ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 36

ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ

“ದೇವರ ಮಾತಿನ ಪ್ರಕಾರ ನಡೀರಿ”

“ದೇವರ ಮಾತಿನ ಪ್ರಕಾರ ನಡೀರಿ”

‘ದೇವರ ಮಾತಿನ ಪ್ರಕಾರ ನಡೀರಿ. ಬರೀ ಕೇಳಿ ಅದನ್ನ ಬಿಟ್ಟುಬಿಡಬೇಡಿ.’ಯಾಕೋ. 1:22.

ಈ ಲೇಖನದಲ್ಲಿ ಏನಿದೆ?

ಬೈಬಲನ್ನ ಚೆನ್ನಾಗಿ ಓದೋಕೆ, ಓದಿದ್ದನ್ನ ಚೆನ್ನಾಗಿ ಯೋಚಿಸೋಕೆ ಮತ್ತು ಕಲಿತಿದ್ದನ್ನ ಪಾಲಿಸೋಕೆ ಈ ಲೇಖನ ನಮಗೆ ಸಹಾಯ ಮಾಡುತ್ತೆ.

1-2. ಯೆಹೋವನ ಜನ್ರು ಯಾಕೆ ಖುಷಿಯಾಗಿ ಇದ್ದಾರೆ? (ಯಾಕೋಬ 1:22-25)

 ಯೆಹೋವ ಮತ್ತು ಯೇಸು ನಾವೆಲ್ರೂ ಚೆನ್ನಾಗಿ ಇರಬೇಕಂತ ಇಷ್ಟಪಡ್ತಾರೆ. ಅದಕ್ಕೇ ಕೀರ್ತನೆ 119:2 ಹೀಗೆ ಹೇಳುತ್ತೆ: “ಆತನು ಕೊಡೋ ಎಚ್ಚರಿಕೆಗಳನ್ನ ಯಾರು ಪಾಲಿಸ್ತಾರೋ, ಪೂರ್ಣಹೃದಯದಿಂದ ಆತನಿಗಾಗಿ ಯಾರು ಹುಡುಕ್ತಾರೋ ಅವರು ಖುಷಿಯಿಂದ ಇರ್ತಾರೆ.” ಇದ್ರ ಬಗ್ಗೆನೇ ಯೇಸು “ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ” ಅಂತ ಹೇಳಿದನು.—ಲೂಕ 11:28.

2 ಯೆಹೋವನ ಜನ್ರೆಲ್ಲ ಖುಷಿಖುಷಿಯಾಗಿ ಇರ್ತಾರೆ. ಯಾಕಂದ್ರೆ ನಮಗೆ ಖುಷಿಯಾಗಿ ಇರೋಕೆ ಎಷ್ಟೊಂದು ಕಾರಣಗಳಿದೆ. ಅದ್ರಲ್ಲಿ ಮುಖ್ಯವಾದ ಕಾರಣ ಯಾವುದು? ಪ್ರತಿದಿನ ನಾವು ದೇವರ ವಾಕ್ಯ ಓದ್ತಾ ಇರೋದ್ರಿಂದ ಮತ್ತು ಅದ್ರ ಪ್ರಕಾರ ನಡಿತಾ ಇರೋದ್ರಿಂದನೇ.ಯಾಕೋಬ 1:22-25 ಓದಿ.

3. ದೇವರ ಮಾತಿನ ಪ್ರಕಾರ ನಡೆದ್ರೆ ನಮಗೆ ಏನೆಲ್ಲ ಪ್ರಯೋಜನ ಸಿಗುತ್ತೆ?

3 ದೇವರ ಮಾತನ್ನ ಪಾಲಿಸಿದ್ರೆ ನಮಗೆ ತುಂಬ ಪ್ರಯೋಜನಗಳು ಸಿಗುತ್ತೆ. “ದೇವರ ಮಾತಿನ ಪ್ರಕಾರ” ನಡೆದ್ರೆ ನಾವು ಆತನ ಮನಸ್ಸನ್ನ ಖುಷಿ ಪಡಿಸಬಹುದು! ಇದನ್ನ ನೆನಸ್ಕೊಂಡ್ರೆನೇ ನಮಗೆ ಖುಷಿಯಾಗುತ್ತಲ್ವಾ! (ಪ್ರಸಂ. 12:13) ಅಷ್ಟೇ ಅಲ್ಲ, ನಮ್ಮ ಕುಟುಂಬ ಖುಷಿಖುಷಿಯಾಗಿ ಇರುತ್ತೆ, ಸಭೆಯಲ್ಲಿ ಒಳ್ಳೊಳ್ಳೆ ಸ್ನೇಹಿತರನ್ನ ಮಾಡ್ಕೊಬಹುದು. ಇದು ನಿಜ ಅಂತ ನಿಮಗೆ ಅನಿಸಲ್ವಾ? ಒಂದುವೇಳೆ ದೇವರ ಮಾತಿನ ಪ್ರಕಾರ ನಡಿದೇ ಇದ್ರೆ ಏನಾಗುತ್ತೆ? ತುಂಬ ಸಮಸ್ಯೆಗಳಲ್ಲಿ ಸಿಕ್ಕಿ ಹಾಕೊಳ್ತೀವಿ. ದೇವರ ಮಾತನ್ನ ಪಾಲಿಸಿದ್ರೆ ತುಂಬ ಸಮಸ್ಯೆಗಳಿಂದ ದೂರ ಇರಬಹುದು. ಅದಕ್ಕೇ ದಾವೀದ ಯೆಹೋವನ ಆಜ್ಞೆಗಳು, ನಿಯಮಗಳು, ನ್ಯಾಯತೀರ್ಪಿನ ಬಗ್ಗೆ ಹೇಳ್ತಾ “ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ” ಅಂತ ಹೇಳಿದ್ದಾನೆ.—ಕೀರ್ತ. 19:7-11.

