ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚತುರಕ್ಷರಿ, ಹೀಬ್ರು ಅಕ್ಷರಗಳಲ್ಲಿ ದೇವರ ಪವಿತ್ರ ನಾಮ ಯೆಹೋವ, ಬಲದಿಂದ ಎಡಕ್ಕೆ ಓದಲಾಗುತ್ತಿತ್ತು

ನಂಬಿಕೆ ಬಲಪಡಿಸುವ ಹೀಬ್ರು ಭಾಷೆಯ ಚಿಕ್ಕ ಅಕ್ಷರ

ನಂಬಿಕೆ ಬಲಪಡಿಸುವ ಹೀಬ್ರು ಭಾಷೆಯ ಚಿಕ್ಕ ಅಕ್ಷರ

ದೇವರು ಕೊಟ್ಟಿರುವ ಎಲ್ಲ ಮಾತುಗಳು ಖಂಡಿತ ನೆರವೇರುತ್ತವೆ ಎಂದು ನಾವು ನಿಜವಾಗಿಯೂ ನಂಬಬಹುದಾ? ಯೇಸುವಿಗಂತೂ ಅದರಲ್ಲಿ ನೂರಕ್ಕೆ ನೂರರಷ್ಟು ನಂಬಿಕೆ ಇತ್ತು. ಆತನ ಬೋಧನೆ ಕೇಳುಗರಲ್ಲಿ ನಂಬಿಕೆಯನ್ನು ಬೆಳೆಸುತ್ತಿತ್ತು. ಉದಾಹರಣೆಗೆ, ಮತ್ತಾಯ 5:18​ರಲ್ಲಿರುವ ಯೇಸುವಿನ ಪರ್ವತ ಪ್ರಸಂಗದ ಮಾತನ್ನು ಗಮನಿಸಿ: “ಆಕಾಶವೂ ಭೂಮಿಯೂ ಬೇಗನೆ ಗತಿಸಿಹೋಗಬಹುದು, ಆದರೆ ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಅತಿ ಚಿಕ್ಕ ಅಕ್ಷರವಾದರೂ ಒಂದು ಅಕ್ಷರದ ಸೂಕ್ಷ್ಮಭಾಗವಾದರೂ ಅಳಿದುಹೋಗಲಾರದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.”

ಹೀಬ್ರು ಭಾಷೆಯಲ್ಲಿ י (ಯಾದ್‌) ಅತೀ ಚಿಕ್ಕ ಅಕ್ಷರವಾಗಿದೆ. ಇದು ದೇವರ ಪವಿತ್ರ ಹೆಸರಾದ ಯೆಹೋವ * ಎಂಬ ಚತುರಕ್ಷರಿಯಲ್ಲಿನ ಮೊದಲ ಅಕ್ಷರ. ಶಾಸ್ತ್ರಿಗಳು ಮತ್ತು ಫರಿಸಾಯರು ಧರ್ಮಶಾಸ್ತ್ರದ ಪ್ರತಿಯೊಂದು ಪದಗಳಿಗೆ ಮತ್ತು ಅಕ್ಷರಗಳಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಿದ್ದರು. ಅಷ್ಟೇ ಅಲ್ಲ ‘ಅಕ್ಷರದ ಸೂಕ್ಷ್ಮ ಭಾಗಕ್ಕೂ’ ಅವರು ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದರು.

ಒಂದುವೇಳೆ ಆಕಾಶ ಭೂಮಿ ಅಳಿದು ಹೋದರೂ ಹೋಗಬಹುದು. ಆದರೆ ಬೈಬಲಿನಲ್ಲಿ ದೇವರು ಕೊಟ್ಟಿರುವ ಮಾತಿನ ಅತಿ ಸೂಕ್ಷ್ಮ ವಿವರವೂ ನೆರವೇರದೇ ಹೋಗಲು ಸಾಧ್ಯವೇ ಇಲ್ಲ ಅಂತ ಯೇಸು ಹೇಳಿದನು. ಆಕಾಶ ಮತ್ತು ಭೂಮಿ ಖಂಡಿತ ಅಳಿದು ಹೋಗುವುದಿಲ್ಲ ಎಂದು ಬೈಬಲ್‌ ಹೇಳಿರುವ ಮಾತು ನಮಗೆ ಗೊತ್ತಿದೆ. (ಕೀರ್ತನೆ 78:69) ಆದ್ದರಿಂದ ದೇವರ ಗ್ರಂಥದಲ್ಲಿರುವ ಅತಿ ಚಿಕ್ಕ ವಿಷಯವೂ ಯಾವುದೇ ಕಾರಣಕ್ಕೆ ನೆರವೇರದೇ ಹೋಗುವುದಿಲ್ಲ ಎಂದು ಯೇಸುವಿನ ಮಾತುಗಳು ಸೂಚಿಸಿದವು.

