ಅಧ್ಯಯನ ಲೇಖನ 40
ಬಿದ್ರೂ ಪೇತ್ರನ ತರ ಮತ್ತೆ ಎದ್ದೇಳಿ
“ಸ್ವಾಮಿ, ನಾನು ಪಾಪಿ. ನನ್ನನ್ನ ಬಿಟ್ಟುಹೋಗು.”—ಲೂಕ 5:8.
ಗೀತೆ 60 ಆತನು ನಿನ್ನನ್ನು ಬಲಪಡಿಸುವನು
ಈ ಲೇಖನದಲ್ಲಿ ಏನಿದೆ? a
1. ಯೇಸು ಮಾಡಿದ ಅದ್ಭುತ ನೋಡಿ ಪೇತ್ರನಿಗೆ ಹೇಗನಿಸ್ತು?
ಪೇತ್ರ ಇಡೀ ರಾತ್ರಿ ಬಲೆ ಬೀಸಿದ್ರೂ ಒಂದು ಮೀನೂ ಸಿಗಲಿಲ್ಲ. ಆದ್ರೆ ಯೇಸು ಅವನಿಗೆ, “ಆಳ ಇರೋ ಕಡೆ ದೋಣಿ ತಗೊಂಡು ಹೋಗಿ ಬಲೆ ಬೀಸಿ” ಅಂದನು. (ಲೂಕ 5:4) ರಾತ್ರಿಯೆಲ್ಲಾ ಬಲೆ ಬೀಸಿದ್ರೂ ಸಿಗದಿರೋ ಮೀನು ಇವಾಗ ಸಿಗುತ್ತಾ ಅಂತ ಪೇತ್ರನಿಗೆ ಅನಿಸ್ತು. ಆದ್ರೂ ಅವನು ಯೇಸು ಹೇಳಿದ ಹಾಗೆ ಮಾಡಿದ. ಆಗ ಬಲೆನೇ ಹರಿದುಹೋಗೋಷ್ಟು ರಾಶಿ-ರಾಶಿ ಮೀನು ಸಿಕ್ತು. ಪೇತ್ರ ಮತ್ತು ಅವನ ಜೊತೆ ಇದ್ದವರು ಯೇಸು ಮಾಡಿದ ಅದ್ಭುತ ನೋಡಿ ಬೆಚ್ಚಿಬಿದ್ರು. ಯೇಸುಗೆ ಮುಖ ತೋರಿಸೋಕೆ ಪೇತ್ರನಿಗೆ ಆಗಲಿಲ್ಲ ಅನ್ಸುತ್ತೆ. ಅದಕ್ಕೆ ಪೇತ್ರ ಯೇಸುಗೆ, “ಸ್ವಾಮಿ, ನಾನು ಪಾಪಿ. ನನ್ನನ್ನ ಬಿಟ್ಟುಹೋಗು” ಅಂತ ಹೇಳಿದ.—ಲೂಕ 5:6-9.
2. ಪೇತ್ರನ ಬಗ್ಗೆ ಕಲಿಯೋದ್ರಿಂದ ನಮಗೆ ಹೇಗೆ ಸಹಾಯ ಆಗುತ್ತೆ?
2 “ನಾನು ಪಾಪಿ” ಅಂತ ಪೇತ್ರ ಹೇಳಿದ್ರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ಅವನು ಕೆಲವೊಮ್ಮೆ ದುಡುಕಿ ಏನಾದ್ರೂ ಮಾತಾಡಿಬಿಡ್ತಿದ್ದ, ಏನಾದ್ರೂ ಮಾಡಿಬಿಡ್ತಿದ್ದ. ಆದ್ರೆ ಆಮೇಲೆ ‘ನಾನು ಹಾಗೆ ಮಾಡಬಾರದಾಗಿತ್ತು’ ಅಂತ ಪಶ್ಚಾತ್ತಾಪ ಪಡ್ತಿದ್ದ. ನಿಮಗೂ ಪೇತ್ರನ ತರಾನೇ ಅನಿಸಿರಬಹುದು. ಯಾವುದಾದ್ರೂ ಒಂದು ಕೆಟ್ಟ ಸ್ವಭಾವನ ಸರಿಮಾಡೋಕೆ ಹೋರಾಡ್ತಾ ಇರಬಹುದು ಅಥವಾ ಕೆಟ್ಟ ಚಟನ ಬಿಡೋಕೆ ಕಷ್ಟಪಡ್ತಾ ಇರಬಹುದು. ಪೇತ್ರ ಕೂಡ ತುಂಬ ಸಲ ಎಡವಿಬಿದ್ದ. ಆದ್ರೆ ಎದ್ದುನಿಂತ, ಯೆಹೋವನ ಸೇವೆನ ಮಾಡ್ತಾ ಹೋದ. ನಿಮ್ಮಿಂದಾನೂ ಮತ್ತೆ ಎದ್ದೇಳೋಕೆ ಆಗುತ್ತೆ. ಅದಕ್ಕೆ ಯೆಹೋವ ದೇವರು ಪೇತ್ರನ ತಪ್ಪುಗಳನ್ನ ಬೈಬಲಲ್ಲಿ ಬರೆಸಿಟ್ಟಿದ್ದಾನೆ. (2 ತಿಮೊ. 3:16, 17) ಇದ್ರಿಂದ ಯೆಹೋವ ದೇವರ ಬಗ್ಗೆ ನಮಗೆ ಏನು ಗೊತ್ತಾಗುತ್ತೆ? ನಾವು ಯಾವತ್ತೂ ತಪ್ಪೇ ಮಾಡಬಾರದು ಅಂತ ಯೆಹೋವ ಅಂದ್ಕೊಳ್ಳಲ್ಲ. ಬದಲಿಗೆ ಆ ತಪ್ಪುಗಳನ್ನ ಸರಿ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತಾನೇ ಇರಬೇಕು ಅಂತ ಇಷ್ಟಪಡ್ತಾನೆ.
3. ತಪ್ಪುಗಳಾದ್ರು ನಾವ್ಯಾಕೆ ಬಿಡದೆ ಪ್ರಯತ್ನ ಮಾಡ್ತಾನೇ ಇರಬೇಕು?
