ಜೀವನ ಕಥೆ
ಯೆಹೋವನ ಬಗ್ಗೆ ಕಲಿತಾ, ಕಲಿಸ್ತಾ ಖುಷಿಯಾಗಿದ್ದೆ
ಅಮೆರಿಕದಲ್ಲಿರೋ ಪೆನ್ಸಿಲ್ವೇನಿಯದ ಈಸ್ಟನ್ ನಗರದಲ್ಲಿ ನಾನು ಬೆಳೆದೆ. ಚಿಕ್ಕ ವಯಸ್ಸಿಂದನೇ ದೊಡ್ಡ ಯೂನಿವರ್ಸಿಟಿಯಲ್ಲಿ ಓದಬೇಕು, ದೊಡ್ಡ ವ್ಯಕ್ತಿಯಾಗಬೇಕು ಅನ್ನೋದು ನನ್ನ ಆಸೆಯಾಗಿತ್ತು. ವಿಜ್ಞಾನ ಮತ್ತು ಗಣಿತ ಅಂದ್ರೆ ನನಗೆ ತುಂಬ ಇಷ್ಟ. ಕಪ್ಪು ಮೈಬಣ್ಣದ ವಿದ್ಯಾರ್ಥಿಗಳಲ್ಲಿ ಎಲ್ರಿಗಿಂತ ನಾನು ಹೆಚ್ಚು ಅಂಕ ಗಳಿಸಿದ್ರಿಂದ 1956ರಲ್ಲಿ ಮಾನವ ಹಕ್ಕುಗಳ ಸಂಸ್ಥೆ ನನಗೆ 25 ಡಾಲರ್ ಬಹುಮಾನ ಕೊಟ್ರು. ಆದ್ರೆ ಆಮೇಲೆ ನನ್ನ ಜೀವನದ ಗುರಿ ಬದಲಾಯ್ತು. ಯಾಕೆ ಅಂತ ಹೇಳ್ತೀನಿ ಬನ್ನಿ.
ನಾನು ಯೆಹೋವನ ಬಗ್ಗೆ ಕಲಿತೆ
1940ರಲ್ಲಿ ಅಪ್ಪ ಅಮ್ಮ, ಯೆಹೋವನ ಸಾಕ್ಷಿಗಳ ಜೊತೆ ಬೈಬಲ್ ಅಧ್ಯಯನ ಮಾಡ್ತಿದ್ರು. ಸ್ವಲ್ಪ ದಿನಗಳಾದ ಮೇಲೆ ನಿಲ್ಲಿಸಿಬಿಟ್ರು. ಆದ್ರೆ ಅಮ್ಮ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನ ಪ್ರತಿ ತಿಂಗಳು ತಗೊಳ್ತಿದ್ರು. 1950ರಂದು ನ್ಯೂಯಾರ್ಕ್ ನಗರದಲ್ಲಿ ಒಂದು ಅಂತರಾಷ್ಟ್ರೀಯ ಅಧಿವೇಶನ ನಡಿತು. ನಮ್ಮ ಮನೆಯವರೆಲ್ಲ ಅಲ್ಲಿಗೆ ಹೋದ್ವಿ.
ಸ್ವಲ್ಪ ದಿನಗಳಾದ ಮೇಲೆ ಸಹೋದರ ಲಾರೆನ್ಸ್ ಜೆಫ್ರಿಯವರು ನಮ್ಮ ಮನೆಗೆ ಬರೋಕೆ ಶುರು ಮಾಡಿದ್ರು. ನನಗೆ ಬೈಬಲ್ ಕಲಿಯೋಕೆ ಸಹಾಯ ಮಾಡಿದ್ರು. ಯೆಹೋವನ ಸಾಕ್ಷಿಗಳು ಮಿಲಿಟರಿಯಲ್ಲಿ ಸೇರದೆ ಇರೋದು, ರಾಜಕೀಯ ಪಕ್ಷಗಳನ್ನ ವಹಿಸದೆ ಇರೋದು ಸರಿಯಲ್ಲ ಅಂತ ನಾನು ಅವರ ಹತ್ರ ವಾದ ಮಾಡ್ತಿದ್ದೆ. “ನಮ್ಮ ದೇಶದ ಪರವಾಗಿ ಯುದ್ಧ ಮಾಡೋಕೆ ಯಾರೂ ಇಲ್ಲಾಂದ್ರೆ ಶತ್ರುಗಳಿಂದ ನಮ್ಮನ್ನ ಯಾರು ಕಾಪಾಡ್ತಾರೆ?” ಅಂತ ಕೇಳ್ತಿದ್ದೆ. ಆದ್ರೆ ಸಹೋದರ ಜೆಫ್ರಿ ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡ್ತಿದ್ರು. “ಒಂದುವೇಳೆ ಅಮೆರಿಕದಲ್ಲಿರೋ ಎಲ್ರೂ ಯೆಹೋವನ ಆರಾಧಕರಾದ್ರೆ ಶತ್ರು ಸೈನ್ಯದವರು ಅವರ ಮೇಲೆ ಯುದ್ಧಕ್ಕೆ ಬಂದಾಗ ಯೆಹೋವ ಅದನ್ನ ನೋಡಿನೂ ಕೈ ಕಟ್ಟಿಕೊಂಡಿರುತ್ತಾನೆ ಅಂತ ನಿನಗೆ ಅನ್ಸುತ್ತಾ?” ಅಂತ ನನ್ನನ್ನ ಕೇಳಿದ್ರು. ನನಗಿದ್ದ ಎಲ್ಲಾ ಪ್ರಶ್ನೆಗಳಿಗೂ ಈ ತರ ಉತ್ತರ ಕೊಟ್ಟು ನಾನು ಯೋಚನೆ ಮಾಡ್ತಿರೋದು ಸರಿಯಿಲ್ಲ ಅನ್ನೋದನ್ನ ಅರ್ಥ ಮಾಡಿಸಿದ್ರು. ಇದ್ರಿಂದ ನನಗೆ ಬೈಬಲ್ ಕಲಿಬೇಕು ಅಂತ ಅನಿಸ್ತು.
