ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಆಧ್ಯಾತ್ಮಿಕ ವ್ಯಕ್ತಿಗಳ ಜೊತೆ ಕೆಲಸ ಮಾಡುವುದು ನನ್ನ ಸುಯೋಗ

ಆಧ್ಯಾತ್ಮಿಕ ವ್ಯಕ್ತಿಗಳ ಜೊತೆ ಕೆಲಸ ಮಾಡುವುದು ನನ್ನ ಸುಯೋಗ

ನನ್ನ ತಂದೆ ಜೇಮ್ಸ್‌ ಸಿಂಕ್ಲೆರ್‌ ಮತ್ತು ತಾಯಿ ಜೆಸ್ಸೀ ಸಿಂಕ್ಲೆರ್‌ ಸ್ಕಾಟ್ಲೆಂಡ್‌ ದೇಶದವರು. ಅವರು ಅಲ್ಲಿಂದ 1935​ರ ಆಸುಪಾಸಿನಲ್ಲಿ ನ್ಯೂಯಾರ್ಕಿನ ಒಂದು ಆಡಳಿತ ವಿಭಾಗವಾದ ಬ್ರಾಂಕ್ಸ್‌ ಎಂಬಲ್ಲಿಗೆ ಬಂದು ನೆಲೆಸಿದರು. ಅಲ್ಲಿ ಬಂದಾಗ ಅವರಿಗೆ ಪರಿಚಯವಾದವರಲ್ಲಿ ವಿಲ್ಲಿ ಸ್ನೆಡನ್‌ ಒಬ್ಬರು. ಇವರೂ ಸ್ಕಾಟ್ಲೆಂಡಿನವರೇ. ಇವರನ್ನು ಭೇಟಿಯಾಗಿ ಕೆಲವೇ ನಿಮಿಷಗಳೊಳಗೆ ತಮ್ಮತಮ್ಮ ಕುಟುಂಬಗಳ ಬಗ್ಗೆ ಮಾತಾಡಲು ಶುರುಮಾಡಿದರು. ಈ ಘಟನೆ ನಡೆದದ್ದು ನಾನು ಹುಟ್ಟುವುದಕ್ಕಿಂತ ಕೆಲವು ವರ್ಷಗಳ ಮುಂಚೆ.

ಅಮ್ಮ ಮಾತಾಡುತ್ತಾ ಹೋದಂತೆ ಅವರ ತಂದೆ ಮತ್ತು ಅಣ್ಣನ ಬಗ್ಗೆ ವಿಲ್ಲಿರವರಿಗೆ ಹೇಳಿದರು. ಮಹಾ ಯುದ್ಧಕ್ಕೆ ಸ್ವಲ್ಪ ಮುಂಚೆ, ನಾರ್ತ್‌ ಸಮುದ್ರದಲ್ಲಿ ಅವರು ಮೀನುಹಿಡಿಯುವ ದೋಣಿಯಲ್ಲಿದ್ದರು. ಅದು ನೀರಿನಲ್ಲಿದ್ದ ಬಾಂಬ್‌ಗೆ ಢಿಕ್ಕಿಹೊಡೆದು ಸ್ಫೋಟಗೊಂಡಿತು. ಆಗ ಅವರ ತಂದೆ ಮತ್ತು ಅಣ್ಣ ಮುಳುಗಿ ಸತ್ತುಹೋದರು. ಇದನ್ನು ಕೇಳಿ ವಿಲ್ಲಿರವರು “ನಿನ್ನ ತಂದೆ ನರಕದಲ್ಲಿದ್ದಾರೆ!” ಅಂತ ಹೇಳಿಬಿಟ್ಟರು. ಈ ಆಘಾತಕಾರಿ ರೀತಿಯಲ್ಲಿ ನನ್ನ ತಾಯಿಗೆ ಬೈಬಲ್‌ ಸತ್ಯದ ಪರಿಚಯವಾಯಿತು. ವಿಲ್ಲಿ ಯೆಹೋವನ ಸಾಕ್ಷಿ ಆಗಿದ್ದರು.

ವಿಲ್ಲಿ ಮತ್ತು ಲಿಜ್‌ ಸ್ನೆಡನ್‌

ಅವರು ಹೇಳಿದ ಮಾತು ಕೇಳಿ ಅಮ್ಮನಿಗೆ ತುಂಬ ಬೇಜಾರಾಯಿತು. ಯಾಕೆಂದರೆ ಅವರ ತಂದೆ ಒಳ್ಳೇ ವ್ಯಕ್ತಿಯಾಗಿದ್ದರೆಂದು ಅವರಿಗೆ ಗೊತ್ತಿತ್ತು. ವಿಲ್ಲಿರವರು ಮಾತು ಮುಂದುವರಿಸುತ್ತಾ, “ಯೇಸು ಸಹ ನರಕಕ್ಕೆ ಹೋಗಿದ್ದನೆಂದು ನಿಮಗೆ ಹೇಳಿದರೆ ಸ್ವಲ್ಪ ನೆಮ್ಮದಿ ಆಗಬಹುದಾ?” ಅಂತ ಕೇಳಿದರು. ಆಗ ಅಮ್ಮನಿಗೆ ಚರ್ಚಿನಲ್ಲಿ ಕಲಿಸಲಾಗಿದ್ದ ಒಂದು ಪ್ರಾರ್ಥನೆ ನೆನಪಾಯಿತು. ಅದರಲ್ಲಿ, ಯೇಸು ನರಕಕ್ಕೆ ಹೋಗಿ ಮೂರನೇ ದಿನ ಎಬ್ಬಿಸಲ್ಪಟ್ಟನೆಂಬ ಮಾತು ಇತ್ತು. ‘ಒಂದುವೇಳೆ ನರಕದ ಬೆಂಕಿಯಲ್ಲಿ ದುಷ್ಟರಿಗೆ ಚಿತ್ರಹಿಂಸೆ ಕೊಡಲಾಗುತ್ತದಾದರೆ ಯೇಸು ನರಕಕ್ಕೆ ಹೋದದ್ದೇಕೆ?’ ಅಂತ ಅಮ್ಮ ಯೋಚಿಸಲಾರಂಭಿಸಿದರು. ಹೀಗೆ ಅವರಿಗೆ ಸತ್ಯದಲ್ಲಿ ಆಸಕ್ತಿ ಹುಟ್ಟಿತು. ಬ್ರಾಂಕ್ಸ್‌ ಸಭೆಯ ಕೂಟಗಳಿಗೆ ಹೋಗಲಾರಂಭಿಸಿದರು. 1940​ರಲ್ಲಿ ಅವರ ದೀಕ್ಷಾಸ್ನಾನವಾಯಿತು.

