ಪಾತಕದ ಜೀವನದಿಂದ ನಿರೀಕ್ಷೆಯ ಜೀವನದೆಡೆಗೆ
ಪಾತಕದ ಜೀವನದಿಂದ ನಿರೀಕ್ಷೆಯ ಜೀವನದೆಡೆಗೆ
ಕಾಸ್ಟ ಕೂಲಾಪೀಸ್ ಹೇಳಿದಂತೆ
ನಾನು ಸೆರೆಮನೆ ಕೋಣೆಯ ಗಲೀಜಾದ ಗೋಡೆಗಳನ್ನು ಎವೆಯಿಕ್ಕದೆ ನೋಡಿದೆ. ಈ ಪಾತಕದ ಜೀವನಶೈಲಿಯನ್ನು ಬಿಟ್ಟು, ಒಂದು ಹೊಸ ಜೀವನವನ್ನು ಆರಂಭಿಸಲಿಕ್ಕಾಗಿ, ದೊಡ್ಡ ಮೊತ್ತದ ಹಣವನ್ನು ಗಳಿಸಲು ಒಂದು ಮಾರ್ಗವನ್ನು ಕಂಡುಹಿಡಿಯಲೇಬೇಕೆಂದು ನಿರ್ಧರಿಸಿದೆ.
ನಾನು ದುಃಖಿತನೂ, ಆಶಾರಹಿತನೂ ಆಗಿ ಆ ಕೋಣೆಯಲ್ಲಿ ಕುಳಿತುಕೊಂಡಿದ್ದಾಗ, ಕಳೆದ ವರ್ಷವಷ್ಟೇ ನನ್ನ ಮಿತ್ರರಲ್ಲಿ 11 ಮಂದಿ ಸತ್ತಿದ್ದರು ಎಂಬುದನ್ನು ಜ್ಞಾಪಿಸಿಕೊಂಡೆ. ಕೊಲೆಮಾಡಿದ್ದಕ್ಕಾಗಿ ಒಬ್ಬನನ್ನು ಗಲ್ಲಿಗೇರಿಸಲಾಯಿತು ಮತ್ತು ಇನ್ನೊಬ್ಬನು ಕೊಲೆ ಮಾಡಿದ್ದಕ್ಕಾಗಿ ವಿಚಾರಣೆ ನಡೆಯುತ್ತಿದ್ದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಮೂವರು ಅತಿ ಹೆಚ್ಚು ಪ್ರಮಾಣದಲ್ಲಿ ಅಮಲೌಷಧಗಳನ್ನು ಸೇವಿಸಿ ಸತ್ತರು, ಇನ್ನಿಬ್ಬರು ಬೀದಿ ಜಗಳಗಳಲ್ಲಿ ಹೊಡೆಯಲ್ಪಟ್ಟು ಅಸುನೀಗಿದರು, ಮತ್ತು ನಾಲ್ವರು ವಾಹನ ಅಪಘಾತಗಳಲ್ಲಿ ಮಡಿದರು. ಅಷ್ಟುಮಾತ್ರವಲ್ಲದೆ, ನನ್ನ ಮಿತ್ರರಲ್ಲಿ ಇನ್ನೂ ಹಲವರು, ಗಂಭೀರವಾದ ಅಪರಾಧಗಳಿಗಾಗಿ ಬೇರೆ ಬೇರೆ ಸೆರೆಮನೆಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು.
ಆದುದರಿಂದ ನನ್ನ ಸೆರೆಮನೆ ಕೋಣೆಯ ಅಂಧಕಾರದಲ್ಲಿ, ನಾನು ಹತಾಶೆಯಿಂದ ದೇವರಿಗೆ ಪ್ರಾರ್ಥಿಸಿದೆ. ಆತನು ಯಾರೇ ಆಗಿರಲಿ, ಈ ಪಾತಕ ಜಗತ್ತಿನಿಂದ ಹೊರಬರಲು ನನಗೆ ಒಂದು ಮಾರ್ಗವನ್ನು ತೋರಿಸುವಂತೆ ಕೇಳಿಕೊಂಡೆ. ಆ ಪ್ರಾರ್ಥನೆಗೆ ನಾನು ಉತ್ತರವನ್ನು ಪಡೆದದ್ದು ಸ್ವಲ್ಪ ಸಮಯದ ನಂತರವೇ. ಅದಕ್ಕಿಂತ ಮುಂಚೆ, ಘೋರವಾದ ಶಾರೀರಿಕ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಹಲ್ಲೆಗೈದಿದ್ದೇನೆಂದು ನನ್ನ ಮೇಲಿದ್ದ ಗಂಭೀರವಾದ ಆರೋಪದಿಂದ ನಾನು ಹೇಗೋ ತಪ್ಪಿಸಿಕೊಂಡೆ. ಒಂದು ಒಪ್ಪಂದ ಕ್ರಮದಿಂದಾಗಿ ನನಗೆ
ತುಂಬ ಸಹಾಯವಾಯಿತು. ಅದರಿಂದಾಗಿ ನನ್ನ ಮೇಲೆ ಹೊರಿಸಲಾಗಿದ್ದ ಆರೋಪವನ್ನು ತಗ್ಗಿಸಲಾಯಿತು ಮತ್ತು ಕಡಿಮೆ ಅವಧಿಯ ಜೈಲುವಾಸದೊಂದಿಗೆ ನನ್ನ ಬಿಡುಗಡೆಯಾಗಲು ಸಾಧ್ಯವಾಯಿತು. ಆದರೆ ನಾನು ಈ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡದ್ದು ಹೇಗೆಂದು ನಿಮಗೆ ಮೊದಲು ತಿಳಿಸುತ್ತೇನೆ.ನಾನು ದಕ್ಷಿಣ ಆಫ್ರಿಕದ ಪ್ರಿಟೋರಿಯದಲ್ಲಿ 1944ರಲ್ಲಿ ಜನಿಸಿದೆ, ಮತ್ತು ಅಲ್ಲಿಯೇ ಬೆಳೆದು ದೊಡ್ಡವನಾದೆ. ನನ್ನ ಬಾಲ್ಯದ ದಿನಗಳು ಅಸಂತುಷ್ಟಕರವಾಗಿದ್ದವು. ತಂದೆಯವರ ಹಿಂಸಾತ್ಮಕ ಕೋಪದ ಕೆರಳುವಿಕೆಗಳಿಂದಾಗಿ ನಮ್ಮ ಕುಟುಂಬ ಜೀವನವು ದುಃಸ್ಥಿತಿಗೆ ಇಳಿದಿತ್ತು. ತಂದೆಯವರ ಈ ಕೋಪವು, ಅವರ ವಿಪರೀತವಾದ ಕುಡಿಯುವಿಕೆಯ ಚಟದಿಂದಾಗಿ ಉಲ್ಬಣಗೊಳ್ಳುತ್ತಿತ್ತು. ಅವರು ದೊಡ್ಡ ಜೂಜುಕೋರರೂ ಆಗಿದ್ದರು. ಮತ್ತು ಪದೇ ಪದೇ ಬದಲಾಗುತ್ತಿದ್ದ ಅವರ ಮನಃಸ್ಥಿತಿಯಿಂದಾಗಿ, ನಾವೆಲ್ಲರೂ ಮತ್ತು ವಿಶೇಷವಾಗಿ ತಾಯಿಯವರು ವಿಪರೀತವಾದ ಮೌಖಿಕ ಮತ್ತು ಶಾರೀರಿಕ ದುರಾಚಾರವನ್ನು ಅನುಭವಿಸಬೇಕಾಗುತ್ತಿತ್ತು. ಅವರ ಈ ಸತತವಾದ ಜಗಳಗಳಿಂದ ತಪ್ಪಿಸಿಕೊಳ್ಳಲು ನಾನು ಮನೆಬಿಟ್ಟು ಬೀದಿಗಳಲ್ಲಿ ವಾಸಿಸಲಾರಂಭಿಸಿದೆ.