4. ದೇವರ ಮಾತಿನ ಪ್ರಕಾರ ನಡಿಯೋದು ಯಾಕೆ ಅಷ್ಟು ಸುಲಭ ಅಲ್ಲ?

4 ದೇವರ ಮಾತಿನ ಪ್ರಕಾರ ನಡಿಯೋದು ಮಾತಲ್ಲಿ ಹೇಳಿದಷ್ಟು ಸುಲಭ ಅಲ್ಲ. ಅದಕ್ಕೇ ನಾವೆಲ್ಲ ಎಷ್ಟೇ ಬಿಜ಼ಿ ಇದ್ರೂ ಬೈಬಲನ್ನ ಓದೋಕೆ, ಅದ್ರ ಬಗ್ಗೆ ಯೋಚ್ನೆ ಮಾಡೋಕೆ ಟೈಮ್‌ ಮಾಡ್ಕೊಳ್ಳಲೇ ಬೇಕು. ಆಗ ಮಾತ್ರನೇ ನಾವು ಏನು ಮಾಡಬೇಕು ಅಂತ ಯೆಹೋವ ಇಷ್ಟ ಪಡ್ತಾನೆ ಅಂತ ಅರ್ಥಮಾಡ್ಕೊಳ್ಳೋಕೆ ಆಗುತ್ತೆ. ದಿನಾ ಬೈಬಲ್‌ ಓದೋಕೆ ಕೆಲವು ಸಲಹೆಗಳನ್ನ ಈಗ ನೋಡೋಣ. ಇದ್ರ ಜೊತೆಗೆ ಓದಿದ್ರ ಬಗ್ಗೆ ಯೋಚಿಸೋದು ಹೇಗೆ? ಅದನ್ನ ಪಾಲಿಸೋದು ಹೇಗೆ? ಅಂತನೂ ನೋಡೋಣ.

ಬೈಬಲ್‌ ಓದೋಕಂತಾನೇ ಸಮಯ ಮಾಡ್ಕೊಳ್ಳಿ

5. ನಮಗಿರೋ ಸ್ವಲ್ಪ ಸಮಯದಲ್ಲೇ ಯಾವೆಲ್ಲ ಜವಾಬ್ದಾರಿಗಳನ್ನ ಮಾಡ್ತಿದ್ದೀವಿ?

5 ನಾವೆಲ್ಲ ಪ್ರತಿದಿನ ಬಿಜ಼ಿಯಾಗಿ ಇರ್ತೀವಿ. ಬೈಬಲ್‌ ಹೇಳೋ ಜವಾಬ್ದಾರಿಗಳನ್ನ ಮಾಡೋಕೆ ಹೆಚ್ಚು ಸಮಯ ಕಳೀತೀವಿ. ನಾವು ನಮಗೋಸ್ಕರ, ನಮ್ಮ ಕುಟುಂಬಕ್ಕೋಸ್ಕರ ಕಷ್ಟಪಟ್ಟು ದುಡೀತಿದ್ದೀವಿ. (1 ತಿಮೊ. 5:8) ಮನೆಯಲ್ಲಿ ಯಾರಿಗಾದ್ರೂ ಹುಷಾರಿಲ್ಲಾಂದ್ರೆ, ವಯಸ್ಸಾದವರು ಇದ್ರೆ ಅವ್ರನ್ನ ನೋಡ್ಕೊಬೇಕು. ಅಷ್ಟೇ ಅಲ್ಲ ನಮ್ಮ ಆರೋಗ್ಯನೂ ನೋಡ್ಕೊಬೇಕು. ಈ ಎಲ್ಲ ಕರ್ತವ್ಯಗಳ ಜೊತೆಲಿ ನಮಗೆ ಸಭೆಲೂ ಮಾಡೋಕೆ ಕೆಲಸ ಇದೆ. ಸೇವೆನೂ ಹುರುಪಿಂದ ಮಾಡ್ತಿದ್ದೀವಿ. ಇಷ್ಟೆಲ್ಲ ಕರ್ತವ್ಯಗಳನ್ನ ಮಾಡ್ತಾ ಬೈಬಲ್‌ ಓದೋಕೆ, ಓದಿದ್ರ ಬಗ್ಗೆ ಯೋಚಿಸೋಕೆ ಮತ್ತು ಅದನ್ನ ಪಾಲಿಸೋಕೆ ಸಮಯ ಮಾಡ್ಕೊಳ್ಳೋದು ಹೇಗೆ?

6. ಪ್ರತಿದಿನ ತಪ್ಪದೇ ಬೈಬಲ್‌ ಓದೋಕೆ ಏನು ಮಾಡಬೇಕು? (ಚಿತ್ರ ನೋಡಿ.)