ನನ್ನ ತಾಯಿ ಜೊತೆ, ನಂತರ ನನ್ನ ತಂದೆ ಜೊತೆ

ಆ ಸಮಯದಲ್ಲೆಲ್ಲ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಬೈಬಲ್‌ ಬಗ್ಗೆ ಕಲಿಸಬೇಕೆಂದು ನಿರ್ದಿಷ್ಟವಾಗಿ ಏನೂ ಹೇಳಲಾಗಿರಲಿಲ್ಲ. ಹಾಗಾಗಿ ನನ್ನನ್ನು ಅಪ್ಪನ ಜೊತೆ ಮನೆಯಲ್ಲಿ ಬಿಟ್ಟು ಅಮ್ಮ ಮಾತ್ರ ಕೂಟಗಳಿಗೆ ಹೋಗುತ್ತಿದ್ದರು, ವಾರಾಂತ್ಯಗಳಲ್ಲಿ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ನಾನು ಚಿಕ್ಕ ಮಗುವಾಗಿದ್ದೆ, ನಡೆಯಲಾರಂಭಿಸಿದ್ದೆ ಅಷ್ಟೆ. ಕೆಲವು ವರ್ಷಗಳಾದ ನಂತರ ನಾನು ಮತ್ತು ಅಪ್ಪ ಸಹ ಅಮ್ಮನ ಜೊತೆ ಕೂಟಗಳಿಗೆ ಹೋಗಲಾರಂಭಿಸಿದೆವು. ಸುವಾರ್ತೆ ಸಾರುವುದರಲ್ಲಿ ಅಮ್ಮ ಯಾವಾಗಲೂ ಮುಂದಿದ್ದರು. ತುಂಬ ಮಂದಿ ಆಸಕ್ತರ ಜೊತೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದರು. ಅವರ ಕೆಲವು ವಿದ್ಯಾರ್ಥಿಗಳ ಜೊತೆ ಗುಂಪಾಗಿ ಅಧ್ಯಯನ ಮಾಡುತ್ತಿದ್ದ ಸಮಯವೂ ಇತ್ತು. ಏಕೆಂದರೆ ಅವರೆಲ್ಲರೂ ಹತ್ತಿರಹತ್ತಿರ ವಾಸಮಾಡುತ್ತಿದ್ದರು. ಶಾಲೆಗೆ ರಜೆ ಇದ್ದಾಗ ನಾನು ಅಮ್ಮನ ಜೊತೆ ಸೇವೆಗೆ ಹೋಗುತ್ತಿದ್ದೆ. ಹೀಗೆ ಬೈಬಲ್‌ ಬಗ್ಗೆ ಬಹಳಷ್ಟು ವಿಷಯ ಕಲಿತೆ. ಅದನ್ನು ಬೇರೆಯವರಿಗೆ ಕಲಿಸುವುದು ಹೇಗೆಂದೂ ಕಲಿತೆ.

ದುಃಖದ ಸಂಗತಿಯೇನೆಂದರೆ ನಾನು ಚಿಕ್ಕ ಹುಡುಗನಾಗಿದ್ದಾಗ ಸತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಲಿಲ್ಲ. ಹಾಗಾಗಿ ಅದಕ್ಕೆ ಅಷ್ಟೇನೂ ಬೆಲೆ ಕೊಡಲಿಲ್ಲ. ಆದರೆ ಸುಮಾರು 12 ವರ್ಷದವನಾದಾಗ ರಾಜ್ಯ ಪ್ರಚಾರಕನಾದೆ. ಅಂದಿನಿಂದ ಸೇವೆಯಲ್ಲಿ ತಪ್ಪದೇ ಪಾಲ್ಗೊಂಡೆ. ಯೆಹೋವನಿಗೆ ನನ್ನ ಜೀವನವನ್ನು ಸಮರ್ಪಿಸಿ, 1954​ರಲ್ಲಿ ಕೆನಡದ ಟೊರಾಂಟೊದಲ್ಲಿ ನಡೆದ ಅಧಿವೇಶನದಲ್ಲಿ ಜುಲೈ 24​ರಂದು ದೀಕ್ಷಾಸ್ನಾನಪಡೆದೆ. ಆಗ ನನಗೆ 16 ವರ್ಷ.

