ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು”

“ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು”

“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. . . . ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ.”—1 ಪೂರ್ವ. 28:20.

ಗೀತೆಗಳು: 60, 29

1, 2. (ಎ) ಸೊಲೊಮೋನನಿಗೆ ಯಾವ ಪ್ರಾಮುಖ್ಯ ನೇಮಕ ಸಿಕ್ಕಿತು? (ಬಿ) ದಾವೀದನಿಗೆ ಸೊಲೊಮೋನನ ಬಗ್ಗೆ ಯಾಕೆ ಚಿಂತೆ ಇತ್ತು?

ಯೆಹೋವನು ಸೊಲೊಮೋನನಿಗೆ ಒಂದು ವಿಶೇಷ ನೇಮಕ ಕೊಟ್ಟನು. ಅದೇನೆಂದರೆ, ಅವನು ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟುವ ಕೆಲಸದ ಮೇಲ್ವಿಚಾರಣೆ ಮಾಡಬೇಕಿತ್ತು. ಈ ಆಲಯವು ಮಾನವರು ಕಟ್ಟಿರುವ ಕಟ್ಟಡಗಳಲ್ಲೇ ಅತೀ ಪ್ರಾಮುಖ್ಯವಾದದ್ದು ಆಗಿರಲಿತ್ತು! “ಅಧಿಕ ಶೋಭಾಯಮಾನ” ಆಗಿರಲಿತ್ತು. ಅದರ ಸೌಂದರ್ಯಕ್ಕಾಗಿ ಹೆಸರುವಾಸಿ ಆಗಲಿತ್ತು. ಇದಕ್ಕಿಂತಲೂ ಮುಖ್ಯವಾದ ವಿಷಯವೇನೆಂದರೆ ಇದು ಸತ್ಯ “ದೇವರಾದ ಯೆಹೋವನ ಆಲಯ” ಆಗಿರಲಿತ್ತು.—1 ಪೂರ್ವ. 22:1, 5, 9-11.

2 ದೇವರು ಸೊಲೊಮೋನನಿಗೆ ಬೆಂಬಲ ಕೊಡುವನೆಂದು ರಾಜ ದಾವೀದನಿಗೆ ಪೂರ್ಣ ಭರವಸೆಯಿತ್ತು. ಹಾಗಿದ್ದರೂ ಸೊಲೊಮೋನನು “ಎಳೇ ಪ್ರಾಯದ”ವನು, ಅನುಭವ ಇಲ್ಲದವನು ಆಗಿದ್ದನು. ಆಲಯವನ್ನು ಕಟ್ಟುವ ಈ ನೇಮಕವನ್ನು ಸ್ವೀಕರಿಸುವ ಧೈರ್ಯ ಅವನಿಗಿತ್ತಾ? ಅಥವಾ ಅವನ ಚಿಕ್ಕ ಪ್ರಾಯ ಮತ್ತು ಅನುಭವದ ಕೊರತೆ ಆ ನೇಮಕಕ್ಕೆ ಅಡ್ಡಿಯಾಯಿತಾ? ಈ ನೇಮಕದಲ್ಲಿ ಯಶಸ್ಸು ಪಡೆಯಬೇಕಾದರೆ ಸೊಲೊಮೋನನು ಧೈರ್ಯದಿಂದ ಕೆಲಸಕ್ಕೆ ಕೈಹಾಕುವ ಅಗತ್ಯವಿತ್ತು.

3. ಸೊಲೊಮೋನನು ತನ್ನ ತಂದೆಯಿಂದ ಧೈರ್ಯದ ಬಗ್ಗೆ ಏನು ಕಲಿತನು?

3 ಸೊಲೊಮೋನನು ತನ್ನ ತಂದೆ ದಾವೀದನಿಂದ ಧೈರ್ಯದ ಬಗ್ಗೆ ತುಂಬ ಕಲಿತಿರಬೇಕು. ಯಾಕೆಂದರೆ ಚಿಕ್ಕ ಪ್ರಾಯದಲ್ಲೇ ದಾವೀದನು ತನ್ನ ತಂದೆಯ ಕುರಿಗಳ ಮೇಲೆ ಆಕ್ರಮಣಮಾಡಿದ್ದ ಕಾಡುಪ್ರಾಣಿಗಳನ್ನು ಕೊಂದುಹಾಕಿದ್ದನು. (1 ಸಮು. 17:34, 35) ಅನೇಕ ಯುದ್ಧಗಳಲ್ಲಿ ಹೋರಾಡಿದ್ದ ಸೈನಿಕ ಮತ್ತು ಭಯಾನಕ ದೈತ್ಯನಾಗಿದ್ದ ಗೊಲ್ಯಾತನ ಜೊತೆ ಹೋರಾಡಿಯೂ ತುಂಬ ಧೈರ್ಯ ತೋರಿಸಿದ್ದನು. ಅವನು ಒಂದು ನುಣುಪಾದ ಕಲ್ಲನ್ನು ಉಪಯೋಗಿಸಿ ದೇವರ ಸಹಾಯದಿಂದ ಗೊಲ್ಯಾತನನ್ನು ಸೋಲಿಸಿದನು.—1 ಸಮು. 17:45, 49, 50.

4. ಸೊಲೊಮೋನನು ಏಕೆ ಧೈರ್ಯ ತೋರಿಸಬೇಕಾಗಿತ್ತು?

4 ಇಷ್ಟು ಧೈರ್ಯ ತೋರಿಸಿದ ದಾವೀದನೇ, ಸೊಲೊಮೋನನಿಗೆ ಧೈರ್ಯದಿಂದ ಆಲಯ ಕಟ್ಟುವಂತೆ ಪ್ರೋತ್ಸಾಹಿಸಲು ಸರಿಯಾದ ವ್ಯಕ್ತಿಯಾಗಿದ್ದ ಅಂತ ಹೇಳಬಹುದು! (1 ಪೂರ್ವಕಾಲವೃತ್ತಾಂತ 28:20 ಓದಿ.) ಸೊಲೊಮೋನನು ಧೈರ್ಯ ತೋರಿಸದೇ ಇರುತ್ತಿದ್ದರೆ ಭಯದಿಂದ ಏನೂ ಮಾಡದೇ ಇರುತ್ತಿದ್ದನು, ಅಂದರೆ ಆ ಕೆಲಸಕ್ಕೇ ಕೈಹಾಕುತ್ತಿರಲಿಲ್ಲ. ಇದು, ಆ ಕೆಲಸ ಮಾಡಲು ಆರಂಭಿಸಿ ನಂತರ ಮುಗಿಸಲು ಆಗದೇ ಇರುವುದಕ್ಕಿಂತ ಕೆಟ್ಟದಾಗಿರುತ್ತಿತ್ತು!

