ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 35

ದೀನರು ಯೆಹೋವನಿಗೆ ಅಮೂಲ್ಯರು

ದೀನರು ಯೆಹೋವನಿಗೆ ಅಮೂಲ್ಯರು

“ಯೆಹೋವನು . . . ದೀನರನ್ನು ಲಕ್ಷಿಸುತ್ತಾನೆ.”—ಕೀರ್ತ. 138:6.

ಗೀತೆ 48 ಯೆಹೋವನೊಂದಿಗೆ ಪ್ರತಿದಿನ ನಡೆಯುವುದು

ಕಿರುನೋಟ *

1. ಯೆಹೋವನಿಗೆ ದೀನರ ಬಗ್ಗೆ ಹೇಗನಿಸುತ್ತದೆ? ವಿವರಿಸಿ.

ಯೆಹೋವನಿಗೆ ದೀನರೆಂದರೆ ತುಂಬ ಇಷ್ಟ. ನಾಟಕ ಮಾಡದೆ ನಿಜವಾಗಲೂ ದೀನರಾಗಿರುವವರನ್ನು ಮಾತ್ರ ಆತನು ಪ್ರೀತಿಸುತ್ತಾನೆ ಮತ್ತು ಅವರಿಗೆ ಆಪ್ತನಾಗುತ್ತಾನೆ. ಆದರೆ “ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ.” (ಕೀರ್ತ. 138:6) ನಾವೆಲ್ಲರೂ ಯೆಹೋವನನ್ನು ಮೆಚ್ಚಿಸಲು ಮತ್ತು ಆತನ ಪ್ರೀತಿ ಪಡೆಯಲು ಬಯಸುತ್ತೇವಲ್ವಾ? ಹಾಗಾದರೆ, ನಾವು ದೀನತೆ ಬೆಳೆಸಿಕೊಳ್ಳಲೇಬೇಕು.

2. ಈ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?

2 ಈ ಲೇಖನದಲ್ಲಿ ನಾವು ಈ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ: (1) ದೀನತೆ ಅಂದರೇನು? (2) ನಾವು ಯಾಕೆ ಅದನ್ನು ಬೆಳೆಸಿಕೊಳ್ಳಬೇಕು? (3) ದೀನತೆ ತೋರಿಸಲು ಯಾವಾಗ ಕಷ್ಟವಾಗಬಹುದು? ನಾವು ದೀನತೆ ಬೆಳೆಸಿಕೊಂಡರೆ ಯೆಹೋವನ ಮನಸ್ಸನ್ನು ಹೇಗೆ ಸಂತೋಷಪಡಿಸಬಹುದು ಮತ್ತು ಸ್ವತಃ ನಮಗೆ ಯಾವ ಪ್ರಯೋಜನವಾಗುತ್ತದೆ ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.—ಜ್ಞಾನೋ. 27:11; ಯೆಶಾ. 48:17.

ದೀನತೆ ಅಂದರೇನು?

3. ದೀನತೆ ಅಂದರೇನು?

3 ದೀನತೆ ಅಂದರೆ ತಗ್ಗಿಸಿಕೊಳ್ಳುವುದು, ಅಹಂಕಾರ ಅಥವಾ ತಾನೇ ಶ್ರೇಷ್ಠ ಎಂಬ ಭಾವನೆ ಇಲ್ಲದಿರುವುದೇ ಆಗಿದೆ. ಬೈಬಲ್‌ ಪ್ರಕಾರ ಒಬ್ಬ ದೀನ ವ್ಯಕ್ತಿ ಯೆಹೋವನು ತನಗಿಂತ ಎಷ್ಟೋ ಉನ್ನತನು ಅಂತ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಇತರರ ಸ್ಥಾನವನ್ನು ಸಹ ಮಾನ್ಯ ಮಾಡುತ್ತಾನೆ. ಬೇರೆಯವರು ಒಂದಲ್ಲ ಒಂದು ವಿಷಯದಲ್ಲಿ ತನಗಿಂತ ಶ್ರೇಷ್ಠರಾಗಿರುತ್ತಾರೆ ಎಂದು ದೀನ ವ್ಯಕ್ತಿ ಅರ್ಥಮಾಡಿಕೊಳ್ಳುತ್ತಾನೆ.—ಫಿಲಿ. 2:3, 4.

4-5. ಒಬ್ಬ ವ್ಯಕ್ತಿ ದೀನನಾ ಅಲ್ವಾ ಅಂತ ನೋಡಿದ ತಕ್ಷಣ ನಿರ್ಣಯಿಸಲು ಆಗಲ್ಲ ಯಾಕೆ?

4 ಕೆಲವರನ್ನು ನೋಡುವಾಗ ದೀನರು ಅಂತ ಅನಿಸುತ್ತೆ. ಕಾರಣ, ಅವರ ನಾಚಿಕೆ ಸ್ವಭಾವ ಆಗಿರಬಹುದು ಅಥವಾ ಕಡಿಮೆ ಮಾತಾಡುವುದರಿಂದ ಹಾಗನಿಸಬಹುದು. ಅವರು ಬೆಳೆದು ಬಂದ ರೀತಿಯಿಂದಾಗಿ ಬೇರೆಯವರಿಗೆ ಗೌರವ ಕೊಡುವುದನ್ನು ಕಲಿತಿರಬಹುದು. ಆದರೆ ಅವರಿಗೆ ಮನಸ್ಸಲ್ಲಿ ಅಹಂಕಾರ ಇರಬಹುದು. ಅಂಥವರು ಒಂದಲ್ಲ ಒಂದು ಸಮಯದಲ್ಲಿ ತಮ್ಮ ನಿಜ ಬಣ್ಣ ತೋರಿಸುತ್ತಾರೆ.—ಲೂಕ 6:45.

