ಅಧ್ಯಯನ ಲೇಖನ 39
ಯಾವಾಗ್ಲೂ ಮೃದುವಾಗಿ ನಡ್ಕೊಳ್ಳಿ
“ದೇವರ ಸೇವಕನಿಗೆ ಜಗಳ ಮಾಡೋ ಅಗತ್ಯ ಇಲ್ಲ. ಅವನು ಎಲ್ರ ಜೊತೆ ಮೃದುವಾಗಿ ನಡ್ಕೊಬೇಕು.”—2 ತಿಮೊ. 2:24.
ಗೀತೆ 82 ಕ್ರಿಸ್ತನ ಸೌಮ್ಯಭಾವವನ್ನು ಅನುಕರಿಸಿರಿ
ಈ ಲೇಖನದಲ್ಲಿ ಏನಿದೆ? a
1. ಸ್ಕೂಲಲ್ಲಿ ಅಥವಾ ಕೆಲಸದ ಜಾಗದಲ್ಲಿ ಜನ ನಮ್ಮ ಹತ್ರ ಯಾವ ಪ್ರಶ್ನೆ ಕೇಳಬಹುದು?
ನೀವು ನಂಬೋ ವಿಷ್ಯಗಳ ಬಗ್ಗೆ ಸ್ಕೂಲಲ್ಲಿ ಅಥವಾ ಕೆಲಸದ ಜಾಗದಲ್ಲಿ ಯಾರಾದ್ರೂ ಪ್ರಶ್ನೆ ಕೇಳಿದಾಗ ನಿಮಗೆ ಭಯ ಆಗುತ್ತಾ? ನಮ್ಮಲ್ಲಿ ಹೆಚ್ಚಿನವ್ರಿಗೆ ಭಯ ಆಗೋದಂತೂ ನಿಜಾನೇ. ಆದ್ರೆ ಆ ತರ ಪ್ರಶ್ನೆ ಕೇಳಿದಾಗ ಅವ್ರ ಮನಸ್ಸಲ್ಲಿ ಏನಿದೆ, ಅವರು ಯಾವ ವಿಷ್ಯನ ನಂಬ್ತಾರೆ ಅಂತ ನಮಗೆ ಗೊತ್ತಾಗುತ್ತೆ. ಆಗ ಸಿಹಿಸುದ್ದಿ ಸಾರೋಕೆ ನಮಗೆ ಅವಕಾಶನೂ ಸಿಗುತ್ತೆ. ಆದ್ರೆ ಕೆಲವರು ನಮ್ಮ ಹತ್ರ ವಾದ ಮಾಡೋಕೆ ಅಂತಾನೇ ಪ್ರಶ್ನೆ ಕೇಳ್ತಾರೆ. ಅದಕ್ಕೆ ಕಾರಣ ಏನಂದ್ರೆ ನಾವು ನಂಬೋ ವಿಷ್ಯಗಳ ಬಗ್ಗೆ ಅವ್ರಿಗೆ ಯಾರಾದ್ರೂ ತಪ್ಪಾಗಿ ಹೇಳ್ಕೊಟ್ಟಿರ್ತಾರೆ. (ಅ. ಕಾ. 28:22) ಅದೂ ಅಲ್ಲದೆ “ಕೊನೇ ದಿನಗಳಲ್ಲಿ” “ಯಾವುದಕ್ಕೂ ಒಪ್ಪದವರು” ಇರ್ತಾರೆ ಅಂತ ಬೈಬಲ್ ಹೇಳುತ್ತೆ. ಅಷ್ಟೇ ಅಲ್ಲ “ಉಗ್ರರು” ಅಂದ್ರೆ ಕೋಪಿಷ್ಟರು ಇರ್ತಾರೆ ಅಂತಾನೂ ಹೇಳುತ್ತೆ.—2 ತಿಮೊ. 3:1, 3.
2. ನಮ್ಮಲ್ಲಿ ಮೃದು ಸ್ವಭಾವ ಇದ್ರೆ ಏನು ಮಾಡ್ತೀವಿ?
2 ನಾವು ನಂಬೋ ವಿಷ್ಯಗಳ ಬಗ್ಗೆ ಯಾರಾದ್ರೂ ವಾದ ಮಾಡೋಕೆ ಬಂದಾಗ ನಾವು ನಯ-ವಿನಯದಿಂದ ನಡ್ಕೊಳ್ಳೋದು ಹೇಗೆ? ಈ ರೀತಿ ಉತ್ರ ಕೊಡಬೇಕಂದ್ರೆ ನಮ್ಮಲ್ಲಿ ಮೃದು ಸ್ವಭಾವ ಇರಬೇಕು. ಈ ಗುಣ ಇದ್ರೆ ನಾವು ಬೇಗ ಕೋಪ ಮಾಡ್ಕೊಳ್ಳಲ್ಲ. ನಮಗೆ ಕಿರಿಕಿರಿ ಆಗೋ ತರ ಯಾರಾದ್ರೂ ಮಾತಾಡಿದ್ರೆ ಅಥವಾ ಬೇರೆಯವರು ಪ್ರಶ್ನೆ ಕೇಳಿದಾಗ ಉತ್ರ ಗೊತ್ತಾಗದಿದ್ರೆ ನಾವು ಗಾಬರಿ ಆಗಲ್ಲ. ಸಮಾಧಾನವಾಗಿ ಇರ್ತೀವಿ. (ಜ್ಞಾನೋ. 16:32) ಆದ್ರೆ ಇದು ಹೇಳಿದಷ್ಟು ಸುಲಭ ಅಲ್ಲ. ಆದ್ರೂ ನಾವು ಈ ಮೃದು ಸ್ವಭಾವನ ಬೆಳೆಸ್ಕೊಳ್ಳೋದು ಹೇಗೆ? ನಾವು ನಂಬೋ ವಿಷ್ಯಗಳ ಬಗ್ಗೆ ಬೇರೆಯವರು ಒರಟಾಗಿ ಪ್ರಶ್ನೆ ಕೇಳಿದಾಗ ಮೃದುವಾಗಿ ಉತ್ರ ಕೊಡೋದು ಹೇಗೆ? ಮೃದುವಾಗಿ ಉತ್ರ ಕೊಡೋಕೆ ಅಪ್ಪಅಮ್ಮ ತಮ್ಮ ಮಕ್ಕಳಿಗೆ ಸಹಾಯ ಮಾಡೋದು ಹೇಗೆ? ಇದನ್ನೆಲ್ಲ ಈ ಲೇಖನದಲ್ಲಿ ಕಲಿಯೋಣ.
ಮೃದು ಸ್ವಭಾವ ಬೆಳೆಸ್ಕೊಳ್ಳೋದು ಹೇಗೆ?
