ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧಾಪ್ಯ ಮತ್ತು ಮರಣಕ್ಕೆ ನಿಜವಾದ ಕಾರಣ

ವೃದ್ಧಾಪ್ಯ ಮತ್ತು ಮರಣಕ್ಕೆ ನಿಜವಾದ ಕಾರಣ

ಮಾನವರು ಸಾಯಬೇಕು ಅನ್ನೋದು ದೇವರ ಉದ್ದೇಶ ಆಗಿರಲಿಲ್ಲ. ದೇವರು ಮೊದಲನೇ ಮಾನವರಿಗೆ ಪರಿಪೂರ್ಣ ಮನಸ್ಸು ಮತ್ತು ದೇಹ ಕೊಟ್ಟಿದ್ದನು, ಅಂದರೆ ಅವರಲ್ಲಿ ಯಾವುದೇ ಲೋಪವಿರಲಿಲ್ಲ. ಹಾಗಾಗಿ, ಅವರು ಇಂದಿನವರೆಗೂ ಜೀವಂತವಾಗಿ ಉಳಿಯಬಹುದಿತ್ತು! ಅದು ಹೇಗೆ? ದೇವರು ಆದಾಮ-ಹವ್ವರಿಗೆ ಏದೆನ್‌ ತೋಟದ ಒಂದು ಮರದ ಹಣ್ಣಿನ ಬಗ್ಗೆ ಕೊಟ್ಟ ಆಜ್ಞೆಯಿಂದ ಇದು ಸ್ಪಷ್ಟವಾಗಿ ಗೊತ್ತಾಗುತ್ತೆ.

ಆ ಮರದ ಹಣ್ಣನ್ನು “ತಿಂದ ದಿನ ಸತ್ತೇ ಹೋಗುವಿ” ಅಂತ ದೇವರು ಆದಾಮನಿಗೆ ಹೇಳಿದನು. (ಆದಿಕಾಂಡ 2:17) ಆದಾಮ ಒಂದಿನ ವಯಸ್ಸಾಗಿ ಸಾಯಬೇಕು ಅಂತ ದೇವರ ಉದ್ದೇಶ ಆಗಿದ್ರೆ, ಆ ಆಜ್ಞೆ ಕೊಡುವುದರಲ್ಲಿ ಯಾವುದೇ ಅರ್ಥ ಇರುತ್ತಿರಲಿಲ್ಲ. ಅದು ಅಲ್ಲದೇ, ಆ ಮರದ ಹಣ್ಣನ್ನು ತಿನ್ನದಿದ್ದರೆ ತಾನು ಸಾಯುವುದಿಲ್ಲ ಅಂತ ಆದಾಮನಿಗೂ ಗೊತ್ತಿತ್ತು.

ಮಾನವರು ಸಾಯಬೇಕು ಅನ್ನೋದು ದೇವರ ಉದ್ದೇಶ ಆಗಿರಲಿಲ್ಲ

ಆದಾಮ-ಹವ್ವ ಆ ಒಂದು ಮರದ ಹಣ್ಣನ್ನೇ ತಿಂದು ಬದುಕಬೇಕು ಅಂತೇನಿರಲಿಲ್ಲ. ಯಾಕೆಂದರೆ ಏದೆನ್‌ ತೋಟದಲ್ಲಿ ಎಲ್ಲಾ ರೀತಿಯ ಹಣ್ಣಿನ ಮರಗಳಿದ್ದವು. (ಆದಿಕಾಂಡ 2:9) ಮಾತ್ರವಲ್ಲ, ಆ ಮರದ ಹಣ್ಣನ್ನು ತಿನ್ನದಿರುವ ಮೂಲಕ, ಆದಾಮ ಹವ್ವ ಎರಡು ವಿಷಯಗಳನ್ನು ಸಾಧಿಸಬಹುದಿತ್ತು. ಮೊದಲನೇದಾಗಿ, ತಮಗೆ ಜೀವಕೊಟ್ಟ ದೇವರಿಗೆ ವಿಧೇಯತೆ ತೋರಿಸಬಹುದಿತ್ತು. ಎರಡನೇದಾಗಿ, ಸರಿಯಾದ ಮಾರ್ಗದರ್ಶನ ನೀಡಲು ದೇವರಿಗಿರುವ ಹಕ್ಕನ್ನು ಅವರು ಒಪ್ಪಿಕೊಳ್ಳುತ್ತಾರೆ ಅಂತ ಕೂಡ ತೋರಿಸಬಹುದಿತ್ತು.

