ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 37

“ಕೈದೆಗೆಯಬೇಡ”

“ಕೈದೆಗೆಯಬೇಡ”

“ಮುಂಜಾನೆ ಬೀಜ ಬಿತ್ತು, ಸಂಜೆಯ ತನಕ ಕೈದೆಗೆಯಬೇಡ.”—ಪ್ರಸಂ. 11:6.

ಗೀತೆ 98 ರಾಜ್ಯದ ಬೀಜವನ್ನು ಬಿತ್ತುವುದು

ಕಿರುನೋಟ *

1-2. ಪ್ರಸಂಗಿ 11:6 ನೇ ವಚನಕ್ಕೂ ಸಾರೋ ಕೆಲ್ಸಕ್ಕೂ ಏನು ಸಂಬಂಧ?

ಕೆಲವು ದೇಶಗಳಲ್ಲಿ ಸುವಾರ್ತೆ ಸಾರಿದಾಗ ಜನ್ರು ಆಸಕ್ತಿಯಿಂದ ಕೇಳಿಸಿಕೊಳ್ತಾರೆ. ಅವ್ರು ಇದನ್ನ ಕೇಳ್ಸಿಕೊಳ್ಳೋಕೆ ತುಂಬ ಸಮ್ಯದಿಂದ ಕಾಯ್ತಿರ್ತಾರೆ. ಆದ್ರೆ ಇನ್ನು ಕೆಲ್ವು ದೇಶಗಳಲ್ಲಿ ಜನ್ರು ದೇವ್ರ ಬಗ್ಗೆ ಆಗ್ಲಿ, ಬೈಬಲ್‌ ಬಗ್ಗೆಯಾಗ್ಲಿ ಅಷ್ಟೇನೂ ಆಸಕ್ತಿ ತೋರ್ಸಲ್ಲ. ನೀವಿರೋ ಸ್ಥಳದಲ್ಲಿ ಜನ ಹೇಗೆ ಪ್ರತಿಕ್ರಿಯಿಸ್ತಾರೆ? ಜನ ಹೇಗೆ ಪ್ರತಿಕ್ರಿಯಿಸೋದಾದ್ರೂ ಯೆಹೋವ ಸಾಕು ಅನ್ನೋವರೆಗೆ ನಾವು ಸಾರೋ ಕೆಲ್ಸವನ್ನ ಮುಂದುವರಿಸ್ತಾ ಹೋಗ್ಬೇಕು. ಅದೇ ಆತನ ಬಯಕೆ.

2 ಸಾರೋ ಕೆಲ್ಸ ಯಾವಾಗ ಮುಗೀಬೇಕು ಅಂತ ಯೆಹೋವ ಈಗಾಗಲೇ ನಿರ್ಧರಿಸಿದ್ದಾನೆ. ಅದ್ರ ನಂತ್ರ ‘ಅಂತ್ಯ ಬರಲಿದೆ.’ (ಮತ್ತಾ. 24:14, 36) ಅಲ್ಲಿ ತನಕ ನಾವು ಯೆಹೋವನು ಕೊಟ್ಟ “ಕೈದೆಗೆಯಬೇಡ” * ಅನ್ನೋ ಆಜ್ಞೆಯನ್ನ ಪಾಲಿಸಬೇಕು. ಅದನ್ನ ಹೇಗೆ ಮಾಡೋದು ಅಂತ ನೋಡೋಣ.—ಪ್ರಸಂಗಿ 11:6 ಓದಿ.

3. ಈ ಲೇಖನದಲ್ಲಿ ನಾವೇನನ್ನ ಕಲೀತೇವೆ?

3 ಪ್ರಚಾರಕರಾಗಿ ಚೆನ್ನಾಗಿ ಸುವಾರ್ತೆ ಸಾರಲು ಸಹಾಯ ಮಾಡೋ ನಾಲ್ಕು ವಿಷ್ಯಗಳನ್ನ ಹಿಂದಿನ ಲೇಖನದಲ್ಲಿ ನೋಡಿದ್ವಿ. (ಮತ್ತಾ. 4: 19) ನಾವು ಎಂಥ ಪರಿಸ್ಥಿತಿಯಲ್ಲೂ ಸಾರುತ್ತಾ ಇರೋ ನಮ್ಮ ದೃಢಸಂಕಲ್ಪವನ್ನ ಬಲಪಡಿಸಲು ಮಾಡಬೇಕಾದ ಮೂರು ವಿಷ್ಯಗಳನ್ನ ಈ ಲೇಖನದಲ್ಲಿ ಚರ್ಚಿಸುತ್ತೇವೆ: (1) ನಮ್ಮ ಜೀವನದಲ್ಲಿ ಸಾರೋ ಕೆಲ್ಸಕ್ಕೆ ಮೊದಲ ಸ್ಥಾನ ಕೊಡಬೇಕು, (2) ತಾಳ್ಮೆ ತೋರಿಸಬೇಕು ಮತ್ತು (3) ನಂಬಿಕೆಯನ್ನ ಬಲಪಡಿಸಿಕೊಳ್ಳಬೇಕು. ಈ ಮೂರು ವಿಷ್ಯಗಳನ್ನ ಮಾಡೋದು ಯಾಕೆ ಪ್ರಾಮುಖ್ಯ ಅಂತನೂ ಕಲೀತೇವೆ.

ಸಾರೋ ಕೆಲ್ಸಕ್ಕೆ ಮೊದಲ ಸ್ಥಾನ ಕೊಡಿ

4. ಯೆಹೋವನು ನಮ್ಗೆ ಕೊಟ್ಟಿರೋ ಕೆಲ್ಸಕ್ಕೆ ನಾವ್ಯಾಕೆ ಮೊದಲನೇ ಸ್ಥಾನ ಕೊಡ್ಬೇಕು?

4 ಕಡೇ ದಿವಸಗಳಲ್ಲಿ ಏನೆಲ್ಲಾ ಆಗುತ್ತೆ, ಜನ ಯಾವ ವಿಷ್ಯಗಳಲ್ಲಿ ಬಿಝಿ ಆಗಿರುತ್ತಾರೆ ಅಂತ ಯೇಸು ಮುಂಚೆನೇ ಹೇಳಿದ್ದನು. ತನ್ನ ಶಿಷ್ಯರು ಸಹ ಸಾರೋ ಕೆಲ್ಸಕ್ಕಿಂತ ಹೆಚ್ಚಾಗಿ ಈ ವಿಷ್ಯಗಳಲ್ಲೇ ಬಿಝಿಯಾಗೋ ಸಾಧ್ಯತೆ ಇದೆ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೇ ಆತನು ಶಿಷ್ಯರಿಗೆ “ಸದಾ ಎಚ್ಚರವಾಗಿರಿ” ಅಂತ ಹೇಳಿದನು. (ಮತ್ತಾ. 24:42) ನೋಹನ ದಿನಗಳಲ್ಲಿ ಜನ್ರು ಎಚ್ಚರಿಕೆಯ ಸಂದೇಶಕ್ಕೆ ಕಿವಿಗೊಡಲಿಲ್ಲ. ಯಾಕಂದ್ರೆ ಅವ್ರು ಬೇರೆ ವಿಷ್ಯಗಳಿಗೆ ಹೆಚ್ಚು ಗಮನ ಕೊಟ್ಟಿದ್ರು. ನಾವು ಸಹ ಸಾರೋ ಕೆಲ್ಸಕ್ಕಿಂತ ಬೇರೆ ವಿಷ್ಯಗಳಿಗೆ ಹೆಚ್ಚಿನ ಗಮನ ಕೊಡೋ ಸಾಧ್ಯತೆ ಇದೆ. (ಮತ್ತಾ. 24:37-39; 2 ಪೇತ್ರ 2:5) ಅದಕ್ಕೇ ಯೆಹೋವನು ನಮ್ಗೆ ಕೊಟ್ಟಿರೋ ಕೆಲ್ಸಕ್ಕೆ ಮೊದಲನೇ ಸ್ಥಾನ ಕೊಡ್ಬೇಕು.

