ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಂತೆ ನೀವೂ ಕನಿಕರ ತೋರಿಸಿ

ಯೆಹೋವನಂತೆ ನೀವೂ ಕನಿಕರ ತೋರಿಸಿ

“ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು.” —ವಿಮೋ. 34:6.

ಗೀತೆಗಳು: 142, 12

1. (ಎ) ಯೆಹೋವನು ತನ್ನ ಬಗ್ಗೆ ತಿಳಿಸುವಾಗ ಮೋಶೆಗೆ ಏನು ಹೇಳಿದನು? (ಬಿ) ಇದರಲ್ಲಿರುವ ವಿಶೇಷತೆ ಏನು?

ಒಮ್ಮೆ ಮೋಶೆಗೆ ಯೆಹೋವನ ಬೆಂಬಲ ತನಗಿದೆಯಾ ಎಂದು ತಿಳಿದುಕೊಳ್ಳಬೇಕಿತ್ತು. (ವಿಮೋ. 33:13) ಆಗ ಯೆಹೋವನು ತನ್ನ ಬಗ್ಗೆ ತಿಳಿಸುತ್ತಾ ತನ್ನ ಹೆಸರು ಮತ್ತು ತನ್ನ ಕೆಲವು ಗುಣಗಳನ್ನು ಪ್ರಕಟಿಸಿದನು. ಯೆಹೋವನು ಇಲ್ಲಿ ತನ್ನ ಶಕ್ತಿ ಅಥವಾ ವಿವೇಕದ ಬಗ್ಗೆ ತುಂಬ ಹೇಳಬಹುದಿತ್ತು. ಆದರೆ ಹಾಗೆ ಮಾಡದೆ ಮೊದಲು ತನ್ನ ಕನಿಕರ ಮತ್ತು ದಯೆ ಬಗ್ಗೆ ಹೇಳಿದನು. (ವಿಮೋಚನಕಾಂಡ 34:5-7 ಓದಿ.) ತನ್ನ ಸೇವಕರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡುವಂಥ ತನ್ನ ಗುಣಗಳನ್ನು ಯೆಹೋವನು ಒತ್ತಿಹೇಳಿದನು. ಇದರ ಬಗ್ಗೆ ಓದಿದಾಗ ಯೆಹೋವ ದೇವರಿಗೆ ನಮ್ಮ ಬಗ್ಗೆ ಎಷ್ಟೊಂದು ಕಾಳಜಿ ಇದೆ ಎಂದು ತಿಳಿದು ಹೃದಯತುಂಬಿ ಬರುವುದಿಲ್ಲವಾ? ಈ ಲೇಖನದಲ್ಲಿ ಕನಿಕರದ ಬಗ್ಗೆ ಚರ್ಚಿಸಲಿದ್ದೇವೆ. * ಬೇರೆಯವರ ನೋವು, ಕಷ್ಟ ನೋಡಿ ನಮ್ಮಲ್ಲಿ ಮೂಡುವ ಸಹಾನುಭೂತಿಯ ಭಾವನೆ ಮತ್ತು ಅವರಿಗೆ ಸಹಾಯ ಮಾಡಬೇಕೆಂಬ ಆಸೆಯೇ ಕನಿಕರ ಆಗಿದೆ.

2, 3. (ಎ) ಮಾನವರಲ್ಲಿ ಕನಿಕರದ ಭಾವನೆ ಮೂಡುವುದು ಸಹಜ ಯಾಕೆ? (ಬಿ) ಕನಿಕರ ತೋರಿಸುವುದರ ಬಗ್ಗೆ ಬೈಬಲಿನಿಂದ ನಾವು ಯಾಕೆ ಹೆಚ್ಚು ಕಲಿಯಬೇಕು?

2 ಕನಿಕರವುಳ್ಳ ಯೆಹೋವನು ಮಾನವರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಮಾಡಿದ್ದಾನೆ. ಹಾಗಾಗಿ ಮಾನವರು ಕನಿಕರ ತೋರಿಸುವುದು, ಬೇರೆಯವರ ಬಗ್ಗೆ ಕಾಳಜಿ ವಹಿಸುವುದು ಸಹಜ. ಯೆಹೋವನ ಬಗ್ಗೆ ಗೊತ್ತಿಲ್ಲದ ಜನರೂ ಹೆಚ್ಚಾಗಿ ಕನಿಕರ ತೋರಿಸುತ್ತಾರೆ. (ಆದಿ. 1:27) ಕನಿಕರ ತೋರಿಸಿರುವ ಅನೇಕರ ಉದಾಹರಣೆಗಳು ಬೈಬಲಿನಲ್ಲಿವೆ. ಸೊಲೊಮೋನನ ಸಮಯದಲ್ಲಿ ಇಬ್ಬರು ಮಹಿಳೆಯರು ಒಂದು ಮಗುವಿಗಾಗಿ ಜಗಳ ಮಾಡುತ್ತಿದ್ದಾಗ ಅವನು ಅದನ್ನು ಬಗೆಹರಿಸಲು ಒಂದು ಉಪಾಯ ಮಾಡಿದನು. ಆ ಮಗುವನ್ನು ಕಡಿದು ಎರಡು ಭಾಗ ಮಾಡುವಂತೆ ಅಪ್ಪಣೆ ಕೊಟ್ಟನು. ಆಗ ಆ ಮಗುವಿನ ನಿಜವಾದ ತಾಯಿಗೆ ತನ್ನ ಕೂಸಿನ ಮೇಲೆ ಕನಿಕರ ಉಕ್ಕಿ, ಮಗುವನ್ನು ಆ ಇನ್ನೊಬ್ಬ ಮಹಿಳೆಗೇ ಕೊಟ್ಟುಬಿಡಿ ಎಂದು ರಾಜನನ್ನು ಬೇಡಿಕೊಂಡಳು. (1 ಅರ. 3:23-27) ಕನಿಕರ ತೋರಿಸಿರುವವರಲ್ಲಿ ಇನ್ನೊಂದು ಉದಾಹರಣೆ ಫರೋಹನ ಮಗಳದ್ದು. ಅವಳಿಗೆ ಪುಟ್ಟ ಮಗು ಮೋಶೆ ಸಿಕ್ಕಿದಾಗ ಅವನು ಇಬ್ರಿಯನೆಂದು ಅವಳಿಗೆ ಗೊತ್ತಾಯಿತು. ಇಬ್ರಿಯ ಮಕ್ಕಳನ್ನು ಉಳಿಸಬಾರದೆಂದು ಅವಳಿಗೆ ಗೊತ್ತಿದ್ದರೂ ಆ ಪಾಪುವಿನ “ಮೇಲೆ ಕನಿಕರಪಟ್ಟು” ಅವನನ್ನು ತನ್ನ ಮಗನಾಗಿ ಸಾಕಲು ನಿರ್ಧರಿಸಿದಳು.—ವಿಮೋ. 2:5, 6.

