ಹೆತ್ತವರೇ, ನಂಬಿಕೆ ಬಲಪಡಿಸಿಕೊಳ್ಳಲು ನಿಮ್ಮ ಮಕ್ಕಳಿಗೆ ನೆರವಾಗಿ
“ಯುವಕ ಯುವತಿಯರು ಯೆಹೋವನನ್ನು ಕೊಂಡಾಡಲಿ.”—ಕೀರ್ತ. 148:12, 13 NW.
1, 2. (ಎ) ಹೆತ್ತವರಿಗೆ ಯಾವ ಸವಾಲಿದೆ? (ಬಿ) ಅದನ್ನವರು ಹೇಗೆ ಜಯಿಸಬಲ್ಲರು? (ಸಿ) ಯಾವ ನಾಲ್ಕು ಅಂಶಗಳನ್ನು ಚರ್ಚಿಸಲಿದ್ದೇವೆ?
ಫ್ರಾನ್ಸ್‌ನಲ್ಲಿ ವಾಸವಿರುವ ಒಬ್ಬ ತಂದೆತಾಯಿ ಹೀಗೆ ಹೇಳಿದರು: “ನಾವು ದೇವರನ್ನು ನಂಬುತ್ತೇವೆ ಅಂದಮಾತ್ರಕ್ಕೆ ನಮ್ಮ ಮಕ್ಕಳೂ ನಂಬಬೇಕು ಅಂತೇನಿಲ್ಲ. ನಂಬಿಕೆ ಪರಂಪರೆಯಿಂದ ಬರುವಂಥದ್ದಲ್ಲ. ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಅದನ್ನು ಬೆಳೆಸಿಕೊಳ್ಳುತ್ತಾರೆ.” ಆಸ್ಟ್ರೇಲಿಯದ ಸಹೋದರನೊಬ್ಬ ಹೀಗೆ ಬರೆದ: “ನಿಮ್ಮ ಮಗುವಿನ ಹೃದಯದಲ್ಲಿ ನಂಬಿಕೆಯನ್ನು ಬೆಳೆಸುವುದು ನೀವು ಎದುರಿಸುವಂಥ ಸವಾಲುಗಳಲ್ಲೇ ದೊಡ್ಡ ಸವಾಲು. ಮಗು ಪ್ರಶ್ನೆ ಕೇಳಿದಾಗ ‘ನಾನು ಸರಿಯಾದ ಉತ್ತರ ಕೊಟ್ಟೆ’ ಅಂತ ನೆನಸಿರುತ್ತೀರ. ಆದರೆ ಅದೇ ಪ್ರಶ್ನೆಯನ್ನು ಮಗು ಮತ್ತೆ ಕೇಳುತ್ತದೆ! ಮಗುವಿನ ಕುತೂಹಲ ಹುಟ್ಟಿಸುವ ಮನಸ್ಸಿಗೆ ಇವತ್ತು ನೀವು ಕೊಟ್ಟ ಉತ್ತರ ಸಾಕಾಗಬಹುದು, ಆದರೆ ನಾಳೆಗೆ ಅದು ಸಾಕಾಗಲಿಕ್ಕಿಲ್ಲ.” ಮಕ್ಕಳು ಬೆಳೆಯುತ್ತಾ ಹೋದಂತೆ ಹೆತ್ತವರು ಮೊದಲು ಹೇಳಿದ ವಿಷಯವನ್ನೇ ಮತ್ತೆಮತ್ತೆ ಹೇಳಬೇಕಾಗುತ್ತದೆ ಮತ್ತು ಹೆಚ್ಚೆಚ್ಚು ವಿವರಿಸಬೇಕಾಗುತ್ತದೆ. ಯೆಹೋವನನ್ನು ಪ್ರೀತಿಸಲು ಮಕ್ಕಳಿಗೆ ಕಲಿಸಲಿಕ್ಕಾಗಿ ಹೆತ್ತವರು ಅನೇಕ ವಿಧಾನಗಳನ್ನು ಬಳಸಬೇಕಾಗುತ್ತದೆ.
2 ಮಕ್ಕಳು ನಿಜಕ್ಕೂ ಯೆಹೋವನನ್ನು ಪ್ರೀತಿಸುವಂತೆ ಕಲಿಸಲು ನಮ್ಮಿಂದಾಗುತ್ತಾ? ಅವರು ದೊಡ್ಡವರಾದ ಮೇಲೂ ಯೆಹೋವನ ಸೇವೆ ಮಾಡುವುದನ್ನು ಮುಂದುವರಿಸುತ್ತಾರಾ? ಎಂಬ ಪ್ರಶ್ನೆಗಳು ಹೆತ್ತವರಿಗೆ ಬರಬಹುದು. ನಮ್ಮ ಸ್ವಂತ ಶಕ್ತಿಯಿಂದ ಹಾಗೆ ಮಾಡಲು ಸಾಧ್ಯವಿಲ್ಲ. (ಯೆರೆ. 10:23) ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಬೇಕು. ಆತನು ಹೆತ್ತವರಿಗೆ ಎಷ್ಟೋ ಮಾರ್ಗದರ್ಶನಗಳನ್ನು ಕೊಟ್ಟಿದ್ದಾನೆ. ನೀವು ನಿಮ್ಮ ಮಕ್ಕಳಿಗೆ ಸಹಾಯಮಾಡಲು ಏನೆಲ್ಲ ಮಾಡಬಹುದು? (1) ಅವರನ್ನು ಚೆನ್ನಾಗಿ ತಿಳಿದುಕೊಳ್ಳಿ. (2) ಯೆಹೋವನ ಬಗ್ಗೆ ನಿಮ್ಮ ಹೃದಯದಲ್ಲಿರುವುದನ್ನು ಅವರಿಗೆ ಕಲಿಸಿ. (3) ದೃಷ್ಟಾಂತಗಳನ್ನು ಬಳಸಿ. (4) ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಿ ಮತ್ತು ನಿಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದಿರಿ. ಬನ್ನಿ ಈ ನಾಲ್ಕು ಅಂಶಗಳ ಬಗ್ಗೆ ಚರ್ಚಿಸೋಣ.
ನಿಮ್ಮ ಮಕ್ಕಳನ್ನು ಚೆನ್ನಾಗಿ ತಿಳಿದುಕೊಳ್ಳಿ
3. ಶಿಷ್ಯರಿಗೆ ಕಲಿಸಲು ಯೇಸು ಬಳಸಿದ ವಿಧಾನವನ್ನು ಹೆತ್ತವರು ಹೇಗೆ ಅನುಕರಿಸಬಹುದು?
