ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವಕೋಶಗಳನ್ನು ರಿಪೇರಿ ಮಾಡಿದರೆ ದೀರ್ಘಾಯಸ್ಸು ಸಿಗುತ್ತಾ?

ದೀರ್ಘಾಯಸ್ಸಿಗಾಗಿ ಹುಡುಕಾಟ

ದೀರ್ಘಾಯಸ್ಸಿಗಾಗಿ ಹುಡುಕಾಟ

“ದೇವರು . . . ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.”—ಪ್ರಸಂಗಿ 3:10, 11.

ಈ ಮಾತುಗಳನ್ನು ಹೇಳಿದ್ದು ಸೊಲೊಮೋನ ಎಂಬ ವಿವೇಕಿ ರಾಜ. ಜೀವನದ ಬಗ್ಗೆ ಮಾನವನಿಗೆ ಇರುವ ಭಾವನೆಯನ್ನು, ಈ ವಚನದಲ್ಲಿ ಚೆನ್ನಾಗಿ ಬಣ್ಣಿಸಲಾಗಿದೆ. ಬದುಕು ಚಿಕ್ಕದು, ಸಾವಿನಿಂದ ತಪ್ಪಿಸಿಕೊಳ್ಳಲು ಆಗೋದಿಲ್ಲ ಎಂಬ ಕಾರಣಗಳಿಂದ ಮಾನವರು ದೀರ್ಘಾಯಸ್ಸಿಗಾಗಿ ಹುಡುಕಾಡಲು ತುಂಬ ಪ್ರಯತ್ನಿಸಿದ್ದಾರೆ. ಇತಿಹಾಸದುದ್ದಕ್ಕೂ ಹೀಗೆ ದೀರ್ಘಾಯಸ್ಸಿಗಾಗಿ ಹುಡುಕಾಡಿದ ವ್ಯಕ್ತಿಗಳ ಬಗ್ಗೆ ಅನೇಕ ಕಥೆ, ಪುರಾಣಗಳು ಇವೆ.

ಉದಾಹರಣೆಗೆ, ಗಿಲ್ಗಮೆಷ್‌ ಎಂಬ ಸುಮೇರಿಯದ ಒಬ್ಬ ಅರಸನ ಬಗ್ಗೆ ಪರಿಗಣಿಸಿ. ಇವನ ಜೀವನದ ಬಗ್ಗೆ ಬೇರೆ ಬೇರೆ ರೀತಿಯ ಕಟ್ಟುಕಥೆಗಳಿವೆ ಎಂದು ಗಿಲ್ಗಮೆಷ್‌ ಎಂಬ ಮಹಾಕಾವ್ಯ ತಿಳಿಸುತ್ತೆ. ಇವನು ಅಮರ ಜೀವನ ಪಡೆಯಲು ತುಂಬಾ ಅಪಾಯಕಾರಿ ವಿಧಾನಗಳನ್ನು ಪ್ರಯತ್ನಿಸಿದನು ಎಂದು ಸಹ ಅದರಲ್ಲಿದೆ. ಆದರೆ ಅವನ ಎಲ್ಲಾ ಪ್ರಯತ್ನ ವ್ಯರ್ಥವಾಯಿತು.

