ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 37

ಯೆಹೋವನಿಗೆ ಮನಸಾರೆ ಅಧೀನರಾಗಿ

ಯೆಹೋವನಿಗೆ ಮನಸಾರೆ ಅಧೀನರಾಗಿ

“ನಮ್ಮ . . . ತಂದೆಯಾಗಿರುವಾತನಿಗೆ ನಾವು ನಮ್ಮನ್ನು ಇನ್ನಷ್ಟು ಅಧೀನಪಡಿಸಿಕೊಂಡು ಜೀವಿಸಬೇಕಲ್ಲವೆ?”—ಇಬ್ರಿ. 12:9.

ಗೀತೆ 46 ಯೆಹೋವನು ನಮ್ಮ ಅರಸನು!

ಕಿರುನೋಟ *

1. ನಾವು ಯಾಕೆ ಯೆಹೋವನಿಗೆ ಅಧೀನರಾಗಿರಬೇಕು?

ನಾವು ಯೆಹೋವನಿಗೆ ಅಧೀನರಾಗಿರಬೇಕು. * ಯಾಕೆಂದರೆ ಆತನು ನಮ್ಮ ಸೃಷ್ಟಿಕರ್ತ. ಆದ್ದರಿಂದ ನಾವು ಏನು ಮಾಡಬೇಕು, ನಾವು ಹೇಗಿರಬೇಕು ಎಂದು ಹೇಳಲು ಆತನಿಗೆ ಅಧಿಕಾರವಿದೆ. (ಪ್ರಕ. 4:11) ನಾವು ಯೆಹೋವನಿಗೆ ವಿಧೇಯರಾಗಲು ಇನ್ನೊಂದು ಬಲವಾದ ಕಾರಣ ಆತನು ಆಳುವ ವಿಧಾನವೇ ಅತ್ಯುತ್ತಮವಾದದ್ದು. ಹಿಂದಿನ ಕಾಲದಿಂದಲೂ ಅನೇಕರು ಮಾನವರನ್ನು ಆಳಿದ್ದಾರೆ. ಆದರೆ ಅವರೆಲ್ಲರಿಗಿಂತಲೂ ಹೆಚ್ಚು ವಿವೇಕ, ಪ್ರೀತಿ, ಕನಿಕರ ಹಾಗೂ ದಯೆ ಇರುವ ಆಡಳಿತಗಾರ ಯೆಹೋವನೇ ಆಗಿದ್ದಾನೆ.—ವಿಮೋ. 34:6; ರೋಮ. 16:27; 1 ಯೋಹಾ. 4:8.

2. ಇಬ್ರಿಯ 12:9-11​ರಲ್ಲಿ ತಿಳಿಸಿದಂತೆ ನಾವು ಯೆಹೋವನಿಗೆ ಅಧೀನರಾಗಿರಲು ಯಾವೆಲ್ಲಾ ಕಾರಣಗಳಿವೆ?

2 ನಾವು ಯೆಹೋವನಿಗೆ ಭಯದಿಂದ ವಿಧೇಯರಾಗುವುದು ಆತನಿಗೆ ಇಷ್ಟ ಇಲ್ಲ. ಬದಲಿಗೆ, ನಾವು ಆತನನ್ನು ಪ್ರೀತಿಸುವುದರಿಂದ ಮತ್ತು ನಾವು ಆತನನ್ನು ಪ್ರೀತಿಯ ತಂದೆ ಅಂತ ಭಾವಿಸುವುದರಿಂದ ಆತನಿಗೆ ವಿಧೇಯರಾಗಬೇಕು ಅಂತ ಇಷ್ಟಪಡುತ್ತಾನೆ. ‘ನಮ್ಮ ತಂದೆಯಾಗಿರುವಾತನಿಗೆ ನಾವು ನಮ್ಮನ್ನೇ ಅಧೀನಪಡಿಸಿಕೊಳ್ಳಬೇಕು.’ ಯಾಕೆಂದರೆ ಆತನು “ನಮ್ಮ ಪ್ರಯೋಜನಕ್ಕಾಗಿ ಶಿಸ್ತನ್ನು ನೀಡುತ್ತಾನೆ” ಎಂದು ಪೌಲನು ಇಬ್ರಿಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ.—ಇಬ್ರಿಯ 12:9-11 ಓದಿ.

3. (ಎ) ನಾವು ಯೆಹೋವನಿಗೆ ಅಧೀನರಾಗುತ್ತೇವೆ ಎಂದು ಹೇಗೆ ತೋರಿಸಿಕೊಡಬಹುದು? (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

3 ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳುವ ಸ್ವಭಾವದ ವಿರುದ್ಧ ಹೋರಾಡುವ ಮೂಲಕ ಮತ್ತು ಯೆಹೋವನಿಗೆ ವಿಧೇಯರಾಗಲು ನಮ್ಮಿಂದಾಗುವುದೆಲ್ಲವನ್ನು ಮಾಡುವ ಮೂಲಕ ನಾವು ಆತನಿಗೆ ಅಧೀನರಾಗುತ್ತೇವೆ. (ಜ್ಞಾನೋ. 3:5) ನಾವು ಯೆಹೋವನ ಗುಣಗಳ ಬಗ್ಗೆ ಕಲಿಯುವುದರಿಂದ ಆತನಿಗೆ ಅಧೀನರಾಗಿರಲು ಸುಲಭವಾಗುತ್ತದೆ. ಯಾಕೆ? ಯಾಕೆಂದರೆ ಆತನ ಎಲ್ಲಾ ಕೆಲಸಗಳಲ್ಲಿ ಈ ಗುಣಗಳೇ ಎದ್ದುಕಾಣುತ್ತವೆ. (ಕೀರ್ತ. 145:9) ಯೆಹೋವನ ಬಗ್ಗೆ ಹೆಚ್ಚೆಚ್ಚು ಕಲಿತಂತೆ ನಾವು ಆತನನ್ನು ಹೆಚ್ಚೆಚ್ಚು ಪ್ರೀತಿಸುತ್ತೇವೆ. ಆಗ ನಮಗೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ನಿಯಮದ ದೊಡ್ಡ ಪಟ್ಟಿಯ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ನಾವು ಯೆಹೋವನನ್ನು ಪ್ರೀತಿಸುವುದರಿಂದ ನಮ್ಮ ಯೋಚನೆ ಮತ್ತು ಭಾವನೆಗಳನ್ನು ಆತನು ಬಯಸುವಂಥ ರೀತಿಯಲ್ಲೇ ಇಟ್ಟುಕೊಳ್ಳಲು ಮತ್ತು ಕೆಟ್ಟದ್ದನ್ನು ಮಾಡದಿರಲು ಪ್ರಯತ್ನಿಸುತ್ತೇವೆ. (ಕೀರ್ತ. 97:10) ಆದರೂ ಕೆಲವೊಮ್ಮೆ ಯೆಹೋವನಿಗೆ ವಿಧೇಯರಾಗಲು ನಮಗೆ ಕಷ್ಟವಾಗಬಹುದು. ಯಾಕೆ ಹಾಗಾಗುತ್ತದೆ? ದೇಶಾಧಿಪತಿಯಾಗಿದ್ದ ನೆಹೆಮೀಯ, ರಾಜ ದಾವೀದ ಮತ್ತು ಯೇಸುವಿನ ತಾಯಿ ಮರಿಯಳಿಂದ ಹಿರಿಯರು, ತಂದೆ-ತಾಯಂದಿರು ಏನು ಕಲಿಯಬಹುದು? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ.

