ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 38

ಶಾಂತಿಯ ಸಮಯವನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ

ಶಾಂತಿಯ ಸಮಯವನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ

“ಯೆಹೋವನ ಅನುಗ್ರಹದಿಂದ ಶತ್ರುಭಯ ತಪ್ಪಿ ಆ ವರುಷಗಳಲ್ಲಿ ಯಾವ ಯುದ್ಧವೂ ಇಲ್ಲದೆ ದೇಶದಲ್ಲಿ ಸಮಾಧಾನವಿತ್ತು.”—2 ಪೂರ್ವ. 14:6.

ಗೀತೆ 144 ಜೀವದ ಹೊಣೆ

ಕಿರುನೋಟ *

1. ಯೆಹೋವನ ಸೇವೆ ಮಾಡೋ ಹುರುಪು ಯಾವಾಗ ಕಡಿಮೆ ಆಗ್ಬಹುದು?

ಯೆಹೋವನ ಸೇವೆ ಮಾಡೋ ಹುರುಪು ಯಾವಾಗ ಕಡಿಮೆ ಆಗಬಹುದು? ನೀವು ಕಷ್ಟ ಸಮಸ್ಯೆಗಳನ್ನ ಎದುರಿಸುವಾಗ್ಲಾ? ಅಥವಾ ನಿಮ್ಮ ಜೀವನದಲ್ಲಿ ಶಾಂತಿ-ನೆಮ್ಮದಿ ಇರುವಾಗ್ಲಾ? ಸಮಸ್ಯೆಗಳು ಬಂದಾಗ ನಾವು ಖಂಡಿತ ಯೆಹೋವನಲ್ಲಿ ಭರವಸೆ ಇಡ್ತೇವೆ. ಆದ್ರೆ ನಮ್ಮ ಜೀವನದಲ್ಲಿ ಸ್ವಲ್ಪ ಶಾಂತಿ ಇರುವಾಗ ಏನು ಮಾಡ್ತೇವೆ? ದೇವ್ರ ಸೇವೆ ಪ್ರಾಮುಖ್ಯ ಅನ್ನೋದನ್ನ ಮರೆತು ಹೋಗಬಹುದಾ? ಈ ಥರ ಆಗೋ ಸಾಧ್ಯತೆ ಇದೆ ಅಂತ ಯೆಹೋವನು ಇಸ್ರಾಯೇಲ್ಯರನ್ನ ಎಚ್ಚರಿಸಿದನು.—ಧರ್ಮೋ. 6:10-12.

ರಾಜ ಆಸ ಸುಳ್ಳಾರಾಧನೆಯನ್ನ ತೆಗೆದುಹಾಕಲಿಕ್ಕಾಗಿ ಯಾವ ಹೆಜ್ಜೆ ತಗೊಳ್ಳೋಕೂ ಹಿಂಜರಿಲಿಲ್ಲ (ಪ್ಯಾರ 2 ನೋಡಿ) *

2. ರಾಜ ಆಸ ನಮಗೆ ಯಾವ ಮಾದರಿ ಇಟ್ಟಿದ್ದಾನೆ?

2 ರಾಜ ಆಸ ನಮ್ಗೆ ಉತ್ತಮ ಮಾದರಿ. ಅವ್ನು ಪೂರ್ತಿಯಾಗಿ ಯೆಹೋವನ ಮೇಲೆ ಆತುಕೊಂಡನು ಮತ್ತು ವಿವೇಕದಿಂದ ನಡ್ಕೊಂಡನು. ಕಷ್ಟದ ಸಮಯದಲ್ಲಿ ಮಾತ್ರವಲ್ಲ, ಶಾಂತಿಯಿರೋ ಸಮಯದಲ್ಲೂ ಯೆಹೋವನನ್ನ ಆರಾಧಿಸಿದ್ನು. ಆರಂಭದಿಂದಲೇ ‘ಅವನು ಯೆಹೋವನಿಗೆ ಯಥಾರ್ಥವಾಗಿ ನಡ್ಕೊಂಡನು.’ (1 ಅರ. 15:14) ಅವ್ನು ಯೆಹೂದದಲ್ಲಿದ್ದ ಸುಳ್ಳಾರಾಧನೆಯನ್ನ ತೆಗೆದುಹಾಕೋ ಮೂಲಕ ಯೆಹೋವನನ್ನ ಪೂರ್ಣಹೃದಯದಿಂದ ಆರಾಧಿಸ್ತೇನೆ ಅಂತ ತೋರಿಸಿಕೊಟ್ಟನು. ಇದ್ರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: ‘ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡಿಸಿ ಅಶೇರವಿಗ್ರಹಸ್ತಂಭಗಳನ್ನು ಕಡಿಸಿಬಿಟ್ಟನು.’ (2 ಪೂರ್ವ. 14:3, 5) ಅಷ್ಟೇ ಅಲ್ಲ, ಅವ್ನು ತನ್ನ ಅಜ್ಜಿ ಮಾಕಳನ್ನ ಗದ್ದುಗೆಯಿಂದ ತಳ್ಳಿಬಿಟ್ಟನು. ಯಾಕೆಂದ್ರೆ ವಿಗ್ರಹಾರಾಧನೆ ಮಾಡೋಕೆ ಅವ್ಳು ಜನ್ರನ್ನ ಉತ್ತೇಜಿಸ್ತಿದ್ದಳು.—1 ಅರ. 15:11-13. *

3. ಈ ಲೇಖನದಲ್ಲಿ ನಾವೇನನ್ನು ತಿಳಿತೇವೆ?

