ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಪತ್ತಿನ ಸಮಯದಲ್ಲಿ ದೇವರ ಮೇಲೆ ಆತುಕೊಳ್ಳಲು ನಾವು ಕಲಿತುಕೊಂಡೆವು

ಆಪತ್ತಿನ ಸಮಯದಲ್ಲಿ ದೇವರ ಮೇಲೆ ಆತುಕೊಳ್ಳಲು ನಾವು ಕಲಿತುಕೊಂಡೆವು

ಆಪತ್ತಿನ ಸಮಯದಲ್ಲಿ ದೇವರ ಮೇಲೆ ಆತುಕೊಳ್ಳಲು ನಾವು ಕಲಿತುಕೊಂಡೆವು

ರೋಸಿ ಮೇಜರ್‌ ಹೇಳಿದಂತೆ

ನಾನು ಮೊದಲ ಬಾರಿ ಐದು ತಿಂಗಳ ಗರ್ಭಿಣಿಯಾಗಿದ್ದ ಸಮಯದಲ್ಲಿ ನನ್ನ ಕಾಲುಗಳು ಅಸಾಧಾರಣವಾಗಿ ಬಾತುಕೊಂಡಿರುವುದನ್ನು ನನ್ನ ಅತ್ತೆ ಗಮನಿಸಿದರು. ಮಾರ್ಚ್‌ 1992ರ ಆ ದಿನದಂದು ನಾವು ಏನನ್ನು ಅನುಭವಿಸಲಿದ್ದೆವೋ ಅದರಿಂದ ಯೆಹೋವನ ಮೇಲೆ ನಮ್ಮ ಆತುಕೊಳ್ಳುವಿಕೆಯು ಪರೀಕ್ಷೆಗೊಳಗಾಗುವುದೆಂದು ನನ್ನ ಗಂಡನಾದ ಜೋಯೀ ಮತ್ತು ನಾನು ನೆನಸಲೇ ಇಲ್ಲ.

ನನ್ನ ರಕ್ತದೊತ್ತಡವು ಬಹಳ ಹೆಚ್ಚಿದೆ ಎಂದು ಒಂದು ವಾರದ ನಂತರ ನನ್ನ ಪ್ರಸೂತಿತಜ್ಞರು ಕಂಡುಹಿಡಿದರು. ತಪಾಸಣೆ ಮತ್ತು ಅವಲೋಕನಕ್ಕಾಗಿ ಆಸ್ಪತ್ರೆಯನ್ನು ಸೇರಬೇಕೆಂದು ಅವರು ನನಗೆ ಸೂಚಿಸಿದಾಗ, ನಾನು ಸ್ವಾಭಾವಿಕವಾಗಿ ಚಿಂತಿತಳಾದೆ. ನನ್ನಲ್ಲಿ ಪ್ರಸವಪೂರ್ವ ಅಪಸ್ಮಾರ (ಪ್ರೀಇಕ್ಲ್ಯಾಂಪ್ಸಿಯ) ಎಂಬ ಮಾರಕ ಪರಿಣಾಮಗಳಿರಬಲ್ಲ ಗರ್ಭಾವಸ್ಥೆಯ ಜಟಿಲ ರೋಗವು ಬೆಳೆಯುತ್ತಿದೆಯೆಂದು ಪರೀಕ್ಷೆಗಳು ಸೂಚಿಸಿದವು. *

ಆಸ್ಪತ್ರೆಯಲ್ಲಿರುವ ಡಾಕ್ಟರ್‌ ನನ್ನನ್ನು ಮತ್ತು ಮಗುವನ್ನು ಉಳಿಸಲು ತತ್‌ಕ್ಷಣವೇ ಹೆರಿಗೆ ಮಾಡಿಸಿಕೊಳ್ಳುವಂತೆ ಶಿಫಾರಸುಮಾಡಿದರು. ನನ್ನ ಗಂಡ ಮತ್ತು ನಾನು ಸ್ತಬ್ಧರಾದೆವು. “ಆದರೆ ಮಗುವಿಗೆ ಕೇವಲ 24 ವಾರಗಳಷ್ಟೇ ಆಗಿದೆ!” ಎಂದು ನಾನು ಆಘಾತಗೊಂಡು ಉದ್ಗರಿಸಿದೆ. “ನಮ್ಮ ಮಗು ಗರ್ಭದ ಹೊರಗೆ ಹೇಗೆ ಬದುಕಬಹುದು?” “ಒಳ್ಳೇದು, ಕೆಲವು ಸಮಯದ ವರೆಗೆ ಹೆರಿಗೆಯನ್ನು ಮುಂದೂಡಲು ಪ್ರಯತ್ನಿಸುತ್ತೇನೆ,” ಎಂದು ಡಾಕ್ಟರ್‌ ದಯಾಭರಿತವಾಗಿ ಉತ್ತರಿಸಿದರು. “ಆದರೆ, ನಿಮ್ಮ ಪರಿಸ್ಥಿತಿಯು ಕ್ಷೀಣಿಸುತ್ತಾ ಹೋದರೆ, ನಾನು ಅದನ್ನು ಹೊರತೆಗೆಯಲೇಬೇಕಾಗುತ್ತದೆ.” ಹದಿಮೂರು ದಿನಗಳು ಕಳೆದವು, ಆದರೆ ನನ್ನ ಪರಿಸ್ಥಿತಿಯು ತೀಕ್ಷ್ಣವಾಗಿ ಹದಗೆಡುತ್ತಾ ಹೋಯಿತು. ವೈದ್ಯರು ನನ್ನ ಗಂಡನನ್ನು ಒಳಗೆ ಕರೆದು, ಚರ್ಚೆ ಮಾಡಿದ ನಂತರ ನಾವು ಹೆರಿಗೆ ಮಾಡಿಸುವ ಕಷ್ಟಕರ ನಿರ್ಣಯವನ್ನು ಮಾಡಿದೆವು.

