ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವನಿಯಂತ್ರಣ ಬೆಳೆಸಿಕೊಳ್ಳಿ

ಸ್ವನಿಯಂತ್ರಣ ಬೆಳೆಸಿಕೊಳ್ಳಿ

“ಪವಿತ್ರಾತ್ಮದಿಂದ ಉಂಟಾಗುವ ಫಲ . . . ಸ್ವನಿಯಂತ್ರಣ.” —ಗಲಾ. 5:22, 23.

ಗೀತೆಗಳು: 83, 52

1, 2. (ಎ) ಸ್ವನಿಯಂತ್ರಣ ಇಲ್ಲದಿದ್ದರೆ ಏನಾಗಬಹುದು? (ಬಿ) ನಾವು ಸ್ವನಿಯಂತ್ರಣದ ಬಗ್ಗೆ ಚರ್ಚಿಸುವುದು ಯಾಕೆ ಸೂಕ್ತವಾಗಿದೆ?

ಸ್ವನಿಯಂತ್ರಣ ಯೆಹೋವ ದೇವರು ಮೆಚ್ಚುವಂಥ ಒಂದು ಗುಣ. (ಗಲಾ. 5:22, 23) ಆತನಲ್ಲಿ ಸಂಪೂರ್ಣ ಸ್ವನಿಯಂತ್ರಣ ಇದೆ. ಆದರೆ ನಾವು ಅಪರಿಪೂರ್ಣರಾದ ಕಾರಣ ನಮ್ಮಲ್ಲಿ ಇದರ ಕೊರತೆ ಇದೆ. ಇವತ್ತು ಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸ್ವನಿಯಂತ್ರಣದ ಕೊರತೆಯೇ ಕಾರಣ. ಈ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗದೇ ಇರಬಹುದು, ಮಕ್ಕಳು ಓದಿನಲ್ಲಿ ಹಿಂದೆ ಬೀಳಬಹುದು, ದೊಡ್ಡವರು ಕೆಲಸಕಾರ್ಯಗಳನ್ನು ಚೆನ್ನಾಗಿ ಮಾಡದೇ ಇರಬಹುದು. ಕಿರಿಚಾಟ, ಕುಡಿಕತನ, ಹಿಂಸಾಕೃತ್ಯ, ವಿವಾಹ ವಿಚ್ಛೇದನ, ಅನಾವಶ್ಯಕ ಸಾಲ, ದುಶ್ಚಟಗಳು, ಜೈಲುವಾಸ, ಮನೋವ್ಯಥೆ, ಲೈಂಗಿಕವಾಗಿ ಹರಡುವ ರೋಗಗಳು, ಅನಪೇಕ್ಷಿತ ಗರ್ಭಧಾರಣೆ ಇದಕ್ಕೆಲ್ಲಾ ಸ್ವನಿಯಂತ್ರಣದ ಕೊರತೆ ಕಾರಣವಾಗಬಹುದು.—ಕೀರ್ತ. 34:11-14.

2 ಒಬ್ಬ ವ್ಯಕ್ತಿಯಲ್ಲಿ ಸ್ವನಿಯಂತ್ರಣ ಇಲ್ಲದಿದ್ದರೆ ಅದರಿಂದ ಅವನಿಗೂ ಕಷ್ಟ, ಬೇರೆಯವರಿಗೂ ಸಂಕಟ. ದಿನೇದಿನೇ ಜನರಲ್ಲಿ ಸ್ವನಿಯಂತ್ರಣ ಕಮ್ಮಿಯಾಗುತ್ತಾ ಹೋಗುತ್ತಿದೆ. ಇದನ್ನು ನೋಡಿ ನಾವು ಆಶ್ಚರ್ಯಪಡುವುದಿಲ್ಲ. ಯಾಕೆಂದರೆ ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎನ್ನುವುದಕ್ಕೆ ಇದೊಂದು ಪುರಾವೆ ಎಂದು ದೇವರ ವಾಕ್ಯ ಸ್ಪಷ್ಟವಾಗಿ ಹೇಳುತ್ತದೆ.—2 ತಿಮೊ. 3:1-3.

3. ನಮ್ಮಲ್ಲಿ ಯಾಕೆ ಸ್ವನಿಯಂತ್ರಣ ಇರಬೇಕು?

3 ನಮ್ಮಲ್ಲಿ ಯಾಕೆ ಸ್ವನಿಯಂತ್ರಣ ಇರಬೇಕು? ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಯಾರಿಗೆ ತಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಗೊತ್ತಿದೆಯೋ ಅಂಥವರ ಜೀವನದಲ್ಲಿ ಸಮಸ್ಯೆಗಳು ಕಡಿಮೆ ಇರುತ್ತವೆ. ಇಂಥವರಿಗೆ ಬೇರೆಯವರ ಜೊತೆ ಒಳ್ಳೇ ಸಂಬಂಧ ಇರುತ್ತದೆ. ಬೇಗನೆ ಕೋಪ, ಕಳವಳ, ಖಿನ್ನತೆಗೆ ಅವರು ಒಳಗಾಗಲ್ಲ. ಎರಡನೇದಾಗಿ, ನಾವು ದೇವರ ಸ್ನೇಹಿತರಾಗಿರಬೇಕಾದರೆ ಪರೀಕ್ಷೆಗಳನ್ನು ಎದುರಿಸಿ ನಿಲ್ಲಬೇಕು, ತಪ್ಪಾದ ಆಸೆಗಳನ್ನು ನಿಯಂತ್ರಿಸಬೇಕು. ಆದಾಮಹವ್ವ ಇದನ್ನು ಮಾಡಲಿಲ್ಲ. (ಆದಿ. 3:6) ಅವರಂತೆ ಇಂದು ಸಹ ಸ್ವನಿಯಂತ್ರಣ ಇಲ್ಲದ ಜನರಿಗೆ ಜೀವನದಲ್ಲಿ ತುಂಬ ಸಮಸ್ಯೆಗಳಿವೆ.

4. ತಪ್ಪಾದ ಆಸೆಗಳನ್ನು ನಿಯಂತ್ರಿಸಲು ಕಷ್ಟಪಡುತ್ತಿರುವವರಿಗೆ ಯಾರ ಸಹಾಯ ಸಿಗುತ್ತದೆ?