ಬೆತೆಲ್‌ ಸೇವೆ

ಹಿಂದೆ ಬೆತೆಲಿನಲ್ಲಿ ಕೆಲಸಮಾಡಿದ ಕೆಲವು ಸಹೋದರರು ನಮ್ಮ ಸಭೆಯಲ್ಲಿದ್ದರು. ಅಷ್ಟೇ ಅಲ್ಲ ಬೆತೆಲ್‌ ಕುಟುಂಬದ ಸದಸ್ಯರಾಗಿದ್ದ ಕೆಲವರು ನಮ್ಮ ಸಭೆಗೆ ಕೂಟಗಳಿಗೆ ಬರುತ್ತಿದ್ದರು. ಇವರೆಲ್ಲರು ನನ್ನ ಮೇಲೆ ತುಂಬ ಪ್ರಭಾವ ಬೀರಿದರು. ಭಾಷಣಗಳನ್ನು ಕೊಡುವಾಗ ಮತ್ತು ಸೇವೆಯಲ್ಲಿ ಮಾತಾಡುವಾಗ ಬೈಬಲ್‌ ಸತ್ಯಗಳನ್ನು ವಿವರಿಸುವ ಅವರ ಸಾಮರ್ಥ್ಯವನ್ನು ನೋಡಿ ನಾನು ಬೆರಗಾದೆ. ನನ್ನ ಶಾಲಾ ಶಿಕ್ಷಕರು ನಾನು ವಿಶ್ವವಿದ್ಯಾನಿಲಯಕ್ಕೆ ಹೋಗಿ ಹೆಚ್ಚಿನ ಶಿಕ್ಷಣ ಪಡೆಯಬೇಕೆಂದು ಹೇಳುತ್ತಿದ್ದರೂ ನನಗೆ ಬೆತೆಲಿಗೆ ಹೋಗುವ ಗುರಿ ಇತ್ತು. ಹಾಗಾಗಿ ಟೊರಾಂಟೊದಲ್ಲಿ ನಾನು ದೀಕ್ಷಾಸ್ನಾನ ಪಡೆದ ಅಧಿವೇಶನದಲ್ಲೇ ಬೆತೆಲ್‌ ಅರ್ಜಿ ತುಂಬಿಸಿ ಕಳುಹಿಸಿದೆ. 1955​ರಲ್ಲಿ ನ್ಯೂಯಾರ್ಕ್‌ ನಗರದ ಯಾಂಕೀ ಸ್ಟೇಡಿಯಮ್‌ನಲ್ಲಿ ನಡೆದ ಅಧಿವೇಶನದಲ್ಲಿ ಪುನಃ ಅರ್ಜಿ ಹಾಕಿದೆ. ಇದಾಗಿ ಸ್ವಲ್ಪ ಸಮಯದಲ್ಲೇ ಅಂದರೆ 1955​ರ ಸೆಪ್ಟೆಂಬರ್‌ 19​ರಂದು ಬ್ರೂಕ್ಲಿನ್‌ ಬೆತೆಲಿಗೆ ಸೇರುವ ಆಮಂತ್ರಣ ಬಂತು. ನನಗಾಗ 17 ವರ್ಷ. ಬೆತೆಲಿಗೆ ಬಂದ ಎರಡನೇ ದಿನದಂದು 117 ಆ್ಯಡಮ್ಸ್‌ ಸ್ಟ್ರೀಟ್‌ನಲ್ಲಿದ್ದ ಬೈಂಡಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಶುರುಮಾಡಿದೆ. ಅಲ್ಲಿ ‘ಗ್ಯಾದರಿಂಗ್‌ ಮೆಷೀನ್‌’ನಲ್ಲಿ ಕೆಲಸ ಮಾಡಿದೆ. ಈ ಯಂತ್ರವು ಒಂದು ಪುಸ್ತಕಕ್ಕೆ ಸೇರಿರುವ 32-32 ಪುಟಗಳ ಭಾಗಗಳನ್ನು ಒಟ್ಟಿಗೆ ಸೇರಿಸುತ್ತಿತ್ತು. ಹೀಗೆ ಸೇರಿಸಲಾದ ಭಾಗಗಳು ಮುಂದೆ ಸಾಗಿ ಹೊಲಿಯುವ ಯಂತ್ರದಲ್ಲಿ ಪುಸ್ತಕಗಳಾಗಿ ಸಿದ್ಧವಾಗುತ್ತಿದ್ದವು.

