ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಯ-ಅಂದು ಮತ್ತು ಇಂದು

ಸಮಯ-ಅಂದು ಮತ್ತು ಇಂದು

ಸಮಯ ತಿಳುಕೊಳ್ಳಲು ನೀವು ಏನು ಮಾಡುತ್ತೀರಾ? ಬಹುಶಃ ಕೈಗಡಿಯಾರ ಅಥವಾ ಗೋಡೆ ಮೇಲಿರುವ ಗಡಿಯಾರ ನೋಡುತ್ತೀರ. ಯಾರಾದರೂ ‘ಟೈಮ್‌ ಎಷ್ಟು?’ ಅಂತ ಕೇಳಿದರೆ ನೀವು ಹೇಗೆ ಹೇಳುತ್ತೀರಿ? ಸಮಯ ಎಷ್ಟು ಅಂತ ಬೇರೆಬೇರೆ ರೀತಿ ಹೇಳಬಹುದು. ಏನು ಹಾಗಂದರೆ?

ಉದಾಹರಣೆಗೆ, ಮಧ್ಯಾಹ್ನ ಒಂದು ಗಂಟೆ ಮೂವತ್ತು ನಿಮಿಷ ಆಗಿದೆ ಎಂದಿಟ್ಟುಕೊಳ್ಳಿ. ನೀವು ಅದನ್ನು ಒಂದು ಮೂವತ್ತು ಅಂತ ಹೇಳಬಹುದು, ಒಂದೂವರೆ ಅಂತನೂ ಹೇಳಬಹುದು. ಕೆಲವೊಂದು ಕಡೆ ಎರಡು ಗಂಟೆಗೆ ಮೂವತ್ತು ನಿಮಿಷ ಇದೆ ಅಂತನೂ ಹೇಳುತ್ತಾರೆ. ಇನ್ನೂ ಕೆಲವು ಕಡೆ 24 ಗಂಟೆ ಲೆಕ್ಕದಲ್ಲಿ ಸಮಯವನ್ನು ಹೇಳುತ್ತಾರೆ. ಅಲ್ಲಿ 1:30​ನ್ನು 13:30 ಅಂತ ಹೇಳುವುದಿದೆ.

ನೀವು ಬೈಬಲನ್ನು ಓದುವ ಕಾರಣ, ಬೈಬಲಿನ ಕಾಲದಲ್ಲಿ ಸಮಯವನ್ನು ಹೇಗೆ ಹೇಳುತ್ತಿದ್ದರು ಎಂದು ಯೋಚಿಸಬಹುದು. ಒಂದೇ ರೀತಿ ಹೇಳುತ್ತಿರಲಿಲ್ಲ. ಬೈಬಲಿನ ಹೀಬ್ರು ಭಾಗದಲ್ಲಿ “ಹೊತ್ತಾರೆ” “ಬೆಳಿಗ್ಗೆ” “ಮಧ್ಯಾಹ್ನ” “ಸಂಜೆ” ಎಂಬ ಪ್ರಯೋಗಗಳು ಇವೆ. (ಆದಿ. 8:11; 19:27; 43:16; ಧರ್ಮೋ. 28:29; 1 ಅರ. 18:26) ಕೆಲವೊಮ್ಮೆ ಇನ್ನೂ ನಿರ್ದಿಷ್ಟವಾಗಿ ಹೇಳಲಾಗಿದೆ.

ಬೈಬಲ್‌ ಕಾಲಗಳಲ್ಲಿ ಕಾವಲುಗಾರರಿದ್ದರು. ಮುಖ್ಯವಾಗಿ ರಾತ್ರಿ ಹೊತ್ತಿನಲ್ಲಿ ಅವರ ಅವಶ್ಯಕತೆ ತುಂಬ ಇತ್ತು. ಯೇಸು ಹುಟ್ಟುವುದಕ್ಕಿಂತ ಸುಮಾರು ಶತಮಾನಗಳ ಮುಂಚೆ ಇಸ್ರಾಯೇಲ್ಯರು ರಾತ್ರಿ ಹೊತ್ತನ್ನು ಮೂರು ಜಾವಗಳಾಗಿ ವಿಂಗಡಿಸಿದರು. (ಕೀರ್ತ. 63:6) ನ್ಯಾಯಸ್ಥಾಪಕರು 7:19 “ಮಧ್ಯರಾತ್ರಿಯ ಜಾವದ” ಬಗ್ಗೆ ಮಾತಾಡುತ್ತದೆ. (ನೂತನ ಲೋಕ ಭಾಷಾಂತರ) ಯೇಸುವಿನ ಸಮಯದಲ್ಲಿದ್ದ ಯೆಹೂದ್ಯರು, ಗ್ರೀಕ್‌ ಮತ್ತು ರೋಮನ್ನರಂತೆ ರಾತ್ರಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದರು.