5. ನಮಗೆ ಏಕೆ ಧೈರ್ಯ ಬೇಕು?

5 ಯೆಹೋವನು ಕೊಟ್ಟಿರುವ ಕೆಲಸವನ್ನು ಮಾಡಲು ಧೈರ್ಯ ಬೇಕು. ಸೊಲೊಮೋನನಂತೆ ನಮಗೂ ಯೆಹೋವನ ಸಹಾಯದಿಂದಲೇ ಈ ಧೈರ್ಯ ಸಿಗುತ್ತದೆ. ಆದ್ದರಿಂದ ಹಿಂದಿನ ಕಾಲದಲ್ಲಿ ಧೈರ್ಯ ತೋರಿಸಿದವರಲ್ಲಿ ಕೆಲವರ ಮಾದರಿಗಳನ್ನು ನಾವೀಗ ಚರ್ಚಿಸೋಣ. ಆಮೇಲೆ, ನಾವೂ ಅವರಂತೆ ಧೈರ್ಯ ತೋರಿಸಿ ನಮ್ಮ ಕೆಲಸವನ್ನು ಹೇಗೆ ಪೂರೈಸಬಹುದು ಎಂದು ನೋಡೋಣ.

ಧೈರ್ಯ ತೋರಿಸಿದವರ ಮಾದರಿಗಳು

6. ಯೋಸೇಫನು ತೋರಿಸಿದ ಧೈರ್ಯದ ಬಗ್ಗೆ ನಿಮಗೇನು ಇಷ್ಟವಾಗುತ್ತದೆ?

6 ಯೋಸೇಫನ ಉದಾಹರಣೆ ನೋಡೋಣ. ಪೋಟೀಫರನ ಹೆಂಡತಿ ಲೈಂಗಿಕ ಅನೈತಿಕತೆ ನಡೆಸಲು ಒತ್ತಾಯಿಸಿದಾಗ ಅವನು ಧೈರ್ಯ ತೋರಿಸಿದ. ಹೇಗೆ? ಅವಳ ಮಾತನ್ನು ತಳ್ಳಿಹಾಕಿದರೆ ತನ್ನ ಜೀವಕ್ಕೆ ಅಪಾಯ ಆಗಬಹುದು ಅಂತ ಅವನಿಗೆ ಗೊತ್ತಿದ್ದಿರಬೇಕು. ಆದರೂ ಅವಳ ಮಾತಿಗೆ ಮಣಿಯಲಿಲ್ಲ. ಧೈರ್ಯ ತೋರಿಸಿ ಅವಳಿಂದ ತಪ್ಪಿಸಿಕೊಂಡು ತಕ್ಷಣ ಅಲ್ಲಿಂದ ಓಡಿಹೋದ.—ಆದಿ. 39:10, 12.

7. ರಾಹಾಬಳು ಹೇಗೆ ಧೈರ್ಯ ತೋರಿಸಿದಳು? (ಲೇಖನದ ಆರಂಭದ ಚಿತ್ರ ನೋಡಿ.)

7 ಧೈರ್ಯ ತೋರಿಸಿದವರಲ್ಲಿ ರಾಹಾಬಳು ಸಹ ಒಳ್ಳೇ ಮಾದರಿ. ಯೆರಿಕೋವಿನಲ್ಲಿದ್ದ ಆಕೆಯ ಮನೆಗೆ ಇಸ್ರಾಯೇಲ್ಯ ಗೂಢಚಾರರು ಬಂದಿದ್ದಾಗ ಆಕೆ ಹೆದರಿ ಸಹಾಯಮಾಡಲು ನಿರಾಕರಿಸಬಹುದಿತ್ತು. ಆದರೆ ಆಕೆ ಯೆಹೋವನಲ್ಲಿ ಭರವಸೆ ಇಟ್ಟಳು. ಹಾಗಾಗಿ ಧೈರ್ಯ ತೋರಿಸುತ್ತಾ ಆ ಇಬ್ಬರು ಪುರುಷರನ್ನು ಅಡಗಿಸಿಟ್ಟಳು, ನಂತರ ತಪ್ಪಿಸಿಕೊಳ್ಳಲು ಸಹಾಯಮಾಡಿದಳು. (ಯೆಹೋ. 2:4, 5, 9, 12-16) ಯೆಹೋವನೇ ಸತ್ಯ ದೇವರೆಂದು ಆಕೆ ನಂಬಿದಳು. ಏನೇ ಆದರೂ ಆತನು ಆ ದೇಶವನ್ನು ಇಸ್ರಾಯೇಲ್ಯರ ವಶಕ್ಕೆ ಕೊಡಲಿದ್ದಾನೆಂದು ಆಕೆಗೆ ಪೂರ್ಣ ಭರವಸೆಯಿತ್ತು. ಆಕೆ ಬೇರೆಯವರಿಗೆ ಹೆದರಿಕೊಂಡು ಸುಮ್ಮನಿರಲಿಲ್ಲ, ಯೆರಿಕೋವಿನ ರಾಜನಿಗೂ ಅವನ ಆಳುಗಳಿಗೂ ಹೆದರಲಿಲ್ಲ, ಧೈರ್ಯದಿಂದ ಕ್ರಿಯೆಗೈದಳು. ಹೀಗೆ ತನ್ನ ಮತ್ತು ತನ್ನ ಕುಟುಂಬದವರ ಜೀವ ಉಳಿಸಿದಳು.—ಯೆಹೋ. 6:22, 23.

8. ಯೇಸು ತೋರಿಸಿದ ಧೈರ್ಯ ಅಪೊಸ್ತಲರ ಮೇಲೆ ಯಾವ ಪ್ರಭಾವ ಬೀರಿತು?

8 ಯೇಸುವಿನ ನಂಬಿಗಸ್ತ ಅಪೊಸ್ತಲರು ಸಹ ತುಂಬ ಧೈರ್ಯ ತೋರಿಸಿದರು. ಯೇಸು ಹೇಗೆ ಧೈರ್ಯ ತೋರಿಸಿದ್ದನೆಂದು ಅವರು ನೋಡಿದ್ದರು. ಇದು ಅವರಿಗೆ ಆತನನ್ನು ಅನುಕರಿಸಲು ಸಹಾಯಮಾಡಿತು. (ಮತ್ತಾ. 8:28-32; ಯೋಹಾ. 2:13-17; 18:3-5) ಸದ್ದುಕಾಯರು ವಿರೋಧಿಸಿದರೂ ಅಪೊಸ್ತಲರು ಯೇಸುವಿನ ಬಗ್ಗೆ ಕಲಿಸುವುದನ್ನು ನಿಲ್ಲಿಸಲಿಲ್ಲ.—ಅ. ಕಾ. 5:17, 18, 27-29.

