ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 41

ಪೇತ್ರ ಬರೆದ ಪತ್ರಗಳಿಂದ ಪಾಠಗಳು

ಪೇತ್ರ ಬರೆದ ಪತ್ರಗಳಿಂದ ಪಾಠಗಳು

“ಇದರ ಬಗ್ಗೆ ನಿಮಗೆ ನೆನಪು ಹುಟ್ಟಿಸ್ತಾ ಇರ್ತಿನಿ.”—2 ಪೇತ್ರ 1:12.

ಗೀತೆ 61 ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?

ಈ ಲೇಖನದಲ್ಲಿ ಏನಿದೆ? a

1. ಸಾಯೋ ಮುಂಚೆ ಪೇತ್ರನಿಗೆ ಯೆಹೋವ ದೇವರು ಯಾವ ಅವಕಾಶ ಕೊಟ್ಟನು?

 ಅಪೊಸ್ತಲ ಪೇತ್ರ ತುಂಬ ವರ್ಷ ಯೆಹೋವನ ಸೇವೆ ಮಾಡಿದ. ಅವನು ಯೇಸು ಜೊತೆ ಸೇವೆ ಮಾಡಿದ. ಯೆಹೂದ್ಯರಲ್ಲದ ಜನ್ರಿಗೆ ಸಿಹಿಸುದ್ದಿ ಸಾರಿದ. ಆಮೇಲೆ ಆಡಳಿತ ಮಂಡಲಿಯ ಸದಸ್ಯನಾದ. ಆದ್ರೆ ತಾನಿನ್ನು ಜಾಸ್ತಿ ದಿನ ಬದುಕಲ್ಲ ಅಂತ ಪೇತ್ರನಿಗೆ ಗೊತ್ತಾಯ್ತು. ಆಗ್ಲೂ ಯೆಹೋವ ಅವನಿಗೆ ಸೇವೆ ಮಾಡೋಕೆ ಒಂದು ಅವಕಾಶ ಕೊಟ್ಟನು. ಕ್ರಿಸ್ತ ಶಕ 62-64ರಲ್ಲಿ ಯೆಹೋವ ದೇವರು ಅವನಿಂದ ಒಂದನೇ ಪೇತ್ರ ಮತ್ತು ಎರಡನೇ ಪೇತ್ರ ಅನ್ನೋ 2 ಪತ್ರಗಳನ್ನ ಬರೆಸಿದನು. ಪೇತ್ರನಿಗೆ ತಾನು ಸತ್ತಮೇಲೆ ಆ ಪತ್ರಗಳಿಂದ ಸಹೋದರ ಸಹೋದರಿಯರಿಗೆ ಸಹಾಯ ಆಗುತ್ತೆ ಅನ್ನೋ ನಂಬಿಕೆ ಇತ್ತು.—2 ಪೇತ್ರ 1:12-15.

2. ಪೇತ್ರ ಸರಿಯಾದ ಸಮಯಕ್ಕೇ ಪತ್ರಗಳನ್ನ ಬರೆದ ಅಂತ ಯಾಕೆ ಹೇಳಬಹುದು?

2 ಪೇತ್ರ ಸರಿಯಾದ ಸಮಯಕ್ಕೆ ಆ 2 ಪತ್ರಗಳನ್ನ ಬರೆದ. ಯಾಕಂದ್ರೆ ಅಲ್ಲಿದ್ದ ಸಹೋದರ ಸಹೋದರಿಯರು ಆಗ “ಬೇರೆಬೇರೆ ತರದ ಕಷ್ಟಗಳನ್ನ” ಅನುಭವಿಸ್ತಿದ್ರು. (1 ಪೇತ್ರ 1:6) ಸಭೆಯಲ್ಲಿದ್ದ ಕೆಲವರು ಸುಳ್ಳು ಬೋಧನೆಗಳನ್ನ ನಂಬ್ತಿದ್ರು. ಬೈಬಲಲ್ಲಿ ಇಲ್ಲದೆ ಇರೋ ವಿಷ್ಯನ ಸಹೋದರ ಸಹೋದರಿಯರಿಗೂ ಕಲಿಸ್ತಿದ್ರು. ಅವ್ರ ನಡತೆ ಒಂಚೂರೂ ಸರಿ ಇರಲಿಲ್ಲ, ಸಭೆಯವ್ರಿಗೂ ಅವ್ರ ತರಾನೇ ಇರೋಕೆ ಹೇಳ್ಕೊಡ್ತಿದ್ರು. (2 ಪೇತ್ರ 2:1, 2, 14) ಅಷ್ಟೇ ಅಲ್ಲ, ಯೆರೂಸಲೇಮಲ್ಲಿ “ಎಲ್ಲಾ ಕೊನೆಯಾಗೋ ಸಮಯ ಹತ್ರ” ಆಗಿತ್ತು. ಅಂದ್ರೆ ರೋಮನ್ನರು ಪಟ್ಟಣವನ್ನ ಮತ್ತು ಅದ್ರಲ್ಲಿದ್ದ ಯೆಹೋವನ ಆಲಯನ ನಾಶ ಮಾಡೋ ಸಮಯ ಹತ್ರ ಆಗಿತ್ತು. (1 ಪೇತ್ರ 4:7) ಹಾಗಾಗಿ ಅಲ್ಲಿದ್ದ ಸಹೋದರ ಸಹೋದರಿಯರಿಗೆ ಕಷ್ಟಗಳನ್ನ ತಾಳ್ಕೊಳ್ಳೋಕೆ ಮತ್ತು ಮುಂದೆ ಬರೋ ಕಷ್ಟಗಳಿಗೆ ತಯಾರಾಗಿರೋಕೆ ಪೇತ್ರನ ಪತ್ರಗಳು ಖಂಡಿತ ಸಹಾಯ ಮಾಡಿರುತ್ತೆ. b

3. ಪೇತ್ರ ಬರೆದಿರೋ ಪತ್ರಗಳು ನಮಗೆ ಹೇಗೆ ಸಹಾಯ ಮಾಡುತ್ತೆ?