3 ನಾವು ಕನಿಕರ ತೋರಿಸುವುದರ ಬಗ್ಗೆ ಹೆಚ್ಚು ಕಲಿಯಬೇಕು. ಯಾಕೆ? ಯಾಕೆಂದರೆ ನಾವು ಯೆಹೋವನನ್ನು ಅನುಕರಿಸಬೇಕೆಂದು ಆತನು ಬಯಸುತ್ತಾನೆ. (ಎಫೆ. 5:1) ಕನಿಕರ ತೋರಿಸುವಂಥ ರೀತಿಯಲ್ಲಿ ಆತನು ನಮ್ಮನ್ನು ಸೃಷ್ಟಿಮಾಡಿದ್ದರೂ, ನಾವು ಅಪರಿಪೂರ್ಣರು ಆಗಿರುವುದರಿಂದ ಕೆಲವೊಮ್ಮೆ ಸ್ವಾರ್ಥಿಗಳಾಗಿಬಿಡುತ್ತೇವೆ. ಬೇರೆಯವರಿಗೆ ಸಹಾಯ ಮಾಡಬೇಕಾ ಅಥವಾ ನಮ್ಮದನ್ನು ನಾವು ನೋಡಿಕೊಂಡು ಸುಮ್ಮನಿದ್ದು ಬಿಡಬೇಕಾ ಎಂಬ ಇಕ್ಕಟ್ಟಿಗೆ ಸಿಲುಕುತ್ತೇವೆ. ಆದರೆ ಬೇರೆಯವರ ಬಗ್ಗೆ ಆಸಕ್ತಿ ವಹಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ಅದಕ್ಕಾಗಿ ಮೊದಲು, ಯೆಹೋವನು ಮತ್ತು ಇತರರು ಕನಿಕರ ತೋರಿಸಿದ ಉದಾಹರಣೆಗಳನ್ನು ನೋಡೋಣ. ನಂತರ, ಯೆಹೋವನಂತೆ ನಾವು ಹೇಗೆ ಕನಿಕರ ತೋರಿಸಬಹುದು ಮತ್ತು ಅದರಿಂದ ನಮಗೂ ಹೇಗೆ ಒಳ್ಳೇದಾಗುತ್ತದೆ ಎಂದು ತಿಳಿದುಕೊಳ್ಳೋಣ.

ಯೆಹೋವನ ಪರಿಪೂರ್ಣ ಮಾದರಿ

4. (ಎ) ಯೆಹೋವನು ಸೊದೋಮಿಗೆ ಯಾಕೆ ದೇವದೂತರನ್ನು ಕಳುಹಿಸಿದನು? (ಬಿ) ಲೋಟನ ಕುಟುಂಬಕ್ಕಾದ ಅನುಭವದಿಂದ ನಾವೇನು ಕಲಿಯಬಹುದು?

4 ಯೆಹೋವನು ಕನಿಕರ ತೋರಿಸಿದ ಅನೇಕ ಉದಾಹರಣೆಗಳು ಬೈಬಲಿನಲ್ಲಿವೆ. ಲೋಟನಿಗೆ ಕನಿಕರ ತೋರಿಸಿದ್ದು ಅದರಲ್ಲಿ ಒಂದು. ಅನೈತಿಕತೆಯಲ್ಲಿ ಮುಳುಗಿಹೋಗಿದ್ದ ಸೊದೋಮ್‌ ಗೊಮೋರದ ಜನರನ್ನು ನೋಡಿ ನೀತಿವಂತ ಲೋಟನು “ಬಹಳವಾಗಿ ದುಃಖಿತನಾಗಿದ್ದ.” ಆ ಜನರಿಗೆ ಯೆಹೋವನ ಮೇಲೆ ಒಂಚೂರೂ ಗೌರವ ಇರಲಿಲ್ಲ. ಇಂಥವರನ್ನು ನಾಶಮಾಡಬೇಕೆಂದು ಯೆಹೋವನು ನಿರ್ಧರಿಸಿದ್ದನು. (2 ಪೇತ್ರ 2:7, 8) ಆತನು ಲೋಟನ ಬಳಿ ದೇವದೂತರನ್ನು ಕಳುಹಿಸಿ ಸೊದೋಮ್‌ ಗೊಮೋರ ನಾಶವಾಗಲಿದೆ ಮತ್ತು ಅವನು ಕುಟುಂಬ ಸಮೇತ ಆ ಊರನ್ನು ಬಿಟ್ಟು ಓಡಿಹೋಗಬೇಕು ಎಂದು ಹೇಳಿಸಿದನು. ಬೈಬಲ್‌ ಹೇಳುವುದು: “[ಲೋಟನು] ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ [ದೇವದೂತರು] ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು.” (ಆದಿ. 19:16) ಯೆಹೋವನು ಲೋಟನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಂತೆ ನಮ್ಮ ಕಷ್ಟದ ಪರಿಸ್ಥಿತಿಯನ್ನೂ ಅರ್ಥಮಾಡಿಕೊಳ್ಳುತ್ತಾನೆ ಎಂಬ ಭರವಸೆಯನ್ನು ಈ ಉದಾಹರಣೆ ಕೊಡುತ್ತದೆ.—ಯೆಶಾ. 63:7-9; ಯಾಕೋ. 5:11; 2 ಪೇತ್ರ 2:9.

5. ಹೇಗೆ ಕನಿಕರ ತೋರಿಸಬೇಕು ಎಂದು ದೇವರ ವಾಕ್ಯ ನಮಗೆ ಕಲಿಸುತ್ತದೆ?

