ಅಧ್ಯಯನ ಲೇಖನ 37
ಸಂಸೋನನ ತರ ಯೆಹೋವನನ್ನ ನಂಬಿ
“ವಿಶ್ವದ ರಾಜ ಯೆಹೋವನೇ, ದಯವಿಟ್ಟು ನನ್ನನ್ನ ನೆನಪಿಸ್ಕೊ . . . ನನಗೆ ಶಕ್ತಿ ಕೊಡು.”—ನ್ಯಾಯ. 16:28.
ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ
ಈ ಲೇಖನದಲ್ಲಿ ಏನಿದೆ? a
1-2. ಸಂಸೋನನ ಬಗ್ಗೆ ಕಲಿಯೋದ್ರಿಂದ ನಮಗೆ ಯಾವೆಲ್ಲ ಪ್ರಯೋಜನ ಸಿಗುತ್ತೆ?
ಸಂಸೋನ ಅಂದತಕ್ಷಣ ನಿಮಗೆ ಏನು ನೆನಪಾಗುತ್ತೆ? ಅವನು ಒಬ್ಬ ಬಲಶಾಲಿ ವ್ಯಕ್ತಿ ಅಂತ ನಿಮಗೆ ನೆನಪಾಗಬಹುದು. ಅದು ನಿಜಾನೇ. ಆದ್ರೆ ಅವನು ತಗೊಂಡ ಒಂದು ತೀರ್ಮಾನದಿಂದ ತುಂಬ ಕಷ್ಟ ಅನುಭವಿಸಬೇಕಾಯ್ತು. ಆದ್ರೂ ಅವನು ಜೀವನ ಇಡೀ ತೋರಿಸಿದ ನಂಬಿಕೆಯನ್ನ ಯೆಹೋವ ಗಮನಿಸಿ ಆಶೀರ್ವದಿಸಿದನು. ಅವನ ಕಥೆಯಿಂದ ನಮಗೆ ಪ್ರಯೋಜನ ಆಗಲಿ ಅಂತ ಅದನ್ನ ಬೈಬಲಲ್ಲಿ ಬರೆಸಿಟ್ಟನು.
2 ಯೆಹೋವ ಇಸ್ರಾಯೇಲ್ಯರಿಗೆ ಸಹಾಯ ಮಾಡೋಕೆ ಸಂಸೋನನನ್ನ ಬಳಸಿದನು. ಅವನ ಕೈಯಿಂದ ದೊಡ್ಡದೊಡ್ಡ ಕೆಲಸಗಳನ್ನ ಮಾಡಿಸಿದನು. ಅವನು ಸತ್ತು ನೂರಾರು ವರ್ಷ ಆದ್ಮೇಲೂ ಅವನು ತೋರಿಸಿದ ನಂಬಿಕೆನ ಯೆಹೋವ ಮರಿಲಿಲ್ಲ. ಅಪೊಸ್ತಲ ಪೌಲ ನಂಬಿಕೆ ತೋರಿಸಿದವ್ರ ಪಟ್ಟಿ ಮಾಡ್ತಿದ್ದಾಗ ಅದ್ರಲ್ಲಿ ಸಂಸೋನನ ಹೆಸ್ರನ್ನೂ ಬರೆಸಿದನು. (ಇಬ್ರಿ. 11:32-34) ಯಾಕಂದ್ರೆ ಕಷ್ಟದ ಸಮಯದಲ್ಲೂ ಸಂಸೋನ ಯೆಹೋವನನ್ನ ನಂಬಿದ್ದ. ಅಂಥ ಕೆಲವು ಸನ್ನಿವೇಶಗಳನ್ನ ನಾವೀಗ ನೋಡೋಣ. ಅವನಿಂದ ನಮಗೇನು ಪಾಠ ಅಂತ ಕಲಿಯೋಣ.
ಸಂಸೋನ ಯೆಹೋವನ ಮೇಲೆ ನಂಬಿಕೆ ಇಟ್ಟ
3. ಯೆಹೋವ ದೇವರು ಸಂಸೋನನಿಗೆ ಯಾವ ನೇಮಕ ಕೊಟ್ಟನು?
3 ಸಂಸೋನ ಹುಟ್ಟಿದಾಗ ಫಿಲಿಷ್ಟಿಯರು ಇಸ್ರಾಯೇಲ್ಯರನ್ನ ಆಳ್ತಿದ್ರು, ಅವ್ರ ಮೇಲೆ ದಬ್ಬಾಳಿಕೆ ಮಾಡ್ತಿದ್ರು. (ನ್ಯಾಯ. 13:1) ಇದ್ರಿಂದ ಇಸ್ರಾಯೇಲ್ಯರಿಗೆ ತುಂಬ ಕಷ್ಟ ಆಗ್ತಿತ್ತು. ಹಾಗಾಗಿ “ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನ ರಕ್ಷಿಸೋಕೆ” ಯೆಹೋವ ಸಂಸೋನನನ್ನ ಆರಿಸ್ಕೊಂಡನು. (ನ್ಯಾಯ. 13:5) ಈ ನೇಮಕ ಅಷ್ಟು ಸುಲಭ ಆಗಿರಲಿಲ್ಲ. ಹಾಗಾಗಿ ಅದನ್ನ ಚೆನ್ನಾಗಿ ಮಾಡೋಕೆ ಯೆಹೋವ ಸಹಾಯ ಮಾಡ್ತಾನೆ ಅಂತ ನಂಬಬೇಕಿತ್ತು.