3 ಶಿಷ್ಯರೊಂದಿಗೆ ಮಾತಾಡುವಾಗ ಅವರು ಏನು ನಂಬುತ್ತಾರೆ ಎಂದು ಯೇಸು ಆಗಾಗ ಕೇಳುತ್ತಿದ್ದನು. (ಮತ್ತಾ. 16:13-15) ನೀವು ಅವನನ್ನು ಅನುಕರಿಸಬಹುದು. ಮಕ್ಕಳೊಟ್ಟಿಗೆ ಮಾತಾಡುವಾಗ ಅಥವಾ ಕೆಲಸಮಾಡುವಾಗ ಅದರ ಬಗ್ಗೆ ಅವರೇನು ಯೋಚಿಸುತ್ತಾರೆ, ಅವರಿಗೆ ಹೇಗನಿಸುತ್ತಿದೆ ಅಂತ ಕೇಳಿ. ಆಗ ಏನಾದರೂ ಪ್ರಶ್ನೆಗಳಿದ್ದರೆ ಮಕ್ಕಳು ಕೇಳುತ್ತಾರೆ. ಆಸ್ಟ್ರೇಲಿಯದಲ್ಲಿರುವ 15 ವರ್ಷದ ಒಬ್ಬ ಸಹೋದರ ಹೀಗಂದನು: “ನನ್ನ ತಂದೆ ಆಗಾಗ ನನ್ನ ನಂಬಿಕೆಯ ಬಗ್ಗೆ ಕೇಳುತ್ತಿರುತ್ತಾರೆ. ಅದಕ್ಕೆ ಸರಿಯಾದ ಕಾರಣಗಳನ್ನು ಕೊಟ್ಟು ವಿವರಿಸಲು ನನಗೆ ಸಹಾಯಮಾಡುತ್ತಾರೆ. ಅವರು ಹೀಗೆ ಕೇಳುತ್ತಾರೆ: ‘ಇದರ ಬಗ್ಗೆ ಬೈಬಲ್ ಏನು ಹೇಳುತ್ತದೆ? ಅದನ್ನು ನೀನು ನಂಬ್ತೀಯಾ? ಯಾಕೆ ನಂಬ್ತೀಯಾ?’ ನಾನು ಈ ಪ್ರಶ್ನೆಗಳಿಗೆ ಅವರು ಅಥವಾ ಅಮ್ಮ ಹೇಳಿದ್ದನ್ನೇ ಹೇಳದೆ ನನ್ನ ಸ್ವಂತ ಮಾತಿನಲ್ಲಿ ಉತ್ತರಿಸುವಂತೆ ಬಯಸುತ್ತಾರೆ. ದೊಡ್ಡವನಾಗುತ್ತಾ ಹೋದಂತೆ ನಾನು ನನ್ನ ನಂಬಿಕೆಗಿರುವ ಕಾರಣಗಳನ್ನು ಹೆಚ್ಚೆಚ್ಚು ವಿವರಿಸಬೇಕಾಗಿದೆ.”
4. ಮಕ್ಕಳು ಪ್ರಶ್ನೆಗಳನ್ನು ಕೇಳುವಾಗ ತಾಳ್ಮೆಯಿಂದ ಇದ್ದು ಅವರಿಗೆ ಉತ್ತರ ಕೊಡುವುದು ಯಾಕೆ ಪ್ರಾಮುಖ್ಯ? ಉದಾಹರಣೆ ಕೊಡಿ.
4 ಬೈಬಲ್ ಹೇಳುವ ಒಂದು ವಿಷಯವನ್ನು ಮಕ್ಕಳು ಕೂಡಲೇ ನಂಬದಿದ್ದರೆ ಸಿಟ್ಟುಮಾಡಿಕೊಳ್ಳಬೇಡಿ. ತಾಳ್ಮೆಯಿಂದಿರಿ. ಅವರಿಗಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯಮಾಡಿ. ಒಬ್ಬ ತಂದೆ ಹೀಗಂದರು: “ಮಗು ಕೇಳುವ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ಆ ಪ್ರಶ್ನೆ ಅಷ್ಟೇನು ಪ್ರಾಮುಖ್ಯವಲ್ಲ ಅಥವಾ ಅದಕ್ಕೆ ಉತ್ತರ ಕೊಡಲು ನಿಮಗೆ ಮುಜುಗರವಾಗುತ್ತದೆ ಅಂತ ನೆನಸಿ ಅದನ್ನು ತಳ್ಳಿಹಾಕಬೇಡಿ.” ಮಕ್ಕಳು ಪ್ರಶ್ನೆ ಕೇಳುವುದು ಒಳ್ಳೇದೇ. ಯಾಕೆಂದರೆ ವಿಷಯಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ ಎಂದು ಅದು ತೋರಿಸುತ್ತದೆ. ಚಿಕ್ಕವನಾಗಿರುವಾಗ ಯೇಸು ಸಹ ಪ್ರಶ್ನೆಗಳನ್ನು ಕೇಳಿದನು. (ಲೂಕ 2:46 ಓದಿ.) ಡೆನ್ಮಾರ್ಕಿನ ಒಬ್ಬ ಯುವಕ ಹೇಳುವುದು: “ನಾನು ನನ್ನ ಹೆತ್ತವರಿಗೆ ‘ನನಗ್ಯಾಕೋ ನಮ್ಮದೇ ನಿಜಧರ್ಮನಾ ಅಂತ ಅನುಮಾನ’ ಎಂದಾಗ ಅವರಿಗೆ ನನ್ನ ಬಗ್ಗೆ ಚಿಂತೆ ಆಗಿರಬಹುದಾದರೂ ತಾಳ್ಮೆಯಿಂದ ಇದ್ದರು. ಅಲ್ಲದೆ ನನಗಿರುವ ಎಲ್ಲ ಪ್ರಶ್ನೆಗಳಿಗೆ ಬೈಬಲಿನಿಂದ ಉತ್ತರಿಸಿದರು.”
5. ಮಕ್ಕಳಿಗೆ ಯೆಹೋವನ ಮೇಲೆ ನಂಬಿಕೆಯಿದೆ ಅಂತ ಅನಿಸುವುದಾದರೂ ಹೆತ್ತವರು ಏನು ಮಾಡಬೇಕು?
5 ನಿಮ್ಮ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಸೇವೆಗೆ, ಕೂಟಗಳಿಗೆ ಹೋಗುತ್ತಾರೆ ಅಂದಮಾತ್ರಕ್ಕೆ ಅವರಿಗೆ ಯೆಹೋವನಲ್ಲಿ ನಂಬಿಕೆಯಿದೆ ಎಂದು ಅಂದುಕೊಳ್ಳಬೇಡಿ. ಅವರಿಗೆ ಯೆಹೋವ ದೇವರ ಬಗ್ಗೆ ಹೇಗನಿಸುತ್ತದೆಂದು ಮತ್ತು ಬೈಬಲ್ ಬಗ್ಗೆ ಅವರ ಅಭಿಪ್ರಾಯವೇನೆಂದು ಅರ್ಥಮಾಡಿಕೊಳ್ಳಿ. ಯೆಹೋವನಿಗೆ ನಂಬಿಗಸ್ತರಾಗಿರಲು ಯಾಕೆ ಅವರಿಗೆ ಕಷ್ಟವಾಗುತ್ತಿದೆ ಎಂದು ತಿಳಿದುಕೊಳ್ಳಲು ನಿಮ್ಮಿಂದ ಆಗುವುದೆಲ್ಲವನ್ನೂ ಮಾಡಿ. ಪ್ರತಿದಿನ ಮಕ್ಕಳೊಟ್ಟಿಗೆ ಸಮಯ ಕಳೆಯುವಾಗ ಯೆಹೋವನ ಬಗ್ಗೆ ಅವರೊಂದಿಗೆ ಮಾತಾಡಿ. ನೀವು ಒಬ್ಬರೇ ಇರಲಿ, ನಿಮ್ಮ ಮಕ್ಕಳೊಂದಿಗೇ ಇರಲಿ, ಅವರಿಗೋಸ್ಕರ ಪ್ರಾರ್ಥಿಸಿ.