ನಾನು ಹಿಡಿದ ಪಾತಕದ ಹಾದಿ
ಹೀಗಿರುವುದರಿಂದ, ತೀರ ಎಳೆಯ ಪ್ರಾಯದಲ್ಲೇ ನಾನು ಪ್ರಪಂಚ ಬಲ್ಲವನಾದೆ. ಉದಾಹರಣೆಗೆ, ನಾನು ಕೇವಲ ಎಂಟು ವರ್ಷ ಪ್ರಾಯದವನಾಗಿದ್ದಾಗ, ಎರಡು ಪಾಠಗಳನ್ನು ಕಲಿತುಕೊಂಡೆ. ಪ್ರಥಮ ಪಾಠವನ್ನು ನಾನು ಕಲಿತುಕೊಂಡದ್ದು, ನೆರೆಹೊರೆಯವರೊಬ್ಬರ ಮನೆಯಿಂದ ನಾನು ಕದ್ದಿದ್ದ ಆಟಿಕೆಗಳೊಂದಿಗೆ ಸಿಕ್ಕಿಬಿದ್ದಾಗಲೇ. ನನ್ನ ತಂದೆಯವರು ನನ್ನನ್ನು ಚೆನ್ನಾಗಿ ಹೊಡೆದರು. “ಇನ್ನು ಮುಂದೆ ಎಂದಾದರೂ ನಾನು ನಿನ್ನನ್ನು ಕದ್ದ ಸಾಮಾನುಗಳೊಂದಿಗೆ ಹಿಡಿಯುವಲ್ಲಿ, ನಿನ್ನನ್ನು ಕೊಂದೇ ಬಿಡುವೆ!” ಎಂದು ಅವರು ಸಿಟ್ಟಿನಿಂದ ಕೊಟ್ಟ ಬೆದರಿಕೆಯು ಈಗಲೂ ನನ್ನ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದೆ. ಆಗ ನಾನು, ಪುನಃ ಎಂದಿಗೂ ಕದಿಯದಿರುವ ದೃಢನಿಶ್ಚಯವನ್ನು ಮಾಡುವ ಬದಲಿಗೆ, ಪುನಃ ಎಂದೂ ಸಿಕ್ಕಿಬೀಳದಂತೆ ಎಚ್ಚರವಹಿಸುವೆನೆಂಬ ದೃಢನಿಶ್ಚಯವನ್ನು ಮಾಡಿದೆ. ‘ಮುಂದಿನ ಸಲ ಅದನ್ನು ನಾನು ಅಡಗಿಸಿಡುವೆ, ಯಾರೂ ನನ್ನನ್ನು ಹಿಡಿಯಲಾರರು’ ಎಂದು ನೆನಸಿದೆ.
ಈ ಮೊದಲನೆಯ ಪಾಠಕ್ಕೂ, ನಾನು ಇನ್ನೂ ಚಿಕ್ಕವನಿದ್ದಾಗಲೇ ಕಲಿತುಕೊಂಡ ಎರಡನೆಯ ಪಾಠಕ್ಕೂ ಯಾವುದೇ ಸಂಬಂಧವಿಲ್ಲ. ಶಾಲೆಯಲ್ಲಿ ಬೈಬಲ್ ಕುರಿತಾದ ಪಾಠದ ಸಮಯದಲ್ಲಿ, ದೇವರಿಗೆ ಒಂದು ವೈಯಕ್ತಿಕ ಹೆಸರಿದೆಯೆಂದು ನಮ್ಮ ಶಿಕ್ಷಕಿಯು ನಮಗೆ ಕಲಿಸಿದರು. “ದೇವರ ಹೆಸರು ಯೆಹೋವ ಆಗಿದೆ, ಮತ್ತು ನೀವು ಮಾಡುವ ಯಾವುದೇ ಪ್ರಾರ್ಥನೆಗೆ ಆತನು ಕಿವಿಗೊಡುವನು. ಆದರೆ ನೀವು ಆತನ ಮಗನಾದ ಯೇಸುವಿನ ಹೆಸರಿನಲ್ಲಿಯೇ ಪ್ರಾರ್ಥನೆ ಮಾಡಬೇಕು” ಎಂದು ಅವರು ಹೇಳಿದಾಗ ನಮಗೆ ಆಶ್ಚರ್ಯವಾಯಿತು. ಈ ಮಾತುಗಳು ನನ್ನ ಎಳೆಯ ಮನಸ್ಸಿನ ಮೇಲೆ ಪ್ರಭಾವ ಬೀರಿದವು. ಆದರೂ, ಪಾತಕದ ಜೀವನದ ಕಡೆಗಿನ ನನ್ನ ಜಾರುವಿಕೆಯನ್ನು ಅದು ತಡೆಗಟ್ಟಲಿಲ್ಲ. ವಾಸ್ತವದಲ್ಲಿ ನಾನು ಪ್ರೌಢ ಶಾಲೆಯನ್ನು ಪ್ರವೇಶಿಸುವಷ್ಟರಲ್ಲಿ, ಅಂಗಡಿ ಕಳ್ಳತನ ಮತ್ತು ಕನ್ನಹಾಕುವಿಕೆಯಲ್ಲಿ ಪ್ರವೀಣನಾಗಿಬಿಟ್ಟಿದ್ದೆ. ಶಾಲೆಯಲ್ಲಿದ್ದ ಮಿತ್ರರಿಂದ ನನಗೆ ಯಾವುದೇ ಸಹಾಯ ಸಿಗಲಿಲ್ಲ, ಯಾಕೆಂದರೆ ಅವರಲ್ಲಿ ಅನೇಕರು ಈಗಾಗಲೇ ವಿವಿಧ ಅಪರಾಧಗಳಿಗಾಗಿ ಸುಧಾರಣಾ ಶಾಲೆಗಳಲ್ಲಿ ಸಮಯವನ್ನು ಕಳೆದಿದ್ದರು.