5 ಇನ್ನು ಕೆಲವರಿಗೆ ತುಂಬ ಧೈರ್ಯ ಇರಬಹುದು, ಅವರಿಗನಿಸಿದ್ದನ್ನು ಹೇಳಿಬಿಡುವ ಸ್ವಭಾವ ಇರಬಹುದು. ಹಾಗಂದ ಮಾತ್ರಕ್ಕೆ ಅವರು ಅಹಂಕಾರಿಗಳು ಅಂತಲ್ಲ. (ಯೋಹಾ. 1:46, 47) ಆದರೂ ಈ ರೀತಿ ಸಂಕೋಚ ಇಲ್ಲದೆ ಮಾತಾಡುವವರು ಸಹ ತಮ್ಮ ಸಾಮರ್ಥ್ಯದ ಮೇಲೆನೇ ಅವಲಂಬಿಸದಂತೆ ಜಾಗ್ರತೆವಹಿಸಬೇಕು. ನಾವು ಸಂಕೋಚ ಇಲ್ಲದವರಾಗಿರಲಿ, ಇರುವವರಾಗಿರಲಿ ನಾವೆಲ್ಲರೂ ನಿಜವಾಗಲೂ ದೀನರಾಗಿರಲು ಪ್ರಯತ್ನಿಸಬೇಕು.

ಪೌಲನು ದೀನನಾಗಿದ್ದನು, ಎಲ್ಲರಿಗಿಂತ ತಾನೇ ಶ್ರೇಷ್ಠ ಅಂತ ನೆನಸಲಿಲ್ಲ (ಪ್ಯಾರ 6 ನೋಡಿ) *

6. ಒಂದನೇ ಕೊರಿಂಥ 15:10​ರಲ್ಲಿ ಪೌಲನ ಬಗ್ಗೆ ತಿಳಿಸಲಾದ ವಿಷಯದಿಂದ ನಾವೇನು ಕಲಿಯುತ್ತೇವೆ?

6 ಅಪೊಸ್ತಲ ಪೌಲನ ಉದಾಹರಣೆ ಗಮನಿಸಿ. ಒಂದಾದ ಮೇಲೊಂದು ಸಭೆಗಳನ್ನು ಸ್ಥಾಪಿಸಲು ಯೆಹೋವನು ಪೌಲನನ್ನು ಉಪಯೋಗಿಸಿದನು. ಯೇಸುವಿನ ಉಳಿದ ಅಪೊಸ್ತಲರಿಗಿಂತ ಬಹುಶಃ ಪೌಲನೇ ಹೆಚ್ಚಾಗಿ ಸುವಾರ್ತೆ ಸಾರಿದನು. ಆದರೂ ಎಲ್ಲರಿಗಿಂತ ತಾನೇ ಶ್ರೇಷ್ಠ ಅಂತ ಪೌಲ ನೆನಸಲಿಲ್ಲ. ಪೌಲನು ಹೇಳಿದ್ದು: “ನಾನು ಅಪೊಸ್ತಲರಲ್ಲಿ ಅತಿ ಕನಿಷ್ಠನು; ನಾನು ದೇವರ ಸಭೆಯವರನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳಲು ಯೋಗ್ಯನಲ್ಲ”. (1 ಕೊರಿಂ. 15:9) ತನಗೆ ಯೆಹೋವನ ಜೊತೆ ಆಪ್ತ ಸಂಬಂಧ ಇರಲು ಕಾರಣ ಆತನು ತೋರಿಸಿದ ಅಪಾತ್ರ ದಯೆಯಾಗಿದೆಯೇ ಹೊರತು ತನ್ನ ಕೆಲಸ, ಸಾಮರ್ಥ್ಯಗಳಲ್ಲ ಎಂದು ಪೌಲ ಹೇಳಿದನು. (1 ಕೊರಿಂಥ 15:10 ಓದಿ.) ಕೊರಿಂಥ ಸಭೆಯಲ್ಲಿನ ಕೆಲವರು ತನ್ನ ಬಗ್ಗೆ ತಪ್ಪಾಗಿ ಮಾತಾಡುತ್ತಿದ್ದಾರೆ ಅಂತ ಗೊತ್ತಿದ್ದರೂ ಪೌಲನು ಅವರಿಗೆ ಬರೆದ ಪತ್ರದಲ್ಲಿ ತನ್ನ ಬಗ್ಗೆ ಮತ್ತು ತಾನು ಮಾಡಿದ್ದರ ಬಗ್ಗೆ ಕೊಚ್ಚಿಕೊಳ್ಳಲಿಲ್ಲ. ದೀನತೆ ತೋರಿಸುವುದರಲ್ಲಿ ಪೌಲನು ಎಂಥ ಒಳ್ಳೇ ಮಾದರಿ ಇಟ್ಟಿದ್ದಾನೆ!—2 ಕೊರಿಂ. 10:10.

ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆ ಮಾಡಿದ ದೀನ ಸಹೋದರ ಕಾರ್ಲ್‌ ಎಫ್‌. ಕ್ಲೈನ್‌ (ಪ್ಯಾರ 7 ನೋಡಿ)

7. ಯೆಹೋವನ ಜನರಿಗೆ ಚಿರಪರಿಚಿತರಾಗಿದ್ದ ಒಬ್ಬ ಸಹೋದರ ಹೇಗೆ ದೀನತೆ ತೋರಿಸಿದರು?

