ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಮ್ಮ ದೇವರ ಮಾತು ಸದಾಕಾಲ ಇರುವುದು’

‘ನಮ್ಮ ದೇವರ ಮಾತು ಸದಾಕಾಲ ಇರುವುದು’

“ಹುಲ್ಲು ಒಣಗಿಹೋಗುವದು, ಹೂವು ಬಾಡಿ ಹೋಗುವದು, ನಮ್ಮ ದೇವರ ಮಾತೋ ಸದಾಕಾಲವೂ ಇರುವದು.”—ಯೆಶಾ. 40:8.

ಗೀತೆಗಳು: 116, 115

1, 2. (ಎ) ಬೈಬಲ್‌ ಇಲ್ಲದಿರುತ್ತಿದ್ದರೆ ನಮ್ಮ ಜೀವನ ಹೇಗಿರುತ್ತಿತ್ತು? (ಬಿ) ನಾವೇನು ಮಾಡಿದರೆ ದೇವರ ವಾಕ್ಯದಿಂದ ಪ್ರಯೋಜನ ಪಡೆಯಲು ಆಗುತ್ತದೆ?

ಬೈಬಲ್‌ ಇಲ್ಲದಿದ್ದರೆ ನಮ್ಮ ಜೀವನ ಹೇಗಿರುತ್ತಿತ್ತು? ಪ್ರತಿ ದಿನ ಬೇಕಾದ ಮಾರ್ಗದರ್ಶನ ನಮಗೆ ಸಿಗುತ್ತಿರಲಿಲ್ಲ. ದೇವರ ಬಗ್ಗೆ, ಜೀವನದ ಬಗ್ಗೆ ಅಥವಾ ಭವಿಷ್ಯದ ಬಗ್ಗೆ ಸತ್ಯಾಂಶ ಏನೆಂದು ನಮಗೆ ತಿಳಿಯುತ್ತಿರಲಿಲ್ಲ. ಹಿಂದೆ ಯೆಹೋವನು ಮಾನವರಿಗಾಗಿ ಏನೆಲ್ಲಾ ಮಾಡಿದನೆಂದು ಸಹ ನಮಗೆ ಗೊತ್ತಾಗುತ್ತಿರಲಿಲ್ಲ.

2 ನಾವು ಇಂಥ ಶೋಚನೀಯ ಸ್ಥಿತಿಯಲ್ಲಿಲ್ಲ ಎಂಬುದು ಸಂತೋಷದ ವಿಷಯ. ಯೆಹೋವನು ನಮಗೆ ತನ್ನ ವಾಕ್ಯವಾದ ಬೈಬಲನ್ನು ಕೊಟ್ಟಿದ್ದಾನೆ. ಅದರಲ್ಲಿರುವ ಸಂದೇಶ ಸದಾಕಾಲಕ್ಕೂ ಇರುವುದು ಎಂದು ಮಾತು ಕೊಟ್ಟಿದ್ದಾನೆ. ಯೆಶಾಯ 40:8​ನ್ನು ಅಪೊಸ್ತಲ ಪೇತ್ರನು ಉಲ್ಲೇಖಿಸಿದ್ದಾನೆ. ಈ ವಚನ ನಿರ್ದಿಷ್ಟವಾಗಿ ಬೈಬಲ್‌ ಬಗ್ಗೆ ಮಾತಾಡುವುದಿಲ್ಲವಾದರೂ ಅದು ಬೈಬಲಿನಲ್ಲಿರುವ ಸಂದೇಶಕ್ಕೆ ಅನ್ವಯಿಸುತ್ತದೆ. (1 ಪೇತ್ರ 1:24, 25 ಓದಿ.) ನಾವು ಬೈಬಲನ್ನು ನಮ್ಮ ಭಾಷೆಯಲ್ಲೇ ಓದಿದರೆ ಅದರಿಂದ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯ. ದೇವರ ವಾಕ್ಯವನ್ನು ಪ್ರೀತಿಸುವವರಿಗೆ ಹಿಂದಿನ ಕಾಲದಿಂದಲೂ ಇದು ಗೊತ್ತಿತ್ತು. ಹಿಂದಿನ ಶತಮಾನಗಳಲ್ಲಿ ಬೈಬಲನ್ನು ಭಾಷಾಂತರಿಸಿ ಜನರ ಕೈ ಸೇರುವಂತೆ ಮಾಡಲು ಅನೇಕರು ತುಂಬ ಕಷ್ಟಪಟ್ಟಿದ್ದಾರೆ. ತೀವ್ರ ವಿರೋಧ, ತೊಂದರೆಗಳ ಮಧ್ಯೆಯೂ ಇದನ್ನು ಮಾಡಿದ್ದಾರೆ. ಸಾಧ್ಯವಾದಷ್ಟು ಹೆಚ್ಚು ಜನ “ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂದು ಯೆಹೋವನು ಬಯಸುತ್ತಾನೆ.—1 ತಿಮೊ. 2:3, 4.

3. ನಾವು ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ? (ಲೇಖನದ ಆರಂಭದ ಚಿತ್ರ ನೋಡಿ.)