3 ಆಸ ಸುಳ್ಳಾರಾಧನೆಯನ್ನ ತೆಗೆದುಹಾಕಿದ್ದು ಮಾತ್ರವಲ್ಲ ಸತ್ಯಾರಾಧನೆಯನ್ನ ಉತ್ತೇಜಿಸಿದ್ನು. ಯೆಹೂದ ರಾಜ್ಯದಲ್ಲಿರೋ ಎಲ್ರಿಗೂ ಯೆಹೋವನ ಹತ್ರ ವಾಪಸ್‌ ಬರೋಕೆ ಸಹಾಯ ಮಾಡಿದ್ನು. ಇದ್ರಿಂದಾಗಿ ಯೆಹೋವನು ಅವನನ್ನ ಮತ್ತು ಇಸ್ರಾಯೇಲ್ಯರನ್ನ ಆಶೀರ್ವದಿಸಿದನು. ಇದ್ರಿಂದಾಗಿ ರಾಜ್ಯದಲ್ಲಿ ಶಾಂತಿ * ಇತ್ತು. ಆಸ ಆಳ್ವಿಕೆ ಮಾಡಿದ ಕಾಲದಲ್ಲಿ ಹತ್ತು ವರ್ಷ “ಸಮಾಧಾನವಿತ್ತು.” (2 ಪೂರ್ವ. 14:1, 4, 6) ಆಸ ಈ ಶಾಂತಿಯ ಸಮಯವನ್ನ ಹೇಗೆ ಉಪಯೋಗಿಸಿಕೊಂಡನು ಅನ್ನೋದನ್ನ ಈ ಲೇಖನದಲ್ಲಿ ಚರ್ಚಿಸ್ತೇವೆ. ಅದ್ರ ನಂತ್ರ ಆಸನ ತರಾನೇ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಶಾಂತಿಯ ಸಮಯವನ್ನ ಹೇಗೆ ಉಪಯೋಗಿಸಿಕೊಂಡ್ರು ಅಂತನೂ ನೋಡ್ತೇವೆ. ಕೊನೇದಾಗಿ ನೀವಿರೋ ದೇಶದಲ್ಲಿ ಆರಾಧಿಸಲು ಸ್ವಾತಂತ್ರ್ಯ ಇರೋದಾದ್ರೆ ಈ ಶಾಂತಿಯ ಸಮಯವನ್ನ ನೀವು ಹೇಗೆ ಸರಿಯಾಗಿ ಉಪಯೋಗಿಸಿಕೊಳ್ಳಬಹುದು ಅನ್ನೋ ಪ್ರಶ್ನೆಗೂ ಉತ್ತರ ತಿಳಿತೇವೆ.

ಆಸ ಶಾಂತಿಯ ಸಮಯವನ್ನ ಹೇಗೆ ಉಪಯೋಗಿಸಿಕೊಂಡನು?

4. ಎರಡನೇ ಪೂರ್ವಕಾಲವೃತ್ತಾಂತ 14:2, 6, 7 ರ ಪ್ರಕಾರ ಆಸ ಶಾಂತಿಯ ಸಮ್ಯನ ಹೇಗೆ ಉಪಯೋಗಿಸಿಕೊಂಡನು?

4 2 ಪೂರ್ವಕಾಲವೃತ್ತಾಂತ 14:2, 6, 7 ಓದಿ. ಯೆಹೋವನು ‘ಸುತ್ತಣ ವೈರಿಗಳ ಭಯದಿಂದ ತಪ್ಪಿಸಿದ್ದಾನೆ’ ಅಂತ ಆಸನು ಜನ್ರಿಗೆ ಹೇಳಿದನು. ಈ ಶಾಂತಿಯ ಸಮ್ಯ ಆರಾಮಾಗಿರೋಕೆ ಸಿಕ್ಕಿರೋ ಸಮ್ಯ ಅಂತ ಅವ್ನು ನೆನೆಸಲಿಲ್ಲ. ಬದ್ಲಿಗೆ ಪಟ್ಟಣಗಳನ್ನ ಕಟ್ಟೋಕೆ, ಗೋಡೆ, ಬುರುಜು ಮತ್ತು ಬಾಗಿಲುಗಳನ್ನ ಭದ್ರಪಡಿಸೋಕೆ ಈ ಸಮ್ಯವನ್ನ ಉಪಯೋಗಿಸಿದ್ನು. ಅವ್ನು ಯೆಹೂದದ ಜನ್ರಿಗೆ “ದೇಶವು ಇನ್ನೂ ನಿರಾತಂಕವಾಗಿರುತ್ತದೆ” ಅಂದ್ನು. ಈ ಮಾತಿನ ಅರ್ಥ ಏನು? ಇದರರ್ಥ ದೇಶದಲ್ಲಿ ಜನ್ರು ಯಾವುದೇ ಭಯ ಇಲ್ದೇ ಎಲ್ಲಿ ಬೇಕಾದ್ರೂ ಹೋಗಬಹುದು ಮತ್ತು ಶತ್ರುಗಳ ಭಯ ಇಲ್ದೇ ಕಟ್ಟೋ ಕೆಲ್ಸ ಮಾಡಿ ಮುಗಿಸಬಹುದು ಅಂತಾಗಿತ್ತು. ಹೀಗೆ ಅವ್ನು ಈ ಶಾಂತಿಯ ಸಮಯವನ್ನ ಸರಿಯಾಗಿ ಉಪಯೋಗಿಸಿಕೊಳ್ಳುವಂತೆ ಜನ್ರಿಗೆ ಉತ್ತೇಜಿಸಿದ್ನು.

5. ಆಸ ಯಾಕೆ ಮಿಲಿಟರಿಯನ್ನ ಬಲಪಡಿಸಿದ್ನು?

5 ಆಸ ಈ ಶಾಂತಿಯ ಸಮ್ಯದಲ್ಲಿ ಮಿಲಿಟರಿಯನ್ನ ಬಲಪಡಿಸಿದ್ನು. (2 ಪೂರ್ವ. 14:8) ಅದರರ್ಥ ಅವ್ನು ಯೆಹೋವನ ಮೇಲೆ ಭರವಸೆ ಇಡಲಿಲ್ಲ ಅಂತನಾ? ಅಲ್ಲ. ಬದ್ಲಿಗೆ ಮುಂದೆ ಏನಾದ್ರೂ ಸಮಸ್ಯೆಗಳು ಬರೋದಾದ್ರೂ ಅದನ್ನ ಎದುರಿಸೋಕೆ ಜನರನ್ನ ಸಿದ್ಧಪಡಿಸೋದು ರಾಜನಾಗಿರೋ ತನ್ನ ಜವಾಬ್ದಾರಿ ಅಂತ ಆಸನಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ಈ ಶಾಂತಿಯ ಸಮ್ಯ ಹೀಗೆ ಶಾಶ್ವತವಾಗಿ ಮುಂದುವರಿಯಲ್ಲ, ಏನು ಬೇಕಾದ್ರೂ ಆಗಬಹುದು ಅಂತನೂ ಅವ್ನಿಗೆ ಗೊತ್ತಿತ್ತು ಮತ್ತು ಹಾಗೇ ಆಯ್ತು.

