ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 35

ವಯಸ್ಸಾದವರು ದೇವರು ಕೊಟ್ಟ ವರ

ವಯಸ್ಸಾದವರು ದೇವರು ಕೊಟ್ಟ ವರ

“ತಲೆಯ ನರೆಗೂದಲೇ ಸುಂದರ ಕಿರೀಟ.”—ಜ್ಞಾನೋ. 16:31.

ಗೀತೆ 90 ನರೆಗೂದಲಲ್ಲಿ ಸೌಂದರ್ಯ

ಕಿರುನೋಟ *

1-2. (ಎ) ವಯಸ್ಸಾದವರನ್ನ ಹೇಗೆ ನೋಡಬೇಕು ಅಂತ ಜ್ಞಾನೋಕ್ತಿ 16:31 ಹೇಳುತ್ತೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ?

ವಜ್ರಗಳನ್ನ ಪಾಲೀಷ್‌ ಮಾಡಲಿಲ್ಲ ಅಂದ್ರೆ ಅವು ಕಲ್ಲುಗಳ ತರ ಕಾಣಿಸುತ್ತೆ, ಹೊಳಿಯಲ್ಲ. ಅವು ಬೆಲೆಬಾಳುವ ವಜ್ರ ಅಂತ ನೋಡುವವರಿಗೆ ಗೊತ್ತಾಗಲ್ಲ. ಅದನ್ನ ನೋಡಿ ಸುಮ್ಮನೆ ಹಾಗೇ ಹೋಗಿಬಿಡ್ತಾರೆ.

2 ವಯಸ್ಸಾಗಿರೋ ನಮ್ಮ ಸಹೋದರ ಸಹೋದರಿಯರು ಈ ವಜ್ರದ ತರ ಅಮೂಲ್ಯ. ಅದಕ್ಕೆ ಬೈಬಲ್‌ ನರೆಗೂದಲನ್ನ ಸುಂದರ ಕಿರೀಟಕ್ಕೆ ಹೋಲಿಸುತ್ತೆ. (ಜ್ಞಾನೋಕ್ತಿ 16:31 ಓದಿ; 20:29) ವಯಸ್ಸಾದವರಿಂದ ನಾವು ತುಂಬ ವಿಷಯಗಳನ್ನ ಕಲಿಯೋಕೆ ಆಗುತ್ತೆ. ಅದನ್ನ ಯಾವ ಬೆಳ್ಳಿ ಬಂಗಾರಕ್ಕೂ ಹೋಲಿಸೋಕೆ ಆಗಲ್ಲ. ನಮ್ಮ ಜೀವನದಲ್ಲಿ ಅವು ಅಷ್ಟು ಪ್ರಯೋಜನ ತರುತ್ತೆ. ಆದ್ರೆ ಚಿಕ್ಕವರು ಕೆಲವೊಮ್ಮೆ ಅದನ್ನ ಗುರುತಿಸಲ್ಲ. ಈ ಲೇಖನದಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ. (1) ಯೆಹೋವ ದೇವರು ವಯಸ್ಸಾದವರನ್ನ ಯಾಕೆ ನಿಧಿ ತರ ನೋಡ್ತಾರೆ? (2) ವಯಸ್ಸಾದವರು ಸಂಘಟನೆಗೆ ಹೇಗೆ ಅಮೂಲ್ಯವಾಗಿದ್ದಾರೆ? (3) ಅವರ ಅನುಭವದಿಂದ ಕಲಿಯೋಕೆ ನಾವೇನು ಮಾಡಬೇಕು?

ವಯಸ್ಸಾದವರು ಯೆಹೋವನಿಗೆ ತುಂಬ ಅಮೂಲ್ಯ

ವಯಸ್ಸಾದವರು ಯೆಹೋವನಿಗೆ ಮತ್ತು ಆತನ ಸಂಘಟನೆಗೆ ತುಂಬ ಅಮೂಲ್ಯ (ಪ್ಯಾರ 3 ನೋಡಿ)

3. ಕೀರ್ತನೆ 92:12-15ರ ಪ್ರಕಾರ ಯೆಹೋವ ದೇವರು ವಯಸ್ಸಾದವರನ್ನ ಯಾಕೆ ಅಮೂಲ್ಯವಾಗಿ ನೋಡ್ತಾರೆ?

3 ವಯಸ್ಸಾದ ಸಹೋದರರು ಯೆಹೋವನಿಗೆ ತುಂಬ ಅಮೂಲ್ಯ. ಯೆಹೋವ ದೇವರು ಅವರನ್ನ ತುಂಬ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರು ಹೇಗಿದ್ದಾರೆ, ಅವರಲ್ಲಿ ಯಾವೆಲ್ಲಾ ಒಳ್ಳೇ ಗುಣಗಳಿವೆ ಅಂತ ಆತನಿಗೆ ಚೆನ್ನಾಗಿ ಗೊತ್ತು. ಅವರು ತಮ್ಮ ಜೀವನದಲ್ಲಿ ಯೆಹೋವನ ಸೇವೆ ಮಾಡ್ತಾ ಎಷ್ಟೋ ವಿಷಯಗಳನ್ನ ಕಲಿತಿರುತ್ತಾರೆ. ಅವರು ತಮ್ಮ ಅನುಭವಗಳನ್ನ ಚಿಕ್ಕವರಿಗೆ ಹೇಳಿಕೊಡುವಾಗ ದೇವರಿಗೆ ತುಂಬ ಖುಷಿ ಆಗುತ್ತೆ. (ಯೋಬ 12:12; ಜ್ಞಾನೋ. 1:1-4) ಅವರು ಇಲ್ಲಿ ತನಕ ಎಲ್ಲವನ್ನೂ ತಾಳಿಕೊಂಡು ಬಂದಿರೋದ್ರಿಂದ ಯೆಹೋವ ದೇವರು ಅವರನ್ನ ತುಂಬ ಮೆಚ್ಚಿಕೊಳ್ತಾರೆ. (ಮಲಾ. 3:16) ಅವರಿಗೆ ಕಷ್ಟ ಸಮಸ್ಯೆಗಳು ಇದ್ರೂ ಯೆಹೋವನ ಮೇಲಿರೋ ನಂಬಿಕೆ ಕಳಕೊಂಡಿಲ್ಲ. ಹೊಸಲೋಕ ಬಂದೇ ಬರುತ್ತೆ ಅನ್ನೋ ನಂಬಿಕೆ ಇನ್ನೂ ಹೆಚ್ಚಾಗ್ತಾ ಇದೆ. ವಯಸ್ಸಾದ್ರೂ ಯೆಹೋವ ದೇವರ ಬಗ್ಗೆ ಜನರಿಗೆ ತಿಳಿಸ್ತಾ ಇದ್ದಾರೆ. ಅದಕ್ಕೆ ಯೆಹೋವ ದೇವರಿಗೆ ವಯಸ್ಸಾದವರಂದ್ರೆ ತುಂಬ ಇಷ್ಟ.ಕೀರ್ತನೆ 92:12-15 ಓದಿ.