ನಿಮ್ಮ ಹೃದಯದಲ್ಲಿರುವುದನ್ನೇ ಮಕ್ಕಳಿಗೆ ಕಲಿಸಿ
6. ಹೆತ್ತವರು ಯೆಹೋವನ ಬಗ್ಗೆ ಮತ್ತು ಬೈಬಲಿನ ಬಗ್ಗೆ ಕಲಿಯುತ್ತಾ ಹೋದರೆ ಮಕ್ಕಳಿಗೆ ಕಲಿಸಲು ಹೇಗೆ ಸಹಾಯವಾಗುತ್ತದೆ?
6 ಯೇಸು ಕಲಿಸುವಾಗ ಜನರಿಗೆ ತುಂಬ ಖುಷಿಯಾಗುತ್ತಿತ್ತು. ಯಾಕೆಂದರೆ ಆತನಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಮತ್ತು ಶಾಸ್ತ್ರಗ್ರಂಥದ ಒಳ್ಳೇ ಪರಿಚಯವಿತ್ತು. ಯೇಸು ತಮ್ಮನ್ನು ಸಹ ಪ್ರೀತಿಸುತ್ತಿದ್ದಾನೆ ಎಂದು ಜನರಿಗೆ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಹಾಗಾಗಿ ಜನರು ಆತನಿಗೆ ಜಾಗ್ರತೆಯಿಂದ ಕಿವಿಗೊಟ್ಟರು. (ಲೂಕ 24:32; ಯೋಹಾ. 7:46) ಅದೇ ರೀತಿ, ಯೆಹೋವನ ಕಡೆ ನಿಮಗಿರುವ ಪ್ರೀತಿಯನ್ನು ನಿಮ್ಮ ಮಕ್ಕಳು ನೋಡುವಾಗ ಅವರೂ ಆತನನ್ನು ಪ್ರೀತಿಸಲು ಕಲಿಯುತ್ತಾರೆ. (ಧರ್ಮೋಪದೇಶಕಾಂಡ 6:5-8; ಲೂಕ 6:45 ಓದಿ.) ಆದ್ದರಿಂದ ಬೈಬಲನ್ನು ಚೆನ್ನಾಗಿ ಅಧ್ಯಯನ ಮಾಡಿ. ನಮ್ಮ ಪ್ರಕಾಶನಗಳನ್ನು ತಪ್ಪದೆ ಓದಿ. ಯೆಹೋವನು ಸೃಷ್ಟಿ ಮಾಡಿದ ವಿಷಯಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಿ. (ಮತ್ತಾ. 6:26, 28) ಯೆಹೋವನ ಬಗ್ಗೆ ಎಷ್ಟು ಹೆಚ್ಚು ತಿಳಿದುಕೊಳ್ಳುತ್ತಿರೋ ಅಷ್ಟು ಹೆಚ್ಚು ನಿಮ್ಮ ಮಕ್ಕಳಿಗೆ ಕಲಿಸಬಹುದು.—ಲೂಕ 6:40.
7, 8. (ಎ) ನೀವು ಯೆಹೋವನ ಬಗ್ಗೆ ಹೊಸ ವಿಷಯ ಕಲಿತರೆ ತಕ್ಷಣ ಏನು ಮಾಡಬಹುದು? (ಬಿ) ಕೆಲವು ಹೆತ್ತವರು ಇದನ್ನು ಹೇಗೆ ಮಾಡಿದ್ದಾರೆ?
7 ನೀವು ಯೆಹೋವನ ಬಗ್ಗೆ ಹೊಸ ವಿಷಯ ಕಲಿತರೆ ನಿಮ್ಮ ಮಕ್ಕಳಿಗೂ ಅದನ್ನು ತಿಳಿಸಿ. ಇದನ್ನು ಕೇವಲ ಕುಟುಂಬ ಆರಾಧನೆ ಮಾಡುವಾಗ ಅಥವಾ ಕೂಟಗಳಿಗೆ ತಯಾರಿ ಮಾಡುವಾಗ ಮಾತ್ರವಲ್ಲ ಬೇರೆ ಸಮಯದಲ್ಲೂ ಮಾಡಿ. ಇದನ್ನೇ ಅಮೆರಿಕದ ಒಬ್ಬ ತಂದೆತಾಯಿ ಮಾಡುತ್ತಾರೆ. ಅವರು ಸೃಷ್ಟಿಯ ಸೊಬಗನ್ನು ನೋಡುವಾಗ ಮತ್ತು ರುಚಿಕರವಾದ ಊಟವನ್ನು ಸವಿಯುವಾಗ ತಮ್ಮ ಮಕ್ಕಳೊಂದಿಗೆ ಯೆಹೋವನ ಕುರಿತು ಮಾತಾಡುತ್ತಾರೆ. ಅವರನ್ನುವುದು: “ಯೆಹೋವನು ನಮಗಾಗಿ ತೋರಿಸಿರುವ ಪ್ರೀತಿ ಮತ್ತು ಮುಂದಾಲೋಚನೆಯನ್ನು ಆತನು ಕೊಟ್ಟಿರುವ ಎಲ್ಲ ವಿಷಯಗಳಲ್ಲಿ ಕಾಣಬಹುದೆಂದು ನಮ್ಮ ಮಕ್ಕಳಿಗೆ ನೆನಪು ಹುಟ್ಟಿಸುತ್ತಿರುತ್ತೇವೆ.” ದಕ್ಷಿಣ ಆಫ್ರಿಕದ ದಂಪತಿಯೊಬ್ಬರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ತೋಟದಲ್ಲಿ ಕೆಲಸಮಾಡುವಾಗ ಸೃಷ್ಟಿಯ ಬಗ್ಗೆ ಮಾತನಾಡಲು
ಇಷ್ಟಪಡುತ್ತಾರೆ. ಉದಾಹರಣೆಗೆ, ಒಂದು ಚಿಕ್ಕ ಬೀಜವನ್ನು ತೋರಿಸಿ ಅದು ಸಸಿಯಾಗುವುದು ನಿಜಕ್ಕೂ ಒಂದು ಅದ್ಭುತವೆಂದು ಅವರು ಹೇಳುತ್ತಾರೆ. ಆ ದಂಪತಿ ಹೇಳುವುದು: “ಹೀಗೆ ಮಾತಾಡುವುದರಿಂದ ನಮ್ಮ ಮಕ್ಕಳಲ್ಲಿ ಜೀವದ ಮತ್ತು ಅದರ ಅದ್ಭುತ ರಚನೆಯ ಕಡೆಗೆ ಗೌರವ ಬೆಳೆಸಲು ಪ್ರಯತ್ನಿಸಿದ್ದೇವೆ.”8 ಆಸ್ಟ್ರೇಲಿಯದಲ್ಲಿರುವ ಒಬ್ಬ ತಂದೆ 10 ವರ್ಷದ ಮಗನನ್ನು ಮ್ಯೂಸಿಯಮ್‌ಗೆ ಕರೆದುಕೊಂಡು ಹೋದನು. ತನ್ನ ಮಗನ ನಂಬಿಕೆಯನ್ನು ಬಲಪಡಿಸಲು ಮತ್ತು ಯೆಹೋವನೇ ಸೃಷ್ಟಿಕರ್ತನು ಎಂದು ರುಜುಪಡಿಸಲು ಆ ಸಮಯವನ್ನು ಬಳಸಿದನು. ಆ ತಂದೆ ಹೇಳಿದ್ದು: “ಅಲ್ಲಿ ಪ್ರದರ್ಶನಕ್ಕೆ ಇಡಲಾದ ಪ್ರಾಚೀನ ಸಾಗರ ಜೀವಿಗಳಾಗಿದ್ದ ಅಮೊನಾಯ್ಡ್ಸ್ ಮತ್ತು ಟ್ರಿಲೋಬೈಟ್ಸ್ ನ್ನು ನೋಡಿದೆವು. ಆ ಅಳಿದುಹೋದ ಜೀವಿಗಳ ಅಂದಚಂದವನ್ನು, ಜಟಿಲತೆಯನ್ನು ಮತ್ತು ಅವು ಸಂಪೂರ್ಣವಾಗಿ ಇರುವುದನ್ನು ನೋಡಿದಾಗ ಆಶ್ಚರ್ಯವಾಯಿತು. ಈಗಿರುವ ಸೃಷ್ಟಿಗೆ ಹೋಲಿಸುವಾಗ ಅವೇನೂ ಕಮ್ಮಿ ಇರಲಿಲ್ಲ. ಸರಳ ಜೀವಿಯಿಂದ ಜಟಿಲ ಜೀವಿಯಾಗಿ ವಿಕಾಸವಾಗುತ್ತದೆ ಎನ್ನುವುದು ಒಂದುವೇಳೆ ನಿಜವಾಗಿದ್ದರೆ, ಈ ಪ್ರಾಚೀನ ಜೀವಿಗಳ ರಚನೆ ಹೇಗೆ ಈಗಾಗಲೇ ಇಷ್ಟೊಂದು ಜಟಿಲವಾಗಿದೆ? ಈ ಹೊಸ ವಿಷಯ ನನ್ನ ಮನಸ್ಸಿಗೆ ಖುಷಿಕೊಟ್ಟಿತು. ಇದನ್ನು ನನ್ನ ಮಗನೊಟ್ಟಿಗೂ ಹಂಚಿಕೊಂಡೆ.”
ದೃಷ್ಟಾಂತಗಳನ್ನು ಬಳಸಿ
9. ದೃಷ್ಟಾಂತಗಳನ್ನು ಬಳಸುವುದು ಯಾಕೆ ಒಳ್ಳೇದು? ಒಬ್ಬ ತಾಯಿ ಯಾವ ದೃಷ್ಟಾಂತವನ್ನು ಬಳಸಿದಳು?
9 ಯೇಸು ಯಾವಾಗಲೂ ದೃಷ್ಟಾಂತಗಳನ್ನು ಬಳಸುತ್ತಿದ್ದನು. ಪ್ರಾಮುಖ್ಯ ಪಾಠವನ್ನು ಕಲಿಸುವಾಗ ಒಂದು ಕಥೆಯನ್ನೋ ಅಥವಾ ಉದಾಹರಣೆಯನ್ನೋ ಹೇಳುತ್ತಿದ್ದನು. (ಮತ್ತಾ. 13:34, 35) ನೀವು ದೃಷ್ಟಾಂತಗಳನ್ನು ಬಳಸುವಾಗ ಮಕ್ಕಳು ತಮ್ಮ ಕಲ್ಪನಾಶಕ್ತಿಯನ್ನು ಬಳಸುವಂತೆ ಮಾಡುತ್ತೀರಿ. ಹಾಗೆ ಮಾಡುವಾಗ ನೀವು ಕಲಿಸುತ್ತಿರುವ ಪಾಠದ ಕುರಿತು ಯೋಚಿಸಲು, ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದನ್ನು ನೆನಪಿನಲ್ಲಿಡಲು ಅವರಿಗಾಗುತ್ತದೆ. ಆಗ ನೀವು ಕಲಿಸುವ ಪಾಠವನ್ನು ಸಹ ಅವರು ಆನಂದಿಸುತ್ತಾರೆ. ಉದಾಹರಣೆಗೆ, ಜಪಾನಿನಲ್ಲಿರುವ ಒಬ್ಬ ತಾಯಿ ತನ್ನ ಇಬ್ಬರು ಗಂಡುಮಕ್ಕಳಿಗೆ ಯೆಹೋವನಿಗೆ ನಮ್ಮ ಮೇಲೆ ಎಷ್ಟು ಕಾಳಜಿಯಿದೆ ಎಂದು ಕಲಿಸಬೇಕಿತ್ತು. ಅದಕ್ಕಾಗಿ ಅವಳು ತನ್ನ 8 ಮತ್ತು 10 ವರ್ಷದ ಮಕ್ಕಳಿಗೆ ಅರ್ಥವಾಗುವಂಥ ಒಂದು ದೃಷ್ಟಾಂತವನ್ನು ಬಳಸಿದಳು. ಅವರಿಗೆ ಹಾಲು, ಸಕ್ಕರೆ ಮತ್ತು ಕಾಫಿ ಪುಡಿ ಕೊಟ್ಟು ತನಗೆ ಒಂದು ಕಪ್ ಕಾಫಿ ಮಾಡಿಕೊಡುವಂತೆ ಹೇಳಿದಳು. ಅವಳು ಹೇಳುವುದು: “ನಾನು ಕೊಟ್ಟ ಕೆಲಸವನ್ನು ಮಾಡಲು ಅವರು ತುಂಬ ಜಾಗ್ರತೆವಹಿಸಿದರು. ಆಗ ನಾನು ಅವರಿಗೆ ಯಾಕಿಷ್ಟು ಜಾಗ್ರತೆಯಿಂದ ಮಾಡ್ತಾ ಇದ್ದೀರ ಅಂತ ಕೇಳಿದೆ. ಅದಕ್ಕವರು, ನನಗೆ ಯಾವ ತರದ ಕಾಫಿ ಇಷ್ಟವಾಗುತ್ತದೋ ಅಂಥ ಕಾಫಿಮಾಡಲಿಕ್ಕಾಗಿ ಅಂದ್ರು. ಆಗ ನಾನು ಅವರಿಗೆ ಹೀಗಂದೆ: ದೇವರು ಸಹ ಭೂಮಿಯ ವಾತಾವರಣವನ್ನು ನಮಗೆ ಹೇಗೆ ಬೇಕೋ ಹಾಗೆ ಸೃಷ್ಟಿ ಮಾಡಿದ್ದಾನೆ. ಅದರಲ್ಲಿ ಯಾವ್ಯಾವ ಅನಿಲವನ್ನು ಎಷ್ಟೆಷ್ಟು ಇಡಬೇಕೋ ಅಷ್ಟಷ್ಟೇ ಇಟ್ಟಿದ್ದಾನೆ. ಹೀಗೆ ದೇವರು ಜಾಗ್ರತೆಯಿಂದ ಭೂವಾತಾವರಣವನ್ನು ಮಾಡಿದ್ದಾನೆ.” ಈ ಪಾಠವನ್ನು ಮಕ್ಕಳು ತುಂಬ ಆನಂದಿಸಿದರು ಮತ್ತು ಇವತ್ತಿಗೂ ಅದನ್ನು ಮರೆತಿಲ್ಲ.
