ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧ ಕ್ರೈಸ್ತರೇ, ನಿಮ್ಮ ನಿಷ್ಠೆ ಯೆಹೋವನಿಗೆ ತುಂಬ ಇಷ್ಟ

ವೃದ್ಧ ಕ್ರೈಸ್ತರೇ, ನಿಮ್ಮ ನಿಷ್ಠೆ ಯೆಹೋವನಿಗೆ ತುಂಬ ಇಷ್ಟ

ಲೋಕವ್ಯಾಪಕವಾಗಿರುವ ಹಿರಿಯರು ತಮ್ಮ ಸೇವಾ ಸುಯೋಗಗಳನ್ನು ತುಂಬ ಮಾನ್ಯಮಾಡುತ್ತಾರೆ. ಅವರು ನಮಗೆ ಒಂದು ದೊಡ್ಡ ಆಶೀರ್ವಾದವಾಗಿದ್ದಾರೆ! ಆದರೆ ಸ್ವಲ್ಪ ಸಮಯದ ಹಿಂದೆ ಒಂದು ಹೊಂದಾಣಿಕೆಯನ್ನು ಮಾಡಲಾಯಿತು. ಅದೇನೆಂದರೆ ವಯಸ್ಸಾದ ಹಿರಿಯರು ತಮ್ಮ ಕೆಲವು ದೊಡ್ಡ ಜವಾಬ್ದಾರಿಗಳನ್ನು ತಮಗಿಂತ ಚಿಕ್ಕ ಪ್ರಾಯದ ಹಿರಿಯರಿಗೆ ವಹಿಸಿಕೊಡುವಂತೆ ಹೇಳಲಾಯಿತು. ಯಾವ ಜವಾಬ್ದಾರಿಗಳನ್ನು?

ಇನ್ನುಮುಂದೆ ಸಂಘಟನೆ ಏರ್ಪಾಡು ಮಾಡುವ ಶಾಲೆಗಳ ಬೋಧಕರು ಮತ್ತು ಸಂಚರಣ ಮೇಲ್ವಿಚಾರಕರು 70 ವರ್ಷವಾದ ಮೇಲೆ ತಮ್ಮ ನೇಮಕಗಳಲ್ಲಿ ಮುಂದುವರಿಯುವುದಿಲ್ಲ. 80 ವರ್ಷವಾದ ಹಿರಿಯರು ಬೇರೆ ಕೆಲವು ನೇಮಕಗಳಲ್ಲಿ ಮುಂದುವರಿಯುವ ಹಾಗಿಲ್ಲ. ಉದಾಹರಣೆಗೆ, ಅವರು ಶಾಖಾ ಸಮಿತಿಯ ಸಂಯೋಜಕರಾಗಿ ಅಥವಾ ಹಿರಿಯರ ಮಂಡಲಿಯ ಸಂಯೋಜಕರಾಗಿ ಇರುವ ಹಾಗಿಲ್ಲ. ಪ್ರಿಯರಾದ ಈ ವೃದ್ಧ ಹಿರಿಯರು ಈ ಹೊಂದಾಣಿಕೆಗೆ ಹೇಗೆ ಹೊಂದಿಕೊಂಡಿದ್ದಾರೆ? ಅವರು ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಿಷ್ಠಾವಂತರಾಗಿ ಉಳಿದಿದ್ದಾರೆ!

