ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ತಮ್ಮ ಮಾತನ್ನು ಉಳಿಸಿಕೊಂಡರು!

ಅವರು ತಮ್ಮ ಮಾತನ್ನು ಉಳಿಸಿಕೊಂಡರು!

ಅವರು ತಮ್ಮ ಮಾತನ್ನು ಉಳಿಸಿಕೊಂಡರು!

ಆನ್ಟಾನ್ಯೋ ಹೈಸ್ಕೂಲಿನ ಕೊನೆಯ ವರ್ಷದಲ್ಲಿದ್ದಾಗ ತನ್ನ ಸಹಪಾಠಿಗಳಿಗೆ ಅನೌಪಚಾರಿಕ ಸಾಕ್ಷಿಯನ್ನು ಕೊಡಲು ಬಯಸಿದನು. ಆದುದರಿಂದ, ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದೆದುರು ಸ್ಥಿರ ನಿಲ್ಲುತ್ತಾರೆ (ಇಂಗ್ಲಿಷ್‌) ಎಂಬ ಶೀರ್ಷಿಕೆಯ ವಿಡಿಯೋವನ್ನು ಅವರಿಗೆ ತೋರಿಸುವಂತೆ ಇತಿಹಾಸದ ಅಧ್ಯಾಪಕಿಗೆ ಅವನು ಕೇಳಿಕೊಂಡನು. ಅಧ್ಯಾಪಕಿಯು ಸಂದೇಹವಾದಿಯಾಗಿದ್ದರೂ, ಅದಕ್ಕೆ ಒಪ್ಪಿಕೊಳ್ಳುತ್ತಾ, ಮರುದಿನ ತಾನು ವಿಡಿಯೋವನ್ನು ತೋರಿಸುವುದಾಗಿ ಹೇಳಿದಳು.

ಆನ್ಟಾನ್ಯೋ ತಿಳಿಸುವುದು, “ಮೊದಮೊದಲು ತಾವೇ ಶ್ರೇಷ್ಠರೆಂಬ ದೃಷ್ಟಿಕೋನದಿಂದ ಅಧ್ಯಾಪಕಿಯು ವಿಡಿಯೋವನ್ನು ವೀಕ್ಷಿಸುತ್ತಿದ್ದರು; ಆದರೆ ಕೂಟ ಶಿಬಿರಗಳಲ್ಲಿರುವ ಯೆಹೋವನ ಸಾಕ್ಷಿಗಳ ಇತಿಹಾಸವನ್ನು ಪ್ರಖ್ಯಾತ ಇತಿಹಾಸಕಾರರು ತಿಳಿಸುತ್ತಿದ್ದರು ಎಂಬುದು ಅವರಿಗೆ ಮನವರಿಕೆಯಾದಾಗ, ನಿಕಟ ಗಮನವನ್ನು ಕೊಟ್ಟರು. ಕೊನೆಯಲ್ಲಿ, ವಿಡಿಯೋವನ್ನು ತೋರಿಸುವಂತೆ ಕೇಳಿಕೊಂಡದ್ದಕ್ಕೆ ಅವರು ನನಗೆ ಉಪಕಾರ ಸಲ್ಲಿಸಿದರು.”

ಮುಂದಿನ ಪಾಠದಲ್ಲಿ, ಜರ್ಮನಿಯಲ್ಲಿ ಬೀಬಲ್‌ಫಾರ್ಷರ್‌ ಎಂಬ ಹೆಸರಿನಿಂದ ಆಗ ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳ ಕೆಲಸವನ್ನು ವಿವರಿಸಲು ಅಧ್ಯಾಪಕಿಯು ಪ್ರಯತ್ನಿಸಿದರು; ಆದರೆ ಅದನ್ನು ಆನ್ಟಾನ್ಯೋ ವಿವರಿಸುವುದು ಉತ್ತಮವೆಂದು ಅವರು ಗ್ರಹಿಸಿದರು. ಆನ್ಟಾನ್ಯೋ ಸಮಾಜದಲ್ಲಿ ಸಾಕ್ಷಿಗಳ ಪಾತ್ರವನ್ನು ಮತ್ತು ಅವರ ಕೆಲವು ಬೋಧನೆಗಳನ್ನು ವಿವರಿಸಿದನು. ಅವನು ಹೀಗನ್ನುತ್ತಾ ತನ್ನ ಮಾತನ್ನು ಸಮಾಪ್ತಿಗೊಳಿಸಿದನು: “ಜನರು ಆಲಿಸದೆ ಹೋದರೆ, ಇಲ್ಲವೆ ನಮ್ಮ ಮುಖದ ಮೇಲೆಯೇ ರಭಸದಿಂದ ತಮ್ಮ ಬಾಗಿಲುಗಳನ್ನು ಮುಚ್ಚಿದರೆ ಅಥವಾ ನಮ್ಮ ಪ್ರಕಾಶನಗಳನ್ನು ಓದದಿದ್ದರೆ, ನಾವು ಕೊಂಡೊಯ್ಯುವ ಅಮೂಲ್ಯವಾದ ಸಂದೇಶದಿಂದ ಅವರಿಗೆ ಯಾವ ಪ್ರಯೋಜನವೂ ಆಗಲಾರದೆಂಬುದು ಸ್ಪಷ್ಟ.”

ಆನ್ಟಾನ್ಯೋವಿನ ಎಲ್ಲ ಸಹಪಾಠಿಗಳು ಈ ವಿಚಾರದೊಂದಿಗೆ ಸಹಮತವನ್ನು ತೋರಿಸಿದರು ಮತ್ತು ಅಧ್ಯಾಪಕಿಯು ತರಗತಿಗೆ ಒಂದು ಠರಾವನ್ನು ಪ್ರಸ್ತಾಪಿಸಿದರು. ಮೊದಲ ಅವಕಾಶದಲ್ಲಿಯೇ, ಅವರು ಸಾಕ್ಷಿಗಳ ಸಂದೇಶವನ್ನು ಆಲಿಸುವರು ಮತ್ತು ಅವರ ಪ್ರಕಾಶನಗಳನ್ನು ಸ್ವೀಕರಿಸುವರು. ತರಗತಿಯು ವಿಡಿಯೋವಿನ ಕುರಿತು ಕೆಲವು ಸಮಯದ ವರೆಗೆ ಮಾತುಕತೆಯನ್ನು ನಡೆಸಿತು. ಮುಂದಿನ ಕೆಲವು ದಿನಗಳ ವರೆಗೆ ಆನ್ಟಾನ್ಯೋವಿನ ಅನೇಕ ಜೊತೆ ವಿದ್ಯಾರ್ಥಿಗಳು, ತಮ್ಮೊಂದಿಗೆ ವಾಚ್‌ಟವರ್‌ ಪ್ರಕಾಶನಗಳನ್ನು ತರಗತಿಗಳಿಗೆ ತರುವುದನ್ನು ನೋಡುವಾಗ ಮತ್ತು ಅವರಲ್ಲಿ ಪ್ರತಿಯೊಬ್ಬನೂ ಮುಗುಳ್ನಗೆಯೊಂದಿಗೆ, “ನಾನು ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ, ನೋಡು!” ಎಂಬುದಾಗಿ ಹೇಳುವುದನ್ನು ಕೇಳಿಸಿಕೊಂಡಾಗ ಅವನಿಗಾದ ಸಂತೃಪ್ತಿಯನ್ನು ನೀವು ಊಹಿಸಿಕೊಳ್ಳಬಹುದು.