ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 39

ಗೀತೆ 21 ಕರುಣೆಯುಳ್ಳವರು ಧನ್ಯರು!

ಧಾರಾಳವಾಗಿ ಕೊಡಿ, ದುಪ್ಪಟ್ಟು ಖುಷಿಪಡಿ!

ಧಾರಾಳವಾಗಿ ಕೊಡಿ, ದುಪ್ಪಟ್ಟು ಖುಷಿಪಡಿ!

“ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.”ಅ. ಕಾ. 20:35.

ಈ ಲೇಖನದಲ್ಲಿ ಏನಿದೆ?

ಕೊಡೋದ್ರಿಂದ ಸಿಗೋ ಖುಷಿಯನ್ನ ಯಾವಾಗ್ಲೂ ಪಡ್ಕೊಳ್ಳೋಕೆ ಮತ್ತು ಆ ಖುಷಿಯನ್ನ ಜಾಸ್ತಿ ಮಾಡೋಕೆ ಏನು ಮಾಡಬೇಕು ಅಂತ ನೋಡೋಣ.

1-2. ಯೆಹೋವ ನಮ್ಮನ್ನ ಹೇಗೆ ಸೃಷ್ಟಿ ಮಾಡಿದ್ದಾನೆ ಮತ್ತು ಯಾಕೆ?

 ತಗೊಳ್ಳೋದಕ್ಕಿಂತ ಕೊಡೋದ್ರಲ್ಲೇ ಜಾಸ್ತಿ ಖುಷಿ ಪಡೆಯೋ ತರ ಯೆಹೋವ ದೇವರು ನಮ್ಮನ್ನ ಸೃಷ್ಟಿ ಮಾಡಿದ್ದಾನೆ. (ಅ. ಕಾ. 20:35) ಹಾಗಂತ ಬೇರೆಯವ್ರಿಂದ ತಗೊಳ್ಳೋವಾಗ ನಮಗೆ ಖುಷಿ ಸಿಗಲ್ಲ ಅಂತ ಅರ್ಥನಾ? ಹಾಗೇನಿಲ್ಲ. ಇನ್ನೊಬ್ರು ನಮಗೆ ಗಿಫ್ಟ್‌ ಕೊಟ್ಟಾಗ ನಮಗೆ ಖುಷಿ ಆಗುತ್ತೆ ನಿಜ. ಆದ್ರೆ ನಾವೇ ಬೇರೆಯವ್ರಿಗೆ ಗಿಫ್ಟ್‌ ಕೊಟ್ಟಾಗ ಇನ್ನೂ ಖುಷಿ ಆಗುತ್ತೆ. ಯೆಹೋವ ನಮ್ಮನ್ನ ಈ ತರ ಸೃಷ್ಟಿ ಮಾಡಿರೋದು ನಮ್ಮ ಪ್ರಯೋಜನಕ್ಕೆನೇ.

2 ಯೆಹೋವ ದೇವರು ನಮ್ಮನ್ನ ಈ ತರ ಸೃಷ್ಟಿ ಮಾಡಿರೋದ್ರಿಂದ ನಮ್ಮ ಖುಷಿನ ನಾವೇ ಜಾಸ್ತಿ ಮಾಡ್ಕೊಳ್ಳೋಕೆ ಆಗುತ್ತೆ. ಅದಕ್ಕೆ ನಾವು ಬೇರೆಯವ್ರಿಗೆ ಕೊಡೋಕೆ ಅವಕಾಶ ಸಿಗುತ್ತಾ ಅಂತ ಹುಡುಕಬೇಕು. ನಮ್ಮ ಪ್ರೀತಿಯ ಅಪ್ಪ ಯೆಹೋವ ನಮ್ಮನ್ನ ಎಷ್ಟು ಚೆನ್ನಾಗಿ ಸೃಷ್ಟಿ ಮಾಡಿದ್ದಾನೆ ಅಲ್ವಾ?—ಕೀರ್ತ. 139:14.

3. ಯೆಹೋವ ‘ಖುಷಿಯಾಗಿರೋ ದೇವರು’ ಅಂತ ಬೈಬಲ್‌ ಯಾಕೆ ಹೇಳುತ್ತೆ?

3 ಕೊಡೋದ್ರಿಂದ ನಮಗೆ ಖುಷಿ ಸಿಗೋದ್ರಿಂದನೇ ಯೆಹೋವ ದೇವರನ್ನ ಬೈಬಲ್‌ ‘ಖುಷಿಯಾಗಿರೋ ದೇವರು’ ಅಂತ ಹೇಳುತ್ತೆ. (1 ತಿಮೊ. 1:11) ಕೊಡೋದು ಹೇಗೆ ಅಂತ ತೋರಿಸ್ಕೊಟ್ಟಿರೋದೇ ಯೆಹೋವ. ಅಷ್ಟೇ ಅಲ್ಲ ಆತನ ತರ ಯಾರೂ ನಮಗೆ ಕೊಡೋಕೂ ಆಗಲ್ಲ. ಅದಕ್ಕೆ ಅಪೊಸ್ತಲ ಪೌಲ, “ಆತನಿಂದಾನೇ ನಾವು ಬದುಕಿದ್ದೀವಿ, ನಡೆದಾಡ್ತೀವಿ, ಇವತ್ತು ಇಲ್ಲಿದ್ದೀವಿ” ಅಂತ ಹೇಳಿದ. (ಅ. ಕಾ. 17:28) ಹೌದು, “ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ” ಯೆಹೋವನಿಂದನೇ ಬರುತ್ತೆ.—ಯಾಕೋ. 1:17.

4. ಜಾಸ್ತಿ ಖುಷಿ ಪಡ್ಕೊಳ್ಳೋಕೆ ನಾವು ಏನು ಮಾಡಬೇಕು?

4 ಕೊಡೋದ್ರಿಂದ ಜಾಸ್ತಿ ಖುಷಿಪಡಬೇಕು ಅಂತ ನಾವೆಲ್ರೂ ಇಷ್ಟ ಪಡ್ತೀವಿ. ಅದಕ್ಕೆ ನಾವು ಏನು ಮಾಡಬೇಕು? ಯೆಹೋವನ ತರ ಧಾರಾಳತನ ತೋರಿಸಬೇಕು. (ಎಫೆ. 5:1) ಹಾಗಾಗಿ ಈ ಲೇಖನದಲ್ಲಿ, ನಮ್ಮಿಂದ ಸಹಾಯ ಪಡ್ಕೊಂಡವರು ನಮಗೆ ಕೃತಜ್ಞತೆ ತೋರಿಸಿಲ್ಲ ಅಂತ ನಮಗೆ ಅನಿಸಿದ್ರೆ, ನಾವು ಏನು ಮಾಡಬೇಕು ಅಂತ ನೋಡೋಣ. ಇದನ್ನ ತಿಳ್ಕೊಂಡ್ರೆ ಕೊಡೋದ್ರಿಂದ ಸಿಗೋ ಖುಷಿನ ಕಳ್ಕೊಳ್ಳದೇ ಇರೋಕೆ ಮತ್ತು ಅದನ್ನ ಜಾಸ್ತಿ ಮಾಡ್ಕೊಳ್ಳೋಕೆ ನಮಗೆ ಸಹಾಯ ಆಗುತ್ತೆ.