4 ಅಪರಿಪೂರ್ಣರಾಗಿರುವುದರಿಂದ ನಮಗೆ ಸ್ವನಿಯಂತ್ರಣ ತೋರಿಸಲು ಕಷ್ಟವಾಗುತ್ತದೆ ಎಂದು ಯೆಹೋವನಿಗೆ ಗೊತ್ತು. ಆದ್ದರಿಂದ ನಮ್ಮಲ್ಲಿರುವ ತಪ್ಪಾದ ಆಸೆಗಳನ್ನು ನಿಯಂತ್ರಿಸಲು ಬೇಕಾದ ಬಲವನ್ನು ಕೊಡಲು ಆತನು ಬಯಸುತ್ತಾನೆ. (1 ಅರ. 8:46-49, 51) ಕೆಲವೊಮ್ಮೆ ತಮ್ಮ ಭಾವನೆಗಳನ್ನು ಮತ್ತು ತಪ್ಪಾದ ಆಸೆಗಳನ್ನು ನಿಯಂತ್ರಿಸಲು ಕಷ್ಟಪಡುವವರಿಗೆ ಆತನು ಬೆನ್ನೆಲುಬಾಗಿ ನಿಂತು ಒಬ್ಬ ಪ್ರಾಣ ಸ್ನೇಹಿತನಂತೆ ಸಹಾಯ ಮಾಡುತ್ತಾನೆ. ಈ ಲೇಖನದಲ್ಲಿ, ಸ್ವನಿಯಂತ್ರಣ ತೋರಿಸುವುದರಲ್ಲಿ ಯೆಹೋವನಿಟ್ಟಿರುವ ಒಳ್ಳೇ ಮಾದರಿಯಿಂದ ನಾವೇನು ಕಲಿಯಬಹುದು ಎಂದು ನೋಡಲಿದ್ದೇವೆ. ಸ್ವನಿಯಂತ್ರಣ ತೋರಿಸಿದ ಮತ್ತು ತೋರಿಸಲು ತಪ್ಪಿಹೋದ ಕೆಲವರ ಬಗ್ಗೆ ಬೈಬಲಿನಲ್ಲಿ ಕೊಟ್ಟಿರುವ ದಾಖಲೆಗಳನ್ನೂ ನೋಡಲಿದ್ದೇವೆ. ನಮಗೆ ಸಹಾಯವಾಗುವ ಕೆಲವು ಪ್ರಾಯೋಗಿಕ ಸಲಹೆಗಳನ್ನು ಸಹ ಚರ್ಚಿಸಲಿದ್ದೇವೆ.

ಯೆಹೋವನ ಅತ್ಯುತ್ತಮ ಮಾದರಿ

5, 6. ಸ್ವನಿಯಂತ್ರಣ ತೋರಿಸುವ ವಿಷಯದಲ್ಲಿ ಯೆಹೋವನು ನಮಗೆ ಯಾವ ಮಾದರಿ ಇಟ್ಟಿದ್ದಾನೆ?

5 ಯೆಹೋವನು ಪರಿಪೂರ್ಣನಾಗಿರುವುದರಿಂದ ಆತನಲ್ಲಿ ಸಂಪೂರ್ಣ ಸ್ವನಿಯಂತ್ರಣ ಇದೆ. ಅದರಲ್ಲಿ ಯಾವ ಕುಂದೂ ಇಲ್ಲ. (ಧರ್ಮೋ. 32:4) ನಾವು ಪರಿಪೂರ್ಣರಲ್ಲದಿದ್ದರೂ ಆತನನ್ನು ಅನುಕರಿಸಬಹುದು. ಅದಕ್ಕಾಗಿ ಸ್ವನಿಯಂತ್ರಣದ ವಿಷಯದಲ್ಲಿ ಆತನಿಟ್ಟಿರುವ ಅತ್ಯುತ್ತಮ ಮಾದರಿಯ ಬಗ್ಗೆ ಕಲಿಯಬೇಕು. ಆಗ ನಮ್ಮ ನೆಮ್ಮದಿಗೆಡಿಸುವಂಥ ವಿಷಯಗಳು ನಡೆದರೂ ಸರಿಯಾದ ವಿಧದಲ್ಲಿ ಪ್ರತಿಕ್ರಿಯಿಸುವುದು ಹೇಗೆಂದು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಯೆಹೋವನು ಸ್ವನಿಯಂತ್ರಣ ತೋರಿಸಿದ ಕೆಲವೊಂದು ಸಂದರ್ಭಗಳ ಬಗ್ಗೆ ಈಗ ಚರ್ಚಿಸೋಣ.

6 ಸೈತಾನ ಏದೆನ್‌ ತೋಟದಲ್ಲಿ ದಂಗೆಯೆದ್ದಾಗ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ಪಿಶಾಚ ಹೇಳಿದ ವಿಷಯದಿಂದ ಸ್ವರ್ಗದಲ್ಲಿದ್ದ ದೇವರ ನಿಷ್ಠಾವಂತ ಸೇವಕರಿಗೆ ಖಂಡಿತ ಆಘಾತ ಆಗಿರಬೇಕು, ಕೋಪ ಬಂದಿರಬೇಕು, ಸೈತಾನನನ್ನು ಸುಮ್ಮನೆ ಬಿಡಬಾರದೆಂದು ಅನಿಸಿರಬೇಕು. ಸೈತಾನನು ತಂದುಹಾಕಿರುವ ಎಲ್ಲಾ ತೊಂದರೆಗಳ ಬಗ್ಗೆ ಯೋಚಿಸುವಾಗ ನಿಮಗೂ ಕೆಲವೊಮ್ಮೆ ಹಾಗೇ ಅನಿಸಬಹುದು. ಆದರೆ ಯೆಹೋವನು ಸ್ವನಿಯಂತ್ರಣ ತೋರಿಸುತ್ತಾ ಆ ಸಂದರ್ಭಕ್ಕೆ ಸೂಕ್ತವಾಗಿದ್ದ ರೀತಿಯಲ್ಲಿ ಪ್ರತಿಕ್ರಿಯಿಸಿದನು. ಯೆಹೋವನು ಸೈತಾನನ ದಂಗೆಯನ್ನು ದೀರ್ಘಶಾಂತಿಯಿಂದ ನ್ಯಾಯದಿಂದ ನಿರ್ವಹಿಸುತ್ತಿದ್ದಾನೆ. (ವಿಮೋ. 34:6; ಯೋಬ 2:2-6) ಯಾಕೆ? ಯಾರೂ ನಾಶವಾಗುವುದನ್ನು ಆತನು ಇಷ್ಟಪಡುವುದಿಲ್ಲ. “ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವಾತನಾಗಿರುವುದರಿಂದ” ಸ್ವಲ್ಪ ಸಮಯ ಹೋಗುವಂತೆ ಬಿಟ್ಟಿದ್ದಾನೆ.—2 ಪೇತ್ರ 3:9.