ಅಮ್ಮ ಅಟ್ಟದ ಮೇಲೆ ಇಟ್ಟಿದ್ದ ಹಳೇ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನ ಓದೋಕೆ ಶುರುಮಾಡಿದೆ. ನಾನು ಓದುತ್ತಿರೋದೆಲ್ಲ ಸತ್ಯ ಅಂತ ಗೊತ್ತಾಯ್ತು. ಹಾಗಾಗಿ ಬ್ರದರ್ ಜೆಫ್ರಿ ಜೊತೆ ಬೈಬಲ್ ಸ್ಟಡಿಗೆ ಒಪ್ಪಿಕೊಂಡೆ. ನಾನು ಎಲ್ಲ ಕೂಟಗಳಿಗೆ ಹಾಜರಾಗ್ತಿದ್ದೆ. ನಾನು ಕಲಿತಿದ್ದ ವಿಷಯಗಳು ನನಗೆ ಎಷ್ಟು ಇಷ್ಟ ಆಯಿತಂದ್ರೆ ಬೇರೆಯವರಿಗೆ ಸಿಹಿಸುದ್ದಿ ಸಾರಬೇಕು ಅಂತ ಆದಷ್ಟು ಬೇಗ ಪ್ರಚಾರಕನಾದೆ. “ಯೆಹೋವನ ಮಹಾದಿನ ಹತ್ರ ಇದೆ” ಅಂತ ಅರ್ಥ ಮಾಡಿಕೊಂಡಾಗ ನನ್ನ ಜೀವನದ ಗುರಿ ಬದಲಾಯ್ತು. (ಚೆಫ. 1:14) ಯೂನಿವರ್ಸಿಟಿಯನ್ನು ಬಿಟ್ಟು ಬೇರೆಯವರಿಗೆ ಬೈಬಲ್ ಸತ್ಯ ಕಲಿಸಬೇಕು ಅನ್ನೋ ಗುರಿಯಿಟ್ಟೆ.
ಜೂನ್ 13, 1956ರಲ್ಲಿ ನನ್ನ ಓದನ್ನ ಮುಗಿಸಿದೆ. ಮೂರು ದಿನ ಆದಮೇಲೆ ಸರ್ಕಿಟ್ ಸಮ್ಮೇಳನದಲ್ಲಿ ದೀಕ್ಷಾಸ್ನಾನ ತಗೊಂಡೆ. ಯೆಹೋವನ ಬಗ್ಗೆ ಕಲಿತು ಬೇರೆಯವರಿಗೆ ಕಲಿಸೋದ್ರಿಂದ ಜೀವನದಲ್ಲಿ ತುಂಬ ಆಶೀರ್ವಾದಗಳು ಸಿಗುತ್ತೆ ಅಂತ ನನಗೆ ಆಗ ಗೊತ್ತಿರಲಿಲ್ಲ.
ಪಯನೀಯರಾಗಿ ಕಲಿತೆ, ಕಲಿಸಿದೆ
ದೀಕ್ಷಾಸ್ನಾನ ಆಗಿ 6 ತಿಂಗಳಾದ ಮೇಲೆ ನಾನು ಪಯನೀಯರ್ ಸೇವೆ ಶುರುಮಾಡಿದೆ. 1956ರ ಡಿಸೆಂಬರ್ನ ನಮ್ಮ ರಾಜ್ಯ ಸೇವೆಯಲ್ಲಿ “ಹೆಚ್ಚು ಅಗತ್ಯ ಇರೋ ಕಡೆ ನೀವು ಸೇವೆ ಮಾಡಕ್ಕಾಗುತ್ತಾ?” ಅನ್ನೋ ಲೇಖನ ಬಂತು. ಅದನ್ನ ಓದಿದಾಗ ನನ್ನಿಂದನೂ ಸೇವೆ ಮಾಡೋಕಾಗುತ್ತೆ ಅಂತ ಅನಿಸ್ತು. ಅದಕ್ಕೆ ಅಗತ್ಯ ಇರೋ ಕಡೆ ಹೋಗಬೇಕು ಅಂತ ನಾನು ನಿರ್ಧಾರ ಮಾಡಿದೆ.—ಮತ್ತಾ. 24:14.
ನಾನು ಸೌತ್ ಕ್ಯಾರೊಲಿನಾದ ಎಡ್ಜ್‌ಫೀಲ್ಡ್ ಅನ್ನೋ ಜಾಗಕ್ಕೆ ಸ್ಥಳಾಂತರಿಸಿದೆ. ಆ ಸಭೆಯಲ್ಲಿ ಬರೀ 4 ಜನ ಪ್ರಚಾರಕರಿದ್ರು. ಒಬ್ಬ ಸಹೋದರನ ಮನೆಯ ಹಾಲ್ನಲ್ಲಿ ಕೂಟಗಳನ್ನ ನಡೆಸ್ತಿದ್ವಿ. ನಾನು ಪ್ರತೀ ತಿಂಗಳು 100 ತಾಸು ಸೇವೆ ಮಾಡ್ತಿದ್ದೆ. ಸೇವೆಗೆ ಹೋಗ್ತಾ, ಕೂಟಗಳಿಗೆ ತಯಾರಿ ಮಾಡ್ತಾ, ಭಾಷಣಗಳನ್ನ ಕೊಡ್ತಾ ಬಿಜಿ಼ಯಾಗಿದ್ದೆ. ಇದನ್ನೆಲ್ಲಾ ಮಾಡ್ತಾ-ಮಾಡ್ತಾ ಯೆಹೋವನ ಬಗ್ಗೆ ತುಂಬ ಕಲಿತೆ.
