ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಸ್ಯೆಯಲ್ಲೂ ಸಂತೋಷವಾಗಿರಲು ಸಾಧ್ಯ

ಸಮಸ್ಯೆಯಲ್ಲೂ ಸಂತೋಷವಾಗಿರಲು ಸಾಧ್ಯ

ಹಿಂದಿನ ಲೇಖನದಲ್ಲಿ ನೋಡಿದ ಹಾಗೆ, ಭವಿಷ್ಯತ್ತಿನಲ್ಲಿ ಸಾವು ನೋವು ಇರೋದಿಲ್ಲ. ಆದರೆ ಇದೆಲ್ಲ ಆಗೋದು ಭವಿಷ್ಯದಲ್ಲಿ ಅಂದಮೇಲೆ, ಈಗಿರೋ ಸಮಸ್ಯೆ ಸವಾಲುಗಳಿಗೆ ಏನು ಮಾಡೋದು? ಬೈಬಲಿನಲ್ಲಿ ಇದಕ್ಕೂ ಉತ್ತರ ಇದೆ. ಸಮಸ್ಯೆಗಳ ನಡುವೆಯೂ ಸಂತೃಪ್ತ ಜೀವನ ನಡೆಸಲು ಬೈಬಲ್‌ ಸಹಾಯ ಮಾಡುತ್ತೆ. ಉದಾಹರಣೆಗೆ, ನಮ್ಮೆಲ್ಲರಿಗೂ ಬರಬಹುದಾದ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಬೈಬಲ್‌ ಕೊಡುವ ಸಲಹೆಗಳನ್ನು ನೋಡೋಣ.

ತೃಪ್ತಿಯಿಂದಿರೋದು ಹೇಗೆ?

ಬೈಬಲಿನ ಸಲಹೆ: “ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ.”—ಇಬ್ರಿಯ 13:5.

ಇಂದಿನ ಪ್ರಪಂಚ, ಹೊಸ ಹೊಸ ವಸ್ತುಗಳನ್ನು ತೋರಿಸಿ ನಾವು ಅದರ ಹಿಂದೆ ಪರದಾಡುವಂತೆ ಮಾಡುತ್ತೆ. ಆದರೆ ಬೈಬಲ್‌, ಇರೋದ್ರಲ್ಲೇ “ತೃಪ್ತರಾಗಿ” ಇರಬೇಕೆಂದು ಹೇಳುತ್ತೆ. ಹಾಗಾದರೆ, ತೃಪ್ತರಾಗಿ ಇರೋದು ಹೇಗೆ?

ಹಣಕ್ಕಾಗಿ ಹೆಣಗಾಡಬೇಡಿ. ‘ಮೂರ್‌ ಕಾಸ್‌ ಕೊಟ್ರೆ, ಈಗಿನ ಜನ್ರು ಎಲ್ಲಾ ಹರಾಜ್‌ ಹಾಕ್‌ ಬಿಡ್ತಾರೆ’ ಎಂಬ ಮಾತೇ ಇದೆ. ಹೀಗೆ ಕುಟುಂಬ, ಸ್ನೇಹಿತರು, ನೈತಿಕತೆ, ಮಾನಮರ್ಯಾದೆ ಇವೆಲ್ಲವೂ “ಹಣದ ಪ್ರೇಮಕ್ಕೆ” ಬಲಿಯಾಗಿದೆ. (1 ತಿಮೊಥೆಯ 6:10) ಇದೆಂಥಾ ದುರಂತ! ಹಣದ ಹಿಂದೆ ಬೀಳೋ ವ್ಯಕ್ತಿಗೆ ‘ಎಷ್ಟಿದ್ದರೂ ಸಾಲ್ದು’. ಅಂದರೆ ಅವರಿಗೆ ತೃಪ್ತಿನೇ ಇರಲ್ಲ.—ಪ್ರಸಂಗಿ 5:10.

ದುಡ್ಡನ್ನಲ್ಲ ಸಂಬಂಧಗಳನ್ನು ಬೆಳೆಸಿ. ಯಾಕೆಂದರೆ ವಸ್ತುಗಳು ಉಪಯೋಗಕ್ಕೆ ಬರಬಹುದು. ಆದರೆ ಅವುಗಳು ನಮ್ಮನ್ನು ಪ್ರೀತಿಸೋಕೆ ಆಗುತ್ತಾ? ಪ್ರೀತಿಸೋದು ಬಿಡಿ, ನಮ್ಮನ್ನು ಅರ್ಥ ಮಾಡ್ಕೊಳ್ಳೋಕ್ಕೂ ಆಗಲ್ಲ. ಆದರೆ ನಿಜ ಮಿತ್ರರು ಹಾಗಲ್ಲ, ಅವರು ನಮ್ಮನ್ನು ಪ್ರೀತಿಸಿ, ಜೀವನದಲ್ಲಿ ತೃಪ್ತಿ ಕಂಡುಕೊಳ್ಳಲು ಸಹಾಯ ಮಾಡುತ್ತಾರೆ.—ಜ್ಞಾನೋಕ್ತಿ 17:17.