3 ಆ ಪತ್ರಗಳನ್ನ ಪೇತ್ರ ಒಂದನೇ ಶತಮಾನದ ಕ್ರೈಸ್ತರಿಗೆ ಬರೆದ. ಆದ್ರೆ ಅದನ್ನ ಯೆಹೋವ ದೇವರು ಯಾಕೆ ಬೈಬಲಲ್ಲಿ ಸೇರಿಸಿದನು? ಯಾಕಂದ್ರೆ ಅದ್ರಿಂದ ನಮಗೂ ಪ್ರಯೋಜನ ಆಗುತ್ತೆ. (ರೋಮ. 15:4) ನಾವೂ ಇವತ್ತು ಕೆಟ್ಟ ಲೋಕದಲ್ಲಿ ಜೀವಿಸ್ತಿದ್ದೀವಿ. ಅದ್ರ ಜೊತೆಗೆ ನಮ್ಮ ಜೀವನದಲ್ಲಿ ನೂರೆಂಟು ತೊಂದ್ರೆಗಳಿವೆ. ಅದೂ ಅಲ್ಲದೆ, ಆದಷ್ಟು ಬೇಗ ಮಹಾ ಸಂಕಟ ಬರುತ್ತೆ. ಆಗ ನಾವು, ಯೆರೂಸಲೇಮ್‌ ನಾಶ ಆಗುವಾಗ ಆಗಿನ ಕ್ರೈಸ್ತರು ಅನುಭವಿಸಿದ ಕಷ್ಟಕ್ಕಿಂತ ಜಾಸ್ತಿ ಕಷ್ಟನ ಅನುಭವಿಸಬೇಕಾಗುತ್ತೆ. ಹಾಗಾಗಿ ನಾವು ಯೆಹೋವನ ದಿನ ಬಂದೇ ಬರುತ್ತೆ ಅಂತ ನಂಬಿಕೆಯಿಂದ ಕಾಯ್ತಾ ಇರೋಕೆ, ಜನ್ರಿಗೆ ಭಯಪಡದೇ ಇರೋಕೆ, ಸಹೋದರ ಸಹೋದರಿಯನ್ನ ಮನಸಾರೆ ಪ್ರೀತಿಸೋಕೆ ಪೇತ್ರನ ಪತ್ರಗಳು ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಸಭೆಯವ್ರನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಹಿರಿಯರಿಗೂ ಸಹಾಯ ಮಾಡುತ್ತೆ.

ಬಂದೇ ಬರುತ್ತೆ ಅಂತ ನಂಬಿ

4. ಎರಡನೇ ಪೇತ್ರ 3:3, 4 ಹೇಳೋ ತರ ನಮ್ಮ ನಂಬಿಕೆ ಯಾವಾಗ ಕಮ್ಮಿ ಆಗಿಬಿಡಬಹುದು?

4 ಯೆಹೋವ ಅಂತ್ಯ ತರ್ತಾನೆ ಅಂತ ನಾವು ನಂಬ್ತೀವಿ. ಆದ್ರೆ ಇಷ್ಟು ವರ್ಷ ಆದ್ರೂ ಅಂತ್ಯ ಬರದೇ ಇರೋದನ್ನ ನೋಡಿ ಕೆಲವರು ನಮ್ಮನ್ನ ಆಡ್ಕೊಂಡು ನಗ್ತಾರೆ. ಇನ್ನು ಕೆಲವರು ‘ಅಂತ್ಯ ಬರೋದೇ ಇಲ್ಲ, ನೀವು ಕಾಯೋದ್ರಿಂದ ಏನೂ ಪ್ರಯೋಜನ ಇಲ್ಲ’ ಅಂತ ಹೇಳ್ತಾರೆ. (2 ಪೇತ್ರ 3:3, 4 ಓದಿ.) ಸೇವೆಯಲ್ಲಿ, ಕೆಲ್ಸದ ಜಾಗದಲ್ಲಿ, ನಮ್ಮ ಕುಟುಂಬದಲ್ಲಿ ಯಾರಾದ್ರೂ ಈ ತರ ಹೇಳಿದಾಗ ನಮ್ಮ ನಂಬಿಕೆ ಕಮ್ಮಿ ಆಗಿಬಿಡಬಹುದು. ಆಗ ನಾವೇನು ಮಾಡಬೇಕು?

5. ಅಂತ್ಯ ಬರೋ ತನಕ ನಾವು ತಾಳ್ಮೆಯಿಂದ ಕಾಯಬೇಕು ಅಂದ್ರೆ ಏನನ್ನ ಮನಸ್ಸಲ್ಲಿಡಬೇಕು? (2 ಪೇತ್ರ 3:8, 9)

5 ಈ ಕೆಟ್ಟ ಲೋಕಕ್ಕೆ ಅಂತ್ಯ ತರೋಕೆ ಯೆಹೋವ ನಿಧಾನ ಮಾಡ್ತಿದ್ದಾನೆ ಅಂತ ಕೆಲವ್ರಿಗೆ ಅನಿಸಬಹುದು. ಆದ್ರೆ ನಾವು ಪೇತ್ರ ಹೇಳಿದ ಮಾತನ್ನ ಮನಸ್ಸಲ್ಲಿಡಬೇಕು. ಅದೇನಂದ್ರೆ, ಯೆಹೋವ ಯೋಚ್ನೆ ಮಾಡೋದಕ್ಕೂ ನಾವು ಯೋಚ್ನೆ ಮಾಡೋದಕ್ಕೂ ತುಂಬ ವ್ಯತ್ಯಾಸ ಇದೆ. (2 ಪೇತ್ರ 3:8, 9 ಓದಿ.) ಯೆಹೋವ ದೇವರಿಗೆ ಸಾವಿರ ವರ್ಷಗಳು ಒಂದು ದಿನ ಇದ್ದ ಹಾಗೆ. ಅಷ್ಟೇ ಅಲ್ಲ, ಯಾರೂ ನಾಶ ಆಗಬಾರದು ಅನ್ನೋದೇ ಆತನ ಆಸೆ. ಅದಕ್ಕೇ ಆತನು ತಾಳ್ಮೆಯಿಂದ ಕಾಯ್ತಿದ್ದಾನೆ. ಆದ್ರೆ ಯೆಹೋವನ ದಿನ ಬಂದೇ ಬರುತ್ತೆ. ಆಗ ಈ ಕೆಟ್ಟ ಲೋಕ ನಾಶ ಆಗೇ ಆಗುತ್ತೆ. ನಮಗಿರೋ ಸಮಯ ತುಂಬ ಕಮ್ಮಿ. ಹಾಗಾಗಿ ನಾವು ಆದಷ್ಟು ಬೇಗ ಎಲ್ಲಾ ದೇಶದ ಜನ್ರಿಗೆ ಸಿಹಿಸುದ್ದಿ ಸಾರಬೇಕು.

6. ಯೆಹೋವನ ದಿನ ಬರುತ್ತೆ ಅನ್ನೋದನ್ನ “ಮನಸ್ಸಲ್ಲಿಟ್ಟು ಕಾಯ್ತಾ” ಇರೋದು ಹೇಗೆ? (2 ಪೇತ್ರ 3:11, 12)