6 ನಮಗಿರೋ ‘ತುಂಬ ಮುಖ್ಯವಾಗಿರೋ ವಿಷ್ಯಗಳಲ್ಲಿ’ ಬೈಬಲ್‌ ಓದೋದು ಕೂಡ ಒಂದು. (ಫಿಲಿ. 1:10) ಅದಕ್ಕೇ ಏನೇ ಆದ್ರೂ ಬೈಬಲ್‌ ಓದೋಕೆ ಟೈಮ್‌ ಮಾಡ್ಕೊಬೇಕು. ಯಾಕಂದ್ರೆ ಒಂದನೇ ಕೀರ್ತನೆ ಯಾರು ‘ಯೆಹೋವನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾರೋ’ ಅದನ್ನ ಪಾಲಿಸ್ತಾರೋ ಅವರು ಖುಷಿಯಾಗಿರ್ತಾರೆ ಅಂತ ಹೇಳುತ್ತೆ. (ಕೀರ್ತ. 1:1, 2) ಬೈಬಲ್‌ ಓದೋಕೆ ಯಾಕೆ ಟೈಮ್‌ ಮಾಡ್ಕೊಳ್ಳಲೇಬೇಕು ಅಂತ ಈಗ ಗೊತ್ತಾಯ್ತಲ್ವಾ? ಹಾಗಾದ್ರೆ ಯಾವ ಟೈಮಲ್ಲಿ ಬೈಬಲ್‌ ಓದಿದ್ರೆ ಚೆನ್ನಾಗಿರುತ್ತೆ? ಒಬ್ಬೊಬ್ರಿಗೆ ಒಂದೊಂದು ಟೈಮಲ್ಲಿ ಬೈಬಲ್‌ ಓದೋದು ಚೆನ್ನಾಗಿ ಅನಿಸುತ್ತೆ. ಆ ಟೈಮ್‌ ಯಾವುದು ಅಂತ ಹೇಗೆ ಕಂಡು ಹಿಡಿಯೋದು? ಯಾವ ಟೈಮಲ್ಲಿ ಓದಿದ್ರೆ ಬಿಡದೇ ಪ್ರತಿದಿನ ಬೈಬಲ್‌ ಓದೋಕೆ ಆಗುತ್ತೋ ಅದೇ ಚೆನ್ನಾಗಿರೋ ಟೈಮ್‌! ಬ್ರದರ್‌ ವಿಕ್ಟರ್‌ ಹೀಗೆ ಹೇಳ್ತಾರೆ: “ನಾನು ಬೆಳಿಗ್ಗೆ ಎದ್ದೇಳೋಕೆ ಸ್ವಲ್ಪ ಕಷ್ಟ ಪಡ್ತೀನಿ, ಆದ್ರೂ ಬೈಬಲ್‌ ಓದೋಕೆ ಅದೇ ಬೆಸ್ಟ್‌ ಟೈಮ್‌ ಅಂತ ನನಗನಿಸುತ್ತೆ. ಯಾಕಂದ್ರೆ ಆಗ ಜಾಸ್ತಿ ಗಲಾಟೆ ಇರಲ್ಲ, ಹೆಚ್ಚು ಸೌಂಡ್‌ ಇರಲ್ಲ. ಅದಕ್ಕೇ ಚೆನ್ನಾಗಿ ಗಮನ ಕೊಡ್ತೀನಿ, ಚೆನ್ನಾಗಿ ಯೋಚ್ನೆ ಮಾಡೋಕೆ ಆಗುತ್ತೆ.” ನಿಮಗೂ ವಿಕ್ಟರ್‌ ತರನೇ ಅನಿಸುತ್ತಾ? ‘ನಾನು ಯಾವ ಟೈಮಲ್ಲಿ ಬೈಬಲ್‌ ಓದಿದ್ರೆ ಚೆನ್ನಾಗಿರುತ್ತೆ?’ ಅಂತ ನಿಮ್ಮನ್ನೇ ಕೇಳ್ಕೊಳ್ಳಿ!

ತಪ್ಪದೇ ದಿನಾ ಬೈಬಲ್‌ ಓದೋಕೆ ಯಾವ ಟೈಮ್‌ ಚೆನ್ನಾಗಿರುತ್ತೆ? (ಪ್ಯಾರ 6 ನೋಡಿ)


ಯೋಚಿಸೋಕೆ ಮರೀಬೇಡಿ!

7-8. ನಮಗೆ ಬೈಬಲ್‌ ಓದೋ ರೂಢಿ ಇದ್ರೂ ಕೆಲವೊಮ್ಮೆ ಯಾಕೆ ಪ್ರಯೋಜನ ಆಗಲ್ಲ? ಉದಾಹರಣೆ ಕೊಡಿ.

7 ತುಂಬ ಸಲ ನಾವು ಎಷ್ಟೊಂದು ಓದಿರ್ತೀವಿ, ಆದ್ರೆ ತಲೆಗೆ ಏನೇನೂ ಹತ್ತಿರಲ್ಲ! ‘ಅರೇ, ಈಗ ತಾನೇ ಅದೆನೋ ಓದಿದ್ನಲ್ಲಾ? ಏನದು?’ ಅಂತ ಎಷ್ಟೇ ಯೋಚ್ನೆ ಮಾಡಿದ್ರೂ ನೆನಪೇ ಬರಲ್ಲ. ಕೆಲವೊಮ್ಮೆ ಬೈಬಲ್‌ ಓದುವಾಗ್ಲೂ ಹೀಗೇ ಆಗಿಬಿಡುತ್ತೆ. ಇದಕ್ಕೆ ಒಂದು ಕಾರಣ ಏನಂದ್ರೆ ಒಂದೇ ಸಲ ತುಂಬ ಓದಿ ಬಿಡ್ತೀವಿ. ನಿಜ, ಗುರಿ ಇಡಬೇಕು, ಅದನ್ನ ಮುಟ್ಟೋಕೆ ಪ್ರಯತ್ನ ಹಾಕಬೇಕು ಅಂತ ಬೈಬಲ್‌ ಹೇಳುತ್ತೆ. (1 ಕೊರಿಂ. 9:26) ಹಾಗಾಗಿ ನೀವು ಒಂದಿನಕ್ಕೆ ಇಂತಿಷ್ಟು ಅಧ್ಯಾಯ ಓದಬೇಕು ಅಂದ್ಕೊಂಡ್ರೆ ಅದು ಒಳ್ಳೇ ಗುರಿನೇ! ಆದ್ರೆ ಹೀಗೆ ಬೈಬಲ್‌ ಓದೋದು ಆರಂಭ ಅಷ್ಟೇ, ನೆನಪಿಡಿ, ಬರೀ ಆರಂಭ! ಅದ್ರಿಂದ ಪ್ರಯೋಜನ ಪಡೀಬೇಕಂದ್ರೆ ಇನ್ನೂ ಕೆಲವು ವಿಷ್ಯಗಳನ್ನ ಮಾಡಬೇಕು.