ಜಾನ್ಸ್ಟನ್ ನಗರದ ಹತ್ರ ಇದ್ದ ಒಬ್ಬ ಸ್ತ್ರೀಗೆ ನಾನು ಬೈಬಲ್ ಸ್ಟಡಿ ಮಾಡ್ತಿದ್ದೆ. ಅವರು ಶವಗಳನ್ನ ಸುಡೋ ಚಿತಾಗಾರ ಇಟ್ಟುಕೊಂಡಿದ್ರು. ಒಂದು ಸಲ ನನಗೆ ಹಣದ ಅವಶ್ಯಕತೆ ತುಂಬ ಇದ್ದಾಗ ಕೆಲಸ ಕೊಟ್ರು. ಅಷ್ಟೇ ಅಲ್ಲ, ಕೂಟಗಳನ್ನ ನಡೆಸೋಕೆ ಅವರ ಬಿಲ್ಡಿಂಗ್ನಲ್ಲಿ ಜಾಗ ಕೊಟ್ರು.
ನನಗೆ ಸತ್ಯ ಕೊಟ್ಟ ಸಹೋದರನ ಮಗ ಜಾಲಿ ಜೆಫ್ರಿ ನ್ಯೂಯಾರ್ಕ್ನ ಬ್ರೂಕ್ಲಿನ್ನಿಂದ ನಾನಿರೋ ಜಾಗಕ್ಕೆ ಸ್ಥಳಾಂತರಿಸಿದ್ರು. ನಾವಿಬ್ರೂ ಒಟ್ಟಿಗೆ ಪಯನೀಯರ್ ಸೇವೆ ಮಾಡ್ತಿದ್ವಿ. ನಾವು ಉಳಿದುಕೊಳ್ಳೋಕೆ ಒಬ್ಬ ಸಹೋದರ ತಮ್ಮ ಹತ್ರ ಇದ್ದ ಕಾರಿನ ಮನೆಯನ್ನ (ಟ್ರೇಲರ್) ಕೊಟ್ರು.
ನಾವಿದ್ದ ಜಾಗದಲ್ಲಿ ಕೆಲಸ ಮಾಡುವವರಿಗೆ ತುಂಬ ಕಮ್ಮಿ ಸಂಬಳ ಕೊಡ್ತಿದ್ರು. ಇಡೀ ದಿನ ದುಡಿದ್ರೂ ಎರಡರಿಂದ ಮೂರು ಡಾಲರ್ ಸಿಗ್ತಿತ್ತು ಅಷ್ಟೇ. ಏನೋ ಅಲ್ಪ ಸ್ವಲ್ಪ ಉಳಿದಿದ್ದ ದುಡ್ಡಲ್ಲಿ ದಿನಸಿ ತರೋಕೆ ಒಂದಿನ ಅಂಗಡಿಗೆ ಹೋದ್ವಿ. ಆಗ ಕೈಯಲ್ಲಿದ್ದ ಕಾಸೆಲ್ಲಾ ಖರ್ಚಾಗೋಯ್ತು. ಮುಂದೆ ಏನು ಮಾಡೋದು ಅಂತ ಯೋಚಿಸ್ತಾ ಇದ್ದೆ. ಆಗ ಅಂಗಡಿ ಹತ್ರ ಇದ್ದ ಒಬ್ಬ ವ್ಯಕ್ತಿ ನಮ್ಮ ಹತ್ರ ಬಂದು “ನಿಮಗೆ ಕೆಲಸ ಬೇಕಾ? ನಾನು ಒಂದು ಗಂಟೆಗೆ ಒಂದು ಡಾಲರ್ ಕೊಡ್ತೀನಿ” ಅಂದ. ನಾನು ಬಿಲ್ಡಿಂಗ್ ಕಟ್ಟೋ ಜಾಗದಲ್ಲಿ ಮೂರು ದಿನ ಕ್ಲೀನಿಂಗ್ ಕೆಲಸ ಮಾಡಿದೆ. ಇದ್ರಿಂದ ನಾನು ಎಡ್ಜ್‌ಫೀಲ್ಡ್‌ನಲ್ಲೇ ಉಳಿದುಕೊಂಡು ಸೇವೆ ಮಾಡಬೇಕು ಅನ್ನೋದು ಯೆಹೋವನ ಆಸೆ ಅಂತ ಅರ್ಥ ಮಾಡಿಕೊಂಡೆ. 1958ರಲ್ಲಿ ನ್ಯೂಯಾರ್ಕ್ನಲ್ಲಿ ಅಂತರಾಷ್ಟ್ರೀಯ ಅಧಿವೇಶನ ಇತ್ತು. ನಾನು ದುಡಿದ ದುಡ್ಡಲ್ಲಿ ಆ ಅಧಿವೇಶನಕ್ಕೆ ಹೋದೆ.
ಆ ಅಧಿವೇಶನದ ಎರಡನೇ ದಿನ ನನಗೆ ತುಂಬ ಸ್ಪೆಶಲ್ ಆಗಿತ್ತು. ಅವತ್ತು ನಾನು ಒಬ್ಬ ವಿಶೇಷ ವ್ಯಕ್ತಿನ ಭೇಟಿಯಾದೆ. ಟೆನೆಸೀಯ ಗ್ಯಾಲಟೀನ್ನಲ್ಲಿ ರೆಗ್ಯುಲರ್ ಪಯನೀಯರಾಗಿ ಸೇವೆ ಮಾಡ್ತಿದ್ದ ಸಹೋದರಿ ರೂಬಿ ವ್ಯಾಡಲಿಂಗ್ಟನ್ ಹತ್ರ ಮಾತಾಡಿದೆ. ನಮ್ಮಿಬ್ಬರಿಗೂ ಮಿಷನರಿಗಳಾಗಬೇಕು ಅನ್ನೋ ಆಸೆ ಇದ್ದಿದ್ರಿಂದ ಆ ಅಧಿವೇಶನದಲ್ಲಿ ಗಿಲ್ಯಡ್ ಶಾಲೆಗಾಗಿ ನಡೆದ ಕೂಟಕ್ಕೆ ನಾವು ಹೋದ್ವಿ. ಇದಾದ ಮೇಲೆ ಪತ್ರಗಳನ್ನ ಬರಿತಾ ಒಬ್ರನ್ನ ಒಬ್ರು ಚೆನ್ನಾಗಿ ತಿಳಿದುಕೊಂಡ್ವಿ. ಸ್ವಲ್ಪ ದಿನಗಳಾದ ಮೇಲೆ ಗ್ಯಾಲಟೀನ್ ಸಭೆಯವರು ನನ್ನನ್ನ ಅತಿಥಿ ಭಾಷಣಕಾರರಾಗಿ ಕರೆದ್ರು. ಅಲ್ಲಿಗೆ ಹೋದಾಗ ನಾನು ರೂಬಿ ಹತ್ರ ‘ನನ್ನನ್ನ ಮದ್ವೆ ಆಗ್ತೀಯಾ?’ ಅಂತ ಕೇಳಿದೆ. ಆಮೇಲೆ ರೂಬಿ ಇದ್ದ ಸಭೆಗೆ ನಾನು ಸ್ಥಳಾಂತರಿಸಿದೆ. 1959ರಲ್ಲಿ ನಮ್ಮ ಮದುವೆ ಆಯ್ತು.
