ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಲು ಸಾಧ್ಯ

ನೀವು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಲು ಸಾಧ್ಯ

ಎಂಥ ಆಶ್ಚರ್ಯಕರ ನಿರೀಕ್ಷೆ! ಸೃಷ್ಟಿಕರ್ತನು ನಮಗೆ ಇದೇ ಭೂಮಿಯಲ್ಲಿ ಶಾಶ್ವತ ಬದುಕು ಕೊಡುತ್ತೇನೆಂದು ಮಾತುಕೊಟ್ಟಿದ್ದಾನೆ. ಆದರೆ ಅನೇಕರಿಗೆ ಇದನ್ನು ನಂಬಲು ಕಷ್ಟ. ‘ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇ ಬೇಕು’ ಅಂತನೋ ‘ಹುಟ್ಟಿದ ಮೇಲೆ ಸಾವು ಇದ್ದೇ ಇದೆ, ಅದು ಪ್ರಕೃತಿ ನಿಯಮ’ ಅಂತನೋ ಅವರು ಹೇಳುತ್ತಾರೆ. ಇನ್ನು ಕೆಲವರು, ‘ಶಾಶ್ವತ ಜೀವನ ಸಿಗುತ್ತದೆ, ಆದರೆ ಅದು ಈ ಭೂಮಿಯಲ್ಲಲ್ಲ, ಸತ್ತು ಸ್ವರ್ಗಕ್ಕೆ ಹೋದ ಮೇಲೆ’ ಎನ್ನುತ್ತಾರೆ. ನಿಮಗೇನು ಅನಿಸುತ್ತದೆ?

ನೀವೊಂದು ನಿರ್ಣಯಕ್ಕೆ ಬರುವುದಕ್ಕೂ ಮುಂಚೆ, ಈ ಮೂರು ಪ್ರಶ್ನೆಗಳಿಗೆ ಬೈಬಲ್‌ ಕೊಡುವ ಉತ್ತರಗಳೇನೆಂದು ನೋಡೋಣ: ಮಾನವನನ್ನು ಸೃಷ್ಟಿಮಾಡಲಾದ ವಿಧದಿಂದ ಅವನನ್ನು ಎಷ್ಟು ಕಾಲ ಬದುಕಲಿಕ್ಕಾಗಿ ಸೃಷ್ಟಿಸಲಾಯಿತೆಂದು ತಿಳಿದುಬರುತ್ತದೆ? ಭೂಮಿ ಮತ್ತು ಮಾನವರಿಗಾಗಿ ದೇವರ ಮೂಲ ಉದ್ದೇಶವೇನು? ಮಾನವರೆಲ್ಲರಿಗೆ ಸಾವು ಹೇಗೆ ಬಂತು?

ಮಾನವರಿಗೆ ಮಾತ್ರ ಇರುವ ಸಾಮರ್ಥ್ಯಗಳು

ದೇವರು ಸೃಷ್ಟಿ ಮಾಡಿರುವ ಜೀವರಾಶಿಯಲ್ಲಿ ಮಾನವನೇ ವಿಶೇಷ. ಯಾಕೆ? ಯಾಕೆಂದರೆ ಬೈಬಲಿನ ಪ್ರಕಾರ ಮಾನವರನ್ನು ಮಾತ್ರ ದೇವರ “ಸ್ವರೂಪದಲ್ಲಿ” ಮತ್ತು ಆತನ “ಹೋಲಿಕೆಗೆ ಸರಿಯಾಗಿ” ಸೃಷ್ಟಿಸಲಾಗಿದೆ. (ಆದಿಕಾಂಡ 1:26, 27) ಇದರ ಅರ್ಥವೇನು? ದೇವರ ಸ್ವಭಾವ ಮತ್ತು ಗುಣಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಮನುಷ್ಯರಿಗೆ ಕೊಡಲಾಗಿದೆ. ಉದಾಹರಣೆಗೆ, ಪ್ರೀತಿ ಮತ್ತು ನ್ಯಾಯ ಪ್ರಜ್ಞೆ.

