ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕೈಗಳು ಸೋತುಹೋಗದಿರಲಿ

ನಿಮ್ಮ ಕೈಗಳು ಸೋತುಹೋಗದಿರಲಿ

“ನಿನ್ನ ಕೈಗಳು ಜೋಲುಬೀಳದಿರಲಿ.”—ಚೆಫನ್ಯ 3:16.

ಗೀತೆಗಳು: 81, 32

1, 2. (ಎ) ಇಂದು ಅನೇಕರಿಗೆ ಯಾವ ಸಮಸ್ಯೆಗಳಿವೆ? (ಬಿ) ಇದರಿಂದ ಅವರು ಏನೆಲ್ಲ ಅನುಭವಿಸುತ್ತಾರೆ? (ಸಿ) ಯೆಶಾಯ 41:10, 13 ಅವರಿಗೆ ಯಾವ ಭರವಸೆಯನ್ನು ಕೊಡುತ್ತದೆ?

ಹಿರಿಯನ ಪತ್ನಿಯಾಗಿರುವ ಒಬ್ಬ ಪಯನೀಯರ್‌ ಸಹೋದರಿ ಹೇಳಿದ್ದು: “ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಯಾವುದನ್ನೂ ನಾನು ತಪ್ಪಿಸುವುದಿಲ್ಲ. ಆದರೂ ತುಂಬ ವರ್ಷಗಳಿಂದ ಚಿಂತೆ, ಆತಂಕದಿಂದ ಬಳಲುತ್ತಿದ್ದೇನೆ. ಆದ್ದರಿಂದ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ, ಆರೋಗ್ಯ ಹಾಳಾಗಿದೆ, ಬೇರೆಯವರ ಮೇಲೆ ಕೋಪ ತೋರಿಸುತ್ತೇನೆ. ಕೆಲವೊಮ್ಮೆ ‘ಜೀವನವೇ ಬೇಡ’ ಎಂದನಿಸುತ್ತೆ.”

2 ಈ ಸಹೋದರಿಯ ಭಾವನೆ ನಿಮಗೆ ಅರ್ಥವಾಗಬಹುದು. ನಾವು ಸೈತಾನನ ಲೋಕದಲ್ಲಿ ಜೀವಿಸುತ್ತಿರುವುದರಿಂದ ಮಾನಸಿಕವಾಗಿ ತುಂಬ ಒತ್ತಡದಲ್ಲಿರುತ್ತೇವೆ. ಆಗ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಒದ್ದಾಡುತ್ತಿರುವ ಹಕ್ಕಿಯಂತೆ ನಮಗನಿಸಬಹುದು. (ಜ್ಞಾನೋ. 12:25) ಈ ರೀತಿ ಆತಂಕ, ಚಿಂತೆಗೆ ಬೇರೆ ಬೇರೆ ಕಾರಣಗಳಿರಬಹುದು. ಬಹುಶಃ ನಿಮ್ಮ ಪ್ರಿಯರು ಯಾರಾದರೂ ತೀರಿಕೊಂಡಿರಬಹುದು. ನೀವು ಯಾವುದಾದರೂ ಗಂಭೀರ ಕಾಯಿಲೆಯಿಂದ ನರಳುತ್ತಿರಬಹುದು. ಹಿಂಸೆ ಅನುಭವಿಸುತ್ತಿರಬಹುದು. ಹಣವಿಲ್ಲದೆ ಕುಟುಂಬ ನೋಡಿಕೊಳ್ಳಲು ಕಷ್ಟಪಡುತ್ತಿರಬಹುದು. ಇದರಿಂದ ನಿಮಗಾಗುವ ಮಾನಸಿಕ ಒತ್ತಡವು ನಿಮ್ಮ ಶಕ್ತಿಯನ್ನೆಲ್ಲ ಬತ್ತಿಸಿಬಿಡಬಹುದು. ಸಂತೋಷವೇ ಇಲ್ಲದೆ ಹೋಗಬಹುದು. ಆದರೆ ಹೆದರಬೇಡಿ, ನಿಮಗೆ ಸಹಾಯ ಮಾಡಲು ದೇವರು ತಯಾರಿದ್ದಾನೆ.ಯೆಶಾಯ 41:10, 13 ಓದಿ.

3, 4. (ಎ) ಬೈಬಲಿನಲ್ಲಿ “ಕೈ” ಎಂಬ ಪದವನ್ನು ಏನನ್ನು ಸೂಚಿಸಲು ಬಳಸಲಾಗಿದೆ? (ಬಿ) ಯಾವಾಗ ನಿಮ್ಮ ಕೈಗಳು ಜೋಲುಬೀಳಬಹುದು?

3 ಬೈಬಲಿನಲ್ಲಿ ಅನೇಕ ಕಡೆ ಒಬ್ಬ ವ್ಯಕ್ತಿಯ ಗುಣಗಳನ್ನು, ಕೆಲಸಗಳನ್ನು ದೇಹದ ಭಾಗಗಳಿಗೆ ಸೂಚಿಸಿ ವರ್ಣಿಸಲಾಗಿದೆ. ಉದಾಹರಣೆಗೆ, ಕೈಯ ಬಗ್ಗೆ ಸಾವಿರಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಹೇಳಲಾಗಿದೆ. ಕೈಗಳನ್ನು ಬಲಗೊಳಿಸಲಾಯಿತು ಎಂದು ಬೈಬಲ್‌ ಹೇಳುವಾಗ ಅದರರ್ಥ, ಒಬ್ಬ ವ್ಯಕ್ತಿ ಬಲಗೊಂಡಿದ್ದಾನೆ, ಅವನಿಗೆ ಪ್ರೋತ್ಸಾಹ ಸಿಕ್ಕಿದೆ, ಕೆಲಸಕ್ಕೆ ಸಿದ್ಧನಾಗಿದ್ದಾನೆ ಎಂದಾಗಿದೆ. ಉದಾಹರಣೆಗೆ, 1 ಸಮುವೇಲ 23:17⁠ರಲ್ಲಿರುವ “ಬಲಪಡಿಸಿದನು” ಮತ್ತು ಎಜ್ರ 1:6⁠ರಲ್ಲಿರುವ “ಸಹಾಯಮಾಡಿದರು” ಎಂಬ ಪದಗಳಿಗೆ ಮೂಲಭಾಷೆಯಲ್ಲಿ “ಕೈಗಳನ್ನು ಬಲಗೊಳಿಸಲಾಯಿತು” ಎಂದು ಹೇಳಲಾಗಿದೆ. ಕೆಲವೊಮ್ಮೆ ಇದರರ್ಥ ಒಬ್ಬ ವ್ಯಕ್ತಿಗೆ ಯಾವುದಾದರೂ ಸಮಸ್ಯೆಯಿದ್ದರೆ ಅದು ಭವಿಷ್ಯತ್ತಿನಲ್ಲಿ ಬಗೆಹರಿಯುತ್ತದೆಂಬ ಭರವಸೆ ಅವನಿಗಿದೆ ಎಂದು ಸಹ ಆಗಿರುತ್ತದೆ.