3. ಮೃದು ಸ್ವಭಾವ ಇರೋರು ಹೇಡಿಗಳಲ್ಲ ಅಂತ ಹೇಗೆ ಹೇಳಬಹುದು? (2 ತಿಮೊತಿ 2:24, 25)
3 ಮೃದು ಸ್ವಭಾವ ಇರೋರು ಹೇಡಿಗಳು ಅಂತ ಜನ ಅಂದ್ಕೊಳ್ತಾರೆ. ಆದ್ರೆ ಆ ಗುಣ ತೋರಿಸೋಕೆ ಧೈರ್ಯ, ಗುಂಡಿಗೆ ಬೇಕು. ಯಾಕಂದ್ರೆ ತುಂಬ ಕಷ್ಟದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಸಮಾಧಾನವಾಗಿ ಇರಬೇಕಂದ್ರೆ ಹೇಳಿದಷ್ಟು ಸುಲಭ ಅಲ್ಲ. ಮೃದು ಸ್ವಭಾವ ಅಥವಾ ಸೌಮ್ಯತೆ “ಪವಿತ್ರಶಕ್ತಿಯಿಂದ ಬರೋ ಗುಣ” ಅಂತ ಬೈಬಲ್ ಹೇಳುತ್ತೆ. (ಗಲಾ. 5:22, 23) ಕೆಲವೊಮ್ಮೆ ಗ್ರೀಕಲ್ಲಿ ಈ ಪದನ ಚೆನ್ನಾಗಿ ಪಳಗಿಸಿರೋ ಕುದುರೆ ಬಗ್ಗೆ ವಿವರಿಸುವಾಗ ಬಳಸಿದ್ದಾರೆ. ಒರಟೊರಟಾಗಿ ನಡ್ಕೊಳ್ಳೋ ಕುದುರೆನ ನೀವು ಪಳಗಿಸ್ತೀರ ಅಂತ ಅಂದ್ಕೊಳ್ಳಿ. ಆಮೇಲೆ ಅದು ಮೃದುವಾಗಿ ನಡ್ಕೊಳ್ಳುತ್ತೆ. ಹಾಗಂತ ಅದಕ್ಕಿರೋ ಶಕ್ತಿಯೆಲ್ಲಾ ಹೋಗಿಬಿಡುತ್ತಾ? ಇಲ್ಲ. ಅದೇ ತರ ಒಬ್ಬ ವ್ಯಕ್ತಿ ಮೃದು ಸ್ವಭಾವದವನು ಅಂದ ತಕ್ಷಣ ಅವನು ಹೇಡಿ ಅಲ್ಲ. ಹಾಗಾದ್ರೆ ಈ ಗುಣನ ಬೆಳೆಸ್ಕೊಳ್ಳೋದು ಹೇಗೆ? ಇದನ್ನ ನಮಗೆ ನಾವೇ ಬೆಳೆಸ್ಕೊಳ್ಳೋಕೆ ಆಗಲ್ಲ. ಇದು ಪವಿತ್ರಶಕ್ತಿಯಿಂದ ಬರೋ ಗುಣ ಆಗಿರೋದ್ರಿಂದ ಇದನ್ನ ಬೆಳೆಸ್ಕೊಳ್ಳೋಕೆ ಯೆಹೋವ ದೇವರ ಹತ್ರ ಸಹಾಯ ಕೇಳಬೇಕು. ಎಷ್ಟೋ ಸಹೋದರರು ವಿರೋಧ ಬಂದಾಗ ಮೃದುವಾಗಿ ನಡ್ಕೊಂಡಿದ್ದಾರೆ. ಇದ್ರಿಂದಾಗಿ ತುಂಬ ಜನ್ರಿಗೆ ಯೆಹೋವನ ಸಾಕ್ಷಿಗಳ ಮೇಲೆ ಒಳ್ಳೇ ಅಭಿಪ್ರಾಯ ಬಂದಿದೆ. (2 ತಿಮೊತಿ 2:24, 25 ಓದಿ.) ಈ ಗುಣ ಬೆಳೆಸ್ಕೊಳ್ಳೋಕೆ ನಾವು ಇನ್ನೇನು ಮಾಡಬೇಕು?
4. ಇಸಾಕನ ಉದಾಹರಣೆಯಿಂದ ನಾವೇನು ಕಲಿಬಹುದು?
4 ಬೇರೆಯವ್ರ ಜೊತೆ ಮೃದುವಾಗಿ ನಡ್ಕೊಂಡ ಎಷ್ಟೋ ಉದಾಹರಣೆ ಬೈಬಲಲ್ಲಿದೆ. ಅವ್ರಿಂದ ನಾವು ಪಾಠ ಕಲಿಬೇಕು. ಉದಾಹರಣೆಗೆ ಇಸಾಕನ ಬಗ್ಗೆ ನೋಡಿ. ಅವನು ಫಿಲಿಷ್ಟಿಯರ ಊರಾದ ಗೆರಾರಿನಲ್ಲಿ ಇದ್ದಾಗ ಅಬ್ರಹಾಮ ತೋಡಿಸಿದ್ದ ಬಾವಿಗಳನ್ನ ಫಿಲಿಷ್ಟಿಯರು ಬಂದು ಮುಚ್ಚಿಹಾಕಿದ್ರು. ಆಗ ಇಸಾಕ ‘ಇದು ನಮ್ಮಪ್ಪ ತೋಡಿಸಿದ್ದು’ ಅಂತೇಳಿ ಜಗಳ ಮಾಡೋಕೆ ಹೋಗ್ಲಿಲ್ಲ. ಅದ್ರ ಬದ್ಲು ಅವನು ತನ್ನ ಕುಟುಂಬನ ಬೇರೆ ಕಡೆ ಕರ್ಕೊಂಡು ಹೋಗಿ ಅಲ್ಲಿ ಬಾವಿ ತೋಡಿಸಿದ. (ಆದಿ. 26:12-18) ಫಿಲಿಷ್ಟಿಯರು ಅಲ್ಲಿಗೂ ಬಂದು ಜಗಳ ಮಾಡಿದ್ರು. ಆಗ್ಲೂ ಇಸಾಕ ಸಮಾಧಾನವಾಗಿ ಇದ್ದ. (ಆದಿ. 26:19-25) ಹೀಗೆ ಮೃದುವಾಗಿ ನಡ್ಕೊಳ್ಳೋಕೆ ಇಸಾಕ ಹೇಗೆ ಕಲಿತ? ಅವನು ಅಪ್ಪಅಮ್ಮನನ್ನ ನೋಡಿ ಕಲಿತ. ಅಬ್ರಹಾಮ ಎಲ್ರ ಜೊತೆ ಸಮಾಧಾನವಾಗಿ ಇರ್ತಿದ್ದ. ಸಾರಳಲ್ಲಿ “ಶಾಂತಿ, ಸೌಮ್ಯಭಾವ” ಅನ್ನೋ ಗುಣಗಳಿದ್ವು.—1 ಪೇತ್ರ 3:4-6; ಆದಿ. 21:22-34.