7 ಆಡಳಿತ ಮಂಡಲಿಯ ಸದಸ್ಯರಾಗಿದ್ದ ಸಹೋದರ ಕಾರ್ಲ್‌ ಎಫ್‌. ಕ್ಲೈನ್‌ರ ಜೀವನ ಕಥೆಯಿಂದ ಇಂದು ಅನೇಕ ಯೆಹೋವನ ಸೇವಕರು ಪ್ರೋತ್ಸಾಹ ಪಡಕೊಂಡಿದ್ದಾರೆ. ಆ ಸಹೋದರ ತಮ್ಮ ಜೀವನ ಕಥೆಯಲ್ಲಿ ತಮ್ಮ ಬಲಹೀನತೆ ಮತ್ತು ಜೀವನದಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ಮುಚ್ಚುಮರೆ ಇಲ್ಲದೆ ದೀನತೆಯಿಂದ ಹೇಳಿಕೊಂಡಿದ್ದಾರೆ. ಉದಾಹರಣೆಗೆ, 1922​ರಲ್ಲಿ ಅವರು ಮೊದಲ ಸಲ ಮನೆ-ಮನೆ ಸೇವೆ ಮಾಡಿದಾಗ ಅದು ತುಂಬ ಕಷ್ಟ ಅಂತ ನೆನಸಿ ಎರಡು ವರ್ಷ ಆ ಸೇವೆ ಮಾಡಲೇ ಇಲ್ಲ. ನಂತರ ಬೆತೆಲಿನಲ್ಲಿದ್ದಾಗ ಒಬ್ಬ ಸಹೋದರ ಸಲಹೆ ಕೊಟ್ಟಿದ್ದಕ್ಕೆ ಸ್ವಲ್ಪ ಸಮಯದವರೆಗೆ ಅವರ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ಅವರು ತೀವ್ರ ಖಿನ್ನತೆಗೂ ಒಳಗಾಗಿದ್ದರು. ನಂತರ ಅದರಿಂದ ಹೊರಬಂದರು. ಇಷ್ಟೆಲ್ಲಾ ಆದರೂ ಅವರು ತುಂಬ ಪ್ರಾಮುಖ್ಯವಾದ ಅನೇಕ ನೇಮಕಗಳನ್ನು ನಿರ್ವಹಿಸಿದರು. ಯೆಹೋವನ ಜನರಿಗೆ ಚಿರಪರಿಚಿತರಾಗಿದ್ದ ಅವರು ತಮ್ಮ ಬಲಹೀನತೆಗಳ ಬಗ್ಗೆ ಮುಚ್ಚುಮರೆ ಇಲ್ಲದೆ ಮಾತಾಡಿದ್ದಾರೆಂದರೆ ಅವರಿಗೆ ಎಷ್ಟು ದೀನತೆ ಇದ್ದಿರಬೇಕು! ಇವತ್ತಿಗೂ ಅನೇಕ ಸಹೋದರ ಸಹೋದರಿಯರು ಸಹೋದರ ಕ್ಲೈನ್‌ರನ್ನೂ, ಮುಚ್ಚುಮರೆ ಇಲ್ಲದೆ ಹೇಳಿದ ಅವರ ಜೀವನ ಕಥೆಯನ್ನು ನೆನಪಿಸಿಕೊಳ್ಳುತ್ತಾರೆ. *

ನಾವು ಯಾಕೆ ದೀನತೆ ಬೆಳೆಸಿಕೊಳ್ಳಬೇಕು?

8. ದೀನತೆ ತೋರಿಸಿದರೆ ಯೆಹೋವನಿಗೆ ಸಂತೋಷವಾಗುತ್ತದೆ ಎಂದು ಒಂದನೇ ಪೇತ್ರ 5:6​ರಿಂದ ಹೇಗೆ ಗೊತ್ತಾಗುತ್ತದೆ?

8 ನಾವು ದೀನತೆ ಬೆಳೆಸಿಕೊಳ್ಳಲು ಮುಖ್ಯ ಕಾರಣ ಅದರಿಂದ ಯೆಹೋವನಿಗೆ ಸಂತೋಷ ಆಗುತ್ತದೆ. ಅಪೊಸ್ತಲ ಪೇತ್ರನೂ ಇದನ್ನೇ ಒತ್ತಿಹೇಳಿದನು. (1 ಪೇತ್ರ 5:6 ಓದಿ.) ಪೇತ್ರನ ಆ ಮಾತುಗಳನ್ನು ವಿವರಿಸುತ್ತಾ “ನನ್ನನ್ನು ಹಿಂಬಾಲಿಸಿರಿ” ಪುಸ್ತಕದಲ್ಲಿ ಹೀಗೆ ತಿಳಿಸಲಾಗಿದೆ: “ಅಹಂ ಎನ್ನುವುದು ವಿಷವಿದ್ದಂತೆ. ವಿಪರೀತ ಹಾನಿ ಉಂಟುಮಾಡಬಲ್ಲದು. ಈ ಗುಣವು ಪ್ರತಿಭಾಶಾಲಿಯಾದ ವ್ಯಕ್ತಿಯೊಬ್ಬನನ್ನು ದೇವರ ಕಾರ್ಯದಲ್ಲಿ ನಿಷ್ಪ್ರಯೋಜಕನನ್ನಾಗಿ ಮಾಡಬಲ್ಲದು. ಆದರೆ ದೀನಭಾವವು ಕನಿಷ್ಠ ವ್ಯಕ್ತಿಯೊಬ್ಬನನ್ನೂ ದೇವರ ಕಾರ್ಯದಲ್ಲಿ ಪ್ರಯೋಜಕನನ್ನಾಗಿ ಮಾಡುವುದು. . . . ನೀವು ತೋರಿಸುವ ದೀನತೆಗೂ . . . ಆಶೀರ್ವದಿಸಲು ದೇವರು ಬಹಳ ಹರ್ಷಿಸುವನು.” * ಯೆಹೋವನನ್ನು ಸಂತೋಷಪಡಿಸುವುದಕ್ಕಿಂತ ಉತ್ತಮ ವಿಷಯ ಇನ್ನೇನಿದೆ?—ಜ್ಞಾನೋ. 23:15.