8 ಉದಾಹರಣೆಗೆ, ನಾವೆಲ್ಲ ಬದುಕೋಕೆ ಮಳೆ ಬೇಕೇ ಬೇಕು. ಹಾಗಂತ ಒಂದೇ ಸಲ ಜಾಸ್ತಿ ಮಳೆ ಸುರಿದ್ರೆ ಏನಾಗುತ್ತೆ? ಪ್ರವಾಹ ತರ ಆಗಿ ನೀರೆಲ್ಲ ಹರಿದು ಹೋಗಿಬಿಡುತ್ತೆ, ಭೂಮಿ ಹೀರಿಕೊಳ್ಳೋಕೆ ಆಗಲ್ಲ, ಮರಗಿಡಗಳಿಗೆ ಪ್ರಯೋಜನನೂ ಆಗಲ್ಲ! ಬೈಬಲ್‌ ಓದುವಾಗ್ಲೂ ಹಾಗೆನೇ, ಒಂದೇ ಸಲ ಆತುರ ಆತುರವಾಗಿ ಬೈಬಲ್‌ ಓದಿಬಿಟ್ರೆ, ಓದಿದ್ದು ಅರ್ಥ ಆಗಲ್ಲ, ನೆನಪಿಟ್ಕೊಳ್ಳೋಕೆ ಆಗಲ್ಲ, ಅದನ್ನ ಪಾಲಿಸೋಕೂ ಆಗಲ್ಲ!—ಯಾಕೋ. 1:24.

ಮಳೆ ನೀರನ್ನ ಹೀರಿಕೊಳ್ಳೋಕೆ ಹೇಗೆ ಮಣ್ಣಿಗೆ ಸಮಯ ಬೇಕೋ ಹಾಗೇ ಬೈಬಲ್‌ ಓದಿ ಪಾಲಿಸೋಕೆ ನಮಗೆ ಸಮಯ ಬೇಕು (ಪ್ಯಾರ 8 ನೋಡಿ)


9. ಒಂದುವೇಳೆ ನಾವು ಬೇಗಬೇಗ ಬೈಬಲ್‌ ಓದ್ತಾ ಇದ್ರೆ ಯಾವ ಬದಲಾವಣೆ ಮಾಡ್ಕೊಬೇಕು?

9 ಒಂದೊಂದು ಸಲ ನಾವು ಬೇಗಬೇಗ ಬೈಬಲನ್ನ ಓದಿ ಬಿಡ್ತೀವಿ. ನೀವೂ ಹಾಗೇ ಓದ್ತಿದ್ದೀರಾ? ಹಾಗಾದ್ರೆ ಏನು ಮಾಡೋದು? ಇನ್ನು ಮೇಲೆ ನಿಧಾನವಾಗಿ ಓದಿ! ಇದ್ರ ಅರ್ಥ ಏನಂದ್ರೆ, ಓದುವಾಗ ನಾನೇನ್‌ ಓದ್ತಾ ಇದ್ದೀನಿ ಅಂತ ಗಮನಿಸ್ತಾ ಓದಿ ಅಥವಾ ಓದಿ ಮುಗಿಸಿದ ಮೇಲೆ ಅದ್ರ ಬಗ್ಗೆ ಯೋಚಿಸಿ. ಹೀಗೆ ಯೋಚಿಸೋಕೆ ಎರಡು ದಾರಿ ಇದೆ. ಒಂದು, ಬೈಬಲ್‌ ಓದಿ ಮುಗಿಸಿದ ಮೇಲೆ ಇನ್ನೂ ಸ್ವಲ್ಪ ಟೈಮ್‌ ತಗೊಂಡು ಯೋಚಿಸಿ. ಎರಡು, ಇರೋ ಟೈಮಲ್ಲೇ ಸ್ವಲ್ಪ ಬೈಬಲ್‌ ಓದಿ, ಉಳಿದಿರೋ ಟೈಮಲ್ಲಿ ಓದಿದ್ರ ಬಗ್ಗೆ ಯೋಚ್ನೆ ಮಾಡಿ. ಈ ಎರಡರಲ್ಲಿ ನೀವು ಯಾವುದನ್ನ ಬೇಕಾದ್ರೂ ಮಾಡಬಹುದು. ಆದ್ರೆ ನೆನಪಿಡಿ, ನೀವು ಎಷ್ಟು ನಿಧಾನವಾಗಿ ಓದಿದ್ರೆ ಅರ್ಥ ಆಗುತ್ತೋ ಅಷ್ಟು ನಿಧಾನವಾಗಿ ಓದಬೇಕು. ವಿಕ್ಟರ್‌ ಮಾಡಿದ್ದೂ ಇದನ್ನೇ. ಅವರು ಹೇಳ್ತಾರೆ, “ನಾನು ಸ್ವಲ್ಪ ಸ್ವಲ್ಪನೇ ಬೈಬಲ್‌ ಓದ್ತೀನಿ. ಅಂದ್ರೆ, ಒಂದು ಅಧ್ಯಾಯನೇ! ಆದ್ರೆ ಬೆಳಬೆಳ್ಳಗೇನೇ ಇದನ್ನ ಓದೋದ್ರಿಂದ ಇಡೀ ದಿನ ಅದ್ರ ಬಗ್ಗೆ ಯೋಚಿಸ್ತಾ ಇರ್ತೀನಿ.”—ಕೀರ್ತ. 119:97; “ ಯೋಚಿಸೋಕೆ ಸಹಾಯ” ಅನ್ನೋ ಚೌಕ ನೋಡಿ.