3 ನಾವ್ಯಾಕೆ ಬಿಡದೆ ಪ್ರಯತ್ನ ಮಾಡ್ತಾನೇ ಇರಬೇಕು? ಅದಕ್ಕೊಂದು ಉದಾಹರಣೆ ನೋಡಿ. ಒಬ್ಬ ವ್ಯಕ್ತಿ ವಯಲಿನ್ ನುಡಿಸೋಕೆ ಕಲೀತಾ ಇರುವಾಗ ತುಂಬ ತಪ್ಪುಗಳನ್ನ ಮಾಡ್ತಾನೆ. ಆದ್ರೆ ಪ್ರ್ಯಾಕ್ಟೀಸ್ ಮಾಡ್ತಾ ಮಾಡ್ತಾ ಅದನ್ನ ನುಡಿಸೋದ್ರಲ್ಲಿ ನಿಪುಣ ಆಗ್ತಾನೆ. ನಿಪುಣ ಆದ್ಮೇಲೂ ಕೆಲವೊಮ್ಮೆ ನುಡಿಸುವಾಗ ತಪ್ಪುಗಳನ್ನ ಮಾಡ್ತಾನೆ. ಆಗ ಅವನು ಬೇಜಾರ್ ಮಾಡ್ಕೊಂಡು ಸುಮ್ನೆ ಆಗಿಬಿಡ್ತಾನಾ? ಇಲ್ಲ. ಎಲ್ಲಿ ತಪ್ಪಾಯ್ತು ಅಂತ ನೋಡಿ ಅದನ್ನೂ ಸರಿ ಮಾಡ್ಕೊಳ್ಳೋಕೆ ನೋಡ್ತಾನೆ. ಅದೇ ತರ ನಾವು ಕೂಡ ತಪ್ಪು ಮಾಡಬಾರದು ಅಂತ ಪ್ರಯತ್ನ ಮಾಡ್ತಾ ಇರ್ತೀವಿ. ಆದ್ರೂ ಕೆಲವೊಮ್ಮೆ ಆ ತಪ್ಪು ಮಾಡಿಬಿಡ್ತೀವಿ. ಆಗ್ಲೂ ನಾವು ಪ್ರಯತ್ನ ಬಿಡಬಾರದು. ಅದನ್ನ ಸರಿ ಮಾಡ್ಕೊಬೇಕು. ಯಾಕಂದ್ರೆ ಮನುಷ್ಯರು ಅಂದ್ಮೇಲೆ ನಾವೆಲ್ಲ ಒಂದಲ್ಲ ಒಂದು ತಪ್ಪು ಮಾಡ್ತೀವಿ. ಆದ್ರೆ ಸರಿಯಾಗಿರೋದನ್ನ ಮಾಡೋಕೆ ಪ್ರಯತ್ನ ಮಾಡುವಾಗ ಯೆಹೋವ ನಮಗೆ ಸಹಾಯ ಮಾಡ್ತಾನೆ. (1 ಪೇತ್ರ 5:10) ಪೇತ್ರ ಕೂಡ ತುಂಬ ಪ್ರಯತ್ನ ಮಾಡ್ತಿದ್ದ. ಆದ್ರೆ ಕೆಲವೊಮ್ಮೆ ಅವನಿಂದ ತಪ್ಪುಗಳು ಆಗಿಬಿಡ್ತಿತ್ತು. ಆದ್ರೆ ಯೇಸು ಅವನಿಗೆ ಕರುಣೆ ತೋರಿಸ್ತಿದ್ದನು. ಇದ್ರಿಂದ ನಮಗೇನು ಗೊತ್ತಾಗುತ್ತೆ? ನಮ್ಮಿಂದಾನೂ ತಪ್ಪುಗಳಾದಾಗ ಅದನ್ನ ಸರಿ ಮಾಡ್ಕೊಂಡು ಯೆಹೋವನ ಸೇವೆ ಮಾಡಕ್ಕಾಗುತ್ತೆ.
ಪೇತ್ರ ಹೋರಾಡಿ ಆಶೀರ್ವಾದ ಪಡ್ಕೊಂಡ
4. (ಎ) ಲೂಕ 5:5-10ರಲ್ಲಿ ಪೇತ್ರ ತನ್ನ ಬಗ್ಗೆ ಏನು ಹೇಳಿದ? (ಬಿ) ಆದ್ರೆ ಯೇಸುಗೆ ಪೇತ್ರನ ಮೇಲೆ ಯಾವ ನಂಬಿಕೆ ಇತ್ತು?
4 ಪೇತ್ರ ತನ್ನನ್ನೇ “ಪಾಪಿ” ಅಂತ ಹೇಳ್ಕೊಂಡಿದ್ದಕ್ಕೆ ಕಾರಣ ಏನು ಅಂತ ನಮಗೆ ಗೊತ್ತಿಲ್ಲ. ಬೈಬಲಲ್ಲೂ ಆ ಕಾರಣ ಇಲ್ಲ. (ಲೂಕ 5:5-10 ಓದಿ.) ಆದ್ರೆ ಅವನು ಏನೋ ದೊಡ್ಡ ತಪ್ಪುಗಳನ್ನೇ ಮಾಡಿರಬೇಕು. ಅದಕ್ಕೆ ತನಗೆ ಯೇಸು ಮುಂದೆ ನಿಲ್ಲೋಕೆ ಯೋಗ್ಯತೆ ಇಲ್ಲ ಅಂತ ಮನಸ್ಸು ಚುಚ್ಚಿರಬೇಕು. ಇದನ್ನ ಯೇಸು ಅರ್ಥ ಮಾಡ್ಕೊಂಡನು. ಅಷ್ಟೇ ಅಲ್ಲ ಪೇತ್ರ ಕೊನೇ ತನಕ ನಿಯತ್ತಾಗಿ ಇರ್ತಾನೆ ಅನ್ನೋ ನಂಬಿಕೆ ಇದಿದ್ರಿಂದ “ಹೆದ್ರಬೇಡ” ಅಂತ ಯೇಸು ಅವನಿಗೆ ಹೇಳಿದನು. ಯೇಸುಗಿರೋ ನಂಬಿಕೆನ ನೋಡಿ ಪೇತ್ರ ಒಂದು ಒಳ್ಳೇ ತೀರ್ಮಾನ ಮಾಡಿದ. ಅವನು ಮತ್ತು ಅವನ ತಮ್ಮ ಅಂದ್ರೆಯ ಮೀನು ಹಿಡಿಯೋ ಕೆಲಸ ಬಿಟ್ಟು ಯೇಸು ಜೊತೆ ಸೇವೆ ಮಾಡೋಕೆ ಹೋದ್ರು. ಇದ್ರಿಂದ ಯೆಹೋವ ದೇವರು ಅವ್ರನ್ನ ತುಂಬ ಆಶೀರ್ವಾದ ಮಾಡಿದನು.—ಮಾರ್ಕ 1:16-18.
5. ಪೇತ್ರ ಯೇಸು ಜೊತೆನೇ ಇದ್ದಿದ್ರಿಂದ ಏನು ಒಳ್ಳೇದಾಯ್ತು?