ಯೆಹೋವನ ತರ ಧಾರಾಳವಾಗಿರಿ

5. ಯೆಹೋವ ಧಾರಾಳತನ ತೋರಿಸೋ ಒಂದು ವಿಧ ಯಾವುದು?

5 ಯೆಹೋವ ಬೇರೆಬೇರೆ ರೀತಿಯಲ್ಲಿ ಧಾರಾಳತನ ತೋರಿಸ್ತಿದ್ದಾನೆ. ಅದ್ರಲ್ಲಿ ಕೆಲವೊಂದನ್ನ ನಾವೀಗ ನೋಡೋಣ. ಮೊದಲನೇದು ಯೆಹೋವ ನಮಗೆ ಬೇಕಾಗಿರೋದನ್ನ ಕೊಡ್ತಿದ್ದಾನೆ. ಹಾಗಂತ ನಮಗೇನೂ ಕೊರತೆ ಇರಲ್ಲ, ಎಲ್ಲ ಬೇಕಾದಷ್ಟು ಇರುತ್ತೆ ಅಂತಲ್ಲ. ಆದ್ರೆ ಅಗತ್ಯವಾಗಿರೋದನ್ನ ಕೊಟ್ಟು ನಮ್ಮನ್ನ ನೋಡ್ಳ್‌ತಾನೆ. ಉದಾಹರಣೆಗೆ ಆತನು ನಮಗೆ ಹೊಟ್ಟೆಗೆ ಹಿಟ್ಟು, ಉಟ್ಕೊಳ್ಳೋಕೆ ಬಟ್ಟೆ, ತಲೆ ಮೇಲೆ ಒಂದು ಸೂರು ಕೊಟ್ಟಿದ್ದಾನೆ. (ಕೀರ್ತ. 4:8; ಮತ್ತಾ. 6:31-33; 1 ತಿಮೊ. 6:6-8) ಹಾಗಂತ ಯೆಹೋವ ದೇವರು ‘ಇವ್ರನ್ನ ಸೃಷ್ಟಿಸಿದ ಮೇಲೆ ನೋಡ್ಕೊಳ್ಳಲೇಬೇಕಲ್ಲ, ಬೇರೆ ದಾರಿನೇ ಇಲ್ಲ’ ಅಂತ ಹಾಗೆ ಮಾಡ್ತಿದ್ದಾನಾ? ಖಂಡಿತ ಇಲ್ಲ. ಹಾಗಿದ್ರೆ ಯಾಕೆ ಯೆಹೋವ ನಮಗೆ ಇದನ್ನೆಲ್ಲ ಕೊಡ್ತಿದ್ದಾನೆ?

6. ಮತ್ತಾಯ 6:25, 26ರಿಂದ ನಮಗೆ ಏನು ಗೊತ್ತಾಗುತ್ತೆ?

6 ಯೆಹೋವ ನಮಗೆ ಬೇಕಾಗಿರೋದನ್ನ ಕೊಟ್ಟು ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ತೋರಿಸ್ತಿದ್ದಾನೆ. ಅದು ನಮಗೆ ಮತ್ತಾಯ 6:25, 26 ಓದುವಾಗ ಗೊತ್ತಾಗುತ್ತೆ. (ಓದಿ.) ಅಲ್ಲಿ ಯೇಸು ಪ್ರಾಣಿ ಪಕ್ಷಿಗಳ ಉದಾಹರಣೆಗಳನ್ನ ಹೇಳಿದ್ದಾನೆ. ಪಕ್ಷಿಗಳು “ಬಿತ್ತಲ್ಲ, ಕೊಯ್ಯಲ್ಲ, ಗೋಡೌನಲ್ಲಿ ತುಂಬಿಡಲ್ಲ. ಹಾಗಿದ್ರೂ ಸ್ವರ್ಗದಲ್ಲಿರೋ ನಿಮ್ಮ ತಂದೆ ಅವುಗಳನ್ನ ನೋಡ್ಕೊಳ್ತಾನೆ” ಅಂತ ಹೇಳಿದನು. ಅದಾದ ಮೇಲೆ “ನೀವು ಪಕ್ಷಿಗಳಿಗಿಂತ ಹೆಚ್ಚು ಅಮೂಲ್ಯ ಅಲ್ವಾ?” ಅಂತ ಕೇಳಿದನು. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವ ದೇವರು ಪ್ರಾಣಿ ಪಕ್ಷಿಗಳನ್ನೇ ಇಷ್ಟು ಚೆನ್ನಾಗಿ ನೋಡ್ಕೊಳ್ತಿದ್ದಾನೆ ಅಂದ್ಮೇಲೆ ಅವುಗಳಿಗಿಂತ ಅಮೂಲ್ಯವಾಗಿರೋ ನಮ್ಮ ಕೈಬಿಟ್ಟು ಬಿಡ್ತಾನಾ? ಖಂಡಿತ ಇಲ್ಲ. ಹೇಗೆ ಒಬ್ಬ ಪ್ರೀತಿಯ ಅಪ್ಪ ತನ್ನ ಮಕ್ಕಳನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತಾನೋ ಅದೇ ತರ ಯೆಹೋವನೂ ನಮ್ಮನ್ನ ನೋಡ್ಕೊಳ್ತಾನೆ.—ಕೀರ್ತ. 145:16; ಮತ್ತಾ. 6:32.

7. ಯೆಹೋವನ ತರ ನಾವು ಹೇಗೆ ಸಹೋದರ ಸಹೋದರಿಯರನ್ನ ಪ್ರೀತಿಸಬಹುದು? (ಚಿತ್ರ ನೋಡಿ.)