ಒಂದನೇ ಶತಮಾನದ ಕ್ರೈಸ್ತರು ಶಾಂತಿಯ ಸಮಯವನ್ನ ಹೇಗೆ ಉಪಯೋಗಿಸಿಕೊಂಡ್ರು?

6. ಒಂದನೇ ಶತಮಾನದ ಕ್ರೈಸ್ತರು ಶಾಂತಿಯ ಸಮ್ಯವನ್ನ ಹೇಗೆ ಉಪಯೋಗಿಸಿಕೊಂಡ್ರು?

6 ಒಂದನೇ ಶತಮಾನದ ಕ್ರೈಸ್ತರಿಗೆ ಕೆಲವೊಮ್ಮೆ ಹಿಂಸೆ ಬಂದ್ರೂ ಅವ್ರಿಗೆ ಶಾಂತಿಯ ಸಮಯ ಸಿಕ್ಕಿತು. ಆ ಅವಕಾಶವನ್ನ ಆಗಿನ ಶಿಷ್ಯರು ಹೇಗೆ ಉಪಯೋಗಿಸಿಕೊಂಡ್ರು? ಆ ನಂಬಿಗಸ್ತ ಸ್ತ್ರೀ ಪುರುಷರು ಬಿಡದೆ ಸುವಾರ್ತೆಯನ್ನ ಸಾರಿದ್ರು. ಅವ್ರು ‘ಯೆಹೋವನ ಭಯದಲ್ಲಿ ನಡೆದ್ರು’ ಅಂತ ಅಪೊಸ್ತಲರ ಕಾರ್ಯಗಳು ಪುಸ್ತಕ ಹೇಳುತ್ತೆ. ಅವರು ಸುವಾರ್ತೆಯನ್ನ ಸಾರುತ್ತಾ ಹೋಗಿದ್ರಿಂದ ಸಭೆಯು “ಅಭಿವೃದ್ಧಿಗೊಳ್ಳುತ್ತಾ” ಹೋಯ್ತು. ಹೀಗೆ ಈ ಶಾಂತಿಯ ಸಮ್ಯದಲ್ಲಿ ಅವ್ರು ಮಾಡಿದ ಹುರುಪಿನ ಸಾರೋ ಕೆಲ್ಸವನ್ನ ಯೆಹೋವನು ಆಶೀರ್ವದಿಸಿದನು.—ಅ. ಕಾ. 9:26-31.

7-8. ಪೌಲ ಮತ್ತು ಇತರರು ಅವಕಾಶ ಸಿಕ್ಕಿದಾಗ ಏನು ಮಾಡಿದ್ರು? ವಿವರಿಸಿ.

7 ಒಂದನೇ ಶತಮಾನದ ಶಿಷ್ಯರು ಸುವಾರ್ತೆ ಸಾರೋಕೆ ಸಿಕ್ಕಿದ ಪ್ರತಿಯೊಂದು ಅವಕಾಶವನ್ನ ಚೆನ್ನಾಗಿ ಉಪಯೋಗಿಸಿಕೊಂಡ್ರು. ಅಪೊಸ್ತಲ ಪೌಲನ ಉದಾಹರಣೆಯನ್ನ ನೋಡಿ. ತಾನು ಎಫೆಸದಲ್ಲಿದ್ರೆ ತುಂಬ ಜನರಿಗೆ ಸಾರಬಹುದು ಅಂತ ಗೊತ್ತಾದಾಗ ಅವನು ಅಲ್ಲೇ ಇದ್ದು ಜನ್ರಿಗೆ ಸಾರಿ ಶಿಷ್ಯರನ್ನಾಗಿ ಮಾಡಿದ್ನು.—1 ಕೊರಿಂ. 16:8, 9.

8 ಕ್ರಿ.ಶ. 49 ರಲ್ಲಿ ಪೌಲ ಮತ್ತು ಕ್ರೈಸ್ತರಿಗೆ ಸುವಾರ್ತೆ ಸಾರೋ ಅವಕಾಶ ಸಿಕ್ತು. ಆ ವರ್ಷದಲ್ಲಿ ಸುನ್ನತಿಯ ಕುರಿತಾದ ವಿವಾದ ಇತ್ಯರ್ಥ ಮಾಡಲಾಯ್ತು ಮತ್ತು ಅದನ್ನ ಸಭೆಗಳಿಗೆ ತಿಳಿಸಲಾಯ್ತು. (ಅ. ಕಾ. 15:23-29) ಆಗ ಪೌಲ ಮತ್ತು ಇತರರು ಇನ್ನೂ ಹೆಚ್ಚು ಪ್ರಯತ್ನ ಹಾಕಿ “ಯೆಹೋವನ ವಾಕ್ಯದ ಕುರಿತು” ಸಾರಿದ್ರು. (ಅ. ಕಾ. 15:30-35) ಇದ್ರಿಂದಾಗಿ “ಸಭೆಗಳು ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಾ ದಿನೇದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದವು” ಅಂತ ಬೈಬಲ್‌ ಹೇಳುತ್ತೆ.—ಅ. ಕಾ. 16:4, 5.

ನಿಮಗೆ ಸಿಕ್ಕಿರೋ ಶಾಂತಿ ಸಮ್ಯನ ಉಪಯೋಗಿಸಿಕೊಳ್ಳಿ

9. (ಎ) ಇವತ್ತು ಅನೇಕ ದೇಶಗಳಲ್ಲಿ ಯಾವ ಪರಿಸ್ಥಿತಿ ಇದೆ? (ಬಿ) ನಾವು ಯಾವ ಪ್ರಶ್ನೆಯನ್ನ ಕೇಳಿಕೊಳ್ಳಬೇಕು?