6 ಯೆಹೋವನ ದಿನ ಬರುತ್ತೆ ಅನ್ನೋದನ್ನ “ಮನಸ್ಸಲ್ಲಿಟ್ಟು ಕಾಯ್ತಾ ಇರಿ” ಅಂತ ಪೇತ್ರ ಹೇಳಿದ. (2 ಪೇತ್ರ 3:11, 12 ಓದಿ.) ಅದನ್ನ ಮನಸ್ಸಲ್ಲಿಡೋದು ಹೇಗೆ? ಹೊಸ ಲೋಕದಲ್ಲಿ ನಮ್ಮ ಜೀವನ ಹೇಗಿರುತ್ತೆ ಅನ್ನೋದನ್ನ ನಾವು ಪ್ರತೀ ದಿನ ಯೋಚ್ನೆ ಮಾಡಬೇಕು. ನೀವು ಹೊಸ ಲೋಕದಲ್ಲಿ ಶುದ್ಧ ಗಾಳಿನ ಉಸಿರಾಡ್ತಾ ಇದ್ದೀರ, ಪೌಷ್ಟಿಕ ಆಹಾರ ತಿಂತಾ ಇದ್ದೀರ, ಮತ್ತೆ ಜೀವ ಪಡ್ಕೊಂಡು ಬಂದವ್ರನ್ನ ಸ್ವಾಗತಿಸ್ತಾ ಇದ್ದೀರ ಅಂತ ಕಲ್ಪಿಸ್ಕೊಳ್ಳಿ. ಸಾವಿರಾರು ವರ್ಷದ ಹಿಂದೆ ತೀರಿಹೋಗಿರೋರು ಎದ್ದು ಬಂದಾಗ ಭವಿಷ್ಯವಾಣಿಗಳು ಹೇಗೆ ನೆರವೇರಿತು ಅಂತ ನೀವು ವಿವರಿಸೋದನ್ನ ಕಲ್ಪಿಸ್ಕೊಳ್ಳಿ. ಇದನ್ನೆಲ್ಲ ಯೋಚ್ನೆ ಮಾಡೋದ್ರಿಂದ ಕೊನೇ ದಿನಗಳಲ್ಲಿ ಜೀವಿಸ್ತಾ ಇದ್ದೀವಿ ಅನ್ನೋದನ್ನ ನಾವು ಹಗುರವಾಗಿ ತಗೊಳ್ಳಲ್ಲ. ಅಷ್ಟೇ ಅಲ್ಲ, ಯೆಹೋವನ ದಿನ ಬಂದೇ ಬರುತ್ತೆ ಅಂತ ನಂಬ್ತೀವಿ. ಮುಂದೆ ಏನಾಗುತ್ತೆ ಅನ್ನೋದ್ರ ಬಗ್ಗೆ ನಾವು ‘ಮೊದ್ಲೇ ತಿಳ್ಕೊಳ್ಳೋದ್ರಿಂದ ಸುಳ್ಳು ಬೋಧಕರ ಮಾತನ್ನ ಕೇಳಿ ದಾರಿ ತಪ್ಪಲ್ಲ.’—2 ಪೇತ್ರ 3:17.

ಜನ್ರಿಗೆ ಭಯ ಪಡಬೇಡಿ

7. ನಾವು ಜನ್ರಿಗೆ ಭಯಪಟ್ರೆ ಏನಾಗುತ್ತೆ?

7 ಯೆಹೋವನ ದಿನ ಹತ್ರ ಇದೆ ಅನ್ನೋದು ನಮ್ಮ ಮನಸ್ಸಲ್ಲಿದ್ರೆ ಜನ್ರಿಗೆ ಸಿಹಿಸುದ್ದಿ ಸಾರ್ತೀವಿ. ಆದ್ರೆ ಕೆಲವೊಮ್ಮೆ ಜನ್ರ ಮೇಲಿರೋ ಭಯದಿಂದ ಸಾರೋಕೆ ಹಿಂದೆಮುಂದೆ ನೋಡ್ತೀವಿ. ಪೇತ್ರನೂ ಒಂದು ಸಲ ಭಯಪಟ್ಟ. ಯೇಸುಗೆ ವಿಚಾರಣೆ ನಡೀತಿದ್ದಾಗ ಪೇತ್ರ ತಾನು ಯೇಸುವಿನ ಶಿಷ್ಯ ಅಂತ ಹೇಳೋಕೆ ಭಯಪಟ್ಟ. ‘ಯೇಸು ಯಾರಂತನೇ ನಂಗೊತ್ತಿಲ್ಲ’ ಅಂತ ಪದೇ ಪದೇ ಹೇಳಿಬಿಟ್ಟ. (ಮತ್ತಾ. 26:69-75) ಆದ್ರೆ ಆಮೇಲೆ ಇದೇ ಪೇತ್ರ “ಜನ್ರು ಹೆದರೋ ವಿಷ್ಯಗಳಿಗೆ ನೀವು ಹೆದರಬೇಡಿ, ಚಿಂತೆ ಮಾಡಬೇಡಿ” ಅಂತ ಹೇಳಿದ. (1 ಪೇತ್ರ 3:14) ಇದ್ರಿಂದ ನಮಗೇನು ಗೊತ್ತಾಗುತ್ತೆ? ಜನ್ರಿಗೆ ಇನ್ಮುಂದೆ ಭಯಪಡಬೇಕಾಗಿಲ್ಲ, ನಮ್ಮಿಂದ ಧೈರ್ಯವಾಗಿರೋಕೆ ಆಗುತ್ತೆ ಅಂತ ಗೊತ್ತಾಗುತ್ತೆ.

8. ನಾವು ಜನ್ರಿಗೆ ಭಯಪಡದೇ ಧೈರ್ಯವಾಗಿರೋಕೆ ಏನು ಮಾಡಬೇಕು? (1 ಪೇತ್ರ 3:15)