ಒಬ್ಬ ಆಲ್‌ಕೆಮಿಸ್ಟ್‌ ತನ್ನ ಲ್ಯಾಬ್‌ನಲ್ಲಿ ಸಂಶೋಧನೆ ಮಾಡುತ್ತಿದ್ದಾನೆ

ಕ್ರಿ. ಪೂ. 4​ನೇ ಶತಮಾನದಲ್ಲಿ ಚೀನಾದ ರಸವಿದ್ಯಾತಜ್ಞರು (ಆಲ್‌ಕೆಮಿಸ್ಟ್‌) ಆಯಸ್ಸನ್ನು ಹೆಚ್ಚಿಸುವ “ಸಂಜೀವಿನಿಯನ್ನು” ಕಂಡುಹಿಡಿಯಲು ಪ್ರಯತ್ನಿಸಿದರು. ಮರ್ಕ್ಯುರಿ ಮತ್ತು ಆರ್ಸನಿಕ್‌ ಎಂಬ ರಸಾಯನಗಳನ್ನು ಉಪಯೋಗಿಸಿ ಒಂದು ಜ್ಯೂಸ್‌ ತಯಾರಿಸಿದರು. ಆದರೆ ಈ ಜ್ಯೂಸ್‌ ಕುಡಿದ ಕಾರಣದಿಂದಲೇ ಚೈನಾದ ಅನೇಕ ಚಕ್ರವರ್ತಿಗಳು ತೀರಿಹೋದರೆಂದು ಕೆಲವರ ಅಭಿಪ್ರಾಯ. ಅನೇಕ ವರ್ಷಗಳ ಹಿಂದೆ, ಯುರೋಪಿನಲ್ಲಿ ಕೆಲವು ರಸವಿದ್ಯಾ ತಜ್ಞರು ಚಿನ್ನವನ್ನು ತಮ್ಮ ದೇಹ ಜೀರ್ಣಿಸುವಂಥ ರೀತಿಯಲ್ಲಿ ಮಾರ್ಪಡಿಸಲು ಯತ್ನಿಸಿದರು. ಯಾಕೆ? ಯಾಕೆಂದರೆ ಚಿನ್ನ ತುಕ್ಕು ಹಿಡಿಯಲ್ಲ. ಹಾಗಾಗಿ ಅದನ್ನು ಸೇವಿಸಿದರೆ ಮನುಷ್ಯನ ಆಯಸ್ಸು ಇನ್ನು ಹೆಚ್ಚಿಸಬಹುದೆಂದು ಅವರು ನಂಬಿದ್ದರು.

ಇವತ್ತು ಸಹ ಕೆಲವು ವಿಜ್ಞಾನಿಗಳು, ನಮಗೆ ಯಾಕೆ ವಯಸ್ಸಾಗುತ್ತೆ ಅಂತ ಸಂಶೋಧನೆ ಮಾಡುತ್ತಿದ್ದಾರೆ. ಹೌದು, “ಸಂಜೀವಿನಿಯನ್ನು” ಕಂಡುಹಿಡಿಯಲು ಹೆಣಗಾಡಿದ ಹಿಂದಿನ ಕಾಲದ ವ್ಯಕ್ತಿಗಳಂತೆ, ಸಾವನ್ನು ಮತ್ತು ವೃದ್ಧಾಪ್ಯವನ್ನು ಸೋಲಿಸಲು ಜನರು ಇವತ್ತೂ ಬಯಸುತ್ತಾರೆ. ಆದರೆ ಅವರ ಈ ಪ್ರಯತ್ನಗಳ ಫಲಿತಾಂಶವೇನು?

“ದೇವರು . . . ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.”—ಪ್ರಸಂಗಿ 3:10, 11

ವೃದ್ಧಾಪ್ಯದ ಕಾರಣವನ್ನು ಹುಡುಕುತ್ತಾ. . .

ಮನುಷ್ಯರ ಜೀವಕೋಶದ ಬಗ್ಗೆ ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು, ನಾವು ಯಾಕೆ ವಯಸ್ಸಾಗಿ ಸಾಯುತ್ತೇವೆ ಎಂದು 300ಕ್ಕಿಂತಲೂ ಹೆಚ್ಚು ಕಾರಣಗಳನ್ನು ಕೊಟ್ಟಿದ್ದಾರೆ. ಮಾತ್ರವಲ್ಲ, ಪ್ರಾಣಿಗಳ ಮತ್ತು ಮನುಷ್ಯನ ಜೀವಕೋಶದ ಒಳಗೆ ಇರುವ ಕಣಗಳನ್ನು ನಿಯಂತ್ರಿಸಿ ಆಯಸ್ಸನ್ನು ಹೆಚ್ಚಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆಗಳನ್ನು ನೋಡಿ ಬೆರಗಾದ ಕೆಲವು ಶ್ರೀಮಂತರು ಸಾವನ್ನು ಸೋಲಿಸಲು ನಡೆಯುವ ಇಂಥ ಸಂಶೋಧನೆಗಳಿಗೆ ತುಂಬ ಹಣ ಕೊಡುತ್ತಿದ್ದಾರೆ. ಈ ರೀತಿಯ ಕೆಲವು ಸಂಶೋಧನೆಗಳ ಬಗ್ಗೆ ಈಗ ನೋಡೋಣ.