9 ಇವತ್ತು ಅನೇಕ ದೇಶಗಳಲ್ಲಿ ನಮ್ಗೆ ಸಾರೋಕೆ ಸ್ವಾತಂತ್ರ್ಯ ಇದೆ. ನೀವಿರೋ ದೇಶದಲ್ಲೂ ಆರಾಧನೆ ಮಾಡೋ ಸ್ವಾತಂತ್ರ್ಯ ಇದ್ಯಾ? ಹಾಗಿದ್ರೆ ‘ನಾನು ಈ ಸ್ವಾತಂತ್ರ್ಯನ ಹೇಗೆ ಉಪಯೋಗಿಸಿಕೊಳ್ತಿದ್ದೀನಿ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಈ ಕಡೇ ದಿವಸಗಳು ಯೆಹೋವನ ಜನ್ರಿಗೆ ತುಂಬ ಆಸಕ್ತಿಯ ದಿನಗಳಾಗಿವೆ. ಯಾಕೆಂದ್ರೆ ಲೋಕದಲ್ಲಿ ಹಿಂದೆ ಯಾವತ್ತೂ ಆಗದೇ ಇರೋವಷ್ಟು ದೊಡ್ಡ ಮಟ್ಟದಲ್ಲಿ ಅವ್ರು ಸಾರುವ ಮತ್ತು ಕಲಿಸುವ ಕೆಲ್ಸ ಮಾಡ್ತಿದ್ದಾರೆ. (ಮಾರ್ಕ 13:10) ಈ ಕೆಲ್ಸದಲ್ಲಿ ಭಾಗವಹಿಸಲು ನಾವು ಅನೇಕ ವಿಷ್ಯಗಳನ್ನ ಮಾಡಬಹುದು.

ಅನೇಕರು ಬೇರೆ ದೇಶಕ್ಕೆ ಹೋಗಿ ಸಾರುತ್ತಿದ್ದಾರೆ ಮತ್ತು ಬೇರೆ ಭಾಷೆಯಲ್ಲಿ ಸಾರುತ್ತಿದ್ದಾರೆ. ಇದ್ರಿಂದ ತುಂಬ ಆಶೀರ್ವಾದ ಪಡ್ಕೊಂಡಿದ್ದಾರೆ (ಪ್ಯಾರ 10-12 ನೋಡಿ) *

10. ಎರಡನೇ ತಿಮೊಥೆಯ 4:2 ನಾವೇನು ಮಾಡಬೇಕಂತ ಉತ್ತೇಜನ ಕೊಡುತ್ತೆ?

10 ಈ ಶಾಂತಿಯ ಸಮ್ಯನ ನೀವು ಹೇಗೆ ಉಪಯೋಗಿಸಿಕೊಳ್ಳಬಹುದು? (2 ತಿಮೊಥೆಯ 4:2 ಓದಿ.) ನೀವು ಅಥ್ವಾ ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರೋ ಒಬ್ರು ಸೇವೆನ ಇನ್ನೂ ಹೆಚ್ಚು ಮಾಡೋಕಾಗುತ್ತಾ? ಅಥವಾ ಪಯನೀಯರ್‌ ಸೇವೆ ಮಾಡೋಕಾಗುತ್ತಾ? ಅಂತ ಯೋಚಿಸಿ. ನೆನಪಿಡಿ, ಈ ಸಮ್ಯ ನಾವು ಹಣ, ಸಂಪತ್ತು, ವಸ್ತುಗಳನ್ನ ಕೂಡಿಸಿಟ್ಟುಕೊಳ್ಳೋ ಸಮ್ಯ ಅಲ್ಲ. ಯಾಕಂದ್ರೆ ಅದ್ಯಾವುದೂ ಮಹಾ ಸಂಕಟದ ಸಮ್ಯದಲ್ಲಿ ಪ್ರಯೋಜನಕ್ಕೆ ಬರಲ್ಲ.—ಜ್ಞಾನೋ. 11:4; ಮತ್ತಾ. 6:31-33; 1 ಯೋಹಾ. 2:15-17.

11. ಹೆಚ್ಚು ಜನ್ರಿಗೆ ಸುವಾರ್ತೆ ಸಾರಲಿಕ್ಕಾಗಿ ಅನೇಕರು ಏನು ಮಾಡಿದ್ದಾರೆ?

11 ಅನೇಕ ಪ್ರಚಾರಕರು ಹೊಸ ಭಾಷೆಯನ್ನ ಕಲಿತು ಸುವಾರ್ತೆ ಸಾರುತ್ತಿದ್ದಾರೆ ಮತ್ತು ಜನ್ರಿಗೆ ಕಲಿಸ್ತಿದ್ದಾರೆ. ನಮ್ಮ ಸಂಘಟನೆ ಸಹ ಅನೇಕ ಭಾಷೆಗಳಲ್ಲಿ ಬೈಬಲ್‌ ಆಧರಿತ ಸಾಹಿತ್ಯಗಳನ್ನ ತಯಾರಿಸಿದೆ. ಹೀಗೆ ಅವ್ರಿಗೆ ಬೆಂಬಲ ಕೊಡ್ತಾ ಇದೆ. ಉದಾಹರಣೆಗೆ 2010 ರಲ್ಲಿ ನಮ್ಮ ಸಾಹಿತ್ಯಗಳು ಸುಮಾರು 500 ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದವು. ಆದ್ರೆ ಈಗ ಸಾವಿರಕ್ಕೂ ಹೆಚ್ಚು ಭಾಷೆಗಳಲ್ಲಿದೆ.

12. ನಾವು ದೇವ್ರ ರಾಜ್ಯದ ಸಂದೇಶವನ್ನ ಜನ್ರ ಸ್ವಂತ ಭಾಷೆಯಲ್ಲಿ ಸಾರೋದ್ರಿಂದ ಅವ್ರಿಗೆ ಯಾವ ಪ್ರಯೋಜನ ಆಗುತ್ತೆ? ಒಂದು ಉದಾಹರಣೆ ಕೊಡಿ.