5. ಸುವಾರ್ತೆ ಎಷ್ಟು ವಿಸ್ತಾರವಾಗಿ ಸಾರಲಾಗುತ್ತೆ ಅನ್ನೋದನ್ನ ಅಪೊಸ್ತಲರ ಕಾರ್ಯಗಳು 1:6-8 ಹೇಗೆ ವಿವರಿಸುತ್ತೆ?

5 ಇವತ್ತು ನಾವು ದೇವರ ರಾಜ್ಯದ ಸುವಾರ್ತೆ ಸಾರೋ ಕೆಲ್ಸಕ್ಕೆ ಮೊದಲನೇ ಸ್ಥಾನ ಕೊಡೋದು ತುಂಬ ಪ್ರಾಮುಖ್ಯ. ತಾನು ತೀರಿಹೋದ ನಂತ್ರನೂ ಶಿಷ್ಯರು ಸಾರೋ ಕೆಲ್ಸವನ್ನ ಮುಂದುವರಿಸ್ತಾರೆ ಮತ್ತು ತನಗಿಂತ ಹೆಚ್ಚು ಸಾರುತ್ತಾರೆ ಅಂತ ಯೇಸು ಮೊದಲೇ ಹೇಳಿದ್ನು. (ಯೋಹಾ. 14:12) ಯೇಸು ತೀರಿಹೋದ ನಂತ್ರ ಆತನ ಶಿಷ್ಯರಲ್ಲಿ ಕೆಲವ್ರು ವಾಪಸ್‌ ಮೀನು ಹಿಡಿಯೋಕೆ ಹೋದ್ರು. ಹೀಗೆ ಮೀನು ಹಿಡಿತಿದ್ದಾಗ ಒಂದು ಸಲ ಅವ್ರಿಗೆ ಮೀನೇ ಸಿಗಲಿಲ್ಲ. ಆಗ, ಪುನರುತ್ಥಾನವಾಗಿದ್ದ ಯೇಸು ಅದ್ಭುತಮಾಡಿ ಅವ್ರಿಗೆ ತುಂಬ ಮೀನನ್ನು ಹಿಡಿಯೋಕೆ ಸಹಾಯ ಮಾಡಿದನು. ಆ ಸಂದರ್ಭದಲ್ಲೇ ಆತನು, ಬೇರೆ ಯಾವ್ದೇ ಕೆಲ್ಸಕ್ಕಿಂತ ಸಾರೋ ಕೆಲ್ಸ ಮತ್ತು ಶಿಷ್ಯರನ್ನಾಗಿ ಮಾಡೋ ಕೆಲ್ಸ ಹೆಚ್ಚು ಪ್ರಾಮುಖ್ಯ ಅಂತ ಅವ್ರಿಗೆ ಅರ್ಥಮಾಡಿಸಿದನು. (ಯೋಹಾ. 21:15-17) ಯೇಸು ಸ್ವರ್ಗಕ್ಕೆ ಹೋಗೋ ಸ್ವಲ್ಪ ಮುಂಚೆ ತಾನು ಆರಂಭಿಸಿದ ಸಾರೋ ಕೆಲ್ಸವನ್ನ ತನ್ನ ಶಿಷ್ಯರು ಇಸ್ರಾಯೇಲಲ್ಲಿ ಮಾತ್ರವಲ್ಲ ದೂರದೂರದ ದೇಶಗಳಲ್ಲೂ ಮಾಡ್ತಾರೆ ಅಂತ ಹೇಳಿದ್ನು. (ಅಪೊಸ್ತಲರ ಕಾರ್ಯಗಳು 1:6-8 ಓದಿ.) ಇದಾಗಿ ಕೆಲ್ವು ವರ್ಷಗಳ ನಂತ್ರ ಯೇಸು ಅಪೊಸ್ತಲ ಯೋಹಾನನಿಗೆ ‘ಕರ್ತನ ದಿನದಲ್ಲಿ’ * ಏನೆಲ್ಲಾ ನಡಿಯುತ್ತೆ ಅಂತ ದರ್ಶನದಲ್ಲಿ ತೋರಿಸಿದನು. ಅದ್ರಲ್ಲಿ, ದೇವದೂತರ ಮಾರ್ಗದರ್ಶನದ ಕೆಳಗೆ ‘ನಿತ್ಯವಾದ ಸುವಾರ್ತೆಯು ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೆ ಸಾರಲ್ಪಡುವುದನ್ನ’ ಯೋಹಾನನು ನೋಡಿದ್ನು. (ಪ್ರಕ. 1:10; 14:6) ಇದ್ರಿಂದ ಯೆಹೋವ ಸಾಕು ಅನ್ನೋವರೆಗೆ ಈ ಸಾರೋ ಕೆಲ್ಸವನ್ನ ನಾವು ಮಾಡ್ತಾ ಇರಬೇಕು ಅನ್ನೋದು ಸ್ವತಃ ಯೆಹೋವನ ಇಷ್ಟ ಅಂತ ಸ್ಪಷ್ಟವಾಗುತ್ತೆ.

6. ಯಾವುದರ ಬಗ್ಗೆ ಯೋಚಿಸಿದ್ರೆ ನಾವು ಜೀವನದಲ್ಲಿ ಸಾರೋ ಕೆಲ್ಸಕ್ಕೆ ಮೊದಲ್ನೇ ಸ್ಥಾನ ಕೊಡ್ತೇವೆ?

