ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 36

ಅರ್ಮಗೆದ್ದೋನ್‌ ಬರುತ್ತೆ, ಎಲ್ಲಾ ಒಳ್ಳೇದಾಗುತ್ತೆ!

ಅರ್ಮಗೆದ್ದೋನ್‌ ಬರುತ್ತೆ, ಎಲ್ಲಾ ಒಳ್ಳೇದಾಗುತ್ತೆ!

“ಅವು ಅವರನ್ನು  . . . ಹರ್ಮಗೆದೋನ್‌ ಎಂದು ಕರೆಯಲ್ಪಡುವ ಸ್ಥಳಕ್ಕೆ ಒಟ್ಟುಗೂಡಿಸಿದವು.”—ಪ್ರಕ. 16:16.

ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು

ಕಿರುನೋಟ *

1-2. (ಎ) ಅರ್ಮಗೆದ್ದೋನ್‌ ಬರುತ್ತದೆ ಅನ್ನುವುದು ಮನುಷ್ಯರಿಗೆ ಒಂದು ಸಿಹಿಸುದ್ದಿಯಾಗಿದೆ ಯಾಕೆ? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

ಅಣು ಬಾಂಬ್‌ ಯುದ್ಧ ಅಥವಾ ನೈಸರ್ಗಿಕ ವಿಪತ್ತುಗಳಿಂದ ಈ ಲೋಕ ನಾಶ ಆಗುತ್ತೆ ಅಂತ ಕೆಲವು ಜನರು ನಂಬುತ್ತಾರೆ. ಆದರೆ ಬೈಬಲ್‌ ಹಾಗೆ ಹೇಳಲ್ಲ. ಬಲು ಬೇಗನೆ ಒಂದು ಯುದ್ಧ ಆಗಲಿಕ್ಕಿದೆ ಮತ್ತು ಅದರಿಂದ ಜನರಿಗೆ ಒಳ್ಳೇದಾಗುತ್ತೆ ಅಂತ ಬೈಬಲ್‌ ತಿಳಿಸುತ್ತೆ. ಆ ಯುದ್ಧದ ಹೆಸರು ಅರ್ಮಗೆದ್ದೋನ್‌ ಅಥವಾ ಹರ್ಮಗೆದೋನ್‌. (ಪ್ರಕ. 1:3) ಅದರ ಬಗ್ಗೆ ಬೈಬಲಿನಲ್ಲಿರುವ ವಿಷಯ ನಿಜವಾಗಿಯೂ ಒಂದು ಸಿಹಿ ಸುದ್ದಿ! ಯಾಕೆಂದರೆ ಈ ಅರ್ಮಗೆದ್ದೋನ್‌ ಯುದ್ಧ ಮನುಷ್ಯರನ್ನು ಸರ್ವನಾಶ ಮಾಡಲ್ಲ, ಅವರನ್ನು ಸಂರಕ್ಷಿಸುತ್ತದೆ. ಅದು ಹೇಗೆ ಸಾಧ್ಯ?

2 ಅರ್ಮಗೆದ್ದೋನ್‌ ಯುದ್ಧದ ಮೂಲಕ ಮನುಷ್ಯರ ಆಳ್ವಿಕೆ ನಿಂತು ಹೋಗುತ್ತದೆ. ದುಷ್ಟರು ನಾಶವಾಗಿ ಒಳ್ಳೆಯವರು ಮಾತ್ರ ಬದುಕುಳಿಯುತ್ತಾರೆ. ಈ ಯುದ್ಧದಲ್ಲಿ ಭೂಮಿಯನ್ನು ಹಾಳುಮಾಡುವವರು ನಾಶವಾಗುವುದರಿಂದ ಭೂಮಿಗೂ ಸಂರಕ್ಷಣೆ ಸಿಗುತ್ತದೆ. (ಪ್ರಕ. 11:18) ಹೀಗೆ ಅರ್ಮಗೆದ್ದೋನ್‌ ಯುದ್ಧ ಮಾನವಕುಲವನ್ನು ಸಂರಕ್ಷಿಸುತ್ತದೆ. ಈ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲಿಕ್ಕಾಗಿ ನಾವು ಈ ಮುಂದಿನ ನಾಲ್ಕು ಪ್ರಶ್ನೆಗಳ ಉತ್ತರ ತಿಳಿಯೋಣ: ಅರ್ಮಗೆದ್ದೋನ್‌ ಅಂದರೇನು? ಅರ್ಮಗೆದ್ದೋನ್‌ ಯುದ್ಧಕ್ಕೂ ಮುಂಚೆ ಯಾವ ಘಟನೆಗಳು ನಡೆಯುತ್ತವೆ? ಅರ್ಮಗೆದ್ದೋನ್‌ನಲ್ಲಿ ನಾಶವಾಗದಿರಲು ನಾವು ಏನು ಮಾಡಬೇಕು? ಅರ್ಮಗೆದ್ದೋನ್‌ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಾವು ಹೇಗೆ ನಂಬಿಗಸ್ತರಾಗಿ ಇರಬಹುದು?

ಅರ್ಮಗೆದ್ದೋನ್‌ ಅಂದರೇನು?

3. (ಎ) ಹರ್ಮಗೆದೋನ್‌ ಎಂಬ ಪದದ ಅರ್ಥವೇನು? (ಬಿ) ಪ್ರಕಟನೆ 16:14, 16​ಕ್ಕನುಸಾರ ಹರ್ಮಗೆದೋನ್‌ ಅಥವಾ ಅರ್ಮಗೆದ್ದೋನ್‌ ಅನ್ನುವುದು ಒಂದು ನಿಜವಾದ ಸ್ಥಳ ಅಲ್ಲ ಎಂದು ಹೇಗೆ ಹೇಳಬಹುದು?

