“ದೇವರು ಎಲ್ಲಿದ್ದ?”
“ನಾನು ಆಗಾಗ ಹೀಗೆ ಕೇಳುತ್ತಿರುತ್ತೇನೆ: ದೇವರು ಎಲ್ಲಿದ್ದ?”— ಪೋಲೆಂಡಿನ ಔಷ್ವಿಟ್ಸ್ನಲ್ಲಿರುವ ಹಿಂದಿನ ಕಾಲದ ನಾಸಿ ಸೆರೆಶಿಬಿರವನ್ನು ಪೋಪ್ ಬೆನೆಡಿಕ್ಟ್ XVI ಭೇಟಿಮಾಡಿದಾಗ ಹೇಳಿದ ಮಾತು.
ದುರಂತಗಳು ನಡೆದಾಗೆಲ್ಲ ‘ದೇವರು ಎಲ್ಲಿದ್ದ?’ ಎಂಬ ಪ್ರಶ್ನೆ ನಿಮ್ಮ ಮನಸ್ಸಿಗೆ ಬರುತ್ತದಾ? ಅಥವಾ ನಿಮ್ಮ ಬದುಕಿನಲ್ಲೇ ನಡೆದ ಒಂದು ಘಟನೆಯಿಂದ ನಿಮಗೆ ಆಘಾತವಾದಾಗ ‘ದೇವರಿಗೆ ನನ್ನ ಬಗ್ಗೆ ಸ್ವಲ್ಪವಾದರೂ ಚಿಂತೆಯಿದೆಯಾ’ ಅಂತ ಪ್ರಶ್ನಿಸಿದ್ದೀರಾ?
ಅಮೆರಿಕದಲ್ಲಿ ವಾಸಿಸುತ್ತಿರುವ ಶೀಲಗೆ ಅನಿಸಿದಂತೆ ನಿಮಗೂ ಅನಿಸಬಹುದು. ಅವರು ಧರ್ಮದಲ್ಲಿ ತುಂಬ ನಂಬಿಕೆಯುಳ್ಳ ಕುಟುಂಬದಲ್ಲಿ ಬೆಳೆದವರು. ಅವರನ್ನುವುದು: “ಚಿಕ್ಕಂದಿನಿಂದಲೇ ನನಗೆ ದೇವರ ಬಗ್ಗೆ ಆಸಕ್ತಿ ಇತ್ತು. ಯಾಕೆಂದರೆ ಆತನೇ ನಮ್ಮ ನಿರ್ಮಾಣಿಕನು. ಆದರೆ ಆತನ ಬಗ್ಗೆ ಯಾವುದೇ ಆಪ್ತ ಭಾವನೆ ಇರಲಿಲ್ಲ. ಆತನು ನನ್ನನ್ನು ನೋಡುತ್ತಾ ಇದ್ದಾನೆ ಆದರೆ ದೂರದಿಂದ ಅಷ್ಟೇ, ಅಂತ ನೆನಸುತ್ತಿದ್ದೆ. ದೇವರು ನನ್ನನ್ನು ದ್ವೇಷಿಸುವುದಿಲ್ಲ ಆದರೆ ನನ್ನ ಬಗ್ಗೆ ಆತನಿಗೆ ಚಿಂತೆಯೂ ಇಲ್ಲ ಅಂತ ನಂಬುತ್ತಿದ್ದೆ.” ಶೀಲ ಯಾಕೆ ಹೀಗೆ ನಂಬುತ್ತಿದ್ದರು? ಅವರೇ ವಿವರಿಸುವುದು: “ನನ್ನ ಕುಟುಂಬದ ಮೇಲೆ ಒಂದರ ಮೇಲೊಂದರಂತೆ ದುರಂತಗಳು ಎರಗಿದವು. ಹಾಗಾಗಿ ದೇವರು ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂಬಂತೆ ತೋರುತ್ತಿತ್ತು.”