4 ಇನ್ನು ಕೆಲವು ಕಡೆಗಳಲ್ಲಿ ಕೈಗಳು ಜೋಲುಬಿದ್ದಿವೆ ಎಂದು ಸಹ ಹೇಳಲಾಗಿದೆ. ಇದರರ್ಥ, ಆ ವ್ಯಕ್ತಿಗೆ ನಿರಾಶೆಯಾಗಿದೆ, ನಿರೀಕ್ಷೆ ಕಳೆದುಕೊಂಡಿದ್ದಾನೆ ಎಂದಾಗಿದೆ. (2 ಪೂರ್ವ. 15:7; ಇಬ್ರಿ. 12:12) ನಿಮಗೆ ತುಂಬ ಮಾನಸಿಕ ಒತ್ತಡ ಇದ್ದಾಗ, ‘ಇನ್ನು ನನ್ನಿಂದ ಆಗೋದಿಲ್ಲ’ ಅನ್ನುವಷ್ಟು ಸೋತುಹೋದಾಗ, ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ದುರ್ಬಲವಾಗುತ್ತಿದೆ ಎಂಬ ಭಾವನೆ ಬಂದಾಗ ನಿಮ್ಮ ಕೈಗಳು ಜೋಲುಬೀಳಬಹುದು ಅಂದರೆ ನಿರಾಶೆಯಾಗಿ ‘ಬದುಕುವುದೇ ಬೇಡ’ ಎಂದನಿಸಬಹುದು. ಇಂಥ ಸಂದರ್ಭದಲ್ಲಿ ನಿಮಗೆ ಪ್ರೋತ್ಸಾಹ ಎಲ್ಲಿಂದ ಸಿಗುತ್ತದೆ? ಸಹಿಸಿಕೊಂಡು ಹೋಗಲು ಮತ್ತು ಸಂತೋಷವನ್ನು ಮರಳಿ ಪಡೆಯಲು ಬೇಕಾದ ಬಲ, ಪ್ರೇರಣೆ ನಿಮಗೆ ಹೇಗೆ ಸಿಗುತ್ತದೆ?

ಯೆಹೋವನ ಕೈ ರಕ್ಷಿಸಲಾರದ ಮೋಟುಕೈಯಲ್ಲ

5. (ಎ) ಸಮಸ್ಯೆಗಳಿರುವಾಗ ನಮಗೆ ಹೇಗನಿಸಬಹುದು? (ಬಿ) ಆದರೆ ನಾವು ಏನನ್ನು ನೆನಪಿನಲ್ಲಿಡಬೇಕು? (ಸಿ) ಈ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?

5 ಚೆಫನ್ಯ 3:16, 17 ಓದಿ. ಸಮಸ್ಯೆಗಳು ಬಂದಾಗ ನಮ್ಮ ಕೈಗಳು ಜೋಲುಬೀಳುವಂತೆ ನಾವು ಬಿಡಬಾರದು ಅಂದರೆ ಹೆದರಬಾರದು, ನಿರಾಶರಾಗಬಾರದು. ಏಕೆಂದರೆ ನಮ್ಮ ಪ್ರೀತಿಯ ತಂದೆಯಾದ ಯೆಹೋವನು ನಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕುವಂತೆ ಹೇಳಿದ್ದಾನೆ. (1 ಪೇತ್ರ 5:7) ಯೆಹೋವನು ಇಸ್ರಾಯೇಲ್‌ ಜನಾಂಗದವರಿಗೆ ಕಾಳಜಿ ತೋರಿಸಿದಂತೆಯೇ ನಮಗೂ ಪ್ರೀತಿ ಕಾಳಜಿ ತೋರಿಸುತ್ತಾನೆ. ಆತನು ಇಸ್ರಾಯೇಲ್ಯರಿಗೆ ‘ತನ್ನ ಕೈ ರಕ್ಷಿಸಲಾರದ ಮೋಟುಕೈಯಲ್ಲ’ ಎಂದು ಹೇಳಿದನು. ತನಗೆ ನಿಷ್ಠೆ ತೋರಿಸುವವರನ್ನು ರಕ್ಷಿಸಲು ಆತನು ಯಾವಾಗಲೂ ಸಿದ್ಧನಿದ್ದಾನೆ. (ಯೆಶಾ. 59:1, ಪವಿತ್ರ ಗ್ರಂಥ ಬೈಬಲ್‌) ತುಂಬ ಕಷ್ಟಗಳ ಮಧ್ಯೆಯೂ ತನ್ನ ಜನರಿಗೆ ಸೇವೆಮಾಡಲು ಬೇಕಾದ ಬಲವನ್ನು ಕೊಡುವ ಮನಸ್ಸು ಮತ್ತು ಸಾಮರ್ಥ್ಯ ಯೆಹೋವನಿಗಿದೆ. ಈ ಭರವಸೆಯನ್ನು ನಮ್ಮಲ್ಲಿ ತುಂಬುವ ಮೂರು ಉದಾಹರಣೆಗಳನ್ನು ಈಗ ನೋಡೋಣ.

6, 7. ಇಸ್ರಾಯೇಲ್ಯರು ಅಮಾಲೇಕ್ಯರನ್ನು ಸೋಲಿಸಿದ ಘಟನೆಯಿಂದ ನಾವೇನು ಕಲಿಯಬಹುದು?