5. ಅಪ್ಪಅಮ್ಮಂದಿರು ಮಕ್ಕಳಿಗೆ ಮೃದುವಾಗಿ ನಡ್ಕೊಳ್ಳೋಕೆ ಕಲಿಸಬಹುದು ಅಂತ ಯಾವ ಉದಾಹರಣೆ ತೋರಿಸುತ್ತೆ?
5 ಅಪ್ಪಅಮ್ಮ ಮಕ್ಕಳಿಗೆ ಮೃದುವಾಗಿ ನಡ್ಕೊಳ್ಳೋಕೆ ಕಲಿಸಬೇಕು. ಮಾರ್ಕ್ ಅನ್ನೋ ಹುಡುಗನ ಉದಾಹರಣೆ ನೋಡಿ. b ಅವನಿಗೆ 17 ವರ್ಷ. ಮಾರ್ಕ್ ಸ್ಕೂಲಿಗೆ ಹೋದಾಗ, ಸೇವೆಗೆ ಹೋದಾಗ ಅವನ ಜೊತೆ ಕೆಲವರು ಒರಟಾಗಿ ತುಂಬ ಕೋಪದಿಂದ ನಡ್ಕೊಳ್ತಿದ್ರು. ಇಂಥವರ ಹತ್ರ ಮೃದುವಾಗಿ ನಡ್ಕೊಳ್ಳೋದು ಹೇಗೆ ಅಂತ ಇವನ ಅಪ್ಪಅಮ್ಮ ತಾಳ್ಮೆಯಿಂದ ಕಲಿಸಿದ್ರು. ಅವರು ಹೀಗೆ ಹೇಳ್ತಾರೆ: “ಯಾರಾದ್ರು ಕಿರಿಕಿರಿ ಮಾಡಿದಾಗ ‘ಒಂದು ಕೈ ನೋಡೇ ಬಿಡೋಣ’ ಅಂತ ಅನಿಸಿಬಿಡುತ್ತೆ. ಆದ್ರೆ ಆಗ್ಲೂ ನಾವು ಮೃದುವಾಗಿ ನಡ್ಕೊಂಡ್ರೆ ನಾವು ಧೈರ್ಯಶಾಲಿಗಳು ಅಂತ ಮಾರ್ಕ್ ಅರ್ಥ ಮಾಡ್ಕೊಂಡಿದ್ದಾನೆ.” ಯಾರ್ ಎಷ್ಟೇ ಒರಟಾಗಿ ನಡ್ಕೊಂಡ್ರೂ ಅವ್ರ ಹತ್ರ ಮೃದುವಾಗಿ ನಡ್ಕೊಳ್ಳೋ ಕಲೆಯನ್ನ ಮಾರ್ಕ್ ಈಗ ಬೆಳೆಸ್ಕೊಂಡಿದ್ದಾನೆ.
6. ಮೃದುವಾಗಿ ನಡ್ಕೊಳ್ಳೋಕೆ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ?
6 ನಮಗೆ ಕೋಪ ಬರೋ ತರ ಯಾರಾದ್ರು ಮಾತಾಡಿದ್ರೆ, ನಡ್ಕೊಂಡ್ರೆ ನಾವೇನು ಮಾಡಬೇಕು? ಉದಾಹರಣೆಗೆ ಯೆಹೋವ ದೇವರ ಬಗ್ಗೆ ಸುಳ್ಳು ಹಬ್ಬಿಸಿದಾಗ, ಬೈಬಲನ್ನ ಅವಮಾನ ಮಾಡಿದಾಗ ನಮಗೆ ಕೋಪ ಬರುತ್ತೆ. ಆಗ ಮೃದುವಾಗಿ ನಡ್ಕೊಳ್ಳೋಕೆ ಪವಿತ್ರಶಕ್ತಿ ಮತ್ತು ವಿವೇಕ ಕೊಡಪ್ಪಾ ಅಂತ ನಾವು ಪ್ರಾರ್ಥನೆ ಮಾಡಬೇಕು. ‘ನಾನಿನ್ನೂ ಮೃದುವಾಗಿ ನಡ್ಕೊಬೇಕಿತ್ತು’ ಅಂತ ಆಮೇಲೆ ಅನಿಸಿದ್ರೆ ಏನು ಮಾಡೋದು? ಮತ್ತೆ ಪ್ರಾರ್ಥನೆ ಮಾಡಿ. ‘ಮುಂದಿನ ಸಲನೂ ಹೀಗೇ ಆದ್ರೆ ನಾನೇನು ಮಾಡಬೇಕು’ ಅಂತ ಯೋಚ್ನೆ ಮಾಡಿ. ಆಗ ನಾವು ಕೋಪ ಮಾಡ್ಕೊಳ್ಳದೇ ಮೃದುವಾಗಿ ನಡ್ಕೊಳ್ಳೋಕೆ ಯೆಹೋವ ದೇವರು ಪವಿತ್ರಶಕ್ತಿ ಕೊಟ್ಟು ಸಹಾಯ ಮಾಡ್ತಾನೆ.
7. ನಮಗೆ ಸಹಾಯ ಮಾಡೋ ಕೆಲವು ವಚನಗಳನ್ನ ನೆನಪಿಟ್ಕೊಳ್ಳೋದ್ರಿಂದ ಯಾವ ಪ್ರಯೋಜನ ಇದೆ? (ಜ್ಞಾನೋಕ್ತಿ 15:1, 18)
7 ಮೃದುವಾಗಿ ಮಾತಾಡೋಕೆ ನಮಗೆ ಕಷ್ಟ ಆದಾಗ ಬೈಬಲ್ ವಚನಗಳು ಸಹಾಯ ಮಾಡುತ್ತೆ. ಆ ವಚನಗಳನ್ನ ಸರಿಯಾದ ಸಮಯಕ್ಕೆ ಪವಿತ್ರಶಕ್ತಿ ನಮಗೆ ನೆನಪಿಸುತ್ತೆ. (ಯೋಹಾ. 14:26) ಉದಾಹರಣೆಗೆ ಜ್ಞಾನೋಕ್ತಿ ಪುಸ್ತಕದಲ್ಲಿ ಮೃದುವಾಗಿ ನಡ್ಕೊಳ್ಳೋಕೆ ಸಹಾಯ ಮಾಡೋ ವಚನಗಳಿವೆ. (ಜ್ಞಾನೋಕ್ತಿ 15:1, 18 ಓದಿ.) ಅಷ್ಟೇ ಅಲ್ಲ, ಈ ರೀತಿ ನಡ್ಕೊಂಡ್ರೆ ಏನೆಲ್ಲಾ ಪ್ರಯೋಜನ ಇದೆ ಅಂತನೂ ಆ ಪುಸ್ತಕದಲ್ಲಿದೆ.—ಜ್ಞಾನೋ. 10:19; 17:27; 21:23; 25:15.