10, 11. (ಎ) ಸೃಷ್ಟಿಕರ್ತನು ಇದ್ದಾನೆಂದು ಮಕ್ಕಳಿಗೆ ರುಜುಪಡಿಸಲು ಯಾವ ದೃಷ್ಟಾಂತವನ್ನು ಬಳಸಬಹುದು? (ಆರಂಭದ ಚಿತ್ರ ನೋಡಿ.) (ಬಿ) ನೀವು ಯಾವ ದೃಷ್ಟಾಂತಗಳನ್ನು ಬಳಸಿದ್ದೀರಾ?
10 ಸೃಷ್ಟಿಕರ್ತನೊಬ್ಬ ಇರಲೇಬೇಕು ಎಂದು ನಿಮ್ಮ ಮಕ್ಕಳಿಗೆ ಅರ್ಥಮಾಡಿಸಲು ಯಾವ ದೃಷ್ಟಾಂತವನ್ನು ಬಳಸಬಹುದು? ನೀವು ಮಗುವಿನೊಟ್ಟಿಗೆ ಸೇರಿ ಕೇಕ್ ತಯಾರಿಸಬಹುದು. ಅದಕ್ಕಾಗಿ ಏನೆಲ್ಲ ಬೇಕು, ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳುವುದು ಪ್ರಾಮುಖ್ಯವೆಂದು ಮಗುವಿಗೆ ತಿಳಿಸಿ. ನಂತರ ಒಂದು ಸೇಬಿನ ಹಣ್ಣನ್ನು ಅಥವಾ ಬೇರೆ ಯಾವುದಾದರೂ ಹಣ್ಣನ್ನು ಮಗುವಿಗೆ ಕೊಟ್ಟು, “ಇದನ್ನು ಹೇಗೆ ತಯಾರಿಸಲಾಯಿತು ಅಂತ ಗೊತ್ತಾ?” ಎಂದು ಕೇಳಿ. ನಂತರ ಅದನ್ನು ಎರಡು ಭಾಗಮಾಡಿ ಅದರ ಬೀಜವನ್ನು ಮಗುವಿನ ಕೈಯಲ್ಲಿಟ್ಟು, ಇದರಿಂದ ಹಣ್ಣನ್ನು ತಯಾರಿಸಲಾಯಿತು ಎಂದು ಹೇಳಿ. ಆ ಬೀಜದಲ್ಲಿ ಸೇಬಿನ ತಯಾರಿಗಾಗಿ ಬೇಕಾದ ಎಲ್ಲ ವಿಷಯಗಳು ಇರುತ್ತದೆಂದು ವಿವರಿಸಿ. ಆದರೆ ಸೇಬಿನ ಹಣ್ಣನ್ನು ತಯಾರಿಸುವುದು ಕೇಕ್ ಮಾಡಿದಷ್ಟು ಸುಲಭವಲ್ಲ ಅಂತ ಹೇಳಿ. ನಂತರ, “ಕೇಕ್ ಹೇಗೆ ತಯಾರಿಸಬೇಕು ಅಂತ ಯಾರೋ ಒಬ್ಬರು ಬರೆದಿರುತ್ತಾರೆ. ಜೀವದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು (ಇಂಗ್ಲಿಷ್) ಎಂಬ ಕಿರುಹೊತ್ತಗೆಯ ಪುಟ 10ರಿಂದ 20ರಲ್ಲಿರುವ ಕೆಲವು ಚಿತ್ರಗಳನ್ನು ಮತ್ತು ಉದಾಹರಣೆಗಳನ್ನು ಬಳಸಿ ವಿವರಿಸಬಹುದು.
ಅದೇರೀತಿ ಸೇಬಿನ ಹಣ್ಣು ಹೇಗೆ ತಯಾರಾಗುತ್ತದೆ ಅಂತ ಯಾರೋ ಒಬ್ಬರು ಬರೆದಿರಬೇಕಲ್ವಾ?” ಎಂದು ಕೇಳಿ. ನಿಮಗೆ ವಯಸ್ಸಿಗೆ ಬಂದಿರುವ ಮಕ್ಕಳಿರುವುದಾದರೆ ಇನ್ನು ಹೆಚ್ಚು ವಿವರಿಸುತ್ತಾ ಹೀಗೆ ಹೇಳಬಹುದು: ಕೇವಲ ಈ ಒಂದು ಸೇಬಿನ ತಯಾರಿಕೆಯ ಬಗ್ಗೆ ಮಾತ್ರವಲ್ಲ, ಹಲವಾರು ಹಣ್ಣುಗಳಿರುವ ಇಡೀ ಸೇಬಿನ ಮರದ ತಯಾರಿಕೆಯ ಮಾಹಿತಿಯು ಆ ಬೀಜದ ಡಿಎನ್‌ಎಯಲ್ಲಿ ಇರುತ್ತದೆ. ನೀವಿದನ್ನು11 ಎಚ್ಚರ! ಪತ್ರಿಕೆಯಲ್ಲಿ ಬರುವ “ವಿಕಾಸವೇ? ವಿನ್ಯಾಸವೇ?” ಲೇಖನಗಳನ್ನು ಹೆಚ್ಚಿನ ಹೆತ್ತವರು ಮಕ್ಕಳೊಟ್ಟಿಗೆ ಓದುತ್ತಾರೆ. ಮಕ್ಕಳು ಚಿಕ್ಕವರಾಗಿದ್ದರೆ ಅದರಲ್ಲಿರುವ ಮಾಹಿತಿಯನ್ನು ಸರಳವಾಗಿ ವಿವರಿಸಬಹುದು. ಉದಾಹರಣೆಗೆ, ಡೆನ್ಮಾರ್ಕಿನಲ್ಲಿರುವ ಒಂದು ದಂಪತಿ ವಿಮಾನಗಳನ್ನು ಹಕ್ಕಿಗಳಿಗೆ ಹೋಲಿಸಿ ಮಕ್ಕಳಿಗೆ ಹೇಳಿದ್ದು: “ವಿಮಾನಗಳು ನೋಡಲಿಕ್ಕೆ ಹಕ್ಕಿಗಳ ತರಾನೇ ಕಾಣ್ತವೆ. ಆದರೆ ಅವು ಹಕ್ಕಿಗಳ ತರ ಮೊಟ್ಟೆಯಿಟ್ಟು ಮರಿ ವಿಮಾನಗಳನ್ನು ಮಾಡುತ್ತವಾ? ಹಕ್ಕಿಗಳಿಗೆ ವಿಮಾನಗಳ ತರ ಇಳಿಯಲು ವಿಶೇಷವಾದ ಮೈದಾನ ಬೇಕಾ? ವಿಮಾನದ ಶಬ್ದಕ್ಕೂ ಹಕ್ಕಿಗಳ ಇಂಪಾದ ದನಿಗೂ ಎಷ್ಟು ವ್ಯತ್ಯಾಸ ಇದೆಯಲ್ವಾ? ಹಾಗಾದರೆ ಯಾರು ಹೆಚ್ಚು ಬುದ್ಧಿವಂತ? ವಿಮಾನವನ್ನು ತಯಾರಿಸಿದವನಾ? ಹಕ್ಕಿಗಳನ್ನು ಸೃಷ್ಟಿಸಿದವನಾ?” ಈ ರೀತಿ ಉದಾಹರಣೆಗಳನ್ನು ಕೊಟ್ಟು ನಿಮ್ಮ ಮಕ್ಕಳಿಗೆ ವಿವರಿಸುವಾಗ ಮತ್ತು ಪ್ರಶ್ನೆಗಳನ್ನು ಕೇಳುವಾಗ ಅವರು ತಮ್ಮ ‘ಬುದ್ಧಿಯನ್ನು’ ಅಂದರೆ ವಿವೇಚನಾಶಕ್ತಿಯನ್ನು ಬಳಸಲು ಸಹಾಯಮಾಡುತ್ತೀರಿ. ಯೆಹೋವನ ಮೇಲಿನ ಅವರ ನಂಬಿಕೆಯನ್ನು ಹೆಚ್ಚು ಮಾಡುತ್ತೀರಿ.—ಜ್ಞಾನೋ. 2:10-12.
12. ಬೈಬಲ್ ಏನೇ ಹೇಳುವುದಾದರೂ ಅದು ನಿಜವೆಂದು ದೃಷ್ಟಾಂತಗಳನ್ನು ಬಳಸಿ ನಿಮ್ಮ ಮಕ್ಕಳಿಗೆ ಹೇಗೆ ವಿವರಿಸುತ್ತೀರಿ?
12 ಬೈಬಲ್ ಯಾವುದನ್ನೆಲ್ಲ ಸರಿಯೆಂದು ಹೇಳುತ್ತದೋ ಅವುಗಳನ್ನು ಸಹ ನೀವು ದೃಷ್ಟಾಂತ ಬಳಸಿ ವಿವರಿಸಬಹುದು. ಉದಾಹರಣೆಗೆ, ಯೋಬ 26:7ನ್ನು (ಓದಿ) ನೀವು ಓದಬಹುದು. ಈ ಮಾತನ್ನು ಸ್ವತಃ ಯೆಹೋವನೇ ಹೇಳಿದ್ದಾನೆಂದು ಕೇವಲ ಹೇಳಿದರೆ ಸಾಕಾಗದು. ಅದರ ಕುರಿತು ಮಕ್ಕಳು ತಮ್ಮ ಕಲ್ಪನಾಶಕ್ತಿಯನ್ನು ಬಳಸುವಂತೆ ಸಹಾಯಮಾಡಬೇಕು. ಆಕಾಶದಲ್ಲಿ ಭೂಮಿ ತೇಲುತ್ತಿದೆ ಎಂದು ಯೋಬನ ಸಮಯದಲ್ಲಿ ಯಾರೂ ನಂಬುತ್ತಿರಲಿಲ್ಲ ಎಂದು ವಿವರಿಸಬಹುದು. ಚೆಂಡಾಗಲಿ, ಕಲ್ಲಾಗಲಿ, ಬೇರೇನೇ ಆಗಲಿ ಹಾಗೇ ಗಾಳಿಯಲ್ಲಿ ತೇಲುವುದಿಲ್ಲ, ಅವುಗಳನ್ನು ಯಾವುದರ ಮೇಲಾದರೂ ಇಡಲೇಬೇಕು. ಆಗ ದೂರದರ್ಶಕ, ಗಗನನೌಕೆಗಳಿರಲಿಲ್ಲ. ಹಾಗಾಗಿ ಭೂಮಿ ಯಾವುದೇ ಆಧಾರವಿಲ್ಲದೆ ತೂಗುತ್ತಿದೆ ಅಂತ ಯಾರೂ ರುಜುಪಡಿಸಿರಲಿಲ್ಲ. ಇದರಿಂದ ಏನು ಕಲಿಯಬಹುದೆಂದರೆ, ಬೈಬಲನ್ನು ಅನೇಕ ವರ್ಷಗಳ ಮೊದಲೇ ಬರೆದಿರುವುದಾದರೂ ಅದು ಇವತ್ತಿಗೂ ನಿಜವಾಗಿದೆ. ಯಾಕೆಂದರೆ ಅದು ಯೆಹೋವನ ಗ್ರಂಥ.—ನೆಹೆ. 9:6.
ಬೈಬಲಿನ ಪ್ರಕಾರ ನಡೆಯುವುದು ಯಾಕೆ ಒಳ್ಳೇದು ಅಂತ ಮಕ್ಕಳಿಗೆ ಕಲಿಸಿ
13, 14. ಬೈಬಲಿನ ಪ್ರಕಾರ ನಡೆದರೆ ಒಳ್ಳೇದು ಅಂತ ಹೆತ್ತವರು ಮಕ್ಕಳಿಗೆ ಹೇಗೆ ಕಲಿಸಬಹುದು?
13 ಬೈಬಲಿನ ಪ್ರಕಾರ ನಡೆದರೆ ಜೀವನದಲ್ಲಿ ಸಂತೋಷವಾಗಿರುತ್ತೇವೆ ಅಂತ ಮಕ್ಕಳಿಗೆ ಮನದಟ್ಟು ಮಾಡಿಸುವುದು ಸಹ ಪ್ರಾಮುಖ್ಯ. (ಕೀರ್ತನೆ 1:1-3 ಓದಿ.) ಉದಾಹರಣೆಗೆ, ಮಕ್ಕಳಿಗೆ ಹೀಗೆ ಕೇಳಿ: “ಊಹಿಸಿ, ನೀವೊಂದು ದ್ವೀಪಕ್ಕೆ ಹೋಗಿ ಜೀವಿಸಬೇಕು. ಆಗ ಅಲ್ಲಿ ನಿಮ್ಮೊಟ್ಟಿಗೆ ಜೀವಿಸಲಿಕ್ಕಾಗಿ ಎಂಥವರನ್ನು ಆರಿಸಿಕೊಳ್ಳುತ್ತೀರ? ಎಲ್ಲರೂ ಹೊಂದಾಣಿಕೆಯಿಂದ ಜೀವಿಸಬೇಕಾದರೆ ನೀವು ಆರಿಸಿಕೊಳ್ಳುವಂಥ ಜನರಲ್ಲಿ ಎಂಥ ಗುಣಗಳಿದ್ದರೆ ಒಳ್ಳೆಯದು?” ನಂತರ ಯೆಹೋವನು ಹೊಸ ಲೋಕದಲ್ಲಿ ಎಂಥ ಜನರು ಇರಬೇಕೆಂದು ಬಯಸುತ್ತಾನೆಂದು ಮಕ್ಕಳಿಗೆ ತಿಳಿಸಲು ಗಲಾತ್ಯ 5:19-23ನ್ನು ಓದಿ.
