ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ಸಮಸ್ಯೆಗಳನ್ನು ಬಗೆಹರಿಸಲು ಸಹಾಯ

2 ಸಮಸ್ಯೆಗಳನ್ನು ಬಗೆಹರಿಸಲು ಸಹಾಯ

ಜೀವನದ ಕೆಲವು ಸಮಸ್ಯೆಗಳು ಬೇಗನೆ ಹೋಗುವುದಿಲ್ಲ. ಕೆಲವಂತೂ ವರ್ಷಗಳವರೆಗೆ ಇರುತ್ತವೆ. ಅವು ಇವೆಯೆಂದು ನಮಗೆ ಗೊತ್ತಾಗುವ ಮುಂಚೆಯೇ ಬೇರೂರಿ ಬಿಟ್ಟಿರುತ್ತವೆ. ಬೇಗನೆ ಹೋಗದ, ನಿರಾಶೆಗೊಳಿಸುವ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ವಿವೇಕವನ್ನು ಬೈಬಲ್‌ ಕೊಡುತ್ತದಾ? ಕೊಡುತ್ತದೆ ಎನ್ನಲು ಕೆಲವು ಉದಾಹರಣೆಗಳನ್ನು ಗಮನಿಸಿ.

ಅತಿಯಾದ ಚಿಂತೆ

ರೋಝಿ ಎಂಬಾಕೆ ಹೀಗೆ ಹೇಳುತ್ತಾಳೆ: “ಏನೋ ತುಂಬಾ ಕೆಟ್ಟ ವಿಷಯ ನಡೆದಂತೆ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುತ್ತಾ ಅಥವಾ ಇರುವ ಸಮಸ್ಯೆಯ ಬಗ್ಗೆಯೇ ಇಲ್ಲಸಲ್ಲದ್ದನ್ನೆಲ್ಲ ಯೋಚಿಸುತ್ತಾ ಯಾವಾಗಲೂ ಚಿಂತೆಯಲ್ಲೇ ಮುಳುಗಿರುತ್ತಿದ್ದೆ.” ಆಕೆಗೆ ಬೈಬಲಿನ ಯಾವ ವಚನಗಳು ಸಹಾಯ ಮಾಡಿದವು? ಒಂದು ವಚನ ಮತ್ತಾಯ 6:34. ಅಲ್ಲಿ ಹೀಗಿದೆ: “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು.” ನಾಳೆ ಏನಾಗುತ್ತದೋ ಎಂದು ಚಿಂತೆ ಮಾಡುವುದನ್ನು ನಿಲ್ಲಿಸಲು ಯೇಸುವಿನ ಈ ಮಾತು ತನಗೆ ಸಹಾಯ ಮಾಡಿತೆಂದು ರೋಝಿ ಈಗ ಹೇಳುತ್ತಾಳೆ. “ಈಗಾಗಲೇ ನನಗೆ ಸಾಕಷ್ಟು ಚಿಂತೆಗಳಿದ್ದವು. ಹಾಗಾಗಿ ಈ ವರೆಗೂ ಬಂದಿರದ ಮತ್ತು ಬಹುಶಃ ಮುಂದೆಯೂ ಬರದ ಸನ್ನಿವೇಶಗಳ ಬಗ್ಗೆ ಚಿಂತಿಸುವ ಅಗತ್ಯವಿರಲಿಲ್ಲ” ಎನ್ನುತ್ತಾಳೆ ಆಕೆ.