7 ಯೆಹೋವ ದೇವರ ತರ ನಾವೂ ಸಹೋದರ ಸಹೋದರಿಯರನ್ನ ಪ್ರೀತಿಸಬಹುದು. ಅವ್ರಿಗೆ ಬೇಕಾಗಿರೋದನ್ನ ಕೊಟ್ಟು ಸಹಾಯ ಮಾಡಬಹುದು. ಯೆಹೋವ ದೇವರು ಕೆಲವೊಮ್ಮೆ ನಮ್ಮಿಂದ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಾನೆ. ಹಾಗಾಗಿ ಯಾರಿಗಾದ್ರೂ ಊಟ-ಬಟ್ಟೆ ಬೇಕಾಗಿದ್ಯಾ? ಅಂತ ಯೋಚಿಸಬೇಕು. ಬೇಕಾಗಿದೆ ಅಂತ ಗೊತ್ತಾದ್ರೆ ಸಹಾಯ ಮಾಡಬೇಕು. ವಿಪತ್ತಾದಾಗ ಸಹಾಯ ಮಾಡೋದ್ರಲ್ಲಿ ಯೆಹೋವನ ಸಾಕ್ಷಿಗಳು ಹೆಸ್ರುವಾಸಿ ಆಗಿದ್ದಾರೆ. ಅದಕ್ಕೊಂದು ಉದಾಹರಣೆ ಕೊರೊನಾ ಬಂದ ಸಮಯ. ಈ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ಊಟ-ಬಟ್ಟೆ ಮತ್ತು ಬೇಕಾಗಿರೋ ವಸ್ತುಗಳು ಇಲ್ದೇ ಇದ್ದಾಗ ಅದನ್ನ ಕೊಟ್ಟು ಸಹಾಯ ಮಾಡಿದ್ದಾರೆ. ಇನ್ನೆಷ್ಟೋ ಸಹೋದರರು ಉದಾರವಾಗಿ ಕಾಣಿಕೆ ಹಾಕಿದ್ದಾರೆ. ಇದ್ರಿಂದ ಲೋಕದ ಯಾವ ಮೂಲೆಯಲ್ಲಿ ವಿಪತ್ತಾದ್ರೂ ಸಹೋದರ ಸಹೋದರಿಗೆ ಸಹಾಯ ಸಿಕ್ಕಿದೆ. ಇವ್ರೆಲ್ಲ ಇಬ್ರಿಯ 13:16ರಲ್ಲಿರೋ ಮಾತನ್ನ ಪಾಲಿಸ್ತಿದ್ದಾರೆ. ಅಲ್ಲಿ “ಒಳ್ಳೇದನ್ನ ಮಾಡೋಕೆ ಮತ್ತು ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಳ್ಳೋಕೆ ಮರಿಬೇಡಿ. ಯಾಕಂದ್ರೆ ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ” ಅಂತ ಹೇಳುತ್ತೆ.

ಯೆಹೋವನ ತರ ನಾವೆಲ್ರೂ ಧಾರಾಳತನ ತೋರಿಸೋಕಾಗುತ್ತೆ (ಪ್ಯಾರ 7 ನೋಡಿ)


8. ಯೆಹೋವ ಕೊಡೋ ಶಕ್ತಿಯಿಂದ ನಮಗೆ ಹೇಗೆಲ್ಲಾ ಪ್ರಯೋಜನ ಆಗಿದೆ? (ಫಿಲಿಪ್ಪಿ 2:13)

8 ಯೆಹೋವ ನಮಗೆ ಧಾರಾಳತನ ತೋರಿಸೋ ಎರಡನೇ ವಿಧ ಯಾವುದಂದ್ರೆ ಆತನು ನಮಗೆ ಶಕ್ತಿ ಕೊಡ್ತಾನೆ. ನಿಯತ್ತಿಂದ ಸೇವೆ ಮಾಡ್ತಿರೋ ತನ್ನ ಸೇವಕರಿಗೆ ಎಷ್ಟು ಬೇಕಾದ್ರೂ ಶಕ್ತಿ ಕೊಡೋಕೆ ಯೆಹೋವ ಕಾಯ್ತಾ ಇದ್ದಾನೆ. (ಫಿಲಿಪ್ಪಿ 2:13 ಓದಿ.) ಅದಕ್ಕೆ ನೀವು ಯಾವುದಾದ್ರೂ ಪರೀಕ್ಷೆ ಬಂದಾಗ ಬಿದ್ದುಹೋಗದೇ ಇರೋಕೆ, ಕಷ್ಟ ಬಂದಾಗ ಸಹಿಸ್ಕೊಳ್ಳೋಕೆ ಯೆಹೋವನ ಹತ್ರ ಪ್ರಾರ್ಥನೆ ಮಾಡಿರಬಹುದು. ಇವತ್ತು ಜೀವನ ಸಾಗಿಸೋಕೆ ಸಹಾಯ ಮಾಡಪ್ಪಾ ಅಂತನೂ ಕೇಳ್ಕೊಂಡಿರಬಹುದು. ಇದಕ್ಕೆಲ್ಲ ನಿಮಗೆ ಉತ್ರ ಸಿಕ್ಕಿರುತ್ತೆ. ಅದಕ್ಕೆ ಅಪೊಸ್ತಲ ಪೌಲನ ತರ ನೀವೂ “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ” ಅಂತ ಹೇಳಬಹುದು.—ಫಿಲಿ. 4:13.

9. ಯೆಹೋವ ದೇವರ ತರ ನಾವು ಹೇಗೆ ನಮ್ಮ ಶಕ್ತಿಯನ್ನ ಧಾರಾಳವಾಗಿ ಬಳಸಬಹುದು? (ಚಿತ್ರ ನೋಡಿ.)

9 ನಾವು ಅಪರಿಪೂರ್ಣ ಮನುಷ್ಯರಾದ್ರೂ ಯೆಹೋವ ದೇವರ ತರ ಧಾರಾಳವಾಗಿ ನಮ್ಮ ಶಕ್ತಿಯನ್ನ ಬಳಸಕ್ಕಾಗುತ್ತೆ. ಅದರರ್ಥ ಯೆಹೋವ ನಮಗೆ ಶಕ್ತಿ ಕೊಡೋ ತರ ನಾವು ಬೇರೆಯವ್ರಿಗೆ ಕೊಡೋಕೆ ಆಗುತ್ತೆ ಅಂತಾನಾ? ಅಲ್ಲ. ನಮ್ಮ ಶಕ್ತಿನ ಬಳಸಿ ಬೇರೆಯವ್ರಿಗೆ ಸಹಾಯ ಮಾಡಬಹುದು. ಉದಾಹರಣೆಗೆ ವಯಸ್ಸಾಗಿರೋರಿಗೆ, ಹುಷಾರಿಲ್ಲದೆ ಇರೋರಿಗೆ ಬೇಕಾಗಿರೋ ವಸ್ತುಗಳನ್ನ ಅಂಗಡಿಯಿಂದ ತಗೊಂಡು ಬಂದು ಕೊಡಬಹುದು. ಅಥವಾ ಅವ್ರ ಮನೆನ ಕ್ಲೀನ್‌ ಮಾಡಬಹುದು. ನಮ್ಮ ಕೈಯಲ್ಲಿ ಸಾಧ್ಯ ಆಗೋದಾದ್ರೆ ರಾಜ್ಯ ಸಭಾಗೃಹವನ್ನ ಶುಚಿಯಾಗಿ ಇಡೋಕೂ ನಾವು ಸಹಾಯ ಮಾಡಬಹುದು. ಹೀಗೆ ನಮ್ಮ ಶಕ್ತಿ ಬಳಸಿ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಿದ್ರೆ ಯೆಹೋವನನ್ನ ಆರಾಧಿಸೋಕೆ ನಾವು ಅವ್ರಿಗೆ ಸಹಾಯ ಮಾಡಿದ ಹಾಗೆ ಆಗುತ್ತೆ.

ನಮ್ಮ ಶಕ್ತಿ ಬಳಸಿ ನಾವು ಬೇರೆಯವ್ರಿಗೆ ಸಹಾಯ ಮಾಡಬಹುದು (ಪ್ಯಾರ 9 ನೋಡಿ)


10. ನಮ್ಮ ಮಾತಿಂದ ಬೇರೆಯವ್ರಿಗೆ ಸಹಾಯ ಮಾಡೋಕೆ ಏನೆಲ್ಲಾ ಮಾಡಬಹುದು?

