ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 36

ನೀವು ಬೆಸ್ತರಾಗೋಕೆ ತಯಾರಾ?

ನೀವು ಬೆಸ್ತರಾಗೋಕೆ ತಯಾರಾ?

“ಹೆದರಬೇಡ. ಇಂದಿನಿಂದ ನೀನು ಮನುಷ್ಯರನ್ನು ಸಜೀವವಾಗಿ ಹಿಡಿಯುವವನಾಗುವಿ.”—ಲೂಕ 5:10.

ಗೀತೆ 137 ಕೊಡು ನಮಗೆ ಧೈರ್ಯ

ಕಿರುನೋಟ *

1. (ಎ) ನಾಲ್ಕು ಜನ ಬೆಸ್ತರಿಗೆ ಯೇಸು ಯಾವ ಆಮಂತ್ರಣ ಕೊಟ್ಟನು? (ಬಿ) ಆಗ ಅವರು ಏನು ಮಾಡಿದ್ರು?

ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನ ಮೀನು ಹಿಡಿಯೋ ಕೆಲ್ಸ ಮಾಡ್ತಿದ್ರು. ಅವರನ್ನ ಯೇಸು, “ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು” * ಅಂತ ಆಮಂತ್ರಿಸಿದಾಗ ಅವ್ರಿಗೆ ತುಂಬ ಆಶ್ಚರ್ಯ ಆಗಿರುತ್ತೆ. ಆದ್ರೂ ‘ಕೂಡಲೇ ಅವ್ರು ಬಲೆಗಳನ್ನ ಬಿಟ್ಟು ಅವನನ್ನ ಹಿಂಬಾಲಿಸಿದರು’ ಅಂತ ಬೈಬಲ್‌ ಹೇಳುತ್ತೆ. (ಮತ್ತಾ. 4:18-22) ಆ ನಿರ್ಣಯದಿಂದ ಅವ್ರ ಜೀವನ ಪೂರ್ತಿ ಬದಲಾಗಲಿತ್ತು. ಅವ್ರು ಇನ್ನು ಮುಂದೆ ಮೀನನ್ನಲ್ಲ, ‘ಮನುಷ್ಯರನ್ನ ಸಜೀವವಾಗಿ ಹಿಡಿಯುವವರಾಗ್ತಿದ್ರು.’ (ಲೂಕ 5:10) ಯೇಸು ಇವತ್ತು ಸಹ ಸತ್ಯವನ್ನ ಪ್ರೀತಿಸೋ ಪ್ರಾಮಾಣಿಕ ಜನ್ರಿಗೆ ಅದೇ ಆಮಂತ್ರಣವನ್ನ ಕೊಡ್ತಿದ್ದಾನೆ. (ಮತ್ತಾ. 28:19, 20) ಯೇಸು ಕೊಟ್ಟ ಈ ಆಮಂತ್ರಣನ ನೀವು ಸ್ವೀಕರಿಸಿದ್ದೀರಾ?

2. (ಎ) ಮನುಷ್ಯರನ್ನ ಹಿಡಿಯೋ ಬೆಸ್ತರಾಗೋ ನಿರ್ಣಯವನ್ನ ನಾವ್ಯಾಕೆ ಗಂಭೀರವಾಗಿ ತಗೋಬೇಕು? (ಬಿ) ಈ ನಿರ್ಣಯವನ್ನ ಮಾಡೋಕೆ ನಮಗೆ ಯಾವ್ದು ಸಹಾಯ ಮಾಡುತ್ತೆ?

2 ನೀವು ಬೈಬಲ್‌ ಕಲೀತಾ ಇರಬಹುದು ಮತ್ತು ಜೀವನದಲ್ಲಿ ಸ್ವಲ್ಪ ಬದಲಾವಣೆನೂ ಮಾಡ್ಕೊಂಡಿರಬಹುದು. ಈಗ ಪ್ರಚಾರಕರಾಗಲು ನಿರ್ಣಯ ಮಾಡೋ ಸಮ್ಯ ಬಂದಿರಬಹುದು. ಆದ್ರೆ ನಿಮ್ಗೆ ಈ ನಿರ್ಣಯ ಮಾಡೋಕೆ ಹಿಂಜರಿಕೆ ಆಗ್ತಿರಬಹುದು. ಹಾಗಂತ ಬೇಜಾರು ಮಾಡ್ಕೊಬೇಡಿ. ಪ್ರಚಾರಕರಾಗೋದು ಒಂದು ಚಿಕ್ಕ ವಿಷ್ಯ ಅಲ್ಲ. ಅದಕ್ಕೆ ನಿಮಗೆ ಹಿಂಜರಿಕೆ ಆಗ್ತಿರಬಹುದು. ಯೇಸು ಆಮಂತ್ರಣ ಕೊಟ್ಟಾಗ ಪೇತ್ರ ಮತ್ತು ಅವನ ಜೊತೆ ಇದ್ದವ್ರು “ಕೂಡಲೇ” ತಮ್ಮ ಬಲೆಗಳನ್ನ ಬಿಟ್ಟು ಬಂದ್ರು ಅಂತ ಬೈಬಲ್‌ ಹೇಳುತ್ತೆ. ಆದ್ರೆ ಪೇತ್ರ ಮತ್ತು ಅವನ ಸಹೋದರ ಈ ನಿರ್ಣಯವನ್ನ ದಿಢೀರನೆ ಮಾಡಿರಲಿಲ್ಲ. ಅವ್ರಿಗೆ ಆರು ತಿಂಗಳ ಹಿಂದೆನೇ ಯೇಸುವೇ ಮೆಸ್ಸೀಯ ಅಂತ ಗೊತ್ತಾಗಿತ್ತು ಮತ್ತು ಅದನ್ನವ್ರು ಒಪ್ಕೊಂಡಿದ್ರು. (ಯೋಹಾ. 1:35-42) ನೀವು ಸಹ ಈಗಾಗ್ಲೇ ಯೆಹೋವ ಮತ್ತು ಯೇಸು ಬಗ್ಗೆ ಅನೇಕ ವಿಷ್ಯಗಳನ್ನ ಕಲಿತಿರಬಹುದು. ಯೆಹೋವನಿಗೆ ಇನ್ನೂ ಹೆಚ್ಚು ಆಪ್ತರಾಗಬೇಕು ಅಂತ ಇಷ್ಟಪಡ್ತಿರಬಹುದು. ಹಾಗಂತ ನೀವು ಪ್ರಚಾರಕರಾಗೋ ನಿರ್ಣಯನ ಹಿಂದೆ ಮುಂದೆ ಯೋಚಿಸದೆ ತಗೊಳ್ಳೋಕಾಗಲ್ಲ. ಹಾಗಾಗಿ ನಾವೀಗ ಪೇತ್ರ ಮತ್ತು ಬೇರೆಯವ್ರಿಗೆ ಈ ನಿರ್ಣಯವನ್ನ ತಗೊಳ್ಳೋಕೆ ಯಾವ್ದು ಸಹಾಯ ಮಾಡ್ತು ಅಂತ ನೋಡೋಣ.