5 ಯೆಹೋವನು ಬೇರೆಯವರಿಗೆ ಕನಿಕರ ತೋರಿಸಿದ್ದು ಮಾತ್ರವಲ್ಲ ತನ್ನ ಜನರೂ ಅದನ್ನೇ ಮಾಡಬೇಕೆಂದು ಕಲಿಸಿದ್ದಾನೆ. ಇಸ್ರಾಯೇಲ್ಯರಿಗೆ ಆತನು ಕೊಟ್ಟ ಒಂದು ನಿಯಮ ಇದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಲ ಕೊಟ್ಟವನು ಸಾಲ ಮಾಡಿದವನ ಕಂಬಳಿಯನ್ನು ಅಡವು ಇಟ್ಟುಕೊಳ್ಳಬಹುದಿತ್ತು. (ವಿಮೋಚನಕಾಂಡ 22:26, 27 ಓದಿ.) ಆದರೆ ಅವನು ಅದನ್ನು ಸೂರ್ಯ ಮುಳುಗುವ ಮುಂಚೆಯೇ ಹಿಂದೆ ಕೊಡಬೇಕಿತ್ತು. ಯಾಕೆಂದರೆ ಸಾಲ ಮಾಡಿದವನಿಗೆ ರಾತ್ರಿ ಸಮಯದಲ್ಲಿ ತನ್ನನ್ನು ಬೆಚ್ಚಗಿರಿಸಿಕೊಳ್ಳಲಿಕ್ಕಾಗಿ ಕಂಬಳಿ ಬೇಕಾಗುತ್ತಿತ್ತು. ಸಾಲ ಕೊಟ್ಟವನಿಗೆ ಕನಿಕರ ಇಲ್ಲದಿದ್ದರೆ ಬಹುಶಃ ಅವನು ಅದನ್ನು ಹಿಂದೆ ಕೊಡಲಿಕ್ಕಿಲ್ಲ. ಆದರೆ ಹಾಗೆ ಮಾಡಬಾರದು, ಕನಿಕರ ತೋರಿಸಬೇಕು ಎಂದು ಯೆಹೋವನು ಕಲಿಸಿದನು. ಈ ನಿಯಮದ ಹಿಂದಿರುವ ತತ್ವದಲ್ಲಿ ನಮಗೆ ಯಾವ ಪಾಠವಿದೆ? ನಾವು ಯಾವತ್ತೂ ನಮ್ಮ ಜೊತೆ ಕ್ರೈಸ್ತರ ಅಗತ್ಯಗಳನ್ನು ಅಲಕ್ಷಿಸಬಾರದು. ನಮ್ಮ ಒಬ್ಬ ಸಹೋದರ ಅಥವಾ ಸಹೋದರಿ ಕಷ್ಟದಲ್ಲಿರುವಾಗ ಅವರಿಗೆ ಸಹಾಯ ಮಾಡಲು ನಮ್ಮ ಕೈಯಲ್ಲಾದರೆ ಮಾಡಬೇಕು.—ಕೊಲೊ. 3:12; ಯಾಕೋ. 2:15, 16; 1 ಯೋಹಾನ 3:17 ಓದಿ.

6. ಇಸ್ರಾಯೇಲ್ಯರು ಪಾಪಮಾಡಿದಾಗ ಯೆಹೋವನು ತೋರಿಸಿದ ಕನಿಕರದಿಂದ ನಾವು ಯಾವ ಪಾಠ ಕಲಿಯಬಹುದು?

6 ಇಸ್ರಾಯೇಲ್ಯರು ತನ್ನ ವಿರುದ್ಧ ತಪ್ಪುಮಾಡಿದಾಗ ಕೂಡ ಯೆಹೋವನು ಅವರಿಗೆ ಕನಿಕರ ತೋರಿಸಿದನು. “ಅವರ ಪಿತೃಗಳ ದೇವರಾದ ಯೆಹೋವನು ತನ್ನ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ ಸಾವಕಾಶಮಾಡದೆ ತನ್ನ ದೂತರ ಮುಖಾಂತರವಾಗಿ ಅವರನ್ನು ಎಚ್ಚರಿಸುತ್ತಾ” ಇದ್ದನು ಎಂದು ಬೈಬಲ್‌ ಹೇಳುತ್ತದೆ. (2 ಪೂರ್ವ. 36:15) ಯೆಹೋವನ ಬಗ್ಗೆ ಗೊತ್ತಿಲ್ಲದ ಜನರಿಗೆ ನಾವೂ ಆತನಂತೆ ಕನಿಕರ ತೋರಿಸಬೇಕು. ಯಾಕೆಂದರೆ ಅವರು ಪಶ್ಚಾತ್ತಾಪಪಟ್ಟು ಆತನ ಸ್ನೇಹಿತರಾಗುವ ಸಾಧ್ಯತೆ ಇದೆ. ಮುಂದೆ ಬರಲಿರುವ ನ್ಯಾಯತೀರ್ಪಿನ ಸಮಯದಲ್ಲಿ ಯಾರೊಬ್ಬರೂ ನಾಶವಾಗುವುದು ಆತನಿಗೆ ಇಷ್ಟವಿಲ್ಲ. (2 ಪೇತ್ರ 3:9) ಆ ಸಮಯ ಬರುವ ವರೆಗೆ ನಮ್ಮಿಂದ ಸಾಧ್ಯವಾಗುವಷ್ಟು ಹೆಚ್ಚು ಜನರಿಗೆ ದೇವರ ಎಚ್ಚರಿಕೆಯ ಸಂದೇಶವನ್ನು ತಿಳಿಸಿ ಅವರಿಗೆ ಆತನ ಕನಿಕರದಿಂದ ಪ್ರಯೋಜನವಾಗುವಂತೆ ಸಹಾಯ ಮಾಡುತ್ತೇವೆ.

7, 8. ತಮಗೆ ಯೆಹೋವನು ಕನಿಕರ ತೋರಿಸಿದನು ಎಂದು ಒಂದು ಕುಟುಂಬ ಯಾಕೆ ನಂಬುತ್ತದೆ?