12 ಜನ್ರು ದೇವ್ರ ವಾಕ್ಯವನ್ನ ಅವ್ರ ಸ್ವಂತ ಭಾಷೆಯಲ್ಲಿ ಕೇಳಿಸ್ಕೊಂಡಾಗ ಅವ್ರ ಮೇಲೆ ಯಾವ ಪರಿಣಾಮ ಆಗುತ್ತೆ? ಇದನ್ನ ತಿಳ್ಕೊಳ್ಳೋಕೆ ಅಮೇರಿಕಾದಲ್ಲಿರೋ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಅವ್ರು ಕಿನ್ಯಾರುವಾಂಡ ಭಾಷೆಯವ್ರು. ಈ ಭಾಷೆಯನ್ನ ಹೆಚ್ಚಾಗಿ ರುವಾಂಡ, ಕಾಂಗೋ (ಕಿನ್ಶಾಸ), ಮತ್ತು ಉಗಾಂಡ ದೇಶದಲ್ಲಿ ಮಾತಾಡಲಾಗುತ್ತೆ. ಅಮೇರಿಕಾದ ಮೆಂಫಿಸ್‌ ಅನ್ನೋ ಪಟ್ಟಣದಲ್ಲಿ ಕಿನ್ಯಾರುವಾಂಡ ಭಾಷೆಯಲ್ಲಿ ಅಧಿವೇಶನ ನಡೆದಾಗ ಈ ಸಹೋದರಿ ಅದಕ್ಕೆ ಹಾಜರಾದ್ರು. ನಂತ್ರ ಆ ಸಹೋದರಿ ಹೀಗೆ ಹೇಳಿದ್ರು: “ನಾನು ಅಮೇರಿಕಕ್ಕೆ ಬಂದು 17 ವರ್ಷ ಆಯ್ತು. ಆದ್ರೆ ಅಧಿವೇಶನವನ್ನ ನಾನು ಪೂರ್ತಿಯಾಗಿ ಅರ್ಥಮಾಡ್ಕೊಂಡಿದ್ದು ಇದೇ ಮೊದಲನೇ ಸಲ.” ಆ ಕಾರ್ಯಕ್ರಮವನ್ನ ತನ್ನ ಸ್ವಂತ ಭಾಷೆಯಲ್ಲಿ ಕೇಳಿಸ್ಕೊಂಡಾಗ ಆ ಸಹೋದರಿ ಮೇಲೆ ಅದು ತುಂಬ ಪ್ರಭಾವ ಬೀರಿತು ಅಂತ ಇದ್ರಿಂದ ಗೊತ್ತಾಗುತ್ತೆ. ಹಾಗಾಗಿ ನಿಮ್ಮ ಪರಿಸ್ಥಿತಿ ಅನುಮತಿಸೋದಾದ್ರೆ ನಿಮ್ಮ ಟೆರಿಟೊರಿಯಲ್ಲಿ ಇರೋರಿಗೆ ಸಾರಲಿಕ್ಕಾಗಿ ನೀವು ಹೊಸ ಭಾಷೆ ಕಲಿಯೋಕಾಗುತ್ತಾ? ನಿಮ್ಮ ಟೆರಿಟೊರಿಯಲ್ಲಿರೋ ಕೆಲವ್ರಿಗೆ ಸ್ಥಳೀಯ ಭಾಷೆ ಅಷ್ಟೊಂದು ಚೆನ್ನಾಗಿ ಬರದೇ ಇರಬಹುದು. ಹಾಗಾಗಿ ಅವ್ರು ಸ್ವಂತ ಭಾಷೆಯಲ್ಲಿ ಮಾತಾಡೋಕೆ ಇಷ್ಟಪಡಬಹುದು. ಆಗ ನೀವು ಅವ್ರ ಭಾಷೆಯಲ್ಲಿ ಮಾತಾಡೋದಾದ್ರೆ ಅವ್ರಿಗೆ ಖುಷಿ ಆಗುತ್ತಲ್ವಾ? ಇದನ್ನ ಮಾಡಿ ಪ್ರತಿಫಲ ಪಡಿಯೋವಾಗ ನಿಮಗೂ ಖುಷಿ ಆಗುತ್ತೆ.

13. ರಷ್ಯಾದ ಸಹೋದರರು ಶಾಂತಿಯ ಸಮ್ಯವನ್ನ ಹೇಗೆ ಉಪಯೋಗಿಸಿಕೊಂಡ್ರು?

13 ಕೆಲ್ವು ದೇಶಗಳಲ್ಲಿ ಸಹೋದರ ಸಹೋದರಿಯರಿಗೆ ಸಾರುವ ಸ್ವಾತಂತ್ರ್ಯ ಇಲ್ಲ. ಯಾಕಂದ್ರೆ ಅಲ್ಲಿನ ಸರಕಾರ ಸಾರೋ ಕೆಲ್ಸವನ್ನ ನಿಷೇಧಿಸಿದೆ. ರಷ್ಯಾದ ಸಹೋದರರ ಉದಾಹರಣೆ ಗಮನಿಸಿ. ಅನೇಕ ವರ್ಷಗಳು ಹಿಂಸೆಯನ್ನ ಅನುಭವಿಸಿದ ನಂತ್ರ 1991 ರಲ್ಲಿ ಸರಕಾರ ಅವ್ರಿಗೆ ಆರಾಧನೆಯನ್ನ ಮಾಡುವ ಸ್ವಾತಂತ್ರ್ಯ ಕೊಟ್ಟಿತು. ಆ ಸಮ್ಯದಲ್ಲಿ ರಷ್ಯಾದಲ್ಲಿ 16,000 ಪ್ರಚಾರಕರು ಇದ್ರು. ಅಲ್ಲಿಂದ ಇಪ್ಪತ್ತು ವರ್ಷಗಳ ನಂತ್ರ ಪ್ರಚಾರಕರ ಸಂಖ್ಯೆ 1,60,000 ಆಯ್ತು. ಸಾರಲು ಸಿಕ್ಕಿದ ಅವಕಾಶವನ್ನ ಅವ್ರು ಚೆನ್ನಾಗಿ ಉಪಯೋಗಿಸಿಕೊಂಡ್ರು ಅಂತ ಇದ್ರಿಂದ ಸ್ಪಷ್ಟ ಆಗುತ್ತೆ. ಆದ್ರೆ ಈ ಶಾಂತಿಯ ಸಮ್ಯ ಹೆಚ್ಚು ಕಾಲ ಉಳೀಲಿಲ್ಲ. ಪರಿಸ್ಥಿತಿ ಬದಲಾದ್ರೂ ಸತ್ಯಾರಾಧನೆ ಕಡೆ ಅವರಿಗಿರೋ ಹುರುಪು ಕಡಿಮೆ ಆಗಿಲ್ಲ. ಅವ್ರು ತಮ್ಮಿಂದಾಗೋದೆಲ್ಲ ಮಾಡ್ತಾ ಯೆಹೋವನ ಆರಾಧನೆಯನ್ನ ಮುಂದುವರಿಸ್ತಿದ್ದಾರೆ.