8 ನಾವು ಜನ್ರಿಗೆ ಭಯಪಡದೆ ಧೈರ್ಯವಾಗಿರೋಕೆ ಏನು ಮಾಡಬೇಕು? “ನಿಮ್ಮ ಹೃದಯದಲ್ಲಿ ಕ್ರಿಸ್ತನನ್ನ ಪ್ರಭು, ಪವಿತ್ರ ಅಂತ ಒಪ್ಕೊಳ್ಳಿ” ಅಂತ ಪೇತ್ರ ಹೇಳಿದ. (1 ಪೇತ್ರ 3:15 ಓದಿ.) ಅಂದ್ರೆ ಯೇಸುಗೆ ಸ್ವರ್ಗದಲ್ಲಿ ಯಾವ ಸ್ಥಾನ ಇದೆ, ಎಷ್ಟು ಶಕ್ತಿ ಇದೆ ಅನ್ನೋದನ್ನ ನೆನಪಿಸ್ಕೊಳ್ಳಿ ಅಂತ ಅವನು ಹೇಳ್ತಿದ್ದಾನೆ. ಉದಾಹರಣೆಗೆ ಒಬ್ರಿಗೆ ಸಿಹಿಸುದ್ದಿ ಸಾರೋಕೆ ನಿಮಗೆ ಅವಕಾಶ ಸಿಕ್ಕಿದೆ ಅಂದ್ಕೊಳ್ಳಿ. ಆದ್ರೆ ಆಗ ನಿಮಗೆ ತುಂಬ ಭಯ ಆಗ್ತಿದೆ ಅಂದಾಗ ಯೇಸು ಕ್ರಿಸ್ತ ಸ್ವರ್ಗದಲ್ಲಿ ರಾಜ ಆಗಿರೋದನ್ನ ನೆನಪಿಸ್ಕೊಳ್ಳಿ. ಆತನ ಸುತ್ತ ಕೋಟ್ಯಾನುಕೋಟಿ ದೇವದೂತರು ನಿಂತಿರೋದನ್ನ ಕಲ್ಪಿಸ್ಕೊಳ್ಳಿ. ಆತನಿಗೆ ‘ಸ್ವರ್ಗದಲ್ಲೂ ಭೂಮಿಯಲ್ಲೂ ಎಲ್ಲ ಅಧಿಕಾರ ಇದೆ,’ ‘ಲೋಕದ ಅಂತ್ಯ ಬರೋ ತನಕ ಆತನು ನಿಮ್ಮ ಜೊತೆ ಇರ್ತಾನೆ’ ಅನ್ನೋದನ್ನ ಮರೀಬೇಡಿ. (ಮತ್ತಾ. 28:18-20) ನೀವು ಏನನ್ನ ನಂಬ್ತೀರ ಅಂತ ಬೇರೆಯವ್ರಿಗೆ ಹೇಳೋಕೆ “ಯಾವಾಗ್ಲೂ ಸಿದ್ಧವಾಗಿರಿ” ಅಂತನೂ ಪೇತ್ರ ಹೇಳಿದ. ಕೆಲ್ಸದ ಜಾಗದಲ್ಲಿ, ಸ್ಕೂಲಲ್ಲಿ ಅಥವಾ ಬೇರೆಲ್ಲಾದ್ರೂ ನಿಮಗೆ ಗೊತ್ತಿರೋರಿಗೆ ಸಿಹಿಸುದ್ದಿ ಸಾರಬೇಕು ಅಂದ್ಕೊಂಡಿದ್ದೀರಾ? ಆದ್ರೆ ಭಯ ಆಗ್ತಿದ್ಯಾ? ಅವ್ರ ಹತ್ರ ಮಾತಾಡೋಕೆ ಯಾವಾಗ ಅವಕಾಶ ಸಿಗಬಹುದು ಅಂತ ಯೋಚ್ನೆ ಮಾಡಿ. ಆಮೇಲೆ ಅವ್ರ ಹತ್ರ ಏನು ಮಾತಾಡಬೇಕು ಅಂತ ತಯಾರಿ ಮಾಡ್ಕೊಳ್ಳಿ. ಯೆಹೋವ ಖಂಡಿತ ನಿಮಗೆ ಧೈರ್ಯ ಕೊಡ್ತಾನೆ ಅಂತ ನಂಬಿಕೆಯಿಟ್ಟು ಪ್ರಾರ್ಥನೆ ಮಾಡಿ.—ಅ. ಕಾ. 4:29.

“ತುಂಬ ಪ್ರೀತಿ ಇರಬೇಕು”

ಪೌಲ ತಿದ್ದಿದಾಗ ಪೇತ್ರ ಸರಿ ಮಾಡ್ಕೊಂಡ. ಪೇತ್ರ ಬರೆದ ಎರಡು ಪತ್ರಗಳು ಪ್ರೀತಿ ತೋರಿಸೋಕೆ ನಮಗೆ ಸಹಾಯ ಮಾಡುತ್ತೆ (ಪ್ಯಾರ 9 ನೋಡಿ)

9. ಪೇತ್ರ ಯಾವಾಗ ಮನಸಾರೆ ಪ್ರೀತಿ ತೋರಿಸಲಿಲ್ಲ? (ಚಿತ್ರನೂ ನೋಡಿ.)

9 “ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು. ಅದೇ ಆ ಆಜ್ಞೆ” ಅಂತ ಯೇಸು ಹೇಳಿದಾಗ ಪೇತ್ರ ಆತನ ಜೊತೆನೇ ಇದ್ದ. (ಯೋಹಾ. 13:34) ಆದ್ರೂ ಜನ್ರಿಗೆ ಹೆದರಿ ಬೇರೆ ಜನಾಂಗದ ಸಹೋದರ ಸಹೋದರಿಯರ ಜೊತೆ ಊಟ ಮಾಡೋದನ್ನ ನಿಲ್ಲಿಸಿಬಿಟ್ಟ. ಅವ್ರ ಜೊತೆ ಕೂತು ಊಟ ಮಾಡಿದ್ದನ್ನ ಬರೀ “ನಾಟಕ” ಅಂತ ಪೌಲ ಹೇಳಿದ. (ಗಲಾ. 2:11-14) ಅವನು ತಿದ್ದಿದಾಗ ಪೇತ್ರ ಒಪ್ಕೊಂಡ. ಇನ್ಮುಂದೆ ಹಾಗೆ ಮಾಡಬಾರದು ಅಂತ ಕಲಿತ. ಅದಕ್ಕೇ ಅವನು ತನ್ನ ಎರಡೂ ಪತ್ರಗಳಲ್ಲಿ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ರೆ ಮಾತ್ರ ಸಾಕಾಗಲ್ಲ, ಅದನ್ನ ತೋರಿಸಬೇಕು ಅಂತ ಹೇಳಿದ್ದಾನೆ.

10. ಯಾವಾಗ ಮಾತ್ರ ನಮ್ಮ ಸಹೋದರ ಸಹೋದರಿಯರನ್ನ ‘ಒಡಹುಟ್ಟಿದವ್ರ ತರ ಪ್ರೀತಿಸೋಕಾಗುತ್ತೆ’? ವಿವರಿಸಿ. (1 ಪೇತ್ರ 1:22)

10 ನಾವು “ಒಬ್ರು ಇನ್ನೊಬ್ರನ್ನ ಒಡಹುಟ್ಟಿದವ್ರ ತರ” ನೋಡಬೇಕು ಅಂತ ಪೇತ್ರ ಹೇಳಿದ. (1 ಪೇತ್ರ 1:22 ಓದಿ.) ಇಂಥ ಪ್ರೀತಿ ನಾವು ‘ದೇವರ ಸಂದೇಶದಲ್ಲಿರೋ ಸತ್ಯವಾದ ಮಾತುಗಳನ್ನ ಕೇಳಿದ್ರೆ’ ನಮ್ಮಲ್ಲಿ ಬರುತ್ತೆ. ಆ ಸತ್ಯಗಳಲ್ಲಿ ದೇವರು ಬೇಧಭಾವ ಮಾಡಲ್ಲ ಅನ್ನೋದೂ ಕೂಡ ಒಂದು. (ಅ. ಕಾ. 10:34, 35) ಹಾಗಾಗಿ ನಾವು ಸಭೆಯಲ್ಲಿ ಕೆಲವ್ರಿಗೆ ಪ್ರೀತಿ ತೋರಿಸಿ ಇನ್ನು ಕೆಲವ್ರಿಗೆ ಪ್ರೀತಿ ತೋರಿಸಲಿಲ್ಲ ಅಂದ್ರೆ ನಾವು ಯೇಸು ಕೊಟ್ಟ ಆಜ್ಞೆನ ಪಾಲಿಸ್ತಿಲ್ಲ ಅಂತ ಅರ್ಥ. ನಿಜ, ಯೇಸುಗೆ ಇದ್ದ ಹಾಗೆ ನಮಗೆ ಕೆಲವರು ಮಾತ್ರ ಹತ್ರವಾಗಿರ್ತಾರೆ. (ಯೋಹಾ. 13:23; 20:2) ಆದ್ರೆ ಪೇತ್ರ ಇಲ್ಲಿ ಏನು ಹೇಳ್ತಿದ್ದಾನೆ ಅಂದ್ರೆ ನಾವು ಎಲ್ಲಾ ಸಹೋದರ ಸಹೋದರಿಯರನ್ನೂ ‘ಒಡಹುಟ್ಟಿದವ್ರ ತರ ಪ್ರೀತಿಸಬೇಕು’ ಅಂತ ಹೇಳ್ತಿದ್ದಾನೆ.—1 ಪೇತ್ರ 2:17.