ಶಾಖಾ ಸಮಿತಿಯ ಸಂಯೋಜಕರಾಗಿ ಸುಮಾರು 49 ವರ್ಷ ಸೇವೆ ಮಾಡಿದ ಸಹೋದರ ಕೆನ್‌ ಹೇಳುವುದು: “ನಾನು ಆ ತೀರ್ಮಾನವನ್ನು ಮನಸಾರೆ ಒಪ್ಪಿದೆ. ಅವತ್ತು ಬೆಳಗ್ಗೆ ತಾನೇ ಸಂಯೋಜಕನ ಸ್ಥಾನಕ್ಕೆ ನನಗಿಂತ ಚಿಕ್ಕ ವಯಸ್ಸಿನ ಒಬ್ಬ ಸಹೋದರನನ್ನು ಆರಿಸಲು ಸಹಾಯ ಮಾಡು ಎಂದು ಪ್ರಾರ್ಥಿಸಿದ್ದೆ.” ನಂಬಿಗಸ್ತರಾಗಿ ಸೇವೆ ಮಾಡಿರುವ ಅನೇಕ ವೃದ್ಧ ಸಹೋದರರ ಪ್ರತಿಕ್ರಿಯೆ ಇದೇ ರೀತಿ ಇತ್ತು. ಆದರೆ ತಮ್ಮ ಸಹೋದರ ಸಹೋದರಿಯರಿಗೆ ಸೇವೆ ಮಾಡುವುದೆಂದರೆ ಇವರಿಗೆ ತುಂಬ ಇಷ್ಟ. ಹಾಗಾಗಿ ಆರಂಭದಲ್ಲಿ ಕೆಲವರಿಗೆ ಸ್ವಲ್ಪ ಕಷ್ಟ ಆಗಿತ್ತು.

“ನನಗೆ ಸ್ವಲ್ಪ ದುಃಖ ಆಯಿತು” ಎಂದು ಹಿರಿಯರ ಮಂಡಲಿಯ ಸಂಯೋಜಕನಾಗಿ ಸೇವೆ ಮಾಡಿದ್ದ ಸಹೋದರ ಎಸ್ಪರಾಂಡಿಯೂ ಹೇಳುತ್ತಾರೆ. “ಆದರೆ ನನ್ನ ಆರೋಗ್ಯ ಹಾಳಾಗುತ್ತಿತ್ತು. ಅದರ ಕಡೆ ಹೆಚ್ಚು ಗಮನ ಕೊಡಬೇಕಿತ್ತು” ಎಂದು ಅವರು ಒಪ್ಪಿಕೊಳ್ಳುತ್ತಾರೆ. ಎಸ್ಪರಾಂಡಿಯೂ ಯೆಹೋವನಿಗೆ ಈಗಲೂ ನಂಬಿಗಸ್ತರಾಗಿ ಸೇವೆ ಮಾಡುತ್ತಿದ್ದಾರೆ. ಇದರಿಂದ ಸಭೆಗೆ ತುಂಬ ಪ್ರಯೋಜನವಾಗಿದೆ.

ತುಂಬ ಸಮಯದಿಂದ ಸಂಚರಣ ಮೇಲ್ವಿಚಾರಕರಾಗಿದ್ದು ಈಗ ಬೇರೆ ರೀತಿಯ ಸೇವೆಯನ್ನು ಮಾಡುತ್ತಿರುವವರ ಬಗ್ಗೆ ಏನು? 38 ವರ್ಷಗಳಿಂದ ಸಂಚರಣ ಮೇಲ್ವಿಚಾರಕರಾಗಿ ಸೇವೆ ಮಾಡಿದ ಸಹೋದರ ಆ್ಯಲನ್‌ ಹೇಳುವುದು: “ವಿಷಯ ಗೊತ್ತಾದಾಗ ದಂಗಾಗಿ ಹೋದೆ.” ಆದರೂ ಈ ಕೆಲಸಕ್ಕೆ ತಮಗಿಂತ ಚಿಕ್ಕ ವಯಸ್ಸಿನ ಸಹೋದರರಿಗೆ ತರಬೇತಿ ಕೊಡುವುದರಿಂದ ತುಂಬ ಪ್ರಯೋಜನ ಇದೆ ಎಂದವರು ಅರ್ಥಮಾಡಿಕೊಂಡರು. ಅವರು ಈಗಲೂ ನಂಬಿಗಸ್ತಿಕೆಯಿಂದ ತಮ್ಮ ಸೇವೆ ಮಾಡುತ್ತಿದ್ದಾರೆ.