ಹೆರಿಗೆ

ಹೆರಿಗೆಯ ಮುಂಚಿನ ರಾತ್ರಿಯಂದು, ಮಕ್ಕಳ ಚಿಕಿತ್ಸಕರಾಗಿದ್ದ ಡಾ. ಮೆಕ್ನೀಲ್‌ ನಮ್ಮನ್ನು ಭೇಟಿಯಾಗಿ, ತೀರ ಅಪ್ರಾಪ್ತ ಮಗು ಹೊರಬರಲಿರುವುದರಿಂದ ಮಿದುಳಿನ ಹಾನಿ, ಸರಿಯಾಗಿ ಕಾರ್ಯನಡಿಸುವುದಕ್ಕೆ ತೀರ ಅಸಮರ್ಥವಾಗಿರಬಹುದಾದ ಶ್ವಾಸಕೋಶಗಳು ಮತ್ತು ಇನ್ನೂ ಅನೇಕ ಇತರ ಸಂಭಾವ್ಯ ತೊಡಕುಗಳನ್ನು ನಾವು ಎದುರಿಸಬಹುದೆಂದು ವಿವರಿಸಿದರು. “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿ”ಗಾಗಿ ಮತ್ತು ಏನೇ ಸಂಭವಿಸಲಿ ಅದನ್ನು ಸ್ವೀಕರಿಸುವಂತೆ ಮತ್ತು ನಿಭಾಯಿಸುವಂತೆ ಬೇಕಾಗಿರುವ ಬಲವನ್ನು ಕೊಡಲು ನಾನು ದೇವರಿಗೆ ಪ್ರಾರ್ಥಿಸಿದೆ. (ಫಿಲಿಪ್ಪಿ 4:7) ಮರುದಿನ ಬೆಳಗ್ಗೆ ಸಿಸೇರಿಯನ್‌ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಮಾಡಿಸಿ ಮಗುವನ್ನು ಹೊರತೆಗೆಯಲಾಯಿತು. ಅವಳ ತೂಕ ಕೇವಲ 700 ಗ್ರ್ಯಾಮ್‌ಗಳಾಗಿದ್ದವು. ನಾವು ಅವಳಿಗೆ ಜೋಆ್ಯನ್‌ ಶೆಲಿ ಎಂಬ ಹೆಸರನ್ನಿಟ್ಟೆವು.

