ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೇವರ ವಾಕ್ಯವು ಸಜೀವವಾದದ್ದು’

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂದು ಇಬ್ರಿಯ 4:12⁠ರಲ್ಲಿ ತಿಳಿಸಲಾಗಿರುವ “ದೇವರ ವಾಕ್ಯ” ಯಾವುದು?

ಈ ವಚನದ ಹಿನ್ನಲೆಯನ್ನು ನೋಡಿದರೆ ಅಪೊಸ್ತಲ ಪೌಲ ದೇವರ ವಾಕ್ಯವನ್ನು ಬೈಬಲಿನಲ್ಲಿರುವ ಸಂದೇಶಕ್ಕೆ ಅಥವಾ ದೇವರ ಉದ್ದೇಶಕ್ಕೆ ಸೂಚಿಸುತ್ತಿದ್ದ ಅಂತ ಗೊತ್ತಾಗುತ್ತದೆ.

ಬೈಬಲಿಗೆ ಜೀವನವನ್ನು ಬದಲಾಯಿಸುವ ಶಕ್ತಿಯಿದೆ ಎಂದು ತೋರಿಸಲು ನಮ್ಮ ಪ್ರಕಾಶನಗಳಲ್ಲಿ ಹೆಚ್ಚಾಗಿ ಇಬ್ರಿಯ 4:12⁠ನ್ನು ಬಳಸಲಾಗುತ್ತದೆ. ಬೈಬಲಿಗೆ ಆ ಶಕ್ತಿ ಇರುವುದು ನೂರಕ್ಕೆ ನೂರರಷ್ಟು ನಿಜ ಕೂಡ. ಹಾಗಿದ್ದರೂ ಈ ವಚನಕ್ಕಿರುವ ವಿಶಾಲಾರ್ಥವನ್ನು ತಿಳಿಯುವುದು ಒಳ್ಳೇದು. ದೇವರ ಉದ್ದೇಶಗಳು ಪವಿತ್ರ ಬರಹಗಳಲ್ಲಿ ಬಹಳ ಹಿಂದೆಯೇ ತಿಳಿಸಲಾಗಿತ್ತು. ಆ ಉದ್ದೇಶಗಳಿಗೆ ಹೊಂದಿಕೆಯಲ್ಲಿ ಜೀವಿಸುವಂತೆ ಇಬ್ರಿಯ ಕ್ರೈಸ್ತರನ್ನು ಉತ್ತೇಜಿಸುವಾಗ ಪೌಲನು ಈ ವಚನವನ್ನು ಬರೆದನು. ಈ ಸಂದರ್ಭದಲ್ಲಿ, ಈಜಿಪ್ಟ್‌ನಿಂದ ಬಿಡುಗಡೆಯಾಗಿ ಬಂದ ಇಸ್ರಾಯೇಲ್ಯರ ಉದಾಹರಣೆ ಕೊಟ್ಟನು. ಅವರಿಗೆ “ಹಾಲೂ ಜೇನೂ ಹರಿಯುವ” ವಾಗ್ದಾತ್ತ ದೇಶಕ್ಕೆ ಹೋಗುವ ಸೌಭಾಗ್ಯ ಇತ್ತು. ಅವರು ದೇವರ ವಿಶ್ರಾಂತಿಯಲ್ಲಿ ಸೇರಿ ಆತನ ಆಶೀರ್ವಾದಗಳನ್ನು ಅನುಭವಿಸಬಹುದಿತ್ತು.—ವಿಮೋ. 3:8; ಧರ್ಮೋ. 12:9, 10.