9. ಧೈರ್ಯ ಎಲ್ಲಿಂದ ಸಿಗುತ್ತದೆಂದು ಅರ್ಥಮಾಡಿಕೊಳ್ಳಲು 2 ತಿಮೊಥೆಯ 1:7 ಹೇಗೆ ಸಹಾಯಮಾಡುತ್ತದೆ?

9 ಯೋಸೇಫ, ರಾಹಾಬ, ಯೇಸು ಮತ್ತು ಅಪೊಸ್ತಲರಿಗೆ ಸರಿಯಾದದ್ದನ್ನೇ ಮಾಡುವ ದೃಢಮನಸ್ಸಿತ್ತು. ಅವರು ಧೈರ್ಯ ತೋರಿಸಿದ್ದು, ತಮ್ಮ ಸ್ವಂತ ಸಾಮರ್ಥ್ಯಗಳ ಮೇಲೆ ಭರವಸೆ ಇಟ್ಟದ್ದರಿಂದಲ್ಲ ಬದಲಾಗಿ ಯೆಹೋವನ ಮೇಲೆ ಭರವಸೆ ಇಟ್ಟದ್ದರಿಂದಲೇ. ನಮಗೂ ಧೈರ್ಯದ ಅಗತ್ಯವಿರುವಾಗೆಲ್ಲ ನಾವು ನಮ್ಮ ಮೇಲಲ್ಲ ಬದಲಾಗಿ ಯೆಹೋವನ ಮೇಲೆ ಭರವಸೆ ಇಡಬೇಕು. (2 ತಿಮೊಥೆಯ 1:7 ಓದಿ.) ನಮ್ಮ ಕುಟುಂಬದಲ್ಲಿ ಮತ್ತು ಸಭೆಯಲ್ಲಿ ನಾವು ಧೈರ್ಯ ತೋರಿಸಬೇಕಾಗಿರುತ್ತದೆ. ಜೀವನದ ಈ ಎರಡು ಕ್ಷೇತ್ರಗಳ ಬಗ್ಗೆ ಈಗ ಚರ್ಚಿಸೋಣ.

ಧೈರ್ಯ ತೋರಿಸಬೇಕಾಗುವ ಸನ್ನಿವೇಶಗಳು

10. ಯುವ ಕ್ರೈಸ್ತರಿಗೆ ಏಕೆ ಧೈರ್ಯ ಬೇಕಾಗಿದೆ?

10 ಯುವ ಕ್ರೈಸ್ತರು ಯೆಹೋವನ ಸೇವೆಮಾಡುವಾಗ ಧೈರ್ಯ ತೋರಿಸಬೇಕಾಗುವ ಅನೇಕ ಸನ್ನಿವೇಶಗಳು ಎದುರಾಗುತ್ತವೆ. ಅವರು ಸೊಲೊಮೋನನಿಂದ ಕಲಿತು, ಅವನ ಮಾದರಿಯನ್ನು ಅನುಕರಿಸಬಹುದು. ಆಲಯ ಕಟ್ಟುವ ಕೆಲಸವನ್ನು ಪೂರೈಸಲು ಅವನು ಧೈರ್ಯದಿಂದ ವಿವೇಕಭರಿತ ನಿರ್ಣಯಗಳನ್ನು ಮಾಡಿದನು. ಯುವ ಜನರು ಹೆತ್ತವರ ಮಾರ್ಗದರ್ಶನ ಪಡೆಯಬೇಕು ನಿಜ, ಆದರೆ ಅವರು ಸ್ವತಃ ತೆಗೆದುಕೊಳ್ಳಬೇಕಾದ ಕೆಲವು ಪ್ರಾಮುಖ್ಯ ನಿರ್ಣಯಗಳೂ ಇವೆ. (ಜ್ಞಾನೋ. 27:11) ಯಾರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು, ಮನೋರಂಜನೆಗಾಗಿ ಏನು ಮಾಡಬೇಕು, ನೈತಿಕವಾಗಿ ಶುದ್ಧರಾಗಿ ಉಳಿಯುವುದು ಹೇಗೆ, ಯಾವಾಗ ದೀಕ್ಷಾಸ್ನಾನ ತೆಗೆದುಕೊಳ್ಳಬೇಕು ಎಂಬ ವಿಷಯಗಳ ಬಗ್ಗೆ ವಿವೇಕಭರಿತ ನಿರ್ಣಯಗಳನ್ನು ಮಾಡಲು ಯುವಜನರಿಗೆ ಧೈರ್ಯ ಅಗತ್ಯ. ಯಾಕೆಂದರೆ ಈ ವಿಷಯಗಳಲ್ಲಿ ಅವರು ಒಳ್ಳೇ ನಿರ್ಣಯಗಳನ್ನು ಮಾಡುವಾಗ ದೇವರನ್ನು ಅಣಕಿಸುತ್ತಿರುವ ಸೈತಾನನ ಚಿತ್ತದ ವಿರುದ್ಧ ನಿಲ್ಲುತ್ತಿದ್ದಾರೆ.

11, 12. (ಎ) ಮೋಶೆ ಹೇಗೆ ಧೈರ್ಯ ತೋರಿಸಿದನು? (ಬಿ) ಯುವ ಜನರು ಹೇಗೆ ಮೋಶೆಯ ಮಾದರಿಯನ್ನು ಅನುಕರಿಸಬಹುದು?

