ಯೆಹೋವನ ಮಾರ್ಗದರ್ಶನದಿಂದ ಇಂದು ಸಿಗುವ ಪ್ರಯೋಜನ
ಪೋಲೆಂಡ್‌ನಲ್ಲಿ ಮಾಡಿದ ಒಂದೊಳ್ಳೆ ನಿರ್ಧಾರ
“ನನಗೆ ದೀಕ್ಷಾಸ್ನಾನ ಆದಾಗ 15 ವರ್ಷ. ಆರು ತಿಂಗಳು ಆದ ಮೇಲೆ ಸಹಾಯಕ ಪಯನೀಯರ್ ಸೇವೆ ಶುರುಮಾಡಿದೆ. ಒಂದು ವರ್ಷದ ನಂತರ ಪಯನೀಯರ್ ಆಗಲು ಅರ್ಜಿ ಹಾಕಿದೆ. ನಾನು ಪದವಿಪೂರ್ವ ಕಾಲೇಜನ್ನು ಮುಗಿಸಿದ ಮೇಲೆ ರಾಜ್ಯ ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡುತ್ತೇನೆ ಅಂತ ಹೇಳಿದೆ. ನನ್ನ ಊರನ್ನಾ, ಸತ್ಯದಲ್ಲಿ ಇಲ್ಲದ ಅಜ್ಜಿನಾ ಬಿಟ್ಟು ದೂರ ಹೋಗಬೇಕು ಅನ್ನುವುದು ನನ್ನ ಯೋಚನೆ ಆಗಿತ್ತು. ಆದರೆ ನನ್ನ ಊರೇ ನನ್ನ ಟೆರಿಟೊರಿ ಅಂತ ಸರ್ಕಿಟ್ ಮೇಲ್ವಿಚಾರಕರು ಹೇಳಿದಾಗ ನನಗೆ ತುಂಬ ಬೇಜಾರಾಯ್ತು. ಆದರೆ ನನ್ನ ದುಃಖನಾ ಅವರಿಗೆ ತೋರಿಸಿಕೊಳ್ಳಲಿಲ್ಲ. ಆಕಾಶನೇ ತಲೆ ಮೇಲೆ ಬಿದ್ದ ಹಾಗೆ ಅವರು ಹೇಳಿದ್ದನ್ನೇ ಯೋಚಿಸುತ್ತಾ ಅಲ್ಲಿಂದ ಹೊರಟೆ. ನನ್ನ ಜೊತೆ ಸೇವೆಮಾಡುತ್ತಿದ್ದ ಸಹೋದರಿಗೆ, ‘ನಾನು ಯೋನನ ಹಾಗೆ ವರ್ತಿಸುತ್ತಿದ್ದೀನಿ ಅಂತ ಅನಿಸುತ್ತೆ. ಕೊನೆಗೆ ಯೋನ ನಿನೆವೆಗೆ ಹೋಗಲೇಬೇಕಾಯ್ತು. ಹಾಗೆ ನಾನು ಕೂಡ ನನಗೆ ನೇಮಕವಾಗಿರೋ ಸ್ಥಳದಲ್ಲೇ ಸೇವೆ ಮಾಡುತ್ತೇನೆ’ ಅಂತ ಹೇಳಿದೆ.
“ನಮ್ಮೂರಲ್ಲಿ ನಾನು ನಾಲ್ಕು ವರ್ಷದಿಂದ ಪಯನೀಯರ್ ಸೇವೆಮಾಡುತ್ತಿದ್ದೇನೆ. ನಮಗೆ ಸಿಗುವ ನಿರ್ದೇಶನವನ್ನು ಪಾಲಿಸುವುದು ತುಂಬ ಒಳ್ಳೇದು ಅಂತ ನನ್ನ ಅನುಭವದಿಂದ ತಿಳುಕೊಂಡಿದ್ದೇನೆ. ಆರಂಭದಲ್ಲಿ ನನ್ನ ಯೋಚನೆ ಸರಿಯಿರಲಿಲ್ಲ. ಆದರೆ ಈಗ ತುಂಬ ಖುಷಿಯಾಗಿದ್ದೇನೆ. ಒಂದು ತಿಂಗಳಲ್ಲೇ 24 ಬೈಬಲ್ ಅಧ್ಯಯನಗಳನ್ನು ನಡೆಸಿದೆ. ನನ್ನ ನಂಬಿಕೆಯನ್ನು ವಿರೋಧಿಸುತ್ತಿದ್ದ ಅಜ್ಜಿಗೆ ಸಹ ಬೈಬಲ್ ಅಧ್ಯಯನ ಶುರುಮಾಡಿದ್ದೇನೆ. ಇದಕ್ಕಾಗಿ ನಾನು ಯೆಹೋವನಿಗೆ ಸದಾ ಋಣಿ.”