5 ಯೇಸು ರೋಗಿಗಳನ್ನ ವಾಸಿ ಮಾಡಿದನು, ಕೆಟ್ಟ ದೇವದೂತರನ್ನ ಬಿಡಿಸಿದನು, ತೀರಿಹೋದವ್ರಿಗೆ ಮತ್ತೆ ಜೀವ ಕೊಟ್ಟನು. ಪೇತ್ರ ಯೇಸು ಜೊತೆನೇ ಇದ್ದು ಸೇವೆ ಮಾಡ್ತಾ ಇದ್ದಿದ್ರಿಂದ ಇದನ್ನೆಲ್ಲ ಕಣ್ಣಾರೆ ನೋಡಕ್ಕಾಯ್ತು. b (ಮತ್ತಾ. 8:14-17; ಮಾರ್ಕ 5:37, 41, 42) ಅಷ್ಟೇ ಅಲ್ಲ ಮುಂದೆ ದೇವರ ಆಳ್ವಿಕೆಯಲ್ಲಿ ಯೇಸು ರಾಜನಾಗ್ತಾನೆ ಅನ್ನೋದನ್ನ ಒಂದು ದರ್ಶನದಲ್ಲಿ ನೋಡಿದ. (ಮಾರ್ಕ 9:1-8; 2 ಪೇತ್ರ 1:16-18) ಇದನ್ನೆಲ್ಲ ನೋಡ್ತೀನಿ ಅಂತ ಪೇತ್ರ ಅಂದ್ಕೊಂಡೇ ಇರಲಿಲ್ಲ. ಅವನು ಒಂದುವೇಳೆ ತನಗೆ ಯೋಗ್ಯತೆನೇ ಇಲ್ಲ ಅಂತ ಅಂದ್ಕೊಂಡು ಸುಮ್ಮನೆ ಇದ್ದಿದ್ರೆ ಈ ಆಶೀರ್ವಾದಗಳೆಲ್ಲ ಸಿಗ್ತಿತ್ತಾ? ಇಲ್ಲ ಅಲ್ವಾ?
6. ತಪ್ಪು ಮಾಡದೇ ಇರೋಕೆ ಪೇತ್ರ ಎಷ್ಟೇ ಪ್ರಯತ್ನ ಪಟ್ರೂ ಮತ್ತೆ ಏನು ಮಾಡಿಬಿಟ್ಟ?
6 ಯೇಸು ಜೊತೆನೇ ಇದ್ದು ಆತನು ಮಾಡಿದ ಅದ್ಭುತಗಳನ್ನೆಲ್ಲ ಕಣ್ಣಾರೆ ನೋಡಿದ್ರೂ ಪೇತ್ರ ಮತ್ತೆ ತಪ್ಪುಗಳನ್ನ ಮಾಡಿಬಿಟ್ಟ. ಉದಾಹರಣೆಗೆ ಯೇಸು ತುಂಬ ಹಿಂಸೆ ಅನುಭವಿಸಿ ಸಾಯಬೇಕಾಗುತ್ತೆ ಅಂತ ಬೈಬಲಲ್ಲಿ ಭವಿಷ್ಯವಾಣಿ ಇತ್ತು. ಅದು ಹೇಗೆ ನಿಜ ಆಗುತ್ತೆ ಅಂತ ಯೇಸು ವಿವರಿಸ್ತಾ ಇದ್ದಾಗ ಪೇತ್ರ ‘ಹಾಗೆ ಆಗಬಾರದು’ ಅಂತ ಹೇಳಿಬಿಟ್ಟ. (ಮಾರ್ಕ 8:31-33) ಅಷ್ಟೇ ಅಲ್ಲ ಪೇತ್ರ ಮತ್ತು ಬೇರೆ ಅಪೊಸ್ತಲರು ತಮ್ಮಲ್ಲಿ ಯಾರು ದೊಡ್ಡವರು ಅಂತ ಪದೇ ಪದೇ ವಾದ ಮಾಡ್ತಿದ್ರು. (ಮಾರ್ಕ 9:33, 34) ಯೇಸು ಸಾಯೋ ಹಿಂದಿನ ರಾತ್ರಿ ಪೇತ್ರ ಆತುರಪಟ್ಟು ಒಬ್ಬ ವ್ಯಕ್ತಿಯ ಕಿವಿನೇ ಕತ್ತರಿಸಿಬಿಟ್ಟ. (ಯೋಹಾ. 18:10) ಅದೇ ರಾತ್ರಿ ಜನ್ರಿಗೆ ಹೆದರಿ ‘ಯೇಸು ಯಾರಂತಾನೇ ನಂಗೊತ್ತಿಲ್ಲ’ ಅಂತ ಮೂರು ಸಲ ಹೇಳಿಬಿಟ್ಟ. (ಮಾರ್ಕ 14:66-72) ಆಮೇಲೆ ಹಾಗೆ ಹೇಳಿದ್ದಿಕ್ಕೆ ಬೇಜಾರ್ ಮಾಡ್ಕೊಂಡು ತುಂಬ ಅತ್ತ.—ಮತ್ತಾ. 26:75.
7. ಯೇಸು ಮತ್ತೆ ಜೀವ ಪಡ್ಕೊಂಡು ಬಂದಮೇಲೆ ಪೇತ್ರನಿಗೆ ಯಾವ ಅವಕಾಶ ಕೊಟ್ಟನು?
7 ‘ನಾನ್ ಹೀಗ್ ತಪ್ಪು ಮಾಡಿಬಿಟ್ನಲ್ಲಾ’ ಅಂತ ಪೇತ್ರ ಬೇಜಾರಲ್ಲಿ ಇದ್ದಾಗ ಯೇಸು ಅವನನ್ನ ಬಿಟ್ಟುಬಿಡಲಿಲ್ಲ. ಮತ್ತೆ ಜೀವ ಪಡ್ಕೊಂಡು ಬಂದ ಮೇಲೆ ಅವನಿಗೆ ಸಹಾಯ ಮಾಡಿದನು. ಯೇಸು ಮೇಲೆ ಪ್ರೀತಿ ಇದೆ ಅಂತ ತೋರಿಸೋಕೆ ಅವಕಾಶ ಮಾಡ್ಕೊಟ್ಟನು. ಅಷ್ಟೇ ಅಲ್ಲ “ನನ್ನ ಕುರಿಮರಿಗಳನ್ನ ಮೇಯಿಸು” ಅಂತ ಹೇಳಿ ದೊಡ್ಡ ಜವಾಬ್ದಾರಿನೂ ಕೊಟ್ಟನು. (ಯೋಹಾ. 21:15-17) ಅದನ್ನ ಮಾಡೋಕೆ ಪೇತ್ರ ರೆಡಿ ಇದ್ದ. 50ನೇ ದಿನದ ಹಬ್ಬ ನಡೀತಾ ಇದ್ದಾಗ ಅವನು ಯೆರೂಸಲೇಮಲ್ಲಿ ಇದ್ದ. ಆ ಸಮಯದಲ್ಲಿ ಕೆಲವ್ರಿಗೆ ಪವಿತ್ರಶಕ್ತಿಯ ಅಭಿಷೇಕ ಆಯ್ತು. ಅವ್ರಲ್ಲಿ ಇವನೂ ಒಬ್ಬನಾಗಿದ್ದ.