ಯೆಹೋವನಿಗೆ ಅಧೀನರಾಗಲು ನಮಗೆ ಯಾಕೆ ಕಷ್ಟವಾಗಬಹುದು?

4-5. ರೋಮನ್ನರಿಗೆ 7:21-23​ರ ಪ್ರಕಾರ ಯೆಹೋವನಿಗೆ ಅಧೀನರಾಗಲು ನಮಗೆ ಯಾಕೆ ಕಷ್ಟವಾಗುತ್ತದೆ?

4 ಯೆಹೋವನಿಗೆ ಅಧೀನರಾಗಲು ನಮಗೆ ಕೆಲವೊಮ್ಮೆ ಕಷ್ಟವಾಗಬಹುದು. ಇದಕ್ಕೆ ಒಂದು ಕಾರಣ ನಾವೆಲ್ಲರೂ ಪಾಪಿಗಳಾಗಿದ್ದೇವೆ ಮತ್ತು ಅಪರಿಪೂರ್ಣರಾಗಿದ್ದೇವೆ. ಹಾಗಾಗಿ ಕೆಲವೊಮ್ಮೆ ದೇವರಿಗೆ ವಿಧೇಯರಾಗಲು ನಮಗಿಷ್ಟ ಆಗುವುದಿಲ್ಲ. ಆದಾಮ-ಹವ್ವರು ದೇವರ ವಿರುದ್ಧ ದಂಗೆಯೆದ್ದು ಆತನು ತಿನ್ನಬಾರದೆಂದು ಹೇಳಿದ ಹಣ್ಣನ್ನು ತಿಂದರು. ಹೀಗೆ, ಯಾವುದು ಸರಿ ಯಾವುದು ತಪ್ಪು ಎಂದು ತಾವೇ ನಿರ್ಧರಿಸಿದರು. (ಆದಿ. 3:22) ಆದಾಮ-ಹವ್ವರಂತೆ ಇಂದು ಕೂಡ ಹೆಚ್ಚಿನವರು ಯೆಹೋವನನ್ನು ತಿರಸ್ಕರಿಸಿ ಯಾವುದು ಸರಿ ಯಾವುದು ತಪ್ಪು ಎಂದು ತಾವೇ ನಿರ್ಧರಿಸುತ್ತಾರೆ.

5 ನಾವು ಆ ಜನರಂತಿಲ್ಲ. ನಮಗೆ ಯೆಹೋವನ ಬಗ್ಗೆ ಗೊತ್ತಿದೆ ಮತ್ತು ನಾವಾತನನ್ನು ಪ್ರೀತಿಸುತ್ತೇವೆ. ಆದರೂ ಕೆಲವೊಮ್ಮೆ ನಮಗೆ ಆತನಿಷ್ಟದಂತೆ ನಡೆಯಲು ಕಷ್ಟವಾಗುತ್ತದೆ. ಅಪೊಸ್ತಲ ಪೌಲನಿಗೂ ಹೀಗೇ ಆಯಿತು. (ರೋಮನ್ನರಿಗೆ 7:21-23 ಓದಿ.) ಪೌಲನಂತೆ ನಾವು ಸಹ ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿಯೋ ಅದನ್ನೇ ಮಾಡಲು ಬಯಸುತ್ತೇವಲ್ವಾ? ಹಾಗಾದರೆ, ಕೆಟ್ಟದ್ದನ್ನು ಮಾಡುವ ಬಯಕೆಯ ವಿರುದ್ಧ ಯಾವಾಗಲೂ ನಾವು ಹೋರಾಡುತ್ತಾ ಇರಬೇಕು.

6-7. ಯೆಹೋವನಿಗೆ ಅಧೀನರಾಗುವುದು ಕಷ್ಟ ಅಂತ ಅನಿಸಲು ಇರುವ ಇನ್ನೊಂದು ಕಾರಣವೇನು? ಉದಾಹರಣೆ ಕೊಡಿ.

6 ಯೆಹೋವನಿಗೆ ಅಧೀನರಾಗುವುದು ಕಷ್ಟ ಅಂತ ಅನಿಸಲು ಇನ್ನೊಂದು ಕಾರಣನೂ ಇದೆ. ಅದು ನಾವು ಬೆಳೆದುಬಂದ ವಾತಾವರಣ ಮತ್ತು ಸಂಸ್ಕೃತಿ. ಹೆಚ್ಚಿನ ಜನರು ನಮಗೆ ಯೆಹೋವನ ಇಷ್ಟಕ್ಕೆ ವಿರುದ್ಧ ಇರುವುದನ್ನೇ ಮಾಡಲು ಹೇಳುವುದರಿಂದ ಯೆಹೋವನ ಇಷ್ಟಕ್ಕನುಸಾರ ಯೋಚಿಸಲು ಕಷ್ಟವಾಗುತ್ತದೆ. ಒಂದು ಉದಾಹರಣೆ ನೋಡಿ.