10. ನಾವು ಹೇಗೆ ಯೋಚಿಸಬೇಕು ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ. (1 ಥೆಸಲೊನೀಕ 5:17, 18)

10 ಇಷ್ಟೊತ್ತು ನಾವು ಬೈಬಲ್‌ ಯಾವಾಗ ಓದಬೇಕು ಮತ್ತು ಎಷ್ಟೊತ್ತು ಓದಬೇಕು ಅಂತ ಕಲಿತ್ವಿ. ಈಗ ಕಲಿತಿದ್ದನ್ನ ಪಾಲಿಸೋದು ಹೇಗೆ ಅಂತ ನೋಡೋಣ. ನಾವು ಬೈಬಲ್‌ ಓದ್ತಾ ಇರುವಾಗ ಈ ವಚನಗಳನ್ನ ಈಗ ಮತ್ತು ಮುಂದೆ ನಮ್ಮ ಜೀವನದಲ್ಲಿ ಹೇಗೆ ಪಾಲಿಸೋದು ಅಂತ ಯೋಚಿಸಬೇಕು. ಅದನ್ನ ಹೇಗೆ ಮಾಡೋದು ಅಂತ ಒಂದು ಉದಾಹರಣೆ ನೋಡೋಣ. 1 ಥೆಸಲೊನೀಕ 5:17, 18 ಓದಿದ್ದೀರಾ ಅಂದ್ಕೊಳ್ಳಿ. (ಓದಿ.) ಎರಡೂ ವಚನಗಳನ್ನ ಓದಿದ ಮೇಲೆ ‘ಒಂದು ದಿನಕ್ಕೆ ನಾನು ಎಷ್ಟು ಸಲ ಪ್ರಾರ್ಥನೆ ಮಾಡ್ತೀನಿ. ಪ್ರಾರ್ಥನೆಯಲ್ಲಿ ನಾನು ಏನೆಲ್ಲ ಹೇಳ್ತೀನಿ’ ಅಂತ ಯೋಚ್ನೆ ಮಾಡಿ. ಅಷ್ಟೇ ಅಲ್ಲ, ‘ಯೆಹೋವ ನನಗೆ ಎಷ್ಟೆಲ್ಲಾ ಮಾಡಿದ್ದಾನೆ, ಆದ್ರೆ ನಾನು ಎಷ್ಟು ವಿಷ್ಯಗಳಿಗೆ ದೇವರಿಗೆ ದಿನಾ ಥ್ಯಾಂಕ್ಸ್‌ ಹೇಳ್ತೀನಿ? ಇನ್ನು ಮೇಲೆ ಒಂದು ದಿನಕ್ಕೆ ಮೂರು ವಿಷ್ಯಕ್ಕಾದರೂ ನಾನು ಥ್ಯಾಂಕ್ಸ್‌ ಹೇಳಬೇಕು’ ಅಂತ ನಿರ್ಧಾರ ಮಾಡಿ. ಯೋಚಿಸೋದು ಅಂದ್ರೆ ಇಷ್ಟೇನೇ! ನಾವಿಷ್ಟೊತ್ತು ಮಾಡಿದ ಹಾಗೆ ಮಾಡಿದ್ರೆ ನಾವು ದೇವರ ವಾಕ್ಯನ ಓದಿ ಬಿಟ್ಟುಬಿಡಲ್ಲ, ದೇವರ ಮಾತಿನ ಪ್ರಕಾರ ನಡೆಯೋ ವ್ಯಕ್ತಿಗಳಾಗ್ತೀವಿ. ‘ಆದ್ರೆ ದಿನಾ ನಾವು ಈ ತರ ಯೋಚಿಸಿದ್ರೆ, ಪಾಲಿಸೋಕೆ ಎಷ್ಟೊಂದು ಇರುತ್ತೆ ಅಲ್ವಾ!’ ಅಂತ ಚಿಂತೆ ಆಗ್ತಿದ್ಯಾ?

ಮುಟ್ಟೋಕೆ ಆಗೋ ಗುರಿಗಳನ್ನ ಇಡಿ

11. ಬೈಬಲ್‌ ಓದಿ ಯೋಚಿಸುವಾಗ ಯಾಕೆ ನಮಗೆ ಕೆಲವೊಮ್ಮೆ ಚಿಂತೆ ಆಗುತ್ತೆ? ಉದಾಹರಣೆ ಕೊಡಿ.