6 ಯೆಹೋವನು ನಮಗೋಸ್ಕರ ಏನೆಲ್ಲಾ ಮಾಡ್ತಿದ್ದಾನೆ ಅಂತ ಯೋಚಿಸ್ವಾಗ ಸಾರೋ ಕೆಲ್ಸಕ್ಕೆ ಮೊದಲ್ನೇ ಸ್ಥಾನ ಕೊಡ್ಬೇಕು ಅಂತ ನಮ್ಗೆ ಅನಿಸುತ್ತೆ. ಉದಾಹರಣೆಗೆ ಆತನು ನಮ್ಗೆ ಬೇಕಾದಷ್ಟು ಆಧ್ಯಾತ್ಮಿಕ ಆಹಾರ ಕೊಡ್ತಿದ್ದಾನೆ. ಮುದ್ರಿತ ರೂಪದಲ್ಲಿ, ಎಲೆಕ್ಟ್ರಾನಿಕ್‌ ರೂಪದಲ್ಲಿ ಸಾಹಿತ್ಯಗಳನ್ನ ಕೊಡ್ತಿದ್ದಾನೆ. ಆಡಿಯೋ, ವಿಡಿಯೋ ರೆಕಾರ್ಡಿಂಗ್‌ಗಳು ಮತ್ತು JW ಪ್ರಸಾರವನ್ನ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ನಮ್ಮ ಅಧಿಕೃತ ವೆಬ್‌ಸೈಟ್‌ ಈಗ ಸಾವಿರಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. (ಮತ್ತಾ. 24:45-47) ರಾಜಕೀಯ, ಧಾರ್ಮಿಕ, ಆರ್ಥಿಕ ವ್ಯವಸ್ಥೆಗಳು ಇವತ್ತು ಜನರ ಮಧ್ಯ ಒಡಕನ್ನ ತಂದಿದೆ. ಆದ್ರೆ ಲೋಕವ್ಯಾಪಕವಾಗಿ 80 ಲಕ್ಷಕ್ಕೂ ಹೆಚ್ಚಿನ ಯೆಹೋವನ ಸೇವಕರು ಒಂದೇ ಕುಟುಂಬದಂತೆ ಇದ್ದಾರೆ. ಉದಾಹರಣೆಗೆ 2019 ರ ಏಪ್ರಿಲ್‌ 19, ಶುಕ್ರವಾರದಂದು ಇಡೀ ಲೋಕದಲ್ಲಿರೋ ಎಲ್ಲಾ ಯೆಹೋವನ ಸಾಕ್ಷಿಗಳು ಆ ದಿನದ ವಚನ ಚರ್ಚಿಸೋ ವಿಡಿಯೋ ನೋಡಿದ್ರು. ಹೀಗೆ ಅವ್ರು ಐಕ್ಯವಾಗಿದ್ದಾರೆ ಅಂತ ತೋರಿಸಿಕೊಟ್ರು. ಆ ದಿನ ಸಂಜೆ 2,09,19,041 ಜನ ಯೇಸುವಿನ ಮರಣದ ಸ್ಮರಣೆಗೆ ಕೂಡಿ ಬಂದ್ರು. ಇದು ಆಧುನಿಕ ಸಮ್ಯದಲ್ಲಿ ನಡಿತಿರೋ ಅದ್ಭುತ ಅಂತನೇ ಹೇಳಬಹುದು. ಇದನ್ನ ನೋಡೋದು ಮತ್ತು ಇದ್ರಲ್ಲಿ ಭಾಗವಹಿಸೋದು ನಮ್ಗೆ ಸಿಕ್ಕ ವಿಶೇಷ ಅವಕಾಶ. ಈ ಅವಕಾಶದ ಬಗ್ಗೆ ಯೋಚಿಸ್ವಾಗ ರಾಜ್ಯದ ಕೆಲ್ಸಕ್ಕೆ ಮೊದಲ್ನೇ ಸ್ಥಾನ ಕೊಡ್ಲೇಬೇಕು ಅಂತ ನಮ್ಗೆ ಅನ್ಸುತ್ತೆ.

ಏನೇ ಆದ್ರೂ ಯೇಸು ಸತ್ಯದ ಬಗ್ಗೆ ಸಾಕ್ಷಿ ಕೊಡೋದ್ರಿಂದ ಹಿಂದೆ ಸರಿಲಿಲ್ಲ (ಪ್ಯಾರ 7 ನೋಡಿ)

7. ಸಾರೋ ಕೆಲ್ಸಕ್ಕೆ ಮೊದಲ್ನೇ ಸ್ಥಾನ ಕೊಡೋಕೆ ಯೇಸುವಿನ ಮಾದರಿ ಹೇಗೆ ಸಹಾಯ ಮಾಡುತ್ತೆ?

7 ಸಾರೋ ಕೆಲ್ಸಕ್ಕೆ ಯಾವಾಗ್ಲೂ ಮೊದಲ್ನೇ ಸ್ಥಾನ ಕೊಡಲು ಸಹಾಯ ಮಾಡೋ ಇನ್ನೊಂದು ವಿಷ್ಯ ಯೇಸುವಿನ ಮಾದರಿಯನ್ನ ಅನುಕರಿಸೋದೇ ಆಗಿದೆ. ಆತನು ಯಾವತ್ತೂ ಸಾರೋ ಕೆಲ್ಸಕ್ಕೆ ಕೊಡಬೇಕಿರೋ ಸ್ಥಾನವನ್ನ ಬೇರೆ ವಿಷಯಗಳಿಗೆ ಕೊಡಲಿಲ್ಲ. (ಯೋಹಾ. 18:37) ಸೈತಾನ “ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ಕೊಡ್ತೀನಂತ ಹೇಳಿದಾಗ್ಲೂ ಯೇಸು ಮರುಳಾಗಲಿಲ್ಲ. ಜನ ಆತನನ್ನ ರಾಜನಾಗಿ ಮಾಡ್ತೀವಿ ಅಂದಾಗ್ಲೂ ಆ ಬಲೆಗೆ ಬೀಳಲಿಲ್ಲ. (ಮತ್ತಾ. 4:8, 9; ಯೋಹಾ. 6:15) ಹಣ ಮಾಡೋ ಆಸೆಗೂ ಬಲಿ ಬೀಳಲಿಲ್ಲ. ತೀವ್ರ ವಿರೋಧ ಬಂದಾಗ್ಲೂ ಭಯಪಟ್ಟು ಹಿಂಜರಿಲಿಲ್ಲ. (ಲೂಕ 9:58; ಯೋಹಾ. 8:59) ‘ಬಳಲದೇ ಮತ್ತು ನಿರುತ್ಸಾಹಗೊಳ್ಳದೇ’ ಇರಬೇಕಂದ್ರೆ ಯೇಸುವಿನ ಮಾದರಿಯನ್ನ ಅನುಕರಿಸಬೇಕು ಅಂತ ಅಪೊಸ್ತಲ ಪೌಲ ಕ್ರೈಸ್ತರಿಗೆ ಉತ್ತೇಜಿಸಿದನು. (ಇಬ್ರಿ. 12:3) ನಾವು ಈ ಸಲಹೆಯನ್ನ ನೆನಪಲ್ಲಿಡೋದಾದ್ರೆ ಯಾವ್ದೇ ಪರೀಕ್ಷೆ ಬಂದ್ರೂ ಸಾರೋ ಕೆಲ್ಸಕ್ಕೆ ನಮ್ಮ ಜೀವನದಲ್ಲಿ ಯಾವಾಗ್ಲೂ ಮೊದಲ್ನೇ ಸ್ಥಾನ ಕೊಡ್ತೇವೆ.

ತಾಳ್ಮೆ ತೋರಿಸಿ

8. (ಎ) ತಾಳ್ಮೆ ಅಂದರೇನು? (ಬಿ) ನಾವದನ್ನ ಈಗ ತೋರಿಸೋದು ಯಾಕೆ ಪ್ರಾಮುಖ್ಯ?