ಯೆಹೋವನ ಉದ್ದೇಶ ಅದೇ ಆಗಿತ್ತು. ಆದರೆ ಇಸ್ರಾಯೇಲ್ಯರು ನಂತರ ತಮ್ಮ ಹೃದಯಗಳನ್ನು ಕಠಿಣ ಮಾಡಿಕೊಂಡು ದೇವರಲ್ಲಿ ತಮ್ಮ ನಂಬಿಕೆ ಕಳಕೊಂಡರು. ಇದರಿಂದ ತಮಗೆ ಸಿಗಲಿದ್ದ ಆಶೀರ್ವಾದಗಳನ್ನು ಕಳಕೊಂಡರು. (ಅರ. 14:30; ಯೆಹೋ. 14:6-10) ಆದರೂ ‘ದೇವರ ವಿಶ್ರಾಂತಿಯಲ್ಲಿ ಸೇರುವ ವಾಗ್ದಾನವು ಇನ್ನೂ ಇದೆ’ ಎಂದು ಪೌಲ ಹೇಳಿದನು. (ಇಬ್ರಿ. 3:16-19; 4:1) ಆ “ವಾಗ್ದಾನ” ದೇವರು ವ್ಯಕ್ತಪಡಿಸಿರುವ ಉದ್ದೇಶದ ಭಾಗವಾಗಿದೆ. ಇಬ್ರಿಯ ಕ್ರೈಸ್ತರಂತೆ ನಾವು ಆ ಉದ್ದೇಶದ ಬಗ್ಗೆ ಓದಿ ಅದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಸಾಧ್ಯ. ಈ ವಾಗ್ದಾನಕ್ಕೆ ಬೈಬಲಿನ ಆಧಾರ ಇದೆ ಎಂದು ಒತ್ತಿಹೇಳಲು ಪೌಲನು ಆದಿಕಾಂಡ 2:2 ಮತ್ತು ಕೀರ್ತನೆ 95:11⁠ನ್ನು ಉಲ್ಲೇಖಿಸಿದನು.

‘ದೇವರ ವಿಶ್ರಾಂತಿಯಲ್ಲಿ ಸೇರುವ ವಾಗ್ದಾನವು ಇನ್ನೂ ಇದೆ’ ಅನ್ನುವ ವಿಷಯ ನಮಗೆ ಸಂತೋಷ ತರುತ್ತದೆ. ಬೈಬಲ್‌ ತಿಳಿಸುವ ದೇವರ ವಿಶ್ರಾಂತಿಯಲ್ಲಿ ಸೇರಲು ಖಂಡಿತ ಸಾಧ್ಯ ಎಂದು ನಾವು ನಂಬುತ್ತೇವೆ. ಅದಕ್ಕಾಗಿ ಬೇಕಾದ ಹೆಜ್ಜೆಗಳನ್ನು ಕೂಡ ತೆಗೆದುಕೊಂಡಿದ್ದೇವೆ. ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸಬೇಕಾಗಿಲ್ಲ ಅಥವಾ ಬೇರೆ ವಿಷಯಗಳನ್ನು ಮಾಡಿ ದೇವರ ಮೆಚ್ಚಿಗೆ ಪಡೆಯಬೇಕಾಗಿಲ್ಲ. ಬದಲಾಗಿ ದೇವರ ಮೇಲೆ ಮತ್ತು ಆತನ ಉದ್ದೇಶಗಳ ಮೇಲೆ ನಂಬಿಕೆ ಇಟ್ಟು, ಅದಕ್ಕೆ ಹೊಂದಿಕೆಯಲ್ಲಿ ಜೀವಿಸಿದರೆ ಸಾಕು. ಇಂದು, ಭೂವ್ಯಾಪಕವಾಗಿ ಸಾವಿರಾರು ಜನರು ಬೈಬಲನ್ನು ಅಧ್ಯಯನ ಮಾಡಿ ದೇವರ ಉದ್ದೇಶಗಳ ಬಗ್ಗೆ ಕಲಿಯುತ್ತಿದ್ದಾರೆ. ಅನೇಕರು ತಮ್ಮ ಜೀವನವನ್ನು ಬದಲಾಯಿಸಿ ನಂಬಿಕೆ ತೋರಿಸಿ ದೀಕ್ಷಾಸ್ನಾನ ಪಡೆದಿದ್ದಾರೆ. ಅವರ ಜೀವನಗಳು ಬದಲಾಗುತ್ತಿರುವ ವಿಷಯ ತಾನೇ “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬೈಬಲಿನಲ್ಲಿ ತಿಳಿಸಲಾಗಿರುವ ದೇವರ ಉದ್ದೇಶವು ನಮ್ಮ ಜೀವನವನ್ನು ಈಗಾಗಲೇ ಪ್ರಭಾವಿಸಿದೆ, ಇನ್ನು ಮುಂದೆಯೂ ಪ್ರಭಾವಿಸುತ್ತದೆ.