ಆದಾಮ-ಹವ್ವ ಯಾಕೆ ಸತ್ತರು

ಆದಾಮ-ಹವ್ವ ಯಾಕೆ ಸತ್ತರು ಅಂತ ಅರ್ಥಮಾಡಿಕೊಳ್ಳಲು, ಮೊದಲು ನಾವು ನಮ್ಮೆಲ್ಲರ ಮೇಲೆ ಪ್ರಭಾವ ಬೀರಿದ ಒಂದು ಮಾತುಕಥೆಯ ಬಗ್ಗೆ ನೋಡೋಣ. ಏದೆನ್‌ ತೋಟದಲ್ಲಿ ಸೈತಾನನು ಸರ್ಪದ ಮೂಲಕ ಹವ್ವಳಿಗೆ ಒಂದು ಕೆಟ್ಟ ಸುಳ್ಳನ್ನು ಹೇಳಿದನು. ಬೈಬಲ್‌ ಹೇಳುತ್ತೆ: ‘ಯೆಹೋವ ದೇವರು ಉಂಟುಮಾಡಿದ ಎಲ್ಲಾ ಭೂಜಂತುಗಳಲ್ಲಿ ಸರ್ಪವು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಯ ಬಳಿಗೆ ಬಂದು—ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಿತು.’—ಆದಿಕಾಂಡ 3:1.

ಅದಕ್ಕೆ ಹವ್ವ: “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ—ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ ಅಂದಳು.” ಆಗ ಸರ್ಪವು ಹವ್ವಳಿಗೆ: “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು ಅಂದಿತು.” ಹೀಗೆ ಸೈತಾನನು, ಯೆಹೋವ ದೇವರು ಒಬ್ಬ ಸುಳ್ಳುಗಾರ ಅಂತ ಹೇಳಿದ. ಅಷ್ಟೇ ಅಲ್ಲ ದೇವರು ಮಾನವರಿಗೆ ಒಳ್ಳೇದಾಗಬೇಕು ಅಂತ ಬಯಸುವುದಿಲ್ಲ ಎಂಬ ಸುಳ್ಳು ಆರೋಪ ಕೂಡ ಹಾಕಿದ.—ಆದಿಕಾಂಡ 3:2-5.

ಹವ್ವ ಈ ಮಾತನ್ನು ನಂಬಿದಳು. ಆ ಮರದ ಹಣ್ಣನ್ನು ಕಣ್ಣು ಮಿಟುಕಿಸದೇ ನೋಡುತ್ತಾ ಇದ್ದಳು. ಆಗ, ಆ ಹಣ್ಣು ಇನ್ನೂ ಆಕರ್ಷಕವಾಗಿ ಕಂಡಿತು. ಕೈ ಚಾಚಿ ಆ ಹಣ್ಣನ್ನು ಮರದಿಂದ ಕಿತ್ತು ತಿಂದಳು. ನಂತರ “ಸಂಗಡ ಇದ್ದ ಗಂಡನಿಗೂ ಕೊಡಲು ಅವನೂ ತಿಂದನು” ಅಂತ ಬೈಬಲ್‌ ಹೇಳುತ್ತೆ.—ಆದಿಕಾಂಡ 3:6.