ತಿಳುವಳಿಕೆ ಇದ್ರೆ ಮೃದುವಾಗಿ ಮಾತಾಡೋಕೆ ಆಗುತ್ತೆ
8. ಯಾರಾದ್ರೂ ಪ್ರಶ್ನೆ ಕೇಳಿದಾಗ ಏನು ಮಾಡಬೇಕು? ಯಾಕೆ?
8 ತಿಳುವಳಿಕೆ ನಮಗೆ ತುಂಬ ಸಹಾಯ ಮಾಡುತ್ತೆ. (ಜ್ಞಾನೋ. 19:11) ತಿಳುವಳಿಕೆ ಇರೋ ವ್ಯಕ್ತಿ ಅವನು ನಂಬೋ ವಿಷ್ಯಗಳ ಬಗ್ಗೆ ಯಾರಾದ್ರು ಪ್ರಶ್ನೆ ಮಾಡಿದಾಗ ತಕ್ಷಣ ಕೋಪ ಮಾಡ್ಕೊಳಲ್ಲ, ಸ್ವನಿಯಂತ್ರಣ ತೋರಿಸ್ತಾನೆ. ಕೆಲವರು ಕೇಳೋ ಪ್ರಶ್ನೆಗಳನ್ನ ಸಮುದ್ರದಲ್ಲಿರೋ ದೊಡ್ಡ ಮಂಜುಗಡ್ಡೆಗೆ ನಾವು ಹೋಲಿಸಬಹುದು. ಅದ್ರ ತುದಿ ಮಾತ್ರ ನಮಗೆ ಕಾಣಿಸುತ್ತೆ, ಅದ್ರ ಹೆಚ್ಚಿನ ಭಾಗ ನೀರೊಳಗೆ ಇರುತ್ತೆ. ಹಾಗಾಗಿ ಅದು ಕಾಣಿಸಲ್ಲ. ಅದೇ ತರ ನಮಗೆ ಯಾರಾದ್ರು ಪ್ರಶ್ನೆ ಕೇಳಿದಾಗ ಅವರು ಯಾಕೆ ಹಾಗೆ ಕೇಳ್ತಿದ್ದಾರೆ, ಅವ್ರ ಮನಸ್ಸಲ್ಲಿ ಏನಿದೆ ಅಂತ ನಮಗೆ ಗೊತ್ತಾಗಲ್ಲ. ಅದಕ್ಕೇ, ಒಬ್ಬ ವ್ಯಕ್ತಿ ಪ್ರಶ್ನೆ ಕೇಳಿದ ತಕ್ಷಣ ಉತ್ರ ಕೊಡೋ ಬದ್ಲು, ಆ ಪ್ರಶ್ನೆಯನ್ನ ಅವನು ಯಾಕೆ ಕೇಳ್ತಿದ್ದಾನೆ ಅಂತ ಅರ್ಥ ಮಾಡ್ಕೊಬೇಕು. ಆಗ ನಮಗೆ ತಿಳುವಳಿಕೆ ಇದೆ ಅಂತ ತೋರಿಸ್ತೀವಿ.—ಜ್ಞಾನೋ. 16:23.
9. ಗಿದ್ಯೋನ ಎಫ್ರಾಯಿಮ್ಯರ ಜೊತೆ ಮೃದುವಾಗಿ ಮಾತಾಡೋಕೆ ತಿಳುವಳಿಕೆ ಹೇಗೆ ಸಹಾಯ ಮಾಡ್ತು?
9 ಉದಾಹರಣೆಗೆ ಗಿದ್ಯೋನ ಎಫ್ರಾಯೀಮಿನ ಗಂಡಸ್ರ ಜೊತೆ ಹೇಗೆ ನಡ್ಕೊಂಡ ಅಂತ ನೋಡಿ. ಇವರು ಮಿದ್ಯಾನ್ಯರ ವಿರುದ್ಧ ಹೋರಾಡೋಕೆ ಹೋದಾಗ ‘ನಮ್ಮನ್ನ ಯಾಕೆ ಕರೀಲಿಲ್ಲ’ ಅಂತ ಹೇಳಿ ಗಿದ್ಯೋನನ ಜೊತೆ ಜಗಳಕ್ಕೆ ಹೋದ್ರು. ಯಾಕೆ? ಅದು ಅವ್ರ ಮರ್ಯಾದೆ ಪ್ರಶ್ನೆ ಅಂತ ಹೇಳಿ ಅವರು ಕೋಪ ಮಾಡ್ಕೊಂಡ್ರಾ? ಗಿದ್ಯೋನ ಈ ವಿಷ್ಯನ ತಿಳುವಳಿಕೆಯಿಂದ ಚೆನ್ನಾಗಿ ಅರ್ಥ ಮಾಡ್ಕೊಂಡ. ಅದಕ್ಕೆ ಅವ್ರ ಹತ್ರ ಗೌರವದಿಂದ ಮೃದುವಾಗಿ ಉತ್ರ ಕೊಟ್ಟ. ಇದ್ರಿಂದ ಏನಾಯ್ತು? “ಅವ್ರ ಕೋಪ ತಣ್ಣಗಾಯ್ತು.”—ನ್ಯಾಯ. 8:1-3.