3 ಪ್ರಕಟನೆ 16:14, 16 ಓದಿ. “ಹರ್ಮಗೆದೋನ್‌” ಎಂಬ ಪದ ಬೈಬಲಿನಲ್ಲಿ ಒಮ್ಮೆ ಮಾತ್ರ ಕಂಡುಬರುತ್ತದೆ. ಈ ಪದ “ಮೆಗಿದ್ದೋ ಬೆಟ್ಟ” ಎಂಬ ಅರ್ಥವಿರುವ ಹೀಬ್ರು ಪದದಿಂದ ಬಂದದ್ದಾಗಿದೆ. (ಪ್ರಕ. 16:16) ಮೆಗಿದ್ದೋ ಅನ್ನುವುದು ಪುರಾತನ ಇಸ್ರಾಯೇಲಿನ ಒಂದು ಪಟ್ಟಣವಾಗಿತ್ತು. (ಯೆಹೋ. 17:11) ಆದರೆ ಹರ್ಮಗೆದೋನ್‌ ಅಥವಾ ಅರ್ಮಗೆದ್ದೋನ್‌ ಅನ್ನುವುದು ಒಂದು ನಿಜವಾದ ಸ್ಥಳವಲ್ಲ. ಬದಲಿಗೆ ಇದು, ‘ಇಡೀ ನಿವಾಸಿತ ಭೂಮಿಯ ರಾಜರು’ ಒಟ್ಟಾಗಿ ಯೆಹೋವನಿಗೆ ವಿರುದ್ಧವಾಗಿ ಬರುವ ಸನ್ನಿವೇಶವನ್ನು ಸೂಚಿಸುತ್ತದೆ. (ಪ್ರಕ. 16:14) ಆದರೆ ಈ ಲೇಖನದಲ್ಲಿ, ಭೂಮಿಯ ರಾಜರು ಒಟ್ಟಾಗಿ ಬಂದ ನಂತರ ನಡೆಯುವ ಯುದ್ಧವನ್ನೂ ಅರ್ಮಗೆದ್ದೋನ್‌ ಎಂದು ಕರೆಯಲಾಗಿದೆ. ಈ ಅರ್ಮಗೆದೋನ್‌ ಅನ್ನುವುದು ನಿಜವಾದ ಸ್ಥಳವಲ್ಲ ಎಂದು ಹೇಗೆ ಹೇಳಬಹುದು? ಮೊದಲನೇದಾಗಿ, ಮೆಗಿದ್ದೋ ಎಂಬ ಹೆಸರಿನ ಬೆಟ್ಟ ಇಲ್ಲವೇ ಇಲ್ಲ. ಎರಡನೇದಾಗಿ, ಮೆಗಿದ್ದೋ ಪ್ರದೇಶ “ಇಡೀ ನಿವಾಸಿತ ಭೂಮಿಯ ರಾಜರು,” ಅವರ ಸೈನ್ಯಗಳು ಹಾಗೂ ಯುದ್ಧ ಸಾಮಗ್ರಿಗಳೆಲ್ಲಾ ಹಿಡಿಯುವಷ್ಟು ದೊಡ್ಡ ಜಾಗ ಅಲ್ಲ. ಮೂರನೆಯದಾಗಿ, ಅರ್ಮಗೆದ್ದೋನ್‌ ಯುದ್ಧ ಆರಂಭವಾಗುವುದು ಲೋಕದ ‘ರಾಜರು’ ದೇವ ಜನರ ಮೇಲೆ ಆಕ್ರಮಣ ಮಾಡಿದಾಗಲೇ. ಈ ದೇವಜನರು ಒಂದೇ ಸ್ಥಳದಲ್ಲಲ್ಲ, ಭೂಮ್ಯಾದ್ಯಂತ ಬೇರೆ ಬೇರೆ ಸ್ಥಳಗಳಲ್ಲಿರುತ್ತಾರೆ. ಈ ಯುದ್ಧದ ಬಗ್ಗೆ ಹೆಚ್ಚಿನ ವಿಷಯವನ್ನು ಈ ಲೇಖನದಲ್ಲಿ ಮುಂದೆ ನೋಡಲಿದ್ದೇವೆ.

4. ಯೆಹೋವನು ತನ್ನ ಅಂತಿಮ ಮಹಾ ಯುದ್ಧಕ್ಕೆ ಮೆಗಿದ್ದೋ ಸ್ಥಳಕ್ಕೆ ಸಂಬಂಧಿಸಿದ ಹೆಸರನ್ನು ಇಟ್ಟಿದ್ದೇಕೆ?

4 ಯೆಹೋವನು ತನ್ನ ಅಂತಿಮ ಮಹಾ ಯುದ್ಧಕ್ಕೆ ಮೆಗಿದ್ದೋ ಸ್ಥಳಕ್ಕೆ ಸಂಬಂಧಿಸಿದ ಹೆಸರನ್ನು ಇಟ್ಟಿದ್ದೇಕೆ? ಬೈಬಲ್‌ ಕಾಲದಲ್ಲಿ ಅನೇಕ ಯುದ್ಧಗಳು ಮೆಗಿದ್ದೋ ಮತ್ತು ಅದರ ಹತ್ತಿರದ ಇಜ್ರೇಲಿನ ತಗ್ಗಿನಲ್ಲಿ ನಡೆದಿದ್ದವು. ಕೆಲವು ಯುದ್ಧಗಳಲ್ಲಿ ತನ್ನ ಜನರು ಜಯ ಸಾಧಿಸಲು ಯೆಹೋವನು ಸಹಾಯ ಮಾಡಿದ್ದನು. ಉದಾಹರಣೆಗೆ, “ಮೆಗಿದ್ದೋ ಪ್ರವಾಹಗಳ ಬಳಿಯಲ್ಲಿ” ಇಸ್ರಾಯೇಲಿನ ನ್ಯಾಯಸ್ಥಾಪಕನಾದ ಬಾರಾಕನು ಕಾನಾನ್ಯ ಸೇನಾಧಿಪತಿಯಾದ ಸೀಸೆರನ ಸೈನ್ಯವನ್ನು ಸೋಲಿಸಲು ಯೆಹೋವನು ಸಹಾಯ ಮಾಡಿದನು. ಹೀಗೆ ಅದ್ಭುತಕರವಾಗಿ ವಿಜಯ ಕೊಟ್ಟಿದ್ದಕ್ಕೆ ಬಾರಾಕ ಮತ್ತು ಪ್ರವಾದಿನಿ ದೆಬೋರ ಯೆಹೋವನಿಗೆ ಕೃತಜ್ಞತೆ ಹೇಳಿದರು. ‘ನಕ್ಷತ್ರಗಳು ಸೀಸೆರನೊಡನೆ ಯುದ್ಧಮಾಡಿದವು. ಕೀಷೋನ್‌ ಹೊಳೆಯು ಶತ್ರುಗಳನ್ನು ಬಡಕೊಂಡು ಹೋಯಿತು’ ಎಂದು ಅವರು ಹಾಡಿದರು.—ನ್ಯಾಯ. 5:19-21.

5. ಅರ್ಮಗೆದ್ದೋನ್‌ ಯುದ್ಧಕ್ಕೂ ಬಾರಾಕನು ಮಾಡಿದ ಯುದ್ಧಕ್ಕೂ ಇರುವ ಮುಖ್ಯ ವ್ಯತ್ಯಾಸ ಏನು?