ವರ್ಷಗಳು ಉರುಳಿದಂತೆ, ನಾನೊಬ್ಬ ಕಾಯಂ ಪಾತಕಿಯಾದೆ. ನಾನು 20 ವರ್ಷ ಪ್ರಾಯವನ್ನು ತಲಪುವ ಮುಂಚೆಯೇ, ಅಸಂಖ್ಯಾತ ಸುಲಿಗೆಗಳಲ್ಲಿ, ಕನ್ನಗಳ್ಳತನಗಳಲ್ಲಿ, ಕಾರ್ ಕಳ್ಳತನಗಳಲ್ಲಿ ಮತ್ತು ಹಿಂಸಾತ್ಮಕ ಆಕ್ರಮಣಕಾರಿ ಕೃತ್ಯಗಳಲ್ಲಿ ಒಳಗೂಡಿದೆ. ನಾನು ಯಾವಾಗಲೂ ಬಿಲಿಯರ್ಡ್ಸ್ ಆಡುವ ಕೋಣೆಗಳ ಮತ್ತು ಬಾರ್‌ಗಳ ಸುತ್ತಲೂ ಅಲೆದಾಡುತ್ತಾ, ತಲೆಹಿಡುಕರಿಗಾಗಿ, ವೇಶ್ಯೆಯರಿಗಾಗಿ ಮತ್ತು ಪಾತಕಿಗಳಿಗಾಗಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದದ್ದರಿಂದ, ಟೆಕ್ನಿಕಲ್ ಹೈಸ್ಕೂಲ್‌ನಲ್ಲಿ ಒಂದು ವರ್ಷದ ಅಭ್ಯಾಸವನ್ನೂ ಮುಗಿಸಲಿಲ್ಲ.
ನಿರ್ದಯಿಗಳಾದ ಕಾಯಂ ಪಾತಕಿಗಳೊಂದಿಗೆ ನಾನು ಕ್ರಮವಾಗಿ ಬೆರೆಯತೊಡಗಿದೆ. ತಮಗೆ ದ್ರೋಹಬಗೆದವರನ್ನು ಅಂಗಹೀನಗೊಳಿಸಲು ಹಿಂದೆಮುಂದೆ ನೋಡದಂತಹ ಜನರು ಇವರಾಗಿದ್ದರು. ನನ್ನ ಬಾಯನ್ನು ತೆರೆಯದಿರುವುದು ಮತ್ತು ನನ್ನ ಸಾಧನೆಗಳ ಕುರಿತು ಜಂಬಕೊಚ್ಚಿಕೊಳ್ಳದಿರುವುದು ಅಥವಾ ಹಣವನ್ನು ಆಡಂಬರದಿಂದ ಪ್ರದರ್ಶಿಸದಿರುವುದರಿಂದಲೇ ನನಗೆ ಒಳಿತಾಗುವುದೆಂಬುದನ್ನು ಕಲಿತುಕೊಂಡೆ. ಹಾಗೆ ಪ್ರದರ್ಶಿಸುವುದರಿಂದ, ನಾನು ಮಾಡಿರುವ ಅಪರಾಧವನ್ನು ಪ್ರಸಾರಮಾಡಿದಂತಾಗುತ್ತಿತ್ತು ಮಾತ್ರವಲ್ಲ, ಅದು ಪೊಲೀಸರ ಗಮನವನ್ನೂ ಸೆಳೆದು, ಅವರ ತೊಡಕಿನ ಪ್ರಶ್ನೆಗಳಿಗೆ ನನ್ನನ್ನು ಗುರಿಮಾಡಸಾಧ್ಯವಿತ್ತು. ಅದಕ್ಕಿಂತಲೂ ಹೆಚ್ಚಾಗಿ, ಬೇರೆ ಪಾತಕಿಗಳು ಅನಿರೀಕ್ಷಿತವಾಗಿ ಭೇಟಿನೀಡಿ, ಲೂಟಿಯಲ್ಲಿ ಅವರಿಗೂ ಪಾಲನ್ನು ಕೊಡುವಂತೆ ಕೇಳಬಹುದಾಗಿತ್ತು.
ಈ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಿದರೂ, ನಾನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಒಳಗೂಡಿದ್ದೇನೆಂಬ ಗುಮಾನಿಯ ಮೇರೆಗೆ ಪೊಲೀಸರು ನನ್ನ ಮೇಲೆ ಕಣ್ಗಾವಲನ್ನಿರಿಸುತ್ತಿದ್ದರು. ಆದರೆ ನನ್ನನ್ನು ಯಾವುದೇ ಅಪರಾಧದೊಂದಿಗೆ ಜೋಡಿಸುವ ಅಥವಾ ನನ್ನನ್ನು ದೋಷಾರೋಪಣೆಗೆ ಒಳಪಡಿಸುವ ಯಾವುದೇ ವಸ್ತುವು ನನ್ನ ಬಳಿ ಇರದಂತೆ ನಾನು ಜಾಗ್ರತೆ ವಹಿಸುತ್ತಿದ್ದೆ. ಒಮ್ಮೆ, ಬೆಳಗ್ಗೆ ಮೂರು ಘಂಟೆಗೆ ಪೊಲೀಸರು ನಮ್ಮ ಮನೆಯ ಮೇಲೆ ದಾಳಿನಡೆಸಿದರು. ಒಬ್ಬ ಸ್ಥಳಿಕ ಮಾರಾಟಗಾರನ ಇಲೆಕ್ಟ್ರಿಕಲ್ ಸಾಮಾನುಗಳ ಸರಬರಾಯಿ ಕಳುವಾಗಿದ್ದರಿಂದ, ಅವರು ನಮ್ಮ ಇಡೀ ಮನೆಯನ್ನು ಎರಡು ಸಲ ಹುಡುಕಿದರು. ಆದರೆ ಅವರಿಗೆ ಏನೂ ಸಿಗಲಿಲ್ಲ. ನನ್ನ ಬೆರಳುಗುರುತುಗಳನ್ನು ತೆಗೆದುಕೊಳ್ಳಲಿಕ್ಕಾಗಿ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆದರೆ ನನ್ನ ಮೇಲೆ ಯಾವುದೇ ಆರೋಪವನ್ನು ಹೊರಿಸಲಾಗಲಿಲ್ಲ.