8. ಅಂತಿಯೋಕ್ಯದಲ್ಲಿ ಪೇತ್ರ ಯಾವ ದೊಡ್ಡ ತಪ್ಪು ಮಾಡಿದ?
8 ಪೇತ್ರ ಅಭಿಷಿಕ್ತನಾದ ಮೇಲೂ ಪೇತ್ರನಿಂದ ಕೆಲವು ತಪ್ಪುಗಳಾಯ್ತು. ಕ್ರಿಸ್ತ ಶಕ 36ರಲ್ಲಿ ಯೆಹೋವ ದೇವರು ಪೇತ್ರನನ್ನ ಕೊರ್ನೇಲ್ಯನ ಹತ್ರ ಕಳಿಸಿದ್ರು. ಕೊರ್ನೇಲ್ಯ ಯೆಹೂದ್ಯನಾಗಿರಲಿಲ್ಲ. ಆದ್ರೂ ಯೆಹೋವ ದೇವರು ಅವನನ್ನ ಪವಿತ್ರಶಕ್ತಿಯಿಂದ ಅಭಿಷೇಕಿಸಿದನು. ಇದ್ರಿಂದ ಪೇತ್ರನಿಗೆ “ದೇವರು ಭೇದಭಾವ ಮಾಡಲ್ಲ,” ಯೆಹೂದ್ಯರಲ್ಲದ ಜನ್ರನ್ನೂ ಸಭೆಗೆ ಸೇರಿಸ್ಕೊಳ್ತಾನೆ ಅಂತ ಗೊತ್ತಾಯ್ತು. (ಅ. ಕಾ. 10:34, 44, 45) ಅವತ್ತಿಂದ ಪೇತ್ರ ಯೆಹೂದ್ಯರಲ್ಲದವ್ರ ಜೊತೆ ಊಟ ಮಾಡೋಕೆ ಶುರು ಮಾಡಿದ. (ಗಲಾ. 2:12) ಆದ್ರೆ ಈ ತರ ಮಾಡೋದು ತಪ್ಪು ಅಂತ ಕೆಲವು ಯೆಹೂದಿ ಕ್ರೈಸ್ತರು ಅಂದ್ಕೊಳ್ತಿದ್ರು. ಅಂಥವ್ರಲ್ಲಿ ಕೆಲವರು ಅಂತಿಯೋಕ್ಯಕ್ಕೆ ಬಂದ್ರು. ಅವ್ರಿಗೆ ಹೆದರಿ ಪೇತ್ರ ಬೇರೆ ಜನಾಂಗದವರ ಜೊತೆ ಊಟ ಮಾಡೋದನ್ನ ನಿಲ್ಲಿಸಿಬಿಟ್ಟ. ತಾನು ಹೀಗೆ ಊಟ ಮಾಡೋದನ್ನ ನೋಡಿ ಅವ್ರಿಗೆಲ್ಲಿ ಬೇಜಾರಾಗುತ್ತೋ ಅಂತ ಅವನು ಅಂದ್ಕೊಂಡಿರಬಹುದು. ಆಗ ಪೌಲ ಎಲ್ರ ಮುಂದೆ ಪೇತ್ರನನ್ನ ತಿದ್ದಿದ. (ಗಲಾ. 2:13, 14) ಈ ತರ ಪೇತ್ರ ತನ್ನ ತಪ್ಪನ್ನ ತಿದ್ಕೊಂಡು ಸರಿಯಾಗಿ ಇರೋದನ್ನ ಮಾಡೋಕೆ ಪ್ರಯತ್ನ ಮಾಡಿದ. ಹಾಗೆ ಮಾಡೋಕೆ ಪೇತ್ರನಿಗೆ ಯಾವುದು ಸಹಾಯ ಮಾಡ್ತು?
ಪ್ರಯತ್ನ ಬಿಡದೇ ಇರೋಕೆ ಪೇತ್ರನಿಗೆ ಯಾವುದು ಸಹಾಯ ಮಾಡ್ತು?
9. ಯೋಹಾನ 6:68, 69ರಲ್ಲಿ ಪೇತ್ರ ಹೇಳಿದ ಮಾತಿಂದ ಏನು ಗೊತ್ತಾಗುತ್ತೆ?
9 ಪೇತ್ರ ಕೊನೇ ತನಕ ನಿಯತ್ತಾಗಿದ್ದ. ಏನೇ ಆದ್ರೂ ಅವನು ಯೇಸುನ ಬಿಟ್ಟುಹೋಗಲಿಲ್ಲ. ಒಂದು ಸಲ ಯೇಸು ಏನೋ ಒಂದು ವಿಷ್ಯ ಹೇಳಿದಾಗ ಅದು ಆತನ ಶಿಷ್ಯರಿಗೆ ಅರ್ಥ ಆಗಲಿಲ್ಲ. (ಯೋಹಾನ 6:68, 69 ಓದಿ.) ಆಗ ಆತನನ್ನ ಬಿಟ್ಟುಹೋದ್ರು. ಆತನ ಮಾತಿನ ಅರ್ಥ ಏನಂತನೂ ಕೇಳೋಕೆ ಹೋಗಲಿಲ್ಲ. ಆದ್ರೆ ಪೇತ್ರ “ಶಾಶ್ವತ ಜೀವ ಕೊಡೋ ಮಾತು ನಿನ್ನ ಹತ್ರ ಇದೆ” ಅಂತ ಹೇಳಿದ. ಅವನು ಯೇಸು ಜೊತೆನೇ ಇದ್ದ.
10. ಪೇತ್ರನ ಮೇಲೆ ನಂಬಿಕೆ ಇದೆ ಅಂತ ಯೇಸು ಹೇಗೆ ತೋರಿಸ್ಕೊಟ್ಟನು? (ಚಿತ್ರನೂ ನೋಡಿ.)