7 ಇಂದು ಯೆಹೋವನ ಸಾಕ್ಷಿಗಳಲ್ಲಿ ಅನೇಕರಿಗೆ ಆತನ ಕನಿಕರವನ್ನು ಪಡೆದುಕೊಂಡ ಅನುಭವಗಳಾಗಿವೆ. ಉದಾಹರಣೆಗೆ, 1990​ರ ದಶಕದಲ್ಲಿ ಬಾಸ್ನಿಯದಲ್ಲಿ ಬೇರೆ ಬೇರೆ ಕುಲ, ಜನಾಂಗದ ಜನರು ಹೊಡೆದಾಡುತ್ತಾ ಒಬ್ಬರನ್ನೊಬ್ಬರು ಕೊಲ್ಲುತ್ತಾ ಇದ್ದರು. ಅಲ್ಲಿನ ಒಂದು ಕುಟುಂಬದಲ್ಲಿ 12 ವರ್ಷದ ಒಬ್ಬ ಹುಡುಗನಿದ್ದ. ಅವನ ಹೆಸರು ಮಿಲಾನ್‌ ಎಂದಿಟ್ಟುಕೊಳ್ಳಿ. ಒಮ್ಮೆ ತನ್ನ ತಮ್ಮ, ಅಪ್ಪಅಮ್ಮ ಮತ್ತು ಬೇರೆ ಸಾಕ್ಷಿಗಳ ಜೊತೆ ಬಾಸ್ನಿಯದಿಂದ ಸರ್ಬಿಯಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ. ಅವರೆಲ್ಲರೂ ಅಧಿವೇಶನಕ್ಕೆ ಹೋಗುತ್ತಿದ್ದರು. ಆ ಅಧಿವೇಶನದಲ್ಲಿ ಮಿಲಾನ್‌ನ ಹೆತ್ತವರು ದೀಕ್ಷಾಸ್ನಾನ ಪಡೆಯಲಿದ್ದರು. ಬಸ್ಸು ಗಡಿಯ ಹತ್ತಿರ ಬಂದಾಗ ಅಲ್ಲಿದ್ದ ಸೈನಿಕರು ಮಿಲಾನ್‌ ಮತ್ತು ಅವನ ಕುಟುಂಬ ಬೇರೆ ಜನಾಂಗದವರು ಎಂದು ಗಮನಿಸಿದರು. ಅವರನ್ನು ಕೆಳಗಿಳಿಸಿ, ಉಳಿದವರನ್ನು ಹೋಗಲು ಬಿಟ್ಟರು. ಎರಡು ದಿನಗಳಾದರೂ ಆ ಕುಟುಂಬವನ್ನು ಸೈನಿಕರು ಬಿಡಲಿಲ್ಲ. ಕೊನೆಗೆ, ಅಲ್ಲಿದ್ದ ಅಧಿಕಾರಿ ತನ್ನ ಮೇಲಿನ ಅಧಿಕಾರಿಗೆ ಫೋನ್‌ ಮಾಡಿ ಈ ಕುಟುಂಬವನ್ನು ಏನು ಮಾಡಬೇಕು ಎಂದು ಕೇಳಿದನು. ಮಿಲಾನ್‌ ಮತ್ತು ಅವನ ಕುಟುಂಬ ಅಲ್ಲೇ ಹತ್ತಿರದಲ್ಲೇ ನಿಂತಿದ್ದರು. ಆ ಮೇಲಿನ ಅಧಿಕಾರಿ “ಅವರನ್ನು ಕರಕೊಂಡು ಹೋಗಿ ಗುಂಡು ಹಾರಿಸಿ ಕೊಂದುಬಿಡಿ” ಎಂದು ಹೇಳಿದ್ದನ್ನೂ ಅವರು ಕೇಳಿಸಿಕೊಂಡರು.

8 ಸೈನಿಕರು ಮಾತಾಡುತ್ತಿರುವಾಗಲೇ ಇಬ್ಬರು ಅಪರಿಚಿತರು ಈ ಕುಟುಂಬದ ಹತ್ತಿರ ಬಂದರು. ‘ನಾವೂ ಸಾಕ್ಷಿಗಳೇ, ಬಸ್ಸಿನಲ್ಲಿದ್ದ ಸಹೋದರರು ನಡೆದದ್ದನ್ನು ನಮಗೆ ಹೇಳಿದರು’ ಎಂದು ಪಿಸುಗುಟ್ಟಿದರು. ನಂತರ ಮಿಲಾನ್‌ ಮತ್ತು ಅವನ ತಮ್ಮನಿಗೆ ಕಾರನ್ನು ಹತ್ತಲು ಹೇಳಿದರು. ಗಡಿಯನ್ನು ದಾಟಿಹೋಗೋಣ, ಸೈನಿಕರು ಮಕ್ಕಳ ದಾಖಲೆಪತ್ರಗಳನ್ನು ನೋಡುವುದಿಲ್ಲ ಎಂದರು. ಮಿಲಾನ್‌ನ ಹೆತ್ತವರನ್ನು ಗಡಿಯಲ್ಲಿನ ಚೆಕ್‌ ಪೋಸ್ಟ್‌ನ ಹಿಂದಿನಿಂದ ನಡೆದು ಆಚೆ ಬದಿಗೆ ಬರುವಂತೆ ಹೇಳಿದರು. ಇದನ್ನು ಕೇಳಿ ಮಿಲಾನ್‌ಗೆ ಎಷ್ಟು ಭಯವಾಯಿತೆಂದರೆ ನಗುವುದಾ ಅಳುವುದಾ ಅಂತ ಗೊತ್ತಾಗಲಿಲ್ಲ. ಅವನ ಹೆತ್ತವರು, “ನಾವು ಹೋಗುವಾಗ ಇವರು ಸುಮ್ಮನಿರುತ್ತಾರಾ?” ಎಂದು ಕೇಳಿದರು. ಆದರೆ ಅವರು ನಡೆದು ಹೋಗುತ್ತಿದ್ದಾಗ ಸೈನಿಕರು ಅದು ತಮಗೆ ಕಾಣುತ್ತಿಲ್ಲ ಎನ್ನುವ ರೀತಿಯಲ್ಲಿ ಇದ್ದರು. ಮಿಲಾನ್‌ ಮತ್ತು ಅವನ ತಮ್ಮ ಗಡಿಯನ್ನು ದಾಟಿದರು, ಹೆತ್ತವರೂ ಗಡಿಯಾಚೆ ಅವರಿಗೆ ಸಿಕ್ಕಿದರು. ಎಲ್ಲರೂ ಅಧಿವೇಶನಕ್ಕೆ ಹಾಜರಾದರು. ತಮ್ಮ ಪ್ರಾರ್ಥನೆಗಳಿಗೆ ಯೆಹೋವನು ಉತ್ತರ ಕೊಟ್ಟಿದ್ದನೆಂದು ಅವರಿಗೆ ಪೂರ್ತಿ ಮನದಟ್ಟಾಗಿತ್ತು! ಯೆಹೋವನು ಯಾವಾಗಲೂ ತನ್ನ ಸೇವಕರನ್ನು ಈ ರೀತಿ ಅದ್ಭುತವಾಗಿ ಕಾಪಾಡುವುದಿಲ್ಲ ಎಂದು ನಮಗೆ ಬೈಬಲಿನಿಂದ ಗೊತ್ತು. (ಅ. ಕಾ. 7:58-60) ಹೀಗಿದ್ದರೂ ಮಿಲಾನ್‌ ಹೇಳುವುದು: “ದೇವದೂತರ ಮೂಲಕ ಸೈನಿಕರನ್ನು ಕುರುಡು ಮಾಡಿ ಯೆಹೋವನು ನಮ್ಮನ್ನು ರಕ್ಷಿಸಿದನೆಂದು ನನಗೆ ಅನಿಸುತ್ತದೆ.”—ಕೀರ್ತ. 97:10.

9. ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಪರಿಸ್ಥಿತಿ ನೋಡಿ ಯೇಸುವಿಗೆ ಹೇಗನಿಸಿತು? (ಲೇಖನದ ಆರಂಭದ ಚಿತ್ರ ನೋಡಿ.)

9 ಕನಿಕರ ತೋರಿಸುವುದರಲ್ಲಿ ಯೇಸುವಿನ ಮಾದರಿ ಕೂಡ ತುಂಬ ಉತ್ತಮವಾಗಿದೆ. ಜನರನ್ನು ನೋಡಿದಾಗ ಅವನಿಗೆ ಕನಿಕರ ಮೂಡಿತು. ಯಾಕೆಂದರೆ ಅವರು “ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿ”ದ್ದರು. ಇದನ್ನು ನೋಡಿ ಯೇಸು ಏನು ಮಾಡಿದನು? “ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು.” (ಮತ್ತಾ. 9:36; ಮಾರ್ಕ 6:34 ಓದಿ.) ಅವನು ಫರಿಸಾಯರಂತೆ ಇರಲಿಲ್ಲ. ಫರಿಸಾಯರಿಗೆ ಜನರ ಮೇಲೆ ಕನಿಕರ ಇರಲಿಲ್ಲ ಮತ್ತು ಅವರಿಗೆ ಸಹಾಯ ಮಾಡುವ ಮನಸ್ಸಿರಲಿಲ್ಲ. (ಮತ್ತಾ. 12:9-14; 23:4; ಯೋಹಾ. 7:49) ಯೇಸುವಿಗೆ ಇದ್ದಂತೆ ನಿಮಗೂ ಜನರಿಗೆ ಸಹಾಯ ಮಾಡಬೇಕು, ಅವರಿಗೆ ಯೆಹೋವನ ಬಗ್ಗೆ ಕಲಿಸಬೇಕು ಎಂಬ ಆಸೆ ಇದೆಯಾ?

10, 11. ನಾವು ಯಾವಾಗಲೂ ಕನಿಕರ ತೋರಿಸುವುದು ಸೂಕ್ತವೇ? ವಿವರಿಸಿ.

10 ನಾವು ಯಾವಾಗಲೂ ಕನಿಕರ ತೋರಿಸುವುದು ಸೂಕ್ತವಾಗಿರುವುದಿಲ್ಲ. ಉದಾಹರಣೆಗೆ, ದೇವರು ರಾಜ ಸೌಲನಿಗೆ ಎಲ್ಲ ಅಮಾಲೇಕ್ಯರನ್ನು ಮತ್ತು ಅವರ ಎಲ್ಲ ಪಶುಗಳನ್ನು ಕೊಲ್ಲಬೇಕು ಎಂದು ಹೇಳಿದ್ದನು. ಆದರೆ ಅಮಾಲೇಕ್ಯರ ರಾಜನೂ ದೇವಜನರ ವೈರಿಯೂ ಆಗಿದ್ದ ಅಗಾಗನನ್ನು ಮತ್ತು ಅಮಾಲೇಕ್ಯರ ಪಶುಗಳನ್ನು ಸೌಲನು ಕೊಲ್ಲದೆ ಬಿಟ್ಟಾಗ ಕನಿಕರ ತೋರಿಸುತ್ತಿದ್ದೇನೆ ಎಂದು ಅವನು ನೆನಸಿರಬಹುದು. ಅವಿಧೇಯತೆ ತೋರಿಸಿದ ಸೌಲನನ್ನು ಯೆಹೋವನು ರಾಜನ ಸ್ಥಾನದಿಂದ ತಳ್ಳಿಬಿಟ್ಟನು. (1 ಸಮು. 15:3, 9, 15) ಯೆಹೋವನು ನೀತಿಗನುಸಾರ ತೀರ್ಪುಮಾಡುವ ನ್ಯಾಯಧೀಶನಾಗಿದ್ದಾನೆ. ಆತನಿಗೆ ಜನರ ಹೃದಯಗಳನ್ನು ಓದುವ ಸಾಮರ್ಥ್ಯವಿದೆ. ಹಾಗಾಗಿ ಯಾರಿಗೆ ಕನಿಕರ ತೋರಿಸಬಾರದು ಎಂದು ಆತನಿಗೆ ಚೆನ್ನಾಗಿ ತಿಳಿದಿದೆ. (ಪ್ರಲಾ. 2:17; ಯೆಹೆ. 5:11) ತನಗೆ ವಿಧೇಯರಾಗಲು ಒಪ್ಪದ ಜನರ ವಿರುದ್ಧ ಆತನು ಅತಿ ಬೇಗನೆ ನ್ಯಾಯತೀರ್ಪು ಮಾಡಲಿದ್ದಾನೆ. (2 ಥೆಸ. 1:6-10) ಆ ಸಮಯದಲ್ಲಿ ದುಷ್ಟರಿಗೆ ಆತನು ಕನಿಕರ ತೋರಿಸುವುದಿಲ್ಲ. ಬದಲಿಗೆ ಅವರನ್ನು ನಾಶಮಾಡುವ ಮೂಲಕ ಒಳ್ಳೆಯವರಿಗೆ ಕನಿಕರ ತೋರಿಸುತ್ತಾನೆ. ಒಳ್ಳೆಯವರನ್ನು ಕಾಪಾಡುತ್ತಾನೆ.