ಫಿಜಿಯಲ್ಲಿ ಸಿಕ್ಕಿದ ಒಳ್ಳೆ ಫಲಿತಾಂಶ
ಫಿಜಿಯಲ್ಲಿ ಇರುವ ಬೈಬಲ್ ವಿದ್ಯಾರ್ಥಿಯ ಮುಂದೆ ಎರಡು ಆಯ್ಕೆಗಳಿತ್ತು. ಒಂದು, ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗುವುದು ಅಥವಾ ಗಂಡನ ಜೊತೆ ಅವನ ಸಂಬಂಧಿಯೊಬ್ಬರ ಬರ್ತ್‌ಡೇ ಪಾರ್ಟಿಗೆ ಹೋಗುವುದು. ಆಕೆಯ ಗಂಡ ಅಧಿವೇಶನಕ್ಕೆ ಹೋಗಲು ಅನುಮತಿ ಕೊಟ್ಟನು. ಆಕೆ ಅವನಿಗೆ ‘ಅಧಿವೇಶನ ಮುಗಿಸಿ ಪಾರ್ಟಿಗೆ ಬರುತ್ತೇನೆ’ ಅಂತ ಹೇಳಿದಳು. ಅಧಿವೇಶನ ಮುಗಿಸಿ ಮನೆಗೆ ಬಂದ ಮೇಲೆ, ತನ್ನ ಆಧ್ಯಾತ್ಮಿಕತೆಗೆ ಅಪಾಯ ತರುವ ಸ್ಥಳಕ್ಕೆ ಹೋಗದೆ ಇರುವುದೇ ಒಳ್ಳೇದು ಅಂತ ಆಕೆಗೆ ಅನಿಸಿತು. ಹಾಗಾಗಿ ಆಕೆ ಪಾರ್ಟಿಗೆ ಹೋಗಲಿಲ್ಲ.
ಪಾರ್ಟಿಗೆ ಹೋಗಿದ್ದ ಗಂಡ ತನ್ನ ಹೆಂಡತಿ “ಸಾಕ್ಷಿಗಳ ಕೂಟ” ಮುಗಿಸಿ ಇಲ್ಲಿಗೆ ಬರುತ್ತಾಳೆ ಅಂತ ಸಂಬಂಧಿಕರಿಗೆ ಹೇಳಿದ. ಅದಕ್ಕೆ ಅವರು “ಅವಳು ಬರಲ್ಲ. ಯಾಕೆಂದರೆ ಯೆಹೋವನ ಸಾಕ್ಷಿಗಳು ಬರ್ತ್‌ಡೇ ಆಚರಿಸಲ್ಲ!” ಅಂತ ಹೇಳಿದರು. *
ಅವರು ಹೇಳಿದ ಹಾಗೆ ಅವನ ಹೆಂಡತಿ ಪಾರ್ಟಿಗೆ ಬರದೇ ಇದ್ದಾಗ ಅವನಿಗೆ ತನ್ನ ಹೆಂಡತಿ ಬಗ್ಗೆ ಹೆಮ್ಮೆ ಅನಿಸಿತು. ಯಾಕೆಂದರೆ ಆಕೆ ತನ್ನ ನಂಬಿಕೆ ಬಗ್ಗೆ ತನ್ನ ಮನಸ್ಸಾಕ್ಷಿ ಏನು ಹೇಳುತ್ತದೋ ಅದನ್ನೇ ಮಾಡಿದ್ದಳು. ಅವಳು ತೆಗೆದುಕೊಂಡ ಈ ಹೆಜ್ಜೆ ತನ್ನ ಗಂಡನಿಗೆ ಮತ್ತು ಇತರರಿಗೆ ಸಾಕ್ಷಿಕೊಡಲು ದಾರಿ ತೆರೆಯಿತು. ಫಲಿತಾಂಶ? ಆಕೆಯ ಗಂಡ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡ ಮತ್ತು ಹೆಂಡತಿಯೊಟ್ಟಿಗೆ ಕೂಟಗಳಿಗೆ ಹಾಜರಾಗಲು ಶುರುಮಾಡಿದ.
^ ಪ್ಯಾರ. 7 ಕಾವಲಿನಬುರುಜು ಡಿಸೆಂಬರ್ 15, 2001ರ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನ ನೋಡಿ.