10. ಯಾರಾದ್ರೂ ನಮ್ಮನ್ನ ಪ್ರಶ್ನೆ ಮಾಡಿದಾಗ ಮೃದುವಾಗಿ ಉತ್ರ ಕೊಡೋಕೆ ನಾವೇನು ಮಾಡಬೇಕು? (1 ಪೇತ್ರ 3:15)
10 ನಾವು ಬೈಬಲಲ್ಲಿರೋ ನೀತಿ-ನಿಯಮಗಳನ್ನ ಪಾಲಿಸೋದ್ರಿಂದ ಸ್ಕೂಲಲ್ಲಿ, ಕೆಲಸದ ಜಾಗದಲ್ಲಿ ಕೆಲವರು ನಮಗೆ ಪ್ರಶ್ನೆಗಳನ್ನ ಕೇಳಬಹುದು. ನಾವಾಗ ಬೈಬಲಲ್ಲಿ ಇರೋದನ್ನ ಪಾಲಿಸೋದು ಯಾಕೆ ಒಳ್ಳೇದು ಅಂತ ಅವ್ರಿಗೆ ವಿವರಿಸಬೇಕು, ಅವ್ರಿಗೆ ಗೌರವ ಕೊಡಬೇಕು, ಅವರು ಹೇಳೋದನ್ನೂ ಕೇಳಿಸ್ಕೊಬೇಕು. (1 ಪೇತ್ರ 3:15 ಓದಿ.) ನಮ್ಮಲ್ಲಿ ತಪ್ಪು ಹುಡುಕೋಕೆ, ಅವಮಾನ ಮಾಡೋಕೆ ಪ್ರಶ್ನೆ ಕೇಳ್ತಿದ್ದಾರೆ ಅಂತ ನಾವು ಅಂದ್ಕೊಬಾರದು. ಅವರು ಯಾಕೆ ಆ ಪ್ರಶ್ನೆ ಕೇಳ್ತಿದ್ದಾರೆ ಅಂತ ಯೋಚಿಸಬೇಕು. ಅವ್ರ ಉದ್ದೇಶ ಏನೇ ಇರಲಿ, ನಾವು ಮೃದುವಾಗಿ ಪ್ರೀತಿಯಿಂದ ಉತ್ರ ಕೊಡಬೇಕು. ಎಷ್ಟೇ ಒರಟಾಗಿ, ಅವಮಾನ ಆಗೋ ತರ ಮಾತಾಡಿದ್ರೂ, ಮೃದುವಾಗಿ ಮಾತಾಡೋದೇ ನಮ್ಮ ಗುರಿ ಆಗಿರಬೇಕು. ಅದನ್ನ ನೋಡಿ ಅವ್ರಿಗೆ ನಮ್ಮ ಮೇಲಿರೋ ಅಭಿಪ್ರಾಯನೇ ಬದಲಾಗಬಹುದು.—ರೋಮ. 12:17.
11-12. (ಎ) ಯಾರಾದ್ರೂ ನಮಗೆ ಕಷ್ಟವಾದ ಪ್ರಶ್ನೆ ಕೇಳಿದಾಗ ನಾವೇನು ಮಾಡಬೇಕು? (ಚಿತ್ರನೂ ನೋಡಿ.) (ಬಿ) ಬೇರೆಯವರು ಪ್ರಶ್ನೆ ಕೇಳಿದಾಗ ಬೈಬಲ್ ಬಗ್ಗೆ ತಿಳಿಸೋಕೆ ಅವಕಾಶ ಸಿಗುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.
11 ನಮ್ಮ ಜೊತೆ ಕೆಲಸ ಮಾಡುವವರು ‘ನೀವ್ಯಾಕೆ ಹುಟ್ಟಿದ ಹಬ್ಬ ಮಾಡಲ್ಲ?’ ಅಂತ ಕೇಳ್ತಾರೆ ಅಂದ್ಕೊಳ್ಳಿ. ಆಗ ನಾವು ತಕ್ಷಣ ಯೋಚ್ನೆ ಮಾಡಬೇಕು. ಇವರು ‘ನಮ್ಮ ಧರ್ಮ ನಮ್ಮನ್ನ ಖುಷಿಯಾಗಿ ಇರೋಕೆ ಬಿಡ್ತಿಲ್ಲ ಅಂದ್ಕೊಂಡು ಕೇಳ್ತಿದ್ದಾರಾ? ಅಥವಾ ನಾವು ಕೆಲಸದಲ್ಲಿ ಎಲ್ರ ಜೊತೆ ಸೇರಿ ಆಚರಿಸಲಿಲ್ಲ ಅಂದ್ರೆ ನಮ್ಮ ಒಗ್ಗಟ್ಟು ಒಡೆದು ಹೋಗುತ್ತೆ ಅನ್ನೋ ಭಯದಲ್ಲಿ ಕೇಳ್ತಿದ್ದಾರಾ?’ ಅಂತ ಯೋಚ್ನೆ ಮಾಡಿ. ಅವ್ರ ಜೊತೆ ಕೆಲಸ ಮಾಡೋರ ಮೇಲೆ ಅವರಿಟ್ಟಿರೋ ಪ್ರೀತಿಗೆ ಹೊಗಳಿ. ಎಲ್ರ ಜೊತೆ ಒಗ್ಗಟ್ಟಾಗಿ ಇರೋಕೆ ನಮಗೂ ಇಷ್ಟ ಅಂತ ಹೇಳಿ. ಇದ್ರಿಂದ ಅವ್ರ ಭಯ ಕಡಿಮೆ ಆಗುತ್ತೆ. ಆಗ ಹುಟ್ಟು ಹಬ್ಬದ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ವಿವರಿಸೋಕೆ ನಿಮಗೊಂದು ಅವಕಾಶ ಸಿಗಬಹುದು.
12 ಕೆಲವೊಂದು ಸೂಕ್ಷ್ಮವಾದ ವಿಷ್ಯಗಳ ಬಗ್ಗೆ ಯಾರಾದ್ರು ಪ್ರಶ್ನೆ ಕೇಳಿದಾಗ್ಲೂ ನಾವು ಹೀಗೇ ಯೋಚ್ನೆ ಮಾಡಬೇಕು. ಉದಾಹರಣೆಗೆ ನಿಮ್ಮ ಕ್ಲಾಸ್‌ಮೇಟ್ ಬಂದು ‘ನಿಮಗೆ ಸಲಿಂಗಿಗಳನ್ನ ಕಂಡ್ರೆ ಯಾಕೆ ಆಗಲ್ಲ?’ ಅಂತ ಕೇಳಬಹುದು. ಆಗ ನಾವು ‘ಅವನು ಯಾಕೆ ಹಾಗೆ ಅಂದ್ಕೊಂಡಿದ್ದಾನೆ’ ಅಂತ ಯೋಚ್ನೆ ಮಾಡಬೇಕು. ಅವನು ‘ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪು ತಿಳ್ಕೊಂಡಿದ್ದಾನಾ? ಅವನ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಯಾರಾದ್ರೂ ಸಲಿಂಗಿಗಳು ಇದ್ದಾರಾ? ಸಲಿಂಗಿಗಳನ್ನ ನಾವು ತುಂಬ ದ್ವೇಷಿಸ್ತೀವಿ ಅಂತ ಅಂದ್ಕೊಂಡಿದ್ದಾನಾ?’ ಅಂತ ನಾವು ತಿಳ್ಕೊಬೇಕು. ಆಮೇಲೆ, ‘ನಾವು ಎಲ್ಲಾ ಜನ್ರನ್ನ ಪ್ರೀತಿಸ್ತೀವಿ. ಅವರು ಆ ರೀತಿ ಜೀವನ ಮಾಡೋದು ಅವ್ರ ಇಷ್ಟ. ಅವ್ರನ್ನ ನಾವು ಗೌರವಿಸ್ತೀವಿ’ ಅಂತ ಹೇಳಿ. c (1 ಪೇತ್ರ 2:17) ಆಗ ಬೈಬಲ್ ಸಲಿಂಗಿಗಳ ಬಗ್ಗೆ ಏನು ಹೇಳುತ್ತೆ, ಬೈಬಲ್ ಹೇಳೋ ತರ ಜೀವಿಸೋದ್ರಿಂದ ಏನು ಒಳ್ಳೇದಾಗುತ್ತೆ ಅಂತ ವಿವರಿಸೋಕೆ ಅವಕಾಶ ಸಿಕ್ಕಿದ್ರೂ ಸಿಗಬಹುದು.
