ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಂದಕ್ಕೆ ನಿಜವಾಗುವ ವಾಗ್ದಾನಗಳು

ಮುಂದಕ್ಕೆ ನಿಜವಾಗುವ ವಾಗ್ದಾನಗಳು

ಯೇಸು ಭವಿಷ್ಯನುಡಿದಂತೆಯೇ ದೇವರ ರಾಜ್ಯದ ಸುವಾರ್ತೆಯನ್ನು ಇಡೀ ಲೋಕದಲ್ಲಿ ಸಾರಲಾಗುತ್ತಿದೆ. (ಮತ್ತಾಯ 24:14) ಈ ರಾಜ್ಯ ದೇವರು ನಡೆಸುವ ಒಂದು ಸರ್ಕಾರ ಆಗಿದೆ ಎಂದು ಬೈಬಲಿನಲ್ಲಿರುವ ದಾನಿಯೇಲ ಎಂಬ ಪುಸ್ತಕ ತಿಳಿಸುತ್ತದೆ. ಆ ಪುಸ್ತಕದ 2​ನೇ ಅಧ್ಯಾಯದಲ್ಲಿ ಪ್ರಾಚೀನ ಬ್ಯಾಬಿಲೋನ್‌ನಿಂದ ಹಿಡಿದು ನಮ್ಮ ಈ ಕಾಲದ ವರೆಗಿನ ಕೆಲವು ನಿರ್ದಿಷ್ಟ ಶಕ್ತಿಶಾಲಿ ಮಾನವ ಸರ್ಕಾರಗಳ ಇಲ್ಲವೇ ರಾಜ್ಯಗಳ ಬಗ್ಗೆ ತಿಳಿಸುವ ಭವಿಷ್ಯನುಡಿ ಇದೆ. ಆ ಅಧ್ಯಾಯದ 44​ನೇ ವಚನ ಭವಿಷ್ಯದಲ್ಲಿ ಏನಾಗಲಿದೆಯೆಂದು ತಿಳಿಸುತ್ತದೆ:

“ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”

ಬೈಬಲಿನ ಈ ಭವಿಷ್ಯನುಡಿ ಮತ್ತು ಇನ್ನಿತರ ಭವಿಷ್ಯನುಡಿಗಳಿಗನುಸಾರ, ದೇವರ ರಾಜ್ಯ ಎಲ್ಲ ಮಾನವ ಆಳ್ವಿಕೆಯನ್ನು ತೆಗೆದುಹಾಕಿ, ಭೂಮಿಯಲ್ಲಿ ಜನರಿಗೆ ಸ್ಥಿರತೆ ಮತ್ತು ಶಾಂತಿ ತರಲಿದೆ. ಆ ರಾಜ್ಯ ಆಳುವಾಗ ಜೀವನ ಹೇಗಿರಲಿದೆ? ಬೇಗನೆ ನಿಜವಾಗಲಿರುವ ಕೆಲವು ಅದ್ಭುತಕರ ವಾಗ್ದಾನಗಳು ಇಲ್ಲಿವೆ:

  • ಯುದ್ಧ ಇರುವುದಿಲ್ಲ

    ಕೀರ್ತನೆ 46:9: ದೇವರು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”

    ಶಸ್ತ್ರಗಳನ್ನು, ಆಯುಧಗಳನ್ನು ತಯಾರಿಸಲಿಕ್ಕಾಗಿ ತುಂಬ ಹಣ ಮತ್ತು ಬುದ್ಧಿವಂತಿಕೆಯನ್ನು ಬಳಸಲಾಗುತ್ತದೆ. ಸ್ವಲ್ಪ ಯೋಚಿಸಿ, ಈ ಹಣ ಮತ್ತು ಬುದ್ಧಿವಂತಿಕೆಯನ್ನು ಜನರನ್ನು ಕೊಲ್ಲಲಿಕ್ಕಾಗಿ ಅಲ್ಲ, ಅವರ ಪ್ರಯೋಜನಕ್ಕಾಗಿ ಬಳಸಿದರೆ ಈ ಲೋಕ ಎಷ್ಟು ಚೆನ್ನಾಗಿರುತ್ತದಲ್ಲವಾ? ಮೇಲೆ ಕೊಡಲಾದ ಭವಿಷ್ಯನುಡಿ ದೇವರ ರಾಜ್ಯ ಆಳುವಾಗ ನಿಜವಾಗಲಿದೆ.

  • ಕಾಯಿಲೆ ಇರುವುದಿಲ್ಲ

    ಯೆಶಾಯ 33:24: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”

    ಯಾರಿಗೂ ಹೃದಯ ರೋಗ, ಕ್ಯಾನ್ಸರ್‌, ಮಲೇರಿಯ ಇಲ್ಲವೇ ಬೇರಾವುದೇ ಅಸ್ವಸ್ಥತೆ ಇಲ್ಲದಿರುವ ಲೋಕ ಹೇಗಿರಬಹುದೆಂದು ಯೋಚಿಸಿ. ಆಗ ಆಸ್ಪತ್ರೆಗಳ, ಔಷಧಗಳ ಅಗತ್ಯವಿರುವುದಿಲ್ಲ. ಪರಿಪೂರ್ಣ ಆರೋಗ್ಯವೇ ಭೂಮಿಯಲ್ಲಿರುವವರೆಲ್ಲರ ಮುಂದಿನ ಭವಿಷ್ಯ.

  • ಆಹಾರದ ಕೊರತೆ ಇರುವುದಿಲ್ಲ

    ಕೀರ್ತನೆ 72:16: “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ.”

