ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರ್ವಶಕ್ತನಾದರೂ ಸರ್ವರ ಬಗ್ಗೆ ಚಿಂತಿಸುತ್ತಾನೆ

ಸರ್ವಶಕ್ತನಾದರೂ ಸರ್ವರ ಬಗ್ಗೆ ಚಿಂತಿಸುತ್ತಾನೆ

“[ಯೆಹೋವನು] ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತ. 103:14.

ಗೀತೆಗಳು: 91, 9

1, 2. (ಎ) ಅಧಿಕಾರವಿರುವವರು ನಡಕೊಳ್ಳುವ ರೀತಿಗೂ ಯೆಹೋವನು ನಡಕೊಳ್ಳುವ ರೀತಿಗೂ ಇರುವ ವ್ಯತ್ಯಾಸವೇನು? (ಬಿ) ಈ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ?

ಅಧಿಕಾರ ಇರುವವರು ಸಾಮಾನ್ಯವಾಗಿ ಜನರ ಮೇಲೆ ಅಧಿಕಾರ ಚಲಾಯಿಸುತ್ತಾರೆ, ಕೆಲವೊಮ್ಮೆ ದಬ್ಬಾಳಿಕೆನೂ ಮಾಡುತ್ತಾರೆ. (ಮತ್ತಾ. 20:25; ಪ್ರಸಂ. 8:9) ಆದರೆ ಯೆಹೋವ ದೇವರು ಯಾವತ್ತೂ ಹಾಗೆ ಮಾಡುವವನಲ್ಲ. ಆತನು ಸರ್ವಶಕ್ತ, ಇಡೀ ವಿಶ್ವದಲ್ಲೇ ಅತಿ ಹೆಚ್ಚು ಅಧಿಕಾರ ಇರುವವನು. ಆದರೂ ಎಲ್ಲರ ಬಗ್ಗೆ ಚಿಂತಿಸುತ್ತಾನೆ. ಅಪರಿಪೂರ್ಣ ಮಾನವರ ಜೊತೆ ಪ್ರೀತಿ, ದಯೆಯಿಂದ ನಡಕೊಳ್ಳುತ್ತಾನೆ. ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾನೆ. ನಮಗೇನು ಬೇಕೆಂದು ಅರ್ಥಮಾಡಿಕೊಳ್ಳುತ್ತಾನೆ. ನಮ್ಮಲ್ಲಿ ಕುಂದುಕೊರತೆಗಳಿವೆ, ಇತಿಮಿತಿಗಳಿವೆ ಎಂದು ಮನಸ್ಸಲ್ಲಿಟ್ಟು ನಮ್ಮಿಂದ ಮಾಡಕ್ಕಾಗದೆ ಇರುವುದನ್ನು ಯಾವತ್ತೂ ಕೇಳಲ್ಲ.—ಕೀರ್ತ. 103:13, 14.

2 ಯೆಹೋವನು ಹೇಗೆ ತನ್ನ ಜನರನ್ನು ಅರ್ಥಮಾಡಿಕೊಂಡು ದಯೆಯಿಂದ ನಡಕೊಂಡಿದ್ದಾನೆ ಎಂದು ನಾವು ಬೈಬಲಿನಿಂದ ತಿಳಿದುಕೊಳ್ಳಬಹುದು. ಅಂಥ ಮೂರು ಉದಾಹರಣೆಗಳನ್ನು ನಾವೀಗ ನೋಡೋಣ. ಒಂದು, ಸಮುವೇಲ ಮಹಾ ಯಾಜಕನಾದ ಏಲಿಗೆ ನ್ಯಾಯತೀರ್ಪಿನ ಸಂದೇಶವನ್ನು ತಿಳಿಸಬೇಕಿದ್ದಾಗ ಯೆಹೋವನು ಅವನಿಗೆ ಸಹಾಯ ಮಾಡಿದನು. ಎರಡು, ಮೋಶೆ ಐಗುಪ್ತದಿಂದ ಇಸ್ರಾಯೇಲ್ಯರನ್ನು ಬಿಡಿಸಿಕೊಂಡು ಬರಲು ತನ್ನಿಂದಾಗಲ್ಲ ಎಂದು ಹೇಳಿದಾಗ ಯೆಹೋವನು ಅವನ ಹತ್ತಿರ ತಾಳ್ಮೆಯಿಂದ ನಡಕೊಂಡನು. ಮೂರು, ಇಸ್ರಾಯೇಲ್ಯರು ಐಗುಪ್ತದಿಂದ ಬರುವಾಗ ಯೆಹೋವನು ಅವರಿಗೆ ದಯೆ ತೋರಿಸಿದನು. ಈ ಉದಾಹರಣೆಗಳಿಂದ ಯೆಹೋವನ ಬಗ್ಗೆ ನಾವು ಏನು ಕಲಿಯಬಹುದು ಮತ್ತು ನಾವು ಆತನನ್ನು ಹೇಗೆ ಅನುಕರಿಸಬಹುದು?