ಯೆಹೋವ ದೇವರು ಪ್ರತಿಯೊಂದು ಸೂಕ್ಷ್ಮ ವಿವರಕ್ಕೂ ಗಮನಕೊಡುತ್ತಾನಾ? ಖಂಡಿತ ಕೊಡುತ್ತಾನೆ. ಉದಾಹರಣೆಗೆ, ಪಸ್ಕದ ಕುರಿಯ ಮೂಳೆಯನ್ನು ಮುರಿಯಬಾರದು ಎಂದು ಪ್ರಾಚೀನ ಇಸ್ರಾಯೇಲ್ಯರಿಗೆ ಯೆಹೋವನು ಆಜ್ಞೆ ಕೊಟ್ಟಿದ್ದನು. (ವಿಮೋಚನಕಾಂಡ 12:46) ಇದು ತುಂಬ ಚಿಕ್ಕ ಅಥವಾ ಸೂಕ್ಷ್ಮ ವಿವರ. ಯಾಕೆ ಮೂಳೆಯನ್ನು ಮುರಿಯಬಾರದು ಎಂದು ಇಸ್ರಾಯೇಲ್ಯರು ಅರ್ಥಮಾಡಿಕೊಂಡಿದ್ದರಾ? ಇಲ್ಲ. ಮೆಸ್ಸೀಯನನ್ನು ಯಾತನಾ ಕಂಬಕ್ಕೆ ಹಾಕಿದಾಗ ಅವನ ಎಲುಬು ಮುರಿಯುವುದಿಲ್ಲ ಎಂಬ ಪ್ರವಾದನೆಯ ನೆರವೇರಿಕೆಯನ್ನು ಇದು ಸೂಚಿಸುತ್ತಿತ್ತು ಎಂದು ಯೆಹೋವನಿಗೆ ತಿಳಿದಿತ್ತು.—ಕೀರ್ತನೆ 34:20; ಯೋಹಾನ 19:31-33, 36.

ಯೇಸು ಹೇಳಿದ ಮಾತುಗಳು ನಮಗೆ ಏನನ್ನು ಕಲಿಸುತ್ತವೆ? ಯೆಹೋವ ದೇವರ ಎಲ್ಲ ಮಾತುಗಳು ಚಾಚೂ ತಪ್ಪದೆ ನೆರವೇರುತ್ತವೆ ಎಂಬ ಭರವಸೆ ನಮಗೂ ಇರತಕ್ಕದ್ದು. ದೇವರು ಹೇಳಿದ ಅತಿ ಚಿಕ್ಕ ಮಾತಾದರೂ ಖಂಡಿತ ನೆರವೇರೇ ನೆರವೇರುತ್ತದೆ. ಹೀಬ್ರು ಭಾಷೆಯ ಈ ಚಿಕ್ಕ ಅಕ್ಷರ ನಮ್ಮ ನಂಬಿಕೆಯನ್ನು ಎಷ್ಟು ಬಲಪಡಿಸುತ್ತದಲ್ಲವೇ?

^ ಪ್ಯಾರ. 3 ಗ್ರೀಕ್‌ ಅಕ್ಷರಮಾಲೆಯಲ್ಲೂ ಐಯೋಟ ಎಂಬ ಅತಿ ಚಿಕ್ಕ ಅಕ್ಷರವಿದೆ. ಇದು ಸಹ ಹೀಬ್ರುವಿನ י (ಯಾದ್‌)ಗೆ ಸಮಾನವಾಗಿದೆ. ಮೋಶೆಯು ಧರ್ಮಶಾಸ್ತ್ರವನ್ನು ಮೂಲತಃ ಹೀಬ್ರುವಿನಲ್ಲಿ ಬರೆದಿದ್ದನು. ಆದ್ದರಿಂದ ‘ಅಕ್ಷರದ ಸೂಕ್ಷ್ಮಭಾಗ’ ಎಂದು ಹೇಳಿದಾಗ ಯೇಸು ಹೀಬ್ರು ಅಕ್ಷರ ಯಾದ್‌ ಅನ್ನು ಮನಸ್ಸಲ್ಲಿಟ್ಟು ಹೇಳಿದ್ದನು.