4. ಯಾವ ಮಾತುಗಳು ವಯಸ್ಸಾದ ಸಹೋದರ ಸಹೋದರಿಯರಿಗೆ ಸಾಂತ್ವನ ಕೊಡುತ್ತೆ?

4 ಸಹೋದರರೇ, ನಿಮಗೆ ವಯಸ್ಸಾದ್ರೂ ಇಲ್ಲಿ ತನಕ ಮಾಡಿದ ಸೇವೆಯನ್ನ ಯೆಹೋವ ಮರೆತಿಲ್ಲ. (ಇಬ್ರಿ. 6:10) ನೀವು ಹುರುಪಿನಿಂದ ಸೇವೆಮಾಡಿದ್ದೀರಿ. ನೀವು ಎಷ್ಟೋ ಹಿಂಸೆಗಳನ್ನ ಸಹಿಸಿಕೊಂಡಿದ್ದೀರಿ. ಬೈಬಲ್‌ ಹೇಳೋ ತರ ನಡಕೊಂಡಿದ್ದೀರಿ. ತುಂಬ ಜವಬ್ದಾರಿಗಳನ್ನ ವಹಿಸಿಕೊಂಡಿದ್ದೀರಿ. ಬೇರೆಯವರಿಗೂ ತರಬೇತಿ ಕೊಟ್ಟಿದ್ದೀರಿ. ಯೆಹೋವನ ಸಂಘಟನೆಯಲ್ಲಿ ಬದಲಾವಣೆಗಳು ಆದಾಗ ನೀವು ಬೇಗನೆ ಹೊಂದಾಣಿಕೆಗಳನ್ನ ಮಾಡಿದ್ದೀರಿ. ಪೂರ್ಣ ಸಮಯದ ಸೇವಕರಿಗೆ ನೀವು ಬೆಂಬಲ ಮತ್ತು ಪ್ರೋತ್ಸಾಹ ಕೊಟ್ಟಿದ್ದೀರಿ. ಇಲ್ಲಿ ತನಕ ನೀವು ಯೆಹೋವನಿಗೆ ನಿಯತ್ತಾಗಿ ಇದ್ದೀರಿ. ಅದಕ್ಕೆ ಯೆಹೋವ ದೇವರು ನಿಮ್ಮನ್ನ ತುಂಬ ಮೆಚ್ಚಿಕೊಳ್ತಾರೆ. “ತನ್ನ ನಿಷ್ಠಾವಂತರ ಕೈಬಿಡಲ್ಲ” ಅಂತ ಮಾತುಕೊಟ್ಟಿದ್ದಾರೆ. (ಕೀರ್ತ. 37:28) ಅಷ್ಟೇ ಅಲ್ಲ, “ನಿಮ್ಮ ಕೂದಲು ಬೆಳ್ಳಗಾದ್ರೂ ನಾನು ನಿಮ್ಮನ್ನ ಬೆಂಬಲಿಸ್ತೀನಿ” ಅಂತ ಹೇಳಿದ್ದಾರೆ. (ಯೆಶಾ. 46:4) ಹಾಗಾಗಿ ‘ನನಗೆ ಇನ್ನೇನು ವಯಸ್ಸಾಯ್ತು, ನನ್ನಿಂದ ಯೆಹೋವನ ಸಂಘಟನೆಗೆ ಯಾವ ಪ್ರಯೋಜನನೂ ಇಲ್ಲ’ ಅಂತೆಲ್ಲ ಅಂದುಕೊಳ್ಳಬೇಡಿ. ನಿಮ್ಮಿಂದ ಸಂಘಟನೆಗೆ ತುಂಬ ಪ್ರಯೋಜನ ಇದೆ. ನೀವು ನಮಗೆ ಬೇಕು.

ದೇವರ ಸಂಘಟನೆಗೂ ಅಮೂಲ್ಯ

5. ವಯಸ್ಸಾದವರು ಏನನ್ನ ಮರೆಯಬಾರದು?

