ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನೀವು ಈ ವಿಷಯಗಳಂತೆ ನಡೆದರೆ ಸಂತೋಷಿತರು’

‘ನೀವು ಈ ವಿಷಯಗಳಂತೆ ನಡೆದರೆ ಸಂತೋಷಿತರು’

“ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ.”—ಯೋಹಾ. 4:34.

ಗೀತೆಗಳು: 95, 70

1. ಲೋಕದ ಜನರಲ್ಲಿರುವ ಸ್ವಾರ್ಥ ಮನೋಭಾವ ನಮಗೆ ಬಂದುಬಿಟ್ಟರೆ ನಮ್ಮ ದೀನತೆಗೆ ಏನಾಗುತ್ತದೆ?

ದೇವರ ವಾಕ್ಯದಿಂದ ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳಲು ಯಾಕೆ ಕಷ್ಟವಾಗುತ್ತದೆ? ಒಂದು ಕಾರಣ ಏನೆಂದರೆ, ಸರಿಯಾದದ್ದನ್ನು ಮಾಡಲು ನಮ್ಮಲ್ಲಿ ದೀನತೆ ಇರಬೇಕು. ಆದರೆ ನಮ್ಮೀ ದಿನಗಳಲ್ಲಿ ದೀನರಾಗಿರುವುದು ಸುಲಭವಲ್ಲ. ಯಾಕೆಂದರೆ ‘ಕಡೇ ದಿವಸಗಳಲ್ಲಿ ಸ್ವಪ್ರೇಮಿಗಳು, ಹಣಪ್ರೇಮಿಗಳು, ಸ್ವಪ್ರತಿಷ್ಠೆಯುಳ್ಳವರು, ಅಹಂಕಾರಿಗಳು ಮತ್ತು ಸ್ವನಿಯಂತ್ರಣವಿಲ್ಲದರೇ’ ಹೆಚ್ಚು ಇದ್ದಾರೆ. (2 ತಿಮೊ. 3:1-3) ಇವೆಲ್ಲ ಕೆಟ್ಟ ಗುಣಗಳು ಎಂದು ದೇವರ ಸೇವಕರಾದ ನಮಗೆ ಗೊತ್ತು. ಆದರೂ ಅಂಥ ಗುಣಗಳಿರುವ ಜನರೇ ಸಂತೋಷವಾಗಿರುವುದು, ಜೀವನದಲ್ಲಿ ಯಶಸ್ಸು ಪಡೆಯುವುದು ಎಂದು ನಮಗೆ ಅನಿಸಿಬಿಡುತ್ತದೆ. (ಕೀರ್ತ. 37:1; 73:2) ಆಗ ಈ ಮುಂದಿನ ಪ್ರಶ್ನೆಗಳು ಬರಬಹುದು: ‘ನಾನು ನನಗಿಂತ ಬೇರೆಯವರ ಅಗತ್ಯಗಳಿಗೆ ಹೆಚ್ಚು ಗಮನಕೊಡುವುದರಿಂದ ಏನಾದರೂ ಪ್ರಯೋಜನ ಇದೆಯಾ? ತಗ್ಗಿಬಗ್ಗಿ ನಡೆದರೆ ಜನರು ನನಗೆ ಮರ್ಯಾದೆ ಕೊಡುತ್ತಾರಾ?’ (ಲೂಕ 9:48) ಲೋಕದ ಜನರಂತೆ ನಾವು ಸ್ವಾರ್ಥಿಗಳಾಗಿಬಿಟ್ಟರೆ ಸಹೋದರ ಸಹೋದರಿಯರ ಜೊತೆ ನಮಗಿರುವ ಒಳ್ಳೇ ಸಂಬಂಧ ಹಾಳಾಗಬಹುದು ಮತ್ತು ನಾವು ಕ್ರೈಸ್ತರು ಎಂದು ಜನರಿಗೆ ಗುರುತಿಸಲು ಕಷ್ಟವಾಗಬಹುದು. ಆದ್ದರಿಂದ ದೀನರಾಗಿದ್ದಂಥ ದೇವರ ಸೇವಕರ ಬಗ್ಗೆ ಅಧ್ಯಯನ ಮಾಡಿ ಅವರನ್ನು ಅನುಕರಿಸಿದರೆ ನಮಗೂ ಒಳ್ಳೇ ಪ್ರತಿಫಲಗಳು ಸಿಗುತ್ತವೆ.

2. ಹಿಂದಿನ ಕಾಲದಲ್ಲಿದ್ದ ನಂಬಿಗಸ್ತ ಸೇವಕರಿಂದ ನಾವೇನು ಕಲಿಯಬಹುದು?

2 ಹಿಂದಿನ ಕಾಲದಲ್ಲಿದ್ದ ನಂಬಿಗಸ್ತ ಸೇವಕರಿಗೆ ದೇವರ ಸ್ನೇಹಿತರಾಗಲು ಯಾವುದು ಸಹಾಯ ಮಾಡಿತು? ಅವರು ದೇವರನ್ನು ಹೇಗೆ ಸಂತೋಷಪಡಿಸಿದರು? ಸರಿಯಾದ ವಿಷಯಗಳನ್ನು ಮಾಡಲು ಅವರಿಗೆ ಎಲ್ಲಿಂದ ಬಲ ಸಿಕ್ಕಿತು? ಇದನ್ನೆಲ್ಲ ತಿಳುಕೊಳ್ಳಬೇಕೆಂದರೆ ನಾವು ಬೈಬಲಿನಲ್ಲಿ ಅವರ ಬಗ್ಗೆ ಓದಿ ಧ್ಯಾನಿಸಬೇಕು. ಆಗ ನಮ್ಮ ನಂಬಿಕೆ ಬಲವಾಗುತ್ತದೆ.

ನಂಬಿಕೆಯನ್ನು ಬಲಗೊಳಿಸಲು ಏನು ಮಾಡಬೇಕು?

3, 4. (ಎ) ನಮ್ಮ ನಂಬಿಕೆಯನ್ನು ಬಲವಾಗಿಡಲು ಯೆಹೋವನು ಏನೆಲ್ಲ ಕೊಟ್ಟಿದ್ದಾನೆ? (ಬಿ) ನಂಬಿಕೆಯನ್ನು ಬಲವಾಗಿಡಲು ಬೈಬಲ್‌ ಜ್ಞಾನ ಇದ್ದರೆ ಮಾತ್ರ ಸಾಕಾಗಲ್ಲ ಎಂದು ಯಾಕೆ ಹೇಳಬಹುದು?

3 ನಮ್ಮ ನಂಬಿಕೆಯನ್ನು ಬಲವಾಗಿಡಲು ಬೇಕಾಗಿರುವುದನ್ನು ಯೆಹೋವನು ಕೊಟ್ಟಿದ್ದಾನೆ. ಬೈಬಲು, ಕ್ರೈಸ್ತ ಪ್ರಕಾಶನಗಳು, ನಮ್ಮ ವೆಬ್‌ಸೈಟ್‌, JW ಪ್ರಸಾರ, ಕೂಟಗಳು ಮತ್ತು ಸಮ್ಮೇಳನಗಳ ಮೂಲಕ ನಾವು ಒಳ್ಳೇ ಬುದ್ಧಿವಾದ ಮತ್ತು ತರಬೇತಿ ಪಡಕೊಳ್ಳುತ್ತಿದ್ದೇವೆ. ಆದರೆ ಬರೀ ಜ್ಞಾನ ಪಡಕೊಂಡರೆ ಸಾಕಾಗಲ್ಲ. ಅದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು ಎಂದು ಯೇಸು ಹೇಳಿದ್ದಾನೆ. ಅವನು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ.”—ಯೋಹಾ. 4:34.

4 ದೇವರ ಚಿತ್ತ ಮಾಡುವುದು ಯೇಸುವಿಗೆ ಊಟ ಮಾಡುವುದಕ್ಕೆ ಸಮವಾಗಿತ್ತು. ಒಳ್ಳೇ ಆಹಾರವನ್ನು ಸೇವಿಸುವುದರಿಂದ ಮನಸ್ಸಿಗೆ ಖುಷಿಯಾಗುತ್ತದೆ ಮತ್ತು ದೇಹಕ್ಕೆ ಬೇಕಾಗಿರುವ ಪೋಷಣೆ ಸಿಗುತ್ತದೆ. ಅದೇ ರೀತಿ ದೇವರ ಚಿತ್ತ ಮಾಡುವುದರಿಂದ ನಮಗೆ ಸಂತೋಷ ಸಿಗುತ್ತದೆ ಮತ್ತು ನಮ್ಮ ನಂಬಿಕೆ ಬಲವಾಗುತ್ತದೆ. ಉದಾಹರಣೆಗೆ, ಕ್ಷೇತ್ರ ಸೇವಾ ಕೂಟಕ್ಕೆ ಹೋಗುವಾಗ ತುಂಬ ಆಯಾಸವಿದ್ದರೂ ಸೇವೆ ಮುಗಿಸಿ ಮನೆಗೆ ಬಂದಾಗ ಹೊಸ ಚೈತನ್ಯ, ಸಂತೋಷ ಪಡೆದ ಅನುಭವ ನಿಮಗೆ ಆಗಿದೆಯಾ?

5. ನಾವು ವಿವೇಕಿಗಳಾಗಿ ಇದ್ದರೆ ಯಾವ ಪ್ರತಿಫಲ ಸಿಗುತ್ತದೆ?

5 ನಾವು ದೇವರು ಹೇಳಿದಂತೆ ಮಾಡಿದರೆ ವಿವೇಕಿಗಳಾಗುತ್ತೇವೆ. (ಕೀರ್ತ. 107:43) ವಿವೇಕ ಇರುವವರಿಗೆ ಒಳ್ಳೇ ಪ್ರತಿಫಲಗಳು ಸಿಗುತ್ತವೆ. “ನಿನ್ನ ಇಷ್ಟವಸ್ತುಗಳೆಲ್ಲವೂ [ವಿವೇಕಕ್ಕೆ] ಸಮವಲ್ಲ, . . . ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 3:13-18) “ನೀವು ಈ ವಿಷಯಗಳನ್ನು ತಿಳಿದು ಅವುಗಳನ್ನು ಕೈಕೊಂಡು ನಡೆಯುವುದಾದರೆ ಸಂತೋಷಿತರು” ಎಂದು ಯೇಸು ಹೇಳಿದನು. (ಯೋಹಾ. 13:17) ಅಂದರೆ ತಾನು ಹೇಳಿದ್ದನ್ನು ತನ್ನ ಶಿಷ್ಯರು ಮಾಡುತ್ತಾ ಇದ್ದರೆ ಸಂತೋಷವಾಗಿ ಇರುತ್ತಾರೆ ಅನ್ನುವುದು ಯೇಸುವಿನ ಮಾತಿನ ಅರ್ಥವಾಗಿತ್ತು. ಶಿಷ್ಯರು ಜೀವನದುದ್ದಕ್ಕೂ ಆತನ ಬೋಧನೆಗಳನ್ನು ಪಾಲಿಸಿದರು ಮತ್ತು ಆತನ ಮಾದರಿಯನ್ನು ಅನುಕರಿಸಿದರು.

6. ನಾವು ಕಲಿತದ್ದನ್ನು ಅನ್ವಯಿಸಿಕೊಳ್ಳುತ್ತಾ ಇರಬೇಕು ಯಾಕೆ?