ಸಭೆಯಲ್ಲಿ ಕಲಿತೆ, ಕಲಿಸಿದೆ
ಗ್ಯಾಲಟೀನ್ನಲ್ಲಿ ಸಭಾ ಸೇವಕನಾದಾಗ (ಹಿರಿಯ ಮಂಡಳಿಯ ಸಂಯೋಜಕ) ನನಗೆ 23 ವರ್ಷ. ಸಹೋದರ ಚಾರ್ಲ್ಸ್ ಥಾಮ್ಸನ್ ಸಂಚರಣ ಮೇಲ್ವಿಚಾರಕರಾಗಿ ಮೊದಲು ಬಂದಿದ್ದು ನಮ್ಮ ಸಭೆಗೆ.
ಅವರಿಗೆ ತುಂಬ ಅನುಭವ ಇತ್ತು. ಆದ್ರೂ ಸಹೋದರ ಸಹೋದರಿಯರಿಗೆ ಹೇಗೆ ಸಹಾಯ ಮಾಡಬೇಕು ಅಂತ ನನ್ನನ್ನ ಕೇಳ್ತಿದ್ರು. ಮುಂಚೆ ಬರ್ತಿದ್ದ ಸಂಚರಣ ಮೇಲ್ವಿಚಾರಕರು ಏನು ಮಾಡ್ತಿದ್ರು ಅಂತನೂ ಕೇಳ್ತಿದ್ರು. ಏನೇ ತೀರ್ಮಾನ ಮಾಡೋಕೂ ಮುಂಚೆ ಬೇರೆಯವರ ಹತ್ರ ಕೇಳಬೇಕು ಅಂತ ನಾನು ಅವರಿಂದ ಕಲಿತುಕೊಂಡೆ.ಇಸವಿ 1964, ಮೇ ತಿಂಗಳಲ್ಲಿ ನ್ಯೂಯಾರ್ಕ್ನ ಸೌತ್ ಲ್ಯಾನ್ಸಿಂಗ್ ನಗರದಲ್ಲಿ ರಾಜ್ಯ ಶುಶ್ರೂಷಾ ಶಾಲೆ ನಡಿತು. ಇದು ಒಂದು ತಿಂಗಳ ಶಾಲೆಯಾಗಿತ್ತು. ಆ ಶಾಲೆಗೆ ಹೋದಮೇಲೆ ನನಗೆ ಯೆಹೋವನ ಬಗ್ಗೆ ಇನ್ನೂ ಕಲಿಬೇಕು ಮತ್ತು ಆತನಿಗೆ ಇನ್ನೂ ಹತ್ರ ಆಗಬೇಕು ಅನ್ನೋ ಆಸೆ ಜಾಸ್ತಿಯಾಯ್ತು.
ಸರ್ಕಿಟ್ ಮತ್ತು ಜಿಲ್ಲಾ ಕೆಲಸ ಮಾಡ್ತಾ ಕಲಿತೆ ಮತ್ತು ಕಲಿಸಿದೆ
ನಮಗೆ 1965 ಜನವರಿಯಲ್ಲಿ ಸಂಚರಣ ಕೆಲಸಕ್ಕೆ ನೇಮಕ ಸಿಕ್ಕಿತು. ನಾವು ಸೇವೆ ಮಾಡಿದ ಮೊದಲ ಸರ್ಕಿಟ್ ಟೆನೆಸೀಯ ನಾಕ್ಸ್ವಿಲ್ಲೆಯಿಂದ ಹಿಡಿದು ವರ್ಜೀನಿಯದ ರಿಚ್ಮಂಡ್ ತನಕ ಇತ್ತು. ಅಂದ್ರೆ ಉತ್ತರ ಕ್ಯಾರೊಲಿನ್, ಕೆಂಟಕಿ ಮತ್ತು ವೆಸ್ಟ್ ವರ್ಜೀನಿಯದಲ್ಲಿದ್ದ ಎಲ್ಲ ಸಭೆಗಳನ್ನ ಭೇಟಿ ಮಾಡ್ತಿದ್ವಿ. ದಕ್ಷಿಣ ಅಮೆರಿಕದಲ್ಲಿ ವರ್ಣಭೇದ ಇದ್ದಿದ್ರಿಂದ ಕಪ್ಪು ಸಹೋದರರು ಇದ್ದ ಸಭೆಗಳಿಗೆ ಮಾತ್ರ ನಾನು ಭೇಟಿ ಮಾಡ್ತಿದ್ದೆ. ಅಲ್ಲಿದ್ದ ಸಹೋದರರು ತುಂಬ ಬಡವರಾಗಿದ್ರು. ಆದ್ರಿಂದ ನಮ್ಮ ಹತ್ರ ಇರೋದನ್ನ ಹಂಚಿಕೊಳ್ಳಬೇಕು ಅಂತ ನಾವು ಕಲಿತ್ವಿ. ತುಂಬ ವರ್ಷಗಳಿಂದ ಸರ್ಕಿಟ್ ಮೇಲ್ವಿಚಾರಕರಾಗಿದ್ದ ಒಬ್ಬ ಸಹೋದರ ನನಗೆ ಒಂದು ಕಿವಿಮಾತು ಹೇಳಿದ್ರು. “ಒಂದು ಸಭೆಗೆ ಹೋದಾಗ ಬಾಸ್ ತರ ನಡ್ಕೊಬೇಡ. ಒಬ್ಬ ಸಹೋದರನಾಗಿರು. ಯಾಕಂದ್ರೆ ಬೇರೆಯವರು ನಿನ್ನನ್ನ ಸಹೋದರನಾಗಿ ನೋಡಿದ್ರೆ ಮಾತ್ರನೇ ಅವರಿಗೆ ನೀನು ಸಹಾಯ ಮಾಡೋಕೆ ಆಗೋದು” ಅಂತ ಹೇಳಿದ್ರು.