7 ಕೆಲವು ದೇಶಗಳಲ್ಲಿ ಯುವ ಜನರಿಗೆ ಹೆಚ್ಚು ಹಣ ಸಂಪಾದಿಸಬೇಕೆಂಬ ಒತ್ತಡ ಇರುತ್ತದೆ. ಮೇರಿ * ಎಂಬ ಸಹೋದರಿಗೂ ಇದೇ ಅನುಭವವಾಯಿತು. ಯೆಹೋವನ ಬಗ್ಗೆ ಕಲಿಯುವುದಕ್ಕೂ ಮುಂಚೆ ಅವಳು ತನ್ನ ದೇಶದ ಹೆಸರುವಾಸಿಯಾದ ಕಾಲೇಜಿನಲ್ಲಿ ಓದಿದ್ದಳು. ಅವಳ ಕುಟುಂಬದವರು ಕೈತುಂಬ ಹಣ ಬರುವ, ಸಮಾಜ ಗೌರವಿಸುವಂಥ ಕೆಲಸವನ್ನು ಪಡಕೊಳ್ಳಬೇಕೆಂದು ಒತ್ತಡ ಹಾಕುತ್ತಿದ್ದರು. ಅವಳಿಗೂ ಅದೇ ಆಸೆ ಇತ್ತು. ಯೆಹೋವನ ಬಗ್ಗೆ ಕಲಿತು ಆತನನ್ನು ಪ್ರೀತಿಸಿದಾಗ ಅವಳು ತನ್ನ ಗುರಿಯನ್ನು ಬದಲಾಯಿಸಿದಳು. “ಕೆಲವೊಮ್ಮೆ ಹೆಚ್ಚು ಹಣ ಮಾಡುವ, ಆದರೆ ಯೆಹೋವನಿಂದ ದೂರ ಮಾಡುವ ಕೆಲಸಗಳು ಈಗಲೂ ಸಿಗುತ್ತವೆ. ನಾನು ಬೆಳೆದು ಬಂದ ರೀತಿಯಿಂದಾಗಿ ಇಂಥ ಅವಕಾಶಗಳನ್ನು ಬೇಡ ಅಂತ ಹೇಳಲು ನನಗೆ ಕಷ್ಟವಾಗುತ್ತದೆ. ಆಗ ಇಂಥ ಕೆಲಸ ಸ್ವೀಕರಿಸುವ ಪ್ರಲೋಭನೆಯನ್ನು ತಿರಸ್ಕರಿಸಲು ಶಕ್ತಿ ಕೊಡುವಂತೆ ಯೆಹೋವನಲ್ಲಿ ಅಂಗಲಾಚಿ ಬೇಡಬೇಕಾಗುತ್ತದೆ” ಎನ್ನುತ್ತಾಳೆ ಅವಳು.—ಮತ್ತಾ. 6:24.

8. ನಾವೀಗ ಏನನ್ನು ಪರಿಗಣಿಸಲಿದ್ದೇವೆ?

8 ಯೆಹೋವನಿಗೆ ಅಧೀನರಾಗಿ ಇರುವುದರಿಂದ ನಮಗೆ ಅನೇಕ ಪ್ರಯೋಜನಗಳಿವೆ. ಸ್ವಲ್ಪಮಟ್ಟಿಗೆ ಅಧಿಕಾರ ಇರುವ ಎಲ್ಲರೂ ಅಂದರೆ ಹಿರಿಯರು, ತಂದೆ-ತಾಯಂದಿರು ಯೆಹೋವನಿಗೆ ಅಧೀನರಾಗಲು ಇನ್ನೊಂದು ವಿಶೇಷ ಕಾರಣ ಇದೆ. ಅದೇನೆಂದರೆ ಅವರು ಅಧೀನರಾಗುವುದರಿಂದ ಬೇರೆಯವರಿಗೆ ಸಹಾಯವಾಗುತ್ತದೆ. ಯೆಹೋವನಿಗೆ ಇಷ್ಟವಾಗುವ ತರ ಹೇಗೆ ಅಧಿಕಾರವನ್ನು ನಿರ್ವಹಿಸಬಹುದು ಅಂತ ಬೈಬಲ್‌ನಲ್ಲಿರುವ ಕೆಲವು ಉದಾಹರಣೆಗಳಿಂದ ಕಲಿಯೋಣ.

ಹಿರಿಯರು ನೆಹೆಮೀಯನಿಂದ ಏನನ್ನು ಕಲಿಯಬಹುದು?

ನೆಹೆಮೀಯನು ಯೆರೂಸಲೇಮಿನ ಗೋಡೆ ಕಟ್ಟಲು ಸಹಾಯ ಮಾಡಿದಂತೆ, ಹಿರಿಯರು ರಾಜ್ಯ ಸಭಾಗೃಹದಲ್ಲಿ ಕೆಲಸ ಮಾಡುತ್ತಾರೆ (ಪ್ಯಾರ 9-11 ನೋಡಿ) *

9. ನೆಹೆಮೀಯನು ಯಾವೆಲ್ಲಾ ಸವಾಲುಗಳನ್ನು ಎದುರಿಸಿದನು?

9 ಯೆಹೋವನು ತನ್ನ ಜನರನ್ನು ಪರಿಪಾಲಿಸುವ ಜವಾಬ್ದಾರಿಯನ್ನು ಹಿರಿಯರಿಗೆ ಕೊಟ್ಟಿದ್ದಾನೆ. (1 ಪೇತ್ರ 5:2) ನೆಹೆಮೀಯನು ಯೆಹೋವನ ಜನರೊಂದಿಗೆ ನಡಕೊಂಡ ರೀತಿಯಿಂದ ಹಿರಿಯರು ಅನೇಕ ಪಾಠಗಳನ್ನು ಕಲಿಯಬಹುದು. ಯೆಹೂದ ದೇಶದ ಅಧಿಪತಿಯಾಗಿದ್ದ ನೆಹೆಮೀಯನಿಗೆ ತುಂಬ ಅಧಿಕಾರವಿತ್ತು. (ನೆಹೆ. 1:11; 2:7, 8; 5:14) ಆತನು ಯಾವೆಲ್ಲಾ ಸವಾಲುಗಳನ್ನು ಎದುರಿಸಿದನು ಅಂತ ಯೋಚಿಸಿ. ಯೆಹೂದ್ಯರು ಸತ್ಯಾರಾಧನೆಗೆ ಅಗೌರವ ತರುವಂಥ ಕೆಲಸಗಳನ್ನು ದೇವಾಲಯದಲ್ಲಿ ಮಾಡುತ್ತಿದ್ದಾರೆ ಮತ್ತು ದೇವರ ನಿಯಮದ ಪ್ರಕಾರ ಲೇವಿಯರಿಗೆ ಕೊಡಬೇಕಾದ ಪಾಲನ್ನು ಕೊಡುತ್ತಿಲ್ಲ ಎಂದು ಆತನಿಗೆ ಗೊತ್ತಾಯಿತು. ಅಲ್ಲಿನ ಯೆಹೂದ್ಯರು ಸಬ್ಬತ್‌ ನಿಯಮವನ್ನು ಪಾಲಿಸುತ್ತಿರಲಿಲ್ಲ ಮತ್ತು ಕೆಲವರು ವಿದೇಶಿ ಸ್ತ್ರೀಯರನ್ನು ಮದುವೆಯಾಗಿದ್ದರು. ಇಂಥ ಕಷ್ಟದ ಸನ್ನಿವೇಶವನ್ನು ಅಧಿಪತಿಯಾಗಿದ್ದ ನೆಹೆಮೀಯನು ನಿಭಾಯಿಸಬೇಕಿತ್ತು.—ನೆಹೆ. 13:4-30.