6 ಇಂದು ನಾವು ಕೂಡ ಕಲಿತದ್ದನ್ನು ಅನ್ವಯಿಸಿಕೊಳ್ಳುತ್ತಾ ಇರಬೇಕು. ಒಬ್ಬ ಮೆಕ್ಯಾನಿಕ್‌ ಬಗ್ಗೆ ಯೋಚಿಸಿ. ಅವನ ಹತ್ತಿರ ಸಲಕರಣೆಗಳು, ಸಾಮಗ್ರಿಗಳು ಇರುತ್ತವೆ ಮತ್ತು ಕೆಲಸ ಹೇಗೆ ಮಾಡಬೇಕೆಂಬ ಜ್ಞಾನನೂ ಇರುತ್ತದೆ. ಇದನ್ನೆಲ್ಲಾ ಚೆನ್ನಾಗಿ ಬಳಸಿದರೆ ಮಾತ್ರ ಅವನು ಒಬ್ಬ ಒಳ್ಳೇ ಮೆಕ್ಯಾನಿಕ್‌ ಆಗಲು ಸಾಧ್ಯ. ಅವನಿಗೆ ತುಂಬ ವರ್ಷಗಳ ಅನುಭವ ಇರಬಹುದು. ಆದರೆ ಅವನು ಒಳ್ಳೇ ಮೆಕ್ಯಾನಿಕ್‌ ಆಗಿ ಉಳಿಯಬೇಕಾದರೆ ಕಲಿತ ವಿಷಯಗಳನ್ನು ಮಾಡುತ್ತಾ ಇರಬೇಕು. ಅದೇ ರೀತಿ ನಾವು ಬೈಬಲಿನಲ್ಲಿ ಓದಿದ್ದನ್ನು ಜೀವನದಲ್ಲಿ ಅನ್ವಯಿಸಿಕೊಂಡೆವು. ಅದರಿಂದ ಸಂತೋಷ ಸಿಕ್ಕಿತು. ಆದರೆ ಆ ಸಂತೋಷ ಕೊನೆವರೆಗೂ ಇರಬೇಕೆಂದರೆ ಯೆಹೋವನು ನಮಗೆ ಕಲಿಸುವ ವಿಷಯಗಳನ್ನು ಪ್ರತಿದಿನ ಅನ್ವಯಿಸಿಕೊಳ್ಳುತ್ತಾ ಇರಬೇಕು.

7. ಬೈಬಲಲ್ಲಿರುವ ನಂಬಿಗಸ್ತ ಸೇವಕರ ಬಗ್ಗೆ ಓದುವಾಗ ನಾವೇನು ಮಾಡಬೇಕು?

7 ದೀನರಾಗಿರಲು ನಮಗೆ ಕಷ್ಟವಾಗುವ ಕೆಲವು ಸನ್ನಿವೇಶಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸೋಣ. ಹಿಂದಿನ ಕಾಲದಲ್ಲಿದ್ದ ನಂಬಿಗಸ್ತ ಸೇವಕರು ಇಂಥ ಸನ್ನಿವೇಶಗಳಲ್ಲಿ ಹೇಗೆ ದೀನತೆ ತೋರಿಸಿದರು ಎಂದು ನೋಡೋಣ. ಅವರ ಬಗ್ಗೆ ಇರುವ ಮಾಹಿತಿಯನ್ನು ಹಾಗೇ ಸುಮ್ಮನೆ ಓದಿ ಮುಗಿಸದೆ ಚೆನ್ನಾಗಿ ಧ್ಯಾನಿಸಬೇಕು. ಕಲಿತದ್ದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು.

ಎಲ್ಲರನ್ನೂ ಸಮವಾಗಿ ನೋಡಿ

8, 9. ಅಪೊಸ್ತಲರ ಕಾರ್ಯಗಳು 14:8-15​ರಲ್ಲಿರುವ ವೃತ್ತಾಂತದಲ್ಲಿ ಪೌಲ ಹೇಗೆ ದೀನತೆ ತೋರಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.)

8 “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂದು ದೇವರು ಬಯಸುತ್ತಾನೆ. (1 ತಿಮೊ. 2:4) ಸತ್ಯದ ಬಗ್ಗೆ ಇನ್ನೂ ಗೊತ್ತಿಲ್ಲದ ಜನರ ಬಗ್ಗೆ ನಿಮಗೆ ಹೇಗನಿಸುತ್ತದೆ? ಅಪೊಸ್ತಲ ಪೌಲನು ಯೆಹೋವನ ಬಗ್ಗೆ ಗೊತ್ತಿದ್ದಂಥ ಯೆಹೂದ್ಯರಿಗೆ ಸಾರಿದನು. ಸುಳ್ಳುದೇವರುಗಳನ್ನು ಆರಾಧಿಸುತ್ತಿದ್ದ ಜನರಿಗೂ ಸಾರಿದನು. ಯೆಹೋವನ ಬಗ್ಗೆ ಗೊತ್ತಿಲ್ಲದ ಜನರಿಗೆ ಸಾರುವಾಗ ಪೌಲನು ದೀನತೆ ತೋರಿಸಬೇಕಾಗಿತ್ತು.