11. ‘ಮನಸಾರೆ ಪ್ರೀತಿಸೋದು’ ಅಂದ್ರೇನು?

11 “ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ” ಅಂತ ಪೇತ್ರ ಹೇಳಿದ. ಆದ್ರೆ ಕೆಲವೊಮ್ಮೆ ಬೇರೆಯವ್ರನ್ನ ಪ್ರೀತಿಸೋಕೆ ನಮಗೆ ಕಷ್ಟ ಆಗುತ್ತೆ. ಆದ್ರೂ ಅವ್ರನ್ನ ಪ್ರೀತಿಸಬೇಕು ಅನ್ನೋದು ಇದ್ರ ಅರ್ಥ. ಉದಾಹರಣೆಗೆ ಒಬ್ಬ ಸಹೋದರ ನಮ್ಮನ್ನ ನೋಯಿಸಿದ್ರೆ ನಾವು ಮುನಿಸಿಕೊಂಡುಬಿಡ್ತೀವಿ. ಸೇಡು ತೀರಿಸಬೇಕು ಅಂತನೂ ಕೆಲವೊಮ್ಮೆ ಅನಿಸಿಬಿಡಬಹುದು. ಅದ್ರೆ ಇದು ಯೆಹೋವ ದೇವರಿಗೆ ಇಷ್ಟ ಇಲ್ಲ. (ಯೋಹಾ. 18:10, 11) ಅದನ್ನೇ ಪೇತ್ರ ಯೇಸುವಿಂದ ಕಲಿತ. ಅದಕ್ಕೇ ಅವನು “ಕೆಟ್ಟದು ಮಾಡಿದವ್ರಿಗೆ ಕೆಟ್ಟದು ಮಾಡಬೇಡಿ. ಅವಮಾನ ಮಾಡಿದವ್ರಿಗೆ ಅವಮಾನ ಮಾಡಬೇಡಿ. ಬದಲಿಗೆ ಅವ್ರಿಗೆ ಒಳ್ಳೇದನ್ನೇ ಮಾಡಿ” ಅಂತ ಹೇಳಿದ. (1 ಪೇತ್ರ 3:9) ಹಾಗಾಗಿ ಯಾರಾದ್ರೂ ನಮ್ಮ ಮನಸ್ಸು ನೋಯಿಸಿದ್ರೆ ನಾವು ಅವ್ರ ಜೊತೆ ಚೆನ್ನಾಗಿ ನಡ್ಕೊಳ್ಳೋಣ. ಮನಸಾರೆ ಅವ್ರನ್ನ ಪ್ರೀತಿಸೋಣ.

12. (ಎ) ನಮಗೆ ಬೇರೆಯವ್ರ ಮೇಲೆ ತುಂಬ ಪ್ರೀತಿ ಇದ್ರೆ ಏನು ಮಾಡ್ತೀವಿ? (ಬಿ) ಐಕ್ಯತೆ ಅನ್ನೊ ನಿಧಿಯನ್ನು ಕಾಪಾಡಿ ಅನ್ನೋ ವಿಡಿಯೋದಲ್ಲಿ ತೋರಿಸಿದ ಹಾಗೆ ನೀವೇನು ಮಾಡಬೇಕಂತ ಇದ್ದೀರಾ?

12 ಪೇತ್ರ ಬರೆದ ಒಂದನೇ ಪತ್ರದಲ್ಲಿ ನಮಗೆ ಬೇರೆಯವ್ರ ಮೇಲೆ “ತುಂಬ ಪ್ರೀತಿ” ಇರಬೇಕು ಅಂತ ಬರೆದ. ಅಂಥ ಪ್ರೀತಿ ನಮ್ಮಲ್ಲಿದ್ರೆ ಬರೀ ಒಂದ್‌ ಸಲ ಎರಡ್‌ ಸಲ ಅಲ್ಲ “ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ” ಕ್ಷಮಿಸ್ತೀವಿ. (1 ಪೇತ್ರ 4:8) ಈ ಮಾತುಗಳನ್ನ ಬರೆದಾಗ ಪೇತ್ರನಿಗೆ ಏನು ನೆನಪಾಗಿರಬಹುದು? ಸುಮಾರು ವರ್ಷಗಳ ಹಿಂದೆ ಯೇಸು ಪೇತ್ರನಿಗೆ ಹೇಗೆ ಕ್ಷಮಿಸಬೇಕು ಅಂತ ಕಲಿಸಿದ ಪಾಠ ನೆನಪಾಗಿರಬಹುದು. ಆದ್ರೆ ಪೇತ್ರ ತಾನೆಷ್ಟು ಉದಾರಿ ಅಂತ ತೋರಿಸ್ಕೊಳ್ಳೋಕೆ ಯೇಸು ಹತ್ರ ಹೋಗಿ ‘ನಾನು ನನ್ನ ಸಹೋದರನನ್ನ 7 ಸಲ ಕ್ಷಮಿಸಿದ್ರೆ ಸಾಕಲ್ವಾ’ ಅಂತ ಕೇಳಿದ. ಆಗ ಯೇಸು “ಏಳು ಸಾರಿ ಅಲ್ಲ, 77 ಸಾರಿ ಕ್ಷಮಿಸಬೇಕು” ಅಂದನು. ಅಂದ್ರೆ ಜೀವನಪೂರ್ತಿ ಕ್ಷಮಿಸಬೇಕು ಅಂತ ಹೇಳಿದನು. (ಮತ್ತಾ. 18:21, 22) ಈ ತರ ಮಾಡೋಕೆ ನಿಮಗೆ ಕೆಲವೊಮ್ಮೆ ಕಷ್ಟ ಆಗುತ್ತಾ? ಹಿಂದಿನ ಕಾಲದಲ್ಲಿದ್ದ ಕೆಲವು ಸೇವಕರಿಗೂ ಕೆಲವೊಮ್ಮೆ ಕಷ್ಟ ಆಗಿತ್ತು. ಹಾಗನಿಸೋದು ಸಹಜನೇ. ಆದ್ರೂ ಬೇರೆಯವ್ರನ್ನ ಕ್ಷಮಿಸಿ ಅವ್ರ ಜೊತೆ ಚೆನ್ನಾಗಿರೋದು ತುಂಬ ಮುಖ್ಯ. ಅದಕ್ಕೋಸ್ಕರ ಏನು ಮಾಡಬೇಕೋ ಅದನ್ನೆಲ್ಲ ಮಾಡಿ. c

ಹಿರಿಯರೇ, ಸಭೆನ ಚೆನ್ನಾಗಿ ನೋಡ್ಕೊಳ್ಳಿ

13. ಹಿರಿಯರಿಗೆ ಕೆಲವೊಮ್ಮೆ ಸಭೆನ ನೋಡ್ಕೊಳ್ಳೋಕೆ ಯಾಕೆ ಸಮಯ ಸಾಕಾಗಲ್ಲ?