17​ರ ಪ್ರಾಯದಲ್ಲಿ ಬ್ರೂಕ್ಲಿನ್‌ ಬೆತೆಲಿನಲ್ಲಿ ನನ್ನ ಸೇವೆ ಆರಂಭಿಸಿದೆ

ಸುಮಾರು ಒಂದು ತಿಂಗಳು ಬೈಂಡಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡಿದ ನಂತರ ನನ್ನನ್ನು ಮ್ಯಾಗಸೀನ್‌ ಡಿಪಾರ್ಟ್‌ಮೆಂಟ್‌ಗೆ ಕಳುಹಿಸಲಾಯಿತು. ಏಕೆಂದರೆ ನನಗೆ ಟೈಪಿಂಗ್‌ ಕೆಲಸ ಗೊತ್ತಿತ್ತು. ಆಗೆಲ್ಲ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಹೊಸ ಚಂದಾದಾರರ ವಿಳಾಸಗಳನ್ನು ಸ್ಟೆನ್ಸಿಲ್‌ಗಳ (ಚಿಕ್ಕ ಲೋಹದ ಫಲಕಗಳ) ಮೇಲೆ ಟೈಪ್‌ ಮಾಡಲಾಗುತ್ತಿತ್ತು. ಅಲ್ಲಿ ಕೆಲವು ತಿಂಗಳು ಕೆಲಸ ಮಾಡಿದ ನಂತರ ನನ್ನನ್ನು ಶಿಪ್ಪಿಂಗ್‌ ಡಿಪಾರ್ಟ್‌ಮೆಂಟ್‌ಗೆ ಕಳುಹಿಸಲಾಯಿತು. ಇಲ್ಲಿನ ಮೇಲ್ವಿಚಾರಕರಾದ ಕ್ಲಾಸ್‌ ಜೆನ್ಸನ್‌ರವರು ನನಗೆ ಟ್ರಕ್‌ನಲ್ಲಿ ಸಾಹಿತ್ಯ ತುಂಬಿದ್ದ ಬಾಕ್ಸ್‌ಗಳನ್ನು ರವಾನಿಸುತ್ತಿದ್ದ ಡ್ರೈವರ್‌ ಜೊತೆ ಹೋಗ್ತೀಯಾ ಅಂತ ಕೇಳಿದರು. ಈ ಸಾಹಿತ್ಯವನ್ನು ಬಂದರುಗಳಿಗೆ ತಲಪಿಸಬೇಕಾಗುತ್ತಿತ್ತು. ಅಲ್ಲಿಂದ ಅದು ಹಡಗುಗಳ ಮೂಲಕ ಲೋಕದ ಬೇರೆಬೇರೆ ಕಡೆಗೆ ಹೋಗುತ್ತಿತ್ತು. ಪತ್ರಿಕೆಗಳಿಂದ ತುಂಬಿರುವ ದೊಡ್ಡ ಚೀಲಗಳನ್ನು ಅಂಚೆ ಕಛೇರಿಗೂ ತಲಪಿಸಬೇಕಿತ್ತು. ಹೀಗೆ ಅಮೆರಿಕದಲ್ಲೆಲ್ಲ ಇರುವ ಸಭೆಗಳಿಗೆ ಅಂಚೆ ಮೂಲಕ ಪತ್ರಿಕೆಗಳು ಸಿಗುತ್ತಿದ್ದವು. ನಾನು ಸ್ವಲ್ಪ ದೈಹಿಕ ಕೆಲಸಮಾಡಿದರೆ ಒಳ್ಳೇದೆಂದು ಸಹೋದರ ಜೆನ್ಸನ್‌ ಹೇಳಿದರು. ನನ್ನ ತೂಕ ಆಗ ಬರೀ 125 ಪೌಂಡ್‌ (57 ಕೆಜಿ), ತುಂಬ ಸಣ್ಣಗಿದ್ದೆ. ಬಂದರುಗಳಿಗೆ ಮತ್ತು ಅಂಚೆ ಕಛೇರಿಗೆ ಹೋಗಿ ಬರುವ ಈ ಕೆಲಸ ನನ್ನ ದೈಹಿಕ ಬಲವನ್ನು ಹೆಚ್ಚಿಸಿತು. ನನಗೇನು ಒಳ್ಳೇದೆಂದು ಸಹೋದರ ಜೆನ್ಸನ್‌ಗೆ ಚೆನ್ನಾಗಿ ಗೊತ್ತಿತ್ತು!

ಮ್ಯಾಗಸೀನ್‌ ಡಿಪಾರ್ಟ್‌ಮೆಂಟ್‌ ಮಾಡುತ್ತಿದ್ದ ಇನ್ನೊಂದು ಕೆಲಸ ಏನೆಂದರೆ ಪತ್ರಿಕೆಗಳಿಗಾಗಿ ಸಭೆಗಳಿಂದ ಬರುವ ವಿನಂತಿಗಳನ್ನು ಪೂರೈಸುವುದೇ. ಈ ಕೆಲಸ ಮಾಡುವುದರಿಂದ ಬ್ರೂಕ್ಲಿನ್‌ನಲ್ಲಿ ನಮ್ಮ ಪತ್ರಿಕೆಗಳನ್ನು ಯಾವ್ಯಾವ ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ ಮತ್ತು ಅಲ್ಲಿಂದ ಲೋಕದಲ್ಲಿ ಎಲ್ಲೆಲ್ಲಿ ಕಳುಹಿಸಲಾಗುತ್ತದೆಂದು ನನಗೆ ಗೊತ್ತಾಯಿತು. ಇವುಗಳಲ್ಲಿ ಹೆಚ್ಚಿನ ಭಾಷೆಗಳ ಬಗ್ಗೆ ನಾನು ಹಿಂದೆ ಯಾವತ್ತೂ ಕೇಳಿರಲೇ ಇಲ್ಲ. ಆದರೆ ನಮ್ಮ ಸಾವಿರಾರು ಪತ್ರಿಕೆಗಳನ್ನು ದೂರದೂರದ ಸ್ಥಳಗಳಿಗೆ ಕಳುಹಿಸಲಾಗುತ್ತಿದೆಯೆಂದು ಗೊತ್ತಾದಾಗ ನನಗೆ ತುಂಬ ಸಂತೋಷವಾಯಿತು. ಇವುಗಳಲ್ಲಿ ಹಲವಾರು ಸ್ಥಳಗಳಿಗೆ ಭೇಟಿಮಾಡುವ ಸುಯೋಗ ನನಗೆ ಮುಂದೆ ಸಿಗಲಿದೆಯೆಂದು ಆಗ ತಿಳಿದಿರಲಿಲ್ಲ.