10 ನಮ್ಮ ಮಾತಿಗೂ ಶಕ್ತಿಯಿದೆ ಅನ್ನೋದನ್ನ ಮರಿಬೇಡಿ. ಅದ್ರಿಂದನೂ ನಾವು ಬೇರೆಯವ್ರನ್ನ ಪ್ರೋತ್ಸಾಹಿಸಬಹುದು. ನಮ್ಮನಮ್ಮ ಸಭೇಲಿ ತಮ್ಮ ಕೈಲಾದಷ್ಟು ಸೇವೆ ಮಾಡ್ತಾ ಇರೋರೂ ಇದ್ದಾರೆ. ಕಷ್ಟಗಳು ಬಂದು ಕುಗ್ಗಿಹೋಗಿರೋರೂ ಇದ್ದಾರೆ. ಇಂಥವ್ರನ್ನ ನಾವು ಹುಡುಕಿ ಪ್ರೋತ್ಸಾಹಿಸಬೇಕು. ಅವ್ರ ಹತ್ರ ನಾವು ನೇರವಾಗಿ ಹೋಗಿ ಮಾತಾಡಬಹುದು ಅಥವಾ ಫೋನಲ್ಲಿ ಮಾತಾಡಿಸಬಹುದು. ಅವ್ರಿಗೊಂದು ಮೆಸೆಜ್‌ ಕಳಿಸಬಹುದು ಅಥವಾ ಇ-ಮೇಲ್‌ ಬರೀಬಹುದು. ‘ನಾನ್‌ ಹೇಳೋ ಎರಡು ಮಾತಿಂದ ಏನು ಪ್ರೋತ್ಸಾಹ ಆಗುತ್ತೆ’ ಅಂತ ಅಂದ್ಕೊಬೇಡಿ. ನೀವು ಮನಸ್ಸಿಂದ ಹೇಳೋ ಮಾತು ಅವರು ಇನ್ನೂ ಒಂದು ದಿನ ಯೆಹೋವನಿಗೆ ನಿಯತ್ತಿಂದ ಸೇವೆ ಮಾಡೋಕೆ ಸಹಾಯ ಮಾಡಬಹುದು. ಅಥವಾ ಅವ್ರಿಗೆ ಅವತ್ತಿರೋ ಕಷ್ಟನ ಚೆನ್ನಾಗಿ ನಿಭಾಯಿಸೋಕೆ ಶಕ್ತಿ ಕೊಡಬಹುದು.—ಜ್ಞಾನೋ. 12:25; ಎಫೆ. 4:29.

11. ಯೆಹೋವ ದೇವರು ನಮಗೆ ಹೇಗೆ ವಿವೇಕ ಕೊಡ್ತಾನೆ?

11 ಯೆಹೋವ ನಮಗೆ ಧಾರಾಳತನ ತೋರಿಸೋ ಮೂರನೇ ವಿಧ ಯಾವುದಂದ್ರೆ, ಆತನು ನಮಗೆ ವಿವೇಕ ಕೊಡ್ತಾನೆ. ಅದಕ್ಕೇ ಯಾಕೋಬ “ನಿಮ್ಮಲ್ಲಿ ಯಾರಿಗಾದ್ರೂ ವಿವೇಕ ಕಮ್ಮಿ ಇದೆ ಅಂತ ಅನಿಸಿದ್ರೆ ಅವನು ದೇವರ ಹತ್ರ ಕೇಳ್ತಾ ಇರಲಿ, ಅವನಿಗೆ ಸಿಗುತ್ತೆ. ಯಾಕಂದ್ರೆ ದೇವರು ತಪ್ಪು ಹುಡುಕದೆ ಎಲ್ರಿಗೂ ಉದಾರವಾಗಿ ವಿವೇಕ ಕೊಡ್ತಾನೆ” ಅಂತ ಹೇಳಿದ್ದಾನೆ. (ಯಾಕೋ. 1:5; ಪಾದಟಿಪ್ಪಣಿ) ಈ ವಚನದಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವ ನಮಗೆ ವಿವೇಕ ಕೊಡದೆ ಹಿಡಿದಿಟ್ಕೊಳ್ತಾನಾ? ಇಲ್ಲ. ಆತನು ಅದನ್ನ ನಮಗೆ ಬೇಕಾದಷ್ಟು ಕೊಡ್ತಾನೆ. ಅದಕ್ಕೇ ಆ ವಚನ, ದೇವರು “ಬೇಜಾರು ಮಾಡ್ಕೊಳ್ಳದೆ,” “ತಪ್ಪು ಹುಡುಕದೆ” ನಮಗೆ ವಿವೇಕ ಕೊಡ್ತಾನೆ ಅಂತ ಹೇಳುತ್ತೆ. ಹಾಗಾಗಿ ನಾವು ಯೆಹೋವನ ಹತ್ರ ವಿವೇಕಕ್ಕೋಸ್ಕರ ಬೇಡ್ಕೊಂಡ್ರೆ ಆತನು ನಮ್ಮನ್ನ ಯಾವತ್ತೂ ಕೀಳಾಗಿ ನೋಡಲ್ಲ. ನಿಜ ಏನಂದ್ರೆ, ನಾವು ಆತನ ಹತ್ರ ‘ವಿವೇಕ ಕೊಡಪ್ಪಾ’ ಅಂತ ಕೇಳಿ ಪಡ್ಕೊಬೇಕು ಅಂತ ಇಷ್ಟಪಡ್ತಾನೆ.—ಜ್ಞಾನೋ. 2:1-6.

12. ನಾವು ಕಲ್ತಿರೋದನ್ನ ಬೇರೆವ್ರಿಗೆ ಹೇಳ್ಕೊಡೋಕೆ ಯಾವೆಲ್ಲ ಅವಕಾಶಗಳಿವೆ?