7. ನಾವು ಯೆಹೋವನ ಮಾದರಿಯಿಂದ ಏನು ಕಲಿಯಬಹುದು?

7 ಯಾವುದೇ ಸಂದರ್ಭದಲ್ಲಿ ನಾವು ತಕ್ಷಣ ಪ್ರತಿಕ್ರಿಯಿಸದೆ ಯೋಚಿಸಿ ಮಾತಾಡಬೇಕೆಂದು ಯೆಹೋವನ ಮಾದರಿಯಿಂದ ಕಲಿಯುತ್ತೇವೆ. ಏನಾದರೂ ಪ್ರಾಮುಖ್ಯ ತೀರ್ಮಾನ ಮಾಡಲಿಕ್ಕಿರುವಾಗಲೂ ಯೋಚಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಸರಿಯಾದದ್ದನ್ನು ಹೇಳಲು ಮತ್ತು ಮಾಡಲು ಬೇಕಾದ ವಿವೇಕಕ್ಕಾಗಿ ಬೇಡಿಕೊಳ್ಳಿ. (ಕೀರ್ತ. 141:3) ಮನಸ್ಸು ಸರಿ ಇಲ್ಲದಿದ್ದಾಗ ಅಥವಾ ಕೋಪ ಬಂದಿರುವಾಗ ನಾವು ನಿಯಂತ್ರಣ ಕಳಕೊಳ್ಳುವ ಸಾಧ್ಯತೆ ಹೆಚ್ಚು. ದುಡುಕಿ ಏನಾದರೂ ಹೇಳಿಬಿಟ್ಟು ಅಥವಾ ಮಾಡಿಬಿಟ್ಟು ಆಮೇಲೆ ಪಶ್ಚಾತ್ತಾಪಪಡುವ ಸನ್ನಿವೇಶವನ್ನು ನಾವೆಲ್ಲರೂ ಎದುರಿಸಿದ್ದೇವೆ ಅಲ್ವಾ?—ಜ್ಞಾನೋ. 14:29; 15:28; 19:2.

ಯೆಹೋವನ ಸೇವಕರು ಇಟ್ಟಿರುವ ಮಾದರಿ

8. (ಎ) ಸ್ವನಿಯಂತ್ರಣ ತೋರಿಸುವುದರಲ್ಲಿ ಒಳ್ಳೇ ಮಾದರಿ ಇಟ್ಟಿರುವವರ ಬಗ್ಗೆ ನಾವು ಎಲ್ಲಿ ಓದಬಹುದು? (ಬಿ) ಪೋಟೀಫರನ ಹೆಂಡತಿ ಯೋಸೇಫನನ್ನು ತನ್ನ ಮೋಹದ ಬಲೆಗೆ ಬೀಳಿಸಲು ಪ್ರಯತ್ನಿಸಿದಾಗ ಅವನೇನು ಮಾಡಿದನು? (ಲೇಖನದ ಆರಂಭದ ಚಿತ್ರ ನೋಡಿ.)

8 ಸ್ವನಿಯಂತ್ರಣ ಇರುವುದು ಎಷ್ಟು ಮುಖ್ಯವೆಂದು ಬೈಬಲಿನಲ್ಲಿರುವ ಯಾರ ಮಾದರಿಗಳು ತೋರಿಸುತ್ತವೆ? ಒಂದು ಉದಾಹರಣೆ ಯಾಕೋಬನ ಮಗ ಯೋಸೇಫನದ್ದು. ಫರೋಹನ ಮೈಗಾವಲಿನವರ ಮುಖ್ಯಾಧಿಕಾರಿಯಾದ ಪೋಟೀಫರನ ಮನೆಯಲ್ಲಿ ಸೇವೆ ಮಾಡುತ್ತಿದ್ದಾಗ ಯೋಸೇಫ ಪ್ರಲೋಭನೆಯನ್ನು ಎದುರಿಸಿದನು. ಅವನು “ರೂಪದಲ್ಲಿಯೂ ಮುಖಭಾವದಲ್ಲಿಯೂ ಸುಂದರನಾಗಿದ್ದನು.” ಇದನ್ನು ನೋಡಿ ಪೋಟೀಫರನ ಹೆಂಡತಿ ಮನಸೋತಳು, ಅವನನ್ನು ತನ್ನ ಮೋಹದ ಬಲೆಗೆ ಬೀಳಿಸಲು ಎಷ್ಟೋ ಸಲ ಪ್ರಯತ್ನಿಸಿದಳು. ಈ ಪ್ರಲೋಭನೆಯನ್ನು ಎದುರಿಸಲು ಯೋಸೇಫನಿಗೆ ಯಾವುದು ಸಹಾಯ ಮಾಡಿತು? ಅವಳ ಮೋಹಕ್ಕೆ ಬಲಿಬಿದ್ದರೆ ಏನಾಗಬಹುದೆಂದು ಗಂಭೀರವಾಗಿ ಯೋಚಿಸಲು ಅವನು ಸಮಯ ತೆಗೆದುಕೊಂಡಿರಬೇಕು. ಆಮೇಲೆ ಒಂದು ದಿನ ಅವಳು ಅವನ ಬಟ್ಟೆಯನ್ನು ಹಿಡಿದು ಎಳೆದಾಗ, “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಹೇಳಿ ಅಲ್ಲಿಂದ ಓಡಿಹೋದನು.—ಆದಿ. 39:6, 9; ಜ್ಞಾನೋಕ್ತಿ 1:10 ಓದಿ.