9. ನಮಗೆ ದೀನತೆ ಇದ್ದರೆ ಜನ ನಮ್ಮ ಹತ್ತಿರ ಬರುತ್ತಾರೆ ಅಂತ ಯಾಕೆ ಹೇಳಬಹುದು?

9 ದೀನತೆ ಬೆಳೆಸಿಕೊಳ್ಳುವುದರಿಂದ ಯೆಹೋವನಿಗೆ ಸಂತೋಷ ಆಗುತ್ತೆ ಮಾತ್ರವಲ್ಲ ನಮಗೂ ಅನೇಕ ಆಶೀರ್ವಾದಗಳು ಸಿಗುತ್ತವೆ. ನಮಗೆ ದೀನತೆ ಇದ್ದರೆ ಜನ ನಮ್ಮ ಹತ್ತಿರ ಬರುತ್ತಾರೆ. ಯಾಕೆ? ಇದನ್ನು ಅರ್ಥಮಾಡಿಕೊಳ್ಳಲು ನೀವು ಎಂಥ ಜನರ ಜೊತೆ ಇರಲು ಇಷ್ಟಪಡುತ್ತೀರ ಅಂತ ಯೋಚಿಸಿ. (ಮತ್ತಾ. 7:12) ಸಾಮಾನ್ಯವಾಗಿ ‘ನಾನು ಹಿಡಿದ ಮೊಲಕ್ಕೆ ಮೂರೇ ಕಾಲು’ ಎಂದು ವಾದಿಸುವ, ‘ಯಾರೂ ನನಗೆ ಹೇಳಬೇಕಾಗಿಲ್ಲ’ ಅಂತ ಯೋಚಿಸುವ ಜನರೊಂದಿಗೆ ಬೆರೆಯಲು ನಮಗೆ ಇಷ್ಟ ಆಗಲ್ಲ. ಆದರೆ “ಸಹೋದರ ಮಮತೆಯುಳ್ಳವರೂ ಕೋಮಲವಾದ ಕನಿಕರವುಳ್ಳವರೂ ದೀನಮನಸ್ಸುಳ್ಳವರೂ” ಆಗಿರುವ ಸಹೋದರರ ಜೊತೆಗಿರಲು ತುಂಬ ಇಷ್ಟಪಡುತ್ತೇವೆ. (1 ಪೇತ್ರ 3:8) ನಾವೇ ದೀನರ ಜೊತೆ ಇರಲು ಇಷ್ಟಪಡುತ್ತೇವೆ ಅಂದಮೇಲೆ ಬೇರೆಯವರೂ ಅದನ್ನೇ ಇಷ್ಟಪಡುತ್ತಾರಲ್ವಾ?

10. ದೀನತೆ ಇದ್ದರೆ ಜೀವನ ನಡೆಸಿಕೊಂಡು ಹೋಗುವುದು ಸುಲಭ ಹೇಗೆ?

10 ದೀನತೆ ಇದ್ದರೆ ಅನ್ಯಾಯ ಆಗುವಾಗಲೂ ಜೀವನ ನಡೆಸಿಕೊಂಡು ಹೋಗುವುದು ಸುಲಭ. ರಾಜ ಸೊಲೊಮೋನ ಹೇಳಿದ್ದು: “ಆಳುಗಳು ಕುದುರೆಸವಾರಿ ಮಾಡುವದನ್ನೂ ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವದನ್ನೂ ನೋಡಿದ್ದೇನೆ.” (ಪ್ರಸಂ. 10:7) ಒಳ್ಳೆಯ ಸಾಮರ್ಥ್ಯ ಇದ್ದರೂ ಕೆಲವೊಮ್ಮೆ ನಮ್ಮನ್ನು ಯಾರೂ ಕ್ಯಾರೇ ಅನ್ನಲ್ಲ. ಆದರೆ ಯಾವುದೇ ಸಾಮರ್ಥ್ಯ ಇಲ್ಲದವರಿಗೆ ಜನರಿಂದ ತುಂಬ ಗೌರವ ಸಿಗಬಹುದು. ಆಗ ನಾವು ಸೊಲೊಮೋನ ಹೇಳಿದಂತೆ ನಮಗೆ ಸಿಗದಿರುವ ವಿಷಯದ ಬಗ್ಗೆ ಕೊರಗುವ ಬದಲು ಜೀವನ ಹೇಗಿದೆಯೋ ಹಾಗೇ ಸ್ವೀಕರಿಸಬೇಕು. (ಪ್ರಸಂ. 6:9) ನಾವು ದೀನರಾಗಿದ್ದರೆ ಇದನ್ನು ಮಾಡಲು ಸುಲಭ ಆಗುತ್ತದೆ.

ದೀನತೆ ತೋರಿಸಲು ಯಾವಾಗ ಕಷ್ಟವಾಗಬಹುದು?