4. ಫಿಲಿಷ್ಟಿಯರಿಂದ ತಪ್ಪಿಸ್ಕೊಳ್ಳೋಕೆ ಸಂಸೋನನಿಗೆ ಯೆಹೋವ ಹೇಗೆ ಸಹಾಯ ಮಾಡಿದನು? (ನ್ಯಾಯಸ್ಥಾಪಕರು 15:14-16)
4 ಸಂಸೋನ ಯೆಹೋವನನ್ನ ಎಷ್ಟು ನಂಬಿದ್ದ, ಯೆಹೋವ ಅವನಿಗೆ ಎಷ್ಟು ಸಹಾಯ ಮಾಡಿದನು ಅನ್ನೋದಕ್ಕೆ ಒಂದು ಉದಾಹರಣೆ ನೋಡೋಣ. ಒಮ್ಮೆ ಫಿಲಿಷ್ಟಿಯ ಸೈನಿಕರು ಸಂಸೋನನನ್ನ ಹಿಡಿಯೋಕೆ ಲೆಹೀ ಅನ್ನೋ ಊರಿಗೆ ಬಂದ್ರು. ಇದು ಯೆಹೂದದಲ್ಲಿ ಇದ್ದಿರಬೇಕು. ಯೆಹೂದದ ಜನ್ರು ಫಿಲಿಷ್ಟಿಯರನ್ನ ನೋಡಿ ತುಂಬ ಭಯ ಪಟ್ಕೊಂಡ್ರು. ಅದಕ್ಕೆ ಅವರು ಸಂಸೋನನನ್ನ ಹಿಡ್ಕೊಡಬೇಕು ಅಂದ್ಕೊಂಡ್ರು. ಹೀಗೆ ಅವನ ಜನ್ರೇ ಹೊಸ ಹಗ್ಗಗಳನ್ನ ತಗೊಂಡು ಸಂಸೋನನನ್ನ ಕಟ್ಟಿ ಫಿಲಿಷ್ಟಿಯರ ಹತ್ರ ಕರ್ಕೊಂಡು ಬಂದ್ರು. (ನ್ಯಾಯ. 15:9-13) ಆಗ “ಯೆಹೋವನ ಪವಿತ್ರಶಕ್ತಿ ಅವನಲ್ಲಿ ಬಲ ತುಂಬ್ತು.” ಅವನು ಆ ಹಗ್ಗಗಳಿಂದ ಬಿಡಿಸ್ಕೊಂಡ. ಅಲ್ಲೇ ಪಕ್ಕದಲ್ಲಿದ್ದ “ಕತ್ತೆಯ ದವಡೆಯ ಹಸಿ ಮೂಳೆ ಅವನ ಕಣ್ಣಿಗೆ ಬಿತ್ತು.” ಅವನು ಅದನ್ನ ತಗೊಂಡು 1,000 ಫಿಲಿಷ್ಟಿಯರನ್ನ ಅದ್ರಿಂದ ಕೊಂದು ಹಾಕಿದ.—ನ್ಯಾಯಸ್ಥಾಪಕರು 15:14-16 ಓದಿ.
5. ಸಂಸೋನ ಯೆಹೋವನನ್ನ ನಂಬಿದ್ದ ಅಂತ ಹೇಗೆ ಗೊತ್ತಾಗುತ್ತೆ?
5 ಸಂಸೋನ ಯಾಕೆ ಕತ್ತೆಯ ದವಡೆಯನ್ನ ಬಳಸಿದ? ಸಾಮಾನ್ಯವಾಗಿ ಯಾರೂ ಅದನ್ನ ಆಯುಧವಾಗಿ ಬಳಸಲ್ಲ. ಆದ್ರೆ ಸಂಸೋನನಿಗೆ ಅವನು ಯಾವ ಆಯುಧವನ್ನ ಕೈಗೆ ಎತ್ಕೊಳ್ತಾನೆ ಅನ್ನೋದು ಮುಖ್ಯ ಆಗಿರಲಿಲ್ಲ. ತಾನು ಗೆಲ್ಲಬೇಕಂದ್ರೆ ಯೆಹೋವನ ಮೇಲೆ ನಂಬಿಕೆ ಇಡಬೇಕು ಅಂತ ಗೊತ್ತಿತ್ತು. ಅದಕ್ಕೆ ಅವನು ಯೆಹೋವನಿಗೆ ಏನಿಷ್ಟನೋ ಅದನ್ನ ಮಾಡೋಕೆ ಆತನನ್ನ ನಂಬಿ ಕೈಗೆ ಸಿಕ್ಕಿದ್ದನ್ನ ಬಳಸಿದ. ಅದಕ್ಕೆ ಯೆಹೋವ ಅವನನ್ನ ಗೆಲ್ಲಿಸಿದನು.
6. ನೇಮಕಗಳನ್ನ ಮಾಡೋ ವಿಷ್ಯದಲ್ಲಿ ನಾವು ಸಂಸೋನನಿಂದ ಏನು ಕಲಿಬಹುದು?
6 ನಮ್ಮ ನೇಮಕಗಳನ್ನ ಚೆನ್ನಾಗಿ ಮಾಡೋಕೂ ಯೆಹೋವ ಬಲ ಕೊಡ್ತಾನೆ. ಕೆಲವು ನೇಮಕಗಳನ್ನ ಮಾಡೋಕೆ ನಮಗೆ ತುಂಬ ಕಷ್ಟ ಅಂತ ಅನಿಸಬಹುದು. ಆದ್ರೆ ನಮಗೇ ಗೊತ್ತಿಲ್ಲದೆ ಯೆಹೋವ ಅವನ್ನ ನಮ್ಮಿಂದ ಮಾಡಿಸ್ತಾನೆ. ಅದನ್ನ ನೋಡಿದಾಗ ನಮಗೇ ಆಶ್ಚರ್ಯ ಆಗುತ್ತೆ. ನಾವು ಎಲ್ಲಿವರೆಗೂ ಯೆಹೋವನ ಮೇಲೆ ನಂಬಿಕೆ ಇಡ್ತೀವೋ ಅಲ್ಲಿವರೆಗೂ ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ ಅನ್ನೋದನ್ನ ಯಾವಾಗ್ಲೂ ಮನಸ್ಸಲ್ಲಿಡಿ. ಸಂಸೋನನಿಗೆ ಯೆಹೋವ ಬಲ ಕೊಡಲಿಲ್ವಾ? ಅದೇ ತರ ನಿಮಗೂ ಬಲ ಕೊಟ್ಟೇ ಕೊಡ್ತಾನೆ.—ಜ್ಞಾನೋ. 16:3.
7. ನಮ್ಮಿಷ್ಟಕ್ಕಿಂತ ಯೆಹೋವನ ಇಷ್ಟ ಏನು ಅಂತ ತಿಳ್ಕೊಳ್ಳೋದು ಮುಖ್ಯ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.