6 ಇಸ್ರಾಯೇಲ್ಯರು ಐಗುಪ್ತದ ದಾಸತ್ವದಿಂದ ಬಿಡುಗಡೆಯಾಗಿ ಬಂದ ಕೂಡಲೆ ಅವರ ಮೇಲೆ ಅಮಾಲೇಕ್ಯರು ಯುದ್ಧಕ್ಕೆ ಬಂದರು. ಮೋಶೆಯು ಧೀರ ಪುರುಷನಾಗಿದ್ದ ಯೆಹೋಶುವನಿಗೆ ಇಸ್ರಾಯೇಲ್ಯರನ್ನು ಯುದ್ಧಕ್ಕೆ ಮುನ್ನಡೆಸುವಂತೆ ಹೇಳಿದನು. ನಂತರ ಆರೋನ ಮತ್ತು ಹೂರನ ಜೊತೆ ಮೋಶೆ ಹತ್ತಿರದ ಒಂದು ಗುಡ್ಡವನ್ನು ಹತ್ತಿದನು. ಅಲ್ಲಿಂದ ಅವರಿಗೆ ಯುದ್ಧಭೂಮಿ ಕಾಣುತ್ತಿತ್ತು. ಈ ಮೂವರು ಯುದ್ಧಕ್ಕೆ ಹೆದರಿ ಗುಡ್ಡವನ್ನು ಹತ್ತಿದ್ದರಾ? ಇಲ್ಲ.

7 ಮೋಶೆಯು ಮಾಡಿದ ಒಂದು ವಿಷಯವು ಇಸ್ರಾಯೇಲ್ಯರು ಅಮಾಲೇಕ್ಯರನ್ನು ಸೋಲಿಸಲು ಸಹಾಯಮಾಡಿತು. ಅವನು ದೇವದಂಡವನ್ನು ಹಿಡಿದು ಕೈಗಳನ್ನು ಆಕಾಶದ ಕಡೆಗೆ ಎತ್ತಿದನು. ಆಗ ಅಮಾಲೇಕ್ಯರ ವಿರುದ್ಧ ಹೋರಾಡಲು ಯೆಹೋವನು ಇಸ್ರಾಯೇಲ್ಯರಿಗೆ ಶಕ್ತಿ ಕೊಟ್ಟನು. ಆದರೆ ಮೋಶೆಯ ಕೈಗಳು ಸೋತು ಕೆಳಕ್ಕೆ ಇಳಿದಾಗ ಅಮಾಲೇಕ್ಯರು ಬಲಗೊಂಡರು. ಇದನ್ನು ನೋಡಿದ ಆರೋನ ಮತ್ತು ಹೂರ ತಕ್ಷಣ ಮೋಶೆಯ ಸಹಾಯಕ್ಕೆ ಬಂದರು. ಅವರು “ಒಂದು ಕಲ್ಲನ್ನು ತಂದಿಟ್ಟು ಅದರ ಮೇಲೆ ಅವನನ್ನು ಕೂಡ್ರಿಸಿ ಬಲಗಡೆ ಒಬ್ಬನು ಎಡಗಡೆ ಒಬ್ಬನು ಅವನ ಕೈಗಳಿಗೆ ಆಧಾರಕೊಟ್ಟರು. ಈ ರೀತಿಯಲ್ಲಿ ಅವನ ಕೈಗಳು ಹೊತ್ತು ಮುಣುಗುವ ತನಕ ಇಳಿಯದೆ ನಿಂತೇ ಇದ್ದವು.” ಹೀಗೆ ದೇವರ ಬಲಾಢ್ಯ ಹಸ್ತದ ಸಹಾಯದಿಂದ ಇಸ್ರಾಯೇಲ್ಯರು ಯುದ್ಧದಲ್ಲಿ ಜಯಗಳಿಸಿದರು.—ವಿಮೋ. 17:8-13.

8. (ಎ) ಕೂಷ್ಯರು ಯುದ್ಧಕ್ಕೆ ಬಂದಾಗ ಆಸನು ಏನು ಮಾಡಿದನು? (ಬಿ) ನಾವು ಆಸನಿಂದ ಏನು ಕಲಿಯಬಹುದು?

8 ರಾಜ ಆಸನ ಕಾಲದಲ್ಲೂ ಯೆಹೋವನು ಬಲಾಢ್ಯ ಹಸ್ತದ ಮೂಲಕ ತನ್ನ ಜನರಿಗೆ ಸಹಾಯ ಮಾಡಲು ಸಿದ್ಧನೆಂದು ತೋರಿಸಿದನು. ಹೇಗೆಂದು ಗಮನಿಸಿ. ಆಸನ ವಿರುದ್ಧ ಕೂಷ್ಯನಾದ ಜೆರಹನು ಯುದ್ಧಕ್ಕೆ ಬಂದನು. ಬೈಬಲಿನಲ್ಲಿ ಹೇಳಿರುವ ಸೈನ್ಯಗಳಲ್ಲಿ ಅತೀ ದೊಡ್ಡ ಸೈನ್ಯವೆಂದರೆ ಜೆರಹನದ್ದು. ಅವನ ಬಳಿ 10,00,000 ಅನುಭವೀ ಸೈನಿಕರಿದ್ದರು ಅಂದರೆ ಆಸನ ಸೈನ್ಯದ ಸುಮಾರು ಎರಡು ಪಟ್ಟು! ಇದನ್ನು ನೋಡಿ ಆಸನಿಗೆ ಆತಂಕ ಆಯಿತಾ? ಹೆದರಿಹೋದನಾ? ಅವನ ಕೈಗಳು ಸೋತುಹೋದವಾ ಅಂದರೆ ಅವನು ನಿರಾಶೆಗೊಂಡನಾ? ಇಲ್ಲ. ಅವನು ತಕ್ಷಣ ಯೆಹೋವನ ಸಹಾಯ ಕೇಳಿದನು. ಜೆರಹನ ಸೈನ್ಯಕ್ಕೆ ಆಸನ ಸೈನ್ಯವನ್ನು ಹೋಲಿಸಿದರೆ ಆಸನು ಜಯಗಳಿಸಲು ಅಸಾಧ್ಯ ಎಂದು ಅನಿಸಿದ್ದಿರಬಹುದು. “ಆದರೆ ದೇವರಿಗೆ ಎಲ್ಲವು ಸಾಧ್ಯ.” (ಮತ್ತಾ. 19:26) ಯಾವಾಗಲೂ ‘ಯಥಾರ್ಥಮನಸ್ಸಿನಿಂದ ಯೆಹೋವನ ಸೇವೆಮಾಡಿದ’ ಆಸನಿಗೆ ಯೆಹೋವನು ಸಹಾಯಮಾಡಿದನು. ತನ್ನ ಮಹಾಶಕ್ತಿಯನ್ನು ಬಳಸಿ ಕೂಷ್ಯರನ್ನು ಆಸನ ಮೂಲಕ ಸೋಲಿಸಿದನು.—2 ಪೂರ್ವ. 14:8-13; 1 ಅರ. 15:14.