9. ಪ್ರಲೋಭನೆಯನ್ನು ಎದುರಿಸಲು ನೀವು ಹೇಗೆ ಸಿದ್ಧರಾಗಬಹುದು?

9 ನಾವು ಯೋಸೇಫನ ಮಾದರಿಯಿಂದ ಏನು ಕಲಿಯಬಹುದು? ದೇವರು ಕೊಟ್ಟಿರುವ ಯಾವುದೇ ನಿಯಮವನ್ನು ಮುರಿಯುವ ಪ್ರಲೋಭನೆ ಬಂದರೆ ನಾವದನ್ನು ಎದುರಿಸಬೇಕು. ಯೆಹೋವನ ಸಾಕ್ಷಿಯಾಗುವುದಕ್ಕೆ ಮುಂಚೆ ಕೆಲವರು ತುಂಬ ತಿನ್ನುವುದು, ವಿಪರೀತ ಕುಡಿಯುವುದು, ಧೂಮಪಾನ, ಅಮಲೌಷಧ ಸೇವನೆ, ಲೈಂಗಿಕ ಅನೈತಿಕತೆ ಅಥವಾ ಬೇರೆ ಸಮಸ್ಯೆಗಳಲ್ಲಿ ಸಿಕ್ಕಿಕೊಂಡಿದ್ದರು. ದೀಕ್ಷಾಸ್ನಾನ ಪಡೆದುಕೊಂಡ ನಂತರವೂ ಮನಸ್ಸು ಅಂಥ ವಿಷಯಗಳ ಕಡೆ ವಾಲಬಹುದು. ನಿಮಗೆ ಈ ಸನ್ನಿವೇಶ ಎದುರಾದರೆ, ಇಂಥ ತಪ್ಪನ್ನು ಮಾಡುವುದರಿಂದ ಯೆಹೋವನ ಜೊತೆ ನಿಮಗಿರುವ ಸಂಬಂಧ ಏನಾಗಬಹುದೆಂದು ಯೋಚಿಸಿ ನೋಡಿ. ನಿಮ್ಮನ್ನು ದುರ್ಬಲಗೊಳಿಸಿ ತಪ್ಪು ಮಾಡುವಂತೆ ಮಾಡುವ ಸನ್ನಿವೇಶಗಳನ್ನು ಗುರುತಿಸಿ ಅದರಿಂದ ದೂರ ಇರಲು ಏನು ಮಾಡಬೇಕೆಂದು ಮೊದಲೇ ಯೋಚಿಸಿ. (ಕೀರ್ತ. 26:4, 5; ಜ್ಞಾನೋ. 22:3) ಇಂಥ ಪರೀಕ್ಷೆ ನಿಮಗೆ ಎದುರಾದರೆ, ಅದರಿಂದ ತಪ್ಪಿಸಿಕೊಳ್ಳಲು ಬೇಕಾದ ವಿವೇಕ ಮತ್ತು ಸ್ವನಿಯಂತ್ರಣ ಕೊಡುವಂತೆ ಯೆಹೋವನನ್ನು ಕೇಳಿಕೊಳ್ಳಿ.

10, 11. (ಎ) ಅನೇಕ ಯುವ ಜನರು ಶಾಲೆ-ಕಾಲೇಜಿನಲ್ಲಿ ಎದುರಿಸುವ ಸನ್ನಿವೇಶ ಏನು? (ಬಿ) ದೇವರ ನಿಯಮವನ್ನು ಮುರಿಯುವ ಪ್ರಲೋಭನೆಯನ್ನು ಎದುರಿಸಲು ಯುವ ಕ್ರೈಸ್ತರಿಗೆ ಯಾವುದು ಸಹಾಯ ಮಾಡುತ್ತದೆ?

10 ಯೋಸೇಫನಿಗೆ ಎದುರಾದಂಥ ಸನ್ನಿವೇಶ ಇಂದು ಅನೇಕ ಯುವ ಕ್ರೈಸ್ತರಿಗೂ ಎದುರಾಗುತ್ತದೆ. ಕಿಮ್‌ ಎಂಬ ಸಹೋದರಿಯ ಉದಾಹರಣೆ ನೋಡಿ. ಅವಳೊಟ್ಟಿಗೆ ಓದುತ್ತಿದ್ದ ಹುಡುಗ ಹುಡುಗಿಯರು ವಾರಾಂತ್ಯದಲ್ಲಿ ಹೇಗೆಲ್ಲಾ ಲೈಂಗಿಕವಾಗಿ ಆನಂದಿಸಿದರು ಎಂದು ಹೇಳಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಕಿಮ್‌ಗೆ ಈ ತರ ಹೇಳಲಿಕ್ಕೆ ಯಾವುದೇ ವಿಷಯ ಇರಲಿಲ್ಲ. ಈ ರೀತಿಯಲ್ಲಿ ಅವಳು ಅವರೆಲ್ಲರಿಗಿಂತ ಭಿನ್ನಳಾಗಿದ್ದ ಕಾರಣ ತಾನೊಬ್ಬಳೇ ಇದ್ದೇನೆ, ತನಗೆ ಯಾರೂ ಇಲ್ಲ ಎಂಬ ಭಾವನೆ ಕಾಡುತ್ತಿತ್ತು. ಅವಳು ತನ್ನ ಸಹಪಾಠಿಗಳಂತೆ ಯಾವ ಹುಡುಗನೊಟ್ಟಿಗೂ ಸುತ್ತಾಡುತ್ತಿಲ್ಲ ಎಂಬ ಕಾರಣಕ್ಕೆ ಅವಳನ್ನು ದಡ್ಡಿ ಅನ್ನುತ್ತಿದ್ದರು. ಆದರೆ ಕಿಮ್‌ ಹೀಗೆ ಮಾಡದೆ ಇದ್ದದ್ದು ಬುದ್ಧಿವಂತಿಕೆಯಾಗಿತ್ತು. ಯೌವನದಲ್ಲಿ ಲೈಂಗಿಕ ಆಸೆಗಳು ಬಲವಾಗಿರುವುದರಿಂದ ತಪ್ಪು ಮಾಡಿಬಿಡುವ ಸಾಧ್ಯತೆ ಹೆಚ್ಚು ಎಂದು ಅವಳಿಗೆ ಗೊತ್ತಿತ್ತು. (2 ತಿಮೊ. 2:22) ಬೇರೆ ಮಕ್ಕಳು ಅವಳಿಗೆ ‘ನೀನಿನ್ನೂ ಕನ್ಯೆಯಾಗಿಯೇ ಇದ್ದೀಯಾ?’ ಎಂದು ಆಗಾಗ ಕೇಳುತ್ತಿದ್ದರು. ಆಗ ಅವಳು ತಾನು ಯಾಕೆ ಲೈಂಗಿಕ ವಿಷಯಗಳಲ್ಲಿ ತೊಡಗುವುದಿಲ್ಲ ಎಂದು ವಿವರಿಸಲು ಅವಕಾಶ ಸಿಗುತ್ತಿತ್ತು. ಲೈಂಗಿಕ ಅನೈತಿಕತೆಯನ್ನು ಎದುರಿಸಿ ನಿಲ್ಲುವ ಯುವ ಜನರ ಬಗ್ಗೆ ನಮಗೆ ತುಂಬ ಹೆಮ್ಮೆ ಆಗುತ್ತದೆ! ಯೆಹೋವನಿಗೂ ಅಂಥವರ ಬಗ್ಗೆ ತುಂಬ ಹೆಮ್ಮೆ ಆಗುತ್ತದೆ!