10. ನೆಹೆಮೀಯನು ತನಗೆದುರಾದ ಸನ್ನಿವೇಶವನ್ನು ಹೇಗೆ ನಿಭಾಯಿಸಿದನು?

10 ನೆಹೆಮೀಯನು ದೇವಜನರ ಮೇಲೆ ತನ್ನ ಅಧಿಕಾರವನ್ನು ಉಪಯೋಗಿಸಿ ತಾನು ಹೇಳಿದ್ದನ್ನೇ ಮಾಡಿ ಎಂದು ಅವರನ್ನು ಬೆಂಡೆತ್ತಲಿಲ್ಲ. ಬದಲಿಗೆ ಸಹಾಯಕ್ಕಾಗಿ ಯೆಹೋವನಿಗೆ ಪಟ್ಟುಹಿಡಿದು ಪ್ರಾರ್ಥಿಸಿದನು ಮತ್ತು ಯೆಹೋವನ ನಿಯಮವನ್ನು ಜನರಿಗೆ ಕಲಿಸಿದನು. (ನೆಹೆ. 1:4-10; 13:1-3) ನೆಹೆಮೀಯನು ದೀನತೆಯಿಂದ ತನ್ನ ಸಹೋದರರ ಜೊತೆ ಸೇರಿ ಕೆಲಸ ಮಾಡಿದ, ಯೆರೂಸಲೇಮಿನ ಗೋಡೆಗಳನ್ನು ಕಟ್ಟಲೂ ಅವರಿಗೆ ಸಹಾಯ ಮಾಡಿದನು.—ನೆಹೆ. 4:15.

11. ಒಂದನೇ ಥೆಸಲೊನೀಕ 2:7, 8​ರಲ್ಲಿ ತಿಳಿಸಿದಂತೆ ಹಿರಿಯರು ಸಭೆಯವರೊಂದಿಗೆ ಹೇಗೆ ನಡಕೊಳ್ಳಬೇಕು?

11 ಇಂದಿನ ಹಿರಿಯರಿಗೆ ನೆಹೆಮೀಯನು ಎದುರಿಸಿದಂಥ ಸಮಸ್ಯೆಗಳು ಬರದೇ ಇರಬಹುದು. ಆದರೂ ಅವರು ಅನೇಕ ವಿಧಗಳಲ್ಲಿ ನೆಹೆಮೀಯನನ್ನು ಅನುಕರಿಸಬಹುದು. ಉದಾಹರಣೆಗೆ, ಹಿರಿಯರು ತಮ್ಮ ಸಹೋದರ-ಸಹೋದರಿಯರಿಗಾಗಿ ತಮ್ಮಿಂದಾಗುವುದೆಲ್ಲ ಮಾಡಬೇಕು. ತಮಗೆ ಅಧಿಕಾರ ಇದೆ ಅಂತ ಹೇಳಿ ಬೇರೆಯವರಿಗಿಂತ ತಾವೇ ಮೇಲು ಅಂತ ಯೋಚಿಸಬಾರದು. ಸಭೆಯವರ ಜೊತೆ ವಾತ್ಸಲ್ಯದಿಂದ ನಡಕೊಳ್ಳಬೇಕು. (1 ಥೆಸಲೊನೀಕ 2:7, 8 ಓದಿ.) ಅವರು ಪ್ರೀತಿ ಮತ್ತು ದೀನತೆ ತೋರಿಸಬೇಕು. ಬೇರೆಯವರ ಹತ್ತಿರ ದಯೆಯಿಂದ ಮಾತಾಡಬೇಕು. ಅನುಭವಸ್ಥ ಹಿರಿಯರಾದ ಅನಂತ್‌ ಹೀಗೆ ಹೇಳುತ್ತಾರೆ: “ನಾನು ಗಮನಿಸಿದ ಪ್ರಕಾರ, ಹಿರಿಯರು ಪ್ರೀತಿ ಮತ್ತು ದಯೆಯಿಂದ ನಡಕೊಂಡರೆ ಸಹೋದರ-ಸಹೋದರಿಯರು ಅವರ ಮಾತಿಗೆ ತುಂಬ ಬೆಲೆ ಕೊಡುತ್ತಾರೆ. ಈ ಗುಣಗಳನ್ನು ಹಿರಿಯರು ತೋರಿಸಿದರೆ ಸಭೆಯವರು ಸಂಪೂರ್ಣ ಬೆಂಬಲ ಕೊಡುತ್ತಾರೆ.” ಅನೇಕ ವರ್ಷಗಳ ಅನುಭವ ಇರುವ ತರುಣ್‌ ಎಂಬ ಸಹೋದರ ಹೇಳುವುದು: “ನಾನು ಯಾವಾಗಲೂ ಫಿಲಿಪ್ಪಿ 2:3​ರಲ್ಲಿರುವ ಸಲಹೆಯನ್ನು ಪಾಲಿಸುತ್ತಾ ಬೇರೆಯವರನ್ನು ನನಗಿಂತಲೂ ಶ್ರೇಷ್ಠರೆಂದು ಎಣಿಸುತ್ತೇನೆ. ಬೇರೆಯವರು ನಾನು ಹೇಳಿದಂಗೆ ಕುಣಿಯಬೇಕು ಅನ್ನೋ ಯೋಚನೆ ಬರದಂತೆ ಇದು ನನಗೆ ಸಹಾಯ ಮಾಡುತ್ತದೆ.”

12. ಹಿರಿಯರು ಯಾಕೆ ದೀನರಾಗಿರಬೇಕು?

12 ಯೆಹೋವನಂತೆ ಹಿರಿಯರೂ ದೀನರಾಗಿರಬೇಕು. ಇಡೀ ವಿಶ್ವದ ಪರಮಾಧಿಕಾರಿಯಾದ ಯೆಹೋವನು ‘ದೀನರನ್ನು ಧೂಳಿನಿಂದ ಎಬ್ಬಿಸಲಿಕ್ಕಾಗಿ’ “ಬಾಗುತ್ತಾನೆ.” (ಕೀರ್ತ. 18:35; 113:6, 7) ಆತನಿಗೆ ಅಹಂಕಾರಿಗಳೆಂದರೆ ಅಸಹ್ಯ ಎಂದು ಬೈಬಲ್‌ ಹೇಳುತ್ತದೆ.—ಜ್ಞಾನೋ. 16:5.