9. (ಎ) ನೆಹೆಮೀಯನು ಯೆರೂಸಲೇಮಿನ ಗೋಡೆ ಕಟ್ಟುವುದನ್ನು ಯಾವುದು ತಡೆಯಲಿಲ್ಲ? (ಬಿ) ನೆಹೆಮೀಯನ ಪ್ರಾರ್ಥನೆಗೆ ಯೆಹೋವನು ಹೇಗೆ ಉತ್ತರ ಕೊಟ್ಟನು?

9 ಈಗ ನೆಹೆಮೀಯನ ಕಾಲಕ್ಕೆ ಬರೋಣ. ನೆಹೆಮೀಯನು ಯೆರೂಸಲೇಮಿಗೆ ಬಂದಾಗ ಯೆಹೂದ್ಯರು ನಿರಾಶೆಗೊಂಡಿದ್ದರು. ಸುತ್ತಣ ದೇಶಗಳಲ್ಲಿದ್ದ ವಿರೋಧಿಗಳು ಬೆದರಿಕೆ ಹಾಕುತ್ತಾ ಇದ್ದದರಿಂದ ಯೆಹೂದ್ಯರು ಯೆರೂಸಲೇಮಿನ ಗೋಡೆ ಕಟ್ಟುವುದನ್ನು ನಿಲ್ಲಿಸಿಬಿಟ್ಟರು. ಹಾಗಾಗಿ ಪಟ್ಟಣದಲ್ಲಿರುವವರಿಗೆ ಸುರಕ್ಷೆ ಇರಲಿಲ್ಲ. ಇದನ್ನು ನೋಡಿ ನೆಹೆಮೀಯನಿಗೆ ಹೇಗನಿಸಿತು? ಅವನು ಸಹ ನಿರಾಶೆಗೊಂಡನಾ ಅಂದರೆ ಅವನ ಕೈಗಳು ಜೋಲುಬಿದ್ದವಾ? ಇಲ್ಲ. ಮೋಶೆ, ಆಸ ಮತ್ತು ಇತರ ನಂಬಿಗಸ್ತ ವ್ಯಕ್ತಿಗಳಂತೆ ನೆಹೆಮೀಯನು ಯಾವಾಗಲೂ ಯೆಹೋವನ ಮೇಲೆ ಭರವಸೆಯಿಟ್ಟನು. ಈ ಸನ್ನಿವೇಶದಲ್ಲೂ ಅವನು ಸಹಾಯಕ್ಕಾಗಿ ಯೆಹೋವನಲ್ಲಿ ಬೇಡಿಕೊಂಡನು. ಅವನ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು. ಆತನು ತನ್ನ ‘ಮಹಾಶಕ್ತಿಯಿಂದ’ ಮತ್ತು “ಭುಜಪರಾಕ್ರಮ” ಅಂದರೆ ಬಲಾಢ್ಯ ಹಸ್ತದಿಂದ ಯೆಹೂದ್ಯರನ್ನು ಬಲಗೊಳಿಸಿದನು. (ನೆಹೆಮೀಯ 1:10; 2:17-20; 6:9 ಓದಿ.) ಇಂದು ಸಹ ಯೆಹೋವನು ತನ್ನ ಸೇವಕರನ್ನು ತನ್ನ “ಮಹಾಶಕ್ತಿ” ಮತ್ತು ಬಲಾಢ್ಯ ಹಸ್ತದಿಂದ ಬಲಗೊಳಿಸುತ್ತಾನೆಂದು ನೀವು ನಂಬುತ್ತೀರಾ?

ಯೆಹೋವನು ನಿಮ್ಮ ಕೈಗಳನ್ನು ಬಲಗೊಳಿಸುತ್ತಾನೆ

10, 11. (ಎ) ನಮ್ಮ ಕೈಗಳು ಸೋಲುವಂತೆ ಮಾಡಲು ಸೈತಾನನು ಹೇಗೆಲ್ಲ ಪ್ರಯತ್ನಿಸುತ್ತಾನೆ? (ಬಿ) ಯೆಹೋವನು ಹೇಗೆ ನಮ್ಮನ್ನು ಬಲಗೊಳಿಸುತ್ತಾನೆ? (ಸಿ) ಯೆಹೋವನ ಬೋಧನೆಯಿಂದ ನೀವು ಯಾವ ಪ್ರಯೋಜನ ಪಡೆದಿದ್ದೀರಿ?