10 ಯೇಸು ಕೂಡ ತನಗೆ ಪೇತ್ರನ ಮೇಲೆ ನಂಬಿಕೆ ಇದೆ ಅಂತ ತೋರಿಸಿದನು. ತಾನು ಸಾಯೋ ಹಿಂದಿನ ರಾತ್ರಿ ತನ್ನ ಅಪೊಸ್ತಲರು ಮತ್ತು ಪೇತ್ರ ತನ್ನನ್ನ ಬಿಟ್ಟುಹೋಗ್ತಾರೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಆದ್ರೆ ಪೇತ್ರ ವಾಪಸ್ ಬರ್ತಾನೆ, ಕೊನೇ ತನಕ ತನಗೆ ನಿಯತ್ತಾಗಿ ಇರ್ತಾನೆ ಅನ್ನೋ ನಂಬಿಕೆ ಇತ್ತು. (ಲೂಕ 22:31, 32) ಯಾಕಂದ್ರೆ ಪೇತ್ರನಿಗೆ “ಮನಸ್ಸಿದೆ, ಆದ್ರೆ ದೇಹಕ್ಕೆ ಶಕ್ತಿ ಇಲ್ಲ” ಅಂತ ಯೇಸು ಅರ್ಥ ಮಾಡ್ಕೊಂಡನು. (ಮಾರ್ಕ 14:38) ಅದಕ್ಕೇ ‘ಯೇಸು ಯಾರಂತಾನೇ ನಂಗೊತ್ತಿಲ್ಲ’ ಅಂತ ಪೇತ್ರ ಹೇಳಿದಾಗ ಯೇಸು ಅವನ ಕೈಬಿಡಲಿಲ್ಲ. ಆತನು ಮತ್ತೆ ಜೀವ ಪಡ್ಕೊಂಡು ಬಂದ ಮೇಲೆ ಪೇತ್ರನಿಗೆ ಕಾಣಿಸ್ಕೊಂಡನು. ಅದ್ರಲ್ಲೂ ಪೇತ್ರ ಒಬ್ಬನೇ ಇದ್ದಾಗ ಅವನನ್ನ ಭೇಟಿ ಮಾಡಿದನು. (ಮಾರ್ಕ 16:7; ಲೂಕ 24:34; 1 ಕೊರಿಂ. 15:5) ಇದು ಅಪೊಸ್ತಲ ಪೇತ್ರನಿಗೆ ಎಷ್ಟು ಧೈರ್ಯ ಕೊಟ್ಟಿರುತ್ತೆ ಅಲ್ವಾ!
11. ಯೆಹೋವ ದೇವರು ಪೇತ್ರನನ್ನ ನೋಡ್ಕೊಳ್ತಾನೆ ಅಂತ ಯೇಸು ಅವನಿಗೆ ಹೇಗೆ ಅರ್ಥಮಾಡಿಸಿದನು?
11 ಪೇತ್ರನ ಜೊತೆ ಯೆಹೋವ ದೇವರು ಯಾವಾಗ್ಲೂ ಇರ್ತಾನೆ ಅಂತ ಯೇಸು ಪೇತ್ರನಿಗೆ ಅರ್ಥ ಮಾಡಿಸಿದನು. ಆತನು ಮತ್ತೆ ಜೀವ ಪಡ್ಕೊಂಡು ಬಂದಾಗ ಪೇತ್ರ ಮತ್ತು ಇನ್ನೂ ಕೆಲವು ಅಪೊಸ್ತಲರು ಮೀನು ಹಿಡೀತಾ ಇದ್ದಿದ್ದನ್ನ ನೋಡಿದನು. ಆಗ ಆತನು ಇನ್ನೂ ಒಂದು ಸಲ ಅದ್ಭುತ ಮಾಡಿ ಅವ್ರಿಗೆ ಜಾಸ್ತಿ ಮೀನು ಸಿಗೋ ತರ ಮಾಡಿದನು. (ಯೋಹಾ. 21:4-6) ಆಗ ಪೇತ್ರನಿಗೆ “ದೇವರ ಆಳ್ವಿಕೆಗೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ” ಅಂತ ಯೇಸು ಹೇಳಿದ ಮಾತು ನೆನಪಿಗೆ ಬಂದಿರುತ್ತೆ. ತನ್ನನ್ನ ಯೆಹೋವ ದೇವರು ನೋಡ್ಕೊಳ್ತಾನೆ ಅಂತ ಅವನಿಗೆ ನಂಬಿಕೆ ಬಂದಿರುತ್ತೆ. (ಮತ್ತಾ. 6:33) ಆಗ ಅವನು ಮೀನು ಹಿಡಿಯೋದಕ್ಕಲ್ಲ ಸಿಹಿಸುದ್ದಿ ಸಾರೋಕೆ ತನ್ನ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟ. ಈ ಸಲ ಅವನು ಇಟ್ಟ ಹೆಜ್ಜೆನ ಹಿಂದೆ ಇಡಲಿಲ್ಲ. ಕ್ರಿಸ್ತ ಶಕ 33ರಲ್ಲಿ 50ನೇ ದಿನದ ಹಬ್ಬದ ಸಮಯದಲ್ಲಿ ಧೈರ್ಯವಾಗಿ ಸಿಹಿಸುದ್ದಿ ಸಾರಿದ. ಇದ್ರಿಂದ ಸಾವಿರಾರು ಜನ್ರು ಯೇಸುವಿನ ಶಿಷ್ಯರಾದ್ರು. (ಅ. ಕಾ. 2:14, 37-41) ಅಷ್ಟೇ ಅಲ್ಲ ಸಮಾರ್ಯದವ್ರಿಗೆ ಮತ್ತು ಬೇರೆ ಜನಾಂಗದವ್ರಿಗೆ ಯೇಸುವಿನ ಶಿಷ್ಯರಾಗೋಕೆ ಸಹಾಯ ಮಾಡಿದ. (ಅ. ಕಾ. 8:14-17; 10:44-48) ಹೀಗೆ ಯೆಹೋವ ದೇವರು ಪೇತ್ರನಿಂದ ಎಲ್ಲಾ ತರದ ಜನ್ರು ಯೇಸುವಿನ ಶಿಷ್ಯರಾಗೋಕೆ ಸಹಾಯ ಮಾಡಿದನು.
ಪೇತ್ರನಿಂದ ನಾವೇನು ಕಲಿತೀವಿ?
12. ತುಂಬ ವರ್ಷಗಳಿಂದ ನಾವು ಪ್ರಯತ್ನ ಮಾಡ್ತಾ ಇರೋದಾದ್ರೆ ಪೇತ್ರನ ತರ ಏನನ್ನ ಮನಸ್ಸಲ್ಲಿ ಇಡಬೇಕು?