11 ಲೈಂಗಿಕ ಅನೈತಿಕತೆಯಲ್ಲಿ ತೊಡಗುವ ಪ್ರಲೋಭನೆಗೆ ಬಲಿಬಿದ್ದ ಜನರ ಬಗ್ಗೆ ಸಹ ಬೈಬಲ್‌ ಮಾತಾಡುತ್ತದೆ. ಸ್ವನಿಯಂತ್ರಣ ಕಳಕೊಂಡು ಮಾಡುವ ಇಂಥ ತಪ್ಪಿನಿಂದ ಏನೆಲ್ಲಾ ಅನಾಹುತ ಆಗುತ್ತದೆಂದು ಅದು ತೋರಿಸುತ್ತದೆ. ಕಿಮ್‌ ಎದುರಿಸಿದಂಥ ಸನ್ನಿವೇಶವನ್ನು ನೀವು ಎದುರಿಸುತ್ತಿರುವಲ್ಲಿ ಜ್ಞಾನೋಕ್ತಿ 7​ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಯೌವನಸ್ಥನ ಬಗ್ಗೆ ಯೋಚಿಸಿ. ಅಷ್ಟೇ ಅಲ್ಲ, ಅಮ್ನೋನ ಮಾಡಿದ ತಪ್ಪು ಮತ್ತು ಅದರಿಂದ ಉಂಟಾದ ಪರಿಣಾಮಗಳ ಬಗ್ಗೆ ಸಹ ಯೋಚಿಸಿ. (2 ಸಮು. 13:1, 2, 10-15, 28-32) ಹೆತ್ತವರು ಇಂಥ ವ್ಯಕ್ತಿಗಳ ಬಗ್ಗೆ ಕುಟುಂಬ ಆರಾಧನೆಯಲ್ಲಿ ಚರ್ಚೆ ಮಾಡುವ ಮೂಲಕ ತಮ್ಮ ಮಕ್ಕಳಿಗೆ ಸ್ವನಿಯಂತ್ರಣ ಮತ್ತು ವಿವೇಕ ಬೆಳೆಸಿಕೊಳ್ಳಲು ಸಹಾಯ ಮಾಡಬಹುದು.

12. (ಎ) ಯೋಸೇಫನು ತನ್ನ ಸಹೋದರರ ಕಡೆಗಿದ್ದ ಭಾವನೆಗಳನ್ನು ಹೇಗೆ ನಿಯಂತ್ರಿಸಿದನು? (ಬಿ) ಯಾವ ಸನ್ನಿವೇಶಗಳಲ್ಲಿ ನಾವು ನಮ್ಮ ಭಾವನೆಗಳನ್ನು ನಿಯಂತ್ರಿಸಬೇಕಾಗುತ್ತದೆ?

12 ಯೋಸೇಫನು ಸ್ವನಿಯಂತ್ರಣ ತೋರಿಸಿದ ಇನ್ನೊಂದು ಸಂದರ್ಭ ನೋಡೋಣ. ಅವನ ಅಣ್ಣಂದಿರು ಆಹಾರ ಕೊಂಡುಕೊಳ್ಳಲು ಐಗುಪ್ತಕ್ಕೆ ಬಂದಿದ್ದರು. ಅವರ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಯೋಸೇಫ ತನ್ನ ಅಣ್ಣಂದಿರಿಗೆ ತಾನು ಯಾರು ಎಂದು ಹೇಳಿಕೊಳ್ಳಲಿಲ್ಲ. ಅವನಿಗೆ ತನ್ನ ಭಾವನೆಗಳನ್ನು ತಡೆಹಿಡಿದು ಕೊನೆಗೆ ಆಗದಿದ್ದಾಗ ಬೇರೊಂದು ಕೋಣೆಗೆ ಹೋಗಿ ಒಬ್ಬನೇ ಅತ್ತನು. (ಆದಿ. 43:30, 31) ಒಬ್ಬ ಸಹೋದರ ಅಥವಾ ಸಹೋದರಿ ನಿಮಗೆ ಬೇಜಾರಾಗುವ ರೀತಿ ನಡಕೊಂಡರೆ ಯೋಸೇಫನಂತೆ ಸ್ವನಿಯಂತ್ರಣ ತೋರಿಸಿ. ಆಗ ನೀವು ದುಡುಕಿ ಏನನ್ನಾದರೂ ಹೇಳಿಬಿಟ್ಟು ಅಥವಾ ಮಾಡಿಬಿಟ್ಟು ನಂತರ ‘ಯಾಕಪ್ಪಾ ಹೀಗೆ ಮಾಡಿದೆ’ ಎಂದು ವಿಷಾದಪಡುವ ಪರಿಸ್ಥಿತಿ ಬರುವುದಿಲ್ಲ. (ಜ್ಞಾನೋ. 16:32; 17:27) ಅಥವಾ ನಿಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಬಹಿಷ್ಕಾರ ಆಗಿರಬಹುದು. ಅವರೊಂದಿಗೆ ಅನಾವಶ್ಯಕವಾಗಿ ಸಂಪರ್ಕ ಇಟ್ಟುಕೊಳ್ಳದಿರಲು ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕಾಗುತ್ತದೆ. ಇದನ್ನು ಮಾಡುವುದು ಕಷ್ಟಾನೇ. ಆದರೆ ನೀವು ಯೆಹೋವನ ಮಾದರಿಯನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೀರಿ ಮತ್ತು ಆತನು ಕೊಟ್ಟಿರುವ ಆಜ್ಞೆಯನ್ನೇ ಪಾಲಿಸುತ್ತಿದ್ದೀರಿ ಎಂದು ಜ್ಞಾಪಕದಲ್ಲಿಟ್ಟರೆ ಸುಲಭ.