10 ಪಿಶಾಚನಂತೂ ತನ್ನ ಕೈಗಳು ಸೋತುಹೋಗುವಂತೆ ಬಿಡುವುದಿಲ್ಲ ಅಂದರೆ ನಮ್ಮ ಮೇಲೆ ಆಕ್ರಮಣ ಮಾಡುವುದನ್ನು ನಿಲ್ಲಿಸುವುದಿಲ್ಲ. ಅವನು ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ನಮ್ಮ ಬಗ್ಗೆ ಸುಳ್ಳುಗಳನ್ನು ಹಬ್ಬಿಸುತ್ತಾನೆ. ಸರ್ಕಾರ, ಧಾರ್ಮಿಕ ಮುಖಂಡರು ಮತ್ತು ಧರ್ಮಭ್ರಷ್ಟರ ಮೂಲಕ ನಮ್ಮನ್ನು ಬೆದರಿಸುತ್ತಾನೆ. ನಾವು ಸುವಾರ್ತೆ ಸಾರುವುದನ್ನು ನಿಲ್ಲಿಸುವಂತೆ ಮಾಡುವುದೇ ಅವನ ಗುರಿ. ಆದರೆ ಯೆಹೋವನು ನಮಗೆ ಸಹಾಯ ಮಾಡಲು ಸಿದ್ಧನಿದ್ದಾನೆ. ಅದನ್ನು ಮಾಡುವ ಸಾಮರ್ಥ್ಯ ಸಹ ಆತನಿಗಿದೆ. ಆತನು ಪವಿತ್ರಾತ್ಮ ಶಕ್ತಿಯನ್ನು ಕೊಟ್ಟು ನಮ್ಮನ್ನು ಬಲಗೊಳಿಸುತ್ತಾನೆ. (1 ಪೂರ್ವ. 29:12) ಸೈತಾನನ ಮತ್ತು ಈ ದುಷ್ಟ ಲೋಕದ ವಿರುದ್ಧ ಹೋರಾಡಲು ಪವಿತ್ರಾತ್ಮವನ್ನು ಕೊಡುವಂತೆ ನಾವು ಯೆಹೋವನಲ್ಲಿ ಬೇಡಿಕೊಳ್ಳುವುದು ತುಂಬ ಪ್ರಾಮುಖ್ಯ. (ಕೀರ್ತ. 18:39; 1 ಕೊರಿಂ. 10:13) ದೇವರ ವಾಕ್ಯವಾದ ಬೈಬಲಿನಿಂದಲೂ ನಮಗೆ ತುಂಬ ಸಹಾಯ ಸಿಗುತ್ತದೆ. ಪ್ರತಿ ತಿಂಗಳು ನಾವು ಪ್ರಕಾಶನಗಳ ಮೂಲಕ ಎಷ್ಟೊಂದು ವಿಷಯಗಳನ್ನು ಕಲಿಯುತ್ತೇವೆಂದು ಸಹ ಸ್ವಲ್ಪ ಯೋಚಿಸಿ. ಜೆಕರ್ಯ 8:9, 13⁠ರಲ್ಲಿರುವ (ಓದಿ) ಮಾತನ್ನು ಯೆರೂಸಲೇಮಿನ ದೇವಾಲಯವನ್ನು ಪುನಃ ಕಟ್ಟುವಾಗ ಹೇಳಲಾಗಿತ್ತು. ಆ ಮಾತು ಇಂದು ನಮಗೂ ಸಹಾಯ ಮಾಡುತ್ತದೆ.

11 ಸಭಾ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ, ಬೈಬಲ್‌ ಶಾಲೆಗಳಲ್ಲಿ ಸಿಗುವ ಬೋಧನೆಯ ಮೂಲಕ ಸಹ ಯೆಹೋವನು ನಮ್ಮನ್ನು ಬಲಪಡಿಸುತ್ತಾನೆ. ಆ ಬೋಧನೆಯು ನಾವು ಸರಿಯಾದ ಉದ್ದೇಶದಿಂದ ಯೆಹೋವನ ಸೇವೆ ಮಾಡಲು, ಆಧ್ಯಾತ್ಮಿಕ ಗುರಿಗಳನ್ನಿಡಲು, ನಮಗಿರುವ ಅನೇಕ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸಲು ಸಹಾಯಮಾಡುತ್ತದೆ. (ಕೀರ್ತ. 119:33) ಯೆಹೋವನ ಈ ಬೋಧನೆಯಿಂದ ಬಲ ಪಡೆಯಲು ನೀವು ಆತುರದಿಂದ ಇದ್ದೀರಾ?

12. ನಾವು ಬಲ ಪಡೆದುಕೊಳ್ಳಬೇಕಾದರೆ ಏನು ಮಾಡಬೇಕು?