3. ಯೇಸುವಿನ ಆಮಂತ್ರಣವನ್ನು ಸ್ವೀಕರಿಸೋಕೆ ಯಾವ ಗುಣಗಳು ಸಹಾಯ ಮಾಡ್ತವೆ?

3 ಯೇಸುವಿನ ಆ ಶಿಷ್ಯರಿಗೆ ಸುವಾರ್ತೆ ಸಾರೋ ಬಯಕೆ ಇತ್ತು ಮತ್ತು ಆ ಕೆಲ್ಸನ ಹೇಗೆ ಮಾಡ್ಬೇಕನ್ನೋ ಜ್ಞಾನನೂ ಇತ್ತು. ಅವ್ರು ಧೈರ್ಯಶಾಲಿಗಳಾಗಿದ್ರು ಮತ್ತು ಶಿಸ್ತಿನ ಸಿಪಾಯಿಗಳಾಗಿದ್ರು. ಈ ಎಲ್ಲಾ ಗುಣಗಳು ಅವ್ರಿಗೆ ಅತ್ಯುತ್ತಮವಾಗಿ ಸುವಾರ್ತೆ ಸಾರೋಕೆ ಸಹಾಯ ಮಾಡಿದ್ವು. ನೀವು ಸಹ ಉತ್ತಮವಾಗಿ ಸುವಾರ್ತೆ ಸಾರಿ ಬೇರೆಯವ್ರಿಗೆ ಕಲಿಸೋಕೆ ಈ ಗುಣಗಳು ಸಹಾಯ ಮಾಡ್ತವೆ. ಹಾಗಾಗಿ ಈ ಲೇಖನದಲ್ಲಿ ನಾವು ಆ ಗುಣಗಳನ್ನ ಹೇಗೆ ಬೆಳೆಸಿಕೊಳ್ಳೋದು ಅಂತ ನೋಡೋಣ.

ಸಾರಬೇಕನ್ನೋ ಬಯಕೆಯನ್ನ ಬಲಪಡಿಸಿ

ಪೇತ್ರ ಮತ್ತು ಸಂಗಡಿಗರು ಮನುಷ್ಯರನ್ನ ಹಿಡಿಯೋ ಬೆಸ್ತರಾದ್ರು. ಈ ಮುಖ್ಯ ಕೆಲ್ಸ ಇವತ್ತಿಗೂ ನಡಿತಾ ಇದೆ (ಪ್ಯಾರ 4-5 ನೋಡಿ)

4. ಪೇತ್ರ ಯಾಕೆ ಮೀನು ಹಿಡಿಯೋ ಕೆಲ್ಸ ಮಾಡ್ತಿದ್ದ?

4 ಪೇತ್ರ ತನ್ನ ಕುಟುಂಬವನ್ನ ನೋಡ್ಕೊಳ್ಳೋಕೆ ಮೀನು ಹಿಡಿಯೋ ಕೆಲ್ಸ ಮಾಡ್ತಿದ್ದ. ಅವನದನ್ನ ತುಂಬ ಇಷ್ಟಪಡ್ತಿದ್ದ. (ಯೋಹಾ. 21:3, 9-15) ಅವನು ಮನುಷ್ಯರನ್ನ ಹಿಡಿಯೋ ಕೆಲ್ಸನ ಕೂಡ ತುಂಬ ಇಷ್ಟಪಟ್ಟ. ಯೆಹೋವನ ಸಹಾಯದಿಂದ ಈ ಕೆಲ್ಸನ ಚೆನ್ನಾಗಿ ಮಾಡೋಕೆ ಕಲಿತ.—ಅ. ಕಾ. 2:14, 41.

5. (ಎ) ಲೂಕ 5:8-11 ರ ಪ್ರಕಾರ ಪೇತ್ರ ಯಾಕೆ ಹಿಂಜರಿದನು? (ಬಿ) ನಮಗೂ ಹಿಂಜರಿಕೆ ಇರೋದಾದ್ರೆ ಅದನ್ನ ಮೆಟ್ಟಿನಿಲ್ಲೋಕೆ ಯಾವುದು ಸಹಾಯ ಮಾಡುತ್ತೆ?

5 ಮುಖ್ಯವಾಗಿ ನಾವು ಯೆಹೋವನನ್ನ ಪ್ರೀತಿಸೋದ್ರಿಂದನೇ ಸುವಾರ್ತೆ ಸಾರುತ್ತೇವೆ. ಯೆಹೋವನ ಮೇಲಿರೋ ಈ ಪ್ರೀತಿ ‘ನಾವು ಸುವಾರ್ತೆ ಸಾರೋಕೆ ಅರ್ಹರಲ್ಲ’ ಅನ್ನೋ ಭಾವನೆನ ಮೆಟ್ಟಿನಿಲ್ಲೋಕೆ ಸಹಾಯ ಮಾಡುತ್ತೆ. ಮನುಷ್ಯರನ್ನ ಹಿಡಿಯೋ ಬೆಸ್ತನಾಗೋಕೆ ಯೇಸು ಪೇತ್ರನನ್ನ ಆಮಂತ್ರಿಸಿದಾಗ ಅವನಿಗೆ “ಹೆದರಬೇಡ” ಅಂತ ಹೇಳಿದನು. (ಲೂಕ 5:8-11 ಓದಿ.) ಆ ಸಮ್ಯದಲ್ಲಿ ಪೇತ್ರ, ಶಿಷ್ಯನಾದ್ರೆ ತನಗೇನಾಗುತ್ತೋ ಅಂತ ಭಯ ಪಟ್ಟಿರಲಿಲ್ಲ. ಬದಲಿಗೆ ಯೇಸು ಅದ್ಭುತವಾಗಿ ಮೀನು ಹಿಡಿಯೋಕೆ ಸಹಾಯ ಮಾಡಿದ್ದನ್ನ ನೋಡಿ ಅವನಿಗೆ ಆಶ್ಚರ್ಯ ಆಗಿತ್ತು ಮತ್ತು ‘ಯೇಸು ಜೊತೆ ಕೆಲ್ಸ ಮಾಡೋಕೆ ನಾನು ಯೋಗ್ಯನಾ’ ಅಂತ ಅನಿಸಿತ್ತು. ಪೇತ್ರನ ತರ ನಿಮಗೂ ಹಿಂಜರಿಕೆ ಆಗ್ತಿರಬಹುದು. ಯೇಸುವಿನ ಶಿಷ್ಯರಾಗಿ ಇರಬೇಕಂದ್ರೆ ಏನೆಲ್ಲಾ ಮಾಡ್ಬೇಕಂತ ಯೋಚಿಸ್ವಾಗ ‘ಇದೆಲ್ಲಾ ನನ್ನಿಂದ ಮಾಡೋಕಾಗಲ್ಲ’ ಅಂತ ನಿಮಗೆ ಅನಿಸಬಹುದು. ಹಾಗನಿಸೋದಾದ್ರೆ ಯೆಹೋವ, ಯೇಸು ಮತ್ತು ಜನರ ಮೇಲೆ ನಿಮಗಿರೋ ಪ್ರೀತಿನ ಹೆಚ್ಚಿಸಿಕೊಳ್ಳಿ. ಆಗ ಮನುಷ್ಯರನ್ನ ಹಿಡಿಯೋ ಬೆಸ್ತರಾಗೋಕೆ ಯೇಸು ಕೊಟ್ಟ ಆಮಂತ್ರಣವನ್ನ ಸ್ವೀಕರಿಸಬೇಕನ್ನೋ ಬಯಕೆ ಹೆಚ್ಚಾಗುತ್ತೆ.—ಮತ್ತಾ. 22:37, 39; ಯೋಹಾ. 14:15.