ಇಂಥ ಸನ್ನಿವೇಶದಲ್ಲಿ ದೀನತೆ ತೋರಿಸಲು ಯಾಕೆ ಕಷ್ಟವಾಗಬಹುದು? (ಪ್ಯಾರ 11-12 ನೋಡಿ) *

11. ಯಾರಾದರೂ ನಮ್ಮನ್ನು ತಿದ್ದಿದಾಗ ನಾವು ಏನು ಮಾಡಬೇಕು?

11 ದೀನತೆ ತೋರಿಸಲು ನಮಗೆ ಪ್ರತಿದಿನ ಅವಕಾಶಗಳು ಸಿಗುತ್ತವೆ. ಈ ಕೆಳಗಿನ ಸನ್ನಿವೇಶಗಳನ್ನು ಗಮನಿಸಿ. ಯಾರಾದರೂ ನಮ್ಮನ್ನು ತಿದ್ದಿದಾಗ. ಒಬ್ಬರು ನಮ್ಮನ್ನು ತಿದ್ದುವ ಪರಿಸ್ಥಿತಿ ಬಂದಿದೆ ಅಂದರೆ ನಾವು ಸ್ವಲ್ಪ ದೊಡ್ಡ ತಪ್ಪೇ ಮಾಡಿರಬಹುದು ಅನ್ನುವುದನ್ನು ನೆನಪಲ್ಲಿಡಬೇಕು. ಅವರು ತಿದ್ದುವಾಗ ಮೊದಲು ನಮಗೆ ಇಷ್ಟವಾಗದೇ ಇರಬಹುದು ಅಥವಾ ಅವರು ಹೇಳಿದಂತೆ ಮಾಡಲು ಮನಸ್ಸಾಗದಿರಬಹುದು. ಅವರ ತಪ್ಪುಗಳನ್ನು ಹುಡುಕಬಹುದು ಅಥವಾ ಅವರು ಹೇಳಿದ ರೀತಿ ಸರಿಯಿಲ್ಲ ಅಂತ ಯೋಚಿಸಬಹುದು. ಆದರೆ ನಾವು ದೀನರಾಗಿದ್ದರೆ, ಅಂಥ ಯೋಚನೆ ಬಂದಾಗಲೂ ಸರಿಯಾದ ಮನೋಭಾವ ತೋರಿಸಲು ಪ್ರಯತ್ನಿಸುತ್ತೇವೆ.

12. ಜ್ಞಾನೋಕ್ತಿ 27:5, 6​ರ ಪ್ರಕಾರ ಯಾರಾದರೂ ನಮಗೆ ಸಲಹೆ ಕೊಟ್ಟರೆ ನಾವದಕ್ಕೆ ಯಾಕೆ ಕೃತಜ್ಞರಾಗಿರಬೇಕು? ಉದಾಹರಣೆ ಕೊಡಿ.

12 ದೀನತೆ ಇರುವ ವ್ಯಕ್ತಿಗೆ ಸಲಹೆ ಕೊಟ್ಟರೆ ಅದಕ್ಕೆ ಅವನು ಕೃತಜ್ಞನಾಗಿರುತ್ತಾನೆ. ಉದಾಹರಣೆಗಾಗಿ, ನೀವು ಕ್ರೈಸ್ತ ಕೂಟದಲ್ಲಿದ್ದೀರೆಂದು ನೆನಸಿ. ಸಹೋದರ ಸಹೋದರಿಯರ ಜೊತೆ ಮಾತಾಡುತ್ತಿರುವಾಗ ಅವರಲ್ಲೊಬ್ಬರು ನಿಮ್ಮನ್ನು ಪಕ್ಕಕ್ಕೆ ಕರಕೊಂಡು ಹೋಗಿ ನಿಮ್ಮ ಹಲ್ಲಲ್ಲಿ ಆಹಾರ ಪದಾರ್ಥ ಇದೆ ಎಂದು ಹೇಳುತ್ತಾರೆ. ಆಗ ನಿಮಗೆ ಸ್ವಲ್ಪ ಮುಜುಗರ ಆಗಬಹುದು. ಆದರೆ ಅದನ್ನು ಹೇಳಿದ್ದಕ್ಕೆ ನೀವು ಅವರಿಗೆ ಥ್ಯಾಂಕ್ಸ್‌ ಹೇಳುತ್ತೀರಲ್ವಾ? ಬೇರೆ ಯಾರಾದರೂ ಇದನ್ನು ಮೊದಲೇ ಹೇಳಬೇಕಿತ್ತು ಅಂತನೂ ನೆನಸುತ್ತೀರಲ್ವಾ? ಅದೇ ರೀತಿ ಯಾರಾದರೂ ಸಲಹೆ ಕೊಡಲು ಧೈರ್ಯವಾಗಿ ಮುಂದೆ ಬಂದಾಗ ನಾವು ಅವರ ಸಲಹೆಯನ್ನು ದೀನತೆಯಿಂದ ಸ್ವೀಕರಿಸಬೇಕು ಮತ್ತು ಅವರಿಗೆ ನಾವು ಕೃತಜ್ಞರಾಗಿರಬೇಕು. ಅವರನ್ನು ಶತ್ರು ತರ ಅಲ್ಲ, ಮಿತ್ರನ ತರ ನೋಡಬೇಕು.—ಜ್ಞಾನೋಕ್ತಿ 27:5, 6 ಓದಿ; ಗಲಾ. 4:16.