12 ಯೆಹೋವ ನಿಮಗೆ ಸಹಾಯ ಮಾಡ್ತಾನೆ. ಯಾವುದೋ ಒಂದು ವಿಷ್ಯ ಅಥವಾ ನಿಮ್ಮಲ್ಲಿರೋ ಒಂದು ಸ್ವಭಾವ ತಪ್ಪು ಅಂತ ನಿಮಗೆ ಗೊತ್ತಿರುತ್ತೆ. ಅದನ್ನ ಬಿಟ್ಟುಬಿಡಬೇಕು ಅಂತ ತುಂಬ ವರ್ಷಗಳಿಂದ ನೀವು ಪ್ರಯತ್ನ ಮಾಡ್ತಾ ಇರಬಹುದು. ಆದ್ರೆ ಕೆಲವೊಮ್ಮೆ ನೀವು ಎಡವಿ ಬಿಡಬಹುದು. ಆಗ ‘ಪೇತ್ರನಿಗಿಂತ ನನಗೆ ಬಂದಿರೋ ಕಷ್ಟ ದೊಡ್ಡದು’ ಅಂತ ಅನಿಸಬಹುದು. ಚಿಂತೆ ಮಾಡಬೇಡಿ. ನೀವು ಪ್ರಯತ್ನ ಮಾಡ್ತಾ ಇರೋಕೆ ಯೆಹೋವ ಸಹಾಯ ಮಾಡ್ತಾನೆ. (ಕೀರ್ತ. 94:17-19) ಒಂದು ಉದಾಹರಣೆ ನೋಡಿ. ಒಬ್ಬ ಸಹೋದರ ಯೆಹೋವನ ಸಾಕ್ಷಿ ಆಗೋಕೆ ಮುಂಚೆ ಸುಮಾರು ವರ್ಷ ಸಲಿಂಗಿಯಾಗಿ ಜೀವನ ಮಾಡ್ತಿದ್ದ. ಆದ್ರೆ ಆಮೇಲೆ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಶುರುಮಾಡಿದ. ಈಗ್ಲೂ ಅವನಿಗೆ ಕೆಲವೊಮ್ಮೆ ಆ ಕೆಟ್ಟ ಆಸೆಗಳು ಬರ್ತಾ ಇರುತ್ತೆ. ಆದ್ರೂ ಅವನು ಅದನ್ನೆಲ್ಲ ಬಿಟ್ಟು ಸರಿಯಾಗಿ ಇರೋದನ್ನ ಮಾಡೋಕೆ ಪ್ರಯತ್ನ ಮಾಡ್ತಾನೆ. ಅದಕ್ಕೆ ಅವನಿಗೆ ಯಾವುದು ಸಹಾಯ ಮಾಡ್ತಿದೆ? ಅವನು ಹೇಳೋದು: “ಯೆಹೋವ ನನಗೆ ಶಕ್ತಿ ಕೊಡ್ತಿದ್ದಾನೆ. ಪವಿತ್ರ ಶಕ್ತಿಯ ಸಹಾಯದಿಂದ . . . ನನಗೆ ಸತ್ಯದ ದಾರೀಲಿ ನಡೀತಾ ಇರೋಕೆ ಆಗ್ತಿದೆ . . . ಕೆಲವೊಮ್ಮೆ ಕೆಟ್ಟ ಆಸೆಗಳು ನನ್ನ ಮನಸ್ಸನ್ನ ಎಳೆದ್ರೂ ಯೆಹೋವ ಶಕ್ತಿ ಕೊಡ್ತಾನೇ ಇದ್ದಾನೆ. ಆತನ ಸೇವೆ ಮಾಡೋಕೆ ಅವಕಾಶ ಕೊಡ್ತಾ ಇದ್ದಾನೆ.”
13. ಪೇತ್ರನ ತರ ನಾವೇನು ಮಾಡಬೇಕು? (ಅಪೊಸ್ತಲರ ಕಾರ್ಯ 4:13, 29, 31) (ಚಿತ್ರನೂ ನೋಡಿ.)
13 ಪೇತ್ರ ಮನುಷ್ಯರ ಭಯದಿಂದ ತುಂಬ ದೊಡ್ಡ ತಪ್ಪುಗಳನ್ನ ಮಾಡಿದ ನಿಜ. ಆದ್ರೆ ಯೆಹೋವ ದೇವರ ಹತ್ರ ‘ಧೈರ್ಯ ಕೊಡಪ್ಪಾ’ ಅಂತ ಬೇಡ್ಕೊಂಡ ಮೇಲೆ ಸರಿಯಾಗಿ ಇರೋದನ್ನೇ ಮಾಡಿದ. (ಅಪೊಸ್ತಲರ ಕಾರ್ಯ 4:13, 29, 31 ಓದಿ.) ನಾವು ಕೂಡ ಯೆಹೋವನ ಹತ್ರ ಬೇಡ್ಕೊಂಡ್ರೆ ಆತನು ಧೈರ್ಯ ಕೊಡ್ತಾನೆ. ನಾವೀಗ ನಾಜಿ಼ ಜರ್ಮನಿಯಲ್ಲಿದ್ದ ಹೋರ್ಸ್ಟ್ ಅನ್ನೋ ಸಹೋದರನ ಉದಾಹರಣೆ ನೋಡೋಣ. ಅವರು ಚಿಕ್ಕವರಾಗಿದ್ದಾಗ ಸ್ಕೂಲಲ್ಲಿ ಬೇರೆಯವ್ರಿಗೆ ಹೆದರಿ “ಹೈಲ್ ಹಿಟ್ಲರ್!” (ಹಿಟ್ಲರ್ ನಮ್ಮನ್ನ ಕಾಪಾಡ್ತಾನೆ) ಅಂತ ತುಂಬ ಸಲ ಹೇಳಿಬಿಟ್ರು. ಅದನ್ನ ಅವರು ಅಪ್ಪಅಮ್ಮಂಗೆ ಹೇಳಿದಾಗ ಅವರು ಹೋರ್ಸ್ಟ್‌ಗೆ ಬೈಲಿಲ್ಲ. ಬದಲಿಗೆ ಅವನ ಜೊತೆ ಕೂತ್ಕೊಂಡು ಯೆಹೋವ ದೇವರ ಹತ್ರ ಪ್ರಾರ್ಥನೆ ಮಾಡಿದ್ರು. ಯೆಹೋವ ಧೈರ್ಯ ಕೊಡ್ತಾನೆ ಅಂತ ಆ ಸಹೋದರ ನಂಬಿದ್ರು. ಹೀಗೆ ಅಪ್ಪಅಮ್ಮನ ಮತ್ತು ಯೆಹೋವನ ಸಹಾಯದಿಂದ ಕೊನೆಗೂ ಧೈರ್ಯ ಪಡ್ಕೊಂಡ್ರು. “ಯೆಹೋವ ನನ್ನ ಕೈಬಿಡಲಿಲ್ಲ” ಅಂತ ಸಹೋದರ ಹೇಳಿದ್ರು. c
14. ಸೋತುಹೋಗಿಬಿಟ್ವಿ ಅಂತ ಅಂದ್ಕೊಂಡಿರೋ ಸಹೋದರ ಸಹೋದರಿಯರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?