12 ಯೆಹೋವ ದೇವರು ನಮಗೆ ಧಾರಾಳವಾಗಿ ವಿವೇಕ ಕೊಡ್ತಾನೆ ಅಂತ ಗೊತ್ತಾಯ್ತು. ಅದೇ ತರ ನಾವೂ ಕಲ್ತಿರೋದನ್ನ ಬೇರೆಯವ್ರಿಗೆ ಧಾರಾಳವಾಗಿ ಹೇಳ್ಕೊಡಬೇಕು. (ಕೀರ್ತ. 32:8) ಯೆಹೋವನ ಜನ್ರಾದ ನಮಗೆ ಬೇರೆಯವ್ರಿಗೆ ಕಲಿಸೋಕೆ ಬೇಕಾದಷ್ಟು ಅವಕಾಶ ಸಿಗುತ್ತೆ. ಉದಾಹರಣೆಗೆ, ಚೆನ್ನಾಗಿ ಸಿಹಿಸುದ್ದಿ ಸಾರೋಕೆ ನಾವು ಹೊಸಬರಿಗೆ ಕಲಿಸ್ಕೊಡಬಹುದು. ಹಿರಿಯರು ಸಹಾಯಕ ಸೇವಕರಿಗೆ, ಹೊಸದಾಗಿ ದೀಕ್ಷಾಸ್ನಾನ ತಗೊಂಡ ಸಹೋದರರಿಗೆ ನೇಮಕಗಳನ್ನ ಹೇಗೆ ಚೆನ್ನಾಗಿ ಮಾಡಬೇಕು ಅಂತ ಕಲಿಸ್ಕೊಡಬಹುದು. ಅಷ್ಟೇ ಅಲ್ಲ, ಅನುಭವ ಇರೋ ಸಹೋದರರು ಯೆಹೋವನ ಆರಾಧನೆಗೆ ಬಳಸೋ ಕಟ್ಟಡಗಳನ್ನ ಹೇಗೆ ಕಟ್ಟಬೇಕು, ಹೇಗೆ ರಿಪೇರಿ ಮಾಡಬೇಕು ಅಂತ ಕಲಿಸ್ಕೊಡಬಹುದು.

13. ಬೇರೆಯವ್ರಿಗೆ ತರಬೇತಿ ಕೊಡುವಾಗ ಯೆಹೋವನಿಂದ ನಾವೇನು ಕಲಿಬಹುದು?

13 ಧಾರಾಳವಾಗಿ ಕೊಡೋದು ಹೇಗೆ ಅಂತ ಕಲಿಸೋದ್ರಲ್ಲಿ ಯೆಹೋವನೇ ಎತ್ತಿದ ಕೈ. ಆತನ ತರ ನಾವೂ ಕಲ್ತಿರೋದನ್ನ, ನಮಗೆ ಗೊತ್ತಿರೋದನ್ನ ಬೇರೆಯವ್ರಿಗೆ ಹೇಳಿ ಕೊಡಬೇಕು. ಕೆಲವು ಜನ್ರು ತಮಗೆ ಗೊತ್ತಿರೋದನ್ನೆಲ್ಲಾ ಬೇರೆಯವ್ರಿಗೆ ಹೇಳಿಕೊಡಲ್ಲ. ಯಾಕಂದ್ರೆ ಎಲ್ಲಾದ್ರೂ ಹೇಳಿಕೊಟ್ರೆ ತಮ್ಮ ಜಾಗನ ಅವರು ಕಿತ್ಕೊಂಡು ಬಿಡ್ತಾರೆನೋ ಅನ್ನೋ ಭಯ ಅವ್ರಿಗಿರುತ್ತೆ. ಇನ್ನು ಕೆಲವರು ‘ನನಗ್ಯಾರೂ ಕಲಿಸ್ಕೊಟ್ಟಿಲ್ಲ, ನಾನ್ಯಾಕೆ ಅವ್ರಿಗೆ ಹೇಳ್ಕೊಡಬೇಕು? ಬೇಕಾದ್ರೆ ಅವ್ರೇ ಕಲಿತ್ಕೊಳ್ಳಲಿ’ ಅಂತ ಅಂದ್ಕೊಳ್ತಾರೆ. ಯೆಹೋವನ ಜನ್ರಾದ ನಮ್ಮ ಮನಸ್ಸಲ್ಲಿ ಇಂಥ ಯೋಚ್ನೆನೂ ಬರಬಾರದು. ಬದ್ಲಿಗೆ ನಮಗೆ ಗೊತ್ತಿರೋದನ್ನಷ್ಟೇ ಅವ್ರಿಗೆ ಹೇಳ್ಕೊಡೋದಲ್ಲ, ಅವ್ರಿಗೆ ಕಲಿಸೋಕೆ ನಾವು ಏನು ಬೇಕಾದ್ರೂ ಮಾಡೋಕೆ ರೆಡಿ ಇರ್ತೀವಿ. (1 ಥೆಸ. 2:8) ನಾವು ಈ ತರ ಕಲಿಸಿದ್ರೆ ಏನಾಗುತ್ತೆ? “ಅವರು ಬೇರೆಯವ್ರಿಗೆ ಕಲಿಸೋಕೆ ಸಾಕಷ್ಟು ಅರ್ಹತೆ ಪಡ್ಕೊತಾರೆ.” (2 ತಿಮೊ. 2:1, 2) ಹೀಗೆ ಒಬ್ಬೊಬ್ರು ಧಾರಾಳವಾಗಿ ಕಲಿಸ್ತಾ ಹೋಗೋದಾದ್ರೆ ನಮ್ಮೆಲ್ರ ಖುಷಿ, ವಿವೇಕ ಜಾಸ್ತಿ ಆಗ್ತಾ ಹೋಗುತ್ತೆ.

ಬೆಲೆನೇ ಕೊಡ್ತಿಲ್ಲ ಅಂತ ಅನಿಸಿದ್ರೆ

14. ನಾವು ಯಾರಿಗಾದ್ರೂ ಸಹಾಯ ಮಾಡಿದಾಗ ಅವರು ಏನು ಮಾಡ್ತಾರೆ?

14 ನಾವು ಬೇರೆಯವ್ರಿಗೆ ಸಹಾಯ ಮಾಡುವಾಗ, ಅದ್ರಲ್ಲೂ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡುವಾಗ ಅವರು ನಮ್ಮನ್ನ ತುಂಬ ಮೆಚ್ಕೊಳ್ತಾರೆ. ಅವರು ನಮಗೆ ಥ್ಯಾಂಕ್ಸ್‌ ಹೇಳೋಕೆ ಕಾರ್ಡ್‌ ಬರಿಬಹುದು ಅಥವಾ ಬೇರೆ ರೀತಿಲೂ ಥ್ಯಾಂಕ್ಸ್‌ ಹೇಳಬಹುದು. (ಕೊಲೊ. 3:15) ಆಗ ನಮಗೆ ತುಂಬ ಖುಷಿಯಾಗುತ್ತೆ ಅಲ್ವಾ?

15. ಬೇರೆಯವರು ನಮ್ಮ ಸಹಾಯನ ಮೆಚ್ಕೊಳ್ಳಲಿ ಬಿಡ್ಲಿ ನಾವು ಏನನ್ನ ನೆನಪಲ್ಲಿ ಇಟ್ಕೊಬೇಕು?