13. ‘ನೀವ್ಯಾಕೆ ದೇವರನ್ನ ನಂಬ್ತೀರ’ ಅಂತ ಯಾರಾದ್ರೂ ಕೇಳಿದ್ರೆ ನೀವು ಅವ್ರಿಗೆ ಹೇಗೆ ಸಹಾಯ ಮಾಡಬಹುದು?
13 ನಮ್ಮ ಹತ್ರ ಯಾರಾದ್ರೂ ಒಂದು ವಿಷ್ಯದ ಬಗ್ಗೆ ವಾದ ಮಾಡಿದ್ರೆ ಅದ್ರ ಬಗ್ಗೆ ಆ ವ್ಯಕ್ತಿಗೆ ಎಲ್ಲಾ ಗೊತ್ತಿದೆ, ಅವರು ಅದನ್ನೇ ನಂಬ್ತಾರೆ ಅಂತ ಅಂದ್ಕೊಬಾರದು. (ತೀತ 3:2) ಉದಾಹರಣೆಗೆ ನಿಮ್ಮ ಕ್ಲಾಸ್‌ಮೇಟ್ ನಿಮ್ಮ ಹತ್ರ ಬಂದು, ‘ದೇವರು-ದಿಂಡರು ಅಂತೆಲ್ಲ ಏನಿಲ್ಲ, ನೀನ್ಯಾಕೆ ಅದನ್ನೆಲ್ಲ ನಂಬ್ತಿಯ’? ಅಂತ ಕೇಳಬಹುದು. ಮನುಷ್ಯರು ವಿಕಾಸವಾಗಿ ಬಂದಿದ್ದಾರೆ ಅಂತ ಅವನು ನಂಬ್ತಾನೆ ಅಂದ ತಕ್ಷಣ ಅವನಿಗೆ ಅದ್ರ ಬಗ್ಗೆ ಎಲ್ಲಾ ಗೊತ್ತಿದೆ ಅಂತನಾ? ಯಾರೋ ಏನೋ ಹೇಳಿರೋದನ್ನ ಕೇಳಿ ಅವನು ನಿಮ್ಮ ಹತ್ರ ಹಾಗೆ ಹೇಳಿರಬಹುದು. ಅದಕ್ಕೆ ಅವನ ಹತ್ರ ವಿಕಾಸವಾದದ ಬಗ್ಗೆ ಮಾತಾಡೋಕೆ ಹೋಗಬೇಡಿ. jw.orgನಲ್ಲಿ ಸೃಷ್ಟಿ ಬಗ್ಗೆ ಇರೋ ಮಾಹಿತಿಯನ್ನ ತೋರಿಸಿ. ಆಮೇಲೆ ಅದ್ರಲ್ಲಿರೋ ಯಾವುದಾದ್ರು ಲೇಖನ ಅಥವಾ ವಿಡಿಯೋ ನೋಡಿದ ಮೇಲೆ ಅವನು ನಿಮ್ಮ ಹತ್ರ ಮಾತಾಡೋಕೆ ಇಷ್ಟಪಡಬಹುದು. ನೀವು ಈ ರೀತಿ ಮೃದುವಾಗಿ ನಡ್ಕೊಳ್ಳೋದ್ರಿಂದ ಅವನು ಬೈಬಲ್ ಬಗ್ಗೆ ತಿಳ್ಕೊಳ್ಳೋಕೆ ಇಷ್ಟಪಡಬಹುದು.
14. ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಾಗಿ ತಿಳ್ಕೊಂಡಿದ್ದ ಕ್ಲಾಸ್‌ಮೇಟ್‌ಗೆ ನೀಲ್ ಹೇಗೆ ವೆಬ್‌ಸೈಟ್‌ನಿಂದ ಸಹಾಯ ಮಾಡಿದ?
14 ನೀಲ್ ಅನ್ನೋ ಹುಡುಗ ಇದನ್ನೇ ಮಾಡಿದ. ಅವನ ಜೊತೆ ಓದೋ ಒಬ್ಬ ಹುಡುಗ ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಾಗಿ ತಿಳ್ಕೊಂಡಿದ್ದ. ಇದ್ರ ಬಗ್ಗೆ ನೀಲ್ ಹೀಗೆ ಹೇಳ್ತಾನೆ: “ಅವನು ನಂಗೆ ಯಾವಾಗ್ಲೂ, ನೀನು ವಿಜ್ಞಾನ ಹೇಳೋದನ್ನ ನಂಬಲ್ಲ. ನಿಜ ಏನು ಅಂತ ತಿಳ್ಕೊಳ್ಳೋದಕ್ಕಿಂತ ನಿಂಗೆ ಕಥೆ ಓದೋಕೆ ಇಷ್ಟ, ಅದಕ್ಕೆ ಬೈಬಲನ್ನ ನಂಬ್ತೀಯ.” ಆಗ ನೀಲ್ ವಿವರಿಸೋಕೆ ಹೋದ್ರೆ ಅವನು ಕೇಳಿಸ್ಕೊಳ್ತಾನೇ ಇರಲಿಲ್ಲ. ಅದಕ್ಕೆ ನೀಲ್ jw.orgನಲ್ಲಿ “ವಿಜ್ಞಾನ ಮತ್ತು ಬೈಬಲ್” ಅನ್ನೋ ಭಾಗವನ್ನ ನೋಡೋಕೆ ಅವನಿಗೆ ಹೇಳಿದ. ಅಲ್ಲಿರೋ ವಿಷ್ಯಗಳನ್ನ ಅವನು ಓದಿದ್ದಾನೆ ಅಂತ ನೀಲ್‌ಗೆ ಗೊತ್ತಾದ ಮೇಲೆ ಜೀವ ಹೇಗೆ ಶುರು ಆಯ್ತು ಅನ್ನೋದ್ರ ಬಗ್ಗೆ ಅವನ ಹತ್ರ ಮಾತಾಡಿದ. ನೀವೂ ಇದೇ ತರ ಮಾಡಿ ನೋಡಿ.