ಅಮಲೌಷಧಗಳೊಂದಿಗಿನ ಒಳಗೂಡುವಿಕೆ
ನಾನು ಹನ್ನೆರಡನೆಯ ವಯಸ್ಸಿನಿಂದಲೇ, ಮನಃಸ್ಥಿತಿಯನ್ನು ಮಾರ್ಪಡಿಸುವ ಅಮಲೌಷಧಗಳನ್ನು ಕ್ರಮವಾಗಿ ಸೇವಿಸಲಾರಂಭಿಸಿದೆ. ಇಂತಹ ದುರುಪಯೋಗದಿಂದಾಗಿ ನನ್ನ ಆರೋಗ್ಯಕ್ಕೆ ಹಾನಿಯಾಗಲಾರಂಭಿಸಿತು, ಮತ್ತು ಹಲವಾರು ಸಂದರ್ಭಗಳಲ್ಲಿ ನಾನು ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಅಮಲೌಷಧವನ್ನು ಸೇವಿಸಿದೆ.
ಸ್ವಲ್ಪ ಸಮಯದ ನಂತರ ನನ್ನನ್ನು ಒಬ್ಬ ವೈದ್ಯನಿಗೆ ಪರಿಚಯಿಸಲಾಯಿತು. ಇವನಿಗೆ ಭೂಗತ ಪಾತಕ ಜಗತ್ತಿನೊಂದಿಗೆ ಬಲವಾದ ಸಂಬಂಧಗಳಿದ್ದವು. ಇದರಿಂದಾಗಿ, ನಾನು ಅಮಲೌಷಧಗಳ ವಿತರಕನಾದೆ. ಕೆಲವು ಮಂದಿ ವಿತರಕರಿಗೆ ಅಮಲೌಷಧಗಳನ್ನು ಸರಬರಾಯಿ ಮಾಡುವುದರಿಂದ ನಾನು ಅಪಾಯಕ್ಕೆ ಸಿಕ್ಕಿಕೊಳ್ಳುವ ಸಂಭವವು ಕಡಿಮೆಯಾಗುವುದು, ಯಾಕೆಂದರೆ ಬೇರೆಯವರು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಿರುವಾಗ ನಾನು ದೃಷ್ಟಿಗೆ ಬೀಳದಂತೆ ಇರಬಹುದೆಂಬುದನ್ನು ನಾನು ಬೇಗನೆ ಕಲಿತುಕೊಂಡೆ.ದುಃಖಕರವಾಗಿ, ಯಾರೊಂದಿಗೆ ನಾನು ಅಮಲೌಷಧದ ವ್ಯವಹಾರಗಳನ್ನು ನಡಿಸುತ್ತಿದ್ದೆನೊ ಅವರಲ್ಲಿ ಕೆಲವರು ತೀರ ಹೆಚ್ಚು ಅಮಲೌಷಧವನ್ನು ಸೇವಿಸಿ ಸತ್ತರು ಅಥವಾ ಅಮಲೌಷಧದ ಪ್ರಭಾವದ ಕೆಳಗಿದ್ದಾಗ ದೊಡ್ಡ ಅಪರಾಧಗಳನ್ನು ವೆಸಗಿದರು. ಒಬ್ಬ “ಮಿತ್ರನು” ಪ್ರಖ್ಯಾತ ವೈದ್ಯನೊಬ್ಬನ ಕೊಲೆಮಾಡಿದನು. ಇದು ದೇಶದಲ್ಲೆಲ್ಲಾ ದೊಡ್ಡ ಸುದ್ದಿಯಾಯಿತು. ಅವನು ಅನಂತರ ಆ ದೋಷವನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸಿದನು. ಆದರೆ ಪೊಲೀಸರು ನನ್ನ ಮನೆಗೆ ಬರುವ ವರೆಗೂ ನನಗೆ ಆ ಘಟನೆಯ ಕುರಿತಾಗಿ ಏನೂ ಗೊತ್ತಿರಲಿಲ್ಲ. ನಿಜಾಂಶವೇನೆಂದರೆ, ಪೊಲೀಸರು ಆಗಾಗ್ಗೆ ಬಂದು, ನಾನು ನಡಿಸಿದ ಅನೇಕ ಅಪರಾಧಗಳ ಕುರಿತಾಗಿ ಪ್ರಶ್ನಿಸುತ್ತಿದ್ದರು.
ಆದರೆ ಒಂದು ದಿನ ನಾನು ಒಂದು ಮೂರ್ಖ ಕೆಲಸವನ್ನು ಮಾಡಿಬಿಟ್ಟೆ. ಒಂದು ಇಡೀ ವಾರ ಅಮಲೌಷಧ ಮತ್ತು ಮದ್ಯಪಾನವನ್ನು ಸೇವಿಸಿದ ಬಳಿಕ, ಇಬ್ಬರು ವ್ಯಕ್ತಿಗಳೊಂದಿಗಿನ ಮನಸ್ತಾಪದಿಂದಾಗಿ ಕೋಪದಲ್ಲಿ ಅವರ ಮೇಲೆರಗಿ, ಅವರನ್ನು ತುಂಬ ಘಾಸಿಗೊಳಿಸಿದೆ. ಮರುದಿನ ಬೆಳಗ್ಗೆ ನಾನೇ ಅವರ ಮೇಲೆ ಹಲ್ಲೆಗೈದ ವ್ಯಕ್ತಿಯೆಂದು ಅವರು ನನ್ನನ್ನು ಗುರುತಿಸಿದರು, ಮತ್ತು ಗಂಭೀರವಾದ ಶಾರೀರಿಕ ಹಾನಿಯನ್ನು ಮಾಡುವ ಉದ್ದೇಶದಿಂದ ಆಕ್ರಮಣಮಾಡಿದ್ದೇನೆಂಬ ಆರೋಪದ ಮೇಲೆ ನನ್ನನ್ನು ದಸ್ತಗಿರಿಮಾಡಲಾಯಿತು. ಹೀಗೆ ನಾನು ಸೆರೆಮನೆಗೆ ಹಾಕಲ್ಪಟ್ಟೆ.