ಒಬ್ಬ ತಂದೆಯಂತೆ ನಡಕೊಂಡನು

3. (ಎ) ಒಂದು ರಾತ್ರಿ ಯಾವ ಅಪರೂಪದ ಘಟನೆ ನಡೆಯಿತು? (ಬಿ) ನಮಗೆ ಯಾವ ಪ್ರಶ್ನೆ ಬರಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

3 ಸಮುವೇಲನು ತುಂಬ ಚಿಕ್ಕ ವಯಸ್ಸಿನಿಂದಲೇ ದೇವಗುಡಾರದಲ್ಲಿ ಸೇವೆ ಮಾಡುತ್ತಿದ್ದನು. (1 ಸಮು. 3:1) ಒಂದು ರಾತ್ರಿ, ಅವನು ನಿದ್ದೆ ಮಾಡುತ್ತಿದ್ದಾಗ ತುಂಬ ಅಪರೂಪದ ಒಂದು ಘಟನೆ ನಡೆಯಿತು. * (1 ಸಮುವೇಲ 3:2-10 ಓದಿ.) ಯಾರೋ ಅವನ ಹೆಸರನ್ನು ಕರೆದಂತೆ ಅನಿಸಿತು. ವೃದ್ಧನಾಗಿದ್ದ ಮಹಾ ಯಾಜಕ ಏಲಿಯೇ ತನ್ನನ್ನು ಕರೆದಿರಬೇಕು ಎಂದು ಸಮುವೇಲ ನೆನಸಿದನು. ಥಟ್ಟನೆ ಎದ್ದು ಏಲಿಯ ಹತ್ತಿರ ಹೋಗಿ ‘ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲಾ’ ಎಂದು ಕೇಳಿದನು. ಆಗ ಏಲಿ “ನಾನು ನಿನ್ನನ್ನು ಕರೆಯಲಿಲ್ಲ” ಎಂದನು. ಇದೇ ರೀತಿ ಇನ್ನೂ ಎರಡು ಸಾರಿ ಆಯಿತು. ಆಗ ಏಲಿಗೆ ಯೆಹೋವನೇ ಸಮುವೇಲನನ್ನು ಕರೆದಿರುವುದು ಎಂದು ಗೊತ್ತಾಯಿತು. ಅವನು ಸಮುವೇಲನಿಗೆ, ಇನ್ನೊಂದು ಸಾರಿ ಈ ರೀತಿ ಕರೆದರೆ ಏನು ಮಾಡಬೇಕು ಎಂದು ಹೇಳಿ ಕಳುಹಿಸಿದನು. ಅದೇ ರೀತಿ ಸಮುವೇಲ ಮಾಡಿದನು. ತಾನೇ ಕರೆಯುತ್ತಿರುವುದು ಎಂದು ಯೆಹೋವನು ಯಾಕೆ ಸಮುವೇಲನಿಗೆ ಮೊದಲೇ ಹೇಳಲಿಲ್ಲ? ಇದರ ಕಾರಣ ಬೈಬಲಲ್ಲಿ ಇಲ್ಲ. ಆದರೆ ಯೆಹೋವನಿಗೆ ಸಮುವೇಲನ ಮೇಲೆ ಕಾಳಜಿ ಇದ್ದದರಿಂದಲೇ ಹೀಗೆ ಮಾಡಿರಬೇಕು ಎಂದು ಗೊತ್ತಾಗುತ್ತದೆ.

4, 5. (ಎ) ಏಲಿಗೆ ಒಂದು ಸಂದೇಶವನ್ನು ಹೇಳಬೇಕೆಂದು ಯೆಹೋವನು ಸಮುವೇಲನಿಗೆ ಹೇಳಿದಾಗ ಅವನು ಏನು ಮಾಡಿದನು? (ಬಿ) ಈ ವೃತ್ತಾಂತದಿಂದ ಯೆಹೋವನ ಬಗ್ಗೆ ನಾವೇನು ಕಲಿಯುತ್ತೇವೆ?

4 ಒಂದನೇ ಸಮುವೇಲ 3:11-18 ಓದಿ. ಮಕ್ಕಳು ದೊಡ್ಡವರಿಗೆ, ಅದರಲ್ಲೂ ಅಧಿಕಾರದಲ್ಲಿ ಇರುವವರಿಗೆ ಗೌರವ ಕೊಡಬೇಕು ಎಂಬ ಆಜ್ಞೆಯನ್ನು ಯೆಹೋವನು ಧರ್ಮಶಾಸ್ತ್ರದಲ್ಲಿ ಕೊಟ್ಟಿದ್ದನು. (ವಿಮೋ. 22:28; ಯಾಜ. 19:32) ಹಾಗಾಗಿ ಚಿಕ್ಕ ಹುಡುಗನಾಗಿದ್ದ ಸಮುವೇಲನಿಗೆ ಬೆಳಗ್ಗೆ ಎದ್ದು ಏಲಿಯ ಹತ್ತಿರ ಹೋಗಿ ದೇವರ ನ್ಯಾಯತೀರ್ಪಿನ ಸಂದೇಶವನ್ನು ಹೇಳುವುದು ಎಷ್ಟು ಕಷ್ಟವಾಗಿರಬೇಕು. ಸಮುವೇಲನು ತನಗೆ ಗೊತ್ತಾದ ವಿಷಯವನ್ನು “ಏಲಿಗೆ ತಿಳಿಸುವದಕ್ಕೆ ಭಯಪಟ್ಟನು” ಎಂದು ಬೈಬಲ್‌ ಹೇಳುತ್ತದೆ. ಆದರೆ ತಾನೇ ಸಮುವೇಲನನ್ನು ಕರೆದಿದ್ದು ಎಂದು ಯೆಹೋವನು ಏಲಿಗೆ ಸ್ಪಷ್ಟವಾಗಿ ತೋರಿಸಿಕೊಟ್ಟನು. ಹಾಗಾಗಿ ಏಲಿ ‘ದೇವರು ಹೇಳಿದ್ದರಲ್ಲಿ ಒಂದು ಮಾತನ್ನೂ ಮುಚ್ಚಿಡಬೇಡ’ ಎಂದು ಸಮುವೇಲನಿಗೆ ಹೇಳಿದನು. ಏಲಿಯ ಮಾತಿನಂತೆ ಸಮುವೇಲ ‘ಒಂದನ್ನೂ ಮುಚ್ಚಿಡದೆ ಎಲ್ಲವನ್ನೂ ತಿಳಿಸಿದನು.’