11 ಯುವ ಜನರು ಮಾಡಬೇಕಾದ ಒಂದು ಮುಖ್ಯವಾದ ನಿರ್ಣಯ ಅವರು ಇಡಬೇಕಾದ ಗುರಿಗಳ ಕುರಿತಾಗಿದೆ. ಕೆಲವು ದೇಶಗಳಲ್ಲಿ ಯುವ ಜನರಿಗೆ ಉನ್ನತ ಶಿಕ್ಷಣ ಪಡೆದು ಹೆಚ್ಚು ಹಣ ಸಿಗುವ ಉದ್ಯೋಗ ಗಿಟ್ಟಿಸಿಕೊಳ್ಳಲು ತುಂಬ ಒತ್ತಡ ಇರುತ್ತದೆ. ಇತರ ದೇಶಗಳಲ್ಲಿ ಯುವ ಜನರ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಕುಟುಂಬಕ್ಕಾಗಿ ದುಡಿಯುವುದೇ ತಮ್ಮ ಬದುಕಿನ ಮುಖ್ಯ ಗುರಿ ಆಗಿರಬೇಕೆಂದು ಅವರಿಗೆ ಅನಿಸುತ್ತದೆ. ಈ ಎರಡರಲ್ಲಿ ನಿಮ್ಮ ಸನ್ನಿವೇಶ ಯಾವುದೇ ಇರಲಿ, ಮೋಶೆಯ ಮಾದರಿಯ ಬಗ್ಗೆ ಯೋಚಿಸಿ. ಫರೋಹನ ಮಗಳು ಅವನನ್ನು ಸಾಕಿ ಬೆಳೆಸಿದ್ದಳು. ಹಾಗಾಗಿ ಅವನು ತುಂಬ ಐಶ್ವರ್ಯ ಅಥವಾ ದೊಡ್ಡ ಹೆಸರನ್ನು ಸಂಪಾದಿಸುವ ಗುರಿ ಇಡಬಹುದಿತ್ತು. ಐಗುಪ್ತದವರಾಗಿದ್ದ ಅವನ ಕುಟುಂಬದವರು, ಶಿಕ್ಷಕರು, ಸಲಹೆಗಾರರು ಅವನ ಮೇಲೆ ಎಷ್ಟು ಒತ್ತಡ ಹಾಕಿರಬೇಕೆಂದು ಸ್ವಲ್ಪ ಯೋಚಿಸಿ ನೋಡಿ! ಆದರೆ ಮೋಶೆ ಧೈರ್ಯ ತೋರಿಸಿ, ದೇವರ ಜನರೊಂದಿಗೆ ಇರುವ ಆಯ್ಕೆ ಮಾಡಿದನು. ಅವನು ಐಗುಪ್ತದ ಐಶ್ವರ್ಯಕ್ಕೆ ಬೆನ್ನು ಹಾಕಿ ಬಂದ ನಂತರ ಯೆಹೋವನ ಮೇಲೆ ಪೂರ್ಣ ಭರವಸೆ ಇಟ್ಟನು. (ಇಬ್ರಿ. 11:24-26) ಇದರಿಂದಾಗಿ ಯೆಹೋವನು ಅವನಿಗೆ ಅಪಾರ ಆಶೀರ್ವಾದಗಳನ್ನು ಕೊಟ್ಟನು. ಭವಿಷ್ಯದಲ್ಲೂ ಅವನಿಗೆ ಇನ್ನಷ್ಟು ಆಶೀರ್ವಾದಗಳನ್ನು ಕೊಡುವನು.

12 ಇಂದು ಯುವ ಜನರು ಧೈರ್ಯದಿಂದ ಯೆಹೋವನ ಸೇವೆಗೆ ಸಂಬಂಧಪಟ್ಟ ಗುರಿಗಳನ್ನು ಇಟ್ಟು, ಜೀವನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡುವಾಗ ಆತನು ಖಂಡಿತ ಆಶೀರ್ವದಿಸುವನು. ಅವರ ಕುಟುಂಬಗಳ ಅಗತ್ಯಗಳನ್ನು ಪೂರೈಸಲು ಖಂಡಿತ ಸಹಾಯಮಾಡುವನು. ಮೊದಲನೇ ಶತಮಾನದಲ್ಲಿ ಯುವ ತಿಮೊಥೆಯನು ಸಹ ದೇವರ ಸೇವೆ ಮಾಡುವುದನ್ನು ತನ್ನ ಜೀವನದ ಗುರಿಯಾಗಿ ಮಾಡಿದನು. ನೀವೂ ಅದನ್ನೇ ಮಾಡಬಹುದು. *ಫಿಲಿಪ್ಪಿ 2:19-22 ಓದಿ.

ನಿಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಧೈರ್ಯ ತೋರಿಸಲು ದೃಢಮನಸ್ಸು ಮಾಡಿದ್ದೀರಾ? (ಪ್ಯಾರ 13-17 ನೋಡಿ)

13. ಒಬ್ಬ ಯುವ ಸಹೋದರಿಗೆ ತನ್ನ ಗುರಿಗಳನ್ನು ಮುಟ್ಟಲು ಧೈರ್ಯ ಯಾಕೆ ಬೇಕಾಗಿತ್ತು?

13 ಅಮೆರಿಕದ ಆ್ಯಲಬಾಮ ಎಂಬಲ್ಲಿರುವ ಒಬ್ಬ ಸಹೋದರಿಗೆ ದೇವರ ಸೇವೆಗೆ ಸಂಬಂಧಪಟ್ಟ ಗುರಿಗಳನ್ನು ಇಡಲು ಧೈರ್ಯದ ಅಗತ್ಯವಿತ್ತು. ಅವಳು ಹೀಗೆ ಬರೆದಳು: “ನಾನು ದೊಡ್ಡವಳಾಗುತ್ತಿದ್ದಾಗ ತುಂಬ ನಾಚಿಕೆ ಸ್ವಭಾವ ಇತ್ತು. ರಾಜ್ಯ ಸಭಾಗೃಹದಲ್ಲಿ ಯಾರ ಹತ್ತಿರವಾದರೂ ಮಾತಾಡಬೇಕೆಂದರೆ ತುಂಬ ಕಷ್ಟವಾಗುತ್ತಿತ್ತು. ಅದಕ್ಕಿಂತಲೂ ಕಷ್ಟವಾದ ವಿಷಯ ಯಾವುದೆಂದರೆ, ಸೇವೆಗೆ ಹೋದಾಗ ಪರಿಚಯವೇ ಇಲ್ಲದ ಜನರ ಮನೆಬಾಗಿಲನ್ನು ತಟ್ಟಿ ಮಾತಾಡುವುದು.” ಈ ಯುವ ಸಹೋದರಿಗೆ ಹೆತ್ತವರು ಮತ್ತು ಸಭೆಯಲ್ಲಿದ್ದವರು ಕೊಟ್ಟ ಸಹಾಯದಿಂದ ಪಯನೀಯರಳಾಗುವ ಗುರಿಯನ್ನು ಮುಟ್ಟಲು ಸಾಧ್ಯವಾಯಿತು. ಅವಳು ಹೇಳುವುದು: “ಸೈತಾನನ ಲೋಕವು ಉನ್ನತ ಶಿಕ್ಷಣ, ದೊಡ್ಡ ಹೆಸರು, ಹಣ ಮಾಡುವುದು ಮತ್ತು ತುಂಬ ಭೌತಿಕ ವಸ್ತುಗಳನ್ನು ಶೇಖರಿಸುವುದು ಒಳ್ಳೇ ಗುರಿಗಳೆಂದು ಹೇಳಿ ಉತ್ತೇಜಿಸುತ್ತದೆ.” ಆದರೆ ಹೆಚ್ಚಿನ ಜನರಿಗೆ ಈ ಗುರಿಗಳನ್ನು ಮುಟ್ಟಲು ಆಗುವುದೇ ಇಲ್ಲ, ಬದಲಾಗಿ ತಮ್ಮ ಬದುಕಲ್ಲಿ ಇನ್ನಷ್ಟು ಒತ್ತಡ, ನೋವನ್ನು ತಂದುಕೊಳ್ಳುತ್ತಾರೆಂದು ಈ ಸಹೋದರಿ ಅರಿತುಕೊಂಡಳು. “ಆದರೆ ಯೆಹೋವನ ಸೇವೆ ಮಾಡುವುದರಿಂದ ನನಗೆ ಎಲ್ಲಕ್ಕಿಂತ ಹೆಚ್ಚಿನ ಸಂತೋಷ ಸಿಕ್ಕಿದೆ ಮತ್ತು ಏನನ್ನೊ ಸಾಧಿಸಿದ್ದೇನೆ ಎಂಬ ತೃಪ್ತಿ ತಂದಿದೆ” ಎಂದು ಆಕೆ ಹೇಳುತ್ತಾಳೆ.