ಶಾಂತಿಯ ಸಮ್ಯ ಹೆಚ್ಚು ಕಾಲ ಉಳಿಯಲ್ಲ

ರಾಜ ಆಸನು ಭರವಸೆಯಿಂದ ಪ್ರಾರ್ಥಿಸಿದ ನಂತರ ವಿರೋಧಿಗಳ ಮಹಾ ಸೈನ್ಯವನ್ನು ಸೋಲಿಸಲು ಯೆಹೋವನು ಯೆಹೂದಕ್ಕೆ ಸಹಾಯ ಮಾಡಿದನು (ಪ್ಯಾರ 14-15 ನೋಡಿ)

14-15. ಯೆಹೋವನು ಆಸನಿಗೆ ಮತ್ತು ಅವನ ಜನರಿಗೆ ಹೇಗೆ ಸಹಾಯ ಮಾಡಿದನು?

14 ಆಸನ ದಿನಗಳಲ್ಲೂ ಶಾಂತಿಯ ಸಮಯ ಹೆಚ್ಚು ಕಾಲ ಉಳೀಲಿಲ್ಲ. 1 ಲಕ್ಷಕ್ಕಿಂತ ಹೆಚ್ಚು ಸೈನಿಕರಿದ್ದ ಇಥಿಯೋಪ್ಯದ ದೊಡ್ಡ ಸೈನ್ಯ ಅವ್ರ ಮೇಲೆ ಆಕ್ರಮಣ ಮಾಡಿತು. ಅದ್ರ ಸೇನಾಧಿಕಾರಿಯಾಗಿದ್ದ ಜೆರಹನು ಯೆಹೂದವನ್ನ ತಾನು ಖಂಡಿತ ಸೋಲಿಸ್ತೇನೆ ಅನ್ನೋ ದೃಢಭರವಸೆಯಿಂದಿದ್ದ. ಆದ್ರೆ ರಾಜ ಆಸ ತನ್ನ ಸೈನ್ಯದ ಮೇಲಲ್ಲ ತನ್ನ ದೇವರಾದ ಯೆಹೋವನ ಮೇಲೆ ಭರವಸೆ ಇಟ್ಟಿದ್ದ. ಅವ್ನು “ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು. ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ” ಎಂದು ಪ್ರಾರ್ಥಿಸಿದನು.—2 ಪೂರ್ವ. 14:11.

15 ಇಥಿಯೋಪ್ಯದ ಸೈನ್ಯ ಆಸನ ಸೈನ್ಯಕ್ಕಿಂತ ಸುಮಾರು ಎರಡು ಪಟ್ಟು ದೊಡ್ಡದಾಗಿತ್ತು. ಆದ್ರೆ ಆಸನಿಗೆ ಯೆಹೋವನ ಶಕ್ತಿ ಮೇಲೆ ನಂಬಿಕೆ ಇತ್ತು. ತನ್ನ ಜನ್ರಿಗೆ ಸಹಾಯ ಮಾಡೋಕೆ ಆತನಿಗಾಗುತ್ತೆ ಅಂತ ಭರವಸೆ ಇಟ್ಟಿದ್ದನು. ಆ ಭರವಸೆ ಸುಳ್ಳಾಗಲಿಲ್ಲ. ಯೆಹೋವನು ಅವ್ರಿಗೆ ಸಹಾಯ ಮಾಡಿದ್ನು ಮತ್ತು ಇಥಿಯೋಪ್ಯದ ಸೈನ್ಯ ಸೋತು ಹೋಯ್ತು.—2 ಪೂರ್ವ. 14:8-13.

16. ಶಾಂತಿಯ ಸಮ್ಯ ಹೆಚ್ಚು ಕಾಲ ಉಳಿಯಲ್ಲ ಅಂತ ನಮ್ಗೆ ಹೇಗೆ ಗೊತ್ತು?

16 ಮುಂದೆ ನಮ್ಮಲ್ಲಿ ಒಬ್ಬೊಬ್ಬರಿಗೂ ಏನಾಗುತ್ತೆ ಅಂತ ನಮ್ಗೆ ಗೊತ್ತಿಲ್ಲ. ಆದ್ರೆ ದೇವಜನ್ರಾಗಿ ನಾವು ಅನುಭವಿಸ್ತಿರೋ ಈ ಶಾಂತಿಯು ಹೆಚ್ಚು ಕಾಲ ಉಳಿಯಲ್ಲ ಅನ್ನೋದು ನಮ್ಗೆ ಗೊತ್ತಿದೆ. ಕಡೇ ದಿವಸಗಳಲ್ಲಿ ತನ್ನ ಶಿಷ್ಯರನ್ನ ‘ಜನಾಂಗಗಳು ದ್ವೇಷಿಸ್ತವೆ’ ಅಂತ ಯೇಸು ಮುಂಚೆನೇ ತಿಳಿಸಿದ್ದನು. (ಮತ್ತಾ. 24:9) “ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವಭಕ್ತಿಯಿಂದ ಜೀವಿಸಲು ಬಯಸುವವರೆಲ್ಲರೂ ಹಿಂಸೆಗೂ ಒಳಗಾಗುವರು” ಅಂತ ಅಪೊಸ್ತಲ ಪೌಲ ಸಹ ಹೇಳಿದ್ದನು. (2 ತಿಮೊ. 3:12) ಸೈತಾನನು ಮಹಾ ಕೋಪದಿಂದ ಇದ್ದಾನೆ ಮತ್ತು ಆ ಕೋಪದ ಪರಿಣಾಮಗಳಿಂದ ತಪ್ಪಿಸಿಕೊಳ್ಳೋಕೆ ನಮ್ಮಲ್ಲಿ ಯಾರಿಂದನೂ ಆಗಲ್ಲ.—ಪ್ರಕ. 12:12.

17. ನಮ್ಮ ನಂಬಿಕೆ ಹೇಗೆ ಪರೀಕ್ಷೆಗೆ ಒಳಗಾಗಬಹುದು?