15 ನಾವು ಸಹಾಯ ಮಾಡಿದವ್ರೆಲ್ಲ ನಮ್ಮನ್ನ ಮೆಚ್ಕೊಳ್ತಾರೆ ಅಂತ ಹೇಳೋಕೆ ಆಗಲ್ಲ. ಕೆಲವೊಮ್ಮೆ ನಾವು ಅವ್ರಿಗೆ ಸಹಾಯ ಮಾಡೋಕೆ ನಮ್ಮ ಸಮಯ ಶಕ್ತಿನೆಲ್ಲ ಕೊಟ್ಟಿರ್ತೀವಿ. ಆದ್ರೆ ಅವರು ಅದನ್ನೆಲ್ಲ ಲೆಕ್ಕಕ್ಕೇ ತಗೊಳ್ತಿಲ್ವೇನೋ ಅಂತ ಅನಿಸಬಹುದು. ಆದ್ರೂ ನಮ್ಮ ಖುಷಿನ ಕಳ್ಕೊಳ್ಳದೇ ಇರೋಕೆ ಮತ್ತು ಬೇಜಾರಾಗದೇ ಇರೋಕೆ ನಾವೇನು ಮಾಡಬೇಕು? ಅಪೊಸ್ತಲರ ಕಾರ್ಯ 20:35ರಲ್ಲಿರೋ ಮಾತುಗಳನ್ನ ನಾವು ನೆನಪಲ್ಲಿ ಇಟ್ಕೊಬೇಕು. ಬೇರೆಯವರು ನಮ್ಮನ್ನ ಮೆಚ್ಚೋದ್ರಿಂದಲ್ಲ, ಕೊಡೋದ್ರಿಂದ ಖುಷಿ ಸಿಗುತ್ತೆ ಅಂತ ಅಲ್ಲಿ ಹೇಳುತ್ತೆ. ಹಾಗಾಗಿ ಯಾರು ನಮ್ಮನ್ನ ಮೆಚ್ಕೊಳ್ಳಲಿ ಬಿಡ್ಲಿ ಕೊಡೋದ್ರಿಂದ ಸಿಗೋ ಖುಷಿನ ನಾವು ಕಳ್ಕೊಬಾರದು. ಅದಕ್ಕೆ ನಾವು ಏನೆಲ್ಲಾ ಮಾಡಬೇಕು ಅಂತ ಈಗ ನೋಡೋಣ.

16. ಖುಷಿಯಿಂದ ಕೊಡ್ತಾ ಇರಬೇಕಂದ್ರೆ ನಾವು ಏನನ್ನ ನೆನಪಲ್ಲಿ ಇಟ್ಕೊಬೇಕು?

16 ಯೆಹೋವನನ್ನ ಅನುಕರಿಸ್ತಾ ಇದ್ದೀವಿ ಅನ್ನೋದನ್ನ ನೆನಪಿಡಿ. ಜನ ಮೆಚ್ಕೊಳ್ಳಲಿ ಬಿಡ್ಲಿ ಒಳ್ಳೇದು ಮಾಡೋದನ್ನಂತೂ ಯೆಹೋವ ನಿಲ್ಲಿಸೋದೇ ಇಲ್ಲ. (ಮತ್ತಾ. 5:43-48) ಯೆಹೋವನ ತರ ನಾವೂ “ವಾಪಸ್‌ ಏನಾದ್ರೂ ಸಿಗುತ್ತೆ ಅಂತ ನೆನಸದೆ” ಸಹಾಯ ಮಾಡ್ತಾ ಇರಬೇಕು. ಆಗ ನಮಗೆ “ದೊಡ್ಡ ಪ್ರತಿಫಲ” ಸಿಗುತ್ತೆ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಲೂಕ 6:35) ಇಲ್ಲಿ “ಏನಾದ್ರೂ” ಸಿಗುತ್ತೆ ಅಂತ ನೆನಸಬೇಡಿ ಅನ್ನುವಾಗ ಬೇರೆಯವ್ರ ಮೆಚ್ಚಿಕೆ ಸಿಗುತ್ತೆ ಅಂತನೂ ನಾವು ನೆನಸಬಾರದು ಅಂತರ್ಥ. ಹಾಗಾಗಿ ಜನ ಲೆಕ್ಕಕ್ಕೆ ತಗೊಳ್ಳಲಿ ಬಿಡ್ಲಿ ನಾವು ಅವ್ರಿಗೆ ಖುಷಿಯಿಂದ ಕೊಡ್ತಾ ಇರಬೇಕು. ಆಗ ಯೆಹೋವ ಅದನ್ನ ಮರಿಯಲ್ಲ, ನಮಗೆ ಆಶೀರ್ವಾದ ಕೊಟ್ಟೇ ಕೊಡ್ತಾನೆ.—ಜ್ಞಾನೋ. 19:17; 2 ಕೊರಿಂ. 9:7.

17. ನಾವು ಧಾರಾಳತನ ತೋರಿಸುವಾಗ ಮನಸ್ಸಲ್ಲಿ ಇಡಬೇಕಾದ ಇನ್ನೊಂದು ಮುಖ್ಯ ವಿಷ್ಯ ಯಾವುದು? (ಲೂಕ 14:12-14)

17 ನಾವು ಯೆಹೋವನ ತರ ಧಾರಾಳತನ ತೋರಿಸುವಾಗ ನೆನಪಲ್ಲಿ ಇಡಬೇಕಾದ ಇನ್ನೊಂದು ವಿಷ್ಯ ಲೂಕ 14:12-14ರಲ್ಲಿದೆ. (ಓದಿ.) ಇಲ್ಲಿ ನಮಗೆ ವಾಪಸ್‌ ಅತಿಥಿ ಸತ್ಕಾರ ಮಾಡೋಕೆ ಸಾಮರ್ಥ್ಯ ಇರೋರಿಗೆ ನಾವು ಅತಿಥಿ ಸತ್ಕಾರ ಮಾಡಬಾರದು ಅಂತ ಹೇಳ್ತಿಲ್ಲ. ಬದ್ಲಿಗೆ ನಾವು ಮಾಡಿದ್ರೆ ‘ಅವರೂ ನಮಗೇನಾದ್ರೂ ವಾಪಸ್‌ ಕೊಡ್ತಾರೆ’ ಅನ್ನೋ ಉದ್ದೇಶ ಇರಬಾರದು. ಅದಕ್ಕೆ ಯೇಸು ಹೇಳಿದ ಹಾಗೆ ನಾವು ಬಡವರಿಗೆ, ವಾಪಸ್‌ ಏನೂ ಮಾಡೋಕೆ ಆಗದಿರೋರಿಗೆ ಅತಿಥಿಸತ್ಕಾರ ತೋರಿಸೋಣ. ಆಗ ನಾವು ಖುಷಿಯಾಗಿ ಇರ್ತೀವಿ. ಯಾಕಂದ್ರೆ ನಾವು ಯೆಹೋವನನ್ನ ಅನುಕರಿಸ್ತಾ ಇರ್ತೀವಿ. ಅದೇ ತರ ಜನ ನಮ್ಮನ್ನ ಮೆಚ್ಕೊಳ್ಳದೇ ಇದ್ದಾಗ್ಲೂ ನಾವು ಯೆಹೋವನನ್ನ ಅನುಕರಿಸ್ತಾ ಇದ್ದೀವಿ ಅನ್ನೋದನ್ನ ಮನಸ್ಸಲ್ಲಿಟ್ಟು ಖುಷಿಯಾಗಿ ಇರ್ತೀವಿ.

18. ನಾವು ಏನು ಅಂದ್ಕೊಬಾರದು ಮತ್ತು ಯಾಕೆ?

