ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯವನ್ನು ತಿಳಿಸುವ ಪ್ರಯತ್ನ

ಭವಿಷ್ಯವನ್ನು ತಿಳಿಸುವ ಪ್ರಯತ್ನ

ನಿಮಗೆ ಯಾವತ್ತಾದರೂ ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯ ಹೇಗಿರಬಹುದೆಂಬ ಕುತೂಹಲ ಹುಟ್ಟಿದೆಯಾ? ಮುಂದೆ ನಿಮಗೆ ಸಿರಿಸಂಪತ್ತು ಸಿಗಲಿದೆಯಾ ನಷ್ಟವಾಗಲಿದೆಯಾ? ಮದುವೆ ಆಗುತ್ತದಾ, ಒಂಟಿಯಾಗಿಯೇ ಬಾಳಬೇಕಾಗುತ್ತದಾ? ನೂರು ವರ್ಷ ಬದುಕುತ್ತೀರಾ, ಜೀವನ ಅರ್ಧಕ್ಕೇ ನಿಂತುಹೋಗುತ್ತಾ? ಇಂಥ ಪ್ರಶ್ನೆಗಳ ಬಗ್ಗೆ ಜನರು ಸಾವಿರಾರು ವರ್ಷಗಳಿಂದ ತುಂಬ ಯೋಚಿಸಿದ್ದಾರೆ.

ಇಂದು ತಜ್ಞರು ಭೂಸುತ್ತಲೂ ನಡೆಯುತ್ತಿರುವ ವಿಷಯಗಳನ್ನು, ಜನರ ಮನೋಭಾವಗಳನ್ನು ಅಧ್ಯಯನಮಾಡಿ ಭವಿಷ್ಯ ಹೇಗಿರಬಹುದೆಂದು ತಿಳಿಸುತ್ತಾರೆ. ಅವರ ಅನೇಕ ಭವಿಷ್ಯನುಡಿಗಳು ನಿಜವಾಗಿವೆ, ಇನ್ನು ಕೆಲವು ಪೂರ್ತಿ ಸುಳ್ಳೆಂದು ರುಜುವಾಗಿವೆ. ಉದಾಹರಣೆಗೆ, ಒಂದು ವಿಧದ ತಂತಿರಹಿತ ಟೆಲಿಗ್ರಾಫ್‌ನ ಆವಿಷ್ಕಾರ ಮಾಡಿದ ಗೂಲ್‌ಯೆಲ್ಮೊ ಮಾರ್ಕೊನಿ ಎಂಬವರು 1912​ರಲ್ಲಿ ಹೀಗೆ ಭವಿಷ್ಯನುಡಿದರೆಂದು ಹೇಳಲಾಗಿದೆ: “ತಂತಿರಹಿತ ಯುಗವು ಆರಂಭವಾದಾಗ ಎಲ್ಲ ಯುದ್ಧಗಳು ನಿಂತುಹೋಗಲಿವೆ.” ಇನ್ನೊಂದು ಉದಾಹರಣೆ ‘ಡೆಕ್ಕ ರೆಕಾರ್ಡ್‌ ಕಂಪೆನಿಯ’ ಒಬ್ಬ ಏಜೆಂಟರದ್ದು. ಗಿಟಾರ್‌ ಸಂಗೀತ ತಂಡಗಳು ಜನಪ್ರಿಯತೆ ಕಳೆದುಕೊಳ್ಳಲಿವೆ ಎಂಬ ಅಭಿಪ್ರಾಯ ಇವರಿಗಿತ್ತು. ಹಾಗಾಗಿ 1962​ರಲ್ಲಿ ‘ಬೀಟಲ್ಸ್‌’ ಎಂಬ ಸಂಗೀತ ತಂಡವನ್ನು ತಳ್ಳಿಹಾಕಿದ್ದರು. ಆದರೆ ಇದೇ ತಂಡ ಮುಂದೆ ತುಂಬ ಪ್ರಸಿದ್ಧವಾಯಿತು.