14 ಹೀಗೆ ಮಾಡುವ ಮೂಲಕ ಮಕ್ಕಳಿಗೆ ಈ ಎರಡು ಪ್ರಾಮುಖ್ಯ ಪಾಠಗಳನ್ನು ಕಲಿಸಬಹುದು. ಒಂದು, ಬೈಬಲಿನ ಪ್ರಕಾರ ನಡೆದುಕೊಂಡರೆ ನಿಜವಾದ ಶಾಂತಿ ಮತ್ತು ಸಮಾಧಾನದಿಂದ ಈಗ ಜೀವನ ನಡೆಸಬಹುದು. ಎರಡು, ಯೆಹೋವನು ನಮ್ಮನ್ನು ಈಗಲೇ ಹೊಸಲೋಕದ ಜೀವನಕ್ಕೆ ತಯಾರುಮಾಡುತ್ತಿದ್ದಾನೆ. (ಯೆಶಾ. 54:13; ಯೋಹಾ. 17:3) ಬೈಬಲಿನಿಂದ ನಮ್ಮ ಸಹೋದರರು ಹೇಗೆ ಸಹಾಯ ಪಡೆದುಕೊಂಡಿದ್ದಾರೆ ಎಂದು ಸಹ ಮಕ್ಕಳಿಗೆ ತೋರಿಸಿಕೊಡಬಹುದು. ಉದಾಹರಣೆಗೆ, ನಮ್ಮ ಪ್ರಕಾಶನಗಳಲ್ಲಿ ಬರುವ ಜೀವನ ಕಥೆಯನ್ನೋ, ಕಾವಲಿನಬುರುಜು ಪತ್ರಿಕೆಯಲ್ಲಿ ಬರುವ “ಬದುಕನ್ನೇ ಬದಲಾಯಿಸಿತು ಬೈಬಲ್” ಸರಣಿ ಲೇಖನಗಳನ್ನೋ ತೋರಿಸಬಹುದು. ಇದಲ್ಲದೇ ನಮ್ಮ ಸಭೆಯಲ್ಲಿರುವ ಸಹೋದರ ಸಹೋದರಿಯರ ಅನುಭವವನ್ನು ಸಹ ಕೇಳಬಹುದು. ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಯೆಹೋವನನ್ನು ಮೆಚ್ಚಿಸುವಂತೆ ನಡೆಯಲು ಅವರಿಗೆ ಬೈಬಲ್ ಹೇಗೆ ಸಹಾಯಮಾಡಿತೆಂದು ಕೇಳಬಹುದು.—ಇಬ್ರಿ. 4:12.
15. ಮಕ್ಕಳಿಗೆ ಕಲಿಸಲು ನಿಮಗೆ ಯಾವುದು ಸಹಾಯಮಾಡುತ್ತದೆ?
15 ನಿಮ್ಮ ಕಲ್ಪನಾಶಕ್ತಿಯನ್ನು ಬಳಸಿ ಮಕ್ಕಳಿಗೆ ಕಲಿಸುವಾಗ ಅವರ ಆಸಕ್ತಿ ಮತ್ತು ಕುತೂಹಲ ಹೆಚ್ಚುತ್ತದೆ. ಹಾಗಾಗಿ ಅವರಿಗೆ ಕಲಿಸುವಾಗ ಬೇರೆಬೇರೆ ವಿಧಾನಗಳನ್ನು ಬಳಸಿ.
ಆಗ ಮಕ್ಕಳು ಯೆಹೋವನ ಬಗ್ಗೆ ಕಲಿಯಲು, ಆತನಿಗೆ ಹತ್ತಿರವಾಗಲು ಸಾಧ್ಯವಾಗುತ್ತದೆ ಮತ್ತು ನೀವು ಕಲಿಸುವ ಪಾಠಗಳನ್ನೂ ಆನಂದಿಸುತ್ತಾರೆ. ಅವರು ದೊಡ್ಡವರಾಗುತ್ತಾ ಹೋದಂತೆ ಹೀಗೆ ಮಾಡುವುದನ್ನು ನಿಲ್ಲಿಸದೆ ಮುಂದುವರಿಸಿ. “ಈಗಾಗಲೇ ಕಲಿಸಿರುವ ವಿಷಯಗಳನ್ನು ಮತ್ತೆಮತ್ತೆ ಹೊಸ ವಿಧಾನಗಳನ್ನು ಬಳಸಿ ಕಲಿಸಿ. ಹೀಗೆ ಮಾಡಲು ಬೇಸತ್ತು ಹೋಗಬೇಡಿ” ಅಂತ ಒಬ್ಬ ತಂದೆ ಹೇಳಿದರು.ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಿ, ಮಕ್ಕಳೊಂದಿಗೆ ತಾಳ್ಮೆಯಿಂದಿರಿ
16. (ಎ) ಮಕ್ಕಳಿಗೆ ಕಲಿಸುವಾಗ ತಾಳ್ಮೆಯಿಂದ ಇರುವುದು ಯಾಕೆ ಪ್ರಾಮುಖ್ಯ? (ಬಿ) ಕೆಲವು ಹೆತ್ತವರು ಹೇಗೆ ತಾಳ್ಮೆಯನ್ನು ತೋರಿಸಿದ್ದಾರೆ?