18 ಬೆಲೆನೇ ಕೊಡ್ತಿಲ್ಲ ಅಂತ ಅಂದ್ಕೊಬೇಡಿ. (1 ಕೊರಿಂ. 13:7) ಒಂದುವೇಳೆ ನಮಗೆ ಹಾಗೆ ಅನಿಸ್ತಿರೋದಾದ್ರೆ ನಾವು ಏನು ಮಾಡಬೇಕು? ಅವರು ನಿಜವಾಗ್ಲೂ ಬೆಲೆನೇ ಕೊಡ್ತಿಲ್ವಾ ಅಥವಾ ಮರೆತು ಹೋಗಿದ್ದಾರಾ ಅಂತ ಯೋಚ್ನೆ ಮಾಡಿ. ಅವರು ಥ್ಯಾಂಕ್ಸ್‌ ಹೇಳದೇ ಇರೋದಕ್ಕೆ ಇನ್ನೇನಾದ್ರೂ ಕಾರಣ ಇರಬಹುದಾ ಅಂತನೂ ಯೋಚ್ನೆ ಮಾಡಿ. ಕೆಲವ್ರಿಗೆ ಮನಸ್ಸಲ್ಲಿ ಇರುತ್ತೆ ಆದ್ರೆ ಅದನ್ನ ಹೇಗೆ ಹೇಳಬೇಕು ಅಂತ ಗೊತ್ತಿರಲ್ಲ. ಇನ್ನು ಕೆಲವ್ರಿಗೆ ಕೊಟ್ಟು ರೂಢಿ ಇರೋದ್ರಿಂದ ಬೇರೆಯವ್ರಿಂದ ತಗೊಂಡಾಗ ಮುಜುಗರ ಆಗುತ್ತೆ. ನಾವು ಇದನ್ನ ಮನಸ್ಸಲ್ಲಿ ಇಡಬೇಕು. ನೆನಪಿಡಿ, ಸಹೋದರ ಸಹೋದರಿಯರ ಮೇಲೆ ನಮಗೆ ನಿಜವಾದ ಪ್ರೀತಿ ಇದ್ರೆ ನಾವು ಅವ್ರನ್ನ ತಪ್ಪಾಗಿ ಅರ್ಥಮಾಡ್ಕೊಳಲ್ಲ. ಅಷ್ಟೇ ಅಲ್ಲ ನಾವು ಯಾವಾಗ್ಲೂ ಸಂತೋಷವಾಗಿ ಕೊಡ್ತಾನೇ ಇರ್ತೀವಿ.—ಎಫೆ. 4:2.

19-20. ನಾವು ಮಾಡಿದ ಸಹಾಯಕ್ಕೆ ತಕ್ಷಣ ಥ್ಯಾಂಕ್ಸ್‌ ಹೇಳಿಲ್ಲಾಂದ್ರೂ ನಾವ್ಯಾಕೆ ಬೇಜಾರಾಗಬಾರದು? (ಚಿತ್ರ ನೋಡಿ.)

19 ತಕ್ಷಣ ಥ್ಯಾಂಕ್ಸ್‌ ಹೇಳ್ತಾರೆ ಅಂತ ಅಂದ್ಕೊಬೇಡಿ. ಇದನ್ನೇ ವಿವೇಕಿಯಾದ ರಾಜ ಸೊಲೊಮೋನ ಹೇಗೆ ಹೇಳಿದ್ದಾನೆ ನೋಡಿ. “ನಿನ್ನ ರೊಟ್ಟಿಯನ್ನ ನೀರಿನ ಮೇಲೆ ಎಸಿ, ತುಂಬ ದಿನಗಳಾದ ಮೇಲೆ ಅದು ನಿನಗೆ ಮತ್ತೆ ಸಿಗುತ್ತೆ.” (ಪ್ರಸಂ. 11:1) ನೋಡಿದ್ರಾ, “ತುಂಬ ದಿನಗಳಾದ ಮೇಲೆ” ಕೆಲವರು ನಾವು ಮಾಡಿದ ಸಹಾಯನ ನೆನಸ್ಕೊಬಹುದು, ಥ್ಯಾಂಕ್ಸ್‌ ಹೇಳಬಹುದು ಅಂತ ಈ ವಚನದಿಂದ ನಮಗೆ ಗೊತ್ತಾಗುತ್ತೆ. ಬನ್ನಿ ಅದಕ್ಕೊಂದು ಉದಾಹರಣೆ ನೋಡೋಣ.

20 ತುಂಬ ವರ್ಷಗಳ ಹಿಂದೆ ಒಬ್ಬ ಸಂಚರಣ ಮೇಲ್ವಿಚಾರಕನ ಹೆಂಡ್ತಿ ಆಗಷ್ಟೇ ದೀಕ್ಷಾಸ್ನಾನ ತಗೊಂಡಿದ್ದ ಸ್ಯಾಂಡ್ರಾಗೆ ಒಂದು ಪತ್ರ ಬರೆದ್ರು. ಅದ್ರಲ್ಲಿ ಯೆಹೋವನಿಗೆ ನಿಯತ್ತಾಗಿರೋಕೆ ಅವ್ರನ್ನ ಪ್ರೋತ್ಸಾಹಿಸಿದ್ರು. ಇದನ್ನ ಬರೆದು 8 ವರ್ಷಗಳಾದ್ಮೇಲೆ ಅದನ್ನ ನೆನಸ್ಕೊಂಡು ಸ್ಯಾಂಡ್ರಾ ಅವ್ರಿಗೆ ವಾಪಸ್‌ ಪತ್ರ ಬರೆದ್ರು. ಅದ್ರಲ್ಲಿ ಅವರು “ನಿಮಗೆ ನೆನಪಿದ್ಯಾ ಅವತ್ತು ನನಗೊಂದು ಪತ್ರ ಬರೆದಿದ್ರಿ. ಇಷ್ಟು ವರ್ಷ ಯೆಹೋವನಿಗೆ ನಿಯತ್ತಾಗಿರೋಕೆ ಆ ಪತ್ರ ನಮಗೆ ಎಷ್ಟು ಸಹಾಯ ಮಾಡಿದೆ ಗೊತ್ತಾ? ಅದನ್ನ ಹೇಳಿದ್ರೆ ನೀವು ನಂಬಲ್ಲ. ಆ ಪತ್ರದಲ್ಲಿ ನೀವು ಹೇಳಿದ ಮಾತು ಎಷ್ಟು ಚೆನ್ನಾಗಿತ್ತು, ಆ ವಚನ ನನ್ನ ಹೃದಯ ಮುಟ್ತು. ಅದನ್ನಂತೂ ಮರಿಯೋಕೆ ಆಗಲ್ಲ.” a ಅವ್ರಿಗೆ ಏನೆಲ್ಲಾ ಕಷ್ಟ ಬಂತು ಅಂತ ವಿವರಿಸಿದ್ಮೇಲೆ ಸ್ಯಾಂಡ್ರಾ “ಯೆಹೋವನನ್ನ, ನನ್ನ ಜವಾಬ್ದಾರಿನೆಲ್ಲಾ ಬಿಟ್ಟು ಎಲ್ಲಾದ್ರೂ ದೂರ ಓಡಿಹೋಗೋಣ ಅಂತ ಎಷ್ಟೋ ಸಲ ಅನಿಸಿದೆ. ಆಗೆಲ್ಲ ಆ ವಚನ ನೆನಪಾಗ್ತಿತ್ತು. ಯೆಹೋವನ ಕೈ ಹಿಡ್ಕೊಂಡು ಸತ್ಯದಲ್ಲೇ ಇರೋಕೆ ಅದು ನನಗೆ ಸಹಾಯ ಮಾಡ್ತು. ಈ ಎಂಟು ವರ್ಷದಲ್ಲಿ ಆ ವಚನದಷ್ಟು ಬೇರೆ ಯಾವ ವಿಷ್ಯನೂ ನನಗೆ ಸಹಾಯ ಮಾಡಿಲ್ಲ” ಅಂತ ಹೇಳಿದ್ರು. ನೋಡಿ, ತುಂಬ ದಿನಗಳಾದ್ಮೆಲೆ ಅವರು ಸಂಚರಣ ಮೇಲ್ವಿಚಾರಕನ ಹೆಂಡ್ತಿಗೆ ಥ್ಯಾಂಕ್ಸ್‌ ಹೇಳಿದ್ರು. ಆ ಪತ್ರ ಸಿಕ್ಕಾಗ ಅವ್ರಿಗೆ ಎಷ್ಟು ಖುಷಿ ಆಗಿರಬಹುದು ಅಲ್ವಾ! ಅದೇ ತರ, ನಾವು ಮಾಡಿದ ಸಹಾಯಕ್ಕೆ ಕೆಲವರು ತುಂಬ ದಿನಗಳಾದ್ಮೇಲೆ ಥ್ಯಾಂಕ್ಸ್‌ ಹೇಳ್ತಾರೆ.