ಕುಟುಂಬದಲ್ಲಿ ಎಲ್ರೂ ಪ್ರ್ಯಾಕ್ಟೀಸ್ ಮಾಡಿ
15. ಸ್ಕೂಲಲ್ಲಿ ನಮ್ಮ ಮಕ್ಕಳಿಗೆ ಯಾರಾದ್ರೂ ಪ್ರಶ್ನೆ ಕೇಳಿದಾಗ ಮೃದುವಾಗಿ ಉತ್ರ ಕೊಡೋಕೆ ಹೆತ್ತವರು ಹೇಗೆ ಕಲಿಸಬೇಕು?
15 ಸ್ಕೂಲಲ್ಲಿ ಯಾರಾದ್ರೂ ಪ್ರಶ್ನೆ ಕೇಳಿದಾಗ ಮೃದುವಾಗಿ ಉತ್ರ ಕೊಡೋದು ಹೇಗೆ ಅಂತ ಅಪ್ಪಅಮ್ಮ ಮಕ್ಕಳಿಗೆ ಕಲಿಸಬೇಕು. (ಯಾಕೋ. 3:13) ಇದನ್ನ ಹೇಗೆ ಮಾಡೋದು ಅಂತ ಕೆಲವು ಹೆತ್ತವರು ಕುಟುಂಬ ಆರಾಧನೆಯಲ್ಲಿ ಪ್ರ್ಯಾಕ್ಟೀಸ್ ಮಾಡಿಸ್ತಾರೆ. ತಮ್ಮ ಮಕ್ಕಳ ಹತ್ರ ಬೇರೆಯವರು ಯಾವ್ಯಾವ ಪ್ರಶ್ನೆಗಳನ್ನ ಕೇಳಬಹುದು ಅಂತ ಮುಂಚೆನೇ ಯೋಚ್ನೆ ಮಾಡ್ತಾರೆ. ಅದ್ರ ಬಗ್ಗೆ ಚರ್ಚೆ ಮಾಡ್ತಾರೆ. ಆಮೇಲೆ ಮಕ್ಕಳ ಬಾಯಿಂದ ಉತ್ರ ಹೇಳಿಸ್ತಾರೆ. ಹೀಗೆ ತಮ್ಮ ಮಕ್ಕಳಿಗೆ ಮೃದುವಾಗಿ ಉತ್ರ ಕೊಡೋಕೆ ಕಲಿಸ್ತಾರೆ.—“ ಈ ತರ ಮಾಡಿ ನೋಡಿ” ಅನ್ನೋ ಚೌಕ ನೋಡಿ.
16-17. ಉತ್ರ ಕೊಡೋಕೆ ಕುಟುಂಬ ಆರಾಧನೆಯಲ್ಲಿ ಪ್ರ್ಯಾಕ್ಟೀಸ್ ಮಾಡಿಸೋದ್ರಿಂದ ಮಕ್ಕಳಿಗೆ ಹೇಗೆ ಸಹಾಯ ಆಗುತ್ತೆ?
16 ಈ ತರ ಪ್ರ್ಯಾಕ್ಟೀಸ್ ಮಾಡಿಸೋದ್ರಿಂದ ಮಕ್ಕಳು ಬೈಬಲಲ್ಲಿ ಇರೋ ವಿಷ್ಯಗಳು ಸತ್ಯನಾ ಅಂತ ತಾವಾಗೇ ತಿಳ್ಕೊಳ್ತಾರೆ ಮತ್ತು ಬೇರೆಯವ್ರಿಗೆ ಅದನ್ನ ವಿವರಿಸೋಕೂ ಕಲಿತಾರೆ. jw.orgನ “ಯುವಜನರ ಪ್ರಶ್ನೆಗಳು” ವಿಭಾಗದಲ್ಲಿ ಹದಿವಯಸ್ಕರಿಗೆ ವರ್ಕ್‌ಶೀಟ್‌ಗಳು ಇವೆ. ಇದು ಮಕ್ಕಳಿಗೆ ತಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಮತ್ತು ಯಾರಾದ್ರೂ ಪ್ರಶ್ನೆ ಕೇಳಿದಾಗ ತಾವೇ ಯೋಚ್ನೆ ಮಾಡಿ ಉತ್ರ ಕೊಡೋಕೆ ಸಹಾಯ ಮಾಡುತ್ತೆ. ಈ ವರ್ಕ್‌ಶೀಟ್‌ಗಳು, ಮೃದುವಾಗಿ ಉತ್ರ ಕೊಡೋಕೆ ಕುಟುಂಬದಲ್ಲಿ ಎಲ್ರಿಗೂ ಸಹಾಯ ಮಾಡುತ್ತೆ.
17 ಮ್ಯಾಥ್ಯು ಅನ್ನೋ ಹುಡುಗನಿಗೆ ಅವನ ಅಪ್ಪಅಮ್ಮ ಹೀಗೆ ಪ್ರ್ಯಾಕ್ಟೀಸ್ ಮಾಡಿಸ್ತಾರೆ. ಬೇರೆಯವರು ಪ್ರಶ್ನೆ ಕೇಳಿದಾಗ ಹೇಗೆ ಉತ್ರ ಕೊಡಬೇಕು ಅಂತ ಅವನ ಅಪ್ಪಅಮ್ಮ ತೋರಿಸ್ಕೊಡ್ತಾರೆ. ಯೆಹೋವನ ಸಾಕ್ಷಿ ಆಗಿರೋದ್ರಿಂದ ಯಾವೆಲ್ಲ ಪ್ರಶ್ನೆಗಳು ಬರಬಹುದು ಅಂತ ಅವನು ಮತ್ತು ಅವನ ಅಪ್ಪಅಮ್ಮ ಕುಟುಂಬ ಆರಾಧನೆಯಲ್ಲಿ ಸಂಶೋಧನೆ ಮಾಡ್ತಾರೆ. ಇದ್ರ ಬಗ್ಗೆ ಮ್ಯಾಥ್ಯು ಏನು ಹೇಳ್ತಾನಂದ್ರೆ, “ಎಂಥ ಪ್ರಶ್ನೆಗಳು ಬರಬಹುದು ಅಂತ ನಾವು ಮೊದ್ಲು ಯೋಚ್ನೆ ಮಾಡ್ತೀವಿ. ಅದ್ರ ಬಗ್ಗೆ ಹುಡುಕ್ತೀವಿ. ಆಗ ಬೈಬಲಲ್ಲಿರೋ ವಿಷ್ಯಗಳನ್ನ ನಾನ್ಯಾಕೆ ನಂಬ್ತೀನಿ ಅಂತ ನಂಗೆ ಚೆನ್ನಾಗಿ ಗೊತ್ತಿರುತ್ತೆ. ಇದ್ರಿಂದ ಧೈರ್ಯವಾಗಿ ಉತ್ರ ಕೊಡೋಕೆ ಆಗುತ್ತೆ.”