5 ಬಾರಾಕ ಮತ್ತು ದೆಬೋರಳು ಹೀಗೆ ಹೇಳುತ್ತಾ ತಮ್ಮ ಹಾಡನ್ನು ಮುಗಿಸಿದರು: “ಯೆಹೋವನ ಎಲ್ಲಾ ಶತ್ರುಗಳೂ ಇವರಂತೆಯೇ ನಾಶವಾಗಲಿ; ಆತನ ಭಕ್ತರು ಪ್ರತಾಪದಿಂದ ಉದಯಿಸುವ ಸೂರ್ಯನಂತಿರಲಿ.” (ನ್ಯಾಯ. 5:31) ಆಗಿನ ಕಾಲದಲ್ಲಿ ಆದಂತೆಯೇ ಅರ್ಮಗೆದ್ದೋನಿನಲ್ಲೂ ದೇವರ ಶತ್ರುಗಳು ನಾಶವಾಗುತ್ತಾರೆ, ದೇವರನ್ನು ಪ್ರೀತಿಸುವವರು ಉಳುಕೊಳ್ಳುತ್ತಾರೆ. ಆದರೆ ಆಗಿನ ಯುದ್ಧಕ್ಕೂ ಅರ್ಮಗೆದ್ದೋನ್‌ ಯುದ್ಧಕ್ಕೂ ಒಂದು ಮುಖ್ಯ ವ್ಯತ್ಯಾಸ ಇದೆ. ಅರ್ಮಗೆದ್ದೋನಿನಲ್ಲಿ ದೇವಜನರು ಯುದ್ಧ ಮಾಡುವುದಿಲ್ಲ, ಅವರ ಹತ್ತಿರ ಯುದ್ಧ ಸಾಮಗ್ರಿಗಳೂ ಇರುವುದಿಲ್ಲ. “ಶಾಂತರಾಗಿ” ಯೆಹೋವನ ಮತ್ತು ಆತನ ಸ್ವರ್ಗೀಯ ಸೈನ್ಯದ ಮೇಲೆ ‘ಭರವಸೆ ಇಡುವುದೇ ಅವರ ಬಲ.’—ಯೆಶಾ. 30:15; ಪ್ರಕ. 19:11-15.

6. ಯೆಹೋವನು ಅರ್ಮಗೆದ್ದೋನಿನಲ್ಲಿ ತನ್ನ ಶತ್ರುಗಳನ್ನು ಹೇಗೆ ನಾಶಮಾಡಬಹುದು?

6 ಅರ್ಮಗೆದ್ದೋನ್‌ ಯುದ್ಧದಲ್ಲಿ ಯೆಹೋವನು ತನ್ನ ಶತ್ರುಗಳನ್ನು ಹೇಗೆ ಸೋಲಿಸುತ್ತಾನೆ? ಆತನು ಇದನ್ನು ಮಾಡಲು ಬೇರೆ ಬೇರೆ ವಿಧಾನಗಳನ್ನು ಬಳಸಬಹುದು. ಉದಾಹರಣೆಗೆ, ಭೂಕಂಪ, ಕಲ್ಮಳೆ ಮತ್ತು ಸಿಡಿಲನ್ನು ಉಪಯೋಗಿಸಬಹುದು. (ಯೋಬ 38:22, 23; ಯೆಹೆ. 38:19-22) ತನ್ನ ಶತ್ರುಗಳೇ ಒಬ್ಬರ ಮೇಲೊಬ್ಬರು ಯುದ್ಧಮಾಡುವಂತೆ ಆತನು ಮಾಡಬಹುದು. (2 ಪೂರ್ವ. 20:17, 22, 23) ದುಷ್ಟರನ್ನು ನಾಶಮಾಡಲು ಆತನು ತನ್ನ ದೇವದೂತರನ್ನು ಉಪಯೋಗಿಸಬಹುದು. (ಯೆಶಾ. 37:36) ಹೀಗೆ ಯೆಹೋವನು ಯಾವುದೇ ವಿಧಾನ ಬಳಸುವುದಾದರೂ ಜಯ ಗಳಿಸುವುದಂತೂ ಆತನೇ. ಈ ಯುದ್ಧದಲ್ಲಿ ಆತನ ಎಲ್ಲಾ ಶತ್ರುಗಳು ನಾಶವಾಗುವರು. ನೀತಿವಂತರೆಲ್ಲರು ಬದುಕುಳಿಯುವರು.—ಜ್ಞಾನೋ. 3:25, 26.

ಅರ್ಮಗೆದ್ದೋನ್‌ ಯುದ್ಧಕ್ಕೂ ಮುಂಚೆ ಯಾವ ಘಟನೆಗಳು ನಡೆಯುತ್ತವೆ?

7-8. (ಎ) ಒಂದನೇ ಥೆಸಲೊನೀಕ 5:1-6​ರ ಪ್ರಕಾರ ಲೋಕದ ಅಧಿಕಾರಿಗಳು ಯಾವ ಪ್ರಕಟಣೆಯನ್ನು ಮಾಡುತ್ತಾರೆ? (ಬಿ) ಈ ಸುಳ್ಳು ಪ್ರಕಟಣೆಯು ಯಾಕೆ ಅಪಾಯಕಾರಿಯಾಗಿದೆ?

7 “ಯೆಹೋವನ ದಿನ” ಬರುವುದಕ್ಕೂ ಮುಂಚೆ “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆ ಕೇಳಿಬರುತ್ತದೆ. (1 ಥೆಸಲೊನೀಕ 5:1-6 ಓದಿ.) 1 ಥೆಸಲೊನೀಕ 5:2​ರಲ್ಲಿ ತಿಳಿಸಲಾಗಿರುವ “ಯೆಹೋವನ ದಿನವು” “ಮಹಾ ಸಂಕಟವನ್ನು” ಸೂಚಿಸುತ್ತದೆ. (ಪ್ರಕ. 7:14) ಆ ಸಂಕಟ ಇನ್ನೇನು ಆರಂಭವಾಗುತ್ತದೆ ಅನ್ನುವಾಗ ನಾವು ಅದನ್ನು ಹೇಗೆ ಗುರುತಿಸಬಹುದು? ಯಾವತ್ತಿಗೂ ಕೇಳಿಸಿಕೊಂಡಿರದಂಥ ಒಂದು ಘೋಷಣೆ ಅಥವಾ ಪ್ರಕಟಣೆಯು ಆ ಸಂಕಟ ಆರಂಭವಾಗುವ ಮುಂಚೆ ಕೇಳಿಬರುತ್ತದೆ ಎಂದು ಬೈಬಲ್‌ ತಿಳಿಸುತ್ತದೆ. ಆ ಪ್ರಕಟಣೆ ಮಹಾ ಸಂಕಟ ಆರಂಭವಾಗುತ್ತದೆ ಎನ್ನುವುದಕ್ಕೆ ಸೂಚನೆಯಾಗಿದೆ.