ಅಷ್ಟೇ ಅಲ್ಲ, ಯೋಚಿಸುವ ಮತ್ತು ತರ್ಕಿಸುವ ಸಾಮರ್ಥ್ಯವನ್ನು ಮಾನವರಿಗೆ ಕೊಡಲಾಗಿದೆ. ಜೊತೆಗೆ, ಒಳ್ಳೇದರ ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಕೊಡಲಾಗಿದೆ. ದೇವರನ್ನು ತಿಳಿದುಕೊಳ್ಳುವ ಮತ್ತು ಆತನೊಂದಿಗೆ ಸಂಬಂಧ ಬೆಳೆಸುವ ಬಯಕೆಯನ್ನೂ ಅವನಲ್ಲಿ ಇಡಲಾಗಿದೆ. ಈ ಎಲ್ಲಾ ಸಾಮರ್ಥ್ಯಗಳು ಇರುವುದರಿಂದಲೇ ನಾವು ವಿಶ್ವದ ಸೊಬಗನ್ನು ಮತ್ತು ಪ್ರಕೃತಿಯಲ್ಲಿನ ವಿಸ್ಮಯಗಳನ್ನು ನೋಡಿ ಆನಂದಿಸುತ್ತೇವೆ ಮಾತ್ರವಲ್ಲ ಕಲೆ, ಸಂಗೀತ, ಕವಿತೆಗಳನ್ನು ಮೆಚ್ಚಿಕೊಳ್ಳುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಸೃಷ್ಟಿಕರ್ತನನ್ನು ಆರಾಧಿಸುವ ಸಾಮರ್ಥ್ಯ ಮಾನವರಿಗೆ ಮಾತ್ರ ಇದೆ. ಇಂಥ ಸಾಮರ್ಥ್ಯಗಳಿಂದಾಗಿ ಮಾನವರ ಮತ್ತು ಭೂಮಿಯಲ್ಲಿರುವ ಬೇರೆಲ್ಲಾ ಜೀವಿಗಳ ಮಧ್ಯೆ ತುಂಬ ದೊಡ್ಡ ಅಂತರವಿದೆ.

ಸ್ವಲ್ಪ ಯೋಚಿಸಿ: ದೇವರು ಮಾನವರನ್ನು ಬರೀ 70 ಅಥವಾ 80 ವರ್ಷ ಬದುಕಲಿಕ್ಕಾಗಿ ಸೃಷ್ಟಿಮಾಡಿದ್ದರೆ ಇಂಥ ಅದ್ಭುತ ಗುಣ, ಸಾಮರ್ಥ್ಯಗಳನ್ನು ಕೊಡುತ್ತಿದ್ದನಾ? ಜೊತೆಗೆ, ಅವುಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಸಾಮರ್ಥ್ಯವನ್ನೂ ಕೊಡುತ್ತಿದ್ದನಾ? ನಿಜವೇನೆಂದರೆ ದೇವರು ನಮಗೆ ಈ ವಿಶೇಷ ಗುಣಗಳನ್ನು, ಸಾಮರ್ಥ್ಯಗಳನ್ನು ಕೊಟ್ಟಿದ್ದು ನಾವು ಇದೇ ಭೂಮಿಯಲ್ಲಿ ಆನಂದದಿಂದ ಶಾಶ್ವತವಾಗಿ ಜೀವಿಸಲಿಕ್ಕಾಗಿಯೇ.

ದೇವರ ಮೂಲ ಉದ್ದೇಶ

ಮನುಷ್ಯರು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವುದು ದೇವರ ಉದ್ದೇಶವಾಗಿರಲಿಲ್ಲ ಎನ್ನುತ್ತಾರೆ ಕೆಲವರು. ಅವರ ಪ್ರಕಾರ, ಸ್ವರ್ಗದಲ್ಲಿ ದೇವರ ಜೊತೆ ಶಾಶ್ವತವಾಗಿ ಜೀವಿಸಲು ಯಾರು ಅರ್ಹರು ಎಂದು ನಿರ್ಧರಿಸಲಿಕ್ಕಾಗಿ ನಮ್ಮನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಹೀಗೆ ನಾವು ಸ್ವಲ್ಪ ಸಮಯ ಇರಲಿಕ್ಕಾಗಿ ದೇವರು ಭೂಮಿಯನ್ನು ಮಾಡಿದ್ದಾನೆ. ಇದು ನಿಜವಾಗಿದ್ದರೆ, ಭೂಮಿಯಲ್ಲಿರುವ ಎಲ್ಲಾ ಕೆಟ್ಟ-ದುಷ್ಟ ವಿಷಯಗಳಿಗೆ ದೇವರೇ ಕಾರಣನಾಗುತ್ತಾನೆ ಅಲ್ಲವೇ? ಆದರೆ ಅದು ದೇವರ ಸ್ವಭಾವಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ, “ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ” ಎಂದು ಬೈಬಲ್‌ ಹೇಳುತ್ತದೆ.—ಧರ್ಮೋಪದೇಶಕಾಂಡ 32:4.

ಭೂಮಿಗಾಗಿ ದೇವರ ಮೂಲ ಉದ್ದೇಶ ಏನೆಂದು ಬೈಬಲಿನ ಈ ಮಾತುಗಳು ಸ್ಪಷ್ಟಪಡಿಸುತ್ತವೆ: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.” (ಕೀರ್ತನೆ 115:16) ದೇವರು ಭೂಮಿಯನ್ನು ಮಾನವರ ಸುಂದರ, ಶಾಶ್ವತ ಮನೆಯಾಗಿರುವಂತೆ ಸೃಷ್ಟಿಸಿ, ಅವರು ಅರ್ಥಭರಿತವಾದ, ಅಂತ್ಯವಿಲ್ಲದ ಜೀವನವನ್ನು ಆನಂದಿಸಲು ಬೇಕಾದ ಎಲ್ಲವನ್ನೂ ಅದರಲ್ಲಿ ಇಟ್ಟನು.—ಆದಿಕಾಂಡ 2:8, 9.

“ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.”—ಕೀರ್ತನೆ 115:16

ಮಾನವರಿಗಾಗಿ ದೇವರ ಉದ್ದೇಶ ಏನೆಂದು ಸಹ ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ದೇವರು ಪ್ರಥಮ ಮಾನವ ದಂಪತಿಯಾದ ಆದಾಮ ಮತ್ತು ಹವ್ವರಿಗೆ ಹೀಗಂದನು: “ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. . . . ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ತಮ್ಮ ಮನೆಯಾಗಿದ್ದ ಏದೆನ್‌ ಎಂಬ ಸುಂದರ ತೋಟವನ್ನು ನೋಡಿಕೊಂಡು ಅದನ್ನು ಇಡೀ ಭೂಮಿಗೆ ವಿಸ್ತರಿಸುವ ಕೆಲಸವನ್ನು ಅವರಿಗೆ ಕೊಡಲಾಯಿತು. ಎಂಥ ಸುಯೋಗ ಅಲ್ಲವೇ! ಆದಾಮ-ಹವ್ವ ಮತ್ತವರ ಸಂತತಿಯವರಿಗೆ ಭೂಮಿಯಲ್ಲೇ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಇತ್ತು, ಸ್ವರ್ಗದಲ್ಲಿ ಬಹುಮಾನ ಪಡೆಯುವುದಲ್ಲ ಎನ್ನುವುದು ಖಚಿತ.

ನಾವು ಯಾಕೆ ಸಾಯುತ್ತೇವೆ?