5 ವಯಸ್ಸಾದವರಿಗೆ ಯೌವನದಲ್ಲಿ ಇದ್ದಷ್ಟು ಶಕ್ತಿ, ಬಲ ಇಲ್ಲದೆ ಇರಬಹುದು. ಆದ್ರೆ ಅವರಿಗೆ ತುಂಬ ವರ್ಷಗಳ ಅನುಭವ ಇದೆ. ಇದ್ರಿಂದ ಸಂಘಟನೆಗೆ ತುಂಬ ಪ್ರಯೋಜನ ಇದೆ. ವಯಸ್ಸಾಗೋಯ್ತು ಅಂತ ಯೆಹೋವ ದೇವರು ಅವರನ್ನ ಬಿಟ್ಟುಬಿಡಲ್ಲ. ಅವರ ಮೂಲಕ ನಮಗೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡ್ತಾರೆ. ಅದು ಹೇಗೆ ಅಂತ ಈಗ ಕೆಲವು ಉದಾಹರಣೆಗಳಿಂದ ತಿಳಿದುಕೊಳ್ಳೋಣ.

6-7. ವಯಸ್ಸಾಗಿದ್ರೂ ಯೆಹೋವನ ಸೇವೆ ಮಾಡಿ ಆಶೀರ್ವಾದ ಪಡೆದುಕೊಂಡವರ ಉದಾಹರಣೆ ಕೊಡಿ.

6 ವಯಸ್ಸಾಗಿದ್ರೂ ಯೆಹೋವನ ಸೇವೆ ಮಾಡಿದವರ ಉದಾಹರಣೆಗಳು ಬೈಬಲಲ್ಲಿ ಇವೆ. ಯೆಹೋವ ಮೋಶೆಯನ್ನ ಪ್ರವಾದಿಯಾಗಿ ಮತ್ತು ಇಸ್ರಾಯೇಲ್ಯರ ನಾಯಕನಾಗಿ ಆರಿಸುವಾಗ ಅವನಿಗೆ 80 ವರ್ಷ. ದಾನಿಯೇಲ 90 ವರ್ಷ ದಾಟಿದ್ರೂ ಯೆಹೋವನ ಪ್ರವಾದಿಯಾಗಿ ಕೆಲಸ ಮಾಡುತ್ತಿದ್ದ. ದೇವರು ಅಪೊಸ್ತಲ ಯೋಹಾನನಿಂದ ಪ್ರಕಟನೆ ಪುಸ್ತಕವನ್ನ ಬರೆಸುವಾಗ ಅವನಿಗೆ 90 ವರ್ಷ ದಾಟಿರಬೇಕು.

7 ಇನ್ನೂ ತುಂಬ ಜನ ಯೆಹೋವನಿಗೆ ಕೊನೇ ತನಕ ನಿಯತ್ತಾಗಿ ಸೇವೆ ಮಾಡಿದ್ದಾರೆ. ಆದ್ರೆ ಅವರ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಆದ್ರೆ ಅವರು ತೋರಿಸಿದ ನಿಷ್ಠೆ, ನಿಯತ್ತನ್ನ ಯೆಹೋವ ದೇವರು ಗಮನಿಸಿದ್ರು. ಅದಕ್ಕೆ ತಕ್ಕ ಪ್ರತಿಫಲನೂ ಕೊಟ್ರು. ಉದಾಹರಣೆಗೆ, ‘ನೀತಿವಂತನಾಗಿದ್ದ ಮತ್ತು ದೇವಭಯ ಇದ್ದ’ ಸಿಮೆಯೋನನ ಬಗ್ಗೆ ಬೈಬಲಲ್ಲಿ ಹೆಚ್ಚು ಮಾಹಿತಿ ಇಲ್ಲ. ಆದ್ರೆ ಯೆಹೋವ ದೇವರಿಗೆ ಅವನ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅವನು ಮಾಡಿದ ಸೇವೆಗೆ ಆಶೀರ್ವಾದ ಕೊಟ್ರು. ಅವನಿಗೆ ಪುಟಾಣಿ ಯೇಸುವನ್ನ ನೋಡೋ ಅವಕಾಶ ಕೊಟ್ರು. ಅಷ್ಟೇ ಅಲ್ಲ, ಯೇಸು ಬಗ್ಗೆ ಮತ್ತು ಅವನ ತಾಯಿ ಬಗ್ಗೆ ಭವಿಷ್ಯವಾಣಿ ಹೇಳೋ ಅವಕಾಶನೂ ಕೊಟ್ರು. (ಲೂಕ 2:22, 25-35) ಪ್ರವಾದಿನಿ ಅನ್ನಳ ಬಗ್ಗೆ ಯೋಚಿಸಿ. ಅವಳು ವಿಧವೆ ಆಗಿದ್ದಳು. ಅವಳಿಗೆ 84 ವರ್ಷ ಆಗಿತ್ತು. ಆದ್ರೂ ಅವಳು “ಆಲಯಕ್ಕೆ ತಪ್ಪದೆ ಹೋಗ್ತಿದ್ದಳು.” ಅವಳು ಹೀಗೆ “ತಪ್ಪದೆ” ಬಂದಿದ್ದಕ್ಕೆ ಪುಟಾಣಿ ಯೇಸುವನ್ನ ನೋಡೋ ಅವಕಾಶ ಸಿಕ್ಕಿತು. ಹೀಗೆ ಸಿಮೆಯೋನ ಮತ್ತು ಅನ್ನ ಇಬ್ರಿಗೂ ತನ್ನ ದೃಷ್ಟಿಯಲ್ಲಿ ಬೆಲೆಯಿದೆ ಅಂತ ಯೆಹೋವ ತೋರಿಸಿಕೊಟ್ರು.—ಲೂಕ 2:36-38.

ಸಹೋದರಿ ಡಿಡರ್‌ 80 ವರ್ಷ ದಾಟಿದ್ರೂ ಯೆಹೋವನ ಸೇವೆ ಮಾಡ್ತಿದ್ದಾರೆ (ಪ್ಯಾರ 8 ನೋಡಿ)

8-9. ಒಬ್ಬ ಸಹೋದರಿ ವಿಧವೆ ಆದ ಮೇಲೂ ಹೇಗೆ ಯೆಹೋವನ ಸೇವೆ ಮಾಡುತ್ತಿದ್ದಾರೆ?