3 ದೇವರ ವಾಕ್ಯ (1) ಭಾಷೆಯಲ್ಲಾದ ಬದಲಾವಣೆ (2) ಸಾಮಾನ್ಯ ಭಾಷೆಯನ್ನು ಬದಲಾಯಿಸಿದ ರಾಜಕೀಯ ಬೆಳವಣಿಗೆಗಳು ಮತ್ತು (3) ಬೈಬಲ್‌ ಭಾಷಾಂತರಕ್ಕೆ ಎದುರಾದ ವಿರೋಧವನ್ನು ಹೇಗೆ ದಾಟಿಬಂದಿದೆ ಎಂದು ಈ ಲೇಖನದಲ್ಲಿ ಚರ್ಚಿಸೋಣ. ಈ ಚರ್ಚೆ ನಮಗೆ ಹೇಗೆ ಸಹಾಯಮಾಡಲಿದೆ? ಬೈಬಲ್‌ ಮತ್ತು ಅದರ ಲೇಖಕನ ಮೇಲೆ ನಮ್ಮ ಗಣ್ಯತೆಯನ್ನು ಹೆಚ್ಚಿಸಲಿದೆ.—ಮೀಕ 4:2; ರೋಮ. 15:4.

ಭಾಷೆಯಲ್ಲಾದ ಬದಲಾವಣೆ

4. (ಎ) ವರ್ಷಗಳು ಉರುಳಿದಂತೆ ಭಾಷೆಗಳು ಹೇಗೆ ಬದಲಾಗುತ್ತವೆ? (ಬಿ) ದೇವರಿಗೆ ಯಾವುದೋ ಒಂದು ಭಾಷೆಯ ಕಡೆ ಮಾತ್ರ ಒಲವಿಲ್ಲ ಎಂದು ನಮಗೆ ಹೇಗೆ ಗೊತ್ತು? (ಸಿ) ಇದರ ಬಗ್ಗೆ ನಿಮಗೆ ಹೇಗನಿಸುತ್ತದೆ?

4 ವರ್ಷಗಳು ಉರುಳಿದಂತೆ ಭಾಷೆಗಳು ಬದಲಾಗುತ್ತವೆ. ಕೆಲವು ಪದಗಳಿಗೆ ಹಿಂದೆ ಇದ್ದ ಅರ್ಥ ಸಂಪೂರ್ಣವಾಗಿ ಬದಲಾಗಿ ಹೊಸ ಅರ್ಥ ಬಂದುಬಿಡುತ್ತದೆ. ಬಹುಶಃ ನೀವು ಮಾತಾಡುವ ಭಾಷೆಯಲ್ಲೇ ಇದಕ್ಕೊಂದು ಉದಾಹರಣೆ ನಿಮಗೆ ನೆನಪಾಗಬಹುದು. ಇದು ಪ್ರಾಚೀನ ಭಾಷೆಗಳ ವಿಷಯದಲ್ಲೂ ಸತ್ಯ. ಬೈಬಲನ್ನು ಬರೆಯಲಾದ ಅಂದಿನ ಹೀಬ್ರು ಮತ್ತು ಗ್ರೀಕ್‌ ಭಾಷೆಗೂ ಈಗ ಬಳಕೆಯಲ್ಲಿರುವ ಹೀಬ್ರು ಮತ್ತು ಗ್ರೀಕ್‌ ಭಾಷೆಗೂ ವ್ಯತ್ಯಾಸ ಇದೆ. ಆದ್ದರಿಂದ ಹೆಚ್ಚಿನ ಜನರು ಈ ಮೂಲ ಭಾಷೆಗಳಲ್ಲಿ ಬೈಬಲನ್ನು ಓದಿದರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಭಾಷಾಂತರವಾದ ಒಂದು ಬೈಬಲಿನ ಅಗತ್ಯವಿದೆ. ಪ್ರಾಚೀನ ಹೀಬ್ರು ಮತ್ತು ಗ್ರೀಕ್‌ ಭಾಷೆ ಕಲಿತರೆ ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಕೆಲವರು ನೆನಸುತ್ತಾರೆ. ಆದರೆ ಇದರಿಂದ ಅವರು ನೆನಸಿದಷ್ಟು ಪ್ರಯೋಜನ ಸಿಗಲಿಕ್ಕಿಲ್ಲ. * ಬೈಬಲನ್ನು ಪೂರ್ತಿಯಾಗಿ ಅಥವಾ ಅದರ ಭಾಗಗಳನ್ನು 3,200ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಲಾಗಿದೆ ಎಂಬುದು ಸಂತೋಷದ ವಿಷಯ. “ಸಕಲ ಕುಲ ಜನಾಂಗ ಭಾಷೆ”ಯ ಜನರು ತನ್ನ ವಾಕ್ಯವನ್ನು ಓದಿ ಪ್ರಯೋಜನ ಪಡೆಯಬೇಕೆಂದು ಯೆಹೋವನು ಬಯಸುತ್ತಾನೆ. (ಪ್ರಕಟನೆ 14:6 ಓದಿ.) ಯೆಹೋವನಲ್ಲಿ ತುಂಬ ಪ್ರೀತಿ ಇದೆ, ಪಕ್ಷಪಾತ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಈ ಕಾರಣಕ್ಕೆ ನಾವು ಆತನಿಗೆ ಇನ್ನಷ್ಟು ಹತ್ತಿರವಾಗಲು ಮನಸ್ಸಾಗುತ್ತದಲ್ವಾ?—ಅ. ಕಾ. 10:34.

5. ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲಿನ ವಿಶೇಷತೆಗಳು ಏನು?

5 ಭಾಷೆಗಳಲ್ಲಾಗುವ ಬದಲಾವಣೆಗಳು ಬೈಬಲ್‌ ಭಾಷಾಂತರದ ಮೇಲೆ ಸಹ ಪರಿಣಾಮ ಬೀರುತ್ತವೆ. ಒಂದು ಬೈಬಲ್‌ ಭಾಷಾಂತರ ಬಿಡುಗಡೆಯಾದಾಗ ಅದನ್ನು ಜನ ಓದಿ ಸುಲಭವಾಗಿ ಅರ್ಥಮಾಡಿಕೊಂಡಿರಬಹುದು. ಆದರೆ ಸಮಯ ಹೋದ ಹಾಗೆ ಅದರಲ್ಲಿರುವ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಇಂಥ ಬೈಬಲ್‌ ಭಾಷಾಂತರಕ್ಕೆ ಒಂದು ಉದಾಹರಣೆ ಕಿಂಗ್‌ ಜೇಮ್ಸ್‌ ವರ್ಷನ್‌. ಇದರ ಮೊದಲ ಆವೃತ್ತಿ 1611​ರಲ್ಲಿ ಬಿಡುಗಡೆ ಆಯಿತು. ಇಂಗ್ಲಿಷ್‌ ಭಾಷೆಯಲ್ಲಿ ಇದು ತುಂಬ ಪ್ರಸಿದ್ಧವಾಯಿತು. ಈ ಬೈಬಲಿನಲ್ಲಿ ಬಳಸಲಾದ ಪದಗಳು ಇಂಗ್ಲಿಷ್‌ ಭಾಷೆಯ ಮೇಲೆ ಸಹ ಪರಿಣಾಮ ಬೀರಿದವು. * ಆದರೆ ಈ ಭಾಷಾಂತರದಲ್ಲಿ ಯೆಹೋವನ ಹೆಸರನ್ನು ಕೆಲವು ಕಡೆಗಳಲ್ಲಿ ಮಾತ್ರ ಬಳಸಲಾಯಿತು. ಹೀಬ್ರು ಶಾಸ್ತ್ರಗಳಲ್ಲಿ ದೇವರ ಹೆಸರು ಕಂಡುಬರುವ ಹೆಚ್ಚಿನ ಸ್ಥಳಗಳಲ್ಲಿ “ಕರ್ತ” ಎಂಬ ಪದವನ್ನು ದೊಡ್ಡ ಅಕ್ಷರಗಳಲ್ಲಿ ಹಾಕಲಾಗಿತ್ತು. ನಂತರ ಮುದ್ರಿಸಲಾದ ಆವೃತ್ತಿಗಳಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲೂ “ಕರ್ತ” ಎಂಬ ಪದವನ್ನು ಕೆಲವು ವಚನಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಹಾಕಲಾಯಿತು. ಹೀಗೆ ಹೊಸ ಒಡಂಬಡಿಕೆ ಎಂದು ಕರೆಯಲಾಗುವ ಭಾಗದಲ್ಲೂ ದೇವರ ಹೆಸರು ಇತ್ತೆಂದು ಕಿಂಗ್‌ ಜೇಮ್ಸ್‌ ವರ್ಷನ್‌ ತೋರಿಸಿಕೊಟ್ಟಿತು.

6. ನೂತನ ಲೋಕ ಭಾಷಾಂತರ ಸಿಕ್ಕಿರುವುದಕ್ಕೆ ನಾವು ಯಾಕೆ ಸಂತೋಷಪಡಬೇಕು?