ಮೊದಲು ಧನಿಕನಾಗಿ, ಅನಂತರ ಸಭ್ಯನಾಗುವುದು
ಸೆರೆಮನೆಯಿಂದ ಬಿಡುಗಡೆಯಾದ ಬಳಿಕ, ಔಷಧವಸ್ತುಗಳ ಕಂಪೆನಿಯೊಂದರಲ್ಲಿ ಒಬ್ಬ ಸ್ಟಾಕ್ ಕಂಟ್ರೋಲರ್‌ನ ಅಗತ್ಯವಿದೆಯೆಂಬುದರ ಕುರಿತು ನಾನು ಕೇಳಿಸಿಕೊಂಡೆ. ನಾನು ಅರ್ಜಿಹಾಕಿ, ಆ ಕೆಲಸಕ್ಕೆ ಅರ್ಹನಾಗಿದ್ದೇನೆಂದು ಧಣಿಗೆ ಮನದಟ್ಟು ಮಾಡಿದೆ. ಈಗಾಗಲೇ ಆ ಕಂಪೆನಿಯಲ್ಲಿದ್ದ ಒಬ್ಬ ಮಿತ್ರನ ಶಿಫಾರಸ್ಸಿನಿಂದಾಗಿ ನನಗೆ ಆ ಕೆಲಸವು ಸಿಕ್ಕಿತು. ತುಂಬ ಹಣವನ್ನು ಗಳಿಸಿ, ಬೇರೆಲ್ಲಿಗಾದರೂ ಹೋಗಿ ಒಂದು ಹೊಸ ಜೀವನವನ್ನು ಆರಂಭಿಸುವುದಕ್ಕೆ ಇದೇ ದಾರಿಯೆಂದು ನಾನು ನೆನಸಿದೆ. ಆದುದರಿಂದ, ಆ ವ್ಯಾಪಾರದ ಎಲ್ಲ ಅಂಶಗಳ ಕುರಿತು ಆದಷ್ಟು ಬೇಗನೆ ಕಲಿತುಕೊಳ್ಳಲು ನಾನು ತುಂಬ ಪ್ರಯಾಸಪಟ್ಟೆ. ಎಲ್ಲ ಔಷಧಗಳ ಹೆಸರುಗಳನ್ನು ಕಲಿತುಕೊಳ್ಳುತ್ತಾ ಪ್ರತಿ ರಾತ್ರಿ ತುಂಬ ಹೊತ್ತಿನ ವರೆಗೆ ಕೆಲಸಮಾಡುತ್ತಿದ್ದೆ. ಒಂದು ಹೊಸ ಜೀವನಕ್ಕೆ ಇದೇ ಮಾರ್ಗವೆಂಬ ಖಾತ್ರಿ ನನಗಿತ್ತು.
ತಾಳ್ಮೆಯಿಂದ ಕಾಯುತ್ತಾ, ನನ್ನ ಧಣಿಗಳ ಭರವಸೆಯನ್ನು ಸಂಪಾದಿಸುವುದೇ ನನ್ನ ಯೋಜನೆಯಾಗಿತ್ತು. ಅನಂತರ ಸರಿಯಾದ ಸಮಯವನ್ನು ನೋಡಿ, ಕಳ್ಳವ್ಯಾಪಾರದಲ್ಲಿ ತುಂಬ ಹಣವನ್ನು ಗಿಟ್ಟಿಸುವುದೆಂದು ನನಗೆ ಗೊತ್ತಿದ್ದ ನಿರ್ದಿಷ್ಟ ಔಷಧಗಳನ್ನು ದೊಡ್ಡ ಪ್ರಮಾಣದಲ್ಲಿ ಕದ್ದು, ಅವುಗಳನ್ನು ಮಾರಿ, ರಾತ್ರಿ ಬೆಳಗಾಗುವುದರೊಳಗೆ ಒಬ್ಬ ಧನಿಕ ಮನುಷ್ಯನಾಗುವೆನೆಂದು ನೆನಸಿದೆ. ನನಗೆ ಸ್ವಾತಂತ್ರ್ಯ ಹಾಗೂ ಒಂದು ಹೊಸ ಜೀವನವು ಖಂಡಿತವಾಗಿಯೂ ಸಿಗುವಂತೆ, ನನ್ನ ಎಣಿಕೆಗನುಸಾರ ತುಂಬ ಭದ್ರವಾದ ಆತ್ಮರಕ್ಷಣೋಪಾಯವನ್ನು ರಚಿಸಿದೆ.
ನನ್ನ ಯೋಜನೆಗನುಸಾರ ಕ್ರಿಯೆಗೈಯುವ ಸಮಯವು ಬಂದೇಬಿಟ್ಟಿತು. ಒಂದು ರಾತ್ರಿ, ಕಂಪೆನಿಯ ಸಾಮಾನು ಮಳಿಗೆಯೊಳಗೆ ಎಚ್ಚರಿಕೆಯಿಂದ ಪ್ರವೇಶಿಸಿದ ಬಳಿಕ, ಲಕ್ಷಗಟ್ಟಲೆ ಡಾಲರುಗಳ ಬೆಲೆಬಾಳುವ ಔಷಧಗಳಿದ್ದ ಶೆಲ್ಫ್‌ಗಳನ್ನು ನೋಡಿದೆ. ಪಾತಕ ಮತ್ತು ಹಿಂಸಾಚಾರದಿಂದ ಮುಕ್ತವಾಗಿರುವ ಜೀವನವನ್ನು ನಡೆಸುವ ಅವಕಾಶವು ನನ್ನ ಮುಂದೆಯೇ ಇದ್ದಂತೆ ತೋರಿತು. ಆದರೆ ನನ್ನ ಜೀವನದಲ್ಲೇ ಪ್ರಥಮ ಬಾರಿ, ನನ್ನ ಮನಸ್ಸಾಕ್ಷಿಯು ನನ್ನನ್ನು ಚುಚ್ಚಲಾರಂಭಿಸಿತು. ನನಗೂ ಒಂದು ಮನಸ್ಸಾಕ್ಷಿಯಿದೆ ಎಂಬುದನ್ನು ನಾನು ಬಹುಮಟ್ಟಿಗೆ ಮರೆತೇ ಬಿಟ್ಟಿರುವಾಗ, ಒಮ್ಮಿಂದೊಮ್ಮೆಲೇ ನನ್ನ ಮನಸ್ಸಾಕ್ಷಿಯು ಹೀಗೆ ತಿವಿಯಲಾರಂಭಿಸಿದ್ದು ಏಕೆ? ಇದು ಹೇಗಾಯಿತೆಂಬುದನ್ನು ನಿಮಗೆ ತಿಳಿಸುವೆ.