14. ಕ್ರೈಸ್ತ ಹೆತ್ತವರು ಯಾವಾಗ ಧೈರ್ಯ ತೋರಿಸಬೇಕಾಗುತ್ತದೆ?

14 ಕ್ರೈಸ್ತ ಹೆತ್ತವರಿಗೂ ಧೈರ್ಯದ ಅಗತ್ಯವಿದೆ. ಉದಾಹರಣೆಗೆ ಕುಟುಂಬ ಆರಾಧನೆ, ಕ್ಷೇತ್ರ ಸೇವೆ, ಸಭಾ ಕೂಟಗಳಿಗೆಂದು ನೀವು ಈಗಾಗಲೇ ಕೆಲವೊಂದು ದಿನಗಳನ್ನು ಮೀಸಲಾಗಿಟ್ಟಿದ್ದೀರಿ. ಆದರೆ ನಿಮ್ಮ ಧಣಿ ನಿಮಗೆ ಆಗಾಗ ಆ ದಿನಗಳಂದು ಓವರ್‌ಟೈಮ್‌ ಕೆಲಸ ಮಾಡುವಂತೆ ಹೇಳುತ್ತಾರೆಂದು ನೆನಸಿ. ಆಗ ನಿಮ್ಮ ಧಣಿಗೆ ‘ಇಲ್ಲ’ ಅಂತ ಹೇಳಲು ಧೈರ್ಯದ ಅಗತ್ಯವಿದೆ. ಹೀಗೆ ನಿಮ್ಮ ಮಕ್ಕಳಿಗೆ ಸರಿಯಾದ ಮಾದರಿ ಇಡುತ್ತೀರಿ. ಇನ್ನೊಂದು ಸನ್ನಿವೇಶವನ್ನು ನೋಡಿ. ನೀವು ನಿಮ್ಮ ಮಕ್ಕಳಿಗೆ ಮಾಡಲು ಬಿಡದಂಥ ವಿಷಯಗಳನ್ನು ಸಭೆಯಲ್ಲಿರುವ ಕೆಲವು ಹೆತ್ತವರು ಅವರ ಮಕ್ಕಳಿಗೆ ಮಾಡಲು ಬಿಡುತ್ತಾರೆಂದು ನೆನಸಿ. ನೀವು ಯಾಕೆ ನಿಮ್ಮ ಮಕ್ಕಳನ್ನು ಬಿಡುತ್ತಿಲ್ಲ ಅಂತ ಆ ಹೆತ್ತವರು ಕೇಳಿದರೆ, ನೀವು ಧೈರ್ಯ ತೋರಿಸುತ್ತಾ ಕಾರಣವನ್ನು ಗೌರವದಿಂದ ವಿವರಿಸುವಿರಾ?

15. ಹೆತ್ತವರು ಏನು ಮಾಡಲು ಕೀರ್ತನೆ 37:25 ಮತ್ತು ಇಬ್ರಿಯ 13:5 ಸಹಾಯಮಾಡುತ್ತದೆ?

15 ಮಕ್ಕಳು ದೇವರ ಸೇವೆಗೆ ಸಂಬಂಧಪಟ್ಟ ಗುರಿಗಳನ್ನಿಟ್ಟು ಅವುಗಳನ್ನು ಮುಟ್ಟಲು ಸಹಾಯಮಾಡಬೇಕಾದರೆ ಹೆತ್ತವರಿಗೆ ಧೈರ್ಯ ಬೇಕು. ಒಂದು ಉದಾಹರಣೆ ನೋಡೋಣ. ಮಕ್ಕಳು ಪಯನೀಯರರಾಗುವಂತೆ, ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗುವಂತೆ, ಬೆತೆಲಿನಲ್ಲಿ ಸೇವೆಮಾಡುವಂತೆ ಅಥವಾ ರಾಜ್ಯ ಸಭಾಗೃಹಗಳು ಮತ್ತು ಸಮ್ಮೇಳನ ಸಭಾಂಗಣಗಳ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಕೆಲವು ಹೆತ್ತವರು ಹಿಂದೆಮುಂದೆ ನೋಡಬಹುದು. ತಮಗೆ ವಯಸ್ಸಾದಾಗ ಮಕ್ಕಳು ತಮ್ಮನ್ನು ನೋಡಿಕೊಳ್ಳಲು ಆಗಲಿಕ್ಕಿಲ್ಲ ಎಂಬ ಹೆದರಿಕೆ ಅವರಿಗಿರಬಹುದು. ಅಥವಾ ಮಕ್ಕಳು ಮುಂದೆ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆ ಹೆತ್ತವರಿಗೆ ಇರಬಹುದು. ಆದರೆ ವಿವೇಕಿಗಳಾದ ಹೆತ್ತವರು ಧೈರ್ಯ ತೋರಿಸಿ, ಯೆಹೋವನು ಕೊಟ್ಟ ಮಾತನ್ನು ಪಾಲಿಸುತ್ತಾನೆಂದು ನಂಬಿಕೆ ಇಡುತ್ತಾರೆ. (ಕೀರ್ತನೆ 37:25; ಇಬ್ರಿಯ 13:5 ಓದಿ.) ಹೀಗೆ ಯೆಹೋವನ ಮೇಲೆ ಭರವಸೆ ಇಡುವ ಮೂಲಕ ಧೈರ್ಯ ತೋರಿಸುವ ಹೆತ್ತವರು ತಮ್ಮ ಮಕ್ಕಳಿಗೂ ಅದನ್ನೇ ಮಾಡುವಂತೆ ಸಹಾಯ ಮಾಡುತ್ತಾರೆ.—1 ಸಮು. 1:27, 28; 2 ತಿಮೊ. 3:14, 15.