ಸುಮಾರು 40 ವರ್ಷಗಳಿಂದ ಸಂಚರಣ ಮೇಲ್ವಿಚಾರಕರಾಗಿ ಮತ್ತು ಶಾಲೆಯ ಬೋಧಕರಾಗಿ ಸೇವೆ ಮಾಡಿದ ಸಹೋದರ ರಸಲ್‌ಗೆ ಮತ್ತು ಅವರ ಪತ್ನಿಗೆ ಆರಂಭದಲ್ಲಿ ನಿರಾಶೆ ಆಯಿತು. “ನಮ್ಮ ನೇಮಕ ನಮಗೆ ತುಂಬ ಇಷ್ಟ ಇತ್ತು. ಅದನ್ನು ಮಾಡಲು ಬೇಕಾದ ಶಕ್ತಿ ನಮ್ಮಲ್ಲಿ ಇನ್ನೂ ಇದೆ ಎಂದನಿಸಿತು” ಎಂದು ಅವರು ಹೇಳುತ್ತಾರೆ. ಅವರಿಬ್ಬರೂ ತಮಗೆ ಸಿಕ್ಕಿರುವ ತರಬೇತಿ ಮತ್ತು ಅನುಭವವನ್ನು ಈಗ ಸ್ಥಳೀಯ ಸಭೆಯಲ್ಲಿ ಉಪಯೋಗಿಸುತ್ತಿದ್ದಾರೆ. ಇದರಿಂದ ಸಭೆಯವರಿಗೆ ತುಂಬ ಪ್ರಯೋಜನವಾಗಿದೆ.

ಮೇಲೆ ತಿಳಿಸಲಾಗಿರುವ ಸಹೋದರರಿಗೆ ಅನಿಸಿದಂತೆ ನಿಮಗೆ ಅನಿಸಿರಲಿಕ್ಕಿಲ್ಲ. ಆದರೆ 2 ಸಮುವೇಲ ಪುಸ್ತಕದಲ್ಲಿರುವ ದಾಖಲೆಯನ್ನು ಓದಿದರೆ ಆ ಸಹೋದರರು ಯಾಕೆ ಹಾಗೆ ಯೋಚಿಸಿದರು ಎಂದು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ವಿನಯಶೀಲತೆ, ವಾಸ್ತವಿಕ ನೋಟವಿದ್ದ ವ್ಯಕ್ತಿ

ದಾವೀದನ ವಿರುದ್ಧ ಅಬ್ಷಾಲೋಮ ದಂಗೆ ಎದ್ದ ಸಮಯಕ್ಕೆ ಹೋಗೋಣ. ದಾವೀದ ಯೆರೂಸಲೇಮನ್ನು ಬಿಟ್ಟು ಯೊರ್ದನ್‌ ನದಿಯ ಪೂರ್ವಕ್ಕಿದ್ದ ಮಹನಯಿಮಿಗೆ ಓಡಿಹೋದನು. ಅಲ್ಲಿ ಅವನಿಗೆ ಮತ್ತು ಅವನ ಜೊತೆಯಲ್ಲಿದ್ದವರಿಗೆ ಕೆಲವು ಅಗತ್ಯ ವಸ್ತುಗಳು ಬೇಕಾಯಿತು. ಆಗ ಏನಾಯಿತು?