6 ಕಿಂಗ್‌ ಜೇಮ್ಸ್‌ ವರ್ಷನ್‌ನ ಮೊದಲ ಆವೃತ್ತಿ ಬಿಡುಗಡೆಯಾದಾಗ ಅದು ಜನರಿಗೆ ಸುಲಭವಾಗಿ ಅರ್ಥವಾಯಿತು. ಯಾಕೆಂದರೆ ಅದರಲ್ಲಿದ್ದ ಇಂಗ್ಲಿಷ್‌ ಪದಗಳನ್ನು ಆ ಕಾಲದ ಜನರು ಬಳಸುತ್ತಿದ್ದರು. ಆದರೆ ಸಮಯ ಹೋಗುತ್ತಾ ಅದರಲ್ಲಿದ್ದ ಕೆಲವು ಪದಗಳು ಹಳೇ ಕಾಲದ್ದು ಎಂದು ಅನಿಸತೊಡಗಿತು. ಈಗಂತೂ ಅದನ್ನು ಅರ್ಥಮಾಡಿಕೊಳ್ಳಲಿಕ್ಕೇ ಆಗಲ್ಲ. ಆ ಕಾಲದಲ್ಲಿದ್ದ ಬೇರೆ ಭಾಷೆಯ ಬೈಬಲುಗಳ ಸ್ಥಿತಿಯೂ ಇದೇ ಆಗಿತ್ತು. ಸಂತೋಷದ ವಿಷಯವೇನೆಂದರೆ ಈಗ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಇದೆ. ಇದು ಜನರು ಈಗ ಬಳಸುವ ಇಂಗ್ಲಿಷ್‌ ಭಾಷೆಯಲ್ಲಿದೆ. ಈ ಬೈಬಲ್‌ ಪೂರ್ತಿಯಾಗಿ ಅಥವಾ ಭಾಗಶಃ 150ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. ಇದರರ್ಥ ಲೋಕದಲ್ಲಿ ಈಗ ಇರುವ ಬಹುತೇಕ ಜನ ತಮ್ಮ ಸ್ವಂತ ಭಾಷೆಯಲ್ಲಿ ಈ ಭಾಷಾಂತರವನ್ನು ಓದಬಹುದು. ಅದರಲ್ಲಿ ಬಳಸಲಾಗಿರುವ ಭಾಷಾ ಶೈಲಿ ಆಧುನಿಕ ಮತ್ತು ಸ್ಪಷ್ಟ ಆಗಿರುವುದರಿಂದ ದೇವರ ಸಂದೇಶ ಜನರ ಹೃದಯವನ್ನು ತಲಪಲು ಸಾಧ್ಯವಾಗುತ್ತದೆ. (ಕೀರ್ತ. 119:97) ಇದೆಲ್ಲಾ ಇದ್ದರೂ, ನೂತನ ಲೋಕ ಭಾಷಾಂತರ ಬೈಬಲನ್ನು ತುಂಬ ವಿಶೇಷವಾಗಿ ಮಾಡುವಂಥ ಒಂದು ಅಂಶ ಇದೆ. ಅದೇನೆಂದರೆ, ಮೂಲಪ್ರತಿಯಲ್ಲಿ ದೇವರ ಹೆಸರು ಎಲ್ಲೆಲ್ಲಾ ಇತ್ತೊ ಈ ಭಾಷಾಂತರದಲ್ಲೂ ಅಲ್ಲೆಲ್ಲಾ ಇದೆ.

ರಾಜಕೀಯ ಬೆಳವಣಿಗೆಗಳು

7, 8. (ಎ) ಕ್ರಿ.ಪೂ. ಮೂರನೇ ಶತಮಾನದಲ್ಲಿದ್ದ ಅನೇಕ ಯೆಹೂದ್ಯರಿಗೆ ಹೀಬ್ರು ಶಾಸ್ತ್ರಗ್ರಂಥ ಯಾಕೆ ಅರ್ಥವಾಗುತ್ತಿರಲಿಲ್ಲ? (ಬಿ) ಗ್ರೀಕ್‌ ಸೆಪ್ಟೂಅಜಂಟ್‌ ಅಂದರೆ ಏನು?

7 ಲೋಕದಲ್ಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ಜನ ಮಾತಾಡುವ ಭಾಷೆಯೇ ಕೆಲವೊಮ್ಮೆ ಬದಲಾಗಿದೆ. ಆದರೆ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬೈಬಲು ಸಿಗುವಂತೆ ಮಾಡಲು ಯೆಹೋವನು ಏರ್ಪಾಡು ಮಾಡಿದ್ದಾನೆ. ಉದಾಹರಣೆಗೆ, ಬೈಬಲಿನ ಮೊದಲ 39 ಪುಸ್ತಕಗಳನ್ನು ಇಸ್ರಾಯೇಲ್ಯರು ಅಥವಾ ಯೆಹೂದ್ಯರು ಬರೆದರು. ‘ಮೊದಲನೆಯದಾಗಿ ಪವಿತ್ರ ದೈವೋಕ್ತಿಗಳು ಅವರ ವಶಕ್ಕೆ ಕೊಡಲ್ಪಟ್ಟಿದ್ದವು.’ (ರೋಮ. 3:1, 2) ಇವರು ಆರಂಭದಲ್ಲಿ ಈ ಪುಸ್ತಕಗಳನ್ನು ಹೀಬ್ರು ಅಥವಾ ಅರಮಾಯ ಭಾಷೆಯಲ್ಲಿ ಬರೆದರು. ಆದರೆ ಕ್ರಿ.ಪೂ. ಮೂರನೇ ಶತಮಾನದಷ್ಟಕ್ಕೆ ಅನೇಕ ಯೆಹೂದ್ಯರಿಗೆ ಹೀಬ್ರು ಭಾಷೆ ಬರುತ್ತಿರಲಿಲ್ಲ. ಯಾಕೆ? ಮಹಾ ಅಲೆಗ್ಸಾಂಡರ್‌ ಭೂಮಿಯ ಬಹುತೇಕ ಭಾಗವನ್ನು ವಶಪಡಿಸಿಕೊಂಡಾಗ ಗ್ರೀಕ್‌ ಸಾಮ್ರಾಜ್ಯ ಎಲ್ಲಾ ಕಡೆ ಹಬ್ಬಿಕೊಂಡಿತು. ಇದರ ಪರಿಣಾಮವಾಗಿ ಇಡೀ ಸಾಮ್ರಾಜ್ಯದಲ್ಲಿ ಗ್ರೀಕ್‌ ಭಾಷೆ ಸಾಮಾನ್ಯ ಭಾಷೆ ಆಯಿತು. ಜನರು ತಮ್ಮ ಸ್ವಂತ ಭಾಷೆಯನ್ನು ಬಿಟ್ಟು ಗ್ರೀಕ್‌ ಭಾಷೆ ಮಾತಾಡಲು ಆರಂಭಿಸಿದರು. (ದಾನಿ. 8:5-7, 20, 21) ಅನೇಕ ಯೆಹೂದ್ಯರು ಸಹ ಗ್ರೀಕ್‌ ಮಾತಾಡಲು ಆರಂಭಿಸಿದರು. ಹಾಗಾಗಿ ಅವರಿಗೆ ಹೀಬ್ರು ಭಾಷೆಯಲ್ಲಿ ಬೈಬಲನ್ನು ಅರ್ಥಮಾಡಿಕೊಳ್ಳಲು ಕಷ್ಟವಾಯಿತು. ಈ ಸಮಸ್ಯೆ ಹೇಗೆ ಪರಿಹಾರವಾಯಿತು?

