ಬೇತ್ಲೆಹೇಮಿನಲ್ಲಿ ಯೇಸುವನ್ನು ಮೂವರು ಅರಸರು ಸಂದರ್ಶಿಸಿದರೊ?
ಬೈಬಲಿನ ದೃಷ್ಟಿಕೋನ
ಬೇತ್ಲೆಹೇಮಿನಲ್ಲಿ ಯೇಸುವನ್ನು ಮೂವರು ಅರಸರು ಸಂದರ್ಶಿಸಿದರೊ?
ಯೇಸುವಿನ ಜನನದ ಬಳಿಕ, ಯೆಹೂದ್ಯರ ರಾಜನೋಪಾದಿ ಅವನಿಗೆ ಗೌರವ ಸಲ್ಲಿಸಲು, ಪೂರ್ವದಿಕ್ಕಿನಿಂದ ಗಣ್ಯ ವ್ಯಕ್ತಿಗಳು ಬೇತ್ಲೆಹೇಮಿಗೆ ಆಗಮಿಸಿದರು. ಲೋಕದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಆಚರಿಸುವ ಅನೇಕರು ಈ ದಿನದ ವರೆಗೂ ಆ ಸಂದರ್ಶನವನ್ನು ಸ್ಮರಿಸಿಕೊಳ್ಳುತ್ತಾರೆ.
ನವಜಾತ ಶಿಶು ಯೇಸುವಿನ ಬಳಿ, ಪೂರ್ವದಿಕ್ಕಿನ ಆ ಸಂದರ್ಶಕರು ಕೊಡುಗೆಗಳೊಂದಿಗೆ ಬರುತ್ತಿರುವ ಮೂವರು ಅರಸರಾಗಿ ಚಿತ್ರಿಸುವ ಯೇಸುವಿನ ಜನನದ ದೃಶ್ಯಗಳನ್ನು ಕೆಲವೊಂದು ಕ್ಷೇತ್ರಗಳಲ್ಲಿನ ಜನರು ತಯಾರಿಸುತ್ತಾರೆ. ಇನ್ನೂ ಇತರ ದೇಶಗಳಲ್ಲಿನ ಮಕ್ಕಳು “ಪವಿತ್ರ ಅರಸರ” ಉಡುಪುಗಳನ್ನು ಧರಿಸಿ, ತಮ್ಮ ನೆರೆಹೊರೆಯಲ್ಲಿ ಆಡಂಬರದಿಂದ ಮೆರವಣಿಗೆಯನ್ನು ಮಾಡುತ್ತಿರುತ್ತಾರೆ. ಅಂದಿನಿಂದ 2,000 ವರ್ಷಗಳ ನಂತರ, ಅಂದರೆ ಈಗಲೂ ಎಲ್ಲ ಕಡೆಗಳಲ್ಲಿ ಜನರು ಆ ಅಸಾಮಾನ್ಯ ಸಂದರ್ಶಕರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಯಾರಾಗಿದ್ದರು?
ಅವರು ಅರಸರಾಗಿದ್ದರೊ?
ಈ ಘಟನೆಯ ಕುರಿತಾದ ಐತಿಹಾಸಿಕ ದಾಖಲೆಯು, ಬೈಬಲಿನ ಮತ್ತಾಯ ಪುಸ್ತಕದಲ್ಲಿ ಕಂಡುಬರುತ್ತದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ಯೇಸು ಹುಟ್ಟಿದಾಗ ಮೂಡಣದೇಶದ ಜೋಯಿಸರು ಯೆರೂಸಲೇಮಿಗೆ ಬಂದು—ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಮೂಡಣದೇಶದಲ್ಲಿ ಕಂಡು ಆತನಿಗೆ ಅಡ್ಡಬೀಳುವದಕ್ಕೆ ಬಂದೆವು ಅಂದರು.” (ಮತ್ತಾಯ 2:1, 2) ಬೈಬಲಿನಲ್ಲಿ ಈ ಸಂದರ್ಶಕರನ್ನು ಅರಸರೆಂದು ಕರೆಯದೆ, ಮೂಡಣದೇಶದ ಜೋಯಿಸರೆಂದು ಏಕೆ ಕರೆಯಲಾಗಿದೆ?