12 ಯೆಹೋವನು ತನ್ನ ಜನರಿಗೆ ಅಮಾಲೇಕ್ಯರನ್ನು ಮತ್ತು ಕೂಷ್ಯರನ್ನು ಸೋಲಿಸಲು ಸಹಾಯಮಾಡಿದನು. ಯೆರೂಸಲೇಮಿನ ಗೋಡೆಗಳನ್ನು ಕಟ್ಟಿ ಮುಗಿಸಲು ನೆಹೆಮೀಯನಿಗೂ ಯೆಹೂದ್ಯರಿಗೂ ಶಕ್ತಿ ಕೊಟ್ಟನು. ಹಾಗೆಯೇ ಇಂದು ನಮಗೆ ಸಹ ಯೆಹೋವನು ಸಹಾಯಮಾಡುತ್ತಾನೆ. ಚಿಂತೆ ಆತಂಕಗಳಿದ್ದರೂ, ವಿರೋಧವಿದ್ದರೂ, ಜನರು ಆಸಕ್ತಿ ತೋರಿಸದಿದ್ದರೂ ಸುವಾರ್ತೆ ಸಾರುತ್ತಾ ಇರಲು ನಮಗೆ ಬೇಕಾದ ಬಲವನ್ನು ಆತನು ಕೊಡುತ್ತಾನೆ. (1 ಪೇತ್ರ 5:10) ಯೆಹೋವನು ಅದ್ಭುತ ಮಾಡಿ ನಮ್ಮ ಸಮಸ್ಯೆಗಳನ್ನು ತೆಗೆದುಹಾಕಬೇಕೆಂದು ನಾವು ನಿರೀಕ್ಷಿಸಬಾರದು. ಬದಲಿಗೆ ಆತನಿಂದ ಬಲ ಪಡೆದುಕೊಳ್ಳಲು ನಾವು ನಮ್ಮ ಪಾಲನ್ನು ಮಾಡಬೇಕು, ಅಂದರೆ ಪ್ರತಿದಿನ ಬೈಬಲನ್ನು ಓದಬೇಕು, ಪ್ರತಿವಾರ ಕೂಟಗಳಿಗೆ ತಯಾರಿಮಾಡಿ ಹಾಜರಾಗಬೇಕು, ತಪ್ಪದೆ ವೈಯಕ್ತಿಕ ಅಧ್ಯಯನ ಮತ್ತು ಕುಟುಂಬ ಆರಾಧನೆ ಮಾಡಬೇಕು, ಯೆಹೋವನಿಗೆ ಪ್ರಾರ್ಥಿಸುತ್ತಾ ಆತನ ಮೇಲೆ ಆತುಕೊಳ್ಳಬೇಕು. ನಮ್ಮನ್ನು ಬಲಗೊಳಿಸಲು ಮತ್ತು ಪ್ರೋತ್ಸಾಹಿಸಲು ಯೆಹೋವನು ಮಾಡಿರುವ ಏರ್ಪಾಡುಗಳಿಂದ ಪ್ರಯೋಜನ ಪಡೆಯುವುದನ್ನು ಯಾವುದೂ ಯಾವತ್ತೂ ತಡೆಯದಂತೆ ನೋಡಿಕೊಳ್ಳೋಣ. ಈ ವಿಷಯಗಳಲ್ಲಿ ಯಾವುದರಲ್ಲಾದರೂ ನಿಮ್ಮ ಕೈಗಳು ಸೋತುಹೋಗುತ್ತಿವೆ ಎಂದು ಅನಿಸುವಲ್ಲಿ ದೇವರ ಸಹಾಯ ಕೇಳಿಕೊಳ್ಳಿ. ಆಗ ಪವಿತ್ರಾತ್ಮವು ‘ದೇವರಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ನಿಮ್ಮಲ್ಲಿ ಹುಟ್ಟಿಸಿ ಅವುಗಳನ್ನು ಮಾಡಲು ನಿಮಗೆ ಶಕ್ತಿ ಕೊಡುವುದನ್ನು’ ನೀವೇ ನೋಡುವಿರಿ. (ಫಿಲಿ. 2:13, ಪರಿಶುದ್ಧ ಬೈಬಲ್‌  *) ಆದರೆ ನಿಮಗೊಂದು ಪ್ರಶ್ನೆ: ನೀವು ಇತರರ ಕೈಗಳನ್ನು ಬಲಗೊಳಿಸುವಿರಾ?

ಸೋತುಹೋಗಿರುವ ಕೈಗಳನ್ನು ಬಲಗೊಳಿಸಿ

13, 14. (ಎ) ಹೆಂಡತಿ ತೀರಿಹೋದ ದುಃಖದಲ್ಲಿದ್ದ ಸಹೋದರನಿಗೆ ಹೇಗೆ ಸಹಾಯ ಸಿಕ್ಕಿತು? (ಬಿ) ನಾವು ಬೇರೆಯವರನ್ನು ಹೇಗೆ ಬಲಪಡಿಸಬಹುದು?

13 ನಮ್ಮನ್ನು ಪ್ರೋತ್ಸಾಹಿಸಲು ಯೆಹೋವನು ಕೊಟ್ಟಿರುವ ಇನ್ನೊಂದು ಸಹಾಯವೆಂದರೆ ಪ್ರೀತಿ-ಕಾಳಜಿ ತೋರಿಸುವ ಲೋಕವ್ಯಾಪಕ ಸಹೋದರ ಬಳಗ. ಅಪೊಸ್ತಲ ಪೌಲನು ಹೀಗೆ ಬರೆದನು: “ಜೋಲುಬಿದ್ದ ಕೈಗಳನ್ನೂ ನಿತ್ರಾಣಗೊಂಡಿರುವ ಮೊಣಕಾಲುಗಳನ್ನೂ ನೆಟ್ಟಗೆ ಮಾಡಿರಿ; ನಿಮ್ಮ ಪಾದಗಳಿಗೆ ನೇರವಾದ ದಾರಿಗಳನ್ನು ಮಾಡುತ್ತಾ ಇರಿ.” (ಇಬ್ರಿ. 12:12, 13) ಇದೇ ರೀತಿಯ ಸಹಾಯ ಒಂದನೇ ಶತಮಾನದಲ್ಲಿ ಅನೇಕ ಕ್ರೈಸ್ತರಿಗೆ ಸಹೋದರ ಸಹೋದರಿಯರಿಂದ ಸಿಕ್ಕಿತು. ಇಂದು ಸಹ ಸಿಗುತ್ತಿದೆ. ಒಬ್ಬ ಸಹೋದರನ ಉದಾಹರಣೆ ಗಮನಿಸಿ. ಅವನ ಪತ್ನಿ ತೀರಿಕೊಂಡಳು. ಆ ದುಃಖವನ್ನು ಮಾತ್ರವಲ್ಲ ಬೇರೆ ಅನೇಕ ನೋವಿನ ಪರಿಸ್ಥಿತಿಗಳನ್ನು ಸಹ ಆ ಸಹೋದರ ತಾಳಿಕೊಂಡನು. ಅವನು ಹೇಳಿದ್ದು: “ನಾನೊಂದು ಒಳ್ಳೇ ಪಾಠವನ್ನು ಕಲಿತಿದ್ದೇನೆ. ಯಾವ ರೀತಿಯ ಕಷ್ಟಪರೀಕ್ಷೆಗಳು ಬರಬೇಕು, ಯಾವಾಗ ಬರಬೇಕು, ಎಷ್ಟು ಸಾರಿ ಬರಬೇಕು ಎಂದು ಆಯ್ಕೆ ಮಾಡುವುದು ನಮ್ಮ ಕೈಯಲಿಲ್ಲ. ಏನೇ ಬಂದರೂ ಅದನ್ನು ಸಹಿಸಿಕೊಳ್ಳಲು ಪ್ರಾರ್ಥನೆ ಮತ್ತು ವೈಯಕ್ತಿಕ ಅಧ್ಯಯನ ಸಹಾಯ ಮಾಡಿದೆ. ಅವು ನನ್ನನ್ನು ನೀರಿನಲ್ಲಿ ಮುಳುಗಿಹೋಗದಂತೆ ಕಾಪಾಡುವ ಲೈಫ್‌ ಜ್ಯಾಕೆಟ್‌ನಂತೆ ಇತ್ತು. ಮಾತ್ರವಲ್ಲ ಸಹೋದರ ಸಹೋದರಿಯರ ಬೆಂಬಲದಿಂದ ನನಗೆ ತುಂಬ ಸಾಂತ್ವನ ಸಿಕ್ಕಿತು. ಕಷ್ಟದ ಸನ್ನಿವೇಶ ಬರುವ ಮುಂಚೆಯೇ ಯೆಹೋವನೊಟ್ಟಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳುವುದು ಎಷ್ಟು ಪ್ರಾಮುಖ್ಯ ಅನ್ನೋದು ಅರ್ಥವಾಗಿದೆ.”