11 ನೀವು ಪ್ರತಿದಿನ ಬೈಬಲ್‌ ಓದುವಾಗ ಮತ್ತು ಅದನ್ನ ಪಾಲಿಸೋಕೆ ಪ್ರಯತ್ನ ಮಾಡುವಾಗ ಕೆಲವೊಮ್ಮೆ ಚಿಂತೆ ಆಗುತ್ತೆ. ಉದಾಹರಣೆಗೆ, ಅಂದ್ಕೊಳ್ಳಿ ಇವತ್ತು ನೀವು ಬೈಬಲ್‌ ಓದಿದ್ದೀರ. ಆಗ ನಿಮಗೆ ಬೇಧಭಾವ ಮಾಡಬಾರದು ಅಂತ ಗೊತ್ತಾಯ್ತು. (ಯಾಕೋ. 2:1-8) ಈಗ ಯೋಚ್ನೆ ಮಾಡ್ತೀರ, ‘ನಾನೂ ಬೇಧಭಾವ ಮಾಡ್ತಿದ್ದೀನಲ್ಲ! ಇಲ್ಲ, ಇನ್ನು ಮೇಲೆ ಮಾಡಬಾರದು, ಬದಲಾಗಬೇಕು’ ಅಂತ ನಿರ್ಧಾರ ಮಾಡಿದ್ರಿ. ವೆರಿಗುಡ್‌! ಈಗ ಎರಡನೇ ದಿನ ಬಂತು, ಈಗ ಬೈಬಲ್‌ ಓದ್ತಾ ಇರುವಾಗ ‘ಯೋಚಿಸಿ ಮಾತಾಡಬೇಕು’ ಅನ್ನೋ ಸಲಹೆ ಸಿಕ್ತು. (ಯಾಕೋ. 3:1-12) ಈಗ ನಿಮ್ಮ ಬಗ್ಗೆನೇ ಯೋಚ್ನೆ ಮಾಡ್ತೀರ. ‘ಹೌದು, ನಾನು ಕೆಲವೊಬ್ರಿಗೆ ಹಿಂದೆ ಮುಂದೆ ಯೋಚ್ನೆ ಮಾಡದೆ ಮಾತಾಡಿಬಿಟ್ಟಿದ್ದೀನಿ’ ಅಂತ ನಿಮಗೆ ಗೊತ್ತಾಯ್ತು. ‘ಇನ್ನು ಮೇಲೆ ಈ ತರ ಮಾತಾಡೋದು ಬೇಡಪ್ಪ, ಇನ್ನು ಎಲ್ರಿಗೂ ಖುಷಿಯಾಗೋ ತರನೇ ಮಾತಾಡ್ತೀನಿ’ ಅಂತ ನಿರ್ಧಾರ ಮಾಡಿದ್ರಿ. ಈಗ ಮೂರನೇ ದಿನ, ಈ ಸಲ ಬೈಬಲ್‌ ಓದಿದಾಗ ಲೋಕದ ಸ್ನೇಹದ ಬಗ್ಗೆ ಎಚ್ಚರಿಕೆ ಸಿಕ್ತು. (ಯಾಕೋ. 4:4-12) ಇದ್ರ ಬಗ್ಗೆ ಯೋಚ್ನೆ ಮಾಡಿದಾಗ ನೀವು ನೋಡ್ತಿರೋ ಫಿಲಂ, ಕೇಳಿಸ್ಕೊಳ್ತಿರೋ ಹಾಡುಗಳು ಸರಿಯಿಲ್ಲ, ಇದ್ರಲ್ಲಿ ಬದಲಾವಣೆ ಮಾಡ್ಕೊಬೇಕು ಅಂತ ಗೊತ್ತಾಗುತ್ತೆ. ನಾಲ್ಕನೇ ದಿನ ಬಂತು, ಇಲ್ಲಿವರೆಗೆ ಕಲಿತಿದ್ದನ್ನೆಲ್ಲ ನೋಡಿದ್ರೆ, ‘ನಾನು ಇಷ್ಟೆಲ್ಲ ಮಾಡಬೇಕಾ?’ ಅಂತ ನಿಮಗೆ ಗಾಬರಿ ಆಗಬಹುದು.

12. ನೀವು ತುಂಬ ಬದಲಾವಣೆ ಮಾಡ್ಕೊಬೇಕು ಅಂತ ಗೊತ್ತಾದ್ರೂ ಯಾಕೆ ಬೇಜಾರು ಮಾಡ್ಕೊಬಾರದು? (ಪಾದಟಿಪ್ಪಣಿ ನೋಡಿ.)