7 ಕಟ್ಟಡ ನಿರ್ಮಾಣ ಕೆಲಸ ಮಾಡ್ತಿರೋ ತುಂಬ ಸಹೋದರ ಸಹೋದರಿಯರು ಯೆಹೋವನ ಮೇಲೆ ನಂಬಿಕೆ ಇದೆ ಅಂತ ತೋರಿಸಿದ್ದಾರೆ. ಈ ಮುಂಚೆ ಸಂಘಟನೆ ಹೊಸ ರಾಜ್ಯ ಸಭಾಗೃಹಗಳನ್ನ ಮತ್ತು ಬೇರೆ ಕಟ್ಟಡಗಳನ್ನ ಅವ್ರೇ ಡಿಸೈನ್ ಮಾಡಿ ಕಟ್ತಿದ್ರು. ಸಮಯ ಹೋದ ಹಾಗೆ ತುಂಬ ಜನ ದೀಕ್ಷಾಸ್ನಾನ ಪಡ್ಕೊಂಡು ಸಂಘಟನೆಗೆ ಬರ್ತಾ ಇದ್ದಿದ್ರಿಂದ ಇಂಥ ಕಟ್ಟಡಗಳ ಅಗತ್ಯ ಜಾಸ್ತಿ ಬಿತ್ತು. ಆಗ ಸಹೋದರರು ಯೆಹೋವ ದೇವರ ಮಾರ್ಗದರ್ಶನಕ್ಕೋಸ್ಕರ ಪ್ರಾರ್ಥನೆ ಮಾಡಿ ಹೊಸ ವಿಧಾನವನ್ನ ಪ್ರಯತ್ನಿಸಿದ್ರು. ಅದೇನಂದ್ರೆ ಈಗಾಗ್ಲೇ ಕಟ್ಟಿರೋ ಕಟ್ಟಡಗಳನ್ನ ಖರೀದಿ ಮಾಡಿ ಅದನ್ನ ಅವಶ್ಯಕತೆಗೆ ತಕ್ಕ ಹಾಗೆ ಬದಲಾವಣೆ ಮಾಡ್ಕೊಳ್ಳೋದು. ಈ ವಿಧಾನದ ಬಗ್ಗೆ ಸಹೋದರ ರಾಬರ್ಟ್ ಏನು ಹೇಳ್ತಾರೆ ನೋಡಿ. ಅವರು ತುಂಬ ಕಡೆ ಇಂಥ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಹೇಳೋದು: “ಇಲ್ಲಿ ತನಕ ನಾವೇ ಕಟ್ಟಡಗಳನ್ನ ಡಿಸೈನ್ ಮಾಡಿ ಕಟ್ತಾ ಇದ್ದಿದ್ರಿಂದ ಈ ಹೊಸ ವಿಧಾನವನ್ನ ಒಪ್ಕೊಳ್ಳೋಕೆ ಕೆಲವ್ರಿಗೆ ಕಷ್ಟ ಆಯ್ತು. ಆದ್ರೂ ಅವರು ಈ ಬದಲಾವಣೆಗೆ ಹೊಂದ್ಕೊಂಡ್ರು. ಈ ಹೊಸ ವಿಧಾನವನ್ನ ಯೆಹೋವ ಆಶೀರ್ವಾದ ಮಾಡಿದ್ದನ್ನ ಕಣ್ಣಾರೆ ನೋಡಿದ್ರು.” ತನ್ನ ಇಷ್ಟದ ಪ್ರಕಾರ ನಡಿಯೋಕೆ ತನ್ನ ಜನ್ರನ್ನ ಯೆಹೋವ ಮಾರ್ಗದರ್ಶಿಸ್ತಾನೆ ಅನ್ನೋದಕ್ಕೆ ಇದು ಒಂದು ಉದಾಹರಣೆ ಅಷ್ಟೆ. ನಾವು ಕೂಡ ಆಗಾಗ ‘ನಾನೇನು ಮಾಡಬೇಕು, ಹೇಗೆ ಮಾಡಬೇಕು ಅಂತ ಯೆಹೋವನ ಹತ್ರ ಕೇಳ್ತೀನಾ? ನನ್ನ ನೇಮಕನ ಚೆನ್ನಾಗಿ ಮಾಡೋಕೆ ಬೇಕಾದ ಹೊಂದಾಣಿಕೆಗಳನ್ನ ಮಾಡ್ಕೊಳ್ತೀನಾ?’ ಅಂತ ಕೇಳ್ಕೊಬೇಕು.
ಯೆಹೋವ ಕೊಟ್ಟ ಸಹಾಯನ ಸಂಸೋನ ಪಡ್ಕೊಂಡ
8. ಒಮ್ಮೆ ಸಂಸೋನನಿಗೆ ತುಂಬ ಬಾಯಾರಿಕೆ ಆದಾಗ ಅವನು ಏನು ಮಾಡಿದ?
8 ಸಂಸೋನ ಮಾಡಿರೋ ಬೇರೆ ಸಾಹಸಗಳ ಬಗ್ಗೆ ನೀವು ಓದಿರಬಹುದು. ಒಮ್ಮೆ ಅವನು ಬರಿಗೈಯಲ್ಲಿ ಒಂದು ಸಿಂಹವನ್ನ ಸೀಳಿಹಾಕಿದ. ಆಮೇಲೆ ಅಷ್ಕೆಲೋನ್ ಅನ್ನೋ ಪಟ್ಟಣಕ್ಕೆ ಹೋಗಿ 30 ಜನ್ರನ್ನ ಕೊಂದುಹಾಕಿದ. (ನ್ಯಾಯ. 14:5, 6, 19) ಇದೆಲ್ಲ ಯೆಹೋವನ ಸಹಾಯ ಇಲ್ಲದಿದ್ರೆ ಮಾಡೋಕೆ ಆಗ್ತಾ ಇರಲಿಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಒಂದು ಸಲ ಅವನು 1,000 ಜನ್ರನ್ನ ಕೊಂದುಹಾಕಿದ ಮೇಲೆ ಅವನಿಗೆ ತುಂಬ ಬಾಯಾರಿಕೆ ಆಯ್ತು. ಆಗ ಅವನು ಏನು ಮಾಡಿದ? ‘ನೀರಿಗೋಸ್ಕರ ನಾನೇ ಏನಾದ್ರೂ ಮಾಡ್ತೀನಿ’ ಅಂತ ಅವನು ಅಂದ್ಕೊಳ್ಳಲಿಲ್ಲ. ಯೆಹೋವನ ಸಹಾಯ ಬೇಡ್ಕೊಂಡ.—ನ್ಯಾಯ. 15:18.