ಕೆಲವು ವಾರಗಳ ಹಿಂದೆಯಷ್ಟೇ, ಅಲ್ಲಿಯ ಮ್ಯಾನೇಜರ್ ಮತ್ತು ನನ್ನ ನಡುವೆ, ಜೀವಿತದ ಅರ್ಥದ ಕುರಿತಾಗಿ ಒಂದು ಚರ್ಚೆ ನಡೆದಿತ್ತು. ಅವರು ಯಾವುದೋ ವಿಷಯದ ಬಗ್ಗೆ ಹೇಳಿದಾಗ, ಅದಕ್ಕೆ ಪ್ರಾರ್ಥನೆ ಮಾಡುವುದೇ ಕೊನೆಯ ಉಪಾಯವೆಂದು ನಾನು ಉತ್ತರಿಸಿದೆ. “ಯಾರಿಗೆ?” ಎಂದು ಅವರು ಕೇಳಿದರು. “ದೇವರಿಗೆ” ಎಂದು ಉತ್ತರಿಸಿದೆ. “ಆದರೆ ಜನರು ಎಷ್ಟೋ ದೇವರುಗಳಿಗೆ ಪ್ರಾರ್ಥಿಸುತ್ತಾರೆ. ಆದುದರಿಂದ ಯಾವ ದೇವರಿಗೆ ಪ್ರಾರ್ಥಿಸುವಿರಿ?” ಎಂದು ಅವರು ಕೇಳಿದರು. “ಸರ್ವಶಕ್ತನಾದ ದೇವರಿಗೆ” ಎಂದು ಹೇಳಿದೆ. “ಓ ಹಾಗೋ? ಆತನ ಹೆಸರೇನು?” ಎಂದು ಅವರು ಮುಂದುವರಿಸಿ ಕೇಳಿದರು. “ಅಂದರೇನು?” ಎಂದು ನಾನು ಕೇಳಿದೆ. “ನಿಮಗೆ, ನನಗೆ ಮತ್ತು ಬೇರೆಲ್ಲರಿಗಿರುವಂತೆ, ಸರ್ವಶಕ್ತನಾದ ದೇವರಿಗೂ ಒಂದು ವೈಯಕ್ತಿಕ ಹೆಸರಿದೆ” ಎಂದವರು ಉತ್ತರಿಸಿದರು. ಅದು ತರ್ಕಸಂಗತವಾಗಿರುವಂತೆ ತೋರಿದರೂ, ನನಗೆ ಕಿರಿಕಿರಿಯಾಗುತ್ತಾ ಇತ್ತು. ಆದುದರಿಂದ ನಾನು ಸಿಡುಕಿನಿಂದ ಕೇಳಿದೆ: “ಹಾಗಾದರೆ ದೇವರ ಹೆಸರು ಏನು?” ಅವರು ಉತ್ತರಿಸಿದ್ದು: “ಸರ್ವಶಕ್ತನಾದ ದೇವರ ಹೆಸರು ಯೆಹೋವ ಆಗಿದೆ!”
ತತ್‌ಕ್ಷಣವೇ ನನ್ನ ಮನಸ್ಸಿನ ಪರದೆಯು ಸರಿದು, ನಾನು ಕೇವಲ ಎಂಟು ವರ್ಷದವನಾಗಿದ್ದಾಗ ತರಗತಿಯಲ್ಲಿ ಕಲಿತುಕೊಂಡಿದ್ದ ಆ ಪಾಠವು ನನ್ನ ಜ್ಞಾಪಕಕ್ಕೆ ಬಂತು. ಆಶ್ಚರ್ಯಕರವಾಗಿ, ಮ್ಯಾನೇಜರನೊಂದಿಗಿನ ಆ ಚರ್ಚೆಯು ನನ್ನ ಮೇಲೆ ಬೀರಿದ ಪ್ರಭಾವವು ದಂಗುಬಡಿಸುವಂಥದ್ದಾಗಿತ್ತು. ಎಷ್ಟೋ ತಾಸುಗಳ ವರೆಗೆ ನಾವು ಗಂಭೀರವಾದ ಸಂಭಾಷಣೆಯಲ್ಲಿ ತೊಡಗಿದ್ದೆವು. ಮರುದಿನ ಅವರು ನಿತ್ಯ ಜೀವಕ್ಕೆ ನಡೆಸುವ ಸತ್ಯ * ಎಂಬ ಪುಸ್ತಕವನ್ನು ನನಗೆ ತಂದು ಕೊಟ್ಟರು. ಆ ರಾತ್ರಿ ನಾನು ಆ ಇಡೀ ಪುಸ್ತಕವನ್ನು ಓದಿ ಮುಗಿಸಿದೆ. ನಾನು ಸತ್ಯವನ್ನು ಹಾಗೂ ಜೀವಿತದ ನಿಜವಾದ ಅರ್ಥವನ್ನು ಕಂಡುಹಿಡಿದಿದ್ದೇನೆಂದು ನನಗೆ ತತ್‌ಕ್ಷಣವೇ ಮನದಟ್ಟಾಯಿತು. ಮುಂದಿನ ಎರಡು ವಾರಗಳಲ್ಲಿ, ಆ ಬೆರಗುಗೊಳಿಸುವಂತಹ ನೀಲಿ ಪುಸ್ತಕದಲ್ಲಿದ್ದ ವಿವಿಧ ವಿಷಯಗಳನ್ನು ಚರ್ಚಿಸುವುದನ್ನು ಬಿಟ್ಟು, ನಾವು ಬೇರೇನನ್ನೂ ಮಾಡಲಿಲ್ಲ.
ಆದುದರಿಂದ ನಾನು ಆ ಸಾಮಾನು ಮಳಿಗೆಯ ಕತ್ತಲಿನ ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಂಡಿದ್ದಾಗ, ಔಷಧಗಳನ್ನು ಕದ್ದು, ಮಾರಲಿಕ್ಕಾಗಿ ನಾನು ಮಾಡಿದ ಯೋಜನೆಗಳೆಲ್ಲವೂ ತಪ್ಪಾಗಿವೆಯೆಂದು ನನ್ನ ಮನಸ್ಸಾಕ್ಷಿಯು ನನಗಂದಿತು. ಇನ್ನೆಂದಿಗೂ ಕದಿಯುವುದಿಲ್ಲವೆಂಬ ನಿರ್ಧಾರವನ್ನು ಮಾಡುತ್ತಾ, ನಾನು ಸುಮ್ಮನೆ ಅಲ್ಲಿಂದ ಎದ್ದು, ನೇರವಾಗಿ ಮನೆಗೆ ಬಂದೆ.