ಆ ಸ್ಥಳದಲ್ಲಿದ್ದ ಮೂರು ಪುರುಷರು ಹಾಸಿಗೆಗಳನ್ನು, ಅಡಿಗೆ ಸಾಮಾನುಗಳನ್ನು ಮತ್ತು ಅಗತ್ಯವಿದ್ದ ಪಾತ್ರೆಗಳನ್ನು ಉದಾರವಾಗಿ ಕೊಟ್ಟರು. ಈ ಮೂವರಲ್ಲಿ ಬರ್ಜಿಲ್ಲೈ ಒಬ್ಬನು. (2 ಸಮು. 17:27-29) ಅಬ್ಷಾಲೋಮನ ದಂಗೆ ವಿಫಲವಾದಾಗ ದಾವೀದ ಪುನಃ ಯೆರೂಸಲೇಮಿಗೆ ಹೊರಟನು. ಬರ್ಜಿಲ್ಲೈ ಯೊರ್ದನ್‌ ನದಿಯ ತನಕ ದಾವೀದನ ಜೊತೆ ಬಂದನು. ಆಗ ದಾವೀದನು ಅವನನ್ನು ತನ್ನೊಂದಿಗೆ ಯೆರೂಸಲೇಮಿಗೆ ಬರುವಂತೆ ಕೇಳಿಕೊಂಡನು. ಬರ್ಜಿಲ್ಲೈಯನ್ನು ಊಟ ಕೊಟ್ಟು ಸಂರಕ್ಷಿಸುವುದಾಗಿ ಹೇಳಿದನು. ಆದರೆ ಬರ್ಜಿಲ್ಲೈ ಆಗಲೇ ‘ಬಹುಶ್ರೀಮಂತನಾಗಿದ್ದನು.’ ದಾವೀದನು ಕೊಡುವ ಊಟ ತಿಂದು ಬದುಕಬೇಕಾದ ಪರಿಸ್ಥಿತಿ ಅವನಿಗಿರಲಿಲ್ಲ. (2 ಸಮು. 19:31-33) ಬರ್ಜಿಲ್ಲೈಯಲ್ಲಿದ್ದ ಗುಣಗಳು ದಾವೀದನಿಗೆ ಹಿಡಿಸಿತು. ಯೆರೂಸಲೇಮಿಗೆ ಬಂದರೆ ಅವನ ಸಲಹೆಗಳಿಂದ ಪ್ರಯೋಜನ ಪಡೆಯಬಹುದು ಎಂದು ದಾವೀದ ಯೋಚಿಸಿರಬೇಕು. ರಾಜನ ಆಸ್ಥಾನದಲ್ಲಿ ಕೆಲಸ ಮಾಡುವುದು ಖಂಡಿತ ದೊಡ್ಡ ಸುಯೋಗವಾಗಿತ್ತು.

ಆದರೆ ಬರ್ಜಿಲ್ಲೈಯಲ್ಲಿ ವಿನಯಶೀಲತೆ ಇತ್ತು, ವಾಸ್ತವಿಕ ನೋಟವೂ ಇತ್ತು. ತನಗಾಗಲೇ 80 ವರ್ಷ ಆಗಿದೆ ಎಂದು ಹೇಳಿದನು. “ಒಳ್ಳೇದು, ಕೆಟ್ಟದ್ದು ಇವುಗಳ ಭೇದವು ನನಗಿನ್ನು ತಿಳಿಯುವದೋ?” ಎಂದು ಕೇಳಿದನು. ಅವನ ಮಾತಿನ ಅರ್ಥ ಏನಾಗಿತ್ತು? ಇಷ್ಟು ವರ್ಷಗಳ ಅನುಭವದಿಂದ ಬರ್ಜಿಲ್ಲೈ ಖಂಡಿತ ವಿವೇಕಿಯಾಗಿರಬೇಕು. ರಾಜ ರೆಹಬ್ಬಾಮನಿಗೆ ‘ಹಿರಿಯರು’ ಒಳ್ಳೇ ಸಲಹೆ ಕೊಟ್ಟಂತೆ ಬರ್ಜಿಲ್ಲೈ ಕೂಡ ದಾವೀದನಿಗೆ ಕೊಡಬಹುದಿತ್ತು. (1 ಅರ. 12:6, 7; ಕೀರ್ತ. 92:12-14; ಜ್ಞಾನೋ. 16:31) ಹಾಗಾದರೆ ವಯಸ್ಸಾದಾಗ ಬರುವ ಕಾಯಿಲೆ-ಕಷ್ಟಗಳಿಗೆ ಸೂಚಿಸುತ್ತಾ ಬರ್ಜಿಲ್ಲೈ ಆ ಮಾತುಗಳನ್ನು ಹೇಳಿರಬೇಕು. ವಯಸ್ಸಾಗಿರುವುದರಿಂದ ರುಚಿ ಗೊತ್ತಾಗುತ್ತಿಲ್ಲ, ಕಿವಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಹೇಳಿದನು. (ಪ್ರಸಂ. 12:4, 5) ಆದ್ದರಿಂದ ಕಿಮ್ಹಾಮನನ್ನು ಯೆರೂಸಲೇಮಿಗೆ ಕರೆದುಕೊಂಡು ಹೋಗುವಂತೆ ಅವನಾಗಿಯೇ ಹೇಳಿದನು. ಕಿಮ್ಹಾಮ ಅವನ ಮಗನಾಗಿರಬಹುದು.—2 ಸಮು. 19:35-40.