ಐದು ದಿನಗಳ ನಂತರ ನಾನು ಬರೀ ಕೈಯಲ್ಲಿ ಮನೆಗೆ ಹಿಂದಿರುಗಿದೆ. ನನ್ನ ಪುಟ್ಟ ಕಂದಮ್ಮ ಆಸ್ಪತ್ರೆಯ ವಿಶೇಷ ಶಿಶು ಆರೈಕೆ ಯೂನಿಟ್‌ನಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಾ ಇದ್ದಳು. ಎರಡು ವಾರಗಳ ನಂತರ ಜೋಆ್ಯನ್‌ ಪುಪ್ಪುಸ ಜ್ವರ (ನ್ಯುಮೋನಿಯಾ)ದಿಂದ ಬಾಧಿತಳಾದಳು. ಅನಂತರ ಅವಳು ಯಥಾಸ್ಥಿತಿಗೆ ಬಂದದ್ದನ್ನು ನೋಡಿ ನಾವು ಆಭಾರಿಗಳಾಗಿದ್ದೆವು, ಆದರೆ ಕೆಲವು ದಿವಸಗಳ ನಂತರ ಅವಳಿಗೆ ಕರುಳಿನ ಸೋಂಕು ತಗಲಿತು ಮತ್ತು ಅವಳನ್ನು ಯುನಿಟಿನ ತುರ್ತುನಿಗಾ ವಿಭಾಗಕ್ಕೆ ಸ್ಥಳಾಂತರಿಸಬೇಕಾಯಿತು. ಮುಂದಿನ ಆರು ದಿನಗಳೊಳಗೆ, ಜೋಆ್ಯನ್‌ ಸ್ವಲ್ಪಮಟ್ಟಿಗೆ ಗುಣಮುಖಳಾದಳು ಮತ್ತು ಸ್ವಲ್ಪ ಮೈತೂಕವನ್ನು ಪಡೆಯತೊಡಗಿದಳು. ನಾವು ಉಲ್ಲಾಸಭರಿತರಾದೆವು! ಆದರೆ ನಮ್ಮ ಉಲ್ಲಾಸವು ತಾತ್ಕಾಲಿಕವಾಗಿತ್ತು. ಜೋಆ್ಯನ್‌ ರಕ್ತಹೀನಳಾಗಿದ್ದಾಳೆಂದು ಡಾ. ಮೆಕ್ನೀಲ್‌ ನಮಗೆ ತಿಳಿಸಿದರು. ಜೋಆ್ಯನಳ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಲು ಕೃತಕ ಹಾರ್ಮೋನಾದ ಇರಿತ್ರೋಪಾಯಿಟಿನ್‌ (ಇಪಿಓ) ಅನ್ನು ಪಡೆದುಕೊಳ್ಳಲು ಪ್ರಯತ್ನಿಸುವಂತೆ ಅವರು ನನಗೆ ಸಲಹೆಯನ್ನಿತ್ತರು. ಇಲ್ಲಿ ಬಹಾಮಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸು ನ್ಯೂ ಯಾರ್ಕ್‌ ಬ್ರೂಕ್ಲಿನ್‌ನಲ್ಲಿರುವ ಹಾಸ್ಪಿಟಲ್‌ ಇನ್‌ಫರ್‌ಮೇಶನ್‌ ಸರ್ವಿಸಸ್‌ನ ಪ್ರತಿನಿಧಿಗಳನ್ನು ಸಂಪರ್ಕಿಸಿತು. ಲಭ್ಯವಾಗಿರುವ ಇತ್ತೀಚೆಗಿನ ವರದಿಯನ್ನು ಮತ್ತು ಇಪಿಓವಿನ ಉಪಯೋಗದ ಕುರಿತು ಮಾಹಿತಿಯನ್ನು ಅವರು ತಕ್ಷಣವೇ ಡಾ. ಮೆಕ್ನೀಲ್‌ಗೆ ಒದಗಿಸಿದರು ಮತ್ತು ಡಾಕ್ಟರರು ಅದರೊಂದಿಗೆ (ಇಪಿಓ) ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಪ್ರಾರಂಭಿಸಿದರು.

ಮುಂದಿರುವ ಸಮಸ್ಯೆಗಳು

ಕಳವಳದಿಂದ ಕೂಡಿದ ಹಲವು ವಾರಗಳು ಗತಿಸಿದವು. ಜೋಆ್ಯನ್‌ ತನ್ನ ಕರುಳುಗಳ ಸೋಂಕಿನಿಂದ ಮತ್ತು ಆಗಾಗ ಶ್ವಾಸಬಂಧನವನ್ನು (ಉಸಿರಾಟವಿಲ್ಲದ ಅವಧಿಗಳು) ಉಂಟುಮಾಡುವ ಮಸ್ತಿಷ್ಕ ಆಘಾತ, ಮತ್ತು ಕಡಿಮೆ ಹಿಮೋಗ್ಲೋಬಿನ್‌ ಮಟ್ಟ ಹಾಗೂ ಶ್ವಾಸನಳಿಕೆಯ ನ್ಯೂಮೋನಿಯದೊಂದಿಗೆ ಈಗ ಹೋರಾಡುತ್ತಿದ್ದಳು. ಇಂತಹ ಸಮಸ್ಯೆಗಳಲ್ಲಿ ಯಾವುದಾದರೊಂದು ಅವಳ ಮರಣಕ್ಕೆ ನಡೆಸುವ ಕೊನೆಯ ಕಾರಣವಾಗಿರಬಹುದೆಂಬ ಭಯವು ನಮಗಿತ್ತು. ಆದರೆ ಜೋಆ್ಯನ್‌ ನಿಧಾನವಾಗಿ ಚೇತರಿಸಿಕೊಳ್ಳತೊಡಗಿದಳು. ಅವಳಿಗೆ ಮೂರು ತಿಂಗಳಾಗಿದ್ದರೂ, ಅವಳು ಇನ್ನೂ ಆಸ್ಪತ್ರೆಯಲ್ಲಿದ್ದಳು ಮತ್ತು ಅವಳ ತೂಕ ಕೇವಲ 1.4 ಕಿಲೋಗ್ರ್ಯಾಮ್‌ಗಳಾಗಿತ್ತು. ಆದರೆ ಅವಳ ಜೀವಿತದಲ್ಲೇ ಮೊದಲ ಬಾರಿ, ಬದಲಿ ಆಮ್ಲಜನಕವನ್ನು ಒದಗಿಸುವ ಯಂತ್ರದ ಸಹಾಯವಿಲ್ಲದೆ ತನ್ನಷ್ಟಕ್ಕೆ ಉಸಿರಾಡುತ್ತಿದ್ದಳು. ಅವಳ ಹಿಮೋಗ್ಲೋಬಿನ್‌ ಸಾಮಾನ್ಯ ಮಟ್ಟಕ್ಕೆ ಏರುತ್ತಲಿತ್ತು. ಅವಳು ಇನ್ನೂ 500 ಗ್ರ್ಯಾಮ್‌ ತೂಕ ಹೆಚ್ಚಿಸಿದರೆ, ನಾವು ಅವಳನ್ನು ಮನೆಗೆ ಕರೆದೊಯ್ಯಬಹುದು ಎಂದು ಡಾಕ್ಟರ್‌ ಹೇಳಿದರು.