8 ನಮ್ಮ ಕಾಲದಲ್ಲೂ ವಯಸ್ಸಾದ ಎಷ್ಟೋ ಸಹೋದರ ಸಹೋದರಿಯರು ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಾ ಇದ್ದಾರೆ. ಇವರಿಂದ ಯುವಕರು ತುಂಬ ವಿಷಯ ಕಲಿಬಹುದು. ಸಹೋದರಿ ಲೋಯ್ಸ್‌ ಡಿಡರ್‌ ಅವರ ಅನುಭವ ನೋಡಿ. ಕೆನಡಾದಲ್ಲಿ ವಿಶೇಷ ಪಯನೀಯರಾಗಿ ಸೇವೆ ಮಾಡೋಕೆ ಶುರುಮಾಡಿದಾಗ ಅವರಿಗೆ 21 ವರ್ಷ. ಅವರು ಮತ್ತು ಅವರ ಗಂಡ ಜಾನ್‌ ತುಂಬ ವರ್ಷ ಸರ್ಕಿಟ್‌ ಕೆಲಸ ಮಾಡಿದ್ರು. ಆಮೇಲೆ ಕೆನಡಾ ಬೆತೆಲ್‌ನಲ್ಲಿ 20ಕ್ಕಿಂತ ಜಾಸ್ತಿ ವರ್ಷ ಕೆಲಸಮಾಡಿದ್ರು. ಸಹೋದರಿಗೆ 50 ವರ್ಷ ಆದಾಗ ಅವರಿಬ್ಬರಿಗೂ ಯುಕ್ರೇನ್‌ ದೇಶದಲ್ಲಿ ಸೇವೆ ಮಾಡೋ ನೇಮಕ ಸಿಕ್ತು. ಆಗ ಅವರು “ನಮಗೆ ವಯಸ್ಸಾಯ್ತು, ಬೇರೆ ದೇಶಕ್ಕೆ ಹೋಗಿ ಸೇವೆ ಮಾಡೋಕೆ ಆಗಲ್ಲ” ಅಂತ ಹೇಳಿದ್ರಾ? ಇಲ್ಲ. ಅವರು ಆ ದೇಶಕ್ಕೆ ಹೋಗಿ ಸೇವೆ ಮಾಡೋಕೆ ಮನಸಾರೆ ಒಪ್ಪಿಕೊಂಡ್ರು. ಬ್ರದರ್‌ ಜಾನ್‌ಗೆ ಬ್ರಾಂಚ್‌ ಕಮಿಟಿಯಲ್ಲಿ ಸೇವೆ ಮಾಡೋ ನೇಮಕ ಸಿಕ್ತು. 7 ವರ್ಷ ಆದಮೇಲೆ ಜಾನ್‌ ತೀರಿಕೊಂಡ್ರು. ಆದ್ರೂ ಸಹೋದರಿ ಅಲ್ಲೇ ಸೇವೆ ಮಾಡೋಕೆ ತೀರ್ಮಾನ ಮಾಡಿದ್ರು. ಈಗ ಅವರಿಗೆ 81 ವರ್ಷ. ಅವರು ಈಗಲೂ ಚೆನ್ನಾಗಿ ಸೇವೆ ಮಾಡ್ತಾ ಇದ್ದಾರೆ ಮತ್ತು ಯುಕ್ರೇನ್‌ ಬೆತೆಲ್‌ನಲ್ಲಿರೋ ಎಲ್ರಿಗೂ ಅವರಂದ್ರೆ ತುಂಬ ಇಷ್ಟ.

9 ಗಂಡ ತೀರಿಕೊಂಡ ಮೇಲೆ ಲೋಯ್ಸ್‌ ತರ ಇರೋ ಎಷ್ಟೋ ಸಹೋದರಿಯರಿಗೆ ಜನರಿಂದ ಮುಂಚೆ ಸಿಗುತ್ತಿದ್ದ ಗೌರವ ಸಿಗದೇ ಹೋಗಬಹುದು. ಹಾಗಂತ ಅವರ ಬೆಲೆ ಏನೂ ಕಮ್ಮಿ ಆಗಲ್ಲ. ಅವರು ತಮ್ಮ ಗಂಡನಿಗೆ ಕೊಟ್ಟ ಸಹಕಾರ ಮತ್ತು ಈಗಲೂ ನಿಯತ್ತಾಗಿ ಮಾಡುತ್ತಿರೋ ಸೇವೆಯನ್ನ ಯೆಹೋವ ದೇವರು ತುಂಬ ಮೆಚ್ಚಿಕೊಳ್ತಾರೆ. (1 ತಿಮೊ. 5:3) ಅವರಿಂದ ಯುವ ಜನರಿಗೂ ತುಂಬ ಪ್ರೋತ್ಸಾಹ ಸಿಗುತ್ತೆ.

10. ಸಹೋದರ ಟೋನಿ ಅವರ ಉದಾಹರಣೆಯಿಂದ ನಾವೇನು ಕಲಿಬಹುದು?