ಬೇರೆಯವರಿಗೆ ಹೆಚ್ಚಿನ ಜವಾಬ್ದಾರಿಗಳು ಸಿಗುವಾಗ ನಾವು ಯಾಕೆ ದೀನತೆ ತೋರಿಸಬೇಕು? (ಪ್ಯಾರ 13-14 ನೋಡಿ) *

13. ಬೇರೆಯವರಿಗೆ ಹೆಚ್ಚಿನ ಜವಾಬ್ದಾರಿಗಳು ಸಿಗುವಾಗ ನಾವು ಹೇಗೆ ದೀನತೆ ತೋರಿಸಬಹುದು?

13 ಬೇರೆಯವರಿಗೆ ಹೆಚ್ಚು ಜವಾಬ್ದಾರಿಗಳು ಸಿಕ್ಕಿದಾಗ. ಜಾಸನ್‌ ಎಂಬ ಹಿರಿಯನು ಹೇಳುವುದು: “ಬೇರೆಯವರಿಗೆ ಹೆಚ್ಚಿನ ಜವಾಬ್ದಾರಿಗಳು ಸಿಗೋದನ್ನ ನೋಡುವಾಗ ಕೆಲವೊಮ್ಮೆ ನನಗೆ ಯಾಕೆ ಸಿಗುತ್ತಾ ಇಲ್ಲ ಎಂದು ಯೋಚಿಸ್ತೇನೆ.” ನೀವೂ ಈ ತರ ಯೋಚಿಸಿದ್ದೀರಾ? ಹೆಚ್ಚಿನ ಜವಾಬ್ದಾರಿಗಳಿಗಾಗಿ “ಎಟುಕಿಸಿಕೊಳ್ಳಲು” ಪ್ರಯತ್ನಿಸುವುದು ಯಾವತ್ತಿಗೂ ತಪ್ಪಲ್ಲ. (1 ತಿಮೊ. 3:1) ಆದರೆ ನಮ್ಮ ಯೋಚನೆಯ ಮೇಲೆ ನಿಗಾ ಇಡಬೇಕು. ನಾವು ಎಚ್ಚರಿಕೆ ವಹಿಸದಿದ್ದರೆ ನಮ್ಮ ಹೃದಯದಲ್ಲಿ ಅಹಂಕಾರ ಬೆಳೆಯುವ ಸಾಧ್ಯತೆ ಇದೆ. ಉದಾಹರಣೆಗೆ ‘ನನ್ನ ಬಿಟ್ಟರೆ ಆ ನೇಮಕವನ್ನ ಬೇರೆ ಯಾರೂ ಚೆನ್ನಾಗಿ ಮಾಡಕ್ಕಾಗಲ್ಲ’ ಅಂತ ಒಬ್ಬ ಸಹೋದರನು ಯೋಚಿಸಬಹುದು. ಅಥವಾ ‘ಆ ಸಹೋದರನಿಗಿಂತ ನನ್ನ ಗಂಡ ಆ ನೇಮಕವನ್ನು ಚೆನ್ನಾಗಿ ಮಾಡುತ್ತಿದ್ದರು’ ಅಂತ ಒಬ್ಬ ಸಹೋದರಿ ಯೋಚಿಸಬಹುದು. ಏನೇ ಆಗಲಿ ನಮಗೆ ದೀನತೆ ಇರುವುದಾದರೆ ಈ ರೀತಿ ಯೋಚಿಸಲ್ಲ.

14. ಬೇರೆಯವರಿಗೆ ಜವಾಬ್ದಾರಿಗಳು ಸಿಕ್ಕಿದಾಗ ಮೋಶೆ ನಡಕೊಂಡ ರೀತಿಯಿಂದ ನಾವೇನನ್ನು ಕಲಿಯಬಹುದು?

14 ಬೇರೆಯವರಿಗೆ ಜವಾಬ್ದಾರಿಗಳು ಸಿಕ್ಕಿದಾಗ ಮೋಶೆ ನಡಕೊಂಡ ರೀತಿಯಿಂದ ನಾವು ಒಳ್ಳೇ ಪಾಠ ಕಲಿಯಬಹುದು. ಇಸ್ರಾಯೇಲ್ಯರನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮೋಶೆ ತುಂಬ ಮಾನ್ಯ ಮಾಡಿದನು. ಮೋಶೆ ಮಾಡುತ್ತಿದ್ದ ಕೆಲವು ಜವಾಬ್ದಾರಿಗಳನ್ನು ಯೆಹೋವನು ಬೇರೆಯವರಿಗೆ ನೇಮಿಸಿದಾಗ ಮೋಶೆ ಹೇಗೆ ಪ್ರತಿಕ್ರಿಯಿಸಿದನು? ಆತನು ಅಸೂಯೆಪಡಲಿಲ್ಲ. (ಅರ. 11:24-29) ಜನರಿಗೆ ನ್ಯಾಯತೀರಿಸುವ ಕೆಲಸವನ್ನು ಬೇರೆಯವರಿಗೂ ದೀನತೆಯಿಂದ ಕೊಟ್ಟನು. (ವಿಮೋ. 18:13-24) ಆತನು ಹೊಸ ನ್ಯಾಯಾಧಿಪತಿಗಳನ್ನು ನೇಮಿಸಿದ್ದರಿಂದ ಇಸ್ರಾಯೇಲ್ಯರಿಗೆ ತುಂಬ ಪ್ರಯೋಜನವಾಯಿತು. ಹೀಗೆ ಮೋಶೆ ತನ್ನ ನೇಮಕಕ್ಕಿಂತ ಇತರರ ಪ್ರಯೋಜನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದನು. ಎಂಥಾ ಒಳ್ಳೇ ಮಾದರಿ! ಯೆಹೋವನು ನಮ್ಮನ್ನು ತನ್ನ ಸೇವೆಯಲ್ಲಿ ಬಳಸಬೇಕೆಂದರೆ ನಮಗೆಷ್ಟು ಕೌಶಲ ಇದೆ ಅಂತ ನೋಡಲ್ಲ, ಬದಲಿಗೆ ನಮಗೆಷ್ಟು ದೀನತೆ ಇದೆ ಎಂದು ನೋಡುತ್ತಾನೆ. ಹೌದು “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ.”—ಕೀರ್ತ. 138:6.

