲಿನಬುರುಜುನಲ್ಲಿರೋ ಪುಟ 12, ಪಾದಟಿಪ್ಪಣಿ ನೋಡಿ.

c ಇಸ್ಕರಿಯೂತ ಯೂದನ ಬಗ್ಗೆ ಯೋಹಾನ 17:12ರಲ್ಲಿ “ನಾಶ ಆಗಬೇಕಾದ ಒಬ್ಬ” ಅಂತ ಹೇಳಿರೋದ್ರಿಂದ ಅವನು ಶಾಶ್ವತಕ್ಕೂ ನಾಶ ಆಗ್ತಾನೆ, ಅವನು ಮತ್ತೆ ಜೀವಂತವಾಗಿ ಎದ್ದು ಬರಲ್ಲ ಅಂತ ಗೊತ್ತಾಗುತ್ತೆ.