8 ಒಂದು ಪರಿಸ್ಥಿತಿ ಬದಲಾಗೋವರೆಗೆ ಸಮಾಧಾನದಿಂದ ಕಾಯೋ ಸಾಮರ್ಥ್ಯನೇ ತಾಳ್ಮೆ. ನಾವು ಈ ಲೋಕದಲ್ಲಿರೋ ಕೆಟ್ಟ ವಿಷ್ಯಗಳು ಅಂತ್ಯ ಆಗೋದಕ್ಕೆ ಕಾಯ್ತಿರಬಹುದು ಅಥ್ವಾ ತುಂಬ ಸಮ್ಯದಿಂದ ನಮ್ಮ ನಿರೀಕ್ಷೆ ನೆರವೇರೋದಕ್ಕೋಸ್ಕರ ಎದುರು ನೋಡ್ತಿರಬಹುದು. ಆದ್ರೆ ಇದಕ್ಕೆ ನಮ್ಗೆ ತಾಳ್ಮೆ ಬೇಕು. ಪ್ರವಾದಿ ಹಬಕ್ಕೂಕ ಸಹ ಯೆಹೂದದಲ್ಲಿದ್ದ ಹಿಂಸೆ ಯಾವಾಗಪ್ಪಾ ಕೊನೆಯಾಗುತ್ತೆ ಅಂತ ಕಾಯ್ತಾ ಇದ್ದನು. (ಹಬ. 1:2) ಯೇಸುವಿನ ಶಿಷ್ಯರು ಸಹ ದೇವ್ರ ರಾಜ್ಯ “ಕೂಡಲೇ ಪ್ರತ್ಯಕ್ಷವಾಗಿ” ತಮ್ಮನ್ನ ರೋಮನ್ನರ ದಬ್ಬಾಳಿಕೆಯಿಂದ ರಕ್ಷಿಸುತ್ತೆ ಅಂತ ಅಂದುಕೊಂಡಿದ್ರು. (ಲೂಕ 19:11) ನಾವು ಸಹ ದೇವ್ರ ರಾಜ್ಯ ಈಗ ಇರೋ ಕೆಟ್ಟತನವನ್ನ ತೆಗೆದುಹಾಕಿ ನೀತಿಯ ಆಳ್ವಿಕೆಯನ್ನ ತರೋ ದಿನಕ್ಕಾಗಿ ಕಾಯ್ತಾ ಇದ್ದೀವಿ. (2 ಪೇತ್ರ 3:13) ಆದ್ರೆ ನಾವು ಯೆಹೋವ ನೇಮಿಸಿರೋ ಸಮ್ಯದ ವರೆಗೆ ಕಾಯಬೇಕು ಮತ್ತು ತಾಳ್ಮೆಯಿಂದಿರಬೇಕು. ತಾಳ್ಮೆ ತೋರಿಸೋಕೆ ಯೆಹೋವನು ನಮಗೆ ಹೇಗೆಲ್ಲಾ ಕಲಿಸ್ತಾನೆ ಅಂತ ಈಗ ನೋಡೋಣ.

9. ಯೆಹೋವನು ತಾಳ್ಮೆ ತೋರಿಸ್ತಾನೆ ಅಂತ ಹೇಗೆ ಹೇಳಬಹುದು?

9 ತಾಳ್ಮೆ ತೋರಿಸೋದ್ರಲ್ಲಿ ಯೆಹೋವನೇ ಅತ್ಯುತ್ತಮ ಮಾದರಿ. ಆತನು ನೋಹನಿಗೆ ನಾವೆಯನ್ನ ಕಟ್ಟೋಕೆ ಮತ್ತು ಪ್ರಳಯದ ಬಗ್ಗೆ ಎಚ್ಚರಿಕೆ ಕೊಡೋಕೆ ಸಾಕಷ್ಟು ಸಮ್ಯ ಕೊಟ್ಟನು. (2 ಪೇತ್ರ 2:5; 1 ಪೇತ್ರ 3:20) ಸೊದೋಮ್‌ ಗೊಮೋರದಲ್ಲಿದ್ದ ಕೆಟ್ಟ ಜನ್ರನ್ನ ನಾಶಮಾಡುವ ಯೆಹೋವನ ನಿರ್ಣಯದ ಬಗ್ಗೆ ಅಬ್ರಹಾಮನು ಪ್ರಶ್ನೆ ಮಾಡಿದಾಗ ಆತನು ತಾಳ್ಮೆಯಿಂದ ಕೇಳಿಸಿಕೊಂಡನು. (ಆದಿ. 18:20-33) ತನಗೆ ನಂಬಿಗಸ್ತರಾಗಿರದ ಇಸ್ರಾಯೇಲ್ಯರ ಜೊತೆ ಯೆಹೋವನು ನೂರಾರು ವರ್ಷ ತಾಳ್ಮೆಯಿಂದ ನಡ್ಕೊಂಡನು. (ನೆಹೆ. 9:30, 31) ಇವತ್ತು ಸಹ ಯೆಹೋವನು ಯಾರನ್ನೆಲ್ಲಾ ಸೆಳೆದಿದ್ದಾನೋ ಅವ್ರು ‘ಪಶ್ಚಾತಾಪ ಹೊಂದಲಿಕ್ಕಾಗಿ’ ಸಾಕಷ್ಟು ಸಮ್ಯ ಕೊಟ್ಟು ತಾಳ್ಮೆ ತೋರಿಸ್ತಿದ್ದಾನೆ. (2 ಪೇತ್ರ 3:9; ಯೋಹಾ. 6:44; 1 ತಿಮೊ. 2:3, 4) ಯೆಹೋವನೇ ಇಷ್ಟೊಂದು ತಾಳ್ಮೆ ತೋರಿಸ್ತಿದ್ದಾನೆ ಅಂದಮೇಲೆ ನಾವೂ ಸಾರುವಾಗ ಮತ್ತು ಕಲಿಸುವಾಗ ತಾಳ್ಮೆ ತೋರಿಸಬೇಕಲ್ವಾ! ಆತನು ನಮ್ಗೆ ತನ್ನ ವಾಕ್ಯದಲ್ಲಿರೋ ಉದಾಹರಣೆಗಳ ಮೂಲಕ ಸಹ ತಾಳ್ಮೆಯನ್ನ ಕಲಿಸ್ತಾನೆ.

ತುಂಬ ಕಷ್ಟಪಟ್ಟು ಕೆಲ್ಸ ಮಾಡೋ ರೈತ ತಾಳ್ಮೆ ತೋರಿಸೋ ತರಾನೇ ನಾವು ಸಹ ನಮ್ಮ ಪ್ರಯತ್ನ ಹಾಕಿದ ಮೇಲೆ ಪ್ರತಿಫಲಕ್ಕಾಗಿ ತಾಳ್ಮೆಯಿಂದ ಕಾಯ್ತೇವೆ (ಪ್ಯಾರ 10-11 ನೋಡಿ)

10. ಯಾಕೋಬ 5:7, 8 ರಲ್ಲಿರೋ ರೈತನ ಉದಾಹರಣೆಯಿಂದ ನಾವೇನು ಕಲಿಬಹುದು?