ನಾವು ಸಹಾಯ ಮಾಡಿ ತುಂಬ ದಿನಗಳಾದ ಮೇಲೆ ನಮಗೆ ಕೆಲವರು ಥ್ಯಾಂಕ್ಸ್‌ ಹೇಳಬಹುದು (ಪ್ಯಾರ 20 ನೋಡಿ) b


21. ಯೆಹೋವನ ತರ ಧಾರಾಳತನ ತೋರಿಸಬೇಕು ಅಂತ ನೀವ್ಯಾಕೆ ಅಂದ್ಕೊಂಡಿದ್ದೀರಾ?

21 ನಾವು ಈಗಾಗ್ಲೇ ನೋಡಿದ ಹಾಗೆ ಕೊಡೋದ್ರಿಂದ ಖುಷಿ ಪಡ್ಕೊಳ್ಳೋ ತರ ಯೆಹೋವ ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಅದಕ್ಕೇ ಇನ್ನೊಬ್ರಿಂದ ನಾವು ಏನಾದ್ರೂ ತಗೊಂಡಾಗ ಸಿಗೋ ಖುಷಿಗಿಂತ ಬೇರೆಯವ್ರಿಗೆ ನಾವೇನಾದ್ರೂ ಕೊಟ್ಟಾಗ ಆಗೋ ಖುಷಿನೇ ಜಾಸ್ತಿ. ಅವರು ನಮಗೆ ಥ್ಯಾಂಕ್ಸ್‌ ಹೇಳಿದಾಗ ನಮ್ಮ ಮನಸ್ಸು ಅರಳುತ್ತೆ ನಿಜ. ಆದ್ರೆ ನಾವು ಮಾಡಿದ ಸಹಾಯನ ಅವರು ಮೆಚ್ಚಲಿ ಬಿಡ್ಲಿ ನಾವು ಸರಿಯಾಗಿರೋದನ್ನೇ ಮಾಡಿದ್ದೀವಿ ಅನ್ನೋ ಸಮಾಧಾನ ನಮಗಿರುತ್ತೆ. ನಾವು ಯಾರಿಗೆ ಏನೇ ಕೊಟ್ರು “ಯೆಹೋವ [ನಮಗೆ] ಅದಕ್ಕಿಂತ ಜಾಸ್ತಿ ಕೊಡ್ತಾನೆ.” (2 ಪೂರ್ವ. 25:9) ಯೆಹೋವನ ತರ ಕೊಡೋಕೆ ಬೇರೆ ಯಾರಿಗಾದ್ರೂ ಆಗುತ್ತಾ ಹೇಳಿ? ಮನುಷ್ಯರಿಗೆ ನಾವು ಮಾಡೋ ಸಹಾಯಕ್ಕೆ ಯೆಹೋವನೇ ನಮಗೆ ಆಶೀರ್ವಾದ ಮಾಡ್ತಿದ್ದಾನೆ ಅಂದ್ಮೇಲೆ ಅದಕ್ಕಿಂತ ಖುಷಿ ಇನ್ಯಾವುದಿದೆ ಹೇಳಿ? ಹಾಗಾಗಿ ನಮ್ಮ ಪ್ರೀತಿಯ ಯೆಹೋವ ಅಪ್ಪಾ ತರ ಯಾವಾಗ್ಲೂ ನಾವು ಧಾರಾಳವಾಗಿ ಕೊಡ್ತಾ ಇರೋಣ!

ಗೀತೆ 84 “ನನಗೆ ಮನಸ್ಸುಂಟು”

a ಸ್ಯಾಂಡ್ರಾಗೆ ಬರೆದ ಪತ್ರದಲ್ಲಿ ಆ ಸಹೋದರಿ 2 ಯೋಹಾನ 8ನೇ ವಚನ ಹೇಳಿದ್ರು. ಅಲ್ಲಿ “ನಾವು ಕಷ್ಟಪಟ್ಟು ಪಡಿದಿದ್ದನ್ನ ನೀವು ಕಳ್ಕೊಳ್ಳದ ಹಾಗೆ ಜಾಗ್ರತೆವಹಿಸಿ. ಆಗ ದೇವರು ನಿಮಗೋಸ್ಕರ ಸಿದ್ಧವಾಗಿ ಇಟ್ಟಿರೋ ಆಶೀರ್ವಾದಗಳು ಸಿಗುತ್ತೆ” ಅಂತ ಇದೆ.

b ಚಿತ್ರ ವಿವರಣೆ: ಇಲ್ಲಿ ತೋರಿಸಿರೋ ಚಿತ್ರದಲ್ಲಿ ಒಬ್ಬ ಸಂಚರಣ ಮೇಲ್ವಿಚಾರಕನ ಹೆಂಡ್ತಿ ಒಬ್ಬ ಸಹೋದರಿಯನ್ನ ಪ್ರೋತ್ಸಾಹಿಸೋಕೆ ಪತ್ರ ಬರೆದಿದ್ದಾರೆ. ಕೆಲವು ವರ್ಷಗಳಾದ್ಮೇಲೆ ಅವ್ರಿಗೆ ಆ ಸಹೋದರಿ ಥ್ಯಾಂಕ್ಸ್‌ ಹೇಳಿ ಪತ್ರ ಬರೆದಿದ್ದಾರೆ.