16. (ಎ) ದೇವರ ಸೇವೆಗೆ ಸಂಬಂಧಪಟ್ಟ ಗುರಿಗಳನ್ನಿಡಲು ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಿದ್ದಾರೆ? (ಬಿ) ಇದರಿಂದ ಅವರ ಮಕ್ಕಳಿಗೆ ಹೇಗೆ ಪ್ರಯೋಜನವಾಗಿದೆ?

16 ಅಮೆರಿಕದಲ್ಲಿ ಒಂದು ದಂಪತಿ ತಮ್ಮ ಮಕ್ಕಳಿಗೆ ಯೆಹೋವನ ಸೇವೆಯಲ್ಲಿ ಗುರಿಗಳನ್ನಿಡುವಂತೆ ಸಹಾಯಮಾಡಿದರು. ಗಂಡನು ಹೇಳಿದ್ದು: “ಪಯನೀಯರರಾಗಿ ಸಭೆಯಲ್ಲಿ ಸೇವೆ ಮಾಡುವುದರಿಂದ ಎಷ್ಟು ಸಂತೋಷ ಸಿಗುತ್ತದೆಂದು ನಮ್ಮ ಮಕ್ಕಳು ಮಾತಾಡಲು, ನಡೆಯಲು ಆರಂಭಿಸುವ ಮುಂಚಿನಿಂದಲೇ ನಾವು ಅವರೊಟ್ಟಿಗೆ ಮಾತಾಡುತ್ತಿದ್ದೆವು. ಈಗ ಅವರಿಗೂ ಇದೇ ಗುರಿ ಇದೆ.” ತಮ್ಮ ಮಕ್ಕಳು ಆಧ್ಯಾತ್ಮಿಕ ಗುರಿಗಳನ್ನಿಟ್ಟು, ಸಾಧಿಸುವುದರಿಂದ ಅವರು ಸೈತಾನನ ಲೋಕದಿಂದ ಬರುವ ಪ್ರಲೋಭನೆಗಳ ವಿರುದ್ಧ ಹೋರಾಡಲು, ಯೆಹೋವನ ಸೇವೆ ಮಾಡುವುದರ ಮೇಲೆ ಗಮನ ನೆಡಲು ಸಹಾಯವಾಗುತ್ತಿದೆ ಎಂದವರು ಹೇಳುತ್ತಾರೆ. ಇಬ್ಬರು ಮಕ್ಕಳಿರುವ ಇನ್ನೊಬ್ಬ ಸಹೋದರ ಹೀಗೆ ಬರೆದರು: “ಕ್ರೀಡೆ, ಕಲೆ, ಶಿಕ್ಷಣದಂಥ ಕ್ಷೇತ್ರಗಳಲ್ಲಿ ತಮ್ಮ ಮಕ್ಕಳು ಗುರಿಗಳನ್ನು ಸಾಧಿಸಲು ಅನೇಕ ಹೆತ್ತವರು ತುಂಬ ಪ್ರಯತ್ನ, ಹಣ ಹಾಕುತ್ತಾರೆ. ಆದರೆ ನಮ್ಮ ಮಕ್ಕಳಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇಟ್ಟುಕೊಳ್ಳಲು ನೆರವಾಗುವಂಥ ಗುರಿಗಳನ್ನಿಡಲು ಪ್ರಯತ್ನ ಹಾಗೂ ಹಣ ಹಾಕುವುದು ಹೆಚ್ಚು ಬುದ್ಧಿವಂತಿಕೆಯ ಕೆಲಸ. ನಮ್ಮ ಮಕ್ಕಳು ಆಧ್ಯಾತ್ಮಿಕ ಗುರಿಗಳನ್ನು ಸಾಧಿಸುವುದನ್ನು ನೋಡುವುದು ಮಾತ್ರವಲ್ಲ ಆ ಗುರಿಗಳನ್ನು ಸಾಧಿಸಲಿಕ್ಕಾಗಿ ಅವರು ಮಾಡುತ್ತಿದ್ದ ಪ್ರಯತ್ನಗಳನ್ನು ನೋಡುವುದು ನಮಗೆ ತುಂಬ ತೃಪ್ತಿ ತಂದಿದೆ.” ದೇವರ ಸೇವೆಗೆ ಸಂಬಂಧಪಟ್ಟ ಗುರಿಗಳನ್ನಿಡಲು, ಅವುಗಳನ್ನು ಸಾಧಿಸಲು ಮಕ್ಕಳಿಗೆ ನೆರವಾಗುವ ಹೆತ್ತವರ ಮೇಲೆ ದೇವರ ಅನುಗ್ರಹವಿರುತ್ತದೆಂಬ ನಿಶ್ಚಯ ನಮಗಿದೆ.

ಸಭೆಯಲ್ಲಿ ಧೈರ್ಯ ತೋರಿಸಬೇಕಾಗುವ ಸನ್ನಿವೇಶಗಳು

17. ಕ್ರೈಸ್ತ ಸಭೆಯಲ್ಲಿ ಧೈರ್ಯ ತೋರಿಸುವವರ ಉದಾಹರಣೆಗಳನ್ನು ಕೊಡಿ.