ಈ ವಚನಗಳು, ಮಾಗೋಸ್ ಎಂಬ ಗ್ರೀಕ್ ಪದದ ಬಹುವಚನವನ್ನು ಉಪಯೋಗಿಸುತ್ತವೆ. ವಿವಿಧ ಬೈಬಲ್ ಭಾಷಾಂತರಗಳು ಈ ಪದವನ್ನು “ಜ್ಞಾನಿ ಪುರುಷರು,” “ಜ್ಯೋತಿಷಿಗಳು,” ಅಥವಾ “ನಕ್ಷತ್ರವೀಕ್ಷಕರು” ಎಂಬುದಾಗಿ ತರ್ಜುಮೆಮಾಡುತ್ತವೆ, ಅಥವಾ “ಮೇಜೈ” ಎಂದು ಲಿಪ್ಯಂತರಮಾಡುತ್ತವೆ. ಈ ಪದವು, ನಕ್ಷತ್ರಗಳು ಮತ್ತು ಗ್ರಹಗಳ ಸ್ಥಾನವನ್ನು ಆಧಾರಿಸಿ ಮುನ್ಸೂಚನೆ ಕೊಡುವವರನ್ನು ಮತ್ತು ಭವಿಷ್ಯನುಡಿಯುವವರನ್ನು ಸೂಚಿಸುತ್ತದೆ. ಹೀಗೆ, ಬೇತ್ಲೆಹೇಮಿಗೆ ಹೋಗಿದ್ದ ಆ ಸಂದರ್ಶಕರು, ದೇವರು ಮೆಚ್ಚದಿರುವ ಪ್ರೇತಾತ್ಮಕ ರೂಢಿಗಳುಳ್ಳ ಕಣಿಹೇಳುವವರಾಗಿದ್ದಾರೆಂದು ಬೈಬಲ್ ಗುರುತಿಸುತ್ತದೆ.—ಧರ್ಮೋಪದೇಶಕಾಂಡ 18:10-12.
ಅವರು ಅರಸರೂ ಆಗಿದ್ದರೊ? ಅವರು ಅರಸರಾಗಿದ್ದಲ್ಲಿ, ಬೈಬಲ್ ಅವರನ್ನು ಹಾಗೆಂದು ಖಂಡಿತವಾಗಿಯೂ ಗುರುತಿಸುತ್ತಿತ್ತು. ಯಾಕೆಂದರೆ ಮತ್ತಾಯ 2:1-12ರಲ್ಲಿ, ಒಂದು ಸಲ ಯೇಸುವಿಗೆ ಮತ್ತು ಮೂರು ಸಲ ಹೆರೋದನಿಗೆ ಸೂಚಿಸುತ್ತಾ, “ಅರಸ” ಎಂಬ ಪದವನ್ನು ನಾಲ್ಕು ಬಾರಿ ಉಪಯೋಗಿಸಲಾಗಿದೆ. ಆದರೆ ಅಲ್ಲಿ ಒಮ್ಮೆಯೂ ಮೇಜೈರನ್ನು ಅರಸರೆಂದು ಕರೆಯಲಾಗಿಲ್ಲ. ಈ ವಿಷಯದ ಕುರಿತು ದ ಕ್ಯಾಥೊಲಿಕ್ ಎನ್‌ಸೈಕ್ಲೊಪೀಡಿಯಾ ತಿಳಿಸುವುದು: “ಮೇಜೈ, ಅರಸರಾಗಿದ್ದರೆಂಬ ಅಭಿಪ್ರಾಯವನ್ನು ಯಾವ ಕ್ರೈಸ್ತ ಬರಹಗಾರನೂ ವ್ಯಕ್ತಪಡಿಸುವುದಿಲ್ಲ.” ಬೈಬಲ್ ಸಹ ಹಾಗೆ ತಿಳಿಸುವುದಿಲ್ಲ.