8 ಯೇಸು ಹುಟ್ಟುವುದಕ್ಕೆ ಸುಮಾರು 250 ವರ್ಷಗಳ ಮುಂಚೆ ಬೈಬಲಿನ ಮೊದಲ ಐದು ಪುಸ್ತಕಗಳನ್ನು ಗ್ರೀಕ್‌ ಭಾಷೆಗೆ ಭಾಷಾಂತರಿಸಲಾಯಿತು. ನಂತರ ಹೀಬ್ರು ಶಾಸ್ತ್ರಗಳ ಉಳಿದ ಪುಸ್ತಕಗಳನ್ನೂ ಭಾಷಾಂತರಿಸಲಾಯಿತು. ಈ ಭಾಷಾಂತರವನ್ನು ಗ್ರೀಕ್‌ ಸೆಪ್ಟೂಅಜಂಟ್‌ ಎಂದು ಕರೆಯಲಾಯಿತು. ನಮಗೆ ತಿಳಿದಿರುವ ಮಟ್ಟಿಗೆ, ಇದೇ ಇಡೀ ಹೀಬ್ರು ಶಾಸ್ತ್ರಗ್ರಂಥದ ಮೊದಲ ಭಾಷಾಂತರ.

9. (ಎ) ಸೆಪ್ಟೂಅಜಂಟ್‌ ಮತ್ತು ಆರಂಭದ ಬೇರೆ ಭಾಷಾಂತರಗಳು ದೇವರ ವಾಕ್ಯವನ್ನು ಓದಿದ ಜನರ ಮೇಲೆ ಯಾವ ಪ್ರಭಾವ ಬೀರಿದವು? (ಬಿ) ಹೀಬ್ರು ಶಾಸ್ತ್ರಗ್ರಂಥದಲ್ಲಿ ನಿಮಗೆ ಇಷ್ಟವಾದ ಭಾಗ ಯಾವುದು?

9 ಗ್ರೀಕ್‌ ಮಾತಾಡುತ್ತಿದ್ದ ಯೆಹೂದ್ಯರು ಸೆಪ್ಟೂಅಜಂಟ್‌ನಿಂದಾಗಿ ಗ್ರೀಕ್‌ ಭಾಷೆಯಲ್ಲಿ ಹೀಬ್ರು ಶಾಸ್ತ್ರಗ್ರಂಥವನ್ನು ಓದಲು ಸಾಧ್ಯವಾಯಿತು. ಅವರ ಸ್ವಂತ ಭಾಷೆಯಾಗಿಬಿಟ್ಟಿದ್ದ ಗ್ರೀಕ್‌ ಭಾಷೆಯಲ್ಲಿ ದೇವರ ವಾಕ್ಯವನ್ನು ಕೇಳಿಸಿಕೊಂಡಾಗ ಅಥವಾ ಓದಿದಾಗ ಅವರಿಗೆ ಎಷ್ಟು ಸಂತೋಷ ಆಗಿರಬೇಕಲ್ವಾ? ಕಾಲಕ್ರಮೇಣ ಇಡೀ ಬೈಬಲನ್ನು ಅಥವಾ ಅದರ ಭಾಗಗಳನ್ನು ಜನರು ಸಾಮಾನ್ಯವಾಗಿ ಮಾತಾಡುತ್ತಿದ್ದ ಬೇರೆ ಭಾಷೆಗಳಲ್ಲೂ ಅಂದರೆ ಸಿರಿಯಾಕ್‌, ಗಾತಿಕ್‌, ಲ್ಯಾಟಿನ್‌ನಂಥ ಭಾಷೆಗಳಲ್ಲಿ ಭಾಷಾಂತರಿಸಲಾಯಿತು. ಹೀಗೆ ಹೆಚ್ಚು ಜನರು ದೇವರ ವಾಕ್ಯವನ್ನು ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಾದದ್ದರಿಂದ ಅವರು ಸಹ ಬೈಬಲನ್ನು ತುಂಬ ಇಷ್ಟಪಡಲು ಆರಂಭಿಸಿದರು. ನಮಗೆ ಬೈಬಲಿನಲ್ಲಿ ಕೆಲವು ಅಚ್ಚುಮೆಚ್ಚಿನ ವಚನಗಳು ಇರುವಂತೆ ಅವರಿಗೆ ಸಹ ಕೆಲವೊಂದು ವಚನಗಳು ಅಚ್ಚುಮೆಚ್ಚಿನ ವಚನಗಳಾದವು. (ಕೀರ್ತನೆ 119:162-165 ಓದಿ.) ದೇವರ ವಾಕ್ಯವು ರಾಜಕೀಯ ಬೆಳವಣಿಗೆಗಳನ್ನು ಮತ್ತು ಭಾಷೆಯಲ್ಲಾದ ಬದಲಾವಣೆಗಳನ್ನು ಹೀಗೆ ದಾಟಿಬಂತು.