10 ಯಾಕೋಬ 5:7, 8 ಓದಿ. ತಾಳ್ಮೆ ತೋರಿಸೋದು ಹೇಗೆ ಅಂತ ರೈತನ ಉದಾಹರಣೆಯಿಂದ ಕಲಿಬಹುದು. ಕೆಲ್ವು ಗಿಡಗಳು ಬೇಗನೆ ಬೆಳೆದು ಬಿಡುತ್ತವೆ. ಆದ್ರೆ ಇನ್ನು ಕೆಲ್ವು ಗಿಡಗಳು ಉದಾಹರಣೆಗೆ ಹಣ್ಣು ಬಿಡೋ ಗಿಡಗಳು ಬೆಳೆದು ಮರವಾಗೋಕೆ ತುಂಬಾ ಸಮ್ಯ ಹಿಡಿಯುತ್ತೆ. ಸಾಮಾನ್ಯವಾಗಿ ಇಸ್ರಾಯೇಲಿನಲ್ಲಿ ಬೆಳೆ ಬೆಳೆದು ಫಲ ಕೊಡೋಕೆ ಆರು ತಿಂಗಳು ಹಿಡಿತಿತ್ತು. ಮೊಟ್ಟಮೊದಲ ಮಳೆ ಬಂದಾಗ ರೈತರು ಬೀಜ ಬಿತ್ತುತ್ತಿದ್ರು. ವಸಂತ ಕಾಲದಲ್ಲಿ ಕೊನೇ ಮಳೆ ಬರುವಷ್ಟರಲ್ಲಿ ಫಲ ಬಿಡ್ತಿತ್ತು. (ಮಾರ್ಕ 4:28) ರೈತರಂತೆ ನಾವು ಸಹ ತಾಳ್ಮೆಯನ್ನ ತೋರಿಸಬೇಕು. ಆದ್ರೆ ಈ ತರ ತಾಳ್ಮೆ ತೋರಿಸೋದು ಅಷ್ಟು ಸುಲಭವಲ್ಲ.

11. ಸೇವೆಯಲ್ಲಿ ತಾಳ್ಮೆ ತೋರಿಸೋದು ಯಾಕೆ ಪ್ರಾಮುಖ್ಯ?

11 ಪ್ರಯತ್ನ ಹಾಕಿದ ಕೂಡ್ಲೇ ಪ್ರತಿಫಲ ಸಿಗಬೇಕಂತ ನಾವು ನಿರೀಕ್ಷಿಸ್ತೇವೆ. ಆದ್ರೆ ನಮ್ಮ ತೋಟ ಚೆನ್ನಾಗಿ ಫಲಬಿಡಬೇಕಂದ್ರೆ ನಾವದಕ್ಕೆ ತುಂಬ ಸಮ್ಯ ಆರೈಕೆ ಮಾಡ್ಬೇಕು. ಮಣ್ಣು ಅಗೀಬೇಕು, ಗಿಡ ನೆಡ್ಬೇಕು, ಕಳೆ ಕೀಳಬೇಕು, ನೀರು ಹಾಕ್ಬೇಕು. ಅದೇ ತರ ಶಿಷ್ಯರನ್ನಾಗಿ ಮಾಡೋ ಕೆಲ್ಸದಲ್ಲೂ ತುಂಬ ಸಮ್ಯ ಪ್ರಯತ್ನ ಹಾಕ್ಬೇಕಾಗುತ್ತೆ. ಪಕ್ಷಪಾತ ಮಾಡ್ದೇ ಇರೋಕೆ ಮತ್ತು ಪ್ರೀತಿಯಿಂದ ನಡ್ಕೊಳ್ಳೋಕೆ ಬೈಬಲ್‌ ವಿದ್ಯಾರ್ಥಿಗೆ ಕಲಿಸ್ಬೇಕಂದ್ರೆ ನಮ್ಗೆ ತುಂಬ ಸಮ್ಯ ಹಿಡಿಯುತ್ತೆ. ಜನ ನಾವು ಹೇಳೋದನ್ನ ಕೇಳಿಸಿಕೊಳ್ದೇ ಇದ್ದಾಗ ನಿರುತ್ತೇಜನ ಆಗದೇ ಇರೋಕೆ ತಾಳ್ಮೆ ನಮ್ಗೆ ಸಹಾಯ ಮಾಡುತ್ತೆ. ಆದ್ರೆ ಜನ ನಾವು ಹೇಳೋದನ್ನ ಕೇಳಿಸಿಕೊಂಡಾಗ್ಲೂ ನಾವು ತಾಳ್ಮೆ ತೋರಿಸೋ ಅವಶ್ಯಕತೆ ಇರುತ್ತೆ. ಯಾಕಂದ್ರೆ ವಿದ್ಯಾರ್ಥಿ ನಂಬಿಕೆಯನ್ನ ಬೆಳೆಸಿಕೊಳ್ಳೋಕೆ ನಾವು ಬಲವಂತ ಮಾಡೋಕಾಗಲ್ಲ. ಯೇಸುವಿನ ಶಿಷ್ಯರೂ ಕೆಲವೊಮ್ಮೆ ಆತನು ಹೇಳಿದ ವಿಷ್ಯಗಳನ್ನ ಅರ್ಥಮಾಡ್ಕೊಳ್ಳೋಕೆ ಸಮ್ಯ ತಗೊಂಡ್ರು. (ಯೋಹಾ. 14:9) ನಾವು ನೆಡಬಹುದು, ನೀರೂ ಹಾಕ್ಬಹುದು ಆದ್ರೆ ಅದನ್ನ ಬೆಳೆಸೋದು ದೇವ್ರೇ ಅನ್ನೋದನ್ನ ಮನಸ್ಸಲ್ಲಿಡಬೇಕು.—1 ಕೊರಿಂ. 3:6.

12. ಸತ್ಯದಲ್ಲಿಲ್ಲದ ಸಂಬಂಧಿಕರಿಗೆ ಸಾಕ್ಷಿ ಕೊಡುವಾಗ ನಾವು ಹೇಗೆ ತಾಳ್ಮೆಯಿಂದ ನಡ್ಕೊಬೇಕು?

12 ಸತ್ಯದಲ್ಲಿಲ್ಲದ ನಮ್ಮ ಸಂಬಂಧಿಕರಿಗೆ ಸಾಕ್ಷಿ ಕೊಡುವಾಗ ತಾಳ್ಮೆ ತೋರಿಸೋಕೆ ತುಂಬ ಕಷ್ಟ ಆಗಬಹುದು. ಆದ್ರೆ ನಮಗೆ ಪ್ರಸಂಗಿ 3:7, 8 ರಲ್ಲಿರೋ ತತ್ವ ಸಹಾಯ ಮಾಡುತ್ತೆ. ಅಲ್ಲಿ ಹೇಳುತ್ತೆ: “ಸುಮ್ಮನಿರುವ ಸಮಯ, ಮಾತಾಡುವ ಸಮಯ . . . ಅಂತೂ ಒಂದೊಂದು ಕೆಲಸಕ್ಕೂ ತಕ್ಕ ಸಮಯ ಉಂಟು.” ನಾವು ನಮ್ಮ ಒಳ್ಳೇ ನಡತೆಯಿಂದಲೂ ಸಾಕ್ಷಿ ಕೊಡೋಕಾಗುತ್ತೆ. ಜೊತೆಗೆ, ಅವಕಾಶ ಸಿಕ್ಕಾಗೆಲ್ಲಾ ಯೆಹೋವನ ಬಗ್ಗೆ ಮಾತಾಡೋಕೆ ನಾವು ಸಿದ್ಧರಾಗಿ ಇರಬೇಕು. (1 ಪೇತ್ರ 3:1, 2) ನಾವು ಹುರುಪಿನಿಂದ ಸಾರಬೇಕು, ಕಲಿಸಬೇಕು ನಿಜ. ಆದ್ರೆ ಎಲ್ರ ಜೊತೆ, ನಮ್ಮ ಕುಟುಂಬ ಸದಸ್ಯರ ಜೊತೆ ಸಹ ಯಾವಾಗ್ಲೂ ತಾಳ್ಮೆಯಿಂದ ನಡ್ಕೊಬೇಕು.