12 ತುಂಬ ಬದಲಾವಣೆಗಳನ್ನ ಮಾಡ್ಕೊಬೇಕು ಅಂತ ಗೊತ್ತಾದಾಗ ಬೇಜಾರಾಗೋದು ಸಹಜ. ಆದ್ರೆ ಕುಗ್ಗಿ ಹೋಗಬೇಡಿ. ಯಾರಲ್ಲಿ ದೀನತೆ, ಪ್ರಾಮಾಣಿಕತೆ ಇರುತ್ತೋ ಅಂಥವರು ಬೈಬಲ್‌ ಓದುವಾಗ ‘ನಾನು ಎಲ್ಲಿ ಬದಲಾವಣೆ ಮಾಡ್ಕೊಬೇಕು?’ ಅಂತ ಕೇಳ್ಕೊಳ್ತಾರೆ. ಎಲ್ಲಿ ಬದಲಾವಣೆ ಮಾಡ್ಕೊಬೇಕು ಅಂತ ನೀವು ಕಂಡು ಹಿಡಿತಿದ್ದೀರ ಅಂದ್ರೆ, ನಿಮಗೆ ಒಳ್ಳೇ ಮನಸ್ಸಿದೆ ಅಂತ ಅರ್ಥ. a ನಿಮಗೆ ಗೊತ್ತಿರೋ ಹಾಗೆ “ಹೊಸ ವ್ಯಕ್ತಿತ್ವ” ಹಾಕೊಳ್ಳೋದು ಒಂದು ದಿನದಲ್ಲಿ ಆಗೋ ಕೆಲಸ ಅಲ್ಲ! ಅದಕ್ಕೆ ಸಮಯ ಹಿಡಿಯುತ್ತೆ, ದಿನಾ ಪ್ರಯತ್ನ ಹಾಕಬೇಕು. (ಕೊಲೊ. 3:10) ಹಾಗಾದ್ರೆ ಬದಲಾವಣೆ ಮಾಡ್ಕೊಳ್ತಾ ದೇವರ ಮಾತಿನ ಪ್ರಕಾರ ನಡೀತಾ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

13. ಒಂದೇ ಸಲ ಎಲ್ಲಾ ಬದಲಾವಣೆ ಮಾಡ್ಕೊಳೋಕೆ ಆಗುತ್ತಾ? ಏನು ಮಾಡಿದ್ರೆ ಚೆನ್ನಾಗಿರುತ್ತೆ? (ಚಿತ್ರ ನೋಡಿ.)

13 ಓದಿದ್ದನ್ನೆಲ್ಲ ಒಂದೇ ಸಲ ಪಾಲಿಸೋಕೆ ಹೋಗಬೇಡಿ. ನಿಮ್ಮ ಕೈಲಿ ಏನು ಮಾಡೋಕೆ ಆಗುತ್ತೋ ಅದನ್ನೇ ಮಾಡಿ. (ಜ್ಞಾನೋ. 11:2) ನೀವು ಹೀಗೆ ಮಾಡಿ ನೋಡಿ: ನೀವು ಏನೆಲ್ಲ ಬದಲಾವಣೆ ಮಾಡ್ಕೊಬೇಕಂತ ಇದ್ದೀರೋ ಅದನ್ನೆಲ್ಲ ಒಂದು ಕಡೆ ಬರೆದಿಟ್ಕೊಳ್ಳಿ. ಅದ್ರಲ್ಲಿ ಒಂದು ಅಥವಾ ಎರಡು ಬದಲಾವಣೆಗಳನ್ನ ಮೊದ್ಲು ಮಾಡಿ. ಉಳಿದಿರೋದನ್ನ ನಿಧಾನವಾಗಿ ಮಾಡಬಹುದು. ಆದ್ರೆ ನೀವು ಮೊದ್ಲು ಯಾವ ಬದಲಾವಣೆ ಮಾಡ್ಕೊಬೇಕು ಅಂತ ಹೇಗೆ ಕಂಡುಹಿಡಿಯೋದು?

ಬೈಬಲಿಂದ ಓದಿದ್ದನ್ನೆಲ್ಲ ಒಂದೇ ಸಲ ಪಾಲಿಸೋ ಬದ್ಲು ನಿಧಾನವಾಗಿ ಒಂದೊಂದನ್ನೇ ಪಾಲಿಸೋ ಗುರಿ ಇಡಬಹುದಾ? (ಪ್ಯಾರ 13-14 ನೋಡಿ)


14. ಮೊದ್ಲು ಎಂಥ ಗುರಿಗಳನ್ನ ಇಟ್ರೆ ಚೆನ್ನಾಗಿರುತ್ತೆ?

14 ಕೈಗೆ ಎಟುಕೋ ಹಣ್ಣನ್ನ ನೀವು ಮೊದ್ಲು ಕಿತ್ಕೊಳ್ತೀರ ಅಲ್ವಾ? ಅದೇ ತರ ನಿಮಗೆ ಯಾವ ಬದಲಾವಣೆ ಮಾಡೋಕೆ ಸುಲಭ ಆಗುತ್ತೋ ಅಥವಾ ನಿಮ್ಮ ಜೀವನಕ್ಕೆ ಯಾವುದು ತುಂಬ ಅಗತ್ಯನೋ ಅದನ್ನ ಮೊದ್ಲು ಮಾಡಿ. ಇದನ್ನ ನಿರ್ಧಾರ ಮಾಡಿದ ಮೇಲೆ ಆನ್‌ಲೈನ್‌ ಲೈಬ್ರರಿಯಲ್ಲಿ ಅಥವಾ ಸಂಶೋಧನಾ ಸಾಧನದಲ್ಲಿ ಅದ್ರ ಬಗ್ಗೆ ಹುಡುಕಿ. ಬದಲಾವಣೆ ಮಾಡ್ಕೊಳೋಕೆ ಬೇಕಾಗಿರೋ “ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ” ಕೊಡಪ್ಪಾ ಅಂತ ಯೆಹೋವನ ಹತ್ರ ಕೇಳಿ. (ಫಿಲಿ. 2:13) ಆಮೇಲೆ ನೀವು ಏನೆಲ್ಲ ಕಲಿತ್ರೋ ಅದನ್ನ ಪಾಲಿಸಿ. ಹೀಗೆ ಒಂದು ಬದಲಾವಣೆ ಮಾಡ್ಕೊಂಡ ಮೇಲೆ ಇನ್ನೊಂದು ಬದಲಾವಣೆ ಮಾಡ್ಕೊಳೋಕೆ ಛಲ ಬರುತ್ತೆ. ಹೀಗೆ ಒಂದಾದ ಮೇಲೆ ಒಂದು ಬದಲಾವಣೆ ಮಾಡ್ಕೊಳ್ತಾ ಹೋದಂಗೆ ಮುಂದೆ ದೇವರ ಮಾತು ಪಾಲಿಸೋದು ಸುಲಭ ಆಗುತ್ತೆ.