ಮುಂದಾಲೋಚನೆಯಿಂದ ಮಾಡಲಾದ ಹೊಂದಾಣಿಕೆ

ಆರಂಭದಲ್ಲಿ ತಿಳಿಸಲಾದ ಹೊಂದಾಣಿಕೆಯ ಹಿಂದಿರುವ ಉದ್ದೇಶವೂ ಬರ್ಜಿಲ್ಲೈ ವ್ಯಕ್ತಪಡಿಸಿದ ದೃಷ್ಟಿಕೋನವೂ ಒಂದೇ ತರ ಇದೆ. ಆದರೆ ಒಂದು ವ್ಯತ್ಯಾಸ ಏನೆಂದರೆ, ಇದು ಬರ್ಜಿಲ್ಲೈ ವಿಷಯದಲ್ಲಿ ಇದ್ದಂತೆ ಬರೀ ಒಬ್ಬ ವ್ಯಕ್ತಿಯ ಸನ್ನಿವೇಶ ಮತ್ತು ಸಾಮರ್ಥ್ಯವನ್ನು ಮನಸ್ಸಲ್ಲಿಟ್ಟು ಮಾಡಲಾಗಿಲ್ಲ. ಲೋಕವ್ಯಾಪಕವಾಗಿ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವ ಹಿರಿಯರಿಗೆ ಯಾವುದು ಒಳ್ಳೇದು ಎಂದು ವಾಸ್ತವಿಕವಾಗಿ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಸುಮಾರು ವರ್ಷಗಳಿಂದ ಸೇವೆ ಮಾಡಿದ್ದ ವೃದ್ಧ ಸಹೋದರರು ತಾವು ನೋಡಿಕೊಳ್ಳುತ್ತಿದ್ದ ಜವಾಬ್ದಾರಿಗಳನ್ನು ತಮಗಿಂತ ಚಿಕ್ಕ ವಯಸ್ಸಿನ ಸಹೋದರರು ನಿಭಾಯಿಸಿದರೆ ಯೆಹೋವನ ಸಂಘಟನೆ ಮುಂದೆ ಇನ್ನೂ ಬೆಳೆದಾಗ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಕೂಡಲೆ ಅರ್ಥಮಾಡಿಕೊಂಡರು. ಬರ್ಜಿಲ್ಲೈ ತನ್ನ ಮಗನಿಗೆ ತರಬೇತಿ ಕೊಟ್ಟಿರಬೇಕು. ಅಪೊಸ್ತಲ ಪೌಲನು ತಿಮೊಥೆಯನಿಗೆ ತರಬೇತಿ ಕೊಟ್ಟನು. ಅದೇ ರೀತಿ ಈಗಲೂ ಹೊಸದಾಗಿ ನೇಮಕಗೊಂಡ ಯುವ ಸಹೋದರರಿಗೆ ಹೆಚ್ಚಾಗಿ ತರಬೇತಿ ಕೊಟ್ಟದ್ದು ಆ ಸ್ಥಾನಗಳಲ್ಲಿದ್ದ ವೃದ್ಧ ಸಹೋದರರು. (1 ಕೊರಿಂ. 4:17; ಫಿಲಿ. 2:20-22) ತರಬೇತಿ ಪಡೆದ ಯುವ ಸಹೋದರರು ತಾವು ‘ಮನುಷ್ಯರಲ್ಲಿ ದಾನಗಳಾಗಿದ್ದೇವೆ’ ಎಂದು ತೋರಿಸಿಕೊಟ್ಟಿದ್ದಾರೆ. ಅವರು ಕ್ರೈಸ್ತ ಸಭೆಯನ್ನು ಕಟ್ಟಲು ಸಹಾಯ ನೀಡುತ್ತಿದ್ದಾರೆ.—ಎಫೆ. 4:8-12; ಅರ. 11:16, 17, 29 ಹೋಲಿಸಿ.