10 ಹೊರಗೆ ಓಡಾಡೋಕೆ ಆಗದೆ ಮನೆಯಲ್ಲೇ ಅಥವಾ ವೃದ್ಧಾಶ್ರಮದಲ್ಲೇ ಇರೋ ತನ್ನ ಸೇವಕರನ್ನೂ ಯೆಹೋವ ದೇವರು ನಿಧಿ ತರ ನೋಡ್ತಾರೆ. ಈಗ ವೃದ್ಧಾಶ್ರಮದಲ್ಲಿರೋ ಸಹೋದರ ಟೋನಿ ಅವರ ಅನುಭವ ನೋಡಿ. ಆಗಸ್ಟ್‌ 1942ರಲ್ಲಿ ಅಮೇರಿಕಾದ ಪೆನ್ಸಿಲ್ವೇನಿಯಾದಲ್ಲಿ ಅವರಿಗೆ ದೀಕ್ಷಾಸ್ನಾನ ಆಯ್ತು. ಆಗ ಅವರಿಗೆ 20 ವರ್ಷ. ಅವರು ಮಿಲಿಟರಿಗೆ ಸೇರಿಕೊಳ್ಳಬೇಕು ಅಂತ ಸರ್ಕಾರ ಹೇಳಿತು. ಅದಕ್ಕೆ ಒಪ್ಪದೇ ಇದ್ದಿದ್ರಿಂದ ಅವರನ್ನ ಎರಡೂವರೆ ವರ್ಷ ಜೈಲಿಗೆ ಹಾಕಿದ್ರು. ಅವರು, ಅವರ ಹೆಂಡತಿ ಹಿಲ್ಡ ಮತ್ತು ಇಬ್ಬರು ಮಕ್ಕಳು ಎಲ್ರೂ ಸತ್ಯದಲ್ಲಿ ಇದ್ರು. ಈ ಸಹೋದರ ತುಂಬ ವರ್ಷ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡಿದ್ದಾರೆ. ಅವರು ಸುಮಾರು ಮೂರು ಸಭೆಗಳಲ್ಲಿ ಪ್ರಿಸೈಡಿಂಗ್‌ ಒವರ್ಸೀಯರ್‌ ಅಂದ್ರೆ ಹಿರಿಯ ಮಂಡಳಿಯ ಸಂಯೋಜಕರಾಗಿ ಸೇವೆ ಮಾಡಿದ್ರು ಮತ್ತು ಸರ್ಕಿಟ್‌ ಸಮ್ಮೇಳನದ ಒವರ್ಸೀಯರ್‌ ಆಗಿ ಕೆಲಸಮಾಡಿದ್ರು. ಅವರು ಜೈಲಲ್ಲಿ ಇದ್ದಾಗ ಅಲ್ಲಿರೋರ ಜೊತೆ ಬೈಬಲ್‌ ಅಧ್ಯಯನ ನಡೆಸುತ್ತಿದ್ರು ಮತ್ತು ಅಲ್ಲೇ ಕೂಟಗಳನ್ನೂ ನಡೆಸುತ್ತಿದ್ರು. ಅವರಿಗೆ ಈಗ 98 ವರ್ಷ. ವಯಸ್ಸಾಯ್ತು ಅಂತ ಹೇಳಿ ಅವರು ಸುಮ್ಮನೆ ಕೂತುಕೊಳ್ಳಲಿಲ್ಲ. ತಮ್ಮ ಕೈಲಾದಷ್ಟು ಯೆಹೋವನ ಸೇವೆ ಮಾಡ್ತಾ ಅಲ್ಲಿರೋ ಸಭೆಗೆ ಬೆಂಬಲ ಕೊಡ್ತಿದ್ದಾರೆ.

11. ವೃದ್ಧಾಶ್ರಮದಲ್ಲಿರೋ ನಮ್ಮ ಸಹೋದರರಿಗೆ ನಾವು ಹೇಗೆ ಕಾಳಜಿ ತೋರಿಸಬಹುದು?

11 ವೃದ್ಧಾಶ್ರಮದಲ್ಲಿರೋ ಮತ್ತು ನಮ್ಮ ಸಭೆಲಿರೋ ಬೇರೆ ವಯಸ್ಸಾಗಿರೋ ಸಹೋದರ ಸಹೋದರಿಯರಿಗೆ ನಾವು ಹೇಗೆ ಪ್ರೀತಿ ಮತ್ತು ಗೌರವ ತೋರಿಸಬಹುದು? ಅವರಿಗೆ ಕೂಟಗಳಿಗೆ ಬರೋಕೆ ಅಥವಾ ಮನೆಯಿಂದಾನೇ ಕೇಳಿಸಿಕೊಳ್ಳೋಕೆ, ಸಿಹಿಸುದ್ದಿ ಸಾರೋಕೆ ಆಗೋದಾದ್ರೆ ಅದಕ್ಕೆ ಬೇಕಾಗಿರೋ ಏರ್ಪಾಡನ್ನ ಹಿರಿಯರು ಮಾಡಬೇಕು. ಅವರಿಗೆ ಆಗಾಗ ಫೋನ್‌ ಮಾಡಿ ಹೇಗಿದ್ದಾರೆ ಅಂತ ವಿಚಾರಿಸಬಹುದು ಅಥವಾ ವಿಡಿಯೋ ಕಾಲ್‌ ಮಾಡಿ ಮಾತಾಡಬಹುದು. ಅವರು ತುಂಬ ವರ್ಷಗಳಿಂದ ಇದ್ದ ಸಭೆ ವೃದ್ಧಾಶ್ರಮದಿಂದ ದೂರ ಇರೋದ್ರಿಂದ ಅವರು ನಮ್ಮ ಸಭೆಗೆ ಬರುತ್ತಿರಬಹುದು. ಅಂಥವರಿಗೆ ನಾವು ಇನ್ನೂ ಜಾಸ್ತಿನೇ ಕಾಳಜಿ ತೋರಿಸಬೇಕು. ಅವರನ್ನ ಮರೆತುಬಿಡಬಾರದು. ಅವರಲ್ಲಿ ಕೆಲವರಿಗೆ ತಮ್ಮ ಬಗ್ಗೆ ಮಾತಾಡೋಕೆ ಇಷ್ಟ ಆಗಲ್ಲ. ಅಂಥವರ ಹತ್ರ ಸರಿಯಾದ ಸಮಯ ನೋಡಿ ಕೆಲವೊಂದು ಪ್ರಶ್ನೆಗಳನ್ನ ಕೇಳಬಹುದು. ಆಗ ಅವರು ಯೆಹೋವನ ಸೇವೆಲಿ ಸಿಕ್ಕಿದ ಒಳ್ಳೇ ಅನುಭವಗಳನ್ನ ಹಂಚಿಕೊಳ್ಳಬಹುದು. ಇದ್ರಿಂದ ನಮಗೆ ತುಂಬ ಪ್ರಯೋಜನ ಸಿಗುತ್ತೆ.