9 ಪೌಲನು ಮೊದಲನೇ ಮಿಷನರಿ ಪ್ರಯಾಣ ಮಾಡುತ್ತಿದ್ದಾಗ ಬಾರ್ನಬನ ಜೊತೆ ಲುಸ್ತ್ರಕ್ಕೆ ಹೋದನು. ಅಲ್ಲಿನ ಜನರು ಪೌಲ ಮತ್ತು ಬಾರ್ನಬರನ್ನು ಅಸಾಮಾನ್ಯ ಶಕ್ತಿಯಿರುವ ವ್ಯಕ್ತಿಗಳೆಂದು ನೆನಸಿದರು. ತಮ್ಮ ಸುಳ್ಳುದೇವರುಗಳಾದ ಸ್ಯೂಸ್‌ ಮತ್ತು ಹರ್ಮೀಸ್‌ನ ಅವತಾರ ಎಂದು ಹೇಳಿ ಕೊಂಡಾಡಿದರು. ಇದರಿಂದ ಪೌಲ ಮತ್ತು ಬಾರ್ನಬರು ಅಟ್ಟಕ್ಕೇರಿದರಾ? ಈ ಹಿಂದೆ ಹೋಗಿದ್ದ ಎರಡು ಪಟ್ಟಣಗಳಲ್ಲಿ ಜನರು ತೋರಿಸಿದ ವಿರೋಧಕ್ಕೂ ಲುಸ್ತ್ರದಲ್ಲಿ ಸಿಗುತ್ತಿರುವ ಜನಪ್ರಿಯತೆಗೂ ಎಷ್ಟು ವ್ಯತ್ಯಾಸ ಎಂದು ಸಂತೋಷಪಟ್ಟರಾ? ಇದರಿಂದ ಲುಸ್ತ್ರದಲ್ಲಿ ಹೆಚ್ಚಿನ ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ ಎಂದು ನೆನಸಿದರಾ? ಇಲ್ಲ. ಪೌಲ ಮತ್ತು ಬಾರ್ನಬರಿಗೆ ತುಂಬ ಬೇಜಾರಾಯಿತು. “ಜನರೇ, ನೀವು ಇದನ್ನೆಲ್ಲ ಏಕೆ ಮಾಡುತ್ತಿದ್ದೀರಿ? ನಾವೂ ನಿಮ್ಮಂತೆಯೇ ದೇಹದೌರ್ಬಲ್ಯಗಳುಳ್ಳ ಮನುಷ್ಯರಾಗಿದ್ದೇವೆ” ಎಂದು ಗಟ್ಟಿಯಾಗಿ ಕೂಗಿ ಹೇಳಿದರು.—ಅ. ಕಾ. 14:8-15.

10. ಲುಸ್ತ್ರದ ಜನರನ್ನು ಪೌಲ ಮತ್ತು ಬಾರ್ನಬರು ಯಾಕೆ ಕೀಳಾಗಿ ಕಾಣಲಿಲ್ಲ?

10 ‘ನಾವೂ ನಿಮ್ಮಂತೆಯೇ ಮನುಷ್ಯರಾಗಿದ್ದೇವೆ’ ಎಂದು ಪೌಲ ಮತ್ತು ಬಾರ್ನಬ ಹೇಳಿದ ಮಾತಿನ ಅರ್ಥ ಏನು? ತಮ್ಮ ಆರಾಧನಾ ರೀತಿನೂ ಲುಸ್ತ್ರದ ಜನರ ಆರಾಧನಾ ರೀತಿನೂ ಒಂದೇ ಎಂದಲ್ಲ. ಬದಲಿಗೆ ತಾವು ಸಹ ಎಲ್ಲರ ತರ ಅಪರಿಪೂರ್ಣರು ಎನ್ನುವುದು ಅವರ ಮಾತಿನ ಅರ್ಥವಾಗಿತ್ತು. ಅವರಿಗೆ ದೇವರಿಂದ ಮಿಷನರಿ ಸೇವೆ ಮಾಡುವ ಸುಯೋಗ ಸಿಕ್ಕಿತ್ತು. (ಅ. ಕಾ. 13:2) ಪವಿತ್ರಾತ್ಮದಿಂದ ಅಭಿಷಿಕ್ತರಾಗಿ ಅದ್ಭುತವಾದ ಸ್ವರ್ಗೀಯ ನಿರೀಕ್ಷೆಯನ್ನು ಪಡಕೊಂಡಿದ್ದರು. ಆದರೆ ಈ ಸುಯೋಗಗಳಿಂದಾಗಿ ಅವರು ಬೇರೆಯವರನ್ನು ಕೀಳಾಗಿ ಕಾಣಲಿಲ್ಲ. ಲುಸ್ತ್ರದ ಜನರು ಸತ್ಯವನ್ನು ಸ್ವೀಕರಿಸಿದರೆ ಅವರಿಗೂ ಸ್ವರ್ಗೀಯ ನಿರೀಕ್ಷೆ ಸಿಗುತ್ತದೆ ಎಂದು ಅರ್ಥಮಾಡಿಕೊಂಡರು.

11. ನಾವು ಸಾರುವಾಗ ಪೌಲನಂತೆ ಹೇಗೆ ದೀನರಾಗಿ ಇರಬಹುದು?