ಒಮ್ಮೆ ನಾವು ಒಂದು ಚಿಕ್ಕ ಸಭೆನ ಭೇಟಿ ಮಾಡಿದ್ವಿ. ಆಗ 1 ವರ್ಷದ ಮಗುವಿದ್ದ ಒಬ್ಬ ಮಹಿಳೆಗೆ ರೂಬಿ ಬೈಬಲ್ ಅಧ್ಯಯನ ಶುರುಮಾಡಿದಳು. ಆದ್ರೆ ಆ ಬೈಬಲ್ ಅಧ್ಯಯನವನ್ನ ಮುಂದುವರಿಸೋಕೆ ಆ ಸಭೆಯಲ್ಲಿ ಯಾರೂ ಇಲ್ಲದೆ ಇದ್ದಿದ್ರಿಂದ ರೂಬಿ ಪತ್ರಗಳ ಮೂಲಕ ಆ ಬೈಬಲ್ ಸ್ಟಡಿ ಮಾಡ್ತಿದ್ದಳು. ನಾವು ಮುಂದಿನ ಸಲ ಆ ಸಭೆಯನ್ನ ಭೇಟಿಮಾಡಿದಾಗ ಆ ಸ್ತ್ರೀ, ಆ ವಾರದ ಎಲ್ಲಾ ಕೂಟಗಳಿಗೆ ಬಂದಳು. ಆಮೇಲೆ ಅಲ್ಲಿಗೆ ಇಬ್ಬರು ವಿಶೇಷ ಪಯನೀಯರರು ಬಂದಿದ್ದರಿಂದ ಆ ಸ್ಟಡಿಯನ್ನ ಅವರು ಮುಂದುವರಿಸಿದ್ರು. ಅವಳು ದೀಕ್ಷಾಸ್ನಾನನೂ ಪಡಕೊಂಡಳು. ಇದೆಲ್ಲ ಆಗಿ 30 ವರ್ಷಗಳಾದ ಮೇಲೆ ಅಂದರೆ 1995ರಲ್ಲಿ ಪ್ಯಾಟರ್ಸನ್ ಬೆತೆಲ್ನಲ್ಲಿ ಒಬ್ಬ ಸಹೋದರಿ ರೂಬಿ ಹತ್ರ ಬಂದು ಮಾತಾಡಿದಳು. ಆ ಸಹೋದರಿ ಮತ್ತು ಅವಳ ಗಂಡ 100ನೇ ಗಿಲ್ಯಡ್ ಶಾಲೆಯ ವಿದ್ಯಾರ್ಥಿಗಳಾಗಿದ್ರು. ಆಶ್ಚರ್ಯ ಏನಂದ್ರೆ ರೂಬಿ ತುಂಬ ವರ್ಷಗಳ ಹಿಂದೆ ಬೈಬಲ್ ಸ್ಟಡಿ ಮಾಡ್ತಾ ಇದ್ದಿದ್ದು ಈ ಸಹೋದರಿಯ ಅಮ್ಮನಿಗೇ ಅಂತ ನಮಗೆ ಗೊತ್ತಾಯ್ತು.
ನಮ್ಮ ಮುಂದಿನ ಸರ್ಕಿಟ್ ಮಧ್ಯ ಫ್ಲೋರಿಡ ಆಗಿತ್ತು. ಸೇವೆ ಮಾಡೋಕೆ ನಮಗೆ ಒಂದು ಕಾರ್ ಬೇಕಿತ್ತು. ತುಂಬ ಕಡಿಮೆ ಬೆಲೆಗೆ ನಮಗೆ ಒಂದು ಕಾರು ಸಿಕ್ತು. ಆದ್ರೆ ಒಂದು ವಾರದಲ್ಲೇ ಅದರ ಇಂಜಿನ್ ಕೆಟ್ಟು ಹೋಯ್ತು. ಅದನ್ನ ರಿಪೇರಿ ಮಾಡೋಕೆ ನಮ್ಮ ಹತ್ರ ಕಾಸಿರಲಿಲ್ಲ. ಅದಕ್ಕೆ ಒಬ್ಬ ಸಹೋದರನ ಹತ್ರ ನಾನು ಸಹಾಯ ಕೇಳಿದೆ. ಆಗ ತಮ್ಮ ಹತ್ರ ಕೆಲಸ ಮಾಡ್ತಿದ್ದ ಒಬ್ಬ ಹುಡುಗನನ್ನ ಕಾರ್ ರಿಪೇರಿ ಮಾಡೋಕೆ ಕಳಿಸಿಕೊಟ್ರು. ರಿಪೇರಿ ಆದಮೇಲೆ ಇದಕ್ಕೆ ಎಷ್ಟಾಯ್ತು ಅಂತ ಆ ಸಹೋದರನನ್ನ ಕೇಳಿದಾಗ ಅವರು “ಅದರ ಬಗ್ಗೆ ಏನೂ ಯೋಚನೆ ಮಾಡಬೇಡಿ” ಅಂತ ಹೇಳಿ ನಮ್ಮ ಹತ್ರ ಒಂದು ಕಾಸೂ ತಗೊಳ್ಳಿಲ್ಲ. ಅಷ್ಟೇ ಅಲ್ಲ, ಅವರು ನಮಗೆ ಸ್ವಲ್ಪ ದುಡ್ಡನ್ನ ಉಡುಗೊರೆಯಾಗಿ ಕೊಟ್ರು. ಇದನ್ನೆಲ್ಲ ನೋಡಿದಾಗ ಯೆಹೋವ ನಮ್ಮ ಕೈಬಿಟ್ಟಿಲ್ಲ, ನಮ್ಮನ್ನ ತುಂಬ ಚೆನ್ನಾಗಿ ನೋಡಿಕೊಳ್ತಿದ್ದಾನೆ ಅಂತ ಅರ್ಥಮಾಡಿಕೊಂಡ್ವಿ ಮತ್ತು ಬೇರೆಯವರಿಗೆ ನಾವು ಧಾರಾಳವಾಗಿ ಸಹಾಯ ಮಾಡಬೇಕು ಅನ್ನೋ ಪಾಠನೂ ಕಲಿತ್ವಿ.