6. ಸುವಾರ್ತೆ ಸಾರೋಕೆ ಇನ್ನು ಯಾವೆಲ್ಲಾ ಕಾರಣಗಳು ನಮ್ಮನ್ನ ಪ್ರಚೋದಿಸ್ತವೆ?

6 ಸುವಾರ್ತೆ ಸಾರೋಕೆ ಇನ್ನು ಯಾವೆಲ್ಲಾ ಕಾರಣಗಳು ನಮ್ಮನ್ನ ಪ್ರಚೋದಿಸ್ತವೆ? ‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿ’ ಅಂತ ಯೇಸು ಕೊಟ್ಟಿರೋ ಆಜ್ಞೆ ನಮ್ಮನ್ನ ಪ್ರಚೋದಿಸುತ್ತೆ. (ಮತ್ತಾ. 28:19, 20) ಜನ್ರು ‘ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರೆ’ ಮತ್ತು ಅವ್ರು ದೇವರ ರಾಜ್ಯದ ಸಂದೇಶವನ್ನ ಕಲಿಯೋದು ತುಂಬ ಪ್ರಾಮುಖ್ಯವಾಗಿದೆ. ಅದಕ್ಕೇ ನಾವು ಸಾರ್ತೇವೆ. (ಮತ್ತಾ. 9:36) ಎಲ್ಲಾ ರೀತಿಯ ಜನ್ರೂ ಸತ್ಯದ ಬಗ್ಗೆ ನಿಷ್ಕೃಷ್ಟ ಜ್ಞಾನ ಪಡ್ಕೊಂಡು ರಕ್ಷಣೆ ಪಡೀಬೇಕನ್ನೋದೇ ಯೆಹೋವನ ಆಸೆ. (1 ತಿಮೊ. 2:4) ಈ ಕಾರಣನೂ ನಮ್ಮನ್ನ ಪ್ರಚೋದಿಸುತ್ತೆ.

7. ಸಾರೋ ಕೆಲಸ ತುಂಬ ಪ್ರಾಮುಖ್ಯ ಅಂತ ರೋಮನ್ನರಿಗೆ 10:13-15 ಹೇಗೆ ತೋರಿಸಿಕೊಡುತ್ತೆ?

7 ಸಾರೋದ್ರಿಂದ ಜನ್ರಿಗೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚಿಸಿದ್ರೆ ನಾವು ಸುವಾರ್ತೆ ಸಾರೋಕೆ ಮುಂದೆ ಬರ್ತೀವಿ. ಮೀನು ಹಿಡಿಯುವವ್ರು ತಾವು ಹಿಡಿದ ಮೀನನ್ನ ಮಾರ್ತಾರೆ ಅಥವಾ ತಿಂತಾರೆ. ಆದ್ರೆ ನಾವು ಮನುಷ್ಯರನ್ನ ‘ಹಿಡಿಯೋ’ ಕೆಲ್ಸ ಮಾಡೋದ್ರಿಂದ ಜನ್ರ ಜೀವ ಉಳಿಯುತ್ತೆ.—ರೋಮನ್ನರಿಗೆ 10:13-15 ಓದಿ; 1 ತಿಮೊ. 4:16.

ಚೆನ್ನಾಗಿ ತಿಳುಕೊಳ್ಳಿ

8-9. ಮೀನು ಹಿಡಿಯೋರಿಗೆ ಏನು ಗೊತ್ತಿರಬೇಕು? ಮತ್ತು ಯಾಕೆ?

8 ಯೇಸುವಿನ ದಿನಗಳಲ್ಲಿ ಇಸ್ರಾಯೇಲ್ಯ ಬೆಸ್ತರು ಯಾವ ತರದ ಮೀನುಗಳನ್ನ ಹಿಡಿಬೇಕು ಅಂತ ತಿಳುಕೊಂಡಿರಬೇಕಿತ್ತು. (ಯಾಜ. 11:9-12) ಅಷ್ಟೇ ಅಲ್ಲ, ಆ ಮೀನು ಎಲ್ಲಿ ಸಿಗುತ್ತೆ ಅಂತಾನೂ ಗೊತ್ತಿರಬೇಕಿತ್ತು. ಮೀನುಗಳು ಸಾಮಾನ್ಯವಾಗಿ ತಮ್ಗೆ ಜೀವಿಸೋಕೆ ಸೂಕ್ತವಾಗಿರೋ ಸ್ಥಳಗಳಲ್ಲಿ ಮತ್ತು ಹೆಚ್ಚು ಆಹಾರ ಎಲ್ಲಿ ಸಿಗುತ್ತೋ ಅಲ್ಲಿ ಇರ್ತವೆ. ಯಾವ ಸಮ್ಯದಲ್ಲಿ ಹೋದ್ರೆ ಹೆಚ್ಚು ಮೀನು ಸಿಗುತ್ತೆ ಅಂತ ಒಬ್ಬ ಮೀನುಗಾರನಿಗೆ ಗೊತ್ತಿರುತ್ತೆ. ಇದನ್ನ ಅರ್ಥಮಾಡ್ಕೊಳ್ಳೋಕೆ, ಒಂದು ಉದಾಹರಣೆಯನ್ನ ಗಮನಿಸಿ. ಫೆಸಿಫಿಕ್‌ ದ್ವೀಪದ ಒಬ್ಬ ಸಹೋದರನು ಒಬ್ಬ ಮಿಷನರಿಯನ್ನ ಮೀನು ಹಿಡಿಯೋಕೆ ಕರೆದ್ನು. ಆಗ ಆ ಮಿಷನರಿ ಅವನಿಗೆ, “ನಾನು ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಸಿಗ್ತೀನಿ” ಅಂದ. ಅದಕ್ಕೆ ಸಹೋದರನು, ನಿಮ್ಗೆ ಮೀನು ಹಿಡಿಯೋದ್ರ ಬಗ್ಗೆ ಸರಿಯಾಗಿ ಗೊತ್ತಿಲ್ಲ ಅಂತ ಕಾಣುತ್ತೆ. ಮೀನು ಹಿಡಿಯೋಕೆ ನಮ್ಗೆ ಅನುಕೂಲವಾದ ಸಮಯದಲ್ಲಿ ಹೋಗಬಾರದು. ಯಾವ ಸಮ್ಯದಲ್ಲಿ ಮೀನು ಸಿಗುತ್ತೋ ಆಗ ಹೋಗಬೇಕು ಅಂದನು.