5 ಈ ಸಂದೇಶ ಏಲಿಗೆ ಹೊಸದಾಗಿರಲಿಲ್ಲ. ಈ ಮುಂಚೆ “ದೇವರ ಮನುಷ್ಯನೊಬ್ಬನು” ಇದೇ ಸಂದೇಶವನ್ನು ಏಲಿಗೆ ಹೇಳಿದ್ದನು. (1 ಸಮು. 2:27-36) ಯೆಹೋವನು ಬೇರೆಯವರ ಬಗ್ಗೆ ಎಷ್ಟು ಚಿಂತಿಸುತ್ತಾನೆ ಮತ್ತು ವಿವೇಕದಿಂದ ನಡಕೊಳ್ಳುತ್ತಾನೆ ಎಂದು ಈ ವೃತ್ತಾಂತದಿಂದ ಗೊತ್ತಾಗುತ್ತದೆ.

6. ಬಾಲಕನಾದ ಸಮುವೇಲನಿಗೆ ದೇವರು ಸಹಾಯ ಮಾಡಿದ ರೀತಿಯಿಂದ ನಾವು ಏನು ಕಲಿಯಬಹುದು?

6 ನೀವು ಬಾಲಕ ಸಮುವೇಲನ ವಯಸ್ಸಿನವರಾ? ಯೆಹೋವನು ನಿಮ್ಮ ಸಮಸ್ಯೆಗಳನ್ನು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಈ ವೃತ್ತಾಂತದಿಂದ ಗೊತ್ತಾಗುತ್ತದೆ. ನಿಮಗೆ ನಾಚಿಕೆ ಸ್ವಭಾವ ಇರಬಹುದು. ಇದರಿಂದಾಗಿ ದೊಡ್ಡವರಿಗೆ ಸುವಾರ್ತೆ ಸಾರಲು ಮತ್ತು ನಿಮ್ಮ ವಯಸ್ಸಿನ ಮಕ್ಕಳಂತೆ ಇರದೆ ಭಿನ್ನವಾಗಿರಲು ಕಷ್ಟ ಆಗುತ್ತಿರಬಹುದು. ಚಿಂತೆ ಮಾಡಬೇಡಿ, ಯೆಹೋವನು ನಿಮಗೆ ಸಹಾಯ ಮಾಡುತ್ತಾನೆ. ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿ, ನಿಮಗೆ ಅನಿಸುವುದನ್ನೆಲ್ಲ ಆತನ ಹತ್ತಿರ ಹೇಳಿಕೊಳ್ಳಿ. (ಕೀರ್ತ. 62:8) ಸಮುವೇಲನ ತರ ಇನ್ನೂ ಅನೇಕ ಮಕ್ಕಳ ಉದಾಹರಣೆಗಳು ಬೈಬಲಲ್ಲಿವೆ. ಅದರ ಬಗ್ಗೆ ಓದಿ ಚೆನ್ನಾಗಿ ಯೋಚನೆ ಮಾಡಿ. ಸಭೆಯಲ್ಲಿ ನಿಮ್ಮ ವಯಸ್ಸಿನವರ ಅಥವಾ ನಿಮಗಿಂತ ದೊಡ್ಡವರ ಹತ್ತಿರ ಮಾತಾಡಿ. ಅವರಿಗೂ ನಿಮಗಿದ್ದಂಥ ಸಮಸ್ಯೆಗಳು ಇದ್ದಿರಬಹುದು. ಆ ಸಮಸ್ಯೆಗಳನ್ನು ಬಗೆಹರಿಸಲು ಅವರು ಏನು ಮಾಡಿದರು ಎಂದು ಕೇಳಿ. ಅವರು ನೆನಸಿಯೇ ಇರದಂಥ ರೀತಿಯಲ್ಲಿ ಯೆಹೋವ ದೇವರು ಹೇಗೆ ಸಹಾಯ ಮಾಡಿದನು ಎಂದು ನಿಮಗೆ ಹೇಳಬಹುದು.

ಮೋಶೆಗೆ ತಾಳ್ಮೆ ತೋರಿಸಿದನು

7, 8. ಮೋಶೆಯನ್ನು ಅರ್ಥಮಾಡಿಕೊಂಡಿದ್ದೇನೆಂದು ಯೆಹೋವನು ಹೇಗೆ ತೋರಿಸಿದನು?