ರಾಬರ್ಟ್‌ ವಾಲೆನ್‌, ಚಾರ್ಲ್ಸ್‌ ಮಾಲಹನ್‌, ಡಾನ್‌ ಆ್ಯಡಮ್ಸ್‌ ಜೊತೆ

1961​ರಲ್ಲಿ ನನಗೆ ಟ್ರೆಷರರ್ಸ್‌ ಆಫೀಸಿನಲ್ಲಿ ಕೆಲಸಮಾಡುವ ನೇಮಕ ಸಿಕ್ಕಿತು. ಗ್ರ್ಯಾಂಟ್‌ ಸೂಟರ್‌ರವರು ನನ್ನ ಮೇಲ್ವಿಚಾರಕರಾಗಿದ್ದರು. ಒಂದೆರಡು ವರ್ಷ ಅಲ್ಲಿ ಕೆಲಸಮಾಡಿದೆ. ಒಂದು ದಿನ ಸಹೋದರ ನೇತನ್‌ ನಾರ್‌ರ ಆಫೀಸಿಗೆ ಬರುವಂತೆ ನನಗೆ ಹೇಳಲಾಯಿತು. ಸಹೋದರ ನಾರ್‌ ಆಗ ನಮ್ಮ ಲೋಕವ್ಯಾಪಕ ಕೆಲಸದ ಮುಂದಾಳತ್ವ ವಹಿಸುತ್ತಿದ್ದರು. ಅವರ ಕಛೇರಿಯಲ್ಲಿ ಕೆಲಸಮಾಡುತ್ತಿರುವ ಒಬ್ಬ ಸಹೋದರ ಒಂದು ತಿಂಗಳ ಮಟ್ಟಿಗೆ ರಾಜ್ಯ ಶುಶ್ರೂಷಾ ಶಾಲೆಗೆ ಹಾಜರಾಗಿ ನಂತರ ಸರ್ವಿಸ್‌ ಡಿಪಾರ್ಟ್‌ಮೆಂಟ್‌ಗೆ ಸೇರಲಿದ್ದಾರೆಂದು ಅವರು ನನಗೆ ಹೇಳಿದರು. ನಾನು ಆ ಸಹೋದರನ ಸ್ಥಾನದಲ್ಲಿ ಕೆಲಸಮಾಡಬೇಕಿತ್ತು. ಡಾನ್‌ ಆ್ಯಡಮ್ಸ್‌ ಜೊತೆ ಸೇರಿ ಕೆಲಸಮಾಡಬೇಕಿತ್ತು. ವಿಶೇಷತೆ ಏನೆಂದರೆ, 1955​ರ ಅಧಿವೇಶನದಲ್ಲಿ ನಾನು ಬೆತೆಲ್‌ ಅರ್ಜಿಯನ್ನು ತುಂಬಿಸಿ ಕೊಟ್ಟದ್ದು ಈ ಸಹೋದರನಿಗೇ! ಅದೇ ಡಿಪಾರ್ಟ್‌ಮೆಂಟ್‌ನಲ್ಲಿ ರಾಬರ್ಟ್‌ ವಾಲೆನ್‌ ಮತ್ತು ಚಾರ್ಲ್ಸ್‌ ಮಾಲಹನ್‌ ಈಗಾಗಲೇ ಕೆಲಸಮಾಡುತ್ತಿದ್ದರು. ನಾವು ನಾಲ್ಕು ಮಂದಿ ಸಹೋದರರು 50ಕ್ಕೂ ಹೆಚ್ಚು ವರ್ಷಗಳ ವರೆಗೆ ಒಟ್ಟಿಗೆ ಕೆಲಸಮಾಡಿದೆವು. ಇಷ್ಟು ನಂಬಿಗಸ್ತರಾದ ಆಧ್ಯಾತ್ಮಿಕ ವ್ಯಕ್ತಿಗಳ ಜೊತೆ ಕೆಲಸಮಾಡುವುದು ನಿಜಕ್ಕೂ ನನಗೆ ತುಂಬ ಆನಂದ ತಂದಿದೆ!—ಕೀರ್ತ. 133:1.

ನನ್ನ ಪ್ರಥಮ ಜೋನ್‌ ಭೇಟಿ ವೆನಿಸ್ವೇಲದಲ್ಲಿ, 1970​ರಲ್ಲಿ

1970​ರಿಂದ ಆರಂಭಿಸಿ ನನಗೆ ವಾಚ್‌ಟವರ್‌ ಸೊಸೈಟಿಯ ಹಲವಾರು ಶಾಖಾ ಕಛೇರಿಗಳಿಗೆ ಭೇಟಿನೀಡುವ ನೇಮಕ ಕೊಡಲಾಯಿತು. ಹೀಗೆ ಪ್ರತಿ ವರ್ಷ ಇಲ್ಲವೇ ಎರಡು ವರ್ಷಕ್ಕೊಮ್ಮೆ ನಾನು ಕೆಲವು ವಾರಗಳ ಮಟ್ಟಿಗೆ ಆ ಕಛೇರಿಗಳಿಗೆ ಭೇಟಿನೀಡಲೆಂದು ಪ್ರಯಾಣ ಮಾಡುತ್ತಿದ್ದೆ. ಈ ಭೇಟಿಗಳನ್ನು ‘ಜೋನ್‌ ವಿಸಿಟ್‌’ ಎಂದು ಕರೆಯಲಾಗುತ್ತಿತ್ತು. ನಾನು ಮಾಡಬೇಕಾಗಿದ್ದ ಕೆಲಸವೇನೆಂದರೆ ಲೋಕದ ಎಲ್ಲೆಡೆ ಇರುವ ಬೆತೆಲ್‌ ಕುಟುಂಬಗಳನ್ನೂ, ಮಿಷನರಿಗಳನ್ನೂ ಭೇಟಿಮಾಡಿ ಪ್ರೋತ್ಸಾಹಿಸಬೇಕಿತ್ತು. ಶಾಖಾ ಕಛೇರಿಯ ದಾಖಲೆಗಳನ್ನು ಪರೀಕ್ಷಿಸಿ ನೋಡಬೇಕಿತ್ತು. ಹೀಗೆ ಹೋದಾಗೆಲ್ಲ, ಗಿಲ್ಯಡ್‌ ಶಾಲೆಯ ಆರಂಭದ ವರ್ಷಗಳಲ್ಲಿ ಪದವಿಪಡೆದು ಈಗಲೂ ಇನ್ನೊಂದು ದೇಶದಲ್ಲಿನ ತಮ್ಮ ನೇಮಕಗಳಲ್ಲಿ ಸೇವೆಮಾಡುತ್ತಿದ್ದವರನ್ನು ಭೇಟಿಯಾಗಿ ತುಂಬ ಸಂತೋಷವಾಗುತ್ತಿತ್ತು. ಹೀಗೆ 90ಕ್ಕೂ ಹೆಚ್ಚು ದೇಶಗಳಿಗೆ ಭೇಟಿನೀಡುವ ಸುಯೋಗ ಹಾಗೂ ಸಂತೋಷ ನನಗೆ ಸಿಕ್ಕಿದೆ.

90ಕ್ಕೂ ಹೆಚ್ಚು ದೇಶಗಳಲ್ಲಿ ಸಹೋದರರನ್ನು ಭೇಟಿಮಾಡುವ ಅವಕಾಶ ನನಗೆ ಸಿಕ್ಕಿದೆ!