13. ರಾಜ ದಾವೀದನ ಜೀವನದಲ್ಲಿ ನಡೆದ ವಿಷಯಗಳಿಂದ ನಾವೇನು ಕಲಿಯಬಹುದು?

13 ನಾವು ದಾವೀದನ ಉದಾಹರಣೆಯಿಂದ ಸಹ ಪ್ರಯೋಜನ ಪಡೆಯಬಹುದು. ರಾಜ ಸೌಲ ಮತ್ತು ಶಿಮ್ಮೀ ಎಂಬವನು ದಾವೀದನನ್ನು ಕೆಣಕಿದಾಗ ಅವನು ಕೋಪ ಮಾಡಿಕೊಳ್ಳಲಿಲ್ಲ, ತನ್ನ ಅಧಿಕಾರ ಬಳಸಿ ಶಿಕ್ಷಿಸಲು ಪ್ರಯತ್ನಿಸಲಿಲ್ಲ. (1 ಸಮು. 26:9-11; 2 ಸಮು. 16:5-10) ಆದರೆ ದಾವೀದನಿಗೆ ಎಲ್ಲಾ ಸಮಯದಲ್ಲೂ ಸ್ವನಿಯಂತ್ರಣ ಇರಲಿಲ್ಲ. ಬತ್ಷೆಬೆಯೊಂದಿಗೆ ಪಾಪ ಮಾಡಿದನು, ನಾಬಾಲನ ವರ್ತನೆಯಿಂದ ಕೆಂಡಾಮಂಡಲವಾದನು. (1 ಸಮು. 25:10-13; 2 ಸಮು. 11:2-4) ನಾವು ದಾವೀದನಿಂದ ಅಮೂಲ್ಯ ಪಾಠಗಳನ್ನು ಕಲಿಯಬಹುದು. ಮೊದಲನೇದಾಗಿ, ತಮ್ಮ ಅಧಿಕಾರವನ್ನು ದುರುಪಯೋಗ ಮಾಡದಿರಲು ದೇವಜನರ ಮಧ್ಯೆ ಇರುವ ಮೇಲ್ವಿಚಾರಕರಿಗೆ ಸ್ವನಿಯಂತ್ರಣ ಖಂಡಿತ ಬೇಕು. ಎರಡನೇದಾಗಿ, ‘ನಾನು ಯಾವತ್ತೂ ತಪ್ಪೇ ಮಾಡಲ್ಲ’ ಎಂಬ ಅತಿಯಾದ ಆತ್ಮವಿಶ್ವಾಸ ಯಾರಲ್ಲಿಯೂ ಇರಬಾರದು.—1 ಕೊರಿಂ. 10:12.

ಪ್ರಾಯೋಗಿಕವಾಗಿ ನೀವು ಮಾಡಬಹುದಾದ ವಿಷಯಗಳು

14. (ಎ) ಒಬ್ಬ ಸಹೋದರನಿಗಾದ ಅನುಭವ ಏನು? (ಬಿ) ಇಂಥ ಸನ್ನಿವೇಶಗಳಲ್ಲಿ ನಾವು ಪ್ರತಿಕ್ರಿಯಿಸುವ ವಿಧ ಯಾಕೆ ಪ್ರಾಮುಖ್ಯ?

14 ನೀವು ಸ್ವನಿಯಂತ್ರಣ ಬೆಳೆಸಿಕೊಳ್ಳಲು ಏನು ಮಾಡಬಹುದು? ಲೂಯೀಜೀ ಎಂಬ ಸಹೋದರನ ವಿಷಯದಲ್ಲಿ ಏನಾಯಿತೆಂದು ನೋಡಿ. ಅವರ ಕಾರಿಗೆ ಒಂದು ಗಾಡಿ ಹಿಂದಿನಿಂದ ಡಿಕ್ಕಿ ಹೊಡೆಯಿತು. ಆ ಗಾಡಿಯನ್ನು ಓಡಿಸುತ್ತಿದ್ದ ಚಾಲಕನದ್ದೇ ತಪ್ಪಾಗಿದ್ದರೂ ಅವನು ಕಿರಿಚಾಡುತ್ತಾ ಲೂಯೀಜೀ ಜೊತೆ ಜಗಳ ಮಾಡಲು ಬಂದ. ಶಾಂತವಾಗಿರಲು ಸಹಾಯಮಾಡುವಂತೆ ಲೂಯೀಜೀ ಯೆಹೋವನಿಗೆ ಪ್ರಾರ್ಥಿಸಿದರು ಮತ್ತು ಆ ಚಾಲಕನನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಆ ವ್ಯಕ್ತಿ ಎಗರಾಡುವುದನ್ನು ನಿಲ್ಲಿಸಲಿಲ್ಲ. ಲೂಯೀಜೀ ಆ ವ್ಯಕ್ತಿಯ ವಿಮಾ ವಿವರಗಳನ್ನು ತೆಗೆದುಕೊಂಡು ಹೊರಟ ಮೇಲೂ ಅವನು ಕೂಗಾಡುತ್ತಿದ್ದ. ಒಂದು ವಾರದ ನಂತರ ಲೂಯೀಜೀ ಒಬ್ಬ ಸ್ತ್ರೀಯನ್ನು ಪುನರ್ಭೇಟಿ ಮಾಡಲು ಹೋದರು. ಅವಳ ಗಂಡನೇ ಆ ಚಾಲಕ! ಆ ವ್ಯಕ್ತಿಗೆ ಅವನ ವರ್ತನೆಯ ಬಗ್ಗೆ ನಾಚಿಕೆಯಾಯಿತು ಮತ್ತು ಅವನು ಕ್ಷಮೆ ಕೇಳಿದ. ಲೂಯೀಜೀಯ ವಿಮಾ ಕಂಪನಿಯನ್ನು ಸಂಪರ್ಕಿಸಿ ಅವರ ಕಾರನ್ನು ಬೇಗ ಸರಿಮಾಡಲು ಏರ್ಪಾಡು ಮಾಡುತ್ತೇನೆ ಎಂದ. ಈ ವ್ಯಕ್ತಿ ಸಹ ಬೈಬಲ್‌ ಚರ್ಚೆಯಲ್ಲಿ ಭಾಗವಹಿಸಿದ, ತುಂಬ ಆನಂದಿಸಿದ. ನಡೆದ ಈ ಸಂಗತಿಯಿಂದ, ತಾನು ಅಪಘಾತ ಆದಾಗ ಶಾಂತವಾಗಿದ್ದದ್ದು ಎಷ್ಟು ಪ್ರಾಮುಖ್ಯವಾಗಿತ್ತು ಎಂದು ಲೂಯೀಜೀಗೆ ಅರ್ಥವಾಯಿತು. ಅದೇ ಅವರು ಕೋಪ ತೋರಿಸಿದ್ದರೆ ಏನಾಗಬಹುದಿತ್ತು?—2 ಕೊರಿಂಥ 6:3, 4 ಓದಿ.