ಯಾಸ್ಮೀನ್‌ ಎಂಬಾಕೆ ಸಹ ಚಿಂತೆಯಲ್ಲಿ ಮುಳುಗಿ ಹೋಗಿದ್ದಳು. “ಪ್ರತಿ ವಾರ ಕೆಲವು ದಿನಗಳ ತನಕ ಅಳ್ತಾ ಇರುತ್ತಿದ್ದೆ, ಕೆಲವು ರಾತ್ರಿ ನಿದ್ದೆನೂ ಬರ್ತಿರಲಿಲ್ಲ. ನಕಾರಾತ್ಮಕ ಯೋಚನೆ ನನ್ನನ್ನೇ ನುಂಗಿಹಾಕ್ತಿದೆ ಅಂತ ಅನಿಸ್ತಿತ್ತು” ಎಂದು ಆಕೆ ಹೇಳುತ್ತಾಳೆ. ಅವಳಿಗೆ ಯಾವ ವಚನ ಸಹಾಯ ಮಾಡಿತು? 1 ಪೇತ್ರ 5:7: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.” ಯಾಸ್ಮೀನ್‌ ಹೀಗನ್ನುತ್ತಾಳೆ: “ದಿನ ಹೋದ ಹಾಗೆ ಯೆಹೋವನಿಗೆ ಪ್ರಾರ್ಥಿಸುತ್ತಾ ಇದ್ದೆ ಮತ್ತು ಆತನು ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟನು. ನನ್ನ ಮೇಲಿದ್ದ ದೊಡ್ಡ ಭಾರ ಇಳಿಸಿದ ಹಾಗೆ ಅನಿಸಿತು. ನನಗೆ ಈಗಲೂ ಕೆಲವೊಮ್ಮೆ ನಕಾರಾತ್ಮಕ ಯೋಚನೆ ಬರುತ್ತೆ. ಆದರೆ ಹಾಗೆ ಬಂದಾಗ ಏನು ಮಾಡಬೇಕಂತ ನನಗೆ ಈಗ ಗೊತ್ತು.”

ಕೆಲಸ ಮುಂದೂಡುವುದು

ಇಝಬೆಲಾ ಎಂಬ ಯುವತಿ ಹೀಗನ್ನುತ್ತಾಳೆ: “ಕೆಲಸ ಮುಂದೂಡೋ ಅಭ್ಯಾಸ ನನ್ನ ರಕ್ತದಲ್ಲಿದೆ ಅಂತ ನನಗನಿಸುತ್ತೆ. ಯಾಕೆಂದರೆ ನನ್ನ ತಂದೆಗೂ ಈ ರೂಢಿ ಇದೆ. ಮುಖ್ಯವಾದ ಕೆಲಸಗಳನ್ನು ಬದಿಗೊತ್ತಿ ಸುಮ್ಮನೆ ಆರಾಮವಾಗಿ ಕಾಲ ಕಳಿತೇನೆ, ಟಿವಿ ನೋಡ್ತೇನೆ. ಈ ಅಭ್ಯಾಸ ತುಂಬಾ ಕೆಟ್ಟದ್ದು ಯಾಕೆಂದರೆ ಇದರಿಂದ ಒತ್ತಡ ಜಾಸ್ತಿ ಆಗುತ್ತೆ ಮತ್ತು ಕೆಲಸನ ಚೆನ್ನಾಗಿ ಮಾಡಲಿಕ್ಕಾಗಲ್ಲ.” ಅವಳಿಗೆ ಸಹಾಯ ಮಾಡಿದ ಒಂದು ತತ್ವ 2 ತಿಮೊಥೆಯ 2:15​ರಲ್ಲಿದೆ. ಅಲ್ಲಿ ಹೀಗಿದೆ: “ನಿನ್ನನ್ನು ದೇವರ ಮುಂದೆ ಮೆಚ್ಚಿಗೆಯಾಗುವ ರೀತಿಯಲ್ಲಿ ಒಪ್ಪಿಸಿಕೊಳ್ಳಲು ನಿನ್ನಿಂದಾದಷ್ಟು ಶ್ರಮಿಸು; ಯಾವುದರಿಂದಲೂ ಲಜ್ಜಿತನಾಗದ ಕೆಲಸದವನೂ . . . ಆಗಿರು.” ಇಝಬೆಲಾ ಹೀಗನ್ನುತ್ತಾಳೆ: “ನಾನು ಕೆಲಸ ಮುಂದೂಡುವಾಗ ಅದರ ಗುಣಮಟ್ಟ ಚೆನ್ನಾಗಿರುವುದಿಲ್ಲ. ಅದನ್ನು ನೋಡಿ ಯೆಹೋವನು ನಾಚಿಕೆಪಡುವುದು ನನಗೆ ಇಷ್ಟವಿರಲಿಲ್ಲ.” ಅವಳು ಈಗ ಎಷ್ಟೋ ಸುಧಾರಿಸಿದ್ದಾಳೆ.