ದೇವರ ಮಾತು ‘ನಿಮ್ಮೊಳಗೆ ಕೆಲಸ ಮಾಡೋಕೆ ಬಿಡಿ’

15. ಬೈಬಲನ್ನ ತುಂಬ ಸಲ ಓದಿದವ್ರಿಗೂ ಯೆಹೋವನ ಸಾಕ್ಷಿಗಳಿಗೂ ಇರೋ ವ್ಯತ್ಯಾಸ ಏನು? (1 ಥೆಸಲೊನೀಕ 2:13)

15 ಕೆಲವರು ಒಂದಲ್ಲ, ಎರಡಲ್ಲ ಹತ್ತತ್ತು ಸಲ ಬೈಬಲ್‌ ಓದಿದ್ದೀನಿ ಅಂತ ಹೇಳ್ತಾರೆ. ಆದ್ರೆ ನಿಜವಾಗ್ಲೂ ಅವರದನ್ನ ನಂಬ್ತಾರಾ? ಅದು ಹೇಳೋ ತರ ನಡ್ಕೊಳ್ತಾರಾ? ಇಲ್ಲ. ಆದ್ರೆ ಯೆಹೋವನ ಸಾಕ್ಷಿಗಳು ಒಂದನೇ ಶತಮಾನದ ಕ್ರೈಸ್ತರ ತರ ಬೈಬಲನ್ನ “ನಿಜವಾಗ್ಲೂ ದೇವರ ಸಂದೇಶನೇ” ಅಂತ ನಂಬ್ತಾರೆ. ಅಷ್ಟೇ ಅಲ್ಲ ಅದು ತಮ್ಮೊಳಗೆ ಕೆಲಸ ಮಾಡೋಕೆ ಬಿಟ್ಟುಕೊಡ್ತಾರೆ. ಅಂದ್ರೆ, ಅದು ಹೇಳೋದನ್ನೆಲ್ಲ ಪಾಲಿಸೋಕೆ ತಮ್ಮ ಕೈಲಿ ಆಗಿದ್ದನ್ನೆಲ್ಲ ಮಾಡ್ತಾರೆ.1 ಥೆಸಲೊನೀಕ 2:13 ಓದಿ.

16. ದೇವರ ಮಾತಿನ ಪ್ರಕಾರ ನಡಿಯೋಕೆ ನಮಗಿರೋ ದೊಡ್ಡ ಸಹಾಯ ಯಾವುದು?

16 ನಿಜ ಬೈಬಲನ್ನ ಓದೋದು, ಅದನ್ನ ಪಾಲಿಸೋದು ಎಲ್ಲ ಟೈಮಲ್ಲೂ ಸುಲಭ ಅಲ್ಲ. ಒಂದೊಂದು ಸಲ ಓದೋಕೆ ಟೈಮೇ ಸಿಗಲ್ಲ. ಸಿಕ್ಕಿದ್ರೂ ಬೇಗಬೇಗ ಓದಿಬಿಡ್ತೀವಿ. ಆಗ ತಲೆಗೇ ಹತ್ತಲ್ಲ! ಆದ್ರೂ ಏನೋ ಮಾಡಿ ಅರ್ಥಮಾಡ್ಕೊಂಡ್ವಿ ಅಂದ್ಕೊಳ್ಳಿ. ಇಷ್ಟೆಲ್ಲ ಪಾಲಿಸಬೇಕಾ? ಅಂತ ಭಯ ಪಡ್ತೀವಿ. ಇದನ್ನೆಲ್ಲ ನೋಡಿದ್ರೆ ದಾರಿಲಿ ಒಂದು ದೊಡ್ಡ ಅಡ್ಡ ಗೋಡೆ ಇರೋ ತರ ಅನಿಸುತ್ತೆ. ಹಾಗಂತ ನಾವು ಇದನ್ನ ದಾಟೋಕೆ ಆಗಲ್ವಾ? ಯೆಹೋವನ ಸಹಾಯದಿಂದ ನಾವು ಅದನ್ನ ಜಿಗಿಯೋಕೆ ಆಗುತ್ತೆ. ನಾವು ದೇವರ ಸಹಾಯ ಪಡ್ಕೊಂಡ್ರೆ ದೇವರ ಮಾತನ್ನ ಕೇಳಿ ಮರೆತು ಹೋಗಲ್ಲ. ಅದ್ರ ಪ್ರಕಾರ ನಡೀತೀವಿ. ನಾವು ಎಷ್ಟು ಹೆಚ್ಚು ಬೈಬಲನ್ನ ಓದ್ತೇವೋ ಅದ್ರ ಪ್ರಕಾರ ನಡೀತೀವೋ ಜೀವನದಲ್ಲಿ ಅಷ್ಟೇ ಖುಷಿಯಾಗಿ ಇರ್ತೀವಿ.—ಯಾಕೋಬ 1:25.

ಗೀತೆ 113 ದೇವರ ವಾಕ್ಯಕ್ಕಾಗಿ ಕೃತಜ್ಞರು