8 ಅದು “ಶಾಂತಿ ಮತ್ತು ಭದ್ರತೆ” ಇದೆ ಎಂದು ಲೋಕದ ಅಧಿಕಾರಿಗಳು ಮಾಡುವ ಪ್ರಕಟಣೆಯಾಗಿದೆ. ಆದರೆ ಅವರು ಹಾಗೆ ಯಾಕೆ ಹೇಳುತ್ತಾರೆ? ಸರಿಯಾಗಿ ಗೊತ್ತಿಲ್ಲ. ಅವರೊಂದಿಗೆ ಧಾರ್ಮಿಕ ಮುಖಂಡರೂ ಜೊತೆಗೂಡುತ್ತಾರಾ? ಇರಬಹುದು. ಲೋಕದ ಅಧಿಕಾರಿಗಳು ಈ ಪ್ರಕಟಣೆಯನ್ನು ಯಾವಾಗ ಮಾಡುತ್ತಾರೆಂದು ನಮಗೆ ಗೊತ್ತಿಲ್ಲ. ಆದರೆ ಇದು ಸೈತಾನನ ದೂತರ ಪ್ರಭಾವದಿಂದ ಹೇಳಲಾಗುವ ಇನ್ನೊಂದು ಸುಳ್ಳು ಎಂದಷ್ಟೇ ಗೊತ್ತು. ಈ ಸುಳ್ಳು ಅಪಾಯಕಾರಿ. ಯಾಕೆಂದರೆ, ಈ ಪ್ರಕಟಣೆ ಕೇಳಿಸಿಕೊಂಡ ಜನರು ತಾವು ಸುರಕ್ಷಿತವಾಗಿದ್ದೇವೆ ಎಂದು ಯೋಚಿಸುತ್ತಾರೆ. ಆದರೆ ಆಗ ಮಾನವ ಇತಿಹಾಸದಲ್ಲೇ ನಡೆದಿರದ ಮಹಾ ಸಂಕಟ ಇನ್ನೇನು ಆರಂಭವಾಗಲಿರುತ್ತದೆ. “ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರವೇ ಫಕ್ಕನೆ ಬರುವುದು.” ಆದರೆ ಯೆಹೋವನ ನಿಷ್ಠಾವಂತ ಸೇವಕರಿಗೆ ಏನಾಗುತ್ತದೆ? ಮಹಾ ಸಂಕಟ ಯಾವ ದಿನ ಆರಂಭವಾಗುತ್ತದೆ ಎಂದು ಗೊತ್ತಿಲ್ಲದ ಕಾರಣ ಇದೆಲ್ಲಾ ಆಗುವಾಗ ಅವರಿಗೆ ಆಶ್ಚರ್ಯ ಆಗಬಹುದು. ಆದರೆ ಅವರು ಇದಕ್ಕೆ ಸಿದ್ಧರಾಗಿರುತ್ತಾರೆ.

9. ಯೆಹೋವನು ಸೈತಾನನ ಲೋಕವನ್ನು ಒಮ್ಮೆಗೇ ಸಂಪೂರ್ಣವಾಗಿ ನಾಶಮಾಡುತ್ತಾನಾ? ವಿವರಿಸಿ.

9 ಯೆಹೋವನು ನೋಹನ ಸಮಯದಲ್ಲಿ ಲೋಕವನ್ನು ನಾಶ ಮಾಡಿದಂತೆ ಸೈತಾನನ ಲೋಕವನ್ನು ಒಮ್ಮೆಗೇ ಸಂಪೂರ್ಣವಾಗಿ ನಾಶ ಮಾಡಿಬಿಡುವುದಿಲ್ಲ. ಬದಲಿಗೆ, ಅದರ ಒಂದು ಭಾಗವನ್ನು ಮೊದಲು ನಾಶಮಾಡಿ, ಇನ್ನೊಂದನ್ನು ಆಮೇಲೆ ನಾಶಮಾಡುತ್ತಾನೆ. ಮೊದಲು ಆತನು ಮಹಾ ಬಾಬೆಲನ್ನು ಅಂದರೆ ಇಡೀ ಲೋಕದಲ್ಲಿರುವ ಎಲ್ಲಾ ಸುಳ್ಳು ಧರ್ಮಗಳನ್ನು ನಾಶ ಮಾಡುತ್ತಾನೆ. ನಂತರ ಅರ್ಮಗೆದ್ದೋನಿನಲ್ಲಿ ಸೈತಾನನ ಲೋಕದ ಉಳಿದ ಭಾಗವನ್ನು ಅಂದರೆ ರಾಜಕೀಯ, ಮಿಲಿಟರಿ ಮತ್ತು ವ್ಯಾಪಾರ ವ್ಯವಸ್ಥೆಯನ್ನು ನಾಶಮಾಡುತ್ತಾನೆ. ಈ ಎರಡು ಮುಖ್ಯ ಘಟನೆಗಳ ಬಗ್ಗೆ ಈಗ ವಿವರವಾಗಿ ನೋಡೋಣ.

10. ಪ್ರಕಟನೆ 17:1, 6 ಮತ್ತು 18:24​ಕ್ಕನುಸಾರ ಯೆಹೋವನು ಮಹಾ ಬಾಬೆಲನ್ನು ಯಾಕೆ ನಾಶ ಮಾಡುತ್ತಾನೆ?

10 ‘ಮಹಾ ವೇಶ್ಯೆಯ ಮೇಲೆ ನ್ಯಾಯತೀರ್ಪು.’ (ಪ್ರಕಟನೆ 17:1, 6; 18:24 ಓದಿ.) ಸುಳ್ಳು ಧರ್ಮಗಳನ್ನು ಸೂಚಿಸುವ ಮಹಾ ಬಾಬೆಲ್‌ ಎಂಬ ವೇಶ್ಯೆಯು ದೇವರ ಹೆಸರಿಗೆ ಮಸಿಬಳಿದಿದ್ದಾಳೆ. ದೇವರ ಬಗ್ಗೆ ಅವಳು ಸುಳ್ಳುಗಳನ್ನು ಕಲಿಸಿದ್ದಾಳೆ. ಯೆಹೋವನನ್ನು ಬಿಟ್ಟು ಮಾನವ ಸರಕಾರಗಳನ್ನು ಬೆಂಬಲಿಸುವ ಮೂಲಕ ವೇಶ್ಯೆಯಂತೆ ನಡೆದುಕೊಂಡಿದ್ದಾಳೆ. ಅವಳು ತನ್ನ ಅಧಿಕಾರ ಮತ್ತು ಪ್ರಭಾವ ಬಳಸಿ ತನ್ನ ಸದಸ್ಯರ ಮೇಲೆ ದಬ್ಬಾಳಿಕೆ ಮಾಡಿ ಅವರ ಹಣ ನುಂಗಿ ನೀರು ಕುಡಿದಿದ್ದಾಳೆ. ದೇವರ ಸೇವಕರನ್ನೂ ಸೇರಿಸಿ ಅನೇಕರನ್ನು ಕೊಂದಿದ್ದಾಳೆ. (ಪ್ರಕ. 19:2) ಈ ಮಹಾ ಬಾಬೆಲನ್ನು ಯೆಹೋವನು ಹೇಗೆ ನಾಶ ಮಾಡುತ್ತಾನೆ?