ನಮ್ಮ ಪ್ರತಿಕ್ರಿಯೆ ನಮ್ಮ ಸೇವೆಯ ಮೇಲೆ ಪರಿಣಾಮ ಬೀರುತ್ತದೆ (ಪ್ಯಾರ 14 ನೋಡಿ)

15, 16. ನೀವು ಮತ್ತು ನಿಮ್ಮ ಕುಟುಂಬ ಸ್ವನಿಯಂತ್ರಣ ಬೆಳೆಸಿಕೊಳ್ಳಲು ಬೈಬಲ್‌ ಅಧ್ಯಯನ ಹೇಗೆ ಸಹಾಯ ಮಾಡುತ್ತದೆ?

15 ಕ್ರೈಸ್ತರು ತಪ್ಪದೆ ಬೈಬಲ್‌ ಅಧ್ಯಯನ ಮಾಡಿ ಅದರ ಬಗ್ಗೆ ಧ್ಯಾನಿಸಿದರೆ ಸ್ವನಿಯಂತ್ರಣ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ದೇವರು ಯೆಹೋಶುವನಿಗೆ ಹೇಳಿದ ಮಾತು ನೆನಪಿದೆಯಾ? “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.” (ಯೆಹೋ. 1:8) ಆದರೆ ಬೈಬಲ್‌ ಅಧ್ಯಯನ ಮಾಡುವುದರಿಂದ ಸ್ವನಿಯಂತ್ರಣ ಹೇಗೆ ಬೆಳೆಯುತ್ತದೆ?

16 ಸ್ವನಿಯಂತ್ರಣ ತೋರಿಸಿದರೆ ಸಿಗುವ ಪ್ರಯೋಜನಗಳು, ತೋರಿಸದಿದ್ದರೆ ಆಗುವ ಅನಾಹುತಗಳ ಕುರಿತ ಉದಾಹರಣೆಗಳು ಬೈಬಲಿನಲ್ಲಿವೆ ಎಂದು ಕಲಿತೆವು. ಯೆಹೋವನು ಈ ಉದಾಹರಣೆಗಳನ್ನು ಬೈಬಲಿನಲ್ಲಿ ಬರೆಸಿರುವುದಕ್ಕೆ ಒಂದು ಕಾರಣವಿದೆ. (ರೋಮ. 15:4) ಅವುಗಳ ಬಗ್ಗೆ ಓದಿ, ಅಧ್ಯಯನ ಮಾಡಿ, ಧ್ಯಾನಿಸುವುದರಿಂದ ತುಂಬ ಪ್ರಯೋಜನವಿದೆ. ಅವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೇಗೆ ಅನ್ವಯಿಸುತ್ತವೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಯೆಹೋವನ ವಾಕ್ಯದಲ್ಲಿರುವ ಸಲಹೆಯನ್ನು ಅನ್ವಯಿಸಿಕೊಳ್ಳಲು ಬೇಕಾದ ಸಹಾಯಕ್ಕಾಗಿ ಬೇಡಿಕೊಳ್ಳಿ. ನಿಮಗೆ ಜೀವನದ ಯಾವುದೋ ಕ್ಷೇತ್ರದಲ್ಲಿ ಸ್ವನಿಯಂತ್ರಣ ಸ್ವಲ್ಪ ಕಮ್ಮಿ ಇದೆ ಎಂದು ಅನಿಸಿದರೆ ಅದನ್ನು ಒಪ್ಪಿಕೊಳ್ಳಿ. ನಂತರ ಅದರ ಬಗ್ಗೆ ಪ್ರಾರ್ಥಿಸಿ. ಪ್ರಗತಿ ಮಾಡಲು ಬೇಕಾದ ಎಲ್ಲ ಪ್ರಯತ್ನ ಮಾಡಿ. (ಯಾಕೋ. 1:5) ನಿಮಗೆ ಸಹಾಯವಾಗುವ ಪ್ರಾಯೋಗಿಕ ಸಲಹೆಗಳನ್ನು ನಮ್ಮ ಪ್ರಕಾಶನಗಳಿಂದ ಸಂಶೋಧನೆ ಮಾಡಿ ತೆಗೆಯಿರಿ.

17. ಮಕ್ಕಳು ಸ್ವನಿಯಂತ್ರಣ ಬೆಳೆಸಿಕೊಳ್ಳಲು ಹೆತ್ತವರು ಯಾವ ವಿಧಗಳಲ್ಲಿ ಸಹಾಯ ಮಾಡಬಹುದು?