17 ಸಭೆಯಲ್ಲೂ ಧೈರ್ಯ ತೋರಿಸಬೇಕಾಗುತ್ತದೆ. ಉದಾಹರಣೆಗೆ ಗಂಭೀರ ಪಾಪದ ಕುರಿತ ಪ್ರಕರಣಗಳನ್ನು ನಿರ್ವಹಿಸುತ್ತಿರುವಾಗ ಇಲ್ಲವೇ ವೈದ್ಯಕೀಯ ತುರ್ತುಪರಿಸ್ಥಿತಿಯಿಂದಾಗಿ ಒಬ್ಬರ ಜೀವ ಅಪಾಯದಲ್ಲಿರುವಾಗ ಸಹಾಯಮಾಡಲು ಹಿರಿಯರು ಧೈರ್ಯ ತೋರಿಸಬೇಕಾಗುತ್ತದೆ. ಕೆಲವು ಹಿರಿಯರಿಗೆ ಸೆರೆಮನೆಗಳಲ್ಲಿ ಆಸಕ್ತ ಜನರೊಟ್ಟಿಗೆ ಬೈಬಲ್‌ ಅಧ್ಯಯನ ಮಾಡಲು, ಕೂಟಗಳನ್ನು ನಡೆಸಲು ಧೈರ್ಯ ಬೇಕಾಗುತ್ತದೆ. ಅವಿವಾಹಿತ ಸಹೋದರಿಯರ ಕುರಿತೇನು? ಧೈರ್ಯದಿಂದ ಯೆಹೋವನ ಸೇವೆಮಾಡಲು ಅವರಿಗೂ ಅನೇಕ ಅವಕಾಶಗಳಿವೆ. ಅವರು ಪಯನೀಯರ್‌ ಸೇವೆ ಮಾಡಬಹುದು, ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗಬಹುದು, ಸ್ಥಳೀಯ ಕಟ್ಟಡ ವಿನ್ಯಾಸ/ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳಬಹುದು, ರಾಜ್ಯ ಪ್ರಚಾರಕರ ಶಾಲೆಗೆ ಹೋಗಲು ಅರ್ಜಿ ಹಾಕಬಹುದು. ಕೆಲವರಿಗೆ ಗಿಲ್ಯಡ್‌ ಶಾಲೆಗೂ ಹೋಗುವ ಅವಕಾಶ ಸಿಕ್ಕಿದೆ.

18. ವೃದ್ಧ ಸಹೋದರಿಯರು ಹೇಗೆ ಧೈರ್ಯ ತೋರಿಸಬಹುದು?

18 ನಾವು ವೃದ್ಧ ಸಹೋದರಿಯರನ್ನು ತುಂಬ ಪ್ರೀತಿಸುತ್ತೇವೆ, ಅವರು ನಮ್ಮ ಸಭೆಯಲ್ಲಿರುವುದಕ್ಕಾಗಿ ಸಂತೋಷಪಡುತ್ತೇವೆ. ಹಿಂದೆ ಅವರಲ್ಲಿ ಕೆಲವರು ದೇವರ ಸೇವೆಯಲ್ಲಿ ಮಾಡುತ್ತಿದ್ದಷ್ಟು ಕೆಲಸವನ್ನು ಬಹುಶಃ ಈಗ ಮಾಡಲಿಕ್ಕೆ ಆಗದೇ ಇರಬಹುದು. ಆದರೆ ಅವರು ಈಗಲೂ ‘ಧೈರ್ಯದಿಂದಿದ್ದು ಕೆಲಸಕ್ಕೆ ಕೈಹಾಕಬಹುದು.’ (ತೀತ 2:3-5 ಓದಿ.) ಅವರು ಧೈರ್ಯ ತೋರಿಸಬೇಕಾದ ಒಂದು ಸನ್ನಿವೇಶ ನೋಡೋಣ. ಸಭ್ಯ ಬಟ್ಟೆ ಹಾಕುವುದರ ಬಗ್ಗೆ ಯುವ ಸಹೋದರಿಯೊಬ್ಬಳ ಜೊತೆ ಮಾತಾಡುವಂತೆ ಹಿರಿಯರು ಒಬ್ಬ ವೃದ್ಧ ಸಹೋದರಿಗೆ ಹೇಳಬಹುದು. ಯುವ ಸಹೋದರಿ ಹಾಕುವ ಬಟ್ಟೆ ಸರಿಯಾಗಿಲ್ಲ ಅಂತ ವೃದ್ಧ ಸಹೋದರಿ ಬೈಯುವುದಿಲ್ಲ. ಬದಲಿಗೆ, ಅವಳು ಹಾಕುವಂಥ ರೀತಿಯ ಬಟ್ಟೆ ಬೇರೆಯವರ ಮೇಲೆ ಯಾವ ಪರಿಣಾಮ ಬೀರಬಹುದೆಂದು ಯೋಚಿಸುವಂತೆ ದಯೆಯಿಂದ ಉತ್ತೇಜಿಸಬಹುದು. (1 ತಿಮೊ. 2:9, 10) ವೃದ್ಧ ಸಹೋದರಿಯರು ಇಂಥ ವಿಧಗಳಲ್ಲಿ ಪ್ರೀತಿ ತೋರಿಸುವಾಗ ಸಭೆಯನ್ನು ಬಲಪಡಿಸುತ್ತಾರೆ.

19. (ಎ) ದೀಕ್ಷಾಸ್ನಾನ ಪಡೆದಿರುವ ಸಹೋದರರು ಹೇಗೆ ಧೈರ್ಯ ತೋರಿಸಬಹುದು? (ಬಿ) ಸಹೋದರರು ಧೈರ್ಯ ತಂದುಕೊಳ್ಳಲು ಫಿಲಿಪ್ಪಿ 2:13 ಮತ್ತು 4:13 ಹೇಗೆ ಸಹಾಯಮಾಡಬಲ್ಲದು?