11. (ಎ) “ಕಡುಗೆಂಪು ಬಣ್ಣದ ಕಾಡುಮೃಗ” ಯಾವುದನ್ನು ಸೂಚಿಸುತ್ತದೆ? (ಬಿ) ಯೆಹೋವನು ಅದನ್ನು ಉಪಯೋಗಿಸಿ ಮಹಾ ಬಾಬೆಲಿನ ಬಗ್ಗೆ ತನಗಿರುವ ಉದ್ದೇಶವನ್ನು ಹೇಗೆ ನೆರವೇರಿಸುವನು?

11 ಯೆಹೋವನು ‘ಹತ್ತು ಕೊಂಬುಗಳ ಕಡುಗೆಂಪು ಬಣ್ಣದ ಕಾಡುಮೃಗವನ್ನು’ ಉಪಯೋಗಿಸಿ ‘ಮಹಾ ವೇಶ್ಯೆಯನ್ನು’ ನಾಶ ಮಾಡುವನು. ಈ ಕಾಡುಮೃಗವು ವಿಶ್ವ ಸಂಸ್ಥೆಯನ್ನು ಸೂಚಿಸುತ್ತದೆ. ಹತ್ತು ಕೊಂಬುಗಳು ಆ ಸಂಸ್ಥೆಯನ್ನು ಬೆಂಬಲಿಸುತ್ತಿರುವ ರಾಜಕೀಯ ಶಕ್ತಿಗಳನ್ನು ಸೂಚಿಸುತ್ತದೆ. ದೇವರು ನಿರ್ಧರಿಸಿರುವ ಸಮಯದಲ್ಲಿ ಆ ರಾಜಕೀಯ ಶಕ್ತಿಗಳು ಮಹಾ ಬಾಬೆಲಿನ ಮೇಲೆ ಆಕ್ರಮಣ ಮಾಡುತ್ತವೆ. ಅವು ಮಹಾ ವೇಶ್ಯೆಯ ಸಂಪತ್ತನ್ನು ದೋಚಿ, ಅವಳ ದುಷ್ಟತನವನ್ನು ಬಯಲುಪಡಿಸುವ ಮೂಲಕ ‘ಅವಳನ್ನು ಗತಿಗೆಡಿಸಿ ನಗ್ನಳನ್ನಾಗಿ ಮಾಡುತ್ತವೆ.’ (ಪ್ರಕ. 17:3, 16) ಈ ನಾಶನ ಎಷ್ಟು ಬೇಗ ಆಗುತ್ತದೆಂದರೆ “ಒಂದೇ ದಿನದಲ್ಲಿ” ಆದಂತೆ ಅನಿಸುತ್ತದೆ. ಆಗ ಅವಳನ್ನು ಬೆಂಬಲಿಸುವವರಿಗೆ ಸಿಡಿಲು ಬಡಿದಂತೆ ಆಗುತ್ತದೆ. ಯಾಕೆಂದರೆ, ಅವಳು, “ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ; ನಾನು ವಿಧವೆಯಲ್ಲ ಮತ್ತು ನಾನು ಶೋಕವನ್ನು ಎಂದಿಗೂ ಕಾಣುವುದೇ ಇಲ್ಲ” ಎಂದು ತುಂಬ ಸಮಯದಿಂದ ತನ್ನ ಬಗ್ಗೆ ಕೊಚ್ಚಿಕೊಂಡು ಬಂದಿರುತ್ತಾಳೆ.—ಪ್ರಕ. 18:7, 8.

12. ಯೆಹೋವನು ಜನಾಂಗಗಳಿಗೆ ಏನು ಮಾಡಲು ಬಿಡುವುದಿಲ್ಲ ಮತ್ತು ಯಾಕೆ?

12 ತನ್ನ ಜನರನ್ನು ನಾಶಮಾಡಲು ಯೆಹೋವನು ಜನಾಂಗಗಳಿಗೆ ಬಿಡುವುದಿಲ್ಲ. ಆತನ ಜನರು ಹೆಮ್ಮೆಯಿಂದ ಆತನ ಹೆಸರನ್ನು ಧರಿಸಿದ್ದಾರೆ ಮತ್ತು ಆತನ ಮಾತನ್ನು ಕೇಳಿ ಮಹಾ ಬಾಬೆಲನ್ನು ಬಿಟ್ಟು ಹೊರಗೆ ಬಂದಿದ್ದಾರೆ. (ಅ. ಕಾ. 15:16, 17; ಪ್ರಕ. 18:4) ಆ ಮಹಾ ಬಾಬೆಲಿಂದ ಬೇರೆಯವರೂ ಹೊರಬರಲಿಕ್ಕಾಗಿ ಸಹಾಯ ಮಾಡಲು ಅವರು ತುಂಬ ಪ್ರಯಾಸಪಟ್ಟಿದ್ದಾರೆ. ಆದ್ದರಿಂದ ‘ಅವಳಿಗೆ ಬರುವ ಉಪದ್ರವಗಳು’ ಯೆಹೋವನ ಸೇವಕರಿಗೆ ಬರುವುದಿಲ್ಲ. ಆದರೆ ಮುಂದೆ ಬರುವ ವಿಷಯಗಳನ್ನು ತಾಳಿಕೊಳ್ಳಲು ಅವರಿಗೆ ಬಲವಾದ ನಂಬಿಕೆಯ ಅಗತ್ಯವಿದೆ.

ದೇವಜನರು ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಮೇಲೆ ಆಕ್ರಮಣ ಆಗುವಾಗ ದೇವರಲ್ಲೇ ಭರವಸೆ ಇಡುತ್ತಾರೆ (ಪ್ಯಾರ 13 ನೋಡಿ) *

13. (ಎ) ಗೋಗ ಯಾರು? (ಬಿ) ಯೆಹೆಜ್ಕೇಲ 38:2, 8, 9​ರ ಪ್ರಕಾರ ಗೋಗನು ಯಾವಾಗ ಅರ್ಮಗೆದ್ದೋನ್‌ ಎಂಬ ಸ್ಥಳಕ್ಕೆ ಬರುತ್ತಾನೆ?