13-14. ತಾಳ್ಮೆ ತೋರಿಸೋ ವಿಷ್ಯದಲ್ಲಿ ನಾವು ಯಾರ ಮಾದರಿಗಳನ್ನ ಅನುಕರಿಸಬಹುದು?

13 ಬೈಬಲ್‌ ಕಾಲದಲ್ಲಿದ್ದ ಮತ್ತು ನಮ್ಮೀ ಕಾಲದ ನಂಬಿಗಸ್ತ ಜನ್ರ ಉದಾಹರಣೆಯಿಂದ ನಾವು ತಾಳ್ಮೆ ತೋರಿಸಲು ಕಲಿಬಹುದು. ಹಬಕ್ಕೂಕ ಕೆಟ್ಟತನ ಯಾವಾಗ ಅಂತ್ಯ ಆಗುತ್ತೋ ಅಂತ ಎದುರುನೋಡ್ತಾ ಇದ್ದ. ಆದ್ರೂ ಅವನು ದೃಢ ಭರವಸೆಯಿಂದ, “ನನ್ನ ಕೋವರದಲ್ಲಿ ನಿಂತುಕೊಳ್ಳುವೆನು” ಅಂದ್ರೆ ‘ಕಾಯುವೆನು’ ಅಂತ ಹೇಳಿದನು. (ಹಬ. 2:1) ಅಪೊಸ್ತಲ ಪೌಲ ಸಹ ಸೇವೆಯನ್ನ ಪೂರ್ಣಗೊಳಿಸೋಕೆ ತಾನು ಬಯಸ್ತೀನಿ ಅಂತ ಹೇಳಿದ. ಆದ್ರೆ ಅವಸರ-ಅವಸರವಾಗಿ ಅದನ್ನ ಮುಗಿಸೋಕೆ ನೋಡಲಿಲ್ಲ. ಅವನು ತಾಳ್ಮೆಯಿಂದ “ಸುವಾರ್ತೆಗೆ ಕೂಲಂಕಷ ಸಾಕ್ಷಿ” ಕೊಡೋದನ್ನ ಮುಂದುವರಿಸಿದ.—ಅ. ಕಾ. 20:24.

14 ಗಿಲ್ಯಡ್‌ ಪದವಿ ಪಡೆದ ಒಬ್ಬ ದಂಪತಿಯ ಉದಾಹರಣೆಯನ್ನ ಗಮನಿಸಿ. ಅವರನ್ನ ತುಂಬ ಕಡಿಮೆ ಸಾಕ್ಷಿಗಳಿದ್ದ ಒಂದು ದೇಶಕ್ಕೆ ನೇಮಿಸಲಾಯ್ತು. ಅಲ್ಲಿನ ಹೆಚ್ಚಿನ ಜನ್ರು ಕ್ರೈಸ್ತರಾಗಿರಲಿಲ್ಲ ಮತ್ತು ಹೆಚ್ಚಿನವ್ರು ಬೈಬಲ್‌ ಬಗ್ಗೆ ಕಲಿಯೋಕೆ ಆಸಕ್ತಿನೂ ತೋರಿಸ್ತಿರಲಿಲ್ಲ. ಆದ್ರೆ ಈ ದಂಪತಿಯ ಜೊತೆಯಲ್ಲಿ ಪದವಿ ಪಡೆದ ಬೇರೆ ಸಹೋದರ ಸಹೋದರಿಯರು ತಾವು ಹೋದಲ್ಲಿ ಅನೇಕ ಬೈಬಲ್‌ ಸ್ಟಡಿಗಳನ್ನ ಮಾಡ್ತಿರೋದ್ರ ಬಗ್ಗೆ ಹೇಳ್ತಾ ಇದ್ರು. ಈ ದಂಪತಿ ತಮ್ಮ ಟೆರಿಟೊರಿಯಲ್ಲಿ ಪ್ರಗತಿ ಇಲ್ಲದಿದ್ರೂ ತಾಳ್ಮೆಯಿಂದ ಸೇವೆ ಮಾಡೋದನ್ನ ಮುಂದುವರಿಸಿದ್ರು. ಅವ್ರು 8 ವರ್ಷ ಸಾರಿದ ಮೇಲೆ ಅವರ ಬೈಬಲ್‌ ವಿದ್ಯಾರ್ಥಿಗಳಲ್ಲಿ ಒಬ್ರು ದೀಕ್ಷಾಸ್ನಾನ ತಗೊಂಡ್ರು. ನಾವೀಗ ನೋಡಿದ ಹಿಂದಿನ ಕಾಲದ ಮತ್ತು ಈಗಿನ ಸಮಯದ ಉದಾಹರಣೆಗಳಿಂದ ಏನು ಕಲಿಬಹುದು? ಈ ನಂಬಿಗಸ್ತ ಜನ್ರು ಹುರುಪನ್ನ ಕಳಕೊಳ್ಳಲಿಲ್ಲ ಅಥವಾ ಕೈದೆಗೆಯಲಿಲ್ಲ. ಅವರು ತಾಳ್ಮೆ ತೋರಿಸಿದ್ದಕ್ಕಾಗಿ ಯೆಹೋವನು ಅವ್ರನ್ನ ಆಶೀರ್ವದಿಸಿದನು. ಹೀಗೆ ‘ಯಾರು ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನ ಬಾಧ್ಯತೆಯಾಗಿ ಹೊಂದುತ್ತಾರೋ ಅವರನ್ನ ನಾವು ಅನುಕರಿಸೋಣ.’—ಇಬ್ರಿ. 6:10- 12.

ನಂಬಿಕೆ ಬಲಪಡಿಸಿಕೊಳ್ಳಿ

15. ನಮ್ಮಿಂದಾದಷ್ಟು ಹೆಚ್ಚು ಜನ್ರಿಗೆ ಸಾರಬೇಕಂತ ನಾವು ಯಾಕೆ ಬಯಸುತ್ತೇವೆ ಅನ್ನೋದಕ್ಕೆ ಒಂದು ಕಾರಣ ಕೊಡಿ.