7 ಮೋಶೆಗೆ 80 ವರ್ಷ ಆದಾಗ ಯೆಹೋವನು ತುಂಬ ಕಷ್ಟವಾದ ಒಂದು ಕೆಲಸವನ್ನು ಅವನಿಗೆ ಕೊಟ್ಟನು. ಆ ಕೆಲಸ ಏನೆಂದರೆ, ಐಗುಪ್ತದಲ್ಲಿ ದಾಸರಾಗಿ ಕೆಲಸ ಮಾಡುತ್ತಿದ್ದ ಇಸ್ರಾಯೇಲ್ಯರನ್ನು ಬಿಡಿಸಿಕೊಂಡು ಬರುವುದು. (ವಿಮೋ. 3:10) ಮಿದ್ಯಾನ್‌ನಲ್ಲಿ 40 ವರ್ಷ ಕುರುಬನಾಗಿ ಕೆಲಸಮಾಡಿದ ಮೋಶೆಗೆ ಈ ನೇಮಕ ಸಿಕ್ಕಿದಾಗ ನಿಂತ ನೆಲ ಕುಸಿದಂತೆ ಆಯಿತು. “ಫರೋಹನ ಸನ್ನಿಧಾನಕ್ಕೆ ಹೋಗುವದಕ್ಕೂ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರೆದುಕೊಂಡುಬರುವದಕ್ಕೂ ನಾನು ಎಷ್ಟರವನು” ಎಂದು ಹೇಳಿದನು. ಆಗ ಯೆಹೋವನು “ನಾನೇ ನಿನ್ನ ಸಂಗಡ ಇರುವೆನು” ಎಂದು ಹೇಳಿ ಧೈರ್ಯ ತುಂಬಿದನು. (ವಿಮೋ. 3:11, 12) ಅಷ್ಟೇ ಅಲ್ಲ, ಇಸ್ರಾಯೇಲ್ಯರ ಹಿರಿಯರು “ನಿನ್ನ ಮಾತಿಗೆ ಕಿವಿಗೊಡುವರು” ಎಂದು ಮಾತು ಕೊಟ್ಟನು. ಆದರೂ ಮೋಶೆ “ಅವರು ನನ್ನನ್ನು ನಂಬದೆ ನನ್ನ ಮಾತಿಗೆ ಕಿವಿಗೊಡದೆ ಹೋದಾರು” ಎಂದು ಹೇಳಿದನು. (ವಿಮೋ. 3:18; 4:1) ಇನ್ನೊಂದು ಅರ್ಥದಲ್ಲಿ, ಯೆಹೋವನು ಹೇಳಿದ ಹಾಗೆ ನಡೆಯದೇ ಹೋಗಬಹುದು ಎಂದು ಮೋಶೆ ಹೇಳಿದನು. ಆದರೂ ಯೆಹೋವನು ಮೋಶೆಯ ಹತ್ತಿರ ತಾಳ್ಮೆಯಿಂದ ನಡಕೊಂಡನು. ಅದ್ಭುತಗಳನ್ನು ಮಾಡಲು ಶಕ್ತಿಯನ್ನು ಸಹ ಕೊಟ್ಟನು. ಬೈಬಲಲ್ಲಿ ದಾಖಲಾಗಿರುವ ಪ್ರಕಾರ ಅದ್ಭುತಗಳನ್ನು ಮಾಡಲು ಯೆಹೋವನಿಂದ ಶಕ್ತಿ ಪಡಕೊಂಡ ಮೊದಲ ವ್ಯಕ್ತಿ ಮೋಶೆ.—ವಿಮೋ. 4:2-9, 21.

8 ಇಷ್ಟೆಲ್ಲ ಭರವಸೆ, ಸಹಾಯ ಕೊಟ್ಟ ಮೇಲೂ ಮೋಶೆ ಇನ್ನೊಂದು ನೆಪ ಕೊಟ್ಟನು. ತನಗೆ ಸರಿಯಾಗಿ ಮಾತಾಡಕ್ಕೆ ಬರಲ್ಲ ಎಂದನು. ಅದಕ್ಕೆ ಯೆಹೋವನು “ನಾನು ನಿನ್ನ ಬಾಯಿಗೆ ಸಹಾಯವಾಗಿದ್ದು ನೀನು ಮಾತಾಡಬೇಕಾದದ್ದನ್ನು ಬೋಧಿಸುವೆನು” ಎಂದು ಹೇಳಿದನು. ಕೊನೆಗೂ ಮೋಶೆ ಒಪ್ಪಿಕೊಂಡನಾ? ಇಲ್ಲ, ಬೇರೆ ಯಾರನ್ನಾದರೂ ಈ ಕೆಲಸಕ್ಕೆ ಕಳುಹಿಸುವಂತೆ ಹೇಳಿದನು. ಆಗ ಯೆಹೋವನಿಗೆ ಕೋಪ ಬಂತು. ಆದರೂ ಮೋಶೆಯನ್ನು ಅರ್ಥಮಾಡಿಕೊಂಡು ಅವನಿಗೋಸ್ಕರ ಮಾತಾಡಲು ಆರೋನನನ್ನು ಕಳುಹಿಸಿದನು.—ವಿಮೋ. 4:10-16.

9. ಯೆಹೋವನು ತೋರಿಸಿದ ತಾಳ್ಮೆ ಮತ್ತು ದಯೆಯಿಂದಾಗಿ ಒಳ್ಳೇ ನಾಯಕನಾಗಲು ಮೋಶೆಗೆ ಹೇಗೆ ಸಹಾಯವಾಯಿತು?

9 ಈ ವೃತ್ತಾಂತದಿಂದ ನಾವು ಯೆಹೋವನ ಬಗ್ಗೆ ಏನು ಕಲಿಯಬಹುದು? ಯೆಹೋವನಿಗೆ ಅಪಾರ ಶಕ್ತಿ ಇದೆ. ಆ ಶಕ್ತಿಯನ್ನು ತೋರಿಸಿ ಮೋಶೆಯಲ್ಲಿ ಭಯಹುಟ್ಟಿಸಿ ತನಗೆ ವಿಧೇಯನಾಗುವಂತೆ ಮಾಡಬಹುದಿತ್ತು. ಆದರೆ ಯೆಹೋವನು ತಾಳ್ಮೆ, ದಯೆಯಿಂದ ನಡಕೊಂಡನು. ದೀನತೆ ಮತ್ತು ವಿನಯಶೀಲತೆ ಇದ್ದ ತನ್ನ ಸೇವಕನಾದ ಮೋಶೆ ಜೊತೆ ತಾನು ಇರುತ್ತೇನೆ ಎಂಬ ಭರವಸೆ ನೀಡಿದನು. ಇದರಿಂದಾಗಿ ಮೋಶೆಯನ್ನು ಒಪ್ಪಿಸಲು ಯೆಹೋವನಿಗೆ ಸಾಧ್ಯವಾಯಿತಾ? ಹೌದು ಸಾಧ್ಯವಾಯಿತು. ಮೋಶೆ ದೇವಜನರ ಮಹಾ ನಾಯಕನಾದನು. ಅವನೂ ಯೆಹೋವನಂತೆ ಜನರ ಹತ್ತಿರ ಸೌಮ್ಯಭಾವದಿಂದ, ಅವರನ್ನು ಅರ್ಥಮಾಡಿಕೊಂಡು ನಡೆಯಲು ಪ್ರಯತ್ನಿಸಿದನು.—ಅರ. 12:3.