ನನಗೊಬ್ಬ ನಂಬಿಗಸ್ತ ಸಂಗಾತಿ ಸಿಕ್ಕಿದಳು

ಬ್ರೂಕ್ಲಿನ್‌ ಬೆತೆಲಿನ ಎಲ್ಲ ಸದಸ್ಯರನ್ನು ನ್ಯೂಯಾರ್ಕ್‌ ನಗರದ ವ್ಯಾಪ್ತಿಯಲ್ಲಿರುವ ಸಭೆಗಳಿಗೆ ನೇಮಿಸಲಾಗಿತ್ತು. ನನ್ನನ್ನು ಬ್ರಾಂಕ್ಸ್‌ನಲ್ಲಿರುವ ಒಂದು ಸಭೆಗೆ ನೇಮಿಸಲಾಯಿತು. ಅಲ್ಲಿನ ಮೊದಲ ಸಭೆಯು ಬೆಳೆದದ್ದರಿಂದ ಅದನ್ನು ಎರಡು ಸಭೆಗಳಾಗಿ ಮಾಡಲಾಯಿತು. ಮೊದಲ ಸಭೆಗೆ ‘ಅಪ್ಪರ್‌ ಬ್ರಾಂಕ್ಸ್‌ ಸಭೆ’ ಎಂದು ಹೆಸರಿಡಲಾಯಿತು. ನಾನು ಅಲ್ಲಿಗೆ ಹೋಗುತ್ತಿದ್ದೆ.

ಲ್ಯಾಟ್ವಿಯ ಮೂಲದ ಒಂದು ಕುಟುಂಬ ಬ್ರಾಂಕ್ಸ್‌ನ ದಕ್ಷಿಣಭಾಗದಲ್ಲಿದ್ದಾಗ ಸತ್ಯಕ್ಕೆ ಬಂತು. 1965​ರ ಆಸುಪಾಸಿನಲ್ಲಿ ಈ ಕುಟುಂಬ ನಾನಿದ್ದ ಸಭೆಯ ಸೇವಾಕ್ಷೇತ್ರದಲ್ಲಿ ಬಂದು ನೆಲೆಸಿತು. ಆ ಕುಟುಂಬದಲ್ಲಿ ಲಿವ್ಯಾ ಹಿರಿಯ ಮಗಳಾಗಿದ್ದಳು. ಅವಳು ಪ್ರೌಢ ಶಾಲೆ ಮುಗಿಸಿದ ಕೂಡಲೇ ಪಯನೀಯರಳಾದಳು. ಕೆಲವು ತಿಂಗಳ ನಂತರ ಮ್ಯಾಸಚೂಸೆಟ್ಸ್‌ಗೆ ಹೋದಳು, ಯಾಕೆಂದರೆ ಅಲ್ಲಿ ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯ ಇತ್ತು. ಆಗ ನಾನು ನಮ್ಮ ಸಭೆಯ ಬಗ್ಗೆ ಒಳ್ಳೊಳ್ಳೆ ವಿಷಯಗಳನ್ನು ತಿಳಿಸುತ್ತಾ ಆಕೆಗೆ ಪತ್ರಗಳನ್ನು ಬರೆಯಲಾರಂಭಿಸಿದೆ ಮತ್ತು ಅವಳು ಮ್ಯಾಸಚೂಸೆಟ್ಸ್‌ನ ಬಾಸ್ಟನ್‌ ಪ್ರದೇಶದಲ್ಲಿ ತನಗೆ ಸೇವೆಯಲ್ಲಿ ಸಿಗುತ್ತಿದ್ದ ಫಲಿತಾಂಶಗಳ ಬಗ್ಗೆ ತಿಳಿಸುತ್ತಾ ನನಗೆ ಪತ್ರ ಬರೆಯುತ್ತಿದ್ದಳು.

ಲಿವ್ಯಾ ಜೊತೆ

ಕೆಲವು ವರ್ಷಗಳ ಬಳಿಕ ಲಿವ್ಯಾಳನ್ನು ವಿಶೇಷ ಪಯನೀಯರಳಾಗಿ ನೇಮಿಸಲಾಯಿತು. ಯೆಹೋವನ ಸೇವೆಯಲ್ಲಿ ತನ್ನಿಂದಾದುದೆಲ್ಲವನ್ನು ಮಾಡುವ ಮನಸ್ಸು ಆಕೆಗೆ ಇದ್ದದರಿಂದ ಬೆತೆಲಿಗೆ ಬರಲು ಅರ್ಜಿ ಹಾಕಿದಳು. 1971​ರಲ್ಲಿ ಆಕೆಯನ್ನು ಬೆತೆಲಿಗೆ ಆಮಂತ್ರಿಸಲಾಯಿತು. ಇದು ಯೆಹೋವನು ನನಗೇನೊ ಸೂಚನೆ ಕೊಡುತ್ತಿದ್ದಂತೆ ಇತ್ತು! 1973, ಅಕ್ಟೋಬರ್‌ 27​ರಂದು ನಮ್ಮ ಮದುವೆ ಆಯಿತು. ಮದುವೆ ಭಾಷಣವನ್ನು ಸಹೋದರ ನಾರ್‌ ಕೊಟ್ಟದ್ದು ನಮ್ಮ ಸುಯೋಗ. ಜ್ಞಾನೋಕ್ತಿ 18:22 ಹೇಳುವಂತೆ “ಪತ್ನೀಲಾಭವು ರತ್ನಲಾಭ, ಅದು ಯೆಹೋವನ ಅನುಗ್ರಹವೇ.” ನಾನು ಮತ್ತು ಲಿವ್ಯಾ ಜೊತೆಯಾಗಿ 40ಕ್ಕೂ ಹೆಚ್ಚು ವರ್ಷ ಬೆತೆಲ್‌ ಸೇವೆ ಮಾಡುವ ಅನುಗ್ರಹ ಪಡೆದಿದ್ದೇವೆ. ನಾವೀಗಲೂ ಬ್ರಾಂಕ್ಸ್‌ನಲ್ಲೇ ಇನ್ನೊಂದು ಸಭೆಯ ಭಾಗವಾಗಿದ್ದು ಅದನ್ನು ಬೆಂಬಲಿಸುತ್ತಾ ಇದ್ದೇವೆ.