11 ಪೌಲನಂತೆ ದೀನತೆ ತೋರಿಸುವ ಒಂದು ವಿಧವನ್ನು ನಾವೀಗ ನೋಡೋಣ. ನಾವು ಯೆಹೋವನ ಸೇವೆಯಲ್ಲಿ ಏನಾದರೂ ಸಾಧಿಸಿದರೆ, ಬೇರೆಯವರು ನಮ್ಮನ್ನು ಹಾಡಿ ಹೊಗಳಬೇಕು ಎಂದು ನೆನಸಬಾರದು. ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಾನು ಯಾರಿಗೆ ಸಾರುತ್ತೇನೋ ಆ ಜನರ ಬಗ್ಗೆ ನನಗೆ ಯಾವ ಭಾವನೆ ಇದೆ? ಕೆಲವು ಜನರ ಬಗ್ಗೆ ನನಗೆ ಪೂರ್ವಗ್ರಹ ಇದೆಯಾ?’ ಲೋಕದ ಯಾವ ಕಡೆಗೆ ಹೋದರೂ ಅಲ್ಲಿರುವ ಯೆಹೋವನ ಸಾಕ್ಷಿಗಳು ಸುವಾರ್ತೆಗೆ ಯಾರು ಕಿವಿಗೊಡುತ್ತಾರೆ ಎಂದು ಹುಡುಕುತ್ತಾರೆ. ಅದಕ್ಕಾಗಿ ಕೆಲವು ಸಾಕ್ಷಿಗಳು ಸಮಾಜ ಯಾರನ್ನು ಕೀಳಾಗಿ ನೋಡುತ್ತದೋ ಅಂಥವರ ಭಾಷೆಯನ್ನೂ ಸಂಸ್ಕೃತಿಯನ್ನೂ ಕಲಿಯಲು ಶ್ರಮಿಸುತ್ತಾರೆ. ಸಾರುವಾಗ ಅವರು ಯಾವತ್ತೂ ತಾವು ಸತ್ಯ ಗೊತ್ತಿಲ್ಲದ ಜನರಿಗಿಂತ ಶ್ರೇಷ್ಠರು ಎಂದು ನೆನಸುವುದಿಲ್ಲ. ಬದಲಿಗೆ ದೇವರ ರಾಜ್ಯದ ಸಂದೇಶವನ್ನು ಆದಷ್ಟು ಹೆಚ್ಚು ಜನರು ಸ್ವೀಕರಿಸಬೇಕೆಂಬ ಬಯಕೆಯಿಂದ ಒಬ್ಬೊಬ್ಬರನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಬೇರೆಯವರಿಗೋಸ್ಕರ ಪ್ರಾರ್ಥಿಸಿ

12. ಬೇರೆಯವರ ಬಗ್ಗೆ ಕಾಳಜಿ ಇದೆ ಎಂದು ಎಪಫ್ರ ಹೇಗೆ ತೋರಿಸಿದನು?

12 ನಾವು ದೀನರಾಗಿರುವ ಇನ್ನೊಂದು ವಿಧ “ನಮ್ಮಂತೆಯೇ ನಂಬಿಕೆಯಲ್ಲಿ ಸಮಾನವಾದ ಸದವಕಾಶವನ್ನು” ಈಗಾಗಲೇ ಹೊಂದಿರುವ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುವುದೇ ಆಗಿದೆ. (2 ಪೇತ್ರ 1:1) ಎಪಫ್ರ ಇದನ್ನೇ ಮಾಡಿದನು. ಇವನ ಬಗ್ಗೆ ಬೈಬಲಿನಲ್ಲಿ ಮೂರು ಸಾರಿ ಮಾತ್ರ ಉಲ್ಲೇಖಿಸಲಾಗಿದೆ. ಪೌಲನು ರೋಮಿನಲ್ಲಿ ಗೃಹಬಂಧನದಲ್ಲಿದ್ದಾಗ ಕೊಲೊಸ್ಸೆಯ ಕ್ರೈಸ್ತರಿಗೆ ಎಪಫ್ರನ ಬಗ್ಗೆ ಹೀಗೆ ಬರೆದನು: “ಅವನು ತನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿಮಗೋಸ್ಕರ ಹೆಣಗಾಡುವವನಾಗಿದ್ದಾನೆ.” (ಕೊಲೊ. 4:12) ಎಪಫ್ರನಿಗೆ ಸಹೋದರರ ಬಗ್ಗೆ ಚೆನ್ನಾಗಿ ಗೊತ್ತಿತ್ತು ಮತ್ತು ಅವರ ಬಗ್ಗೆ ಅವನಿಗೆ ತುಂಬ ಕಾಳಜಿ ಇತ್ತು. ಪೌಲನು ಅವನನ್ನು ‘ನನ್ನ ಜೊತೆ ಸೆರೆಯವನು’ ಎಂದು ಹೇಳಿದನು. ಅಂದರೆ ಎಪಫ್ರನಿಗೂ ಸಮಸ್ಯೆಗಳಿದ್ದವು. (ಫಿಲೆ. 23) ಆದರೂ ಬೇರೆಯವರ ಬಗ್ಗೆ ಕಾಳಜಿ ವಹಿಸುತ್ತಿದ್ದನು. ಹೇಗೆ? ಸಹೋದರ ಸಹೋದರಿಯರಿಗೋಸ್ಕರ ಪ್ರಾರ್ಥಿಸುತ್ತಿದ್ದನು. ನಾವೂ ಇದನ್ನೇ ಮಾಡಬಹುದು. ಸಹೋದರ ಸಹೋದರಿಯರ ಹೆಸರು ಹೇಳಿ ಪ್ರಾರ್ಥಿಸಬೇಕು. ಇಂಥ ಪ್ರಾರ್ಥನೆಗಳಿಗೆ ತುಂಬ ಶಕ್ತಿ ಇದೆ.—2 ಕೊರಿಂ. 1:11; ಯಾಕೋ. 5:16.

13. ನೀವು ಪ್ರಾರ್ಥಿಸುವಾಗ ಎಪಫ್ರನನ್ನು ಹೇಗೆ ಅನುಕರಿಸಬಹುದು?