16 ಯೆಹೋವನ ಪವಿತ್ರಾತ್ಮದ ಸಹಾಯದಿಂದ ಮಕ್ಕಳಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಲು ಸಾಧ್ಯ. (ಗಲಾ. 5:22, 23) ಆದರೆ ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಹಾಗಾಗಿ ಮಕ್ಕಳೊಟ್ಟಿಗೆ ತಾಳ್ಮೆಯಿಂದಿದ್ದು ಕಲಿಸುತ್ತಾ ಇರಿ. ಜಪಾನಿನಲ್ಲಿರುವ ತಂದೆಯೊಬ್ಬನಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಆ ತಂದೆ ಹೀಗಂದರು: “ನಾನು, ನನ್ನ ಹೆಂಡತಿ ಮಕ್ಕಳಿಗೆ ತುಂಬ ಗಮನಕೊಡುತ್ತಿದ್ವಿ. ಕೂಟಗಳಿದ್ದ ದಿನಗಳನ್ನು ಬಿಟ್ಟು ಬೇರೆಲ್ಲ ದಿನಗಳಂದು 15 ನಿಮಿಷ ನಾನು ಅವರೊಟ್ಟಿಗೆ ಕೂತು ಅಧ್ಯಯನ ಮಾಡುತ್ತಿದ್ದೆ. ಅವರಿನ್ನೂ ಚಿಕ್ಕವರಿರುವಾಗಲೇ ಹೀಗೆ ಮಾಡುತ್ತಿದ್ದೆ. 15 ನಿಮಿಷ ಅಧ್ಯಯನ ಮಾಡುವುದು ನನಗಾಗಲಿ ಅವರಿಗಾಗಲಿ ಅಷ್ಟು ಕಷ್ಟ ಅನಿಸಲಿಲ್ಲ.” ಒಬ್ಬ ಸಂಚರಣ ಮೇಲ್ವಿಚಾರಕನು ಹೀಗೆ ಹೇಳಿದನು: “ಹದಿವಯಸ್ಸಿನಲ್ಲಿದ್ದಾಗ ನನಗೆ ತುಂಬ ಪ್ರಶ್ನೆಗಳು ಮತ್ತು ಸಂಶಯಗಳು ಇದ್ದವು. ಆದರೆ ಯಾವತ್ತೂ ಅವುಗಳನ್ನು ಬಾಯಿಬಿಟ್ಟು ಕೇಳಲಿಲ್ಲ. ಸಮಯ ಕಳೆದಂತೆ ಕೂಟಗಳಲ್ಲಿ, ವೈಯಕ್ತಿಕ ಅಥವಾ ಕುಟುಂಬ ಅಧ್ಯಯನಗಳಲ್ಲಿ ಹೆಚ್ಚಿನ ವಿಷಯಗಳಿಗೆ ಉತ್ತರ ಸಿಕ್ಕಿತು. ಯಾಕೆ ಹೆತ್ತವರು ಮಕ್ಕಳಿಗೆ ಕಲಿಸುತ್ತಾ ಇರಬೇಕು ಅಂತ ಇದರಿಂದ ಗೊತ್ತಾಗುತ್ತದೆ.”
17. (ಎ) ಹೆತ್ತವರು ತಮ್ಮ ಸ್ವಂತ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಯಾಕೆ ಪ್ರಾಮುಖ್ಯ? (ಬಿ) ಯೆಹೋವನಲ್ಲಿ ನಂಬಿಕೆಯನ್ನಿಡಲು ಬರ್ಮುಡ ದೇಶದಲ್ಲಿರುವ ಒಬ್ಬ ತಂದೆತಾಯಿ ಹೇಗೆ ಅವರ ಮಕ್ಕಳಿಗೆ ನೆರವಾದರು?
17 ನಿಮ್ಮನ್ನು ನೋಡಿಯೇ ನಿಮ್ಮ ಮಕ್ಕಳು ಕಲಿಯುತ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಯೆಹೋವನ ಮೇಲೆ ನಿಮಗೆಷ್ಟು ನಂಬಿಕೆಯಿದೆ, ನೀವೇನು ಮಾಡುತ್ತೀರಿ ಎಂದು ನಿಮ್ಮ ಮಕ್ಕಳು ಗಮನಿಸುತ್ತಿರುತ್ತಾರೆ. ಹಾಗಾಗಿ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತಾ ಇರಿ. ಯೆಹೋವನು ನಿಮಗೆ ಎಷ್ಟು ನೈಜ ವ್ಯಕ್ತಿಯಾಗಿದ್ದಾನೆಂದು ನಿಮ್ಮ ಮಕ್ಕಳಿಗೆ ಗೊತ್ತಾಗಲಿ. ಉದಾಹರಣೆಗೆ ಬರ್ಮುಡ ಎಂಬ ದೇಶದಲ್ಲಿರುವ ಒಬ್ಬ ತಂದೆತಾಯಿ ಯಾವುದೋ ವಿಷಯಕ್ಕೆ ಚಿಂತಿತರಾಗಿದ್ದರು. ಆಗ ಅವರು ತಮ್ಮ ಹೆಣ್ಣು ಮಕ್ಕಳೊಂದಿಗೆ ಸೇರಿ ಯೆಹೋವನಲ್ಲಿ ಆ ಚಿಂತೆಯ ಬಗ್ಗೆ ಪ್ರಾರ್ಥಿಸಿ, ತಮ್ಮನ್ನು ಮಾರ್ಗದರ್ಶಿಸುವಂತೆ ಬೇಡಿಕೊಂಡರು. ಅಲ್ಲದೇ, ಮಕ್ಕಳಿಗೂ ಪ್ರಾರ್ಥಿಸುವಂತೆ ಉತ್ತೇಜಿಸಿದರು. “ನಾವು ನಮ್ಮ ದೊಡ್ಡ ಮಗಳಿಗೆ, ‘ಯೆಹೋವನಲ್ಲಿ ನಿನಗೆ ಸಂಪೂರ್ಣ ನಂಬಿಕೆಯಿರಲಿ. ದೇವರ ಸೇವೆಯಲ್ಲಿ ಮಗ್ನಳಾಗಿರು, ಯಾವುದಕ್ಕೂ ಹೆಚ್ಚು ಚಿಂತಿಸಬೇಡ’ ಎಂದು ಹೇಳಿದೆವು. ಇದೆಲ್ಲದರ ಫಲಿತಾಂಶವನ್ನು ಕಣ್ಣಾರೆ ಕಂಡ ಅವಳು, ಸಹಾಯಮಾಡುವವನು ಯೆಹೋವನೇ ಎಂದು ತಿಳಿದುಕೊಂಡಳು. ಇದು ಯೆಹೋವನ ಮತ್ತು ಬೈಬಲಿನ ಮೇಲಿನ ಅವಳ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿತು.”
18. ಹೆತ್ತವರು ಏನು ಮರೆಯಬಾರದು?
18 ಹೆತ್ತವರೇ, ಒತ್ತಾಯದಿಂದ ಮಕ್ಕಳಲ್ಲಿ ನಂಬಿಕೆ ಬೆಳೆಸಲು ಸಾಧ್ಯವಿಲ್ಲ ಎನ್ನುವುದನ್ನು ಮರೆಯಬೇಡಿ. ನೀವು ನೆಡುತ್ತೀರಿ, ನೀರು ಹಾಕುತ್ತೀರಿ ಆದರೆ ಬೆಳೆಸುವಾತನು ಯೆಹೋವ ದೇವರೇ. (1 ಕೊರಿಂ. 3:6) ಹಾಗಾಗಿ ನಿಮ್ಮ ಅಮೂಲ್ಯ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಲು ನಿಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಹಾಕಿ. ಅವರು ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಿ. ಖಂಡಿತವಾಗಿ ಯೆಹೋವನು ನಿಮ್ಮೆಲ್ಲ ಪ್ರಯತ್ನವನ್ನು ಆಶೀರ್ವದಿಸುತ್ತಾನೆ ಎನ್ನುವ ಭರವಸೆ ನಿಮಗಿರಲಿ.—ಎಫೆ. 6:4.