14 ಯೆಹೋವ ಮತ್ತು ಯೇಸು ಪೇತ್ರನ ಕೈಬಿಡಲಿಲ್ಲ. ನಮ್ಮ ಕೈಯನ್ನೂ ಬಿಡಲ್ಲ. ಯೇಸು ಯಾರಂತಾನೇ ಗೊತ್ತಿಲ್ಲ ಅಂತ ಪೇತ್ರ ಹೇಳಿಬಿಟ್ಟ ನಿಜ. ಆದ್ರೆ ಆಮೇಲೆ ಏನು ಮಾಡಿದ? ಅವನು ಬೇಜಾರ್ ಮಾಡ್ಕೊಂಡು ‘ಇನ್ಮುಂದೆ ನಾನು ಯೇಸುವಿನ ಶಿಷ್ಯನಾಗಿರಲ್ಲ’ ಅಂತ ತೀರ್ಮಾನ ಮಾಡಿದ್ನಾ? ಇಲ್ಲ, ‘ತಪ್ಪು ಮಾಡಿದ್ರೂ ಪರ್ವಾಗಿಲ್ಲ, ನಾನು ಯೇಸುವಿನ ಶಿಷ್ಯನಾಗೇ ಇರೋಕೆ ಪ್ರಯತ್ನ ಮಾಡ್ತೀನಿ’ ಅಂತ ತೀರ್ಮಾನ ಮಾಡಿದ. ಯಾಕಂದ್ರೆ ಯೇಸು ಈಗಾಗ್ಲೆ ಪೇತ್ರನಿಗೋಸ್ಕರ ಯೆಹೋವ ದೇವರ ಹತ್ರ ಪ್ರಾರ್ಥನೆ ಮಾಡಿದ್ದನು. ಅವನ ನಂಬಿಕೆ ಬಿದ್ದುಹೋಗಬಾರದು ಅಂತ ದೇವರ ಹತ್ರ ಕೇಳ್ಕೊಂಡಿದ್ದನು. ಅದ್ರ ಬಗ್ಗೆ ಯೇಸು ಪೇತ್ರನ ಹತ್ರನೂ ಹೇಳಿದ್ದನು. ಅಷ್ಟೇ ಅಲ್ಲ ಇನ್ಮುಂದೆ ‘ನೀನು ಸಹೋದರರನ್ನ ಬಲಪಡಿಸ್ತೀಯ, ಆ ನಂಬಿಕೆ ನಂಗಿದೆ’ ಅಂತ ಹೇಳಿದ್ದನು. (ಲೂಕ 22:31, 32) ಯೇಸು ಹೇಳಿದ್ದ ಈ ಮಾತು ಪೇತ್ರನಿಗೆ ನೆನಪಾದಾಗ ಅವನಿಗೆ ಎಷ್ಟು ಧೈರ್ಯ ಸಿಕ್ಕಿರುತ್ತೆ ಅಲ್ವಾ? ನಾವು ಜೀವನದಲ್ಲಿ ದೊಡ್ಡ ತೀರ್ಮಾನ ಮಾಡಬೇಕಾಗಿ ಬಂದಾಗ ಯೆಹೋವನ ನಮಗೆ ಹೇಗೆ ಸಹಾಯ ಮಾಡ್ತಾನೆ? ಪ್ರೀತಿಯ ಕುರುಬರಾದ ಹಿರಿಯರನ್ನ ನಮ್ಮ ಹತ್ರ ಕಳಿಸ್ತಾನೆ. ನಮ್ಮ ನಂಬಿಕೆ ಬಿದ್ದುಹೋಗದೆ ಇರೋಕೆ ಅವರು ನಮಗೆ ಸಹಾಯ ಮಾಡ್ತಾರೆ. (ಎಫೆ. 4:8, 11) ಕೆಲವು ಸಹೋದರ ಸಹೋದರಿಯರಿಗೆ ‘ನಾನೆಷ್ಟೇ ಪ್ರಯತ್ನ ಮಾಡಿದ್ರೂ ಸೋತುಹೋಗಿಬಿಟ್ಟೆ. ಇನ್ನು ನನ್ ಕೈಯಿಂದ ಆಗಲ್ಲ’ ಅಂತ ಅನಿಸುತ್ತೆ. ತುಂಬ ವರ್ಷಗಳಿಂದ ಹಿರಿಯನಾಗಿ ಸೇವೆ ಮಾಡ್ತಿರೋ ಪೌಲ್ ಅನ್ನೋ ಸಹೋದರ ಅಂಥವ್ರಿಗೆ ಹೇಗೆ ಸಹಾಯ ಮಾಡಿದ್ರು? ಅವ್ರನ್ನ ಯೆಹೋವ ಸತ್ಯಕ್ಕೆ ಹೇಗೆ ಸೆಳೆದನು ಅನ್ನೋದನ್ನ ನೆನಪಿಸ್ಕೊಳ್ಳೋಕೆ ಅವ್ರಿಗೆ ಹೇಳಿದ್ರು. ಆಮೇಲೆ ‘ಯೆಹೋವನ ಪ್ರೀತಿ ಶಾಶ್ವತ, ಆತನು ಯಾವತ್ತೂ ನಿಮ್ಮ ಕೈಬಿಡಲ್ಲ’ ಅಂತ ಧೈರ್ಯ ತುಂಬಿದ್ರು. “ಈ ರೀತಿ ಸೋತುಹೋಗಿದ್ದ ಎಷ್ಟೋ ಸಹೋದರ ಸಹೋದರಿಯರು ಯೆಹೋವನ ಸಹಾಯದಿಂದ ಮತ್ತೆ ಪ್ರಯತ್ನ ಮಾಡೋದನ್ನ ನೋಡಿದ್ದೀನಿ” ಅಂತ ಆ ಸಹೋದರ ಹೇಳ್ತಾರೆ.
15. ಮತ್ತಾಯ 6:33ರಲ್ಲಿ ಹೇಳಿರೋ ಮಾತು ನಿಜ ಅಂತ ಪೇತ್ರ ಮತ್ತು ಸಹೋದರ ಹೋರ್ಸ್ಟ್ ಅವರ ಜೀವನದಿಂದ ಹೇಗೆ ಗೊತ್ತಾಗುತ್ತೆ?
