ಮುಖಪುಟ ಲೇಖನ | ನಿಜ ಸಾಂತ್ವನ ಯಾರಿಂದ ಸಿಗುತ್ತದೆ?
ನಮ್ಮೆಲ್ಲರಿಗೆ ಸಾಂತ್ವನ ಬೇಕೇಬೇಕು
ನೀವು ಚಿಕ್ಕವರಾಗಿದ್ದಾಗ ಬಿದ್ದು ಕೈಗೋ ಕಾಲಿಗೋ ಗಾಯ ಆಗಿದ್ದು ನಿಮಗೆ ನೆನಪಿದೆಯಾ? ಆಗ ನಿಮ್ಮ ಅಮ್ಮ ಹೇಗೆ ಸಂತೈಸಿ ಸಮಾಧಾನ ಮಾಡಿದರಂತ ನಿಮ್ಮ ನೆನಪಿನ ಪುಟಗಳನ್ನು ಸ್ವಲ್ಪ ಹಿಂದೆ ತಿರುಗಿಸಿ ನೋಡಿ. ಅಮ್ಮ ಓಡಿ ಬಂದು ಗಾಯಕ್ಕೆ ಊದುತ್ತಾ ಔಷಧಿ ಹಚ್ಚಿ, ನಿಮ್ಮ ತಲೆ ಸವರಿ, ‘ಅಳಬೇಡ ಪುಟ್ಟಾ’ ಅಂತ ಪ್ರೀತಿಯಿಂದ ಅಪ್ಪಿಕೊಂಡಾಗ ನಿಮ್ಮ ಅಳು, ನೋವು ಎಲ್ಲಾ ಕ್ಷಣದಲ್ಲೇ ಮಾಯವಾಗುತ್ತಿತ್ತು. ಚಿಕ್ಕಂದಿನಲ್ಲಿ ಸಾಂತ್ವನ ಬೇಕಾದಾಗೆಲ್ಲಾ ಅದು ತಕ್ಷಣ ಸಿಗುತ್ತಿತ್ತು. ಆದರೆ ಈಗ?
ದೊಡ್ಡವರಾಗುತ್ತಾ ಹೋದಂತೆ ಸಮಸ್ಯೆಗಳು ಜಾಸ್ತಿಯಾಗುತ್ತವೆ. ಎಷ್ಟು ದೊಡ್ಡ ಸಮಸ್ಯೆಗಳು ಎದುರಾಗುತ್ತವೆಂದರೆ ಸಾಂತ್ವನ ಸಿಗೋದೇ ಕಷ್ಟ. ದೊಡ್ಡವರಾದ ಮೇಲೆ ಬರುವ ಈ ಸಮಸ್ಯೆಗಳು ಯಾವುದೇ ಔಷಧಿ ಅಥವಾ ಅಮ್ಮನ ಅಪ್ಪುಗೆಯಿಂದ ಸರಿಹೋಗಲ್ಲ. ಅಂಥ ಕೆಲವು ಉದಾಹರಣೆಗಳು ಇಲ್ಲಿವೆ ನೋಡಿ:
-
ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡಿದ್ದೀರಾ? ಹೂಲ್ಯಾನ್ ಎಂಬ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿದಾಗ ಅವನಿಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ‘ನನ್ ಜೀವ್ನನೇ ಈ ಕಂಪೆನಿಗೋಸ್ಕರ ಸವ್ಸಿದ್ದೀನಿ. ಈಗ ಇದ್ದಕ್ಕಿದ್ದಂತೆ ಕೆಲ್ಸದಿಂದ ತೆಗ್ದಾಕಿದ್ರೆ ನನ್ ಕುಟುಂಬಾನ ಹೇಗ್ ನೋಡ್ಕೊಳ್ಲಿ?’ ಅಂತಾನೆ ಹೂಲ್ಯಾನ್.