13 ಗೋಗನ ಆಕ್ರಮಣ. (ಯೆಹೆಜ್ಕೇಲ 38:2, 8, 9 ಓದಿ.) ಸುಳ್ಳು ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಂಘಟನೆಗಳು ನಾಶವಾದ ನಂತರ ಇಡೀ ಭೂಮಿಯಲ್ಲಿ ಯೆಹೋವನ ಆರಾಧನೆ ಮಾತ್ರ ಉಳಿದಿರುತ್ತದೆ. ಸೈತಾನನು ಕೋಪದಿಂದ ಕೆಂಡಾಮಂಡಲನಾಗುತ್ತಾನೆ. ತನ್ನ ಕೋಪ ತೀರಿಸಿಕೊಳ್ಳಲು ಅವನು ಯೆಹೋವನ ಸೇವಕರ ಬಗ್ಗೆ ‘ಅಶುದ್ಧವಾದ ಪ್ರೇರಿತ ಅಭಿವ್ಯಕ್ತಿಗಳನ್ನು’ ಅಂದರೆ ತನ್ನ ದೂತರಿಂದ ಪ್ರೇರಿತವಾದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾನೆ. ಆಗ ಎಲ್ಲಾ ಜನಾಂಗಗಳು ಒಂದು ಗುಂಪಾಗಿ ಬಂದು ಯೆಹೋವನ ಸೇವಕರ ಮೇಲೆ ಆಕ್ರಮಣ ಮಾಡುತ್ತವೆ. (ಪ್ರಕ. 16:13, 14) ಈ ಜನಾಂಗಗಳ ಗುಂಪನ್ನು ‘ಮಾಗೋಗ್‌ ದೇಶದ ಗೋಗ’ ಎಂದು ಕರೆಯಲಾಗಿದೆ. ಜನಾಂಗಗಳು ಆಕ್ರಮಣ ಮಾಡಲು ಬಂದಾಗ ಅವರು ಅರ್ಮಗೆದ್ದೋನ್‌ ಎಂಬ ಸ್ಥಳಕ್ಕೆ ಬಂದಂತಿರುತ್ತದೆ.—ಪ್ರಕ. 16:16.

14. ಗೋಗನಿಗೆ ಏನು ಅರ್ಥವಾಗುತ್ತದೆ?

14 ಗೋಗನು (ಜನಾಂಗಗಳ ಗುಂಪು) ‘ಮಾಂಸದ ತೋಳಿನ’ ಮೇಲೆ ಅಂದರೆ ತನ್ನ ಮಿಲಿಟರಿ ಶಕ್ತಿಯ ಮೇಲೆ ಭರವಸೆ ಇಡುತ್ತಾನೆ. (2 ಪೂರ್ವ. 32:8) ನಾವು ನಮ್ಮ ದೇವರಾದ ಯೆಹೋವನಲ್ಲಿ ಭರವಸೆ ಇಡುತ್ತೇವೆ. ಇದು ಗೋಗನಿಗೆ ಮೂರ್ಖತನದಂತೆ ಕಾಣಿಸುತ್ತದೆ. ಯಾಕೆಂದರೆ, ಮಹಾ ಬಾಬೆಲ್‌ ತುಂಬ ಶಕ್ತಿಶಾಲಿಯಾಗಿದ್ದರೂ ಅವಳ ದೇವರುಗಳು ಅವಳನ್ನು ‘ಕಾಡುಮೃಗ’ ಮತ್ತದರ ‘ಹತ್ತು ಕೊಂಬುಗಳಿಂದ’ ರಕ್ಷಿಸಿರುವುದಿಲ್ಲ. (ಪ್ರಕ. 17:16) ಹಾಗಾಗಿ ನಮ್ಮನ್ನು ಸುಲಭವಾಗಿ ನಾಶಮಾಡಿಬಿಡಬಹುದು ಎಂದು ಗೋಗನು ನೆನಸುತ್ತಾನೆ. ‘ಕಾರ್ಮುಗಿಲು ದೇಶವನ್ನು ಮುಚ್ಚಿಬಿಡುವಂತೆ’ ಗೋಗನು ಯೆಹೋವನ ಜನರ ಮೇಲೆ ಆಕ್ರಮಣ ಮಾಡುತ್ತಾನೆ. (ಯೆಹೆ. 38:16) ಆದರೆ ಸ್ವಲ್ಪದರಲ್ಲೇ ತಾನು ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಗೋಗನಿಗೆ ಅರ್ಥವಾಗುತ್ತದೆ. ಕೆಂಪು ಸಮುದ್ರದಲ್ಲಿ ನಾಶವಾದ ಫರೋಹನಂತೆ ಗೋಗನಿಗೆ ಸಹ ತಾನು ಯುದ್ಧ ಮಾಡುತ್ತಿರುವುದು ಯೆಹೋವನ ವಿರುದ್ಧ ಎಂದು ಅರ್ಥವಾಗುತ್ತದೆ.—ವಿಮೋ. 14:1-4; ಯೆಹೆ. 38:3, 4, 18, 21-23.

15. ಅರ್ಮಗೆದ್ದೋನ್‌ ಯುದ್ಧದಲ್ಲಿ ಯೇಸು ಏನು ಮಾಡುವನು?

15 ಕ್ರಿಸ್ತನು ಮತ್ತು ಆತನ ಸ್ವರ್ಗೀಯ ಸೈನ್ಯ ದೇವಜನರ ಪರವಾಗಿ ಯುದ್ಧ ಮಾಡಿ ಜನಾಂಗಗಳನ್ನೂ (ಗೋಗ) ಅವುಗಳ ಸೈನ್ಯಗಳನ್ನೂ ಸಂಪೂರ್ಣವಾಗಿ ನಾಶಮಾಡುವರು. (ಪ್ರಕ. 19:11, 14, 15) ಆದರೆ ಯೆಹೋವನ ಮುಖ್ಯ ಶತ್ರುವಾದ ಸೈತಾನನಿಗೆ ಏನಾಗುತ್ತದೆ? ಅವನ ಸುಳ್ಳಿನಿಂದಾಗಿಯೇ ಜನಾಂಗಗಳು ದೇವಜನರ ವಿರುದ್ಧ ಯುದ್ಧಕ್ಕಿಳಿದರಲ್ಲವೇ? ಯೇಸು ಸೈತಾನನನ್ನೂ ಅವನ ದೂತರನ್ನೂ ಅಗಾಧ ಸ್ಥಳಕ್ಕೆ ದೊಬ್ಬುವನು. ಸಾವಿರ ವರ್ಷಗಳವರೆಗೆ ಅವರನ್ನು ಅಲ್ಲೇ ಬಂಧಿಸಿಡಲಾಗುವುದು.—ಪ್ರಕ. 20:1-3.

ಅರ್ಮಗೆದ್ದೋನ್‌ನಲ್ಲಿ ನಾಶವಾಗದಿರಲು ನಾವು ಏನು ಮಾಡಬೇಕು?