ನೀವು ಬೇರೆಯವರ ಜೊತೆ ಯೆಹೋವನು ನಡಕೊಳ್ಳುವ ರೀತಿ ನಡಕೊಳ್ಳುತ್ತೀರಾ? (ಪ್ಯಾರ 10 ನೋಡಿ)

10. ನಾವು ಯೆಹೋವನಂತೆ ತಾಳ್ಮೆ, ದಯೆ ತೋರಿಸುವಂಥ ವ್ಯಕ್ತಿಗಳಾಗಿದ್ದರೆ ಯಾವ ಪ್ರಯೋಜನ ಸಿಗುತ್ತದೆ?

10 ಇಂದು ನಾವು ಯಾವ ಪಾಠಗಳನ್ನು ಕಲಿಯಬಹುದು? ನೀವೊಬ್ಬ ಗಂಡನಾಗಿದ್ದರೆ, ಹೆತ್ತವರಾಗಿದ್ದರೆ ಅಥವಾ ಹಿರಿಯರಾಗಿದ್ದರೆ ಬೇರೆಯವರ ಮೇಲೆ ನಿಮಗೆ ಸ್ವಲ್ಪಮಟ್ಟಿಗಿನ ಅಧಿಕಾರ ಇರುತ್ತದೆ. ಹಾಗಾಗಿ ನಿಮ್ಮ ಹೆಂಡತಿ, ಮಕ್ಕಳು ಮತ್ತು ಸಭೆಯಲ್ಲಿ ಇರುವವರ ಜೊತೆ ನೀವು ಯೆಹೋವನಂತೆ ದಯೆಯಿಂದ ತಾಳ್ಮೆಯಿಂದ ನಡಕೊಳ್ಳುವುದು ಪ್ರಾಮುಖ್ಯ. (ಕೊಲೊ. 3:19-21; 1 ಪೇತ್ರ 5:1-3) ದೇವರಾದ ಯೆಹೋವನಂತೆ ಮತ್ತು ಮಹಾ ಮೋಶೆಯಾದ ಯೇಸು ಕ್ರಿಸ್ತನಂತೆ ನೀವಿದ್ದರೆ ಜನರು ನಿಮ್ಮ ಹತ್ತಿರ ಬಂದು ಮಾತಾಡುತ್ತಾರೆ, ನಿಮ್ಮಿಂದ ಪ್ರೋತ್ಸಾಹ ಪಡೆಯುತ್ತಾರೆ. (ಮತ್ತಾ. 11:28, 29) ನಿಮ್ಮಂತೆ ಅವರೂ ನಡೆಯಲು ಪ್ರಯತ್ನಿಸುತ್ತಾರೆ.—ಇಬ್ರಿ. 13:7.

ಶಕ್ತಿಶಾಲಿಯಾದರೂ ದಯಾಪರನು

11, 12. ಯೆಹೋವನು ಮಾಡಿದ ಯಾವ ವಿಷಯಗಳಿಂದಾಗಿ ಇಸ್ರಾಯೇಲ್ಯರಿಗೆ ತಾವು ಸುರಕ್ಷಿತವಾಗಿದ್ದೇವೆ ಎಂದನಿಸಿತು?

11 ಕ್ರಿ.ಪೂ. 1513​ರಲ್ಲಿ 30 ಲಕ್ಷಕ್ಕೂ ಹೆಚ್ಚು ಇಸ್ರಾಯೇಲ್ಯರು ಐಗುಪ್ತದಿಂದ ಹೊರಟುಬಂದಿದ್ದರು. ಅವರಲ್ಲಿ ಮಕ್ಕಳಿದ್ದರು, ವಯಸ್ಸಾದವರಿದ್ದರು ಮತ್ತು ಕಾಯಿಲೆಬಿದ್ದವರೂ ಅಂಗವಿಕಲರೂ ಇದ್ದಿರಬಹುದು. ಇಂಥ ಜನರಿದ್ದ ಆ ಗುಂಪನ್ನು ಅವರ ನಾಯಕ ಅರ್ಥಮಾಡಿಕೊಂಡು ಮುಂದೆ ನಡೆಸಬೇಕಿತ್ತು. ಆ ಜನರಿಗೆ ಐಗುಪ್ತವೇ ಅವರ ಪ್ರಪಂಚವಾಗಿತ್ತು. ಅವರನ್ನು ಹೊಸ ಸ್ಥಳ-ಸನ್ನಿವೇಶಕ್ಕೆ ಕರಕೊಂಡು ಹೋಗುವಾಗ ಅವರ ನಾಯಕ ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಕಾಳಜಿ ವಹಿಸಬೇಕಿತ್ತು. ಅದನ್ನೇ ಯೆಹೋವನು ಮೋಶೆಯ ಮೂಲಕ ಮಾಡಿದನು. ಹಾಗಾಗಿ ಇಸ್ರಾಯೇಲ್ಯರಿಗೆ ತಾವು ಸುರಕ್ಷಿತರಾಗಿದ್ದೇವೆ ಎಂದನಿಸಿತು.—ಕೀರ್ತ. 78:52, 53.