13 ನೀವು ಯಾರಿಗೋಸ್ಕರ ಪ್ರಾರ್ಥಿಸಬಹುದು ಎಂದು ಯೋಚಿಸಿ. ಸಭೆಯಲ್ಲಿರುವ ಸ್ನೇಹಿತರಿಗಾಗಿ ಪ್ರಾರ್ಥಿಸಬಹುದು ಅಥವಾ ಕಷ್ಟಗಳನ್ನು ಎದುರಿಸುತ್ತಿರುವ ಕುಟುಂಬಗಳಿಗಾಗಿ ನೀವು ಪ್ರಾರ್ಥಿಸಬಹುದು. ಅವರು ಕಷ್ಟದ ತೀರ್ಮಾನಗಳನ್ನು ತೆಗೆದುಕೊಳ್ಳಲಿಕ್ಕಿರಬಹುದು ಅಥವಾ ಪ್ರಲೋಭನೆಗಳನ್ನು ಎದುರಿಸುತ್ತಿರಬಹುದು. ತಮ್ಮ ನಂಬಿಕೆಗಾಗಿ ಜೈಲಲ್ಲಿರುವ ಸಹೋದರರ ಹೆಸರುಗಳು ನಮ್ಮ ವೆಬ್‌ಸೈಟಲ್ಲಿದೆ. ಅವರಿಗಾಗಿಯೂ ಪ್ರಾರ್ಥಿಸಿ. (NEWSROOM > LEGAL DEVELOPMENTS > Jehovah’s Witnesses Imprisoned for Their Faith) ತಮ್ಮ ಆತ್ಮೀಯರು ತೀರಿಹೋಗಿ ದುಃಖದಲ್ಲಿರುವವರಿಗಾಗಿ, ಇತ್ತೀಚೆಗೆ ವಿಪತ್ತಿನಿಂದ ಅಥವಾ ಯುದ್ಧದಿಂದ ಸಂತ್ರಸ್ತರಾದವರಿಗಾಗಿ ಮತ್ತು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುವ ಸಹೋದರ ಸಹೋದರಿಯರಿಗಾಗಿಯೂ ಪ್ರಾರ್ಥಿಸಬಹುದು. ಹೀಗೆ ನಾವು ಎಷ್ಟೋ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುವ ಅಗತ್ಯವಿದೆ. ಅವರಿಗೋಸ್ಕರ ನಾವು ಪ್ರಾರ್ಥಿಸಿದಾಗ ನಾವು ನಮ್ಮ ಬಗ್ಗೆ ಮಾತ್ರ ಚಿಂತಿಸುವುದಿಲ್ಲ, ಬೇರೆಯವರ ಬಗ್ಗೆನೂ ಯೋಚಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ. (ಫಿಲಿ. 2:4) ಇಂಥ ಪ್ರಾರ್ಥನೆಗಳನ್ನು ಯೆಹೋವನು ಕೇಳುತ್ತಾನೆ.

ಬೇರೆಯವರು ಮಾತಾಡುವಾಗ ಗಮನಕೊಟ್ಟು ಕೇಳಿ

14. ಯೆಹೋವನು ಕಿವಿಗೊಡುವ ವಿಷಯದಲ್ಲಿ ಹೇಗೆ ಅತ್ಯುತ್ತಮ ಮಾದರಿ ಇಟ್ಟಿದ್ದಾನೆ?

14 ಬೇರೆಯವರು ಮಾತಾಡುವಾಗ ಕಿವಿಗೊಟ್ಟು ಕೇಳಬೇಕು. ಇದು ನಾವು ದೀನರಾಗಿದ್ದೇವೆ ಎಂದು ತೋರಿಸುವ ಮತ್ತೊಂದು ವಿಧ. ನಾವು “ಕಿವಿಗೊಡುವುದರಲ್ಲಿ ಶೀಘ್ರ” ಆಗಿರಬೇಕು ಎಂದು ಯಾಕೋಬ 1:19 ಹೇಳುತ್ತದೆ. ಈ ವಿಷಯದಲ್ಲಿ ಯೆಹೋವನು ಅತ್ಯುತ್ತಮ ಮಾದರಿ ಇಟ್ಟಿದ್ದಾನೆ. (ಆದಿ. 18:32; ಯೆಹೋ. 10:14) ಅದಕ್ಕೊಂದು ಉದಾಹರಣೆ ವಿಮೋಚನಕಾಂಡ 32:11-14​ರಲ್ಲಿದೆ. (ಓದಿ.) ಯೆಹೋವನಿಗೆ ಮೋಶೆಯ ಅಭಿಪ್ರಾಯವನ್ನು ಕೇಳುವ ಅಗತ್ಯ ಇರಲಿಲ್ಲ. ಆದರೂ ಅವನ ಮನಸ್ಸಲ್ಲಿರುವುದನ್ನು ಹೇಳಲು ಯೆಹೋವನು ಅವಕಾಶ ಕೊಟ್ಟನು. ನಿಮಗೆ ಒಬ್ಬ ವ್ಯಕ್ತಿ ಕೊಡುವ ಸಲಹೆಗಳಿಂದ ಅಷ್ಟು ಪ್ರಯೋಜನ ಆಗುವುದಿಲ್ಲ ಎಂದಿಟ್ಟುಕೊಳ್ಳಿ. ಅವರು ತಮ್ಮ ಅಭಿಪ್ರಾಯ ತಿಳಿಸುವಾಗ ನೀವು ತಾಳ್ಮೆಯಿಂದ ಕೇಳಿ ಆ ಸಲಹೆಯನ್ನು ಅನ್ವಯಿಸಿಕೊಳ್ಳಲು ಮನಸ್ಸು ಮಾಡುತ್ತೀರಾ? ಆದರೆ ಯೆಹೋವನು ತನ್ನ ಮೇಲೆ ನಂಬಿಕೆಯಿಟ್ಟು ಪ್ರಾರ್ಥಿಸುವ ಮಾನವರೆಲ್ಲರಿಗೂ ಕಿವಿಗೊಡುತ್ತಾನೆ.

15. ಬೇರೆಯವರಿಗೆ ಗೌರವ ತೋರಿಸುವ ವಿಷಯದಲ್ಲಿ ನಾವು ಹೇಗೆ ಯೆಹೋವನಂತೆ ಇರಬಹುದು?