ಸಭೆಗಳನ್ನ ಭೇಟಿ ಮಾಡುವಾಗ ಸಹೋದರರ ಮನೆಗಳಲ್ಲಿ ಉಳಿದುಕೊಳ್ತಿದ್ವಿ. ಇದ್ರಿಂದ ನಮಗೆ ತುಂಬ ಒಳ್ಳೇ ಸ್ನೇಹಿತರು ಸಿಕ್ಕಿದ್ರು. ಒಂದು ಸಲ ಒಬ್ಬರ ಮನೆಯಲ್ಲಿ ಉಳುಕೊಂಡಿದ್ದಾಗ ಸಭೆಯ ವರದಿಯನ್ನ ಟೈಪ್ ಮಾಡ್ತಾ ಕೂತಿದ್ದೆ. ಏನೋ ಕೆಲಸ ಬಂತು ಅಂತ ನಾನು ಹೊರಗಡೆ ಹೋದೆ. ನಾನು ಮತ್ತೆ ಬಂದು ನೋಡಿದಾಗ ಆ ಮನೆಯಲ್ಲಿದ್ದ ಮೂರು ವರ್ಷದ ಹುಡುಗ ಆ ಟೈಪ್ರೈಟರ್ನಲ್ಲಿ ಇರೋ ಬರೋ ಬಟನ್ನೆಲ್ಲ ಒತ್ತಿಬಿಟ್ಟಿದ್ದ. ಅವನು ದೊಡ್ಡವನಾದಮೇಲೂ ನಾನು ಇದನ್ನ ಹೇಳ್ತಾ ಅವನನ್ನ ರೇಗಿಸುತ್ತಿದ್ದೆ.
ನನಗೆ 1971ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆ ಮಾಡೋ ನೇಮಕ ಸಿಕ್ಕಿತು. ಆಗ ನನಗೆ ಬರೀ 34 ವರ್ಷ. ಅಲ್ಲಿಗೆ ಕಪ್ಪು ಬಣ್ಣದವರನ್ನ ಜಿಲ್ಲಾ ಮೇಲ್ವಿಚಾರಕರಾಗಿ ನೇಮಿಸಿದ್ದು ಇದೇ ಮೊದಲು. ನಾನು ಅಲ್ಲಿಗೆ ಹೋದಾಗ ಸಹೋದರರು ನನ್ನನ್ನ ಸಂತೋಷದಿಂದ ಸ್ವಾಗತಿಸಿದ್ರು.
ಒಬ್ಬ ಜಿಲ್ಲಾ ಮೇಲ್ವಿಚಾರಕನಾಗಿ ಪ್ರತೀ ವಾರಾಂತ್ಯ ನಾನು ಸರ್ಕಿಟ್ ಸಮ್ಮೇಳನಗಳಲ್ಲಿ ಯೆಹೋವನ ಬಗ್ಗೆ ಕಲಿಸುತ್ತಾ ಇದ್ದೆ. ಇದು ನನಗೆ ತುಂಬ ಸಂತೋಷ ಕೊಡ್ತು. ಎಷ್ಟೋ ಸರ್ಕಿಟ್ ಮೇಲ್ವಿಚಾರಕರಿಗೆ ನನಗಿಂತ ಜಾಸ್ತಿ ಅನುಭವ ಇತ್ತು. ಅವರಲ್ಲಿ ಒಬ್ಬರು ನಾನು ದೀಕ್ಷಾಸ್ನಾನ ಪಡಕೊಂಡಾಗ ಭಾಷಣ ಕೊಟ್ಟಿದ್ರು. ಈ ರೀತಿ ಅನುಭವ ಇದ್ದ ಸಹೋದರರಲ್ಲಿ ಥಿಯೊಡರ್ ಜಾರಸ್ ಕೂಡ ಒಬ್ಬರು. ಇವರು ಆಮೇಲೆ ಆಡಳಿತ ಮಂಡಳಿಯ ಸದಸ್ಯರಾದ್ರು. ಬ್ರೂಕ್ಲಿನ್ ಬೆತೆಲ್ನಲ್ಲಿ ಸೇವೆ ಮಾಡ್ತಿದ್ದ ಸಹೋದರರಿಗೂ ಜಾಸ್ತಿ ಅನುಭವ ಇತ್ತು. ಸೇವೆನ ಸಂತೋಷದಿಂದ ಮಾಡೋಕೆ ನನಗೆ ಸರ್ಕಿಟ್ ಮೇಲ್ವಿಚಾರಕರು ಮತ್ತು ಬ್ರೂಕ್ಲಿನ್ ಬೆತೆಲ್ನಲ್ಲಿ ಇದ್ದವರು ಸಹಾಯ ಮಾಡಿದ್ರು. ಇವರೆಲ್ಲ ಒಳ್ಳೇ ಕುರುಬರಾಗಿದ್ರು. ಎಲ್ಲವನ್ನೂ ಯೆಹೋವನಿಗೆ ಇಷ್ಟ ಆಗೋ ತರ ಮಾಡ್ತಿದ್ರು. ಆತನಿಗೆ ಮತ್ತು ಆತನ ಸಂಘಟನೆಗೆ ನಿಷ್ಠೆಯಿಂದ ಸೇವೆ ಮಾಡ್ತಿದ್ರು. ಅವರ ದೀನತೆ ನಾನು ಜಿಲ್ಲಾ ಮೇಲ್ವಿಚಾರಕನಾಗಿ ಸೇವೆ ಮಾಡೋಕೆ ಸಹಾಯ ಮಾಡ್ತು.