9 ಒಂದನೇ ಶತಮಾನದಲ್ಲಿದ್ದ ಯೇಸುವಿನ ಶಿಷ್ಯರು ಸಹ ಜನ್ರು ಎಲ್ಲಿ ಸಿಕ್ತಿದ್ರೋ ಅಲ್ಲಿಗೆ ಹೋಗಿ ಸಾರುತ್ತಿದ್ರು. ಅದ್ರಲ್ಲೂ ಅವ್ರು ಸಿಗೋ ಸಮ್ಯ ನೋಡ್ಕೊಂಡು ಹೋಗ್ತಿದ್ರು. ಉದಾಹರಣೆಗೆ, ಅವ್ರು ದೇವಾಲಯದಲ್ಲಿ, ಸಭಾಮಂದಿರದಲ್ಲಿ, ಮನೆ-ಮನೆಗೆ ಹೋಗಿ ಮತ್ತು ಪೇಟೆಗಳಲ್ಲಿ ಸಾರಿದ್ರು. (ಅ. ಕಾ. 5:42; 17:17; 18:4) ನಾವು ಸಹ ನಮ್ಮ ಟೆರಿಟೊರಿಯಲ್ಲಿರೋ ಜನ ಯಾವಾಗ, ಎಲ್ಲಿ ಸಿಗ್ತಾರೆ ಅಂತ ತಿಳುಕೊಂಡಿರಬೇಕು. ಅದಕ್ಕೆ ತಕ್ಕಂತೆ ನಾವು ಸುವಾರ್ತೆ ಸಾರೋಕೆ ಹೋಗಬೇಕು.—1 ಕೊರಿಂ. 9:19-23.

ನಿಪುಣ ಬೆಸ್ತರು . . . 1. ಮೀನು ಎಲ್ಲಿ ಸಿಗುತ್ತೋ ಅಲ್ಲಿ, ಯಾವಾಗ ಸಿಗುತ್ತೋ ಆವಾಗ ಹೋಗಿ ಮೀನು ಹಿಡಿತಾರೆ (ಪ್ಯಾರ 8-9 ನೋಡಿ)

10. ಯೆಹೋವನ ಸಂಘಟನೆ ನಮಗೆ ಏನನ್ನ ಕೊಟ್ಟಿದೆ?

10 ಒಬ್ಬ ಮೀನುಗಾರ ಮೀನು ಹಿಡಿಬೇಕಂದ್ರೆ ಅವನತ್ರ ಸರಿಯಾದ ಸಲಕರಣೆಗಳಿರಬೇಕು ಮತ್ತು ಅವುಗಳನ್ನ ಉಪಯೋಗಿಸೋದು ಹೇಗಂತ ಚೆನ್ನಾಗಿ ಗೊತ್ತಿರಬೇಕು. ನಮ್ಗೆ ಸಹ ಸಾರೋ ಕೆಲ್ಸ ಮಾಡೋಕೆ ಒಳ್ಳೇ ಸಲಕರಣೆಗಳು ಬೇಕು ಮತ್ತು ಅವುಗಳನ್ನ ಉಪಯೋಗಿಸೋದು ಹೇಗಂತನೂ ಚೆನ್ನಾಗಿ ಗೊತ್ತಿರಬೇಕು. ಯೇಸು ಸುವಾರ್ತೆ ಸಾರೋದು ಹೇಗಂತ ತನ್ನ ಶಿಷ್ಯರಿಗೆ ಹೇಳಿಕೊಟ್ಟಿದ್ದನು. ಸಾರೋಕೆ ಹೋಗುವಾಗ ಏನೆಲ್ಲಾ ತಗೊಂಡು ಹೋಗಬೇಕು, ಎಲ್ಲಿ ಸಾರಬೇಕು, ಏನು ಹೇಳಬೇಕು ಅಂತ ಆತನು ಅವ್ರಿಗೆ ಹೇಳಿದ್ದನು. (ಮತ್ತಾ. 10:5-7; ಲೂಕ 10:1-11) ಇವತ್ತು ಯೆಹೋವನ ಸಂಘಟನೆ ನಮ್ಗೆ ಬೋಧನಾ ಸಲಕರಣೆಗಳನ್ನ ಕೊಟ್ಟಿದೆ. * ಇದ್ರಿಂದ ಚೆನ್ನಾಗಿ ಸುವಾರ್ತೆ ಸಾರೋಕೆ ಸಾಧ್ಯ ಆಗುತ್ತೆ. ಈ ಸಲಕರಣೆಗಳನ್ನ ಹೇಗೆ ಉಪಯೋಗಿಸಬೇಕು ಅಂತಾನೂ ಸಂಘಟನೆ ಕಲಿಸಿದೆ. ಈ ತರಬೇತಿ ನಮ್ಗೆ ಸೇವೆಯಲ್ಲಿ ಧೈರ್ಯದಿಂದ ಮಾತಾಡೋಕೆ ಮತ್ತು ನಿಪುಣರಾಗೋಕೆ ಸಹಾಯ ಮಾಡುತ್ತೆ.—2 ತಿಮೊ. 2:15.

ನಿಪುಣ ಬೆಸ್ತರು . . . 2. ಸರಿಯಾದ ಸಲಕರಣೆಗಳನ್ನ ಹೇಗೆ ಉಪಯೋಗಿಸೋದು ಅಂತ ಚೆನ್ನಾಗಿ ತಿಳ್ಕೊಂಡಿರುತ್ತಾರೆ (ಪ್ಯಾರ 10 ನೋಡಿ)

ಧೈರ್ಯಶಾಲಿಗಳಾಗಿರಿ

11. ಮನುಷ್ಯರನ್ನ ಹಿಡಿಯೋ ಬೆಸ್ತರು ಯಾಕೆ ಧೈರ್ಯಶಾಲಿ ಆಗಿರಬೇಕು?

11 ಬೆಸ್ತರು ಧೈರ್ಯಶಾಲಿ ಆಗಿರಬೇಕು. ಅವ್ರು ಮೀನು ಹಿಡಿಯೋಕೆ ಹೋದಾಗ ಕೆಲವೊಮ್ಮೆ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ. ಅವ್ರು ಹೆಚ್ಚಾಗಿ ರಾತ್ರಿಯಲ್ಲಿ ಕೆಲ್ಸ ಮಾಡ್ತಾರೆ. ಅಷ್ಟೇ ಅಲ್ಲ, ಸಮುದ್ರದಲ್ಲಿ ಯಾವ ಸಮ್ಯದಲ್ಲಾದ್ರೂ ಚಂಡಮಾರುತ ಬರೋ ಸಾಧ್ಯತೆ ಇರುತ್ತೆ. ಮನುಷ್ಯರನ್ನ ಹಿಡಿಯೋ ಬೆಸ್ತರಿಗೂ ಧೈರ್ಯ ಬೇಕು. ಯಾಕಂದ್ರೆ ನಾವು ಯೆಹೋವನ ಸಾಕ್ಷಿಗಳು ಅಂತ ಎಲ್ರಿಗೂ ಹೇಳಿದಾಗ, ಸಾರೋಕೆ ಶುರು ಮಾಡಿದಾಗ ಚಂಡಮಾರುತದಂಥ ಸಮಸ್ಯೆಗಳು ಎದುರಾಗಬಹುದು. ಉದಾಹರಣೆಗೆ, ಕುಟುಂಬದವ್ರು ವಿರೋಧಿಸಬಹುದು, ಪರಿಚಯಸ್ಥರು ಮತ್ತು ಸ್ನೇಹಿತರು ಅವಮಾನ ಮಾಡಬಹುದು, ಹಾಗೂ ಸಾರೋಕೆ ಹೋದಾಗ ಜನ್ರು ವಿರೋಧ ಮಾಡಬಹುದು. ಆದ್ರೆ ಇದೆಲ್ಲಾ ಬರುವಾಗ ನಮ್ಗೆ ಆಶ್ಚರ್ಯ ಆಗಲ್ಲ. ಯಾಕಂದ್ರೆ ಸುವಾರ್ತೆ ಸಾರೋಕೆ ಹೋದಾಗ ಹಿಂಸೆ, ವಿರೋಧ ಬರುತ್ತೆ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದ್ದನು.—ಮತ್ತಾ. 10:16.