16. (ಎ) ನಾವು ‘ದೇವರನ್ನು ಅರಿತಿದ್ದೇವೆ’ ಎಂದು ಹೇಗೆ ತೋರಿಸಿಕೊಡಬಹುದು? (ಬಿ) ದೇವರನ್ನು ಅರಿತವರಿಗೆ ಅರ್ಮಗೆದ್ದೋನಿನಲ್ಲಿ ಏನಾಗುತ್ತದೆ?

16 ನಾವು ಸತ್ಯಕ್ಕೆ ಬಂದು ಅನೇಕ ವರ್ಷಗಳೇ ಆಗಿರಲಿ ಇಲ್ಲದಿರಲಿ, ಅರ್ಮಗೆದ್ದೋನ್‌ನಲ್ಲಿ ನಾಶವಾಗದೆ ರಕ್ಷಣೆ ಪಡೆಯಬೇಕೆಂದರೆ ನಾವು ‘ದೇವರನ್ನು ಅರಿತಿದ್ದೇವೆ’ ಎಂದು ತೋರಿಸಿಕೊಡಬೇಕು ಮತ್ತು ‘ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಗೆ ವಿಧೇಯರಾಗಬೇಕು.’ (2 ಥೆಸ. 1:7-9) ನಾವು ದೇವರ ಇಷ್ಟಾನಿಷ್ಟಗಳನ್ನು ಮತ್ತು ನೀತಿ-ನಿಯಮಗಳನ್ನು ತಿಳಿದುಕೊಂಡರೆ ‘ದೇವರನ್ನು ಅರಿತಂತಾಗುತ್ತದೆ.’ ನಾವು ಆತನನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿ ನಮ್ಮ ಪೂರ್ಣ ಭಕ್ತಿಯನ್ನು ಆತನೊಬ್ಬನಿಗೇ ಸಲ್ಲಿಸುವ ಮೂಲಕ ಸಹ ನಾವಾತನನ್ನು ಅರಿತಿದ್ದೇವೆ ಎಂದು ತೋರಿಸಿಕೊಡಬಹುದು. (1 ಯೋಹಾ. 2:3-5; 5:3) ನಾವು ದೇವರನ್ನು ಅರಿತಿದ್ದೇವೆಂದು ತೋರಿಸಿಕೊಡುವಾಗ ‘ದೇವರೇ ನಮ್ಮನ್ನು ತಿಳಿದುಕೊಳ್ಳುತ್ತಾನೆ’ ಅಥವಾ ಆತನು ನಮ್ಮನ್ನು ಮೆಚ್ಚುತ್ತಾನೆ. (1 ಕೊರಿಂ. 8:3) ಆಗ ನಾವು ಅರ್ಮಗೆದ್ದೋನಿನಲ್ಲಿ ನಾಶವಾಗದೆ ರಕ್ಷಣೆ ಪಡೆಯುತ್ತೇವೆ.

17. ‘ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಗೆ ವಿಧೇಯರಾಗುವುದು’ ಅಂದರೇನು?

17 ‘ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಯಲ್ಲಿ’ ಯೇಸು ಕಲಿಸಿದ ಎಲ್ಲಾ ಸತ್ಯಗಳು ಸೇರಿವೆ. ಅವುಗಳು ಬೈಬಲಿನಲ್ಲಿವೆ. ಅವುಗಳ ಪ್ರಕಾರ ಜೀವಿಸುವಾಗ ನಾವು ಸುವಾರ್ತೆಗೆ ವಿಧೇಯರಾಗುತ್ತೇವೆ. ಅದಕ್ಕೆ ವಿಧೇಯರಾಗುವುದರಲ್ಲಿ ದೇವರ ರಾಜ್ಯಕ್ಕೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುವುದು, ದೇವರ ನೀತಿ-ನಿಯಮಗಳ ಪ್ರಕಾರ ಜೀವಿಸುವುದು ಮತ್ತು ದೇವರ ರಾಜ್ಯದ ಬಗ್ಗೆ ಸಾರುವುದು ಸಹ ಸೇರಿದೆ. (ಮತ್ತಾ. 6:33; 24:14) ಸುವಾರ್ತೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಬಹು ಮುಖ್ಯ ಜವಾಬ್ದಾರಿಗಳನ್ನು ಪೂರೈಸುತ್ತಿರುವ ಕ್ರಿಸ್ತನ ಅಭಿಷಿಕ್ತ ಸಹೋದರರಿಗೆ ನಾವು ಬೆಂಬಲ ಕೊಡುವ ಮೂಲಕವೂ ಸುವಾರ್ತೆಗೆ ವಿಧೇಯರಾಗುತ್ತೇವೆ.—ಮತ್ತಾ. 25:31-40.

18. ಕ್ರಿಸ್ತನ ಅಭಿಷಿಕ್ತ ಸಹೋದರರು ತಮಗೆ ಸಹಾಯ ಮಾಡಿದ ಬೇರೆ ಕುರಿಗಳಿಗೆ ಹೇಗೆ ಪ್ರತಿಫಲ ನೀಡುತ್ತಾರೆ?

18 ‘ಬೇರೆ ಕುರಿಗಳು’ ತಮಗೆ ಸಹಾಯ ಮಾಡಿದ್ದಕ್ಕಾಗಿ ದೇವರ ಅಭಿಷಿಕ್ತ ಸೇವಕರು ಬಲುಬೇಗನೆ ಅವರಿಗೆ ಪ್ರತಿಫಲ ನೀಡುತ್ತಾರೆ. (ಯೋಹಾ. 10:16) ಹೇಗೆ? ಅರ್ಮಗೆದ್ದೋನ್‌ ಯುದ್ಧ ಆರಂಭವಾಗುವ ಮುಂಚೆ ಎಲ್ಲಾ ಅಭಿಷಿಕ್ತರು ಅಂದರೆ 1,44,000 ಮಂದಿ ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋಗಿರುತ್ತಾರೆ. ಅಮರ ಜೀವ ಪಡೆದ ಅವರು ಸ್ವರ್ಗೀಯ ಸೈನ್ಯದ ಭಾಗವಾಗಿ ಗೋಗನನ್ನು ನಾಶಮಾಡುತ್ತಾರೆ ಮತ್ತು ಕುರಿಗಳಂತಿರುವ ‘ಮಹಾ ಸಮೂಹವನ್ನು’ ರಕ್ಷಿಸುತ್ತಾರೆ. (ಪ್ರಕ. 2:26, 27; 7:9, 10) ಆದ್ದರಿಂದ ಈಗ ಭೂಮಿಯಲ್ಲಿರುವ ಯೆಹೋವನ ಅಭಿಷಿಕ್ತ ಸೇವಕರನ್ನು ಬೆಂಬಲಿಸುವುದು ಮಹಾ ಸಮೂಹದವರಿಗೆ ಸಿಕ್ಕಿರುವ ಸುಯೋಗ ಅಂತಾನೇ ಹೇಳಬಹುದು.