13 ಯೇಸು ಮತ್ತೆ ಜೀವ ಪಡ್ಕೊಂಡು ಎದ್ದು ಬಂದಮೇಲೆ ಪೇತ್ರನಿಗೆ “ನನ್ನ ಚಿಕ್ಕ ಕುರಿಗಳಿಗೆ ಕುರುಬನಾಗಿರು” ಅಂತ ಹೇಳಿದನು. (ಯೋಹಾ. 21:16) ಇದೊಂದು ದೊಡ್ಡ ಜವಾಬ್ದಾರಿ. ನೀವೊಬ್ಬ ಹಿರಿಯನಾಗಿದ್ರೆ, ನಿಮಗೂ ಕೂಡ ಈ ಜವಾಬ್ದಾರಿ ಇದೆ. ಆದ್ರೆ ಕೆಲವೊಮ್ಮೆ ಇದನ್ನ ಮಾಡೋಕೆ ನಿಮಗೆ ಸಮಯ ಸಾಕಾಗದೇ ಹೋಗಬಹುದು. ಯಾಕಂದ್ರೆ ನೀವು ನಿಮ್ಮ ಕುಟುಂಬದವ್ರಿಗೆ ಬೇಕಾಗಿರೋದನ್ನ ಕೊಟ್ಟು ಚೆನ್ನಾಗಿ ನೋಡ್ಕೊಬೇಕು. ಅವ್ರಿಗೆ ನಿಮ್ಮ ಸಮಯ ಕೊಟ್ಟು ಪ್ರೀತಿ ತೋರಿಸಬೇಕು. ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಬೇಕು. ಮುಂದೆ ನಿಂತು ಸಹೋದರ ಸಹೋದರಿಯರಿಗೆ ಸಿಹಿಸುದ್ದಿ ಸಾರೋಕೆ ಸಹಾಯ ಮಾಡಬೇಕು. ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ ಭಾಷಣಗಳನ್ನ ಕೊಡಬೇಕು. ಅದಕ್ಕೋಸ್ಕರ ತಯಾರಿ ಮಾಡಬೇಕು. ನಿಮ್ಮಲ್ಲಿ ಕೆಲವ್ರಿಗೆ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯಲ್ಲಿ, ಕಟ್ಟಡ ವಿನ್ಯಾಸ ನಿರ್ಮಾಣ ಇಲಾಖೆಯಲ್ಲಿ ಮಾಡೋಕೆ ತುಂಬ ಕೆಲ್ಸಗಳಿರುತ್ತೆ. ಹೀಗೆ ನಿಮ್ಮ ಹೆಗಲ ಮೇಲೆ ತುಂಬ ಜವಾಬ್ದಾರಿಗಳಿವೆ.

ಬಿಜಿ಼ಯಾಗಿದ್ರೂ ನಮ್ಮ ಪ್ರೀತಿಯ ಹಿರಿಯರು ದೇವರ ಮಂದೆನ ಚೆನ್ನಾಗಿ ನೋಡ್ಕೊಳ್ಳೋಕೆ ಕೈಲಾಗಿದ್ದನ್ನೆಲ್ಲ ಮಾಡ್ತಿದ್ದಾರೆ (ಪ್ಯಾರ 14-15 ನೋಡಿ)

14. ಹಿರಿಯರಿಗೆ ಮಂದೆನ ಚೆನ್ನಾಗಿ ನೋಡ್ಕೊಳ್ಳೋಕೆ ಯಾರು ಸಹಾಯ ಮಾಡ್ತಾರೆ? (1 ಪೇತ್ರ 5:1-4)

14 “ದೇವರ ಮಂದೆಯನ್ನ ಚೆನ್ನಾಗಿ ನೋಡ್ಕೊಳ್ಳಿ” ಅಂತ ಪೌಲ ಹಿರಿಯರಿಗೆ ಹೇಳ್ತಿದ್ದಾನೆ. (1 ಪೇತ್ರ 5:1-4 ಓದಿ.) ಹಿರಿಯರೇ, ಸಭೆಯಲ್ಲಿರೋ ಸಹೋದರ ಸಹೋದರಿಯರನ್ನ ಚೆನ್ನಾಗಿ ನೋಡ್ಕೊಬೇಕು ಅಂತ ನಿಮಗೆ ತುಂಬ ಆಸೆ ಇರುತ್ತೆ. ಆದ್ರೆ ಅದನ್ನ ಮಾಡೋಕೆ ಕೆಲವೊಮ್ಮೆ ನಿಮಗೆ ಕಷ್ಟ ಆಗಬಹುದು. ಯಾಕಂದ್ರೆ ನಿಮಗೆ ತುಂಬ ಜವಾಬ್ದಾರಿಗಳಿವೆ, ನೀವೂ ಅವನ್ನೆಲ್ಲ ಮಾಡಿ ಸುಸ್ತಾಗಿರ್ತೀರ. ಅಂಥ ಸಂದರ್ಭದಲ್ಲಿ ಯೆಹೋವನಿಗೆ ಪ್ರಾರ್ಥನೆ ಮಾಡಿ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಆತನ ಹತ್ರ ಹೇಳ್ಕೊಳ್ಳಿ. ಆಗ ಯೆಹೋವ ನಿಮಗೆ ಶಕ್ತಿ ಕೊಡ್ತಾನೆ. ಯಾಕಂದ್ರೆ “ಬೇರೆಯವ್ರಿಗೆ ಸಹಾಯ ಮಾಡೋಕೆ ಯಾರಾದ್ರೂ ಮುಂದೆ ಬಂದ್ರೆ ಅವರು ದೇವರ ಶಕ್ತಿ ಮೇಲೆ ಹೊಂದ್ಕೊಂಡು ಸಹಾಯ ಮಾಡ್ಲಿ” ಅಂತ ಪೇತ್ರ ಹೇಳಿದ್ದಾನೆ. (1 ಪೇತ್ರ 4:11) ನೀವೆಷ್ಟೇ ಸಹಾಯ ಮಾಡಿದ್ರೂ ಸಹೋದರ ಸಹೋದರಿಯರ ಕಷ್ಟಗಳು ಪೂರ್ತಿಯಾಗಿ ಬಗೆಹರಿದೇ ಹೋಗಬಹುದು. ಆಗ ‘ನನ್ನ ಕೈಯಿಂದ ಏನೂ ಮಾಡೋಕೆ ಆಗ್ತಿಲ್ವಲ್ಲಾ’ ಅಂತ ಬೇಜಾರು ಮಾಡ್ಕೊಬೇಡಿ. ಯಾಕಂದ್ರೆ “ಪ್ರಧಾನ ಕುರುಬ” ಯೇಸು ಕ್ರಿಸ್ತ ಅದನ್ನ ಮಾಡ್ತಾನೆ. ಆತನು ಅದನ್ನ ಈಗ್ಲೂ ಮಾಡಕ್ಕಾಗುತ್ತೆ. ಹೊಸಲೋಕದಲ್ಲೂ ಮಾಡಕ್ಕಾಗುತ್ತೆ. ಹಾಗಾಗಿ ಯೆಹೋವ ದೇವರು ನಿಮ್ಮ ಹತ್ರ ಕೇಳ್ಕೊಳ್ಳೋದು ಇಷ್ಟೇ. ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಿ, ಅವ್ರನ್ನ ಚೆನ್ನಾಗಿ ನೋಡ್ಕೊಳ್ಳಿ, “ಮಂದೆಗೆ ಮಾದರಿಯಾಗಿರಿ.”