ಕ್ರಿಸ್ತನ ಸಹೋದರರ ಜೊತೆ ಕೆಲಸಮಾಡುವುದು

ಸಹೋದರ ನಾರ್‌ ಜೊತೆ ಕೆಲಸಮಾಡಲು ನನಗೆ ತುಂಬ ಖುಷಿ ಆಗುತ್ತಿತ್ತು. ಸತ್ಯಕ್ಕಾಗಿ ಶ್ರಮಪಟ್ಟು, ಬಿಡುವಿಲ್ಲದೆ ದುಡಿಯುತ್ತಿದ್ದರು. ಇಡೀ ಲೋಕದಲ್ಲಿದ್ದ ಮಿಷನರಿಗಳೆಂದರೆ ಅವರಿಗೆ ತುಂಬ ಅಭಿಮಾನ. ಈ ಮಿಷನರಿಗಳಲ್ಲಿ ಅನೇಕರನ್ನು ಎಲ್ಲಿಗೆ ನೇಮಿಸಲಾಗಿತ್ತೊ ಆ ದೇಶಗಳಲ್ಲಿ ಇವರೇ ಮೊಟ್ಟಮೊದಲ ಸಾಕ್ಷಿಗಳಾಗಿದ್ದರು. ಸಹೋದರ ನಾರ್‌ 1976​ರಲ್ಲಿ ಕ್ಯಾನ್ಸರ್‌ ರೋಗದಿಂದ ನರಳುವುದನ್ನು ನೋಡುವಾಗ ತುಂಬ ದುಃಖವಾಗುತ್ತಿತ್ತು. ಅವರು ಹಾಸಿಗೆಹಿಡಿದಾಗ ಒಂದು ದಿನ ನನಗೆ ಕರೆಕಳುಹಿಸಿದರು. ಮುದ್ರಣಕ್ಕಾಗಿ ತಯಾರಾಗುತ್ತಿದ್ದ ಮಾಹಿತಿಯನ್ನು ಅವರಿಗೆ ಓದಿಹೇಳಲು ನನಗೆ ಹೇಳಿದರು. ನಾನು ಓದುತ್ತಿದ್ದ ಮಾಹಿತಿಯನ್ನು ಫ್ರೆಡ್ರಿಕ್‌ ಫ್ರಾನ್ಸ್‌ರವರೂ ಕೇಳಿಸಿಕೊಳ್ಳಲಿ ಎಂದು ಅವರನ್ನು ಕರೆಯುವಂತೆ ನನಗೆ ಹೇಳಿದರು. ನನಗೆ ಆಮೇಲೆ ತಿಳಿದುಬಂದ ವಿಷಯವೇನೆಂದರೆ ಸಹೋದರ ಫ್ರಾನ್ಸ್‌ರ ದೃಷ್ಟಿ ಕಡಿಮೆಯಾಗುತ್ತಾ ಇದ್ದ ಕಾರಣ ಅವರಿಗೆ ಮುದ್ರಣವಾಗಲಿರುವ ಮಾಹಿತಿಯನ್ನು ಓದಿಹೇಳಲು ಸಹೋದರ ನಾರ್‌ ತುಂಬ ಸಮಯ ಕಳೆಯುತ್ತಿದ್ದರು.

ಡ್ಯಾನಿಯಲ್‌ ಮತ್ತು ಮರೀನಾ ಸಿಡ್ಲಿಕ್‌ ಜೊತೆ ಜೋನ್‌ ಭೇಟಿ ಮಾಡಿದಾಗ, 1977​ರಲ್ಲಿ

ಸಹೋದರ ನಾರ್‌ 1977​ರಲ್ಲಿ ಸಾವನ್ನಪ್ಪಿದರು. ಅವರು ಭೂಮಿ ಮೇಲಿನ ಜೀವನವನ್ನು ನಂಬಿಗಸ್ತಿಕೆಯಿಂದ ಮುಗಿಸಿದ್ದರು. ಇದು ಅವರ ಪರಿಚಯಸ್ಥರಿಗೆ ಮತ್ತು ಅವರನ್ನು ಪ್ರೀತಿಸುತ್ತಿದ್ದವರಿಗೆ ಸಾಂತ್ವನ ಕೊಟ್ಟಿತು. (ಪ್ರಕ. 2:10) ಅವರ ಸಾವಿನ ನಂತರ ಸಹೋದರ ಫ್ರಾನ್ಸ್‌ ನಮ್ಮ ಕೆಲಸದ ಮುಂದಾಳತ್ವ ವಹಿಸಿದರು.