11 ಯಾರು ಜೀವಿಸಬೇಕು ಯಾರು ಸಾಯಬೇಕು ಎಂದು ತೀರ್ಪು ಮಾಡುವ ಕೆಲಸ ನಮ್ಮದಲ್ಲ. ಬದಲಿಗೆ ನಾವು ಜನರಿಗೆ ಸಹಾಯ ಮಾಡಲು ಈಗ ನಮ್ಮಿಂದ ಆಗುವುದನ್ನೆಲ್ಲ ಮಾಡಬೇಕು. ಯಾವ ಪ್ರಾಯೋಗಿಕ ವಿಧಗಳಲ್ಲಿ ನಾವು ಬೇರೆಯವರಿಗೆ ಕನಿಕರ ತೋರಿಸಬಹುದು? ಕೆಲವು ವಿಧಗಳನ್ನು ಇಲ್ಲಿ ಕೊಡಲಾಗಿದೆ.

ಕನಿಕರ ತೋರಿಸುವ ವಿಧಗಳು

12. ಬೇರೆಯವರ ಜೊತೆ ನಡಕೊಳ್ಳುವ ವಿಧದಲ್ಲಿ ನೀವು ಹೇಗೆ ಕನಿಕರ ತೋರಿಸಬಹುದು?

12 ದಿನನಿತ್ಯದ ಜೀವನದಲ್ಲಿ ಸಹಾಯ ಮಾಡಿ. ಕ್ರೈಸ್ತರು ತಮ್ಮ ಸುತ್ತಮುತ್ತಲಿರುವ ಜನರಿಗೆ ಮತ್ತು ಸಹೋದರ ಸಹೋದರಿಯರಿಗೆ ಕನಿಕರ ತೋರಿಸಬೇಕು ಎಂದು ಯೆಹೋವನು ಹೇಳುತ್ತಾನೆ. (ಯೋಹಾ. 13:34, 35; 1 ಪೇತ್ರ 3:8) ಕನಿಕರ ಎನ್ನುವುದಕ್ಕಿರುವ ಒಂದು ಅರ್ಥ “ಬೇರೆಯವರ ಕಷ್ಟದಲ್ಲಿ ಭಾಗಿಯಾಗುವುದು” ಎಂದಾಗಿದೆ. ಅಂದರೆ ಕನಿಕರ ಇರುವ ವ್ಯಕ್ತಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾನೆ. ಆದ್ದರಿಂದ ಅಂಥವರಿಗೆ ಸಹಾಯ ಮಾಡಲು ಅವಕಾಶಗಳಿಗಾಗಿ ಹುಡುಕಿ. ಬಹುಶಃ ನೀವು ಅವರಿಗೆ ಮನೆಯೊಳಗಿನ ಕೆಲಸಗಳಲ್ಲಿ ಸಹಾಯ ಮಾಡಬಹುದು ಅಥವಾ ಹೊರಗೆ ಹೋಗಿ ಮಾಡಬೇಕಾದ ಅಗತ್ಯ ಕೆಲಸವನ್ನು ಮಾಡಿಕೊಡಬಹುದು.—ಮತ್ತಾ. 7:12.

ಬೇರೆಯವರಿಗೆ ಪ್ರಾಯೋಗಿಕವಾಗಿ ಸಹಾಯ ಮಾಡುವ ಮೂಲಕ ಕನಿಕರ ತೋರಿಸಿ (ಪ್ಯಾರ 12 ನೋಡಿ)

13. ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ದೇವಜನರು ಏನು ಮಾಡುತ್ತಾರೆ?

13 ವಿಪತ್ತು ಪರಿಹಾರಕಾರ್ಯದಲ್ಲಿ ಭಾಗವಹಿಸಿ. ವಿಪತ್ತುಗಳಿಂದಾಗಿ ಕಷ್ಟಪಡುವ ಜನರಿಗೆ ನಾವು ಕನಿಕರ ತೋರಿಸುತ್ತೇವೆ. ಇಂಥ ಸಮಯದಲ್ಲಿ ಸಹಾಯ ಮಾಡುವುದಕ್ಕೆ ಯೆಹೋವನ ಜನರು ಪ್ರಸಿದ್ಧರಾಗಿದ್ದಾರೆ. (1 ಪೇತ್ರ 2:17) ಉದಾಹರಣೆಗೆ, ಜಪಾನಿನಲ್ಲಿ 2011​ರಲ್ಲಾದ ಭೂಕಂಪ ಮತ್ತು ಸುನಾಮಿಯಿಂದಾಗಿ ಒಬ್ಬ ಸಹೋದರಿ ವಾಸಿಸುತ್ತಿದ್ದ ಪ್ರದೇಶದಲ್ಲಿ ತುಂಬ ಹಾನಿಯಾಯಿತು. ಜಪಾನಿನ ಬೇರೆ ಬೇರೆ ಕಡೆಗಳಿಂದ ಮತ್ತು ಇತರ ದೇಶಗಳಿಂದ ಸ್ವಯಂಸೇವಕರು ಬಂದು ಮನೆಗಳನ್ನು, ರಾಜ್ಯ ಸಭಾಗೃಹಗಳನ್ನು ಸರಿಪಡಿಸಿದರು. ಇದನ್ನು ನೋಡಿ ಆ ಸಹೋದರಿಗೆ “ತುಂಬ ಪ್ರೋತ್ಸಾಹ ಮತ್ತು ಸಾಂತ್ವನ ಸಿಕ್ಕಿತು.” ಅವಳು ಹೇಳುವುದು: “ಈ ಅನುಭವದಿಂದ ನಮ್ಮ ಬಗ್ಗೆ ಯೆಹೋವನಿಗೆ ಕಾಳಜಿ ಇದೆ, ಸಾಕ್ಷಿಗಳು ಒಬ್ಬರಿನ್ನೊಬ್ಬರ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಲೋಕದೆಲ್ಲೆಡೆ ಇರುವ ಎಷ್ಟೋ ಸಹೋದರ ಸಹೋದರಿಯರು ನಮಗಾಗಿ ಪ್ರಾರ್ಥಿಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಯಿತು.”