ಸರ್ವಶಕ್ತ ದೇವರೊಬ್ಬನು ಇದ್ದಾನೆ ಅಂತ ಶೀಲಳಂತೆ ನಿಮಗೂ ಪೂರ್ತಿ ಖಾತ್ರಿ ಇರಬಹುದು. ಆದರೆ ನಿಮ್ಮ ಬಗ್ಗೆ ಆತನಿಗೆ ನಿಜವಾಗಿಯೂ ಚಿಂತೆ ಇದೆಯಾ ಅಂತ ನೀವು ಯೋಚಿಸುತ್ತಿರಬಹುದು. ಸೃಷ್ಟಿಕರ್ತನಿಗೆ ಶಕ್ತಿ ಹಾಗೂ ವಿವೇಕವಿದೆ ಎಂದು ನಂಬುತ್ತಿದ್ದ ಒಬ್ಬ ನೀತಿವಂತ ವ್ಯಕ್ತಿಯಾದ ಯೋಬನಿಗೂ ಇಂಥದ್ದೇ ಸಂಶಯಗಳಿದ್ದವು. (ಯೋಬ 2:3; 9:4) ಯೋಬನ ಜೀವನದಲ್ಲಿ ದುರಂತಗಳು ಒಂದರ ಮೇಲೆ ಒಂದರಂತೆ ಅಪ್ಪಳಿಸಿದವು. ಅವುಗಳಿಗೆ ಕೊನೆಯೇ ಇಲ್ಲ ಎಂಬಂತೆ ತೋರಿತು. ಆಗ ಅವನು ದೇವರಿಗೆ, “ನೀನು ವಿಮುಖನಾಗಿ ನನ್ನನ್ನು ಶತ್ರುವೆಂದೆಣಿಸಿರುವದೇಕೆ?” ಎಂದು ಕೇಳಿದನು.—ಯೋಬ 13:24.
ಬೈಬಲ್ ಏನನ್ನುತ್ತದೆ? ಯಾವುದೇ ದುರಂತಕ್ಕೆ ದೇವರು ಕಾರಣನಾ? ದೇವರು ಎಲ್ಲಾ ಮಾನವರ ಬಗ್ಗೆ ಮತ್ತು ಅವರಲ್ಲಿ ಒಬ್ಬೊಬ್ಬರ ಬಗ್ಗೆಯೂ ಚಿಂತಿಸುತ್ತಾನೆ ಎಂದು ನಂಬಲು ಪುರಾವೆ ಇದೆಯಾ? ದೇವರು ನಮ್ಮನ್ನು ಗಮನಿಸುತ್ತಾನೆ, ನಮ್ಮನ್ನೂ ನಮ್ಮ ಕಷ್ಟಗಳನ್ನೂ ಅರ್ಥಮಾಡಿಕೊಳ್ಳುತ್ತಾನೆ, ನಮ್ಮ ಸಮಸ್ಯೆಗಳಲ್ಲಿ ನೆರವಾಗುತ್ತಾನೆಂದು ನಮ್ಮಲ್ಲಿ ಪ್ರತಿಯೊಬ್ಬರೂ ತಿಳಿದುಕೊಳ್ಳಲು ನಿಜವಾಗಿಯೂ ಸಾಧ್ಯವಿದೆಯಾ?
ದೇವರಿಗೆ ನಮ್ಮ ಬಗ್ಗೆ ಇರುವ ಚಿಂತೆಯ ಕುರಿತು ಸೃಷ್ಟಿ ಏನನ್ನು ಕಲಿಸುತ್ತದೆ ಎಂದು ಮುಂದಿನ ಲೇಖನಗಳಲ್ಲಿ ನೋಡಲಿದ್ದೇವೆ. (ರೋಮನ್ನರಿಗೆ 1:20) ಆಮೇಲೆ, ಅದರ ಬಗ್ಗೆ ಬೈಬಲ್ ಏನು ತಿಳಿಸುತ್ತದೆಂದು ನೋಡಲಿದ್ದೇವೆ. ದೇವರ ಸೃಷ್ಟಿ ಮತ್ತು ಆತನ ವಾಕ್ಯದ ಮೂಲಕ ನೀವು ಆತನನ್ನು ಹೆಚ್ಚೆಚ್ಚು ‘ಬಲ್ಲವರಾಗುತ್ತಾ’ ಅಂದರೆ ತಿಳಿದುಕೊಳ್ಳುತ್ತಾ ಹೋದಂತೆ “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎಂಬ ಭರವಸೆಯೂ ಹೆಚ್ಚಾಗುವುದು.—1 ಯೋಹಾನ 2:3; 1 ಪೇತ್ರ 5:7.