12. ನಮ್ಮ ಸಭೆಲಿರೋ ವಯಸ್ಸಾದವರು ನಮಗೆ ಸಿಕ್ಕಿರೋ ನಿಧಿ ಅಂತ ಹೇಗೆ ಹೇಳಬಹುದು?

12 ನಿಮ್ಮ ಸಭೆಲಿರೋ ವಯಸ್ಸಾದವರ ಹತ್ರ ಒಂದು ಸಲ ಮಾತಾಡಿ ನೋಡಿ. ಅವರ ಅನುಭವಗಳನ್ನ ಕೇಳಿ ನಿಮಗೇ ಆಶ್ಚರ್ಯ ಆಗುತ್ತೆ! ಸಹೋದರಿ ಹ್ಯಾರಿಯೆಟ್‌ ಅಮೆರಿಕಾದ ನ್ಯೂ ಜೆರ್ಸಿಯ ಸಭೆಯಲ್ಲಿ ತುಂಬ ವರ್ಷಗಳಿಂದ ಯೆಹೋವ ದೇವರಿಗೆ ನಿಯತ್ತಾಗಿ ಸೇವೆ ಮಾಡಿದ್ರು. ಆಮೇಲೆ ತಮ್ಮ ಮಗಳ ಜೊತೆ ಬೇರೆ ಕಡೆ ಹೋದ್ರು. ಹೊಸ ಸಭೆಯಲ್ಲಿರೋ ಸಹೋದರರು ಅವರ ಬಗ್ಗೆ ನಿಧಾನವಾಗಿ ತಿಳಿದುಕೊಂಡ್ರು. ಅವರ ಅನುಭವ ಕೇಳಿದಾಗ ಯೆಹೋವನ ಮೇಲೆ ಅವರಿಗೆಷ್ಟು ನಂಬಿಕೆ ಇದೆ ಅಂತ ಆ ಸಹೋದರರಿಗೆ ಗೊತ್ತಾಯ್ತು. 1925ರ ಆಸುಪಾಸಿನಲ್ಲಿ ಆ ಸಹೋದರಿ ಸತ್ಯ ಕಲಿತಾಗ ನಡೆದ ಘಟನೆಗಳನ್ನ ಹೇಳ್ತಿದ್ರು. ಸೇವೆಗೆ ಹೋಗುತ್ತಿದ್ದಾಗ ಬ್ಯಾಗಲ್ಲಿ ಯಾವಾಗಲೂ ಹಲ್ಲು ಉಜ್ಜೋ ಬ್ರಶ್‌ ಇಟ್ಟುಕೊಳ್ತಾ ಇದ್ರಂತೆ. ಒಂದುವೇಳೆ ಪೊಲೀಸರು ಜೈಲಿಗೆ ಹಾಕಿದ್ರೆ ಹಲ್ಲು ಉಜ್ಜೋಕೆ ಬೇಕಾಗುತ್ತೆ ಅಂತ ಇಟ್ಟುಕೊಳ್ತಾ ಇದ್ರಂತೆ. 1933ರಲ್ಲಿ ಎರಡು ಸಲ ಒಂದೊಂದು ವಾರ ಜೈಲಲ್ಲಿ ಇದ್ರಂತೆ! ಆಗ ಅವರ ಗಂಡ ಸತ್ಯದಲ್ಲಿ ಇಲ್ಲದಿದ್ರೂ ತಮ್ಮ ಮೂರು ಚಿಕ್ಕ ಮಕ್ಕಳನ್ನ ಚೆನ್ನಾಗಿ ನೋಡಿಕೊಂಡ್ರು. ಈ ಅನುಭವ ಕೇಳಿದಾಗ ಆ ಸಹೋದರರಿಗೆ ತುಂಬ ಪ್ರೋತ್ಸಾಹ ಸಿಕ್ತು. ವಯಸ್ಸಾದವರು ನಿಜವಾಗ್ಲೂ ನಮಗೆ ಸಿಕ್ಕಿರೋ ನಿಧಿ ಅಲ್ವಾ?

13. ವಯಸ್ಸಾದವರು ಯೆಹೋವನ ಸಂಘಟನೆಗೆ ಅಮೂಲ್ಯ ಅಂತ ಯಾಕೆ ಹೇಳಬಹುದು?