ಮತ್ತೆ ಸಂಚರಣ ಮೇಲ್ವಿಚಾರಕನಾಗಿ
1974ರಲ್ಲಿ ಆಡಳಿತ ಮಂಡಳಿ ಕೆಲವು ಸಂಚರಣ ಮೇಲ್ವಿಚಾರಕರನ್ನ ಜಿಲ್ಲಾ ಮೇಲ್ವಿಚಾರಕರನ್ನಾಗಿ ನೇಮಿಸಿತು. ನನಗೆ ಸೌತ್ ಕ್ಯಾರೊಲಿನಾದಲ್ಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡೋ ನೇಮಕ ಸಿಕ್ತು. ಸಂತೋಷದ ವಿಷಯ ಏನಂದ್ರೆ ಈ ಸಾರಿ ನಾನು ಸಭೆಯನ್ನ ಭೇಟಿ ಮಾಡಿದಾಗ ಕಪ್ಪು ಮತ್ತು ಬಿಳಿ ಬಣ್ಣದ ಸಹೋದರರು ಒಟ್ಟಿಗೆ ಕೂಟಗಳಿಗೆ ಬರುತ್ತಿದ್ರು.
1976ರ ಕೊನೆಯಲ್ಲಿ ನಾನು ಜಾರ್ಜಿಯ ಸರ್ಕಿಟ್ನಲ್ಲಿ ಸೇವೆ ಮಾಡ್ತಿದ್ದೆ. ಆಗ ಅಟ್ಲಾಂಟ ಮತ್ತು ಕೊಲಂಬಸ್ನಲ್ಲಿರೋ ಸಭೆಗಳಿಗೆ ಹೋಗ್ತಿದ್ದೆ. ಆಗ ನಡೆದ ಒಂದು ಘಟನೆಯನ್ನ ನನ್ನ ಜೀವನದಲ್ಲಿ ಮರೆಯೋಕೇ ಆಗಲ್ಲ. ಕೆಲವು ದುಷ್ಕರ್ಮಿಗಳು ನಮ್ಮ ಕಪ್ಪು ಮೈಬಣ್ಣದ ಸಹೋದರನ ಮನೆ ಮೇಲೆ ಬಾಂಬ್ ಹಾಕಿದ್ರಿಂದ ಮನೆಯಲ್ಲಿದ್ದ 5 ಮಕ್ಕಳು ತೀರಿಹೋದ್ರು. ಅವರ ತಾಯಿಗೆ ತುಂಬ ಗಾಯಗಳಾಗಿತ್ತು. ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ನನಗೆ ಶವಸಂಸ್ಕಾರದ ಭಾಷಣವನ್ನ ಕೊಡೋಕೆ ಕೇಳಿಕೊಂಡ್ರು. ಆ ದಂಪತಿಯನ್ನ ಸಮಾಧಾನ ಮಾಡೋಕೆ ಬಿಳಿ ಮತ್ತು ಕಪ್ಪು ಸಹೋದರರ ಸಾಗರವೇ ನೆರೆದು ಬಂದಿತ್ತು. ಈ ರೀತಿ ಪ್ರೀತಿ ತೋರಿಸಿದ್ರಿಂದ ಆ ದಂಪತಿಗಳಿಗೆ ಬಂದ ಕಷ್ಟನ ತಾಳಿಕೊಳ್ಳೋಕೆ ಸಹಾಯ ಆಯ್ತು.
ಬೆತೆಲ್‌ನಲ್ಲಿ ಕಲಿತೆ, ಕಲಿಸಿದೆ
1977ರಲ್ಲಿ ಒಂದು ಪ್ರಾಜೆಕ್ಟ್ ಮಾಡೋಕೆ ಕೆಲವು ತಿಂಗಳುಗಳು ಬ್ರೂಕ್ಲಿನ್ ಬೆತೆಲ್ಗೆ ನಮ್ಮನ್ನ ಕರೆದ್ರು. ಇನ್ನೇನು ಆ ಪ್ರಾಜೆಕ್ಟ್ ಮುಗಿತಾ ಬಂದಾಗ ಆಡಳಿತ ಮಂಡಳಿಯ ಇಬ್ಬರು ಸಹೋದರರು ಬಂದು ನನ್ನನ್ನ ಮತ್ತು ರೂಬಿನ ಮಾತಾಡಿಸಿದ್ರು. ನಾವು ಬೆತೆಲ್ನಲ್ಲೇ ಸೇವೆನ ಮುಂದುವರಿಸೋಕೆ ಆಗುತ್ತಾ ಅಂತ ಕೇಳಿಕೊಂಡ್ರು. ಅದಕ್ಕೆ ಸಂತೋಷದಿಂದ ಒಪ್ಪಿಕೊಂಡ್ವಿ.
ನಾನು 24 ವರ್ಷ ಸರ್ವಿಸ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿದೆ. ಸಹೋದರ ಸಹೋದರಿಯರು ಮತ್ತು ಬೇರೆಯವರು ಬರೆಯೋ ಪ್ರಶ್ನೆಗಳಿಗೆ ಉತ್ತರವನ್ನ ಈ ಡಿಪಾರ್ಟ್ಮೆಂಟ್ನವರು ಕೊಡ್ತಾರೆ. ಬೈಬಲ್ ತತ್ವಗಳಿಂದ ಉತ್ತರಗಳನ್ನ ತಿಳುಕೊಳ್ಳೋಕೆ ಆಡಳಿತ ಮಂಡಳಿ ಈ ಡಿಪಾರ್ಟ್ಮೆಂಟ್ಗೆ ಸಹಾಯ ಮಾಡುತ್ತೆ. ಈ ತತ್ವಗಳು ಸಹೋದರ ಸಹೋದರಿಯರಿಗೆ ಬರೀ ಉತ್ತರ ಕೊಡೋಕೆ ಮಾತ್ರ ಅಲ್ಲ ಸರ್ಕಿಟ್ ಮೇಲ್ವಿಚಾರಕರಿಗೆ, ಹಿರಿಯರಿಗೆ ಮತ್ತು ಪಯನೀಯರರಿಗೆ ತರಬೇತಿ ಕೊಡೋಕೂ ಸಹಾಯ ಮಾಡುತ್ತೆ. ಈ ತರಬೇತಿ ಪಡೆದುಕೊಂಡವರು ಯೆಹೋವನ ತರ ಯೋಚನೆ ಮಾಡ್ತಾ ಪ್ರೌಢರಾಗಿದ್ದಾರೆ. ಇದ್ರಿಂದ ಇಡೀ ಸಂಘಟನೆಗೆ ಪ್ರಯೋಜನ ಆಗ್ತಿದೆ.