12. ಯೆಹೋಶುವ 1:7-9 ರಲ್ಲಿ ಹೇಳಿದ ಹಾಗೆ ಧೈರ್ಯಶಾಲಿಗಳಾಗೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

12 ಧೈರ್ಯ ಹೇಗೆ ಬೆಳೆಸಿಕೊಳ್ಳಬಹುದು? ಯೇಸು ಈಗಲೂ ಸುವಾರ್ತೆ ಸಾರೋ ಕೆಲ್ಸವನ್ನ ಸ್ವರ್ಗದಿಂದ ಮಾರ್ಗದರ್ಶಿಸ್ತಿದ್ದಾನೆ ಅಂತ ಚೆನ್ನಾಗಿ ಅರ್ಥಮಾಡ್ಕೊಬೇಕು. (ಯೋಹಾ. 16:33; ಪ್ರಕ. 14:14-16) ನಾವು ಯಾವುದೇ ಪರಿಸ್ಥಿತಿಯಲ್ಲಿದ್ರೂ ಯೆಹೋವನು ನಮ್ಮ ಕೈಬಿಡಲ್ಲ ಅನ್ನೋ ದೃಢ ನಂಬಿಕೆ ನಮಗಿರಬೇಕು. (ಮತ್ತಾ. 6:32-34) ಹೀಗೆ ನಂಬಿಕೆ ಹೆಚ್ಚಾಗ್ತಾ ಹೋದ ಹಾಗೆ ಧೈರ್ಯನೂ ಹೆಚ್ಚಾಗುತ್ತೆ. ಪೇತ್ರ ಮತ್ತು ಅವನ ಜೊತೆ ಇದ್ದವ್ರು ಜೀವನ ನಡೆಸಲಿಕ್ಕಾಗಿ ಮಾಡ್ತಿದ್ದ ಕೆಲ್ಸನ ಬಿಟ್ಟು ಯೇಸುವನ್ನ ಹಿಂಬಾಲಿಸಿದ್ರು. ಇದ್ರಿಂದ ಅವ್ರಿಗೆ ತುಂಬ ನಂಬಿಕೆ ಇತ್ತು ಅಂತ ಗೊತ್ತಾಗುತ್ತೆ. ನಿಮಗೂ ಖಂಡಿತ ತುಂಬ ನಂಬಿಕೆ ಇದೆ. ಅದಕ್ಕೇ ‘ನಾನು ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡಿದ್ದೀನಿ, ಕೂಟಗಳಿಗೆ ಹೋಗ್ತಿದ್ದೀನಿ’ ಅಂತ ನೀವು ಧೈರ್ಯವಾಗಿ ನಿಮ್ಮ ಕುಟುಂಬದವ್ರಿಗೆ, ಪರಿಚಯಸ್ಥರಿಗೆ, ಸ್ನೇಹಿತರಿಗೆ ಹೇಳೋಕಾಗಿದೆ. ನೀವು ಯೆಹೋವನ ನೀತಿ-ನಿಯಮಗಳ ಪ್ರಕಾರ ಜೀವಿಸ್ಬೇಕಂತ ನಿಮ್ಮ ನಡತೆ ಮತ್ತು ಜೀವನ ರೀತಿಯಲ್ಲಿ ತುಂಬ ಬದಲಾವಣೆಗಳನ್ನ ಮಾಡಿರುತ್ತೀರಿ. ಅದನ್ನ ಮಾಡುವಾಗ್ಲೂ ನಂಬಿಕೆ ಮತ್ತು ಧೈರ್ಯ ತೋರಿಸಿರುತ್ತೀರಿ. ನೀವು ಧೈರ್ಯ ಬೆಳೆಸಿಕೊಳ್ತಾ ಹೋದಂತೆ ‘ನೀವೆಲ್ಲೇ ಹೋದ್ರೂ ಯೆಹೋವನು ನಿಮ್ಮ ಜೊತೆ ಇರ್ತಾನೆ’ ಅನ್ನೋ ಭರವಸೆ ಇರುತ್ತೆ.—ಯೆಹೋಶುವ 1:7-9 ಓದಿ.

ನಿಪುಣ ಬೆಸ್ತರು . . . 3. ಹವಾಮಾನದಲ್ಲಿ ಏರುಪೇರಾದ್ರೂ ಧೈರ್ಯಗೆಡದೆ ತಮ್ಮ ಕೆಲ್ಸ ಮಾಡ್ತಾರೆ (ಪ್ಯಾರ 11-12 ನೋಡಿ)

13. ಧೈರ್ಯಶಾಲಿಗಳಾಗೋಕೆ ಪ್ರಾರ್ಥನೆ ಮತ್ತು ಧ್ಯಾನ ಹೇಗೆ ಸಹಾಯ ಮಾಡುತ್ತೆ?