ಭವಿಷ್ಯ ತಿಳಿಯಲು ಅನೇಕರು ಅತಿಮಾನುಷ ಮೂಲಗಳ ಮೊರೆಹೋಗುತ್ತಾರೆ. ಅದಕ್ಕಾಗಿ ಅವರು ಜ್ಯೋತಿಷಿಗಳ ಸಲಹೆ ಪಡೆದುಕೊಳ್ಳುತ್ತಾರೆ. ಜ್ಯೋತಿಷಿಗಳು ಹೇಳುವ ಜಾತಕಗಳು ಅನೇಕ ಪತ್ರಿಕೆಗಳಲ್ಲಿ, ವಾರ್ತಾಪತ್ರಿಕೆಗಳಲ್ಲಿ ಯಾವಾಗಲೂ ಬರುತ್ತವೆ. ಇನ್ನು ಕೆಲವರು ಕಣಿಹೇಳುವವರ ಸಹಾಯ ಕೇಳುತ್ತಾರೆ. ಇವರು ಸಂಖ್ಯೆಗಳ, ಟ್ಯಾರೋ ಕಾರ್ಡ್‌ಗಳಲ್ಲಿನ (ಭವಿಷ್ಯ ಹೇಳಲು ಬಳಸುವ ಇಸ್ಪೀಟೆಲೆ) ವಿನ್ಯಾಸಗಳ ಅಥವಾ ಹಸ್ತರೇಖೆಗಳ ಅರ್ಥವಿವರಿಸಿ ಭವಿಷ್ಯನುಡಿಯುತ್ತೇವೆಂದು ಹೇಳುತ್ತಾರೆ.

ಪ್ರಾಚೀನ ಕಾಲದಲ್ಲಿ ಕೆಲವರು ಭವಿಷ್ಯ ತಿಳಿದುಕೊಳ್ಳಲು ಪಾತ್ರಿಗಳ ಬಳಿ ಹೋಗುತ್ತಿದ್ದರು. ಇವರು, ತಾವು ಒಬ್ಬ ದೇವತೆಯಿಂದ ಬಂದ ಮಾಹಿತಿಯನ್ನು ದಾಟಿಸುವ ಮಾಧ್ಯಮವೆಂದು ಹೇಳಿಕೊಳ್ಳುತ್ತಿದ್ದ ಅರ್ಚಕ ಇಲ್ಲವೇ ಅರ್ಚಕಿ ಆಗಿರುತ್ತಿದ್ದರು. ಉದಾಹರಣೆಗೆ, ಲಿಡಿಯದ ರಾಜ ಕ್ರೀಸಸ್‌ ಗ್ರೀಸ್‌ನ ಡೆಲ್ಫಿಯಲ್ಲಿದ್ದ ಪಾತ್ರಿಗೆ ಬೆಲೆಬಾಳುವ ಉಡುಗೊರೆಗಳನ್ನು ಕಳುಹಿಸಿ, ತಾನು ಪರ್ಷಿಯದ ರಾಜ ಸೈರಸ್‌ನ (ಕೋರೆಷ) ವಿರುದ್ಧ ಯುದ್ಧಮಾಡಿದರೆ ಏನಾಗುತ್ತದೆಂದು ಕೇಳಿದನು ಎನ್ನಲಾಗಿದೆ. ಸೈರಸ್‌ ವಿರುದ್ಧ ದಂಡೆತ್ತಿ ಹೋದರೆ ಕ್ರೀಸಸ್‌ “ಒಂದು ಮಹಾ ಸಾಮ್ರಾಜ್ಯವನ್ನು” ನಾಶಮಾಡುವನೆಂದು ಆ ಪಾತ್ರಿ ಹೇಳಿಕಳುಹಿಸಿದನು. ವಿಜಯ ಖಂಡಿತ ಎಂಬ ಭರವಸೆಯಿಂದ ಕ್ರೀಸಸ್‌ ಯುದ್ಧಕ್ಕಿಳಿದ. ಒಂದು ಸಾಮ್ರಾಜ್ಯ ನಾಶವಾಗಿದ್ದೇನೊ ನಿಜ. ಆದರೆ ಸೈರಸನದ್ದಲ್ಲ, ಕ್ರೀಸಸ್‌ನದ್ದೇ!!

ಹೇಗೆ ಬೇಕೊ ಹಾಗೆ ಅರ್ಥಮಾಡಿಕೊಳ್ಳಬಹುದಾದ ಆ ಭವಿಷ್ಯನುಡಿ ವ್ಯರ್ಥವಾಗಿತ್ತು. ಯಾವುದೇ ಪಕ್ಷ ಜಯಹೊಂದಿದರೂ ಆ ಭವಿಷ್ಯನುಡಿ ನಿಜವಾಗಿದೆಯೆಂದು ತೋರುತ್ತಿತ್ತು. ಈ ತಪ್ಪಾದ ಮಾಹಿತಿ ನಂಬಿ ಕ್ರೀಸಸ್‌ ತನ್ನ ಗುಂಡಿಯನ್ನು ತಾನೇ ತೋಡಿಕೊಂಡ! ಇಂದು ಭವಿಷ್ಯನುಡಿಯುವ ಜನಪ್ರಿಯ ವಿಧಾನಗಳ ಮೊರೆಹೋಗುವವರ ಗತಿಯೂ ಇದೇ ಅಲ್ಲವೇ?