15 ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯೆಹೋವನು ತನ್ನ ಉನ್ನತ ಸ್ಥಾನದಿಂದ ಬಾಗಿ ಅಬ್ರಹಾಮ, ರಾಹೇಲ, ಮೋಶೆ, ಯೆಹೋಶುವ, ಮಾನೋಹ, ಎಲೀಯ, ಹಿಜ್ಕೀಯರಂಥ ಮನುಷ್ಯರಿಗೆ ಕಿವಿಗೊಟ್ಟ ಅಂದಮೇಲೆ ನಾನೂ ಅದನ್ನೇ ಮಾಡಬೇಕಲ್ವಾ? ನಾನು ಸಹೋದರ ಸಹೋದರಿಯರ ಅಭಿಪ್ರಾಯಗಳಿಗೆ ಕಿವಿಗೊಟ್ಟು ಸಾಧ್ಯವಾದಾಗೆಲ್ಲ ಅದನ್ನು ಅನ್ವಯಿಸಿಕೊಳ್ಳುವ ಮೂಲಕ ಅವರನ್ನು ಗೌರವಿಸುತ್ತೇನಾ? ನನ್ನ ಸಭೆಯಲ್ಲಿ ಅಥವಾ ಮನೆಯಲ್ಲಿ ನಾನು ಯಾರಿಗಾದರೂ ಹೆಚ್ಚು ಗಮನ ಕೊಡಬೇಕಾಗಿದೆಯಾ? ಈ ವಿಷಯಗಳ ಬಗ್ಗೆ ನಾನೇನು ಮಾಡಬೇಕು ಅಂತ ಇದ್ದೇನೆ?’—ಆದಿ. 30:6; ನ್ಯಾಯ. 13:9; 1 ಅರ. 17:22; 2 ಪೂರ್ವ. 30:20.

‘ಯೆಹೋವನು ನನ್ನ ಕಷ್ಟವನ್ನು ನೋಡಬಹುದು’

ದಾವೀದನು ‘ಹೋಗಲಿ ಬಿಡು’ ಅಂದನು. ನೀವಾಗಿದ್ದರೆ ಏನು ಮಾಡುತ್ತಿದ್ದಿರಿ? (ಪ್ಯಾರ 16, 17 ನೋಡಿ)

16. ಶಿಮ್ಮೀ ಕೆಟ್ಟದಾಗಿ ನಡಕೊಂಡಾಗ ರಾಜನಾದ ದಾವೀದ ಹೇಗೆ ಪ್ರತಿಕ್ರಿಯಿಸಿದನು?

16 ಬೇರೆಯವರು ನಮ್ಮ ಜೊತೆ ಒಳ್ಳೇದಾಗಿ ನಡಕೊಳ್ಳದಿದ್ದಾಗ ಸ್ವನಿಯಂತ್ರಣ ತೋರಿಸಬೇಕು. ಇದು ಕೂಡ ನಾವು ದೀನತೆ ತೋರಿಸುವ ಒಂದು ವಿಧ. (ಎಫೆ. 4:2) ಸ್ವನಿಯಂತ್ರಣ ತೋರಿಸುವುದಕ್ಕೆ ಒಂದು ಒಳ್ಳೇ ಉದಾಹರಣೆಯನ್ನು ನಾವು 2 ಸಮುವೇಲ 16:5-13​ರಲ್ಲಿ ನೋಡಬಹುದು. (ಓದಿ.) ರಾಜ ಸೌಲನ ಸಂಬಂಧಿಕನಾದ ಶಿಮ್ಮೀ ಎಂಬವನು ದಾವೀದನಿಗೆ ಮತ್ತು ಅವನ ಸೇವಕರಿಗೆ ಬೈಯುತ್ತಾ ಅವರ ಮೇಲೆ ಕಲ್ಲೆಸೆದನು. ಅವನ ಕೈಬಾಯಿ ಎರಡನ್ನೂ ಕಟ್ಟಿಹಾಕುವ ಸಾಮರ್ಥ್ಯ ದಾವೀದನಿಗಿತ್ತು. ಆದರೂ ಅವನು ಸಹಿಸಿಕೊಂಡನು. ದಾವೀದನು ಇಂಥ ಸ್ವನಿಯಂತ್ರಣವನ್ನು ಹೇಗೆ ಬೆಳೆಸಿಕೊಂಡನು? ಮೂರನೇ ಕೀರ್ತನೆಯಲ್ಲಿ ಅದಕ್ಕೆ ಉತ್ತರವಿದೆ.

17. (ಎ) ಸ್ವನಿಯಂತ್ರಣ ಬೆಳೆಸಿಕೊಳ್ಳಲು ದಾವೀದನಿಗೆ ಎಲ್ಲಿಂದ ಬಲ ಸಿಕ್ಕಿತು? (ಬಿ) ನಾವು ಅವನನ್ನು ಹೇಗೆ ಅನುಕರಿಸಬಹುದು?