ಮೂರು ವಾರಗಳ ನಂತರ ಜೋಆ್ಯನ್‌ ಗಂಭೀರ ಶ್ವಾಸಬಂಧನದ ಆಘಾತವನ್ನು ಅನುಭವಿಸಿದಳು. ಅದರ ಕಾರಣವೇನೆಂಬುದನ್ನು ತಪಾಸಣೆಗಳಿಂದಲೂ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಶ್ವಾಸಬಂಧನದ ಆಘಾತಗಳು ಪದೇ ಪದೇ ಸಂಭವಿಸುತ್ತಿದ್ದವು ಮತ್ತು ಅದು ಯಾವಾಗಲೂ ಉಣಿಸುವ ಸಮಯದಲ್ಲಿ ಸಂಭವಿಸುತ್ತಿತ್ತು. ಕೊನೆಗೆ, ಜಠರ ಅನ್ನನಾಳ ಹಿನ್‌ಮುಖ ಹರಿವು ಎಂಬ ರೋಗದಿಂದ ಜೋಆ್ಯನ್‌ ಬಾಧಿತಳಾಗಿದ್ದಾಳೆಂದು ಕಂಡುಹಿಡಿಯಲಾಯಿತು. ಅವಳು ಏನನ್ನಾದರೂ ತಿಂದ ಬಳಿಕ ಅವಳ ಅನ್ನನಾಳವು ಮುಚ್ಚುತ್ತಿರಲಿಲ್ಲ. ಹೀಗಾಗಿ ಅವಳ ಹೊಟ್ಟೆಯಲ್ಲಿದ್ದದ್ದೆಲ್ಲವೂ ಅವಳ ಗಂಟಲಿಗೆ ಪುನಃ ಹಿಂದೆ ಬರುತ್ತಿತ್ತು. ಇದು ಸಂಭವಿಸುವಾಗ, ಅದು ಅವಳ ಗಂಟಲಲ್ಲಿ ಸಿಕ್ಕಿಬಿದ್ದು, ಅವಳ ಉಸಿರಾಟವನ್ನು ನಿಲ್ಲಿಸುತ್ತಿತ್ತು.