13 ಧೈರ್ಯಶಾಲಿಗಳಾಗೋಕೆ ಇನ್ನೇನು ಮಾಡಬಹುದು? ಪ್ರಾರ್ಥಿಸಬೇಕು. (ಅ. ಕಾ. 4:29, 31) ಯೆಹೋವನು ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡ್ತಾನೆ ಮತ್ತು ಯಾವತ್ತೂ ನಿಮ್ಮ ಕೈಬಿಡಲ್ಲ. ನಿಮ್ಗೆ ಬೆಂಬಲ ಕೊಡೋಕೆ ಆತನು ಯಾವಾಗ್ಲೂ ಸಿದ್ಧನಿರ್ತಾನೆ. ನೀವು ಧೈರ್ಯ ಬೆಳೆಸಿಕೊಳ್ಳಬೇಕಂದ್ರೆ, ಹಿಂದಿನ ಕಾಲದಲ್ಲಿ ಯೆಹೋವನು ತನ್ನ ಜನ್ರನ್ನ ಹೇಗೆ ರಕ್ಷಿಸಿದನು ಅನ್ನೋದ್ರ ಬಗ್ಗೆ ಧ್ಯಾನಿಸಬೇಕು. ಅಷ್ಟೇ ಅಲ್ಲ, ಸಮಸ್ಯೆಗಳನ್ನ ಎದುರಿಸೋಕೆ ಆತನು ನಿಮ್ಗೆ ಈಗಾಗ್ಲೇ ಹೇಗೆ ಸಹಾಯ ಮಾಡಿದ್ದಾನೆ ಮತ್ತು ಜೀವನದಲ್ಲಿ ಬದಲಾವಣೆ ಮಾಡ್ಕೊಳ್ಳೋಕೆ ಹೇಗೆ ಬಲ ಕೊಟ್ಟಿದ್ದಾನೆ ಅನ್ನೋದ್ರ ಬಗ್ಗೆನೂ ಯೋಚಿಸಬೇಕು. ತನ್ನ ಜನ್ರನ್ನ ಕೆಂಪು ಸಮುದ್ರದ ಮೂಲಕ ನಡೆಸಿದ ದೇವ್ರು, ಯೇಸುವಿನ ಶಿಷ್ಯರಾಗೋಕೆ ನಿಮಗೂ ಸಹಾಯ ಮಾಡಕ್ಕಾಗಲ್ವಾ? (ವಿಮೋ. 14:13) ಹಾಗಾಗಿ, ಕೀರ್ತನೆಗಾರನಿಗೆ ಯೆಹೋವನ ಮೇಲಿದ್ದ ನಂಬಿಕೆಯನ್ನೇ ನೀವೂ ತೋರಿಸಬಹುದು. ಆತನು, “ಯೆಹೋವನು ನನಗಿದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?” ಅಂದ್ನು.—ಕೀರ್ತ. 118:6.

14. ಮಾಸೆ ಮತ್ತು ಟೊಮೊಯೋರ ಅನುಭವದಿಂದ ನೀವೇನು ಕಲಿತೀರಾ?

14 ನಾಚಿಕೆ ಸ್ವಭಾವದವ್ರು ಧೈರ್ಯಶಾಲಿಗಳಾಗೋಕೆ ಯೆಹೋವನು ಹೇಗೆ ಸಹಾಯ ಮಾಡಿದ್ದಾನೆ ಅಂತ ತಿಳುಕೊಳ್ಳೋದ್ರಿಂದಲೂ ನಾವು ಧೈರ್ಯಶಾಲಿಗಳಾಗಬಹುದು. ಮಾಸೆ ಅನ್ನೋ ಸಹೋದರಿಯ ಅನುಭವ ನೋಡಿ. ಅವ್ಳಿಗೆ ನಾಚಿಕೆ ಸ್ವಭಾವ ಇತ್ತು. ಜನ್ರ ಹತ್ರ ತನ್ನ ನಂಬಿಕೆ ಬಗ್ಗೆ ಯಾವತ್ತೂ ಮಾತಾಡೋಕಾಗಲ್ಲ ಅಂತ ಅವಳಿಗನಿಸ್ತಿತ್ತು. ಅಪರಿಚಿತರ ಹತ್ರ ಮಾತಾಡೋಕೆ ಅವ್ಳಿಗೆ ತುಂಬ ಕಷ್ಟ ಆಗ್ತಿತ್ತು. ಇದು ತನ್ನ ಕೈಲಾಗದೇ ಇರೋ ಕೆಲ್ಸ ಅಂತ ನೆನಸಿದ್ದಳು. ಆದ್ರೆ ಅವ್ಳು ದೇವ್ರ ಮೇಲೆ ಮತ್ತು ಜನ್ರ ಮೇಲಿರೋ ಪ್ರೀತಿನ ಹೆಚ್ಚಿಸಿಕೊಳ್ಳೋಕೆ ತುಂಬ ಪ್ರಯತ್ನ ಹಾಕಿದ್ಳು. ಈ ಸಮ್ಯದಲ್ಲಿ ಸುವಾರ್ತೆ ಸಾರೋದು ಎಷ್ಟು ತುರ್ತಿನದ್ದು ಅಂತ ಯೋಚಿಸಿದ್ಳು ಮತ್ತು ಸಾರಬೇಕನ್ನೋ ಬಯಕೆಯನ್ನ ಹೆಚ್ಚಿಸಿಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ದೇವ್ರ ಹತ್ರ ಪ್ರಾರ್ಥಿಸಿದ್ಳು. ಇದ್ರಿಂದ ಅವ್ಳು ಭಯವನ್ನ ಮೆಟ್ಟಿ ನಿಂತಳು. ಪಯನೀಯರ್‌ ಸೇವೆ ಕೂಡ ಮಾಡಿದ್ಳು. ಹೊಸ ಪ್ರಚಾರಕರು ಧೈರ್ಯ ಬೆಳೆಸಿಕೊಳ್ಳೋಕೆ ಯೆಹೋವನು ಸಹಾಯ ಮಾಡ್ತಾನೆ. ಟೊಮೊಯೋ ಅನ್ನೋ ಸಹೋದರಿಯ ಅನುಭವ ನೋಡಿ. ಅವಳು ಮನೆ-ಮನೆ ಸೇವೆಗೆ ಹೋಗೋಕೆ ಶುರು ಮಾಡಿದಾಗ ಮೊದಲನೇ ಮನೆಯವ್ರೇ ‘ನನ್ಗೆ ಯೆಹೋವನ ಸಾಕ್ಷಿಗಳ ಹತ್ರ ಮಾತಾಡೋಕೆ ಇಷ್ಟ ಇಲ್ಲ’ ಅಂತ ಕಿರುಚಿ ಬಾಗಿಲನ್ನ ಧಡಾರಂತ ಹಾಕಿಬಿಟ್ರು. ಆಗ ಟೊಮೊಯೋ ಹೆದರಲಿಲ್ಲ. ಬದಲಿಗೆ ತನ್ನ ಜೊತೆ ಇದ್ದ ಸಹೋದರಿಗೆ ಹೀಗೆ ಹೇಳಿದಳು: “ಅವ್ರು ಹೇಳಿದ್ದನ್ನ ಕೇಳಿಸ್ಕೊಂಡ್ರಾ? ನಾನೊಂದು ಮಾತೂ ಹೇಳಿಲ್ಲ, ಆದ್ರೂ ನಾನು ಯೆಹೋವನ ಸಾಕ್ಷಿ ಅಂತ ಕಂಡುಹಿಡಿದುಬಿಟ್ರು. ಅದಕ್ಕೆ ನಂಗೆ ತುಂಬ ಖುಷಿ ಆಗ್ತಿದೆ.” ಈಗ ಟೊಮೊಯೋ ಪಯನೀಯರ್‌ ಆಗಿ ಸೇವೆ ಮಾಡ್ತಿದ್ದಾಳೆ.

ಶಿಸ್ತಿನ ಸಿಪಾಯಿಗಳಾಗಿರಿ

15. (ಎ) ಶಿಸ್ತಿನ ಸಿಪಾಯಿಗಳಾಗಿರೋದು ಅಂದ್ರೆ ಏನು? (ಬಿ) ಕ್ರೈಸ್ತರು ಯಾಕೆ ಈ ರೀತಿ ಇರಬೇಕು?