    ಭೂಮಿಯು ಎಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸಲಿದೆ. ಎಲ್ಲರಿಗೆ ಅದು ಲಭ್ಯವೂ ಆಗಲಿದೆ. ಹಸಿವೆ ಮತ್ತು ನ್ಯೂನಪೋಷಣೆ ಇರುವುದಿಲ್ಲ.

  • ನೋವು, ದುಃಖ, ಮರಣ ಇರುವುದಿಲ್ಲ

    ಪ್ರಕಟನೆ 21:4: ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”

    ಇದರರ್ಥ ಮಾನವರಿಗೆ ಪರಿಪೂರ್ಣವಾದ, ಅಂತ್ಯವಿಲ್ಲದ ಜೀವನ ಸಿಗಲಿದೆ! ಅದೂ, ಒಂದು ಸುಂದರ ತೋಟವಾಗುವ ಇದೇ ಭೂಮಿಯಲ್ಲಿ. ನಮ್ಮ ಪ್ರೀತಿಯ ಸೃಷ್ಟಿಕರ್ತನಾದ ಯೆಹೋವ ದೇವರು ಕೊಟ್ಟ ವಚನ ಇದೇ.

‘ಉದ್ದೇಶಿಸಿದ್ದು ಕೈಗೂಡಲಿದೆ’

ಇದೆಲ್ಲ ಕೇಳಲು ತುಂಬ ಚೆನ್ನಾಗಿದೆ, ಆದರೆ ನಿಜವಾಗುವುದು ಅಸಾಧ್ಯ ಎಂದನಿಸುತ್ತದಾ? ಬೈಬಲಿನಲ್ಲಿ ವಾಗ್ದಾನಿಸಲಾದ, ವರ್ಣಿಸಲಾದ ಆ ಜೀವನಕ್ಕಾಗಿ ಎಲ್ಲರೂ ಆಸೆಪಡುತ್ತಾರೆ. ಹಾಗಿದ್ದರೂ, ಸಾವಿಲ್ಲದೆ ಶಾಶ್ವತವಾಗಿ ಬದುಕುವ ವಿಚಾರವನ್ನು ಅನೇಕರಿಗೆ ಹಲವಾರು ಕಾರಣಗಳಿಗಾಗಿ ಗ್ರಹಿಸಲು ಆಗುವುದಿಲ್ಲ. ಇದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ, ಯಾಕೆಂದರೆ ಶಾಶ್ವತವಾಗಿ ಬದುಕಿರುವ ಯಾವ ಮಾನವನೂ ಭೂಮಿಯಲ್ಲಿ ಇಲ್ಲವಲ್ಲಾ!

ಮಾನವಕುಲವು ಪಾಪಮರಣದ ದಾಸತ್ವದ ಕೆಳಗಿದ್ದು, ನೋವು, ನರಳಾಟ ಹಾಗೂ ಕಷ್ಟಗಳ ಹೊರೆಯನ್ನು ಎಷ್ಟು ದೀರ್ಘ ಸಮಯದಿಂದ ಹೊತ್ತುಕೊಂಡಿದೆಯೆಂದರೆ ಅನೇಕ ಜನರು ಅದನ್ನೆಲ್ಲ ಸಾಮಾನ್ಯ, ಸಹಜ ಎಂದು ಎಣಿಸುತ್ತಾರೆ. ಆದರೆ ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ಮಾನವಕುಲಕ್ಕಾಗಿ ಇದನ್ನು ಉದ್ದೇಶಿಸಿರಲಿಲ್ಲ.

ತನ್ನ ವಾಗ್ದಾನಗಳೆಲ್ಲವೂ ನಿಜವಾಗಲಿವೆ ಎಂಬದನ್ನು ನಾವು ಗ್ರಹಿಸಲು ಸಹಾಯವಾಗುವಂತೆ ದೇವರು ಖಡಾಖಂಡಿತವಾಗಿ ಹೀಗಂದಿದ್ದಾನೆ: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.

ಬೈಬಲ್‌ ಯೆಹೋವನನ್ನು “ಸುಳ್ಳಾಡಲು ಸಾಧ್ಯವಿಲ್ಲದ ದೇವರು” ಎಂದು ವರ್ಣಿಸುತ್ತದೆ. (ತೀತ 1:2) ಭವಿಷ್ಯತ್ತಿಗಾಗಿ ಆತನು ಈ ಎಲ್ಲ ಅದ್ಭುತ ಸಂಗತಿಗಳ ಬಗ್ಗೆ ಮಾತು ಕೊಟ್ಟಿರುವುದರಿಂದ ನಾವು ಈ ಮುಂದಿನ ಪ್ರಶ್ನೆಗಳ ಬಗ್ಗೆ ಯೋಚಿಸುವುದು ಒಳ್ಳೇದು: ದೇವರು ವಾಗ್ದಾನಿಸಿದಂತೆ ಸುಂದರ ತೋಟವಾಗಲಿರುವ ಈ ಭೂಮಿಯಲ್ಲಿ ಮಾನವರು ಶಾಶ್ವತವಾಗಿ ಜೀವಿಸಲು ನಿಜವಾಗಲೂ ಸಾಧ್ಯನಾ? ದೇವರ ಆ ಮಾತು ನಿಜವಾಗುವುದನ್ನು ನೋಡಲು ನಾವೇನು ಮಾಡಬೇಕು? ಈ ಸಾಹಿತ್ಯದ ಮುಂದಿನ ಪುಟಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಉಪಯುಕ್ತ ಮಾಹಿತಿ ಇದೆ.