9. ಸಂಸೋನ ಮಾಡಿದ ಪ್ರಾರ್ಥನೆಗೆ ಯೆಹೋವ ಹೇಗೆ ಉತ್ರ ಕೊಟ್ಟನು? (ನ್ಯಾಯಸ್ಥಾಪಕರು 15:19)
9 ಸಂಸೋನ ಮಾಡಿದ ಪ್ರಾರ್ಥನೆಗೆ ಯೆಹೋವ ಅದ್ಭುತವಾಗಿ ಉತ್ರ ಕೊಟ್ಟನು. ಅವನಿಗೋಸ್ಕರ ನೀರಿನ ಬುಗ್ಗೆ ಹುಟ್ಟೋ ತರ ಮಾಡಿದನು. “ಆ ನೀರು ಕುಡಿದಾಗ ಅವನಿಗೆ ಮತ್ತೆ ಶಕ್ತಿ ಬಂತು, ಚೈತನ್ಯ ಪಡ್ಕೊಂಡ.” (ನ್ಯಾಯಸ್ಥಾಪಕರು 15:19 ಓದಿ.) ಇದಾಗಿ ಸುಮಾರು ವರ್ಷ ಆದ್ಮೇಲೂ ಆ ನೀರಿನ ಬುಗ್ಗೆ ಇತ್ತು ಅಂತ ಸಮುವೇಲ ಬರೆದಿರೋ ನ್ಯಾಯಸ್ಥಾಪಕರು ಪುಸ್ತಕದಿಂದ ಗೊತ್ತಾಗುತ್ತೆ. ಹರೀತಾ ಇದ್ದ ಆ ನೀರನ್ನ ನೋಡಿದಾಗೆಲ್ಲ ಇಸ್ರಾಯೇಲ್ಯರಿಗೆ ಏನು ನೆನಪಾಗ್ತಿತ್ತು? ಕಷ್ಟ ಬಂದಾಗೆಲ್ಲ ಯೆಹೋವನನ್ನ ನಂಬಿದ್ರೆ ಆತನು ಸಹಾಯ ಮಾಡೇ ಮಾಡ್ತಾನೆ ಅನ್ನೋದನ್ನ ಅದು ನೆನಪಿಸ್ತಿತ್ತು.
10. ಯೆಹೋವ ದೇವರು ಕೊಡೋ ಸಹಾಯನ ಪಡ್ಕೊಳ್ಳೋಕೆ ನಾವು ಏನು ಮಾಡಬೇಕು? (ಚಿತ್ರನೂ ನೋಡಿ.)
10 ನಮಗೆ ಎಷ್ಟೇ ಕೌಶಲ ಇದ್ರೂ ಸಾಮರ್ಥ್ಯ ಇದ್ರೂ, ನಾವೇನೇ ಸಾಧಿಸಿದ್ರೂ ನಮಗೆ ಯೆಹೋವನ ಸಹಾಯ ಬೇಕೇ ಬೇಕು ಅಂತ ಅರ್ಥ ಮಾಡ್ಕೊಬೇಕು. ಯೆಹೋವ ದೇವರು ಸಹಾಯ ಮಾಡಿದ್ರೆ ಮಾತ್ರ ನಿಜವಾದ ಯಶಸ್ಸು ಸಿಗುತ್ತೆ ಅನ್ನೋದನ್ನ ಒಪ್ಕೊಬೇಕು. ಆತನು ಕೊಟ್ಟ ನೀರನ್ನ ಕುಡಿದ ಮೇಲೆನೇ ಸಂಸೋನನಿಗೆ ಬಲ ಸಿಕ್ತು. ಅದೇ ತರ ಯೆಹೋವ ನಮಗೆ ಏನೆಲ್ಲಾ ಕೊಟ್ಟು ಸಹಾಯ ಮಾಡ್ತಿದ್ದಾನೋ ಅದ್ರ ಸಂಪೂರ್ಣ ಪ್ರಯೋಜನ ಪಡ್ಕೊಂಡ್ರೆನೇ ನಮ್ಮ ನಂಬಿಕೆ ಜಾಸ್ತಿ ಆಗುತ್ತೆ.—ಮತ್ತಾ. 11:28.
11. ಯೆಹೋವನ ಮೇಲೆ ನಂಬಿಕೆ ಇದೆ ಅಂತ ನಾವು ಹೇಗೆ ತೋರಿಸಬೇಕು? ಉದಾಹರಣೆ ಕೊಡಿ.
11 ಸಹೋದರ ಅಲೆಕ್ಸಿ ಅವ್ರ ಉದಾಹರಣೆ ನೋಡಿ. ರಷ್ಯಾದಲ್ಲಿ ಹಿಂಸೆ ಅನುಭವಿಸ್ತಿರೋ ಸಹೋದರರಲ್ಲಿ ಇವರೂ ಒಬ್ರು. ಇಷ್ಟೆಲ್ಲ ಕಷ್ಟ ಇದ್ರೂ ಯೆಹೋವನ ಮೇಲೆ ಅವ್ರಿಗೆ ನಂಬಿಕೆ ಒಂಚೂರು ಕಮ್ಮಿ ಆಗ್ಲಿಲ್ಲ. ಯಾಕಂದ್ರೆ “ಪ್ರತಿದಿನ ಬೈಬಲನ್ನ ಓದಿ ಅಧ್ಯಯನ ಮಾಡೋದನ್ನ ನಾನು ತಪ್ಪಿಸೋದೇ ಇಲ್ಲ. ದಿನಾ ಬೆಳಿಗ್ಗೆ ನಾನೂ ನನ್ನ ಹೆಂಡ್ತಿ ದಿನವಚನ ಓದಿ ಚರ್ಚೆ ಮಾಡ್ತೀವಿ. ಇಬ್ರೂ ಒಟ್ಟಿಗೆ ಸೇರಿ ಪ್ರಾರ್ಥನೆ ಮಾಡ್ತೀವಿ” ಅಂತ ಅವರು ಹೇಳ್ತಾರೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ‘ಕಷ್ಟ ಬಂದಾಗ ನಾನದನ್ನ ಹೇಗಾದ್ರು ಮಾಡಿ ಸಹಿಸ್ಕೊಳ್ತೀನಿ’ ಅಂತ ನಾವು ಯೋಚ್ನೆ ಮಾಡೋ ಬದ್ಲು ಯೆಹೋವನ ಹತ್ರ ಸಹಾಯ ಕೇಳಬೇಕು. ಹೇಗೆ? ನಾವು ಪ್ರತಿದಿನ ಬೈಬಲ್ ಓದಬೇಕು, ಪ್ರಾರ್ಥನೆ ಮಾಡಬೇಕು, ಕೂಟಗಳಿಗೆ ಹೋಗಬೇಕು, ಸೇವೆ ಮಾಡಬೇಕು. ಇದನ್ನ ತಪ್ಪಿಸಬಾರದು. ಈ ರೀತಿ ನಾವು ಯೆಹೋವನ ಮೇಲಿರೋ ನಂಬಿಕೆನ ತೋರಿಸಬೇಕು. ಆಗ ನಮ್ಮ ಪ್ರಯತ್ನ ನೋಡಿ ಯೆಹೋವ ದೇವರೂ ಆಶೀರ್ವದಿಸ್ತಾನೆ. ಸಂಸೋನನಿಗೆ ಬಲ ಕೊಟ್ಟ ತರ ನಮಗೂ ಬಲ ಕೊಡ್ತಾನೆ.