ಅರ್ಮಗೆದ್ದೋನ್‌ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಾವು ಹೇಗೆ ನಂಬಿಗಸ್ತರಾಗಿ ಇರಬಹುದು?

19-20. ಕಷ್ಟಗಳನ್ನು ಅನುಭವಿಸುತ್ತಿದ್ದರೂ ಅಂತ್ಯ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಾವು ಹೇಗೆ ನಂಬಿಗಸ್ತರಾಗಿ ಇರಬಹುದು?

19 ಈ ಕಡೇ ದಿನಗಳಲ್ಲಿ ಯೆಹೋವನ ಅನೇಕ ಸೇವಕರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ನಮ್ಮ ಪರಿಸ್ಥಿತಿ ಸಹ ಹಾಗೇ ಇದ್ದರೂ ನಾವು ಸಂತೋಷದಿಂದ ತಾಳಿಕೊಳ್ಳಬಹುದು. (ಯಾಕೋ. 1:2-4) ಹಾಗೆ ತಾಳಿಕೊಳ್ಳಲು ಎಡೆಬಿಡದೆ ಮನಸ್ಸುಬಿಚ್ಚಿ ಪ್ರಾರ್ಥಿಸಬೇಕು. (ಲೂಕ 21:36) ಪ್ರಾರ್ಥಿಸುವುದರ ಜೊತೆಗೆ ನಾವು ಪ್ರತಿದಿನ ದೇವರ ವಾಕ್ಯವನ್ನು ಅಧ್ಯಯನ ಮಾಡಬೇಕು ಮತ್ತು ಧ್ಯಾನಿಸಬೇಕು. ಮುಂದೆ ನೆರವೇರಲಿರುವ ಪ್ರವಾದನೆಗಳನ್ನೂ ಅಧ್ಯಯನ ಮಾಡಬೇಕು. (ಕೀರ್ತ. 77:12) ಇವುಗಳನ್ನು ಮಾಡುತ್ತಾ ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸುವುದಾದರೆ ನಮ್ಮ ನಂಬಿಕೆ ಮತ್ತು ನಿರೀಕ್ಷೆ ಬಲವಾಗಿರುತ್ತದೆ.

20 ಮಹಾ ಬಾಬೆಲ್‌ ನಾಶವಾಗುವಾಗ ಮತ್ತು ಅರ್ಮಗೆದ್ದೋನ್‌ ಯುದ್ಧ ಮುಗಿದಾಗ ನಿಮಗೆ ಎಷ್ಟು ಖುಷಿಯಾಗುತ್ತದೆಂದು ಸ್ವಲ್ಪ ಊಹಿಸಿ. ಅದಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರೂ ದೇವರ ಹೆಸರಿಗೆ ಗೌರವ ತೋರಿಸುತ್ತಾ ಆತನ ಪರಮಾಧಿಕಾರಕ್ಕೆ ತಲೆಬಾಗುವಾಗ ಇನ್ನೆಷ್ಟು ಖುಷಿಯಾಗುತ್ತಲ್ವಾ! (ಯೆಹೆ. 38:23) ದೇವರನ್ನು ಅರಿತು, ಆತನ ಮಗನಿಗೆ ವಿಧೇಯರಾಗಿ, ಕಡೇ ವರೆಗೆ ತಾಳಿಕೊಳ್ಳುವವರಿಗೆ ಅರ್ಮಗೆದ್ದೋನ್‌ ಅನ್ನುವುದು ಒಂದು ಸಿಹಿಸುದ್ದಿಯೇ ಆಗಿದೆ.—ಮತ್ತಾ. 24:13.

ಗೀತೆ 128 ಲೋಕದ ದೃಶ್ಯವು ಮಾರ್ಪಡುತ್ತಾ ಇದೆ

^ ಪ್ಯಾರ. 5 ಯೆಹೋವನ ಜನರು ಅನೇಕ ವರ್ಷಗಳಿಂದ ಅರ್ಮಗೆದ್ದೋನ್‌ ಬರುವುದಕ್ಕಾಗಿ ಕಾಯುತ್ತಿದ್ದಾರೆ. ಈ ಲೇಖನದಲ್ಲಿ ನಾವು ಅರ್ಮಗೆದ್ದೋನ್‌ ಅಂದರೇನು, ಅದಕ್ಕೂ ಮುಂಚೆ ಏನೆಲ್ಲಾ ನಡೆಯುತ್ತದೆ ಮತ್ತು ಅರ್ಮಗೆದ್ದೋನ್‌ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಾವು ಹೇಗೆ ದೇವರಿಗೆ ನಂಬಿಗಸ್ತರಾಗಿ ಇರಬಹುದು ಎಂದು ಕಲಿಯಲಿದ್ದೇವೆ.

^ ಪ್ಯಾರ. 71 ಚಿತ್ರ ವಿವರಣೆ: “ಶಾಂತಿ ಮತ್ತು ಭದ್ರತೆ” ಇದೆ ಎಂಬ ಘೋಷಣೆ ಕೇಳಿಬಂದಾಗ ನಾವು ನಮ್ಮಿಂದಾಗುವವರೆಗೆ ಸುವಾರ್ತೆ ಸಾರುತ್ತಲೇ ಇರುತ್ತೇವೆ. ಸುಳ್ಳು ಧರ್ಮಗಳು ನಾಶ ಆಗುವಾಗ ನಾವು ಬೈಬಲ್‌ ಓದುವುದನ್ನು ಮುಂದುವರಿಸುತ್ತೇವೆ. ಮಾಗೋಗಿನ ಗೋಗನು ನಮ್ಮ ಮೇಲೆ ಆಕ್ರಮಣ ಮಾಡಿದಾಗ ದೇವರು ಸಂರಕ್ಷಿಸುತ್ತಾನೆ ಎಂಬ ಭರವಸೆಯಿಂದ ಇರುತ್ತೇವೆ.

^ ಪ್ಯಾರ. 85 ಚಿತ್ರ ವಿವರಣೆ: ಒಂದು ಕ್ರೈಸ್ತ ಕುಟುಂಬದ ಮನೆಯೊಳಗೆ ನುಗ್ಗಲು ಪೊಲೀಸರು ಸಿದ್ಧರಾಗಿದ್ದಾರೆ. ಅಲ್ಲಿ ನಡೆಯುತ್ತಿರುವ ವಿಷಯ ಯೇಸು ಮತ್ತು ಆತನ ದೂತರಿಗೆ ಗೊತ್ತಿದೆ ಎಂದು ಆ ಕುಟುಂಬದವರು ಭರವಸೆಯಿಂದ ಇದ್ದಾರೆ.