13. ಹಿರಿಯರು ತಮ್ಮ “ನಾಲಿಗೆಗೆ ಕಡಿವಾಣವನ್ನು” ಯಾಕೆ ಹಾಕಬೇಕು?

13 ಹಿರಿಯರು ತಮ್ಮ “ನಾಲಿಗೆಗೆ ಕಡಿವಾಣ” ಹಾಕುವ ಮೂಲಕ ಯೆಹೋವನಿಗೆ ಅಧೀನತೆ ತೋರಿಸಬಹುದು. ಹಾಗೆ ಕಡಿವಾಣ ಹಾಕದಿದ್ದರೆ ಬೇರೆಯವರು ಅಗೌರವದಿಂದ ಮಾತಾಡುವಾಗ ಅವರ ಮೇಲೆ ಸಿಟ್ಟಿನಿಂದ ಮಾತಾಡಿ ಬಿಡಬಹುದು. (ಯಾಕೋ. 1:26; ಗಲಾ. 5:14, 15) ಈ ಮುಂಚೆ ತಿಳಿಸಲಾದ ಅನಂತ್‌ ಹೇಳುವುದು: “ಯಾರಾದರೂ ನನ್ನನ್ನು ಹಿರಿಯ ಎಂದು ಗೌರವಿಸದೇ ಇದ್ದಾಗ ಅವರ ಹತ್ತಿರ ಕಡ್ಡಿ ಮುರಿದಂಗೆ ಮಾತಾಡಿಬಿಡಬೇಕು ಅಂತ ಕೆಲವೊಮ್ಮೆ ಅನಿಸಿದೆ. ಆದರೆ ನಾನು ಬೈಬಲ್‌ನಲ್ಲಿರೋ ನಂಬಿಗಸ್ತ ಪುರುಷರ ಉದಾಹರಣೆಗಳನ್ನು ಓದಿ ಧ್ಯಾನಿಸಿದ್ದರಿಂದ ದೀನರಾಗಿರೋದು ಯಾಕೆ ಪ್ರಾಮುಖ್ಯ ಎಂದು ಕಲಿತಿದ್ದೇನೆ.” ಹಿರಿಯರು ಸಹೋದರ-ಸಹೋದರಿಯರ ಹತ್ತಿರ ಮತ್ತು ಜೊತೆ ಹಿರಿಯರ ಹತ್ತಿರ ಪ್ರೀತಿ, ದಯೆಯಿಂದ ಮಾತಾಡುತ್ತಾರೆ. ಹೀಗೆ ಮಾಡುವ ಮೂಲಕ ತಾವು ಯೆಹೋವನಿಗೆ ಅಧೀನರಾಗಿದ್ದೇವೆಂದು ತೋರಿಸಿಕೊಡುತ್ತಾರೆ.—ಕೊಲೊ. 4:6.

ತಂದೆಯಂದಿರು ದಾವೀದನಿಂದ ಏನನ್ನು ಕಲಿಯಬಹುದು?

14. (ಎ) ಯೆಹೋವನು ಅಪ್ಪಂದಿರಿಗೆ ಯಾವ ಸ್ಥಾನ ಕೊಟ್ಟಿದ್ದಾನೆ? (ಬಿ) ಅವರೇನು ಮಾಡಬೇಕೆಂದು ಆತನು ಬಯಸುತ್ತಾನೆ?

14 ಯೆಹೋವನು ಅಪ್ಪಂದಿರನ್ನು ಕುಟುಂಬದ ತಲೆಯಾಗಿ (ಯಜಮಾನ) ನೇಮಿಸಿದ್ದಾನೆ ಮತ್ತು ಅವರು ಮಕ್ಕಳಿಗೆ ಒಳ್ಳೇ ತರಬೇತಿ ಹಾಗೂ ಶಿಸ್ತು ಕೊಡಬೇಕೆಂದು ಬಯಸುತ್ತಾನೆ. (1 ಕೊರಿಂ. 11:3; ಎಫೆ. 6:4) ಹಾಗಂತ ಅವರಿಗೆ ಸಂಪೂರ್ಣ ಅಧಿಕಾರ ಇಲ್ಲ. ಯಾಕೆಂದರೆ ಅವರು ಕುಟುಂಬದ ಏರ್ಪಾಡನ್ನು ಮಾಡಿರುವ ಯೆಹೋವನಿಗೆ ಲೆಕ್ಕ ಒಪ್ಪಿಸಬೇಕಾಗಿದೆ. (ಎಫೆ. 3:14, 15) ಅವರು ತಮಗಿರುವ ಅಧಿಕಾರವನ್ನು ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ಚಲಾಯಿಸುವ ಮೂಲಕ ತಾವು ಯೆಹೋವನಿಗೆ ಅಧೀನರಾಗಿದ್ದೇವೆಂದು ತೋರಿಸಿಕೊಡುತ್ತಾರೆ. ತಂದೆಯಂದಿರು ರಾಜ ದಾವೀದನ ಜೀವನದ ಬಗ್ಗೆ ತಿಳಿದುಕೊಳ್ಳುವ ಮೂಲಕ ಅನೇಕ ವಿಷಯಗಳನ್ನು ಕಲಿಯಬಹುದು.

ತಂದೆಯು ಎಷ್ಟು ದೀನನೆಂದು ಆತನು ಪ್ರಾರ್ಥನೆ ಮಾಡುವ ರೀತಿಯಿಂದ ಕುಟುಂಬದವರಿಗೆ ಗೊತ್ತಾಗುತ್ತದೆ (ಪ್ಯಾರ 15-16 ನೋಡಿ) *

15. ರಾಜ ದಾವೀದನು ತಂದೆಯಂದಿರಿಗೆ ಉತ್ತಮ ಮಾದರಿ ಎಂದು ಯಾಕೆ ಹೇಳಬಹುದು?