12 ಯೆಹೋವನು ಮಾಡಿದ ಯಾವ ವಿಷಯಗಳಿಂದಾಗಿ ಇಸ್ರಾಯೇಲ್ಯರಿಗೆ ತಾವು ಸುರಕ್ಷಿತವಾಗಿದ್ದೇವೆ ಎಂದನಿಸಿತು? ಇಸ್ರಾಯೇಲ್‌ ಜನಾಂಗ ಐಗುಪ್ತವನ್ನು ಬಿಟ್ಟು ಹೊರಟಾಗ ಆ ಇಡೀ ಜನಾಂಗವನ್ನು ಸೈನ್ಯದಂತೆ ಯೆಹೋವನು ಸಂಘಟಿಸಿದನು. (ವಿಮೋ. 13:18) ಜನರ ಮಧ್ಯೆ ಕ್ರಮಬದ್ಧತೆ ಇದ್ದದರಿಂದ ಪರಿಸ್ಥಿತಿ ದೇವರ ನಿಯಂತ್ರಣದಲ್ಲಿದೆ ಎಂದು ಅವರಿಗೆ ಸ್ಪಷ್ಟವಾಗಿತ್ತು. ಅಷ್ಟೇ ಅಲ್ಲ, ಯೆಹೋವನು ‘ಹಗಲಿಗೆ ಮೋಡವನ್ನು’ ಮತ್ತು ರಾತ್ರಿಗೆ ‘ಬೆಂಕಿಯ ಬೆಳಕನ್ನು’ ಕೊಟ್ಟನು. ಇದರ ಮೂಲಕ ತಾನು ಅವರ ಜೊತೆ ಇದ್ದೇನೆ, ಅವರನ್ನು ಮಾರ್ಗದರ್ಶಿಸುತ್ತಿದ್ದೇನೆ, ಸಂರಕ್ಷಿಸುತ್ತಿದ್ದೇನೆ ಎಂದು ತೋರಿಸಿಕೊಟ್ಟನು. (ಕೀರ್ತ. 78:14) ಇಂಥ ಭರವಸೆ ಅವರಿಗೆ ತುಂಬಾನೇ ಅಗತ್ಯ ಇತ್ತು. ಯಾಕೆಂದು ಮುಂದೆ ನೋಡೋಣ.

ಇಸ್ರಾಯೇಲ್ಯರು ಕೆಂಪು ಸಮುದ್ರದ ಹತ್ತಿರ ಬಂದಾಗ ಯೆಹೋವನು ಅವರನ್ನು ಹೇಗೆ ಕಾಪಾಡಿದನು? (ಪ್ಯಾರ 13 ನೋಡಿ)

13, 14. (ಎ) ಇಸ್ರಾಯೇಲ್ಯರು ಕೆಂಪು ಸಮುದ್ರದ ಹತ್ತಿರ ಬಂದಾಗ ಯೆಹೋವನು ಅವರಿಗೆ ಹೇಗೆ ಕಾಳಜಿ ತೋರಿಸಿದನು? (ಬಿ) ಐಗುಪ್ತ್ಯರಿಗಿಂತ ಯೆಹೋವನು ಹೆಚ್ಚು ಶಕ್ತಿಶಾಲಿ ಎಂದು ಹೇಗೆ ತೋರಿಸಿದನು?

13 ವಿಮೋಚನಕಾಂಡ 14:19-22 ಓದಿ. ನೀವು ಕೂಡ ಇಸ್ರಾಯೇಲ್ಯರಲ್ಲಿ ಒಬ್ಬರೆಂದು ಊಹಿಸಿಕೊಳ್ಳಿ. ನಿಮ್ಮ ಕಣ್ಣಮುಂದೆ ಕೆಂಪು ಸಮುದ್ರವಿದೆ, ಹಿಂದೆ ಐಗುಪ್ತ್ಯ ಸೈನ್ಯ ನಿಮ್ಮನ್ನು ಆಕ್ರೋಶದಿಂದ ಬೆನ್ನಟ್ಟುತ್ತಿದೆ. ಇವುಗಳ ಮಧ್ಯೆ ನೀವು ಸಿಕ್ಕಿಹಾಕಿಕೊಂಡಿದ್ದೀರಿ. ಇಂಥ ಸನ್ನಿವೇಶದಲ್ಲಿ ಯೆಹೋವನು ನಿಮ್ಮ ಸಹಾಯಕ್ಕಾಗಿ ಬರುತ್ತಾನೆ. ಇಷ್ಟು ಹೊತ್ತು ನಿಮ್ಮ ಮುಂದೆ ಇದ್ದ ಮೇಘಸ್ತಂಭವನ್ನು ನಿಮ್ಮ ಹಿಂದೆ ತಂದು ನಿಲ್ಲಿಸುತ್ತಾನೆ. ಈಗ ಅದು ಐಗುಪ್ತ್ಯರ ಸೈನ್ಯ ಮತ್ತು ನಿಮ್ಮ ಮಧ್ಯೆ ನಿಂತಿದೆ. ಐಗುಪ್ತ್ಯರ ಸೈನ್ಯ ಈಗ ಕಾರ್ಗತ್ತಲಲ್ಲಿ ಮುಳುಗಿದೆ. ಆದರೆ ನೀವು ಮಾತ್ರ ಅದ್ಭುತಕರವಾದ ಬೆಳಕಿನಲ್ಲಿ ಇದ್ದೀರಿ! ನಂತರ ಮೋಶೆ ತನ್ನ ಕೈಚಾಚಿದಾಗ ಪೂರ್ವ ದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುತ್ತದೆ. ಆಗ ಸಮುದ್ರದಲ್ಲಿ ಅಗಲವಾದ ದಾರಿ ತೆರೆಯುತ್ತದೆ. ನೀವು, ನಿಮ್ಮ ಕುಟುಂಬ, ನಿಮ್ಮ ಸಾಕುಪ್ರಾಣಿಗಳು ಮತ್ತು ಉಳಿದ ಜನರೆಲ್ಲರೂ ಯಾವುದೇ ಗಲಿಬಿಲಿ ಇಲ್ಲದೆ ಆ ದಾರಿಯಲ್ಲಿ ನಡೆಯುತ್ತಾ ಇದ್ದೀರಿ. ಅಲ್ಲಿ ಕೆಸರಿಲ್ಲ, ನೆಲ ಜಾರುತ್ತಿಲ್ಲ ಅಂತ ನೋಡಿದಾಗ ನಿಮಗೆ ಆಶ್ಚರ್ಯ ಆಗುತ್ತದೆ. ನಡೆಯುವುದಕ್ಕೆ ಕಷ್ಟಪಡುವವರು ಕೂಡ ಸಮುದ್ರ ತಳ ಒಣಗಿ ಗಟ್ಟಿಯಾಗಿರುವುದರಿಂದ ಆರಾಮಾಗಿ ಹೆಜ್ಜೆ ಇಡುತ್ತಾ ಸಮುದ್ರವನ್ನು ದಾಟಿಬಿಡುತ್ತಾರೆ!