15 ಒಳ್ಳೇ ಬೆಸ್ತರು ಶಿಸ್ತಿನ ಸಿಪಾಯಿಗಳಾಗಿ ಇರ್ತಾರೆ. ಮಾಡ್ಬೇಕಾಗಿರೋ ಕೆಲಸಗಳನ್ನ ತಪ್ಪದೇ ಸರಿಯಾಗಿ ಮಾಡುವವರೇ ಶಿಸ್ತಿನ ಸಿಪಾಯಿಗಳಾಗಿದ್ದಾರೆ. ಮೀನು ಹಿಡಿಯುವವ್ರು ಬೆಳಿಗ್ಗೆ ಬೇಗ ಎದ್ದೇಳಬೇಕು. ಕೆಲ್ಸ ಪೂರ್ತಿ ಆಗೋವರೆಗೂ ಪ್ರಯತ್ನ ಮಾಡ್ತಾನೇ ಇರಬೇಕು. ಹವಾಮಾನ ಏರುಪೇರಾದ್ರೂ ಮೀನು ಹಿಡಿಯೋದನ್ನ ಮುಂದುವರಿಸಬೇಕು. ಇದೆಲ್ಲಾ ಮಾಡ್ಬೇಕಂದ್ರೆ ಅವ್ರಿಗೆ ಶಿಸ್ತಿರಬೇಕು. ಸಾರೋ ಕೆಲ್ಸ ಮಾಡೋ ನಮಗೂ ಇಂಥದ್ದೇ ಶಿಸ್ತಿರಬೇಕು. ಆಗ್ಲೇ ನಾವು ಈ ಕೆಲ್ಸವನ್ನ ಕೊನೇ ವರೆಗೂ ಮಾಡ್ತಾ ಹೋಗ್ತೇವೆ.—ಮತ್ತಾ. 10:22.

16. ನಾವು ಹೇಗೆ ಶಿಸ್ತಿನ ಸಿಪಾಯಿಗಳಾಗಬಹುದು?

16 ನಮ್ಗೆ ಈ ಗುಣ ಹುಟ್ಟಿನಿಂದನೇ ಬಂದುಬಿಡಲ್ಲ. ನಮ್ಗೆ ಹೇಗನ್ಸುತ್ತೋ ಹಾಗಿರಬೇಕು ಅನ್ನೋದೇ ಮನುಷ್ಯರ ಹುಟ್ಟು ಗುಣ. ಹಾಗಾಗಿ ಶಿಸ್ತಿನ ಸಿಪಾಯಿಗಳಾಗಿ ಇರಬೇಕಂದ್ರೆ ನಮ್ಗೆ ಸ್ವನಿಯಂತ್ರಣ ಬೇಕು. ನಮ್ಮಿಂದ ಮಾಡೋಕೆ ಕಷ್ಟ ಅಂತ ಅನಿಸೋ ವಿಷ್ಯಗಳನ್ನ ಮಾಡ್ಬೇಕಂದ್ರೆ ನಮ್ಗೆ ಸಹಾಯ ಬೇಕು. ಆ ಸಹಾಯವನ್ನ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಕೊಡ್ತಾನೆ.—ಗಲಾ. 5:22, 23.

17. ಒಂದನೇ ಕೊರಿಂಥ 9:25-27 ರಲ್ಲಿರುವಂತೆ ಪೌಲನು ಶಿಸ್ತಿನ ಸಿಪಾಯಿ ಆಗೋಕೆ ಏನು ಮಾಡಬೇಕಾಯ್ತು?

17 ಅಪೊಸ್ತಲ ಪೌಲ ಸಹ ಶಿಸ್ತಿನ ಸಿಪಾಯಿ ಆಗಿದ್ದನು. ಸರಿಯಾದದ್ದನ್ನ ಮಾಡೋಕೆ ತನ್ನ ದೇಹವನ್ನ ‘ಜಜ್ಜಿಕೊಳ್ಳಬೇಕಾಯ್ತು’ ಅಂತ ಆತನು ಒಪ್ಪಿಕೊಂಡನು. (1 ಕೊರಿಂಥ 9:25-27 ಓದಿ.) ಶಿಸ್ತಿನಿಂದ ನಡ್ಕೊಬೇಕಂತ ಬೇರೆಯವ್ರಿಗೂ ಉತ್ತೇಜಿಸಿದನು. ಎಲ್ಲಾ ವಿಷಯಗಳನ್ನ “ಸಭ್ಯವಾಗಿಯೂ ಕ್ರಮವಾಗಿಯೂ” ಮಾಡಬೇಕು ಅಂತ ಸಹ ಹೇಳಿದನು. (1 ಕೊರಿಂ. 14:40) ನಾವು ಯೆಹೋವನ ಆರಾಧನೆ ಮಾಡ್ತಾ ಮುಂದುವರಿಬೇಕಂದ್ರೆ ಪ್ರಯಾಸಪಟ್ಟು ಕೆಲ್ಸ ಮಾಡ್ಬೇಕು. ಇದ್ರಲ್ಲಿ ತಪ್ಪದೇ ಸುವಾರ್ತೆ ಸಾರೋದು ಮತ್ತು ಕಲಿಸೋದು ಸೇರಿದೆ.—ಅ. ಕಾ. 2:46.

ತಡಮಾಡಬೇಡಿ

18. ಯೆಹೋವನು ನಮ್ಮನ್ನ ಯಶಸ್ವಿ ಪ್ರಚಾರಕರು ಅಂತ ನೋಡ್ಬೇಕಂದ್ರೆ ನಾವೇನು ಮಾಡ್ಬೇಕು?

18 ಒಬ್ಬ ಬೆಸ್ತ ಮೀನು ಹಿಡಿಯೋದ್ರಲ್ಲಿ ಯಶಸ್ವಿ ಆಗಿದ್ದಾನಾ ಇಲ್ವಾ ಅನ್ನೋದು ಅವನು ಎಷ್ಟು ಮೀನುಗಳನ್ನ ಹಿಡಿದಿದ್ದಾನೆ ಅನ್ನೋದ್ರ ಮೇಲೆ ಹೊಂದಿಕೊಂಡಿದೆ. ಆದ್ರೆ ಸಾರೋ ಕೆಲ್ಸದಲ್ಲಿ ನಾವೆಷ್ಟು ಯಶಸ್ವಿ ಆಗಿದ್ದೇವೆ ಅನ್ನೋದು ದೇವ್ರ ಸಂಘಟನೆಗೆ ಎಷ್ಟು ಜನ್ರನ್ನ ಕರ್ಕೊಂಡು ಬಂದಿದ್ದೇವೆ ಅನ್ನೋದ್ರ ಮೇಲೆ ಹೊಂದಿಕೊಂಡಿಲ್ಲ. (ಲೂಕ 8:11-15) ನಾವು ಬೇರೆಯವ್ರಿಗೆ ಸಾರುತ್ತಾ, ಕಲಿಸ್ತಾ ಮುಂದುವರಿಯೋದಾದ್ರೆ ಯೆಹೋವನು ನಮ್ಮನ್ನ ಯಶಸ್ವಿ ಪ್ರಚಾರಕರು ಅಂತ ನೆನಸ್ತಾನೆ. ಯಾಕೆ? ಯಾಕಂದ್ರೆ ನಾವು ಯೆಹೋವನಿಗೆ ಮತ್ತು ಆತನ ಮಗನಿಗೆ ವಿಧೇಯರಾಗಿ ಈ ಕೆಲ್ಸ ಮಾಡ್ತಿರುತ್ತೇವೆ.—ಮಾರ್ಕ 13:10; ಅ. ಕಾ. 5:28, 29.