ಕೆಲ್ಸೀ ಎಂಬಾಕೆ ಸಹ ಹೀಗನ್ನುತ್ತಾಳೆ: “ಪ್ರಾಜೆಕ್ಟ್‌ ಇಷ್ಟೇ ದಿನದಲ್ಲಿ ಮುಗಿಯಬೇಕು ಅಂತ ಇರುತ್ತೆ. ಆದ್ರೆ ನಾನು ಕೊನೇ ವರೆಗೂ ಅದನ್ನ ಮುಟ್ಟೋಕೇ ಹೋಗ್ತಿರಲಿಲ್ಲ. ಆಮೇಲೆ ಅತ್ತು, ನಿದ್ದೆಗೆಟ್ಟು, ಚಿಂತೆ ಮಾಡ್ತಿದ್ದೆ. ಇದು ನನಗೆ ಒಳ್ಳೇದಾಗಿರಲಿಲ್ಲ.” ಕೆಲ್ಸೀಗೆ ಜ್ಞಾನೋಕ್ತಿ 13:16​ರಿಂದ ಸಹಾಯ ಸಿಕ್ಕಿತು. ಅಲ್ಲಿ, “ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು; ಮೂಢನು ತನ್ನ ಮೂರ್ಖತನವನ್ನು ಡಂಭವಾಗಿ ತೋರ್ಪಡಿಸುವನು” ಅಂತ ಇದೆ. ಈ ವಚನದ ಬಗ್ಗೆ ಧ್ಯಾನಿಸುವುದರಿಂದ ಆಕೆ ಒಂದು ವಿಷಯವನ್ನು ಕಲಿತಳು. “ಯೋಚನೆಮಾಡಿ ಮುಂಚೆಯೇ ಪ್ಲ್ಯಾನ್‌ ಮಾಡೋದು ಜಾಣತನ. ಮುಂದೆ ಮಾಡಬೇಕಾದ ಕೆಲಸದ ಶೆಡ್ಯೂಲ್‌ ಮಾಡಲು ನನ್ನ ಮೇಜಿನ ಮೇಲೆ ಒಂದು ಪುಸ್ತಕ ಇಟ್ಟಿದ್ದೇನೆ. ನಾನು ಯಾವಾಗ ಏನು ಮಾಡಬೇಕೆಂದು ತಿಳಿದುಕೊಳ್ಳಲು ಮತ್ತು ಕೊನೇ ನಿಮಿಷದ ವರೆಗೆ ಮುಂದೂಡದಿರಲು ಇದು ಸಹಾಯ ಮಾಡುತ್ತೆ” ಎನ್ನುತ್ತಾಳೆ ಕೆಲ್ಸೀ.