15 ಯೆಹೋವನು ದಾವೀದನನ್ನು ಕುಟುಂಬದ ತಲೆಯಾಗಿ ಮಾತ್ರವಲ್ಲ ಇಡೀ ಇಸ್ರಾಯೇಲ್‌ ಜನಾಂಗಕ್ಕೆ ರಾಜನಾಗಿ ನೇಮಿಸಿದ್ದನು. ಆತನು ರಾಜನಾಗಿದ್ದರಿಂದ ಹೆಚ್ಚು ಅಧಿಕಾರವಿತ್ತು. ಕೆಲವೊಮ್ಮೆ ಆತನು ತನಗಿದ್ದ ಅಧಿಕಾರವನ್ನು ದುರುಪಯೋಗಿಸಿ ಗಂಭೀರ ತಪ್ಪುಗಳನ್ನು ಮಾಡಿದನು. (2 ಸಮು. 11:14, 15) ಆದರೆ ಶಿಸ್ತನ್ನು ಸ್ವೀಕರಿಸುವ ಮೂಲಕ ಯೆಹೋವನಿಗೆ ಅಧೀನತೆ ತೋರಿಸಿದನು. ಮನಸ್ಸುಬಿಚ್ಚಿ ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನ ಸಲಹೆಗೆ ವಿಧೇಯನಾಗಲು ತನ್ನಿಂದಾದುದೆಲ್ಲವನ್ನು ಮಾಡಿದನು. (ಕೀರ್ತ. 51:1-4) ಆತನು ಎಷ್ಟರಮಟ್ಟಿಗೆ ದೀನನಾಗಿದ್ದನೆಂದರೆ ಪುರುಷರು ಮಾತ್ರವಲ್ಲ, ಸ್ತ್ರೀಯರು ಕೊಟ್ಟ ಸಲಹೆಯನ್ನೂ ಪಾಲಿಸಿದನು. (1 ಸಮು. 19:11, 12; 25:32, 33) ದಾವೀದನು ತನ್ನ ತಪ್ಪುಗಳಿಂದ ಪಾಠ ಕಲಿತನು ಮತ್ತು ತನ್ನ ಜೀವನದಲ್ಲಿ ಯೆಹೋವನ ಆರಾಧನೆಗೆ ಮೊದಲ ಸ್ಥಾನ ನೀಡಿದನು.

16. ತಂದೆಯಂದಿರು ದಾವೀದನಿಂದ ಯಾವ ಪಾಠ ಕಲಿಯಬಹುದು?

16 ತಂದೆಯಂದಿರು ರಾಜ ದಾವೀದನಿಂದ ಏನನ್ನು ಕಲಿಯಬಹುದು? ಯೆಹೋವನು ನಿಮಗೆ ಕೊಟ್ಟಿರುವ ಅಧಿಕಾರವನ್ನು ಎಂದಿಗೂ ದುರುಪಯೋಗಿಸಬೇಡಿ. ತಪ್ಪನ್ನು ಒಪ್ಪಿಕೊಳ್ಳಿ ಮತ್ತು ಬೇರೆಯವರು ನಿಮಗೆ ಬೈಬಲಾಧಾರಿತ ಸಲಹೆಯನ್ನು ಕೊಡುವಾಗ ಸ್ವೀಕರಿಸಿ. ಹೀಗೆ ದೀನತೆ ತೋರಿಸಿದರೆ ಖಂಡಿತವಾಗಿಯೂ ನಿಮ್ಮ ಕುಟುಂಬದವರೆಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಕುಟುಂಬದವರ ಮುಂದೆ ನೀವು ಮನಸ್ಸುಬಿಚ್ಚಿ ಯೆಹೋವನಿಗೆ ಪ್ರಾರ್ಥಿಸಿದರೆ ನೀವು ಯೆಹೋವನ ಮೇಲೆ ಎಷ್ಟು ಆತುಕೊಂಡಿದ್ದೀರಿ ಎಂದು ಅವರಿಗೆ ಅರ್ಥವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಆರಾಧನೆಗೆ ಮೊದಲ ಸ್ಥಾನ ನೀಡಿ. (ಧರ್ಮೋ. 6:6-9) ನೀವು ನಿಮ್ಮ ಕುಟುಂಬಕ್ಕೆ ಕೊಡಸಾಧ್ಯವಿರುವ ಅತ್ಯುತ್ತಮ ಉಡುಗೊರೆ ನಿಮ್ಮ ಒಳ್ಳೇ ಮಾದರಿಯೇ ಆಗಿದೆ.

ತಾಯಂದಿರು ಮರಿಯಳಿಂದ ಏನನ್ನು ಕಲಿಯಬಹುದು?

17. ಯೆಹೋವನು ಕುಟುಂಬದಲ್ಲಿ ತಾಯಂದಿರಿಗೆ ಯಾವ ಪಾತ್ರ ಕೊಟ್ಟಿದ್ದಾನೆ?

17 ಯೆಹೋವನು ಕುಟುಂಬದಲ್ಲಿ ತಾಯಂದಿರಿಗೂ ಪ್ರಾಮುಖ್ಯ ಜವಾಬ್ದಾರಿಯನ್ನು ಕೊಟ್ಟಿದ್ದಾನೆ ಮತ್ತು ಮಕ್ಕಳ ಮೇಲೆ ಸ್ವಲ್ಪ ಮಟ್ಟಿಗಿನ ಅಧಿಕಾರ ಕೊಟ್ಟಿದ್ದಾನೆ. (ಜ್ಞಾನೋ. 6:20) ತಾಯಿಯ ನಡೆ-ನುಡಿಯ ಪ್ರಭಾವ ಮಕ್ಕಳ ಮೇಲೆ ಜೀವನ ಪೂರ್ತಿ ಇರುತ್ತದೆ. (ಜ್ಞಾನೋ. 22:6) ತಾಯಂದಿರು ಯೇಸುವಿನ ತಾಯಿ ಮರಿಯಳಿಂದ ಏನನ್ನು ಕಲಿಯಬಹುದೆಂದು ಈಗ ನೋಡೋಣ.

18-19. ತಾಯಂದಿರು ಮರಿಯಳಿಂದ ಯಾವ ಪಾಠ ಕಲಿಯಬಹುದು?

18 ಮರಿಯಳಿಗೆ ದೇವರ ವಾಕ್ಯದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅವಳಿಗೆ ಯೆಹೋವನೊಂದಿಗೆ ಆಪ್ತ ಸಂಬಂಧವಿತ್ತು ಮತ್ತು ಆತನನ್ನು ತುಂಬ ಗೌರವಿಸುತ್ತಿದ್ದಳು. ತನ್ನ ಜೀವನವೇ ತಲೆಕೆಳಗಾಗುತ್ತದೆ ಎಂದು ಗೊತ್ತಿದ್ದರೂ ಯೆಹೋವನ ನಿರ್ದೇಶನವನ್ನು ಪಾಲಿಸಲು ತಯಾರಾಗಿದ್ದಳು.—ಲೂಕ 1:35-38, 46-55.