ಸುವಾರ್ತಾ ಪುಸ್ತಕಗಳು ಈ ಜಾವಗಳ ಬಗ್ಗೆ ಹಲವಾರು ಸಲ ಮಾತಾಡುತ್ತವೆ. ಉದಾಹರಣೆಗೆ, ಯೇಸು ನೀರಿನ ಮೇಲೆ ನಡೆಯುತ್ತಾ ತನ್ನ ಶಿಷ್ಯರಿದ್ದ ದೋಣಿಯ ಕಡೆಗೆ ಬಂದದ್ದು “ನಾಲ್ಕನೆಯ ಜಾವದಲ್ಲಿ.” (ಮತ್ತಾ. 14:25) ಯೇಸು ಒಂದು ದೃಷ್ಟಾಂತದಲ್ಲಿ “ಮನೆಯ ಯಜಮಾನನಿಗೆ ಕಳ್ಳನು ಯಾವ ಜಾವದಲ್ಲಿ ಬರುತ್ತಾನೆಂಬುದು ಗೊತ್ತಿರುತ್ತಿದ್ದಲ್ಲಿ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕಳ್ಳನು ನುಗ್ಗುವಂತೆ ಬಿಡುತ್ತಿರಲಿಲ್ಲ” ಎಂದನು.—ಮತ್ತಾ. 24:43.

ಯೇಸು ತನ್ನ ಶಿಷ್ಯರಿಗೆ, “ಮನೆಯ ಯಜಮಾನನು ಸಂಜೆಯಲ್ಲಿಯೊ ಮಧ್ಯರಾತ್ರಿಯಲ್ಲಿಯೊ ಕೋಳಿ ಕೂಗುವಾಗಲೊ ಬೆಳಗಾಗುವಾಗಲೊ ಯಾವಾಗ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ” ಎಂದು ಹೇಳಿದಾಗ ನಾಲ್ಕೂ ಜಾವಗಳ ಬಗ್ಗೆ ಮಾತಾಡಿದನು. (ಮಾರ್ಕ 13:35) ಇಲ್ಲಿ “ಸಂಜೆ” ಅಂದರೆ ಮೊದಲನೇ ಜಾವ. ಅದು ಸೂರ್ಯಾಸ್ತದಿಂದ ರಾತ್ರಿ ಸುಮಾರು ಒಂಬತ್ತು ಗಂಟೆ ವರೆಗೆ ಇತ್ತು. “ಮಧ್ಯರಾತ್ರಿ” ಅಂದರೆ ಎರಡನೇ ಜಾವ. ಅದು ರಾತ್ರಿ ಸುಮಾರು ಒಂಬತ್ತರಿಂದ ಮಧ್ಯರಾತ್ರಿಯ ವರೆಗೆ ಇತ್ತು. “ಕೋಳಿ ಕೂಗುವಾಗ” ಅಂದರೆ ಮೂರನೇ ಜಾವ. ಅದು ಮಧ್ಯರಾತ್ರಿಯಿಂದ ಬೆಳಗ್ಗೆ ಸುಮಾರು ಮೂರು ಗಂಟೆ ವರೆಗೆ ಇತ್ತು. ಯೇಸು ಬಂಧಿಸಲ್ಪಟ್ಟ ರಾತ್ರಿಯಂದು ಹುಂಜವು ಕೂಗಿದ ಜಾವ ಇದೇ ಆಗಿದ್ದಿರಬೇಕು. (ಮಾರ್ಕ 14:72) “ಬೆಳಗಾಗುವಾಗ” ಅಂದರೆ ನಾಲ್ಕನೇ ಜಾವ. ಇದು ಬೆಳಗ್ಗೆ ಸುಮಾರು ಮೂರು ಗಂಟೆಯಿಂದ ಸೂರ್ಯೋದಯದ ವರೆಗೆ ಇತ್ತು.

ನಮ್ಮ ಕಾಲದ ಗಡಿಯಾರಗಳು ಬೈಬಲ್‌ ಕಾಲದ ಜನರ ಹತ್ತಿರ ಇಲ್ಲದಿದ್ದರೂ ಸಮಯ ಎಷ್ಟೆಂದು ಹೇಳಲು ಒಂದು ವಿಧಾನ ಇತ್ತು. ಹಗಲಿನಲ್ಲೂ ರಾತ್ರಿಯಲ್ಲೂ ಈ ವಿಧಾನ ಬಳಸಿ ಸಮಯ ಹೇಳುತ್ತಿದ್ದರು.