13 ಯೆಹೋವನಿಗೆ ಮತ್ತು ಆತನ ಸಂಘಟನೆಗೆ ವಯಸ್ಸಾದವರು ತುಂಬ ಅಮೂಲ್ಯ. ಯೆಹೋವ ದೇವರು ತನ್ನ ಸಂಘಟನೆಯನ್ನ ಹೇಗೆಲ್ಲಾ ಆಶೀರ್ವಾದ ಮಾಡಿದ್ದಾರೆ ಅಂತ ಅವರು ಕಣ್ಣಾರೆ ನೋಡಿದ್ದಾರೆ. ಅವರ ಜೀವನದಲ್ಲೂ ಯೆಹೋವನ ಆಶೀರ್ವಾದವನ್ನ ಸವಿದು ನೋಡಿದ್ದಾರೆ. ಅಷ್ಟೇ ಅಲ್ಲ, ಅವರು ಜೀವನದ ಪಾಠ ಕಲಿತಿರುತ್ತಾರೆ. ಹಾಗಾಗಿ ಏನು ಮಾಡಿದರೆ ಏನಾಗುತ್ತೆ ಅಂತ ಅವರಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಅವರನ್ನ ಬೈಬಲ್‌ “ವಿವೇಕ ಹರಿಯೋ ಕಾಲುವೆ” ಅಂತ ಕರೆಯುತ್ತೆ. (ಜ್ಞಾನೋ. 18:4) ಅವರ ಅನುಭವನ ಕೇಳಿ ತಿಳಿದುಕೊಳ್ಳಿ. ಆಗ ನಿಮ್ಮ ನಂಬಿಕೆ ಬಲ ಆಗುತ್ತೆ ಮತ್ತು ತುಂಬ ವಿಷಯಗಳನ್ನ ನೀವು ಕಲಿತೀರ.

ಅವರ ಅನುಭವದಿಂದ ಕಲಿಯಿರಿ

ಎಲೀಷ ಎಲೀಯನಿಂದ ಕಲಿತ ಹಾಗೆ ನಾವು ವಯಸ್ಸಾದವರಿಂದ ತುಂಬ ವಿಷಯಗಳನ್ನ ಕಲೀತಿವಿ (ಪ್ಯಾರ 14-15 ನೋಡಿ)

14. ಯುವಕರು ಏನು ಮಾಡಬೇಕು ಅಂತ ಧರ್ಮೋಪದೇಶಕಾಂಡ 32:7 ಹೇಳುತ್ತೆ?

14 ಯುವಕರೇ, ವಯಸ್ಸಾದವರ ಹತ್ರ ನೀವೇ ಮೊದಲು ಹೋಗಿ ಮಾತಾಡಿಸಬೇಕು. (ಧರ್ಮೋಪದೇಶಕಾಂಡ 32:7 ಓದಿ.) ಅವರ ಕಣ್ಣು ಮೊಬ್ಬಾಗಿರಬಹುದು, ಅವರು ನಡಿಯೋದ್ರಲ್ಲಿ, ಮಾತಾಡೋದ್ರಲ್ಲಿ ನಿಧಾನವಾಗಿರಬಹುದು. ಅವರ ದೇಹಕ್ಕೆ ವಯಸ್ಸಾಗಿದೆ ನಿಜ. ಆದ್ರೆ ಅವರ ಮನಸ್ಸಿಗಲ್ಲ. ಅವರು ಯೆಹೋವ ದೇವರ ಹತ್ರ “ಒಳ್ಳೇ ಹೆಸ್ರು” ಮಾಡಿದ್ದಾರೆ. (ಪ್ರಸಂ. 7:1) ಅವರನ್ನ ಯೆಹೋವ ದೇವರು ಯಾಕೆ ನಿಧಿ ತರ ನೋಡ್ತಾರೆ ಅನ್ನೋದನ್ನ ಮನಸ್ಸಲ್ಲಿಡಿ. ಅವರಿಗೆ ಪ್ರೀತಿ, ಕಾಳಜಿ ತೋರಿಸಿ, ಗೌರವ ಕೊಡಿ. ಎಲೀಷ ಎಲೀಯನ ಜೊತೆ ಕೊನೇ ತನಕ ಇದ್ದ. ಮೂರು ಸಲನೂ “ನಾನು ನಿನ್ನನ್ನ ಬಿಟ್ಟುಹೋಗಲ್ಲ” ಅಂತ ಹೇಳಿದ. (2 ಅರ. 2:2, 4, 6) ನಾವೂ ಎಲೀಷನ ತರನೇ ಇರಬೇಕು.

15. ವಯಸ್ಸಾದವರ ಹತ್ರ ಯಾವ ಪ್ರಶ್ನೆ ಕೇಳಬಹುದು?

15 ವಯಸ್ಸಾದವರ ಬಗ್ಗೆ ತಿಳಿದುಕೊಳ್ಳೋಕೆ ಜಾಣ್ಮೆಯಿಂದ ಪ್ರಶ್ನೆ ಕೇಳಿ. (ಜ್ಞಾನೋ. 1:5; 20:5; 1 ತಿಮೊ. 5:1, 2) ಉದಾಹರಣೆಗೆ, “ನೀವು ಚಿಕ್ಕವರಿದ್ದಾಗ ಇದೇ ಸತ್ಯ ಅಂತ ನಿಮಗೆ ಹೇಗೆ ಗೊತ್ತಾಯ್ತು?” “ಯೆಹೋವನ ಜೊತೆ ನೀವು ಹೇಗೆ ಗೆಳೆತನ ಬೆಳೆಸಿಕೊಂಡ್ರಿ?” “ಯೆಹೋವನ ಸೇವೆಯನ್ನ ಸಂತೋಷವಾಗಿ ಮಾಡೋಕೆ ನಿಮಗೆ ಯಾವುದು ಸಹಾಯ ಮಾಡ್ತು?” ಅಂತ ಕೇಳಬಹುದು. (1 ತಿಮೊ. 6:6-8) ಹೀಗೆ ಅವರ ಜೀವನ ಕಥೆಗಳನ್ನ ತಿಳಿದುಕೊಳ್ಳಿ.

16. ಚಿಕ್ಕವರು ವಯಸ್ಸಾದವರ ಜೊತೆ ಮಾತಾಡೋದ್ರಿಂದ ಹೇಗೆ ಇಬ್ಬರಿಗೂ ಪ್ರೋತ್ಸಾಹ ಸಿಗುತ್ತೆ?