ಸಂಸೋನ ಸೋತು ಹೋಗಲಿಲ್ಲ
12. (ಎ) ಸಂಸೋನ ಯಾವ ತಪ್ಪಾದ ನಿರ್ಧಾರ ಮಾಡಿದ? (ಬಿ) ಆ ನಿರ್ಧಾರ ತಪ್ಪಾಗಿತ್ತು ಅಂತ ನಾವು ಹೇಗೆ ಹೇಳಬಹುದು?
12 ಸಂಸೋನನಿಗೂ ನಮ್ಮ ತರ ತಪ್ಪು ಮಾಡೋ ಸ್ವಭಾವ ಇತ್ತು. ಅದಕ್ಕೆ ಕೆಲವೊಮ್ಮೆ ಅವನು ತಪ್ಪಾದ ನಿರ್ಧಾರ ತಗೊಂಡ. ಅದ್ರಲ್ಲಿ ಒಂದು ನಿರ್ಧಾರ ಅಂತೂ ಅವನು ತುಂಬ ಕಷ್ಟ ಅನುಭವಿಸೋ ತರ ಮಾಡಿಬಿಡ್ತು. ಅವನು ನ್ಯಾಯಾಧೀಶನಾಗಿ ಸ್ವಲ್ಪ ಸಮಯ ಆದ್ಮೇಲೆ “ಸೋರೇಕ್ ಕಣಿವೆಯಲ್ಲಿದ್ದ ಒಬ್ಬ ಹುಡುಗಿನ ಪ್ರೀತಿಸಿದ. ಅವಳ ಹೆಸ್ರು ದೆಲೀಲ.” (ನ್ಯಾಯ. 16:4) ಇದು ತಪ್ಪಾದ ನಿರ್ಧಾರ ಅಂತ ಹೇಗೆ ಹೇಳಬಹುದು? ಸಂಸೋನನಿಗೆ ಇದಕ್ಕಿಂತ ಮುಂಚೆ ಒಬ್ಬ ಫಿಲಿಷ್ಟಿಯ ಹುಡುಗಿ ಜೊತೆ ನಿಶ್ಚಿತಾರ್ಥ ಆಗಿತ್ತು. “ಇದ್ರ ಹಿಂದೆ ಯೆಹೋವನ ಕೈ” ಇತ್ತು. ಅದನ್ನ ಯೆಹೋವ ‘ಫಿಲಿಷ್ಟಿಯರ ವಿರುದ್ಧ ಹೋರಾಡೋಕೆ ಒಂದು ಒಳ್ಳೇ ಅವಕಾಶವಾಗಿ ನೋಡಿದನು.’ ಆಮೇಲೆ ಸಂಸೋನ ಫಿಲಿಷ್ಟಿಯರ ಗಾಜಾ ಪಟ್ಟಣದಲ್ಲಿ ಒಬ್ಬ ವೇಶ್ಯೆಯ ಮನೇಲಿ ಉಳ್ಕೊಂಡ. ಯೆಹೋವ ಸಂಸೋನನಿಗೆ ಶಕ್ತಿ ಕೊಟ್ಟನು. ಇದ್ರಿಂದ ಸಂಸೋನ ಹೋಗಿ ಆ ಪಟ್ಟಣದ ಬಾಗಿಲುಗಳನ್ನ ಕಿತ್ತು ಹೊತ್ಕೊಂಡು ಹೋದ. ಆ ಪಟ್ಟಣದ ಭದ್ರತೆಯನ್ನೇ ಅಲುಗಾಡಿಸಿಬಿಟ್ಟ. (ನ್ಯಾಯ. 14:1-4; 16:1-3) ಆದ್ರೆ ದೆಲೀಲ ವಿಷ್ಯದಲ್ಲಿ ಈ ತರ ಅವಕಾಶ ಸಿಗಲಿಲ್ಲ. ಯಾಕಂದ್ರೆ ಅವಳು ಇಸ್ರಾಯೇಲ್ಯ ಹುಡುಗಿ ಆಗಿದ್ದಿರಬೇಕು.
13. ದೆಲೀಲ ಸಂಸೋನನಿಗೆ ಏನು ಮಾಡಿದಳು?