19-20. ಸಾರೋ ಕೆಲ್ಸನ ಈಗ ಇನ್ನೂ ಹೆಚ್ಚು ಮಾಡೋಕೆ ಯಾವ ಮುಖ್ಯ ಕಾರಣ ಇದೆ?

19 ಕೆಲ್ವು ದೇಶಗಳಲ್ಲಿ ಮೀನುಗಾರರಿಗೆ ವರ್ಷದ ಕೆಲವು ತಿಂಗಳು ಮಾತ್ರ ಮೀನು ಹಿಡಿಯೋಕೆ ಅನುಮತಿ ಇರುತ್ತೆ. ಅನುಮತಿ ಇರೋ ತಿಂಗಳುಗಳು ಮುಗಿತಾ ಬಂದ ಹಾಗೆ ಆ ದೇಶಗಳಲ್ಲಿನ ಮೀನುಗಾರರು ತುಂಬ ತುರ್ತಿನಿಂದ ಹೆಚ್ಚು ಕೆಲ್ಸ ಮಾಡ್ತಾರೆ. ಮನುಷ್ಯರನ್ನ ಹಿಡಿಯೋ ಬೆಸ್ತರಾಗಿರೋ ನಾವು ಸಹ ಈಗ ಸಾರೋ ಕೆಲ್ಸನ ಇನ್ನೂ ಹೆಚ್ಚು ಮಾಡೋಕೆ ಒಂದು ಮುಖ್ಯ ಕಾರಣ ಇದೆ. ಅದೇನಂದ್ರೆ ಈ ಲೋಕದ ಅಂತ್ಯ ತುಂಬ ಹತ್ರ ಇದೆ. ಜನ್ರ ಜೀವವನ್ನ ಕಾಪಾಡೋ ಕೆಲ್ಸ ಮಾಡೋಕೆ ನಮ್ಗೆ ಉಳಿದಿರೋ ಸಮ್ಯ ತುಂಬ ಕಡಿಮೆ. ಹಾಗಾಗಿ, ತಡಮಾಡಬೇಡಿ. ಈ ಮುಖ್ಯ ಕೆಲ್ಸ ಮಾಡೋಕೆ ಇನ್ನೂ ಉತ್ತಮ ಸಮ್ಯ ಬರುತ್ತೆ ಅಂತ ಕಾಯಬೇಡಿ.—ಪ್ರಸಂ. 11:4.

20 ಸಾರಬೇಕನ್ನೋ ನಿಮ್ಮ ಬಯಕೆಯನ್ನ ಹೆಚ್ಚಿಸಿಕೊಳ್ಳೋಕೆ, ಬೈಬಲ್‌ ಬಗ್ಗೆ ಹೆಚ್ಚು ತಿಳುಕೊಳ್ಳೋಕೆ, ಧೈರ್ಯಶಾಲಿಗಳಾಗೋಕೆ ಮತ್ತು ಶಿಸ್ತಿನ ಸಿಪಾಯಿಗಳಾಗಿರೋಕೆ ಏನೆಲ್ಲಾ ಮಾಡಬೇಕೋ ಅದನ್ನ ಈಗ್ಲೇ ಮಾಡಿ. ಲೋಕವ್ಯಾಪಕವಾಗಿ ಸುವಾರ್ತೆ ಸಾರುತ್ತಿರೋ 80 ಲಕ್ಷಕ್ಕೂ ಹೆಚ್ಚಿನ ಜನ್ರ ಜೊತೆ ಸೇರಿ ನೀವೂ ಕೆಲ್ಸ ಮಾಡಿ. ಇದ್ರಿಂದ ಯೆಹೋವನು ಕೊಡೋ ಸಂತೋಷ ನಿಮ್ಗೆ ಸಿಗುತ್ತೆ. (ನೆಹೆ. 8:10) ಈ ಕೆಲ್ಸದಲ್ಲಿ ಸಂಪೂರ್ಣವಾಗಿ ಭಾಗವಹಿಸುವ ಮತ್ತು ಅದನ್ನ ಕೊನೇ ವರೆಗೂ ಮಾಡ್ತಾ ಮುಂದುವರಿಯುವ ದೃಢ ತೀರ್ಮಾನ ಮಾಡಿ. ದೇವ್ರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಮುಂದುವರಿಯೋ ನಮ್ಮ ದೃಢ ತೀರ್ಮಾನವನ್ನ ಬಲಪಡಿಸಿಕೊಳ್ಳೋಕೆ ನಾವು ಮಾಡಬೇಕಾಗಿರೋ ಮೂರು ವಿಷ್ಯಗಳ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

ಗೀತೆ 47 ಸುವಾರ್ತೆಯನ್ನು ಪ್ರಕಟಿಸಿರಿ

^ ಪ್ಯಾರ. 5 ಶ್ರಮಪಟ್ಟು ಕೆಲಸ ಮಾಡ್ತಿದ್ದ ಮತ್ತು ದೀನರಾಗಿದ್ದ ಮೀನು ಹಿಡಿಯೋ ಬೆಸ್ತರನ್ನ ಯೇಸು ತನ್ನ ಶಿಷ್ಯರಾಗೋಕೆ ಆಮಂತ್ರಿಸಿದ. ಇಂದು ಸಹ ಇಂಥ ಗುಣಗಳಿರೋ ಜನ್ರನ್ನ ಯೇಸು ಮನುಷ್ಯರನ್ನ ಹಿಡಿಯೋ ಬೆಸ್ತರಾಗೋಕೆ ಆಮಂತ್ರಿಸ್ತಿದ್ದಾನೆ. ಈ ಆಮಂತ್ರಣವನ್ನ ಸ್ವೀಕರಿಸೋಕೆ ಹಿಂಜರಿಯೋ ಬೈಬಲ್‌ ವಿದ್ಯಾರ್ಥಿಗಳು ಏನು ಮಾಡ್ಬೇಕು ಅಂತ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 1 ಪದ ವಿವರಣೆ: ಜನ್ರಿಗೆ ಸುವಾರ್ತೆ ಸಾರಿ ಯೇಸುವಿನ ಶಿಷ್ಯರಾಗೋಕೆ ಕಲಿಸುವವರೇ ‘ಮನುಷ್ಯರನ್ನು ಹಿಡಿಯುವ ಬೆಸ್ತರಾಗಿದ್ದಾರೆ.’

^ ಪ್ಯಾರ. 10 ಅಕ್ಟೋಬರ್‌ 2018 ರ ಕಾವಲಿನಬುರುಜುವಿನ ಪುಟ 11-16 ರಲ್ಲಿರೋ “ಸತ್ಯವನ್ನು ಕಲಿಸಿ” ಅನ್ನೋ ಲೇಖನ ನೋಡಿ.