ಒಂಟಿತನ

“ನನ್ನ ಗಂಡ ನನ್ನನ್ನೂ ನಮ್ಮ ನಾಲ್ಕು ಚಿಕ್ಕ ಮಕ್ಕಳನ್ನೂ ಬಿಟ್ಟು ಹೋದರು” ಎನ್ನುತ್ತಾಳೆ ಕಿರ್ಸ್‌ಟನ್‌. ಈ ಸನ್ನಿವೇಶದಲ್ಲಿ ಅವಳಿಗೆ ಬೈಬಲಿನ ಯಾವ ತತ್ವ ಸಹಾಯ ಮಾಡಿತು? ಜ್ಞಾನೋಕ್ತಿ 17:17: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” ತನ್ನಂತೆಯೇ ಯೆಹೋವನನ್ನು ಆರಾಧಿಸುವವರು ಸಹಾಯ ಮಾಡುವರೆಂದು ಕಿರ್ಸ್‌ಟನ್‌ಗೆ ಗೊತ್ತಿತ್ತು. “ನನ್ನ ಸ್ನೇಹಿತರು ನನಗೆ ಆಧಾರವಾಗಿ ನಿಂತು ಬೇರೆಬೇರೆ ವಿಧಗಳಲ್ಲಿ ಸಹಾಯ ಮಾಡಿದರು. ಕೆಲವರು ನನ್ನ ಮನೆ ಬಾಗಿಲ ಹತ್ತಿರ ದಿನಸಿ ಸಾಮಾನನ್ನು ಮತ್ತು ಹೂಗುಚ್ಛಗಳನ್ನು ಇಟ್ಟು ಹೋದರು. ಮೂರು ಸಲ ಮನೆ ಬದಲಾಯಿಸುವಾಗ ಸಾಮಾನು ಸಾಗಿಸೋಕಂತ ಸ್ನೇಹಿತರ ಒಂದು ಚಿಕ್ಕ ಸೈನ್ಯವೇ ಬಂದಿತ್ತು! ಒಬ್ಬರ ಸಹಾಯದಿಂದ ನಂಗೆ ಕೆಲಸ ಸಿಕ್ಕಿತು. ಅಗತ್ಯವಿದ್ದಾಗೆಲ್ಲ ನನ್ನ ಸ್ನೇಹಿತರು ನನ್ನ ಜೊತೆ ಇದ್ರು.”

ಹಿಂದಿನ ಲೇಖನಗಳಲ್ಲಿ ತಿಳಿಸಲಾದ ಡೆಲ್ಫಿನ್‌ಳಿಗೂ ಎಲ್ಲವನ್ನೂ ಕಳಕೊಂಡಾಗ ಒಂಟಿತನ ಕಾಡುತ್ತಿತ್ತು. ಎಲ್ಲರೂ ತಮ್ಮ ಕುಟುಂಬದ ಜೊತೆ ಸಂತೋಷದಿಂದ ಜೀವನ ಮಾಡುತ್ತಿರುವಾಗ ತಾನು ಮಾತ್ರ ಒಬ್ಬಳೇ ಇದ್ದೇನೆ, ಸಂತೋಷನೇ ಇಲ್ಲ ಅಂತ ಅನಿಸಿತೆಂದು ಈಗ ಹೇಳುತ್ತಾಳೆ. “ನಂಗೆ ಯಾರೂ ಇಲ್ಲ ಅಂತ ಒಂಟಿತನ ಕಾಡುತ್ತಿತ್ತು” ಅನ್ನುತ್ತಾಳೆ ಅವಳು. ಅವಳಿಗೆ ಸಹಾಯ ಮಾಡಿದ ಒಂದು ವಚನ ಕೀರ್ತನೆ 68:6: “ದೇವರು ಒಬ್ಬಂಟಿಗರಿಗೆ ಮನೆಯನ್ನು ಕೊಡುತ್ತಾನೆ.” (ನೂತನ ಲೋಕ ಭಾಷಾಂತರ) ಅವಳು ಇದರ ಬಗ್ಗೆ ವಿವರಿಸುತ್ತಾ ಹೇಳಿದ್ದು: “ಈ ವಚನದ ಅರ್ಥ ಏನೆಂದರೆ ಈಗ ವಾಸಮಾಡಲಿಕ್ಕಾಗಿ ದೇವರು ಒಂದು ಅಕ್ಷರಾರ್ಥ ಮನೆ ಮಾತ್ರ ಅಲ್ಲ, ಆಧ್ಯಾತ್ಮಿಕ ಮನೆ, ಅಂದರೆ ನಿಜವಾದ ಸುರಕ್ಷತೆಯಿರುವ ಸ್ಥಳವನ್ನೂ ಕೊಡುತ್ತಾನೆ. ಅಲ್ಲಿ ನಮಗೆ ಯೆಹೋವನನ್ನು ಪ್ರೀತಿಸುವವರ ಜೊತೆ ನಿಜವಾದ ಸಂಬಂಧ ಹಾಗೂ ಭಾವನಾತ್ಮಕ ಬಂಧಗಳನ್ನು ಬೆಸೆಯಲಿಕ್ಕಾಗುತ್ತದೆ. ಆದರೆ ಅಂಥವರಿಗೆ ನಾನು ಹತ್ತಿರ ಆಗಬೇಕಾದರೆ ನಾನು ಮೊದಲು ಯೆಹೋವನಿಗೆ ಹೆಚ್ಚು ಹತ್ತಿರ ಆಗಬೇಕೆಂದು ಗ್ರಹಿಸಿದೆ. ಈ ವಿಷಯದಲ್ಲಿ ಕೀರ್ತನೆ 37:4 ಸಹಾಯಮಾಡಿತು: ‘ಯೆಹೋವನಲ್ಲಿ ಸಂತೋಷಿಸು ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.’”