ತಾಯಿಯು ಸುಸ್ತಾಗಿರುವಾಗ ಕುಟುಂಬದ ಸದಸ್ಯರೊಂದಿಗೆ ಪ್ರೀತಿಯಿಂದ ನಡಕೊಳ್ಳಲು ತುಂಬ ಪ್ರಯತ್ನ ಹಾಕಬೇಕಾಗುತ್ತದೆ (ಪ್ಯಾರ 19 ನೋಡಿ) *

19 ತಾಯಂದಿರೇ ನೀವೂ ಮರಿಯಳನ್ನು ಹೇಗೆಲ್ಲಾ ಅನುಕರಿಸಬಹುದು? ಮೊದಲನೇದಾಗಿ, ಪ್ರತಿದಿನ ಬೈಬಲ್‌ ಓದಿ ವೈಯಕ್ತಿಕ ಪ್ರಾರ್ಥನೆ ಮಾಡುವ ಮೂಲಕ ಯೆಹೋವನಿಗೆ ಆಪ್ತರಾಗಿರಿ. ಎರಡನೇದಾಗಿ, ಯೆಹೋವನನ್ನು ಸಂತೋಷಪಡಿಸಲಿಕ್ಕಾಗಿ ಜೀವನದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಸಿದ್ಧರಾಗಿರಿ. ಉದಾಹರಣೆಗೆ ನೀವು ಚಿಕ್ಕವರಿದ್ದಾಗ ನಿಮ್ಮ ಹೆತ್ತವರಿಗೆ ಬೇಗ ಕೋಪ ಬರುತ್ತಿದ್ದಿರಬಹುದು, ಸಿಟ್ಟಿನಿಂದ ಮಾತಾಡುತ್ತಿದ್ದಿರಬಹುದು. ಇದರಿಂದಾಗಿ, ಹೆತ್ತವರಿಗೆ ಮಕ್ಕಳ ಮೇಲೆ ಕೋಪ ಬರುವುದು ಸಹಜ ಅಂತ ನಿಮಗೆ ಅನಿಸಿರಬಹುದು. ಯೆಹೋವನಿಗೆ ಇಷ್ಟ ಆಗುವ ರೀತಿಯಲ್ಲಿ ಮಕ್ಕಳನ್ನು ಬೆಳೆಸೋದು ಹೇಗೆ ಎಂದು ಕಲಿತ ಮೇಲೂ ನಿಮಗೆ ನಿಮ್ಮ ಮಕ್ಕಳ ಜೊತೆ ತಾಳ್ಮೆ, ಸಮಾಧಾನದಿಂದ ನಡಕೊಳ್ಳಲು ಕಷ್ಟವಾಗುತ್ತಿರಬಹುದು. ಮುಖ್ಯವಾಗಿ ನಿಮಗೆ ಸುಸ್ತಾಗಿರುವಾಗ ಅವರೇನಾದರೂ ಕಿತಾಪತಿ ಮಾಡಿದರೆ ಇದು ತುಂಬನೇ ಕಷ್ಟ ಅಂತ ಅನಿಸಬಹುದು. (ಎಫೆ. 4:31) ಈ ರೀತಿ ಅನಿಸಿದಾಗ ನೀವು ಯೆಹೋವನಿಗೆ ಪ್ರಾರ್ಥನೆ ಮಾಡುವುದು ತುಂಬ ಮುಖ್ಯ. ಲಿಡಿಯಾ ಎಂಬಾಕೆ ಹೇಳುವುದು: “ನನ್ನ ಮಗ ನಾನು ಹೇಳಿದ ಮಾತು ಕೇಳದಿದ್ದಾಗ ಅವನ ಮೇಲೆ ಕಿರಿಚಾಡದೆ ಇರಲಿಕ್ಕಾಗಿ ಕೆಲವೊಮ್ಮೆ ನಾನು ಯೆಹೋವನಿಗೆ ಪಟ್ಟುಹಿಡಿದು ಪ್ರಾರ್ಥಿಸಬೇಕಾಗುತ್ತಿತ್ತು. ಮಾತನ್ನು ಅರ್ಧದಲ್ಲೇ ನಿಲ್ಲಿಸಿ ಮೌನವಾಗಿ ಯೆಹೋವನಿಗೆ ಪ್ರಾರ್ಥಿಸಿದ್ದೂ ಇದೆ. ಸಮಾಧಾನದಿಂದ ಇರಲು ನನಗೆ ಪ್ರಾರ್ಥನೆಯು ಸಹಾಯ ಮಾಡುತ್ತದೆ.”—ಕೀರ್ತ. 37:5.

20. (ಎ) ಕೆಲವು ತಾಯಂದಿರು ಯಾವ ಸವಾಲನ್ನು ಎದುರಿಸುತ್ತಾರೆ? (ಬಿ) ಈ ಸವಾಲನ್ನು ಹೇಗೆ ಎದುರಿಸಬಹುದು?

20 ಇನ್ನು ಕೆಲವು ತಾಯಂದಿರಿಗೆ ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನು ತೋರಿಸಲು ಅಥವಾ ವ್ಯಕ್ತಪಡಿಸಲು ಕಷ್ಟವಾಗುತ್ತದೆ. (ತೀತ 2:3, 4) ಕಾರಣ, ಆ ತಾಯಂದಿರು ಚಿಕ್ಕವರಿದ್ದಾಗ ಅವರ ಹೆತ್ತವರು ಅವರೊಂದಿಗೆ ಆಪ್ತರಾಗಿ ನಡಕೊಂಡಿಲ್ಲದಿರಬಹುದು. ನಿಮ್ಮ ಪರಿಸ್ಥಿತಿಯೂ ಹೀಗೇ ಇದ್ದರೆ, ನಿಮ್ಮ ಹೆತ್ತವರು ಮಾಡಿದ ತಪ್ಪನ್ನೇ ನೀವು ಮಾಡಬೇಕಂತೇನಿಲ್ಲ. ಯೆಹೋವನಿಗೆ ಅಧೀನರಾಗಿ ಆತನ ಇಷ್ಟದ ಪ್ರಕಾರ ನಡೆಯಲು ಬಯಸುವುದಾದರೆ ನೀವು ನಿಮ್ಮ ಮಕ್ಕಳ ಮೇಲಿರುವ ಪ್ರೀತಿಯನ್ನು ನಿಮ್ಮ ನಡೆನುಡಿಯಲ್ಲಿ ತೋರಿಸಲು ಕಲಿಯಬೇಕಾಗುತ್ತದೆ. ನಿಮ್ಮ ಭಾವನೆ, ಯೋಚನೆ ಮತ್ತು ಕ್ರಿಯೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ ಅಸಾಧ್ಯವೇನಲ್ಲ. ಈ ಬದಲಾವಣೆ ಮಾಡಿಕೊಂಡರೆ ನಿಮಗೂ ನಿಮ್ಮ ಕುಟುಂಬದವರಿಗೂ ತುಂಬ ಸಂತೋಷವಾಗುತ್ತದೆ.