17 ನಿಮ್ಮ ಮಕ್ಕಳು ಸ್ವನಿಯಂತ್ರಣ ಬೆಳೆಸಿಕೊಳ್ಳಲು ನೀವು ಹೇಗೆ ಸಹಾಯ ಮಾಡಬಹುದು? ಮಕ್ಕಳಲ್ಲಿ ಈ ಗುಣ ಸ್ವಾಭಾವಿಕವಾಗಿ ಬರುವುದಿಲ್ಲ ಎಂದು ಹೆತ್ತವರಿಗೆ ಗೊತ್ತು. ಆದ್ದರಿಂದ ಅವರು ತಮ್ಮ ಸ್ವಂತ ಮಾದರಿಯ ಮೂಲಕ ಮಕ್ಕಳು ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡಬೇಕು. (ಎಫೆ. 6:4) ಒಂದುವೇಳೆ ನಿಮ್ಮ ಮಕ್ಕಳಲ್ಲಿ ಸ್ವನಿಯಂತ್ರಣದ ಕೊರತೆ ಕಂಡುಬಂದರೆ ನೀವು ಎಂಥ ಮಾದರಿ ಇಡುತ್ತಿದ್ದೀರಿ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಸೇವೆಗೆ, ಕೂಟಗಳಿಗೆ ತಪ್ಪದೆ ಹೋಗುವ ಮೂಲಕ ಮತ್ತು ಪ್ರತಿ ವಾರ ಕುಟುಂಬ ಆರಾಧನೆಯನ್ನು ಮಾಡುವ ಮೂಲಕ ನೀವು ಒಳ್ಳೇ ಮಾದರಿ ಇಡಬಹುದು. ನಿಮ್ಮ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಬೇಕು, ಅವರು ಇಷ್ಟಪಟ್ಟದ್ದೆಲ್ಲಾ ನಡೆಯಬೇಕೆಂದು ನೆನಸಬೇಡಿ. ಮಕ್ಕಳಿಗೆ ‘ಬೇಡ’ ‘ಇಲ್ಲ’ ಎಂದು ಹೇಳಲು ಹೆದರಬೇಡಿ! ಯೆಹೋವನು ಆದಾಮಹವ್ವರಿಗೆ ಮಿತಿಗಳನ್ನು ಇಟ್ಟನು. ಈ ಮಿತಿಗಳಿಂದ ಅವರು ಯೆಹೋವನ ಅಧಿಕಾರಕ್ಕೆ ಗೌರವ ಕೊಡಬೇಕೆಂದು ಕಲಿಯಸಾಧ್ಯವಿತ್ತು. ಅದೇ ರೀತಿ, ಹೆತ್ತವರು ತಮ್ಮ ಮಕ್ಕಳಿಗೆ ಶಿಸ್ತು ಕೊಡುವಾಗ ಮತ್ತು ಒಳ್ಳೇ ಮಾದರಿ ಇಡುವಾಗ ಮಕ್ಕಳು ಹೆತ್ತವರ ಅಧಿಕಾರಕ್ಕೆ ಗೌರವ ತೋರಿಸುತ್ತಾರೆ. ಇದು ಮಕ್ಕಳಿಗೆ ಸ್ವನಿಯಂತ್ರಣ ಕಲಿಯಲು ಸಹಾಯ ಮಾಡುತ್ತದೆ. ದೇವರ ಅಧಿಕಾರದ ಕೆಳಗಿರುವುದು ಎಷ್ಟು ಚೆನ್ನಾಗಿರುತ್ತದೆ ಮತ್ತು ಆತನ ಮಟ್ಟಗಳಿಗೆ ಅಧೀನರಾಗುವುದರಿಂದ ನಮಗೇ ಒಳ್ಳೇದಾಗುತ್ತದೆ ಎಂದು ನಿಮ್ಮ ಮಕ್ಕಳಿಗೆ ಕಲಿಸಿ. ಇದು ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಆಸ್ತಿ.—ಜ್ಞಾನೋಕ್ತಿ 1:5, 7, 8 ಓದಿ.

18. ನಾವು ನಮ್ಮ ಸ್ನೇಹಿತರನ್ನು ಯಾಕೆ ಜಾಣ್ಮೆಯಿಂದ ಆರಿಸಿಕೊಳ್ಳಬೇಕು?

18 ನಾವು ಹೆತ್ತವರಾಗಿರಲಿ ಇಲ್ಲದಿರಲಿ, ನಾವೆಲ್ಲರೂ ನಮ್ಮ ಸ್ನೇಹಿತರನ್ನು ಜಾಣ್ಮೆಯಿಂದ ಆರಿಸಿಕೊಳ್ಳಬೇಕು. ನಿಮ್ಮ ಸ್ನೇಹಿತರು ಯೆಹೋವನನ್ನು ಪ್ರೀತಿಸುವುದಾದರೆ, ಯೋಗ್ಯವಾದ ಗುರಿಗಳನ್ನು ಇಡಲು ಮತ್ತು ಸಮಸ್ಯೆಗಳಿಂದ ದೂರ ಇರಲು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. (ಜ್ಞಾನೋ. 13:20) ಅವರ ಒಳ್ಳೇ ಮಾದರಿ ನೋಡಿ ನೀವು ಅವರಂತೆ ಸ್ವನಿಯಂತ್ರಣ ತೋರಿಸಲು ಕಲಿಯುತ್ತೀರಿ. ನಿಮ್ಮ ಒಳ್ಳೇ ನಡತೆಯನ್ನು ನೋಡಿ ಅವರಿಗೂ ಪ್ರೋತ್ಸಾಹ ಸಿಗುತ್ತದೆ. ನಾವು ಸ್ವನಿಯಂತ್ರಣ ಬೆಳೆಸಿಕೊಂಡರೆ ದೇವರ ಆಶೀರ್ವಾದ ಸಿಗುತ್ತದೆ, ಜೀವನ ಚೆನ್ನಾಗಿರುತ್ತದೆ, ನಾವು ಯಾರನ್ನು ಪ್ರೀತಿಸುತ್ತೇವೋ ಅವರೊಂದಿಗೆ ಒಳ್ಳೇ ಸಂಬಂಧ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.