ಬೈಬಲ್‌ ಭಾಷಾಂತರಕ್ಕೆ ವಿರೋಧ

10. ಜಾನ್‌ ವಿಕ್ಲಿಫ್‌ ಅವರ ಸಮಯದಲ್ಲಿ ಯಾಕೆ ಹೆಚ್ಚಿನ ಜನರಿಗೆ ಬೈಬಲನ್ನು ಓದಲು ಆಗುತ್ತಿರಲಿಲ್ಲ?

10 ಬೈಬಲ್‌ ಓದದಂತೆ ಜನಸಾಮಾನ್ಯರನ್ನು ತಡೆಯಲು ಹಿಂದಿನ ಕಾಲದಲ್ಲಿ ಅನೇಕ ಶಕ್ತಿಶಾಲಿ ನಾಯಕರು ಪ್ರಯತ್ನಿಸಿದರು. ಆದರೂ ದೇವಭಯವಿದ್ದ ಪುರುಷರು ಬೈಬಲ್‌ ಎಲ್ಲರ ಕೈ ಸೇರಲು ಏನು ಮಾಡಬೇಕೋ ಅದನ್ನು ಮಾಡುವುದನ್ನು ನಿಲ್ಲಿಸಲಿಲ್ಲ. ಈ ಪ್ರಯತ್ನಕ್ಕೆ ಕೈಹಾಕಿದವರಲ್ಲಿ ಒಬ್ಬರು ಜಾನ್‌ ವಿಕ್ಲಿಫ್‌. ಇವರು 14​ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಜೀವಿಸಿದವರು. ಪ್ರತಿಯೊಬ್ಬರೂ ಬೈಬಲನ್ನು ಓದಲು ಸಾಧ್ಯವಾಗಬೇಕೆಂದು ಅವರು ನೆನಸಿದರು. ಅವರ ಜೀವಮಾನಕಾಲದಲ್ಲಿ ಇಂಗ್ಲೆಂಡ್‌ನಲ್ಲಿದ್ದ ಹೆಚ್ಚಿನ ಜನರು ಬೈಬಲನ್ನು ತಮ್ಮ ಸ್ವಂತ ಭಾಷೆಯಲ್ಲಿ ಕೇಳಿರಲಿಲ್ಲ, ನೋಡಿರಲಿಲ್ಲ. ಬೈಬಲ್‌ಗಳನ್ನು ಕೊಂಡುಕೊಳ್ಳಲು ತುಂಬ ಹಣ ಬೇಕಾಗುತ್ತಿತ್ತು. ಒಂದೊಂದು ಪ್ರತಿಯನ್ನೂ ಕೈಯಲ್ಲಿ ಬರೆಯಬೇಕಾಗಿತ್ತು. ಹಾಗಾಗಿ ಬೈಬಲ್‌ ತುಂಬ ಕಡಿಮೆ ಜನರ ಬಳಿ ಇತ್ತು. ಅಷ್ಟೇ ಅಲ್ಲ, ಆ ಕಾಲದಲ್ಲಿದ್ದ ಎಷ್ಟೋ ಜನರಿಗೆ ಓದಲು ಬರುತ್ತಿರಲಿಲ್ಲ. ಚರ್ಚಿಗೆ ಹೋಗುತ್ತಿದ್ದವರು ಅಲ್ಲಿ ಲ್ಯಾಟಿನ್‌ ಭಾಷೆಯಲ್ಲಿ ಬೈಬಲ್‌ ವಾಚನವನ್ನು ಕೇಳಿಸಿಕೊಂಡಿರಬಹುದು. ಆದರೆ ಲ್ಯಾಟಿನ್‌ ತುಂಬ ಹಳೇ ಭಾಷೆಯಾಗಿಬಿಟ್ಟಿತ್ತು, ಜನಸಾಮಾನ್ಯರು ಅದನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಜನರಿಗೆ ತಮ್ಮ ಸ್ವಂತ ಭಾಷೆಯಲ್ಲಿ ಬೈಬಲ್‌ ಸಿಗಲು ಯೆಹೋವನು ಏನು ಮಾಡಿದನು?—ಜ್ಞಾನೋ. 2:1-5.

ದೇವರ ವಾಕ್ಯ ಎಲ್ಲರ ಕೈ ಸೇರಬೇಕೆಂದು ಜಾನ್‌ ವಿಕ್ಲಿಫ್‌ ಮತ್ತು ಇತರರು ಬಯಸಿದರು. ನಿಮಗೂ ಇದೇ ಆಸೆ ಇದೆಯಾ? (ಪ್ಯಾರ 11 ನೋಡಿ)

11. ವಿಕ್ಲಿಫ್‌ ಬೈಬಲ್‌ನಿಂದಾಗಿ ಉಂಟಾದ ಪರಿಣಾಮ ಏನು?