ಯೆಹೋವನಿಗೆ ಮನಸಾರೆ ಅಧೀನರಾಗಿ

21-22. ಯೆಶಾಯ 65:13, 14​ರ ಪ್ರಕಾರ ಯೆಹೋವನಿಗೆ ಮನಸಾರೆ ಅಧೀನರಾಗುವುದರಿಂದ ಯಾವ ಪ್ರಯೋಜನವಿದೆ?

21 ಯೆಹೋವನಿಗೆ ಮನಸಾರೆ ಅಧೀನರಾಗುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂದು ರಾಜ ದಾವೀದನಿಗೆ ಗೊತ್ತಿತ್ತು. ಆತನು ಬರೆದದ್ದು: “ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ. ಅವುಗಳ ಮೂಲಕ ನಿನ್ನ ದಾಸನಿಗೆ ಎಚ್ಚರಿಕೆಯಾಗುತ್ತದೆ; ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ.” (ಕೀರ್ತ. 19:8, 11) ಇಂದು ಕೂಡ ಯೆಹೋವನ ನಿಯಮಗಳಿಗೆ ಮನಸಾರೆ ಅಧೀನರಾಗುವವರ ಮತ್ತು ಆತನ ಸಲಹೆಯನ್ನು ತಿರಸ್ಕರಿಸುವವರ ಮಧ್ಯೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು. ಯೆಹೋವನಿಗೆ ಮನಸಾರೆ ಅಧೀನರಾಗುವವರು “ಹೃದಯಾನಂದದಿಂದ ಹರ್ಷಧ್ವನಿಗೈಯುವರು.”ಯೆಶಾಯ 65:13, 14 ಓದಿ.

22 ಹಿರಿಯರು, ತಂದೆ-ತಾಯಂದಿರು ಯೆಹೋವನಿಗೆ ಮನಸಾರೆ ಅಧೀನರಾದರೆ ಅವರ ಜೀವನ ಚೆನ್ನಾಗಿರುತ್ತದೆ ಮಾತ್ರವಲ್ಲ, ಅವರ ಕುಟುಂಬದವರೂ ಸಂತೋಷವಾಗಿರುತ್ತಾರೆ ಮತ್ತು ಸಭೆಯಲ್ಲೂ ಐಕ್ಯತೆಯಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತಾರೆ. (ಜ್ಞಾನೋ. 27:11) ಇದಕ್ಕಿಂತ ಹೆಚ್ಚು ಖುಷಿ ಕೊಡುವ ವಿಷಯ ಇನ್ನೇನಿದೆ?

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

^ ಪ್ಯಾರ. 5 ನಾವು ಯಾಕೆ ಯೆಹೋವನಿಗೆ ಅಧೀನರಾಗಬೇಕು ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಜೊತೆಗೆ ಹಿರಿಯರು, ತಂದೆ-ತಾಯಂದಿರು ಮತ್ತು ಸ್ವಲ್ಪಮಟ್ಟಿಗೆ ಅಧಿಕಾರ ಇರುವ ಎಲ್ಲರೂ ದೇಶಾಧಿಪತಿಯಾಗಿದ್ದ ನೆಹೆಮೀಯ, ರಾಜ ದಾವೀದ ಮತ್ತು ಯೇಸುವಿನ ತಾಯಿ ಮರಿಯಳಿಂದ ಏನು ಕಲಿಯಬಹುದು ಎಂದು ತಿಳಿಯಲಿದ್ದೇವೆ.

^ ಪ್ಯಾರ. 1 ಪದ ವಿವರಣೆ: ಕೆಲವರಿಗೆ ವಿಧೇಯತೆ ತೋರಿಸಲು ಇಷ್ಟವಿಲ್ಲದಿದ್ದರೂ ಬೇರೆಯವರ ಬಲವಂತದಿಂದಾಗಿ ಅದನ್ನು ತೋರಿಸಬೇಕಾಗುತ್ತದೆ. ಅಂಥವರಿಗೆ ಅಧೀನತೆ ಅಥವಾ ವಿಧೇಯತೆ ಅನ್ನುವುದು ಅಷ್ಟೊಂದು ಒಳ್ಳೇ ವಿಷಯ ಅಲ್ಲ ಅಂತ ಅನಿಸುತ್ತದೆ. ಆದರೆ ದೇವರ ಸೇವಕರಾದ ನಾವು ಯೆಹೋವನಿಗೆ ಮನಸಾರೆ ಅಧೀನರಾಗುತ್ತೇವೆ. ಹಾಗಾಗಿ ನಾವು ಆ ರೀತಿ ಯೋಚಿಸಲ್ಲ.

^ ಪ್ಯಾರ. 7 ಹೆಸರನ್ನು ಬದಲಾಯಿಸಲಾಗಿದೆ.

^ ಪ್ಯಾರ. 62 ಚಿತ್ರ ವಿವರಣೆ: ನೆಹೆಮೀಯನು ಯೆರೂಸಲೇಮಿನ ಗೋಡೆ ಕಟ್ಟಲು ಸಹಾಯ ಮಾಡಿದಂತೆ, ರಾಜ್ಯ ಸಭಾಗೃಹದಲ್ಲಿ ಒಬ್ಬ ಹಿರಿಯನು ತನ್ನ ಮಗನೊಂದಿಗೆ ಕೆಲಸ ಮಾಡುತ್ತಿದ್ದಾನೆ.

^ ಪ್ಯಾರ. 64 ಚಿತ್ರ ವಿವರಣೆ: ಒಬ್ಬ ತಂದೆ ತನ್ನ ಕುಟುಂಬದ ಜೊತೆ ಯೆಹೋವನಿಗೆ ಮನಬಿಚ್ಚಿ ಪ್ರಾರ್ಥಿಸುತ್ತಿದ್ದಾನೆ.

^ ಪ್ಯಾರ. 66 ಚಿತ್ರ ವಿವರಣೆ: ಒಬ್ಬ ಹುಡುಗನು ಮನೆಯಲ್ಲಿ ಕೆಲಸ ಮಾಡದೆ, ಶಾಲೆಯ ಹೋಮ್‌ವರ್ಕ್‌ ಮಾಡದೆ ವಿಡಿಯೋ ಗೇಮ್‌ ಆಡುತ್ತಿದ್ದಾನೆ. ಕೆಲಸದಿಂದ ಸುಸ್ತಾಗಿ ಬಂದಿರೋ ತಾಯಿ ಕೋಪ ಮಾಡಿಕೊಳ್ಳದೆ, ಕಿರಿಚಾಡದೆ ಶಿಸ್ತು ಕೊಡುತ್ತಿದ್ದಾಳೆ.