ಕೊನೆಯಲ್ಲಿ ಅವಳು ಹೇಳುವುದು: “ಯೆಹೋವನು ಎಲ್ಲರಿಗಿಂತ ಉತ್ತಮ ಸ್ನೇಹಿತನಾಗಿರೋದರಿಂದ ಆತನಿಗೆ ಇನ್ನಷ್ಟು ಬಲವಾಗಿ ಅಂಟಿಕೊಳ್ಳಬೇಕೆಂದು ನನಗೆ ಅರ್ಥವಾಯಿತು. ನಂತರ ನಾನೊಂದು ಪಟ್ಟಿಮಾಡಿ ಅದರಲ್ಲಿ, ಬೇರೆಯವರ ಆಧ್ಯಾತ್ಮಿಕ ಗುಣಗಳ ಆಧಾರದ ಮೇಲೆ ಅವರ ಜೊತೆ ಸ್ನೇಹ ಬೆಳೆಸಲು ಯಾವೆಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಲ್ಲೆ ಎಂದು ಬರೆದೆ. ಬೇರೆಯವರಲ್ಲಿರುವ ಒಳ್ಳೇದನ್ನು ನೋಡಲು ಮತ್ತು ಅವರಲ್ಲಿನ ಕುಂದುಕೊರತೆಗಳನ್ನು ಅಲಕ್ಷಿಸಲು ಕಲಿತೆ.”

ದೇವರ ಸೇವೆ ಮಾಡುವ ಸ್ನೇಹಿತರೂ ಅಪರಿಪೂರ್ಣರು, ತಪ್ಪು ಮಾಡುತ್ತಾರೆ. ಯೆಹೋವನ ಸಾಕ್ಷಿಗಳಿಗೂ ಎಲ್ಲರಂತೆ ಸಮಸ್ಯೆಗಳು ಬರುತ್ತವೆ. ಆದರೆ ಸಾಧ್ಯವಾದಾಗೆಲ್ಲಾ ಇತರರಿಗೆ ಸಹಾಯ ಮಾಡುವಂತೆ ಬೈಬಲ್‌ ಆಧಾರಿತ ತರಬೇತಿ ಅವರನ್ನು ಪ್ರಚೋದಿಸುತ್ತದೆ. ಇಂಥವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಜಾಣತನ. ಆದರೆ ದೀರ್ಘಕಾಲದ ಕಾಯಿಲೆ, ಸಾವಿನ ನೋವು ಮುಂತಾದ ಈಗ ಬಗೆಹರಿಯದ ಸಮಸ್ಯೆಗಳ ವಿಷಯದಲ್ಲೂ ಬೈಬಲ್‌ ತತ್ವಗಳು ಸಹಾಯ ಮಾಡುತ್ತವಾ?

ಬೈಬಲ್‌ ಸಲಹೆಯನ್ನು ಅನ್ವಯಿಸುವುದರಿಂದ ಬೆಂಬಲ ನೀಡುವ ಸ್ನೇಹಿತರನ್ನು ಪಡೆಯಬಹುದು