ಒಂದು ಸಂಪೂರ್ಣ ಬದಲಾವಣೆ
ನಾನೊಂದು ಹೊಸ ಜೀವನ ರೀತಿಯನ್ನು ಆರಂಭಿಸಲು ನಿರ್ಣಯಿಸಿದ್ದೇನೆಂದು ಮುಂದಿನ ದಿನಗಳಲ್ಲಿ ನನ್ನ ಕುಟುಂಬಕ್ಕೆ ಹೇಳಿದೆ. ಮತ್ತು ನಾನು ಕಲಿತುಕೊಂಡಿದ್ದ ಕೆಲವೊಂದು ಬೈಬಲ್ ಸತ್ಯಗಳನ್ನು ಅವರೊಂದಿಗೂ ಹಂಚಿಕೊಳ್ಳಲು ಆರಂಭಿಸಿದೆ. ನನ್ನ ತಂದೆಯವರು ನನ್ನನ್ನು ಮನೆಯಿಂದ ಹೊರಗೆ ಹಾಕಲಿದ್ದರು. ಆದರೆ ನನ್ನ ತಮ್ಮ ಜಾನ್, ನನ್ನನ್ನು ಸಮರ್ಥಿಸುತ್ತ ತಂದೆಗೆ ಹೇಳಿದ್ದು: “ಕಾಸ್ಟ ತನ್ನ ಜೀವಿತದಲ್ಲಿ ಅಪರಾಧಕ್ಕೆ ಸಂಬಂಧಿಸದಂತಹ ಒಂದು ಕೆಲಸವನ್ನು ಮಾಡುತ್ತಿರುವುದು ಇದೇ ಪ್ರಥಮ ಬಾರಿ, ಮತ್ತು ನೀವು ಅವನನ್ನು ಮನೆಯಿಂದ ಹೊರಹಾಕುತ್ತೀರೊ? ಇದರ ಕುರಿತಾಗಿ ನಾನೂ ಹೆಚ್ಚನ್ನು ತಿಳಿದುಕೊಳ್ಳಬಯಸುತ್ತೇನೆ.” ತನ್ನೊಂದಿಗೆ ಬೈಬಲನ್ನು ಅಭ್ಯಾಸಿಸುವಂತೆ ಜಾನ್ ನನ್ನನ್ನು ಕೇಳಿಕೊಂಡಾಗ, ನನಗೆ ಸಂತೋಷವೂ ಆಶ್ಚರ್ಯವೂ ಆಯಿತು. ಅಂದಿನಿಂದ, ಅಮಲೌಷಧಗಳನ್ನು ಪಡೆಯಲಿಕ್ಕಾಗಿ ನನ್ನ ಬಳಿ ಬರುತ್ತಿದ್ದವರೆಲ್ಲರಿಗೂ, ಅಮಲೌಷಧಗಳ ಬದಲಿಗೆ ಒಂದು ಸತ್ಯ ಪುಸ್ತಕವು ಸಿಗುತ್ತಿತ್ತು! ಸ್ವಲ್ಪ ಸಮಯದಲ್ಲೇ, ಆ ಪುಸ್ತಕದ ಸಹಾಯದಿಂದ ನಾನು 11 ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದೆ.
ಕಂಪೆನಿಯ ಆ ಮ್ಯಾನೇಜರರು ಸ್ವತಃ ಒಬ್ಬ ಸಾಕ್ಷಿಯಾಗಿರಲಿಲ್ಲವೆಂದು ನನಗೆ ಅನಂತರ ತಿಳಿದುಬಂತು. ಅವರ ಪತ್ನಿ ಸುಮಾರು 18 ವರ್ಷಗಳಿಂದ ಒಬ್ಬ ಸಾಕ್ಷಿಯಾಗಿದ್ದರಾದರೂ ಅವರಿಗೆ ಮಾತ್ರ “ಸತ್ಯದ ವಿಷಯದಲ್ಲಿ ಪ್ರಗತಿಮಾಡಲು ಸಮಯವೇ ಸಿಗುತ್ತಿರಲಿಲ್ಲ.” ಆದುದರಿಂದ ಒಬ್ಬ ಅನುಭವಸ್ಥ ಸಾಕ್ಷಿಯು ನನ್ನೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ನಡೆಸುವಂತೆ ಅವರು ಏರ್ಪಾಡನ್ನು ಮಾಡಿದರು. ನನ್ನ ಅಭ್ಯಾಸವು, ಜೀವಿತದಲ್ಲಿನ ಇತರ ವಾದವಿಷಯಗಳನ್ನು ಎದುರಿಸುವ ಅಗತ್ಯವನ್ನು ನೋಡುವಂತೆ ನನಗೆ ಸಹಾಯಮಾಡಿತು. ದೇವರ ವಾಕ್ಯದ ಸತ್ಯವು ನನ್ನನ್ನು ನನ್ನ ಲೌಕಿಕ ರೀತಿನೀತಿಗಳಿಂದ ಮುಕ್ತಗೊಳಿಸಲಾರಂಭಿಸಲು ಹೆಚ್ಚು ಸಮಯ ತಗಲಲಿಲ್ಲ.—ಯೋಹಾನ 8:32.
ಆದರೆ, ಇದೆಲ್ಲವೂ ಕೆಲವೇ ವಾರಗಳೊಳಗೆ ತುಂಬ ವೇಗವಾಗಿ ನಡೆದದ್ದರಿಂದ ಒಮ್ಮೆಲೇ ನಾನು ಭಾವೋದ್ರೇಕಿತನಾದೆ. ನಾನು ಇನ್ನೂ ಮಾಡಬೇಕಾಗಿದ್ದ ದೊಡ್ಡ ಬದಲಾವಣೆಗಳು ನನ್ನ ಎದುರಿಗಿದ್ದವು. ನನ್ನ ಬೈಬಲ್ ಅಭ್ಯಾಸದಿಂದ ನಾನು ಪಡೆಯುತ್ತಿದ್ದ ನಿರ್ದೇಶನವನ್ನು ಅನುಸರಿಸುತ್ತಾ ಮುಂದುವರಿಯುವಲ್ಲಿ, ಶರೀರ ಹಾಗೂ ಮನಸ್ಸಿನ ನಡುವೆ ಒಂದು ದೊಡ್ಡ ಹೋರಾಟವಿರುವುದು ಎಂಬುದನ್ನು ನಾನು ಅರಿತುಕೊಂಡೆ. ಇನ್ನೊಂದು ಬದಿಯಲ್ಲಿ, ನಾನು ಈ ವರೆಗೂ ನಡೆದುಬಂದ ದಾರಿಯಲ್ಲೇ ಮುಂದುವರಿದರೆ, ಸಂಭಾವ್ಯ ಮರಣ ಅಥವಾ ಕಡಿಮೆ ಪಕ್ಷ ಸೆರೆಮನೆಯಲ್ಲಿ ನನ್ನ ಜೀವಿತದ ಹೆಚ್ಚಿನ ಭಾಗವನ್ನು ಕಳೆಯಬೇಕಾದೀತೆಂಬುದನ್ನು ನಾನು ಗ್ರಹಿಸಿದೆ. ಆದುದರಿಂದ ತುಂಬ ಆಲೋಚಿಸಿ, ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದ ಬಳಿಕ, ನಾನು ಸತ್ಯದ ದಾರಿಯಲ್ಲಿ ನಡೆಯುವುದನ್ನು ಮುಂದುವರಿಸಲು ನಿರ್ಣಯಿಸಿದೆ. ಆರು ತಿಂಗಳುಗಳ ಬಳಿಕ, 1971ರ ಏಪ್ರಿಲ್ 4ರಂದು, ನೀರಿನ ದೀಕ್ಷಾಸ್ನಾನದ ಮೂಲಕ ನಾನು ದೇವರಿಗೆ ಮಾಡಿದ ಸಮರ್ಪಣೆಯನ್ನು ಸಂಕೇತಿಸಿದೆ.