16 ಚಿಕ್ಕವರು ವಯಸ್ಸಾದವರ ಜೊತೆ ಮಾತಾಡುವಾಗ ಇಬ್ಬರಿಗೂ ಪ್ರೋತ್ಸಾಹ ಸಿಗುತ್ತೆ. (ರೋಮ. 1:12) ತುಂಬ ವರ್ಷದಿಂದ ನಿಯತ್ತಾಗಿ ಸೇವೆ ಮಾಡಿರೋರನ್ನ ಯೆಹೋವ ದೇವರು ಯಾವತ್ತೂ ಕೈಬಿಡಲ್ಲ, ಚೆನ್ನಾಗಿ ನೋಡಿಕೊಳ್ತಾರೆ ಅಂತ ಚಿಕ್ಕವರಿಗೆ ಯೆಹೋವನ ಮೇಲೆ ನಂಬಿಕೆ ಬರುತ್ತೆ. ವಯಸ್ಸಾದವರಿಗೆ “ನಮ್ಮನ್ನ ಈಗಲೂ ಎಲ್ಲರೂ ಗೌರವಿಸುತ್ತಾರೆ” ಅನ್ನೋ ಆಶ್ವಾಸನೆನೂ ಸಿಗುತ್ತೆ. ಅವರನ್ನ ದೇವರು ಹೇಗೆಲ್ಲಾ ಆಶೀರ್ವದಿಸಿದ್ದಾರೆ ಅಂತ ನಾವು ತಿಳಿದುಕೊಳ್ತೀವಿ, ಅದನ್ನ ವಿವರಿಸುತ್ತಾ ಅವರೂ ಖುಷಿಪಡ್ತಾರೆ.

17. ಯಾವ ಅರ್ಥದಲ್ಲಿ ವಯಸ್ಸಾದವರ ಸೌಂದರ್ಯ ಹೆಚ್ಚಾಗುತ್ತೆ?

17 ವಯಸ್ಸಾದರೆ ದೇಹದ ಸೌಂದರ್ಯ ಕಮ್ಮಿ ಆಗುತ್ತೆ ನಿಜ. ಆದ್ರೆ ಯೆಹೋವನ ಮುಂದೆ ವಯಸ್ಸಾದವರ ಸೌಂದರ್ಯ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತೆ. (1 ಥೆಸ. 1:2, 3) ಅದು ಹೇಗೆ? ಇಷ್ಟು ವರ್ಷಗಳಿಂದ ಪವಿತ್ರ ಶಕ್ತಿ ತಮಗೆ ತರಬೇತಿ ಕೊಡೋಕೆ ಅವರು ಬಿಟ್ಟುಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಒಳ್ಳೇ ಗುಣಗಳನ್ನೂ ಬೆಳೆಸಿಕೊಂಡಿದ್ದಾರೆ. ನಾವು ಸಹೋದರ ಸಹೋದರಿಯರ ಬಗ್ಗೆ ಹೆಚ್ಚು ತಿಳಿದುಕೊಳ್ಳುವಾಗ ಅವರಿಗೆ ನಾವು ಗೌರವ ಕೊಡ್ತೀವಿ, ಅವರಿಂದ ತುಂಬ ವಿಷಯ ಕಲಿತೀವಿ. ನಾವೂ ಅವರನ್ನ ನಿಧಿ ತರ ನೋಡ್ತೀವಿ!

18. ಮುಂದಿನ ಲೇಖನದಲ್ಲಿ ಏನನ್ನ ಕಲೀತಿವಿ?

18 ಕಲ್ಲು ಮತ್ತು ಮರಳನ್ನ ಸೇರಿಸಿ ಕಟ್ಟಿದ್ರೆ ಮನೆ ಗಟ್ಟಿಯಾಗುತ್ತೆ. ಹಾಗೆ ಸಭೆಯಲ್ಲಿ ಚಿಕ್ಕವರು ದೊಡ್ಡವರು ಎಲ್ಲರೂ ಇದ್ರೆ ಸಭೆ ಗಟ್ಟಿಯಾಗುತ್ತೆ. ಇಲ್ಲಿ ತನಕ ಚಿಕ್ಕವರು ದೊಡ್ಡವರಿಗೆ ಹೇಗೆ ಗೌರವ ಕೊಡಬಹುದು ಅಂತ ಕಲಿತ್ವಿ. ಮುಂದಿನ ಲೇಖನದಲ್ಲಿ ದೊಡ್ಡವರು ಚಿಕ್ಕವರಿಗೆ ಹೇಗೆ ಗೌರವ ಕೊಡಬೇಕು ಅಂತ ಕಲೀತೀವಿ.

ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

^ ಪ್ಯಾರ. 5 ವಯಸ್ಸಾದ ಸಹೋದರರು ನಮಗೆ ಅಮೂಲ್ಯವಾದ ವರ. ಈ ಲೇಖನದಲ್ಲಿ ನಾವು, ವಯಸ್ಸಾದ ಸಹೋದರರನ್ನ ಹೇಗೆ ಗೌರವಿಸಬಹುದು ಮತ್ತು ಅವರ ಅನುಭವದಿಂದ ಏನೆಲ್ಲಾ ಕಲಿಯಬಹುದು ಅನ್ನೋದನ್ನ ಚರ್ಚಿಸ್ತೀವಿ. ವಯಸ್ಸಾದ ಸಹೋದರರಿಗೆ ಯೆಹೋವನ ದೃಷ್ಟಿಯಲ್ಲಿ ತುಂಬ ಬೆಲೆ ಇದೆ, ಅವರು ಸಂಘಟನೆಗೆ ಬೇಕು ಅನ್ನೋ ಆಶ್ವಾಸನೆಯನ್ನೂ ಈ ಲೇಖನ ಕೊಡುತ್ತೆ.