15. ಅನೇಕರು ಯಾವ ಹೊಸ ಸನ್ನಿವೇಶಗಳನ್ನು ಎದುರಿಸಿದ್ದಾರೆ?

15 ಹೊಸ ಸನ್ನಿವೇಶಗಳನ್ನು ಎದುರಿಸುವಾಗ. ತುಂಬ ವರ್ಷಗಳಿಂದ ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡಿದ ಅನೇಕ ಸಹೋದರ ಸಹೋದರಿಯರ ನೇಮಕಗಳು ಇತ್ತೀಚೆಗೆ ಬದಲಾಗಿವೆ. ಉದಾಹರಣೆಗೆ, 2014​ರಲ್ಲಿ ಜಿಲ್ಲಾ ಮೇಲ್ವಿಚಾರಕರಿಗೆ ಮತ್ತು ಅವರ ಪತ್ನಿಯರಿಗೆ ಬೇರೆ ರೀತಿಯ ಪೂರ್ಣ ಸಮಯದ ಸೇವೆ ಮಾಡುವ ನೇಮಕ ಕೊಡಲಾಯಿತು. ಅಷ್ಟೇ ಅಲ್ಲ, ಒಬ್ಬ ಸಹೋದರನಿಗೆ 70 ವರ್ಷವಾದ ಮೇಲೆ ಅವರು ಸಂಚರಣ ಮೇಲ್ವಿಚಾರಕರಾಗಿ ಕೆಲಸ ಮಾಡಲ್ಲ ಎಂದು ಅದೇ ವರ್ಷದಲ್ಲಿ ಸಂಘಟನೆ ತಿಳಿಸಿತು. 80 ವರ್ಷ ಪ್ರಾಯವಾದ ಸಹೋದರರು ಇನ್ನು ಮುಂದೆ ಹಿರಿಯರ ಮಂಡಳಿಯ ಸಂಯೋಜಕರಾಗಿ ಸೇವೆ ಮಾಡುವುದಿಲ್ಲ ಎನ್ನಲಾಯಿತು. ಮಾತ್ರವಲ್ಲ ಕಳೆದ ಕೆಲವು ವರ್ಷಗಳಲ್ಲಿ, ಬೆತೆಲಿನಲ್ಲಿದ್ದ ಅನೇಕರಿಗೆ ಪಯನೀಯರರಾಗಿ ನೇಮಕ ಸಿಕ್ಕಿತು. ಇನ್ನೂ ಕೆಲವರು ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ, ಕುಟುಂಬದವರನ್ನು ನೋಡಿಕೊಳ್ಳಲಿಕ್ಕಾಗಿ ಅಥವಾ ಬೇರೆ ಕಾರಣಗಳಿಂದಾಗಿ ತಮ್ಮ ಪೂರ್ಣಸಮಯದ ಸೇವೆಯನ್ನು ಬಿಡಬೇಕಾಯಿತು.

16. ನಮ್ಮ ಸಹೋದರ ಸಹೋದರಿಯರು ದೀನತೆ ತೋರಿಸುತ್ತಾ ಹೇಗೆ ತಮ್ಮ ಹೊಸ ಸನ್ನಿವೇಶಗಳಿಗೆ ಹೊಂದಿಕೊಂಡಿದ್ದಾರೆ?

16 ಈ ಸಹೋದರ ಸಹೋದರಿಯರಿಗೆ ತಮ್ಮ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ತುಂಬ ಕಷ್ಟವಾಯಿತು. ಅವರಿಗೆ ತಮ್ಮ ಹಿಂದಿನ ನೇಮಕವೇ ನೆನಪಾಗುತ್ತಿತ್ತು. ಅನೇಕರು ಅದನ್ನು ವರ್ಷಗಳಿಂದ ಮಾಡಿಕೊಂಡು ಬಂದಿದ್ದರು. ಕೆಲವರು ತುಂಬ ನೋವನ್ನು ಅನುಭವಿಸಿದರು. ಆದರೂ ಸಮಯ ಹೋದಂತೆ ಅವರು ತಮ್ಮ ಹೊಸ ನೇಮಕಕ್ಕೆ ಹೊಂದಿಕೊಂಡರು. ಇದು ಹೇಗೆ ಸಾಧ್ಯವಾಯಿತು? ಯೆಹೋವನ ಮೇಲೆ ಅವರಿಗಿದ್ದ ಅಪಾರ ಪ್ರೀತಿಯು ಹೊಸ ನೇಮಕಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಿತು. ಅವರು ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿದ್ದಾರೆಯೇ ಹೊರತು ತಮ್ಮ ಕೆಲಸಕ್ಕೆ, ಸ್ಥಾನಮಾನಕ್ಕೆ ಅಥವಾ ನೇಮಕಕ್ಕಲ್ಲ ಎಂದು ಅವರಿಗೆ ಗೊತ್ತಿತ್ತು. (ಕೊಲೊ. 3:23) ಹಾಗಾಗಿ, ಯಾವುದೇ ನೇಮಕವಿರಲಿ ಯೆಹೋವನ ಸೇವೆಯನ್ನು ಅವರು ಸಂತೋಷದಿಂದ ಮಾಡುತ್ತಾರೆ. ಯೆಹೋವನು ತಮಗೋಸ್ಕರ ಚಿಂತಿಸುತ್ತಾನೆಂದು ಅವರಿಗೆ ಗೊತ್ತಿದೆ. ಆದ್ದರಿಂದ ತಮ್ಮ ‘ಚಿಂತೆಯನ್ನೆಲ್ಲಾ ಯೆಹೋವನ ಮೇಲೆ ಹಾಕಿದ್ದಾರೆ.’—1 ಪೇತ್ರ 5:6, 7.