14. ಕಾಯಿಲೆ ಬಿದ್ದವರಿಗೆ, ವಯಸ್ಸಾದವರಿಗೆ ನೀವು ಹೇಗೆ ಸಹಾಯ ಮಾಡಬಹುದು?

14 ಕಾಯಿಲೆ ಬಿದ್ದವರಿಗೆ ಮತ್ತು ವಯಸ್ಸಾದವರಿಗೆ ಸಹಾಯ ಮಾಡಿ. ಕಾಯಿಲೆ ಮತ್ತು ವೃದ್ಧಾಪ್ಯದಿಂದ ಕಷ್ಟಪಡುತ್ತಿರುವವರನ್ನು ನೋಡುವಾಗ ನಮಗೆ ಕನಿಕರ ಹುಟ್ಟುತ್ತದೆ. ಇಂಥ ಸಮಸ್ಯೆಗಳಿಗೆ ಒಂದು ಕೊನೆ ಬರಬೇಕು ಎಂದು ಕಾಯುತ್ತಿದ್ದೇವೆ. ಹಾಗಾಗಿ ದೇವರ ರಾಜ್ಯ ಬರಲಿ ಎಂದು ಪ್ರಾರ್ಥಿಸುತ್ತೇವೆ. ಅದು ಬರುವ ವರೆಗೆ ಕಾಯಿಲೆ ಬಿದ್ದವರಿಗೆ ಮತ್ತು ವಯಸ್ಸಾದವರಿಗೆ ಸಹಾಯ ಮಾಡಲು ನಮ್ಮಿಂದಾದ ಎಲ್ಲವನ್ನೂ ಮಾಡುತ್ತೇವೆ. ಒಬ್ಬ ಲೇಖಕ ತನ್ನ ತಾಯಿಗಾದ ಅನುಭವದ ಬಗ್ಗೆ ಬರೆದನು. ಮರೆವಿನ ಕಾಯಿಲೆ (ಅಲ್ಜೈಮರ್ಸ್‌) ಇದ್ದ ಅವನ ತಾಯಿ ಒಮ್ಮೆ ಮನೆಯಲ್ಲಿ ಒಬ್ಬರೇ ಇದ್ದಾಗ ಬಟ್ಟೆಯಲ್ಲೇ ಗಲೀಜು ಮಾಡಿಕೊಂಡಿದ್ದರು. ಅದನ್ನು ಅವರು ಶುಚಿ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಮನೆಯ ಕರೆಗಂಟೆ ಬಾರಿಸಿತು. ಇಬ್ಬರು ಯೆಹೋವನ ಸಾಕ್ಷಿಗಳು ಅವರನ್ನು ನೋಡಲು ಬಂದಿದ್ದರು. ಈ ಸಹೋದರಿಯರು ಯಾವಾಗಲೂ ಬಂದು ಅವರನ್ನು ಮಾತಾಡಿಸಿಕೊಂಡು ಹೋಗುತ್ತಿದ್ದರು. ಅವರು ಲೇಖಕನ ತಾಯಿಗೆ ಸಹಾಯಮಾಡಲು ಮುಂದಾದರು. ಆಗ ಅವರು, “ನನಗೆ ನಾಚಿಕೆ ಆಗ್ತಿದೆ, ಆದರೂ ಸರಿ” ಎಂದು ಹೇಳಿ ಒಪ್ಪಿಕೊಂಡರು. ಆ ಸಹೋದರಿಯರು ಅವರನ್ನು, ಅವರ ಬಟ್ಟೆಯನ್ನು ಶುಚಿಮಾಡಿದರು. ಆಮೇಲೆ ಟೀ ಮಾಡಿಕೊಟ್ಟು ಅವರ ಜೊತೆ ಕೂತು ಮಾತಾಡಿದರು. ಆ ಲೇಖಕ ಈ ಸಹಾಯಕ್ಕಾಗಿ ತುಂಬ ಧನ್ಯವಾದ ಹೇಳುತ್ತಾ ಸಾಕ್ಷಿಗಳು “ಬೇರೆಯವರಿಗೆ ಏನನ್ನು ಕಲಿಸುತ್ತಾರೋ ಅದನ್ನು ಅವರೂ ಮಾಡುತ್ತಾರೆ” ಎಂದು ಬರೆದನು. ಕಾಯಿಲೆ ಬಿದ್ದವರಿಗಾಗಿ, ವಯಸ್ಸಾದವರಿಗಾಗಿ ನಿಮ್ಮಲ್ಲಿರುವ ಕನಿಕರ ಅವರಿಗೆ ಸಹಾಯ ಮಾಡಲು ನಿಮ್ಮಿಂದ ಆಗುವುದನ್ನೆಲ್ಲ ಮಾಡುವಂತೆ ಪ್ರೇರಿಸುತ್ತದಾ?—ಫಿಲಿ. 2:3, 4.

15. ಸಾರುವ ಕೆಲಸದಿಂದ ಬೇರೆಯವರಿಗೆ ಹೇಗೆ ಸಹಾಯವಾಗುತ್ತದೆ?

15 ಯೆಹೋವನ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಹಾಯಮಾಡಿ. ದೇವರ ಬಗ್ಗೆ, ಆತನ ರಾಜ್ಯದ ಬಗ್ಗೆ ಜನರಿಗೆ ಕಲಿಸುವುದೇ ನಾವು ಅವರಿಗೆ ಮಾಡುವ ದೊಡ್ಡ ಸಹಾಯ. ಯೆಹೋವನ ಮಟ್ಟಗಳನ್ನು ಪಾಲಿಸುವುದರಿಂದ ನಮಗೆ ಹೇಗೆ ಒಳ್ಳೇದಾಗುತ್ತದೆ ಎಂದೂ ನಾವು ಅವರಿಗೆ ಅರ್ಥಮಾಡಿಸಬೇಕು. (ಯೆಶಾ. 48:17, 18) ಹೀಗೆ ಸಾರುವ ಕೆಲಸ ಯೆಹೋವನನ್ನು ಮಹಿಮೆಪಡಿಸಲು ಮತ್ತು ಬೇರೆಯವರಿಗೆ ಕನಿಕರ ತೋರಿಸಲು ಇರುವ ಅತ್ಯುತ್ತಮ ವಿಧ ಆಗಿದೆ. ಆದ್ದರಿಂದ ಸಾರುವ ಕೆಲಸದಲ್ಲಿ ಹೆಚ್ಚನ್ನು ಮಾಡುವಿರಾ?—1 ತಿಮೊ. 2:3, 4.