ಅಕ್ಟೋಬರ್‌ ತಿಂಗಳಿನ ಆದಿಭಾಗದಲ್ಲಿ, ಜೋಆ್ಯನಳಿಗೆ ಶಿಶು ಆರೈಕೆ ಯೂನಿಟ್‌ನಲ್ಲಿ ರೋಗಾಣುವೊಂದು ತಗಲಿತು. ಸಮಯಕ್ಕೆ ಮುನ್ನ ಹುಟ್ಟುವ ಅನೇಕ ಮಕ್ಕಳು ಅದರಿಂದ ಸಾಯುತ್ತಿದ್ದರು. ಆ ಬಲಹೀನ ಸ್ಥಿತಿಯಲ್ಲಿ, ಅವಳು ಈ ಹಿಂದೆ ಅನುಭವಿಸದಿದ್ದಷ್ಟು ದೀರ್ಘವಾದ ಶ್ವಾಸಬಂಧನ ಆಘಾತದಿಂದ ಜೋಆ್ಯನ್‌ ಕಷ್ಟಾನುಭವಿಸಿದಳು. ಅವಳನ್ನು ಪುನಃಶ್ಚೇತನಗೊಳಿಸುವ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಅವಳು ಸಾಯುತ್ತಾಳೆಂದು ನೆನಸಿ, ಮಕ್ಕಳ ವೈದ್ಯಕೀಯ ಉಪಚಾರಶಾಸ್ತ್ರಜ್ಞರು ತಮ್ಮ ಪ್ರಯತ್ನವನ್ನು ಬಿಟ್ಟುಕೊಡುವ ಹಂತಕ್ಕೆ ತಲಪಿದರು. ಅಷ್ಟರಲ್ಲೇ, ಯಾವುದೇ ಕಾರಣವಿಲ್ಲದೆ, ಅವಳು ಉಸಿರಾಡಲು ಪ್ರಾರಂಭಿಸಿದಳು, ಆದರೆ ತಕ್ಷಣವೇ ತೀಕ್ಷ್ಣವಾಯು ಆರಂಭವಾಯಿತು. ಪುನಃ ಒಮ್ಮೆ ಕೃತಕ ಉಸಿರಾಟದ ಉಪಕರಣಕ್ಕೆ ಅವಳನ್ನು ಜೋಡಿಸಲಾಯಿತು ಮತ್ತು ಇದೇ ಜೋಆ್ಯನಳ ಅಂತ್ಯವೆಂದು ನಾವು ನಿಶ್ಚಿತರಾದೆವು. ಆದರೆ ಅವಳು ಬದುಕಿ ಉಳಿದಳು ಮತ್ತು ನಾವು ಯೆಹೋವನಿಗೆ ಕೃತಜ್ಞತೆಯನ್ನು ಸಲ್ಲಿಸಿದೆವು.

ಯೆಹೋವನಲ್ಲಿ ಹೆಚ್ಚಿನ ವಿಶ್ವಾಸವನ್ನಿಡಲು ಕಲಿತುಕೊಳ್ಳುವುದು

ಜೋಆ್ಯನ್‌ ಹುಟ್ಟುವುದಕ್ಕೆ ಮುಂಚೆ ನಾವು ಎದುರಿಸಿದ ಸಮಸ್ಯೆಗಳನ್ನು, ದೋಣಿಕಟ್ಟೆಯು ಸಮೀಪವಿರುವಾಗ ದೋಣಿಯಿಂದ ಹೊರಬೀಳುವುದಕ್ಕೆ ಹೋಲಿಸಬಹುದು, ಯಾಕೆಂದರೆ ಅಲ್ಲಿಂದ ಈಜಿ ನಾವು ದಡವನ್ನು ಸೇರಬಹುದಿತ್ತು. ಆದರೆ ಈಗ ನಾವು ಮಧ್ಯಸಾಗರದಲ್ಲಿ ದೋಣಿಯಿಂದ ಹೊರಗೆ ಬಿದ್ದು ಎಲ್ಲಿ ನೋಡಿದರೂ ನೆಲವೇ ಕಾಣದ ಸ್ಥಳದಲ್ಲಿ ಬಿದ್ದಿದ್ದೇವೆಂದು ತೋರುತ್ತಿತ್ತು. ಹಿಂದೆ ನೋಡುವಾಗ, ಅವಳ ಜನನದ ಮುಂಚೆ ನಾವು ಕೆಲವೊಮ್ಮೆ ನಮ್ಮ ಮೇಲೆಯೇ ಹೆಚ್ಚು ಆತುಕೊಂಡಿದ್ದೇವೆಂದು ನಮಗನಿಸುತ್ತದೆ. ಆದರೆ ಜೋಆ್ಯನಳೊಂದಿಗಿನ ನಮ್ಮ ಅನುಭವದ ಮೂಲಕ, ಯಾವುದೇ ಮಾನವ ಪರಿಹಾರವಿಲ್ಲದ ಸನ್ನಿವೇಶಗಳಲ್ಲಿ ಯೆಹೋವನಲ್ಲಿ ಭರವಸೆಯಿಡಲು ಕಲಿತಿದ್ದೇವೆ. ಯೇಸು ನಮಗೆ ಸಲಹೆ ನೀಡಿದಂತೆ ಮಾಡಲು ನಾವು ಕಲಿತಿದ್ದೇವೆ—ಹೌದು, ಆಯಾ ದಿನದ ಸಮಸ್ಯೆ ಆಯಾ ದಿನದಲ್ಲಿಯೇ ನಿಭಾಯಿಸಿದರೆ ಸಾಕು. (ಮತ್ತಾಯ 6:34) ಕೆಲವೊಮ್ಮೆ ಯಾವುದರ ಬಗ್ಗೆ ಪ್ರಾರ್ಥಿಸಬೇಕೆಂದು ನಮಗೆ ಸ್ಪಷ್ಟವಾಗಿ ತಿಳಿಯದಿದ್ದರೂ ಸಹ ನಾವು ಯೆಹೋವನ ಮೇಲೆ ಆತುಕೊಳ್ಳಲು ಕಲಿತುಕೊಂಡಿದ್ದೇವೆ. ನಾವು ಈಗ ಬೈಬಲಿನಲ್ಲಿನ ವಿವೇಕಕ್ಕಾಗಿ ಮತ್ತು “ಸಾಧಾರಣವಾದುದನ್ನು ಮೀರುವ ಶಕ್ತಿಯ” [NW] ಮೂಲಕ, ತೀಕ್ಷ್ಣವಾದ ಕಷ್ಟಗಳನ್ನು ನಿಭಾಯಿಸಲು ನಮಗೆ ಸಾಧ್ಯಮಾಡಿರುವ ಯೆಹೋವನಿಗೆ ಉಪಕಾರವನ್ನು ಸಲ್ಲಿಸುತ್ತೇವೆ.—2 ಕೊರಿಂಥ 4:7.