ಮುಂದಿರುವ ಅವಕಾಶಗಳು ಅನೇಕ

ಲೋಕವ್ಯಾಪಕವಾಗಿ ಎಷ್ಟೋ ಸಹೋದರರು ತಮ್ಮ ಕೆಲವು ಜವಾಬ್ದಾರಿಗಳನ್ನು ಬೇರೆ ಸಹೋದರರಿಗೆ ವಹಿಸಿಕೊಟ್ಟು ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಹೊಸ ಅವಕಾಶಗಳನ್ನು ಕಂಡುಕೊಂಡಿದ್ದಾರೆ.

19 ವರ್ಷಗಳಿಂದ ಸಂಚರಣ ಮೇಲ್ವಿಚಾರಕರಾಗಿದ್ದ ಸಹೋದರ ಮಾರ್ಕೋ ಹೇಳುವುದು: “ನಮ್ಮ ಸಭೆಯಲ್ಲಿರುವ ಕೆಲವು ಸಹೋದರಿಯರ ಗಂಡಂದಿರು ಸತ್ಯದಲ್ಲಿಲ್ಲ. ಅವರನ್ನು ಭೇಟಿಮಾಡಲು ಈ ಹೊಸ ಹೊಂದಾಣಿಕೆ ನನಗೆ ಸಹಾಯ ಮಾಡಿದೆ.”

28 ವರ್ಷ ಸಂಚರಣ ಕೆಲಸ ಮಾಡಿದ್ದ ಝರಾಲ್ಡೂ ಏನು ಹೇಳುತ್ತಾರೆಂದರೆ, “ನಿಷ್ಕ್ರಿಯರಿಗೆ ಸಹಾಯ ಮಾಡಬೇಕು ಮತ್ತು ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸಬೇಕು ಎಂಬ ಹೊಸ ಗುರಿಗಳನ್ನು ನಾವಿಟ್ಟಿದ್ದೇವೆ.” ಇದುವರೆಗೂ ಝರಾಲ್ಡೂ ಮತ್ತು ಅವರ ಪತ್ನಿಗೆ 15 ಬೈಬಲ್‌ ಅಧ್ಯಯನಗಳು ಸಿಕ್ಕಿವೆ. ಎಷ್ಟೋ ಮಂದಿ ನಿಷ್ಕ್ರಿಯರು ಈಗ ಕೂಟಗಳಿಗೆ ಬರುತ್ತಿದ್ದಾರೆ.

ಈ ಮುಂಚೆ ತಿಳಿಸಲಾದ ಆ್ಯಲನ್‌ ಹೇಳುವುದು: “ಈಗ ನಾವು ಬೇರೆಬೇರೆ ರೀತಿಯ ಸೇವೆಯಲ್ಲಿ ಹೆಚ್ಚನ್ನು ಮಾಡಲು ಸಾಧ್ಯವಾಗುತ್ತಿದೆ. ಸಾರ್ವಜನಿಕ ಸಾಕ್ಷಿಕಾರ್ಯ ಮಾಡುತ್ತೇವೆ, ವ್ಯಾಪಾರ ಕ್ಷೇತ್ರಕ್ಕೂ ಹೋಗುತ್ತೇವೆ, ಈಗ ನಮ್ಮ ಮನೆಯ ಅಕ್ಕಪಕ್ಕದಲ್ಲಿ ಇರುವವರಿಗೂ ಸಾಕ್ಷಿಕೊಡುತ್ತೇವೆ. ಅವರಲ್ಲಿ ಇಬ್ಬರು ರಾಜ್ಯ ಸಭಾಗೃಹಕ್ಕೆ ಬಂದಿದ್ದರು.”