ಮುಪ್ಪನ್ನೇ ಮುಂದೂಡುವುದು. ಕೆಲವು ವಿಜ್ಞಾನಿಗಳು ವೃದ್ಧಾಪ್ಯಕ್ಕೆ ಕಾರಣ, ಜೀವಕೋಶದ ಒಳಗೆ ಇರುವ ಟೆಲೋಮಿಯರ್‌ ಎಂಬ ಚಿಕ್ಕ ಅಂಶ ಎಂದು ನಂಬುತ್ತಾರೆ. ಜೀವಕೋಶ ವಿಭಜನೆ ಆಗಿ, ಅದರ ಪ್ರತಿರೂಪಗಳನ್ನು ಉಂಟುಮಾಡುವಾಗ, ಈ ಟೆಲೋಮಿಯರ್‌ಗಳು ಮಾಹಿತಿಗಳನ್ನು ಹಳೇ ಜೀವಕೋಶದಿಂದ ಹೊಸ ಜೀವಕೋಶಕ್ಕೆ ದಾಟಿಸುವ ಕೆಲಸವನ್ನು ಮಾಡುತ್ತವೆ. ಆದರೆ ಪ್ರತಿ ಸಲ ಜೀವಕೋಶಗಳು ಮತ್ತೊಂದು ಜೀವಕೋಶವನ್ನು ಉಂಟುಮಾಡುವಾಗ ಈ ಟೆಲೋಮಿಯರ್‌ಗಳು ಚಿಕ್ಕದಾಗುತ್ತಾ ಬರುತ್ತವೆ. ಹೀಗೆ ಹೋಗ್ತಾ ಹೋಗ್ತಾ ಹೊಸ ಜೀವಕೋಶಗಳು ಉಂಟಾಗುವುದು ನಿಲ್ಲುತ್ತೆ. ಆಗ ವಯಸ್ಸಾಗಲು ಶುರುವಾಗುತ್ತೆ.

2009​ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ಎಲಿಜಬೆತ್‌ ಬ್ಲಾಕ್‌ ಬರ್ನ್‌ ಮತ್ತು ಅವರ ತಂಡ, ಟೆಲೋಮಿಯರ್‌ಗಳು ಚಿಕ್ಕದಾಗದಂತೆ ಮಾಡುವ ಒಂದು ಕಿಣ್ವವನ್ನು (ಎನ್ಸೈಮ್‌) ಕಂಡುಹಿಡಿದರು. ಇದರ ಸಹಾಯದಿಂದ ವಯಸ್ಸಾಗೋದನ್ನು ನಿಲ್ಲಿಸಲು ಸಾಧ್ಯ ಎಂದು ಅವರು ನಂಬಿದರು. ಆದರೆ ಈ ಸಂಶೋಧನೆಯ ಕೊನೆಯಲ್ಲಿ ಅವರು, “ಟೆಲೋಮಿಯರ್‌ಗಳು ನಮ್ಮ ಆಯಸ್ಸನ್ನು ಹೆಚ್ಚಿಸುವ ಮ್ಯಾಜಿಕ್‌ ವಸ್ತುಗಳಲ್ಲ. ನಮ್ಮ ಆಯಸ್ಸನ್ನು ಜಾಸ್ತಿ ಮಾಡುವಂಥ ಅದ್ಭುತ ಶಕ್ತಿ ಅವುಗಳಿಗೆ ಇಲ್ಲ” ಎಂಬ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾರೆ.

ಜೀವಕೋಶಗಳನ್ನು ರಿಪೇರಿ ಮಾಡುವುದು (ಸೆಲ್ಯುಲರ್‌ ರೀ ಪ್ರೋಗ್ರಾಮಿಂಗ್‌). ಇದು ಆಯುಸ್ಸನ್ನು ಹೆಚ್ಚಿಸಲು ಇರುವ ಇನ್ನೊಂದು ವಿಧಾನ. ನಮ್ಮ ಜೀವಕೋಶಗಳಿಗೆ ವಯಸ್ಸಾಗುವಾಗ, ಅವು ಸರಿಯಾಗಿ ಕೆಲಸ ಮಾಡಲ್ಲ. ಇದರಿಂದ ವೃದ್ಧಾಪ್ಯದ ಲಕ್ಷಣಗಳು ಶುರುವಾಗುತ್ತೆ. ಆದರೆ ಫ್ರಾನ್ಸ್‌ನಲ್ಲಿರುವ ವಿಜ್ಞಾನಿಗಳು ತುಂಬಾ ವಯಸ್ಸಾದ ಅಜ್ಜ ಅಜ್ಜಿಯರ ಜೀವಕೋಶಗಳನ್ನು ತೆಗೆದು ರಿಪೇರಿ ಮಾಡಲು ಕಲಿತಿದ್ದಾರೆ. ಈ ಸಂಶೋಧನೆಯಿಂದ ವೃದ್ಧರನ್ನು ಪುನಃ ಯುವಕರನ್ನಾಗಿ ಮಾಡಲು ಸಾಧ್ಯ ಎಂದು ಹೇಳುತ್ತಾರೆ ಪ್ರೊಫೆಸರ್‌ ಜೀನ್‌ ಮಾರ್ಕ್‌.