11 ಜಾನ್‌ ವಿಕ್ಲಿಫ್‌ ಮತ್ತು ಇತರರು 1382​ರಲ್ಲಿ ಬೈಬಲನ್ನು ಇಂಗ್ಲಿಷ್‌ ಭಾಷೆಗೆ ಭಾಷಾಂತರಿಸಿದರು. ಈ ‘ವಿಕ್ಲಿಫ್‌ ಬೈಬಲ್‌’ ಲಾಲರ್ಡ್ಸ್‌ ಎಂದು ಕರೆಯಲಾಗುತ್ತಿದ್ದ ವಿಕ್ಲಿಫ್‌ರ ಅನುಯಾಯಿಗಳ ಮಧ್ಯೆ ತುಂಬ ಪ್ರಸಿದ್ಧವಾಯಿತು. ಈ ಜನರಿಗೆ ಬೈಬಲ್‌ ಅಂದರೆ ತುಂಬ ಇಷ್ಟ. ಇವರು ಇಂಗ್ಲೆಂಡ್‌ನಲ್ಲಿ ಹಳ್ಳಿಯಿಂದ ಹಳ್ಳಿಗೆ ನಡಕೊಂಡು ಹೋಗಿ ಜನರಿಗೆ ಬೈಬಲನ್ನು ಓದಿ ಹೇಳುತ್ತಿದ್ದರು ಮತ್ತು ಕೈಯಿಂದ ಬರೆಯಲಾಗಿದ್ದ ಬೈಬಲಿನ ಭಾಗಗಳನ್ನು ಕೊಡುತ್ತಿದ್ದರು. ಅವರು ಮಾಡಿದ ಈ ಕೆಲಸದಿಂದ ಬೈಬಲ್‌ ಪುನಃ ಪ್ರಸಿದ್ಧವಾಯಿತು.

12. ವಿಕ್ಲಿಫ್‌ ಮತ್ತು ಅವರ ಕೆಲಸದ ಬಗ್ಗೆ ಪಾದ್ರಿಗಳಿಗೆ ಹೇಗನಿಸಿತು?

12 ವಿಕ್ಲಿಫನ್ನು, ಅವರು ಭಾಷಾಂತರ ಮಾಡಿದ ಬೈಬಲನ್ನು ಮತ್ತು ಅವರ ಅನುಯಾಯಿಗಳನ್ನು ಪಾದ್ರಿಗಳು ದ್ವೇಷಿಸಿದರು. ಈ ಅನುಯಾಯಿಗಳನ್ನು ಅವರು ಹಿಂಸಿಸಿದರು ಮತ್ತು ವಿಕ್ಲಿಫ್‌ ಬೈಬಲ್‌ಗಳನ್ನು ಹುಡುಕಿ ಹುಡುಕಿ ನಾಶಮಾಡಿದರು. ವಿಕ್ಲಿಫ್‌ ತೀರಿಕೊಂಡ ಮೇಲೂ ಪಾದ್ರಿಗಳು ಅವರಿಗೆ ಚರ್ಚ್‌ ವಿರೋಧಿ ಎಂಬ ಪಟ್ಟ ಕಟ್ಟಿ ಅವರ ಸಮಾಧಿಯಿಂದ ಅವರ ಮೂಳೆಗಳನ್ನು ತೆಗೆದು, ಬೆಂಕಿಯಲ್ಲಿ ಸುಟ್ಟು, ಆ ಬೂದಿಯನ್ನು ಸ್ವಿಫ್ಟ್‌ ನದಿಯಲ್ಲಿ ಬಿಸಾಡಿದರು. ಆದರೂ ಅನೇಕ ಜನರು ದೇವರ ವಾಕ್ಯವನ್ನು ಓದಿ ಅರ್ಥಮಾಡಿಕೊಳ್ಳಲು ಬಯಸಿದರು. ಚರ್ಚು ಈ ಬಯಕೆಯನ್ನು ಹೊಸಕಿಹಾಕಲು ಆಗಲಿಲ್ಲ. ಇದರ ನಂತರ ಬಂದ ಅನೇಕ ಶತಮಾನಗಳಲ್ಲಿ ಯೂರೋಪ್‌ ಮತ್ತು ಲೋಕದ ಬೇರೆ ಭಾಗಗಳಲ್ಲಿದ್ದ ಜನರು ಬೈಬಲನ್ನು ಅನೇಕರು ಅರ್ಥಮಾಡಿಕೊಳ್ಳುವ ಭಾಷೆಗಳಲ್ಲಿ ಭಾಷಾಂತರಿಸಿ ಮುದ್ರಿಸಲು ಆರಂಭಿಸಿದರು.

‘ನಿನಗೆ ವೃದ್ಧಿಮಾರ್ಗವನ್ನು ಬೋಧಿಸುವವನು’

13. (ಎ) ನಮಗೆ ಯಾವ ವಿಷಯ ಸ್ಪಷ್ಟವಾಗುತ್ತದೆ? (ಬಿ) ಇದರಿಂದ ನಮ್ಮ ನಂಬಿಕೆ ಹೇಗೆ ಬಲಗೊಳ್ಳುತ್ತದೆ?