13 ದೆಲೀಲ ಸಂಸೋನನಿಗೆ ಮೋಸ ಮಾಡೋಕೆ ಫಿಲಿಷ್ಟಿಯರಿಂದ ತುಂಬ ದುಡ್ಡು ತಗೊಂಡಳು. ಅದಕ್ಕೆ ಅವಳು ಸಂಸೋನನ ಶಕ್ತಿಗೆ ಕಾರಣ ಏನು ಅಂತ ಮತ್ತೆ ಮತ್ತೆ ಕೇಳ್ತಾ ಅವನ ಪ್ರಾಣ ತಿಂತಿದ್ದಳು. ಈ ಮೋಸದ ಬಗ್ಗೆ ಸಂಸೋನನಿಗೆ ಗೊತ್ತೇ ಆಗ್ಲಿಲ್ವಾ? ಅವನು ಪ್ರೀತೀಲಿ ಕುರುಡಾಗಿ ಬಿಟ್ಟಿದ್ನಾ? ಅವನು ಅವಳನ್ನ ಅಷ್ಟು ನಂಬಿಬಿಟ್ಟಿದ್ನಾ? ಏನೇ ವಿಷ್ಯ ಇದ್ರೂ ಅವಳ ಕಾಟ ತಡೆಯಕ್ಕಾಗದೆ ಸಂಸೋನ ನಿಜ ಏನಂತ ಹೇಳಿಬಿಟ್ಟ. ಇದ್ರಿಂದ ಅವನು ಶಕ್ತಿನ ಕಳ್ಕೊಂಡಿದ್ದಷ್ಟೇ ಅಲ್ಲ, ಸ್ವಲ್ಪ ಸಮಯದ ತನಕ ಯೆಹೋವ ದೇವರ ಆಶೀರ್ವಾದನೂ ಕಳ್ಕೊಂಡುಬಿಟ್ಟ. ಅವನಿಗೆ ಇಂಥ ಪರಿಸ್ಥಿತಿ ಬರೋಕೆ ಅವನೇ ಕಾರಣ ಆಗಿಬಿಟ್ಟ.—ನ್ಯಾಯ. 16:16-20.
14. ಸಂಸೋನ ದೆಲೀಲನ ನಂಬಿದ್ರಿಂದ ಏನೆಲ್ಲ ಕಷ್ಟ ಅನುಭವಿಸಬೇಕಾಗಿ ಬಂತು?
14 ಸಂಸೋನ ಯೆಹೋವನನ್ನ ನಂಬದೇ ದೆಲೀಲನ ನಂಬಿದ್ರಿಂದ ತುಂಬ ಕಷ್ಟಗಳನ್ನ ಅನುಭವಿಸಬೇಕಾಯ್ತು. ಫಿಲಿಷ್ಟಿಯರು ಅವನನ್ನ ಬಂಧಿಸಿದ್ರು, ಅವನ ಕಣ್ಣು ಕಿತ್ತುಹಾಕಿದ್ರು. ಆಮೇಲೆ ಅವನನ್ನ ಗಾಜಾದಲ್ಲಿ ಜೈಲಿಗೆ ಹಾಕಿ ಧಾನ್ಯ ಬೀಸೋ ಕೆಲಸ ಕೊಟ್ರು. ಸ್ವಲ್ಪ ದಿನಗಳ ಹಿಂದೆ ಸಂಸೋನ ಫಿಲಿಷ್ಟಿಯರನ್ನ ಅವಮಾನ ಮಾಡ್ತಿದ್ದ. ಈಗ ಅವ್ರೆಲ್ಲ ಸೇರ್ಕೊಂಡು ಸಂಸೋನನನ್ನ ಅವಮಾನ ಮಾಡಿದ್ರು. ಫಿಲಿಷ್ಟಿಯರು ತಮ್ಮ ದೇವರಾದ ದಾಗೋನನೇ ಸಂಸೋನನನ್ನ ತಮ್ಮ ಕೈಗೆ ಒಪ್ಪಿಸಿದ್ದಾನೆ ಅಂದ್ಕೊಂಡ್ರು. ಅದಕ್ಕೆ ತಮ್ಮ ದೇವರುಗಳಿಗೆ ತುಂಬ ಬಲಿಗಳನ್ನ ಕೊಟ್ರು. ಒಂದು ದೊಡ್ಡ ಹಬ್ಬನೇ ಮಾಡಿದ್ರು. ಅವರು ಮೋಜು-ಮಸ್ತಿ ಮಾಡ್ತಿದ್ದಾಗ ಸಂಸೋನನನ್ನ ಅಲ್ಲಿಗೆ ಕರ್ಕೊಂಡು ಬಂದ್ರು. ಅವನಿಗೆ ಕಾಟ ಕೊಟ್ಟು “ಸ್ವಲ್ಪ ಮಜಾ ನೋಡ್ಬೇಕು” ಅಂದ್ಕೊಂಡ್ರು.—ನ್ಯಾಯ. 16:21-25.
15. ಸಂಸೋನ ಯೆಹೋವನ ಮೇಲೆ ನಂಬಿಕೆ ಕಳ್ಕೊಂಡ್ನಾ? ವಿವರಿಸಿ. (ನ್ಯಾಯಸ್ಥಾಪಕರು 16:28-30) (ಮುಖಪುಟ ಚಿತ್ರ ನೋಡಿ.)
15 ಸಂಸೋನ ದೊಡ್ಡ ತಪ್ಪು ಮಾಡಿದ ಅನ್ನೋದೇನೋ ನಿಜ. ಹಾಗಂತ ಅವನು ಸೋತುಹೋಗಿ ಯೆಹೋವನ ಮೇಲೆ ನಂಬಿಕೆ ಕಳ್ಕೊಳ್ಳಲಿಲ್ಲ. ಫಿಲಿಷ್ಟಿಯರ ವಿರುದ್ಧ ಹೋರಾಡೋಕೆ ತನಗೆ ಸಿಕ್ಕಿರೋ ನೇಮಕನ ಅವನು ಮರೆತುಬಿಡಲಿಲ್ಲ. (ನ್ಯಾಯಸ್ಥಾಪಕರು 16:28-30 ಓದಿ.) “ಫಿಲಿಷ್ಟಿಯರ ಮೇಲೆ ಸೇಡು ತೀರಿಸೋಕೆ ಬಿಡು,” ‘ಒಂದು ಅವಕಾಶ ಕೊಡು’ ಅಂತ ಬೇಡ್ಕೊಂಡ. ಆಗ ಯೆಹೋವ ಅವನ ಪ್ರಾರ್ಥನೆಗೆ ಉತ್ರ ಕೊಟ್ಟನು. ಅವನಿಗೆ ಮತ್ತೆ ಶಕ್ತಿ ಬರೋ ತರ ಮಾಡಿದನು. ಇದ್ರಿಂದ ಸಂಸೋನ ತುಂಬ ಫಿಲಿಷ್ಟಿಯರನ್ನ ಕೊಲ್ಲಕ್ಕಾಯ್ತು. ಅವನು ಇಷ್ಟೊಂದು ಫಿಲಿಷ್ಟಿಯರನ್ನ ಯಾವತ್ತೂ ಕೊಂದಿರ್ಲಿಲ್ಲ.