ಮೂವರಿದ್ದರೊ?
ಮೇಜೈರವರ ಸಂಖ್ಯೆಯನ್ನು ಬೈಬಲ್ ದಾಖಲೆಯು ತಿಳಿಸುವುದಿಲ್ಲ. ಹಾಗಿದ್ದರೂ, ಯೇಸುವಿನ ಜನನದ ದೃಶ್ಯಗಳು ಮತ್ತು ಕ್ರಿಸ್‌ಮಸ್ ಗೀತೆಗಳು, ಅಲ್ಲಿ ಮೂವರಿದ್ದರೆಂಬ ಸಾಮಾನ್ಯ ನಂಬಿಕೆಯನ್ನು ಬೆಂಬಲಿಸುತ್ತವೆ. ಮೂರು ರೀತಿಯ ಕೊಡುಗೆಗಳಿದ್ದ ವಾಸ್ತವಾಂಶದಿಂದಲೇ ಈ ವಿಚಾರವು ಹೊಮ್ಮಿದ್ದಿರಬೇಕು. ಈ ಕೊಡುಗೆಗಳ ಕುರಿತಾಗಿ ಬೈಬಲ್ ಹೇಳುವುದು: “ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ [ಯೇಸುವಿಗೆ] ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು.”—ಮತ್ತಾಯ 2:11.
ಆ ಮೇಜೈ ಮೂರು ವಿಭಿನ್ನ ಕೊಡುಗೆಗಳನ್ನು ಕೊಟ್ಟದ್ದರಿಂದ, ಮೂರು ಮಂದಿ ಇದ್ದರೆಂದು ಹೇಳುವುದು ತರ್ಕಸಂಗತವೊ? ಇಸ್ರಾಯೇಲ್ ದೇಶಕ್ಕೆ ಭೇಟಿ ನೀಡಿದ ಇನ್ನೊಬ್ಬ ಗಣ್ಯ ವ್ಯಕ್ತಿಯ ವೃತ್ತಾಂತವನ್ನು ನಾವು ಪರಿಗಣಿಸೋಣ. ಒಮ್ಮೆ, ಶೆಬದ ರಾಣಿಯು ಸೊಲೊಮೋನ ರಾಜನನ್ನು ಭೇಟಿಯಾಗಿ, ಅವನಿಗೆ “ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ”ಗಳ ಕೊಡುಗೆಯನ್ನಿತ್ತಳು. (1 ಅರಸು 10:2) ಇಲ್ಲಿ ಮೂರು ವಿಭಿನ್ನ ರೀತಿಯ ಕೊಡುಗೆಗಳ ಕುರಿತಾಗಿ ತಿಳಿಸಲ್ಪಟ್ಟಿದ್ದರೂ, ಅವುಗಳನ್ನು ಕೊಡುತ್ತಿರುವ ಏಕೈಕ ವ್ಯಕ್ತಿ ಶೆಬದ ರಾಣಿಯೆಂದು ತಿಳಿಸಲಾಗಿದೆ. ಅವಳ ಕೊಡುಗೆಗಳ ಸಂಖ್ಯೆಯು, ಆ ಸಂದರ್ಭದಲ್ಲಿ ಸೊಲೊಮೋನನ ಬಳಿ ಮೂವರು ವ್ಯಕ್ತಿಗಳು ಹೋದರೆಂಬುದನ್ನು ಸೂಚಿಸುವುದಿಲ್ಲ. ತದ್ರೀತಿಯಲ್ಲೇ, ಯೇಸುವಿಗೆ ಕೊಡಲ್ಪಟ್ಟಿದ್ದ ಮೂರು ಕೊಡುಗೆಗಳಿಗೂ, ಅವುಗಳನ್ನು ತಂದಿದ್ದ ವ್ಯಕ್ತಿಗಳ ಸಂಖ್ಯೆಗೂ ಯಾವುದೇ ಸಂಬಂಧವಿಲ್ಲ.