ಸಂಕಷ್ಟದ ಸಮಯಗಳಲ್ಲಿ, ನನ್ನ ಭಾವನಾತ್ಮಕ ಸಮತೆಯನ್ನು ಕಾಪಾಡಿಕೊಳ್ಳುವುದು ನನಗೆ ಅನೇಕ ವೇಳೆ ಕಷ್ಟಕರವಾಗಿರುವುದನ್ನು ನಾನು ಕಂಡುಕೊಂಡಿದ್ದೇನೆ. ನಾನು ಜೋಆ್ಯನಳನ್ನು ಬಿಟ್ಟು ಇನ್ನಾವುದರ ಬಗ್ಗೆಯೂ ಯೋಚಿಸುತ್ತಿರಲಿಲ್ಲ. ನನ್ನ ಗಂಡ ಜೋಯೀ ಆತ್ಮಿಕ ಸಮತೆಯನ್ನು ಒದಗಿಸುವುದರಲ್ಲಿ ಅತ್ಯಮೂಲ್ಯ ವ್ಯಕ್ತಿಯಾಗಿದ್ದರು. ನಾನು ಇದಕ್ಕೆ ಅವರಿಗೆ ಎಷ್ಟೋ ಕೃತಜ್ಞಳಾಗಿದ್ದೇನೆ.

ಜೋಆ್ಯನ್‌ ಮನೆಗೆ ಬರುತ್ತಾಳೆ

ಜೋಆ್ಯನಳ ಆರೋಗ್ಯವು ನಿಧಾನವಾಗಿ ಸುಧಾರಿಸಿತು. ಒಂದು ದಿನ ಅವಳು ಕೃತಕ ಉಸಿರಾಟದ ಉಪಕರಣದ ನಾಳವನ್ನು ತನ್ನ ಬಾಯಿಯಿಂದ ಕಿತ್ತೆಸೆದಳು. ಜೋಆ್ಯನ್‌ ಈಗ ಮನೆಗೆ ಹೋಗಬಹುದೆಂದು ಡಾಕ್ಟರ್‌ ಮೆಕ್ನೀಲ್‌ ಭಾವಿಸಿದರು. ನಾವು ಎಷ್ಟು ಆನಂದಭರಿತರಾದೆವು! ಮನೆಗೆ ಕರೆತರುವ ತಯಾರಿಯಲ್ಲಿ, ಅವಳಿಗೆ ನಾಳಗಳ ಮೂಲಕ ಉಣಿಸುವುದು ಹೇಗೆಂಬುದನ್ನು ಕಲಿತುಕೊಂಡೆವು. ನಾವು ಆಮ್ಲಜನಕ ಸರಬರಾಯಿಯನ್ನು ಸಹ ಏರ್ಪಡಿಸಿದೆವು, ಹೃದಯ ಮತ್ತು ಉಸಿರಾಟದ ಮಾನಿಟರ್‌ ಅನ್ನು ಬಾಡಿಗೆಗೆ ತೆಗೆದುಕೊಂಡೆವು ಮತ್ತು ತುರ್ತು ಪುನಃಶ್ಚೇತನಗೊಳಿಸುವ ಒಂದು ಕೋರ್ಸಿನ ಮೂಲಕ ಬಹಳ ವಿಷಯಗಳನ್ನು ಕಲಿತುಕೊಂಡೆವು. ಕೊನೆಗೆ, ಅಕ್ಟೋಬರ್‌ 30, 1992ರಂದು ಜೋಆ್ಯನಳನ್ನು ಆಸ್ಪತ್ರೆಯಿಂದ ಹೊರತರಲಾಯಿತು. ಅವಳು ವಿಶೇಷ ಶಿಶು ಆರೈಕೆ ಯೂನಿಟ್‌ನಲ್ಲಿ (ಸ್ಪೆಶಲ್‌ ಇನ್‌ಫೆಂಟ್‌ ಕೇರ್‌ ಯೂನಿಟ್‌) 212 ದಿನಗಳನ್ನು ಕಳೆದಳು ಮತ್ತು ನಾವು ಸಹ ಅಷ್ಟೇ ದಿನಗಳನ್ನು ಅವಳೊಂದಿಗೆ ಅಲ್ಲಿ ಕಳೆದೆವು.