15 ನಾವು ಸಾರೋ ಸಂದೇಶ ನಿಜ ಅಂತ ನಮ್ಗೆ ನಂಬಿಕೆ ಇದೆ. ಅದಕ್ಕೇ ನಮ್ಮಿಂದಾದಷ್ಟು ಹೆಚ್ಚು ಜನ್ರಿಗೆ ಅದನ್ನ ತಿಳಿಸಬೇಕು ಅಂತ ನಾವು ಬಯಸ್ತೇವೆ. ದೇವ್ರ ವಾಕ್ಯದಲ್ಲಿರೋ ವಾಗ್ದಾನಗಳು ನಿಜ ಆಗುತ್ತೆ ಅನ್ನೋ ಭರವಸೆ ನಮಗಿದೆ. (ಕೀರ್ತ. 119:42; ಯೆಶಾ. 40:8) ಬೈಬಲಲ್ಲಿ ಹೇಳಿರೋ ಪ್ರವಾದನೆಗಳು ಈಗ ನೆರವೇರುತ್ತಿರೋದನ್ನ ನಾವು ಕಣ್ಣಾರೆ ನೋಡಿದ್ದೇವೆ. ಬೈಬಲಲ್ಲಿರೋ ಸಲಹೆಗಳನ್ನ ಜನ್ರು ಅನ್ವಯಿಸಿದಾಗ ಅವ್ರ ಜೀವ್ನ ಉತ್ತಮವಾಗಿರೋದನ್ನ ನಾವು ನೋಡಿದ್ದೇವೆ. ಈ ಆಧಾರಗಳು ದೇವ್ರ ರಾಜ್ಯದ ಸುವಾರ್ತೆಯನ್ನ ಎಲ್ರೂ ಕೇಳಿಸಿಕೊಳ್ಳೋದು ತುಂಬ ಅಗತ್ಯ ಅನ್ನೋ ನಮ್ಮ ನಂಬಿಕೆಯನ್ನ ಹೆಚ್ಚಿಸುತ್ತೆ.

16. ಕೀರ್ತನೆ 46:1-3 ರ ಪ್ರಕಾರ ನಾವು ಸುವಾರ್ತೆ ಸಾರೋಕೆ ಯೆಹೋವನ ಮೇಲೆ ನಮ್ಗಿರೋ ನಂಬಿಕೆ ಕಾರಣ ಅಂತ ಹೇಗೆ ಹೇಳಬಹುದು? ಮತ್ತು ಯೇಸು ಮೇಲಿರೋ ನಂಬಿಕೆ ನಮ್ಗೆ ಸಾರೋಕೆ ಹೇಗೆ ಸಹಾಯ ಮಾಡುತ್ತೆ?

16 ನಾವು ಸಾರೋ ಸಂದೇಶದ ಮೂಲನಾದ ಯೆಹೋವನ ಮೇಲೂ ನಮ್ಗೆ ನಂಬಿಕೆ ಇದೆ. ಆತನು ತನ್ನ ರಾಜ್ಯದ ರಾಜನಾಗಿ ನೇಮಿಸಿರೋ ಯೇಸು ಮೇಲೂ ನಮ್ಗೆ ನಂಬಿಕೆ ಇದೆ. (ಯೋಹಾ. 14:1) ನಮ್ಗೆ ಏನೇ ಆಗೋದಾದ್ರೂ ಯೆಹೋವ ಯಾವಾಗ್ಲೂ ನಮ್ಮ ಆಶ್ರಯವಾಗಿರುತ್ತಾನೆ ಮತ್ತು ಬಲ ಕೊಡ್ತಾನೆ. (ಕೀರ್ತನೆ 46:1-3 ಓದಿ.) ಜೊತೆಗೆ, ಯೆಹೋವನಿಂದ ಶಕ್ತಿ ಮತ್ತು ಅಧಿಕಾರ ಪಡ್ಕೊಂಡಿರೋ ಯೇಸು ಸ್ವರ್ಗದಿಂದ ಸಾರೋ ಕೆಲಸವನ್ನ ಮಾರ್ಗದರ್ಶಿಸ್ತಿದ್ದಾನೆ ಅನ್ನೋ ಭರವಸೆ ನಮಗಿದೆ.—ಮತ್ತಾ. 28:18- 20.

17. ನಾವು ಸಾರುತ್ತಾ ಇರೋದರ ಪ್ರಾಮುಖ್ಯತೆಯನ್ನ ತಿಳಿಸೋ ಉದಾಹರಣೆ ಕೊಡಿ.

17 ಯೆಹೋವ ನಮ್ಮ ಪ್ರಯತ್ನವನ್ನ ಆಶೀರ್ವದಿಸ್ತಾನೆ ಅನ್ನೋ ಭರವಸೆ ನಮಗಿದೆ. ಕೆಲವೊಮ್ಮೆ ಆತನು ನಾವು ನಿರೀಕ್ಷಿಸದ ರೀತಿಯಲ್ಲಿ ಆಶೀರ್ವದಿಸ್ತಾನೆ. (ಪ್ರಸಂ. 11:6) ಉದಾಹರಣೆಗೆ, ನಾವು ತಳ್ಳುಬಂಡಿಯಲ್ಲಿ ಮತ್ತು ಮೇಜಿನಲ್ಲಿ ಸಾಹಿತ್ಯಗಳನ್ನ ಇಟ್ಟಾಗ ಸಾವಿರಾರು ಜನ ಅದನ್ನ ನೋಡ್ತಾರೆ. ಈ ರೀತಿ ಸಾರೋದ್ರಿಂದ ಏನಾದ್ರೂ ಪ್ರತಿಫಲ ಸಿಗುತ್ತಾ? ಖಂಡಿತ. ನವೆಂಬರ್‌ 2014 ರ ನಮ್ಮ ರಾಜ್ಯ ಸೇವೆಯಲ್ಲಿ ಒಂದು ಅನುಭವ ಬಂದಿತ್ತು. ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಒಬ್ಬ ಯುವತಿಯು ಯೆಹೋವನ ಸಾಕ್ಷಿಗಳ ಬಗ್ಗೆ ಪ್ರಬಂಧ ಬರೀಬೇಕು ಅಂದ್ಕೊಂಡಿದ್ಳು. ಆದ್ರೆ ಅವ್ಳಿಗೆ ರಾಜ್ಯ ಸಭಾಗೃಹ ಸಿಗಲಿಲ್ಲ. ಆಮೇಲೆ ತನ್ನ ಕಾಲೇಜಿನ ಕ್ಯಾಂಪಸ್‌ನಲ್ಲಿ ನಮ್ಮ ಸಾಹಿತ್ಯಗಳನ್ನ ಇಟ್ಟಿರೋದನ್ನ ನೋಡಿದಳು. ಅಲ್ಲಿ ಅವ್ಳಿಗೆ ಪ್ರಬಂಧ ಬರೆಯೋಕೆ ಬೇಕಾದ ಮಾಹಿತಿ ಸಿಕ್ತು. ಸಮಯಾನಂತ್ರ ಅವ್ಳು ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿ ಆದ್ಳು. ಈಗ ಪಯನೀಯರ್‌ ಸೇವೆ ಮಾಡ್ತಿದ್ದಾಳೆ. ಇಂಥ ಅನುಭವಗಳು ನಮ್ಗೆ ಸಾರುತ್ತಾ ಇರೋಕೆ ಉತ್ತೇಜನ ಕೊಡ್ತವೆ. ಯಾಕಂದ್ರೆ ದೇವ್ರ ರಾಜ್ಯದ ಸಂದೇಶವನ್ನ ಕೇಳಿಸಿಕೊಳ್ಳಲು ಇಷ್ಟಪಡೋ ಜನ್ರು ಇನ್ನೂ ಇದ್ದಾರೆ ಅಂತ ಇಂಥ ಅನುಭವಗಳಿಂದ ಗೊತ್ತಾಗುತ್ತೆ.