-
ಮದುವೆ ಮುರಿದುಬಿದ್ದು ದಿಕ್ಕೇ ತೋಚದಂತೆ ಆಗಿದೆಯಾ? “ಒಂದುವರೆ ವರ್ಷದ ಹಿಂದೆ ನನ್ನ ಗಂಡ ಇದ್ದಕ್ಕಿದ್ದಂತೆ ನನ್ನನ್ನ ಬಿಟ್ಟುಹೋದಾಗ ನನಗಾದ ನೋವು ಅಷ್ಟಿಷ್ಟಲ್ಲ. ಹೃದಯ ಒಡೆದು ನುಚ್ಚುನೂರಾಯ್ತು. ನಾನು ಶಾರೀರಿಕವಾಗಿ, ಮಾನಸಿಕವಾಗಿ ನೋವು ಅನುಭವಿಸಿದೆ. ನನಗೆ ತುಂಬ ಭಯ ಆಯ್ತು” ಎನ್ನುತ್ತಾಳೆ ರಾಕೆಲ್.
-
ಗಂಭೀರ ಕಾಯಿಲೆ ಇದ್ದು ಗುಣ ಆಗೋ ಥರ ಕಾಣಿಸ್ತಾ ಇಲ್ವಾ? ಇಂಥ ಪರಿಸ್ಥಿತಿಯಲ್ಲಿ ಬೈಬಲಿನಲ್ಲಿ ತಿಳಿಸಲಾಗಿರುವ ಯೋಬನಂತೆ ನಿಮಗನಿಸಬಹುದು. ಅವನು ಹೇಳಿದ್ದು, “ನಾನು ಬೇಸರಗೊಂಡಿದ್ದೇನೆ, ಬದುಕುವದಕ್ಕೆ ಇಷ್ಟವಿಲ್ಲ.” (ಯೋಬ 7:16) 80ರ ಪ್ರಾಯದ ಲೂಯೀಸ್ ಹೀಗನ್ನುತ್ತಾನೆ: “ನನ್ ಜೀವನದಲ್ಲಿ ಎಲ್ಲಾ ಮುಗ್ದೋಯ್ತು. ನಾನ್ ಕಾದಿರೋದು ಸಾವು ಒಂದಕ್ಕೇ ಅಂತ ನನಗನಿಸುತ್ತೆ.” ನಿಮಗೂ ಹೀಗನಿಸಬಹುದು.
-
ಪ್ರಿಯರ ಮರಣದಿಂದಾಗಿ ತತ್ತರಿಸಿಹೋಗಿದ್ದೀರಾ? “ನನ್ ಮಗ ವಿಮಾನ ಅಪಘಾತದಲ್ಲಿ ತೀರ್ಕೊಂಡ ಅಂತ ಕೇಳಿದಾಗ ನಂಗ್ ನಂಬೋಕೇ ಆಗ್ಲಿಲ್ಲ. ಆದ್ರೆ ಅದೇ ನಿಜ ಅಂತ ಗೊತ್ತಾದಾಗ ಎಷ್ಟು ನೋವಾಯ್ತಂದ್ರೆ ಬೈಬಲಿನಲ್ಲಿ ಹೇಳೋ ಥರ ದೊಡ್ಡ ಕತ್ತಿಯಿಂದ ಇರಿದ ಹಾಗಾಯ್ತು” ಎನ್ನುತ್ತಾರೆ ರಾಬರ್ಟ್.—ಲೂಕ 2:35.
ಇಂಥ ಕಷ್ಟದ ಪರಿಸ್ಥಿತಿಯಲ್ಲೂ ರಾಬರ್ಟ್, ಲೂಯೀಸ್, ರಾಕೆಲ್ ಮತ್ತು ಹೂಲ್ಯಾನ್ ಸಾಂತ್ವನ ಪಡೆದುಕೊಂಡರು. ಯಾರಿಂದ ಗೊತ್ತಾ? ಸರ್ವಶಕ್ತ ದೇವರಿಂದ. ಹಾಗಾದರೆ, ದೇವರು ಹೇಗೆ ಸಂತೈಸುತ್ತಾನೆ? ಆತನು ನಿಮ್ಮನ್ನೂ ಸಂತೈಸುತ್ತಾನಾ? ಮುಂದಿನ ಲೇಖನ ಓದಿ. (wp16-E No. 5)