17 ಬಲುಬೇಗನೆ ನಮ್ಮಲ್ಲಿ ಪ್ರತಿಯೊಬ್ರಿಗೂ ನಂಬಿಕೆಯ ಪರೀಕ್ಷೆ ಬರುತ್ತೆ. ಅಷ್ಟೇ ಅಲ್ಲ, ‘ಲೋಕದ ಆರಂಭದಿಂದ ಇಂದಿನ ವರೆಗೆ ಸಂಭವಿಸದೇ ಇರುವಂಥ ಮಹಾ ಸಂಕಟವನ್ನ’ ಇಡೀ ಲೋಕ ಅನುಭವಿಸಲಿದೆ. (ಮತ್ತಾ. 24:21) ಆ ಸಮ್ಯದಲ್ಲಿ ನಮ್ಮ ಕುಟುಂಬದವರೇ ನಮ್ಮ ವಿರುದ್ಧ ಏಳಬಹುದು ಅಥವಾ ಸರ್ಕಾರ ನಮ್ಮ ಕೆಲ್ಸವನ್ನ ನಿಷೇಧಿಸಬಹುದು. (ಮತ್ತಾ. 10:35, 36) ಆಗ ನಮ್ಮಲ್ಲಿ ಪ್ರತಿಯೊಬ್ರೂ ಆಸನಂತೆ ಸಹಾಯ ಮತ್ತು ಸಂರಕ್ಷಣೆಗಾಗಿ ಯೆಹೋವನ ಮೇಲೆ ಭರವಸೆ ಇಡ್ತೀವಾ?

18. ಇಬ್ರಿಯ 10:38, 39 ರ ಪ್ರಕಾರ ಮುಂದೆ ಬರಲಿರೋ ವಿಷ್ಯಗಳನ್ನ ಎದುರಿಸಲು ತಯಾರಾಗೋಕೆ ನಮ್ಗೆ ಯಾವುದು ಸಹಾಯ ಮಾಡುತ್ತೆ?

18 ಮುಂದೆ ಏನೇ ಆಗೋದಾದ್ರೂ ಅದನ್ನ ಎದುರಿಸೋಕೆ ಯೆಹೋವನು ನಮ್ಮನ್ನು ತಯಾರುಗೊಳಿಸುತ್ತಿದ್ದಾನೆ. ಆತನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನ’ ಮೂಲಕ ನಮ್ಗೆ “ತಕ್ಕ ಸಮಯಕ್ಕೆ” ಬೇಕಾದ ಮಾರ್ಗದರ್ಶನ ಕೊಡ್ತಿದ್ದಾನೆ. ಹೀಗೆ ನಮ್ಮ ನಂಬಿಕೆ ಬಲವಾಗೋಕೆ ಸಹಾಯ ಮಾಡ್ತಿದ್ದಾನೆ. (ಮತ್ತಾ. 24:45) ಆದ್ರೆ ನಾವು ಸಹ ನಂಬಿಕೆಯನ್ನ ಬಲಪಡಿಸೋಕೆ ನಮ್ಮಿಂದಾಗೋದೆಲ್ಲ ಮಾಡ್ಬೇಕು.—ಇಬ್ರಿಯ 10:38, 39 ಓದಿ.

19-20. (ಎ) ಒಂದನೇ ಪೂರ್ವಕಾಲವೃತ್ತಾಂತ 28:9ನ್ನ ಮನಸ್ಸಲ್ಲಿಟ್ಟು ನಾವು ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು? (ಬಿ) ನಾವು ಈ ಪ್ರಶ್ನೆಗಳನ್ನ ಯಾಕೆ ಕೇಳಿಕೊಳ್ಳಬೇಕು?

19 ನಾವು ಸಹ ರಾಜ ಆಸನಂತೆ “ಯೆಹೋವನನ್ನ ಹುಡುಕಬೇಕು.” (2 ಪೂರ್ವ. 14:4; 15:1, 2) ಯೆಹೋವನನ್ನ ತಿಳ್ಕೊಂಡು ದೀಕ್ಷಾಸ್ನಾನ ತಗೊಂಡಾಗ ಆತನನ್ನ ಹುಡುಕೋಕೆ ಶುರುಮಾಡಿರ್ತೇವೆ. ಆದ್ರೆ ಈಗ್ಲೂ ಯೆಹೋವನ ಮೇಲೆ ನಮ್ಗಿರೋ ಪ್ರೀತಿನ ಬಲಪಡಿಸಿಕೊಳ್ಳೋಕೆ ಸಿಗೋ ಪ್ರತಿಯೊಂದು ಅವಕಾಶವನ್ನ ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. ಇದನ್ನ ನಾವು ಮಾಡ್ತಿದ್ದೀವಾ ಅಂತ ಪರೀಕ್ಷಿಸಿಕೊಳ್ಳೋಕೆ “ನಾನು ಸಭಾಕೂಟಗಳಿಗೆ ತಪ್ಪದೇ ಹಾಜರಾಗ್ತಿದ್ದೀನಾ?” ಅಂತ ನಮ್ಮನ್ನೇ ಕೇಳಿಕೊಳ್ಳಬೇಕು. ಯೆಹೋವನ ಸಂಘಟನೆಯಿಂದ ಏರ್ಪಡಿಸಲಾದ ಈ ಕೂಟಗಳಿಗೆ ಹಾಜರಾದ್ರೆ ನಮ್ಗೆ ಚೈತನ್ಯ ಸಿಗುತ್ತೆ ಮತ್ತು ಸಹೋದರ ಸಹೋದರಿಯರಿಂದ ಉತ್ತೇಜನ ಸಿಗುತ್ತೆ. (ಮತ್ತಾ. 11:28) ನಾವು ಈ ಪ್ರಶ್ನೆನೂ ಕೇಳ್ಕೊಬೇಕು: ‘ನಾನು ತಪ್ಪದೇ ಬೈಬಲನ್ನ ಅಧ್ಯಯನ ಮಾಡ್ತಿದ್ದೀನಾ?’ ನಿಮಗೆ ಕುಟುಂಬ ಇರೋದಾದ್ರೆ ‘ನಾವು ಪ್ರತೀ ವಾರ ತಪ್ಪದೇ ಕುಟುಂಬ ಆರಾಧನೆ ಮಾಡ್ತಿದ್ದೀವಾ?’ ಅಂತ ಕೇಳ್ಕೊಬೇಕು. ಒಂದು ವೇಳೆ ನೀವು ಒಬ್ರೇ ಇರೋದಾದ್ರೆ ‘ಕುಟುಂಬ ಆರಾಧನೆಯ ಸಮ್ಯವನ್ನ ವೈಯಕ್ತಿಕ ಅಧ್ಯಯನಕ್ಕೆ ಉಪಯೋಗಿಸಿಕೊಳ್ತಿದ್ದೀನಾ’ ಅಂತ ಕೇಳ್ಕೊಳ್ಳಿ. ಜೊತೆಗೆ, ‘ಬೇರೆಯವ್ರಿಗೆ ಸಾರೋಕೆ ಮತ್ತು ಕಲಿಸೋಕೆ ನನ್ನಿಂದಾಗೋದೆಲ್ಲ ಮಾಡ್ತಿದ್ದೀನಾ?’ ಅಂತಾನೂ ಕೇಳ್ಕೊಬೇಕು.