15. ವಿಲ್ಯಮ್‌ ಅನ್ನೋ ಸಹೋದರ ಮಂದೆನ ಹೇಗೆ ಚೆನ್ನಾಗಿ ನೋಡ್ಕೊತಾರೆ? (ಚಿತ್ರನೂ ನೋಡಿ.)

15 ತುಂಬ ವರ್ಷದಿಂದ ಹಿರಿಯನಾಗಿ ಸೇವೆ ಮಾಡ್ತಿರೋ ಸಹೋದರ ವಿಲ್ಯಮ್‌ಗೆ ಸಹೋದರ ಸಹೋದರಿಯರನ್ನ ಚೆನ್ನಾಗಿ ನೋಡ್ಕೊಳ್ಳೋದು ಎಷ್ಟು ಮುಖ್ಯ ಅಂತ ಗೊತ್ತಿತ್ತು. ಅದಕ್ಕೆ ಅವರು ಮತ್ತು ಅವ್ರ ಜೊತೆ ಇರೋ ಬೇರೆ ಹಿರಿಯರು ಸೇರಿ ಒಂದು ಏರ್ಪಾಡು ಮಾಡಿದ್ರು. ಕೋವಿಡ್‌ ಶುರುವಾದಾಗ ಅವ್ರವ್ರ ಗುಂಪಲ್ಲಿರೋ ಸಹೋದರ ಸಹೋದರಿಯರನ್ನ ಪ್ರತೀ ವಾರ ಮಾತಾಡಿಸ್ತಿದ್ರು. “ಎಷ್ಟೋ ಸಹೋದರ ಸಹೋದರಿಯರು ಮನೇಲಿ ಒಬ್ರೇ ಇರ್ತಾ ಇದ್ದಿದ್ರಿಂದ ತಲೆಲಿ ನೂರಾರು ಯೋಚ್ನೆಗಳು ಓಡಾಡ್ತಾ ಇರುತ್ತೆ, ಇದ್ರಿಂದ ಅವರು ಕುಗ್ಗಿಹೋಗಿಬಿಡಬಹುದು ಅಂತ ನಮಗನಿಸ್ತು. ಅದಕ್ಕೆ ಈ ಏರ್ಪಾಡು ಮಾಡಿದ್ವಿ” ಅಂತ ವಿಲ್ಯಮ್‌ ಹೇಳ್ತಾರೆ. ಸಹೋದರರು ತಮ್ಮ ಕಷ್ಟಗಳನ್ನ ಹೇಳ್ಕೊಳ್ಳುವಾಗ ವಿಲ್ಯಮ್‌ ತುಂಬ ಗಮನಕೊಟ್ಟು ಕೇಳಿಸ್ಕೊಳ್ತಾರೆ. ಅವ್ರಿಗೆ ಏನ್‌ ಬೇಕು ಏನ್‌ ಅವಶ್ಯಕತೆ ಇದೆ ಅಂತ ತಿಳ್ಕೊಳ್ತಾರೆ. ಆಮೇಲೆ ಅವ್ರಿಗೆ ಸಹಾಯ ಆಗೋ ವಿಷ್ಯಗಳು ವೆಬ್‌ಸೈಟಲ್ಲಿ ಯಾವ ಪುಸ್ತಕದಲ್ಲಿದೆ, ಯಾವ ವಿಡಿಯೋದಲ್ಲಿದೆ ಅಂತ ಹುಡುಕ್ತಾರೆ. ಅದನ್ನ ಅವ್ರಿಗೆ ತೋರಿಸಿ ಧೈರ್ಯ ತುಂಬ್ತಾರೆ. “ನಾವು ಮುಂಚೆಗಿಂತ ಈಗ ಸಹೋದರ ಸಹೋದರಿಯರನ್ನ ಚೆನ್ನಾಗಿ ನೋಡ್ಕೊಬೇಕು. ಅವ್ರಿಗೆ ಧೈರ್ಯ ತುಂಬಬೇಕು. ಜನ್ರಿಗೆ ಯೆಹೋವನ ಬಗ್ಗೆ ತಿಳಿಸೋಕೆ ನಾವು ತುಂಬ ಪ್ರಯತ್ನ ಹಾಕ್ತೀವಿ. ಅದೇ ತರ ಸಹೋದರ ಸಹೋದರಿಯರೂ ಯೆಹೋವ ದೇವರಿಗೆ ಹತ್ರ ಆಗೋಕೆ ನಾವು ತುಂಬ ಸಹಾಯ ಮಾಡಬೇಕು” ಅಂತ ವಿಲ್ಯಮ್‌ ಹೇಳ್ತಾರೆ.

ಯೆಹೋವನಿಂದ ತರಬೇತಿ ಪಡ್ಕೊಳ್ತಾ ಇರಿ

16. ಪೇತ್ರ ಬರೆದಿರೋ ಪತ್ರಗಳಿಂದ ನಾವು ಯಾವ್ಯಾವ ಪಾಠಗಳನ್ನ ಕಲಿತ್ವಿ?