ನೀವು ಹಲವಾರು ವರ್ಷಗಳಿಂದ ನಿಷ್ಠೆಯಿಂದ ಸೇವೆಮಾಡಿ ಈಗ ಹೊಸ ನೇಮಕವನ್ನು ಪಡಕೊಂಡಿದ್ದೀರಾ? ಹೌದಾದರೆ ನೀವು ಒಂದು ವಿಶೇಷ ವಿಧದಲ್ಲಿ ಯೆಹೋವನ ಕೆಲಸಕ್ಕೆ ಬೆಂಬಲ ನೀಡಬಹುದು. ಸಭೆಯಲ್ಲಿರುವ ಯುವ ಸಹೋದರರೊಂದಿಗೆ ನಿಮ್ಮ ಅತ್ಯಮೂಲ್ಯ ಅನುಭವವನ್ನು ಹಂಚಿಕೊಳ್ಳಿ. ಈಗಾಗಲೇ ತಿಳಿಸಲಾದ ರಸಲ್‌ ಹೀಗೆ ಹೇಳುತ್ತಾರೆ: “ಸುಂದರವಾದ, ಸಮರ್ಥರಾದ ಯುವ ಜನರಿಗೆ ಯೆಹೋವನು ತರಬೇತಿ ಕೊಡುತ್ತಿದ್ದಾನೆ. ಹುರುಪು ಹುಮ್ಮಸ್ಸಿನಿಂದ ಕೂಡಿದ ಈ ಸಹೋದರರ ಬೋಧನೆ ಮತ್ತು ಪರಿಪಾಲನೆಯಿಂದ ಇಡೀ ಸಹೋದರ ಬಳಗ ಪ್ರಯೋಜನ ಪಡೆಯುತ್ತಿದೆ!”— “ಅತ್ಯುತ್ತಮ ಸೇವೆ ಮಾಡಲು ಯುವಜನರಿಗೆ ಸಹಾಯ ಮಾಡಿ” ಎಂಬ ಚೌಕ ನೋಡಿ.