ಆಯಸ್ಸನ್ನು ಹೆಚ್ಚಿಸಲು ವಿಜ್ಞಾನಿಗಳಿಂದ ಆಗುತ್ತಾ?

ಆಯಸ್ಸನ್ನು ಹೆಚ್ಚಿಸಲು ಇಂದು ಅನೇಕ ಚಿಕಿತ್ಸೆಗಳು ಬಂದಿರಬಹುದು ನಿಜ, ಆದರೆ ಮಾನವರಿಗಿರೋ ಸಾಮಾನ್ಯ ಆಯಸ್ಸಿಗೆ ಇನ್ನೂ ಹೆಚ್ಚು ವರ್ಷಗಳನ್ನು ಕೂಡಿಸೋದು ಅಸಾಧ್ಯ ಎಂದು ವಿಜ್ಞಾನಿಗಳೇ ಹೇಳುತ್ತಾರೆ. 19​ನೇ ಶತಮಾನದಿಂದ ‘ಜನರ ಸರಾಸರಿ ಆಯಸ್ಸು’ ಹಿಂದೆಂದಿಗಿಂತ ಹೆಚ್ಚಾಗಿದೆ ನಿಜ. ಆದರೆ ಅದಕ್ಕೆ ನಿಜವಾದ ಕಾರಣ ಧೀರ್ಘಾಯಸ್ಸಿನ ಗುಟ್ಟನ್ನು ರಟ್ಟುಮಾಡಿದ್ದಲ್ಲ. ಬದಲಿಗೆ ಶುಚಿಯಾಗಿರಲು ಮತ್ತು ಔಷಧಿ ಉಪಯೋಗಿಸಿ ಕಾಯಿಲೆಗಳನ್ನು ತಡೆಗಟ್ಟಲು ಮಾನವರು ಕಲಿತಿದ್ದರಿಂದಲೇ. ಕೆಲವು ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ, ಮಾನವನ ಆಯಸ್ಸು ಈಗಾಗಲೇ ಅದರ ಮಿತಿಯನ್ನು ತಲುಪಿದೆ, ಇದಕ್ಕಿಂತ ಜಾಸ್ತಿ ಹೆಚ್ಚಿಸೋಕೆ ಆಗಲ್ಲ.

ಮೋಶೆಯೆಂಬ ಬೈಬಲ್‌ ಬರಹಗಾರ 3500 ವರ್ಷಗಳ ಹಿಂದೆ “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ” ಎಂದು ಬರೆದನು. (ಕೀರ್ತನೆ 90:10) ಆಯಸ್ಸನ್ನು ಹೆಚ್ಚಿಸಲು ಮಾನವ ಎಷ್ಟೇ ಹೆಣಗಾಡಿದರೂ, ಈ ವಿಷಯ ಇವತ್ತಿಗೂ ಸತ್ಯ.

ಕೆಲವು ಪ್ರಾಣಿಗಳು 200ಕ್ಕಿಂತ ಹೆಚ್ಚು ವರ್ಷ ಬದುಕುತ್ತವೆ, ಮತ್ತು ಕೆಲವು ಮರಗಳು ಸಾವಿರಾರು ವರ್ಷಗಳು ಬದುಕುತ್ತವೆ. ನಮ್ಮ ಆಯಸ್ಸನ್ನು ಅವುಗಳಿಗೆ ಹೋಲಿಸುವಾಗ, “ನಮ್ಮ ಬದುಕು ಬರೀ 70-80 ವರ್ಷ ಅಷ್ಟೇನಾ?” ಎಂಬ ಪ್ರಶ್ನೆ ಬರುತ್ತೆ. ಇದರ ಉತ್ತರ ತಿಳಿಯಲು ಮುಂದಿನ ಪುಟ ನೋಡಿ.