ಸಭೆಯಲ್ಲಿ ಇತರರನ್ನು ಪ್ರೋತ್ಸಾಹಿಸಲು ಪ್ರತಿಯೊಬ್ಬರಿಂದಲೂ ಸಾಧ್ಯ! (ಪ್ಯಾರ 14 ನೋಡಿ)

14 ಇಸ್ರಾಯೇಲ್ಯರು ಅಮಾಲೇಕ್ಯರ ವಿರುದ್ಧ ಯುದ್ಧಮಾಡುವಾಗ ಹೂರ ಮತ್ತು ಆರೋನನು ಮೋಶೆಯ ಕೈಗಳಿಗೆ ಆಧಾರಕೊಟ್ಟು ಅವುಗಳನ್ನು ಬಲಪಡಿಸಿದರು. ಇಂದು ನಾವು ಸಹ ಇತರರಿಗೆ ಆಧಾರವಾಗಿರಲು, ಸಹಾಯಮಾಡಲು ಅವಕಾಶಗಳಿಗಾಗಿ ಹುಡುಕಬೇಕು. ಕೆಲವು ಸಹೋದರರು ವೃದ್ಧರಾಗಿದ್ದಾರೆ, ಕೆಲವರಿಗೆ ಆರೋಗ್ಯ ಸಮಸ್ಯೆಗಳಿರುತ್ತವೆ, ಕುಟುಂಬದಿಂದ ಹಿಂಸೆ ಅನುಭವಿಸುತ್ತಿರುತ್ತಾರೆ, ಒಂಟಿತನ ಕಾಡುತ್ತಿರುತ್ತದೆ ಅಥವಾ ಪ್ರಿಯರ ಮರಣದಿಂದಾಗಿ ದುಃಖದಲ್ಲಿರುತ್ತಾರೆ. ಯುವ ಜನರಿಗೆ ತಪ್ಪನ್ನು ಮಾಡುವ ಅಥವಾ ಈ ಲೋಕದಲ್ಲಿ ಯಶಸ್ಸು ಗಳಿಸುವ ಒತ್ತಡ ಇರುತ್ತದೆ. ಇವರಿಗೆಲ್ಲ ನಾವು ಸಹಾಯ ಮಾಡಬಹುದು. (1 ಥೆಸ. 3:1-3; 5:11, 14) ಕೂಟಗಳಿಗೆ ಹೋದಾಗ, ಸೇವೆಗೆ ಹೋದಾಗ, ಒಟ್ಟಿಗೆ ಊಟ ಮಾಡುವಾಗ, ಪೋನ್‌ನಲ್ಲಿ ಮಾತಾಡುವಾಗ ಇತರರ ಕಡೆಗೆ ಆಸಕ್ತಿ-ಕಾಳಜಿ ತೋರಿಸಲು ಅವಕಾಶಗಳಿಗಾಗಿ ಹುಡುಕಿ.

15. ನಿಮ್ಮ ಸಕಾರಾತ್ಮಕ ಮಾತುಗಳಿಂದ ಬೇರೆಯವರಿಗೆ ಯಾವ ಪ್ರಯೋಜನವಾಗುತ್ತದೆ?

15 ಆಸನು ಕೂಷ್ಯರ ಸೈನ್ಯದ ವಿರುದ್ಧ ಮಹಾ ಜಯಗಳಿಸಿದ ನಂತರ ಪ್ರವಾದಿ ಅಜರ್ಯನು ಆಸನಿಗೆ ಮತ್ತು ಅವನ ಜನರಿಗೆ, “ನೀವಾದರೋ ಸ್ಥಿರಚಿತ್ತರಾಗಿರಿ; ನಿಮ್ಮ ಕೈಗಳು ಜೋಲುಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು” ಎಂದು ಹೇಳಿ ಪ್ರೋತ್ಸಾಹಿಸಿದನು. (2 ಪೂರ್ವ. 15:7) ಇದರಿಂದ ಪ್ರೋತ್ಸಾಹಗೊಂಡ ಆಸನು ಯೆಹೋವನ ಆರಾಧನೆಯನ್ನು ಪುನಃಸ್ಥಾಪಿಸಲಿಕ್ಕಾಗಿ ಅನೇಕ ಬದಲಾವಣೆಗಳನ್ನು ಮಾಡಿದನು. ಇಂದು ಸಹ ನಿಮ್ಮ ಸಕಾರಾತ್ಮಕ ಮಾತುಗಳು ಇತರರನ್ನು ಪ್ರೋತ್ಸಾಹಿಸುತ್ತವೆ ಮತ್ತು ಯೆಹೋವನ ಸೇವೆಮಾಡುತ್ತಾ ಇರಲು ಅವರಿಗೆ ಸಹಾಯಮಾಡುತ್ತವೆ. (ಜ್ಞಾನೋ. 15:23) ಅಷ್ಟೇ ಅಲ್ಲ, ನೀವು ಕೂಟಗಳಲ್ಲಿ ಪ್ರೋತ್ಸಾಹಕರ ಉತ್ತರಗಳನ್ನು ಕೊಟ್ಟಾಗ ಸಹೋದರ ಸಹೋದರಿಯರು ಬಲಗೊಳ್ಳುತ್ತಾರೆ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಡಿ.