ನಿಮ್ಮ ನಿಷ್ಠೆ ಯೆಹೋವನಿಗೆ ತುಂಬ ಇಷ್ಟ

ನೀವು ಇತ್ತೀಚೆಗೆ ಬೇರೊಂದು ರೀತಿಯ ಸೇವೆಯನ್ನು ಆರಂಭಿಸಿರುವಲ್ಲಿ ಸಕಾರಾತ್ಮಕ ನೋಟ ಇಟ್ಟುಕೊಳ್ಳಿ. ನೀವು ಈಗಾಗಲೇ ನಿಮ್ಮ ಹೃತ್ಪೂರ್ವಕ ಸೇವೆಯಿಂದ ಎಷ್ಟೋ ಜನರ ಜೀವನದ ಮೇಲೆ ಒಳ್ಳೇ ಪ್ರಭಾವ ಬೀರಿದ್ದೀರಿ. ಅದನ್ನೇ ಮುಂದುವರಿಸಿ. ನಿಮ್ಮನ್ನು ಪ್ರೀತಿಸುವವರು ಇದ್ದಾರೆ, ಮುಂದಕ್ಕೂ ಪ್ರೀತಿಸುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಮನಸ್ಸಿನಲ್ಲಿ ನಿಮಗೆ ಅಂತ ಒಂದು ಜಾಗ ಇದೆ. ‘ನೀವು ಪವಿತ್ರ ಜನರಿಗೆ ಶುಶ್ರೂಷೆ ಮಾಡಿದಿರಿ ಮತ್ತು ಇನ್ನೂ ಮಾಡುತ್ತಾ ಇದ್ದೀರಿ. ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಆತನು ಮರೆಯಲ್ಲ.’ (ಇಬ್ರಿ. 6:10) ನಾವು ಹಿಂದೆ ಮಾಡಿದ ಸೇವೆಯನ್ನು ಮಾತ್ರ ಯೆಹೋವನು ಮೆಚ್ಚುತ್ತಾನೆ ಅಂತೇನಿಲ್ಲ ಅನ್ನುವುದು ಆ ವಚನದಿಂದ ಗೊತ್ತಾಗುತ್ತದೆ. ನೀವು ಹಿಂದೆ ಮಾಡಿದ ಮತ್ತು ಈಗ ಮಾಡುತ್ತಾ ಇರುವ ಸೇವೆಯನ್ನು ಯೆಹೋವನು ತುಂಬ ಮಾನ್ಯಮಾಡುತ್ತಾನೆ. ಆತನು ನಿಮ್ಮನ್ನು ಖಂಡಿತ ಮರೆಯಲ್ಲ!

ಮೇಲೆ ತಿಳಿಸಲಾದ ಹೊಂದಾಣಿಕೆ ಒಂದುವೇಳೆ ನಿಮ್ಮನ್ನು ಬಾಧಿಸಿಲ್ಲವಾದರೂ ಒಂದು ವಿಷಯವನ್ನು ಮನಸ್ಸಲ್ಲಿಡಿ. ಏನದು?

ಹೊಸ ಹೊಂದಾಣಿಕೆಯಿಂದ ಬೇರೆ ನೇಮಕ ಸಿಕ್ಕಿದ ಒಬ್ಬ ನಂಬಿಗಸ್ತ ವೃದ್ಧ ಸಹೋದರರ ಸಂಪರ್ಕದಲ್ಲಿ ನೀವಿದ್ದರೆ ಅವರ ಪ್ರೌಢತೆ ಮತ್ತು ವರ್ಷಗಳ ಅನುಭವದಿಂದ ಪ್ರಯೋಜನ ಪಡೆಯಿರಿ. ಅವರಿಂದ ಸಲಹೆ ಸೂಚನೆಗಳನ್ನು ಕೇಳಿ. ಅವರಿಗೆ ಈಗ ಸಿಕ್ಕಿರುವ ನೇಮಕದಲ್ಲಿ ಹೇಗೆ ನಿಷ್ಠೆಯಿಂದ ತಮ್ಮ ಅನುಭವವನ್ನು ಅನ್ವಯಿಸುತ್ತಾರೆ ಎಂದು ನೋಡಿ.

ನೀವು ಹೊಸ ನೇಮಕ ಸಿಕ್ಕಿರುವ ವೃದ್ಧ ಸಹೋದರ ಆಗಿರಲಿ ಅಥವಾ ಇಂಥವರಿಂದ ಪ್ರಯೋಜನ ಪಡೆಯುವ ಸಾಧ್ಯತೆ ಇರುವ ಸಹೋದರ ಅಥವಾ ಸಹೋದರಿ ಆಗಿರಲಿ ನೀವು ಯಾವುದನ್ನು ಮನಸ್ಸಲ್ಲಿಡಬೇಕು? ತುಂಬ ವರ್ಷಗಳಿಂದ ತನ್ನ ಸೇವೆ ಮಾಡಿರುವವರನ್ನು ಮತ್ತು ಮಾಡುತ್ತಾ ಇರುವವರನ್ನು ಕಂಡರೆ ಯೆಹೋವನಿಗೆ ತುಂಬ ಇಷ್ಟವಾಗುತ್ತದೆ ಅನ್ನುವುದನ್ನು ಮನಸ್ಸಲ್ಲಿಡಿ.