14 ವಿಮೋಚನಕಾಂಡ 14:23, 26-30 ಓದಿ. ಈ ಘಟನೆಗಳು ನಡೆಯುತ್ತಿರುವಾಗ ನಿಮ್ಮನ್ನು ಬೆನ್ನಟ್ಟುತ್ತಿದ್ದ ಅಹಂಕಾರಿಯೂ ಮೂರ್ಖನೂ ಆದಂಥ ಫರೋಹ ಸಮುದ್ರದಲ್ಲಿ ತೆರೆದಿದ್ದ ದಾರಿಗೆ ನುಗ್ಗುತ್ತಾನೆ. ಆಗ ಮೋಶೆ ಸಮುದ್ರಕ್ಕೆ ಕೈಚಾಚಿದಾಗ ಆ ಕಡೆ ಈ ಕಡೆ ಗೋಡೆಯಂತೆ ನಿಂತಿದ್ದ ನೀರು ಫರೋಹ ಮತ್ತು ಅವನ ಸೈನ್ಯದ ಮೇಲೆ ಜೋರಾಗಿ ಬೀಳುತ್ತದೆ. ಅವನು ಜಲಸಮಾಧಿ ಆಗುತ್ತಾನೆ ಮತ್ತು ಅವನ ಇಡೀ ಸೈನ್ಯ ಅವನ ಜೊತೆ ಮುಳುಗಿಹೋಗುತ್ತದೆ!—ವಿಮೋ. 15:8-10.

15. ಈ ಘಟನೆ ಯೆಹೋವನ ಬಗ್ಗೆ ನಮಗೆ ಇನ್ನೂ ಏನನ್ನು ಕಲಿಸುತ್ತದೆ?

15 ಈ ಘಟನೆಯು ಯೆಹೋವನ ಕುರಿತು ನಮಗೆ ಹೆಚ್ಚನ್ನು ಕಲಿಸುತ್ತದೆ. ಆತನು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ದೇವರು. ಇದನ್ನು ತಿಳಿದಿರುವುದು ತಾನೇ ನಾವು ಆತನ ಆಸರೆಯಲ್ಲಿ ಸುರಕ್ಷಿತರಾಗಿದ್ದೇವೆ ಎಂಬ ಭಾವನೆಯನ್ನು ಮೂಡಿಸುತ್ತದೆ. (1 ಕೊರಿಂ. 14:33) ಒಬ್ಬ ಕುರುಬನು ತನ್ನ ಕುರಿಗಳನ್ನು ಪ್ರೀತಿಸಿ ಪರಾಮರಿಸಿ ಶತ್ರುಗಳಿಂದ ಹೇಗೆ ಕಾಪಾಡುತ್ತಾನೋ ಹಾಗೆಯೇ ಯೆಹೋವ ದೇವರು ತನ್ನ ಜನರಿಗೆ ಪ್ರಾಯೋಗಿಕವಾಗಿ ಸಹಾಯ ಕೊಟ್ಟು ಕಾಪಾಡುತ್ತಾನೆ. ಈ ದುಷ್ಟ ವ್ಯವಸ್ಥೆಯ ಅಂತ್ಯ ಇನ್ನೂ ಹತ್ತಿರ ಆಗುತ್ತಿರುವಾಗ ನಾವು ಸುರಕ್ಷಿತರಾಗಿದ್ದೇವೆ ಎಂಬ ಭಾವನೆಯನ್ನು ಇದು ನಮ್ಮಲ್ಲಿ ಮೂಡಿಸುತ್ತದೆ.—ಜ್ಞಾನೋ. 1:33.

16. ಯೆಹೋವನು ಇಸ್ರಾಯೇಲ್ಯರನ್ನು ಕಾಪಾಡಿದ ವಿಧದ ಬಗ್ಗೆ ಪರಿಶೀಲಿಸುವುದರಿಂದ ನಮಗೆ ಯಾವ ಪ್ರಯೋಜನಗಳಿವೆ?

16 ಇಂದು ಕೂಡ ಯೆಹೋವನು ತನ್ನ ಜನರಿಗೆ ತನ್ನ ಜೊತೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾನೆ ಮತ್ತು ಅವರನ್ನು ಶತ್ರುಗಳಿಂದ ಕಾಪಾಡುತ್ತಾನೆ. ಮಹಾಸಂಕಟದ ಸಮಯದಲ್ಲೂ ಇದನ್ನೇ ಮಾಡುತ್ತಾನೆ. (ಪ್ರಕ. 7:9, 10) ಆದ್ದರಿಂದ ದೇವಜನರು ಚಿಕ್ಕವರಿರಲಿ ದೊಡ್ಡವರಿರಲಿ, ಅವರಿಗೆ ಒಳ್ಳೇ ಆರೋಗ್ಯವಿರಲಿ ಇಲ್ಲದಿರಲಿ ಮಹಾಸಂಕಟದ ಸಮಯದಲ್ಲಿ ಭಯಪಡುವುದಿಲ್ಲ. * ಬದಲಿಗೆ ಅವರು ಯೇಸುವಿನ ಈ ಮಾತನ್ನು ನೆನಪಿಸಿಕೊಳ್ಳುತ್ತಾರೆ: “ನಿಮ್ಮನ್ನು ನೆಟ್ಟಗಾಗಿಸಿಕೊಳ್ಳಿರಿ ಮತ್ತು ನಿಮ್ಮ ತಲೆಯನ್ನು ಮೇಲಕ್ಕೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ.” (ಲೂಕ 21:28) ಫರೋಹನಿಗಿಂತ ಅತಿ ಬಲಶಾಲಿಯಾದ ಗೋಗನು ಅಂದರೆ ಜನಾಂಗಗಳ ಗುಂಪು ದೇವಜನರ ಮೇಲೆ ಆಕ್ರಮಣ ಮಾಡುವಾಗ ಸಹ ಯೆಹೋವನು ತಮ್ಮನ್ನು ಕಾಪಾಡೇ ಕಾಪಾಡುತ್ತಾನೆ ಎಂಬ ದೃಢಭರವಸೆ ಅವರಿಗಿದೆ. (ಯೆಹೆ. 38:2, 14-16) ಯಾಕೆ? ಯಾಕೆಂದರೆ ಯೆಹೋವನು ಬದಲಾಗಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಆತನು ಅವರನ್ನು ಕಾಪಾಡೇ ಕಾಪಾಡುತ್ತಾನೆ.—ಯೆಶಾ. 26:3, 20.