ಈ ಸಮಯದಷ್ಟಕ್ಕೆ ನಾನು, ಹಲವಾರು ದಶಕ ಸಹೋದರ ನಾರ್‌ ಜೊತೆ ಕೆಲಸಮಾಡಿದ್ದ ಮಿಲ್ಟನ್‌ ಹೆನ್ಶೆಲ್‌ರಿಗೆ ಕಾರ್ಯದರ್ಶಿಯಾಗಿ ಕೆಲಸಮಾಡುತ್ತಿದ್ದೆ. ಆದರೆ ಇನ್ನು ಮುಂದೆ ಬೆತೆಲಿನಲ್ಲಿ ನನ್ನ ಅತಿ ಪ್ರಾಮುಖ್ಯ ಜವಾಬ್ದಾರಿ ಸಹೋದರ ಫ್ರಾನ್ಸ್‌ಗೆ ಅಗತ್ಯವಿರುವ ಎಲ್ಲ ಸಹಾಯ ಕೊಡುವುದಾಗಿದೆ ಎಂದು ಸಹೋದರ ಹೆನ್ಶೆಲ್‌ ಹೇಳಿದರು. ಯಾವುದೇ ಮಾಹಿತಿ ಮುದ್ರಣವಾಗುವುದಕ್ಕಿಂತ ಮುಂಚೆ ನಾನು ಸಹೋದರ ಫ್ರಾನ್ಸ್‌ಗೆ ಅದನ್ನು ಓದಿಹೇಳುತ್ತಿದ್ದೆ. ಅವರ ನೆನಪಿನ ಶಕ್ತಿ ತುಂಬ ಅದ್ಭುತವಾಗಿತ್ತು. ಅವರಿಗೆ ಏನಾದರೂ ಓದಿಹೇಳುವಾಗ ಅವರಿಗಿರುತ್ತಿದ್ದ ಏಕಾಗ್ರತೆಯೂ ವಿಸ್ಮಯ ಹುಟ್ಟಿಸುತ್ತಿತ್ತು. ಈ ವಿಧದಲ್ಲಿ ಅವರಿಗೆ ಸಹಾಯಮಾಡುವುದು ನನಗೆ ತುಂಬ ಆನಂದ ತರುತ್ತಿತ್ತು. ಈ ಕೆಲಸವನ್ನು 1992​ರ ಡಿಸೆಂಬರ್‌ ತಿಂಗಳಲ್ಲಿ ಅವರು ತಮ್ಮ ಭೂಜೀವಿತವನ್ನು ಮುಗಿಸುವ ವರೆಗೂ ಮಾಡಿದೆ.

124 ಕೊಲಂಬಿಯ ಹೈಟ್ಸ್‌ನಲ್ಲಿ ಹಲವಾರು ದಶಕ ಕೆಲಸಮಾಡಿದೆ

ಬೆತೆಲಿನಲ್ಲಿ ನಾನು ಕಳೆದಿರುವ 61 ವರ್ಷಗಳು ತುಂಬ ಬೇಗ ಉರುಳಿಹೋಗಿವೆ. ನನ್ನ ತಂದೆತಾಯಿ ಇಬ್ಬರೂ ಯೆಹೋವನಿಗೆ ನಂಬಿಗಸ್ತರಾಗಿ ತೀರಿಹೋದರು. ಹೆಚ್ಚು ಉತ್ತಮವಾದ ಲೋಕದಲ್ಲಿ ಅವರನ್ನು ಸ್ವಾಗತಿಸಲು ಕಾಯುತ್ತಾ ಇದ್ದೇನೆ. (ಯೋಹಾ. 5:28, 29) ನಂಬಿಗಸ್ತ ಸ್ತ್ರೀಪುರುಷರ ಜೊತೆ ಸೇರಿ ಲೋಕದಲ್ಲೆಲ್ಲ ಇರುವ ದೇವಜನರಿಗಾಗಿ ಕೆಲಸ ಮಾಡುವುದು ಒಂದು ಅದ್ಭುತ ಸುಯೋಗ! ಈ ಹಳೇ ವ್ಯವಸ್ಥೆಯು ನೀಡುವ ಯಾವುದೇ ವಿಷಯವು ಇದಕ್ಕೆ ಸಾಟಿಯಲ್ಲ. ಪೂರ್ಣ ಸಮಯದ ಸೇವೆಯಲ್ಲಿ ಕಳೆದಿರುವ ಈ ಎಲ್ಲ ವರ್ಷಗಳಲ್ಲಿ ‘ಯೆಹೋವನ ಆನಂದವೇ ನಮ್ಮ ಆಶ್ರಯವಾಗಿದೆ’ ಎಂದು ನಾನು ಮತ್ತು ಲಿವ್ಯಾ ಸತ್ಯವಾಗಿ ಹೇಳಬಲ್ಲೆವು.—ನೆಹೆ. 8:10.

ಒಬ್ಬ ನಿರ್ದಿಷ್ಟ ವ್ಯಕ್ತಿ ಇಲ್ಲದಿದ್ದರೆ ಯೆಹೋವನ ಸಂಘಟನೆ ನಡೆಯಲ್ಲ ಎಂದೇನಿಲ್ಲ. ರಾಜ್ಯ ಸತ್ಯಗಳನ್ನು ಹಬ್ಬಿಸುವ ಕೆಲಸವಂತೂ ಖಂಡಿತ ಮುಂದುವರಿಯುತ್ತದೆ. ನಂಬಿಕೆಯಲ್ಲಿ ದೃಢರು, ನಿಷ್ಠಾವಂತರು ಆಗಿದ್ದ ಸಹೋದರ ಸಹೋದರಿಯರ ಜೊತೆ ಇಷ್ಟು ವರ್ಷ ಕೆಲಸಮಾಡಿರುವುದು ನನಗೆ ಸಿಕ್ಕಿರುವ ಸುಯೋಗ ಹಾಗೂ ಆನಂದ ಆಗಿದೆ. ನಾನು ಯಾರ ಜೊತೆ ಕೆಲಸಮಾಡಿದ್ದೇನೊ ಆ ಅಭಿಷಿಕ್ತರಲ್ಲಿ ಹೆಚ್ಚಿನವರು ಈಗ ಭೂಮಿಯಲ್ಲಿಲ್ಲ. ಆದರೆ ಯೆಹೋವನ ಸೇವೆಯಲ್ಲಿ ಅಂಥ ನಂಬಿಗಸ್ತ, ಆಧ್ಯಾತ್ಮಿಕ ವ್ಯಕ್ತಿಗಳ ಸಂಗಡಿಗನಾಗಲು ನನಗೆ ಸಿಕ್ಕಿದ ಅವಕಾಶಕ್ಕಾಗಿ ಆಭಾರಿ ಆಗಿದ್ದೇನೆ.