16. ನಾವು ತಪ್ಪು ಮಾಡಿದ್ರೂ ಏನು ಮಾಡಬೇಕು ಅಂತ ಸಂಸೋನನಿಂದ ಕಲಿತೀವಿ?
16 ಸಂಸೋನ ತನ್ನ ತಪ್ಪಿನ ಪರಿಣಾಮಗಳನ್ನ ಅನುಭವಿಸಬೇಕಾಗಿ ಬಂದ್ರೂ ಯೆಹೋವನಿಗೆ ಏನಿಷ್ಟನೋ ಅದನ್ನ ಮಾಡೋಕೆ ಪ್ರಯತ್ನ ಮಾಡ್ತಾ ಇದ್ದ. ನಾವು ಅವನ ತರ ಇರಬೇಕು. ನಾವು ಏನಾದ್ರೂ ತಪ್ಪು ಮಾಡಿದ್ರೆ ಶಿಸ್ತು ಸಿಗಬಹುದು ಅಥವಾ ನಮಗೆ ಇರೋ ಸುಯೋಗನ ಕಳ್ಕೊಬಹುದು. ಆಗ ನಾವು ಸೋತು ಹೋಗಬಾರದು. ಪ್ರಯತ್ನ ಮಾಡ್ತಾ ಇರಬೇಕು. ಯಾಕಂದ್ರೆ ಯೆಹೋವ ನಮ್ಮನ್ನ ಕ್ಷಮಿಸೋಕೆ ಕಾಯ್ತಾ ಇರ್ತಾನೆ. (ಕೀರ್ತ. 103:8-10) ತಪ್ಪು ಮಾಡಿದ ತಕ್ಷಣ ನಮ್ಮನ್ನ ಮೂಲೆಗುಂಪು ಮಾಡಲ್ಲ. ಆತನಿಗೆ ಇಷ್ಟ ಆಗೋದನ್ನ ಮಾಡೋಕೆ ಸಂಸೋನನಿಗೆ ಶಕ್ತಿ ಕೊಟ್ಟ ತರಾನೇ ನಮಗೂ ಶಕ್ತಿ ಕೊಡ್ತಾನೆ.
17-18. ಮೈಕಲ್ ಅನುಭವದಿಂದ ನೀವೇನು ಕಲಿತ್ರಿ? (ಚಿತ್ರನೂ ನೋಡಿ.)
17 ಮೈಕಲ್ ಅನ್ನೋ ಯುವ ಸಹೋದರನ ಅನುಭವ ನೋಡಿ. ಅವನು ಸಹಾಯಕ ಸೇವಕನಾಗಿದ್ದ, ಪಯನೀಯರ್ ಆಗಿದ್ದ. ಹೀಗೆ ಯೆಹೋವನ ಸೇವೇಲಿ ಬಿಜಿ಼ ಆಗಿದ್ದ. ಆದ್ರೆ ಅವನು ಮಾಡಿದ ಒಂದು ತಪ್ಪಿಂದ ಸಭೆಯಲ್ಲಿದ್ದ ಸುಯೋಗಗಳನ್ನ ಕಳ್ಕೊಂಡ. ಅವನು ಹೇಳೋದು, “ನಾನು ಸಭೇಲಿ ಎಲ್ಲಾನೂ ಸೂಪರಾಗಿ ಮಾಡ್ತಿದ್ದೆ. ಆದ್ರೆ ಇದ್ದಕ್ಕಿದ್ದ ಹಾಗೆ ಎಲ್ಲಾ ತಲೆಕೆಳಗಾಗಿ ಹೋಯ್ತು. ನನ್ನಿಂದ ಮತ್ತೆ ಯೆಹೋವನ ಸೇವೆ ಮಾಡೋಕೆ ಆಗಲ್ವೇನೋ ಅಂತ ಅನಿಸಿಬಿಡ್ತು. ಯೆಹೋವ ದೇವರು ನನ್ನ ಕೈಬಿಡಲ್ಲ ಅಂತ ನಂಗೊತ್ತಿತ್ತು. ಆದ್ರೆ ನನ್ನ ಬಗ್ಗೆನೇ ನಂಗೆ ಸಂಶಯ ಇತ್ತು. ನಾನು ಯೆಹೋವನ ಜೊತೆ ಮತ್ತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ಳೋಕೆ ಆಗುತ್ತಾ, ಮುಂಚಿನ ತರಾನೇ ಸಭೇಲಿ ಮತ್ತೆ ಸೇವೆ ಮಾಡಕ್ಕಾಗುತ್ತಾ ಅನ್ನೋದು ನನ್ನ ಮನಸ್ಸನ್ನ ಯಾವಾಗ್ಲೂ ಕೊರೀತಾ ಇತ್ತು.”