ದೇವರು ಆದಾಮನಿಗೆ, ಆ ಮರದ ಹಣ್ಣನ್ನು “ತಿಂದ ದಿನ ಸತ್ತೇ ಹೋಗುವಿ” ಎಂದನು.ಆದಿಕಾಂಡ 2:17

ತನ್ನ ಪ್ರೀತಿಯ ಮಕ್ಕಳು ಬೇಕು ಬೇಕೆಂದೇ ಪಾಪ ಮಾಡಿದ್ದನ್ನು ನೋಡಿದಾಗ, ಯೆಹೋವ ದೇವರಿಗೆ ಎಷ್ಟು ದುಃಖ ಆಗಿರಬಹುದು! ಆದರೆ ದೇವರು ಏನು ಮಾಡಿದನು? ಆತನು ಆದಾಮನಿಗೆ: “ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ ಎಂದು ಹೇಳಿದನು.” (ಆದಿಕಾಂಡ 3:17-19) ಆದಾಮ “ಒಟ್ಟು ಒಂಭೈನೂರ ಮೂವತ್ತು ವರುಷ ಬದುಕಿ ಸತ್ತನು.” ಹೀಗೆ ದೇವರು ಹೇಳಿದ ಹಾಗೆ ಆದಾಮ ಸತ್ತನು. (ಆದಿಕಾಂಡ 5:5) ಆದಾಮ ಸತ್ತ ಮೇಲೆ ಸ್ವರ್ಗಕ್ಕೋ ಬೇರೊಂದು ಲೋಕಕ್ಕೋ ಹೋಗಲಿಲ್ಲ. ಇದನ್ನು ಹೇಗೆ ಹೇಳಬಹುದು? ದೇವರು ಅವನನ್ನು ಸೃಷ್ಟಿಸುವ ಮುಂಚೆ ಅವನು ಅಸ್ತಿತ್ವದಲ್ಲೇ ಇರಲಿಲ್ಲ ಅಂದರೆ ಎಲ್ಲೂ ಇರಲಿಲ್ಲ. ದೇವರು ಅವನನ್ನು ಸೃಷ್ಟಿಸಿದ್ದು ಮಣ್ಣಿನಿಂದ. ಹಾಗಾಗಿ ಅವನು ಸತ್ತ ಮೇಲೆ ಮಣ್ಣಿಗೇ ಸೇರಿದ. ಅಂದರೆ, ಅವನು ಮತ್ತೆ ಮಣ್ಣಿನ ಥರ ಜೀವವಿಲ್ಲದ ನಿರ್ಜೀವ ಸ್ಥಿತಿಗೆ ಬಂದ. ಎಷ್ಟು ದುಃಖಕರ ವಿಷಯ ಅಲ್ಲವೆ!

ನಮಗೆ ಯಾಕೆ ಪರಿಪೂರ್ಣ ಜೀವನ ಸಿಗಲಿಲ್ಲ

ಆದಾಮ-ಹವ್ವ ಬೇಕು ಬೇಕೆಂದೇ ಪಾಪ ಮಾಡಿದ ಕಾರಣ, ತಮ್ಮ ಪರಿಪೂರ್ಣತೆ ಮತ್ತು ಸದಾಕಾಲ ಜೀವಿಸುವ ಅವಕಾಶವನ್ನು ಕಳಕೊಂಡರು. ಈ ತಪ್ಪಿನಿಂದ ಅವರ ದೇಹದಲ್ಲಿ ಬದಲಾವಣೆಗಳಾದವು. ಅವರು ಅಪರಿಪೂರ್ಣರಾದರು ಮತ್ತು ಪಾಪಿಗಳಾದರು. ಆದರೆ ಅವರ ತಪ್ಪಿನಿಂದ ಕೇವಲ ಅವರಿಗೆ ಮಾತ್ರ ಕೆಟ್ಟದಾಗಲಿಲ್ಲ. ಅವರ ಪಾಪಪೂರ್ಣ ಸ್ಥಿತಿ, ಅವರಿಗೆ ಹುಟ್ಟಿದ ಮಕ್ಕಳಿಗೂ ಬಂತು. ರೋಮನ್ನರಿಗೆ 5:12 ಹೇಳುತ್ತೆ: “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.”

ಬೈಬಲ್‌, ಪಾಪ ಮತ್ತು ಮರಣವನ್ನು ‘ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕಿಗೆ ಅಥವಾ ಸಕಲ ದೇಶೀಯರ ಮೇಲೆ ಹಾಕಿರುವ ತೆರೆಗೆ’ ಹೋಲಿಸಿದೆ. (ಯೆಶಾಯ 25:7) ಈ ಮುಸುಕು ಎಲ್ಲಾ ಮಾನವರನ್ನು ವಿಷಕಾರಿ ಮಂಜಿನಂತೆ ಆವರಿಸಿದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲು ಆಗಲ್ಲ. ಹೌದು, ‘ಆದಾಮನಿಂದಾಗಿ ಎಲ್ಲರೂ ಸಾಯುತ್ತಿದ್ದೇವೆ.’ (1 ಕೊರಿಂಥ 15:22) ಹಾಗಾಗಿ, ಪೌಲನಿಗೆ ಬಂದ ಈ ಪ್ರಶ್ನೆ ನಮಗೂ ಬರಬಹುದು: ‘ಮರಣಕ್ಕೆ ಒಳಗಾಗುತ್ತಿರುವ ನನ್ನನ್ನು ರಕ್ಷಿಸುವವರು ಯಾರು?’—ರೋಮನ್ನರಿಗೆ 7:24.