ನಾನು 1995 ರಿಂದ 2018ರವರೆಗೆ ಮುಖ್ಯ ಕಾರ್ಯಾಲಯದ ಪ್ರತಿನಿಧಿಯಾಗಿ (ಝೋನ್ ಮೇಲ್ವಿಚಾರಕ) ಬೇರೆ-ಬೇರೆ ಬ್ರಾಂಚ್ಗಳನ್ನ ಭೇಟಿ ಮಾಡಿದ್ದೀನಿ. ಆಗ ಬ್ರಾಂಚ್ ಕಮಿಟಿಯ ಸದಸ್ಯರನ್ನ, ಬೆತೆಲಿಗರನ್ನ ಮತ್ತು ಮಿಷನರಿಗಳನ್ನ ಪ್ರೋತ್ಸಾಹಿಸ್ತಿದ್ದೆ ಮತ್ತು ಅವರ ಕಷ್ಟಗಳನ್ನ ಕೇಳಿ ತಿಳುಕೊಳ್ತಿದ್ದೆ. ಅವರ ಅನುಭವಗಳನ್ನ ಕೇಳಿದಾಗೆಲ್ಲಾ ನನಗೂ ರೂಬಿಗೂ ತುಂಬ ಪ್ರೋತ್ಸಾಹ ಸಿಕ್ತಿತ್ತು. ಉದಾಹರಣೆಗೆ, ನಾವು ಇಸವಿ 2000ದಲ್ಲಿ ರುವಾಂಡನ ಭೇಟಿ ಮಾಡಿದ್ವಿ. ಅಲ್ಲಿ ಬೆತೆಲ್ ಕುಟುಂಬದ ಸದಸ್ಯರು 1994ರಲ್ಲಿ ನಡೆದ ಸಾಮೂಹಿಕ ಹತ್ಯೆಯಿಂದ ತುಂಬ ಕಷ್ಟಗಳನ್ನ ಅನುಭವಿಸಿದ್ರು. ಇಷ್ಟೆಲ್ಲ ಆದ್ರೂ ಅಲ್ಲಿದ್ದ ಸಹೋದರರು ತಮ್ಮ ನಿರೀಕ್ಷೆನ, ನಂಬಿಕೆನ ಬಿಟ್ಟುಕೊಟ್ಟಿಲ್ಲ. ಸಂತೋಷದಿಂದ ಯೆಹೋವನ ಸೇವೆ ಮಾಡ್ತಿದ್ದಾರೆ. ಅವರ ಅನುಭವಗಳನ್ನ ಕೇಳಿದಾಗ ನಮಗೆ ತುಂಬ ಪ್ರೋತ್ಸಾಹ ಸಿಕ್ತು.
ನಾನು ಮತ್ತು ನನ್ನ ಹೆಂಡತಿ ಈಗ 80 ವರ್ಷ ದಾಟಿದ್ದೀವಿ. ನಾನು 20 ವರ್ಷ ಅಮೆರಿಕದ ಬ್ರಾಂಚ್ ಕಮಿಟಿಯ ಸದಸ್ಯನಾಗಿ ಸೇವೆ ಮಾಡಿದೆ. ನಾನು ಕಾಲೇಜು ಮೆಟ್ಟಿಲೇ ಹತ್ತಿದವನಲ್ಲ. ಆದರೆ ಯೆಹೋವ ಮತ್ತು ಆತನ ಸಂಘಟನೆಯಿಂದ ನನಗೆ ಒಳ್ಳೇ ಶಿಕ್ಷಣ ಸಿಕ್ಕಿದೆ. ಇದ್ರಿಂದ ಬೇರೆಯವರು ಶಾಶ್ವತ ಪ್ರಯೋಜನ ಪಡಕೊಳ್ಳೋ ತರ ಬೈಬಲ್ ಸತ್ಯಗಳನ್ನ ಕಲಿಸೋಕೆ ನನ್ನಿಂದ ಆಗಿದೆ. (2 ಕೊರಿಂ. 3:5; 2 ತಿಮೊ. 2:2) ಬೈಬಲ್ ಸತ್ಯಗಳನ್ನ ಕಲಿತಿದ್ರಿಂದ ಎಷ್ಟೋ ಜನ ತಮ್ಮ ಜೀವನವನ್ನ ಬದಲಾಯಿಸಿಕೊಂಡಿದ್ದಾರೆ ಮತ್ತು ಅವರನ್ನ ಸೃಷ್ಟಿ ಮಾಡಿದ ಸೃಷ್ಟಿಕರ್ತನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಂಡಿದ್ದಾರೆ. (ಯಾಕೋ. 4:8) ನಾನು ಮತ್ತು ರೂಬಿ ಅವಕಾಶ ಸಿಕ್ಕಿದಾಗೆಲ್ಲಾ ಬೇರೆಯವರನ್ನ ಪ್ರೋತ್ಸಾಹಿಸ್ತಿದ್ವಿ. ಯೆಹೋವನ ಬಗ್ಗೆ ನಾವೂ ಕಲಿತು ಬೇರೆಯವರಿಗೆ ಕಲಿಸೋದು ತುಂಬ ದೊಡ್ಡ ಸುಯೋಗ ಅಂತ ಹೇಳ್ತಿದ್ವಿ. ಯೆಹೋವನ ಆರಾಧಕರಿಗೆ ಇದಕ್ಕಿಂತ ದೊಡ್ಡ ಸುಯೋಗ ಯಾವುದಿದೆ ಹೇಳಿ!