ಕನಿಕರ ತೋರಿಸುವುದರಿಂದ ನಿಮಗೂ ಒಳ್ಳೇದಾಗುತ್ತದೆ!

16. ಇತರರಿಗೆ ಕನಿಕರ ತೋರಿಸುವುದರಿಂದ ನಮಗೆ ಸಿಗುವ ಪ್ರಯೋಜನಗಳೇನು?

16 ಕನಿಕರ ತೋರಿಸುವವರಿಗೆ ಒಳ್ಳೇ ಆರೋಗ್ಯ ಇರುತ್ತದೆ ಮತ್ತು ಬೇರೆಯವರ ಜೊತೆ ಒಳ್ಳೇ ಸಂಬಂಧ ಇರುತ್ತದೆ ಎಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ. ನೋವು, ಕಷ್ಟ ಅನುಭವಿಸುತ್ತಿರುವವರಿಗೆ ನೀವು ಸಹಾಯ ಮಾಡಿದರೆ ನಿಮ್ಮ ಸಂತೋಷ ಮತ್ತು ಆಶಾಭಾವನೆ ಹೆಚ್ಚಾಗುತ್ತದೆ. ಒಂಟಿ ಭಾವನೆ ಮತ್ತು ನಕಾರಾತ್ಮಕ ಭಾವನೆ ಕಡಿಮೆಯಾಗುತ್ತದೆ. ಕನಿಕರ ತೋರಿಸುವುದರಿಂದ ಹೀಗೆ ನಿಮಗೂ ಪ್ರಯೋಜನಗಳಿವೆ. (ಎಫೆ. 4:31, 32) ನಾವು ಪ್ರೀತಿಯಿಂದ ಪ್ರೇರಿತರಾಗಿ ಬೇರೆಯವರಿಗೆ ಸಹಾಯ ಮಾಡಿದಾಗ ಯೆಹೋವನು ನಮ್ಮಿಂದ ಬಯಸುವುದನ್ನೇ ಮಾಡಿದ್ದೇವೆ ಎಂದು ತಿಳಿದು ಒಳ್ಳೇ ಮನಸ್ಸಾಕ್ಷಿಯೂ ಇರುತ್ತದೆ. ಕನಿಕರ ತೋರಿಸುವುದರಿಂದ ನಾವು ಉತ್ತಮ ಹೆತ್ತವರು, ಉತ್ತಮ ಬಾಳಸಂಗಾತಿ, ಉತ್ತಮ ಸ್ನೇಹಿತರು ಆಗುತ್ತೇವೆ. ಅಲ್ಲದೆ, ಯಾರು ಬೇರೆಯವರಿಗೆ ಕನಿಕರ ತೋರಿಸುತ್ತಾರೊ ಅವರಿಗೆ ಸಹಾಯದ ಅಗತ್ಯ ಇದ್ದಾಗ ಬೇರೆಯವರು ಸಹಾಯ ಮಾಡುತ್ತಾರೆ.—ಮತ್ತಾಯ 5:7; ಲೂಕ 6:38 ಓದಿ.

17. ಯಾವ ಕಾರಣಕ್ಕಾಗಿ ನೀವು ಬೇರೆಯವರಿಗೆ ಕನಿಕರ ತೋರಿಸಬೇಕು?

17 ಕನಿಕರ ತೋರಿಸುವುದರಿಂದ ನಮಗೂ ಒಳ್ಳೇದಾಗುತ್ತದೆ ನಿಜ. ಆದರೆ ಈ ಒಂದೇ ಕಾರಣಕ್ಕೆ ನಾವು ಬೇರೆಯವರಿಗೆ ಕನಿಕರ ತೋರಿಸುವುದಿಲ್ಲ. ಯೆಹೋವನನ್ನು ಅನುಕರಿಸುವುದು ಮತ್ತು ಆತನಿಗೆ ಮಹಿಮೆ ತರುವುದೇ ಮುಖ್ಯ ಕಾರಣವಾಗಿದೆ. ಆತನು ಪ್ರೀತಿ ಮತ್ತು ಕನಿಕರದ ಉಗಮನಾಗಿದ್ದಾನೆ. (ಜ್ಞಾನೋ. 14:31) ಕನಿಕರ ತೋರಿಸುವುದರಲ್ಲಿ ಆತನು ನಮಗೆ ಅತ್ಯುತ್ತಮ ಮಾದರಿಯಾಗಿದ್ದಾನೆ. ಆತನನ್ನು ಅನುಕರಿಸಲು ನಮ್ಮಿಂದಾಗುವುದನ್ನೆಲ್ಲ ಮಾಡೋಣ. ಹೀಗೆ ಮಾಡಿದರೆ ನಮ್ಮ ಸಹೋದರ ಸಹೋದರಿಯರಿಗೆ ಇನ್ನೂ ಹತ್ತಿರವಾಗುತ್ತೇವೆ ಮತ್ತು ನಮ್ಮ ಸುತ್ತಮುತ್ತಲಿರುವ ಜನರ ಜೊತೆ ಒಳ್ಳೇ ಸಂಬಂಧ ಇರುತ್ತದೆ.—ಗಲಾ. 6:10; 1 ಯೋಹಾ. 4:16.

[ಪಾದಟಿಪ್ಪಣಿ]

^ ಪ್ಯಾರ. 1 ಈ ಲೇಖನದಲ್ಲಿ ಕನ್ನಡ ಬೈಬಲಿನಿಂದ ತೆಗೆಯಲಾಗಿರುವ ವಚನಗಳಲ್ಲಿ “ಕನಿಕರ” ಎಂಬ ಪದಕ್ಕೆ ‘ದಯೆ,’ ‘ಕರುಣೆ,’ ‘ಸಹಾನುಭೂತಿ,’ ‘ಕರುಳುಮರುಗು,’ ‘ತಾಳ್ಮೆ,’ ‘ಕ್ಷಮೆ’ ಎಂಬಂಥ ಪದಗಳನ್ನು ಬಳಸಲಾಗಿದೆ.