18. ಕೊಲೊಸ್ಸೆ 4:6ರಿಂದ ನಾವೇನು ಪಾಠ ಕಲಿಬಹುದು?
18 ಒಳ್ಳೇ ಕಾರಣಗಳನ್ನ ಕೊಟ್ಟು ಉತ್ರ ಹೇಳಿದ್ರೆ ಮಾತ್ರ ಸಾಕಾಗಲ್ಲ. ಅದನ್ನ ಅವರು ಒಪ್ಕೊಳ್ಳೋ ರೀತೀಲಿ ಮೃದುವಾಗಿ ಹೇಳಬೇಕು. (ಕೊಲೊಸ್ಸೆ 4:6 ಓದಿ.) ಇದನ್ನ ನಾವು ಚೆಂಡು ಎಸೆಯೋದಕ್ಕೆ ಹೋಲಿಸಬಹುದು. ನಾವು ಅದನ್ನ ಜೋರಾಗಿ ಎಸೆದ್ರೆ ಬೇರೆಯವ್ರಿಗೆ ಹಿಡಿಯಕ್ಕಾಗಲ್ಲ. ಆದ್ರೆ ನಿಧಾನವಾಗಿ ಎಸೆದ್ರೆ ಅವ್ರಿಗೆ ಹಿಡಿಯಕ್ಕೂ ಆಗುತ್ತೆ, ಆಟನೂ ಮುಂದುವರಿಯುತ್ತೆ. ಅದೇ ತರ ನಾವು ಮೃದುವಾಗಿ ಮಾತಾಡಿದ್ರೆ ಜನ ನಮ್ಮ ಮಾತನ್ನ ಕೇಳಿಸ್ಕೊಳ್ತಾರೆ, ಮಾತುಕತೆನೂ ಮುಂದುವರಿಯುತ್ತೆ. ಆದ್ರೆ ಕೆಲವರು ನಮ್ಮ ಹತ್ರ ವಾದ ಮಾಡಕ್ಕಂತಾನೇ ಪ್ರಶ್ನೆ ಕೇಳ್ತಾರೆ. ನಾವೆಷ್ಟು ಮೃದುವಾಗಿ ಮಾತಾಡಿದ್ರೂ ಏನೂ ಪ್ರಯೋಜನ ಆಗಲ್ಲ. ಆಗ ನಾವು ಮಾತು ಮುಂದುವರಿಸೋ ಅವಶ್ಯಕತೆ ಇರಲ್ಲ. (ಜ್ಞಾನೋ. 26:4) ಇಂಥ ಜನ್ರು ಸಿಗೋದು ಕಡಿಮೆನೇ. ತುಂಬ ಜನ ನಾವು ಮಾತಾಡೋದನ್ನ ಕೇಳಿಸ್ಕೊಳ್ತಾರೆ.
19. ನಾವು ಮೃದುವಾಗಿ ಉತ್ರ ಕೊಡೋದ್ರಿಂದ ಏನಾಗಬಹುದು?
19 ಮೃದುವಾಗಿ ಉತ್ರ ಕೊಡೋದ್ರಿಂದ, ಸೌಮ್ಯಭಾವ ತೋರಿಸೋದ್ರಿಂದ ತುಂಬ ಪ್ರಯೋಜನ ಇದೆ ಅಂತ ಕಲಿತ್ವಿ ಅಲ್ವಾ? ನಮ್ಮ ಹತ್ರ ಯಾರಾದ್ರು ಸೂಕ್ಷ್ಮವಾದ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿದಾಗ, ಅವಮಾನ ಮಾಡಿದಾಗ ಮೃದುವಾಗಿ ಉತ್ರ ಕೊಡೋಕೆ ಏನು ಮಾಡಬೇಕು? ಯೆಹೋವನ ಹತ್ರ ಸಹಾಯ ಕೇಳಬೇಕು. ನಾವು ಮೃದುವಾಗಿ ಮಾತಾಡಿದ್ರೆ ಮಾತಿಗೆ ಮಾತು ಬೆಳೆದು ಜಗಳ ಆಗಲ್ಲ. ಅದ್ರ ಬದ್ಲು ಯೆಹೋವನ ಸಾಕ್ಷಿಗಳ ಬಗ್ಗೆ, ನಾವು ನಂಬೋ ವಿಷ್ಯಗಳ ಬಗ್ಗೆ ತಿಳ್ಕೊಳ್ಳೋಕೆ ಅವ್ರಿಗೆ ಮನಸ್ಸಾಗಬಹುದು. ಹೀಗೆ ನಾವು ನಮ್ಮ ನಂಬಿಕೆ “ಬಗ್ಗೆ ಕೇಳೋ ಪ್ರತಿಯೊಬ್ರಿಗೂ ಉತ್ರ ಕೊಡೋಕೆ ಯಾವಾಗ್ಲೂ ಸಿದ್ಧವಾಗಿ” ಇರ್ತೀವಿ. “ಮೃದುವಾಗಿ, ತುಂಬ ಗೌರವದಿಂದ” ಉತ್ರ ಕೊಡ್ತೀವಿ.—1 ಪೇತ್ರ 3:15.
ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು
a ನಾವು ನಂಬೋ ವಿಷ್ಯಗಳ ಬಗ್ಗೆ ಯಾರಾದ್ರೂ ಪ್ರಶ್ನೆ ಕೇಳಿದಾಗ ಅಥವಾ ಸಿಟ್ಟು ಬರೋ ತರ ಮಾತಾಡಿದಾಗ ನಾವು ಹೇಗೆ ಮೃದುವಾಗಿ ಉತ್ರ ಕೊಡಬಹುದು?
b ಕೆಲವ್ರ ಹೆಸ್ರು ಬದಲಾಗಿದೆ.
c 2016ರ ಎಚ್ಚರ! ನಂ. 3ರಲ್ಲಿರೋ “ಸಲಿಂಗಕಾಮದ ಬಗ್ಗೆ ಬೈಬಲ್ ಏನು ಹೇಳುತ್ತದೆ?” ಅನ್ನೋ ಲೇಖನ ನೋಡಿ.
d jw.orgನಲ್ಲಿ “ಯುವಜನರ ಪ್ರಶ್ನೆಗಳು” ಮತ್ತು “ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು” ಅನ್ನೋ ವಿಭಾಗ ಇದೆ. ಅದ್ರಲ್ಲಿರೋ ಸರಣಿ ಲೇಖನಗಳಲ್ಲಿ ತುಂಬ ಸಲಹೆಗಳಿವೆ.