ಮನುಷ್ಯರು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವುದೇ ದೇವರ ಮೂಲ ಉದ್ದೇಶ ಆಗಿದ್ದರೆ ನಾವು ಯಾಕೆ ಸಾಯುತ್ತೇವೆ? ದೇವರು ಏದೆನ್‌ ತೋಟದಲ್ಲಿ ಮಾಡಿದ ಏರ್ಪಾಡುಗಳನ್ನು ದೇವದೂತನೊಬ್ಬನು ಭಂಗಗೊಳಿಸಲು ಪ್ರಯತ್ನಿಸಿದನು. ಇವನನ್ನು ನಂತರ ದಂಗೆಕೋರ ಪಿಶಾಚನಾದ ಸೈತಾನ ಎಂದು ಕರೆಯಲಾಯಿತು. ಅವನೇನು ಮಾಡಿದನು?

ದೇವರ ವಿರುದ್ಧ ದಂಗೆ ಏಳುವುದರಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ಸೈತಾನನು ನಮ್ಮ ಮೊದಲ ಹೆತ್ತವರಾದ ಆದಾಮ-ಹವ್ವರನ್ನು ಪುಸಲಾಯಿಸಿದನು. ದೇವರು ಅವರಿಗೆ ಒಂದು ಒಳ್ಳೇ ವಿಷಯವನ್ನು ಕೊಟ್ಟಿಲ್ಲ ಅಂದರೆ ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂದು ಅವರೇ ನಿರ್ಧಾರ ಮಾಡುವ ಹಕ್ಕನ್ನು ಕೊಟ್ಟಿಲ್ಲ ಎಂದು ಸೈತಾನನು ಹೇಳಿದನು. ಆಗ ಅವರು ಸೈತಾನನ ಪರವಹಿಸಿ ದೇವರ ವಿರುದ್ಧ ದಂಗೆ ಎದ್ದರು. ಪರಿಣಾಮ? ಸಮಯಾನಂತರ ಅವರು ಸತ್ತುಹೋದರು. ಹೀಗೆ ಆಗುತ್ತದೆಂದು ದೇವರು ಮೊದಲೇ ಎಚ್ಚರಿಸಿದ್ದನು. ಸುಂದರ ತೋಟದಂತೆ ಇರುವ ಭೂಮಿಯಲ್ಲಿ ಶಾಶ್ವತವಾಗಿ ಬದುಕುವ ನಿರೀಕ್ಷೆಯನ್ನು ಅವರು ಕಳೆದುಕೊಂಡರು.—ಆದಿಕಾಂಡ 2:17; 3:1-6; 5:5.

ಅಂದು ಆದಾಮ-ಹವ್ವರು ದಂಗೆಯೆದ್ದ ಪರಿಣಾಮವನ್ನೇ ಇಂದಿನವರೆಗೆ ಎಲ್ಲಾ ಮಾನವರು ಅನುಭವಿಸುತ್ತಿದ್ದಾರೆ. ದೇವರ ವಾಕ್ಯ ಹೀಗೆ ಹೇಳುತ್ತದೆ: “ಒಬ್ಬ ಮನುಷ್ಯನಿಂದ [ಆದಾಮನಿಂದ] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮನ್ನರಿಗೆ 5:12) ನಾವು ಸಾಯಲು ಕಾರಣ, ದೇವರು ಮೊದಲೇ ನಿರ್ಧರಿಸಿದ, ನಮ್ಮಿಂದ ಅರ್ಥ ಮಾಡಿಕೊಳ್ಳಲಾಗದ ಯಾವುದೊ ‘ಯೋಜನೆ’ ಅಲ್ಲ ಬದಲಾಗಿ ನಮ್ಮ ಮೊದಲ ಹೆತ್ತವರಿಂದ ವಂಶಪಾರಂಪರ್ಯವಾಗಿ ಪಡೆದಿರುವ ಪಾಪ ಮತ್ತು ಮರಣವೇ ಆಗಿದೆ.