16. (ಎ) ಹಿರಿಯರು ನೆಹೆಮೀಯನನ್ನು ಹೇಗೆ ಅನುಕರಿಸಬಹುದು? (ಬಿ) ನಿಮಗೆ ಸಹೋದರ ಸಹೋದರಿಯರು ಹೇಗೆ ಸಹಾಯ ಮಾಡಿದ್ದಾರೆಂದು ತಿಳಿಸಿ.

16 ನೆಹೆಮೀಯನು ಮತ್ತು ಯೆಹೂದ್ಯರು ಯೆಹೋವನ ಸಹಾಯದಿಂದ ತಮ್ಮ ಕೈಗಳನ್ನು ಬಲಪಡಿಸಿಕೊಂಡರು. ಹಾಗಾಗಿ ಕೇವಲ 52 ದಿನಗಳಲ್ಲಿ ಯೆರೂಸಲೇಮಿನ ಗೋಡೆಗಳನ್ನು ಕಟ್ಟಿ ಮುಗಿಸಿದರು! (ನೆಹೆ. 2:18; 6:15, 16) ನೆಹೆಮೀಯನು ಜನರಿಗೆ ಕೆಲಸ ಹೇಳಿ ತಾನು ನೋಡುತ್ತಾ ನಿಂತಿರಲಿಲ್ಲ. ಅವನೂ ಅವರ ಜೊತೆ ಸೇರಿ ಕೆಲಸಮಾಡಿದನು. (ನೆಹೆ. 5:16) ನೆಹಮೀಯನಂತೆ ಇಂದಿರುವ ಹಿರಿಯರು ನಿರ್ಮಾಣ ಕೆಲಸದಲ್ಲಿ, ರಾಜ್ಯ ಸಭಾಗೃಹದ ಶುಚಿತ್ವ ಮತ್ತು ದುರಸ್ತಿ ಕೆಲಸದಲ್ಲಿ ಸಹಾಯಮಾಡುತ್ತಾರೆ. ಅಷ್ಟೇ ಅಲ್ಲ, ‘ಭಯಭ್ರಾಂತ ಹೃದಯದವರನ್ನು’ ಅಂದರೆ ಹೃದಯದಲ್ಲಿ ಚಿಂತೆ ಆತಂಕವಿರುವ ಸಹೋದರ ಸಹೋದರಿಯರನ್ನು ಭೇಟಿಮಾಡುವ ಮೂಲಕ, ಅವರೊಂದಿಗೆ ಸೇವೆಮಾಡುವ ಮೂಲಕ ಅವರನ್ನು ಬಲಗೊಳಿಸುತ್ತಾರೆ.ಯೆಶಾಯ 35:3, 4 ಓದಿ.

ನಿಮ್ಮ ಕೈಗಳು ಸೋತುಹೋಗದಿರಲಿ

17, 18. ಸಮಸ್ಯೆಗಳಿದ್ದಾಗ, ಆತಂಕವಾದಾಗ ನಮಗೆ ಯಾವ ಭರವಸೆ ಇರಬೇಕು?

17 ನಾವು ಸಹೋದರ ಸಹೋದರಿಯರೊಟ್ಟಿಗೆ ಸೇರಿ ಸೇವೆಮಾಡುವಾಗ ನಮ್ಮಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಇದರಿಂದ ಬಾಳುವ ಸ್ನೇಹಬಂಧಗಳನ್ನು ಬೆಳೆಸಿಕೊಳ್ಳಲು, ದೇವರ ರಾಜ್ಯವು ಬೇಗನೆ ತರುವ ಆಶೀರ್ವಾದಗಳಲ್ಲಿ ಹೆಚ್ಚು ಭರವಸೆಯಿಡಲು ನಮಗೆ ಸಹಾಯವಾಗುತ್ತದೆ. ನಾವು ಇತರರ ಕೈಗಳನ್ನು ಬಲಗೊಳಿಸಿದಾಗ ಅವರಿಗೆ ಕಷ್ಟವನ್ನು ತಾಳಿಕೊಳ್ಳಲು ಮತ್ತು ಕುಗ್ಗಿಹೋಗದೆ ಭವಿಷ್ಯತ್ತಿನ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲು ಸಹಾಯವಾಗುತ್ತದೆ. ಅಷ್ಟೇ ಅಲ್ಲ, ಬೇರೆಯವರಿಗೆ ಸಹಾಯಮಾಡುವಾಗ ನಮ್ಮ ಕೈಗಳು ಬಲಗೊಳ್ಳುತ್ತವೆ ಮತ್ತು ನಮ್ಮ ಗಮನವನ್ನು ಪೂರ್ಣವಾಗಿ ಭವಿಷ್ಯತ್ತಿನ ಮೇಲಿಡಲು ಆಗುತ್ತದೆ.

18 ಹಿಂದಿನ ಕಾಲದಲ್ಲಿ ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಹೇಗೆ ಸಹಾಯಮಾಡಿದನು, ಅವರನ್ನು ಹೇಗೆ ರಕ್ಷಿಸಿದನು ಎಂಬ ಬಗ್ಗೆ ಯೋಚಿಸಿದರೆ ನಮಗೆ ಆತನ ಮೇಲಿರುವ ನಂಬಿಕೆ, ಭರವಸೆ ಹೆಚ್ಚಾಗುತ್ತದೆ. ಹಾಗಾಗಿ ಸಮಸ್ಯೆಗಳಿದ್ದಾಗ, ಆತಂಕವಾದಾಗ ‘ನಿಮ್ಮ ಕೈಗಳು ಸೋತುಹೋಗದಿರಲಿ.’ ನೀವು ಯೆಹೋವನ ಸಹಾಯವನ್ನು ಕೇಳಿಕೊಂಡರೆ ಆತನ ಬಲಾಢ್ಯ ಹಸ್ತವು ನಿಮ್ಮನ್ನು ಬಲಗೊಳಿಸುತ್ತದೆ ಮತ್ತು ಭವಿಷ್ಯತ್ತಿನಲ್ಲಿ ದೇವರ ರಾಜ್ಯದ ಆಶೀರ್ವಾದಗಳನ್ನು ಪಡೆಯಲು ಸಹಾಯಮಾಡುತ್ತದೆ.—ಕೀರ್ತ. 73:23, 24.

^ ಪ್ಯಾರ. 12 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.