17. (ಎ) ಯೆಹೋವನು ತನ್ನ ಜನರ ಕಾಳಜಿ ವಹಿಸುವುದರ ಬಗ್ಗೆ ಬೈಬಲಲ್ಲಿ ಓದಿ ಅಧ್ಯಯನ ಮಾಡಿದರೆ ಯಾವ ಪ್ರಯೋಜನ ಸಿಗುತ್ತದೆ? (ಬಿ) ಮುಂದಿನ ಲೇಖನದಲ್ಲಿ ಯಾವುದನ್ನು ಚರ್ಚಿಸಲಿದ್ದೇವೆ?

17 ಯೆಹೋವನು ತನ್ನ ಜನರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾನೆ, ಅವರನ್ನು ಹೇಗೆ ಮಾರ್ಗದರ್ಶಿಸುತ್ತಾನೆ ಮತ್ತು ಹೇಗೆ ಕಾಪಾಡುತ್ತಾನೆ ಎಂದು ಈ ಲೇಖನದಲ್ಲಿ ಕಲಿತೆವು. ಇದರಿಂದ ಆತನು ದಯಾಪರನು ಮತ್ತು ಬೇರೆಯವರ ಹಿತವನ್ನು ನೋಡುವವನು ಎಂದು ಗೊತ್ತಾಗುತ್ತದೆ. ನೀವು ಇಂಥ ವೃತ್ತಾಂತಗಳ ಬಗ್ಗೆ ಬೈಬಲಲ್ಲಿ ಓದಿ ಧ್ಯಾನಿಸುವಾಗ ಯೆಹೋವನ ಬಗ್ಗೆ ಹೊಸ ವಿಷಯ ಏನಾದರೂ ಸಿಗುತ್ತಾ ಎಂದು ನೋಡಿ. ನೀವು ಯಾವತ್ತೂ ಯೋಚನೆ ಮಾಡಿರದಂಥ ವಿಷಯಗಳು ನಿಮ್ಮ ಗಮನಕ್ಕೆ ಬರಬಹುದು. ಹೀಗೆ ಯೆಹೋವನ ಗುಣಗಳ ಬಗ್ಗೆ ಕಲಿಯುತ್ತಾ ಹೋದ ಹಾಗೆ ಆತನ ಮೇಲೆ ನಿಮಗಿರುವ ಪ್ರೀತಿ ಮತ್ತು ನಂಬಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಯೆಹೋವನಂತೆ ನಾವು ಕುಟುಂಬದಲ್ಲಿ, ಸಭೆಯಲ್ಲಿ ಮತ್ತು ಸೇವೆಗೆ ಹೋದಾಗ ಹೇಗೆ ಎಲ್ಲರ ಬಗ್ಗೆ ಚಿಂತಿಸುತ್ತೇವೆ ಎಂದು ಹೇಗೆ ತೋರಿಸಬಹುದು? ಇದನ್ನು ನಾವು ಮುಂದಿನ ಲೇಖನದಲ್ಲಿ ಕಲಿಯೋಣ.

^ ಪ್ಯಾರ. 3 ಆಗ ಸಮುವೇಲನಿಗೆ 12 ವರ್ಷ ಆಗಿತ್ತೆಂದು ಯೆಹೂದಿ ಇತಿಹಾಸಕಾರರಾದ ಜೋಸೀಫಸ್‌ ಹೇಳುತ್ತಾರೆ.

^ ಪ್ಯಾರ. 16 ಅರ್ಮಗೆದೋನನ್ನು ಪಾರಾಗುವವರಿಗೆ ಸಂಪೂರ್ಣ ಆರೋಗ್ಯ ಇರುವುದಿಲ್ಲ ಎಂಬ ತೀರ್ಮಾನಕ್ಕೆ ನಾವು ಬರಬಹುದು. ಯೇಸು ಭೂಮಿಯಲ್ಲಿದ್ದಾಗ ‘ಎಲ್ಲ ರೀತಿಯ ದೇಹದೌರ್ಬಲ್ಯಗಳನ್ನು’ ಸರಿಪಡಿಸಿದನು. ಇದು ಅರ್ಮಗೆದೋನನ್ನು ಪಾರಾಗುವವರಿಗೆ ಯೇಸು ಒಳ್ಳೇ ಆರೋಗ್ಯವನ್ನು ನೀಡುತ್ತಾನೆ ಎಂಬ ಭರವಸೆಯನ್ನು ಕೊಡುತ್ತದೆ. (ಮತ್ತಾ. 9:35) ಆದರೆ ಪುನರುತ್ಥಾನವಾಗಿ ಬರುವವರಿಗೆ ಒಳ್ಳೇ ಆರೋಗ್ಯ ಇರುತ್ತದೆ.