ನೀವು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಬಲ್ಲಿರಿ

ಏದೆನ್‌ ತೋಟದಲ್ಲಾದ ದಂಗೆಯಿಂದಾಗಿ ದೇವರಿಗೆ ಮಾನವರ ಮತ್ತು ಭೂಮಿಯ ಬಗ್ಗೆ ಇದ್ದ ಮೂಲ ಉದ್ದೇಶ ನೆಲಕಚ್ಚಲಿಲ್ಲ. ವಂಶಪಾರಂಪರ್ಯವಾಗಿ ಬಂದ ಪಾಪ ಮತ್ತು ಮರಣದ ದಾಸತ್ವದಿಂದ ನಮ್ಮನ್ನು ಬಿಡಿಸುವಂತೆ ದೇವರ ಪರಿಪೂರ್ಣ ಪ್ರೀತಿ ಮತ್ತು ನ್ಯಾಯವು ಆತನನ್ನು ಪ್ರೇರೇಪಿಸಿತು. “ಪಾಪವು ಕೊಡುವ ಸಂಬಳ ಮರಣ, ಆದರೆ ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ” ಎಂದು ಯೇಸುವಿನ ಶಿಷ್ಯ ಪೌಲನು ಹೇಳಿದ್ದಾನೆ. (ರೋಮನ್ನರಿಗೆ 6:23) ದೇವರು ಪ್ರೀತಿಯಿಂದ “ತನ್ನ ಏಕೈಕಜಾತ ಪುತ್ರನನ್ನು [ಯೇಸು ಕ್ರಿಸ್ತ] ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾನ 3:16) ಯೇಸು ಇಚ್ಛಾಪೂರ್ವಕವಾಗಿ ತನ್ನನ್ನೇ ವಿಮೋಚನೆಯ ಮೌಲ್ಯವಾಗಿ ಕೊಡುವ ಮೂಲಕ ಆದಾಮನಿಂದಾಗಿ ನಾವು ಕಳೆದುಕೊಂಡದ್ದೆಲ್ಲವನ್ನೂ ಪುನಃ ಪಡೆಯುವಂತೆ ಮಾಡಿದ್ದಾನೆ. a

ಇಡೀ ಭೂಮಿ ಸುಂದರ ತೋಟವಾಗುತ್ತದೆಂಬ ದೇವರ ಮಾತು ಬಲು ಬೇಗನೆ ನಿಜವಾಗಲಿದೆ. ಈ ಸುಂದರ ಭವಿಷ್ಯ ನಿಮಗೂ ಸಿಗಸಾಧ್ಯವಿದೆ. ಅದಕ್ಕಾಗಿ ನೀವು ಯೇಸು ಹೇಳಿದ ಈ ಮಾತನ್ನು ಪಾಲಿಸಬೇಕು: “ಇಕ್ಕಟ್ಟಾದ ಬಾಗಿಲಿನ ಮೂಲಕ ಒಳಗೆ ಹೋಗಿರಿ; ಏಕೆಂದರೆ ನಾಶನಕ್ಕೆ ನಡಿಸುವ ದಾರಿಯು ಅಗಲವಾಗಿಯೂ ವಿಶಾಲವಾಗಿಯೂ ಇದೆ ಮತ್ತು ಅದರ ಮೂಲಕ ಒಳಗೆ ಹೋಗುತ್ತಿರುವವರು ಅನೇಕರು; ಆದರೆ ಜೀವಕ್ಕೆ ನಡಿಸುವ ಬಾಗಿಲು ಇಕ್ಕಟ್ಟಾಗಿಯೂ ದಾರಿಯು ಬಿಕ್ಕಟ್ಟಾಗಿಯೂ ಇದೆ ಮತ್ತು ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ.” (ಮತ್ತಾಯ 7:13, 14) ನಿಮ್ಮ ಭವಿಷ್ಯ ಹೇಗಿರುತ್ತದೆ ಎನ್ನುವುದು ನಿಮ್ಮ ಕೈಯಲ್ಲೇ ಇದೆ. ನೀವು ಯಾವ ದಾರಿ ಆಯ್ಕೆ ಮಾಡುತ್ತೀರಿ?

a ಈ ವಿಮೋಚನಾ ಮೌಲ್ಯದಿಂದ ನಿಮಗೇನು ಪ್ರಯೋಜನವಿದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 27 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಇದನ್ನು ಉಚಿತವಾಗಿ www.pr418.com ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.