18 ಆದ್ರೆ ಖುಷಿ ವಿಚಾರ ಏನಂದ್ರೆ ಮೈಕಲ್ ಸೋತು ಹೋಗಲಿಲ್ಲ. “ಯೆಹೋವನ ಜೊತೆ ನನಗಿರೋ ಸಂಬಂಧನ ಸರಿ ಮಾಡ್ಕೊಳ್ಳೋದ್ರ ಕಡೆಗೆ ಗಮನ ಕೊಟ್ಟೆ. ಯೆಹೋವನ ಹತ್ರ ಮನಸ್ಸುಬಿಚ್ಚಿ ಎಲ್ಲಾ ಹೇಳ್ಕೊಳ್ತಿದ್ದೆ. ಬೈಬಲ್ ಓದಿ ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡ್ತಿದ್ದೆ. ಯೆಹೋವ ನನ್ನನ್ನ ಈಗ್ಲೂ ಪ್ರೀತಿಸ್ತಾನೆ ಅಂತ ಹಿರಿಯರು ನಂಗೆ ಅರ್ಥ ಮಾಡಿಸಿದ್ರು. ಅವರು ಕೊಟ್ಟ ಬೆಂಬಲ ಮತ್ತು ಪ್ರೋತ್ಸಾಹ ನಂಗೆ ತುಂಬ ಸಹಾಯ ಮಾಡ್ತು” ಅಂತ ಅವನು ಹೇಳ್ತಾನೆ. ಸ್ವಲ್ಪ ಸಮಯ ಆದ್ಮೇಲೆ ಮೈಕಲ್‌ಗೆ ಸಭೆಯಲ್ಲಿ ಸುಯೋಗಗಳು ಮತ್ತೆ ಸಿಕ್ತು. ಅವನು ಈಗ ಹಿರಿಯನಾಗಿ, ಪಯನೀಯರ್ ಆಗಿ ಸೇವೆ ಮಾಡ್ತಿದ್ದಾನೆ. “ನಂಗೆ ಈಗ ಒಳ್ಳೇ ಮನಸ್ಸಾಕ್ಷಿಯಿಂದ ಸಭೇಲಿ ಸೇವೆ ಮಾಡಕ್ಕಾಗ್ತಿದೆ. ನಿಜವಾಗ್ಲೂ ಪಶ್ಚಾತ್ತಾಪಪಟ್ರೆ ಯೆಹೋವ ದೇವರು ಯಾರನ್ನ ಬೇಕಾದ್ರೂ ಕ್ಷಮಿಸ್ತಾನೆ ಅಂತ ನನಗಾಗಿರೋ ಅನುಭವದಿಂದ ಕಲ್ತಿದ್ದೀನಿ” ಅಂತ ಮೈಕಲ್ ಹೇಳ್ತಾರೆ. ನಾವು ಒಂದು ತಪ್ಪು ಮಾಡಿದ್ರೆ ಸೋತು ಹೋಗಬಾರದು. ಪ್ರಯತ್ನ ಬಿಟ್ಟುಬಿಡಬಾರದು. ನಾವು ತಿದ್ಕೊಂಡ್ರೆ, ಯೆಹೋವನ ಮೇಲೆ ನಂಬಿಕೆ ಕಳ್ಕೊಳ್ಳದೆ ಇದ್ರೆ ಆತನ ಸೇವೆ ಮಾಡೋಕೆ ಮತ್ತೆ ನಮಗೆ ಅವಕಾಶ ಕೊಡ್ತಾನೆ. ನಮ್ಮನ್ನ ಆಶೀರ್ವದಿಸ್ತಾನೆ.—ಕೀರ್ತ. 86:5; ಜ್ಞಾನೋ. 28:13.
19. ಸಂಸೋನನ ಕಥೆ ನಿಮಗೆ ಹೇಗೆ ಬಲ ತುಂಬ್ತು?
19 ಈ ಲೇಖನದಲ್ಲಿ, ಸಂಸೋನನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನ ನೋಡಿದ್ವಿ. ಅವನಿಂದ ಕೂಡ ಕೆಲವು ತಪ್ಪುಗಳಾಯ್ತು. ಆದ್ರೆ ಅವನು ಸೋತು ಹೋಗಲಿಲ್ಲ. ಯೆಹೋವನಿಗೆ ಏನಿಷ್ಟನೋ ಅದನ್ನ ಮಾಡೋಕೆ ಪ್ರಯತ್ನ ಮಾಡ್ತಾನೇ ಇದ್ದ. ಯೆಹೋವ ದೇವರು ಕೂಡ ಅವನನ್ನ ಕ್ಷಮಿಸಿದನು, ಅವನಿಗೆ ಶಕ್ತಿ ಕೊಟ್ಟನು. ಯಾಕಂದ್ರೆ ಯೆಹೋವ ಅವನಲ್ಲಿದ್ದ ನಂಬಿಕೆಯನ್ನ ನೋಡಿದನು. ಅದಕ್ಕೆ ಇಬ್ರಿಯ 11ನೇ ಅಧ್ಯಾಯದಲ್ಲಿ ಇರೋ ನಂಬಿಗಸ್ತರ ಪಟ್ಟಿಯಲ್ಲಿ ಅವನ ಹೆಸ್ರನ್ನೂ ಸೇರಿಸಿದ್ದಾನೆ. ನಮಗೆ ಕಷ್ಟಗಳು ಬಂದಾಗ, ಸಹಾಯ ಬೇಕಿದ್ದಾಗ ಬಲ ತುಂಬೋಕೆ ಯೆಹೋವ ಕಾಯ್ತಾ ಇರ್ತಾನೆ. ಅಂಥ ಒಳ್ಳೇ ಅಪ್ಪನನ್ನ ಆರಾಧನೆ ಮಾಡೋಕೆ ನಮಗೆ ಎಷ್ಟು ಖುಷಿ ಆಗುತ್ತೆ ಅಲ್ವಾ? ಹಾಗಾಗಿ ಸಂಸೋನನ ತರ ನಾವು “ದಯವಿಟ್ಟು ನನ್ನನ್ನ ನೆನಪಿಸ್ಕೊ . . . ನನಗೆ ಶಕ್ತಿ ಕೊಡು” ಅಂತ ಯೆಹೋವನ ಹತ್ರ ಯಾವಾಗ್ಲೂ ಬೇಡ್ಕೊಳ್ತಾ ಇರೋಣ.—ನ್ಯಾಯ. 16:28.
ಗೀತೆ 152 ಯೆಹೋವ ನೀನೇ ಆಶ್ರಯ
a ಸಂಸೋನನ ಬಗ್ಗೆ ತುಂಬ ಜನ್ರಿಗೆ ಗೊತ್ತು. ಬೈಬಲನ್ನ ಓದದೇ ಇರೋರಿಗೂ ಅವನ ಬಗ್ಗೆ ಗೊತ್ತು. ಅವನ ಕಥೆಯನ್ನ ಬಳಸ್ಕೊಂಡು ತುಂಬ ನಾಟಕಗಳನ್ನ, ಹಾಡುಗಳನ್ನ ಬರೆದಿದ್ದಾರೆ. ಚಲನಚಿತ್ರಗಳನ್ನೂ ಮಾಡಿದ್ದಾರೆ. ಅವನ ಕಥೆ ಬರೀ ಕಟ್ಟುಕಥೆ ಅಲ್ಲ. ಅವನು ತೋರಿಸಿರೋ ನಂಬಿಕೆಯಿಂದ ನಾವೆಲ್ರೂ ಪಾಠ ಕಲಿಬಹುದು.