15 ಪೇತ್ರ ಮತ್ತೆ ಇನ್ನು ಕೆಲವು ಅಪೊಸ್ತಲರು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ಟಿದ್ರಿಂದ ಯೆಹೋವ ಅವ್ರನ್ನ ಚೆನ್ನಾಗಿ ನೋಡ್ಕೊಂಡನು. ನಮ್ಮನ್ನೂ ಚೆನ್ನಾಗಿ ನೋಡ್ಕೊಳ್ತಾನೆ. (ಮತ್ತಾ. 6:33) ಎರಡನೇ ಮಹಾಯುದ್ಧ ಆದ್ಮೇಲೆ ಸಹೋದರ ಹೋರ್ಸ್ಟ್ ಕೂಡ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ರು. ಅವರು ಪಯನೀಯರ್ ಸೇವೆ ಶುರು ಮಾಡಬೇಕು ಅಂತ ಇದ್ರು. ಆದ್ರೆ ಅವರು ತುಂಬ ಬಡವರಾಗಿದ್ರು. ಪಯನೀಯರಿಂಗ್ ಮಾಡಿದ್ರೆ ಹೊಟ್ಟೆಪಾಡಿಗೆ ಏನು ಮಾಡೋದು ಅನ್ನೋದು ಅವ್ರ ಮನಸ್ಸಲ್ಲಿತ್ತು. ಅದಕ್ಕೆ ಅವರು ‘ಯೆಹೋವ ನನ್ನನ್ನ ನೋಡ್ಕೊಳ್ತಾನಾ ಇಲ್ವಾ ಅಂತ ಪರೀಕ್ಷೆ ಮಾಡ್ತೀನಿ’ ಅಂತ ಅಂದ್ಕೊಂಡ್ರು. ಆ ಇಡೀ ವಾರ ಅವರು ಸೇವೆಗೆ ಹೋಗಿಬಿಟ್ರು. ಆಗ ಸರ್ಕಿಟ್ ಮೇಲ್ವಿಚಾರಕರ ಭೇಟಿ ನಡೀತಾ ಇತ್ತು. ಆ ವಾರದ ಕೊನೇಲಿ ಸಂಚರಣ ಮೇಲ್ವಿಚಾರಕರು ಸಹೋದರನ ಕೈಗೆ ಒಂದು ಕವರ್ ಕೊಟ್ರು. ಅದ್ರಲ್ಲಿ ತುಂಬ ಹಣ ಇತ್ತು. ಆ ಹಣದಿಂದ ಅವರು ಎಷ್ಟೋ ತಿಂಗಳು ಪಯನೀಯರ್ ಸೇವೆ ಮಾಡಿದ್ರು. ಆದ್ರೆ ಯಾರು ಆ ಹಣ ಕೊಟ್ರು ಅಂತ ಅವ್ರಿಗೆ ಗೊತ್ತಾಗ್ಲಿಲ್ಲ. ಅದು ಯೆಹೋವನೇ ಕೊಟ್ಟಿರೋ ಗಿಫ್ಟ್ ಅಂತ ಅವರು ಅಂದ್ಕೊಂಡ್ರು. ಯೆಹೋವ ದೇವರು ತನ್ನನ್ನ ನೋಡ್ಕೊಳ್ತಾರೆ ಅನ್ನೋ ನಂಬಿಕೆ ಬಂತು. ಇದ್ರಿಂದ ಜೀವನಪೂರ್ತಿ ಅವರು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ರು.—ಮಲಾ. 3:10.
16. ಪೇತ್ರನ ಬಗ್ಗೆ ಕಲಿಯೋದು ಮತ್ತು ಅವನ ಬಗ್ಗೆ ಓದೋದು ಯಾಕೆ ಒಳ್ಳೇದು?
16 ‘ಸ್ವಾಮಿ, ನನ್ನನ್ನ ಬಿಟ್ಟುಹೋಗು’ ಅಂತ ಪೇತ್ರ ಹೇಳಿದಾಗ ಯೇಸು ಬಿಟ್ಟುಹೋಗದೆ ಇದ್ದಿದ್ದು ಎಷ್ಟು ಒಳ್ಳೇದಾಯ್ತು ಅಲ್ವಾ? ಇದ್ರಿಂದ ಪೇತ್ರನಿಗೆ ಒಳ್ಳೇ ಅಪೊಸ್ತಲನಾಗಿ ಇರೋಕೆ ತರಬೇತಿ ಸಿಕ್ತು. ಅಷ್ಟೇ ಅಲ್ಲ ಎಲ್ಲಾ ಕ್ರೈಸ್ತರಿಗೂ ಅವನು ಒಳ್ಳೇ ಮಾದರಿ ಆಗಿದ್ದಾನೆ. ಅವನಿಗೆ ಸಿಕ್ಕ ತರಬೇತಿಯಿಂದ ನಮ್ಮೆಲ್ರಿಗೂ ತುಂಬ ಪಾಠಗಳಿವೆ. ಅವನು ಕಲಿತ ಕೆಲವು ಪಾಠಗಳನ್ನ ಒಂದನೇ ಶತಮಾನದಲ್ಲಿದ್ದ ಸಭೆಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ. ಅದನ್ನ ನಾವು ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ. ಅವುಗಳನ್ನ ಪಾಲಿಸೋದು ಹೇಗೆ ಅಂತನೂ ನೋಡೋಣ.
ಗೀತೆ 43 ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ
a ಮನುಷ್ಯರು ಅಂದ್ಮೇಲೆ ತಪ್ಪು ಮಾಡೋದು ಸಹಜ. ಆ ತಪ್ಪುಗಳನ್ನ ಮತ್ತೆ ಮಾಡಬಾರದು ಅಂತ ಅಂದ್ಕೊಂಡ್ರೂ ಕೆಲವೊಮ್ಮೆ ಎಡವಿ ಬಿದ್ದುಬಿಡ್ತೀವಿ. ಆದ್ರೂ ನಮ್ಮಿಂದ ಮತ್ತೆ ಎದ್ದೇಳೋಕೆ ಆಗುತ್ತೆ. ಯೆಹೋವ ದೇವರ ಸೇವೆನ ಮಾಡ್ತಾ ಇರೋಕೆ ಆಗುತ್ತೆ.
b ಈ ಲೇಖನದಲ್ಲಿ ಮಾರ್ಕ ಪುಸ್ತಕದ ವಚನಗಳು ತುಂಬ ಇದೆ. ನಡೆದಿರೋ ಘಟನೆಗಳನ್ನ ಕಣ್ಣಾರೆ ನೋಡಿರೋ ಪೇತ್ರ ಮಾರ್ಕನಿಗೆ ಹೇಳಿರಬೇಕು. ಅದನ್ನ ಮಾರ್ಕ ಬರೆದಿರಬಹುದು.
c ಹೋರ್ಸ್ಟ್ ಹೆನ್ಶೆಲ್‌ರವರ ಜೀವನ ಕಥೆ ಫೆಬ್ರವರಿ 22, 1998 ಎಚ್ಚರ! ಪತ್ರಿಕೆಯಲ್ಲಿದೆ. ಆ ಪತ್ರಿಕೆಯಲ್ಲಿ “ಯೆಹೋವನಿಗೆ ನಿಯತ್ತಾಗಿ ಇರೋದು ಹೇಗೆ ಅಂತ ಕುಟುಂಬದಿಂದ ಕಲಿತೆ” ಅನ್ನೋ ಲೇಖನ ನೋಡಿ. ಇದು ಇಂಗ್ಲಿಷ್‌ನಲ್ಲಿದೆ.
d ಚಿತ್ರ ವಿವರಣೆ: ಚಿತ್ರದಲ್ಲಿ ತೋರಿಸಿರೋ ಹಾಗೆ ಹೆನ್ಶೆಲ್ ಅವ್ರ ಅಪ್ಪಅಮ್ಮ ಅವ್ರ ಜೊತೆ ಪ್ರಾರ್ಥನೆ ಮಾಡಿದ್ರು, ಧೈರ್ಯವಾಗಿ ಇರೋಕೆ ಹೇಳ್ಕೊಟ್ರು.