ಆರಂಭದಿಂದಲೂ, ಕುಟುಂಬ ಸದಸ್ಯರು ಮತ್ತು ಯೆಹೋವನ ಸಾಕ್ಷಿಗಳ ಸ್ಥಳೀಯ ಸಭೆಯ ಸದಸ್ಯರು ಯೆಹೋವನಿಂದ ಬಂದ ನಿಜವಾದ ಆಶೀರ್ವಾದವಾಗಿ ಪರಿಣಮಿಸಿದರು. ಅವರು ನಮ್ಮನ್ನು ಭೇಟಿಮಾಡುತ್ತಿದ್ದರು ಮಾತ್ರವಲ್ಲ, ಮನೆಯನ್ನು ಮತ್ತು ಅಂಗಳವನ್ನು ಶುಚಿಗೊಳಿಸುತ್ತಿದ್ದರು, ಊಟಗಳನ್ನು ತಯಾರಿಸುತ್ತಿದ್ದರು, ಆಸ್ಪತ್ರೆಗೆ ತಯಾರಾಗಿ ಹೋಗಲು ನಮಗೆ ಸಹಾಯಮಾಡುತ್ತಿದ್ದರು ಮತ್ತು ನಾನು ಸ್ವಲ್ಪ ನಿದ್ರೆಯನ್ನು ಮಾಡುವುದಕ್ಕೆ ಸಾಧ್ಯವಾಗುವಂತೆ ಜೋಆ್ಯನಳನ್ನು ನೋಡಿಕೊಳ್ಳುತ್ತಿದ್ದರು. ಈ ಮಧ್ಯೆ ಅವರ ವ್ಯಕ್ತಿತ್ವಗಳ ಕುರಿತು ನಮಗೆ ತಿಳಿಯದಿದ್ದ ಅದ್ಭುತ ಗುಣಲಕ್ಷಣಗಳನ್ನು ನಾವು ನೋಡಿದೆವು. ಉದಾಹರಣೆಗೆ, ಕೆಲವರು ತಮ್ಮ ಸ್ವಂತ ಸಂಕಷ್ಟಗಳ ಸಮಯಗಳಲ್ಲಿ ಅವರಿಗೆ ಸಹಾಯಮಾಡಿದ ಆತ್ಮಿಕ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಇಂದು ನಮ್ಮ ಜೀವನ

ಜೋಆ್ಯನಳ ಅನೇಕ ಸಮಸ್ಯೆಗಳ ಪರಿಹಾರಕ್ಕೆ, ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಗಮನವನ್ನು ಕೊಡಲು ನಾವು ಪ್ರಯಾಸಪಟ್ಟಿದ್ದೇವೆ. ಅವಳು 19 ತಿಂಗಳಿನವಳಾಗಿದ್ದಾಗ, ಜೋಆ್ಯನಳಿಗೆ ಮಿದುಳಿನ ಹಾನಿಯಿಂದ ಸಂಭವಿಸುವ ಮಸ್ತಿಷ್ಕ ಪಾರ್ಶ್ವವಾಯು (ಸರೀಬ್ರಲ್‌ ಪಾಲ್ಸೀ) ರೋಗವಿದೆ ಎಂದು ನಮಗೆ ತಿಳಿದುಬಂತು. ಅನಂತರ, ಸೆಪ್ಟೆಂಬರ್‌ 1994ರಲ್ಲಿ ಜಠರ ಅನ್ನನಾಳ ಹಿನ್‌ಮುಖ ಹರಿವು (ಗ್ಯಾಸ್ಟ್ರೋಇಸಾಫಜೀಅಲ್‌ ರೀಫ್ಲಕ್ಸ್‌) ಎಂಬ ರೋಗಕ್ಕೆ ಅತಿ ದೊಡ್ಡ ಆಪರೇಶನ್‌ ಆಕೆಗಾಯಿತು. 1997ರಲ್ಲಿ ಜೋಆ್ಯನಳು ಜೀವಾಪಾಯವನ್ನು ತರಬಲ್ಲ ತೀಕ್ಷ್ಣವಾಯುವನ್ನು ಅನುಭವಿಸಲು ಆರಂಭಿಸಿದಳು. ಸಂತೋಷಕರವಾಗಿ, ಅವಳ ಊಟದಲ್ಲಿ ಮಾಡಲಾದ ಹೊಂದಾಣಿಕೆಗಳೊಂದಿಗೆ, ತೀಕ್ಷ್ಣವಾಯುವು ನಿಂತುಹೋಯಿತು. ಜೋಆ್ಯನಳ ಆರೋಗ್ಯ ಸಮಸ್ಯೆಗಳು ಅವಳ ಶಾರೀರಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಆದರೆ ಈಗ ಅವಳು ಒಂದು ವಿಶೇಷ ಶಾಲೆಗೆ ಹಾಜರಾಗುತ್ತಿದ್ದಾಳೆ ಮತ್ತು ಚೆನ್ನಾಗಿದ್ದಾಳೆ. ಅವಳಿಗೆ ನಡೆಯಲು ಆಗುವುದಿಲ್ಲ, ಮತ್ತು ಅವಳ ಮಾತು ತೀರ ಸೀಮಿತವಾಗಿದ್ದರೂ ಆಕೆ ನಮ್ಮ ಎಲ್ಲ ಕ್ರೈಸ್ತ ಕೂಟಗಳಿಗೆ ಮತ್ತು ಮನೆಯಿಂದ ಮನೆಯ ಶುಶ್ರೂಷೆಗೆ ನಮ್ಮೊಂದಿಗೆ ಬರುತ್ತಾಳೆ. ಅವಳು ಸಂತೋಷದಿಂದಿರುವ ಹಾಗೆ ತೋರುತ್ತಾಳೆ.