ಬೈಬಲ್‌ ಸಲಹೆಗಳನ್ನು ಪಾಲಿಸುವುದಾದರೆ, ಖಂಡಿತ ಖುಷಿ ಖುಷಿಯಾಗಿರಬಹುದು

ಕಾಯಿಲೆ ಬಂದಾಗ ತಾಳಿಕೊಳ್ಳೋದು ಹೇಗೆ?

ಬೈಬಲಿನ ಸಲಹೆ: “ಹರ್ಷಹೃದಯವು ಒಳ್ಳೇ ಔಷಧ.”ಜ್ಞಾನೋಕ್ತಿ 17:22.

ಸಂತೋಷವಾಗಿ ಇರೋದೇ ಒಂದು ಒಳ್ಳೇ ಮಾತ್ರೆ! ಯಾಕೆಂದರೆ, ಖುಷಿ ಖುಷಿಯಾಗಿದ್ದರೆ ನಮ್ಗೆ ಏನೇ ಕಾಯಿಲೆ ಇದ್ದರೂ ಅದನ್ನು ತಾಳಿಕೊಳ್ಳಬಹುದು. ಆದರೆ, ಕಾಯಿಲೆ ಬಂದಾಗಲೂ ನಗು ನಗುತ್ತಾ ಇರೋದು ಹೇಗೆ?

ಯೋಚಿಸುವ ರೀತಿ ಬದಲಾಯಿಸಿ. ಜೀವನದಲ್ಲಿ ಬರೋ ತೊಂದರೆಗಳ ಬಗ್ಗೇನೇ ಯೋಚಿಸುತ್ತಾ ಇದ್ದರೆ ನಮ್ಮ ‘ದಿನಗಳೆಲ್ಲಾ ದುಃಖಭರಿತವಾಗಿ’ ಇರುತ್ತೆ. (ಜ್ಞಾನೋಕ್ತಿ 15:15) ಅದರ ಬದಲು ನಮ್ಮ ಜೀವನದಲ್ಲಿ ನಡೆದ ಒಳ್ಳೇ ವಿಷ್ಯಗಳ ಬಗ್ಗೆ ಯೋಚಿಸಿ ಮತ್ತು ಅದಕ್ಕೆ “ಕೃತಜ್ಞತೆಯುಳ್ಳವರಾಗಿರಿ” ಎನ್ನುತ್ತೆ ಬೈಬಲ್‌. (ಕೊಲೊಸ್ಸೆ 3:15) ಈ ಗುಣಾನ ಬೆಳಸಿಕೊಳ್ಳೋದು ಹೇಗೆ? ನಿಮ್ಮ ಸುತ್ತ ಮುತ್ತ ಇರೋ ಚಿಕ್ಕ ಚಿಕ್ಕ ವಿಷ್ಯಗಳನ್ನು ಆನಂದಿಸಲು ಕಲಿಯಿರಿ. ಉದಾಹರಣೆಗೆ, ಹಕ್ಕಿಗಳ ಚಿಲಿಪಿಲಿ, ತಣ್ಣನೆ ಬೀಸುವ ಗಾಳಿ, ಅಥವಾ ನಾವು ತುಂಬಾ ಪ್ರೀತಿಸುವ ವ್ಯಕ್ತಿಯ ಮುಖದಲ್ಲಿ ಅರಳುವ ನಗು ಇವುಗಳನ್ನೆಲ್ಲಾ ಎನ್ಜಾಯ್‌ ಮಾಡಿ. ಆಗ ನಮ್ಮ ಜೀವನ ಸಂತೋಷ ತುಂಬಿದ ಸಾಗರದಂತಿರುತ್ತೆ.

ಬೇರೆಯವರಿಗೆ ಸಹಾಯ ಮಾಡಿ. ನಮ್ಮ ಆರೋಗ್ಯ ಹಾಳಾಗುತ್ತಾ ಹೋದಾಗ ದುಃಖವಾಗಬಹುದು. ಆದರೆ ಇಂಥ ಸಮಯದಲ್ಲೂ “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಅನ್ನುವುದನ್ನು ಮರೆಯಬೇಡಿ. (ಅ. ಕಾರ್ಯಗಳು 20:35) ನಾವು ಮಾಡುವ ಸಹಾಯಕ್ಕೆ ಬೇರೆಯವರು ಥ್ಯಾಂಕ್ಸ್‌ ಹೇಳುವಾಗ ಮನಸ್ಸಿಗೆ ತೃಪ್ತಿ ಸಿಗುತ್ತೆ. ಹೀಗೆ, ಬೇರೆಯವರ ಸಂತೋಷದಲ್ಲಿ ನಮ್ಮ ಸುಖವನ್ನು ಕಾಣ್ತಾ ಹೋದರೆ, ನಮಗಿರುವ ಸಮಸ್ಯೆಯನ್ನೇ ಮರೆತು ಬಿಡುತ್ತೇವೆ.