17. ನಮಗೆ ದೀನರಾಗಿರಲು ಸಹಾಯ ಮಾಡಿರುವ ದೇವರ ವಾಕ್ಯಕ್ಕೆ ನಾವು ಯಾಕೆ ಆಭಾರಿಗಳಾಗಿರಬೇಕು?

17 ದೇವರ ವಾಕ್ಯ ನಮಗೆ ದೀನರಾಗಿರಲು ಉತ್ತೇಜಿಸುವುದರಿಂದ ನಾವದಕ್ಕೆ ಆಭಾರಿಗಳಾಗಿದ್ದೇವೆ ಅಲ್ವಾ? ನಮ್ಮಲ್ಲಿ ದೀನತೆಯಿದ್ದರೆ ಬೇರೆಯವರು ನಮ್ಮ ಜೊತೆಯಲ್ಲಿರಲು ಇಷ್ಟಪಡುತ್ತಾರೆ ಮತ್ತು ನಾವೂ ಸಂತೋಷವಾಗಿರುತ್ತೇವೆ. ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುತ್ತೇವೆ. ಮುಖ್ಯವಾಗಿ ನಾವು ನಮ್ಮ ತಂದೆಯಾದ ಯೆಹೋವನಿಗೆ ಆಪ್ತರಾಗುತ್ತೇವೆ. ಯೆಹೋವನು ‘ಮಹೋನ್ನತನಾಗಿದ್ದರೂ’ ತನ್ನ ದೀನ ಸೇವಕರನ್ನು ಪ್ರೀತಿಸುತ್ತಾನೆ ಮತ್ತು ತುಂಬ ಅಮೂಲ್ಯರಾಗಿ ನೋಡುತ್ತಾನೆ ಎಂದು ತಿಳಿಯುವಾಗ ನಿಮಗೆ ಸಂತೋಷ ಆಗಲ್ವಾ!—ಯೆಶಾ. 57:15.

ಗೀತೆ 57 ನನ್ನ ಹೃದಯದ ಧ್ಯಾನ

^ ಪ್ಯಾರ. 5 ನಾವು ಬೆಳೆಸಿಕೊಳ್ಳಲೇಬೇಕಾದ ಒಂದು ಮುಖ್ಯ ಗುಣ ದೀನತೆ. ದೀನತೆ ಅಂದರೇನು? ನಾವು ಯಾಕೆ ಅದನ್ನು ಬೆಳೆಸಿಕೊಳ್ಳಬೇಕು? ಸನ್ನಿವೇಶಗಳು ಬದಲಾದಾಗ ದೀನತೆ ತೋರಿಸುವುದು ಯಾಕೆ ಕಷ್ಟವಾಗಬಹುದು? ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಇದೆ.

^ ಪ್ಯಾರ. 7 1984, ಅಕ್ಟೋಬರ್‌ 1​ರ ಇಂಗ್ಲಿಷ್‌ ಕಾವಲಿನಬುರುಜುವಿನಲ್ಲಿರುವ ಅವರ ಜೀವನ ಕಥೆ ಮತ್ತು 2001, ಮೇ 5​ರ ಕಾವಲಿನಬುರುಜುವಿನಲ್ಲಿರುವ “ಯೆಹೋವನು ನನಗೆ ಒಳ್ಳೇದನ್ನೇ ಮಾಡಿದ್ದಾನೆ!” ಎಂಬ ಲೇಖನ ನೋಡಿ.

^ ಪ್ಯಾರ. 53 ಚಿತ್ರ ವಿವರಣೆ: ಒಬ್ಬ ಸಹೋದರನ ಮನೆಯಲ್ಲಿ ಪೌಲನು ದೀನತೆಯಿಂದ ಇತರ ಸಹೋದರರು ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದಾನೆ.

^ ಪ್ಯಾರ. 57 ಚಿತ್ರ ವಿವರಣೆ: ಒಬ್ಬ ಸಹೋದರನು ತನಗಿಂತ ಚಿಕ್ಕ ಪ್ರಾಯದ ಸಹೋದರನಿಂದ ಬೈಬಲ್‌ ಆಧಾರಿತ ಸಲಹೆ ಸ್ವೀಕರಿಸುತ್ತಿದ್ದಾನೆ.

^ ಪ್ಯಾರ. 59 ಚಿತ್ರ ವಿವರಣೆ: ಯುವ ಸಹೋದರನು ಸಭೆಯಲ್ಲಿ ನೇಮಕವನ್ನು ನಿರ್ವಹಿಸುವುದನ್ನು ನೋಡಿ ವೃದ್ಧ ಸಹೋದರ ಅಸೂಯೆ ಪಡುತ್ತಿಲ್ಲ.