19 ದೀಕ್ಷಾಸ್ನಾನ ಪಡೆದಿರುವ ಸಹೋದರರು ಸಹ ‘ಧೈರ್ಯದಿಂದಿದ್ದು ಕೆಲಸಕ್ಕೆ ಕೈಹಾಕಬೇಕಾಗುತ್ತದೆ.’ ಶುಶ್ರೂಷಾ ಸೇವಕರಾಗಿ, ಹಿರಿಯರಾಗಿ ಸೇವೆಮಾಡಲು ಅವರು ಸಿದ್ಧರಿರುವಾಗ, ಸಭೆಗೆ ಬಹಳ ಪ್ರಯೋಜನವಾಗುತ್ತದೆ. (1 ತಿಮೊ. 3:1) ಆದರೆ ಕೆಲವರು ಜವಾಬ್ದಾರಿ ವಹಿಸಿಕೊಳ್ಳಲು ಹಿಂಜರಿಯಬಹುದು. ಬಹುಶಃ ಒಬ್ಬ ಸಹೋದರನು ಹಿಂದೆ ಕೆಲವು ತಪ್ಪುಗಳನ್ನು ಮಾಡಿ, ತಾನೀಗ ಶುಶ್ರೂಷಾ ಸೇವಕ ಅಥವಾ ಹಿರಿಯನಾಗಲು ಯೋಗ್ಯನಲ್ಲ ಅಂತ ನೆನಸುತ್ತಿರಬಹುದು. ಇನ್ನೊಬ್ಬ ಸಹೋದರನಿಗೆ, ಜವಾಬ್ದಾರಿ ವಹಿಸಿಕೊಳ್ಳಲು ಬೇಕಾದ ಸಾಮರ್ಥ್ಯಗಳು ತನಗಿಲ್ಲ ಎಂದು ಅನಿಸುತ್ತಿರಬಹುದು. ನಿಮಗೆ ಈ ರೀತಿ ಅನಿಸುತ್ತಿರುವಲ್ಲಿ ಧೈರ್ಯ ತಂದುಕೊಳ್ಳಲು ಯೆಹೋವನು ಸಹಾಯಮಾಡಬಲ್ಲನು. (ಫಿಲಿಪ್ಪಿ 2:13; 4:13 ಓದಿ.) ಮೋಶೆಯ ಮಾದರಿಯನ್ನು ನೆನಪುಮಾಡಿಕೊಳ್ಳಿ. ಯೆಹೋವನು ಹೇಳಿದ ಕೆಲಸ ತನ್ನಿಂದ ಮಾಡಲಿಕ್ಕಾಗುವುದಿಲ್ಲ ಅಂತ ಅವನಿಗೂ ಅನಿಸಿತು. (ವಿಮೋ. 3:11) ಆದರೆ ಧೈರ್ಯ ತಂದುಕೊಳ್ಳಲು ಮತ್ತು ಅಗತ್ಯವಿದ್ದ ಕೆಲಸವನ್ನು ಮಾಡಲು ಯೆಹೋವನು ಅವನಿಗೆ ಸಹಾಯಮಾಡಿದನು. ದೀಕ್ಷಾಸ್ನಾನ ಹೊಂದಿರುವ ಒಬ್ಬ ಸಹೋದರನು ಇಂಥ ಧೈರ್ಯವನ್ನು ಹೇಗೆ ತಂದುಕೊಳ್ಳಬಲ್ಲನು? ಅವನು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿ, ದಿನಾಲೂ ಬೈಬಲ್‌ ಓದಬೇಕು. ಧೈರ್ಯ ತೋರಿಸಿದ ಬೈಬಲ್‌ ಮಾದರಿಗಳ ಬಗ್ಗೆ ಧ್ಯಾನಿಸಬೇಕು. ತನಗೆ ತರಬೇತಿ ಕೊಡುವಂತೆ ಹಿರಿಯರ ಬಳಿ ದೀನತೆಯಿಂದ ಕೇಳಬೇಕು ಮತ್ತು ಸಭೆಯಲ್ಲಿ ಅಗತ್ಯವಿರುವ ಯಾವುದೇ ರೀತಿಯಲ್ಲಿ ಸಹಾಯಮಾಡಲು ಮುಂದೆ ಬರಬೇಕು. ದೀಕ್ಷಾಸ್ನಾನ ಪಡೆದಿರುವ ಎಲ್ಲ ಸಹೋದರರು ಧೈರ್ಯ ತೋರಿಸುತ್ತಾ ಸಭೆಗಾಗಿ ದುಡಿಯುವಂತೆ ನಾವು ಪ್ರೋತ್ಸಾಹಿಸುತ್ತೇವೆ!

“ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ”

20, 21. (ಎ) ದಾವೀದನು ಸೊಲೊಮೋನನಿಗೆ ಯಾವ ಮಾತನ್ನು ನೆನಪಿಸಿದನು? (ಬಿ) ನಮಗೆ ಯಾವ ವಿಷಯದಲ್ಲಿ ನಿಶ್ಚಯ ಇದೆ?

20 ಸೊಲೊಮೋನನು ಆಲಯವನ್ನು ಕಟ್ಟಿ ಮುಗಿಸುವ ತನಕ ಯೆಹೋವನು ಅವನ ಸಂಗಡ ಇರುವನೆಂದು ರಾಜ ದಾವೀದನು ಅವನಿಗೆ ನೆನಪುಹುಟ್ಟಿಸಿದನು. (1 ಪೂರ್ವ. 28:20) ಸೊಲೊಮೋನನು ಖಂಡಿತವಾಗಿ ಈ ಮಾತುಗಳ ಬಗ್ಗೆ ಧ್ಯಾನಿಸಿರಬೇಕು. ತನ್ನ ಚಿಕ್ಕ ಪ್ರಾಯ ಅಥವಾ ಅನುಭವದ ಕೊರತೆ ಈ ಕೆಲಸಕ್ಕೆ ಅಡ್ಡಿಯಾಗುವಂತೆ ಬಿಡಲಿಲ್ಲ. ಅವನು ತುಂಬ ಧೈರ್ಯ ತೋರಿಸುತ್ತಾ ಏಳೂವರೆ ವರ್ಷಗಳಲ್ಲಿ ಆ ಭವ್ಯ ಆಲಯವನ್ನು ಯೆಹೋವನ ಸಹಾಯದಿಂದ ಕಟ್ಟಿ ಮುಗಿಸಿದನು.

21 ಯೆಹೋವನು ಸೊಲೊಮೋನನಿಗೆ ಸಹಾಯಮಾಡಿದನು. ಹಾಗೆಯೇ ನಮಗೂ ಧೈರ್ಯದಿಂದಿದ್ದು, ಕುಟುಂಬದಲ್ಲಿ ಹಾಗೂ ಸಭೆಯಲ್ಲಿ ನಮ್ಮ ಕೆಲಸವನ್ನು ಪೂರೈಸಲು ಆತನು ಸಹಾಯಮಾಡುವನು. (ಯೆಶಾ. 41:10, 13) ಯೆಹೋವನ ಸೇವೆಮಾಡುವಾಗ ನಾವು ಧೈರ್ಯ ತೋರಿಸಿದರೆ, ಆತನು ಈಗಲೂ ಭವಿಷ್ಯದಲ್ಲೂ ನಮ್ಮನ್ನು ಆಶೀರ್ವದಿಸುವನೆಂಬ ನಿಶ್ಚಯ ನಮಗಿದೆ. ಹಾಗಾಗಿ ‘ಧೈರ್ಯದಿಂದಿದ್ದು, ಕೆಲಸಕ್ಕೆ ಕೈಹಾಕಿ.’

^ ಪ್ಯಾರ. 12 2004, ಜುಲೈ 15​ರ ಕಾವಲಿನಬುರುಜುವಿನಲ್ಲಿ “ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ” ಲೇಖನವು ದೇವರ ಸೇವೆಯಲ್ಲಿ ಗುರಿಗಳನ್ನು ಹೇಗೆ ಇಡಬಹುದು ಎನ್ನುವುದರ ಬಗ್ಗೆ ಕೆಲವು ಸಲಹೆಗಳನ್ನು ಕೊಡುತ್ತದೆ.