ಕೈದೆಗೆಯದೇ ಇರೋ ದೃಢ ತೀರ್ಮಾನ ಮಾಡಿ

18. ಯೆಹೋವನು ನಿರ್ಧರಿಸಿದ ಸಮ್ಯದಲ್ಲೇ ಸಾರೋ ಕೆಲ್ಸ ಪೂರ್ತಿಯಾಗುತ್ತೆ ಅಂತ ನಾವ್ಯಾಕೆ ನಂಬಬಹುದು?

18 ಸರಿಯಾದ ಸಮ್ಯದಲ್ಲೇ ದೇವ್ರ ರಾಜ್ಯದ ಸುವಾರ್ತೆ ಸಾರೋ ಕೆಲ್ಸ ಪೂರ್ತಿಯಾಗುತ್ತೆ ಅಂತ ನಾವು ದೃಢ ಭರವಸೆ ಇಡಬಹುದು. ನೋಹನ ದಿನಗಳಲ್ಲಿ ಏನಾಯಿತು ಅಂತ ಗಮನಿಸಿ. ತಾನು ಎಲ್ಲವನ್ನ ಸರಿಯಾದ ಸಮ್ಯದಲ್ಲೇ ಮಾಡ್ತೇನೆ ಅಂತ ಯೆಹೋವ ತೋರಿಸಿಕೊಟ್ಟನು. ಜಲಪ್ರಳಯ ಆರಂಭವಾಗೋ 120 ವರ್ಷಗಳ ಮುಂಚೆನೇ ಆ ಪ್ರಳಯ ಯಾವಾಗ ಬರಬೇಕು ಅಂತ ಯೆಹೋವನು ನಿರ್ಧರಿಸಿದ್ದನು. ಹೀಗೆ ನಿರ್ಧರಿಸಿ ಸುಮಾರು ವರ್ಷಗಳ ನಂತರ ಯೆಹೋವನು ನೋಹನಿಗೆ ನಾವೆಯನ್ನ ಕಟ್ಟೋ ಕೆಲಸ ಕೊಟ್ಟನು. ಜಲಪ್ರಳಯ ಬರೋದಕ್ಕೂ ಮುಂಚೆ ಸುಮಾರು 40-50 ವರ್ಷ ನೋಹ ತುಂಬ ಕಷ್ಟಪಟ್ಟು ಕೆಲಸ ಮಾಡಿದನು. ಜನ ಅವ್ನು ಹೇಳೋದನ್ನ ಕೇಳಿಸಿಕೊಳ್ಳದೇ ಇದ್ರೂ ಯೆಹೋವನು ನಾವೆ ಒಳಗೆ ಪ್ರಾಣಿಗಳನ್ನ ತರೋಕೆ ಹೇಳೋ ವರೆಗೆ ನೋಹ ಎಚ್ಚರಿಕೆಯ ಸಂದೇಶವನ್ನ ಜನ್ರಿಗೆ ಸಾರುತ್ತಾ ಇದ್ದನು. ಆಮೇಲೆ ಸರಿಯಾದ ಸಮ್ಯದಲ್ಲಿ ‘ಯೆಹೋವನು ನಾವೆಯ ಬಾಗಿಲನ್ನ ಮುಚ್ಚಿದನು.’—ಆದಿ. 6:3; 7:1, 2, 16.

19. ಕೈದೆಗೆಯದೇ ಇರೋದಾದ್ರೆ ನಮಗೆ ಮುಂದೆ ಯಾವ ಆಶೀರ್ವಾದ ಸಿಗುತ್ತೆ?

19 ಬಲುಬೇಗನೆ ಯೆಹೋವನು, ನಾವು ಸುವಾರ್ತೆಯನ್ನು ಸಾರಿ ಮುಗಿಸಿದ್ದೇವೆ ಅಂತ ತಿಳಿಸ್ತಾನೆ. ಆಮೇಲೆ ಸೈತಾನನ ಈ ಲೋಕವನ್ನ ನಾಶ ಮಾಡ್ತಾನೆ ಮತ್ತು ಹೊಸ ಲೋಕವನ್ನ ತರುತ್ತಾನೆ. ಅಲ್ಲಿ ಆತನಿಗೆ ವಿಧೇಯರಾಗೋ ಜನ್ರು ಮಾತ್ರ ಇರ್ತಾರೆ. ಇದಾಗೋ ವರೆಗೂ ನಾವು ನೋಹ, ಹಬಕ್ಕೂಕ ಮತ್ತು ಇತರರನ್ನ ಅನುಕರಿಸ್ತಾ ಕೈದೆಗೆಯದೇ ಇರೋಣ. ಸಾರೋ ಕೆಲಸಕ್ಕೆ ಮೊದಲನೇ ಸ್ಥಾನ ಕೊಡೋಣ. ತಾಳ್ಮೆ ತೋರಿಸೋಣ. ಯೆಹೋವನಲ್ಲಿ ಮತ್ತು ಆತನು ಕೊಟ್ಟ ಮಾತಲ್ಲಿ ಪೂರ್ತಿ ನಂಬಿಕೆ ಇಡೋಣ.

ಗೀತೆ 10 “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”

^ ಪ್ಯಾರ. 5 ಹಿಂದಿನ ಲೇಖನದಲ್ಲಿ ಬೈಬಲ್‌ ಸ್ಟಡಿ ತಗೊಂಡು ಪ್ರಗತಿ ಮಾಡ್ತಿರೋರಿಗೆ ಪ್ರಚಾರಕರಾಗಿ ಸುವಾರ್ತೆ ಸಾರಲು ಉತ್ತೇಜನ ಸಿಕ್ತು. ನಾವು ಹೊಸ ಪ್ರಚಾರಕರೇ ಆಗಿರಲಿ ಅನುಭವ ಇರೋ ಪ್ರಚಾರಕರೇ ಆಗಿರಲಿ ಯೆಹೋವ ಸಾಕು ಅನ್ನೋವರೆಗೆ ನಾವೆಲ್ರೂ ದೇವ್ರ ರಾಜ್ಯದ ಬಗ್ಗೆ ಸಾರುತ್ತಾ ಇರ್ಬೇಕು. ಈ ಕೆಲ್ಸವನ್ನ ಮಾಡ್ತಾ ಮುಂದುವರಿಯೋ ನಮ್ಮ ದೃಢಸಂಕಲ್ಪವನ್ನ ಬಲಪಡಿಸಲು ನಾವು ಮಾಡಬೇಕಾದ ಮೂರು ವಿಷ್ಯಗಳನ್ನ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 2 ಪದವಿವರಣೆ: ಈ ಲೇಖನದಲ್ಲಿ “ಕೈದೆಗೆಯಬೇಡ” ಅನ್ನೋ ಮಾತು ಯೆಹೋವ ಸಾಕು ಅನ್ನೋ ತನಕ ನಾವು ಸುವಾರ್ತೆ ಸಾರುತ್ತಾ ಇರೋ ದೃಢಸಂಕಲ್ಪ ಮಾಡ್ಬೇಕು ಅನ್ನೋದನ್ನ ಸೂಚಿಸುತ್ತೆ.

^ ಪ್ಯಾರ. 5 “ಕರ್ತನ ದಿನ” 1914 ರಲ್ಲಿ ಯೇಸು ರಾಜನಾದಾಗ ಆರಂಭವಾಯ್ತು ಮತ್ತು ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಇದು ಮುಗಿಯುತ್ತೆ.