ಈ ಸಂಕಷ್ಟಮಯ ಸಮಯಗಳಲ್ಲಿ ಯೆಹೋವನು ನಮಗೆ ಹೆಚ್ಚು ಸಾಂತ್ವನವನ್ನು ಒದಗಿಸಿದ್ದಾನೆ. ಅನಿರೀಕ್ಷಿತ ಸಂಕಷ್ಟಗಳ ಮಧ್ಯೆಯೂ, “ಯೆಹೋವನಲ್ಲಿ ಉಲ್ಲಾಸಿ”ಸುವುದನ್ನು ಮತ್ತು ಆತನ ಮೇಲೆಯೇ ಆತುಕೊಳ್ಳುವುದನ್ನು ಮುಂದುವರಿಸುವುದು ನಮ್ಮ ನಿರ್ಧಾರವಾಗಿದೆ. (ಹಬಕ್ಕೂಕ 3:17, 18; ಪ್ರಸಂಗಿ 9:11) ದೇವರ ವಾಗ್ದಾನದ ಪ್ರಮೋದವನ ಭೂಮಿಯಲ್ಲಿ ನಮ್ಮ ಪ್ರೀತಿಯ ಜೋಆ್ಯನ್‌ ಪರಿಪೂರ್ಣ ಆರೋಗ್ಯದಲ್ಲಿ ಆನಂದಿಸುವುದನ್ನು ನಾವು ಉತ್ಸುಕತೆಯಿಂದ ಎದುರುನೋಡುತ್ತಾ ಇದ್ದೇವೆ.—ಯೆಶಾಯ 33:24.

[ಪಾದಟಿಪ್ಪಣಿಗಳು]

^ ಗರ್ಭವತಿ ಸ್ತ್ರೀಯ ರಕ್ತನಾಳಗಳಲ್ಲಿ ಉಂಟಾಗುವ ತಡೆಯಿಂದಾಗಿ ಅವಳ ಅಂಗಾಂಗಗಳಿಗೆ ಮಾತ್ರವಲ್ಲ ಮಾಸು ಮತ್ತು ಬೆಳೆಯುತ್ತಿರುವ ಭ್ರೂಣಕ್ಕೆ ಕಡಿಮೆ ರಕ್ತ ಸಂಚಾರವಾಗುವುದು ಪ್ರಸವಪೂರ್ವ ಅಪಸ್ಮಾರದಲ್ಲಿ ಒಳಗೂಡಿದೆ. ರೋಗದ ಕಾರಣ ಏನೆಂದು ತಿಳಿದಿರುವುದಿಲ್ಲವಾದರೂ, ಅದು ಅನುವಂಶೀಯವಾಗಿ ಬರುತ್ತದೆಂದು ಸೂಚಿಸುವುದಕ್ಕೆ ಕೆಲವು ಪುರಾವೆಗಳಿವೆ.

[ಪುಟ 25ರಲ್ಲಿರುವ ಚಿತ್ರ]

ನಮ್ಮ ಮಗಳು ಜೋಆ್ಯನ್‌

[ಪುಟ 27ರಲ್ಲಿರುವ ಚಿತ್ರ]

ಅವಳ ಇತಿಮಿತಿಗಳ ಮಧ್ಯೆಯೂ, ಜೋಆ್ಯನ್‌ ಸಂತೋಷದಿಂದಿದ್ದಾಳೆ