ದ ಕ್ಯಾಥೊಲಿಕ್ ಎನ್‌ಸೈಕ್ಲೊಪೀಡಿಯ ಗಮನಿಸುವುದು: “ಸುವಾರ್ತಾ ವೃತ್ತಾಂತವು, ಮೇಜೈಯ ಸಂಖ್ಯೆಯನ್ನು ತಿಳಿಸುವುದಿಲ್ಲ, ಮತ್ತು ಈ ವಿಷಯದಲ್ಲಿ ಯಾವುದೇ ನಿರ್ದಿಷ್ಟ ಸಾಂಪ್ರದಾಯಿಕ ಕಥೆಯಿಲ್ಲ. ಕೆಲವು ಕ್ರೈಸ್ತ ಬರಹಗಾರರು ಮೂವರು ಮೇಜೈ ಕುರಿತು ಮಾತಾಡುತ್ತಾರೆ. ಕೊಡುಗೆಗಳ ಸಂಖ್ಯೆಯಿಂದ ಅವರು ಪ್ರಭಾವಿಸಲ್ಪಟ್ಟಿದ್ದಿರಬಹುದು.” ಇಬ್ಬರು, ಮೂವರು, ನಾಲ್ವರು ಮತ್ತು ಎಂಟು ಮಂದಿ ಸಹ ಯೇಸುವನ್ನು ಸಂದರ್ಶಿಸುತ್ತಿರುವುದನ್ನು ವಿಭಿನ್ನ ಕಲಾಕೃತಿಗಳು ತೋರಿಸುತ್ತವೆ. ಕೆಲವೊಂದು ಸಾಂಪ್ರದಾಯಿಕ ಕಥೆಗಳಲ್ಲಿ 12 ಮಂದಿಯಿದ್ದರೆಂದು ಹೇಳಲಾಗುತ್ತದೆ. ಮೇಜೈರವರ ಸಂಖ್ಯೆಯನ್ನು ದೃಢೀಕರಿಸಲು ಯಾವುದೇ ಮಾರ್ಗವಿಲ್ಲ.
ಜನಪ್ರಿಯವಾದರೂ ತಪ್ಪಾದ ಕಥೆ
ಜನಪ್ರಿಯ ನಂಬಿಕೆಗೆ ವ್ಯತಿರಿಕ್ತವಾಗಿ, ಮೇಜೈ ಪ್ರಥಮವಾಗಿ ಬೇತ್ಲೆಹೇಮಿಗಲ್ಲ, ಯೆರೂಸಲೇಮಿಗೆ ಆಗಮಿಸಿದರು. ಅದು ಕೂಡ ಯೇಸು ಹುಟ್ಟಿದ ಅನಂತರವೇ. ಯೇಸುವಿನ ಜನನದ ಸಮಯದಲ್ಲಿ ಅವರು ಬೇತ್ಲೆಹೇಮಿನಲ್ಲಿ ಉಪಸ್ಥಿತರಿರಲಿಲ್ಲ. ತದನಂತರ ಅವರು ಬೇತ್ಲೆಹೇಮಿಗೆ ಹೋದಾಗ, ‘ಮನೆಯೊಳಕ್ಕೆ ಹೋಗಿ ಆ ಕೂಸನ್ನು ಕಂಡರು’ ಎಂದು ಬೈಬಲ್ ಹೇಳುತ್ತದೆ. (ಮತ್ತಾಯ 2:1, 11) ಮೇಜೈ ಯೇಸುವನ್ನು ಸಂದರ್ಶಿಸಿದ ಸಮಯದೊಳಗೆ, ಅವನ ಕುಟುಂಬವು ಒಂದು ಸಾಮಾನ್ಯವಾದ ನಿವಾಸಕ್ಕೆ ಸ್ಥಳಾಂತರಿಸಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅವರು ಅವನನ್ನು ನೋಡಿದಾಗ ಅವನು ಒಂದು ಗೋದಲಿಯಲ್ಲಿರಲಿಲ್ಲ.