13 ಬೈಬಲನ್ನು ದೇವರ ಪ್ರೇರಣೆಯಿಂದ ಬರೆಯಲಾಗಿದೆ. ಆದರೆ ಅದರ ಭಾಷಾಂತರಗಳನ್ನು, ಅಂದರೆ ಸೆಪ್ಟೂಅಜಂಟ್‌, ವಿಕ್ಲಿಫ್‌ ಬೈಬಲ್‌, ಕಿಂಗ್‌ ಜೇಮ್ಸ್‌ ವರ್ಷನ್‌ ಮತ್ತು ಇತರ ಭಾಷಾಂತರಗಳನ್ನು ದೇವರ ನೇರವಾದ ಪ್ರೇರಣೆಯಿಂದ ಮಾಡಲಾಯಿತೆಂದು ಹೇಳಲು ಸಾಧ್ಯವಿಲ್ಲ. ಆದರೆ ಈ ಭಾಷಾಂತರಗಳನ್ನು ಹೇಗೆ ತಯಾರಿಸಲಾಯಿತೆಂದು ನೋಡುವಾಗ ಯೆಹೋವನ ವಾಕ್ಯ ಸದಾಕಾಲ ಇರುವುದು ಎಂಬ ಆತನ ಮಾತು ನೆರವೇರಿದ್ದು ಸ್ಪಷ್ಟವಾಗುತ್ತದೆ. ಇದು ಆತನು ಕೊಟ್ಟಿರುವ ಬೇರೆ ವಾಗ್ದಾನಗಳು ಸಹ ಖಂಡಿತ ನೆರವೇರುವವು ಎಂಬ ನಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ.—ಯೆಹೋ. 23:14.

14. ನಾವು ಬೈಬಲ್‌ ಬಗ್ಗೆ ಕಲಿಯುವ ವಿಷಯ ದೇವರ ಮೇಲಿರುವ ಪ್ರೀತಿಯನ್ನು ಹೇಗೆ ಜಾಸ್ತಿ ಮಾಡುತ್ತದೆ?

14 ಯೆಹೋವನು ತನ್ನ ವಾಕ್ಯವನ್ನು ಹೇಗೆ ಸಂರಕ್ಷಿಸಿದ್ದಾನೆ ಎಂದು ನೋಡುವಾಗ ಆತನ ಮೇಲಿರುವ ನಮ್ಮ ನಂಬಿಕೆ ಬಲವಾಗುತ್ತದೆ ಮಾತ್ರವಲ್ಲ, ಆತನ ಮೇಲೆ ಪ್ರೀತಿಯೂ ಜಾಸ್ತಿಯಾಗುತ್ತದೆ. * ಯೆಹೋವನು ಬೈಬಲನ್ನು ನಮಗೆ ಕೊಡಲು ಮತ್ತು ಅದನ್ನು ಸಂರಕ್ಷಿಸಲು ಕಾರಣ ಏನು? ಆತನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮಗೆ ವೃದ್ಧಿಮಾರ್ಗವನ್ನು ಬೋಧಿಸಲು ಬಯಸುತ್ತಾನೆ. (ಯೆಶಾಯ 48:17, 18 ಓದಿ.) ಹಾಗಾಗಿ ನಾವು ಆತನನ್ನು ಪ್ರೀತಿಸಿ ಆತನ ಮಾತನ್ನು ಕೇಳಬೇಕೆಂದು ಮನಸ್ಸಾಗುತ್ತದಲ್ಲವೆ?—1 ಯೋಹಾ. 4:19; 5:3.

15. ನಾವು ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

15 ದೇವರ ವಾಕ್ಯವೆಂದರೆ ನಮಗೆ ತುಂಬ ಇಷ್ಟ. ಹಾಗಾದರೆ ನಮ್ಮ ವೈಯಕ್ತಿಕ ಬೈಬಲ್‌ ಓದುವಿಕೆಯಿಂದ ಹೇಗೆ ಪೂರ್ಣ ಪ್ರಯೋಜನ ಪಡೆಯಬಹುದು? ಸೇವೆಯಲ್ಲಿ ನಮಗೆ ಸಿಗುವ ಜನರು ಬೈಬಲಿನ ಮಹತ್ವವನ್ನು ತಿಳಿದುಕೊಳ್ಳಲು ನಾವು ಹೇಗೆ ಸಹಾಯ ಮಾಡಬಹುದು? ಸಭೆಯಲ್ಲಿ ಬೋಧಿಸುವವರು ತಾವು ಕಲಿಸುವುದೆಲ್ಲವನ್ನು ದೇವರ ವಾಕ್ಯದ ಮೇಲೆ ಹೇಗೆ ಪೂರ್ತಿಯಾಗಿ ಆಧರಿಸಬಹುದು? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 4 ನವೆಂಬರ್‌ 1, 2009​ರ ಕಾವಲಿನಬುರುಜುವಿನಲ್ಲಿ (ಇಂಗ್ಲಿಷ್‌) ಬಂದ “ನೀವು ಹೀಬ್ರು ಮತ್ತು ಗ್ರೀಕ್‌ ಭಾಷೆಯನ್ನು ಕಲಿಯಬೇಕಾ?” ಎಂಬ ಲೇಖನ ನೋಡಿ.

^ ಪ್ಯಾರ. 5 ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲಿನಲ್ಲಿ ಬಳಸಲಾದ ಕೆಲವೊಂದು ಪದಗಳು ಮುಂದೆ ಇಂಗ್ಲಿಷ್‌ ಭಾಷೆಯಲ್ಲಿ ಪ್ರಸಿದ್ಧ ನುಡಿಗಟ್ಟುಗಳಾದವು.