ಸಭ್ಯನೂ ಪ್ರಾಮಾಣಿಕನೂ ಆಗಿದ್ದರಿಂದ ದೊರೆತ ಪ್ರತಿಫಲಗಳು
ನಾನು ಹಿಂದೆ ನೋಡಿ, ಪಾತಕದ ಮಾರ್ಗವನ್ನು ಬಿಟ್ಟುಬರುವ ನಿರ್ಣಯವನ್ನು ಮಾಡಿದಂದಿನಿಂದ ನನಗೆ ದೊರಕಿರುವ ಆಶೀರ್ವಾದಗಳ ಕುರಿತಾಗಿ ಯೋಚಿಸುವಾಗ ಕೆಲವೊಮ್ಮೆ ಭಾವಪರವಶನಾಗುತ್ತೇನೆ. ಆ ಆರಂಭದ ತುಮುಲಭರಿತ ವಾರಗಳಲ್ಲಿ ನಾನು ಅಭ್ಯಾಸಮಾಡಿದ 11 ವ್ಯಕ್ತಿಗಳ ಪೈಕಿ 5 ಮಂದಿ ಈಗಲೂ ಸತ್ಯದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ನನ್ನ ತಾಯಿ ಸಹ ಬೈಬಲ್ ಅಭ್ಯಾಸವನ್ನು ಮಾಡಿ, ಒಬ್ಬ ದೀಕ್ಷಾಸ್ನಾನಿತ ಸಾಕ್ಷಿಯಾದರು. 1991ರಲ್ಲಿ ಅವರು ಸಾಯುವವರೆಗೂ, ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸಿದರು. ನನ್ನ ಇಬ್ಬರು ತಮ್ಮಂದಿರು ಯೆಹೋವನಿಗೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡರು ಮತ್ತು ಈಗ ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ನನ್ನ ತಾಯಿಯ ಸಹೋದರಿಯು ಸಹ ಸತ್ಯವನ್ನು ಕಲಿಯುವಂತೆ ಸಹಾಯಮಾಡಲು ನಾನು ಶಕ್ತನಾದೆ. ಮತ್ತು ಅವರು ಕಳೆದ 15 ವರ್ಷಗಳಿಂದ ಶುಶ್ರೂಷೆಯಲ್ಲಿ ಪೂರ್ಣ ಸಮಯ ಸೇವೆಸಲ್ಲಿಸುತ್ತಿದ್ದಾರೆ.
ನಾನು ಕೆಲಸಮಾಡುತ್ತಿದ್ದ ಔಷಧವಸ್ತುಗಳ ಕಂಪೆನಿಯ ಮ್ಯಾನೇಜರರು ಸಹ ನನ್ನ ಜೀವಿತದಲ್ಲಿನ ಬದಲಾವಣೆಗಳನ್ನು ನೋಡಿ ಎಷ್ಟು ಉತ್ತೇಜಿತರಾದರೆಂದರೆ, ಅವರು ಸಹ ಬೈಬಲ್ ಸತ್ಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾರಂಭಿಸಿದರು. ನಾನು ದೀಕ್ಷಾಸ್ನಾನ ಪಡೆದು ಒಂದು ವರ್ಷ ಕಳೆದ ಬಳಿಕ, ಅವರು ಕೂಡ ನೀರಿನ ದೀಕ್ಷಾಸ್ನಾನದ ಮೂಲಕ ದೇವರಿಗೆ ತಾವು ಮಾಡಿದ ಸಮರ್ಪಣೆಯನ್ನು ಸಂಕೇತಿಸಿದರು. ಅನಂತರ ಅವರು ಪ್ರಿಟೋರಿಯದಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲೊಂದರಲ್ಲಿ ಅನೇಕ ವರ್ಷಗಳ ವರೆಗೆ ಒಬ್ಬ ಹಿರಿಯರಾಗಿ ಸೇವೆಸಲ್ಲಿಸಿದರು.
ಈಗ ನಾನು ಒಬ್ಬ ಸಮರ್ಪಿತ ಕ್ರೈಸ್ತಳ ಪತಿಯಾಗಿದ್ದೇನೆ. ಲಿಯೋನಿ ಮತ್ತು ನಾನು 1978ರಲ್ಲಿ ಆಸ್ಟ್ರೇಲಿಯಕ್ಕೆ ಸ್ಥಳಾಂತರಿಸಿದೆವು. ಅಲ್ಲಿಯೇ, ಎಲೈಜಾ ಮತ್ತು ಪಾಲ್ ಎಂಬ ನಮ್ಮ ಇಬ್ಬರು ಪುತ್ರರು ಜನಿಸಿದರು. ನನ್ನ ಕುಟುಂಬದಿಂದ ಸಿಗುವ ಉತ್ತೇಜನವು ನನಗೆ ನಿಜವಾಗಿಯೂ ಶಕ್ತಿಯ ಮೂಲವಾಗಿದೆ. ಆಸ್ಟ್ರೇಲಿಯದ ರಾಜಧಾನಿಯಾಗಿರುವ ಕ್ಯಾನ್ಬರದಲ್ಲಿ ಒಬ್ಬ ಹಿರಿಯನೋಪಾದಿ ಸೇವೆಸಲ್ಲಿಸುವ ಸುಯೋಗ ನನಗಿದೆ. ಯಾಕೆಂದರೆ ದುಃಖ ಮತ್ತು ಮರಣಕ್ಕೆ ನಡಿಸುತ್ತಿದ್ದ ಪಾತಕದ ಅರ್ಥಹೀನ ಜೀವನದಿಂದ ಆತನೇ ನನ್ನನ್ನು ಪಾರುಗೊಳಿಸಿದ್ದಕ್ಕಾಗಿ ನಾನು ಪ್ರತಿದಿನ ಯೆಹೋವನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ಅದಕ್ಕಿಂತಲೂ ಹೆಚ್ಚಾಗಿ, ನನಗೂ ನನ್ನ ಪ್ರಿಯ ಜನರಿಗೂ ನಿಜವಾದ ನಿರೀಕ್ಷೆಯನ್ನು ಕೊಡುವ ಮೂಲಕ ಆತನು ನನ್ನ ಜೀವಿತಕ್ಕೊಂದು ಅರ್ಥವನ್ನು ಕೊಟ್ಟಿದ್ದಾನೆ.
[ಪಾದಟಿಪ್ಪಣಿಗಳು]
^ ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 18ರಲ್ಲಿರುವ ಚಿತ್ರ]
ನಾನು 12 ವರ್ಷದವನಾಗಿದ್ದಾಗ
[ಪುಟ 18ರಲ್ಲಿರುವ ಚಿತ್ರ]
ಇಂದು ನನ್ನ ಹೆಂಡತಿ ಮತ್ತು ಇಬ್ಬರು ಪುತ್ರರೊಂದಿಗೆ