20 ನಾವ್ಯಾಕೆ ಆ ಪ್ರಶ್ನೆಗಳನ್ನ ಯಾಕೆ ಕೇಳಿಕೊಳ್ಳಬೇಕು? ಯೆಹೋವನು ನಮ್ಮ ಹೃದಯದಲ್ಲೇನಿದೆ, ನಮ್ಮ ಯೋಚನೆಗಳೇನು ಅಂತ ಪರೀಕ್ಷೆ ಮಾಡ್ತಾನೆ ಅಂತ ಬೈಬಲ್‌ ಹೇಳುತ್ತೆ. ಹಾಗಾಗಿ ನಾವು ಸಹ ಪರೀಕ್ಷೆ ಮಾಡಿಕೊಳ್ಳಬೇಕು. (1 ಪೂರ್ವಕಾಲವೃತ್ತಾಂತ 28:9 ಓದಿ.) ನಮ್ಮ ಗುರಿಗಳು, ಸ್ವಭಾವ ಅಥವಾ ಯೋಚನೆಯಲ್ಲಿ ಏನಾದ್ರೂ ಬದಲಾವಣೆ ಮಾಡ್ಕೊಬೇಕು ಅಂತ ನಮ್ಗೆ ಗೊತ್ತಾಗೋದಾದ್ರೆ ಅದನ್ನ ಮಾಡ್ಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಕೇಳಿಕೊಳ್ಳಬೇಕು. ಮುಂದೆ ಬರೋ ಪರೀಕ್ಷೆಗಳನ್ನ ಎದುರಿಸೋಕೆ ತಯಾರಾಗೋ ಸಮ್ಯ ಇದೇ ಆಗಿದೆ. ಹಾಗಾಗಿ ಈಗ ಇರೋ ಶಾಂತಿಯ ಸಮ್ಯವನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ. ಇದಕ್ಕೆ ಯಾವುದೇ ವಿಷ್ಯನೂ ತಡೆಯಾಗದೇ ಇರೋ ತರ ನೋಡ್ಕೊಳ್ಳಿ.

ಗೀತೆ 28 ಹೊಸ ಕೀರ್ತನೆ

^ ಪ್ಯಾರ. 5 ನೀವಿರೋ ದೇಶದಲ್ಲಿ ಯೆಹೋವನನ್ನ ಆರಾಧಿಸೋ ಸ್ವಾತಂತ್ರ್ಯ ಇದ್ಯಾ? ಹಾಗಿದ್ರೆ, ಈ ಶಾಂತಿಯ ಸಮ್ಯನ ನೀವು ಹೇಗೆ ಉಪಯೋಗಿಸ್ತಾ ಇದ್ದೀರಾ? ಯೆಹೂದದ ರಾಜ ಆಸ ಮತ್ತು ಒಂದನೇ ಶತಮಾನದ ಕ್ರೈಸ್ತರು ಶಾಂತಿಯ ಸಮ್ಯವನ್ನ ವಿವೇಕದಿಂದ ಉಪಯೋಗಿಸಿದ್ರು. ನಾವು ಅವ್ರನ್ನ ಹೇಗೆ ಅನುಕರಿಸಬಹುದು ಅಂತ ತಿಳ್ಕೊಳ್ಳೋಕೆ ಈ ಲೇಖನ ನಮ್ಗೆ ಸಹಾಯ ಮಾಡುತ್ತೆ.

^ ಪ್ಯಾರ. 2 1 ಅರಸುಗಳು 15:13 ರಲ್ಲಿ ಮಾಕಳು ಆಸನ ತಾಯಿ ಅಂತ ಹೇಳಲಾಗಿದೆ. ಆದ್ರೆ ಅವ್ಳು ಆಸನ ಅಜ್ಜಿ ಮತ್ತು ರಾಜಮಾತೆಯಾಗಿದ್ಳು.

^ ಪ್ಯಾರ. 3 ಪದ ವಿವರಣೆ: ಶಾಂತಿ ಅನ್ನೋ ಪದ ಯುದ್ಧ ಇಲ್ದೇ ಇರೋ ಪರಿಸ್ಥಿತಿಯನ್ನ ಮಾತ್ರ ಸೂಚಿಸಲ್ಲ. ಇದಕ್ಕಿರೋ ಹೀಬ್ರು ಪದ ಆರೋಗ್ಯ, ಸಂರಕ್ಷಣೆ ಮತ್ತು ನೆಮ್ಮದಿಯನ್ನ ಸೂಚಿಸುತ್ತೆ.

^ ಪ್ಯಾರ. 58 ಚಿತ್ರ ವಿವರಣೆ: ತನ್ನ ಅಜ್ಜಿ ಸುಳ್ಳಾರಾಧನೆಯನ್ನ ಉತ್ತೇಜಿಸಿದ್ರಿಂದ ರಾಜ ಆಸನು ಅವಳನ್ನು ಗದ್ದುಗೆಯಿಂದ ತಳ್ಳಿಬಿಟ್ಟನು. ಆಸನ ನಿಷ್ಠಾವಂತ ಬೆಂಬಲಿಗರು ಅವ್ನ ಮಾದರಿಯನ್ನ ಅನುಕರಿಸ್ತಾ ವಿಗ್ರಹಗಳನ್ನ ತೆಗೆದುಹಾಕಿದ್ರು.

^ ಪ್ಯಾರ. 60 ಚಿತ್ರ ವಿವರಣೆ: ಹೆಚ್ಚಿನ ಪ್ರಚಾರಕರ ಅಗತ್ಯ ಇರೋ ಸ್ಥಳದಲ್ಲಿ ಸೇವೆ ಮಾಡಲಿಕ್ಕಾಗಿ ಒಬ್ಬ ಹುರುಪಿನ ದಂಪತಿ ತಮ್ಮ ಜೀವನವನ್ನ ಸರಳ ಮಾಡ್ಕೊಂಡಿದ್ದಾರೆ.