ಶಾಸ್ತ್ರವಚನಗಳ ದೃಷ್ಟಿಕೋನದಿಂದ ನೋಡುವಾಗ, ಯೇಸುವಿನ ಜನನದ ಸಮಯದಲ್ಲಿ ಅವನನ್ನು ಸನ್ಮಾನಿಸುತ್ತಿರುವ ಮೂವರು ಅರಸರುಗಳ ಕುರಿತಾದ ಜನಪ್ರಿಯ ಕಥೆಯು ತಪ್ಪಾಗಿದೆ. ಮೇಲೆ ತಿಳಿಸಲ್ಪಟ್ಟಿರುವಂತೆ, ಯೇಸುವನ್ನು ಸಂದರ್ಶಿಸಿದ ಮೇಜೈ ಅರಸರಾಗಿರಲಿಲ್ಲ ಬದಲಾಗಿ ಪ್ರೇತಾತ್ಮವಾದವನ್ನು ಆಚರಿಸುತ್ತಿದ್ದ ಜ್ಯೋತಿಷಿಗಳಾಗಿದ್ದರೆಂದು ಬೈಬಲ್ ಕಲಿಸುತ್ತದೆ. ಅವರು ಎಷ್ಟು ಮಂದಿ ಇದ್ದರೆಂಬುದನ್ನು ಶಾಸ್ತ್ರೀಯ ದಾಖಲೆಯು ತಿಳಿಸುವುದಿಲ್ಲ. ಅಲ್ಲದೆ, ಯೇಸು ಒಂದು ಗೋದಲಿಯಲ್ಲಿ ಇರಿಸಲ್ಪಟ್ಟಿದ್ದಾಗ, ಅಂದರೆ ಅವನ ಜನನದ ಸಮಯದಲ್ಲಿ ಅವರು ಅವನನ್ನು ಸಂದರ್ಶಿಸಲಿಲ್ಲ, ಬದಲಾಗಿ ಸ್ವಲ್ಪ ಸಮಯದ ನಂತರ ಅವನ ಕುಟುಂಬವು ಒಂದು ಮನೆಯಲ್ಲಿ ವಾಸಿಸುತ್ತಿದ್ದಾಗ ಸಂದರ್ಶಿಸಿದರು.
ಮೂವರು ಅರಸರುಗಳ ಕುರಿತಾದ ಈ ಜನಪ್ರಿಯ ಕಥೆ ಮತ್ತು ಇನ್ನಿತರ ಸಾಂಪ್ರದಾಯಿಕ ಕ್ರಿಸ್‌ಮಸ್ ಕಥೆಗಳು ಶಾಸ್ತ್ರೀಯವಾಗಿ ತಪ್ಪಾಗಿರುವುದಾದರೂ, ಅವುಗಳನ್ನು ಹಬ್ಬದ ಹಾನಿರಹಿತ ಕಥೆಗಳಾಗಿ ವೀಕ್ಷಿಸಲಾಗುತ್ತದೆ. ಆದರೆ ನಿಜ ಕ್ರೈಸ್ತರು, ಸುಳ್ಳುಗಳಿಂದ ಮುಕ್ತವಾಗಿರುವ ಆರಾಧನಾ ರೀತಿಗೆ ತುಂಬ ಮಾನ್ಯತೆಯನ್ನು ಕೊಡುತ್ತಾರೆ. ಯೇಸುವಿಗೂ ಹೀಗೆಯೇ ಅನಿಸಿತು. ಒಂದು ಸಲ ತನ್ನ ತಂದೆಗೆ ಪ್ರಾರ್ಥಿಸುತ್ತಿದ್ದಾಗ ಅವನು ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) “ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; . . . ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ” ಎಂದು ಯೇಸು ಹೇಳಿದನು.—ಯೋಹಾನ 4:23.
[ಪುಟ 15ರಲ್ಲಿರುವ ಚಿತ್ರ]
“ಮೇಜೈರವರ ಆರಾಧನೆ,” ಇಟಲಿ