16 ನಾವು ಇಲ್ಲಿ ತನಕ ಪೇತ್ರ ಬರೆದಿರೋ ಪತ್ರಗಳಿಂದ ಕೆಲವು ಪಾಠಗಳನ್ನ ಕಲಿತ್ವಿ. ಇದನ್ನ ಓದ್ತಾ ಇರುವಾಗ ‘ನಾನು ಕೆಲವು ವಿಷ್ಯಗಳಲ್ಲಿ ಸರಿ ಮಾಡ್ಕೊಬೇಕು’ ಅಂತ ನಿಮಗೆ ಅನಿಸಿರಬಹುದು. ಉದಾಹರಣೆಗೆ, ಹೊಸ ಲೋಕದಲ್ಲಿ ಸಿಗೋ ಆಶೀರ್ವಾದಗಳ ಬಗ್ಗೆ ಇನ್ನೂ ಜಾಸ್ತಿ ಯೋಚ್ನೆ ಮಾಡಬೇಕು ಅಂತ ಅನಿಸಿರಬಹುದು. ಸ್ಕೂಲಲ್ಲಿ, ಕೆಲ್ಸದ ಜಾಗದಲ್ಲಿ ಮತ್ತು ಇನ್ನೂ ಬೇರೆಬೇರೆ ಕಡೆ ಧೈರ್ಯವಾಗಿ ಸಿಹಿಸುದ್ದಿ ಸಾರೋಕೆ ಗುರಿ ಇಟ್ಟಿರಬಹುದು. ‘ನಾನು ನಮ್ಮ ಸಹೋದರ ಸಹೋದರಿಯರಿಗೆ ಇನ್ನೂ ಹೇಗೆಲ್ಲಾ ಮನಸಾರೆ ಪ್ರೀತಿ ತೋರಿಸಬಹುದು’ ಅಂತ ನೀವು ಯೋಚಿಸಿರಬಹುದು. ಸಭೆಯವ್ರನ್ನ ಇನ್ನೂ ಚೆನ್ನಾಗಿ ನೋಡ್ಕೊಬೇಕು ಅಂತ ಹಿರಿಯರಿಗೆ ಅನಿಸಿರಬಹುದು. ನೀವು ನಿಮ್ಮನ್ನೇ ಪರೀಕ್ಷೆ ಮಾಡ್ಕೊಳ್ಳುವಾಗ ಯಾವುದೋ ಒಂದು ವಿಷ್ಯನ ನೀವು ಸರಿಯಾಗಿ ಮಾಡ್ತಿಲ್ಲ ಅಂತ ಗೊತ್ತಾದ್ರೆ ಬೇಜಾರ್‌ ಮಾಡ್ಕೊಬೇಡಿ. ‘ನಮ್ಮ ಒಡೆಯ ದಯೆ ತೋರಿಸ್ತಾನೆ,’ ನಮಗೆ ಸಹಾಯನೂ ಮಾಡ್ತಾನೆ. (1 ಪೇತ್ರ 2:3) ಅಷ್ಟೇ ಅಲ್ಲ, “ದೇವರೇ ನಿಮ್ಮ ಆ ತರಬೇತಿಯನ್ನ ಮುಗಿಸಿ ನಿಮ್ಮನ್ನ ಬಲಪಡಿಸ್ತಾನೆ” ಅಂತ ಪೇತ್ರ ಹೇಳಿದ್ದಾನೆ.—1 ಪೇತ್ರ 5:10.

17. ಸರಿಯಾಗಿರೋದನ್ನ ಮಾಡೋಕೆ ಪ್ರಯತ್ನ ಮಾಡ್ತಾ ಇದ್ರೆ, ಯೆಹೋವನಿಂದ ಸಿಗೋ ತರಬೇತಿನ ಪಡ್ಕೊಳ್ತಾ ಇದ್ರೆ ನಮಗೆ ಏನ್‌ ಸಿಗುತ್ತೆ?

17 ಯೇಸು ಮುಂದೆ ನಿಂತ್ಕೊಳ್ಳೋಕೂ ತನಗೆ ಯೋಗ್ಯತೆ ಇಲ್ಲ ಅಂತ ಪೇತ್ರ ಒಂದು ಕಾಲದಲ್ಲಿ ಅಂದ್ಕೊಂಡಿದ್ದ. (ಲೂಕ 5:8) ಆದ್ರೆ ಯೆಹೋವ ಮತ್ತು ಯೇಸು ಅವನಿಗೆ ಸಹಾಯ ಮಾಡಿದ್ರು. ಇದ್ರಿಂದ ಅವನು ಎಷ್ಟು ಸಲ ತಪ್ಪು ಮಾಡಿದ್ರೂ ಅದನ್ನ ಸರಿ ಮಾಡ್ಕೊಂಡು ಯೇಸು ಜೊತೆನೇ ಇದ್ದ. ಆತನನ್ನ ಬಿಟ್ಟುಹೋಗಲಿಲ್ಲ. ಹೀಗೆ ‘ಅವನಿಗೆ ನಮ್ಮ ಪ್ರಭು ಯೇಸು ಕ್ರಿಸ್ತನ ಆಳ್ವಿಕೆಯಲ್ಲಿ ಇರೋಕೆ’ ಅವಕಾಶ ಸಿಕ್ತು. (2 ಪೇತ್ರ 1:11) ಎಂಥ ದೊಡ್ಡ ಬಹುಮಾನ ಅಲ್ವಾ? ನೀವು ಕೂಡ ಪೇತ್ರನ ತರ ಸರಿಯಾಗಿರೋದನ್ನ ಮಾಡೋಕೆ ಪ್ರಯತ್ನ ಮಾಡ್ತಾ ಇದ್ರೆ, ಯೆಹೋವನಿಂದ ಸಿಗೋ ತರಬೇತಿನ ಪಡ್ಕೊಳ್ತಾ ಇದ್ರೆ, ‘ನಿಮಗೂ ಶಾಶ್ವತ ಜೀವ’ ಸಿಗುತ್ತೆ. ನಿಮ್ಮ ನಂಬಿಕೆ ನಿಮ್ಮನ್ನ ಕಾಪಾಡುತ್ತೆ ಅನ್ನೋ ಭರವಸೆ ಸುಳ್ಳಾಗಲ್ಲ.—1 ಪೇತ್ರ 1:9.

ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ

a ನಮ್ಮೆಲ್ರಿಗೂ ಕಷ್ಟಗಳನ್ನ ತಾಳ್ಕೊಳ್ಳೋಕೆ ಮತ್ತು ಹಿರಿಯರಿಗೆ ಜವಾಬ್ದಾರಿಯನ್ನ ಚೆನ್ನಾಗಿ ಮಾಡೋಕೆ ಪೇತ್ರ ಬರೆದ ಪತ್ರಗಳು ಸಹಾಯ ಮಾಡುತ್ತೆ.

b ಕ್ರಿಸ್ತ ಶಕ 66ರಲ್ಲಿ ರೋಮನ್ನರು ಯೆರೂಸಲೇಮನ್ನ ಮೊದಲನೇ ಸಲ ಆಕ್ರಮಣ ಮಾಡೋ ಮುಂಚೆನೇ ಪ್ಯಾಲಸ್ತೀನ್‌ನಲ್ಲಿದ್ದ ಕ್ರೈಸ್ತರಿಗೆ ಪೇತ್ರ ಬರೆದ ಪತ್ರಗಳು ಸಿಕ್ಕಿದ್ವು.

c jw.orgನಲ್ಲಿ ಐಕ್ಯತೆ ಅನ್ನೊ ನಿಧಿಯನ್ನು ಕಾಪಾಡಿ ಅನ್ನೋ ವಿಡಿಯೋ ನೋಡಿ.