17 ಮೂರನೇ ಕೀರ್ತನೆಯನ್ನು ದಾವೀದನು ತನ್ನ ಮಗನಾದ ಅಬ್ಷಾಲೋಮ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಬರೆದನು. ಶಿಮ್ಮೀ ಕೆಟ್ಟದಾಗಿ ನಡಕೊಂಡಿದ್ದು ಈ ಸಮಯದಲ್ಲೇ. ಆದರೆ ದಾವೀದನಿಗೆ ಅದನ್ನು ತಾಳಿಕೊಳ್ಳುವ ಬಲ ಸಿಕ್ಕಿತು. ಎಲ್ಲಿಂದ? “ನಾನು ಯೆಹೋವನಿಗೆ ಮೊರೆಯಿಡುವಾಗ ಆತನು ತನ್ನ ಪರಿಶುದ್ಧಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ” ಎಂದು ಕೀರ್ತನೆ 3:4​ರಲ್ಲಿ ಹೇಳುತ್ತಾನೆ. ಜನರು ನಮಗೆ ಅನ್ಯಾಯ ಮಾಡಿದಾಗ ನಾವೂ ದಾವೀದನಂತೆ ಪ್ರಾರ್ಥಿಸಬೇಕು. ಆಗ ಅದನ್ನು ತಾಳಿಕೊಳ್ಳಲು ಯೆಹೋವನು ನಮಗೆ ಪವಿತ್ರಾತ್ಮ ಶಕ್ತಿಯನ್ನು ಕೊಡುತ್ತಾನೆ. ಯಾರಾದರೂ ನಿಮ್ಮ ಜೊತೆ ಅನ್ಯಾಯವಾಗಿ ನಡಕೊಂಡರೆ ಸ್ವನಿಯಂತ್ರಣ ತೋರಿಸುತ್ತೀರಾ? ಅವರನ್ನು ಕ್ಷಮಿಸುತ್ತೀರಾ? ಯೆಹೋವನು ನಿಮ್ಮ ನೋವನ್ನು ನೋಡುತ್ತಿದ್ದಾನೆ, ಅರ್ಥಮಾಡಿಕೊಳ್ಳುತ್ತಾನೆ ಮತ್ತು ಸಹಾಯಮಾಡಿ ಆಶೀರ್ವದಿಸುತ್ತಾನೆ ಎಂದು ನಂಬುತ್ತೀರಾ?

ಯಾವ ಇಷ್ಟವಸ್ತುವೂ ವಿವೇಕಕ್ಕೆ ಸಮವಲ್ಲ

18. ಯೆಹೋವನ ಮಾತನ್ನು ಅನ್ವಯಿಸಿಕೊಳ್ಳುತ್ತಾ ಇದ್ದರೆ ನಮಗೆ ಯಾವ ಪ್ರಯೋಜನ ಸಿಗುತ್ತದೆ?

18 ಒಂದು ವಿಷಯ ಸರಿ ಎಂದು ಗೊತ್ತಾದಾಗ ಅದನ್ನೇ ಮಾಡಿದರೆ ನಾವು ಬುದ್ಧಿವಂತರು ಮತ್ತು ಯೆಹೋವನು ನಮ್ಮನ್ನು ಆಶೀರ್ವದಿಸುತ್ತಾನೆ. “ಇಷ್ಟವಸ್ತುಗಳೆಲ್ಲವೂ [ವಿವೇಕಕ್ಕೆ] ಸಮವಲ್ಲ” ಎಂದು ಜ್ಞಾನೋಕ್ತಿ 8:11 ಹೇಳುತ್ತದೆ. ವಿವೇಕದಲ್ಲಿ ಜ್ಞಾನ ಮತ್ತು ತಿಳುವಳಿಕೆ ಸೇರಿದೆ. ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ವಿವೇಕದಲ್ಲಿ ಸೇರಿದೆ. ಇರುವೆ ಕೂಡ ವಿವೇಕದಿಂದ ನಡಕೊಳ್ಳುತ್ತದೆ. ಅದು ಚಳಿಗಾಲಕ್ಕೆ ಬೇಕಾದ ಆಹಾರವನ್ನು ಮೊದಲೇ ಕೂಡಿಸಿಡುತ್ತದೆ. (ಜ್ಞಾನೋ. 30:24, 25) ಬೈಬಲ್‌ ಯಾರನ್ನು “ದೇವರ ವಿವೇಕ” ಎಂದು ಕರೆಯುತ್ತದೋ ಆ ಕ್ರಿಸ್ತನು ತನ್ನ ತಂದೆಗೆ ಇಷ್ಟವಾಗುವ ವಿಷಯಗಳನ್ನು ಯಾವಾಗಲೂ ಮಾಡುತ್ತಾನೆ. (1 ಕೊರಿಂ. 1:24; ಯೋಹಾ. 8:29) ನಾವು ದೀನರಾಗಿದ್ದರೆ ಮತ್ತು ಸರಿಯಾದದ್ದನ್ನು ಮಾಡುವ ಮೂಲಕ ವಿವೇಕಿಗಳಾಗಿದ್ದರೆ ದೇವರು ನಮಗೆ ಪ್ರತಿಫಲ ಕೊಡುತ್ತಾನೆ. (ಮತ್ತಾಯ 7:21-23 ಓದಿ.) ಆದ್ದರಿಂದ ಸಭೆಯಲ್ಲಿ ಎಲ್ಲರೂ ದೀನತೆಯಿಂದ ಸೇವೆಮಾಡುತ್ತಾ ಇರಬೇಕೆಂದರೆ ನಾವೆಲ್ಲರೂ ಅದಕ್ಕಾಗಿ ಶ್ರಮಪಡುತ್ತಾ ಇರಬೇಕು. ನಮಗೆ ಸರಿ ಎಂದು ಗೊತ್ತಿರುವ ವಿಷಯಗಳನ್ನು ಮಾಡಲು ನಾವು ದಿಢೀರಂತ ಕಲಿತುಬಿಡಲ್ಲ, ಅದಕ್ಕೆ ಸಮಯ ಹಿಡಿಯುತ್ತದೆ. ಹೀಗೆ ಮಾಡಿದರೆ ನಮ್ಮಲ್ಲಿ ದೀನತೆ ಇದೆ ಎಂದರ್ಥ. ದೀನತೆ ಇದ್ದರೆ ನಾವು ಈಗ ಮಾತ್ರವಲ್ಲ ಸದಾಕಾಲ ಸಂತೋಷವಾಗಿ ಇರುತ್ತೇವೆ.