ಸಂಸಾರದಲ್ಲಿ ಸಂತೋಷದಿಂದಿರೋದು ಹೇಗೆ?

ಬೈಬಲಿನ ಸಲಹೆ: ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿರಿ.’—ಫಿಲಿಪ್ಪಿ 1:10.

ಸಂಸಾರ ಮುರಿದು ಹೋಗಬಾರದೆಂದರೆ, ಗಂಡ ಹೆಂಡ್ತಿ ಇಬ್ಬರೂ ಒಟ್ಟಿಗೆ ಸಮಯ ಕಳೆಯಬೇಕು. ಸಂಸಾರವನ್ನು ಸುಖವಾಗಿ ಇಟ್ಟುಕೊಳ್ಳುವುದು ಒಂದು ಮುಖ್ಯ ಗುರಿಯಾಗಿರಬೇಕು. ಇದನ್ನು ಮಾಡೋದು ಹೇಗೆ?

ಜೊತೆ ಜೊತೆಯಾಗಿ ಕೆಲಸಮಾಡಿ. ನಿಮಗೆ ಇಷ್ಟ ಇರೋ ವಿಷಯಗಳನ್ನು ನೀವೊಬ್ಬರೇ ಮಾಡೋ ಬದಲು, ಇಬ್ಬರಿಗೂ ಇಷ್ಟ ಆಗೋ ವಿಷಯಗಳನ್ನು ಒಟ್ಟಿಗೆ ಮಾಡಿ. ಹೀಗೆ ಮಾಡಬೇಕೆಂದರೆ, ಚೆನ್ನಾಗಿ ಪ್ಲ್ಯಾನ್‌ ಮಾಡಬೇಕು. “ಒಬ್ಬನಿಗಿಂತ ಇಬ್ಬರು ಲೇಸು” ಎನ್ನುತ್ತೆ ಬೈಬಲ್‌. (ಪ್ರಸಂಗಿ 4:9) ಹಾಗಾಗಿ, ಇಬ್ಬರು ಸೇರಿ ಅಡುಗೆ, ವಾಕಿಂಗ್‌, ಅಥವಾ ಇಬ್ಬರಿಗೂ ಇಷ್ಟವಾಗುವ ಬೇರೆ ಯಾವುದಾದರು ಚಟುವಟಿಕೆಯನ್ನು ಮಾಡಿ. ಒಟ್ಟಿಗೆ ಕೂತು ಮಾತಾಡುತ್ತಾ ಕಾಫಿ, ಟೀ ಕುಡಿಯುವುದು ಕೂಡ ನಿಮ್ಮಿಬ್ಬರ ಮಧ್ಯೆ ಆಪ್ತತೆ ಹೆಚ್ಚಿಸುತ್ತೆ.

ಪ್ರೀತಿಯನ್ನು ಮುಚ್ಚಿಡಬೇಡಿ. ಗಂಡ ಹೆಂಡ್ತಿ ಒಬ್ಬರಿಗೊಬ್ಬರು ಪ್ರೀತಿ ಮತ್ತು ಗೌರವ ತೋರಿಸಬೇಕು ಎನ್ನುತ್ತೆ ಬೈಬಲ್‌. (ಎಫೆಸ 5:28, 33) ಮುಗುಳ್ನಗೆ ಬೀರುವ ಮೂಲಕ, ಪ್ರೀತಿಯಿಂದ ಅಪ್ಪಿಕೊಳ್ಳುವ ಮೂಲಕ, ಸಣ್ಣಪುಟ್ಟ ಉಡುಗೊರೆ ಕೊಡುವ ಮೂಲಕ ಇದನ್ನು ಮಾಡಬಹುದು. ಲೈಂಗಿಕತೆ, ಗಂಡ ಹೆಂಡ್ತಿ ಪ್ರೀತಿ ತೋರಿಸೋ ಒಂದು ವಿಧಾನ. ಆದರೆ ಅದು ಅವರಿಬ್ಬರ ಮಧ್ಯದಲ್ಲಿ ಮಾತ್ರ ಇರಬೇಕು.—ಇಬ್ರಿಯ 13:4.